ನಿಮಗೆ ‘ಲ ನೀನ್ಯ’ ಎಂಬ ಪೆಸಿಫಿಕ್ ಮಹಾಸಾಗರದ ಸುತ್ತಮುತ್ತ ಹವಾಮಾನದ ಏರಿಳಿತಗಳ ಬಗ್ಗೆ ಗೊತ್ತಿರಬಹುದು. ‘ಲ ನೀನ್ಯ’ ಬೇಸಿಗೆಯ ಉರಿಯನ್ನು ತಂಪು ಮಾಡಿ, ಮಳೆ ಹಾಗು ಪ್ರವಾಹವನ್ನು ಹೆಚ್ಚಿಸುವ ಪುಟ್ಟ ಹುಡುಗಿ. ಅವಳಿಗೊಬ್ಬ ತಮ್ಮ ‘ಎಲ್ ನೀನೋ’ ಎಂಬ ಪುಟ್ಟ ಹುಡುಗನಿದ್ದಾನೆ. ಅವನು ಇವಳಿಗೆ ತದ್ವಿರುದ್ಧ, ಮಳೆ ತಂಪನ್ನು ತಗ್ಗಿಸಿ ಬರಗಾಲ ಕ್ಷಾಮಕ್ಕೆ ಕಾರಣವಾಗುತ್ತಾನೆ. ಈಗ ‘ಲ ನೀನ್ಯ’ ಎಂಬವಳು ತನ್ನ ಸುತ್ತನ್ನು ಮುಗಿಸುತ್ತಿದ್ದಾಳೆ. ಅದರಿಂದಾಗ ಈಗ ಆಸ್ಟ್ರೇಲಿಯಾದಲ್ಲಿ ತುಂಬಾ ತಂಪಾದ ಬೇಸಿಗೆ. ಮಳೆ ಸುರಿದರೂ ಚಳಿಯಾಗದ ಹವೆ. ಬಿಸಿಲು ರಾಚಿದರೂ ಹಿಂದಯೇ ಬಂದು ತಣಿಸುವ ಮಳೆ. ಇದರಿಂದ ಒಂದು ಅನುಕೂಲವೆಂದರೆ, ಬಹುಶಃ ಈ ಸಲ ಕಾಡ್ಗಿಚ್ಚಿನ ತಲೆನೋವು ಕಡಿಮೆ.

ಐದು ವರ್ಷದ ಹಿಂದೆ ಸಂಪಾದಕರು ಕೆಂಡಸಂಪಿಗೆಗೆ ಆಸ್ಟ್ರೇಲಿಯಾದಿಂದ ಬರೆಯುತ್ತೀರ ಎಂದು ಕೇಳಿದಾಗ ಹಿಂಜರಿಯಲು ಯಾವುದೇ ಕಾರಣವಿರಲಿಲ್ಲ. ಜಗತ್ತಿನ ಮೂಲೆಮೂಲೆಯಿಂದ ಕನ್ನಡ ಮನಸ್ಸುಗಳನ್ನು ಒಟ್ಟು ಹಾಕುವ ಸಂಪಾದಕರ ಕನಸು ರೋಚಕ ಅನಿಸಿತು. ಅಲ್ಲಿ ಇಲ್ಲಿ ಬ್ಲಾಗಿನಲ್ಲಿ ಬರೆಯುತ್ತಿದ್ದ ನನಗೆ ಆ ಅವಕಾಶ ಮನಸ್ಸನ್ನು ತುಂಬಿಕೊಂಡಿತು.

ಮನುಷ್ಯನ ದೇಹ ಹಾಗು ತಲೆಯ ವ್ಯವಹಾರ ಭಿನ್ನ ದೇಶಗಳಲ್ಲಿ ಭಿನ್ನ ರೂಪಗಳಲ್ಲಿ ಹೊರಹೊಮ್ಮತ್ತದೆ. ಆದರೆ ತಳದಲ್ಲಿನ ತುಡಿತ, ಸೆಳೆತ ಒಂದೇ ಬಗೆಯದು. ಮೊದಮೊದಲಿಗೆ ಇದರ ಬಗ್ಗೆ ನನಗೆ ಯಾವುದೇ ಸಂಶಯವಿರಲಿಲ್ಲ. ಕಳೆದ ಹತ್ತಾರು ವರ್ಷಗಳಲ್ಲಿ ನಾನು ಓದಿದ ಹಾಗು ಕಂಡ ಹಲವಾರು ಘಟನೆಗಳು ನನ್ನ ನಿಲುವನ್ನು ಗಟ್ಟಿಗೊಳಿಸಿತ್ತು. ಆ ನಿಲುವೇ ಕೆಂಡಸಂಪಿಗೆಗೆ ದೂರದ ಸಿಡ್ನಿಯಿಂದ ಬರೆಯಬಹುದು ಎಂಬ ಉತ್ಸಾಹ ತುಂಬಿತ್ತು. ಕೆಲವೊಮ್ಮೆ ದೂರವೆನಿಸಬಹುದೆಂಬ ಜಾಗರೂಕತೆಯಿಂದ, ಕೆಲವೊಮ್ಮೆ ಮನಸೋ ಇಚ್ಛೆಯಿಂದ ತೋಚಿದ್ದು ಬರೆದೆ. ಆದರೆ ಕೆಂಡಸಂಪಿಗೆಗೆ ಬರೆಯುತ್ತಾ ಹೋದಂತೆ ನನ್ನ ಈ ನಿಲುವನ್ನು ನಾನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳಬೇಕಾಗಿ ಬಂದಿತು. ಸಿಡ್ನಿಯ ರೈಲಿನಲ್ಲಿ ಯೋಚಿಸುವ ನನ್ನಂತವನ ಕನ್ನಡ ಮನಸ್ಸು, ಕೈಗೆತ್ತಿಕೊಳ್ಳುವ ಸಂಗತಿಗಳು ಹಾಗು ಅದಕ್ಕೊಂದು ಪೂರಕ ಚೌಕಟ್ಟನ್ನು ಹುಟ್ಟಿಸಿಕೊಳ್ಳಬೇಕಾಗುತ್ತದೆ. ಆ ಚೌಕಟ್ಟು ಆದಷ್ಟು ಮನುಷ್ಯನ ಒಳಗಿನ ಹೊಯ್ದಾಟಗಳನ್ನು ಆಧಾರವಾಗಿಟ್ಟುಕೊಂಡಷ್ಟೂ ಬಲವಾಗಿರುತ್ತದೆ ಎಂದು ನಂಬಿದ್ದೆ. ಆ ನಿಲುವು ಕೂಡ ಪರೀಕ್ಷೆಗೆ ಒಳಗೊಳ್ಳಬೇಕಾಯಿತು.

ಪರೀಕ್ಷೆಗೆ ಒಳಗಾಗುವುದು ತುಂಬಾ ಅಗತ್ಯವಾದ ಹೆಜ್ಜೆಗಳೇ ಅಲ್ಲವೆ? ಆದರೆ ಆ ಪರೀಕ್ಷೆಯ ಇನ್ನೊಂದು ಬದಿಯಲ್ಲಿ ಬಂದು ನಿಂತಾಗ ನಾನು ಕಂಡುಕೊಂಡದ್ದೇನು? ಇವೆಲ್ಲಾ ಹೀಗೇಕೆ ಎಂಬುದು ತುಸುವಾದರೂ ತಿಳಿಯಾಗಬೇಕಲ್ಲವೆ? ಆಗಿದೆ ಎಂದು ಖಡಾಖಂಡಿತವಾಗಿ ಹೇಳಲಾರೆ. ಕೆಲವೊಮ್ಮೆ ನನ್ನ ನುಡಿಗಟ್ಟಿನಿಂದಾಗಿ ಇವೆಲ್ಲಾ ಏರುಪೇರಾಗಿರಬಹುದೇನೋ ಎಂದುಕೊಂಡೆ. ವಿಭಿನ್ನ ಪರಿಸರದಲ್ಲಿನ ಆಗುಹೋಗುಗಳಿಗೆ ಕನ್ನಡದ ಓದುಗರಿಂದ ಅಷ್ಟೇ ವಿಭಿನ್ನವಾದ – ಒಂದು ಬಗೆಯ altered response – ಅಪೇಕ್ಷಿಸುವುದು ತಪ್ಪಲ್ಲವೆ ಅಂದುಕೊಂಡೆ. ಆದರೂ ಹೊರದೇಶದ ಬರಹಗಳಿಗೆ ಕೆಂಡಸಂಪಿಗೆಯಲ್ಲಿ ಕಾಣುವ ತೀವ್ರ ಅನುಮಾನದ ಪ್ರತಿಕ್ರಿಯೆ ನನ್ನನ್ನು ಕಂಗೆಡಿಸಿದ್ದು ಸುಳ್ಳಲ್ಲ. ಹೊಸ ಪರಿಸರದಲ್ಲಿ ಕೂತು ಬರೆದರೂ ಅಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಮನಸ್ಸು ಯಾಕೋ ಯಾರಿಗೂ ಕಾಣುತ್ತಿಲ್ಲ ಅನಿಸಿತು. ಇದು ನನ್ನೊಬ್ಬನ ಅನುಭವ ಅಲ್ಲ ಅಂದುಕೊಳ್ಳುತ್ತೇನೆ. ಕೆಂಡಸಂಪಿಗೆಯಲ್ಲಿ ಬರೆಯುವ ಹಲವಾರು ಹೊರದೇಶದ ಬರಹಗಾರರೂ ಇದನ್ನು ಅನುಭವಿಸಿರಬಹುದು. ಆದರೆ ಅದನ್ನು ಭಿನ್ನವಾಗಿ ಕಂಡಿರಬಹುದು.

ಸದಾ ಕನ್ನಡದ ಸಾಂಸ್ಕೃತಿಕ ಹಾಗು ಸಾಮಾಜಿಕ ನಿಲುವಿನೊಡನೆ ತುಲನೆ ಮಾಡಿಕೊಂಡೇ ಹೊರನಾಡಿನ ಅನುಭವವನ್ನು ಬರೆಯುವ ಕೆಲಸ ತುಂಬಾ ತ್ರಾಸದಾಯಕವಾಗುತ್ತದೆ. ಇದಕ್ಕೊಂದು ಪರಿಹಾರವನ್ನೂ ಕಂಡುಕೊಳ್ಳಬೇಕು ಅಂದುಕೊಳ್ಳುತ್ತೇನೆ. ಕನ್ನಡದಲ್ಲೇ ಬರೆಯಬೇಕಾದ ನನ್ನಂತಹವನಿಗೆ ಅದೊಂದು ನಿರಂತರ ಸವಾಲು. ಆ ಸವಾಲಿನ ಪರಿಚಯ ಮಾಡಿಕೊಟ್ಟ ಕೆಂಡಸಂಪಿಗೆಗೆ ದೊಡ್ಡ ಸಲಾಮು.

ಇನ್ನೊಂದು ಮಾತನ್ನು ಸ್ಪಷ್ಟಪಡಿಸಬೇಕು; ಇವಕ್ಕೆಲ್ಲಾ ಯಾವುದೇ ಬೇಸರದ ಒಳದನಿಯಿಲ್ಲ. ಯಾಕೆಂದರೆ ನನಗೆ ನಾನೇ ರಿಪೀಟ್ ಆಗುತ್ತಿದ್ದೇನೆ ಎಂದು ಕೂಡ ಅನಿಸದೇ ಇಲ್ಲ. ಅದಕ್ಕೆ ನಿರಂತರ ಮೌಲ್ಯದ ತುಲನೆ ಕಾರಣವಿರಬಹುದೇ ಎಂದು ತಡಕಾಡಿದ್ದೇನೆ. ಅದನ್ನು ಬಿಟ್ಟರೆ ಮತ್ತೆ ಹೊಸದಾಗಿ ಬರೆಯಬಹುದಲ್ಲವೆ ಎಂಬ ಆಸೆಯೂ ಹುಟ್ಟಿದೆ. ಈ ಹೊಸ ದಿಕ್ಕಿನಲ್ಲಿ ಬರೆಯುವ ಸವಾಲನ್ನು ಕೈಗೆತ್ತಿಕೊಂಡು ಮತ್ತೆ ಕೆಂಡಸಂಪಿಗೆಗೆ ಬರೆಯುಬೇಕು ಎಂದು ಪಣತೊಟ್ಟಿದ್ದೇನೆ. ಕೆಂಡಸಂಪಿಗೆಗೆ ಐದು ತುಂಬಿದ ಈ ಹೊತ್ತು ನನ್ನ ಪಣಕ್ಕೊಂದು ಹೊಸ ಹುರುಪು ತಂದಿದೆ.

ಮೊನ್ನೆ ಮನೆಯ ಹಿತ್ತಲಲ್ಲಿ ನಿಂತು ವಾರದಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಸೂಚೆನೆಗಾಗಿ ಆಕಾಶ ನೋಡುತ್ತಿದೆ. ‘ಲ ನೀನ್ಯ’ಳ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಮೋಡಗಳು ಇನ್ನೂ ದಟ್ಟೈಸಿಕೊಂಡಿದ್ದವು. ಸರಿಯಾಯಿತು ಎಂದುಕೊಂಡು ಮನೆಯ ಒಳಗೆ ಬರುವಷ್ಟರಲ್ಲಿ ಪುಟ್ಟ ಮಗುವೊಂದು ಅತ್ತಿದ್ದು ಕೇಳಿತು. ಆ ದನಿ, ಆ ಅಳು ಮಗವಿಗೆ ಒಂದೆರಡು ತಿಂಗಳು ಕೂಡ ತುಂಬಿಲ್ಲ ಅನ್ನುತ್ತಿತ್ತು. ಅಮ್ಮನಿಗೆ ಇನ್ನೂ ಅರ್ಥವಾಗದ ಅಳು ಅದು. ಹಾಲು ಕುಡಿಸಿಯೂ ನಿಲ್ಲದ ಅಳುವದು. ಆ ಬೇಸಿಗೆಯ ಮಳೆಯಲ್ಲಿ ತೇಲಿಬಂದ ನಿಲ್ಲದ ಆ ಅಳು ತುಂಬಾ ಆಹ್ಲಾದಕರವಾಗಿತ್ತು. ದೂರದೂರವೇ ಇರುವ ಮನೆಯ ಸಾಲುಗಳಲ್ಲಿ ಯಾರ ಮನೆಯ ಮಗುವಿರಬಹುದು ಎಂದು ದನಿ ಬಂದತ್ತ ಇಣುಕಿ ನೋಡಿದೆ. ಎತ್ತರದ ಬೇಲಿಗಳಿಂದಾಗಿ ಏನೂ ಕಾಣಲಿಲ್ಲ. ತುಸು ಹೊತ್ತು ಮಗು ಅಳುತ್ತಲೇ ಇತ್ತು. ನಾನು ಕೇಳುತ್ತಾ ನಿಂತಿದ್ದೆ. ನಂತರ ಮಳೆ ಮತ್ತೆ ಜೋರಾಯಿತು.