ಅಪ್ಪನ ಜೊತೆ ಬೀಡಿ ಸೇದಿದ್ದು

ಅಪ್ಪನಿಗೆ ಕೆಲವೊಮ್ಮೆ ಎಂಟತ್ತು ತಿಂಗಳು ಸಂಬಳವೇ ಬರುತ್ತಿರಲಿಲ್ಲವಂತೆ. ಆಗ ಎಂಟು ಮಕ್ಕಳ ಹೊಟ್ಟೆ ತುಂಬಿಸಲು ಅಪ್ಪ ತುಂಬ ಕಷ್ಟ ಪಟ್ಟಿದ್ದರು. ಅದ್ಯಾವುದೋ ಮರದ ಕಾಯಿಗೆ ಆಗ ತುಂಬ ಬೇಡಿಕೆ ಇತ್ತಂತೆ. ಅಪ್ಪ ಕೆಲಸದ ನಡುವೆ ಆ ಮರದ ಕಾಯಿಯನ್ನು ಆಯ್ದು ಮಾರಿ ದಿನಸಿ ತರುತ್ತಿದ್ದರಂತೆ. ಅಮ್ಮ ನೇಜಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಅಣ್ಣಂದಿರು ಕಾಲೇಜಿನ ಜೊತೆ ಪಾರ್ಟ್‌ಟೈಂ ಕೆಲಸ ಮಾಡಿದ್ದೂ ಇದೆ. ಅಮ್ಮ ನಮ್ಮನ್ನೆಲ್ಲ ಹೆತ್ತಾಗ ಹಿರಿಮಕ್ಕಳೇ ಅಮ್ಮನ ಬಾಣಂತನ ನೋಡಿದ್ದು. ಅಮ್ಮ ಚಿಕ್ಕವರಿದ್ದಾಗಲೇ ತಾಯಿ ತೀರಿಕೊಂಡಿದ್ದರಿಂದ ತವರಿಗೆ ಹೆರಿಗೆಗೆಂದು ಹೋಗಿಲ್ಲ. ವರ್ಗವಾಗಿ ಹೋದಲ್ಲೆಲ್ಲ ಬಾಡಿಗೆ ಮನೆ ಹಿಡಿಯುತ್ತಿದ್ದ ಅಪ್ಪ ಗದ್ದೆಗಳನ್ನು ಗೇಣಿಗೆ ವಹಿಸಿಕೊಂಡು ಬೇಸಾಯ ಮಾಡುತ್ತಿದ್ದರಂತೆ.

ಕೈಯಲ್ಲಿ ದುಡ್ಡಿರುವಾಗ ಅಪ್ಪ ಕರ್ಣನಾಗುತ್ತಿದ್ದರು. ಸಂಬಳ ಬಂದ ದಿನ ಬ್ಯಾಗನ್ನೇ ಸಹಾಯಕನ ಕೈಯಲ್ಲಿ ಕೊಟ್ಟು ಹರಟುತ್ತಾ ಮನೆ ತಲುಪುವಾಗ ಆತ ಎಗರಿಸಿ ಉಳಿದದ್ದು ಮಾತ್ರ ಎಷ್ಟೆಂದು ಅಪ್ಪನಿಗೇ ಗೊತ್ತಾಗುತ್ತಿರಲಿಲ್ಲ. ಆತ ಬಹಳ ಚಾಣಾಕ್ಷ. ಅಪ್ಪನಿಗೆ ಯಕ್ಷಗಾನವೆಂದರೆ ಪ್ರಾಣ ಎಂಬುದು ಗೊತ್ತಿತ್ತು. ಅಪ್ಪನಿಗೆ ಇಷ್ಟವಾಗುವ ಪ್ರಸಂಗಗಳನ್ನೇ ಮಾತಿಗೆ ಎಳೆದು ತರುತ್ತಿದ್ದ. ಮೊನ್ನೆಯ ನಿಮ್ಮ ವೇಶ ಥೇಟ್ ರಾವಣನೇ ಬಂದ ಹಾಗಿತ್ತು ಎಂದು ಮಾತಿಗೆ ಒಗ್ಗರಣೆ ಸೇರಿಸುತ್ತಿದ್ದ. ಅಪ್ಪನಿಗೆ ಖುಶಿಯಾಗಿ ಮನೆಗೆ ಬಂದು ಊಟ ಮಾಡಿ ಹೋಗು ಎನ್ನುತ್ತಿದ್ದರು. ಮನೆಗೆ ಬಂದ ಅತಿಥಿಗೆ ಮನೆಯಲ್ಲಿ ಊಟ-ತಿಂಡಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳದೇ ಸತ್ಕಾರಕ್ಕೆ ಮುಂದಾಗುತ್ತಿದ್ದರು. ಕೈಚಾಚಿದವರಿಗೆಲ್ಲ ಸಹಾಯ ಮಾಡುತ್ತಿದ್ದ ಅಪ್ಪ ಹಣವನ್ನು ಹಿಂದಕ್ಕೆ ಕೇಳುತ್ತಿರಲಿಲ್ಲ. ಇದರಿಂದಾಗಿ ಕೈ ಚಾಚುವವರ ಸಂಖ್ಯೆ ಹೆಚ್ಚಾಗಿತ್ತು. ಅಪ್ಪ ಮೂಡಬಿದರೆಯಿಂದ ಶನಿವಾರ ಮನೆಗೆ ಬರುವಾಗ ದಾರಿಯಲ್ಲಿಯೇ ಕೆಲವರು ಅಪ್ಪನ ದಾರಿ ಕಾಯುತ್ತಿದ್ದರು. ಅಪ್ಪನ ಜೊತೆ ಮಾತಿಗಿಳಿಯುತ್ತಾ, ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು.

ಅಪರೂಪಕ್ಕೊಮ್ಮೆಯೂ ಸಿನಿಮಾಕ್ಕೆ ಹೋಗದ ಅಪ್ಪನನ್ನು ಯಾರೋ ಒಮ್ಮೆ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದರು. ಹಾಗೆ ಸಿನಿಮಾ ನೋಡಿದ ಅಪ್ಪ ಆ ಸಿನಿಮಾದ ಗೌರಮ್ಮ ನಿನ್ನ ಗಂಡ ಯಾರಮ್ಮ ಹಾಡನ್ನು ಗುನುಗುತ್ತಿದ್ದುದು ನನಗಿನ್ನೂ ನೆನಪಿದೆ. ಅದು ಬಿಟ್ಟರೆ ಸದಾ ಯಕ್ಷಗಾನದ ಹಾಡುಗಳೇ ಕೇಳುತ್ತಿತ್ತು.

ಬೇಸಿಗೆಯ ರಾತ್ರಿಗಳಲ್ಲಿ ಸೆಗಣಿ ಸಾರಿಸಿದ ಅಂಗಳದಲ್ಲಿ ಸಾಲಾಗಿ ಚಾಪೆ ಹಾಸಿ ಅಪ್ಪನ ಜೊತೆ ನಾವೆಲ್ಲರೂ ಮಲಗುತ್ತಿದ್ದೆವು. ಅಪ್ಪ ಕತೆ ಹೇಳುತ್ತಾ ನಮ್ಮನ್ನು ಪುರಾಣ ಕಾಲಕ್ಕೇ ಕರೆದೊಯ್ಯುತ್ತಿದ್ದರು. ಅಂಗಳದ ಸುತ್ತ ಇರುತ್ತಿದ್ದ ಬಾಳೆ ತೆಂಗಿನ ಮರಗಳ ದೈತ್ಯ ನೆರಳುಗಳನ್ನು ನೋಡಿ, ಪುರಾಣ ಪಾತ್ರಗಳನ್ನು ಕಲ್ಪಿಸಿಕೊಂಡು ನಾವು ಮುದುಡಿ ಮಲಗುತ್ತಿದ್ದೆವು. ಹೀಗೆ ಕತೆ ಕೇಳುತ್ತಾ ಅಪ್ಪನ ಎದೆ ಮೇಲೆ ಮಲಗಲು ನಮ್ಮ ನಡುವೆ ಮಹಾಯುದ್ಧವೇ ನಡೆಯುತ್ತಿತ್ತು. ಅಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ನಕ್ಷತ್ರಮಂಡಲದ ಕತೆಯನ್ನೂ ಅಪ್ಪ ಹೇಳುತ್ತಿದ್ದರು. ಹಾಗೆ ಅಂಗಾತ ಮಲಗಿ ಆಕಾಶ ನೋಡುವ ಸಂಭ್ರಮದ ಮುಂದೆ ಸಾಟಿ ಯಾವುದಿದೆ! ನಾವೀಗ ಆಕಾಶ ನೋಡುವ ಸಂಭ್ರಮವನ್ನೇ ಕಳೆದುಕೊಂಡಿದ್ದೇವೆ. ಈಗ ಆಕಾಶ ತೋರಿಸುತ್ತ ಕಂದನಿಗೆ ಊಟ ಮಾಡಿಸುವ ಅಮ್ಮಂದಿರೂ ಇಲ್ಲ.

ಆಗ ನಮ್ಮನೆಯಲ್ಲಿ ಎಲ್ಲವೂ ರೇಡಿಯೋ ಟೈಮಿಂಗ್. ಸಂಜೆ ೬.೪೫ಕ್ಕೆ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ಮುಗಿಯುತ್ತಿದ್ದಂತೆ ಭಜನೆ ಶುರು ಮಾಡುತ್ತಿದ್ದೆವು. ಭಜನೆ ಶುರುವಾಗುತ್ತಿದ್ದಂತೆ ನಿದ್ರೆ ಬಂದು ವಕ್ಕರಿಸುತ್ತಿತ್ತು. ನಾವು ತೂಕಡಿಸುತ್ತಾ ಭಜನೆ ಮಾಡುತ್ತಿದ್ದರೆ ಅಣ್ಣಂದಿರು ನಮ್ಮನ್ನೇ ನೋಡುತ್ತಾ ಗದರಿಸುತ್ತಿದ್ದರು. ಅವರಿಗೆ ಅಧಿಕಾರ ಚಲಾಯಿಸುವ ಹುಚ್ಚು. ೭.೧೫ಕ್ಕೆ ಆಕಾಶವಾಣಿಯಲ್ಲಿ ವಾರ್ತೆ ಶುರುವಾಯಿತೆಂದರೆ ಅಡುಗೆ ಮನೆಯಲ್ಲಿ ಪಾತ್ರೆಗಳ ಜೋರು ಸದ್ದು ಶುರುವಾಗುತ್ತಿತ್ತು. ಸಾಲಾಗಿ ತಟ್ಟೆ ಇಟ್ಟು ಅಮ್ಮ ಊಟ ಬಡಿಸುತ್ತಿದ್ದರು. ಅಪ್ಪ ಅರಣ್ಯ ಇಲಾಖೆಯಲ್ಲಿದ್ದರೂ ಒಲೆ ಉರಿಸಲು ಸೌದೆ ಕೂಡಾ ಬಿಟ್ಟಿಯಾಗಿ ತರುತ್ತಿರಲಿಲ್ಲ. ಅಮ್ಮ ನಮ್ಮನ್ನೆಲ್ಲ ಕರೆದುಕೊಂಡು ಸೌದೆ ಆಯಲು ಹೋಗುತ್ತಿದ್ದರು. ಸೌದೆ ತರುವ ನೆಪದಲ್ಲಿ ಇಡೀ ಬಂಟಮಲೆ ಕಾಡಿನಲ್ಲಿ ಸುತ್ತಾಡಿದ್ದೇನೆ. ಈಗ ನೆನೆಪಾದರೆ ಭಯವಾಗುತ್ತದೆ. ಅಂತಹ ದಟ್ಟ ಅರಣ್ಯ ಅದು. ಮೊದಲ ಮಳೆ ಬಿದ್ದಾಗ ಅಲ್ಲಿ ಹೇರಳವಾಗಿ ಅಣಬೆಗಳು ಸಿಗುತ್ತಿತ್ತು.

ನಾವು ನಾಲ್ಕು ಜನ ಚಿಕ್ಕ ಮಕ್ಕಳು. ಅಪ್ಪ ನಮಗೂ ಕೆಲಸ ಹಚ್ಚುತ್ತಿದ್ದರು. ಬುಟ್ಟಿ ಹಿಡಿದುಕೊಂಡು ಹೋಗಿ ಹಾದಿಯಲ್ಲಿ ಬಿದ್ದಿದ್ದ ಸೆಗಣಿ ಹೆಕ್ಕಿ ತರುವುದು ನಮಗೆ ನಿತ್ಯದ ಕೆಲಸವಾಗಿತ್ತು. ಸೆಗಣಿ ಹೆಕ್ಕುವ ಕೆಲಸಕ್ಕೆ ಮನೆಯಿಂದ ಹೊರಬಿದ್ದ ನಾವು ಕಲ್ಲುಗಳ ಮಧ್ಯೆ ಬೆಳೆಯುವ ಅಂಟಿನ ಗಿಡದ ಚಿಗುರನ್ನು ಅಂಗೈಲಿ ಹಾಕಿ ತಿರುವಿ ಮೇಣ ಮಾಡಿ ಗೊಂಬೆಗಳನ್ನು ಮಾಡುತ್ತಿದ್ದೆವು. ಶಾಂತಿ ಕಾಯಿಯನ್ನು ಜಜ್ಜಿ ತಿರುಳನ್ನು ತಿನ್ನುವುದು, ನೇರಳೆ ಮರ ಹತ್ತಿ ಹಣ್ಣು ಕೀಳುವುದು, ಯಾರದೋ ಮರದ ಗೇರು ಹಣ್ಣು ಕಿತ್ತು ತಿನ್ನುವುದು, ಮಾವಿನ ಮಿಡಿಗೆ ಕಲ್ಲು ಹೊಡೆಯುವುದು, ಹುಣಸೇ ಮರ ಕಂಡರೆ ಅಲ್ಲೂ ನಮ್ಮ ಕೈಚಳಕ ತೋರಿಸಿ ತೃಪ್ತಿಯಿಂದ ಮನೆಗೆ ಬರುತ್ತಿದ್ದೆವು. ಅಪ್ಪನಿಗೆ ಬುಟ್ಟಿ ತುಂಬ ಸೆಗಣಿ ಕಾಣಬೇಕು ಅಷ್ಟೇ.

ಕೆಲವೊಮ್ಮೆ ನಮ್ಮ ಗಲಾಟೆ ಜೋರಾಗಿ ಅಪ್ಪ ರೇಗುತ್ತಿದ್ದರೆ ನಾವು ಏನೇನೋ ಹೇಳುತ್ತಾ ಮುಸಿಮುಸಿ ನಗುತ್ತಿದ್ದೆವು. ಅಪ್ಪನಿಗೆ ಸಿಟ್ಟು ನೆತ್ತಿಗೇರಿ ನಮಗೆ ಹೊಡೆಯಲು ಬಂದಾಗ ಒಬ್ಬರ ಹಿಂದೆ ಒಬ್ಬರಾಗಿ ಮನೆ ಸುತ್ತ ಓಡುತ್ತಿದ್ದೆವು. ಅಪ್ಪ ಒಂದು ಸುತ್ತು ಬರುತ್ತಿದ್ದರಷ್ಟೇ. ನಾವು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುತ್ತಿದ್ದೆವು. ಭಾನುವಾರ ಅಪ್ಪ ಮನೆಯಲ್ಲಿದ್ದರೆ ಕಾಡಿ ಬೇಡಿ ಅಕ್ಕನ ನೇತೃತ್ವದಲ್ಲಿ ಇಬ್ಬರು ಅಣ್ಣಂದಿರು, ನಾನು ಮತ್ತು ತಂಗಿ ಸಿನಿಮಾಕ್ಕೆ ಹೋಗುತ್ತಿದ್ದೆವು. ಅಮ್ಮನೂ ಜೊತೆಗಿರುತ್ತಿದ್ದರು. ಆಗಿನ್ನೂ ನಾನು ಮೂರು ನಾಲ್ಕನೇ ತರಗತಿಯಲ್ಲಿದ್ದೆ. ಆಗ ನೋಡಿದ ಸಿನೆಮಾಗಳ ಪೈಕಿ ಮುದುಡಿದ ತಾವರೆ ಅರಳಿತು ನನಗಿನ್ನೂ ನೆನಪಿದೆ. ಸಿನಿಮಾ ಮುಗಿಸಿ ಮನೆಗೆ ಬರುತ್ತಿದ್ದಂತೆ ಅಪ್ಪನ ಪಿತ್ತ ನೆತ್ತಿಗೇರುತ್ತಿತ್ತು. ಸುಮ್ಮನೇ ಬಯ್ಯುವುದಕ್ಕೆ ಶುರು ಮಾಡುತ್ತಿದ್ದರು. ಅಪ್ಪನ ಈ ಗುಣ ನಮಗೆ ಅರ್ಥವೇ ಆಗುತ್ತಿರಲಿಲ್ಲ. ಅವರೇ ಹೋಗಿ ಅಂತ ಕಳುಹಿಸಿ, ಬಂದ ಮೇಲೆ ರೇಗುತ್ತಿದ್ದರು. ಆದರೆ ನಮಗೆ ಅಪ್ಪನನ್ನು ಕಂಡರೆ ಭಯವಿರಲಿಲ್ಲ.

ಅಪ್ಪ ಅಪರೂಪಕ್ಕೆ ಮನೆಯಲ್ಲಿ ಬೀಡಿ ಸೇದುತ್ತಿದ್ದರು. ಆದರೆ ಬೆಂಕಿಪೊಟ್ಟಣ ಇಟ್ಟುಕೊಳ್ಳುತ್ತಿರಲಿಲ್ಲ. ಬೀಡಿಯನ್ನು ಒಲೆಯ ಕೆಂಡಕ್ಕೆ ಹಿಡಿದು ಉರಿಸಿ ತರುವುದು ನಮ್ಮ ಕೆಲಸ. ನಾನು ಒಲೆಯ ಬಳಿಯಿಂದ ಬೀಡಿ ಉರಿಸಿ ಅಪ್ಪನ ಬಳಿ ಬರುವಾಗ ಅರ್ಧ ಬೀಡಿ ಖಾಲಿಯಾಗುತ್ತಿತ್ತು. ಎರಡೆರಡು ಬಾರಿ ಒಳಕ್ಕೆ ದಮ್ಮು ಎಳೆದು ಚೆನ್ನಾಗಿ ಹೊಗೆ ಬಿಡುತ್ತಾ ಬರುತ್ತಿದ್ದೆ. ಹಾಗೆ ಸೇದದಿದ್ದರೆ ಆರಿಹೋಗುತ್ತದೆ ಎಂಬುದೂ ಒಂದು ಕಾರಣವಾಗಿತ್ತು. ಎಳೆದು ನೋಡುವ ಕುತೂಹಲವೂ ಇತ್ತು.

ನಾನು ಶಾಲೆಗೆ ಹೋಗಲು ಶುರು ಮಾಡುವ ಹೊತ್ತಿಗೆ ಕಾರ್ಕಳದಲ್ಲಿ ಮನೆ ಮಾಡಿದ್ದೆವು. ಬರೆ ಕಲ್ಲಿನಿಂದ ತುಂಬಿದ್ದ ಜಾಗದಲ್ಲಿ ನಮಗೆಲ್ಲ ಕಲ್ಲು ಹೊರುವುದೇ ಕೆಲಸ. ಅಲ್ಲೊಂದು ಆಳವಾದ ಬಾವಿಯನ್ನು ಅಪ್ಪ ಮಕ್ಕಳೇ ಸೇರಿ ತೋಡಿದ್ದೆವು. ಬಾವಿಯಿಂದ ಮಣ್ಣನ್ನು ಮೇಲಕ್ಕೆ ಎತ್ತುವ ಬುಟ್ಟಿಯಲ್ಲಿ ನಮ್ಮನ್ನು ಕೂರಿಸಿ ಬಾವಿಗೆ ಇಳಿಸುತ್ತಿದ್ದರು. ಕೆಳಗಿನಿಂದ ಮೇಲೆ ನೋಡಿದಾಗ ವಿಚಿತ್ರ ಭಯ ಆವರಿಸುತ್ತಿತ್ತು. ಅಂತಹ ಕಲ್ಲಿನ ಜಾಗದಲ್ಲಿ ಮಾವು, ಚಿಕ್ಕು, ಬಾಳೆ ಗಿಡಗಳನ್ನು ನೆಟ್ಟು ಪ್ರತಿದಿನ ಅವುಗಳಿಗೆ ನೀರು ಹಾಕುವುದೇ ಕೆಲಸ. ಗಿಡಗಳೆಲ್ಲ ಫಲ ಬಿಡುವ ಹೊತ್ತಿಗೆ ಆಸ್ತಿ ಮಾರಿ ಸುಳ್ಯಕ್ಕೆ ಬಂದೆವು.

ಆನಂತರ ಅಪ್ಪ ಒಬ್ಬರೇ ಮೂಡಬಿದರೆಯಲ್ಲಿರುತ್ತಿದ್ದರು. ಫಾರೆಸ್ಟ್ ಗಾರ್ಡ್ ಒಬ್ಬರು ಅಪ್ಪನ ಜೊತೆಗಿರುತ್ತಿದ್ದರು. ಶನಿವಾರ ಮಧ್ಯಾಹ್ನ ಮನೆಗೆ ಬಂದರೆಂದರೆ ಮತ್ತೆ ಭಾನುವಾರ ಸಂಜೆ ಮನೆ ಬಿಡುವ ತನಕವೂ ಸಸಿ ನೆಡುವುದು, ಬಾವಿಯಿಂದ ನೀರು ಸೇದಿ ಸಸಿಗಳಿಗೆ ಹಾಕುವುದು ಹೀಗೆ ಅವರ ದಿನಚರಿ ಸಾಗಿತ್ತು. ಅಲ್ಲೂ ಒಂದಲ್ಲ ಮೂರು ಬಾವಿ ತೋಡಿದ್ದೆವು. ಒಂದರಲ್ಲೂ ನೀರು ಸಿಗಲೇ ಇಲ್ಲ. ಅಪ್ಪ ಮನೆಯಲ್ಲಿ ಕುಳಿತಿದ್ದೇ ಇಲ್ಲ. ಬರೇ ಗುದ್ದಲಿ ಹಿಡಿದು ಕೆಲಸ ಮಾಡುವುದೇ ಆಗಿತ್ತು. ನಾವು ಹೋದಲ್ಲೆಲ್ಲ ಬಾವಿ ತೋಡುವುದು ತಪ್ಪಲಿಲ್ಲ. ವಳಲಂಬೆಯ ನಮ್ಮ ಜಾಗದಲ್ಲಿ ತೋಡಿದ ಮೂರನೇ ಬಾವಿಯಲ್ಲಿ ಸ್ವಲ್ಪ ಮಟ್ಟಿನ ನೀರು ಸಿಕ್ಕಿತ್ತು.

ಹೇಮಾ ನೆನಪುಗಳು:ಕೈಬಾಯಿ ನೀಲಿ ನೇರಳೆ

ನಮ್ಮ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ದೊಡ್ಡದೊಂದು ವಿಶಾಲವಾಗಿ ಹರಡಿರುವ ಪಾದೆ (ಬಂಡೆ) ಇತ್ತು. ಮಳೆಗಾಲದಲ್ಲಿ ಇಲ್ಲಿ ಹೋಗುವುದೆಂದರೆ ಸಾಹಸವೇ ಸರಿ. ಪುಟ್ಟ ಮಕ್ಕಳೆಲ್ಲ ಪಾಚಿಯಲ್ಲಿ ಜಾರಿ ಬಿದ್ದು ತರಚು ಗಾಯ ಮಾಡಿಕೊಳ್ಳುವುದು ದಿನಚರಿಯ ಭಾಗವೇ ಆಗಿರುತ್ತಿತ್ತು. ಪೇಟೆಯಿಂದ ನಮ್ಮ ಮನೆಯ ಹಾದಿಯಾಗಿಯೇ ನಮ್ಮ ಹೆಡ್‌ಮಿಸ್ಸು ಅನಸೂಯಾ ಟೀಚರ್ ಬರುತ್ತಿದ್ದರು. ಅವರು ಹೋಗುವಾಗ ನನ್ನನ್ನು, ತಂಗಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ಮೇಲೆ ಅವರಿಗೆ ತುಂಬಾ ಕಾಳಜಿ. ಅವರ ಕೈಹಿಡಿದುಕೊಂಡು ನಾವು ಪಾದೆ ದಾಟಿ ಶಾಲೆಗೆ ಹೋಗುತ್ತಿದ್ದೆವು. ಇಪ್ಪತ್ತಾರು ವರ್ಷದ ನಂತರ ಕಳೆದ ವರ್ಷ ನನ್ನಣ್ಣ ಅನಸೂಯ ಟೀಚರ ವಿಳಾಸ ಹುಡುಕಿ ಮೊಬೈಲ್ ನಂಬರ್ ಪತ್ತೆ ಮಾಡಿ ಸಂಪರ್ಕಿಸಿದ್ದ. ನಾನೂ ಮಾತಾಡಿದ್ದೆ. ಅವರೀಗ ಬೆಂಗೂರಿನಲ್ಲಿಯೇ ಮಗಳ ಮನೆಯಲ್ಲಿ ವೃದ್ದಾಪ್ಯ ಕಳೆಯುತ್ತಿದ್ದಾರೆ. ಸರಿಯಾಗಿ ಕಿವಿ ಕೇಳದಿದ್ದರೂ ಹೆಸರು ಹೇಳಿ ಫಾರೆಸ್ಟರ್ ಮಕ್ಕಳು ಎಂದಾಗ ತಕ್ಷಣ ನೆನಪು ಬಂದು ಮನೆಯವರೆಲ್ಲರನ್ನೂ ವಿಚಾರಿಸಿಕೊಂಡರು.

ನಮ್ಮ ಕನ್ನಡದ ಮೇಷ್ಟ್ರು ಬಿಪಿನ್ ಚಂದ್ರ ಪಾಲ್ ಅಂತ. ಆ ಹೆಸರೇ ನಮಗೆ ಅವರ ಬಗ್ಗೆ ಗೌರವ ಹೆಚ್ಚಿಸಿತ್ತು. ಯಕ್ಷಗಾನದ ಮಹಾಭಕ್ತ. ಅಪ್ಪನ ಅಭಿಮಾನಿ. ನನ್ನ ಅಣ್ಣನಿಗೆ ಮನೆಯಲ್ಲಿಯೇ ಯಕ್ಷಗಾನ ತರಬೇತಿ ಅಪ್ಪನಿಂದಲೇ ನಡೆದಿತ್ತು. ಇದು ಗೊತ್ತಿದ್ದ ಮೇಷ್ಟ್ರು ನನ್ನನ್ನೂ ತಂಡಕ್ಕೆ ಸೇರಿಸಿಕೊಂಡು ಅಹಲ್ಯೆಯ ಪಾತ್ರ ಕೊಟ್ಟಿದ್ದರು. ನಾನು ಪಾತ್ರ ಮಾಡಲ್ಲ ಅಂದರೂ ಕೇಳಲಿಲ್ಲ. ಒಂದು ದಿನ ಶನಿವಾರ ತರಗತಿ ಮುಗಿದ ಮೇಲೆ ಯಕ್ಷಗಾನ ತರಬೇತಿ ಶುರುವಾಯಿತು. ನಾನೂ ಹೋದೆ. ಮೇಷ್ಟ್ರು ನೃತ್ಯ ಹೇಳಿಕೊಡಲು ಶುರು ಮಾಡಿದರು. ನಾನು ಬೆಂಚಿನ ಮೂಲೆಯಲ್ಲಿ ಕುಳಿತವಳು ಕಲ್ಲಾಗಿಬಿಟ್ಟಿದ್ದೆ. ನನಗೆ ಕೊಟ್ಟಿದ್ದ ಅಹಲ್ಯೆಯ ಪಾತ್ರ ನನ್ನ ಗೆಳತಿಯ ಪಾಲಾಯಿತು. ಅಂದಿನಿಂದ ಇಂದಿನವರೆಗೆ ನಾನು ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದು ಬಿಟ್ಟರೆ ವೇದಿಕೆಯಿಂದ ಮಾರು ದೂರದಲ್ಲೇ ಇರುತ್ತೇನೆ. ಬಹುಷಃ ಅಂದು ಮೇಷ್ಟ್ರು ಹೇಳಿಕೊಟ್ಟಂತೆ ಕುಣಿದಿದ್ದರೆ ಇಂದು ವೇದಿಕೆಯೇರುವ ಭಯವಾದರೂ ಕಡಿಮೆಯಾಗುತ್ತಿತ್ತೋ ಏನೋ. ಆ ಕೊರತೆ ನನ್ನನ್ನು ಆಗಾಗ ಕಾಡುವುದಿದೆ. ಆಗೆಲ್ಲ ಬಿಪಿನ್ ಮೇಷ್ಟ್ರು ನೆನಪಿಗೆ ಬರುತ್ತಿರುತ್ತಾರೆ.

ಶಾಲೆ ದೊಡ್ಡ ಕಾಡಿನ ಮಧ್ಯೆ ಇತ್ತು. ಅಲ್ಲಿ ನಾವು ಕಳ್ಳ ಪೋಲಿಸ್ ಆಟ ಚೆನ್ನಾಗಿ ಆಡುತ್ತಿದ್ದೆವು. ಮರದ ಮೇಲೆಲ್ಲ ಹರಿದಾಡುತ್ತಿರುವ ಕೆಂಪಿರುವೆಯ ಕುಂಡೆಯ ಭಾಗದಲ್ಲಿ ಬರುವ ದ್ರವವನ್ನು ಹಣೆಯಲ್ಲಿ ಬಿಂದಿ ಇಡುವ ಜಾಗಕ್ಕೆ ಹಚ್ಚುತ್ತಿದ್ದೆವು. ಅದು ಭಯಂಕರವಾಗಿ ಉರಿಯುತ್ತಿತ್ತು ಮತ್ತು ಆ ಜಾಗದಲ್ಲಿ ಗುರುತು ಉಳಿಯುತ್ತಿತ್ತು. ಒಂದು ತರಹದ ಮ್ಯಾಜಿಕ್ ಅನುಭವ. ಸೂಜಿಯಲ್ಲಿ ಚುಚ್ಚಿಕೊಂಡು ಹಚ್ಚೆ ಹಾಕೊಂಡಂತೆ. ಕೆಲವರು ಕೀಟಲೆಗಾಗಿ ಗೊತ್ತೇ ಆಗದಂತೆ ಬೇರೆ ಮಕ್ಕಳ ಕೈಗೆ ಹಚ್ಚಿ ಮಜಾ ನೋಡುತ್ತಿದ್ದರು. ಕೆಸರು ಗದ್ದೆಯಲ್ಲಿ ಬೆಳೆದ ತಾವರೆಯ ಬೀಜಗಳನ್ನು ತಿನ್ನುತ್ತಿದ್ದೆವು. ತಾವರೆಯ ಬೀಜದ ರುಚಿಯನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಮತ್ತೆ ಆ ರುಚಿ ಸವಿಯುವ ಆಸೆ ಇದೆ. ನೇರಳೆ ಮರಕ್ಕೆ ಲಗ್ಗೆ ಇಟ್ಟರೆ ಇಡೀ ಮರ ಖಾಲಿ ಮಾಡುತ್ತಿದ್ದೆವು. ಕೈ ಬಾಯಿ ಎಲ್ಲ ನೀಲಿಯಾಗುತ್ತಿತ್ತು. ತುಂಬ ಕಲ್ಲಿರುವ ಜಾಗದಲ್ಲಿ ಬೆಳೆವ ಹಣ್ಣುಗಳು ತುಂಬ ಸಿಹಿಯಾಗಿರುತ್ತವೆ ಎಂಬುದು ನನ್ನ ಭಾವನೆ. ಕಲ್ಲುಗಳ ಮಧ್ಯೆ ಬೆಳೆವ ಮುಳ್ಳುಗಿಡದಲ್ಲಿ ಬಿಡುವ ಹಣ್ಣು ತುಂಬ ರುಚಿಯಾಗಿರುತ್ತಿತ್ತು. ಆಗ ಸಿಗುತ್ತಿದ್ದ ಕೆಲವು ಹಣ್ಣುಗಳ ಸಂತತಿ ಈಗ ನಾಶವೇ ಆಗಿದೆಯೇನೋ.

ಅಪ್ಪ ನಮಗೆ ಅನೇಕ ಮರಗಳ ಪರಿಚಯ ಮಾಡಿಕೊಟ್ಟಿದ್ದರು. ಪಕ್ಕಿಗಳ ಕೂಗಿನಿಂದಲೇ ಅದು ಯಾವ ಪಕ್ಷಿ ಎಂದು ಹೇಳುತ್ತಿದ್ದರು. ಗುಬ್ಬಿ, ಗಿಳಿ, ಕೋಗಿಲೆ, ಮರಕುಟಕ, ಗೀಜಗ, ಕೊಕ್ಕರೆ ಮುಂತಾದ ಪಕ್ಷಿಗಳೆಲ್ಲ ನಮ್ಮ ಸುತ್ತಮುತ್ತಲೇ ಹಾರಾಡುತ್ತಿದ್ದವು. ನಾವು ಚಿಕ್ಕವರಾಗಿದ್ದಾಗ ನಮ್ಮನೆಯಲ್ಲಿ ಪುನುಗು ಬೆಕ್ಕು, ಮೊಲಗಳನ್ನು ಸಾಕಿದ್ದರು. ಅಮ್ಮನೂ ಅಷ್ಟೇ ಮರದ ಎಲೆ, ತೊಗಟೆ ನೋಡಿಯೇ ಮರದ ಜಾತಿ ಹೇಳುತ್ತಿದ್ದರು. ಅಪ್ಪ ರಜೆಯಲ್ಲಿ ತೆಂಗಿನ ಹಸಿ ಗರಿಗಳಿಂದ ಬೇರೆ ಬೇರೆ ಪಕ್ಷಿಗಳ ಮಾದರಿಗಳನ್ನು ಮಾಡಿಕೊಡುತ್ತಿದ್ದರು. ನಮಗೆ ಅದು ತುಂಬ ಖುಷಿಯ ಕ್ಷಣವಾಗಿತ್ತು. ಅಪ್ಪನ ಜೊತೆ ಹೊರಗೆಲ್ಲಾದರೂ ಹೋದರೆ ನಮ್ಮನ್ನು ಭುಜದ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು. ನಮಗೆ ತೇರಿನ ಮೇಲೆ ಕುಳಿತು ಹೋಗುತ್ತಿರುವ ಸಂತಸ. ಅಪ್ಪ ಭುಜದ ಮೇಲೆ ಕೂರಿಸಿಕೊಳ್ಳದಿದ್ದರೆ ಅವರೊಂದಿಗೆ ಹೆಜ್ಜೆ ಹಾಕುವುದು ನಮಗೆ ಅಸಾಧ್ಯ. ನಾವು ಓಡಬೇಕಾಗುತ್ತಿತ್ತು. ಅಮ್ಮ ಹೇಗೆ ಹೆಜ್ಜೆ ಹಾಕಿದ್ದರೋ! ಅವರ ಹೆಜ್ಜೆಗಳಿಗೆ ಹತ್ತಾರು ಹೆಜ್ಜೆಗಳ ಅಂತರವಿರುತ್ತಿತ್ತೇನೋ. ಒಂದೊಂದು ಮೀಟರ್‌ಗೆ ಒಂದೊಂದು ಹೆಜ್ಜೆ ಇಡುತ್ತಿದ್ದರು. ಅಷ್ಟು ಎತ್ತರದ ದೇಹ ಅಪ್ಪನದ್ದು.

ಮಳೆಗಾಲದಲ್ಲಿ ಮಳೆ ಬಂದರೆ ಯಾವ ಕೊಡೆಯೂ ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಶಾಲೆಯಿಂದ ಮನೆಗೆ ಬಂದ ಕೂಡಲೇ ಚೀಲದಿಂದ ಪುಸ್ತಕಗಳನ್ನು ತೆಗೆದು ಒಲೆ ಬದಿಯಲ್ಲಿ ಇಟ್ಟು ಅಮ್ಮ ಒಣಗಿಸುತ್ತಿದ್ದರು. ಪುಸ್ತಕಗಳಿಗೆ ರಕ್ಷಣೆಗೆ ಪ್ಲಾಸ್ಟಿಕ್ ಕವರ್ ಹಾಕಿಕೊಳ್ಳುತ್ತಿದ್ದೆವು. ಹೀಗೆ ಮಳೆಗಾಲದಲ್ಲಿ ಇದ್ದ ಒಂದೆರಡು ಬಟ್ಟೆಗಳನ್ನೂ ಒಲೆ ಮುಂದೆ ಹಿಡಿದು ಒಣಗಿಸಿ ಹಾಕಿಕೊಳ್ಳುತ್ತಿದ್ದೆವು. ಮನೆ ತುಂಬಾ ಮಕ್ಕಳಿದ್ದ ಕಾರಣ ಇಬ್ಬರಿಗೆ ಒಂದು ಕೊಡೆ ಮಾತ್ರ. ಆ ಕೊಡೆಯೊಳಗೆ ದಾರಿಯುದ್ದಕ್ಕೂ ಎಳೆದಾಟ, ಜಗಳದಲ್ಲಿ ಇಬ್ಬರೂ ಸಂಪೂರ್ಣ ಒದ್ದೆ. ನಾನು ನನ್ನಣ್ಣ ಇದೇ ಕೆಲಸ ಮಾಡುತ್ತಿದ್ದೆವು. ಮನೆಯಲ್ಲಿ ದೊಡ್ಡವರದ್ದೇ ಕಾರುಬಾರು. ನಮ್ಮ ದೂರುಗಳನ್ನು ಆಲಿಸುವವರು ಯಾರೂ ಇರಲಿಲ್ಲ.

ಒಮ್ಮೆ ಹೀಗೆ ನಮ್ಮ ಪಾಡಿಗೆ ನಾವು ಆಟಕ್ಕೆ ಹೊರಗೆ ಹೋಗಿದ್ದೆವು. ನನ್ನ ಇಬ್ಬರು ಅಣ್ಣಂದಿರು ಪ್ಲಾಸ್ಟಿಕ್ ಚೀಲಕ್ಕೆ ಬೆಂಕಿ ಹಚ್ಚಿ ನೆಲದ ಮೇಲೆ ಸುರಿಯುತ್ತಾ ಮುಂದೆ ಮುಂದೆ ಹೋಗುತ್ತಿದ್ದರೆ ನಾನು ಅವರನ್ನೆ ಹಿಂಬಾಲಿಸಿದ್ದೆ. ನನ್ನ ಪುಟ್ಟ ಕಾಲ್ಗಳಿಗೆ ಸುಟ್ಟ ಪ್ಲಾಸಿಕ್ ಅಂಟಿಕೊಂಡು ದೊಡ್ಡ ರಾದ್ದಾಂತವಾಗಿತ್ತು. ಸುಟ್ಟುಹೋದ ನನ್ನ ಕಾಲು ಸರಿಯಾಗಬೇಕಾದರೆ ಆಸ್ಪತ್ರೆ, ಡಾಕ್ಟರು ಅಂತೆಲ್ಲ ಹೋಗಬೇಕಾಯಿತು. ನನಗೆ ಆಗಾಗ ಕಾಡುತ್ತಿದ್ದ ಇನ್ನೊಂದು ತೊಂದರೆಯೆಂದರೆ ಕಲ್ಲೊತ್ತಾಗುವುದು. ಆಗೆಲ್ಲ ಚಪ್ಪಲಿ ಹಾಕುವ ಅಭ್ಯಾಸವಿರಲಿಲ್ಲ. ಎಲ್ಲೆಂದರಲ್ಲಿ ಕಲ್ಲುಗಳ ಮೇಲೆಲ್ಲಾ ಓಡಾಡಿ ಕಲ್ಲು ತುಂಬ ಒತ್ತಿದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ನಂತರ ಅದು ಕೀವಾಗಿ ಹೋಗುವವರೆಗೆ ಯಮಯಾತನೆ ಪಡಬೇಕಾಗುತ್ತಿತ್ತು. ಇದು ನನಗೆ ನೆನಪಿರುವಂತೆ ಆಗಾಗ ಆಗುತ್ತಿತ್ತು. ನಂತರ ಚಪ್ಪಲಿ ಹಾಕುವ ಅಭ್ಯಾಸವಾದ ಮೇಲೆ ಕಲ್ಲೊತ್ತುವಿನಿಂದ ಮುಕ್ತಿ ಸಿಕ್ಕಿತ್ತು. ಚಿಕ್ಕಂದಿನಿಂದಲೂ ನನಗೆ ವರ್ಷಕ್ಕೊಮ್ಮೆಯೂ ಜ್ವರ ಬರುವುದಾಗಲಿ, ಶೀತ, ನೆಗಡಿ ಬಾಧಿಸುವುದಾಗಲಿ ಇರಲಿಲ್ಲ. ಕಾಯಿಲೆಯಾದಾಗ ಅಪ್ಪನ ಜೊತೆ ಸೈಕಲ್ಲಿನಲ್ಲಿ ಆಸ್ಪತ್ರೆಗೆ ಹೋಗುವುದು ನನಗೆ ಸಂಭ್ರಮ. ಇಡೀ ಪೇಟೆಯಲ್ಲಿ ಮೆರವಣಿಗೆ ಹೋದಂತೆ ಅನುಭವವಾಗುತ್ತಿತ್ತು. ಹುಷಾರಿಲ್ಲದಿದ್ದರಿಂದ ಸ್ವಲ್ಪ ಕಾಳಜಿ ವಹಿಸುತ್ತಿದ್ದರು. ಅದು ಬಿಟ್ಟರೆ ನಮ್ಮ ಪಾಡಿಗೆ ನಾವು. ಹಾಗಾಗಿ ಸ್ವಲ್ಪ ಹುಷಾರು ತಪ್ಪಿದರೆ ಸಿಕ್ಕಿದ್ದೇ ಛಾನ್ಸು ಎಂದು ಜಾಸ್ತಿ ನಾಟಕ ಮಾಡುತ್ತಿದ್ದೆವು.

*  *  *  *  *

ನಮ್ಮ ಶಾಲೆಯ ಮ್ಯಾನೇಜರ್ ತುಂಬ ಶ್ರೀಮಂತರಾಗಿದ್ದರು. ಪ್ರತಿ ವರ್ಷ ಕಂಬಳ (ಕೆಸರು ಗದ್ದೆಯಲ್ಲಿ ಎತ್ತು, ಕೋಣಗಳ ಓಟ) ಮಾಡಿಸುತ್ತಿದ್ದರು. ಈ ಶೆಟ್ಟರಿಗೆ ಕಂಬಳ, ಕೋಳಿ ಅಂಕ ಮುಂತಾದ ಶೋಕಿಗಳೆಲ್ಲ ಜಾಸ್ತಿ. ಕಂಬಳದ ದಿನ ಊರಿಗೆಲ್ಲ ಊಟ ಹಾಕಿಸುತ್ತಿದ್ದರು. ಹಾಗೆ ವರ್ಷಕ್ಕೊಮ್ಮೆ ನಾಗಬನಕ್ಕೆ ಪೂಜೆ ಹಮ್ಮಿಕೊಳ್ಳುತ್ತಿದ್ದರು. ಅದು ಜಾತ್ರೆಯಂತೆ. ನಮಗೆಲ್ಲ ಆಗ ಶಾಲೆಗೆ ರಜೆ.

ದೇವಸ್ಥಾನದ ಅರ್ಚಕರ ಮನೆಯವರಿಗೂ ನಮ್ಮನೆಗೂ ಯಾವುದೋ ನಂಟು. ದೇವಿಗೆ ಹರಕೆಯಾಗಿ ಬರುತ್ತಿದ್ದ ಕಪ್ಪುಗಾಜಿನ ಬಳೆಗಳನ್ನು ಭಟ್ಟರು ನಮ್ಮನೆಗೆ ಕಳಿಸುತ್ತಿದ್ದರು. ಹಬ್ಬದ ದಿನ ಮನೆಗೆ ಕರೆಸಿ ಊಟ ಹಾಕುತ್ತಿದ್ದರು. ಆ ಭಟ್ಟರು ನನ್ನ ಅಣ್ಣನ ಕ್ಲಾಸ್ಮೇಟ್. ನಮ್ಮ ಮನೆಗೆ ಸ್ವಲ್ಪ ದೂರದಲ್ಲಿ ಅರಳು ತಯಾರಿಸುವ ಪ್ಯಾಕ್ಟರಿ ಇತ್ತು. ಅದರ ಮಾಲಿಕರು ಕೊಂಕಣಿಗಳು. ನಮ್ಮ ಜಾಗದಲ್ಲಿ ವಿಶಾಲವಾಗಿ ಹರಡಿದ್ದ ಕಲ್ಲಿನ ಪಾದೆಯಲ್ಲಿ ಅರಳು ತಯಾರಿಸಲು ಬೇಕಾಗುವ ಭತ್ತವನ್ನು ಒಣಗಿಸುತ್ತಿದ್ದರು. ಇಡೀ ಬೇಸಿಗೆಯಲ್ಲಿ ಈ ಪಾದೆಯಲ್ಲಿ ಭತ್ತ ಒಣಗುವುದು ತಪ್ಪುತ್ತಿರಲಿಲ್ಲ. ಈ ಕಾರಣಕ್ಕೆ  ಅವರು ಹಬ್ಬದ ದಿನ ಮನೆಯವರೆಲ್ಲರನ್ನೂ ಊಟಕ್ಕೆ ಕರೆಯುತ್ತಿದ್ದರು. ಮುಜುಗರದಿಂದ ನಾವು ಹೋಗದಿದ್ದರೆ. ಬಗೆ ಬಗೆಯ ಭಕ್ಷ್ಯಗಳನ್ನು ಮನೆಗೇ ಕಳಿಸಿಕೊಡುತ್ತಿದ್ದರು. ಇನ್ನೊಂದು ಕಡೆಯಿಂದ ಕ್ರಿಶ್ಚಿಯನ್ನರ ಮನೆಯ ಒಡನಾಟ. ಅವರ ಮನೆಯವರೆಲ್ಲ ಮುಂಬೈಯಲ್ಲಿದ್ದರು. ವರ್ಷಕ್ಕೊಮ್ಮೆ ಊರಿಗೆ ಬಂದಾಗ ನಮಗೂ ಚಾಕಲೇಟ್ ಡಬ್ಬ ಬರುತ್ತಿತ್ತು. ಮತ್ತೊಂದು ಕಡೆ ಜೈನರ ಮನೆ. ಅಲ್ಲಿ ನಮ್ಮ ವಯಸ್ಸಿನ ಮಕ್ಕಳಿದ್ದರು. ಹಾಗಾಗಿ ನಮಗೆ ಅದು ಅಟದ ಮನೆಯಂತಿತ್ತು. ಇನ್ನು ಶೆಟ್ಟರ ಮನೆ, ಪೂಜಾರಿ, ಸೇರೆಗಾರರು, ಮುಸಲ್ಮಾನರ ಮನೆ. ಹಾಗೆ ನೋಡಿದರೆ ಅದೊಂದು ಸರ್ವ ಜಾತಿಗಳ ಸೌಹಾರ್ದ ತೋಟದಂತಿತ್ತು. ಅಷ್ಟೊಂದು ಜಾತಿಯ ಜನರು ಒಂದೆಡೆ. ಈ ಅವಕಾಶ  ಬೇರೆಲ್ಲೂ ನನಗೆ ಸಿಕ್ಕಿಲ್ಲ. ಮುಸಲ್ಮಾನರೊಬ್ಬರು ಒಣಮೀನು ಮಾರುತ್ತ ನಮ್ಮ ಮನೆಗೆ ಬರುತ್ತಿದ್ದರು. ಅವರನ್ನು ನಾವೆಲ್ಲ ಸಾಹುಕಾರ ಎಂದೇ ಕರೆಯುತ್ತಿದ್ದೆವು. ಎಂತಹ ಬಡವರಾದರೂ ಮುಸಲ್ಮಾನ ವ್ಯಾಪಾರಿಗಳನ್ನು ಸಾಹುಕಾರರೆಂದು ಯಾಕೆ ಕರೆಯುತ್ತಿದ್ದರು ಗೊತ್ತಿಲ್ಲ. ನಮ್ಮ ಮನೆಯ ಪಕ್ಕದಲ್ಲೇ ದಲಿತರ ಕೇರಿ ಇತ್ತು. ನಮ್ಮಲ್ಲಿ ಕೆಲಸಕ್ಕೆಲ್ಲ ಬಂದಾಗ ನಾವು ಅವರಿಗೆ ತೋರುತ್ತಿದ್ದ ಸೌಹಾರ್ದತೆಗೆ ಅವರೇ ಮುಜುಗರಪಟ್ಟುಕೊಳ್ಳುತ್ತಿದ್ದರು. ಮನೆಯೊಳಗೆ ಅಪರೂಪಕ್ಕೆ ನಮ್ಮನೆಗೆ ಅಕ್ಕಿ ತಂದು ದೋಸೆ, ಇಡ್ಲಿ, ಕಡುಬು ಮಾಡಿಸಿಕೊಂಡು ಹೋಗುತ್ತಿದ್ದರು. ನಾವೂ ಅಷ್ಟೇ ಪ್ರೀತಿಯಿಂದ ಮಾಡಿಕೊಡುತ್ತಿದ್ದೆವು. ಅವರಿಗೆ ಸಂಭ್ರಮವೋ ಸಂಭ್ರಮ. ನಾವು ಅವರ ಕೇರಿಗೆ ಹೋದರೆ ಅವರೆಲ್ಲ ಮುಜುಗರದಿಂದ ನಾಚಿಕೊಳ್ಳುತ್ತಿದ್ದರು. ದಲಿತರ ಕೇರಿಯ ಮನೆಗಳಿಗೆ ಕೆಲಸಕ್ಕೆ ಆಳುಗಳನ್ನು ಕರೆಯಲು ಮಾತ್ರ ಹೋಗುತ್ತಿದ್ದೆವು.

ಹೇಮಾ ನೆನಪುಗಳು: ಕೆಂಡಸಂಪಿಗೆ ಮರವೇರಿದ್ದು

ನಮ್ಮ ಮನೆ ಮುಂದೆ ಒಂದು ಕೆಂಡಸಂಪಿಗೆ ಮರವಿತ್ತು. ತುಂಬಾ ದೊಡ್ಡ ಮರ. ನಾನಾಗ ಏಳನೇ ತರಗತಿಯಲ್ಲಿದ್ದೆ. ದಿನಾ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಸಂಪಿಗೆ ಮರ ಏರುತ್ತಿದ್ದೆ. ಮರದ ತುಂಬ ಸಂಪಿಗೆ ಅರಳಿ ನಿಂತು ಕಡು ಪರಿಮಳ ಬೀರುತ್ತಿತ್ತು. ಅದರ ಪರಿಮಳ ಅಷ್ಟೇನೂ ಚೆನ್ನಾಗಿಲ್ಲ. ಕೆಲವರಿಗೆ ಕೆಂಡಸಂಪಿಗೆ ಪರಿಮಳ ತಲೆನೋವು ತರುತ್ತದೆ. ಆದರೆ ನೋಡುವುದಕ್ಕೆ ಕೆಂಡಸಂಪಿಗೆ ಬೇರೆಲ್ಲ ಹೂಗಳಿಂತ ಭಿನ್ನ. ಬೇರೆ ಹೂಗಳಂತೆ ಕೆಂಡಸಂಪಿಗೆಯಲ್ಲಿ ಕುಸುಮ ಕಾಣುವುದಿಲ್ಲ.

ನಾನು ಸಂಪಿಗೆ ಮರ ಹತ್ತಿ ಚೀಲ ತುಂಬ ಹೂ ಹೊತ್ತು ಶಾಲೆಗೆ ಹೋಗುತ್ತಿದ್ದೆ. ಆದರೆ ನನಗೆ ಹೂ ಮುಡಿಯುವ ಹುಚ್ಚಿರಲಿಲ್ಲ. ಕೆಂಡಸಂಪಿಗೆ ಮುಡಿದು ಸ್ವಲ್ಪ ಹೊತ್ತಿಗೆಲ್ಲ ತಲೆನೋವು ಬರುತ್ತಿತ್ತು. ಆದರೆ ನಮ್ಮನೆಯಲ್ಲಿ ಬೆಳೆದ ಹೂ ಎಂಬ ಹೆಮ್ಮೆ. ಅದಕ್ಕಿಂತಲೂ ಹೆಚ್ಚು ನನಗೆ ಮರಹತ್ತಿ ಹೂ ಕೀಳುವುದರಲ್ಲಿ ಖುಷಿ. ನಾನು ಮರ ಹತ್ತುವುದನ್ನು ದಿನಾ ಗಮನಿಸುತ್ತಿದ್ದ ನನ್ನ ದೊಡ್ಡಮ್ಮ ಪ್ರತಿದಿನ ಎಚ್ಚರಿಸುತ್ತಿದ್ದರು. ಆದರೂ ನನ್ನ ಕಾಯಕ ಮುಂದುವರಿದೇ ಇತ್ತು. ಚೀಲತುಂಬ ಹೂ ಕೊಂಡು ಹೋಗಿ ಗೆಳತಿಯರಿಗೆಲ್ಲ ಕೊಡುತ್ತಿದ್ದೆ. ಯಾವುದೋ ಒಂದು ಕಾಲದಲ್ಲಿ ಅದು ಕಡಿಮೆ ಹೂ ಬಿಡುತ್ತಿತ್ತು. ಆಗ ಇಡೀ ಮರ ಖಾಲಿಯಾಗುವಂತೆ ಮಾಡುತ್ತಿದ್ದೆ. ಒಂದು ವೇಳೆ ನಾನೇನಾದರೂ ಮರದಿಂದ ಬಿದ್ದಿದ್ದರೆ ಉಳಿಯುತ್ತಿರಲಿಲ್ಲ. ಅಷ್ಟು ದೊಡ್ಡ ಮರವದು. ಕೆಂಡಸಂಪಿಗೆ ಮರಕ್ಕೆ ಹಾವುಗಳು ಬರುತ್ತವೆ ಎಂದು ಹೇಳುತ್ತಿದ್ದರು. ಅದು ನನ್ನನ್ನು ಹೆದರಿಸಲೆಂದೇ ಹೇಳಿದ್ದೂ ಇರಬಹುದು.

ನಿಧಾನವಾಗಿ ಆ ಮರ ಗೊಡ್ಡಾಗಿ ಹೂ ಬಿಡುವುದನ್ನೇ ನಿಲ್ಲಿಸಿತ್ತು. ನಾನು ಪ್ರತಿದಿನ ಬೆಳಗ್ಗೆ ಎದ್ದು ಕತ್ತು ಮೇಲೆ ಮಾಡಿ ಎಲೆಗಳ ಮಧ್ಯೆ ಕಣ್ಣಾಡಿಸುತ್ತಿದ್ದೆ. ಹಾಗೇ ನಿರಾಸೆಯಿಂದ ನೋಡುತ್ತಿದ್ದೆ. ನಂತರ ಯಾವುದೋ ಕಾರಣಕ್ಕೆ ಆ ಮರವನ್ನು ಕಡಿದು ಹಾಕಿದ್ದರು. ಆ ಜಾಗ ಕಂಡಾಗಲೆಲ್ಲ ನನ್ನಲ್ಲಿ ಏನೋ ತಳಮಳ ಶುರುವಾಗುತ್ತಿತ್ತು. ನಂತರ ಆ ಮರ ಮತ್ತೆ ಚಿಗುರಿ ಮರವಾಗಿತ್ತು. ಆದರೆ ನಾನಾಗ ಕಾಲೇಜು ಸೇರಿದ್ದೆ. ಮರ ಗಿರ ಹತ್ತಿದ್ರೆ ಯಾರಾದರೂ ಏನಾದರೂ ಹೇಳಿಯಾರು ಎಂಬ ಅಂಜಿಕೆ ಶುರುವಾಗಿತ್ತು. ಒಮ್ಮೆ ಅಪ್ಪ ಹೈಬ್ರೀಡ್ ತಳಿಯ ಬಿಳಿಸಂಪಿಗೆ ಸಸಿ ತಂದು ನೆಟ್ಟಿದ್ದರು. ಆದರೆ ಅದು ತುಂಬ ಚಿಕ್ಕ ಹೂ. ಹೈಬ್ರೀಡ್ ಆದ್ದರಿಂದ ಪುಟ್ಟ ಸಸಿಯಲ್ಲೇ ಹೂ ಬಿಡುತ್ತಿತ್ತು. ಒಳ್ಳೆಯ ಸುವಾಸನೆ. ಆದರೆ ಕೆಂಡಸಂಪಿಗೆಯ ಸ್ಥಾನ ಅದು ತುಂಬುವಂತಿರಲಿಲ್ಲ. ಅದನ್ನು ಕೊಯ್ಯಲು ಮರವೇರಬೇಕಿರಲಿಲ್ಲ. ಬಗ್ಗಿ ಸಸಿಯಿಂದಲೇ ಕಿತ್ತರಾಯಿತು. ನನಗೆ ಅದು ಥ್ರಿಲ್ ಕೊಡದು. ಹಾಗಾಗಿ ಆ ಸಂಪಿಗೆ ಮೇಲೆ ನನಗೆ ಮೋಹವೇ ಬರಲಿಲ್ಲ. ಬೆಂಗಳೂರಿನ ರಸ್ತೆ ಬದಿಗಳಲ್ಲಿ ತುಂಬಾ ಕಡೆ ಕೆಂಡಸಂಪಿಗೆ ಮರಗಳಿವೆ. ಅದು ನೋಡಿದಾಗಲೆಲ್ಲ ನಾನು ತುಂಬ ಖುಷಿಪಡುತ್ತೇನೆ.

ಹೀಗೆ ದೊಡ್ಡಮ್ಮನ ಮನೆ ಮುಂದೆ ಬಾವಿಕಟ್ಟೆಯ ಕಂಬಕ್ಕೆ ಮಲ್ಲಿಗೆ ಬಳ್ಳಿ ಹಬ್ಬಿಸಿದ್ದರು. ಸಂಜೆಯಾದರೆ ಸಾಕು ಮಲ್ಲಿಗೆ ಮೊಗ್ಗು ಕಿತ್ತು ಮಾಲೆ ಕಟ್ಟುತ್ತಿದ್ದೆ. ಹೂ ಕಟ್ಟುವುದು ನನಗೆ ತುಂಬ ಇಷ್ಟ. ನಾನು ಅಲ್ಲಿಗೆ ಹೋದ ಕೂಡಲೇ ದೊಡ್ಡಮ್ಮ ಹೂವಿನ ರಾಣಿ ಬಂದ್ಳು ಅಂತ ಬೊಚ್ಚು ಬಾಯಿ ಬಿಡುತ್ತಿದ್ದರು. ಈಗ ಬೆಂಗಳೂರಿನಲ್ಲಿ ಮಾರುಕಟ್ಟೆಯಿಂದ ಹೂ ತರುವ ಮಹಿಳೆಯರು ಪ್ರಯಾಣದುದ್ದಕ್ಕೂ ಹೂಕಟ್ಟುವುದನ್ನು ನೋಡುತ್ತಾ ಆ ದಿನಗಳಿಗೆ ಜಾರುತ್ತೇನೆ. ನಮ್ಮಲ್ಲಿ ಬೆಳೆಯುತ್ತಿದ್ದ ಮಂಗಳೂರು ಮಲ್ಲಿಗೆ ಕಟ್ಟುವುದು ತುಂಬ ನಾಜೂಕಿನ ಕೆಲಸ. ನಾನು ಅದನ್ನು ತುಂಬ ನೀಟಾಗಿಯೇ ಕಟ್ಟುತ್ತಿದ್ದೆ.

ನನ್ನ ಮದುವೆಯ ನಂತರ ನಾವಿದ್ದ ಬಾಡಿಗೆ ಮನೆಯ ಅಂಗಳದಲ್ಲೂ ಮಲ್ಲಿಗೆ ಬೆಳೆಸಿದ್ದೆ. ಹಾದಿ ಹೋಕರೆಲ್ಲ ಅರಳಿನಿಂತ ಮಲ್ಲಿಗೆ ಹೂ ಪರಿಮಳ ಆಘ್ರಾಣಿಸುತ್ತಾ ಸಾಗುತ್ತಿದ್ದರು. ಕೆಲ ಮಹಿಳೆಯರು ಪ್ರತಿವರ್ಷ ಮಲ್ಲಿಗೆ ಬಳ್ಳಿ ನೆಡಲೆಂದು ಕೊಂಡೊಯ್ಯುತ್ತಿದ್ದರು. ಒಂದೂ ಸಸಿ ಬದುಕುಳಿಯದೆ, ಮತ್ತೆ ಮತ್ತೆ ತೆಗೆದುಕೊಂಡು ಹೋಗುತ್ತಿದ್ದರು. ನಾನು ಪ್ರತಿಸಲ ನೆಟ್ಟಾಗಲೂ ಎಲ್ಲವೂ ಬದುಕುಳಿಯುತ್ತಿತ್ತು. ಅದು ಎಲ್ಲರಿಗೂ ಆಶ್ಚರ್ಯ. ನಂತರ ನಿನ್ನ ಕೈಗುಣ ಚೆನ್ನಾಗಿದೆ. ನೀನೇ ನಮ್ಮನೆಗೆ ಬಂದು ಮಲ್ಲಿಗೆ ಗಿಡ ನೆಟ್ಟುಹೋಗು ಎಂಬ ತೀರ್ಮಾನಕ್ಕೆ ಬಂದಿದ್ದರು. ಅಮ್ಮನ ಮನೆಗೆ ಹೋದಾಗಲೂ ನಾನು ಹೂ ಗಿಡಗಳ ಮಧ್ಯೆ ಓಡಾಡುತ್ತಾ, ಕಳೆ ಕೀಳುತ್ತಾ ಇರುತ್ತಿದ್ದೆ.

ನಮ್ಮ ಬಾಲ್ಯದ ದಿನಗಳಲ್ಲಿ ಅಪ್ಪಟ ದೇಸೀ ಹೂಗಳೇ ಇದ್ದವು. ದಾಸವಾಳ, ಗೋರಟೆ, ಸಂಪಿಗೆ, ಅಬ್ಬಲ್ಲಿಗೆ(ಕನಕಾಂಬರ), ಮಲ್ಲಿಗೆ, ನಾಟಿ ಗುಲಾಬಿ, ಶಂಖಪುಷ್ಪ ನಿತ್ಯಮಲ್ಲಿಗೆ, ಮಿಠಾಯಿ ಹೂ, ಬುಗುಡಿ ಹೂ, ಕರವೀರ ಇಂತಹ ಹೆಸರಿನ ಹೂಗಳು ಈಗ ಹುಡುಕಿದರೂ ಸಿಗದು. ಈಗಿನ ಹುಡುಗಿಯರ ಮುಡಿಗೆ ಇವುಗಳಿಗೆ ಪ್ರವೇಶವೇ ಇಲ್ಲ. ಈಗ ವಿದೇಶಿ ತಳಿಗಳ, ಅಲಂಕಾರಿಕ ಹೂಗಳದೇ ಕಾರುಬಾರು.

ನಮಗೆಲ್ಲ ಸಂಜೆ ಹೂ ಮಾಲೆ ಹೆಣೆಯುವ ಹುಚ್ಚು. ನನ್ನ ಸೋದರ ಮಾವ ಒಬ್ಬರು ರಜೆಯಲ್ಲಿ ಬಂದಿದ್ದಾಗ ನನಗೆ ಹೂ ಮಾಲೆ ಕಟ್ಟುವುದನ್ನು ಕಲಿಸಿದ್ದರು. ಅಮ್ಮ ಬಾಳೆ ದಾರವನ್ನು ಕಾಲಿನ ಹೆಬ್ಬೆರಳ ನಡುವೆ ತಂದು ಹೂವನ್ನು ದಾರದ ನಡುವೆ ಇಟ್ಟು ಸುಲಭವಾಗಿ ಹೆಣೆಯುವುದನ್ನು ಕಲಿಸಿದ್ದರು. ಗೋರಟೆ ಹೂಗಳಂತೂ ಅನೇಕ ಬಣ್ಣಗಳಲ್ಲಿ ಸಿಗುತ್ತಿತ್ತು, ಅವುಗಳನ್ನೆಲ್ಲ ಸೇರಿಸಿ ಮಲ್ಟಿಕಲರ್ ಮಾಲೆ ಕಟ್ಟುತ್ತಿದ್ದೆವು. ಗೋರಟೆ ಹೂ ಅರಳುವ ಮುಂಚೆಯೇ ಕಟ್ಟಬೇಕು. ಮೊಗ್ಗು ಮಾಲೆ ರಾತ್ರಿಯಾಗುತ್ತಿದ್ದಂತೆ ಅರಳಿಬಿಡುತ್ತದೆ. ಒಂದೇ ದಿನದಲ್ಲಿ ಬಾಡಿಹೋಗುವ ಈ ಹೂವನ್ನು ಮಾರುತ್ತಿರಲಿಲ್ಲ. ಈಗಿನಂತೆ ಮನರಂಜನೆಗೆ ಬೇರೆ ಮಾಧ್ಯಮಗಳಿರಲಿಲ್ಲ. ನಮ್ಮ ಚಟುವಟಿಕೆಗಳೇ ಮನರಂಜನೆ ನೀಡುತ್ತಿತ್ತು. ಅದಕ್ಕಿಂತಲೂ ಮಿಗಿಲಾಗಿ ಕೃತಕತೆಯಿಲ್ಲದ ಸಹಜ ಸುಂದರ ಬದುಕು.

ಕನಕಾಂಬರ ಗಿಡದಲ್ಲಿಯೇ ಒಂದು ವಾರವಿರುವ ಹೂ ನಂತರ ಉದುರುತ್ತದೆ. ಹೂ ಮಾಲೆಯನ್ನು ಮೂರ‍್ನಾಲ್ಕು ದಿನ ಬಳಸಬಹುದು. ಈಗಲೂ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿರುವ ಹೂಗಳ ಪೈಕಿ ಕನಕಾಂಬರವೂ ಒಂದು. ಮೊನ್ನೆ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ಕನಕಾಂಬರ ಹೂ ಕೇಜಿಗೆ ೨,೫೦೦ ರೂ. ದಾಖಲೆಯ ಬೆಲೆ ಹೊಂದಿತ್ತು. ನಾವು ಚಿಕ್ಕವರಿರುವಾಗ ಹೀಗೆ ಹೂಗಳ ಮಾರಾಟದ ಕಲ್ಪನೆಯೇ ಇರಲಿಲ್ಲ. ಎಲ್ಲರ ಮನೆಯಲ್ಲೂ ಹೂ ಬೆಳೆಸುತ್ತಿದ್ದರು. ಹೆಣ್ಣು ಮಕ್ಕಳಿದ್ದ ಮನೆಯಲ್ಲಿ ಹೂಗಳು ನಳನಳಿಸುತ್ತಿದ್ದವು. ಆದರೆ ಹೂಗಳನ್ನು ಕಿತ್ತು ಖಾಲಿ ಮಾಡುತ್ತಿದ್ದರು. ಈಗ ಹೆಣ್ಣುಮಕ್ಕಳು ಮಣ್ಣನ್ನೇ ತುಳಿಯದಷ್ಟು ದೂರ ಸಾಗಿದ್ದಾರೆ. ನಗರದ ಜನಕ್ಕಂತೂ ಕೊಂಡು ತರುವುದರಲ್ಲಿ ಏನೋ ಖುಷಿ.

ಮನೆ ಹಿತ್ತಲ ಹೂಗಳಲ್ಲದೆ ಮರಗಳಲ್ಲಿ ಬಿಡುವ ರೆಂಜೆ ಮತ್ತು ಸುರಗಿ ಹೂಗಳ ಪರಿಮಳ ಜಗತ್ತಿನ ಬೇರಾವ ಹೂವಿಗೂ ಇರಲಾರದು ಎಂಬುದು ನನ್ನ ಬಲವಾದ ನಂಬಿಕೆ. ರೆಂಜೆ ಹೂಗಳ ಮಧ್ಯೆ ರಂಧ್ರವಿರುತ್ತದೆ. ಚಿನ್ನದ ಬಣ್ಣದ ಈ ಹೂ ದಾರದಲ್ಲಿ ಪೋಣಿಸಿದರೆ ಚಿನ್ನದ ಸರದಂತೆ ಕಾಣುತ್ತದೆ. ಮಲೆನಾಡು ಕರಾವಳಿಯಲ್ಲಿ ದೇವರಿಗೆ ಈ ಹೂವಿನ ಮಾಲೆ ಮಾಡಿ ಹಾಕುತ್ತಾರೆ. ಒಂದೇ ಗಾತ್ರದ ಈ ಹೂವಿನ ವಿನ್ಯಾಸವೇ ಬೇರೆ.

ಇನ್ನೊಂದು ವಿಶೇಷವಾದ ಹೂ ಕೇದಗೆ. ಕೇದಗೆ ಕೂಡಾ ಕಾಡು ಹೂ. ಹೊಳೆ ಬದಿ ಜೊಂಡು ತುಂಬಿದ ಜಾಗದಲ್ಲಿ ಕಳ್ಳಿ ಗಿಡದಂತೆ ಬೆಳೆಯುವ ಕೇದಗೆ ಬನದಲ್ಲಿ ಹಾವುಗಳೂ ವಾಸ ಮಾಡುತ್ತವೆ ಎಂಬ ಹೇಳಿಕೆ ಇದೆ. ಎಲೆಯಂತ ಆಕಾರದ ಕೇದಗೆಯ ಅಂಚಿನಲ್ಲಿ ಮುಳ್ಳುಗಳಿರುತ್ತವೆ. ಕೆನೆಹಳದಿ ಬಣ್ಣದ ಈ ಹೂ ಪರಿಮಳವೋ ಪರಿಮಳ. ಇದನ್ನೂ ಅಧಕ್ಕೆ ಮಡಚಿ ಮುಡಿಯುತ್ತಿದ್ದರು.

ಇನ್ನೊಂದು ವಿಶೇಷವಾದ ಹೂ ಸುರಗಿ ಹೂವಿನ ಬಗ್ಗೆ ಮಲೆನಾಡು, ಪಶ್ಚಿಮಘಟ್ಟದ ಜನರಿಗೆ ಮಾತ್ರ ಪರಿಚಯವಿರುತ್ತದೆ. ಅದರಲ್ಲೂ ಹೊಸ ಹುಡುಗರಿಗೆ ಗೊತ್ತಿರಲಾರದು. ಸುರಗಿ ಹೂ ಪುಟ್ಟ ಹೂವಾದರೂ ಅದರೊಳಗೆ ಕುಸುಮ ತುಂಬಿರುತ್ತದೆ. ಸೂರ್ಯೋದಯಕ್ಕೆ ಮುನ್ನವೇ ಅವುಗಳನ್ನು ಕೊಯ್ದು ದಾರಕ್ಕೆ ಪೋಣಿಸಬೇಕು. ಅರಳಿದ ನಂತರ ಪೋಣಿಸುವುದು ಕಷ್ಟ. ಸುರಗಿ ಮರದ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.ಈ ಹೂವಿನ ವಿಶೇಷತೆಯೆಂದರೆ ಮರದ ಕಂಡದ ಮೇಲೆಲ್ಲ ಹೂ ಬಿಡುತ್ತದೆ. ನೆಲವನ್ನು ಸೀಳಿ ಅಣಬೆಗಳು ಅರಳುವಂತೆ ಮರದ ತೊಗಟೆಯನ್ನು ಸೀಳಿಕೊಂಡು ಸುರಗಿ ಹೂ ಅರಳುತ್ತದೆ. ಈ ಹೂ ಸುಳ್ಯದ ಕಂದ್ರಪ್ಪಾಡಿಯ ಆರಾಧ್ಯ ದೈವಗಳಲ್ಲಿ ಒಂದಾದ ಪುರುಷಭೂತಕ್ಕೆ ಇಷ್ಟದ ಹೂ. ಪುರುಷ ಭೂತದ ಕಥೆಯಲ್ಲಿ ಪುರುಷ ಸದಾ ತನ್ನ ಮೈಮೇಲೆ ಸುರಗಿ ಹಾರವನ್ನು ಧರಿಸಿರುತ್ತಿದ್ದ. ಹೀಗೆ ಮಾಡುವುದರ ಮೂಲಕ ಆತ ಹೆಣ್ಣುಗಳನ್ನು ಆಕರ್ಷಿಸುತ್ತಿದ್ದ ಎಂಬ ಉಲ್ಲೇಖವಿದೆ. ಹಾಗಾಗಿ ಕಂದ್ರಪ್ಪಾಡಿ ಜಾತ್ರೆಯ ಸಂತೆಯಲ್ಲಿ ಸುರಗಿ ಹೂ ಮಾರುತ್ತಾರೆ. ಸುರಗಿಪ್ರಿಯ ಪುರುಷಭೂತಕ್ಕೆ ಸುರಗಿ ಹೂವಿನ ಹರಕೆ ಒಪ್ಪಿಸುವ ಸಂಪ್ರದಾಯವೂ ಇದೆ. ಈ ಹೂವಿನ ಇನ್ನೊಂದು ವಿಶೇಷವೆಂದರೆ ಈ ಹೂವನ್ನು ಹಸಿಯಾಗಿ ಬಳಸುವುದಕ್ಕಿಂತ ಒಣಗಿಸಿ ಬಳಸುವುದೇ ಹೆಚ್ಚು. ಭೂತಕ್ಕೆ ಹರಕೆ ಒಪ್ಪಿಸುವ ಕಾರಣಕ್ಕೆ ಒಣಗಿಸಿಡುವ ವಾಡಿಕೆ ಬಂದಿರಬಹುದು. ಒಣಗಿದರೂ ಇದರ ಪರಿಮಳ ಇನ್ನೂ ಹೆಚ್ಚಾಗಿರುತ್ತದೆ. ವರ್ಷಗಟ್ಟಲೆ ಕಾಲ ಸಂಗ್ರಹಿಸಿಟ್ಟು ಬಳಸುವ ಹೂ ಬೇರೆ ಯಾವುದೂ ಇಲ್ಲ. ಕೊಡಗಿನ ಕಾಡುಗಳಲ್ಲಿ ನಾಗರಹೊಳೆಯ ಅರಣ್ಯದ ಮಧ್ಯೆ ಹಾದು ಹೋಗುವ ರಸ್ತೆ ಬದಿಯಲ್ಲಿ ಈ ಹೂ ಹೇರಳವಾಗಿ ಅರಳಿರುತ್ತವೆ ಎಂದು ಇತ್ತೀಚೆಗೆ ನನ್ನ ಕೊಡಗಿನ ಸ್ನೇಹಿತರೊಬ್ಬರು ಹೇಳಿದ ಮೇಲೆ ಸುರಗಿ ಸಸಿಯೊಂದನ್ನು ತಂದು ನೆಡಬೇಕೆಂಬ ಆಸೆ ಚಿಗುರಿದೆ.

ಹೇಮಾ ನೆನಪುಗಳು : ಧೋ ಎಂದು ಸುರಿಯುತ್ತಿದ್ದ ಮಳೆ

ಗುಡ್ಡ, ಹಾಡಿಗಳನ್ನು ಬಿಟ್ಟರೆ ಆಗ ನಮಗಿದ್ದ ಒಂದೇ ಒಂದು ಇಷ್ಟದ ಜಾಗ ಮನೆಯ ಅಟ್ಟ. ಅಟ್ಟದ ಬಗ್ಗೆ ಈಗಿನ ಮಕ್ಕಳಿಗೆ ಹೇಳಿ ತಿಳಿಸುವುದು ಕಷ್ಟ. ಅಟ್ಟವೆಂದರೆ ಅದೊಂದು ಸಂಪತ್ತಿನ ಸಾಮ್ರಾಜ್ಯ. ಮಹಾಮಳಿಗೆ ಇದ್ದಂತೆ. ಕರಾವಳಿ, ಮಲೆನಾಡಿನಂತಹ ಮಳೆನಾಡುಗಳಲ್ಲಿ, ರೈತರ ಮನೆಗಳಲ್ಲಿ ಅಟ್ಟದಲ್ಲಿ ಸಂಗ್ರಹಿಸಿಡದ ವಸ್ತುಗಳೇ ಇಲ್ಲ. ಕೆಲವರು ನಗ ನಾಣ್ಯಗಳನ್ನೂ ಅಟ್ಟದಲ್ಲಿ ಅಡಗಿಸಿಡುತ್ತಿದ್ದರು. ಕೃಷಿಕರ ಮನೆ ಅಟ್ಟದಲ್ಲಿ ತೆಂಗು, ಅಡಿಕೆ, ಬತ್ತ, ತರಕಾರಿಗಳನ್ನು ಕೆಡದಂತೆ ಇಡುತ್ತಿದ್ದರು. ಉರುವಲು ಒಲೆಗಳು ಇಡೀ ದಿನ ಉರಿಯುತ್ತಿದ್ದು ಅದರ ಹೊಗೆ ಇಡೀ ಮನೆಯ ಅಟ್ಟದಲ್ಲಿ ಆವರಿಸುವುದರಿಂದ ಮನೆಯೂ ಬೆಚ್ಚಗಿದ್ದು ಅಟ್ಟದಲ್ಲಿದ್ದ ವಸ್ತುಗಳು ಸುರಕ್ಷಿತವಾಗಿ ಕೆಡದೇ ಉಳಿಯುತ್ತಿದ್ದವು.

ನಮ್ಮನೆ ಅಟ್ಟ ಸ್ವಲ್ಪ ವಿಶೇಷವಾಗಿತ್ತು. ಜೋರು ಮಳೆ ಶುರುವಾದರೆ ಹೊರಗೆಲ್ಲೂ ಹೋಗಲೂ ಆಗದೆ ಜಡ್ಡುಗಟ್ಟಿದ ಮನಸ್ಥಿತಿಯಿಂದ ಹೊರಬರಬೇಕಾದರೆ ನಾವು ಮಾಡುತ್ತಿದ್ದ ಸರ್ಕಸ್ ಅಷ್ಟಿಷ್ಟಲ್ಲ. ಇರುವ ಪುಸ್ತಕಗಳನ್ನು ತಿರುವಿ ತಿರುವಿ ಮತ್ತೆ ಅಟ್ಟ ಹತ್ತಿ ಕೂರುತ್ತಿದ್ದೆವು. ಅಲ್ಲಿ ಸ್ವಾತಂತ್ರ್ಯಪೂರ್ವದ ಪತ್ರಿಕೆಗಳು, ಮ್ಯಾಗಝೀನ್, ಅಣ್ಣಂದಿರ ಹಳೆ ಡೈರಿ, ನೋಟು ಪುಸ್ತಕಗಳನ್ನು ಓದುವುದು ತುಂಬ ಮಜಾ ಕೊಡುತ್ತಿತ್ತು. ಈ ಭಂಡಾರದಲ್ಲಿ ಕೆಲವು ಪೋಲಿ ಪುಸ್ತಕಗಳೂ ಇದ್ದವು. ಅದರ ವಾರೀಸುದಾರರು ಯಾರೆಂದು ನನಗೆ ಇಂದಿಗೂ ಗೊತ್ತಿಲ್ಲ. ಅಲ್ಲಿದ್ದ ಕೆಲವು ಚಿತ್ರಗಳನ್ನು ನೋಡಿದ ನಾನು ಬೆವೆತು ಹೋಗಿದ್ದೆ. ಮತ್ತೆ ಸಾವರಿಸಿಕೊಳ್ಳಲು ಕೆಲವು ದಿನಗಳೇ ಬೇಕಾಯಿತು. ಅಣ್ಣಂದಿರ ಡೈರಿಗಳು ಮಾತ್ರ ನಾನು ಹುಟ್ಟುವ ಮೊದಲಿನ ಅವರ ಸಾಹಸಗಳನ್ನು ತಿಳಿಸುತ್ತಿದ್ದವು.

ಮಳೆ ಧೋ ಎಂದು ಎಡೆಬಿಡದೆ ಸುರಿಯುತ್ತಿದ್ದರೆ ಗಂಡಸರು ಬೆಳಕು ಹರಿದ ತಕ್ಷಣ ಎತ್ತುಗಳನ್ನು ಹೊಡೆದುಕೊಂಡು, ನೇಗಿಲು ಹೊತ್ತು ಗದ್ದೆ ಕಡೆ ಹೋಗಿ ಉಳುತ್ತಿದ್ದರೆ, ಹೆಂಗಸರೆಲ್ಲರೂ ನಾಟಿ ಗದ್ದೆಗಳಲ್ಲಿ ಚಳಿ ಮಳೆ ಲೆಕ್ಕಿಸದೆ ನೇಜಿ ನೆಡುತ್ತಿದ್ದರು. ಅಲ್ಲಿ ತೆರೆದುಕೊಳ್ಳುತ್ತಿದ್ದದ್ದು ಅವರದೇ ಲೋಕ. ತಮ್ಮ ನೋವು, ಸಂಕಟಗಳನ್ನು ನೇಜಿ ನೆಡುತ್ತ ಸ್ನೇಹಿತೆಯರೊಂದಿಗೆ ಹಂಚಿಕೊಳ್ಳುವುದಕ್ಕೆ ಇದಕ್ಕಿಂತ ಬೇರೆ ಪ್ರಸಕ್ತ ಸ್ಥಳ ಇರಲಿಲ್ಲ. ಅಲ್ಲಿ ಉಕ್ಕಿ ಹರಿಯುತ್ತಿದ್ದ ಹಾಸ್ಯ, ನಗೆ ಬೇರೆಲ್ಲೂ ಕಾಣದು. ಅಲ್ಲಿ ಕೇಳುತ್ತಿದ್ದ ನೇಜಿ ಪದಗಳಿಗಿಂತ ಬೇರೆ ಸಂಗೀತ ಬೇಕಿಲ್ಲ. ಜಗಳ ಕೂಡಾ. ಈಗಿನ ಗಾಳಿಸುದ್ದಿಗಿಂತ ಆಗಿನ ನೇಜಿಸುದ್ದಿ ರೋಚಕವಾಗಿರುತ್ತಿತ್ತು. ಪೂರ್ಣಚಂದ್ರ ತೇಜಸ್ವಿಯವರ ಕತೆಯೊಂದರಲ್ಲಿ ಈ ಕುರಿತ ಸ್ವಾರಸ್ಯಕರ ವಿವರಣೆಗಳು ಸಿಗುತ್ತವೆ. ಅದೆಲ್ಲ ನೈಜ ಘಟನೆಗಳೇ ಆಗಿದ್ದವು.

ಈಗ ನಮ್ಮೂರಲ್ಲಿ ಗದ್ದೆಗಳೆಲ್ಲ ಅಡಿಕೆ ತೋಟಗಳಾಗಿ ರೂಪಾಂತರಗೊಂಡಿವೆ. ಗುಡ್ಡಗಳೆಲ್ಲ ರಬ್ಬರ್ ಕಾಡುಗಳಾಗಿ ಹೊಸ ರೂಪದಲ್ಲಿ ಅವತರಿಸಿವೆ. ಈಗ ಆ ಹೆಂಗಳೆಯರಿಗೆಲ್ಲ ಅವರ ವ್ಯಥೆಯ ಕಥೆ ಹೇಳಿಕೊಳ್ಳಲು ಜಾಗವೇ ಇಲ್ಲದಂತಾಗಿದೆ. ಇದೂ ಜಾಗತೀಕರಣದ ಪ್ರಭಾವವೇ ಅಂದರೆ ದಡ್ಡತನ ಅನ್ನಿಸಬಹುದು. ಆದರೆ ಇದು ವಾಸ್ತವ. ಜಾಗತೀಕರಣ ಎಂದು ದೊಡ್ಡ ದೊಡ್ಡ ವಿಚಾರಗಳನ್ನು ಮಾತ್ರ ಪಟ್ಟಿ ಮಾಡಿಕೊಂಡು ವೇದಿಕೆಗಳನ್ನು ಅಲಂಕರಿಸುವ ಬುದ್ಧಿವಂತ ವರ್ಗಕ್ಕೆ ಇದೆಲ್ಲ ಕ್ಷುಲ್ಲಕ ವಿಚಾರವೇ ಬಿಡಿ.

ನಮ್ಮನೆಯ ಗದ್ದೆಯಲ್ಲಿ ಊರಿನೆಲ್ಲ ಹೆಣ್ಣುಮಕ್ಕಳು ನೇಜಿ ನೆಡುತ್ತಿದ್ದರೆ ನಾನೂ ಶಾಲೆಯಿಂದ ಬೇಗನೇ ಬಂದು ಗದ್ದೆಗಿಳಿಯುತ್ತಿದ್ದೆ. ನೇಜಿ ನೆಡುವುದು ಅಂತಹ ಕಷ್ಟದ ಕೆಲಸವೇ ಅಲ್ಲ. ಆದರೆ ಅಲ್ಲಿ ಕಾಣುತ್ತಿದ್ದ ಶಿಸ್ತು ಮಾತ್ರ ಕಲಾವಿದನ ಕಲೆಗಿಂತ ಮೀರಿದ್ದು. ಸರಿಯಾಗಿ ಒಂದು ಫೀಟು ಅಂತರದಲ್ಲಿ ನಾಲ್ಕೈದು ಪೈರಿನ ಹಿಡಿಯನ್ನು ಅಷ್ಟೇ ವೇಗವಾಗಿ ನೆಡುತ್ತಾ ಹಿಂದೆ ಹಿಂದೆ ಸಾಗುತ್ತಿದ್ದರೆ ಎಲ್ಲೂ ಅಳತೆ ಮೀರದು. ಹತ್ತಾರು ಜನ ನೇಜಿ ನೆಟ್ಟರೂ ಒಬ್ಬರೇ ನೆಟ್ಟಂತೆ ಕಾಣುತ್ತಿತ್ತು. ಈ ಕುತೂಹಲವೇ ನಮ್ಮನ್ನು ಆಕರ್ಷಿಸಿತ್ತು. ನೇಜಿ ನೆಡುವ ಹೆಂಗಸರು ನೇಜಿ ಪದ ಶುರು ಮಾಡಿದರೆಂದರೆ ಎಷ್ಟು ಲಯಬದ್ಧವಾಗಿರುತ್ತಿತ್ತೆಂದರೆ ಒಬ್ಬರು ಹಾಡು ನಿಲ್ಲಿಸಿ ಮತ್ತೊಬ್ಬರು ಶುರು ಮಾಡಿದರೆ ಗೊತ್ತೇ ಆಗುತ್ತಿರಲಿಲ್ಲ. ಅಷ್ಟು ಸಾಮ್ಯತೆ ಹೊಂದಾಣಿಕೆ ಅವರಲ್ಲಿ.

ಹೈಸ್ಕೂಲಿನಲ್ಲಿರುವಾಗ ಪರೀಕ್ಷೆಗೆ ಓದಲೆಂದು ಗೇರು ಮರಹತ್ತಿ ಕೊಂಬೆಗಳ ಮಧ್ಯೆ ಕುಳಿತಿರುತ್ತಿದ್ದೆವು. ಅಲ್ಲಿ ಓದಿದ್ದು ಅಷ್ಟೆ. ಆದರೆ ನಮ್ಮ ಲೋಕದಲ್ಲಿ ನಾವು ಮಜವಾಗಿದ್ದೆವು. ಮನೆಯಿಂದ ಶಾಲೆಗೆ ಮೂರು ಕಿಲೋಮೀಟರ್ ದೂರ ನಡೆದೇ ಹೋಗುತ್ತಿದ್ದೆವು. ಹಾಗೆ ಹೋಗುವಾಗ ಮಾವಿನ ಕಾಲದಲ್ಲಿ ಮಿಡಿ ಕಾಯಿಗೆ ಕಲ್ಲು ಹೊಡೆದು ಬೀಳಿಸಿ ತಿನ್ನುತ್ತಾ ಮನೆಗೆ ಬರುತ್ತಿದ್ದೆವು. ಹುಣಸೇ, ಅಮಟೇ ಕಾಯಿ ಇವೆಲ್ಲ ನಮಗೆ ಹುಳಿ ಅನ್ನಿಸುತ್ತಲೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಮಗೆ ಬೇರೆ ತಿನಿಸು ಸಿಗುತ್ತಿರಲಿಲ್ಲ. ಕಾಡು ಹಣ್ಣುಗಳನ್ನು ಹುಡುಕುತ್ತಾ ಕಲ್ಲುಮುಳ್ಳು ಲೆಕ್ಕಿಸದೆ ಸುತ್ತಾಡುತ್ತಿದ್ದೆವು. ಆಶ್ಚರ‍್ಯವೆಂದರೆ ಏನೇ ತಿಂದರೂ ನಮಗೆ ಅಸೌಖ್ಯವಾಗುತ್ತಿರಲಿಲ್ಲ. ಈಗ ಇಷ್ಟೆಲ್ಲ ಕಷ್ಟ, ನೋವುಗಳನ್ನು ಸಹಿಸುವ, ಜಯಿಸುವ ಶಕ್ತಿ ಬಂದದ್ದು ಇದೇ ಕಾರಣಕ್ಕಿರಬಹುದು ಎಂದು ಅನ್ನಿಸುತ್ತದೆ. ಇಲ್ಲದಿದ್ದರೆ ಹದಿನೈದು ವರ್ಷ ಮನೆಯಲ್ಲಿಯೇ ಕಳೆದ ನಾನು ನೇರವಾಗಿ ಈ ಮಹಾನಗರದಲ್ಲಿ ಬದುಕು ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ನಾನು ಓದಿದ ಗುತ್ತಿಗಾರು ಹೈಸ್ಕೂಲಿನ ಮೈದಾನದಲ್ಲಿ ತಿಂಗಳಿಗೆ ಮೂರ‍್ನಾಲ್ಕು ಯಕ್ಷಗಾನವಾದರೂ ಪ್ರದರ್ಶನವಾಗುತ್ತಿತ್ತು. ಪಿ.ಟಿ. ಪಿರಿಯಡ್‌ನಲ್ಲಿ ಮೈದಾನಕ್ಕೆ ಹೋದಾಗ ಯಕ್ಷಗಾನದ ವೇದಿಕೆ ತಯಾರಿ, ಟೆಂಟು ಹಾಕುವುದು, ಟಿಕೇಟ್ ಕೌಂಟರ್, ಈಸೀ ಚೇರನ್ನು ಬಿಡಿಸಿ ಒಂದೊಂದಾಗಿ ಜೋಡಿಸಿಡುತ್ತಿದ್ದುದನ್ನು ನೋಡುತ್ತಾ ಆಗಲೇ ಯಕ್ಷರಾತ್ರಿಗೆ ಜಾರುತ್ತಿದ್ದೆವು. ಮನೆಗೆ ಬಂದು ಅಮ್ಮನಲ್ಲಿ ಕಾಡಿ ಬೇಡಿ ಪರ್ಮಿಷನ್ ಪಡೆದು ವರ್ಷಕ್ಕೆ ಒಂದೋ ಎರಡೋ ಯಕ್ಷಗಾನಕ್ಕೆ ಹೋಗುತ್ತಿದ್ದೆವು. ಕೆಲವೊಮ್ಮೆ ಅಕ್ಕಪಕ್ಕದ ಮನೆಯವರೊಂದಿಗೆ ಹೋಗುತ್ತಿದ್ದೆವು. ಬೆಳಿಗ್ಗೆ ಮನೆಗೆ ಬಂದು ಮಲಗಿದರೆ ಮಧ್ಯಾಹ್ನ ಏಳುತ್ತಿದ್ದೆವು. ಒಂದು ರಾತ್ರಿ ನಿದ್ದೆಗೆಟ್ಟರೆ ಎರಡು ದಿನ ಯಾವುದೇ ಕೆಲಸಕ್ಕೆ ಮೂಡ್ ಇರದು. ರಾತ್ರಿ ೯ಕ್ಕೆ ಯಕ್ಷಗಾನ ಶುರುವಾದರೆ ಮುಗಿಯುವಾಗ ಬೆಳಿಗ್ಗೆ ಆರುಗಂಟೆ. ಮೂರು ಕಿಲೋ ಮೀಟರ್ ದೂರ ನಿದ್ದೆಗೆಟ್ಟ ಕಣ್ಣಿನಲ್ಲಿ ನಡೆದೇ ಮನೆ ಸೇರುತ್ತಿದ್ದೆವು. ರಾತ್ರಿಯೂ ನಡೆದೇ ಹೋಗುತ್ತಿದ್ದೆವು. ಆದರೆ ಹೋಗುವಾಗ ಯಕ್ಷಗಾನ ನೋಡುವ ಹುಮ್ಮಸ್ಸಿನಿಂದ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆವು. ಬರೇ ಚಿಮಿಣಿ ದೀಪದ ಬೆಳಕು ಕಾಣುತ್ತಿದ್ದ ನಮಗೆ ಜಗಮಗಿಸುವ ಬೆಳಕನ್ನು ನೋಡುವ ಕಾತರವೂ ಇತ್ತು. ಹೆಣ್ಣು ಮಕ್ಕಳು, ಹೆಂಗಸರು ಮದುವೆಗೆ ಸಿಂಗರಿಸಿಕೊಂಡಂತೆ ಯಕ್ಷಗಾನ ನೋಡಲು ತಯಾರಾಗುತ್ತಿದ್ದರು. ತಲೆತುಂಬ ಕನಕಾಂಬರ, ಮಲ್ಲಿಗೆ ಮುಡಿದು ಸಿದ್ಧರಾಗುತ್ತಿದ್ದ ಅವರ ಸಂಭ್ರಮದ ಮುಂದೆ ಬೇರೆ ಸುಖ ಬೇಕಿರಲಿಲ್ಲ. ಚಿಕ್ಕ ಮಕ್ಕಳೆಲ್ಲ ಖುಷಿಯಿಂದ ಹೊರಟವರು ಯಕ್ಷಗಾನ ಶುರುವಾಗುವ ಮುಂಚೆ ನಿದ್ರೆಗೆ ಜಾರುತ್ತಿದ್ದರು. ನೆಲದಲ್ಲಿ ಕುಳಿತು ಯಕ್ಷಗಾನ ನೋಡುವ ಬಡವರು ಚಾಪೆ ಸಮೇತ ಬರುತ್ತಿದ್ದರು. ಮಕ್ಕಳನ್ನು ಮಲಗಿಸಿ ದೊಡ್ಡವರು ಕುಳಿತಿರುತ್ತಿದ್ದರು. ದೊಡ್ಡ ವೇಷಗಳೆಲ್ಲ ರಂಗಪ್ರವೇಶ ಮಾಡುವಾಗ ಭಾಗವತಿಕೆ, ಮದ್ದಳೆ, ಚಂಡೆಯ ಅಬ್ಬರಕ್ಕೆ ಮಲಗಿದ ಮಕ್ಕಳು ಬೆಚ್ಚಿ ಎದ್ದು ಕುಳಿತಿರುತ್ತಿದ್ದರು.

ಇಂತಹ ಸಮೃದ್ಧ ಬಾಲ್ಯ ಅನುಭವಿಸಿದ್ದ ನಮ್ಮ ಕಣ್ಣ ಮುಂದೆಯೇ ಏನೆಲ್ಲ ನಡೆದುಹೋಯಿತು! ಕೆಲವೇ ಕೆಲವು ವರ್ಷದಲ್ಲಿ, ಶತಮಾನದಿಂದ ನಮ್ಮ ಹಿರೀಕರು ಕಟ್ಟಿದ ಕೃಷಿ ಸಂಸ್ಕೃತಿಯ ಮಹಾಮನೆಯನ್ನೇ ಕೆಡವಿದ್ದೇವೆ. ಮತ್ತಿಲ್ಲಿ ಅಟ್ಟ, ಕೊಟ್ಟಿಗೆ, ಹಟ್ಟಿ ಎಂದೆಲ್ಲ ಕನವರಿಸುವುದರಲ್ಲಿ ಅರ್ಥವೇ ಇಲ್ಲವೇನೋ.

ಹೇಮಾ ನೆನಪುಗಳು: ಹರಿವ ತೋಡಿನಲ್ಲಿ ಮರಿ ಮೀನು ಬೇಟೆ

ಮನೆ ಮುಂದೆ ಹರಿವ ತೋಡಿನಲ್ಲಿ ಮಳೆಗಾಲದಲ್ಲಿ ಮರಿ ಮೀನು ಹಿಡಿಯುವುದು ನನಗೆ ತುಂಬ ಖುಷಿ. ತೆಳ್ಳಗಿನ ಬಟ್ಟೆಯನ್ನು ತೋಡಿನ ಬದಿಗಳಲ್ಲಿ ಮರಿಮೀನುಗಳು ಹಿಂಡುಹಿಂಡಾಗಿರುವ ಜಾಗದಲ್ಲಿ ಬಲೆಯಂತೆ ಹಾಕಿ ಹಿಡಿಯುತ್ತಿದ್ದೆ. ಈ ಮೀನುಗಳನ್ನು ದೊಡ್ಡ ಬಾಟಲಿಯ ನೀರಿನಲ್ಲಿ ಹಾಕಿ ಅಕ್ವೇರಿಯಂ ತರ ಇಟ್ಟುಕೊಳ್ಳುತ್ತಿದ್ದೆವು. ಬಾಟಲಿಯ ಹೊರಗಿಂದ ಮೀನುಗಳ ಚಲನೆಯನ್ನು ತದೇಕಚಿತ್ತರಾಗಿ ನೋಡುತ್ತಿದ್ದೆವು. ಮೀನಿನ ನಿಜ ಬಣ್ಣ, ವಿನ್ಯಾಸ, ಕಣ್ಣಿನ ಹೊಳಪು, ಬಾಯಿ, ಕಿವಿರು, ಎಲ್ಲವನ್ನೂ ಸ್ಪಷ್ಟವಾಗಿ ನೋಡುವ ಮಜಾವೇ ಬೇರೆ. ಹತ್ತಾರು ಮೀನುಗಳಲ್ಲೂ ಹತ್ತಾರು ಬಣ್ಣ, ವಿನ್ಯಾಸಗಳ ವೈವಿಧ್ಯತೆ ಗಮನಿಸುತ್ತಿದ್ದೆವು. ಆದರೆ ಕೆಲವೇ ಗಂಟೆಗಳಲ್ಲಿ ಈ ಮೀನುಗಳು ಸಾಯುತ್ತಿದ್ದವು. ಇದೇ ಮೀನಿನ ತಳಿಗಳನ್ನು ಈಗ ಅಕ್ವೇರಿಯಂ ಮೀನುಗಳೆಂದು ದುಬಾರಿ ಬೆಲೆಗೆ ಮಾರುವುದನ್ನು ನೋಡಿದ್ದೇನೆ.

ಬೇಸಿಗೆ ರಜದಲ್ಲಿ ಸುಳ್ಯದ ಪಯಸ್ವಿನಿ ಹೊಳೆಗೆ ಮಗನಿಗೆ ಈಜು ಕಲಿಸಲೆಂದು ಹೋಗಿದ್ದಾಗ ಕೆಲ ಯುವಕರು ಸಂಜೆ ಹೊತ್ತು ಮುಳುಗುತ್ತಿದ್ದಂತೆ ಬಲೆ ಎಳೆದು ಎರಡು ಮೂರು ಇಂಚು ಗಾತ್ರದ ಸಾವಿರಾರು ಮೀನುಗಳನ್ನು ದೊಡ್ಡ ಪ್ಲಾಸ್ಟಿಕ್ ಕವರುಗಳಲ್ಲಿ ನೀರಿನ ಸಮೇತ ತುಂಬಿ ರಿಕ್ಷಾದಲ್ಲಿ ಹೋಗುತ್ತಿದ್ದರು. ನಾನು ಅವರನ್ನು ಇಷ್ಟು ಚಿಕ್ಕ ಮೀನುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಹೇಳಿದಾಗ, ಕಾಸರಗೋಡಿಗೆ ಕೊಂಡು ಹೋಗುತ್ತೇವೆ. ಅಲ್ಲಿ ಅಕ್ವೇರಿಯಂಗಳಿಗೆ ಈ ಮೀನು ಮಾರಾಟ ಮಾಡುತ್ತೇವೆ. ಒಂದೊಂದು ಮೀನಿಗೆ ಮುವ್ವತ್ತು ನಲವತ್ತು ರೂಪಾಯಿ ಸಿಗುತ್ತದೆ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಇದೂ ಕಳ್ಳ ಸಾಗಾಣಿಕೆ ಅಲ್ಲವೇ! ಪಕ್ಕದ ರಾಜ್ಯದ ಕಾಸರಗೋಡಿನ ಮಂದಿಗೆ ಇಪ್ಪತ್ತು ಮುವ್ವತ್ತು ಕಿಲೋಮೀಟರ್ ದೂರದ ಪಯಸ್ವಿನಿ ನದಿಯ ಮೀನು ಜೀವನೋಪಾಯದ ಮೂಲವಾಗಿದೆ. ಅದೇ ನದಿಯ ದಡದಲ್ಲಿ ವಾಸ ಮಾಡುವ ಯುವಕರು ಎಲ್ಲೋ ಕೂಲಿ ಮಾಡಿ ಸಂಜೆ ಬಂದು ಇದೇ ನದಿಯಲ್ಲಿ ಮೈತೊಳೆದು, ಈಜಾಡಿ ಮನೆ ಸೇರುತ್ತಾರೆ. ಅವರಿಗೆ ಈ ನದಿ ಹರಿವ ಜೀವನದಿಯಾಗಿ ಮಾತ್ರ ಕಾಣಿಸುತ್ತಿದೆ. ನದಿ ತಟದ ತೋಟದ ಮಾಲಿಕರು ಪಂಪುಗಳನ್ನಿಟ್ಟು ಅಡಿಕೆ ತೋಟಕ್ಕೆ ನೀರುಣಿಸುತ್ತಾರೆ. ನದಿಯಲ್ಲಿ ಮೈದಾನ ಮಾಡುತ್ತಾರೆ ಅಷ್ಟೇ. ಮೀನು ಹಿಡಿಯುವ ಜನಾಂಗವೊಂದು ಪ್ರತಿ ವರ್ಷ ಬೇಸಿಗೆಯಲ್ಲಿ ಇಲ್ಲಿ ಮೀನುಗಾರಿಕೆ ನಡೆಸುತ್ತದೆ. ನಗರಾಡಳಿತ ಇವರಿಗೆ ಪರವಾನಿಗೆ ನೀಡಿರುತ್ತದೆ. ಇದೇ ಮೀನನ್ನು ಕೇಜಿಯೊಂದಕ್ಕೆ ನೂರಾರು ರೂಪಾಯಿ ಕೊಟ್ಟು ಇಲ್ಲಿನ ಜನರೇ ಖರೀದಿಸುತ್ತಾರೆ. ನಮ್ಮ ಸಂಪತ್ತನ್ನು ಬೇರೆಯವರಿಂದ ಕೊಂಡು ಅನುಭವಿಸುವ ಸ್ಥಿತಿ ನಮ್ಮದು. ಎಂತಹ ವಿಪರ್ಯಾಸವಲ್ಲವೇ!

ಎಡೆಬಿಡದೆ ಮೂರ್ನಾಲ್ಕು ದಿನ ಮಳೆ ಸುರಿಯಿತೆಂದರೆ ಹೊಳೆ ಬದಿಯ ಜನಕ್ಕೆ ಮೀನಿನ ಭರ್ಜರಿ ಬೇಟೆ. ನೀರಿನಿಂದ ಮೀನುಗಳು ಮೇಲೆ ಬಂದುಬಿಡುವ ಸಮಯವಿದು. ಇದಕ್ಕೆ ಉಬರು ಹತ್ತುವುದು ಎನ್ನುತ್ತಾರೆ. ಮಳೆಗಾಲವಾದ್ದರಿಂದ ಇದು ಮೀನಿನ ವಂಶಾಭಿವೃದ್ಧಿಯ ಸಂದರ್ಭ. ಹಾಗಾಗಿ ಮೀನುಗಳು ನೀರಿನ ಸೆಳೆತವಿಲ್ಲದ ಜಾಗಕ್ಕೆ ಮೊಟ್ಟೆ ಇಡಲು ಬರುತ್ತವೆ. ಜೋರು ಮಳೆ ಬರುವಾಗ ಇವು ನೀರಿನ ಸೆಳೆತಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾ ಪುಟ್ಟ ತೋಡುಗಳಿಗೆ ಬಂದು ಸೇರುತ್ತವೆ. ತೋಡಿನಿಂದ ಗದ್ದೆಗಳಿಗೆ ನೀರು ಹರಿಯುವಾಗ ಮೀನುಗಳೂ ಸೇರಿಕೊಳ್ಳುತ್ತವೆ. ನೀರು ಇಳಿಜಾರಿನಲ್ಲಿ ಹರಿಯುವ ಜಾಗದಲ್ಲಿ ಬಿದಿರಿನಿಂದ ಮಾಡಿದ ‘ಕೂರಿ’ ಎಂದು ಕರೆವ ಸಾಧನವನ್ನು ಇಟ್ಟುಬಿಡುತ್ತಾರೆ. ಅದರೊಳಗೆ ಸುಲಭವಾಗಿ ಮೀನುಗಳು ಸೇರಿಕೊಳ್ಳುತ್ತವೆ. ಆದರೆ ಈಗ ಮೀನಿನ ಸಂತತಿಯೇ ಕಡಿಮೆಯಾಗಿದೆ. ಹಾಗಾಗಿ ಭರ್ಜರಿ ಬೇಟೆ ಕನಸಿನ ಮಾತು.

***

ಮಳೆ ನೆನಪು ಬರುವಾಗಲೆಲ್ಲ ನನಗೆ ನೆನಪಾಗುವ ಘಟನೆಯೊಂದಿದೆ. ನಾನಾಗ ಮೊದಲ ವರ್ಷದ ಪಿಯೂಸಿಯಲ್ಲಿದ್ದೆ. ಭಯಂಕರ ಮಳೆ ಬರುತ್ತಿತ್ತು. ಸಂಜೆ ಏಳರ ಸಮಯ. ಮನೆಯಿಂದ ಹೊರಗೆ ಬಚ್ಚಲ ಮನೆ, ಅದಕ್ಕೆ ಹೊಂದಿಕೊಂಡಂತೆ ಹಟ್ಟಿ. ನಮ್ಮ ಮನೆಯಲ್ಲೊಬ್ಬಳು ಬಡ ಹುಡುಗಿಯನ್ನು ಸಾಕಿಕೊಂಡಿದ್ದೆವು. ನಾನು ಸ್ನಾನಕ್ಕೆ ಹೋಗುವಾಗ ಆಕೆ ನನ್ನ ಜೊತೆಗಿದ್ದಳು. ಹೊರಗೆ ಜಡಿ ಮಳೆ. ಸ್ನಾನ ಮುಗಿಸಿ, ಬಟ್ಟೆ ತೊಟ್ಟು ಇನ್ನೇನು ಹೊರ ಬರಬೇಕು ಎನ್ನುವಾಗ ಲಟಲಟ ಎಂದು ಏನೋ ಮುರಿದ ಸದ್ದು. ಏನೆಂದು ನೋಡುವ ಮೊದಲೇ ಇಡೀ ಕೊಟ್ಟಿಗೆ ನೆಲವನ್ನಪ್ಪಿತ್ತು. ಶಬ್ದ ಕೇಳುತ್ತಿದ್ದಂತೆ ನನಗರಿವಿಲ್ಲದೆ ನಾನು ಇದ್ದ ಜಾಗದಲ್ಲೇ ಮಲಗಿ ಬಿಟ್ಟಿದ್ದೆ. ಕೊಟ್ಟಿಗೆಯ ಆಧಾರಸ್ತಂಭವೇ ಮುರಿದಿದ್ದು ನಾನು ಕತ್ತೆತ್ತಿ ನೋಡಲೂ ಆಗದಂತೆ ಅದು ನನ್ನ ತಲೆಯ ಭಾಗದಲ್ಲೇ ಇತ್ತು. ಒಂದು ವೇಳೆ ನಾನು ಒಂದು ಕ್ಷಣ ನಿಧಾನ ಮಾಡಿದ್ದರೂ ಸತ್ತೇ ಹೋಗುತ್ತಿದ್ದೆ. ಇಷ್ಟಾಗುವಾಗ ಮಳೆಯ ನಡುವೆಯೂ ದೊಡ್ಡ ಶಬ್ದವಾಗಿ ಮನೆಯವರೆಲ್ಲ ಹೊರಗೆ ಬಂದು ನೋಡುವಾಗ ಕೊಟ್ಟಿಗೆ ಮಾಯವಾಗಿದೆ. ನೆಲಸಮವಾದ ಕೊಟ್ಟಿಗೆಯೊಳಗೆ ಸಿಕ್ಕಿ ನಾನು ಮತ್ತು ಆ ಹುಡುಗಿ ಸತ್ತೇ ಹೋಗಿದ್ದೇವೆ ಎಂಬುದು ಅವರ ಗ್ರಹಿಕೆ. ನನ್ನ ಅಣ್ಣನೊಬ್ಬ (ಈಗವನು ಸುವರ್ಣ ಸ್ಯೂಸ್ ವರದಿಗಾರ: ರವಿರಾಜ್ ವಳಲಂಬೆ) ಜೋರಾಗಿ ಬೊಬ್ಬೆ ಹೊಡೆಯುತ್ತಾ ಎಲ್ಲರೂ ಬನ್ನಿ ಎಂದು ಅಕ್ಕಪಕ್ಕದ ಮನೆಯವರನ್ನು ಕರೆಯುತ್ತಿದ್ದಾನೆ. ಒಳಗಿದ್ದ ನಮಗೆ ಕೇಳುತ್ತಿದೆ. ಇವರ ಗೋಳಾಟ. ನಮಗೆ ಏನೂ ಆಗಿಲ್ಲ ಎಂದು ಹೇಳಬೇಕೆನಿಸಿದರೂ ಅವರಿಗೆ ನನ್ನ ಮಾತು ಕೇಳುವ ಹಾಗಿರಲಿಲ್ಲ. ಯಾಕೆಂದರೆ ನಾನು ಸತ್ತುಹೋಗಿದ್ದೆ. ಜೋರು ಮಳೆ ಬೇರೆ. ಕರೆಂಟಿನ್ನೂ ನಮ್ಮ ಗ್ರಾಮ ಪ್ರವೇಶ ಮಾಡದ ದಿನಗಳು. ಚಿಮಿಣಿ ದೀಪ ಮಳೆಗೆ ನಿಲ್ಲಲ್ಲ. ನಮ್ಮ ಮೇಲೆ ಹೆಂಚಿನ ಚಾವಣಿ ಮಲಗಿದೆ. ಇವರ ರೋದನ ನಿಲ್ಲುವಂತಿಲ್ಲ. ಆಗ ನಮ್ಮ ಜೊತೆಗೆ ಬಚ್ಚಲಲ್ಲಿದ್ದ ಟಾಮಿ ನಾಯಿ ಮೆಲ್ಲಗೆ ಒಡೆದ ಹೆಂಚಿನ ಮಧ್ಯೆ ಹೊರಗೆ ಹೋಯಿತು. ನಾನೂ ಅದನ್ನು ಹಿಂಬಾಲಿಸಿದೆ. ಹೊರಗೆ ಹೋಗಿ ನೋಡಿದರೆ ಎಲ್ಲರಿಗೂ ಆಶ್ಚರ್ಯ. ನನಗೋ ನೆಲಸಮವಾಗ ಕೊಟ್ಟಿಗೆ ನೋಡಿದಾಗ ನಾನು ಬದುಕಿ ಬಂದದ್ದು ನಿಜವೇ ಎಂಬ ಅನುಮಾನ. ಈಗಲೂ ಮಳೆಗೆ ಮನೆ ಕುಸಿದ ಸುದ್ದಿ ಕೇಳುವಾಗ ಈ ಘಟನೆ ನೆನಪಾಗುತ್ತದೆ.

***

ಬೆಂಗಳೂರಲ್ಲಿ ಬೆಳೆದ ಬಾಳೆಗೊನೆ ಮತ್ತು ಮಗನಾನು ನನಗೆ ಹೂ-ತರಕಾರಿ ಬೆಳೆಯುವುದರಲ್ಲಿರುವ ಪ್ರೀತಿಗೆ ಪೂರಕವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿದರೂ ಕಾಂಪೌಂಡಿನೊಳಗೆ ಮಾಲೀಕರ ಇನ್ನೊಂದು ಸೈಟು ಖಾಲಿ ಇದೆ. ನನಗೆ ಬೇಕಾದ್ದನ್ನು ಬೆಳೆಸುತ್ತೇನೆ. ಪುದಿನಾ, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಟೊಮೆಟೋ, ಹಸಿಮೆಣಸು, ಗುಲಾಬಿ, ದಾಸವಾಳ, ಗೋರಟೆ ಹೂ, ಚೆಂಡುಹೂ, ಜೀನಿಯಾ ಯಾವಾಗಲೂ ಅರಳಿರುತ್ತದೆ. ಅಕ್ಕಪಕ್ಕದವರು ನಾನು ಗುದ್ದಲಿ ಹಿಡಿದು ಕೆಲಸ ಮಾಡುತ್ತಿದ್ದರೆ ಆಶ್ಚರ್ಯದಿಂದ ನೋಡುತ್ತಿರುತ್ತಾರೆ. ನಾನು ಕೆಲಸಕ್ಕೆ ಹೋಗಿದ್ದಾಗ ಹಗಲೆಲ್ಲ ಕಾಂಪೌಂಡಿನೊಳಗೆ ಚಿಂದಿ ಆಯುವವರು, ಕಳ್ಳರು ಬಾರದಂತೆ ಅವರಾಗೇ ನಿಗಾ ವಹಿಸುತ್ತಾರೆ. ಅವರಿಗೆಲ್ಲ ಪುದಿನಾ ಸೊಪ್ಪು ನಮ್ಮನೆಯದೇ. ನಾನು ನಮ್ಮ ಪತ್ರಿಕೆಯ ಕೃಷಿ ಪುರವಣಿಗೆ ಆಗಾಗ ಇಂತಹ ಚಿಕ್ಕಪುಟ್ಟ ವಿಚಾರವಿಟ್ಟುಕೊಂಡು ಲೇಖನ ಬರೆಯುವುದಿದೆ. ಕೈತೋಟದ ಬಗ್ಗೆ ನಾನು ಬರೆದಾಗ ನಮ್ಮ ಹಿತ್ತಲಿನ ಫೋಟೋವನ್ನೇ ಬಳಸುತ್ತೇನೆ. ಮನೆಮುಂದೆ ರಸ್ತೆಯಲ್ಲಿ ದನದ ಸೆಗಣಿ ಇದ್ದರೆ ಎತ್ತಿ ತಂದು ಸಸಿಗಳಿಗೆ ಹಾಕುತ್ತೇನೆ. ಇಲ್ಲಿ ನನಗೆ ಮುಜುಗರವಾಗಲಿ, ಹೇಸಿಗೆಯಾಗಲಿ ಕಾಡುವುದಿಲ್ಲ. ನಮ್ಮನೆಯಲ್ಲಿ ಬೆಳೆದ ಹೂ ಅಂತ ಫೋಟೋ ತೋರಿಸಿದ್ರೆ ನನ್ನ ಸಹವರ್ತಿಗಳು `ಇದು ನಿಮ್ಮನೆಯದಾ ಅಥವಾ ನೆಟ್ ನಿಂದ ಕದ್ದ ಫೋಟೋವಾ’ ಎಂದು ತಮಾಷೆ ಮಾಡುತ್ತಾರೆ. `ಬೆಳಗ್ಗಿಂದ ಸಂಜೆ ತನಕ ಆಫೀಸಿನಲ್ಲಿ ಕಳೆದು, ದಿನಕ್ಕೆ ಸರಿಸುಮಾರು ಐವತ್ತು ಕಿಲೋಮೀಟರ್ ಪ್ರಯಾಣಿಸುವ ನೀವು ರಾತ್ರಿ ಒಂಭತ್ತಕ್ಕೆ ಮನೆ ಸೇರುತ್ತೀರಿ. ಅಂತದ್ದರಲ್ಲಿ  ತರಕಾರಿ ಬೆಳೆಯಲು ಸಮಯವೆಲ್ಲಿದೆ?’ ಎಂಬುದು ಅವರ ಕುತೂಹಲದ ಪ್ರಶ್ನೆ.

ಈ ಮಧ್ಯೆ ಕಳೆದ ವರ್ಷ ವೆಂಕಟ್ ನೆಟ್ಟ ಬಾಳೆ ಗಿಡ ಈಗ ಗೊನೆ ಹಾಕಿದೆ. ವೆಂಕಟ್ ಮತ್ತೆ ಮತ್ತೆ್ತೆ ಹೇಗೆಲ್ಲ ನನ್ನ ಮುಂದೆ ಬರುತ್ತಿದ್ದಾರೆ ಎಂದು ಮನಸು ಖಿನ್ನವಾಗುತ್ತದೆ. ವೆಂಕಟ್ ತೀರಿ ಹೋಗುವಾಗ ಬಾಳೆಗಿಡ ನಾಲ್ಕು ಎಲೆ ಬಿಟ್ಟಿತ್ತು. ಸೆಪ್ಟಂಬರ್ ಗೆ ಅವರಿಲ್ಲದೆ ಒಂದು ವರ್ಷ. ಗೊನೆಯ ಬಾರಕ್ಕೆ ಬಾಳೆ ಬಾಗಿದೆ. ಮಗ ನೇಸರ ಅದಕ್ಕೊಂದು  ಸಿಮೆಂಟು ಪೈಪನ್ನು ಆಧಾರವಾಗಿ ಇಟ್ಟಿದ್ದಾನೆ. ಗೊನೆ ಬೆಳೆಯುವ ಪ್ರತಿ ಹಂತವನ್ನು ಮೊಬೈಲಿನಲ್ಲಿ ಫೋಟೋ ತೆಗೆದು ಕಂಪ್ಯೂಟರಿನಲ್ಲಿ ತುಂಬಿಡುತ್ತಿದ್ದಾನೆ. ಬಾಳೆ ಗೊನೆ ಹಾಕಿದ್ದಕ್ಕಿಂತ ಅಪ್ಪ ನೆಟ್ಟು ಹೋದದ್ದು ಎಂಬುದು ಅವನ ವಿಶೇಷ ಕಾಳಜಿಗೆ ಕಾರಣ. ನನಗೂ ಅದು ಬೆಳೆಯುತ್ತಿದ್ದಂತೆ ತಳಮಳ ಶುರುವಾಗಿದೆ. ಪುಟ್ಟ ಪುಟ್ಟ ಹೊಸತಿಗೂ ತುಂಬಾ ಖುಷಿಪಡುತ್ತಿದ್ದ, ಸಂಭ್ರಮಿಸುತ್ತಿದ್ದ ಅವರಿಲ್ಲದ ನಿರ್ವಾತ ನಮ್ಮಿಬ್ಬರ ಪ್ರತಿ ಖುಷಿಯನ್ನೂ ಸೆಳೆದುಕೊಳ್ಳುತ್ತಿದೆ.

ಹೇಮಾ ನೆನಪುಗಳು: ಅವನ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ

ಮಗನ ಜೊತೆ ದಸರಾ ರಜದಲ್ಲಿ ನಾನೂ ಒಂದು ವಾರ ರಜೆ ಹಾಕಿ ಊರಿಗೆ ಹೋಗಿದ್ದೆ. ಅಮ್ಮನ ಸಾಂಪ್ರದಾಯಿಕ ಕೈರುಚಿ ಸವಿದೆ. ಹಂಡೆ ತುಂಬ ಬಿಸಿನೀರು ಸ್ನಾನ, ಬಾಳೆ ಎಲೆಯ ಊಟ ಹಳೆಯ ಸಂಭ್ರಮವನ್ನು ಮತ್ತೆ ನೆನಪಿಸಿತ್ತು. ಕೊಂಬೆಗಳಿಲ್ಲದ ಮರಕ್ಕೆ ಸಂಜೆ ಹೊತ್ತು ಗಿಳಿವಿಂಡು ಬಂದು ಕುಳಿತ ದೃಶ್ಯ ಕೊಂಬೆಯೇ ಚಿಗುರಿದಂತಿತ್ತು. ಕಿಟಕಿಯಲ್ಲಿ ಬಂದು ಸದಾ ಇಣಕಿಹಾಕುತ್ತಿದ್ದ ಹಮಿಂಗ್ ಬರ್ಡ್ ಎಷ್ಟು ಫೋಟೋ ಕ್ಲಿಕ್ಕಿಸಿದರೂ ಪೋಸು ಕೊಡುತ್ತಲೇ ಇತ್ತು. ಬಾಳೆಯ ಹೂನಿನ ಒಳಗೆ ಅವಿತಿದ್ದ ಜೇನು ಹನಿ ಸವಿಯುವ ಸುಖ ಮತ್ತೆ ಸಿಕ್ಕಿತ್ತು. ಪಿರಿಪಿರಿ ಮಳೆ, ಒಮ್ಮೊಮ್ಮೆ ಜಡಿ ಮಳೆ, ಮತ್ತೆ ಸುಡು ಬಿಸಿಲು ಎಲ್ಲವನ್ನೂ ನೋಡುತ್ತಾ ಬೇರೆಲ್ಲಿಗೂ ಹೋಗದೆ ಒಂದು ವಾರ ಕಳೆದೆ. ತೋಟಕ್ಕೆ ಬಂದು ಬಾಳೆ, ಎಳನೀರು, ಅಡಿಕೆ ಎಲ್ಲವನ್ನೂ ಹಾಳುಗೆಡವುತ್ತಾ ಯಾರ ಮರ್ಜಿಗೂ ಸಿಗದೆ ರಾಜಾರೋಷವಾಗಿ ಅಲೆಯುತ್ತಾ ಮನುಷ್ಯನಿಗೇ ಸವಾಲೆಸೆವ ಮಂಗಗಳ ಕಂಡು ದಂಗಾದೆ. ಪಾಪ ವರುಷವಿಡೀ ಹಗಲು ರಾತ್ರಿ ಎನ್ನದೆ ದುಡಿದ ಕೃಷಿಕರಿಗೆ ಫಲ ಬರುವ ಸಮಯಕ್ಕೆ ಬರೇ ಚಿಪ್ಪು ಎಂಬಂತಾಗಿದೆ. ಈ ಮಂಗಗಳನ್ನು ಹಿಡಿಯುವುದೊಂದು ದಂಧೆ ಈಚೆಗೆ ಶುರುವಾಗಿದೆ. ಅದು ದಂಧೆ ಎನ್ನದೆ ಬೇರೆ ಮಾರ್ಗವಿಲ್ಲ ಮಂಗಗಳನ್ನು ತೋಟದಲ್ಲಿ ಬೋನು ನಿರ್ಮಿಸಿ ಅದರೊಳಗೆ ಬಾಳೆ ಹಣ್ಣಿನ ಗೊನೆ ಇಟ್ಟು ಮಂಗಗಳು ಬರುವಂತೆ ಮಾಡಲಾಗುತ್ತದೆ. ಹೀಗೆ ಬಂದ ಮಂಗಗಳ ಹಿಂಡು ಬೋನಿನೊಳಗೆ ಬಂಧಿಯಾಗುತ್ತವೆ. ಮತ್ತೆ ಇವುಗಳನ್ನು ಬೇರೆ ಊರಿನ ದೂರದ ಕಾಡಿಗೆ ಬಿಟ್ಟು ಬರುತ್ತಾರೆ. ಅವು ಮತ್ತೆ ಪಕ್ಕದ ಊರಿನ ತೋಟವನ್ನು ಹಾಳುಗೆಡವುತ್ತವೆ. ಹೀಗೆ ಮಾಡುವುದಕ್ಕೆ ತುಂಬ ವೆಚ್ಚ ತಗಲುತ್ತದೆ. ಆದರೆ ಯಾರ ತೋಟದಲ್ಲೂ ಮಂಗನ ಹಾವಳಿ ಇಲ್ಲ ಎಂಬ ಉತ್ತರ ಇದುವರೆಗೆ ಸಿಕ್ಕಿಲ್ಲ.

ಕಾಡುಗಳನ್ನು ಕಡಿದು ನಾಡು- ತೋಟ ಮಾಡಿಕೊಂಡ ಜನಕ್ಕೆ ಈಗ ಮಂಗಗಳೇ ಬುದ್ಧಿ ಕಲಿಸುತ್ತಿವೆ. ಅವುಗಳಿಗೂ ಹಸಿವಿಲ್ಲವೇ! ಹೊಟ್ಟೆ ತುಂಬಲು ತೋಟವಾದರೇನು, ಹಿತ್ತಲಾದರೇನು. ಸುಳ್ಯ ಸೀಮೆಯ ಸುತ್ತಲೂ ಬಂಟಮಲೆ, ಪೂಮಲೆ, ಕುಮಾರಪರ್ವತ ಪಶ್ಚಿಮಘಟ್ಟ ಶ್ರೇಣಿ ಆವರಿಸಿಕೊಂಡು ಸಮೃದ್ಧವಾಗಿತ್ತು. ಸುತ್ತಲೂ ಕಾಡು ಮಧ್ಯದಲ್ಲಿ ಗದ್ದೆಗಳಿತ್ತು. ಬತ್ತದ ಬೇಸಾಯಕ್ಕೆ ತುಂಬ ಪ್ರಸಕ್ತವಾದ ಸ್ಥಳ. ಈಗ ಗದ್ದೆಗಳೆಲ್ಲ ಅಡಿಕೆ ತೋಟಗಳಾಗಿವೆ. ಸೊಪ್ಪಿನ ಗುಡ್ಡಗಳೆಲ್ಲ ರಬ್ಬರ್ ಎಸ್ಟೇಟುಗಳಾಗಿವೆ. ರಬ್ಬರ್ ಬೆಲೆ ಹೆಚ್ಚಿದಂತೆ ಶ್ರೀಮಂತರೆಲ್ಲ ರಬ್ಬರ್ ನೆಪದಲ್ಲಿ ರಕ್ಷಿತಾರಣ್ಯಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡರು. ಅಕ್ಷಮವನ್ನು ಸರ್ಕಾರವೇ ಸಕ್ರಮಗೊಳಿಸುತ್ತದೆ. ಹೀಗೆ ಕಾಡುಗಳನ್ನು ನುಂಗಿ ನೀರು ಕುಡಿದದ್ದು ಶ್ರೀಮಂತರು. ಅವರು ಈಗಲೂ ಸುಭದ್ರವಾಗಿದ್ದಾರೆ. ತೋಟಕ್ಕೆ ವಿದ್ಯುತ್ ತಂತಿಗಳನ್ನು ಅಳವಡಿಸಿ ಕಾಡು ಪ್ರಾಣಿಗಳನ್ನು ಬಾರದಂತೆ ಮಾಡುತ್ತಾರೆ. ಆದರೆ ಬಲಿಪಶುಗಳಾಗುತ್ತಿರುವವರು ಸಣ್ಣ ತೋಟದ ಮಾಲಿಕರು.

ಅಣ್ಣಂದಿರೆಲ್ಲ ಕೆಲಸದ ಮೇಲೆ ಬೇರೆ ಬೇರೆ ಊರಿನಲ್ಲಿದ್ದಾರೆ. ಅಮ್ಮನಿಗೆ ವಯಸ್ಸಾಗಿದೆ. ಹಾಗಂತ ಅಪ್ಪ ನಡೆದಾಡಿದ, ಮಣ್ಣಾದ ಜಾಗ ಮಾರಿ ಪೇಟೆಯಲ್ಲಿ ಜಾಗ ತೆಗೆದು ಮಗನ ಜೊತೆ ನೆಲೆಸಿದ್ದಾರೆ. ಆದರೂ ಅಮ್ಮನಿಗೆ ಓಡಾಡಲು ಒಂದೆಕರೆ ಜಾಗವಿದೆ. ಹೆಂಚಿನ ಮನೆಯಿದೆ. ಆದರೆ ಅಪ್ಪನ ಹೆಜ್ಜೆ ಇಲ್ಲ ಎಂಬುದೊಂದು ಕೊರತೆ.

ಬಹಳ ವರ್ಷದ ನಂತರ ಮಗನ ಒತ್ತಾಯದ ಮೇರೆಗೆ ಏಡಿ ಬೇಟೆಗೆ ಹೋಗಿದ್ದೆ. ತೋಡಿಗಿಂತ ನಾಲ್ಕು ಪಟ್ಟು ದೊಡ್ಡದಾದ ಹೊಳೆಯದು. ಆದರೆ ನೋಡುವುದಕ್ಕೂ ಒಂದು ಏಡಿ ಕೂಡಾ ಸಿಗಲಿಲ್ಲ. ಆದರೂ ಒಂದಾದರೂ ಏಡಿ ಹಿಡಿದುಕೊಡಲೇಬೇಕು ಎಂಬ ಮಗನ ಹಟದಿಂದಾಗಿ ಸುಮಾರು ದೂರ ಹೊಳೆಯಲ್ಲಿಯೇ ಸುತ್ತಾಡಿ ಕೊನೆಗೂ ಒಂದು ಏಡಿ ನನ್ನ ಬೇಟೆಗೆ ಸಿಕ್ಕಿಬಿಟ್ಟಿತು. ಮೊದಲೆಲ್ಲ ಹಿಂಡು ಹಿಂಡು ಮರಿಮೀನುಗಳು ಹೊಳೆಗಿಳಿದಾಗ ಕಾಲಿಗೆ ಕಚ್ಚುತ್ತಾ ಕಚಗುಳಿ ಇಡುತ್ತಿದ್ದವು. ಹೊಳೆಬದಿ ಕುಳಿತು ಕಾಲನ್ನು ನೀರಿಗೆ ಇಳಿಬಿಟ್ಟು ಗಂಟೆಗಟ್ಟಲೆ ಕುಳಿತಿರುತಿದ್ದೆವು. ಮೀನುಗಳು ಕತ್ತಲಲ್ಲಿ ಟಾರ್ಚ್ ಬೆಳಕಿಗೆ ಕಣ್ಣುಕೊಡುತ್ತಿದ್ದವು. ಈಗ ಬರೇ ನೀರಷ್ಟೇ ಹರಿಯುತ್ತಿದೆ. ಯಾವ ಜಲಚರಗಳೂ ಕಾಣುತ್ತಿಲ್ಲ. ಕಪ್ಪೆ, ಏಡಿ, ಮೀನು ಎಲ್ಲವೂ ವಿನಾಶದ ಅಂಚಿಗೆ ಬಂದಿವೆ. ಇನ್ನು ನಮಗೆ ಕಾಣದೇ ಇರುತ್ತಿದ್ದ ಅದೆಷ್ಟು ಜೀವಿಗಳು ನಾಶವಾಗಿವೆಯೋ ಯಾರಿಗೆ ಗೊತ್ತು.

****

ಒಂದಿನ ಸಂಜೆ ನನಗೂ ಮಗನಿಗೂ ಜಗಳ ಹತ್ತಿದಾಗ ಮಗ ಅಟ್ಟ ಹತ್ತಿ ಕುಳಿತ. ‘ಅಪ್ಪ ಬರಬೇಕು. ಇಲ್ಲವಾದರೆ ನಾನು ಕೆಳಗೆ ಇಳಿಯಲ್ಲ ಎಂದು ಅಳುವುದಕ್ಕೆ ಶುರು ಮಾಡಿದ. ‘ಅಪ್ಪನಿಲ್ಲದೆ ನನಗೆ ಏನೂ ಮಾಡಲು ಮನಸು ಬರುತ್ತಿಲ್ಲ. ನನಗೆ ಅಪ್ಪ ಬೇಕು’ ಎಂದು ಜೋರಾಗಿ ಅಳುವುದಕ್ಕೆ ಶುರು ಮಾಡಿದ. ಈ ಒಂದು ವರ್ಷದಲ್ಲಿ ಅವನು ಅಪ್ಪನ ಬಗ್ಗೆ ಮಾತನಾಡಿದ್ದೇ ಇಲ್ಲ. ನಾನೇನಾದರೂ ವಿಷಯ ತೆಗೆದರೆ ‘ಅಪ್ಪನ ವಿಚಾರ ತೆಗೆಯಬೇಡಮ್ಮ ಪ್ಲೀಸ್’ ಎಂದು ಹೇಳುತ್ತಿದ್ದ. ನನಗೆ ವೆಂಕಟ್ ಬಗ್ಗೆ ಮಾತನಾಡಬೇಕು ಎನಿಸಿದಾಗಲೆಲ್ಲ ಯಾರಲ್ಲಿ ಮಾತನಾಡಲಿ ಎಂಬ ಪ್ರಶ್ನೆ. ಮೊನ್ನೆ ಮಗ ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಅಮ್ಮ ಸುಮ್ಮನೆ ನನ್ನನ್ನೊಮ್ಮೆ ಮೊಮ್ಮಗನನ್ನೊಮ್ಮೆ  ನೋಡುತ್ತಾ ಮೌನಕ್ಕೆ ಜಾರಿದ್ದರು. ಅವರು ಯಾವಾಗಲೂ ಹಾಗೆ. ಎಷ್ಟೋ ಸಲ ಮಾತನಾಡಲೇ ಬೇಕಾದಾಗಲೂ ಮಾತನಾಡಿಲ್ಲ ಎಂದು ನನಗೆ ಅನ್ನಿಸಿದ್ದಿದೆ.

ಅಂದು ನಾವಿಬ್ಬರೂ ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಮಗನನ್ನು ಪುಸಲಾಯಿಸಿ ಹೇಗಾದರೂ ಮಾಡಿ ಅಟ್ಟದಿಂದ ಇಳಿಸಬೇಕೆಂದು ನಾನು ಮಾಡಿದ ಪ್ರಯತ್ನ ಫಲನೀಡುವ ಹಾಗೆ ಕಾಣಲಿಲ್ಲ. ನಾನು ಮೌನವಾಗಿ ಕತ್ತಲಲ್ಲಿ ಅಳುತ್ತಲೇ ಇದ್ದೆ. ಕೊನೆಯ ಪ್ರಯತ್ನವಾಗಿ ನಾನು ಅಟ್ಟ ಹತ್ತಿದೆ. ಮತ್ತೆ ಅದೇ ಮಾತು ‘ನನಗೆ ಅಪ್ಪ ಬೇಕು. ಅವರು ಸತ್ತಿಲ್ಲ’. ನಾನು ಜೋರಾಗಿ ಅತ್ತುಬಿಟ್ಟೆ. ತಕ್ಷಣ ಮಗ `ನೀನು ಅಳಬೇಡ’ ಎಂದು ಅಟ್ಟದಿಂದ ಇಳಿದು ಬಂದ.

ಎಷ್ಟೋ ಸಲ ನಾನು ಸಹನೆ ಕಳೆೆದುಕೊಂಡು ಸಿಕ್ಕಾಪಟ್ಟೆ ಹೊಡೆದು ನನಗೇ ಬೇಸರವಾಗಿ ನಾನೇ ಅತ್ತಾಗ ಮಗ ಇದೇ ಮಾತು ಹೇಳಿದ್ದಿದೆ. ಅಮ್ಮ ಅಳುವುದನ್ನು ಅವನು ಸಹಿಸಲಾರ ಎಂಬುದು ನನಗೆ ಗೊತ್ತು. ಹಾಗಂತ ಅಳುವ ನಾಟಕ ಮಾಡಲಾರೆ.

ಒಬ್ಬಂಟಿಯಾಗಿ ಮಕ್ಕಳನ್ನು ಬೆಳೆಸುವುದು, ಅದರಲ್ಲೂ ಸರಿಯಾಗಿ ಬೆಳೆಸುವ ಕಷ್ಟ ಬೇರೆಲ್ಲ ಸವಾಲಿಗಿಂತಲೂ ಮಿಗಿಲಾದುದು. ದುಡಿಯುವ ಹೆಣ್ಣಾಗಿ, ರಾತ್ರಿ ಮನೆಸೇರುವ ನನ್ನ ಒತ್ತಡಗಳೇ ಬೇರೆ. ಮನೆಯಲ್ಲಿ ದೊಡ್ಡವರಾರೂ ಇಲ್ಲ ಎಂಬುದು ಎಷ್ಟು ತಾಪತ್ರಯದ ಸಂಗತಿ ಎಂದರೆ ಹೇಳತೀರದು. ಮಗನ ಸ್ನೇಹಿತ, ಕ್ಲಾಸ್ ಮೇಟ್ ಎಂದು ಬರುವ ಹುಡುಗರು, ಅವರ ಸ್ನೇಹಿತರು ಹೀಗೆ ಯಾರು ಯಾರೋ ಬಂದು ಇಲ್ಲದ ಸಮಸ್ಯೆ ಶುರುವಾಗಿದೆ. ಮಕ್ಕಳನ್ನು ಮನೆಗೆ ಸೇರಿಸಿಕೊಳ್ಳಬೇಡ ಎಂದು ಹೇಳಿದರೆ ನಾನು ಮತ್ಯಾರ ಜೊತೆ ಆಡಲಿ? ನನಗೆ ಬೇರೆ ಯಾರಿದ್ದಾರೆ? ಎಂಬ ಪ್ರಶ್ನೆಗೆ ನಾನು ಏನು ಹೇಳುವುದೆಂದು ತೋಚದು. ಬಂದವರಲ್ಲಿ ಕೆಟ್ಟವರಾರು, ಸಭ್ಯರಾರು ಎಂದು ಅಳೆದು ತೂಗಿ ಸೇರಿಸಿಕೊಳ್ಳುವ ಪ್ರೌಢತೆ ಮಕ್ಕಳಿಗಿಲ್ಲ. ಒಮ್ಮೆ ಹೀಗೆ ಆಟವಾಡುತ್ತ ಹುಡುಗನೊಬ್ಬ ನನ್ನ ಮಗನ ಕತ್ತು ಹಿಡಿದು ಮತ್ತೆ ಪಕ್ಕದ ಮನೆಯವರು ಬಂದು ಮಗನನ್ನು ಉಪಚರಿಸಿದ್ದರು. ಪರೀಕ್ಷೆ ಮುಗಿದು ಒಬ್ಬನೇ ಮನೆಯಲ್ಲಿದ್ದ ಮಗನನ್ನು ಹಾದಿಯಲ್ಲಿ ಹೋಗುತ್ತಿದ್ದ ಹುಡುಗನೊಬ್ಬ ಆಡಲು ಬಾ ಕರೆದಾಗ ಬರಲ್ಲ ಎಂದು ಹೇಳಿದ್ದೇ ತಡ ಹಿಡಿದೆಳೆದು ರಸ್ತೆಯಲ್ಲಿ ಕತ್ತು ಹಿಡಿದಿದ್ದನಂತೆ. ಆಗಲೂ ಪಕ್ಕದ ಅಂಗಡಿಯವರು ಬಿಡಿಸಿದ್ದರು.

ಹೀಗೆ ದಿನಕ್ಕೊಂದು ಪ್ರಕರಣ ನನ್ನ ಮುಂದೆ ಬಂದು ನಿಲ್ಲುತ್ತಿದೆ. ಓದಿನ ಬಗ್ಗೆಯೂ ಟ್ಯೂನ್ ಮಾಡುವವರಿಲ್ಲದೆ ಸರಿಯಾಗಿ ಯಾವುದನ್ನೂ ಮಾಡುತ್ತಿಲ್ಲ. ಪ್ರತಿದಿನ ಗಮನಿಸಲು ನನಗೆ ಸಮಯವಿಲ್ಲ. ನನ್ನ ರೇಗಾಟ ನೋಡಿ ಕಡೆಗೊಮ್ಮೆ ಮಗನೇ ಬೇಸತ್ತು ‘ನನ್ನನ್ನು ಹಾಸ್ಟೆಲಿಗೆ ಸೇರಿಸಮ್ಮ’ ಎಂದುಬಿಟ್ಟ. ಆ ಮಾತು ನನ್ನನ್ನು ಹೇಗೆ ಚುಚ್ಚಿತ್ತೆಂದರೆ, ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಹಾಸ್ಟೆಲಾ! ಸ್ವತಂತ್ರವಾಗಿ ಬೆಳೆದ, ಸ್ವತಂತ್ರವಾಗಿ ಯೋಚಿಸುವ ನಾವು ನಮ್ಮ ಮಕ್ಕಳನ್ನು ಹಾಸ್ಟೆಲೆಂಬ ಜೈಲಿಗೆ ತಳ್ಳುವುದಾದರೆ ಮಕ್ಕಳೆಂಬ ಮಮಕಾರ, ಪ್ರೀತಿಗೆ ಬೆಲೆ ಇರುತ್ತದೆಯೇ?

ಬೇಗನೇ ಮನೆ ಸೇರುವ ಕೆಲಸ ಪತ್ರಿಕೋದ್ಯಮದಲ್ಲಿ ಇಲ್ಲ. ಕಚೇರಿಯ ಬಳಿ ಮನೆ ಮಾಡುವ ಎಂದರೆ ಅದು ದುಬಾರಿ. ಈಗಿರುವ ಮನೆ ಎಲ್ಲದಕ್ಕೂ ಅನುಕೂಲಕರ. ಆದರೆ ಪ್ರತಿದಿನ ಐವತ್ತು ಕಿಲೋಮೀಟರ್ ಓಡಾಟ. ನನಗೆ ಬೇರೆ ಕೆಲಸ ಸಿಗದು. ಹೀಗಾಗಿ ಮನೆ ವಾರ್ತೆ ನೋಡಿಕೊಳ್ಳುವ ಹೆಂಗಸೊಬ್ಬಳಿಗಾಗಿ ಊರೆಲ್ಲ ಹುಡುಕಾಡಿದೆ. ಸದ್ಯ ಆ ಜಾಗ ತುಂಬುವ ಹಾಗೆ ಕಾಣುತ್ತಿಲ್ಲ.

ಹೇಮಾ ನೆನಪುಗಳು:ಇರುಳಿಡೀ ಗೀಚುತ್ತಿದ್ದ ಕವಿತೆಗಳು

ಗದ್ದೆ ಬೇಸಾಯ ಮುಗಿದ ಮೇಲೆ ಗದ್ದೆಗಳಲ್ಲಿ ಬಿದ್ದಿರುವ ಬತ್ತದ ಕಾಳುಗಳನ್ನು ತಿನ್ನಲು ಬಗೆಬಗೆಯ ಪಕ್ಷಿಗಳು ಬರುತ್ತಿದ್ದವು. ಅಲ್ಲದೆ ಮೊಲಗಳ ಹಿಂಡು ಬರುತಿತ್ತು. ಬೇಸಿಗೆಯಲ್ಲಿ ಸಾಲು ಸಾಲಾಗಿ ದುಂಬಿಗಳು ಬರುತ್ತಿದ್ದವು. ನಾವು ದುಂಬಿಗಳ ಹಿಂದೆ ಹೋಗಿ ಮೆಲ್ಲನೆ ಹಿಡಿದು ದಾರಕ್ಕೆ ಕಟ್ಟುತ್ತಿದ್ದೆವು. ದುಂಬಿಗಳನ್ನು ಹಿಡಿಯುವುದು ಸಾಹಸವೇ ಸರಿ. ಮೆಲ್ಲನೆ ಸದ್ದು ಮಾಡದೆ ಅವುಗಳನ್ನು ಹಿಂಬಾಲಿಸಬೇಕು. ಅವೋ ಕುಳಿತಲ್ಲಿ ಕುಳಿತಿರಲಾರವು. ಆದರೂ ನಮ್ಮ ಏಕಾಗ್ರತೆ ಮೆಚ್ಚಲೇಬೇಕು. ಅವುಗಳಷ್ಟೇ ಚಾಣಾಕ್ಷತೆ ನಮ್ಮಲ್ಲಿತ್ತು. ಅದೇ ಬುದ್ಧಿವಂತಿಕೆಯನ್ನು ಓದುವುದಕ್ಕೆ ಬಳಸಿಕೊಂಡಿದ್ದರೆ ನಾವೆಲ್ಲ ಒಳ್ಳೆಯ ಜೀವನ ಪಡೆಯಬಹುದಿತ್ತು ಎಂದು ಈಗ ಅನ್ನಿಸುತ್ತಿದೆ. ದುಂಬಿಗಳನ್ನು ಹಿಡಿದು ದಾರಕ್ಕೆ ಪೋಣಿಸುವಾಗಲೂ ಅವುಗಳ ಬಾಲ ತುಂಡಾಗದಂತೆ ಹಗುರವಾಗಿ ಬಿಗಿದು ಹಾರಲು ಬಿಡುತ್ತಿದ್ದೆವು. ಅವು ಹಾರಿ ಹಾರಿ ಹೋಗುವುದನ್ನು ನೋಡಿ ಕುಣಿದಾಡುತ್ತಿದ್ದೆವು. ಪಾಪ ನಮಗೆ ನಾವು ಅವುಗಳನ್ನು ಹಿಂಸಿಸುತ್ತಿದ್ದೇವೆ ಎಂಬ ಅರಿವೇ ಇರಲಿಲ್ಲ. ಒಂದೇ ದಾರದಲ್ಲಿ ಹತ್ತಾರು ದುಂಬಿಗಳನ್ನು ಪೋಣಿಸಿ ಹಾರಿಬಿಟ್ಟಾಗ ಮಾತ್ರ ಅವು ಸಿಕ್ಕುಸಿಕ್ಕಾಗಿ ಹಾರಲಾಗದೆ ಸತ್ತುಹೋಗುತ್ತಿದ್ದವು. ದೊಡ್ಡವರಾಗುತ್ತಾ ಇದೆಲ್ಲ ಹಿಂಸೆಯ ರೂಪಗಳು ಎಂದು ಅರಿವಾಗಿತ್ತು.

ಈ ಗದ್ದೆಗಳು ಬೇಸಾಯ ಮುಗಿದ ನಂತರ ಆಟದ ಮೈದಾನವಾಗುತ್ತಿತ್ತು. ಅಲ್ಲಿ ನಾವು ಚಿನ್ನಿದಾಂಡು ಆಡುತ್ತಿದ್ದೆವು. ಆಗಿನ ನಮ್ಮ ಆಟಗಳೆಲ್ಲ ಬಹಳ ರೋಚಕ ಮತ್ತು ಅಷ್ಟೇ ಸಾಹಸಮಯವಾಗಿರುತ್ತಿದ್ದವು. ಹಾಗಾಗಿ ಬದುಕಿನ ಕಷ್ಟಗಳನ್ನೆಲ್ಲ ಸಹಿಸುವ ಶಕ್ತಿ ಕೂಡಾ ಪಡೆದಿದ್ದೇವೆ. ಈಗಿನ ಮಕ್ಕಳ ಆಟಗಳು ರೋಚಕವೂ ಅಲ್ಲ. ದೈಹಿಕ ಶ್ರಮವೂ ಇಲ್ಲ. ಕಂಪ್ಯೂಟರ್ ಮುಂದಿನ ಅವರ ಸಾಹಸಕ್ರೀಡೆಗಳೆಲ್ಲ ಹಾಸ್ಯಾಸ್ಪದವಾಗಿ ಕಾಣುತ್ತದೆ. ಇನ್ನು ಇವರಿಂದ ಸಾಹಸಮಯ ಬದುಕು ಸಾಧ್ಯವೇ! ಯುವಕರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿರುವುದಕ್ಕೆ ಇದೂ ಒಂದು ಕಾರಣ. ದೈರ್ಯ, ಛಲ, ದೈಹಿಕ-ಮಾನಸಿಕ ಶಕ್ತಿ ನೀಡದ, ಸ್ವಾಭಿಮಾನ, ಆತ್ಮಾಭಿಮಾನ ಹೆಚ್ಚಿಸದ ಆಟಗಳೆಲ್ಲ ವ್ಯರ್ಥ. ದುರಾದೃಷ್ಟವೆಂದರೆ ನಮ್ಮ ಮಕ್ಕಳ ಪಾಲಿಗೆ ಇವೆ ವರದಾನವೆಂಬಂತಾಗಿದೆ. ಕ್ರಿಕೆಟ್ ಬಿಟ್ಟರೆ ಬೇರೆ ಯಾವ ಆಟಗಳೂ ಈಗಿನ ಮಕ್ಕಳಿಗೆ ಗೊತ್ತಿಲ್ಲ. ಆಟಗಳನ್ನು ಹಣ ಕೊಟ್ಟು ತಂದು ಕಂಪ್ಯೂಟರ್ ನಲ್ಲಿ ಹಾಕಿ ನೋಡುತ್ತಾ ಕುಳಿತಿರುತ್ತವೆ.

ನಾವು ರಬ್ಬರ್ ಚೆಂಡಿನಲ್ಲಿ ಲಗೋರಿ ಆಡುತ್ತಿದ್ದೆವು. ತೆಂಗಿನ ಚಿಪ್ಪುಗಳನ್ನು ಪೇರಿಸಿಟ್ಟು ಚೆಂಡಿನಲ್ಲಿ ಹೊಡೆದುರುಳಿಸಿ, ಮತ್ತೆ ಕಟ್ಟಲು ಹೋಗಿ ಎದುರಾಳಿಯಿಂದ ಬಾಸುಂಡೆ ಬರುವಂತೆ ಚೆಂಡಿನ ಪೆಟ್ಟು ತಿಂದ ನೆನಪೇ ಈಗ ಭಯ ಹುಟ್ಟಿಸುತ್ತದೆ. ಚೆಂಡು ಕಾಣೆಯಾಗಿ ಅದನ್ನು ಹುಡುಕುತ್ತಾ ಕತ್ತಲಾಗುವಾಗ ಮನೆ ಸೇರುತ್ತಿದ್ದೆವು. ನಾವು ಹೆಣ್ಣು ಮಕ್ಕಳೆಲ್ಲ ಸೇರಿ ಕಲ್ಲಾಟ, ಜಿಬಿಲಿ ಆಟ ಆಡುತ್ತಿದ್ದೆವು. ಶಾಲೆಯಲ್ಲಿ ಒಂದು ತಂಡ  ಕಲ್ಲಾಟ ಶುರು ಮಾಡಿದರೆಂದರೆ ಹುಚ್ಚು ಹಿಡಿದವರಂತೆ ಎಲ್ಲರೂ ಶುರು ಮಾಡುತ್ತಿದ್ದರು. ಅದೊಂದು ಚಟದಂತೆ. ಮಧ್ಯಾಹ್ನ ಊಟದ ನಂತರ ಜಗಲಿಯಲ್ಲಿ ಕುಳಿತು ಹೆಣ್ಣುಮಕ್ಕಳ ಕಲ್ಲಾಟದ ಸದ್ದು ಇಡೀ ಶಾಲೆಯ ತುಂಬ ಲಯಬದ್ಧವಾಗಿ ಕೇಳುತ್ತಿತ್ತು. ಹೀಗೆ ಒಂದೊಂದು ಆಟ ಒಂದಷ್ಟು ಸಮಯ. ಮತ್ತೆ ಬೇರೆ ಆಟ ಸ್ವಲ್ಪ ದಿನ ಪ್ರಾಮುಖ್ಯತೆ ಪಡೆಯುತ್ತಿತ್ತು.

ಜಿಬಿಲಿ ಆಟ ಉಳಿದೆಲ್ಲ ಆಟಕ್ಕಿಂತ ಭಿನ್ನವಾಗಿತ್ತು. ನೆಲದ ಮೇಲೆ ನಾಲ್ಕು ಚೌಕ ಹಾಕಿ ಅದರೊಳಗೆ ತೆಳ್ಳಗಿನ ಬಿಲ್ಲೆ ಇಟ್ಟು ಒಂಟಿ ಕಾಲಿನಲ್ಲಿ ಕೋಣೆಯಿಂದ ಕೋಣೆಗೆ ದಾಟಿಸುತ್ತಾ ಆಡುವ ಈ ಆಟದಲ್ಲಿ ಬಿಲ್ಲೆಯನ್ನು ಮೊಣಕೈ, ಪಾದ, ಕಣ್ಣು, ನೆತ್ತಿ ಮೇಲೆಲ್ಲ ಇಟ್ಟುಕೊಂಡು ಆಡುವುದು ನಿಯಮ. ಬೇರೆ ಬೇರೆ ಕಡೆ ಈ ಆಟವನ್ನು ಬೇರೆ ಬೇರೆ ರೀತಿಯಲ್ಲಿ ಆಡುತ್ತಾರೆ. ಈಗಲೂ ಹಳ್ಳಿ ಶಾಲೆ ಮಕ್ಕಳು ಈ ಆಟ ಆಡುತ್ತಾರೆ. ಮಳೆಗಾಲದಲ್ಲಿ ಮನೆ ಮಂದಿ ಎಲ್ಲ ಸೇರಿಕೊಂಡು ಚನ್ನಮಣೆ ಆಟ ಆಡುತ್ತಿದ್ದರು. ಚನ್ನಮಣೆ ಆಟ ಚದುರಂಗದಾಟದಂತೆ. ಸೋತವನ ಮನೆಗೆ ಬೆಂಕಿ.

ಆಗ ಕ್ರಿಕೆಟ್ ನಿಧಾನವಾಗಿ ಹಳ್ಳಿಗಳಿಗೂ ಪ್ರವೇಶಿಸತೊಡಗಿತ್ತು. ನಮ್ಮಲ್ಲಿ ಬ್ಯಾಟ್ ಇರಲಿಲ್ಲ. ಅಮ್ಮ ತೆಂಗಿನ ಗರಿಯ ಬುಡದ ತುಂಡನ್ನು ಬ್ಯಾಟ್ ಆಕಾರಕ್ಕೆ ಕತ್ತರಿಸಿ ಕೊಡುತ್ತಿದ್ದರು. ಚಿಕ್ಕ ಮಕ್ಕಳಿಗೆ ಚಿಕ್ಕ ಬ್ಯಾಟ್. ಒಬ್ಬ ಬೌಲಿಂಗ್ ಮಾಡುವುದು, ಬ್ಯಾಟ್ ಹಿಡಿದವ ಬ್ಯಾಟ್ ಬೀಸುವುದು ಇಷ್ಟೇ ಗೊತ್ತಿತ್ತು.

ನಮ್ಮ ಶಾಲೆಯಿಂದ ಮನೆಗೆ ಬರುವ ಮಣ್ಣಿನ ರಸ್ತೆಯಲ್ಲಿ ಆಗ ಓಡಾಡುತ್ತಿದ್ದುದು ಎತ್ತಿನ ಗಾಡಿ ಮಾತ್ರ. ಎತ್ತಿನ ಗಾಡಿಯವ ನಮ್ಮನ್ನು ಮನೆ ತನಕ ಡ್ರಾಪ್ ಕೊಡುತ್ತಿದ್ದ. ಎತ್ತಿನ ಗಾಡಿಯಲ್ಲಿ ಪ್ರಯಾಣಿಸುವುದೇ ಭಿನ್ನ ಅನುಭವ. ಅದು ಖಾಲಿ ಗಾಡಿಯಾದರೆ ಇನ್ನೂ ಭಯ. ಅದು ಅಲುಗಾಡುವಾಗ ಎತ್ತಿ ಎಸೆದಂತೆ ಅನುಭವವಾಗುತ್ತಿತ್ತು. ಅದರ ದೊಡ್ಡ ದೊಡ್ಡ ಮರದ ಗಾಲಿಗಳು ನೋಡಲು ಭಯಂಕರ ವಾಹನ ಎಂಬ ಕಲ್ಪನೆ ನಮಗೆ. ಎತ್ತಿನ ಗಾಡಿಗೆ ಏರೋದು ಇಳಿಯೋದು ಸಾಹಸವೇ ಸರಿ. ನನ್ನ ಮಗ ಚಿಕ್ಕವನಿರುವಾಗ ನಾವು ಕೊಡಗಿನ ಕಾವೇರಿ ನಿಸರ್ಗಧಾಮದಲ್ಲಿ ಆನೆ ಸವಾರಿ ಮಾಡಿದಾಗ ಆ ದಿನಗಳು ನೆನಪಾಗಿತ್ತು. ಒಮ್ಮೆ ಆನೆ ಮೇಲಿಂದ ಇಳಿದರೆ ಸಾಕು ಎನ್ನುವಂತಾಗಿತ್ತು. ಆ ಓಲಾಟ ಬೇಡವೇ ಬೇಡ ಅನ್ನಿಸಿತ್ತು.

ನಾನು ಮೂರನೇ ತರಗತಿಯಲ್ಲಿರುವಾಗ ಐದನೇ ತರಗತಿಯ ಶೆಟ್ಟರ ಹುಡುಗನೊಬ್ಬ ನನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಅದು ಪ್ರೇಮ ನಿವೇದನೆ ಅಂತ ನನಗೆ ಗೊತ್ತಾದದ್ದು ತುಂಬಾ ವರುಷಗಳ ನಂತರ. ಒಮ್ಮೆ ಶಾಲೆಯಲ್ಲಿ ಆಟವಾಡುತ್ತಿರುವಾಗ ನನ್ನ ಬೆರಳುಗಳು ಬಾಗಿಲ ಮಧ್ಯೆ ಸಿಕ್ಕಿ ನಾನು ಅಳುತ್ತಿರುವಾಗ ಓಡಿ ಬಂದ ಆತ ‘ನನಗಾಗಿ ಅಳಬೇಡ’ ಎಂದು ಬೇಡಿಕೊಂಡಿದ್ದ. ನಾನು ಐದನೇ ತರಗತಿಯಲ್ಲಿರುವಾಗ ಆ ಊರು ಬಿಟ್ಟ ನಂತರ ಆತನನ್ನು ನೋಡಿಲ್ಲ. ಆತ ಶ್ರೀಮಂತರ ಹುಡುಗ ಎಂದಷ್ಟೇ ನನಗೆ ತಿಳಿದಿತ್ತು. ನಂತರ ಮುಂಬೈ ಸೇರಿದ ಆತ ಸದ್ಯ ಅಲ್ಲಿನ ಮೋಸ್ಟ್ ವಾಂಟೆಡ್ ರೌಡಿ ಎಂಬುದು ಇತ್ತೀಚೆಗೆ ನನಗೆ ತಿಳಿದು ತುಂಬ ಬೇಸರವಾಯಿತು.

****

ನಾನು ಪದವಿ ಓದಲೆಂದು ಸುಳ್ಯದ ನೆಹರೂ ಸ್ಮಾರಕ ಪದವಿ ಕಾಲೇಜಿಗೆ ಸೇರಿದ ದಿನಗಳವು. ವಳಲಂಬೆಯ ನಮ್ಮ ಮನೆಯಿಂದ ಇಪ್ಪತ್ತೈದು ಕಿಲೋಮೀಟರ್ ದೂರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಸರ್ಕಾರಿ ಬಸ್ ಪಾಸು ಇದ್ದರೂ ನಮ್ಮ ಸಮಯಕ್ಕೆ ಬಸ್ ಗಳು ಕಡಿಮೆ ಇದ್ದವು. ಅಲ್ಲದೆ ಮನೆಯಿಂದ ಗದ್ದೆ ದಾಟಿ ಹಳ್ಳಿ ರಸ್ತೆಯಲ್ಲಿ ಒಂದು ಕಿಲೋಮೀಟರ್ ನಡೆದು ಬಸ್ ಏರಬೇಕಾಗಿತ್ತು. ಆ ಬಸ್ ತಪ್ಪಿದರೆ ಕಾಲೇಜಿಗೆ ತಡವಾಗುತ್ತಿತ್ತು. ನಾನಾಗ ಕವಿತೆ ಬರೆಯತೊಡಗಿದ್ದೆ. ಸುಳ್ಯದ ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ನನ್ನ ಕವಿತೆಗಳು ಪ್ರಕಟವಾಗುತ್ತಿದ್ದವು. ಕವಿತೆ ಬರೆದು ಕಳುಹಿಸುತ್ತಿದ್ದ ನನಗೆ ಕವಿತೆ ಪ್ರಕಟಗೊಂಡ ನಂತರ ಮುಜುಗರವಾಗುತ್ತಿತ್ತು. ಆ ದಿನಗಳಲ್ಲಿ ಲೆಕ್ಚರರ್ ಮತ್ತು ಸ್ನೇಹಿತರ ಕಣ್ಣು ತಪ್ಪಿಸಿ ಓಡಾಡುತ್ತಿದ್ದೆ. ಈಗಲೂ ಯಾರಾದರೂ ನನ್ನ ಕವಿತೆ ಬಗ್ಗೆ ಮಾತೆತ್ತಿದರೆ ನಾನು ಬೇಗ ಜಾಗ ಖಾಲಿ ಮಾಡುತ್ತೇನೆ. ನಾನು ಕವಿ ಎಂದು ತಿಳಿದ ನಂತರ ಕಾಲೇಜಿನ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ ನನಗೆ ವಿಶೇಷ ಗೌರವ ಸಿಗುತ್ತಿತ್ತು. ಕೆಲವೊಮ್ಮೆ ವಿಚಿತ್ರವಾಗಿ ನೋಡುತ್ತಿದ್ದಾರೆ ಅಂತಲೂ ಅನ್ನಿಸುತ್ತಿತ್ತು.

ಆಗಲೇ ಕಾಲೇಜಿಗೆ ರಾಜಕೀಯ ಪ್ರವೇಶವಾಗಿತ್ತು. ಕಾಲೇಜು ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಎಬಿವಿಪಿ ಮತ್ತು ಎನ್.ಎಸ್.ಯು.ಐ ಸಂಘಟನೆಗಳಿಂದ ಚುನಾವಣಾ ಪ್ರಚಾರ ಎಲ್ಲವೂ ನಡೆಯುತ್ತಿತ್ತು. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ಹೊಡೆದಾಟ, ಬಡಿದಾಟ, ಪೊಲೀಸ್ ಕೇಸು ಎಲ್ಲವೂ ಇತ್ತು. ಕಾಲೇಜು ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ನಾಯಕರು, ಕಾರ್ಯಕರ್ತರು ಕಾಲೇಜು ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿದ್ದರು. ಚುನಾವಣೆಯಲ್ಲಿ ವಿಜೇತರಾದವರ ಮೆರವಣಿಗೆ ಸುಳ್ಯ ಪೇಟೆಯುದ್ದಕ್ಕೂ ಸಾಗಿ ವಿಜಯೋತ್ಸವ ನಡೆಯುತ್ತಿತ್ತು.

ನಾನು ಅಂತಿಮ ವರ್ಷದ ಪದವಿಯಲ್ಲಿರುವಾಗ ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದಿದ್ದರೂ ನನ್ನನ್ನು ಒಂದು ಗುಂಪಿನವರು ತಮ್ಮ ಪರವಾಗಿ ಕಾಲೇಜು ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು. ಕಾರಣ ನಾನು ಕವಿ ಎಂಬುದು. ನನ್ನನ್ನು ಚುನಾವಣೆಗೆ ನಿಲ್ಲಿಸಿ ಯಾವುದೇ ಗುಂಪಿಗೂ ಸೇರದ ಕಾಲೇಜಿನ ಅರ್ಧದಷ್ಟು ವಿದ್ಯಾರ್ಥಿಗಳ ಓಟು ಪಡೆಯುವ ಆಲೋಚನೆ ಅವರದ್ದು. ನಾನು ಮಾತ್ರ ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡಿದ್ದೆ. ಪದವಿಯಲ್ಲಿದ್ದಾಗ ನನ್ನ ಸಹಪಾಠಿಯಾಗಿದ್ದವನು ಕನ್ನಡ ಚಲನಚಿತ್ರ ನಟ, ನಿರ್ದೇಶಕ ಶಿವಧ್ವಜ್. ಆತ ನಮ್ಮ ಕಾಲೇಜು ಯೂನಿಯನ್ ಪ್ರೆಸಿಡೆಂಟ್ ಆಗಿದ್ದ. ನನಗೆ ಈ ರಾಜಕೀಯ ಗುಂಪುಗಳ ಬಗ್ಗೆ ಅರಿವೇ ಇರಲಿಲ್ಲ. ಶಿವಧ್ವಜ್ ಗುಂಪಿನಲ್ಲಿ ನಾವೆಲ್ಲ ಸೇರಿಕೊಂಡಿದ್ದೆವು. ಆತ ಒಳ್ಳೆಯ ನೃತ್ಯಪಟು ಕೂಡಾ. ಕಾಲೇಜು ಡೇಗಳಲ್ಲಿ ಹಿಂದಿ ಸಿನಿಮಾ ಹಾಡುಗಳಿಗೆ ಚೆನ್ನಾಗಿ ನೃತ್ಯ ಮಾಡುತ್ತಿದ್ದ. ಶಿವಪ್ರಸಾದ್ ಅವನ ಆಗಿನ ನಾಮಧೇಯ.

ಕಾಲೇಜಿನ ದಿನಗಳಲ್ಲಿ ನಾನು ಓದಿದ್ದಕ್ಕಿಂತ ಕವಿತೆ ಬರೆದದ್ದೇ ಹೆಚ್ಚು. ಓದಲೆಂದು ಕೋಣೆಯ ಬಾಗಿಲು ಹಾಕಿಕೊಂಡು ದೀಪದ ಬೆಳಕಿನಲ್ಲಿ ಕುಳಿತು ರಾತ್ರಿ ಇಡೀ ಕವಿತೆ ಗೀಚುತ್ತಿದ್ದೆ. ಅದು ಯಾರ ಕೈಗೂ ಸಿಗದಂತೆ ಇಡುತ್ತಿದ್ದೆ. ನನ್ನ ಅಣ್ಣಂದಿರಿಬ್ಬರ ಕವಿತೆಗಳು ಆಗಾಗ ಪ್ರಕಟವಾಗುತ್ತಿತ್ತು. ನಾನು ಕವಿತೆ ಬರೆವ ವಿಚಾರ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ನನ್ನ ಮೊದಲ ಕವಿತೆ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ನಾನು ಕವಿತೆ ಬರೆಯಬಲ್ಲೆ ಎಂದು ಯಾರೂ ಊಹಿಸಿರಲಿಲ್ಲ. ಅಷ್ಟೊಂದು ಅಂತರ್ಮುಖಿಯಾಗಿದ್ದೆ.

ಹೇಮಾ ನೆನಪುಗಳು: ನೆನಪಿನ ದೀಪಾವಳಿ

ಮತ್ತೆ ದೀಪಾವಳಿ ಬಂದಿದೆ. ಬಾಲ್ಯದ ದೀಪಾವಳಿಗೂ ಈ ದೀಪಾವಳಿಗೂ ಅಜಗಜಾಂತರವಿದೆ. ಈಗ ಆಚರಣೆಗಳಲ್ಲಿ ಕೃತಕತೆ ಮತ್ತು ಅದ್ದೂರಿತನ ಮಾತ್ರ ಕಾಣಿಸುತ್ತದೆ. ಹಿಂದೆ ಹಬ್ಬ ಸಮೀಪಿಸುತ್ತಿದ್ದಂತೆ ಮನೆಗಳಲ್ಲಿ ಹೆಂಗಸರೆಲ್ಲ ಸೇರಿ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದರು. ಹಬ್ಬದಡುಗೆಗೆ ಸಿದ್ಧರಾಗುವುದೇ ಸಂಭ್ರಮವಾಗಿತ್ತು. ದೀಪಾವಳಿಗೆ ಒಂದು ವಾರವಿರುವಾಗಲೇ ತಯಾರಿ ನಡೆಯುತ್ತಿತ್ತು. ಈಗ ಎಲ್ಲವನ್ನೂ ಕೊಂಡುತಂದು ತಿನ್ನುವುದು ರೂಢಿ. ನನಗೆ ನೆನಪಿರುವಂತೆ ದೀಪಾವಳಿಗೆ ನಮಗೆಲ್ಲ ಹೊಸ ಬಟ್ಟೆ ಕೊಡಿಸುವ ಸಂಪ್ರದಾಯ ನಮ್ಮ ಮನೆಯಲ್ಲಿ ಇರಲಿಲ್ಲ. ನಮ್ಮ ಸುತ್ತ ಮುತ್ತಲಿನ ಮನೆಗಳಲ್ಲೂ ನಾನು ನೋಡಿಲ್ಲ. ಆದರೆ ಆಚರಣೆ, ಭೋಜನ ಭರ್ಜರಿಯಾಗೇ ಇರುತ್ತಿತ್ತು.

ನಮ್ಮ ಮನೆಯಲ್ಲಿ ನರಕಚತುರ್ದಶಿಯ ಹಿಂದಿನ ರಾತ್ರಿ ಬಚ್ಚಲ ಮನೆಯನ್ನು ಶುಚಿ ಮಾಡಿ ಹಂಡೆ ತುಂಬ ನೀರು ತುಂಬಿಸಿ ಹಂಡೆಯ ಕಂಠಕ್ಕೆ ಹೂವಿನ ಹಾರ ಹಾಕುತ್ತಿದ್ದೆವು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಒಲೆ ಹಚ್ಚಿ ಹಂಡೆ ನೀರು ಬಿಸಿಯಾಗುವ ಮುಂಚೆಯೇ ಮಕ್ಕಳನ್ನೆಲ್ಲ ಕೂರಿಸಿ ಅಪ್ಪ ತಲೆಯಿಂದ ಕಾಲಿನವರೆಗೂ ಎಣ್ಣೆ ಹಚ್ಚುತ್ತಿದ್ದರು. ನಾವೆಲ್ಲ ಬಚ್ಚಲಲ್ಲಿ ಒಲೆ ಮುಂದೆ ಕೂತಿರುತ್ತಿದ್ದೆವು. ನೀರು ಬಿಸಿಯಾದ ಕೂಡಲೇ ಒಬ್ಬೊಬ್ಬರನ್ನೇ ಸ್ನಾನ ಮಾಡಿಸುತ್ತಿದ್ದರು. ಎಣ್ಣೆ ಸ್ನಾನ ವರ್ಷಕ್ಕೊಮ್ಮೆ ಮಾತ್ರ ಮಾಡುತ್ತಿದ್ದುದರಿಂದ ಅಂದು ಏನೋ ಉಲ್ಲಾಸ. ಈ ಉಲ್ಲಾಸ ಹಬ್ಬದ ಮೂರೂ ದಿನವೂ ಇರುತ್ತಿತ್ತು.

ಕೃಷಿಕರ ಬದುಕಿಗೆ ತೀರಾ ಹತ್ತಿರವಿರುವ ಹಬ್ಬ ದೀಪಾವಳಿ. ಕೊಯ್ಲು ಮುಗಿದು ಭತ್ತದ ಕಣಜ ಮನೆ ತುಂಬಿಕೊಂಡು ರೈತರು ನಿರಾಳವಾಗಿರುವ ದಿನಗಳಲ್ಲಿ ಬರುವ ದೀಪಾವಳಿ ಸಮೃದ್ಧಿಯ ಹಬ್ಬವೂ ಹೌದು.  ಭೂಮಿ ಪುತ್ರ ಬಲಿಯೇಂದ್ರ ಜನಪದರ ಪ್ರಮುಖ ಆರಾಧ್ಯ ದೈವ. ವಾಮನನ ಕುತಂತ್ರದಿಂದ ಪಾತಾಳಕ್ಕೆ ತುಳಿಯಲ್ಪಟ್ಟ ಬಲಿ ಚಕ್ರವರ್ತಿ ದೀಪಾವಳಿಯ ಮೂರು ದಿನಗಳಲ್ಲಿ ಭೂಲೋಕಕ್ಕೆ ಬರುತ್ತಾನೆ. ಹೀಗೆ ಬಂದ ಬಲಿಯೇಂದ್ರ ಭೂಲೋಕದ ಸಮಸ್ತರಿಗೆ  ಸನ್ಮಂಗಳವನ್ನುಂಟು ಮಾಡುತ್ತಾನೆ. ಮಾತ್ರವಲ್ಲ ಜಾನುವಾರುಗಳಿಗೆ ರೋಗರುಜಿನಗಳು ಬಾರದಂತೆ ಪಡೆಯುತ್ತಾನೆ ಎಂಬುದು ಜನಪದರ ನಂಬಿಕೆ.

ಬಲಿಯೇಂದ್ರನ ಕಲ್ಪನೆಗೆ ಮೂರ್ತ ರೂಪಕೊಟ್ಟು ಆರಾಧಿಸುವ ಸಂಪ್ರದಾಯವೊಂದು ದಕ್ಷಿಣಕನ್ನಡದಲ್ಲಿ ಕಾಣಬಹುದು. ಕೃಷಿಯೇ ಮೂಲ ಕಸುಬಾಗಿರುವ  ಇವರು ಭಕ್ತಿಯಿಂದ, ನಿಷ್ಠೆಯಿಂದ ಬಲಿಯೇಂದ್ರ ಪೂಜೆಯನ್ನು ಮಾಡುತ್ತಾರೆ.

ದೀಪಾವಳಿಯ ಎರಡನೇ ದಿನ ಹಾಲೆಮರದ 2 ಕೊಂಬೆಗಳನ್ನು ತುಳಸಿ ಕಟ್ಟೆಯ ಪಕ್ಕದಲ್ಲಿ ನೆಡುತ್ತಾರೆ. ಆ ಎರಡು ಕೊಂಬೆಗಳ ಮಧ್ಯೆ ಬಿದಿರಿನ ಕೋಲಿನಿಂದ ಹೆಣಿಗೆ ಮಾಡುತ್ತಾರೆ. ತಲೆಯ ಭಾಗಕ್ಕೆ ತ್ರಿಕೋನಾಕಾರರ ಮರದ ಕಿರೀಟದಂತೆ ಇಡುತ್ತಾರೆ. ನಂತರ ಹೂವಿನ ಅಲಂಕಾರ  ಅನೇಕ ಬಗೆಯ ಕಾಡು ಹೂಗಳ ಸಮೇತ ಶೃಂಗರಿಸುವುದು ಬಲಿಯೇಂದ್ರ ಪೂಜೆಯ ವಿಶೇಷ. ಚೆಂಡು ಹೂವಿನ ಮಾಲೆ ಪ್ರಮುಖವಾದರೆ, ಆಡುಸೋಗೆ ಹೂ, ಸೀತೆ ಹೂ, ಅಂಬಳಕಾಯಿಯ ಮಾಲೆ, ಪೊಲಿ ಬಳ್ಳಿ, ಪಾರೆಹೂ ರಥ ಹೂ ಮುಂತಾದ ಕಾಡು ಹೂ, ಕಾಯಿಗಳಿಂದ ಬಲಿಯೇಂದ್ರನನ್ನು ಶೃಂಗರಿಸಲಾಗುತ್ತದೆ. ಈ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೂ ಸಂಗ್ರಹಿಸುವ ಮತ್ತು ಮಾಲೆ ಮಾಡುವ ಸಂಭ್ರಮ. ಇಡೀ ಹೂವಿನ ಹಾರಗಳಿಂದ ಶೃಂಗಾರಗೊಂಡ ಬಲಿಯೇಂದ್ರ ತಿರುಪತಿ ದೇವರ ವಿಗ್ರಹದಂತೆ ಕಾಣುತ್ತಾನೆ.

ಸಂಜೆಯಾಗುತ್ತಿದ್ದಂತೆ ಮನೆಯ ಹಿರಿಯರು, ಮನೆಯವರೆಲ್ಲ ಸೇರುತ್ತಾರೆ. ಬಲಿಯೇಂದ್ರನ ಮುಂದೆ ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ಎಲೆ ಅಡಿಕೆಗಳನ್ನು ಇಟ್ಟು ಪಕ್ಕದಲ್ಲಿ ದೀಪ ಹಚ್ಚಿ ಮನೆ ಮಂದಿ ಮತ್ತು ನೆಂಟರಿಷ್ಟರೆಲ್ಲ ಸೇರಿ ‘ಹರಿಹರಿ ಬಲಿಯೇಂದ್ರ ಸಿರಿಸಿರಿ ಬಲಿಯೇಂದ್ರ. ಆ ಊರಿನ ಪೊಲಿ ತೆಗೆದುಕೊಂಡು ಬಂದು, ಈ ಊರಿನ ತೆಗೆದುಕೊಂಡು ಹೋಗು’ ಎಂದು ಹೇಳಿ ಪ್ರಾರ್ಥಿಸುತ್ತಾರೆ.

ಮರುದಿನ ಬೆಳಿಗ್ಗೆ ಬಲಿಯೇಂದ್ರ ಮರವನ್ನು ಕಿತ್ತು ಹರಿವ ನೀರಿನ ತೋಡಿನ ಬದಿಯಲ್ಲಿ ಹಾಕುತ್ತಾರೆ. ಈ ರೀತಿ ಆರಾಧನೆಗೊಂಡ ಬಲಿಯೇಂದ್ರ ಮುಂದಿನ ಇಡೀ ವರ್ಷ ತಮ್ಮ ಬೆಳೆಗಳನ್ನು ಕಾಪಾಡುತ್ತಾನೆ ಎಂಬುದು ನಂಬಿಕೆ.

ಇಲ್ಲಿ ಬಲಿಯೇಂದ್ರನ ಆಕೃತಿಯನ್ನು ರಚಿಸಿ ಅಲಂಕರಿಸುವ ರೀತಿಯೂ ಕೃಷಿಕರು ನಿಸರ್ಗದೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ. ಕಾಡು ಹೂ ಕಾಯಿಗಳನ್ನು ತಂದು ಅದರಿಂದ ಮಾಡಿದ ಮಾಲೆಯಿಂದ ಬಲಿಯೇಂದ್ರನನ್ನು ಅಲಂಕರಿಸುತ್ತಾರೆ. ಇಡೀ ಹೂವಿನಿಂದ ಅಲಂಕರಿಸಿದ ಬಲಿಯೇಂದ್ರ ದೊಡ್ಡ ದೇವರ ಮೂರ್ತಿಯಂತೆ ಕಾಣುತ್ತದೆ.

ಹೀಗೆ ಬಲಿಯೇಂದ್ರನನ್ನು ಆರಾಧಿಸುವುದರಿಂದ ಬೆಳೆ ಚೆನ್ನಾಗಿ ಆಗುತ್ತದೆ. ಜಾನುವಾರುಗಳಿಗೆ ರೋಗರುಜಿನಗಳು ಬಾರದಂತೆ ಕಾಯುತ್ತಾನೆ ಎಂಬುದು ಜನರ ನಂಬಿಕೆ. ನಂಬಿಕೆಗಳು ಏನೇ ಇರಲಿ ಇವರ ಎಲ್ಲ ಆಚರಣೆಗಳು ನಿಸರ್ಗ ಸ್ನೇಹಿ ಎಂಬುದು ಗಮನಾರ್ಹ ಅಂಶ.

***

ವೆಂಕಟ್ ದೀಪಗಳಲ್ಲೇ ಸಂಭ್ರಮಪಡುತ್ತಿದ್ದರು. ಈ ಪಟಾಕಿ ಸುಡುವ ಹುಚ್ಚು ಅವರಿಗೆ ಇರಲಿಲ್ಲ. ಅದಕ್ಕೆ ತುಂಬ ಭಯಪಡುತ್ತಿದ್ದರು. ಹಾಗೆ ನೋಡಿದರೆ ನನಗೇ ಇಂತಹ ಹುಚ್ಚು ಸ್ವಲ್ಪ ಜಾಸ್ತಿ. ಒಮ್ಮೆ ನಟ್ಟ ನಡು ಮಧ್ಯಾಹ್ನ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದರೆ ಒಬ್ಬಳೇ ಮನೆ ಹಿಂಬದಿ ಲಕ್ಷ್ಮೀ ಪಟಾಕಿ ಸುಡಲು ಹೋಗಿ, ಅದು ಕೈಯಲ್ಲೇ ಸುಟ್ಟಿತ್ತು. ನಂತರ ಆ ಸಾಹಸಕ್ಕೆ ಹೋಗಿಲ್ಲ. ಈಗಲೂ ಉದ್ದದೊಂದು ಕೋಲಿಗೆ ಊದುಕಡ್ಡಿ ಸಿಕ್ಕಿಸಿ ದೂರದಿಂದಲೇ ಪಟಾಕಿ ಸುಡುತ್ತೇನೆ.

ಅವಲಕ್ಕಿ ಹಾಕುವುದು : ದೀಪಾವಳಿಯ ದಿನ ನಾವು ಮಾತ್ರ ಹಬ್ಬದೂಟ ಮಾಡುವುದಲ್ಲ ದೈವ ದೇವರುಗಳಿಗೆ, ಸತ್ತ ಹಿರಿಯರಿಗೂ ಬಡಿಸುವುದು ಉದಾತ್ತವಾದ ಸಂಸ್ಕೃತಿಯ ಪ್ರತೀಕ. ಸತ್ತ ಹಿರಿಯರನ್ನು ನೆನೆಯುವುದು ಸಾಮಾನ್ಯವಾಗಿ ಬೇರೆ ಜಾತಿಗಳಲ್ಲಿಯೂ ಕಾಣಬಹುದು. ಆದರೆ ಅವಲಕ್ಕಿ ಹಾಕುವ ಕಾರ್ಯಕ್ರಮ ದಕ್ಷಿಣಕನ್ನಡದ ಗೌಡರಲ್ಲಿ ಮಾತ್ರ ಕಾಣಬಹುದು.

ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಸತ್ತ ಒಂದು ವರ್ಷದವರೆಗೆ ಕುಟುಂಬದವರು ಯಾವುದೇ ಹಬ್ಬಗಳನ್ನು ಆಚರಿಸುವುದಿಲ್ಲ. ಅದು ಆ ವ್ಯಕ್ತಿಗೆ ಕೊಡುವ ಗೌರವ. ಆದರೆ ದೀಪಾವಳಿಯ ದಿನ (ಮೊದಲ ದೀಪಾವಳಿ) ಅವಲಕ್ಕಿ ಹಾಕುವ ಕಾರ್ಯಕ್ರಮವಿರುತ್ತದೆ. ಅದು ಹೆಂಗಸರಿಗಾದರೆ ಪಾಡ್ಯದ ದಿನ, ಗಂಡಸರಿಗಾದರೆ ಅಮವಾಸ್ಯೆ ದಿನ. ಆ ನಂತರ ಯಾವುದೇ ಆಚರಣೆಗೆ ನಿಷೇಧವಿಲ್ಲ.

ಅಂದು ಮುಂಜಾನೆ 4 ಗಂಟೆಯ ಹೊತ್ತಿಗೆ, ಅಂದರೆ ಸೂರ್ಯೋದಯವಾಗುವ ಮುಂಚೆಯೇ ಮನೆಯ ಮುಖ್ಯ ಸ್ಥಳದಲ್ಲಿ ಸತ್ತ ವ್ಯಕ್ತಿಯ ಬಟ್ಟೆ ಬರೆಗಳನ್ನು ಮಣೆಯ ಮೇಲೆ ಜೋಡಿಸಿಡಲಾಗುತ್ತದೆ. ನಂತರ ಬಾಳೆ ಎಲೆಯಲ್ಲಿ ಅವಲಕ್ಕಿ ಬಾಳೆ ಹಣ್ಣು, ಬೆಲ್ಲ ಬಡಿಸುತ್ತಾರೆ. ಅಂದು  ಕುಟುಂಬದವರು ನೆಂಟರಿಷ್ಟರು ಊರಿನವರೆಲ್ಲರೂ ಅವಲಕ್ಕಿ, ಬೆಲ್ಲ, ಬಾಳೆಹಣ್ಣು ತಂದು ಸತ್ತ ವ್ಯಕ್ತಿಗೆ ಅರ್ಪಿಸುತ್ತಾರೆ.

ಈ ಬಾರಿ ನ.7ಕ್ಕೆ ವೆಂಕಟ್ ನೆನಪಿನಲ್ಲಿ ಅವಲಕ್ಕಿ ಹಾಕುವ ಕಾರ್ಯಕ್ರಮವಿದೆ. ಅಂದೇ ಮಗ ನೇಸರನ ಹುಟ್ಟುಹಬ್ಬ. ಆದರೆ ನನಗ್ಯಾಕೋ ಊರಿಗೆ ಹೋಗಲು ಮನಸಾಗುತ್ತಿಲ್ಲ. ಸತ್ತವರಿಗೆ ಮಾಡುವ ಕ್ರಿಯೆಗಳನ್ನೆಲ್ಲ ನನ್ನ ವೆಂಕಟ್ ಗೆ ಮಾಡಲು ಹಿಂಸೆ ಎನಿಸುತ್ತದೆ. ಅವರಿಲ್ಲ ಎಂಬುದನ್ನು ಮನಸಿನ್ನೂ ಒಪ್ಪುತ್ತಿಲ್ಲ. ಹೋಗದಿದ್ದರೆ ಅದಕ್ಕೆ ವಿಪರೀತ ಅರ್ಥಗಳೆಲ್ಲ ಹುಟ್ಟಿಕೊಳ್ಳುತ್ತದೆ.

ಹೇಮಾ ನೆನಪುಗಳು:ಉರಿವ ಒಲೆ ಮುಂದೆ ಕೂತು ಬೇಯುತ್ತಿದ್ದ ಅಮ್ಮ

ನನ್ನಮ್ಮನಿಗೆ ನಾಲ್ಕು ಜನ ಅಣ್ಣಂದಿರು, ನಾಲ್ಕುಜನ ಅಕ್ಕಂದಿರು. ಅಮ್ಮನೂ ಒಂಭತ್ತು ಮಕ್ಕಳನ್ನು ಹೆತ್ತವರು. ಅಮ್ಮ ಒಂದನೇ ತರಗತಿಯಲ್ಲಿರುವಾಗಲೇ ನನ್ನಜ್ಜಿ ತೀರಿಹೋದ ಕಾರಣ ಶಾಲೆ ಬಿಡಿಸಿದರಂತೆ ನಂತರ ಅಕ್ಕ-ಅಣ್ಣಂದಿರ ನಡುವೆ ಬೆಳೆದ ಅಮ್ಮ ಬಾಲ್ಯದಲ್ಲಿಯೇ ಗದ್ದೆ ಕೆಲಸ, ಮನೆಕೆಲಸಗಳನ್ನು ಕಲಿತಾಕೆ. ಅಮ್ಮನ ವಯಸ್ಸು ಎಷ್ಟು ಎಂದು ನಮಗೂ ಗೊತ್ತಿಲ್ಲ. ಅಮ್ಮನಿಗೂ ಗೊತ್ತಿಲ್ಲ. ಅವರ ಓರಗೆಯವರ ವಯಸ್ಸು ತಿಳಿದುಕೊಂಡು ಹೇಳುವುದಾದರೆ ಅಮ್ಮನಿಗೆ ಎಪ್ಪತ್ತೈದು ವರ್ಷ ದಾಟಿದೆ. ಆರೋಗ್ಯವಂತರು. ಹಲ್ಲುಗಳೆಲ್ಲ ಸವೆದರೂ ಉದುರಿಲ್ಲ. ಕೂದಲು ಮುಕ್ಕಾಲು ಭಾಗ ಬೆಳ್ಳಗಾಗಿದೆ. ಈಗ್ಯೆ ನಾಲ್ಕು ವರ್ಷಗಳವರೆಗೂ ಅಮ್ಮ ತೋಟ ಮನೆ ನೋಡಿಕೊಳ್ಳುತ್ತಾ ಒಂಟಿಯಾಗಿದ್ದರು. ಅಮ್ಮ ಜ್ವರ ಅಥವಾ ಯಾವುದಾದರೂ ಕಾಯಿಲೆಯ ಕಾರಣಕ್ಕೆ ಮಲಗಿದ್ದೇ ಇಲ್ಲ. ಇತ್ತೀಚೆಗೆ ಸ್ವಲ್ಪ ಸಕ್ಕರೆ ಕಾಯಿಲೆ ಶುರುವಾಗಿದೆ. ಈ ಕಾರಣಕ್ಕೇ ಅಮ್ಮ ಸುಳ್ಯ ಪೇಟೆಯಲ್ಲಿ ಅಣ್ಣನ ಜೊತೆಗಿದ್ದಾರೆ. ಕಣ್ಣಿನ ದೃಷ್ಟಿ ಸ್ವಲ್ಪ ಮಂಕಾಗಿದೆ. ಅದು ಬಿಟ್ಟರೆ ಅಮ್ಮ ಅದೇ ಇಪ್ಪತ್ತು ಮುವ್ವತ್ತು ವರ್ಷದ ಹಿಂದಿನ ಅಮ್ಮನೇ ಆಗಿದ್ದಾರೆ. ವಯಸ್ಸಾದರೂ ಬೆಳಿಗ್ಗೆ ಆರು ಗಂಟೆಯ ನಂತರ ಮಲಗಿರಲ್ಲ. ತರಕಾರಿ ಬೆಳೆಸೋದು, ಅಡುಗೆ ಮಾಡೋದು, ಮಕ್ಕಳು ಹಬ್ಬಕ್ಕೆ ಬರುತ್ತಾರೆಂದು ಮೊದಲೇ ಚಕ್ಕುಲಿ ಮಾಡಿಡುತ್ತಾರೆ. ಪೇಟೆಯಲ್ಲಿ ಸಿಗದ ತಿನಿಸುಗಳನ್ನೇ ಮಾಡುತ್ತಾರೆ. ಸದಾ ಓಡಾಡುತ್ತಾ ಇರುತ್ತಾರೆ.

ನಾವೆಲ್ಲ ಚಿಕ್ಕವರಿದ್ದಾಗ ಅಮ್ಮನಿಗೆ ಕೆಲವು ಸಲ ರಾತ್ರಿ ಮಲಗಿದಲ್ಲೇ ಫಿಟ್ಸ್ ಕಾಯಿಲೆ ತರ ಏನೋ ಆಗಿ ನಾಲಿಗೆ ಕಚ್ಚಿಕೊಳ್ಳುತ್ತಿದ್ದರು. ಅಮ್ಮನ ಜೊತೆಗೆ ಮಲಗಿದ್ದ ನಮಗೆ ಅವರ ಸೆಟೆದುಕೊಂಡ ಕಾಲು ಮತ್ತು ನರಳಿಕೆಯಿಂದ ಗೊತ್ತಾಗುತ್ತಿತ್ತು. ನಾವೆಲ್ಲ ಎದ್ದು ಕುಳಿತು ಜೋರಾಗಿ ಅಳುತ್ತಿದ್ದೆವು ನನ್ನ ಅಕ್ಕ ಮತ್ತು ಹಿರಿಯ ಅಣ್ಣಂದಿರು ಉಪಚರಿಸುತ್ತಿದ್ದರು. ಕೆಲವೇ ನಿಮಿಷಕ್ಕೆ ಅದು ಸರಿಹೋಗುತ್ತಿತ್ತು. ಅಮ್ಮನ ನಾಲಿಗೆ ಹಲ್ಲುಗಳ ಮಧ್ಯೆ ಸಿಕ್ಕಿ ತುಂಡಾಗಬಹುದೆಂಬ ಭಯಕ್ಕೆ ಅಮ್ಮನ ಹಲ್ಲುಗಳ ಮಧ್ಯೆ ಮರದ ಸೌಟನ್ನು ಇಡುತ್ತಿದ್ದರು. ಅಮ್ಮನ ಕೈಕಾಲುಗಳೆಲ್ಲ ಸೆಟೆದುಕೊಂಡು ಕಂಬದಂತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಎಚ್ಚರವಾದಾಗ ಅಮ್ಮನಿಗೆ ಏನಾಗಿತ್ತೆಂದು ಗೊತ್ತೇ ಇರುತ್ತಿರಲಿಲ್ಲ. ನಾಲಿಗೆ ಕಚ್ಚಿಕೊಂಡು ದಪ್ಪವಾಗಿರುತ್ತಿತ್ತು. ಇದರಿಂದ ಮಾತ್ರ ಅಮ್ಮನಿಗೆ ಏನೋ ಆಗಿತ್ತು ಎಂದು ಗೊತ್ತಾಗುತ್ತಿತ್ತು. ನಂತರ ವೈದ್ಯರು ಕೊಟ್ಟ ಮಾತ್ರೆಯಲ್ಲೇ ಅದು ಹತೋಟಿಗೆ ಬಂತು. ಆ ನಂತರ ಹಾಗಾಗಿದ್ದೇ ಇಲ್ಲ. ಆ ಕಾಲದಲ್ಲಿ ಬೇರೆಯವರಾದರೆ ಮಾಟ, ಮಂತ್ರ, ತಾಯಿತ ಎಂದು ಓಡಾಡುತ್ತಿದ್ದರೇನೋ. ಯಾಕೆಂದರೆ ಈಗಲೂ ಮೂಢನಂಬಿಕೆಗೆ ಬಲಿಯಾದ ಜನ ನಮ್ಮ ಸುತ್ತ ಇದ್ದಾರೆ. ಇತ್ತೀಚೆಗೆ ವಿಧಾನ ಸೌಧದ ಸುತ್ತಮುತ್ತ ಇದರದೇ ಸದ್ದು.

ಅಮ್ಮ ಯಾವ ಆದರ್ಶಗಳನ್ನೂ ಆಡುತ್ತಿರಲಿಲ್ಲ. ಆದರ್ಶವಾಗಿ ನಡೆದುಕೊಳ್ಳುತ್ತಿದ್ದರು. ಅಕ್ಕಪಕ್ಕದವರೊಂದಿಗೆ ಜಗಳ ಮುನಿಸು, ಚಾಡಿ ಮಾತು, ಹೊಟ್ಟೆಕಿಚ್ಚು ಇವ್ಯಾವುದೂ ಅಮ್ಮನಲ್ಲಿ ಕಾಣಲಿಲ್ಲ. ಮನೆಯಲ್ಲೂ ಗಂಡುಮಕ್ಕಳು ರೇಗಿದರೂ ಸುಮ್ಮನಿದ್ದುಬಿಡುತ್ತಿದ್ದರು. ಕೆಲವೊಮ್ಮೆ ಮಾತನಾಡಲೇ ಬೇಕಿದ್ದಾಗಲೂ ಅಮ್ಮ ಮಾತಾಡಿಲ್ಲ ಎಂಬುದು ನನ್ನ ಕೊರಗು. ಹೆಣ್ಣುಮಕ್ಕಳಿಗೆ ಪರವಾಗಿ ಮಾತನಾಡಬೇಕಾದವರು ಅಮ್ಮ ಮಾತ್ರ ಎಂಬುದು ನನ್ನ ವಾದ. ಹಾಗಂತ ತಮಾಷೆ, ಹಾಸ್ಯ, ನಗು, ಎಲ್ಲವೂ ಇದೆ. ದೇವರ ಬಗ್ಗೆ ಮೂಢನಂಬಿಕೆ ಇಲ್ಲ. ನಮಗೂ ಕಲಿಸಲಿಲ್ಲ. ದೇವಸ್ಥಾನ, ಹರಕೆ, ತೀರ್ಥಯಾತ್ರೆ ಊಹುಂ. ಆದರೆ ಜಾತ್ರೆಯ ಸುತ್ತಾಟಕ್ಕೆ ಸದಾ ಸೈ. ಹಬ್ಬದ ಆಚರಣೆ ಥೇಟ್ ಆಸ್ತಿಕರಂತೆ. ದೇವರ ಬಗ್ಗೆಗಿನ ಕಥೆಗಳನ್ನು ತಾನು ತಿಳಿದುಕೊಂಡಂತೆ ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಆ ಅಮ್ಮನ ಅಣ್ಣಂದಿರು ಅಕ್ಕಂದಿರೆಲ್ಲ ದೈವಭಕ್ತರೇ ಆಗಿದ್ದಾರೆ. ಅಮ್ಮ ಮಾತ್ರ ಈ ವಿಚಾರದಲ್ಲಿ ಭಿನ್ನ. ಆದರೂ ಅಮ್ಮನ ತವರಿನಲ್ಲಿ ಅಮ್ಮನ ಬಗ್ಗೆ ವಿಶೇಷ ಗೌರವ. ಯಾರನ್ನೂ ವಿರೋಧಿಸದ, ಎಲ್ಲರನ್ನೂ ಪ್ರೀತಿಸುವ ಅಮ್ಮನ ಗುಣ ಮತ್ತು ಅಪ್ಪನ ಬಗ್ಗೆ ಇದ್ದ ಗೌರವವೂ ಇದಕ್ಕೆ ಕಾರಣ.

ಒಬ್ಬ ಸರಕಾರಿ ನೌಕರನ ಪತ್ನಿಯಾಗಿದ್ದು ಇವತ್ತಿಗೂ ಪಿಂಚಣಿ ಪಡೆಯುತ್ತಾ ಸ್ವತಂತ್ರವಾಗಿ ಬದುಕುತ್ತಿರುವ ಅಮ್ಮನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಇದೇ ಪಿಂಚಣಿ ಹಣದಲ್ಲಿ ಕೊನೆಯ ನಾಲ್ಕು ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ನಿಭಾಯಿಸಿದ ಜಾಣೆ ನನ್ನಮ್ಮ. ಈಗ ಆರ್ಥಿಕ ಜವಾಬ್ದಾರಿಗಳಿಲ್ಲದೆ ನಿರಾಳತೆಯ ಬದುಕು. ಮಹಿಳೆಯರಿಗೆ ವಯಸ್ಸಾದ ಕಾಲದಲ್ಲಿ ಆರ್ತಿಕ ಭದ್ರತೆ ಇಲ್ಲದಿದ್ದರೆ ನಿಜಕ್ಕೂ ಅವರ ಜೀವನ ನರಕವೇ ಸರಿ. ಹೆತ್ತು ಸಾಕಿದ ಮಕ್ಕಳೆಷ್ಟೇ ಇದ್ದರೂ ಕೈ ಚಾಚುವ ಸ್ಥಿತಿ ಬರಲೇಬಾರದು. ತನ್ನ ಮಕ್ಕಳ ಹುಟ್ಟುಹಬ್ಬವನ್ನೇ ಮಾಡದ ಅಮ್ಮ ಈಗ ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುತ್ತಾರೆ. ಕೇಕು ತರಿಸಿ ಮಕ್ಕಳನ್ನು ಖುಷಿಪಡಿಸುತ್ತಾ ತಾನೂ ಖುಷಿಪಡುತ್ತಾರೆ. ಆ ನೆಪದಲ್ಲಿ ಸ್ವಲ್ಪ ಹೆಚ್ಚೇ ಸಿಹಿ ತಿನ್ನುತ್ತಾರೆ. ‘ಸಿಹಿ ಸ್ವಲ್ಪ ಕಡಿಮೆ ತಿನ್ನಿ ಅವ್ವ’ ಎಂದು ಮೊಮ್ಮಕ್ಕಳು ಕಾಳಜಿ ತೋರಿದರೆ, ಇಂದು ಹಬ್ಬವಲ್ಲವೇ ಸ್ವಲ್ಪ ತಿಂದರೆ ಏನೂ ಆಗಲ್ಲ ಎನ್ನುತ್ತಾರೆ. ಇನ್ನೂ ತುಂಬ ಹಬ್ಬಕ್ಕೆ ಸಿಹಿ ತಿನ್ನಬೇಕಲ್ವ ಅವ್ವ ಎಂದರೆ ‘ಅದು ಆಮೇಲೆ ನೋಡೋಣ, ಈಗ ತಿನ್ನುತ್ತೇನೆ’ ಎಂದು ಮೊಮ್ಮಕ್ಕಳನ್ನು ನಗಿಸುತ್ತಾರೆ. ಆಗಲೇ ದುಡಿಯತೊಡಗಿದ ಮೊಮ್ಮಕ್ಕಳು ಅಜ್ಜಿಗೆ ಹಬ್ಬಕ್ಕೆ ಸೀರೆ ಉಡುಗೊರೆ ಕೊಡಲು ಶುರುಮಾಡಿದ್ದಾರೆ. ಉಡಬೇಕಾದ ಕಾಲದಲ್ಲಿ ಸಿಗಲಿಲ್ಲ. ಈಗ ಯಾವುದಿದ್ದರೂ ಏನು ಪ್ರಯೋಜನ ಎಂದು ತಣ್ಣಗೆ ಮೌನಕ್ಕೆ ಜಾರುತ್ತಾರೆ.

ಅಮ್ಮ ತನ್ನ ಸುತ್ತಲಿನ ವಿದ್ಯಮಾನಕ್ಕೆ ಇವತ್ತಿಗೂ ಸ್ಪಂದಿಸುವ ರೀತಿ ಮಾತ್ರ ಅನನ್ಯ. ವಿದ್ಯಾಭ್ಯಾಸವಿಲ್ಲದಿದ್ದರೂ ಅವರಲ್ಲಿ ರಾಜಕೀಯ ಆಗುಹೋಗುಗಳ ಕುರಿತು ಮಾಹಿತಿ ಇರುತ್ತದೆ. ವಾರ್ತೆ ಶುರುವಾಗುವ ಹೊತ್ತಿಗೆ ಸರಿಯಾಗಿ ಟಿ.ವಿ. ಹಾಕುತ್ತಾರೆ. ತಾನು ಚಿಕ್ಕವಳಿರುವಾಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕುರಿತ ಮಾಹಿತಿಗಳು, ಗಾಂಧೀಜಿ ಬಗ್ಗೆ ಜನರಾಡಿಕೊಳ್ಳುತ್ತಿದ್ದ ಮಾತುಗಳು, ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿದ್ದ ಕಳ್ಳದಂಗೆಯ ವಿವರಗಳು, ಪೊಲೀಸರ ಬೂಟಿನ ಸದ್ದಿಗೆ ಹೆದರುತ್ತಿದ್ದ ಕತೆಗಳು, ತುರ್ತುಪರಿಸ್ಥಿತಿಯ ದಿನಗಳಲ್ಲಿ ಅಪ್ಪನಿಗೆ ಸಂಬಳವಿಲ್ಲದೆ ಪರದಾಡಿದ್ದ ಕತೆಗಳನ್ನು ಹೇಳುತ್ತಿದ್ದರು. ವಿಶ್ವದ ಎಲ್ಲ ಆಗುಹೋಗುಗಳನ್ನು ತಿಳಿದುಕೊಳ್ಳುವ ಅಮ್ಮ ಕ್ರಿಕೆಟ್ ನಲ್ಲಿ ಯಾವ ದೇಶ ಗೆದ್ದಿತು ಎಂದು ಹೇಳುವಷ್ಟು ಕ್ರಿಕೆಟ್ ಪ್ರಭಾವಕ್ಕೂ ಒಳಗಾಗಿದ್ದಾರೆ.

ಅಮ್ಮನ ಜೊತೆಗಿರುವ ಶಿಕ್ಷಕ ಅಣ್ಣ ಮಧ್ಯಾಹ್ನ ಶಾಲೆಯಿಂದ ಫೋನ್ ಮಾಡಿ ‘ಸರ್ಕಾರದ ವಿಶ್ವಾಸಮತ ಏನಾಯಿತು?’ ಎಂದು ಕೇಳಿದರೆ, `ಜಟಾಪಟಿ ಆಗ್ತಿದೆ. ಆದರೆ ಈ ಬಾರಿ ಸರ್ಕಾರ ಉಳಿಯಿತು’ ಎಂದು ಹೇಳುತ್ತಾರೆ. ಅಮ್ಮಂದಿರ ಕ್ಷೇಮ ಸಮಾಚಾರ ತಿಳಿಯುತ್ತಾ ಸದಾ ಎಚ್ಚರದಲ್ಲಿಡುವ ಮಕ್ಕಳು ನಿಜಕ್ಕೂ ಬೇಕು. ಈ ವಿಚಾರದಲ್ಲಿ ಅಮ್ಮನಿಗೆ ತೃಪ್ತಿ ಇದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಅಮ್ಮ ಚಡಪಡಿಸುತ್ತಾರೆ. ಮಕ್ಕಳು ಮನೆ ಸೇರಿದರೋ ಇಲ್ಲವೋ ಎಂದು ಆತಂಕ ಪಡುತ್ತಾ ಫೋನ್ ಮಾಡುತ್ತಾರೆ. ತಾನು ಮನೆಯಲ್ಲೇ ಒಂಭತ್ತು ಹೆರಿಗೆ ಮಾಡಿಸಿಕೊಂಡಿದ್ದರೂ ನಾನು ಹೆರಿಗೆ ಸಂದರ್ಭದಲ್ಲಿ ಸಿಸೇರಿಯನ್ ಗೆ ಒಳಗಾದ ಸುದ್ದಿ ತಿಳಿದು ಸಿಕ್ಕಾಪಟ್ಟೆ ಹೆದರಿಕೊಂಡಿದ್ದರಂತೆ. ಹೆರಿಗೆ ಸಂದರ್ಭದಲ್ಲಿ ತೊಂದರೆಗೊಳಗಾಗಿ ಸತ್ತ ಹೆಣ್ಣುಮಕ್ಕಳೆಲ್ಲ ನೆನಪಿಗೆ ಬಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ಕುಳಿತಿದ್ದರಂತೆ. ಎಂದೋ ಒಂದಿನ ಅಮ್ಮನೇ ಈ ವಿಚಾರ ಹೇಳಿದ್ದಲ್ಲದೆ ಮನೆಯಲ್ಲಿ ಯಾರಿಗೂ ಈ ವಿಚಾರ ಗೊತ್ತಿರಲಿಲ್ಲ. ಯಾವುದಕ್ಕೂ ಗೊಳೋ ಎನ್ನದೇ ಏನೂ ಆಗದವರಂತಿರುವ ಅಮ್ಮನ ಗುಣ ನಿಜಕ್ಕೂ ಅಪರೂಪದ್ದು.
ಬದುಕ ಬಯಲಿಗೆ ಬಂದು ಕಣ್ಬಿಟ್ಟಾಗ ಕಂಡದ್ದು
ಉರಿವ ಒಲೆ ಮುಂದೆ ಕೂತು ಬೇಯುತ್ತಿದ್ದ ಅಮ್ಮ.
…ಹತ್ತು ಬಟ್ಟಲ ಸುತ್ತ ಕೂತ ಕರುಳಿಗೆ
ಪಾಲು ಪಾಲು ಬಡಿಸುವಾಗ
ಖಾಲಿ ಪಾತ್ರೆ ಅವಳಿಗೆ.
ಕರುಳ ಬಳ್ಳಿ ತಿಂದು ತೇಗುವಾಗ ಅವಳ ಹೊಟ್ಟೆ ತಣ್ಣಗೆ-

ಇದು ಅಮ್ಮನ ಬಗ್ಗೆ ನಾನು ಬರೆದ ಕವನದ ಸಾಲುಗಳು. ಈ ಕವನ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು. ನಂತರ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ ಪತ್ರಿಕೆಯಲ್ಲಿ ಅನುವಾದಿಸಿ ಪ್ರಕಟಿಸಿದ್ದರು. ನನ್ನ ಕ್ರಿಶ್ಚಿಯನ್ ಸ್ನೇಹಿತರು ಪತ್ರಿಕೆಯ ಪ್ರತಿ ತಂದುಕೊಟ್ಟಿದ್ದರು. ತುಳು ಅಕಾಡೆಮಿ ಹೊರತರುವ ಮುದಿಪು ನಿಯತಕಾಲಿಕದಲ್ಲೂ ತುಳುವಿಗೆ ಅನುವಾದಿಸಿ ಪ್ರಕಟಿಸಿದ್ದರು. ಹೀಗೆ ಅಮ್ಮನ ಕುರಿತು ಬರೆದ ಒಂದೇ ಕವನ ಮೂರು ಭಾಷೆಗಳಲ್ಲಿ ಪ್ರಕಟಗೊಂಡಿದ್ದು ನನಗೆ ಹೆಮ್ಮೆ ಎನಿಸಿತ್ತು. ಅಮ್ಮನೂ ಆ ಕವನವನ್ನು ಮೊಮ್ಮಕ್ಕಳಿಂದ ಓದಿಸಿಕೊಂಡು ಖುಷಿಪಟ್ಟಿದ್ದರು.

ಹೇಮಾ ನೆನಪು:ಚಿತ್ತುಚಿತ್ತು ಪ್ರೇಮಪತ್ರಗಳು

ಜೋರಾಗಿ ಗುಡುಗು ಮಿಂಚು ಅಬ್ಬರಿಸುತ್ತ ಮಳೆ ಸುರಿಯುತ್ತಿದ್ದರೆ ಅಪ್ಪ ರಾಮ ಜಪ ಮಾಡುತ್ತಿದ್ದರು. ಅಮ್ಮ ಕತ್ತಿಯೊಂದನ್ನು ಅಂಗಳಕ್ಕೆಸೆಯುತ್ತಿದ್ದರು. ಇವೆರಡೂ ಅರ್ಥವಾಗದ ನಾವು ರಾಮರಾಮ ಎನ್ನುತ್ತಲೇ ಕತ್ತಿಯನ್ನು ಅಂಗಳಕ್ಕೆಸೆಯುತ್ತಿದ್ದರು. ರಾಮ ಜಪ ಮಾಡಿದರೆ ಅನಾಹುತವಾಗಲಾರದು ಎಂಬ ನಂಬಿಕೆ ಅಪ್ಪನದ್ದು. ಅಮ್ಮ, ಅವರಮ್ಮ ಕತ್ತಿ ಎಸೆಯುತ್ತಿದ್ದರು ಎಂದು ತಾವೂ ಮಾಡುತ್ತಿದ್ದರೋ ಏನೋ. ಆದರೆ ಕಬ್ಬಿಣ ವಿದ್ಯುತ್ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ. ಅದಕ್ಕಾಗಿ ಕಬ್ಬಿಣದ ಕತ್ತಿಯನ್ನು ಅಂಗಳಕ್ಕೆಸೆಯುತ್ತಿದ್ದರು ಎಂಬುದು ಕ್ರಮೇಣ ನಮಗೆ ತಿಳಿಯಿತು. ಆ ದಿನಗಳಲ್ಲಿ ಸುರಿಯುತ್ತಿದ್ದ ಮಳೆಗೆ ಮನೆ ಬಿದ್ದುಬಿಡುತ್ತದೋ ಎಂಬ ಆತಂಕ ಎಂತಹ ಗಟ್ಟಿ ಮನೆಯವರನ್ನೂ ಕಾಡುತ್ತಿತ್ತು.

ನಮ್ಮ ಮನೆ ಗದ್ದೆಗಳ ಮಧ್ಯೆ ಇತ್ತು. ಎಡೆಬಿಡದೆ ವಾರವಿಡೀ ಮಳೆ ಸುರಿಯುತ್ತಿದ್ದರೆ ಇಡೀ ಊರೇ ಒಂದಾಗುತ್ತಿತ್ತು. ಶಾಲೆಗೂ ರಜೆ. ಹೊರಗೆಲ್ಲೂ ಹೋಗುವಂತಿಲ್ಲ. ಉರಿವ ಒಲೆ ಮುಂದೆ ಕೂತುಬಿಡುತ್ತಿದ್ದೆವು. ಒಲೆ ಮುಂದೆ ಕೂತು ಚಳಿ ಕಾಯಿಸುವುದು(ಚಳಿ ಹೋಗಲಾಡಿಸುವುದಕ್ಕೆ ಚಳಿ ಕಾಯಿಸುವುದೆಂದೇ ಕರೆಯುತ್ತೇವೆ) ಎಲ್ಲಾ ವಯಸಿನವರಿಗೂ ಪ್ರಿಯವಾದ ಕೆಲಸ. ಕೃಷಿಕರೂ ತೋಟ, ಗದ್ದೆ ಕಡೆ ಮುಖ ಮಾಡದೇ ಮುಸುಕು ಹೊದ್ದು ಮಲಗುತ್ತಿದ್ದರು. ಬಾಯಿ ಚಪಲಕ್ಕೆ ಏನು ಸಿಕ್ಕರೂ ಸಾಕಾಗದು.

ನಾನು, ತಂಗಿ ಮತ್ತು ಇಬ್ಬರು ಅಣ್ಣಂದಿರು ಮಳೆ ಬರುವಾಗ ಏನೇನೋ ಆಟಗಳನ್ನು ಆಡುತ್ತಿದ್ದೆವು. ರವಿಯಣ್ಣ ಕೋಣೆಯ ಮೂಲೆಯಲ್ಲಿ ಕಂಬಳಿ ಹೊದ್ದು ಕುಳಿತುಕೊಳ್ಳುತ್ತಿದ್ದ. ನಾವು ಓಡಿ ಹೋಗಿ ಅವನ ಮೇಲೆ ಬೀಳುತ್ತಿದ್ದೆವು. ಮೂತಿ ಮುಸುಡಿ ಎಲ್ಲೆಂದರಲ್ಲಿ ಏಟು ಮಾಡಿಕೊಳ್ಳುತ್ತಿದ್ದೆವು. ತಿಂಡಿಗಳನ್ನೂ ಮೂಲೆಯಲ್ಲಿ ಕೂತು ಹಂಚಿ ತಿನ್ನುತ್ತಿದ್ದೆವು. ಹೊರಗೆ ಸುರಿಯುತ್ತಿದ್ದ ಮಳೆಯನ್ನು ಒಳಗಿದ್ದು ಅನುಭವಿಸುವ ಸುಖ ಹೇಳುವಂತಿಲ್ಲ.

ಚಳಿಗಾಲದಲ್ಲಿ ಬೆಳಿಗ್ಗೆ ಎದ್ದು ಅಂಗಳದ ಮೂಲೆಯಲ್ಲಿ ಬೆಂಕಿ ಹಾಕಿ ಕುಳಿತುಕೊಳ್ಳುತ್ತಿದ್ದೆವು. ಅಮ್ಮ ಚಳಿಯನ್ನು ಎಕ್ಕಿಸದೆ ಕೆಲಸ ಮಾಡುತ್ತಿದ್ದರು. ನಾವು ಓದಲೆಂದು ಒಲೆ ಬುಡದಲ್ಲೇ ಬಿಡಾರ ಹೂಡುತ್ತಿದ್ದೆವು. ಆದರೆ ಎಸ್ಸೆಸ್ಸೆಲ್ಸಿಗೆ ಬಂದ ಮೇಲೆ ಇದಕ್ಕೆಲ್ಲ ಕಡಿವಾಣ ಬಿತ್ತು. ನಂತರ ಕಾಲೇಜಿಗೆ ಇಪ್ಪತ್ತೈದು ಕಿಲೋಮೀಟರ್ ಪ್ರಯಾಣ. ಹೀಗಾಗಿ ಏಳು ಗಂಟೆಗೇ ಮನೆಯಿಂದ ಹೊರಬಿದ್ದರೆ ಸಂಜೆ ಆರರ ನಂತರ ಮನೆ ಸೇರುತ್ತಿದ್ದೆವು.

***

ನಾನು ಪದವಿಯ ಮೊದಲ ವರ್ಷದಲ್ಲಿದ್ದಾಗಲೇ ನನಗೆ ಮದುವೆಗೆ ಪ್ರೊಪೋಸ್ ಮಾಡಲೆಂದು ಕೆಲವರೆಲ್ಲ ನನ್ನ ಹಿಂದೆ ಬೀಳುತ್ತಿದ್ದರು. ನನಗೆ ಅದೆಲ್ಲ ತಿಳಿಯುತ್ತಿರಲಿಲ್ಲ. ಮನೆ ಎಲ್ಲಿ ಅಂತ ಕೇಳೋರು. ನಂತರ ಎಷ್ಟು ಜನ ಮಕ್ಕಳು ಎನ್ನೋರು. ಅಕ್ಕ ಇದ್ದಾರಾ, ಅಣ್ಣ ಎಲ್ಲಿ ಕೆಲಸ ಮಾಡುತ್ತಿದ್ದಾರೆ, ವಿಳಾಸ ಕೊಡಿ ಎನ್ನುತ್ತಿದ್ದರು. ನಾನು ಎಲ್ಲವನ್ನೂ ಕೊಟ್ಟುಬಿಡುತ್ತಿದ್ದೆ. ಅದರಲ್ಲೂ ಸಿಪಾಯಿಗಳ ಸಂಖ್ಯೆ ಹೆಚ್ಚಿತ್ತು. ಈ ಆರ್ಮಿ ಜನ ವರ್ಷಕ್ಕೊಮ್ಮೆ ರಜದಲ್ಲಿ ಊರಿಗೆ ಬಂದಾಗ ಹೆಣ್ಣು ಹುಡುಕಿ ಮದುವೆ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಕೆಲವರು ಈ ಬಾರಿ ಬಂದಾಗ ಹೆಣ್ಣು ನೋಡಿ ಹೋದರೆ ಮುಂದಿನ ಬಾರಿ ರಜಕ್ಕೆ ಬಂದಾಗ ಮದುವೆ ಮಾಡಿಕೊಂಡು ಹೋಗುತ್ತಿದ್ದರು. ಕೆಲವರು ಮದುವೆಯಾಗಿ ಹೆಂಡತಿಯನ್ನು ಊರಲ್ಲೇ ಬಿಟ್ಟು ಹೋಗುತ್ತಿದ್ದರು. ಈ ಹುಡುಗಿಯರು ನಂತರ ತವರಿಗೆ ಹೋದರೆ ಮತ್ತೆ ಮಿಲಿಟರಿ ಗಂಡ ರಜದಲ್ಲಿ ಬರುವವರೆಗೂ ತವರಲ್ಲೇ ಇರುತ್ತಿದ್ದರು. ಮನೆ ಕಡೆ ಸ್ವಲ್ಪ ಅನುಕೂಲವಿದ್ದು ಸ್ವತಂತ್ರವಾಗಿದ್ದವರು ಹೆಂಡತಿಯನ್ನು ಜಮ್ಮು, ಪಂಜಾಬ್, ದೆಹಲಿ ಅಂತ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಿಲಿಟರಿಗೆ ಸೇರಿದ ಬಹುತೇಕ ಹುಡುಗರು ಎಸ್ಸೆಸೆಲ್ಸಿ ಮಾತ್ರ ಓದಿದವರು. ಮತ್ತು ಇವರೆಲ್ಲ ಯುದ್ಧಭೂಮಿ, ಗಡಿರಕ್ಷಣೆ ಅಂತ ಜೀವ ಪಣಕ್ಕಿಟ್ಟವರೇ. ಹಾಗಾಗಿ ಇಂತವರಿಗೆಲ್ಲ ಸುಲಭಕ್ಕೆ ಹೆಣ್ಣು ಸಿಗುತ್ತಿರಲಿಲ್ಲ.

ಹೀಗೆ ಮೂರು ಜನ ಸೈನಿಕರು ರಜಕ್ಕೆ ಬಂದಾಗಲೆಲ್ಲ ನನ್ನ ಮನೆಯವರಲ್ಲಿ ಹೆಣ್ಣು ಕೊಡುತ್ತೀರಾ ಎಂದು ಬೇರೆಯವರಲ್ಲಿ ಕೇಳಿಸುತ್ತಿದ್ದರು. ಒಬ್ಬ ವರನಿಗೆ ನನಗೆ ಗೊತ್ತಿಲ್ಲದೆ ನನ್ನ ಮನೆಯವರು ಜಾತಕವನ್ನು ಕೊಟ್ಟುಬಿಟ್ಟಿದ್ದರು. ಆದರೆ ಜಾತಕ ಹೊಂದಿಕೆಯಾಗದ ಕಾರಣ ವರನೇ ಕೈಬಿಟ್ಟ. ನನ್ನ ಮದುವೆಯಾಗಿ ಆತನದೂ ಮದುವೆಯಾಗಿ ನನ್ನ ಮಗ ಮತ್ತು ಆತನ ಮಗ ಒಂದೇ ತರಗತಿಯಲ್ಲಿ ಐದು ವರ್ಷ ಓದಿದ್ದರು. ಸಿಕ್ಕಾಗಲೆಲ್ಲ ನನ್ನನ್ನು ಗೌರವದಿಂದ ಮಾತನಾಡಿಸುತ್ತಿದ್ದರು. ಮೊದಮೊದಲು ನನಗೆ ಆತ ಸಿಕ್ಕಾಗ ನಗುವೇ ಬರುತ್ತಿತ್ತು. ನಾನು ಮದುವೆಯಾಗಿ ವೆಂಕಟ್ ಜೊತೆ ಇದ್ದಾಗಲೂ ಆತ ಇಬ್ಬರನ್ನೂ ಮಾತನಾಡಿಸುತ್ತಿದ್ದ.

ಹೀಗೆ ಬಂದ ಇನ್ನೊಬ್ಬ ಮಿಲಿಟರಿ ವರನಿಗೆ ‘ಇಷ್ಟು ಬೇಗ ಮದುವೆ ಮಾಡಲ್ಲ’ ಎಂದು ಮನೆಯಲ್ಲಿ ಹೇಳಿದ ಕಾರಣ ಬೇರೆ ಮದುವೆಯಾದ. ನಾನಾಗ ದ್ವಿತೀಯ ಪದವಿಯಲ್ಲಿದ್ದೆ. ಆತ ಮದುವೆಯಾದದ್ದು ನಮ್ಮದೇ ಕಾಲೇಜಿನಲ್ಲಿ ತೃತೀಯ ಪದವಿ ವಿದ್ಯಾರ್ಥಿನಿಯನ್ನು. ಆ ನಂತರ ಒಂದು ಸಲ ನನಗೆ ಕಾಲೇಜು ವಿಳಾಸಕ್ಕೆ ಹೊಸವರ್ಷದ ಗ್ರೀಟಿಂಗ್ಸ್ ಬಂದಿತ್ತು. ಹಿಂದಿನ ವಿಳಾಸ ಡೆಹ್ರಡೂನ್ ಅಂತ ಮಾತ್ರ ಇತ್ತು. ಒಡೆದು ನೋಡಿದರೆ ನನ್ನನ್ನು ಆತ ಪಡೆಯಲು ಎಷ್ಟು ಪ್ರಯತ್ನಪಟ್ಟಿದ್ದ ಮತ್ತು ನಾನು ಸಿಗದಿರುವ ಬಗ್ಗೆ ನಿರಾಸೆಯನ್ನು ಕವನದಂತೆ ಬರೆದಿದ್ದ. ನಾನು ಸುಮ್ಮನೆ ಓದಿ ಇಟ್ಟುಕೊಂಡೆ. ಆದರೆ ಆತನ ಹೆಂಡತಿಯೇ ನನ್ನನ್ನು ಹುಡುಕಿಕೊಂಡು ಬಂದು ನಿನ್ನ ವಿಳಾಸ ನಾನೇ ಕೊಟ್ಟದ್ದು ಎಂದು ನಕ್ಕಳು. ಅದು ಈಗಲೂ ನನ್ನ ಬಳಿ ಇದೆ. ನನ್ನ ಮದುವೆಯ ನಂತರ ವೆಂಕಟ್ ಗೂ ತೋರಿಸಿದ್ದೆ. ಆತನ ಬಗ್ಗೆ ಮಾತ್ರ ನನಗೆ ಅಯ್ಯೋ ಅನ್ನಿಸಿತ್ತು.

ನನಗೆ ತುಂಬ ರೇಗುತ್ತಿದ್ದದ್ದೆಂದರೆ ಊರಿನಲ್ಲೂ ಕೆಲವರು ಮದುವೆ ಪ್ರಸ್ತಾಪ ಮಾಡುತ್ತಿದ್ದರು. ಅದು ಯೋಗ್ಯತೆಯೇ ಇಲ್ಲದ ಕೆಲವರು ಮದುವೆ ಪ್ರಸ್ತಾಪ ಮಾಡಿದಾಗ ಮಾತ್ರ ನಾನು ತುಂಬ ಸಿಟ್ಟಾಗುತ್ತಿದ್ದೆ. ಊರಲ್ಲಿ ಯಾರಲ್ಲೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಯಾಕೆಂದರೆ ಓದಿದವರು ಕಡಿಮೆ. ಹಾಗಾಗಿ ಒಂದೆರಡು ಮಾತಷ್ಟೇ. ಆದರೂ ಯಾವ ಮುಜುಗರವೂ ಇಲ್ಲದೆ ಬೇರೆಯವರನ್ನು ಏಜೆಂಟರನ್ನಾಗಿ ಕಳಿಸುತ್ತಿದ್ದರು.

ಪ್ರತಿದಿನ ಬಸ್ನಲ್ಲಿ ಪ್ರಯಾಣಿಸುವಾಗ ಕೆಲವು ಸಭ್ಯ ಕಂಡಕ್ಟರ್ ಗಳೂ ಮದುವೆ ಗಿದುವೆ ಎಂದು ನೇರವಾಗಿ ಕೇಳುತ್ತಿದ್ದರು. ನಾನು ಇಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದೆ. ನಾನು ಪ್ರತಿನಿತ್ಯ ಒಂದೇ ಬಸ್ ನಲ್ಲಿ ಹೋಗಬೇಕಾಗಿತ್ತು. ಆ ಬಸ್ ಕಂಡಕ್ಟರ್ ಅರ್ಥಶಾಸ್ತ್ರ ಪದವೀಧರ. ಚೆನ್ನಾಗಿ ಇಂಗ್ಲಿಷ್ ನಲ್ಲೂ ಮಾತನಾಡುತ್ತಿದ್ದ. ಹಾಸನದ ಕಡೆಯವರೆಂದು ನೆನಪು. ಆತನೂ ನೇರವಾಗಿಯಲ್ಲದಿದ್ದರೂ ಸುತ್ತಿ ಬಳಸಿ ಕೇಳುತ್ತಿದ್ದ. ಪ್ರತಿ ಸಂದರ್ಭದಲ್ಲೂ ನಾನು ಭಯದಿಂದ ನಡುಗುತ್ತಿದ್ದೆ.

ಇದಕ್ಕಿಂತಲೂ ತಮಾಷೆಯಾಗಿ ಕಾಣುತ್ತಿದ್ದುದು ನನ್ನ ಕೆಲ ಸಹಪಾಟಿಗಳೂ ಮದುವೆ ಪ್ರಸ್ತಾಪ ಮಾಡುತ್ತಿದ್ದುದು. ಒಬ್ಬ ಒಳ್ಳೆಯ ಸ್ನೇಹಿತ ಯಾವಾಗಲೂ ರಾಜ್ಯಶಾಸ್ತ್ರ ಪಿರಿಯಡ್ ಗೆ ನನ್ನ ಹಿಂದಿನ ಬೆಂಚಿನಲ್ಲಿ ಕುಳಿತಿರುತ್ತಿದ್ದ. ಅರ್ಧದಷ್ಟು ವಿದ್ಯಾರ್ಥಿಗಳು ಸಮಾಜಶಾಸ್ತ್ರ ತರಗತಿಗೆ ಹೋಗುತ್ತಿದ್ದರು. ಹಾಗಾಗಿ ಸ್ವಲ್ಪವೇ ವಿದ್ಯಾರ್ರಥಿಗಳು ಇರುತ್ತಿದ್ದೆವು. ಕೊನೆಯ ವರ್ಷದಲ್ಲಿರುವಾಗ ಒಂದಿನ ಆತ ನನ್ನ ಪೆನ್ ತೆಗೆದುಕೊಂಡಿದ್ದ. ಅದು ಪಾರದರ್ಶಕ ರೆನಾಲ್ಡ್ ಪೆನ್ನು. ಆತ ತರಗತಿ ಮುಗಿಸಿ ಪೆನ್ನು ಹಿಂದಿರುಗಿಸಿದ. ನೋಡಿದರೆ ಪೆನ್ನಿನ ಒಳಗೆ ಒಂದು ತುಂಡು ಕಾಗದವಿತ್ತು. ಕಾಗದದಲ್ಲಿ 143 ಅಂತ ಬರೆದಿತ್ತು. ಇದು ಏನೆಂದು ನನಗೆ ಅರ್ಥವೇ ಆಗಲಿಲ್ಲ. ಏನೆಂದು ಬೇರೆಯವರಲ್ಲಿ ಕೇಳುವಂತಿಲ್ಲ. ಮತ್ತೆ ನನಗೆ ಹೇಗೋ ಗೊತ್ತಾಯಿತು 143 ಎಂದರೆ ಐ ಲವ್ ಯು ಎಂದು. ಪದವಿ ತರಗತಿ ಇನ್ನೇನು ಮುಗಿದು ಪರೀಕ್ಷೆಗೆ ಓದಲು ಒಂದು ತಿಂಗಳು ರಜೆ ಇರುತ್ತಿತ್ತು. ಆಗೆಲ್ಲ ಆತ ಬಂದು ನನ್ನಲ್ಲಿ ನೇರವಾಗಿ ಮದುವೆಯಾಗುತ್ತೇನೆ ಪ್ಲೀಸ್ ಒಪ್ಪಿಕೋ ಎಂದು ಬೇಡುತ್ತಿದ್ದ. ನಾನು ಈ ವರ್ಷ ನಮ್ಮಲ್ಲಿ ಮದುವೆ ಇಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದೆ. ನಂತರ ನನ್ನ ಮದುವೆಗೂ ಬಂದಿದ್ದ. ನಾವೂ ಪೇಟೆಯಲ್ಲಿಯೇ ಮನೆ ಮಾಡಿದ್ದೆವು.ಆತನಿಗೂ ಮದುವೆಯಾಗಿ ಮಕ್ಕಳಿವೆ. ಈಗಲೂ ಸಿಕ್ಕಾಗ ಅದೇ ಸ್ನೇಹದಿಂದ ಮಾತನಾಡಿಸುತ್ತಾನೆ.

ನಮ್ಮ ತರಗತಿಗೆ ಮಾತ್ರವಲ್ಲ ಇಡೀ ಕಾಲೇಜಿಗೆ ಕೆಟ್ಟ ವಿದ್ಯಾರ್ಥಿಯೊಬ್ಬನಿದ್ದ. ಆತ ನನ್ನನ್ನು ಬಹಳ ಗೌರವಿಸುತ್ತಿದ್ದ. ನಮಗಿಂತ ಐದಾರು ವರ್ಷ ಹಿರಿಯ. ಫೈಲ್ ಆಗಿ ನಮ್ಮ ತರಗತಿಗೆ ವಕ್ಕರಿಸಿಕೊಂಡಿದ್ದ. ಶತ ದಡ್ಡ. ಸುಮ್ಮನೆ ಜಾಲಿಗೆಂದು ಬರುತ್ತಿದ್ದ. ಒಂದಿನ ಬೈಕ್ ನಲ್ಲಿ ಬಂದರೆ ಮತ್ತೊಂದು ದಿನ ಜೀಪಿನಲ್ಲಿ ಬರುತ್ತಿದ್ದ. ತುಂಬ ಶ್ರೀಮಂತ.  ಹಾಗೆ ನೋಡಿದರೆ ಆತ ಕಾಲೇಜಿನಲ್ಲಿ ಮಾತ್ರ ಉಡಾಫೆಯ ಮನುಷ್ಯ. ಹೊರಗೆಲ್ಲ ದೊಡ್ಡಸ್ತಿಕೆ ಇಲ್ಲ. ಎಲ್ಲರನ್ನೂ ಸ್ನೇಹದಿಂದ ಕಾಣುತ್ತಿದ್ದ. ಕಾಲೇಜಿನಲ್ಲಿ ಒಳ್ಳೆಯ ಹೆಸರಿಲ್ಲದ ಕಾರಣ ಆತನನ್ನು ಕಂಡರಾಗುತ್ತಿರಲಿಲ್ಲ. ಆತ ನನಗೆ ಪ್ರೇಮ ಪತ್ರ ಬರೆದು ಅಂಚೆಗೆ ಹಾಕುವ ಬದಲು ನೇರವಾಗಿ ಕೈಗೇ ತಂದು ಕೊಡುತ್ತಿದ್ದ. ಅಂಚೆ ಕವರು ಒಡೆದು ನೋಡಿದರೆ ಅದು ಆತನೇ ಬರೆದ ಪ್ರೇಮ ಪತ್ರವಾಗಿರುತ್ತಿತ್ತು. ನನಗೆ ಒಂದು ಕಡೆಯಿಂದ ನನ್ನ ಸಹಪಾಟಿಗಳಿಗೆ ಗೊತ್ತಾಗಿ ಎಲ್ಲಿ ರಾದ್ಧಾಂತವಾಗುತ್ತದೋ ಎಂಬ ಭಯ. ಇನ್ನೊಂದೆಡೆ ಇವನ ಕಾಟ ಹೆಚ್ಚಾಗುತ್ತಿದೆ ಎಂಬ ಸಿಟ್ಟು. ಮನೆಯಲ್ಲಿಯೂ ಹೇಳಲಾರೆ, ಕಾಲೇಜಿನಲ್ಲಿ ಹೇಳಿದರೆ ಅದು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಿತ್ತು. ಒಮ್ಮೆ ಹೀಗೆ ಬಂದ ಪತ್ರವನ್ನು ಒಡೆದು ಓದದೇ ತರಗತಿಯಲ್ಲಿ ಆತನಿಗೆ ಕಾಣುವಂತೆ ಹರಿದು ಹಾಕಿದ್ದೆ. ನಂತರ ಕಾಲೇಜು ಮುಗಿದು ನನ್ನ ಮದುವೆಯಾಯಿತು. ಆತನೂ ಬಂದಿದ್ದ. ಎಲ್ಲವನ್ನೂ ಮರೆತು ಈಗಲೂ ಸಿಕ್ಕಾಗ ಚೆನ್ನಾಗಿ ಮಾತನಾಡುತ್ತಾನೆ. ನನ್ನ ತಂಗಿಗೆ ಸಿಕ್ಕಾಗಲೆಲ್ಲ ನನ್ನ ಬಗ್ಗೆ ವಿಚಾರಿಸುತ್ತಿರುತ್ತಾನಂತೆ..ಈಗ ನನಗೆ ಆತನ ಬಗ್ಗೆ ಕೆಟ್ಟ ಭಾವನೆಗಳೇನೂ ಇಲ್ಲ.

ಹೀಗೆ ಹೊಸ ವರುಷ ಬಂದರೆ ಅನಾಮಧೇಯ ಗ್ರೀಟಿಂಗ್ ಕಾರ್ಡ್ ಗಳು ಬರುತ್ತಿತ್ತು. ಪ್ರೇಮಪತ್ರಗಳೂ ಬರುತ್ತಿತ್ತು. ಹೆಸರು ಬರೆಯದೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ನಿನ್ನ ಹುಚ್ಚು ಹಿಡಿದಿದೆ ಎಂದೆಲ್ಲ ಅಂಗಲಾಚುತ್ತಿದ್ದ ಸಾಲುಗಳು. ನಿನ್ನನ್ನು ಮದುವೆಯಾಗಿ ರಾಣಿಯಂತೆ ನೋಡಿಕೊಳ್ಳುತ್ತೇನೆ ಹೀಗೆ ಏನೇನೋ ಬರೆದಿರುತ್ತಿತ್ತು. ಒಬ್ಬ, ಒಂದು ಪತ್ರದಲ್ಲಿ ನೀನು ಇಂತಲ್ಲಿಗೆ ಬಾ ಎಂದು ಬರೆದಿತ್ತು. ವಾರದ ನಂತರ ಸ್ಸಾರಿ ನನಗೆ ಅಂದು ಅಲ್ಲಿಗೆ ಬರಲಾಗಲಿಲ್ಲ. ನೀನು ಬಂದು ಕಾದಿರಬಹುದಲ್ಲ ಎಂದು ಬರೆದ ಪತ್ರ ಹಾಜರಾಗುತ್ತಿತ್ತು. ಇವೆಲ್ಲ ಆಟಗಳನ್ನು ಸುಮ್ಮನೆ ಇದ್ದು ನಿಭಾಯಿಸಿದ್ದೆ. ಇವ್ಯಾವುದನ್ನೂ ಗೆಳತಿಯರಲ್ಲಿ ಹೇಳಿಕೊಳ್ಳುತ್ತಿರಲಿಲ್ಲ. ಕೆಲವನ್ನು ಓದದೇ ಹರಿದುಹಾಕುತ್ತಿದ್ದೆ. ಕೆಲವರಿಗೆ ಸರಿಯಾದ ಒಂದು ಸಾಲು ಕೂಡಾ ಬರೆಯಲು ಬರುತ್ತಿರಲಿಲ್ಲ. ಅಂತ ಪತ್ರಗಳನ್ನು ನಾನು ಸಿಟ್ಟಿನಿಂದ ಹರಿದು ಹಾಕುತ್ತಿದ್ದೆ. ಕೆಲವು ಮುದ್ದಾದ ಸಾಲುಗಳು ನನಗೂ ಖುಷಿಯಾಗುತ್ತಿತ್ತು. ಅವೆಲ್ಲ ಹಾಗೆ ಇವೆ.

ಪತ್ರ ಬರೆದದ್ದು ತಪ್ಪಲ್ಲ, ಸರಿಯಾಗಿ ಬರೆಯದ್ದು ತಪ್ಪು. ಯಾಕೆಂದರೆ ನಾನು ಆಗಲೇ ಕವಿತೆ ಬರೆಯುತ್ತಿದ್ದೆ. ನನಗೆ ಪ್ರೇಮ ಪತ್ರ ಬರೆಯುವಾಗ ಭಾಷೆ ಶುದ್ಧವಿರಬೇಕಲ್ವಾ? ಪತ್ರ ನೋಡಿಯೇ ಅವರನ್ನು ಅಳತೆ ಮಾಡುತ್ತಿದ್ದೆ. ಕೆಲವು ಇನ್ ಲ್ಯಾಂಡ್ ಲೆಟರ್ನಲ್ಲಿ ಪತ್ರ ಬರೆದು, ಏನೇನೋ ಚಿತ್ತು ಮಾಡಿ ಮತ್ತೆ ಅದರ ಮೇಲೆ ಚೀಟಿ ಅಂಟಿಸಿ ತಮ್ಮ ದಡ್ಡತನ ಪ್ರದರ್ಶಿಸುತ್ತಿದ್ದರು, ಅದು ನನ್ನ ಕೈ ಸೇರುವಾಗ ಡ್ಯೂ ಆಗಿ ನಾನೇ ಎರಡು ರೂಪಾಯಿ ದಂಡ ಕೊಡಬೇಕಾಗುತ್ತಿತ್ತು. ಇಷ್ಟಾಗಿಯೂ ನನಗೆ ಇವರ್ಯಾರ ಬಗ್ಗೆಯೂ ಪ್ರೀತಿ ಹುಟ್ಟಲೇ ಇಲ್ಲ.

 

(ಫೋಟೋಗಳು: ಅಬ್ದುಲ್ ರಶೀದ್ ಮತ್ತು ಲೇಖಕಿಯ ಸಂಗ್ರಹದಿಂದ)