ಮುಖಮಂಟಪದ ತುಂಬ ಕಂಬಗಳು. ಆ ಕಂಬಗಳ ಮೇಲೆಲ್ಲ ವಿವಿಧ ಪ್ರಾಣಿ ಪಕ್ಷಿ ದೇವತೆ ಪರಿಜನ ನರ್ತಕಿ ಗಾಯಕರಾದಿಯಾಗಿ ಅಸಂಖ್ಯ ಉಬ್ಬುಶಿಲ್ಪಗಳು. ನಮ್ಮ ಊಹೆಗೂ ಮೀರಿದ ಇಷ್ಟೊಂದು ಸಂಖ್ಯಾಪ್ರಮಾಣದ ಉಬ್ಬುಶಿಲ್ಪಗಳು ವಿಜಯನಗರದ ಎಲ್ಲ ಸ್ಮಾರಕಗಳಲ್ಲೂ ಕಂಡುಬರುತ್ತವೆ. ಇವೇ ಗಹನವಾದ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲವು. ಈ ದೇವಾಲಯದ ಬದಿಗೆ ಉತ್ಸವ ಮಂಟಪವೂ ದೇವಿಯ ಗುಡಿಯೂ ಇವೆ. ವಿಜಯನಗರದ ಬಹುತೇಕ ದೇವಾಲಯಗಳ ಗರ್ಭಗುಡಿಗಳಲ್ಲಿ ನೀವು ದೇವರ ಪೂಜಾಪ್ರತಿಮೆಗಳನ್ನು ನಿರೀಕ್ಷಿಸುವಂತೆಯೇ ಇಲ್ಲ.
ಟಿ.ಎಸ್. ಗೋಪಾಲ್‌ ಬರೆಯುವ ದೇಗುಲಗಳ ಸರಣಿ ಎಂಭತ್ತೆರಡನೆಯ ಕಂತು.

 

ಹಳೆಯ ಹಂಪೆಯಿಂದ ಹತ್ತು ಕಿಲೋಮೀಟರ್ ದೂರಕ್ಕೆ ಹೊಸದಾಗಿ ಹರಡಿಕೊಳ್ಳತೊಡಗಿದ ಊರಿಗೆ ಹೊಸಪೇಟೆ ಎಂದೇ ಕರೆಯಬೇಕಲ್ಲವೇ. ಬಳ್ಳಾರಿ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲೊಂದಾದ ಹೊಸಪೇಟೆ ಒಂದು ತಾಲ್ಲೂಕಿನ ಕೇಂದ್ರವೂ ಹೌದು. ನಾಡಿನ ಪ್ರಮುಖ ನದಿಗಳಲ್ಲೊಂದಾದ ತುಂಗಭದ್ರೆ ಈ ಪ್ರಾಂತ್ಯದ ಮಣ್ಣನ್ನು ಫಲವತ್ತಾಗಿರಿಸಿದ್ದಾಳೆ.

ಹೊಸಪೇಟೆಯ ಆಸುಪಾಸಿನಲ್ಲಿರುವ ಹಂಪೆ, ಆನೆಗೊಂದಿ, ಹುಲಿಗೆ, ಕನಕಗಿರಿ, ಪುರ, ಸೊಂಡೂರು ಮೊದಲಾಗಿ ಅನೇಕ ಕ್ಷೇತ್ರಗಳಲ್ಲಿನ ದೇಗುಲಗಳು ದೇಶವಿದೇಶಗಳಿಂದ ಪ್ರವಾಸಿಗಳನ್ನೂ ಭಕ್ತರನ್ನೂ ಮಾತ್ರವಲ್ಲದೆ, ಶಿಲ್ಪ ವಾಸ್ತು ಇತಿಹಾಸ ಮೊದಲಾದ ವಿಷಯಗಳ ಅಧ್ಯಯನಶೀಲರನ್ನೂ ಸೆಳೆಯುತ್ತಿವೆ. ಹಂಪೆಗೆ ಹೋಗುವವರು ಹೊಸಪೇಟೆಯ ಮೂಲಕ ಓಡಾಡಿದರೂ ಇದೇ ಊರಿನಲ್ಲಿರುವ ಅನಂತಶಯನ ದೇವಾಲಯಕ್ಕೆ ಭೇಟಿನಿಡುವ ವ್ಯವಧಾನ ತೋರುವುದಿಲ್ಲ. ವಿಜಯನಗರದ ಪ್ರಮುಖ ದೇಗುಲಗಳಲ್ಲಿ ಈ ಗುಡಿಯೂ ಒಂದು.


ಈ ದೇವಾಲಯವನ್ನು ಸ್ವತಃ ಕೃಷ್ಣದೇವರಾಯನೇ 1524ರಲ್ಲಿ ಕಟ್ಟಿಸಿದ. ನಿಮಗೆ ತಿಳಿದಿರಬಹುದಾದಂತೆ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರಯಶಸ್ಸು ಸಾಧಿಸಿದ ಕೃಷ್ಣದೇವರಾಯನ ಕೌಟುಂಬಿಕ ಜೀವನ ಸುಖಕರವಾಗಲಿಲ್ಲ. ಅವನ ಜೀವನದಲ್ಲಿ ಒದಗಿದ ದೊಡ್ಡ ಆಘಾತವೆಂದರೆ ಆತನ ಮಗ ಎಳೆವಯಸ್ಸಿನಲ್ಲಿಯೇ ತೀರಿಕೊಂಡುದು. ತನ್ನ ಮಗನ ನೆನಪಿನಲ್ಲಿ ತಿರುಮಲಾಪುರವೆಂಬ ಗ್ರಾಮವನ್ನು ಕಟ್ಟಿಸಿದ ರಾಜನು ಅಲ್ಲಿ ಅನಂತಶಯನ ಗುಡಿಯನ್ನು ನಿರ್ಮಿಸಿದನಂತೆ. ವೈಖಾನಸ ಆಗಮ ವಿದ್ವಾಂಸರನ್ನು ಕರೆಯಿಸಿ, ಈ ಗುಡಿಗೆ ಅರ್ಚಕರಾಗಿ ನೇಮಿಸಿ ನಿತ್ಯಪೂಜೆ ನಡೆಯುವಂತೆ ಏರ್ಪಡಿಸಿದ.

ಅನಂತಶಯನ ಗುಡಿ- ವಿಜಯನಗರದ ಕೆಲವು ಪ್ರಸಿದ್ಧ ದೇವಾಲಯಗಳಂತೆ ದೊಡ್ಡ ಆವರಣವುಳ್ಳ ದೇಗುಲ. 1175 ಚದರ ಮೀಟರುಗಳಷ್ಟು ವಿಸ್ತಾರವಾದ ದೇಗುಲದ ಕಟ್ಟಡಕ್ಕೆ 147*85 ಮೀಟರುಗಳಷ್ಟು ದೊಡ್ಡ ಸುತ್ತುಗೋಡೆಯೆಂದಮೇಲೆ ಈ ಕಟ್ಟಡ ಹಾಗೂ ಸುತ್ತಲಿನ ನಿರ್ಮಿತಿಯ ಭವ್ಯತೆಯನ್ನು ಊಹಿಸಿಕೊಳ್ಳಬಹುದು. ಹೊರಗೋಡೆ ಕುಸಿದಿದ್ದು ಬೃಹದಾಕಾರದ ಪ್ರವೇಶದ್ವಾರ ಮಾತ್ರ ಉಳಿದುಕೊಂಡಿದೆ. ದ್ವಾರದ ಎರಡೂ ಕಡೆ ಕಂಬಗಳ ಜೋಡಣೆ, ಗೋಡೆಗಳ ಮೇಲೆ ವಿವಿಧ ಉಬ್ಬುಶಿಲ್ಪಗಳು, ಚಿಕ್ಕ ಮಂಟಪಗಳಂತಹ ಆಕಾರವಿನ್ಯಾಸ, ಬಾಗಿಲ ಚೌಕಟ್ಟಿನ ಮೇಲೆ ಹಬ್ಬಿದ ಬಳ್ಳಿಗಳನ್ನು ಆಧರಿಸಿ ಬಿನ್ನಾಣದಿಂದ ನಿಂತು ಸ್ವಾಗತಿಸುತ್ತಿರುವ ಶಿಲಾಸುಂದರಿಯರು – ಎಲ್ಲವೂ ವಿಜಯನಗರ ಶಿಲ್ಪ ಮತ್ತು ವಾಸ್ತುಶೈಲಿಯ ಅಪೂರ್ವಮಾದರಿಗಳ ಪರಿಚಯ ಮಾಡಿಕೊಡುತ್ತವೆ.

ಬೃಹತ್ತಾದ ಆವರಣ, 46 ಕಂಬಗಳನ್ನೊಳಗೊಂಡ ದೊಡ್ಡ ಮಂಟಪ. ಮೂರು ಬಾಗಿಲುಗಳ ಗರ್ಭಗುಡಿ. ಆಯತಾಕಾರದ ಗರ್ಭಗುಡಿಯ ಮೇಲಕ್ಕೆ ಹತ್ತು ಮೀಟರ್ ಎತ್ತರದ ಕಮಾನಿನಾಕಾರದ ಛಾವಣಿ ವಿಜಯನಗರದ ಶಿಲ್ಪಕಾರರ ಕೌಶಲಕ್ಕೆ ಸಾಕ್ಷಿಯಾಗಿದೆ. ಗರ್ಭಗುಡಿಗೆ ಮೂರು ಬಾಗಿಲು. ಅನಂತಪದ್ಮನಾಭನ ಶಿರದಿಂದ ಪಾದದವರೆಗಿನ ದರ್ಶನ ಪಡೆಯಲು ಈ ಮೂರೂ ಬಾಗಿಲುಗಳ ಮೂಲಕ ಕಣ್ಣುಹಾಯಿಸಬೇಕಾಗಿತ್ತೇನೋ. ಆದರೆ, ಪೀಠದಲ್ಲಿ ದೇವರಿಲ್ಲ! ಮೇಲಿನ ಗವಾಕ್ಷಿಯಿಂದ ಬೀಳುವ ಮಂದ ಬೆಳಕು ದೇವರಿಲ್ಲದ ಪೀಠವನ್ನು ಕಂಡು ನಿಟ್ಟುಸಿರು ಬಿಡುವಂತಿದೆ.

ಮುಖಮಂಟಪದ ತುಂಬ ಕಂಬಗಳು. ಆ ಕಂಬಗಳ ಮೇಲೆಲ್ಲ ವಿವಿಧ ಪ್ರಾಣಿ ಪಕ್ಷಿ ದೇವತೆ ಪರಿಜನ ನರ್ತಕಿ ಗಾಯಕರಾದಿಯಾಗಿ ಅಸಂಖ್ಯ ಉಬ್ಬುಶಿಲ್ಪಗಳು. ನಮ್ಮ ಊಹೆಗೂ ಮೀರಿದ ಇಷ್ಟೊಂದು ಸಂಖ್ಯಾಪ್ರಮಾಣದ ಉಬ್ಬುಶಿಲ್ಪಗಳು ವಿಜಯನಗರದ ಎಲ್ಲ ಸ್ಮಾರಕಗಳಲ್ಲೂ ಕಂಡುಬರುತ್ತವೆ. ಇವೇ ಗಹನವಾದ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲವು. ಈ ದೇವಾಲಯದ ಬದಿಗೆ ಉತ್ಸವ ಮಂಟಪವೂ ದೇವಿಯ ಗುಡಿಯೂ ಇವೆ.

(ಫೋಟೋಗಳು: ಲೇಖಕರವು)

ವಿಜಯನಗರದ ಬಹುತೇಕ ದೇವಾಲಯಗಳ ಗರ್ಭಗುಡಿಗಳಲ್ಲಿ ನೀವು ದೇವರ ಪೂಜಾಪ್ರತಿಮೆಗಳನ್ನು ನಿರೀಕ್ಷಿಸುವಂತೆಯೇ ಇಲ್ಲ. ಸಾಮ್ರಾಜ್ಯದ ಪತನದ ಅವಧಿಯಲ್ಲೋ ಮುಂದಿನ ವರ್ಷಗಳಲ್ಲೋ ಧಾರ್ಮಿಕ ಅಸಹನೆಯಿಂದಲೂ ಅಮೂಲ್ಯ ನಿಧಿ, ಒಡವೆ-ವಸ್ತುಗಳ ನಿಕ್ಷೇಪವಿರುವ ಊಹೆಯಿಂದಲೂ ಗರ್ಭಗುಡಿಗಳ ಪ್ರತಿಮೆಗಳನ್ನು ಹಾಳುಗೆಡವಿರುವುದೇ ಹೆಚ್ಚು. ಆದರೆ, ಈ ಗುಡಿಯಲ್ಲಿ ದೇವರ ಪ್ರತಿಷ್ಠಾಪನೆಯೇ ಆಗಿಲ್ಲವೆನ್ನುವವರೂ ಉಂಟು.

ಹಡಗಲಿಯಲ್ಲಿ ನಿರ್ಮಿಸಲಾಗುತ್ತಿದ್ದ ಅನಂತಪದ್ಮನಾಭನ ಮೂರ್ತಿಯನ್ನು ಇಲ್ಲಿಯವರೆಗೂ ತರಲಾಗಲಿಲ್ಲವೆಂದೂ ಗುಡಿಯು ದೇವರಿಲ್ಲದೆ ಹಾಗೆಯೆ ಉಳಿದುಕೊಂಡಿತೆಂದೂ ಒಂದು ಹೇಳಿಕೆಯಿದೆ. ಇನ್ನೊಂದು ಅಭಿಪ್ರಾಯದಂತೆ, ಅನಂತಶಯನ ಗುಡಿಯ ವಿಗ್ರಹವನ್ನು ರಾಯಚೂರು ಜಿಲ್ಲೆಯ ಹೊಳಲು ಗ್ರಾಮದ ಗುಡಿಯೊಂದರಲ್ಲಿ ಸುರಕ್ಷಿತವಾಗಿ ಸಾಗಿಸಿ ಇರಿಸಲಾಗಿದೆಯಂತೆ. ಆದರೆ, ಅಲ್ಲಿರುವ ಅನಂತಶಯನನ ಪ್ರತಿಮೆ ಇದೇ ಹೌದೋ ಅಲ್ಲವೋ ತಿಳಿಯದು.