ಇದೊಂದು ತ್ರಿಕೂಟಾಚಲ ದೇಗುಲ. ಆದರೆ ನಡುವಣ ಗರ್ಭಗುಡಿಯ ಮೇಲೆ ಮಾತ್ರವೇ ಶಿಖರ ಕಂಡುಬರುತ್ತದೆ. ನಾಲ್ಕು ಸ್ತರದ ಅಲಂಕರಣಗಳು, ಅದರ ಮೇಲೆ ಮೊಗುಚಿದ ಕಮಲದಂತಹ ಶಿಖರ, ಎಲ್ಲಕ್ಕೂ ಮೇಲೆ ಕಳಶ- ಆಕರ್ಷಕವಾಗಿ ಕಾಣುತ್ತವೆ, ಗೋಪುರದ ಅಲಂಕರಣಗಳ ನಡುವೆ ಕಾಳಿಂಗಮರ್ದನ, ಲಕ್ಷ್ಮೀನಾರಾಯಣ ಮೊದಲಾದ ಮೂರ್ತಿಗಳನ್ನು ಕಾಣಬಹುದು. ದೇವಾಲಯದ ಹಿಂಬದಿಯ ಮೂರು ದಿಕ್ಕುಗಳಲ್ಲಿ ಕೆಳಗೋಡೆಯಿಂದ ಮುಂದಕ್ಕೆ ಕಿರುಗೋಪುರಗಳು ವಿಸ್ತರಿಸಿಕೊಂಡಿರುವುದೊಂದು ವಿಶೇಷ. ಗರ್ಭಗುಡಿಯಲ್ಲಿ ಎಡಕ್ಕೆ ವೇಣುಗೋಪಾಲ, ನಡುವೆ ಲಕ್ಷ್ಮೀನಾರಾಯಣನ ಗುಡಿ, ಬಲಕ್ಕೆ ಲಕ್ಷ್ಮೀನರಸಿಂಹ. ಈಗಿರುವ ವೇಣುಗೋಪಾಲನ ಮೂರ್ತಿಯನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಗಿದ್ದು ಉಳಿದವು ಹೊಯ್ಸಳ ಕಾಲದವು. ಗರುಡನ ಪೀಠದ ಮೇಲೆ ನಾರಾಯಣನ ಮೂರ್ತಿ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಂಭತ್ತನೆಯ ಕಂತು

 

ಹೊಸಹೊಳಲು ಎಂದರೆ ಹೊಸ ಪಟ್ಟಣ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಎಂಬ ತಾಲ್ಲೂಕು ಕೇಂದ್ರದ ಹೊರವಲಯದಲ್ಲಿರುವ ಈ ಪುರಾತನ ಹೊಸಹೊಳಲು ಈಗ ಹಳೆಯ ಊರಾಗಿದೆ. ಆದರೆ ಇಲ್ಲಿರುವ ಹೊಯ್ಸಳ ಕಾಲದ ಲಕ್ಷ್ಮೀನಾರಾಯಣ ದೇವಾಲಯ ಶತಶತಮಾನಗಳಿಂದ ತನ್ನ ಶಿಲ್ಪವೈಭವವನ್ನು ಮೆರೆಸುತ್ತಾ ನೋಡುಗರಿಗೆ ಹೊಸಹೊಳಲಾಗಿಯೇ ಇದೆ. ‘ಬೇಲೂರ ಗುಡಿಯ ಒಳಗೆ ನೋಡು, ಹಳೇಬೀಡಿನ ಗುಡಿಯ ಹೊರಗೆ ನೋಡು, ಹೊಸಹೊಳಲಿನ ಒಳಗೂ ಹೊರಗೂ ನೋಡು’ ಎಂಬ ನಾಣ್ಣುಡಿ ಈ ದೇಗುಲಕ್ಕೆ ಹೊಯ್ಸಳವಾಸ್ತುಶಿಲ್ಪದ ಶ್ರೇಷ್ಠ ಮಾದರಿಯ ಸ್ಥಾನವನ್ನೇನೋ ಕಲ್ಪಿಸಿದೆ. ಕಾಲಾಂತರದ ಕುಚೇಷ್ಟೆಗಳನ್ನು ಸಹಿಸಿಕೊಂಡು ಈ ಪುರಾತನ ದೇಗುಲ ತನ್ನ ಪ್ರತಿಷ್ಠೆಯನ್ನು ಒಂದಿಷ್ಟಾದರೂ ಉಳಿಸಿಕೊಂಡಿರುವುದಕ್ಕಾಗಿ ಸಂತೋಷಿಸಬೇಕು.

ಜಾವಗಲ್, ನುಗ್ಗೇಹಳ್ಳಿ, ಸೋಮನಾಥಪುರ ಮತ್ತಿತರ ದೇಗುಲಗಳ ವಾಸ್ತುಶೈಲಿಯನ್ನು ಅತಿನಿಕಟವಾಗಿ ಹೋಲುವುದರಿಂದ ಹೊಸಹೊಳಲಿನ ಈ ದೇವಾಲಯವೂ ಕ್ರಿ.ಶ. 13ನೆಯ ಶತಮಾನದ ಮಧ್ಯಭಾಗದಲ್ಲಿ ಹೊಯ್ಸಳ ಅರಸ ಸೋಮೇಶ್ವರನ ಕಾಲದಲ್ಲಿ ನಿರ್ಮಿತವಾಗಿರಬೇಕೆಂದು ಊಹಿಸಲಾಗಿದೆ. ಖ್ಯಾತ ಶಿಲ್ಪಿ ಮಲ್ಲಿತಂಮನೇ ಈ ಗುಡಿಯ ನಿರ್ಮಾಣದಲ್ಲೂ ಭಾಗವಹಿಸಿದ್ದಿರಬಹುದು.

ಇದೊಂದು ತ್ರಿಕೂಟಾಚಲ ದೇಗುಲ. ಆದರೆ ನಡುವಣ ಗರ್ಭಗುಡಿಯ ಮೇಲೆ ಮಾತ್ರವೇ ಶಿಖರ ಕಂಡುಬರುತ್ತದೆ. ನಾಲ್ಕು ಸ್ತರದ ಅಲಂಕರಣಗಳು, ಅದರ ಮೇಲೆ ಮೊಗುಚಿದ ಕಮಲದಂತಹ ಶಿಖರ, ಎಲ್ಲಕ್ಕೂ ಮೇಲೆ ಕಳಶ- ಆಕರ್ಷಕವಾಗಿ ಕಾಣುತ್ತವೆ, ಗೋಪುರದ ಅಲಂಕರಣಗಳ ನಡುವೆ ಕಾಳಿಂಗಮರ್ದನ, ಲಕ್ಷ್ಮೀನಾರಾಯಣ ಮೊದಲಾದ ಮೂರ್ತಿಗಳನ್ನು ಕಾಣಬಹುದು. ದೇವಾಲಯದ ಹಿಂಬದಿಯ ಮೂರು ದಿಕ್ಕುಗಳಲ್ಲಿ ಕೆಳಗೋಡೆಯಿಂದ ಮುಂದಕ್ಕೆ ಕಿರುಗೋಪುರಗಳು ವಿಸ್ತರಿಸಿಕೊಂಡಿರುವುದೊಂದು ವಿಶೇಷ.

ಗರ್ಭಗುಡಿಯಲ್ಲಿ ಎಡಕ್ಕೆ ವೇಣುಗೋಪಾಲ, ನಡುವೆ ಲಕ್ಷ್ಮೀನಾರಾಯಣನ ಗುಡಿ, ಬಲಕ್ಕೆ ಲಕ್ಷ್ಮೀನರಸಿಂಹ. ಈಗಿರುವ ವೇಣುಗೋಪಾಲನ ಮೂರ್ತಿಯನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಗಿದ್ದು ಉಳಿದವು ಹೊಯ್ಸಳ ಕಾಲದವು. ಗರುಡನ ಪೀಠದ ಮೇಲೆ ನಾರಾಯಣನ ಮೂರ್ತಿ. ಲಕ್ಷ್ಮೀನರಸಿಂಹನ ಪ್ರಭಾವಳಿಯ ಸುತ್ತ ದಶಾವತಾರದ ಕೆತ್ತನೆಯಿದೆ. ಆಯಾ ಗರ್ಭಗುಡಿಯ ದ್ವಾರಪಟ್ಟಕದ ಮೇಲೆ ಆಯಾ ಪೂಜಾಮೂರ್ತಿಯ ಶಿಲ್ಪವನ್ನು ಚಿತ್ರಿಸಿದೆ, ಬಾಗಿಲವಾಡ, ದ್ವಾರಪಾಲಕರು, ಭುವನೇಶ್ವರಿ, ನವರಂಗದ ಕಂಬಗಳು ಎಲ್ಲದರ ಸೂಕ್ಷ್ಮಕೆತ್ತನೆ ನೋಡುಗರನ್ನು ಬೆರಗುಗೊಳಿಸುವುದರಲ್ಲಿ ಸಂಶಯವಿಲ್ಲ. ಗರ್ಭಗುಡಿಯ ಆಚೀಚೆ ಇರುವ ದೇವಕೋಷ್ಠಗಳಲ್ಲಿ ಗಣೇಶ ಮತ್ತು ಮಹಿಷಾಸುರಮರ್ದಿನಿಯರ ಮೂರ್ತಿಗಳಿದ್ದು ಈ ವಿಗ್ರಹಗಳಷ್ಟೇ ಕೋಷ್ಠಗಳ ಕಿರುಗೋಪುರದ ಅಲಂಕರಣವೂ ಸೊಗಸಾಗಿದೆ.

ಹೊರಗೋಡೆಯ ತಳಭಾಗದ ಪಟ್ಟಿಕೆಗಳಲ್ಲಿ ಆನೆ, ಕುದುರೆ, ಹಂಸ, ವ್ಯಾಳ, ಹೂಬಳ್ಳಿಗಳಲ್ಲದೆ ಪೌರಾಣಿಕ ಕಥಾನಕಗಳ ಆಕರ್ಷಕ ನಿರೂಪಣೆಯಿದೆ. ಸಮುದ್ರಮಥನದಂತಹ ಕಥಾನಕವೇ ಅಲ್ಲದೆ, ರಾಮಾಯಣ, ಮಹಾಭಾರತ, ಶ್ರೀಕೃಷ್ಣಕಥೆಗೆ ಸಂಬಂಧಿಸಿದ ಅನೇಕ ಘಟನೆಗಳನ್ನು ಈ ಪಟ್ಟಿಕೆಯ ಮೇಲೆ ಚಿತ್ರಿಸಿದೆ. ಭಿತ್ತಿಯನ್ನು ಕಿರುಸೂರೊಂದು (ಕೂಟಛಾದ್ಯ) ಎರಡುಭಾಗವಾಗಿಸಿದೆ. ಕೂಟಛಾದ್ಯದಿಂದ ಮೇಲಿರುವ ಗೋಡೆಯಲ್ಲಿ ಕಿರುಗೋಪುರಗಳೂ ಕಿರುಗಂಬಗಳೂ ಮೇಲುಸೂರಿನವರೆಗೆ ವಿಸ್ತರಿಸಿಕೊಂಡು ಇಡೀ ಕಟ್ಟಡದ ಶಿಲ್ಪವಿನ್ಯಾಸಕ್ಕೆ ಮೆರುಗುತಂದಿವೆ.

ಇನ್ನು ಗೋಡೆಯ ಕೆಳಭಾಗದಲ್ಲಿ ನೂರಾರು ದೇವತಾಮೂರ್ತಿಗಳನ್ನು ಕೆತ್ತಲಾಗಿದೆ. ಇವುಗಳಲ್ಲಿ ಮಹಾವಿಷ್ಣುವಿನ ಇಪ್ಪತ್ನಾಲ್ಕು ಮೂರ್ತಿಗಳೂ ಶೇಷನಾರಾಯಣ, ಸ್ಥಾನಕ ಅಂದರೆ ನಿಂತಸ್ಥಿತಿಯಲ್ಲಿರುವ ಬ್ರಹ್ಮ, ನರಸಿಂಹ, ನಾಟ್ಯ ಸರಸ್ವತಿ, ಲಕ್ಷ್ಮೀನಾರಾಯಣ, ಮೋಹಿನಿ, ನಾಟ್ಯಲಕ್ಷ್ಮಿ, ಶ್ರೀಕೃಷ್ಣಸತ್ಯಭಾಮೆಯರಿಂದ ಪಾರಿಜಾತಾಪಹರಣ, ಐರಾವತವನ್ನೇರಿ ಅವರನ್ನು ಬೆನ್ನಟ್ಟುತ್ತಿರುವ ಇಂದ್ರ, ಗೋವರ್ಧನಗಿರಿಧಾರಿ, ವಿಠಲ, ಯೋಗಾನರಸಿಂಹ, ಧ್ಯಾನಸ್ಥ ಸರಸ್ವತಿ, ಕಾಳಿಂಗಮರ್ದನ, ವಾಮನ, ತ್ರಿವಿಕ್ರಮ, ಪರವಾಸುದೇವ, ನಾಟ್ಯಲಕ್ಷ್ಮಿ, ನಾಟ್ಯಗಣಪತಿ ಮೊದಲಾದ ವಿಗ್ರಹಗಳೂ ಕಂಡುಬರುತ್ತವೆ.

(ಫೋಟೋಗಳು: ಲೇಖಕರವು)

ಈ ಶಿಲ್ಪಗಳ ಸಾಲಿನಲ್ಲಿ ದೇವಾನುದೇವತೆಗಳೇ ಅಲ್ಲದೆ ವಾದ್ಯಗಾರರು, ದರ್ಪಣ ಸುಂದರಿ, ವಿಷಕನ್ಯೆ ಮತ್ತವಳ ಸಹಚರ, ಶುಕಭಾಷಿಣಿ, ಮಿಥುನ ಶಿಲ್ಪಗಳು ಮೊದಲಾದವೂ ಕಂಡುಬರುತ್ತವೆ. ಮೇಲುಸೂರಿನ ಅಂಚಿನಲ್ಲೂ ಕೈಪಿಡಿಯ ಗೋಡೆಯ ಮೇಲೆ ಬಳ್ಳಿವಿನ್ಯಾಸಗಳ ನಡುವೆ ಅಲ್ಲಲ್ಲಿ ಕೀರ್ತಿಮುಖಗಳನ್ನು ರೂಪಿಸಿ ಯಕ್ಷಮೂರ್ತಿಗಳನ್ನಿರಿಸಿದೆ.

ಹೊಯ್ಸಳಶಿಲ್ಪದ ಅಭ್ಯಾಸಿಗಳಿಗಂತೂ ಹೊಸಹೊಳಲಿನ ದೇವಾಲಯ ಅಪೂರ್ವನಿಧಿಯಿದ್ದಂತೆಯೇ ಸರಿ. ಹೊಯ್ಸಳ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನೆಲ್ಲ ಒಳಗೊಂಡಿರುವ ಈ ಶಿಲ್ಪಗಳೂ ಅವುಗಳ ಉಡುಗೆತೊಡುಗೆಗಳೂ ಕಾಲಾಂತರದ ಸವೆತ ನವೆತಗಳನ್ನೂ ಕಿಡಿಗೇಡಿಗಳ ಕುಚೇಷ್ಟೆಗಳನ್ನೂ ಸಹಿಸಿಕೊಂಡು ಉಳಿದುಬಂದಿರುವುದೇ ಒಂದು ಅಚ್ಚರಿ. ಮಂಡ್ಯ, ಮೈಸೂರು, ಹಾಸನ ಮೊದಲಾದ ಕೇಂದ್ರಗಳಿಂದ ಇಲ್ಲಿಗೆ ರಸ್ತೆಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದ್ದು ನಿಮ್ಮ ಪ್ರವಾಸವನ್ನು ಸೂಕ್ತವಾಗಿ ಹೊಂದಿಸಿಕೊಳ್ಳಬಹುದು.