1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಮತ್ತು ಮಹತ್ವ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು. ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಹೊಸಕಾವ್ಯದ ಗುರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕುರಿತು ಬರೆದಿದ್ದಾರೆ.

 

 

ಡಾ. ಎಂ. ಗೋಪಾಲಕೃಷ್ಣ ಅಡಿಗರು (1918- 1992) ಯಾವುದೇ ಭಾಷೆಗೆ, ಯಾವುದೇ ನಾಡಿಗೆ ಹೆಮ್ಮೆ ತರುವಂತಹ ಅಸಾಮಾನ್ಯ ಕವಿ. ಅವರು ಮಹಾಕಾವ್ಯ ಬರೆಯದಿದ್ದರೂ ಮಹಾಕವಿ ಎಂದು ಕರೆಯಲ್ಪಡಲು ಯೋಗ್ಯರಾದವರು. ಅವರ ‘ಸಮಗ್ರ ಕಾವ್ಯ’ವನ್ನು ಒಟ್ಟಾಗಿ ಮಹಾಕಾವ್ಯ ಎಂದು ಪರಿಗಣಿಸಬಹುದು. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಘನತೆಯ ಹುಡುಕಾಟವೇ ಅಡಿಗರ ಸಮಗ್ರ ಕಾವ್ಯದ ವಸ್ತು. ಅದು ದಾಖಲಾಗಿರುವುದು ಅವರ ಕಾವ್ಯ ನಾಯಕನ ಜಾಗೃತಿ, ಆತಂಕ, ತಲ್ಲಣ ಹಾಗೂ ಹೋರಾಟಗಳ ಮೂಲಕ.

ಉಡುಪಿ ಜಿಲ್ಲೆಯ ಉತ್ತರ ಭಾಗದ ಕಡಲತಡಿಯ ಹಳ್ಳಿ ಮೊಗೇರಿಯಲ್ಲಿ ಹುಟ್ಟಿಬೆಳೆದ ಗೋಪಾಲಕೃಷ್ಣ ಅಡಿಗರ ಮನೆಯಲ್ಲಿ ಮತ್ತು ಪರಿಸರದಲ್ಲಿ ಕಾವ್ಯ ನಿರಂತರವಾಗಿ ಅವರ ಕಿವಿಗೆ ಬೀಳುತ್ತಿತ್ತು, ಮನಸ್ಸಿಗೆ ನಾಟುತ್ತಿತ್ತು. ಮನೆಯಲ್ಲಿ ಪದ್ಯ ರಚನೆ, ವಾಚನಗಳ ವಾತಾವರಣವಿತ್ತು. “ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ” ಎಂದು ಅವರೇ ಹೇಳಿದ್ದಾರೆ.

ಮುಂದೆ ಕನ್ನಡದ ಪ್ರಮುಖ ಕವಿ, ಸಾಹಿತ್ಯ ಚಿಂತಕ, ನವ್ಯ ಸಾಹಿತ್ಯದ ಗುರುವಾಗಿ ಬೆಳೆದ ಅಡಿಗರು 1955 ರಿಂದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಬಗೆಯ ಸಾಹಿತ್ಯ ಸೃಷ್ಟಿಯಾಗಲು ಮತ್ತು ಹೊಸ ಬಗೆಯ ವಿಮರ್ಶೆ ಹುಟ್ಟಿ ಬೆಳೆಯಲು ಪ್ರಮುಖ ಪ್ರೇರಣೆಯನ್ನು ಒದಗಿಸಿದರು. 1962 ರಲ್ಲಿ ಅಡಿಗರು ಪ್ರಾರಂಭಿಸಿದ ‘ಸಾಕ್ಷಿ’ ತ್ರೈಮಾಸಿಕ ಸಾಹಿತ್ಯಿಕ ಪತ್ರಿಕೆ ನವ್ಯ ಸಾಹಿತ್ಯಕ್ಕೆ ವಿಮರ್ಶೆಯ ಗಟ್ಟಿತನ ನೀಡಿ, ಚರ್ಚೆಯ ವೇದಿಕೆಯಾಗಿ ನವ್ಯ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು.

ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಮತ್ತು ಮಹತ್ವ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು.

1946 ರಲ್ಲಿ ಅಡಿಗರ ಮೊದಲನೆಯ ಕವನಸಂಕಲನ ‘ಭಾವತರಂಗ’ ಬಂದಾಗ, ಅದಕ್ಕೆ ಮುನ್ನುಡಿ ಬರೆದಿದ್ದ ದ. ರಾ. ಬೇಂದ್ರೆಯವರ ಈ ಮಾತುಗಳು ಅಡಿಗರ ಬಗ್ಗೆ ಈಗಲೂ ಹೇಳಬಹುದಾದ ಮಾತು ಎನ್ನುವುದರಿಂದ ಬೇಂದ್ರೆಯವರು ತರುಣ ಕವಿಯಲ್ಲಿದ್ದ ಶಕ್ತಿಯನ್ನೂ, ಸತ್ವವನ್ನೂ ಆಗಲೇ ಗುರುತಿಸಿದ್ದರು ಎನ್ನುವುದು ತಿಳಿಯುತ್ತದೆ. ಬೇಂದ್ರೆಯವರ ಮಾತು ಇದು: “ಇಂದಿನ ಕನ್ನಡ ನುಡಿಯ ಕಾಂತಿ ಮಾಧುರ್ಯ ಓಜಸ್ಸುಗಳನ್ನು ಬೆಳೆಸುವ ನವಕವಿಗಳಲ್ಲಿ ನಿಸ್ಸಂಶಯವಾಗಿ ಅಡಿಗರ ಕೌಶಲದ ಉಡುಗರೆಯಿದೆ. ಅವರ ಗೀತೆಗಳು ಕೆಲವು ಮೂಕ ಹೃದಯಗಳಿಗೆ ಕಲಕಂಠಗಳನ್ನೂ ಸುಕುಮಾರ ಹೃದಯಗಳಿಗೆ ಒಂದು ಭರವಸೆಯನ್ನೂ ಕೊಡುವುದೆಂದು ನಾನು ಹೇಳಬಲ್ಲೆ.” (ದ. ರಾ. ಬೇಂದ್ರೆ: 24.1.1946). ಅಡಿಗರ ಭಾವಗೀತೆಗಳು ಮತ್ತು ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ಪ್ರತಿಮಾ ವಿಧಾನದ ಕವನಗಳು ಆ ಕಾರ್ಯವನ್ನು ಇಂದಿಗೂ ನಿರ್ವಹಿಸುತ್ತಿವೆ. ಇಂಗ್ಲಿಷ್ ಕವಿ ನಿಸ್ಸಿಂ ಇಝೆಕಿಲ್ ಅವರು “ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ” ಎಂದು ಹೇಳಿರುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ.

ಬಾಲ್ಯ – ವಿದ್ಯಾಭ್ಯಾಸ

ಗೋಪಾಲಕೃಷ್ಣ ಅಡಿಗರು ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮೊಗೇರಿ ಎಂಬ ಹಳ್ಳಿಯಲ್ಲಿ 1918ರ ಫೆಬ್ರವರಿ 18ರಂದು ಜನಿಸಿದರು. ‘ಆಸ್ರಣ್ಣ’, ‘ಅಡಿ’ ಅಥವಾ ‘ಅಡಿಗ’ ಇತ್ಯಾದಿ ಶಬ್ದಗಳು ಹಿಂದೆ ಅರ್ಚಕ ವೃತ್ತಿಯನ್ನು ಸೂಚಿಸುತ್ತಿದ್ದ ವೃತ್ತಿಸಂಬಂಧೀ ಉಪನಾಮಗಳಾಗಿದ್ದವು. ಅಡಿಗರ ಮನೆ ವಿದ್ವತ್ತಿಗೆ ಪ್ರಸಿದ್ಧವಾಗಿತ್ತು. ಅಡಿಗರ ಹಿರಿಯರು ಮೊಗೇರಿ ಪಂಚಾಂಗವನ್ನು ಸಿದ್ಧಪಡಿಸುತ್ತಿದ್ದರು. ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರು. ಅವರ ಹತ್ತಿರದ ಬಂಧುಗಳೊಬ್ಬರು ಅವರ ಮನೆಯಲ್ಲೇ ಇದ್ದು ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರಂತೆ. ಅವರ ಸೋದರತ್ತೆ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರು. ಅಡಿಗರ ಮೇಲೆ ಬಾಲ್ಯದಲ್ಲಿಯೇ ಕಾವ್ಯ, ಪುರಾಣ, ಯಕ್ಷಗಾನಗಳ ಪ್ರಭಾವ ಉಂಟಾಗಿತ್ತು. ಅವರು ಬಾಲ್ಯದಲ್ಲಿ ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ಹೋಗಿ ನೋಡುತ್ತಿದ್ದರು. ಅಡಿಗರೂ ಯಕ್ಷಗಾನದ ತಾಳಮದ್ದಳೆ ಪ್ರಕಾರದಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದುಂಟು. ಅಡಿಗರ ಕಾವ್ಯದಲ್ಲಿ ಯಕ್ಷಗಾನದ ಮಾತಿನ ಗತ್ತು ಮತ್ತು ಸ್ವಗತದ (ಪೀಠಿಕೆ) ನಿರೂಪಣಾವಿಧಾನಗಳು ಅಲ್ಲಲ್ಲಿ ಕಾಣಿಸುತ್ತವೆ. ಅವರು ವಿದ್ಯಾರ್ಥಿಯಾಗಿದ್ದಾಗ, ತರಗತಿಯಲ್ಲಿ ಅಧ್ಯಾಪಕರಿಲ್ಲದಾಗ ಅಡಿಗರು ಮೇಷ್ಟರ ರೂಲರನ್ನೇ ಗದೆಯಂತೆ ಹಿಡಿದು ಯಕ್ಷಗಾನದ ಕುಮ್ಮುಚಟ್ಟು ಕುಣಿದು, ತರಗತಿಯ ಹೂಜಿ ಒಡೆದು, ಅಧ್ಯಾಪಕರ ಕೈಗೆ ಸಿಕ್ಕಿಹಾಕಿಕೊಂಡದ್ದನ್ನು ಅವರು ತಮ್ಮ ‘ಕೂಪ ಮಂಡೂಕ’ ಕವನದಲ್ಲಿ ತಂದಿದ್ದಾರೆ!

ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ಬಿಜೂರು ಮತ್ತು ಬೈಂದೂರುಗಳಲ್ಲಿ ಮುಗಿಸಿ, ಕುಂದಾಪುರ ಹೈಸ್ಕೂಲಿಗೆ ಸೇರಿದರು. ಗಾಂಧೀ ಚಳವಳಿಯ ಉತ್ಸಾಹದಲ್ಲಿ ಅಡಿಗರೂ ಹೆಂಡದಂಗಡಿಯ ಎದುರಿಗೆ ಪಿಕೆಟಿಂಗ್ ಮಾಡಲು ಹೋಗತೊಡಗಿದರು. ಆಗ ದೇಶಭಕ್ತಿಯ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವೂ ಆದವು. ಮುಂದೆ ಮೈಸೂರಿನಲ್ಲಿ ಇಂಟರ್‍ಮೀಡಿಯೆಟ್ ಮಾಡಿ, ಬಿ. ಎ (ಆನರ್ಸ್) ಪದವಿಯನ್ನು 1942 ರಲ್ಲಿ ಮುಗಿಸಿ ಸರಕಾರಿ ಸೇವೆಗೆ ಸೇರಿ, ಅಧ್ಯಾಪಕರಾಗಿ ದಾವಣಗೆರೆ ಮತ್ತು ಬೆಂಗಳೂರು ಹೈಸ್ಕೂಲುಗಳಲ್ಲಿ ಕೆಲಸ ಮಾಡಿದರು. ಆ ನಂತರ ಸ್ವಲ್ಪ ಕಾಲ ಸರಕಾರಿ ಕಛೇರಿಯಲ್ಲಿ (ಅಠಾರಾ ಕಛೇರಿ) ಗುಮಾಸ್ತರಾಗಿ ಕೆಲಸ ಮಾಡಿದರು. 1948 ರಿಂದ ಅವರು ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಈ ನಡುವೆ ಅಡಿಗರು ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ (ಇಂಗ್ಲಿಷ್‌) ಪದವಿ ಪಡೆದಿದ್ದರು.

ಅಡಿಗರು 1964ರಲ್ಲಿ ಸಾಗರದಲ್ಲಿ ಪ್ರಾರಂಭವಾದ ಹೊಸ ಕಾಲೇಜು ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಮೊದಲನೆಯ ಪ್ರಿನ್ಸಿಪಾಲರಾಗಿ, ಆ ಹೊಸ ಕಾಲೇಜನ್ನು ಕಟ್ಟಿ ಬೆಳೆಸಿದರು. 1968 ರಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಿಂದ ಆಹ್ವಾನ ಬಂದಾಗ ಸಾಗರದಿಂದ ಉಡುಪಿಗೆ ಬಂದು ಪ್ರಿನ್ಸಿಪಾಲರ ಹುದ್ದೆಯನ್ನು ಸ್ವೀಕರಿಸಿದರು. 1971ರ ಲೋಕಸಭಾ ಚುನಾವಣೆಯಲ್ಲಿ ಒಂಬತ್ತು ಪಕ್ಷಗಳ ಒಕ್ಕೂಟದ ಬೆಂಬಲದೊಂದಿಗೆ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಆತ್ಮೀಯರ ಒತ್ತಾಯಕ್ಕೆ ಮಣಿದು, ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿದರು. ಕಾಂಗ್ರೆಸ್ ಸರಕಾರದ ಧೋರಣೆಗಳು ಅವರಿಗೆ ಇಷ್ಟವಾಗಿರಲಿಲ್ಲವಾದ ಕಾರಣ ಅಡಿಗರು ಒಪ್ಪಿಕೊಂಡಿದ್ದರು. ಅದಕ್ಕಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ ವಿಪಕ್ಷಗಳ ಪ್ರಯತ್ನಗಳೆಲ್ಲ ವಿಫಲವಾಗಿ, ಆಗ ವಿಜೃಂಭಿಸುತ್ತಿದ್ದ `ಇಂದಿರಾ ಅಲೆ’ಯ ಕಾರಣ ಅಡಿಗರು ಚುನಾವಣೆಯಲ್ಲಿ ಸೋತರು.

ಅಡಿಗರು 1972 ರಿಂದ ದೆಹಲಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್‌ನ ಡೆಪ್ಯುಟಿ ಡೈರೆಕ್ಟರ್ ಆಗಿ, ನಂತರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ ಸ್ಟಡೀಸ್, ಸಿಮ್ಲಾ ಇಲ್ಲಿ ವಿಸಿಟಿಂಗ್ ಫೆಲೋ ಆಗಿ ಕೆಲಸ ಮಾಡಿ ನಿವೃತ್ತರಾದ ಮೇಲೆ ತಮ್ಮ ವಿಶ್ರಾಂತ ಬದುಕನ್ನು ಬೆಂಗಳೂರಿನಲ್ಲಿ ಕಳೆದರು. 1980 ರಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಂಡಿದ್ದರು.


ಸಂಸಾರ:
ಅಡಿಗರು 1944 ರಲ್ಲಿ ಶಿವಮೊಗ್ಗದ ಲಲಿತಾ ಅವರನ್ನು ಮದುವೆಯಾದರು. ಈ ದಂಪತಿಗಳಿಗೆ ಐವರು ಮಕ್ಕಳು – ಮೂರು ಹೆಣ್ಣು, ಎರಡು ಗಂಡು ಮಕ್ಕಳು. ಹೆಣ್ಣುಮಕ್ಕಳಾದ ವಿದ್ಯಾ, ನಂದಿನಿ, ಅಂಜನಾ ತಮ್ಮ ಕುಟುಂಬಗಳೊಂದಿಗೆ ವಿದೇಶಗಳಲ್ಲಿ ಇದ್ದಾರೆ. ಹಿರಿಯ ಮಗ ಜಯಂತ ಮತ್ತು ಕಿರಿಯ ಮಗ ಡಾ. ಪ್ರದ್ಯುಮ್ನ ಬೆಂಗಳೂರಿನಲ್ಲಿದ್ದಾರೆ. ಅಡಿಗರ ಬದುಕಿನಲ್ಲಿ ಲಲಿತಾ ಅಡಿಗರು ಬಹಳ ದೊಡ್ಡ ಸ್ಫೂರ್ತಿಯಾಗಿದ್ದರು. ಪತ್ನಿಯ ಬಗ್ಗೆ ಅಡಿಗರು, ‘ಜೀವ ಸಖಿ’, ‘ನಗು ನನ್ನ ನಲ್ಲೆ’, ‘ನನ್ನವಳೀ ಹೆಣ್ಣು’ ಮುಂತಾದ ಕವಿತೆಗಳನ್ನು ಬರೆದಿದ್ದಾರೆ. ‘ಮೌನದ ಸುವರ್ಣ ಪುತ್ಥಳಿ’ ಅಡಿಗರು ಪತ್ನಿಯ ಬಗ್ಗೆ ಬರೆದ ಪ್ರಸಿದ್ಧ ಕವನ, ಇದು ಅವರ ಒಂದು ಸಂಕಲನದ ಶೀರ್ಷಿಕೆಯೂ ಹೌದು. ಅಡಿಗರು 1992 ರಲ್ಲಿ ತೀರಿಕೊಂಡರು.

ನವ್ಯದ ನಾಯಕತ್ವ

1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರು 1962 ರಲ್ಲಿ `ಸಾಕ್ಷಿ’ ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಪ್ರಾರಂಭಿಸಿ, ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಪರಿಚಯಿಸಿ, ಹೊಸ ಬರಹಗಳ ವಿಮರ್ಶೆ ನಡೆಸಿ, ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ.

ಅಡಿಗರ ನವ್ಯಮಾರ್ಗವನ್ನು ಒಪ್ಪಿದ ಆಗಿನ ಯುವಪೀಳಿಗೆಯ ಪ್ರತಿಭಾವಂತ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕೆ.ವಿ. ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಎಂ.ಎನ್. ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ, ಡಾ. ನಾ. ಮೊಗಸಾಲೆ, ರಾಮದಾಸ್ ಮೊದಲಾದ ಸಾಹಿತಿಗಳು ತಮ್ಮ ತಮ್ಮ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ನವ್ಯಸಾಹಿತ್ಯವನ್ನು ರಚಿಸಿದರು. ಮುಂದೆ ತೇಜಸ್ವಿ, ಲಂಕೇಶ್, ಚಂದ್ರಶೇಖರ ಪಾಟೀಲ ಮುಂತಾದವರು ಭಿನ್ನ ದಾರಿಯಲ್ಲಿ ಸಾಗಿದರು. ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಗಳು ಮುನ್ನೆಲೆಗೆ ಬಂದು ನವ್ಯ ಸಾಹಿತ್ಯ ಹಿನ್ನೆಲೆಗೆ ಸರಿಯಿತು.

ಅಡಿಗರ ಕಾವ್ಯ

ಛಂದಸ್ಸುಗಳಲ್ಲಿ ಅಡಿಗರಿಗೆ ಬಾಲ್ಯದಲ್ಲಿಯೇ ಹಿಡಿತವಿದ್ದುದನ್ನು ಈಗಾಗಲೇ ಗಮನಿಸಿದೆವು. ಮೈಸೂರಿಗೆ ಇಂಟರ್‍ಮೀಡಿಯೇಟ್ ಓದಲು ಹೋದ ಅಡಿಗರಿಗೆ ಮುಂದೆ ಅಲ್ಲಿ ಹೊಸ ಚಿಂತನೆಯ ತರುಣ ಸಾಹಿತಿಗಳ ಒಡನಾಟ ಲಭ್ಯವಾಯಿತು. ಅವರ ಕವಿತೆಗಳಲ್ಲಿ ಹೊಸ ವಿಚಾರಗಳು ಸೇರಿಕೊಂಡವು. ಬಿ.ಎಚ್. ಶ್ರೀಧರ (ಇವರು ಅಡಿಗರ ಸಂಬಂಧಿಯೇ; ಕವಿ), ಎಚ್. ವೈ. ಶಾರದಾಪ್ರಸಾದ್, ಚದುರಂಗ, ಕೆ. ನರಸಿಂಹಮೂರ್ತಿ, ಟಿ.ಎಸ್. ಸಂಜೀವ ರಾವ್, ಎಂ. ಶಂಕರ ಮುಂತಾದವರ ಸ್ನೇಹ ಅವರಿಗೆ ಲಭಿಸಿತು. ಹೊಸ ಉತ್ಸಾಹದಲ್ಲಿ ಅಡಿಗರು ಬರೆಯಲಾರಂಭಿಸಿದರು. ಅವರ ‘ಒಳತೋಟಿ’ ಕವನ ಬಿ.ಎಂ.ಶ್ರೀ. ರಜತಮಹೋತ್ಸವ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ನಂತರ ಅವರ ಸಂಕಲನಗಳು ಪ್ರಕಟವಾಗಲಾರಂಭಿಸಿದವು.

ಅವು: ‘ಭಾವತರಂಗ’ (1946), ಕಟ್ಟುವೆವು ನಾವು (1948), ನಡೆದು ಬಂದ ದಾರಿ (1952), ಚಂಡೆಮದ್ದಳೆ (1954), ಭೂಮಿಗೀತ (1959), ವರ್ಧಮಾನ (1972), ಇದನ್ನು ಬಯಸಿರಲಿಲ್ಲ (1975), ಮೂಲಕ ಮಹಾಶಯರು (1981), ಬತ್ತಲಾರದ ಗಂಗೆ (1983), ಚಿಂತಾಮಣಿಯಲ್ಲಿ ಕಂಡ ಮುಖ (1987), ಸುವರ್ಣ ಪುತ್ಥಳಿ (1990) ಹಾಗೂ ಬಾ ಇತ್ತ ಇತ್ತ (1993) ಪ್ರಕಟಗೊಂಡವು. 1937ರಿಂದ 1976ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ 1987ರಲ್ಲಿ ಪ್ರಕಟಗೊಂಡಿತು.

‘ಅನಾಥೆ’, ಮತ್ತು ‘ಆಕಾಶದೀಪ’ ಅವರ ಎರಡು ಕಾದಂಬರಿಗಳು. ಸಣ್ಣಕತೆಗಳು ಮತ್ತು ಆತ್ಮಚರಿತ್ರೆ ಪ್ರಕಾರಗಳಲ್ಲಿಯೂ ಅವರ ಸೃಜನಶೀಲ ಬರವಣಿಗೆ ನಡೆದಿದೆ. ಪ್ರಬಂಧಗಳು, ವಿಮರ್ಶೆ, ವೈಚಾರಿಕ ಬರಹಗಳು, ಅವರ ಎಲ್ಲ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’ ಎಂಬ ಸಂಪುಟದಲ್ಲಿ ಪ್ರಕಟವಾಗಿತ್ತು. ಅನೇಕ ಇಂಗ್ಲಿಷ್ ಕೃತಿಗಳನ್ನು ಅವರು ಅನುವಾದಿಸಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಅಡಿಗರ ಸಮಗ್ರ ಸಾಹಿತ್ಯವನ್ನು ಏಳು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದೆ. ಸಂಪಾದಕರು: ಡಾ. ಸುಮತೀಂದ್ರ ನಾಡಿಗ್.

ಈ ಪ್ರಬಂಧದಲ್ಲಿ ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು ಸರಳವಾಗಿ ಪರಿಚಯಿಸಲಾಗಿದೆ. ನವೋದಯ, ಪ್ರಗತಿಶೀಲ ಮತ್ತು ನವ್ಯ ಎಂಬ ಮೂರು ಕಾವ್ಯ ಪಂಥಗಳಿಗೆ ಸೇರಿಸಬಹುದಾದ ಅವರ ಕೆಲವು ಜನಪ್ರಿಯ ಕವಿತೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

‘ಭೂಮಿಗೀತ’ದಂತಹ ದೀರ್ಘ ರಚನೆಗಳನ್ನು ಕೊಟ್ಟಿಲ್ಲ. ಅಡಿಗರ ಎಲ್ಲ ಕವಿತೆಗಳೂ ಮುಖ್ಯವೇ. ಈಗಲೇ ಹೇಳಿದಂತೆ ಅವರ ಕವಿತೆಗಳನ್ನು ಒಟ್ಟಿಗೆ ಓದುವಾಗ, ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಅಂತಹ ಓದಿಗೆ ಈ ಬರಹ ಪ್ರೇರಣೆಯಾಗಬೇಕು ಎಂಬುದಷ್ಟೇ ಲೇಖಕನ ಆಶಯ.

‘ಭಾವತರಂಗ’ದ ಮೊದಲನೆಯ ಕವಿತೆಯಲ್ಲಿಯೇ ಅಡಿಗರು ಹೀಗೆ ಹೇಳಿದ್ದಾರೆ:

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ (ನನ್ನ ನುಡಿ)

ವಸ್ತು ಹಾಗೂ ಅಭಿವ್ಯಕ್ತಿ ಎರಡರಲ್ಲೂ ಹೊಸದನ್ನು ಸಾಧಿಸಬೇಕೆಂಬ ಹಂಬಲವನ್ನು ಇಲ್ಲಿ ಕಾಣಬಹುದಾಗಿದೆ. ಅಡಿಗರ ಕಾವ್ಯದ ಮಹತ್ವ ಇರುವುದು ಈ ಅಂಶಗಳಲ್ಲಿಯೇ.

ಅಡಿಗರು ಕಾವ್ಯದ ಬಗ್ಗೆ ಹೇಳುವ ಒಂದೆರಡು ಅಭಿಪ್ರಾಯಗಳು ಹೀಗಿವೆ: 1) “ಮನಸ್ಸಿನ ಮೇಲ್ಪದರುಗಳನ್ನಷ್ಟೇ ಒಳಗೊಳ್ಳುವ ಹಾಗೆ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸಿದ್ಧಿಸುವುದಿಲ್ಲ. ಪ್ರಜ್ಞೆಯ ಜೊತೆಗೆ ಪ್ರಜ್ಞೆಯ ತಳದಲ್ಲಿ ಅಥವಾ ಅದರ ಮೇಲಕ್ಕೆ ಇರುವ ಎಲ್ಲ ಒಳ ಅಂಶಗಳೂ ಹಠಾತ್ತಾಗಿ ಸೇರಿದರೆ ಉತ್ತಮ ಕಾವ್ಯ ಆಗುತ್ತದೆ. ಇದಕ್ಕೆ ನಿರಂತರ ಪರಿಶ್ರಮ ಹೇಗೋ ಹಾಗೆ ಅಸಾಧಾರಣವಾದ ತಾಳ್ಮೆಯಿಂದ ತಕ್ಕ ಮುಹೂರ್ತಕ್ಕಾಗಿ ಕಾಯುವುದೂ ಅಗತ್ಯ”. 2) “ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸಕಾಲದ ಹೊಸ ಬದುಕಿಗೆ ಅತ್ಯಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದ ಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿಗೆ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ”(`ಸಮಗ್ರ ಕಾವ್ಯ’ದಲ್ಲಿ).

ಅಡಿಗರ ಮೇಲಿನ ಅಭಿಪ್ರಾಯಗಳು ರೂಪುಗೊಂಡಿದ್ದು ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ; `ಭಾವತರಂಗ’ (1946), `ಕಟ್ಟುವೆವು ನಾವು’ (1948) ಸಂಕಲನಗಳು ಪ್ರಕಟವಾಗಿ `ನಡೆದು ಬಂದ ದಾರಿ’ (1952) ಪ್ರಕಟವಾಗಲು ಸಿದ್ಧವಾಗಿರುವ ಸುಮಾರಿಗೆ. ಈ ಮೂರು ಸಂಕಲನಗಳಲ್ಲಿ ಅಡಿಗರು ಅದುವರೆಗಿನ ಕಾವ್ಯ ಚಳವಳಿಗಳ ಸತ್ವವನ್ನು ಹೀರಿಕೊಂಡು ಆಯಾಯ ಮಾರ್ಗಗಳ ಉತ್ತಮ ಕವನಗಳನ್ನು ನೀಡಿದರೆಂದು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ (`ಅನನ್ಯ’ದಲ್ಲಿ).

ಅಂದರೆ `ಭಾವತರಂಗ’ದಲ್ಲಿ ರಮ್ಯ ಶೈಲಿಯ ಉತ್ತಮ ಕವನಗಳೂ, `ಕಟ್ಟುವೆವು ನಾವು’ ಸಂಕಲನದಲ್ಲಿ ಪ್ರಗತಿಶೀಲ ಆಶಯದ ಅತ್ಯುತ್ತಮ ಕವನಗಳೂ ಇವೆ. `ನಡೆದು ಬಂದ ದಾರಿ’ಯಲ್ಲಿ ಅಡಿಗರು ತಾವು ನಡೆದು ಬಂದ ದಾರಿಯನ್ನು ಅವಲೋಕಿಸಿಕೊಂಡು ಹೊಸದಾರಿಗೆ ಹೊರಳಲು ಸಿದ್ಧತೆ ನಡೆಸಿದ್ದಾರೆ. ಅಡಿಗರ `ಚಂಡೆ ಮದ್ದಳೆ'(1954) ನವ್ಯ ಪಂಥದ ಆಗಮನವನ್ನು ಸಾರಿದ ಕವನ ಸಂಕಲನವಾದರೆ `ಭೂಮಿಗೀತ'(1959) ನವ್ಯ ಪಂಥದ ಅತ್ಯುತ್ತಮ ಸಂಕಲನವಾಗಿ, `ವರ್ಧಮಾನ'(1972) ನವ್ಯದ ಮತ್ತೊಂದು ಪ್ರಮುಖ ಕೃತಿಯಾಗಿ ಇತಿಹಾಸ ನಿರ್ಮಿಸಿದವು. ಅಡಿಗರ ಆ ಮೇಲಿನ ಕೃತಿಗಳು: `ಇದನ್ನು ಬಯಸಿರಲಿಲ್ಲ'(1975), `ಮೂಲಕ ಮಹಾಶಯರು'(1980), `ಬತ್ತಲಾರದ ಗಂಗೆ’ (1983) `ಚಿಂತಾಮಣಿಯಲ್ಲಿ ಕಂಡ ಮುಖ’ (1987), `ಸುವರ್ಣ ಪುತ್ಥಳಿ’ (1980) ಮತ್ತು `ಬಾ ಇತ್ತ ಇತ್ತ’ (ಮರಣೋತ್ತರ) – ಈ ಕೃತಿಗಳಲ್ಲಿ ಅವರ ಕಾವ್ಯದ ಸತ್ವ ಮತ್ತು ಮಹತ್ವವನ್ನು ನೆನಪಿಸುವ ಕವನಗಳಿವೆ.

ಅಡಿಗರ ಭಾವಗೀತೆಗಳು

`ಭಾವತರಂಗ’ದ ಕವನಗಳು ರಮ್ಯ ಸಂಪ್ರದಾಯದ್ದೇ ಆದರೂ ಅಡಿಗರು ಸನ್ನಿವೇಶಗಳನ್ನು ನಾಟಕೀಯವಾಗಿ ಸೃಷ್ಟಿಸುವುದರಿಂದ ಅವು ಖಚಿತವಾಗಿ ಓದುಗರಿಗೆ ಅನುಭವವೇದ್ಯವಾಗುತ್ತವೆ. ರಮ್ಯ ಪಂಥದ ಏಕತಾನತೆಯನ್ನು ಮೀರುವ ಪ್ರಯತ್ನಗಳಾಗಿಯೂ ಈ ಕವನಗಳಿಗೆ ಮಹತ್ವವಿದೆ.

ಅಡಿಗರ ಭಾವಗೀತೆಗಳು ಕೂಡ ಬದುಕಿನ ದ್ವಂದ್ವವನ್ನು, ಸರಳವಲ್ಲದ ಅನುಭವಗಳನ್ನು ಹೇಳುತ್ತವೆ; ಮಹತ್ವದ ಕರ್ಷಣ ಗುಣವನ್ನು (‘ಹೊಳೆಯ ಕೊಳಕೆಯಲಿ ಮುಳುಗಿ ಕಂಡೆನು ಬಾನಿನೊಂದು ಪೆಂಪ’ ಎನ್ನುವ ‘ಇದು ಬಾಳು’ ಕವಿತೆಯ ಸಾಲನ್ನು ಉದಾಹರಣೆಯಾಗಿ ಗಮನಿಸಬಹುದು) ಹೊಂದಿವೆ. ಆ ಮಟ್ಟಿಗೆ ನವೋದಯದ ಸರಳ ಭಾವಗೀತೆಗಳಿಗಿಂತ ಭಿನ್ನವಾದ ಅನುಭವ ಸಾಂದ್ರತೆಯನ್ನು ಅಡಿಗರ ಭಾವಗೀತೆಗಳು ಒಡಲಲ್ಲಿಟ್ಟುಕೊಂಡಿವೆ. ಇಂತಹ ಮೂರು ಭಾವಗೀತೆಗಳನ್ನು ನೋಡೋಣ:

‘ಕೆಂದಾವರೆ’ ಕವಿತೆಯಲ್ಲಿ ಕವಿ ನವೋದಯದಲ್ಲಿ ಚಿರಪರಿಚಿತವಾದ ತಾವರೆಯ ರೂಪಕವನ್ನೇ ಬಳಸಿಕೊಳ್ಳುತ್ತಾರೆ. ಆದರೆ ಅದನ್ನು ಮಾನವನ ಬದುಕಿನ ಮಹತ್ತರವಾದ ಸಾಧನೆಯ ಬಯಕೆಗೆ, ಉನ್ನತ ಧ್ಯೇಯಕ್ಕೆ ಪ್ರತಿಮೆಯಾಗಿಸಿ ಅನನ್ಯ ಗೀತೆಯಾಗಿಸಿದ್ದಾರೆ.

ಕೆಂದಾವರೆ

ಇಂದು ಕೆಂದಾವರೆ ದಳ ದಳಿಸಿ ದಾರಿಯಲಿ
ಗಂಧದೌತಣ ಹೋಗಿ ಬರುವ ಜನಕೆ ;
ಮಂದರಮಾರುತನಿರಲಿ, ಮರಿದುಂಬಿಯಿರಲಿ, ಆ
ನಂದವಿರೆ ಅತಿಥಿಗಳ ಕರೆಯಬೇಕೆ ?

ನಗುತಲಿದೆ ನೀರು ಹೊಂಬಿಸಿಲು ಕಚಗುಳಿಯಿಡಲು;
ದುಂಬಿಗಳು ಒಲವನೇ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ ; ದೂರದ ಬಾನ
ದಾರಿಯಲಿ ಸಪ್ತಾಶ್ವವೇರಿ ಬಹನು ;

ತನ್ನ ಕೈಕೈಯೊಳೂ ಒಲವುಬಲೆಗಳನಿಟ್ಟು
ನೀರಿನಾಳದೊಳವನು ಬಿಂಬಿಸುವನು;
ಮೈಮರೆತುದಾ ಪದ್ಮ ; ಪರಮೆಗಳ ಪರಿವಾರ
ಮಂಜಾಗಿ ಕರಗಿತ್ತು ಸುತ್ತಮುತ್ತ.

ಇರುವ ದುಂಬಿಯ ಬಿಟ್ಟು ಬರುವ ನೇಸರ ಕರೆಗೆ
ಓಗೊಟ್ಟುದೋ ನನ್ನ ಕೆಂದಾವರೆ ;
ಬರುವ ಬಾಳಿನ ಕನಸು ರವಿಯಾಗಿ ಬಹುದೇನು?
ಕಾಯಬೇಕೋ ಅದಕೆ ಎಲ್ಲಿವರೆಗೆ ?

‘ಇದು ಬಾಳು’ ಅಡಿಗರ ಇನ್ನೊಂದು ಪ್ರಸಿದ್ಧ ಭಾವಗೀತೆ. ಬದುಕಿನ ನಿಜವನ್ನು, ಸತ್ಯವನ್ನು ಅರಿತುಕೊಳ್ಳುವುದು ಕಷ್ಟವೆಂದು ಹೇಳುತ್ತಲೇ ಬದುಕಿನ ಸಂಕೀರ್ಣತೆಯನ್ನು ಹಿಡಿಯುವ ಈ ಕವಿತೆಯ ರೂಪಕಗಳು, ಪ್ರತಿಮೆಗಳು ಬಹಳ ವಿಶಿಷ್ಟವಾಗಿವೆ; ಕವನದ ಅಗತ್ಯಕ್ಕೆ ತಕ್ಕಂತೆ ಕೆಲವು ಉಪಮೆಗಳು ಸ್ವಲ್ಪ ಮಟ್ಟಿಗೆ ಅಮೂರ್ತವೂ (ಉದಾಹರಣೆಗೆ, ಬಾಳಗಂಗೆ – ಸಾವಿನೊಂದು ವೇಣಿ) ಆಗಿದೆ. ಅಳುವ ಕಡಲು, ನಗೆಯ ಹಾಯಿದೋಣಿ, ಬಿಟ್ಟ ಬಾಣ, ಬೂದಿ – ಕಿಡಿ, ಮರದ ಕೊರಡಲ್ಲಿ ಹೂ, ಕೊಳೆಯ ಕೊಳಚೆಯಲ್ಲಿ ಬಾನಿನ ಪೆಂಪು – ಇತ್ಯಾದಿ ರೂಪಕಗಳು ಬಹಳ ಚಿತ್ರವತ್ತಾಗಿವೆ.

ಇದು ಬಾಳು !

1
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ ;
ಬಾಳ ಗಂಗೆಯ ಮಹಾಪೂರದೊಳೂ
ಸಾವಿನೊಂದು ವೇಣಿ

ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರ
ಉರುಳುವಾಟದಲ್ಲಿ !

2
ಆಶೆಬೂದಿತಳದಲ್ಲು ಕೆರಳುತಿವೆ
ಕಿಡಿಗಳೆನಿತೊ ಮರಳಿ,
ಮುರಿದು ಬಿದ್ದ ಮನಮರದ ಕೊರಡೊಳೂ
ಹೂವು ಹೂವು ಅರಳಿ!

ಕೂಡಲಾರದೆದೆಯಾಳದಲ್ಲು ಕಂ
ಡೀತು ಏಕಸೂತ್ರ ;
ಕಂಡುದುಂಟು ಬೆಸೆದೆದೆಗಳಲ್ಲು ಭಿ
ನ್ನತೆಯ ವಿಕಟಹಾಸ್ಯ |

3
ಎತ್ತರೆತ್ತರಕೆ ಏರುವ ಮನಕೂ
ಕೆಸರ ಲೇಪ, ಲೇಪ ;
ಕೊಳೆಯ ಕೊಳಚೆಯಲಿ ಮುಳುಗಿ ಕಂಡನೋ
ಬಾನಿನೊಂದು ಪೆಂಪ ;
ತುಂಬುಗತ್ತಲಿನ ಬಸಿರನಾಳುತಿದೆ
ಒಂದು ಅಗ್ನಿ ಪಿಂಡ ;
ತಮದಗಾಧ ಹೊನಲಲ್ಲು ಹೊಳೆಯುತಿದೆ
ಸತ್ವವೊಂದಖಂಡ |

5
ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ ;
ಯಾರ ಲೀಲೆಗೋ ಯಾರೊ ಏನೊ ಗುರಿ
ಯಿರದೆ ಬಿಟ್ಟಬಾಣ !

ಇದು ಬಾಳು ನೋಡು ; ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ ;
ಹಲವುತನದ ಮೈಮರೆಸುವಾಟವಿದು ;
ನಿಜವು ತೋರದಲ್ಲ !

ಬೆಂಗಾಡು ನೋಡು ಇದು ; ಕಾಂಬ ಬಯಲುದೊರೆ
ಗಿಲ್ಲ ಆದಿ-ಅಂತ್ಯ ;
ಅದ ಕುಡಿದೆನೆಂದ ಹಲರುಂಟು ; ತಣಿದೆನೆಂ
ದವರ ಕಾಣೆನಯ್ಯ !

ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
ವೇಕೊ ಮಲೆತು, ಮೆರೆದು,
ಕೊನೆಗೆ ಕರಗುವೆವು ಮರಣತೀರಘನ
ತಿಮಿರದಲ್ಲಿ ಬೆರೆತು |

ನವೋದಯದ ಭಾವಗೀತೆಗಳಲ್ಲೇ ‘ಮೋಹನ ಮುರಲಿ’ ಅತ್ಯುತ್ಕೃಷ್ಟವಾದುದು. ಈ ಕವಿತೆಯನ್ನು ಓದೋಣ:

ಮೋಹನ ಮುರಲಿ

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೊ ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ ? ಯಾವ ದಿವ್ಯದ ಯಾಚನೆ ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ.
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?

ವಿವಶವಾಯಿತು ಪ್ರಾಣ ; ಹಾ ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

ಪ್ರಾಪಂಚಿಕವಾದ ಸತ್ಯ – ಸೌಂದರ್ಯಗಳನ್ನು, ಸುಖ-ಭೋಗಗಳನ್ನು ಮೀರಿ ಅತೀಂದ್ರಿಯವಾದುದರ, ಅಲೌಕಿಕವಾದುದರ ಕಡೆಗೆ ತುಡಿಯುವ ಕವಿಚೇತನವನ್ನು ಈ ಕವನದಲ್ಲಿ ಕಾಣಬಹುದು. ಬಯಕೆ ತೋಟವನ್ನು ಕೃಷ್ಣನ ವೃಂದಾವನವನ್ನಾಗಿ ಪರಿವರ್ತಿಸಿಬಿಡುವ, ಆ ಬೃಂದಾವನವು ತನ್ನ ಮಿಂಚಿನ ಕೈಯನ್ನು ಚಾಚಿ ಮಣ್ಣಿನ (ಲೌಕಿಕವಾದ) ಅನುಭವಕ್ಕೆ ಅಲೌಕಿಕ ತೀವ್ರತೆಯನ್ನು ನೀಡುವ ಈ ರೂಪಕ ಅಡಿಗರ ಮುಖ್ಯವಾದ ದರ್ಶನದ ಒಂದು ಅಭಿವ್ಯಕ್ತಿ. ತಮ್ಮ ಪ್ರಮುಖ ಕವನಗಳಲ್ಲಿ ವಿವಿಧ ರೂಪಕಗಳ ಮೂಲಕ ಅವರು ಒಂದು ಮುಖ್ಯ ದರ್ಶನವನ್ನು ಕೊಟ್ಟಿದ್ದಾರೆ. ವ್ಯಕ್ತಿಯು ತೀವ್ರ ಪರಿಶ್ರಮದಿಂದ, ದಿವ್ಯವಾದದ್ದರ ಧ್ಯಾನದಿಂದ, ಸಂಸ್ಕೃತಿಯಲ್ಲಿ ಉತ್ಕೃಷ್ಟವಾದುದರ ಅನ್ವೇಷಣೆಯಿಂದ ಮಹತ್ವವನ್ನು ಪಡೆಯಬೇಕು ಎನ್ನುವ ವ್ಯಕ್ತಿವಿಕಸನದ ದರ್ಶನ ಅದು. (ಸೇಡಿಯಾಪು ಕೃಷ್ಣ ಭಟ್ಟರು `ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ ಕಡೆಗಾಲೊಳು ಎಡವಿ ಚೆಲ್ಲಾಡುತ್ತಿರುವ’ ಯುವಪೀಳಿಗೆಯನ್ನು ಕಂಡು ನೊಂದು `ಎಣ್ಣೆ ಹೊಯ್ಯಮ್ಮ ದೀಪಕ್ಕೆ’ ಎಂದು ಪ್ರಾರ್ಥಿಸಿದ್ದರ ಇನ್ನೊಂದು ಮುಖ ಅಡಿಗರ ದರ್ಶನದಲ್ಲಿದೆ.)

ಅಡಿಗರ ಕಾವ್ಯದಲ್ಲಿ ಕಾಣುವ ಒಂದು ಮುಖ್ಯವಾದ ವಸ್ತು ಅಲೌಕಿಕದ ತುಡಿತ. ಅದು ಈ ಭಾವಗೀತೆಯಲ್ಲಿಯೇ ಕಾಣಿಸುತ್ತದೆ. ಲೌಕಿಕ ಸುಖದಲ್ಲಿ ಕಳೆದುಹೋಗಿದ್ದ ವ್ಯಕ್ತಿಯನ್ನು ಥಟ್ಟನೆ ಅಲೌಕಿಕದ ಒಂದು ಸೆಳೆತ ಎಚ್ಚರಿಸುತ್ತದೆ. ಭೂಮಿ – ಆಕಾಶ, ವಾಸ್ತವ – ಆದರ್ಶ, ಲೌಕಿಕ – ಅಲೌಕಿಕದ ನಡುವಿನ ಕರ್ಷಣ (ವಿರುದ್ಧ ದಿಕ್ಕುಗಳ ಸೆಳೆತದಿಂದ ಬರುವ ಬಿಗುವು) ಅವರ ಹಲವು ಕವನಗಳಲ್ಲಿ ಕಾಣಿಸಿಕೊಳ್ಳುವ ಒಂದು ಗುಣ. ‘ಕೆಂದಾವರೆ’ ಕವಿತೆಯಲ್ಲಿಯೂ ‘ಇರುವ ದುಂಬಿಯ ಬಿಟ್ಟು ಬರುವ ನೇಸರ ಕಡೆಗೆ ಅವರ ಕೆಂದಾವರೆ (ಮನಸ್ಸು) ಓಗೊಡು’ವುದನ್ನು ಚಿತ್ರಿಸಿರುವುದನ್ನು ಸ್ಮರಿಸಿಕೊಳ್ಳಬಹುದು.

ಪ್ರಗತಿಶೀಲ ಕವನಗಳು

`ಕಟ್ಟುವೆವು ನಾವು’ ಸಂಕಲನದಲ್ಲಿ ಅಡಿಗರು ಆ ಕಾಲದ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸಿದ್ದಾರೆ. ಅವರು ಬಸವರಾಜ ಕಟ್ಟೀಮನಿ ಮತ್ತು ನಿರಂಜನ ಮುಂತಾದ ಪ್ರಗತಿಶೀಲರೊಂದಿಗೆ ಒಡನಾಟ ಇದ್ದವರೂ, ಸಾಮಾಜಿಕ ಶೋಷಣೆಯ ವಿರುದ್ಧ ಧ್ವನಿ ಎತ್ತುವವರೂ ಆಗಿದ್ದುದರಿಂದ ಇಂತಹ ಕವನಗಳನ್ನು ಬರೆದರು. `ನಾವೆಲ್ಲರು ಒಂದೆ ಜಾತಿ’, `ಕಟ್ಟುವೆವು ನಾವು’, `ಸಮಾಜ ಭೈರವ’, `ಏಳುವುದೆಂದೀ ಜನಪದ’, `ಹುತಾತ್ಮರನ್ನು ನೆನೆದು’, `ಸ್ವಾತಂತ್ರ್ಯಗೀತ’, `ಭಾರತದ ತಂದೆ ಗಾಂಧಿ’ ಮುಂತಾದ (1936ರಿಂದ 1948ರ ವರೆಗಿನ ಅವಧಿಯಲ್ಲಿ ಬರೆಯಲ್ಪಟ್ಟ) ಕವನಗಳ ಶೀರ್ಷಿಕೆಯಷ್ಟೇ ನೋಡಿದರೂ ಕವಿಗೆ ತಾನು ನಾಡಿನ ಜನರನ್ನು ಎಚ್ಚರಿಸುವ, ಹೊಸನಾಡನ್ನು ಕಟ್ಟುವ ಕಾಯಕಕ್ಕೆ ಸಜ್ಜುಗೊಳಿಸಬೇಕೆಂಬ ಹಂಬಲವಿದ್ದುದು ಸ್ಪಷ್ಟವಾಗುತ್ತದೆ.

ಕಟ್ಟುವೆವು ನಾವು

ಕಟ್ಟುವೆವು ನಾವು ಹೊಸ ನಾಡೊಂದನು, – ರಸದ
ಬೀಡೊಂದನು.

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!
ನಮ್ಮೆದೆಯ ಕನಸುಗಳೆ ಕಾಮಧೇನು
ಆದಾವು, ಕರೆದಾವು ವಾಂಛಿತವನು ;
ಕರೆವ ಕೈಗಿಹುದಿದೋ ಕಣಸುಗಳ ಹರಕೆ ;
ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ |
ಜಾತಿಮತಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲುಗಳು ;
ರೂಢಿರಾಕ್ಷಸನರಸುಗೈಯುವನು, ತೋಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ !
ನಾವು ಹಿಂದೆಗೆವೆವೇ ? ವೀರ ತರುಣರು ನಾವು !
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,
ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು !
ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೇ ಹೊಸ ನಾಡ ತೊಟ್ಟಿಲು
ಆದಾವು ; ಅಂಜುವೆದೆ ನಮ್ಮದಲ್ಲ ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ !
ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ !
ಇಂದು ಬಾಳಿದು ಕೂಳ ಕಾಳೆಗವು ; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ !
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು !
ಇಲ್ಲೆ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು ;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ .
ಹೊಮ್ಮುವುದು ಕಾದು ನೋಡು!
ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು ;
ಅದರ ಹಾರಾಟಕ್ಕೆ ಬಾನೆ ಗಡಿಯು,
ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ !
ಕೊಟ್ಟೆವಿದೊ ವೀಳೆಯವನು ;
ನಿಮ್ಮೆಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವವು ನಾವು ಹೊಸ ನಾಡೊಂದನು, -ಸುಖದ ಬೀಡೊಂದನು!

ಇದೇ ಸಂಕಲನದಲ್ಲಿರುವ ‘ಸಮಾಜ ಭೈರವ’ ಎಂಬ ಕವನ ಸಾಮಾಜಿಕವಾಗಿರದೆ, ಕವಿ ಸಮಾಜದಿಂದ ಭಿನ್ನವಾಗಿ, ವೈಯಕ್ತಿಕತೆಯನ್ನು ಬೆಳೆಸಿಕೊಳ್ಳಲು ಮಾಡುವ ಪ್ರಯತ್ನವನ್ನೇ ಹೇಳುತ್ತದೆ. `ತೊರೆಗಳೆಲ್ಲ ಬರಲಿಬಿಡು!’ ಎಂಬ ಕವನವೂ ವ್ಯಕ್ತಿತ್ವದ ಬೆಳವಣಿಗೆಯನ್ನೇ ಕುರಿತಿದೆ. ಅಂದರೆ ಕವಿ ಸಾಮಾಜಿಕ ಜವಾಬ್ದಾರಿಯ ಕವನಗಳನ್ನು ಬರೆಯುತ್ತಿದ್ದರೂ ಮನೋಲೋಕವೇ ಅವರಿಗಿನ್ನೂ ಪ್ರಧಾನವಾಗಿವೆ. ಇಂಥ ಕವನಗಳ ನಡುವೆ ಅದ್ಭುತವಾದ `ಮೋಹನ ಮುರಲಿ’ ಕವನವೂ ಇದೇ ಸಂಕಲನದಲ್ಲಿದೆ.

ನವ್ಯ ಕವನಗಳು

ಅಡಿಗರ ಮೂರನೆಯ ಸಂಕಲನ ‘ನಡೆದು ಬಂದ ದಾರಿ’ ಅವರು ಹೊಸ ಕಾವ್ಯದ ಕಡೆಗೆ ಹೊರಳಿಕೊಂಡದ್ದರ ಮತ್ತು ಆ ಬಗ್ಗೆ ಸಾಕಷ್ಟು ಚಿಂತನ ಮಂಥನ ನಡೆಸಿದ್ದಕ್ಕೆ ಸಾಕ್ಷಿಯನ್ನು ಕೊಡುವ ಸಂಕಲನ. ಇದರ ಕವನಗಳಲ್ಲಿ ಅಡಿಗರ ಕಾವ್ಯ ಭಾಷೆ ಮತ್ತು ವಿಚಾರಗಳು ನವ್ಯ ಕಾವ್ಯದ ಮುನ್ಸೂಚನೆ ಕೊಡುವಂತಿದ್ದವು. ಈ ಸಂಕಲನಕ್ಕೆ ಅಡಿಗರು ಬರೆದ ಮುನ್ನುಡಿ ಒಂದು ಮಹತ್ವದ ಸಾಹಿತ್ಯ ಚಿಂತನೆಯ ಪ್ರಬಂಧ ಎಂದು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಗುರುತಿಸಿದ್ದಾರೆ.

`ನಡೆದು ಬಂದ ದಾರಿ’ ಸಂಕಲನದಲ್ಲಿ `ನನ್ನ ಅವತಾರ’ ಎಂಬ ಕವನವಿದೆ. ಅದರಲ್ಲಿ ರಾಮ, ಕೃಷ್ಣ, ಬುದ್ಧ ಮತ್ತು ಗಾಂಧಿ ಈ ನಾಲ್ಕು ಅವತಾರ ಪುರುಷರ ಜತೆಯಿದ್ದ ಕಾವ್ಯನಾಯಕ ತಾನು ಹಾಗಾಗಲಿಲ್ಲ ಎಂದು ಹಲುಬುತ್ತಾನೆ. ಅವರೆಲ್ಲ ಅವನಂತೆಯೆ ಇದ್ದರು. ಅವನು `ಸಣ್ಣ ಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ ಪಾಚಿಕಟ್ಟಿ’, ಕೆಂಡದ ಬಳಿ ಇದ್ದೂ ಉರಿಯದ ಇದ್ದಲಿನಂತೆ, ಆರೆಂದರೆ ಹಿಗ್ಗದೆ ಮೂರೆಂದರೆ ಕುಗ್ಗದೆ ಬದುಕಿದ. ಅವರು ಮಾತ್ರ ಅವತಾರ ಪುರುಷರಾದರು. ವ್ಯಕ್ತಿಯ ಆಂತರಿಕ ವಿಕಾಸ ಮುಂದೆ ಅಡಿಗರಲ್ಲಿ ಒಂದು ಮುಖ್ಯ ವಸ್ತುವಾಗುತ್ತದೆ.

ಅವನೋ ಮಹಾತ್ಮನಾದ; ಅರಳಲಿಲ್ಲ ನನ್ನ ಮನ
ನಾನು ಅವನು ಒಂದೆ ಲೋಹ,
ಕಬ್ಬಿಣ – ಕರಿ ಕಬ್ಬಿಣ.
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ.

-ಎಂದು ನಾಯಕ ಚಿಂತಿಸುತ್ತಾನೆ.

ಅಡಿಗರ ನವ್ಯ ಕವನಗಳಲ್ಲಿ ನಿರೂಪಕ ‘ನಾನು’ ಅನ್ನುವವನು ಒಂದು ಜನಾಂಗದ ಸಾಕ್ಷೀಪ್ರಜ್ಞೆಯಾಗುವಂತೆ ಅಡಿಗರು ಬರೆದರು. ಯಕ್ಷಗಾನದ, ಅದರಲ್ಲಿಯೂ ತಾಳಮದ್ದಳೆಯಲ್ಲಿ ಪಾತ್ರಗಳು ಪೀಠಿಕೆಯಾಗಿ, ಸ್ವಗತದಂತೆ ತಮ್ಮ ಒಳತೋಟಿಗಳನ್ನು ಹೇಳಿಕೊಳ್ಳುವ ತಂತ್ರ ಅವರಿಗೆ ಹೊಸ ಸಂವೇದನೆಗಳನ್ನು ಹೇಳಿಕೊಳ್ಳಲು ಒದಗಿಬಂತು. ಈ ಮಟ್ಟಿಗೆ ಕಡೆಂಗೋಡ್ಲು ಶಂಕರ ಭಟ್ಟರ ಪರಂಪರೆಯನ್ನು (ಅವರ ಭಾಷೆಯ ಬಿಗುವು, ಓಜಸ್ಸು, ತಾಳಮದ್ದಳೆಯ ಡ್ರಾಮಾಟಿಕ್ ಮೊನೋಲಾಗ್ ತಂತ್ರ ಇವುಗಳನ್ನು) ಅಡಿಗರು ಮುಂದುವರಿಸಿದರು. ಅಡಿಗರ ವಸ್ತುಗಳು ಮಾತ್ರ ವರ್ತಮಾನದ ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ತುಡಿತಗಳು, ವ್ಯಕ್ತಿಯ ಅಂತರಂಗದ ವಿಕಾಸ ಇತ್ಯಾದಿಗಳಾಗಿದ್ದವು. ಅವರು ಛಂದಸ್ಸನ್ನು ಬಿಟ್ಟು ಮುಕ್ತ ಛಂದಸ್ಸಿನ ಕಡೆಗೆ ಚಲಿಸಿದರೂ ಕಾವ್ಯದ ಲಯ ಅವರ ಸಾಲುಗಳಲ್ಲಿ ಮಿಡಿಯುತ್ತಲೇ ಇರುತ್ತದೆ. ಇಂಗ್ಲಿಷಿನ ನವ್ಯ ಕಾವ್ಯವನ್ನು ಮತ್ತು ನವ್ಯ ವಿಮರ್ಶೆಯನ್ನು ಅಭ್ಯಾಸ ಮಾಡಿದ್ದರ ಫಲವಾಗಿ ಆ ತಂತ್ರಗಳನ್ನು ಮತ್ತು ಪರಿಕಲ್ಪನೆಗಳನ್ನು ಅವರು ಬಳಸಿಕೊಂಡರು.

ಅಡಿಗರು 1954 ರಲ್ಲಿ ಪ್ರಕಟಿಸಿದ `ಚಂಡೆಮದ್ದಳೆ’ ಸಂಲನದಲ್ಲಿ ನವ್ಯ ಕವನಗಳನ್ನು ಕನ್ನಡಿಗರಿಗೆ ನೀಡಿದಾಗ ಕನ್ನಡ ಕಾವ್ಯಲೋಕದಲ್ಲಿ ಒಂದು ದೊಡ್ಡ ಬದಲಾವಣೆಯ ಸೂಚನೆ ಸಿಕ್ಕಿತು. ಅಡಿಗರು ಹೊಸ ಛಂದಸ್ಸನ್ನು, ಹೊಸ ವಸ್ತುಗಳನ್ನು, ಹೊಸ ಧಾಟಿಗಳನ್ನು, ಹೊಸ ವೈಚಾರಿಕತೆಯನ್ನು, ಹೊಸ ಕಾವ್ಯಭಾಷೆಯನ್ನು ಮತ್ತು ಹೊಸ ರೂಪಕ – ಪ್ರತಿಮೆಗಳನ್ನು ಕನ್ನಡ ಕಾವ್ಯಕ್ಕೆ ಪರಿಚಯಿಸಿದರು.

`ಚಂಡೆಮದ್ದಳೆ’ (1954) ಸಂಕಲನದಲ್ಲಿ ಅಡಿಗರು ನವ್ಯಕಾವ್ಯದ ಆಗಮನವನ್ನು ಅಬ್ಬರದಿಂದ ಘೋಷಿಸಿದರು. `ಚಂಡೆಮದ್ದಳೆ’ ಶಬ್ದವೇ ಯಕ್ಷಗಾನದ ಚರ್ಮವಾದ್ಯಗಳ ಹೆಸರಿನಿಂದ ಬಂದಿದೆ. ಈ ಸಂಕಲನದ `ಗೊಂದಲಪುರ’ ಕಾಲ್ಪನಿಕ ಯಕ್ಷಗಾನ ಪ್ರಸಂಗವೊಂದರ ರಾಕ್ಷಸರ ರಾಜಧಾನಿಯ ಹೆಸರಿನಂತೆ ಕಾಣಿಸುತ್ತದೆ. (ಯಕ್ಷಗಾನದಲ್ಲಿ ರಾಕ್ಷಸರ ನೆಲೆಯನ್ನು ಹೆಚ್ಚಾಗಿ `ಶೋಣಿತಾಪುರ’ ಎನ್ನುತ್ತಾರೆ!) ಕವನದಲ್ಲಿ ಅದು ಸ್ಪಷ್ಟವಾಗುತ್ತದೆ:

– ಬನ್ನಿರಯ್ಯಾ, ಇರುವಂಥ ಸ್ಥಳ?
– ಗೊಂದಲಪುರಕ್ಕೆ ಯಾರೆಂದು ಕೇಳಿ ಬಲ್ಲಿರಿ?
– ಗೊಂದಾಲಾಸುರೇಶ್ವರ ಮಹಾರಾಜರೆಂದು ಕೇಳಿಬಲ್ಲೆವು.
– ಹಾಗೆಂದುಕೊಳ್ಳಬಹುದು.

ಇದು ರಾಕ್ಷಸನ ಒಡ್ಡೋಲಗದ ಚಿತ್ರವೇ. ಮೇಲಿನ ಸಂಭಾಷಣೆ ಯಕ್ಷಗಾನದಲ್ಲಿ ಭಾಗವತರು ರಂಗಕ್ಕೆ ಬರುವ ಪಾತ್ರಗಳ ಜತೆಗೆ ಸಂಭಾಷಣೆ ನಡೆಸಿ, ಆ ಪಾತ್ರದ ಪರಿಚಯವನ್ನು ಸಭಿಕರಿಗೆ ಮಾಡಿಕೊಡುವ ತಂತ್ರವನ್ನು ಅನುಕರಿಸಿದ್ದಾಗಿದೆ.

`ಚಂಡೆಮದ್ದಳೆ’ ಪ್ರಕಟವಾದಾಗ ಕಾವ್ಯರಸಿಕರು ಇದು ಕಾವ್ಯವಲ್ಲ, ಕನ್ನಡ ಕಾವ್ಯ ತಪ್ಪುದಾರಿಯಲ್ಲಿ ಸಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು. ತಮ್ಮ ನವ್ಯ ಕವನಗಳಲ್ಲಿ ಅಡಿಗರು ಗದ್ಯ, ನಾಟಕ, ಕತೆಗಳಿಗಿರುವ ವ್ಯತ್ಯಾಸವನ್ನು ಅಳಿಸಿಹಾಕಿದ್ದಾರೆ ಎನ್ನುವುದು ನಿಜ.
ಮುಂದೆ ಅಡಿಗರು ಕಾವ್ಯಕ್ಕೆ ಹೊಸ ಲಯವನ್ನು ಹಿಡಿಯಲು ಪ್ರಯತ್ನಿಸಿ `ಭೂಮಿಗೀತ’ (1959) ಸಂಕಲನದಲ್ಲಿ ಸಫಲತೆಯಲ್ಲಿ ಪಡೆದರು.

`ಭೂಮಿಗೀತ’ ಅವರ ಮಹತ್ವದ ನವ್ಯ ಕವನ. ಅಡಿಗರು `ಭೂಮಿಗೀತ’ವನ್ನು 1954ರಲ್ಲಿ ಆಕಾಶವಾಣಿಯ ಕವಿಗೋಷ್ಠಿಯೊಂದರಲ್ಲಿ ಓದಲೆಂದು ಬರೆದರು. `ಬುವಿ ನೀಡಿದ ಸ್ಫೂರ್ತಿ’ ಎಂಬ ವಸ್ತುವನ್ನು ಕುರಿತು ಕವಿಗಳು ಬರೆಯಬೇಕೆಂದು ಆಕಾಶವಾಣಿಯೇ ಸೂಚಿಸಿತ್ತು. ಆಗ ಬರೆದ ಕವನವನ್ನು ಸ್ವಲ್ಪ ಪರಿಷ್ಕರಿಸಿ ಅಡಿಗರು `ಭೂಮಿಗೀತ’ ಎಂಬ ಮಹತ್ವದ ಕಾವ್ಯವನ್ನು ಸೃಷ್ಟಿಸಿದ್ದಾರೆ. ಭೂಮಿ ಸೃಷ್ಟಿಗಷ್ಟೇ ಜವಾಬ್ದಾರಿ-ಬೆಳವಣಿಗೆ ವ್ಯಕ್ತಿಗೆ ಬಿಟ್ಟದ್ದು. ಭೂಮಿತಾಯಿ ಕರ್ಣನನ್ನು ಹೆತ್ತ ಕುಂತಿಯಂತೆ. ಈ ಕವನದ ನಾಲ್ಕು ಭಾಗಗಳಲ್ಲಿ ಮನುಷ್ಯ ಭೂಮಿಯ ಜತೆ ಬೆಳೆಸಿಕೊಂಡ ನಾಲ್ಕು ಬಗೆಯ ಸಂಬಂಧಗಳಿವೆ. ಮೊದಲನೆ ಭಾಗದಲ್ಲಿ ಪ್ರಾಣಿ ಪಕ್ಷಿಗಳಂತೆ ಮುಗ್ಧನಾಗಿ; (ಆದರೂ ಆಟಂಬಾಂಬು ಕಾಳುಗಳನ್ನು ಬೆಳೆಯುವ ವಿನಾಶಕಾರಕನಾಗಿ); ಎರಡನೆಯ ಭಾಗದಲ್ಲಿ `ವೇದಶಾಸ್ತ್ರ ಪುರಾಣ ಭಜನೆ ಹರಿಕಥೆ ಪೂಜೆ’ಗಳ ಅನುಕ್ರಮದಲ್ಲಿ ಆರಾಧಕನಾಗಿ (ಈ ಅನುಕ್ರಮ ಬೌದ್ಧಿಕತೆಯಲ್ಲಿ ಇಳಿಮುಖವಾಗಿದೆ), ಲೋಲುಪನಾಗಿ; ಮೂರನೆ ಭಾಗದಲ್ಲಿ ನೆಲತಾಯಿ ಅರಗಿನರಮನೆಯಾಗಿ ಕಡ್ಡಿಗೀರುವ ತನಕ ಶಂಕೆಯಿಲ್ಲವೆಂಬ ಸ್ಫೋಟಕ ಪರಿಸ್ಥಿತಿ ತಂದುಕೊಂಡು; ನಾಲ್ಕನೆ ಭಾಗದಲ್ಲಿ ಇಲ್ಲಿದ್ದೂ ಅಲೌಕಿಕದಾಚೆಗೆ ತುಡಿಯುವವನಾಗಿ (`ಏನೊ ಉಳಿವುದು ಮತ್ತೆ’; `ಕೆಲವರು ಹೇಳುವರು ಸ್ವಿಚ್ಚೆಲ್ಲೋ ತಿಳಿಯದೆಂದು, ಮೂಲದ ಕಛೇರಿಯ ವಿಳಾಸ ಮರೆತಿದೆ ಎಂದು’; `ಇಲ್ಲೆ ಎಲ್ಲೋ ಇರುವುದೆನ್ನುವರು ಉಳಿದವರು’) – ಹೀಗೆ ಮನುಷ್ಯನಿದ್ದಾನೆ. ಭೂಮಿಯಲ್ಲಿ ಮನುಷ್ಯನ ಸ್ಥಿತಿಯನ್ನು ಸಂಕೀರ್ಣವಾಗಿ ಚಿತ್ರಿಸಿರುವ ಕವನವಿದು.

ಪ್ರಾರ್ಥನೆ

`ಪ್ರಾರ್ಥನೆ’ ಕವನದಲ್ಲಿ ಅಡಿಗರು ಆಧುನಿಕ ಕಾಲದಲ್ಲಿ ಮನುಷ್ಯನಿಗೆ ಇರುವ ಸವಾಲುಗಳನ್ನು ಎದುರಿಸಿ ವ್ಯಕ್ತಿತ್ವದ ವಿಕಾಸವನ್ನು ಸಾಧಿಸುವ ಕುರಿತು ಹೇಳಿದ್ದಾರೆ.

ಆಮದು ರಫ್ತು
ಸಾಗುತ್ತಲಿರಲಿ ಕೊನೆವರೆಗೆ ಆದರು
ಫರಂಗಿರೋಗ ತಗಲದ ಹಾಗೆ
ಉಳಿಸು ಪೂರ್ವಾರ್ಜಿತದ ರತಿವಿವೇಕದ ಶಿಖೆಯ

– ಎಂಬ ಸಾಲುಗಳಲ್ಲಿರುವ `ಫರಂಗಿರೋಗ’ ಲೈಂಗಿಕ ರೋಗದ ಪರಿಭಾಷೆಯಲ್ಲಿ ಪಾಶ್ಚಾತ್ಯ ಅನುಕರಣೆಯ ರೋಗವನ್ನು ಹೇಳುತ್ತದೆ. (`ತೊರೆಗಳೆಲ್ಲ ಹರಿದು ಬರಲಿ ಎದೆಯ ಕಡಲಿಗೆ’ ಎಂದು ಅವರೇ ಹಿಂದೆ ಹೇಳಿದ ಹಾಗೆ) ಎಲ್ಲ ಸಂಸ್ಕೃತಿಗಳ ಪರಿಚಯವಿರಲಿ, ಆದರೆ ಪರ ಸಂಸ್ಕೃತಿಯ ವಿವೇಚನಾರಹಿತ ಅಂಧಾನುಕರಣೆ ಆಗದಿರಲಿ ಎಂಬುದೇ ಇಲ್ಲಿನ ಆಶಯ. ಕವಿಯ ಪ್ರಾರ್ಥನೆ :

ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು
ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ ಹಾಗೇ
ಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನು
***
ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದು
ಬರಲಿ ಪರಿಪೂರ್ಣಾವತಾರಿ ವಿನತಾಪುತ್ರ.

ವಿನತೆಯು ತನ್ನ ಆತುರದಿಂದ ಮೊದಲೇ ಚಿಪ್ಪೊಡೆದು ಪಡೆದ ಮೊದಲ ಪುತ್ರ. ಅರುಣನು ಕಾಲುಕಳೆದುಕೊಂಡು ಅಂಗವಿಕಲನಾದನು. ಆದರೆ ಅವಧಿಪೂರ್ಣವಾದ ಬಳಿಕ ಚಿಪ್ಪೊಡೆದು ಬಂದ ಗರುಡ ಮಹಾಸತ್ವಶಾಲಿ. ಮುಂದೆ ಸ್ವರ್ಗದಿಂದ ಅಮೃತ ಕಲಶವನ್ನು ಇಂದ್ರನ ವಜ್ರಾಯುಧವನ್ನೆದುರಿಸಿ ತಂದು ತಾಯಿಯನ್ನು ಕದ್ರುವಿನ ದಾಸ್ಯದಿಂದ ಬಿಡುಗಡೆಗೊಳಿಸಿದ. ಗರುಡನ ಈ ಪ್ರತಿಮೆ ಭಾರತಮಾತೆಯನ್ನು ದಾಸ್ಯದಿಂದ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲದೆ, ಸದಾಕಾಲಕ್ಕೂ ಪ್ರಸ್ತುತವಾಗುವ ಒಂದು ಸಂಕೇತವಾಗಿ ಅಡಿಗರಿಗೆ ಕಂಡಿದೆ.

`ಪ್ರಾರ್ಥನೆ’ ಅಡಿಗರ ಮ್ಯಾನಿಫೆಸ್ಟೋ ಕವನ ಎಂದು ವಿಮರ್ಶಕರು ಹೇಳಿದ್ದಾರೆ. `ಪ್ರಾರ್ಥನೆ’ ಕವನದ ಲೈಂಗಿಕ ರೂಪಕಗಳಿಂದಾಗಿ ಇದನ್ನು ಅಶ್ಲೀಲ ಎಂದು ಭಾವಿಸಿ ಸರಕಾರ ಅಡಿಗರಿಗೆ ನೋಟಿಸ್ ನೀಡಿದ್ದೂ ಇದೆ. ಅದಕ್ಕೆ ಅಡಿಗರು ಉತ್ತರಿಸಿದ್ದು ಹೀಗೆ : “…ಆ ಕವನ ನಿಜವಾಗಿಯೂ `ರಿಲೀಜಸ್’; ಅಲ್ಲಿ ಉಪಯೋಗಿಸಿದ ಪ್ರತಿಯೊಂದು ಶಬ್ದವೂ ಕವನದ ವಸ್ತುವಾದ ವ್ಯಕ್ತಿತ್ವ ಸಾಧನೆಯ ಅರ್ಥವನ್ನು ಸೃಷ್ಟಿಸಲು ಉಪಯೋಗಿಸಿದ್ದು…”

`ಪ್ರಾರ್ಥನೆ’ಯ ಪ್ರಕರಣ!

`ಪ್ರಾರ್ಥನೆ’ (1957) ಕವನ ಪ್ರಕಟವಾದಾಗ ಅದು ಅಶ್ಲೀಲವೆಂದೂ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಆಗಿನ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪನವರಿಗೆ ದೂರು ಹೋಯಿತು. ಅವರ ಕಛೇರಿಯಿಂದ ಅಡಿಗರಿಗೆ ಒಂದು ಪತ್ರ ಬಂತು. “ನಿಮ್ಮ ಪ್ರಾರ್ಥನೆ ಎಂಬ ಕವನದ ಬಗ್ಗೆ ಚರ್ಚಿಸಲು ತಮಗೆ ಅನುಕೂಲವಾದ ದಿನ ಮತ್ತು ವೇಳೆಯಲ್ಲಿ ಮುಖ್ಯಮಂತ್ರಿಗಳು ನೋಡಬಯಸುತ್ತಾರೆ” ಎನ್ನುವುದು ಪತ್ರದ ಅಭಿಪ್ರಾಯ. ಅದಕ್ಕೆ ಅಡಿಗರು ಹೀಗೆ ಉತ್ತರಿಸಿದರು: “ನನ್ನ ಕವನದ ಬಗ್ಗೆ ಮುಖ್ಯಮಂತ್ರಿಗಳ ಜತೆ ಏಕೆ ಚರ್ಚಿಸಬೇಕೋ ನನಗೆ ತಿಳಿಯದು. ಅಲ್ಲದೆ ಮುಖ್ಯಮಂತ್ರಿಗಳಿಗೇ ಅನುಕೂಲವಾದ ದಿನ ಮತ್ತು ವೇಳೆಯಲ್ಲೇ ಏಕೆ ಸಂಧಿಸಬೇಕು? ನನಗೂ ಅನುಕೂಲವಾದ ದಿನ ಮತ್ತು ವೇಳೆ ಇರಬಹುದಲ್ಲವೇ?” ಅದಕ್ಕೆ ಉತ್ತರವಾಗಿ ಬಂದ ಪತ್ರದ ಭಾಷೆ ಸ್ವಲ್ಪ ಮೃದುವಾಗಿತ್ತು. ಇಬ್ಬರಿಗೂ ಅನುಕೂಲವಾದ ದಿನ ಮತ್ತು ವೇಳೆಯಲ್ಲಿ ಸಂಧಿಸಬಯಸುತ್ತಾರೆಂದು ಬರೆಯಲಾಗಿತ್ತು. ಆನಂತರ ನಿಜಲಿಂಗಪ್ಪನವರ ಸರಕಾರ ಹೋಗಿ (1958) ಬೇರೆ ಸರಕಾರ ಬಂತು. ಆದರೆ ಪ್ರಕರಣ ಮುಂದುವರಿಯಿತು. ನಂತರದ ಸರಕಾರದ ಕಾನೂನು ಮಂತ್ರಿಗಳಿಂದ ಅಡಿಗರಿಗೆ ಪತ್ರ ಬಂತು! “ನಿಮ್ಮ ಪ್ರಾರ್ಥನೆ ಎಂಬ ಕವನ ಅಶ್ಲೀಲ ಎಂಬ ದೂರು ಬಂದಿದೆ. ನಿಮ್ಮ ವಿವರಣೆ ಕೊಡಿ” ಎಂದು ಅದರಲ್ಲಿ ಬರೆಯಲಾಗಿತ್ತು. ಅದಕ್ಕೆ ಅಡಿಗರು ಬರೆದ ಉತ್ತರ ಹೀಗಿತ್ತು: “ನನ್ನ ಕವನದಲ್ಲಿ ನಾನು ಹೇಳಬೇಕಾದ್ದನ್ನು ಹೇಳಿಬಿಟ್ಟಿರುವುದರಿಂದ ಅದನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ಆ ಕವನ ನಿಜವಾಗಿಯೂ ರಿಲೀಜಸ್. ಅಲ್ಲಿ ಉಪಯೋಗಿಸಿದ ಪ್ರತಿಯೊಂದು ಶಬ್ದವೂ ಕವನದ ವಸ್ತುವಾದ ವ್ಯಕ್ತಿತ್ವ ಸಾಧನೆಯ ಅರ್ಥವನ್ನು ಸೃಷ್ಟಿಸಲು ಉಪಯೋಗಿಸಿದ್ದು. ಅವು ಅಶ್ಲೀಲವಾಗಲು ಸಾಧ್ಯವಿಲ್ಲ. ನಿಮಗೆ ಕವನದ ಅರ್ಥ ಬೇಕಾದರೆ ದಯವಿಟ್ಟು ಅದನ್ನು ಚೆನ್ನಾಗಿ ತಿಳಿದಿರುವ ಕೆ. ನರಸಿಂಹಮೂರ್ತಿ ಅಥವಾ ಯು. ಆರ್. ಅನಂತಮೂರ್ತಿ ಅವರಿಗೆ ಬರೆದು ತಿಳಿಯಬಹುದು.” ಆಮೇಲೆ ಸರಕಾರದ ಕಡೆಯಿಂದ ಪತ್ರ ಬರಲಿಲ್ಲ. ಪ್ರಕರಣ ಅಲ್ಲಿಗೆ ಮುಗಿಯಿತು.

ವ್ಯಕ್ತಿತ್ವದ ವಿಕಾಸ

ಗೋಪಾಲಕೃಷ್ಣ ಅಡಿಗರಿಗೆ ವ್ಯಕ್ತಿ ಈ ಬದುಕಿನಲ್ಲಿ ತನ್ನ ವಿಕಾಸವನ್ನು ಸಾಧಿಸಿಕೊಳ್ಳುವುದು ಒಂದು ದೊಡ್ಡ ಮೌಲ್ಯವಾಗಿದೆ. ಮಧ್ವಾಚಾರ್ಯರ ತತ್ತ್ವದರ್ಶನದ ವ್ಯಕ್ತಿವಿಶಿಷ್ಟ ವಾದವು ಅಡಿಗರನ್ನು ಪ್ರೇರೇಪಿಸಿರಬಹುದು. ಅಡಿಗರು ಮಧ್ವಾಚಾರ್ಯರನ್ನು ಕುರಿತೇ, ‘ಆನಂದತೀರ್ಥರಿಗೆ’ ಎಂಬ ಕವನವನ್ನು ಬರೆದಿದ್ದಾರೆ (1969). ‘ಆನಂದತೀರ್ಥ’ ಅನ್ನುವುದು ಮಧ್ವಾಚಾರ್ಯರ ಸಂನ್ಯಾಸನಾಮ.

ಆಚಾರ್ಯ ಮಧ್ವರ ವ್ಯಕ್ತಿವಿಶಿಷ್ಟ ವಾದ ಹೀಗಿದೆ: “ಪ್ರತಿಯೊಂದಕ್ಕೂ ಪ್ರತಿಯೊಬ್ಬನಿಗೂ ತನ್ನದೇ ಆದ ವೈಶಿಷ್ಟ್ಯವಿದೆ; ತನ್ನದೇ ಆದ ಸ್ವಭಾವವಿದೆ; ತನ್ನದೇ ಆದ ವ್ಯಕ್ತಿತ್ವವಿದೆ. ವ್ಯಕ್ತಿತ್ವದ ಪೂರ್ಣ ವಿಕಾಸವೇ ಜೀವನದ – ಗುರಿ. ಜೀವ ಭಗವಂತನ ಅಧೀನನಾಗಿ ತನ್ನ ವ್ಯಕ್ತಿತ್ವವನ್ನು ಪೂರ್ಣ ಪ್ರಮಾಣದಲ್ಲಿ ವಿಕಾಸಗೊಳಿಸುವ ಕಮ್ಮಟಶಾಲೆಯೇ ಸಂಸಾರ. ವಿಕಸಿತ ವ್ಯಕ್ತಿತ್ವದ ಸವಿಯನ್ನು ಸವಿಯುವ ಪೂರ್ಣಾವಸ್ಥೆಯೆ ಮುಕ್ತಿ. ಅವರವರ ಸಾಧನೆಗೆ ತಕ್ಕಂತೆ ಅವರವರ ಸಿದ್ಧಿ. ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಮ್ಮ ವಿಕಾಸ. ಕಡಲೂ ಪೂರ್ಣವಾಗಿದೆ; ಕೆರೆಯೂ ಪೂರ್ಣವಾಗಿದೆ; ನೀರು ತುಂಬಿದ ಕೊಡಗಳೂ ಪೂರ್ಣವಾಗಿವೆ. ಆದರೆ ಆ ಪೂರ್ಣತೆ ಏಕರೂಪವಾದದ್ದಲ್ಲ. ಪಾತ್ರ ಬೇರೆಯಾದಂತೆ ಗಾತ್ರವೂ ಬೇರೆ. ಎಲ್ಲವೂ ಪೂರ್ಣ; ಆದರೂ ವೈವಿಧ್ಯಪೂರ್ಣ…. ಜೀವನ ಬೆಳವಣಿಗೆ ಅವನ ಸ್ವಭಾವಕ್ಕೆ ತಕ್ಕಂತೆ ನಡೆಯುತ್ತದೆ. ಪರಿಸರ-ವಾತಾವರಣ ಹುದುಗಿದ್ದ ಸ್ವಭಾವದ ಅಭಿವ್ಯಕ್ತಿಗಷ್ಟೇ ನೆರವಾಗುತ್ತದೆ. ಸ್ವಭಾವ ಎನ್ನುವುದು ಜೀವದ ಸಹಜ ನಡೆ…. ಅವರವರ ಸ್ವಭಾವದ ಪೂರ್ಣಾಭಿವ್ಯಕ್ತಿಯೆ ಅವರವರ ಸಿದ್ಧಿ.” (ಬನ್ನಂಜೆ ಗೋವಿಂದಾಚಾರ್ಯ: ಆಚಾರ್ಯ ಮಧ್ವ: ಬದುಕು-ಬರೆಹ. ರಾ.ಗೋ.ಪೈ.ಸಂ.ಕೇಂದ್ರ, ಉಡುಪಿ. 1995)

ಸ್ವತಃ ಮಧ್ವಾಚಾರ್ಯರೂ ಹೀಗೆ ಸಾಧನೆಯ ಮೂಲಕ ವ್ಯಕ್ತಿತ್ವದ ಔನ್ನತ್ಯವನ್ನು ಸಾಧಿಸಿದವರು ಎನ್ನುವುದನ್ನು ‘ಆನಂದತೀರ್ಥರಿಗೆ’ ಕವನ ಸೂಚಿಸುತ್ತದೆ:

ಇಲ್ಲೆ ಎದ್ದವರು, ಉದ್ಬುದ್ಧವಾಗಿದ್ದವರು
ಶಖೆಮಳೆಗೆ ಬೆಂದು ಮಿಂದೀಸಿದವರು
ಆಸ್ಫೋಟಿಸಿತ್ತಿಲ್ಲೆ ಆಕಾಶಬಾಣ ಆ-
ಕಾಶಗಂಗೆಯನಳಿಸಿ, ಜಯಿಸಿದವರು.

ಈ ಕವನದಲ್ಲಿ ಬರುವ ಇನ್ನೊಂದು ಮಾತು – ‘ಹೆಬ್ಬಂಡೆಗಳನೆತ್ತಿ ತಂದ ಮುಖ್ಯಪ್ರಾಣ, ಅಲ್ಲಿಗಿಲ್ಲಿಗೂ ಸೇತು ಕಟ್ಟಿದವರು.’ ಮಧ್ವಾಚಾರ್ಯರು ಮುಖ್ಯಪ್ರಾಣ ಅಥವಾ ಹನುಮಂತನ ಅವತಾರ ಎಂಬ ನಂಬಿಕೆಯಿದೆ, ಅದನ್ನು ಅಡಿಗರು ಇಲ್ಲಿ ಸೂಚಿಸಿದ್ದಾರೆ. ಹನುಮಂತನು ಲಂಕೆಗೆ ಸೇತುವೆ ಕಟ್ಟಲು ನೆರವಾದುದನ್ನು ಇದು ನೇರವಾಗಿ ಸೂಚಿಸುತ್ತದೆ. ಜತೆಗೆ ಮಧ್ವಾಚಾರ್ಯರ ಸಾಧನೆಗಳನ್ನೂ ಧ್ವನಿಸುತ್ತದೆ. ಮಧ್ವಾಚಾರ್ಯರು ಕಳಸದ ಸಮೀಪ ಅಂಬುತೀರ್ಥ ಎಂಬಲ್ಲಿ ಭದ್ರಾನದಿಯಲ್ಲಿದ್ದ ಬಂಡೆಗಲ್ಲೊಂದನ್ನು ಅಲ್ಲಿನ ನಿವಾಸಿಗಳ ಕೋರಿಕೆಯ ಮೇರೆಗೆ ಒಂದು ಕೈಯಲ್ಲಿ ಎತ್ತಿ ಊರವರಿಗೆ ಉಪಯುಕ್ತವಾಗುವ ಹಾಗೆ ಇರಿಸಿದ್ದರು ಎನ್ನುವ ಐತಿಹ್ಯ ಇದೆ; ಮತ್ತು ಆ ಬಂಡೆಯಲ್ಲಿ ಆ ಘಟನೆಯನ್ನು ದಾಖಲಿಸಿರುವ (ಶ್ರೀ ಮಧ್ವಾಚಾರ್ಯೇನ ಏಕಹಸ್ತೇನ ಅನೀಯ ಸ್ಥಾಪಿತಾ ಶಿಲಾ – ಎಂದು ಬರೆದಿರುವ) ಶಾಸನವೂ ಇದೆ. ಬಿ. ಎಲ್. ರೈಸ್ ಅದನ್ನು ದಾಖಲಿಸಿದ್ದಾರೆ. ಬಹುಶಃ ಇದನ್ನು ಅಡಿಗರು ಉಲ್ಲೇಖಿಸಿದ್ದಿರಬಹುದು. ಮಧ್ವಾಚಾರ್ಯರು ಇಹಪರಗಳ ನಡುವೆ ಸೇತುವೆಯನ್ನು ಕಟ್ಟಿದರು ಎನ್ನುವುದು ಈ ಸಾಲುಗಳ ಒಟ್ಟರ್ಥ. ಆನಂದತೀರ್ಥರ ವಿಕಾಸವನ್ನು ಅವರ ಪ್ರಯಾಣದ ಪ್ರತಿಮೆಯ ಮೂಲಕವೂ ಅಡಿಗರು ಗುರುತಿಸಿದ್ದಾರೆ: “ಪಾಜಕದಿಂದ ಬದರಿಯವರೆಗೆ ಕಿಚ್ಚಿನ ಕರಗ ಹೊತ್ತು ನಡೆದದ್ದು”.

ಈ ಕವನದಲ್ಲಿಯೇ ಅಡಿಗರು ವ್ಯಕ್ತಿತ್ವ ವಿಕಾಸವನ್ನು ವ್ಯವಸ್ಥೆಯ ಜತೆಗೆ ಇಟ್ಟು ಪರಿಶೀಲಿಸಿದ್ದಾರೆ. ಆಚಾರ್ಯ ಮಧ್ವರ ಶಿಷ್ಯರ ಮಠೀಯ ವ್ಯವಸ್ಥೆಯಲ್ಲಿ ಬೆಳವಣಿಗೆಯಿಲ್ಲ; ಹಾಗಾಗಿ ಅದನ್ನು ಅಡಿಗರು ಟೀಕಿಸುತ್ತಾರೆ. ಇಲ್ಲಿ ಅವರು ಎದುರು ಬದುರಾಗಿ ನಿಲ್ಲಿಸುವ ಎರಡು ಪ್ರತಿಮೆಗಳು ಹೀಗಿವೆ: ‘ಆನಂದತೀರ್ಥ ಮಡುಗಟ್ಟಿ ಗಾರಲ್ಲಿ ಕಾರಂಜಿಗಳನ್ನು ಪುಟಿಸಿದ್ದು,” (ಆಗ) ಮತ್ತು “ಪ್ರಾಣಮುಖ್ಯರ ಮುಟ್ಟು ಚಟ್ಟು ತೊಟ್ಟಿಗಳಲ್ಲಿ ನಿಂತ ನೀರಿನ ವಾಸ ಸುತ್ತಲೆಲ್ಲ,” (ಈಗ). ಹಾಗಾಗಿ ಕೊನೆಯಲ್ಲಿ ಕವಿ ಆನಂದತೀರ್ಥರು ಮತ್ತು ಅಂತಹ ಮಹಾತ್ಮರ ಆಗಮನದ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಾರೆ: “ನಿಮ್ಮ, ನಿಮ್ಮಂಥವರ ಕಾದುಕುಳಿತಿದೆ ತೀರದಾಸೆ, ಲಾಂಚುಗಳಲ್ಲಿ ತುಯ್ಯುತ್ತಿದೆ ಬನ್ನಿ, ಕಾಲಕ್ಕೆ ಸರಿದೊರೆ ಕಟ್ಟಿ.” ಇಲ್ಲಿ ಅಡಿಗರು ಮತ್ತೊಂದು ಘಟನೆಯನ್ನು ಸೂಚಿಸುತ್ತಿದ್ದಾರೆ. ಮಧ್ವಾಚಾರ್ಯರು ಸಮುದ್ರ ತೀರಕ್ಕೆ ಹೋಗಿದ್ದಾಗ ಅಲ್ಲಿ ಬಿರುಗಾಳಿಗೆ ಮುಳುಗುತ್ತಿದ್ದ ಅಥವಾ ಮುಳುಗಿದ್ದ ಹಡಗಿನಿಂದ ಈಗ ಉಡುಪಿಯಲ್ಲಿ ಪೂಜೆಗೊಳ್ಳುತ್ತಿರುವ ಶ್ರೀಕೃಷ್ಣನ ಪ್ರತಿಮೆಯನ್ನು ರಕ್ಷಿಸಿ ತಂದು ಪ್ರತಿಷ್ಠಾಪಿಸಿದ್ದರು. ಆಗ ಆ ಪ್ರತಿಮೆಯ ತೀರದಾಸೆಯನ್ನು ಆನಂದತೀರ್ಥರು ನೆರವೇರಿಸಿದ್ದರೆ, ಈಗ ಹಡಗಿನ ಬದಲಿಗೆ ‘ಲಾಂಚಿನಲ್ಲಿ ತುಯ್ಯುತ್ತಿದೆ ತೀರದಾಸೆ’ – ಬಹುಶಃ ಈ ಕಾಲಕ್ಕೆ ಬೇಕಾದ ತತ್ವ ಪ್ರತಿಮೆ.

ಈ ಕವನದಲ್ಲಿರುವಂತೆ, ಬೇರೆ ಕವನಗಳಲ್ಲಿಯೂ ವ್ಯಕ್ತಿತ್ವ ವಿಕಸನಕ್ಕೆ ಅಡಿಗರು ಪುರಾಣದಿಂದ ಪಡೆಯುವ ಒಂದು ಪ್ರತಿಮೆ ಹನುಮದ್ವಿಕಾಸ. ಗರುಡ ಅಮೃತಕ್ಕೆ ಹಾರಿದಂತೆ ಆಂಜನೇಯ (ಹನೂಮಂತ) ಹುಟ್ಟಿದ ಕೂಡಲೆ ಸೂರ್ಯನನ್ನು ಹಿಡಿಯುವುದಕ್ಕೆ ಆಕಾಶಕ್ಕೆ ಹಾರಿದ್ದ. ಗರುಡನಂತೆ ಅವನೂ ಇಂದ್ರನಿಂದ ವಜ್ರಾಯುಧ ಆಘಾತಕ್ಕೊಳಗಾದ. ಅವನು ದುಡುಕುತನದ ಬಾಲ್ಯದಿಂದ ಪರಿಪಕ್ವ ಜ್ಞಾನಿಯಾಗುವ ವ್ಯಕ್ತಿತ್ವ ವಿಕಾಸವನ್ನು, ಮುಂದೆ ಸೀತಾನ್ವೇಷಣೆಯ ಸಂದರ್ಭದಲ್ಲಿ ಲಂಕೆಗೆ ಹಾರಲು ಅವನ ದೇಹ ಆಕಾಶದೆತ್ತರಕ್ಕೆ ಬೆಳೆಯುವುದನ್ನು ಹನುಮದ್ವಿಕಾಸ ಶಬ್ದ ಸೂಚಿಸುತ್ತದೆ. `ವರ್ಧಮಾನ’ ಕವನದ ನಾಯಕ ನಾಣಿ ಮಗ ಶೀನನಲ್ಲಿ ಬಾಲಿಶ ಹಾರಾಟಗಳಿದ್ದರೂ ಮುಂದೆ ಗರುಡನಂತೆ, ಹನುಮಂತನಂತೆ ಸಾಧಕನಾಗುವ ಛಲ ಇದೆ. `ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ ಎಂದು ಈ ಕವನ (ವರ್ಧಮಾನ) ಕೊನೆಗೊಳ್ಳುತ್ತದೆ. `ಶ್ರೀರಾಮನವಮಿಯ ದಿವಸ’ದಲ್ಲಿ ‘ಮತ್ಸ್ಯ ಕೂರ್ಮ ವರಾಹ ಮೆಟ್ಟಲುಗಳೇರುತ್ತ’ ರಾಮನ ಅವತಾರದ ಪರಿಪೂರ್ಣತೆಗೆ ತಲುಪುವ ಕಲ್ಪನೆಯಿದೆ.

`ಭೂತ’ ಕವನದಲ್ಲಿ (ಭೂಮಿಗೀತ ಸಂಕಲನ) ಈ ಸಾಧನೆಯನ್ನು ಇನ್ನೊಂದು ರೂಪಕದಲ್ಲಿ ಹೇಳುತ್ತಾರೆ:

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು;
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು.
ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು;
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

`ಭೂತ’ ಕವನದಲ್ಲಿ ವ್ಯಕ್ತಿತ್ವದ ವಿಕಾಸಕ್ಕೆ ವೈಯಕ್ತಿಕ ಮಾತ್ರವಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನೂ ಕೊಟ್ಟಿರುವುದರಿಂದ ಇದು ಅಡಿಗರ ಶ್ರೇಷ್ಠ ಕವನಗಳಲ್ಲಿ ಒಂದು ಎಂದು ಮಾನ್ಯವಾಗಿದೆ. ಅಲ್ಲದೆ ಇದು ಹಲವು ವಿಮರ್ಶಕರಿಂದ ಹಲವು ಬಗೆಯ ವ್ಯಾಖ್ಯಾನಗಳಿಗೆ ತೆರೆದುಕೊಂಡಿದೆ. ಈ ಕವನದಲ್ಲಿ ಇತಿಹಾಸವನ್ನು (ಭೂತಕಾಲವನ್ನು) ನಮ್ಮ ಬದುಕಿಗೆ ಸ್ವೀಕರಿಸಬೇಕಾದ ರೀತಿಯನ್ನು ಅಡಿಗರು ಹೇಳುತ್ತಾರೆ. ಪಶ್ಚಿಮದ ಪ್ರಭಾವಕ್ಕೊಳಗಾಗಿ ಮಂತ್ರ ಮರೆತು, ಬರಿದೇ ತರ್ಪಣದ ತಂತ್ರದಿಂದ ಮಂತ್ರದಂಡವನ್ನಷ್ಟೇ ಆಡಿಸುತ್ತಿರುವ ಜನಾಂಗವು “ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು” ಎನ್ನುವುದು ಕವನದ ನಿಲುವು. ಬಾವಿಯೊಳಗಿನ ಕೊಳೆವ ನೀರು (ಭೂತಕಾಲ) ಆವಿಯಾಗಿ ಮೇಲೇರಿ, ಮಳೆಯಾಗಿ ವರ್ತಮಾನಕ್ಕೆ ಒದಗಲಿ; `ಭತ್ತಗೋದುವೆ ಹಣ್ಣು ಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ’ (ಇದು ಕಷ್ಟಪಟ್ಟು ಸಾಧಿಸಿದ ಅಪರಂಜಿ ವಿದ್ಯೆಯ ಫಲ) ಇವುಗಳು ಬದುಕನ್ನು ಸುಂದರಗೊಳಿಸಲಿ ಎಂಬ ಆಶಯ ಇಲ್ಲಿದೆ. ಈ ಕವನ ಹೀಗಿದೆ:

ಭೂತ
-1-
ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು :
ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ
ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ
ಅಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೇರಿ ತೆಕ್ಕಾಮುಕ್ಕಿ
ಹಾಯುತ್ತಿದೆ ಆಗಾಗ್ಗೆ ತುಳಸಿವೃಂದಾವನದ ಹೊದರಿಗೂ.
ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿ
ಕತ್ತರಿಸಿದಿಲಿಬಾಲ ಮಿಡುಕುತ್ತದೆ.
ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ
ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ :
ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ.

-2-
ವರ್ತಮಾನಪತ್ರಿಕೆಯ ತುಂಬ ಭೂತದ ಸುದ್ದಿ :
ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ ;
ಇದ್ದಕ್ಕಿದ್ದಂತಕಸ್ಮಾತ್ತಗ್ನಿನುಡಿಯುಗಿದ
ಮಂಜು ಮುಸುಕಿದ ಮುಗ್ಧ ಜ್ವಾಲಾಮುಖಿ.
ಪತ್ರಿಕೆಯ ಮುಚ್ಚಿದರು –
ಸದ್ದಿರದ ಖಾಲಿಕಂಕಾಲ ಕೋಣೆಗಳಲ್ಲಿ
ತಾಳವಿಲ್ಲದೆ ಮೂಕಸನ್ನೆ ಮುಲುಕುವ ತಿರುಗುಮುರುಗು ಪಾದದ ಪರಿಷೆ
ಅಂತರಾಳಗಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡೆವ ಬೀಜಾಣುಜಾಲ ;
ಕಾಳರಂಗಸ್ಥಳದ ಪರದೆ ಮುರಿಮರೆಯಲ್ಲಿ
ಮಾತು ಹೆಕ್ಕುವ ಮಿಣುಕು ಮೊನೆಯ ಬಾಲ – ಇವು
ಬಯಸವೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?

-3—
ನೀರು ನೆಲೆಯಿಲ್ಲದವರು ಪಿತೃಪಿತಾಮಹರು,
ಗಾಳಿಹೆದ್ದೆರೆಲಾಳಿಗಂಟಿ ನೆಲಸಿಕ್ಕಿಯೂ ದಕ್ಕದವರು.
ಉಚ್ಛಾಟನೆಯ, ತರ್ಪಣದ ತಂತ್ರ ಬಲ್ಲೆ ; ಆದರು ಮಂತ್ರ ಮರೆತೆ ;
ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ.
ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ ;
ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು.

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ;
ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆ ಮಿರಿವ ಚಿನ್ನದದಿರು,
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು :
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ-
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು.

-4-
ಬಾವಿಯೊಳಗಡೆ ಕೊಳೆವ ನೀರು ; ಮೇಲಕ್ಕಾವಿ ;
ಆಕಾಶದುದ್ದವೂ ಅದರ ಕಾರಣ ಬೀದಿ ;
ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ-
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ-
ಭೂತರೂಪಕ್ಕೆ ಮಳೆ ವರ್ತಮಾನ ;
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ;
ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.

‘ಭೂತ’ ಕವನದ ಮೊದಲನೆಯ ಭಾಗದಲ್ಲಿ ಹಳೆಯ ಬಾವಿಯ ಹೂಳೆತ್ತುವ ಕಾರ್ಯದ ಚಿತ್ರಣವಿದೆ. (ನಂತರ ಅದೇ ಒಂದು ರೂಪಕವಾಗುತ್ತದೆ. ಕೊನೆಗೆ ಪ್ರತಿಮೆಯಾಗುತ್ತದೆ. ಹೀಗೆ ಸದೃಶ ಚಿತ್ರಗಳು ರೂಪಕ ಅಥವಾ / ಮತ್ತು ಪ್ರತಿಮೆಗಳಾಗುವ ಕ್ರಮವನ್ನು ಈ ಬರಹದ ಕೊನೆಯ ಟಿಪ್ಪಣಿಯಲ್ಲಿ ವಿವರಿಸಲಾಗಿದೆ). ದಕ್ಷಿಣ ಕನ್ನಡದ ಹಳ್ಳಿಯ ಮನೆಗಳ ಅಂಗಳದ ಈಶಾನ್ಯದಲ್ಲಿ ಬಾವಿ ಇರುತ್ತದೆ. ಅದಕ್ಕೆ ಸಮೀಪವಾಗಿ, ಈಶಾನ್ಯದಲ್ಲಿಯೇ ತುಳಸಿ ವೃಂದಾವನ (ತುಳಸಿಕಟ್ಟೆ. ‘ಬೃಂದಾವನ’ ಎಂದೂ ಹೇಳುವುದುಂಟು) ಇರುತ್ತದೆ. ಬಾವಿಯ ಹೂಳೆತ್ತುವ ಕಾರ್ಯ ಸಾಮಾನ್ಯವಾಗಿ ನಾಲ್ಕೈದು ವರ್ಷಗಳಿಗೊಮ್ಮೆ ಮೇ ತಿಂಗಳಲ್ಲಿ ನಡೆಯುತ್ತದೆ. ಆಗ ಬಾವಿಯಲ್ಲಿ ನೀರು ಒಂದಡಿ, ಎರಡಡಿ ಮಾತ್ರ ಇರುತ್ತದೆ. ಇದ್ದ ನೀರನ್ನು ಬತ್ತಿಸಿ ತಳದಲ್ಲಿ ಜಮೆಯಾಗಿರುವ ಕೆಸರನ್ನು, ಅದರಲ್ಲಿ ಸೇರಿಕೊಂಡಿರುವ ವಸ್ತುಗಳ ಸಹಿತ ಬಾವಿಗಿಳಿದ ಕೆಲಸಗಾರ/ರು ಹೆಡಿಗೆಗಳಲ್ಲಿ ತುಂಬಿಸಿಕೊಟ್ಟಂತೆ ಮೇಲೆ ನಿಂತ ಕೆಲಸಗಾರರು ಅದನ್ನು ಸೇದಿ ಸ್ವಲ್ಪ ದೂರ – ತೋಟಕ್ಕೆ – ಚೆಲ್ಲಿ ಬರುತ್ತಾರೆ. ಈ ಕಾರ್ಯವನ್ನು ಮನೆಯ ಮಕ್ಕಳು ಬಾವಿಯ ದಂಡೆಯ ಮೇಲೆ ಒರಗಿ, ಬಾಗಿ ಬಾವಿಯೊಳಕ್ಕೆ ನೋಡುತ್ತಾ ಗಮನಿಸುತ್ತಿರುತ್ತಾರೆ. ಆಗ ಸೂರ್ಯ ಕಿರಣ ಓರೆಯಾಗಿ ಬಾವಿಯೊಳಗೆ ಬೀಳುವ ಚಿತ್ರ ಕವಿ ಅಡಿಗರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿತ್ತೆಂದು ಇಲ್ಲಿನ ಚಿತ್ರಣ ನೋಡಿದಾಗ ತಿಳಿಯುತ್ತದೆ. ಹಳಸಲು ಗಾಳಿ ಮೇಲೆ ಬರುತ್ತಿದೆಯೇನೋ ಎಂಬಂತೆ ಆ ಬೆಳಗಿನ ಶಲಾಖೆಗಳಲ್ಲಿ ಆವಿ ಮೇಲೆ ಬರುವುದು ಹೊಳೆದು ಕಾಣಿಸುವುದುಂಟು. ಅದು ಪಕ್ಕದ ತುಳಸಿಕಟ್ಟೆಯ ತುಳಸಿ ಹೊದರಿಗೂ ಹಾಯುವುದು.

ಛಂದಸ್ಸುಗಳಲ್ಲಿ ಅಡಿಗರಿಗೆ ಬಾಲ್ಯದಲ್ಲಿಯೇ ಹಿಡಿತವಿದ್ದುದನ್ನು ಈಗಾಗಲೇ ಗಮನಿಸಿದೆವು. ಮೈಸೂರಿಗೆ ಇಂಟರ್‍ಮೀಡಿಯೇಟ್ ಓದಲು ಹೋದ ಅಡಿಗರಿಗೆ ಮುಂದೆ ಅಲ್ಲಿ ಹೊಸ ಚಿಂತನೆಯ ತರುಣ ಸಾಹಿತಿಗಳ ಒಡನಾಟ ಲಭ್ಯವಾಯಿತು.

ಮಕ್ಕಳು ಕೆಳಗಿನ ಕೆಸರಿನಲ್ಲಿ ಉತ್ಖನನವಾಗುವ ವಸ್ತುಗಳಿಗಾಗಿ ಚೂಪುಗಣ್ಣು ಮಾಡಿಕೊಂಡು ಕಾಯುತ್ತಿರುತ್ತಾರೆ. (ಅವರ ಆಟಿಕೆಯ ಸಾಮಗ್ರಿಗಳೂ ಹೀಗೆ ಲಭ್ಯವಾಗುವುದುಂಟು). ಆಗ, “ಕತ್ತಲಲ್ಲೇ ಕಣ್ಣುನೆಟ್ಟು ತಡಕುವ ನನಗೆ ಹೊಳೆವುದು ಹಠಾತ್ತನೊಂದು ಚಿನ್ನದ ಗೆರೆ. ಅಮವಾಸ್ಯೆ ಕಂದಕಗಳಲ್ಲಿ ಹೇಗೋ ಬಿದ್ದು ಒದ್ದಾಡುತ್ತಿರುವ ಗರಿ ಸುಟ್ಟ ತಾರೆ”. ಹಳ್ಳಿಯ ನಂಬಿಕೆಗಳಲ್ಲಿ ಒಂದು, ನಕ್ಷತ್ರಗಳು ಉರಿದು (ಉಲ್ಕೆ) ಬೀಳುವಾಗ ಕೆಸರಿಗೆ ಅಥವಾ ಗೊಬ್ಬರದ ರಾಶಿಗೆ ಬಿದ್ದರೆ ಅದು ಚಿನ್ನವಾಗುತ್ತದೆ ಎನ್ನುವುದು. ಅಂತಹದೇನೋ ಹೊಳೆಯುವ ವಸ್ತು ಕೆಳಗಿನ ಕೆಸರಿನಲ್ಲಿ ಬಾಲಕನ ಕಣ್ಣಿಗೆ ಬಿದ್ದಿದೆ. ಈ ಚಿತ್ರಣವು ಯಾವುದಕ್ಕೆ ರೂಪಕವಾಗಿದೆ ಎಂದು ಯೋಚಿಸಬೇಕು. ಈ ಹೂಳೆತ್ತುವ ಕಾರ್ಯದ ಪರಿಣಾಮವಾಗಿ ಮುಂದಿನ ಕೆಲವು ವರ್ಷಗಳ ಕಾಲ ಬಾವಿಯಲ್ಲಿ ಶುದ್ಧವಾದ ನೀರಿನ ಒರತೆ ಹುಟ್ಟುತ್ತದೆ.

ಒರತೆಗಳ ಬಾಯಿಗೆ ಅಡ್ಡಿಯಾಗಿದ್ದ ಕೆಸರು, ಕಸ ಕಡ್ಡಿಗಳನ್ನೆಲ್ಲ ತೆಗೆದ ಕಾರಣ ಪರಿಶುದ್ಧವಾದ ಜಲ ಉಕ್ಕಿ ಬರುತ್ತದೆ. ಹಾಗೆಯೇ ನಮ್ಮ ತತ್ವ, ಚಿಂತನೆಗಳನ್ನು, ಪಾರಂಪರಿಕ ನಂಬಿಕೆಗಳನ್ನು ಹೊಸದಾಗಿ ಪರೀಕ್ಷಿಸಿಕೊಳ್ಳಬೇಕು; ಬದುಕಿಗೆ ಉಪಯುಕ್ತವಾಗುವಂತೆ ಪರಿಷ್ಕರಿಸಿಕೊಳ್ಳಬೇಕು. ಬಾವಿಯೊಳಗಿನ ಹಳಸು ಗಾಳಿಗೆ ಶುದ್ಧವಾದ ತುಳಸಿ ಬೃಂದಾವನದ ಸಂಪರ್ಕವಾಗಿ ಅದು ಕೂಡ ಊರ್ಧ್ವಗತಿಯನ್ನು ಪಡೆಯುತ್ತದೆ. ಇಂತಹ ಆವಿಗಳೆ ಮುಂದೆ ಮೋಡಗಳಾಗಿ ಮಳೆಸುರಿದು ಹೊಸ ಬೆಳೆಗೆ ಕಾರಣವಾಗುವುದು ಇನ್ನೊಂದು ಬಗೆಯ ಹೊಸದಾಗುವಿಕೆ – ಭೂತವನ್ನು ವರ್ತಮಾನದ ಮೂಲಕ ಭವಿಷ್ಯಕ್ಕೆ ಅಣಿಗೊಳಿಸುವುದು.

ಎರಡನೆಯ ಭಾಗದಲ್ಲಿ ವ್ಯಕ್ತಿಯ ಅಂತರಂಗದಲ್ಲಿ ಅಥವಾ ಸುಪ್ತಪ್ರಜ್ಞೆಯಲ್ಲಿ ಅದುಮಿಟ್ಟ ವಿಕೃತಿಗಳೂ ಹೀಗೆಯೇ ಬಿಡುಗಡೆ ಪಡೆಯಬೇಕಾದ ಅಗತ್ಯವನ್ನು ಸೂಚಿಸಲಾಗಿದೆ. ನಮ್ಮ ವರ್ತಮಾನದ ವರ್ತನೆಗಳಿಗೆ ಭೂತಕಾಲದ ಸಂಗತಿಗಳ ಪ್ರಭಾವ ಇರುತ್ತದೆ ಎಂದು ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ತೋರಿಸಿಕೊಟ್ಟಿದ್ದ. ಈ ಮನೋವೈಜ್ಞಾನಿಕ ತಿಳಿವಳಿಕೆ ನವ್ಯ ಸಾಹಿತ್ಯದಲ್ಲಿ ಬಹಳ ಚಲಾವಣೆಯಲ್ಲಿತ್ತು. ‘ನೀರ ಮೇಲಕ್ಕೊಂದು ಮಡಿ, ಕೆಳಕ್ಕೇಳು ಮಂಜಿನ ಶಿಖರಿ’ ಎನ್ನುವುದು ಮನಸ್ಸಿನ ರಚನೆಯನ್ನು ಹೇಲಲು ಸಿಗ್ಮಂಡ್ ಫ್ರಾಯ್ಡ್ ಹೇಳಿದ ರೂಪಕ. ಮನಸ್ಸಿನಲ್ಲಿ ನಮ್ಮ ವರ್ತನೆ ಅಥವಾ ಪ್ರಜ್ಞೆಯದು ಮೇಲಿನ ಸ್ವಲ್ಪವೇ ಭಾಗ, ಅದು ನೀರಲ್ಲಿ ಮುಳುಗಿದ ಮಂಜುಗಡ್ಡೆಯ ಹಾಗೆ; ಅದರಲ್ಲಿ ಅಂತಃಪ್ರಜ್ಞೆಯ ಬಾಗೆ – ಸುಪ್ತಪ್ರಜ್ಞೆಯ ಭಾಗಗಳು ಹೆಚ್ಚು. ಇವುಗಳನ್ನು, conscious mind, unconscious mind, superconscious mind ಇತ್ಯಾದಿಯಾಗಿ ಹೆಸರಿಸಿದ್ದಾರೆ.

ಬಾವಿಯ ಒಸರು ಆವಿಯಾಗಿ ಆಕಾಶಕ್ಕೆ ಸೇರಿ ಮಳೆಯಾಗಿ ಅರುಹುಟ್ಟು ಪಡೆಯುವುದು (ಮತ್ತೆ ನೆಲದಾಳಕ್ಕೆ ಹೋಗಿ ಒಸರಾಗುವುದು) ಒಂದು ವೃತ್ತವಾದರೆ, ಆತ್ಮಗಳು ಬೀಜಾಣುಗಳಾಗಿ ಜನ್ಮಪಡೆದು ಬದುಕಿ ಸತ್ತು ಪ್ರೇತಗಳಾಗಿ ಊರ್ಧ್ವಗತಿಯನ್ನು ಪಡೆದು ಮರುಜನ್ಮ ಪಡೆಯುವುದು ಇನ್ನೊಂದು ಬಗೆಯ ವೃತ್ತ. ಇವು ಎರದು ರೂಪಕಗಳು. ಮೂರನೆಯದು ಮನಸ್ಸಿನಾಳದಲ್ಲಿದ್ದದ್ದು ಹೊರಗೆ ಬಂದು ಸುಸಂಸ್ಕೃತ ಅಭಿವ್ಯಕ್ತಿಗಳಾಗಿ ಬಿಡುಗಡೆ ಪಡೆಯುವುದು. ಇದು ಮೊದಲಿನ ಎರಡಕ್ಕೆ ಹೋಲಿಕೆಯಲ್ಲದೆ ಇದ್ದರೂ ಆ ಪ್ರಕ್ರಿಯೆ ಇಲ್ಲಿಯೂ ನಡೆಯುತ್ತದೆ. ಹಾಗಾಗಿ ಮನಸ್ಸಿನಾಳದ ‘ಭೂತ’ದ ಹಳವಂಡಗಳಿಗೆ ಮುಕ್ತಿಯಾಗುವ ಪ್ರಕ್ರಿಯೆಗೆ ಮೊದಲಿನ ಎರಡನ್ನು ರೂಪಕಗಳಾಗಿ ಬಳಸುವುದು ಸೂಕ್ತವಾಗಿದೆ. ಈ ಕವನದಲ್ಲಿ ಈ ಮೂರೂ ಆಯಾಮಗಳು ಇರುವುದರಿಂದ ವ್ಯಕ್ತಿ, ಸಮಾಜ ಮತ್ತು ಸಂಸ್ಕೃತಿ ಎನ್ನುವ ಮೂರು ಆಯಾಮಗಳನ್ನು ಕವನವು ಸ್ಪರ್ಶಿಸುತ್ತದೆ ಎಂದು ತಿಳಿಯಬಹುದು.

ಮೂರನೆಯ ಭಾಗದಲ್ಲಿ ಪ್ರೇತಾತ್ಮಗಳು ಊರ್ಧ್ವಗತಿಯನ್ನರಿಯದೆ ತೊಳಲುವ ಚಿತ್ರಣವಿದೆ. ಅವುಗಳಿಗೆ ಸದ್ಗತಿಯನ್ನು ತೋರಿಸುವ ವಿಧಿಗಳಿಗೆ ಸಂಬಂಧಿಸಿದ ಮಂತ್ರ, ತಂತ್ರಗಳು ಧಾರ್ಮಿಕ ಗ್ರಂಥಗಳಲ್ಲಿರುತ್ತವೆ. ಅವುಗಳನ್ನು ಈ ಕವನದ ಸಾಕ್ಷೀಪ್ರಜ್ಞೆ ಎನ್ನಬಹುದಾದ ನಾಯಕ ಮರೆತಿದ್ದಾನೆ. ಅವನು ಪಶ್ಚಿಮಬುದ್ಧಿಯಾಗಿರುವ ಕಾರಣ, ತಿಲಹೋಮ ಮುಂತಾದ ಪ್ರೇತೋದ್ಧಾರ ವಿಧಿಗಳಲ್ಲಿ ಪುರೋಹಿತರು ಹೇಳಿದಂತೆ ಕೈಕರಣಗಳನ್ನು ಮಾತ್ರ ಆಚರಿಸಲು ಬಲ್ಲ; ಯಾವ ಮಂತ್ರಗಳನ್ನೂ, ಅದರ ಅರ್ಥಗಳನ್ನೂ ಬಲ್ಲವನಲ್ಲ. ಈ ಆಚರಣೆಯನ್ನು ಪ್ರಾತಿನಿಧಿಕವಾಗಿ ಮತ್ತು ರೂಪಕವಾಗಿ ಕವಿ ಬಳಸಿದ್ದಾರೆ. ಯಾವುದೇ ಪಾರಂಪರಿಕ ಜ್ಞಾನಕ್ಕೆ ನಾವು ವಾರಸುದಾರರಾಗಿಲ್ಲ ಎನ್ನುವುದು ಈ ಭಾಗದ ಸೂಚನೆ. ಅಂತಹ ಜ್ಞಾನದ ಖನಿಗಳನ್ನು ಬಗೆದು ಜ್ಞಾವನ್ನು ಸಂಪಾದಿಸಬೇಕು. ಅದನ್ನು ಹೊಸದಾಗಿ ಪರಿಶೀಲಿಸಿ ಬಳಸಲು ಉಪಯುಕ್ತವಾಗುವತೆ ಪರಿಷ್ಕರಿಸಬೇಕು. ಹೀಗೆ ಪರಿಷ್ಕರಿಸುವುದನ್ನು ಒಂದು ರೂಪಕದ ರೀತಿಯಲ್ಲಿ ಹೇಳಲಾಗಿದೆ: ಚಿತ್ತ ಸಿಗಬೇಕಾದರೆ ಮಣ್ಣನ್ನು ಅಗೆದು ಚಿನ್ನದದಿರನ್ನು ಸುಟ್ಟು ಸೋಸಿ ಶುದ್ಧ ಚಿನ್ನವನ್ನು ಪಡೆಯುವ ಹಾಗೆ ಈ ಪ್ರಾಚೀನ ಜ್ಞಾನಗಳನ್ನು ಶೋಧಿಸಿ ನಮಗೆ ಉಪಯುಕ್ತವಾಗುವಂತೆ ಬಳಸಿಕೊಳ್ಳಬೇಕು.

ಕೊನೆಯ ಭಾಗದಲ್ಲಿ ಮೊದಲಿನ ಮೂರೂ ಭಾಗಗಳಲ್ಲಿರುವ ರೂಪಕಗಳನ್ನು (ಬಾವಿ – ಅಂತರಪಿಶಾಚಿ – ಅಪರಂಜಿವಿದ್ಯೆ) ಬಳಸಿಕೊಂಡು ಈ ಭಾಗದಲ್ಲಿ ಅವುಗಳನ್ನು ಪ್ರತಿಮೆಗಳಾಗಿ ಬೆಳೆಸಲಾಗಿದೆ. ಬಾವಿಯ ಆವಿ ಕಾರಣಶರೀರ (ಸೂಕ್ಷ್ಮಶರೀರ)ವಾಗಿ ಕಾರ್ಮುಗಿಲಲ್ಲಿ ಸೇರಿಕೊಳ್ಳುತ್ತದೆ. ಅದು ಅಂತರಪಿಶಾಚಿ. ಅದರ ತಲ್ಲಣಗಳೇ ಗುಡುಗುಸಿಡಿಲುಗಳು. ಕೊನೆಗೆ ವರ್ಷಧಾರೆಯಾಗಿ ಸುರಿಯುವುದು ಮಳೆ – ಪುನರ್ಜನ್ಮ. ಇದರಿಂದ ಬೆಳೆಯುವುದು ಅನ್ನ. ಬದುಕಿನ ಮೂಲಾಧಾರ. ಇನ್ನು ಬದುಕಿಗೆ ಚಿಂತನೆ ಸೌಂದರ್ಯಾನುಭೂತಿ ಇವೆಲ್ಲ ಬೇಕಲ್ಲ – ಅವು ಈ ಅಪರಂಜಿ ವಿದ್ಯೆಯಿಂದ ಸಾಧಿಸಿದ ಗುಡಿಗೋಪುರಗಳ ಚಿನ್ನದ ಕಲಶಗಳಾಗಿ ಕಂಗೊಳಿಸುತ್ತವೆ. ಇಲ್ಲಿ ಮೂರು ಆಯಾಮಗಳಲ್ಲಿ ಭೂತವು ವರ್ತಮಾನವನ್ನು ಅರ್ಥಪೂರ್ಣವಾಗಿಸುವುದು ಹೇಗೆಂಬ ಚಿಂತನೆಯನ್ನು ಪ್ರತಿಮೆಗಳ ರೂಪದಲ್ಲಿ ಕವನ ಅಂತರ್ಗತ ಮಾಡಿಕೊಂಡಿದೆ. ಇವೆಲ್ಲವೂ ಅಂತಿಮವಾಗಿ ವ್ಯಕ್ತಿತ್ವದ ವಿಕಾಸಕ್ಕೆ ಸಂಬಂಧಿಸಿವೆ.

ಶ್ರೀ ರಾಮನವಮಿಯ ದಿವಸ

ಸಾಧನೆಗೆ ಸಂಕಲ್ಪದಂತೆ, ಧ್ಯಾನ ಮತ್ತು ದಿವ್ಯದ ಅನುಗ್ರಹ ಕೂಡಿಕೊಂಡಾಗ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ಸಿದ್ಧಿಸುತ್ತದೆ. `ಶ್ರೀರಾಮನವಮಿಯ ದಿವಸ’ ಕವನದಲ್ಲಿ ಈ ಅರಿವಿನ ಚಿತ್ರಣವಿದೆ (ವಿವರಣೆಯಿಲ್ಲ). `ಸಂಕಲ್ಪ ಬಲದ ಜಾಗರಣೆ’ `ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿ ಗೆರೆ/ ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ / ಆಸ್ಫೋಟಿಸಿತ್ತು ಸಿಡಿತಲೆ’; `ಗರಿಷ್ಠ ತೇಜದ ಮೊನೆ / ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ’, `ಹುತ್ತುಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ರೂಪರೇಖೆ’ – ಹೀಗೆ ರಾಮನ ಅವತಾರ (ನಿಜವಿರಲಿ – ಕತೆಯಿರಲಿ) ಆಕಸ್ಮಿಕವಾಗಿ ನಡೆದುದಲ್ಲ ಎಂದು ಸೂಚಿಸುವ ಪದಪುಂಜಗಳಿವೆ.

`ನಡೆದು ಬಂದ ದಾರಿ’ ಸಂಕಲನದ `ನನ್ನ ಅವತಾರ’ ಕವನದ ನಾಯಕನಂತೆಯೆ `ಶ್ರೀರಾಮನವಮಿಯ ದಿವಸ’ ಕವನದ ನಾಯಕನು `ಪನಿವಾರ ತಿಂದು ಪಾನಕ ಕುಡಿದು ನೋನುತ್ತ ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ’ ಕುಳಿತವನು – ಸಾಧನೆಯಿಲ್ಲದೆ.

ಶ್ರೀ ರಾಮನವಮಿಯ ದಿವಸ

ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ :
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ,

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು ;
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು.

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ ;
ಅಶ್ವತ್ಥದ ವಿವರ್ತ ನಿತ್ಯ ಘಟನೆ ; 10
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ.

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾ ಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮ ವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ : 20

ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ ,
ಆಸ್ಫೋಟಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ ;
ಅಂತರಂಗದ ಸುರುಳಿ ಬಿಚ್ಚಿ ಸರ್ಜ್‍ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.

ಸಂಕಲ್ಪಬಲದ ಜಾಗರಣೆ ; ಕತ್ತಲಿನೆಡೆಗೆ
ಕಣೆ, ದಂಡಕಾರಣ್ಕಕ್ಕೆ ಹಗಲ ದೊಣ್ಣೆ ; 30
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ ;
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ .

ವಿಜೃಂಭಿಸಿತು ರಾಮಬಾಣ ; ನಿಜ. ಕತ್ತಲಿಗೆ
ಹತ್ತೆ ತಲೆ ? ನೂರಾರೆ ? ಅದು ಅಸಂಖ್ಯ :
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ ; ಕೋದಂಡ ದಂಡವೂ ಹೀಗೆ ದಂಡ ;

ಅಥವಾ ಚಕ್ರಾರಪಂಕ್ತಿ : ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ. 40

ಷಟ್ಟಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ ?
ಹುತ್ತುಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ ?
(ಮಾರ್ಚ್ 1968)

ಹೀಗೆ ತನ್ನ ಇಷ್ಟದೇವತಾ ವಿಗ್ರಹವನ್ನು ರೂಪಿಸಿಕೊಳ್ಳಲು ಸಹಜವಾಗಿಯೇ ವಿಶೇಷ ಸಾಮರ್ಥ್ಯಬೇಕು, ಶ್ರದ್ಧೆಬೇಕು, ಸಂಕಲ್ಪಬಲ ಬೇಕು. ಸಂಕಲ್ಪಬಲದಿಂದ ಮಾತ್ರ ವ್ಯಕ್ತಿ ಔನ್ನತ್ಯವನ್ನು ಸಾಧಿಸುವುದು ಸಾಧ್ಯ. ವ್ಯಕ್ತಿತ್ವದ ವಿಕಾಸಕ್ಕೆ ಇಲ್ಲಿ ಕೆಲವು ರೂಪಕಗಳು ‘ಸಂವೇದನೆಯ ಸಂಯೋಗ’ ಕ್ರಮದಲ್ಲಿ ಒಂದುಗೂಡಿ, ವ್ಯಕ್ತಿತ್ವ ವಿಕಾಸ ಮಾತ್ರವಲ್ಲ, ಅದರ ಮೂಲಕ ಒಂದು ಜನಾಂಗದ ಪ್ರಜ್ಞೆಯನ್ನೂ ಔನ್ನತ್ಯಕ್ಕೇರಿಸುವ ಪ್ರತಿಮೆಯಾಗಿ ರೂಪುಗೊಳ್ಳುವ ಅದ್ಭುತ ಕವನ ಇದು. ‘ಸುಟ್ಟು ಸೋಸಿ ಪರಿಶುದ್ಧಗೊಳಿಸುವ’ ಒಂದು ಪ್ರತಿಮೆ ಅಡಿಗರ ‘ಭೂತ’, ‘ಶ್ರೀರಾಮನವಮಿಯ ದಿವಸ’ ಮತ್ತು ‘ಆನಂದತೀರ್ಥರಿಗೆ’ ಮುಂತಾದ ಕವನಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ತಾಳಿ ಪ್ರಕಟವಾಗಿದೆ.

ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸ ಕಾಲದ, ಹೊಸ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿನ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ”, ಎನ್ನುವುದು ಅಡಿಗರ ಕಾವ್ಯಸೃಷ್ಟಿಯ ಹಿಂದಿನ ವೈಚಾರಿಕತೆ. ವ್ಯಕ್ತಿಗಳು ಕೂಡ ಇದೇ ಮಾದರಿಯಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ನಿರಂತರ ಸಾಧನೆಯ ಮೂಲಕ ಕಂಡುಕೊಂಡು, ಹಲ್ಲುಗುರುಗಳನ್ನು ಕಳೆದುಕೊಂಡು ವಿಕಾಸವನ್ನು ಸಾಧಿಸುವ ಮೂಲಕ, ಮಣ್ಣಿನಿಂದ ಚಿನ್ನವನ್ನು ಸೋಸಿ ತೆಗೆಯುವಂತೆ ತೆಗೆದು, ಅದನ್ನು ಇಷ್ಟದೇವತಾ ವಿಗ್ರಹವಾಗಿ ರೂಪಿಸಿಕೊಳ್ಳುವ ರೂಪಕದಂತೆ ವ್ಯಕ್ತಿತ್ವದ ಔನ್ನತ್ಯವನ್ನು ಸಾಧಿಸಬೇಕು; ಆ ಮೂಲಕ ನಮ್ಮ ಸಂಸ್ಕೃತಿಯ ಔನ್ನತ್ಯಕ್ಕೆ ನೆರವಾಗಬೇಕು ಎನ್ನುವುದು ಅವರ ಕವನಗಳ ಅಧ್ಯಯನದಿಂದ ನಾವು ಪಡೆಯಬಹುದಾದ ಸಂದೇಶ.

ನವ್ಯತೆಯ ಒಂದು ವಾಗ್ವಾದ

ನವ್ಯ ಸಾಹಿತ್ಯದ ಒಂದು ವೈಚಾರಿಕ ಸಂಘರ್ಷ ಡಾ. ವಿ. ಕೃ. ಗೋಕಾಕ್ ಮತ್ತು ಗೋಪಾಲಕೃಷ್ಣ ಅಡಿಗರ ಮಾದರಿಗಳ ನಡುವಿನದು. ಇಬ್ಬರೂ ಕೂಡಾ ನವ್ಯ ಸಾಹಿತ್ಯದ ಉಗಮ – ಆಗಮನಗಳಿಗೆ ಕಾರಣರಾದವರು, ಇಬ್ಬರೂ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರು ಮತ್ತು ಕವಿಗಳು. ಕನ್ನಡದಲ್ಲಿ ನವ್ಯ ಸಾಹಿತ್ಯದ ಅಗತ್ಯವನ್ನು ಮೊದಲು ಅಧಿಕೃತವಾಗಿ ಪ್ರತಿಪಾದಿಸಿದವರು ಗೋಕಾಕರು. 1950 ರ ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯೊಂದರ ಅಧ್ಯಕ್ಷರಾಗಿ ಅವರು ಮಾಡಿದ ಉಪನ್ಯಾಸ ಐತಿಹಾಸಿಕವಾಗಿ ಮಹತ್ವದ್ದು. (ಅದು ನಂತರ ಅವರು ಪ್ರಕಟಿಸಿದ ‘ನವ್ಯತೆ’ ಎಂಬ ವಿಮರ್ಶನ ಪುಸ್ತಕದಲ್ಲಿ ಸೇರಿದೆ). “ಕನ್ನಡ ಕಾವ್ಯದಲ್ಲಿ ಆಧುನಿಕ ಯುಗವು ಮುಗಿಯುವ ಸಮಯ ಬಂದಿದೆ, ನವ್ಯಯುಗ ಪ್ರಾರಂಭವಾಗಲಿದೆ” ಎಂದು ಅವರು ಅಲ್ಲಿ ಹೇಳಿದರು. ಸ್ವತಃ ಅವರು ತಾವು ಪ್ರತಿಪಾದಿಸಿದ ನವ್ಯ ಮಾರ್ಗದಲ್ಲಿ ಕವಿತೆಗಳನ್ನು ಬರೆದರು, 1950 ರಲ್ಲಿ ‘ನವ್ಯ ಕವಿತೆಗಳು’ ಎಂಬ ಸಂಕಲನವನ್ನು ಪ್ರಕಟಿಸಿದರು, ‘ನವ್ಯತೆ’ ಪುಸ್ತಕವನ್ನು ಪ್ರಕಟಿಸಿದರು, ವಾಗ್ವಾದಗಳನ್ನು ನಡೆಸಿದರು. ಗೋಪಾಲಕೃಷ್ಣ ಅಡಿಗರು 1952 ರಲ್ಲಿ ‘ನಡೆದುಬಂದ ದಾರಿ’ ಯಲ್ಲಿ ಹೊಸಮಾರ್ಗದ ಅಗತ್ಯವನ್ನು ಪ್ರತಿಪಾದಿಸಿದರು. ಗೋಕಾಕರು ಅಡಿಗರ ಮಾರ್ಗವನ್ನು ‘ಅತಿನವ್ಯ’ ಎಂದು ಕರೆದರು. ಗೋಕಾಕರು ನವ್ಯತೆಯನ್ನು ತಂತ್ರದಲ್ಲಿ ಮಾತ್ರ ಗುರುತಿಸಿದರೆ ಅಡಿಗರು ನವ್ಯತೆ ಸಂವೇದನೆಗೆ ಸಂಬಂಧಿಸಿದ್ದೆಂದು ಪ್ರತಿಪಾದಿಸಿದರು. 1978 ರಲ್ಲಿ ಗೋಕಾಕರು ನೀಡಿದ ಒಂದು ಉಪನ್ಯಾಸದಲ್ಲಿ ತಮ್ಮ ವಾಗ್ವಾದವನ್ನು ಮುಂದುವರಿಸಿದರು. ಅದು ‘ಕವನಗಳಲ್ಲಿ ಸಂಕೀರ್ಣತೆ’ ಎಂಬ ಕಿರುಹೊತ್ತಗೆಯ ರೂಪದಲ್ಲಿ ಪ್ರಕಟವಾಯಿತು. ಇದರಲ್ಲಿ ಗೋಕಾಕರು ತಾವು ಅತಿನವ್ಯ ಪಂಥ ಎಂದು ಗುರುತಿಸಿದ ಅಡಿಗರ ಮಾದರಿಯ ಜತೆಗಿನ ತಮ್ಮ ಚರ್ಚೆಯನ್ನು ಮುಂದುವರಿಸಿದರು, ನವ್ಯದವರು ಹೇಳುವ ‘ಸಂಕೀರ್ಣತೆ’ ಎನ್ನುವುದು ಆ ಒಂದು ಪಂಥದ ಸ್ವತ್ತಲ್ಲ, ಅದು ಹಿಂದೆಯೂ ಸಾಹಿತ್ಯದಲ್ಲಿ ಇತ್ತು, ಯಾವತ್ತೂ ಇರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಅದಕ್ಕಾಗಿ ನವೋದಯ ಪಂಥದ ಬೇಂದ್ರೆಯವರ ‘ಓ ಹಾಡೆ’ ಕವಿತೆ, ಕುವೆಂಪು ಅವರ ‘ಅಧಿದೇವತಾ ಆವಿರ್ಭೂತಿ’ ಮತ್ತು ಅಡಿಗರ ‘ಭೂತ’ ಕವಿತೆಗಳನ್ನು ವಿಶ್ಲೇಷಿಸಿ, ಅವುಗಳಲ್ಲಿ ಕಾವ್ಯದ ವಿವಿಧ ಅಂಗಗಳಾದ ಭಾಷೆ, ಛಂದಸ್ಸು, ಅರ್ಥ, ಅಲಂಕಾರ, ಶಿಲ್ಪ, ಭಾವ, ಜೀವನದರ್ಶನಗಳಲ್ಲಿ ಹೇಗೆ ಸಂಕೀರ್ಣತೆ ಇದೆ ಎಂದು ತೋರಿಸಿಕೊಡಲು ಪ್ರಯತ್ನಿಸಿದರು. ಪ್ರಾರಂಭದಲ್ಲಿ ಗೋಕಾಕರು ನವ್ಯಪಂಥದ ವಿಮರ್ಶೆಯ ಮಿತಿಗಳನ್ನು ಹೇಳಿರುವುದು ಗಮನಾರ್ಹವಾಗಿದೆ. “ರಚನೆಯ ದೃಷ್ಟಿಯಿಂದ ಕಾವ್ಯದ ಸಾವಯವತೆ ಇದೊಂದು ಮಾರ್ಗದ ಕವಿಗಳಿಗೆ ಮಾತ್ರ ಸಾಧ್ಯವಾಗಿದೆ. ಉಳಿದವರಿಗೆ ಅದರ ಪರಿವೆಯೇ ಇಲ್ಲ. ಸಂಕೀರ್ಣತೆ ಐರನಿಯಿಂದ ಮಾತ್ರ ಸಾಧ್ಯ. ಐರನಿಯಿಲ್ಲದೆ ಸಂಕೀರ್ಣತೆ ಇಲ್ಲ. ಈ ಕಾವ್ಯಮಾರ್ಗದವರ ಕೃತಿಗಳಲ್ಲಿ ಮಾತ್ರ ಸಂಕೀರ್ಣತೆ ಕಾಣಿಸಿಕೊಳ್ಳುತ್ತದೆ. ಇಂಥವರ ಕೃತಿಗಳಲ್ಲಿ ಮಾತ್ರ ಅರ್ಥ ಪ್ರತಿಮಾವಿಧಾನದ ಸಾರವಾಗಿ ಹೊರಬೀಳುತ್ತದೆ. ಉಳಿದ ಕಾವ್ಯಮಾರ್ಗಗಳಲ್ಲಿ ಅರ್ಥ ಬರಿ ‘ಹೇಳಿಕೆ’ಯಾಗುತ್ತದೆ. ನೈಜ ಜೀವನ ಸಿದ್ಧಾಂತಗಳೆಂದರೆ ಸಾರ್ತ್ರೆ ಮುಂತಾದವರ ಅಸ್ತಿತ್ವವಾದ; ಇಲ್ಲವೆ ಲೋಹಿಯ ಮುಂತಾದವರ ಸಮತಾವಾದ, ಇವಿಲ್ಲದೆ ಬೇರೆ ದರ್ಶನಗಳು ಬರಿ ‘ಸರಳೀಕರಣ’, ಅವುಗಳಿಗೆ ಬೆಲೆಯಿಲ್ಲ…. ಇಂತಹ ವಿಮರ್ಶಾಭಿಪ್ರಾಯಗಳಿಗೆ ಪುರಸ್ಕಾರ ಕೊಡುವ ವಿಮರ್ಶಕರ ಪ್ರಚಾರ ಸಾಮರ್ಥ್ಯ ಬೆರಳುಕಚ್ಚುವಂತಹದು,” ಎಂದು ಅವರು ಹೇಳಿದರು. “ಈ ಅಲ್ಲ ಅಭಿಪ್ರಾಯಗಳನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಒಂದೊಂದಾಗಿ ಅವುಗಳನ್ನು ಖಂಡಿಸದ ಹೊರತು ಕನ್ನಡ ಕಾವ್ಯಕ್ಕಾಗಲಿ ಸಾಹಿತ್ಯಕ್ಕಾಗಲಿ ಕ್ಷೇಮವಿರಲಾರದು”, ಎಂದು ಗೋಕಾಕರು ಹೇಳಿದರು. ಅವರ ಟೀಕೆ ಅಡಿಗರ ಕಾವ್ಯದ ಬಗ್ಗೆ ಅಲ್ಲ; ನವ್ಯ ವಿಮರ್ಶೆ ಅಥವಾ ರೂಪನಿಷ್ಠ ವಿಮರ್ಶೆಯ ಬಗೆಗೆ ಎಂದು ಭಾವಿಸಬಹುದು. ಜಗತ್ತಿನಾದ್ಯಂತ ಈ ವಿಮರ್ಶೆಯ ಪದ್ಧತಿಯ ಬಗ್ಗೆ ಇಂತಹದೇ ಟೀಕೆಗಳು ಕೇಳಿಬಂದವು ಮತ್ತು ನವ್ಯ ವಿಮರ್ಶೆ ಹಿಂದೆ ಸರಿದು ಸಮಾಜನಿಷ್ಠ ವಿಮರ್ಶಾ ಪ್ರಸ್ಥಾನಗಳಿಗೆ ದಾರಿ ಮಾಡಿಕೊಟ್ಟಿತು.

*****

ಅಡಿಗರ ಪ್ರಮುಖ ಕವನಗಳಲ್ಲಿ ಒಂದಾದ `ಕೂಪ ಮಂಡೂಕ’ (1963) ನಾಟಕೀಯವಾಗಿದೆ. ಈ ಕವನವನ್ನು ಅವರು ತಮ್ಮ ಕಾವ್ಯಶಕ್ತಿ ಕುಂದಿತು, ಸ್ಫೂರ್ತಿಯ ಸೆಲೆ ಬತ್ತಿತು, ತನ್ನ ಬುದ್ಧಿ ಭಾವಗಳಿಗೆ ಪ್ರೇರಣೆ ನೀಡುತ್ತಿದ್ದ ಒಂದು ಶಕ್ತಿ (ಕವನದ ‘ನೀನು’) ಈಗ ತನಗೆ ಕೈಕೊಟ್ಟಿದೆ ಎಂದು ಅನಿಸಿ, ಹತಾಶೆಯಲ್ಲಿದ್ದಾಗ ಬರೆದರು. ಈ ವಸ್ತು ಕಾವ್ಯಕ್ಷೇತ್ರಕ್ಕೆ ಹೊಸದು. ದೈನಂದಿನ ಅನುಭವಗಳಿಂದಲೇ ಈ ಕಾವ್ಯದ ರೂಪಕಗಳು ಹುಟ್ಟಿಕೊಂಡಿವೆ.

ಒಟ್ಟಾರೆ ಯೌವನದಲ್ಲಿ ಸಾಕಷ್ಟು ಕಾರುಬಾರುಗಳನ್ನು ಮಾಡಿದ (ಅಥವಾ ಮಾಡಲು ಪ್ರಯತ್ನಿಸಿದ) ವ್ಯಕ್ತಿ ಇಳಿಗಾಲದಲ್ಲಿ ತನ್ನ ಸಾಧನೆಯ ಮಿತಿಯನ್ನರಿತುಕೊಂಡು ಇರುವ ಸ್ಥಿತಿಯಲ್ಲಿಯೇ ತೃಪ್ತನಾಗಲು ಪ್ರಯತ್ನಿಸುವುದು ಈ ಕವನದ ವಸ್ತುವೆನ್ನಬಹುದು. ಇದು ಸಾಕಷ್ಟು ವ್ಯಾಖ್ಯಾನಕ್ಕೆ ಅವಕಾಶವಿರುವ ಕವಿತೆ.

ಕವಿ ತನ್ನ ಕಾವ್ಯ ಶಕ್ತಿ ಕುಂದಿತು, ಇನ್ನೇನೂ ಬರೆಯಲಾರೆ ಎಂದು ಹತಾಶನಾಗಿದ್ದಾಗ ಬರೆದ ಕವನವಾಗಿದ್ದರೂ, ಆ ವೈಯಕ್ತಿಕ ಸಂಕಟದ ಸ್ಥಿತಿಯನ್ನೇ ಹೀಗೆ ಮಾನವ ಜನಾಂಗದ ಒಂದು ಸಾರ್ವಕಾಲಿಕ ಸತ್ಯವನ್ನಾಗಿ ಕಾಣಿಸಿರುವುದು ಅಡಿಗರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಇಲ್ಲಿನ ಸನ್ನಿವೇಶಗಳು (ಉದಾಹರಣೆಗೆ, ಅವರು ಬಾಲಕನಾಗಿದ್ದಾಗ ತರಗತಿಯಲ್ಲಿ ಗದೆಯ ಬದಲು ಮೇಷ್ಟರ ರೂಲುದೊಣ್ಣೆ ಹಿಡಿದು ಯಕ್ಷಗಾನ ಕುಣಿದದ್ದು (ಕುಮ್ಮುಚಟ್ಟು ಎನ್ನುವುದು ಯಕ್ಷಗಾನದ ಒಂದು ಕುಣಿತದ ವಿಧಾನ), ಆಗ ತರಗತಿಯ ಹೂಜಿ ಒಡೆದದ್ದು, ಮತ್ತೊಮ್ಮೆ ಬಾಲಕ ಅಡಿಗರು ಕೆರೆಗೆ ಬಿದ್ದು ಮುಳುಗಿ ಸಾಯುವುದರಲ್ಲಿದ್ದಾಗ ಯಾರೋ ಬಂದು ಎತ್ತಿದ್ದು – ಇವುಗಳು) ಅಡಿಗರ ಬದುಕಿನ ಪುಟಗಳಿಂದ ತೆಗೆದ ಘಟನೆಗಳು. ಈ ಕವನ ಹೀಗಿದೆ:

ಕೂಪಮಂಡೂಕ

1.
ನೀನೆಲ್ಲಿ ಈಗ: ಹೆಗಲಿಗೆ ಹಗಲ ಕೊಟ್ಟವನು
ಹಾಯಿಯನ್ನುರುಟುರುಟು ಊದಿದವನು,
ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ
ದ್ವೀಪಾಂತರಕ್ಕೆ ಕೈ ಕೊಟ್ಟ ಸಖನು ?

ನಟ್ಟ ನಡುದಾರಿ ತೇಗುವ ತೋಟದೊಳಗಡೆಗೆ
ಮೂಗುಮಟ ಕುಡಿದ ತಂಗೊಳದ ತಡಿಗೆ
ಟಾಂಗುಕೊಟ್ಟು ಕಮಂಗಿ ಕಣ್ಣುಬಿಡುವಷ್ಟಕ್ಕೆ
ಕಂಬಿಕಿತ್ತೆ ವಿಶಾಲ ನೀಲದೆಡೆಗೆ .

ಮೈಹೇರಿ ಇಲ್ಲಿ ಬಿದ್ದಿದ್ದೇನೆ ತಬ್ಬಲಿ ಹಾಗೆ ;
ಹೂವು, ಗಿಡ, ಬಳ್ಳಿ, ಮರ , ಪೊದೆ , ಪೊಟ್ಟರೆ
ಮುಖ ತಿರುಗಿಸುತ್ತ ಕಿಲಕಿಲ ನಗುತ್ತವೆ ; ಸುತ್ತು.
ಮುತ್ತಲು ಕಿರಾತ ಲೇವಡಿಯ ಪಹರೆ.

ಎಲೆ ಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ ;
ಹದ ಬಿಸಿಲುಸಾರಾಯಿ ನೆತ್ತಿಗೇರಿ ;
ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ.

ಹೆತ್ತು ಸುಸ್ತಾದದ್ದೆ ನಿನ್ನ ನಂಬಿದ ಲಾಭ,
ಒರತೆ ಬತ್ತಿದ ಹಾಳು ಬಾವಿ ಹಾಗೆ
ಇರಬೇಕೆ ? ಒಳಗುಸುರುಕಟ್ಟಿ ಕುದಿವಬ್ಬಿಗಳ
ಎಬ್ಬಿಸೋ ಮ್ಳ ಮುಟ್ಟಿ, ಅಟ್ಟು ಹೊರಗೆ.

2
ಹಾಜರಾಗುತ್ತಿದ್ದೆ ಆಗ ಪ್ರತಿ. ಹೊತ್ತಾರೆ,
ಹೊಯಿಗೆಗೆರೆ ತುದಿಗೆ ತುದಿಗಾಲ ದಿಗಿಲು
ನಾನಿರಲು ; ಕಡಲನೊರೆ ಬಗೆವ ಬಂಗಾರಗೆರೆ
ತೇರ ತುದಿಕಳಶ ಮುನ್ನುಗ್ಗುಶಿರಲು ;

ಸಣ್ಣ ಪಾತಿಗೆ ಪುಟ್ಟ ಕೂವೆಗೆ ಪುಟಾಣಿ ಪಟ,
ಹುಟ್ಟಾಡಿಸುತ್ತ ನೀ ತಕ್ಕ ತಕ್ಕ ;
ಸರಳ ರಭಸದ ತರಣಿ ತಾಗಿಸಿ ದಡಕ್ಕೆ ಗಜಕ್ಕನೆ,
ಮೈ ಕೊಂಕಿ ಕೈಚಾಚಿ ಬಾಚಿ ನನ್ನ ;

ಏಳು ಕಡಲುಗಳ ತೆರೆಯೇರಿ ಕಮರಿಗಳಲ್ಲಿ
ತೇಕಿದೆವು ಹಗಲಿಡೀ ಜೀಕಿ, ಜೀಕಿ ;
ಹೊತ್ತ ಮಳೆಬಿಲ್ಲು ಮಣಿ ಸರಕುಗಳ ಭಾರಕ್ಕೆ
ಸುಸ್ತಾದ ತರಣಿಗೆ ಕಿನಾರೆ ತಾಗಿ;

ಕತ್ತಲ ಕಡಲ ನಡುವೆ ನಡುಗಡ್ಡೆ ಮನೆಯಲ್ಲಿ
ಇರುಳಿಡೀ ತಳಮುಳುಗು ಬತ್ತಲಾಟ ;
ನಾನು ನೀನಿಡಿಯಾಗಿ ಹೆತ್ತ ಚೆನ್ನದ ತತ್ತಿ
ತತ್ತಿಗೂ ನಿನ್ನದೇ ಮೊಹರು–ಟಂಕ. :

ಪ್ರತಿನಿಮಿಷವೂ ಮಹಾಜಾತ್ರೆ ; ತೇರಿನ ಮಿಣಿಗೆ
ನನ್ನದೇ ತೋಳು , ನಿನ್ನದೆ ಘೋಷಣೆ ,
ಕೋಟಿ ಕೋಟಿಯ ಕಂಠ ಬಾಹು ಬಲಕೂ ಮೂಲ
ಬಲ ನನ್ನ ನಿನ್ನ ಸಂಯೋಗ ಘಟನೆ ,

ಆದರೂ ನೀ ದಗಾಖೋರ, ನಾಬಲ್ಲೆ ; ಹಳ್ಳಿಯ ಶಾಲೆ
ಮೇಷ್ಟರಿಲ್ಲದ ವೇಳೆ ತಾಳ ಹಿಡಿದು
ನೀ ಭಾಗವತ ಬಾರಿಸಿದೆ , ನಾನು ಬಲಭೀಮ
ರೌದ್ರಾವತಾರಕ್ಕೆ ರೂಲುದೊಣ್ಣೆ –

ಗದೆ ಹಿಡಿದು ತಿರುವು ಹೂಂಕರಿಸಿದ್ದೆ ; ಇಪ್ಪತ್ತೈದು
ಕುಮ್ಮುಚಟ್ಟುಗಳು ಮುಗಿವಷ್ಟರೊಳಗೆ
ಹೂಜೆ ಬರಿಹೋಳು ; ತರಗತಿಯ ಭೋರ್ನಗೆ ಹೊಯಿಲು :
ಬೆನ್ನ ಬಾಸುಂಡೆಯೋ ಮಾಯದ ಕಥೆ.

ಕುಳಿತಿದ್ದೆವಾಗ ಟಕ್ಕಾಟಿಕ್ಕಿಯೆರಡು ಕಡೆ ;
ನಿನ್ನ ಕಡೆಯೇ ಕೊನೆಗು ಕೊಂಚ ಹಗುರ :
ಆದರೂ ಆಗಾಗ್ಗೆ ಮೈಗೂಡಿ ಸಮತೂಕ
ಒಜ್ಜೆ ಎನಿಸಿರಲಿಲ್ಲ ಇಟ್ಟ ಹೆಜ್ಜೆ .

3
ಈಗ ಬಂದಿದೆ ಹಣ್ಣು ಬಿದ್ದು ಕೊಳೆಯುವ ಕಾಲ;
ಹಸುರಿನ ಬುಡಕ್ಕೊರಲೆ ಹಿಡಿವ ಕಾಲ ;
ತೇರ ಹಲಗೆಗೆ ಸುರುಬು ತಗಲಿ, ಮಿಣಿಹುರಿ ಲಡ್ಡು
ಹಿಡಿದು ಹಿಸಿಯುವ ತೇವ ಇಳಿವ ಕಾಲ.

ತೂಕ ಹೆಚ್ಚುತ್ತಿದೆ ದಿನದಿನಕ್ಕೆ ; ಏತದ ನನ್ನ
ತುದಿ ಮಣ್ಣು ತಿನ್ನುತಿದೆ, ಅತ್ತಕಡೆಗೆ
ನೀ ಹತ್ತಿ ಕುಳಿತಿದ್ದ ತುದಿ ಅಂತರಾಳಕ್ಕೆ ;
ಚಾಳೇಶ ; ಕಾಣಿಸದು ನಿನ್ನ ಚಹರೆ .

ಕೇಳುವುದು ನಿನ್ನ ಸ್ವರ ನೂರು ದಭದಭೆ ಹಾಗೆ ;
ಕುಳಿತಲ್ಲೆ ಕೊನರುವುದು ನೂರು ಬಿಳಲು ;
ಒಣಗುವುವು ಕುಡಿ ಹೊರಗೆ ಗಾಳಿ ತಾಗಿದ ನಿಮಿಷ
ಸೇರಿಕೊಳ್ಳದೆ ನಿನ್ನ ಮೂಲ ಧಾತು.

4
ಏಳು ಹೂಂಡದ ನೀರು ಕುಡಿದ ಮಂಡೂಕಯ್ಯ
ನಾನು ; ಕುಪ್ಪಳಿಸುವುದೆ ನನ್ನ ಧರ್ಮ ;
ನೆಲದಿಂದ ಕೊಳಕೊಳಕ್ಕೆ ಮತ್ತೆ ಮೇಲು ನೆಲಕ್ಕೆ ;

ಎರಡಕ್ಕು ತೂಗುವುದು ನನ್ನ ಕೆಲಸ.

ಗಾಳಿ ಹಗುರಿನ ಚಿನ್ನ ಹಳದಿ ಮೈ ಜಿಗಿಯುವುದು,
ತಿಳಿನೀರ ಕೊಳದಲ್ಲಿ ಮೇಲೆ ಕೆಳಗೆ ;
ದಡದ ಹಸಿಹುಲ್ಲ ಮೇಲೊರಗಿದರೆ ಮೈದಡವಿ
ತರಣಿ ತಬ್ಬುವುದೆ ನಾನುಲಿವ ವೇಳೆ.

ನಾನು ತಿಂದರೆ ನೊಣವ ತೋಟ ಹುಲುಸಾಗುವುದೆ ?
ಆಯ್ತೆ ಬಾಳೆಗೆ ಮತ್ತೆ ಕಾಯಕಲ್ಪ ?
ನಾ ಮುಳುಗಿದರೆ ತೆಂಗು ಕಂಗಾಲೆ ? ಹಲಸಿಗೆ ಅಲಸೆ ?
ಇದನರಿಯಲೂ ಕಳೆದೆ ಬಹಳ ತೆರಪ !

ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ,
ನಿನ್ನ ನಲ್ಮೆಯ ನೆಳಲನೀವ ಮಾವು ;
ನಿನ್ನೊಲವನಪ್ಪಿ ತೋರುವ ಕೊಳದ ತಳಕೆಸರು –
ಇಲ್ಲಾಡುವುದು ಇದೇ ಹೊಸ ಠರಾವು.
(ಆಯ್ದ ಸಾಲುಗಳು)

ವ್ಯಂಗ್ಯ – ವಿಡಂಬನೆ

ಸಮಕಾಲೀನ ರಾಜಕೀಯವನ್ನು ಕುರಿತು ಅಡಿಗರು ತೀಕ್ಷ್ಣವಾಗಿ, ವಿಡಂಬನಾತ್ಮಕವಾಗಿ ಕವನಗಳನ್ನು ಬರೆದಿದ್ದಾರೆ. ‘ನೆಹರೂ ನಿವೃತ್ತರಾಗುವುದಿಲ್ಲ’, ‘ಬರುತ್ತಾರೆ’, ‘ನಿನ್ನ ಗದ್ದೆಗೆ ನೀರು’ ಮುಂತಾದ ಕವನಗಳಲ್ಲಿ ವರ್ತಮಾನ ಕಾಲದ ರಾಜಕೀಯಕ್ಕೆ ಅವರು ವ್ಯಂಗ್ಯವಾಗಿ ಮತ್ತು ವಿಡಂಬನೆಯ ಅಸ್ತ್ರವನ್ನು ಬಳಸಿ ಪ್ರತಿಕ್ರಿಯಿಸಿದ್ದಾರೆ. ಕುಸಂಸ್ಕೃತಿಯನ್ನು ವಿಡಂಬಿಸಲು ‘ಸ್ನಾನ’, ‘ಮೂಲಕ ಮಹಾಶಯರು’ ಮುಂತಾದ ವಿಡಂಬನಾತ್ಮಕ ಕವಿತೆಗಳನ್ನೂ ಬರೆದಿದ್ದಾರೆ. ಸಾಹಿತ್ಯಿಕವಾಗಿಯೂ ರಮ್ಯಪಂಥವನ್ನು ವಿಡಂಬಿಸುವ `ಪುಷ್ಪಕವಿಯ ಪರಾಕು’ ಮುಂತಾದ ಕವನಗಳ ಮೂಲಕ ತಮ್ಮ ನಿಲುವುಗಳನ್ನು ಅಭಿವ್ಯಕ್ತಿಸಿದ್ದಾರೆ. ‘ವರ್ಗರಹಿತ ಸಮಾಜ’ ಅಂತಹ ಇನ್ನೊಂದು ಕವನ. ಕೆಲವೊಮ್ಮೆ ನೇರವಾಗಿ ವ್ಯಂಗ್ಯವಾಗಿ ಹೇಳಿದರೆ, ಕೆಲವೊಮ್ಮೆ ರೂಪಕಗಳ ಮೂಲಕ ವಿಡಂಬನಾತ್ಮಕವಾಗಿ ಅವರು ತಮ್ಮ ಸಮಾಜ ವಿಮರ್ಶೆಯ ಕವನಗಳನ್ನು ಬರೆದಿದ್ದಾರೆ. ಅವರ ಸಮಾಜ ವಿಮರ್ಶೆಯ ಶೈಲಿಯನ್ನು ‘ರೂಪಕ ವ್ಯಂಗ್ಯ’ ಎಂದು ಗುರುತಿಸಬಹುದು.

ಉದಾಹರಣೆಗೆ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ, ಅಡಿಗರು ಬರೆದ ಕವನ ‘ನಿನ್ನ ಗದ್ದೆಗೆ ನೀರು.’ ಇದರ ಬಗ್ಗೆ ಎಸ್. ದಿವಾಕರ್ ಅವರು ಒಂದು ಸ್ವಾರಸ್ಯಕರವಾದ ಘಟನೆಯನ್ನು ದಾಖಲಿಸಿದ್ದಾರೆ (ಇಂಟರ್ನೆಟ್‍ನಲ್ಲಿ ಲಭ್ಯವಿದೆ. ನೋಡಿ – ಅಡಿಗ ಅಂಗಳ):

“1975ರ ಜೂನ್ 26ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೇ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮಗೆ ಅಂಥ ಶಾಸನದಿಂದ ಏನೇನು ಅನರ್ಥ ಆಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆ ಸಂಜೆ ಅಡಿಗರು ಎಂದಿನಂತೆ ಗಾಂಧಿ ಬಜಾರಿಗೆ ಬಂದರು. ನಾವು ಮೂವರು ನಾಲ್ವರು ಎಂದಿನಂತೆ ಕಾಫಿ ಕುಡಿದ ಮೇಲೂ ಅಡಿಗರು ಹೆಚ್ಚೇನೂ ಮಾತನಾಡದಿದ್ದುದರಿಂದ ಅವರು ಯಾಕೋ ವ್ಯಗ್ರರಾಗಿದ್ದಾರೆಂದು ತಿಳಿದೆವು. ಹೊರಗೆ ಬಂದು ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, `ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ, ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ’ ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮ ಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. ರಾತ್ರಿ ಏಳೂವರೆ ಗಂಟೆಯಾದಾಗ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು `ಬರುತ್ತೇನೆ, ನಾಳೆ ನೋಡೋಣ’ ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು.

ಆಟೋದವನು ಏನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದದ್ದೇ ನನ್ನ ಭುಜ ಹಿಡಿದುಕೊಂಡು `ನಾವೀಗ ಬಾಂಬು ಮಾಡಬೇಕು’ ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿ ಬಜಾರಿನತ್ತ ಸುಳಿಯಲಿಲ್ಲ. `ಬಹುಶಃ ಬಾಂಬು ಮಾಡುತ್ತಿರಬೇಕು’ ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು, ಸಿಗರೇಟು ಹಚ್ಚಿದ ಅಡಿಗರು, ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ನಾಡಿಗರ ಕೈಗಿತ್ತರು. ಅದನ್ನು ತೆರೆದು ನೋಡಿದರೆ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಈ ಕವನ.”

ನಿನ್ನ ಗದ್ದೆಗೆ ನೀರು

1
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ
ಬಂದು. ಬೇಕಾದದ್ದು ಬೆಳೆದುಕೋ ಬಂಧು ;
ಕಲೆ ಧರ್ಮ ನ್ಯಾಯ ಕಾನೂನು ಸ್ನಾತಂತ್ರ್ಯ ಇತ್ಯಾದಿ ಮೂಲವ್ಯಾಧಿ,
ನನ್ನ ಕುರ್ಚಿಗೆ ತಕ್ಕ ಗಾದಿ.
ಮುಖ್ಯವಾದ ಮಾತೆಂದರೆ ಓ ಭಾರತ ಸಂಸ್ಕೃತಿಯ ಮುಖ್ಯ ಪ್ರಾಣ,
ಬಾಲವಾಡಿಸಬಾರದು, ಹಲ್ಲು ಕಿರಿಯಬಾರದು,
ಹುಬ್ಬೇರಿಸುವುದಂತೂ ಬಹಳ ದೊಡ್ಡ ಗುನ್ಹೆ,
ಹಿಂದಿನ ಪಾಷಂಡನ, ಇಂದಿನ ಫ್ಯಾಸಿಸ್ಟನ ಚಿಹ್ನೆ ;
ತಾಳಲಯಕ್ಕೆ ಸರಿ ಲಾಗ ಹಾಕುವುದೆ ಲಾಗಾಯ್ತಿನ ಹಿರಿಮೆ.

2

ಬೆನ್ಮೂಳೆ ಮುರಿದು ಬಳಿಕ ಬಡಕೊಳ್ಳುತ್ತೇನೆ ಬಾನುಲಿ :
ಎರಡು ಕಾಲಿನ ಮೇಲೆ ನಿಲ್ಲಲೇ ಬೇಕೆಂಬ ತೊದಲುಲಿ
ಜನತಾ ವಿರೋಧಿದಳಗಳ ಪಿತೂರಿ.
ಕಾನೂನು ಮನ್ನಿಸುವ ಜನ ನಾಲ್ಕೂ ಕಾಲಲ್ಲಿ ನಡೆದರೇ
ಚಂದ, ಬೀಳುವಪಾಯ ಕಮ್ಮಿ ;
ಸರ್ವದಾ ಸಾಷ್ಟಾಂಗ ಪ್ರಣಾಮದ್ದೆ ಭಂಗಿ.

3

ಹೇಳಿದ ಹಾಗೆ ಕೇಳಿ, ಬಾಲ
ಮುದುರಿ ಕುಳಿತರೇನೇ ಲಾಭ :
ಹೊಟ್ಟೆಗಷ್ಟು ಹಿಟ್ಟು ಜುಟ್ಟಿಗೆ ಪ್ಲಾಸ್ಟಿಕ್ ಮಲ್ಲಿಗೆ
ಸಿಗುತ್ತವೆ ಹೆದರಬೇಡಿ ನಾಳೆಗೆ.
ಅರ್ಜಿ ಹೋಗಿ ಸೇರುತ್ತದೆ ಖಂಡಿತಾ ಫೈಲಿಗೆ,
ಸ್ವಾತಂತ್ರ್ಯೋತ್ಸ್ಸವಕ್ಕೆ ತಲಾ ಒಂದು ಬೂಂದಿ ಕಾಳಿಗೆ ;
ಸರ್ವಾರ್ಪಣ ಕಲಿಯುವುದೇ ಹೀಗೆ ತಾಯಿ ಮಹಾಂಕಾಳಿಗೆ.

4
ಕೈಗಿಂತ ಲಾಠಿ ದೊಡ್ಡದು, ಲಾಠಿಗಿಂತ ಕತ್ತಿ,
ಅದಕ್ಕಿಂತ ಬಿಲ್ಲು ಬಾಣ,
ಬಾಣಕ್ಕಿಂತಲೂ ದೊಡ್ಡದಲ್ಲವೇ ಜೋಡುನಳಿಗೆ ಬಂದೂಕು,
ಅದನ್ನು ಕೊಳ್ಳುವ ತಾಖತ್ತು ?
ದುಡ್ಡೆಂದರೆ ಬಲ, ಬಲವೆಂದರೆ ದುಡ್ಡು ;
ಈ ಎರಡೂ ಇದ್ದರೆ ಬಿಡು, ಸ್ಪರ್ಗವ ಕಿತ್ತು ಬಿಸಾಡು.
ಆದರೂ ಇದನ್ನು ಮರೆವುದಪಾಯ :
ಬಲವೆಂದರೆ ಎಡ,
ಎಡವೆಂದರೂ ಎಡ –
ಇದು ಈ ಕಾಲದ ಗೂಢ.
ಆ ಎರಡೂ ಇಲ್ಲದ ಭಿಕಾರಿ,
ಮುಚ್ಚಿಕೊಂಡು ನೀ ಬಿದ್ದಿರು ಮೂಲೆ,
ಕಲಿ ತಟ್ಟಲು ಚಪ್ಪಾಳೆ.

5
ದೊಂಬಿ ಗಲಾಟೆ ಚಳವಳಿ ಹಿಂಸೆಗೆ
ಯೋಗಸಾಧನೆಯೆ ಮದ್ದು .
ಆಸನ ಹಾಕುವ ಆಚಾರ್ಯರಿಗೆ
ಕರೆ ಹೋಗಿದೆ ಖುದ್ದು ;
‘ಜನಸಾಮಾನ್ಯರೂ ಯೋಗಾಸನವೂ’ ಎಂಬ ವಿಚಾರದ ಮೇಲೆ
ನಡೆಯಿತು ಹಿರಿ ಪರಿಷತ್ತು.
ನಿರ್ಣಯವಾಯಿತು ಶವಾಸನವೆ ಸರಿ
ಸುಲಭ ಸುಗಮ ಹಿತಕಾರಿ.
ತಡವೇತಕೆ ನಡೆಯಿರಿ ಕೈಕಾಲ

ಚಾಚಿ ಮಲಗಿರಿ ಅಂಗತ್ತು ;
ನರಮಂಡಲ ಸಡಲಿಸಿ ಆರಾಮು
ಮುಚ್ಚಿ ಕಣ್ಣ ಕಿಂಚಿತ್ತು ;
ಉಸಿರು ನಿಧಾನ, ಮಾತೃಧಾನ
ಜೀವನ್ಮೃತನ ವಿಧಾನ.
(ಮಾರ್ಚ್ 1976)

ಕವಿಯೊಬ್ಬ ತಯಾರಿಸಬಹುದಾದ ಬಾಂಬ್ ಅಂದರೆ ಕವನವೇ ತಾನೇ! (ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಯ ಇನ್ನೊಂದು ರೂಪ ಬಾಂಬ್ ಆಗಲಿ ಕಾವ್ಯ ಎನ್ನುವುದು!).

ಸ್ವಾಭಿಮಾನಿ ಅಡಿಗರು

ಪತ್ರಕರ್ತ ಗರುಡನಗಿರಿ ನಾಗರಾಜ್ ಅವರು ದಾಖಲಿಸಿದ ಈ ಪ್ರಸಂಗ ಅಡಿಗರು ಹೇಗೆ ತನ್ನ ನಿಲುವುಗಳಿಗೆ ಬದ್ಧರಾಗಿದ್ದರು; ಕಷ್ಟದಲ್ಲಿದ್ದರೂ ದಾಕ್ಷಿಣ್ಯಕ್ಕೆ ಒಳಗಾಗುವಂತಹ ಸಹಾಯಗಳನ್ನು ಸ್ವೀಕರಿಸದೆ ಧೀರರಾಗಿ ಉಳಿದರು ಎನ್ನುವುದನ್ನು ತಿಳಿಸುತ್ತದೆ. ಕಾಂಗ್ರೆಸ್ಸಿನ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಲೆ ಅಡಿಗರು ತಮ್ಮ ಪ್ರಾಂಶುಪಾಲ ಹುದ್ದೆಯಲ್ಲಿ ಮುಂದುವರಿಯಲಾಗಲಿಲ್ಲ. ನಿರ್ದಿಷ್ಟ ಉದ್ಯೋಗವಿಲ್ಲದೆ ಸಹಜವಾಗಿ ಆರ್ಥಿಕ ಮುಗ್ಗಟ್ಟಿನಲ್ಲಿದ್ದರು. ಆಗ ಮುಖ್ಯಮಂತ್ರಿ ದೇವರಾಜ ಅರಸರು ತಮಗೆ ಆಪ್ತರಾಗಿದ್ದ ಗರುಡನಗಿರಿ ನಾಗರಾಜರ ಮೂಲಕ ಅಡಿಗರನ್ನು ತಮ್ಮ ಕಛೇರಿಗೆ ಕರೆಸಿಕೊಂಡು, ಮಾತನಾಡಿಸಿದರು. ಆಗ ಅಡಿಗರು ಕಾಂಗ್ರೆಸ್ ಸರಕಾರವನ್ನೂ, ತುರ್ತು ಪರಿಸ್ಥಿತಿಯನ್ನೂ ಸಾಕಷ್ಟು ಟೀಕಿಸಿದರು. ಅರಸರು ಶಾಂತವಾಗಿ ಅವರ ಮಾತುಗಳನ್ನು ಕೇಳಿ, “ನಮ್ಮ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಅತಿರೇಕವಾಗಿಲ್ಲ. ಹಾಗೇನಾದರೂ ಆಗಿದ್ದರೆ ನೀವೂ, ಶಿವರಾಮ ಕಾರಂತರೂ, ಹಿರಣ್ಣಯ್ಯನವರೂ ಜೈಲಿನಲ್ಲಿರಬೇಕಾಗಿತ್ತು. ಇಲ್ಲಿ ನಾನು ವಿವೇಚನೆಯಿಂದ ಕಾರ್ಯ ನಿರ್ವಹಿಸಿದ್ದೇನೆ. ನಿಮ್ಮ ನಾಯಕ ಅಡ್ವಾಣಿಯವರು ಇಲ್ಲಿಯೇ ಜೈಲಿನಲ್ಲಿದ್ದರಲ್ಲ, ಅವರನ್ನೇ ಕೇಳಿ” ಎಂದರು. ನಂತರ, ಅಡಿಗರ ಕವಿತೆಗಳನ್ನು ತಾನು ಓದಿದ್ದೇನೆ, ‘ಮೋಹನ ಮುರಳಿ’ ಮತ್ತು ‘ಕಟ್ಟುವೆವು ನಾವು’ ಕವಿತೆಗಳನ್ನು ಆಗಾಗ ಮೆಲುಕು ಹಾಕುತ್ತಿರುತ್ತೇನೆ ಎಂದು ಹೇಳಿ; ಅಡಿಗರಿಗೆ ನಿಯಮಿತವಾಗಿ ಆದಾಯ ಬರುವಂತೆ ಏನಾದರೂ ಜವಾಬ್ದಾರಿ ವಹಿಸುತ್ತೇನೆ ಎಂದು ಸಹಾಯ ಹಸ್ತ ಚಾಚಿದರು. ಅಡಿಗರು ಯೋಚಿಸಿ ಹೇಳುತ್ತೇನೆಂದು ಹೇಳಿದರು. ಅರಸರ ಕೈಹಿಡಿದು, “ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ. ನೀವು ನಿಜವಾಗಿಯೂ ದೊಡ್ಡ ಮನುಷ್ಯರಪ್ಪ. ನಿಮ್ಮ ಹೃದಯವಂತಿಕೆಯಿಂದ ನನ್ನ ಮನ ತುಂಬಿ ಬಂತು” ಎಂದು ಹೇಳಿ ಬೀಳ್ಕೊಂಡರು. ಅರಸರು ಕಾರಿನಲ್ಲಿ ಕಳುಹಿಸಿಕೊಡುವೆನೆಂದರೂ ಒಲ್ಲದೆ ಆಟೋದಲ್ಲಿ ಹಿಂದಿರುಗಿದರು. ಗರುಡನಗಿರಿಯವರ ಮೂಲಕ ಅರಸರು ಸೂಚಿಸಿದಂತೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಪಾದಕರಾಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿಯಾಗಲಿ ಸರಕಾರದ ಸಂಭಾವನೆ ಪಡೆದುಕೊಳ್ಳಲು ಅಡಿಗರು ಒಪ್ಪಲೇ ಇಲ್ಲ. ಆಮೇಲೆ ಅರಸರು ಅವರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ತಿಂಗಳಿಗೆ 500 ರೂ.ಗಳ ಮಾಸಾಶನ ದೊರಕುವಂತೆ ಮಾಡಿದರು. ಗೋಪಾಲಕೃಷ್ಣ ಅಡಿಗರು ಸ್ವತಃ ಬಹಳ ಧಾರಾಳಿ ಮತ್ತು ಇತರರಿಗೆ ಸಹಾಯ ಮಾಡುತ್ತಿದ್ದವರು. ಅವರು ಪ್ರಿನ್ಸಿಪಾಲರಾಗಿದ್ದಾಗ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುತ್ತಿದ್ದುದೂ ಇತ್ತು. ಸಾಹಿತಿ-ಪತ್ರಕರ್ತ ರವಿ ಬೆಳಗೆರೆಯವರು ತಾವು ನೆಲೆ ಕಂಡುಕೊಳ್ಳುವ ಮೊದಲು ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಒಮ್ಮೆ ಬೆಂಗಳೂರಿನಲ್ಲಿ ಎದುರಾದ ಅಡಿಗರು ಧೈರ್ಯ ತುಂಬಿದ್ದನ್ನು ಹೀಗೆ ದಾಖಲಿಸಿದ್ದಾರೆ: “ಅದು 1979 ಡಿಸೆಂಬರ್. ನನ್ನ ಬದುಕಿನ ದುರ್ಭರ ದಿನಗಳು. ಒಂದು ದಿನ ರಸ್ತೆಯಲ್ಲಿ ನಿಂತಿದ್ದವನನ್ನು ಮಹಾನ್ ಕವಿ ಗೋಪಾಲಕೃಷ್ಣ ಅಡಿಗರು ‘ವಿದ್ಯಾರ್ಥಿ ಭವನ’ಕ್ಕೆ ಕರೆತಂದು ಕಾಫಿ ಕುಡಿಸಿ, ಕಾರಣವನ್ನೇ ಕೇಳದೆ ‘ಆ’ ಕಾಲಕ್ಕೆ 300 ರೂಪಾಯಿ ಜೇಬಿನಲ್ಲಿಟ್ಟು ಸುಮ್ಮನೆ ನಡೆದುಹೋಗಿದ್ದರು.”
(ಪತ್ರ: 30.11.2011).

ಮತ್ತೆ ಭಾವಲೋಕದತ್ತ

ತಮ್ಮ ನವ್ಯಕಾವ್ಯದ ಮೂಲಕ ಬೌದ್ಧಿಕ ಪ್ರಖರತೆಯ ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಿಕ ಚಿಂತನ ಕಾವ್ಯವನ್ನು ನೀಡಿದ ಅಡಿಗರು ತಮ್ಮ ಕೊನೆಯ ಸಂಕಲನಗಳಲ್ಲಿ ತಾವು ಅದುವರೆಗೆ ಶೋಧಿಸದೆ ಬಿಟ್ಟಿದ್ದ ಭಾವಲೋಕದ ಕಡೆಗೆ ಹೊರಳಿದ್ದು ಕೂಡ ಮುಖ್ಯವಾದ ಸಂಗತಿಯಾಗಿದೆ: `ಬಾ ಇತ್ತ ಇತ್ತ ಇನ್ನೂ ಇತ್ತ’ ಎನ್ನುವ ಕವಿತೆಯಲ್ಲಿ ಅವರು ಹೇಳಿರುವುದು ಹೀಗೆ:

ತಪ್ಪು ನನ್ನದೆ. ತಪ್ಪುವಾಗ ತಿಳಿಯಲೆ ಇಲ್ಲ;
ತಿಳಿವುದು ಅನಂತರ ನಿಧಾನವಾಗಿ;
ಉಣಲಿದ್ದಾಗ ಹಸಿವಿಲ್ಲ; ಹಸಿದಾಗ ಉಣಿಸಿಲ್ಲ;
ಅಂತಃಕರಣ ತುಂಬಿ ತುಳುಕುತ್ತಲಿರುವಾಗ
ಅಭಿವ್ಯಕ್ತ ಪಥಕೆ ಕದ ತೆರೆವುದಿಲ್ಲ
ನೀನು ನನ್ನವಳಾಗಿ ಬಂದಾಗ ಮುಗ್ಧ ಕಿಶೋರಿ;
ನಾನೊ ಪ್ರೌಢ ವಿದಗ್ಧ, ಅಧ್ಯಾಪಕ ವರಾಕ;
ಆಗ ನಿನಗೆ ನಿನ್ನಂತರಂಗದ ಎಲ್ಲ ತುಡಿತಕ್ಕು
ರಕ್ಷಾಕವಚ ಲಜ್ಜೆ, ಸಂಕೋಚ, ಹಿಂಜರಿಕೆ;
ಆಗ ಹತ್ತಿರ ಕರೆದು ಬರಸೆಳೆದು ಮನವೊಲಿಸಿ
ಮೂಕ ಪಿಕ ಕುಕಿಲುವೊಲು ಮಾಡಬೇಕಿತ್ತು. ಹಾಗೆ
ಮಾಡದೇ ಇದ್ದದ್ದು ಮೊದಲ ಭಾರೀ ತಪ್ಪು…
ಕಾಲ ಮಿಂಚಿದೆ ಈಗ; ಮಿಂಚಿದಾಗಲೇ ಕಣ್ಗೆ ಕಾಣುವುದು
ಕತ್ತಲಿನ ಪಾತಾಳದಾಳ. ಮುಗಿಯುತ್ತಲಿದೆ ಈಗ
ಕೊನೆಯ ಅಧ್ಯಾಯ. ಈಗ ಪಶ್ಚಾತ್ತಾಪವೊಂದೇ ಸಾಧ್ಯ.

‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆ ಅಡಿಗರ ಅನೇಕ ಮುಖ್ಯ ಕವನಗಳ ಆಶಯಗಳನ್ನು ಒಳಗೊಂಡಿದೆ. ‘ಮೋಹನ ಮುರಲಿ’ ಕವನದ ಪೂರಕ ಕವನವೆಂಬಂತೆ ತೋರುತ್ತದೆ; ಆ ಕವನದ ಹೊರ ಬೃಂದಾವನ ಇಲ್ಲಿ ಅಂತರಂಗದ ಚಿಂತಾಮಣಿಯಾಗಿದೆ – ಎಂದು ಡಾ. ಓ. ಎಲ್. ನಾಗಭೂಷಣ ಸ್ವಾಮಿ ಹೇಳಿದ್ದಾರೆ (ನಮ್ಮ ಕನ್ನಡ ಕಾವ್ಯ. 1997). ‘ಪರ’ದ ಸಾಕ್ಷಾತ್ಕಾರವಾದಾಗಲೇ ನನ್ನ ವ್ಯಕ್ತಿತ್ವ ಪರಿಪೂರ್ಣತೆಯನ್ನು ಸಾಧಿಸಿಕೊಳ್ಳುತ್ತದೆ ಎನ್ನುವ ಅವರ ಒಳನೋಟ ಚೆನ್ನಾಗಿದೆ.

‘ಕೂಪ ಮಂಡೂಕ’ದಲ್ಲಿ ತನ್ನೊಳಗಿನ ಚೇತನವನ್ನು ಗೆಳೆಯನೆಂದು ಕರೆದ ಅಡಿಗರು ಅದೇ ಚೇತನವನ್ನು ಇಲ್ಲಿ ಸಭೆಯ ಮಧ್ಯೆ ಸಾಮಾಜಿಕವಾಗಿ ಗುರುತಿಸುತ್ತಾರೆ ಎಂಬ ವಿಶ್ಲೇಷಣೆಯೂ ಇದೆ.

ಕವಿಯು ‘ಚಿಂತಾಮಣಿ’ ಎನ್ನುವುದು ತನ್ನ ಪತ್ನಿಯನ್ನು, ಪತ್ನಿ ಅವರ ಜೀವನ ಸಾಧನೆಗೆ ಒದಗಿಬರುವ ಜೀವಸಖಿ, ಬೇಂದ್ರೆಯವರಿಗೆ ‘ಅಂತಃಪಟದಾಚೆ ವಿಧಿ ತಂದ ವಧು’ ಹೇಗೋ ಹಾಗೆ, ಅಡಿಗರಿಗೆ ‘ಚಿಂತಾಮಣಿ’ ಎಂದು ಕೂಡ ಈ ಕವಿತೆಯನ್ನು ಓದಬಹುದು. ಇಂತಹ ಜೀವಸಖಿಯನ್ನು ತನ್ನ ಬದುಕಿನ ಸಾರ್ಥಕ್ಯಕ್ಕೆ ಒದಗಿಬಂದ ಎಲ್ಲ ಅಂತಃಸ್ಫೂರ್ತಿಯ ಬಾಹ್ಯ ಪ್ರತಿರೂಪವಾಗಿ, ಸಂಕೇತವಾಗಿ ಹೇಳಿರುವ ಸಂಕೀರ್ಣ ಕವನ ಇದು.

ಚಿಂತಾಮಣಿಯಲ್ಲಿ ಕಂಡ ಮುಖ
ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ.
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ.
ಬಡಿತಕ್ಕೆ ತಕ್ಕ ಪ್ರ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ. ಹಠಾತ್ತಾಗಿ
ಮೂಡಿತ್ತಲ್ಲಿ ಅಗೋ, ಅಗೋ ಸಭಾಮಧ್ಯದಲ್ಲಿ, ಪರಮಾಪ್ತ ಮುಖ,
ಮಾತಿನಾಚಯ ಸಹಸ್ಟಂದಿ; ಮಾತಿಲ್ಲದೆಯ 10
ಇಂಗಿತವನರಿವ ಸಹಭಾಗಿನಿಯ ಸಸಹಜ ಮುದ್ರೆ.
ಯಾವ ಮುಖ ಅದು? ಎಲ್ಲಿ ಯಾವಾಗ ಯಾವ ಭವ
ದಲ್ಲಿ ಲೋಕದಲ್ಲಿ, ಸಂಭಾವ್ಯತೆಯ ಯಾವ ಆಕಸ್ಮಿಕದ
ಆತ್ಮೀಯತೆಯ ಆಪ್ಯಾಯಮಾನ ಕ್ಷಣದಲ್ಲಿ
ಕಂಡದ್ದು ಅದು?
ಒಳತಳದ ಬೀಗ ಹೇಗೋ ಕಳಚಿ ಬಾಗಿಲು ತೆರೆದು
ಮೇಲಕ್ಕೆ ಚಿಮ್ಮಿ ಮುಖದಲ್ಲಿ ಮೂಡುವ ಕೆಂಪು.
ಮಿಂಚಂತೆ ಬಂದೊಂದು ಬೆರಗು, ನಿಷ್ಕಾಮವಾದೊಂದು ಚೆಲುವಿನ ಕಂಪು;
ಕಣ್ಣಂಚಲ್ಲಿ ಚಕಮಕಿಸುತ್ತಿರುವ ಬೆಳಕಿನ ಗುಳ್ಳೆ,
ಕನ್ನೆಯಲ್ಲವತರಿಸುವ ಆನಾದಿ ರಾಗದ ಪ್ರತಿಮೆ. 20
ಆಹಹಾ, ಆಲೌಕಿಕ ಸಖಿಯೆ,
ಮುಂಗೈ ಮೇಲೆಯೇ ಅಮೂರ್ತ ಕುಳಿತ ಓ ಅರಗಿಣಿಯೇ,
ಆಸಂಭಾವ್ಯ ಸಂಭಾವ್ಯವಾದೊಂದು ನಿಮಿಷ, ಅನಿಮೇಷ,
ವೇಷವೆಲ್ಲವೆ ಕಿತ್ತು ಬಿಸುಟ ಅಂತರ್ಮೂಲಡ ಅಮೂಲ್ಯ ಹಾಸ.

2
ಚಿಂತಾಮಣಿಯನ್ನು ಹಿಡಿದು ಬಯಸುತ್ತಿದ್ದ ಅರಸುತ್ತಿದ್ದ
ನನ್ನ ಆ ಇನ್ನೊಂದು ಮುಖ; ಸ್ತ್ರೀಮುಖ; ಮಖಮಲ್ಲು
ಮಡಿಕೆ ಬಿಚ್ಚಿದರೆ ಕಾಣುವ ಸೂಕ್ಷ್ಮ ರೇಖೆಗಳಲ್ಲಿ
ರೂಪುಗೊಂಡಂತೆ ಕಾಣುವ ಚಹರೆ; ಕನ್ನಡಿಯಲ್ಲಿ ನಾ ಕಂಡ
ನನ್ನದೇ ಆದ ಹೊಸ ಮುಖ.
ಯಾರು? ಹೆಸರೇನು? ಕುಲ, ಗೋತ್ರ ಯಾವುದು ಎಲ್ಲಿ?
ಗೊತ್ತಿರಲಿಲ್ಲ, ಗೊತ್ತಾಗಲಿಲ್ಲ, ಅರ್ಧಗಂಟೆಯ ಕಾಲ
ಒಳಗು ಒಳಗುಗಳ ಸಂವಾದ, ವಿಷಾದಭರಿತ ಸಂತೋಷದ ಹಂಸ
ಪಾದ. ಮಾನಸ ಸರೋವರದಲ್ಲಿ ಅರಸಂಚೆ
ಕಂಡಿತ್ತು ತನ್ನದೇ ಆದ ಆ ಇನ್ನೊಂದು ಮುಖವ.
ಮತ್ತೆ ವಿರಹದ ಸುದೀರ್ಘ ಅಂತ್ಯವಿಲ್ಲದ ರಾತ್ರಿ ;
ದೀಪವಿಲ್ಲದ ದೀವಿಯಲ್ಲಿ ಸೆರೆಮನೆಯೊಳಗೆ
ಕಂಭಸುತ್ತುವ ಪುರೋಗಮನಸ್ಥಿತಿ ;
ಅಲ್ಲಲ್ಲಿ ಏನನ್ನೊ ಹುಡುಕುತ್ತ ಕಂಡಂತಾಗಿ ಕಾಣದೇ ಬೇಯುವ ಫಜೀತಿ.

3
ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ 40
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರೀ ನೀರಲ್ಲಿ
ಜನ್ಮಟಾಪು ; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲ ಪರಕೀಯ. ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೆ ಕೃತಾರ್ಥ. ಭಾಗ್ಯವಂತ.

ಮತ್ತೆ ಯಾವಾಗ ಮರು ಭೇಟಿ? ಕಣ್ಣು ಕಣ್ಣುಗಳ ಸಮ್ಮಿಲನ,
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ? 50
ಆತ್ಮೀಯ ದೀವಿಗೆ ಮತ್ತೆ ಬರಬಲ್ಲೆನೇ, ಜು ಕಡಲುಗಳ ದಾಟಿ ?
ಬಂದರೂ ಕೂಡ ದೊರೆವುದೆ ಹೇಳು, ಈ ಇಂಥ ಸರಿಸಾಟಿ ? 52

ಸುಮತೀಂದ್ರ ನಾಡಿಗರು ಅಡಿಗರ ಬದಲಾವಣೆಯನ್ನು ಗುರುತಿಸಿರುವುದು ಹೀಗೆ: ಭಾವಗೀತೆ, ನಾಟಕ, ಮಹಾಕಾವ್ಯಗಳೆಂಬ ಮೂರು ಕಾವ್ಯ ಪ್ರಕಾರಗಳಲ್ಲಿ ಅಡಿಗರು ಮೊದಲು ಭಾವಗೀತೆಯ ವೈಯಕ್ತಿಕ ಖಾಸಗಿ ಪ್ರಪಂಚದಿಂದ ಪ್ರಾರಂಭಿಸಿ, ಅನಂತರ ನಾಟಕದ ಮಾರ್ಗಕ್ಕೆ ಬಂದು ಕೊನೆಗೆ ಭಾವಗೀತೆಯ ಮಾರ್ಗಕ್ಕೆ ಹಿಂದಿರುಗಿದರು. ನಾಟಕದ್ದು ಸಾಮಾಜಿಕ ಪ್ರಪಂಚ – ತನ್ನ ಹೊರಗಿರುವ ವ್ಯಕ್ತಿಗಳ ಪ್ರಪಂಚ. ಅಡಿಗರು ತಮ್ಮ ನವ್ಯ ಕಾವ್ಯದ (ಅಂದರೆ ನಾಡಿಗರು ಹೇಳುವಂತೆ ನಾಟಕದ) ಸನ್ನಿವೇಶ ನಿರ್ಮಾಣದಲ್ಲಿ ಪರಂಪರೆಯನ್ನು ಅನುಸರಿಸದೆ ಇದ್ದುದರಿಂದ ಓದುಗರಿಗೆ ಗೊಂದಲವುಂಟಾಯಿತು. ಕಾವ್ಯದಲ್ಲಿ ವಿಭಿನ್ನ ಕಾಲದೇಶಗಳಿಗೆ ಸೇರಿದ ಹಲವು ಪಾತ್ರಗಳು ಬರುವುದು; ಕಾವ್ಯಕ್ರಿಯೆಯಲ್ಲಿ ನೇರವಾದ ಚಲನೆ ಇಲ್ಲದಿರುವುದು ಅಡಿಗರ ಕಾವ್ಯ ಅರ್ಥವಾಗದಿರಲು ಕಾರಣವಾಯಿತು. ಅಲ್ಲದೆ `ಶ್ರೀರಾಮನವಮಿಯ ದಿವಸ’ದಂತಹ ಕವನದಲ್ಲಿ ಕೇವಲ ನಾಟಕವಷ್ಟೇ ಅಲ್ಲ – ಕೊಲಾಜ್ ಚಿತ್ರಕಲೆ ಅಥವಾ ಸಿನೆಮಾಟೊಗ್ರಫಿ ತಂತ್ರ ಕೂಡ ಇದೆ. (ನವ್ಯ ನಾಟಕಗಳಲ್ಲಿ ಕೂಡ ಇಂಥ ತಂತ್ರಗಳು ಇರುತ್ತವೆ. ರಂಗದ ಮೇಲೆ ದೃಶ್ಯ ವಸ್ತುಗಳನ್ನು ಇರಿಸುವುದು, ನಡುನಡುವೆ ಚಲನಚಿತ್ರದ ತುಣುಕುಗಳನ್ನು ತೋರಿಸುವುದು ಇಂಥ ತಂತ್ರಗಳನ್ನು ಆಧುನಿಕ ನಾಟಕವೂ ಬಳಸಿಕೊಳ್ಳುತ್ತದೆ.)

ಕಾವ್ಯಭಾಷೆಯಲ್ಲಿಯೂ ಅಡಿಗರು ಬದಲಾವಣೆ ಮಾಡಿಕೊಂಡರು. ಸದಾಸ್ಮರಣೆಗೆ ಬರುವಂಥ ಖಚಿತವಾದ ಶಬ್ದ ಸಮುಚ್ಚಯಗಳನ್ನು ಟಂಕಿಸಿದ್ದಲ್ಲದೆ ಕಾಲವಾಚಕ ಕ್ರಿಯಾಪದ ರಹಿತ ವಾಕ್ಯಗುಚ್ಛಗಳನ್ನು ಬಳಸುವ ಮೂಲಕ ತಮ್ಮ ಕಾವ್ಯದ ಚಿತ್ರಕ ಶೈಲಿಗೆ ಸರಿಯಾದ ಮಾರ್ಗವನ್ನು ಕಂಡುಕೊಂಡರು. ಛಂದಸ್ಸಿನ ಮೇಲೆ ಅವರಿಗೆ ಅಪಾರ ಹಿಡಿತವಿದ್ದುದರಿಂದ ಗದ್ಯಲಯದಲ್ಲಿ ರಗಳೆಯ ಪ್ರಭೇದಗಳನ್ನು ಬಳಸಿಕೊಂಡರು. ಅಡಿಗರನ್ನು ಸರಳವಾಗಿ ಅನುಕರಿಸಿದವರಿಗೆ ಈ ಸೂಕ್ಷ್ಮಗಳು ತಿಳಿಯದೆ ಗದ್ಯವನ್ನೇ ಕಾವ್ಯವೆಂದು ಬರೆದರು. ಅಡಿಗರ ಪ್ರಭಾವದ ಋಣಾತ್ಮಕ ಅಂಶ ಇದೇ ಆಗಿದೆ.

ಅಡಿಗರಿಗೆ ಸಂದ ಮನ್ನಣೆಗಳು

ಗೋಪಾಲಕೃಷ್ಣ ಅಡಿಗರ ಮಹತ್ವಕ್ಕೆ ಸರಿಯಾಗಿ ಅವರಿಗೆ ಮನ್ನಣೆ ಸಂದಿಲ್ಲವಾದರೂ ಈ ಕೆಲವನ್ನು ಗುರುತಿಸಬಹುದು: 1979 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 1974 ರಲ್ಲಿ ‘ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. 1980 ರಲ್ಲಿ ’ವರ್ಧಮಾನ’ ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ. 1974 ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ. 1979 ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರನ್ ಆಶಾನ್ ಪ್ರಶಸ್ತಿ. 1986 ರಲ್ಲಿ ಮಧ್ಯ ಪ್ರದೇಶ ಸರಕಾರದ ‘ಕಬೀರ್ ಸಮ್ಮಾನ್’. 1988 ರಲ್ಲಿ ಬ್ಯಾಂಕಾಕ್‍ನಲ್ಲಿ ‘ಡಾಕ್ಟರ್ ಆಫ್ ಲಿಟರೇಚರ್’ ಪ್ರಶಸ್ತಿ. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ. 1995 ರಲ್ಲಿ ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ. ಗೋಪಾಲಕೃಷ್ಣ ಅಡಿಗರು 1992ರ ನವೆಂಬರ್ 14ರಂದು ನಿಧನರಾದರು.

******

ಗ್ರಂಥ ಋಣ:
1. ಗೋಪಾಲಕೃಷ್ಣ ಅಡಿಗ. ಬಿ. ವಿ, ಕೆದಿಲಾಯ. ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಉಡುಪಿ. 1996,
2. ಸಮಗ್ರ ಕಾವ್ಯ. (ಎಂ. ಗೋಪಾಲಕೃಷ್ಣ ಅಡಿಗರ ಸಮಗ್ರ ಸಾಹಿತ್ಯ. ಸಂಪುಟ – 1) ಸಂಪಾದಕರು: ಡಾ. ಸುಮತೀಂದ್ರ ನಾಡಿಗ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 2010.
3. ಅನನ್ಯ. ಸಂಪಾದಕರು: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ. ಕ್ಷಮಾ ಪ್ರಕಾಶನ, ಬೆಂಗಳೂರು. 1997.