‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ..
ಕಾವ್ಯಾ ಕಡಮೆ ಕಥಾ ಸಂಕಲನ “ಮಾಕೋನ ಏಕಾಂತ”ದ ಕುರಿತು ವಿಶ್ಲೇಷಣೆ ಬರೆದಿದ್ದಾರೆ ವ್ಯಾಸ ದೇಶಪಾಂಡೆ 

ಒಂದು ಸಣ್ಣ ಅಮೇರಿಕನ್ ಬಡಾವಣೆಯ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನವನ್ನು ಹೇಳುತ್ತ ಹೇಳುತ್ತ ಕಥೆಗಾರ್ತಿ ಓದುಗನನ್ನು ಬೇರೆಯದೇ ಪ್ರಪಂಚಕ್ಕೆ ಒಯ್ದು ಬಿಡುತ್ತಾರೆ. ಕಥೆಗಾರ್ತಿಯ ಬರವಣಿಗೆಯ ಜಾದುಗಾರಿಕೆಯನ್ನು ಬಿಚ್ಚಿಡಲು ಈ ಸಂಕಲನದ ಕತೆಗಳನ್ನು ಕುರಿತು ನಾನು ಓದಿದ ಕ್ರಮದಲ್ಲಿಯೇ ಬರೆಯುತ್ತೇನೆ.

ಕನ್ನಡ ನೆಲದಿಂದ ಮೈಗ್ರೇಟ್ ಆಗಿರುವ ಕೆಲವು ಕುಟುಂಬಗಳು ಒಂದು ಸಣ್ಣ ಅಮೇರಿಕನ್ ಬಡಾವಣೆಯಲ್ಲಿ ಒಟ್ಟುಗೂಡಿ ತಮ್ಮ ಧಾರ್ಮಿಕ ಸಾಂಸ್ಕೃತಿಕ ಉಳಿವಿಗಾಗಿ ಮಾಡಲು ಹೊರಟಿರುವ ‘ಮಗನ ಉಪನಯನ ಸಂಸ್ಕಾರ’ ಪದವಿ ಪ್ರದಾನದ ಕತೆಯಾಗಿದೆ. ಇವೆಲ್ಲವುಗಳಿಗೆ ಪರಕೀಯನಾಗಿ (ಅಲಿನೆಟೆಡ್) ಬೆಳೆದಿರುವ ಟೀನೇಜರ್ ಮಗನಿಗೆ ಇದು ‘ಉಪ್ಯಾನೋ’ ಎನ್ನುವ ಎಡಬಿಡಂಗಿತನವಾಗಿ ಕಾಣುತ್ತದೆ. ಕತೆ ಹಾಸ್ಯಪ್ರಹಸನದಂತೆ ಬೆಳೆಯುತ್ತ ಹೋಗುತ್ತದೆ. ಕಚಗುಳಿ ಇಡುವ ಬರವಣಿಗೆ, ಅರ್ಥಹೀನ ಆಚರಣೆಗಳು, ಎಳೆಯರಲ್ಲಿ ಅವು ಹುಟ್ಟಿಸುವ ದಿಗ್ಭ್ರಮೆಗಳು, ಹಿರಿಯರ ಪ್ರಪಂಚದಲ್ಲಿ ಎಳೆಯರ ಅಸಹಾಯಕತೆ ಎಲ್ಲವನ್ನೂ ಲೇಖಕಿ ಕಣ್ಣೆದುರಿಗೆ ತಂದು ನಿಲ್ಲಿಸಿದ್ದಾರೆ. ಕೊನೆಯಲ್ಲಿ ಹುಡುಗ ಮುಜುಗರದಿಂದ ಪಾರಾಗಲು ಮಿ.ಸ್ಟೀವನ್ಸ್ ನ ಮನೆಯಲ್ಲಿ ಅಡಗಿಕೊಳ್ಳಲು ನುಸುಳುತ್ತಾನೆ. ತಾಳೆಗರಿ ಸುರುಳಿಯಂತೆ ರೂಪಿಸಿದ್ದ ಉಪನಯನದ ಆಮಂತ್ರಣ ಪತ್ರಿಕೆ ಕೈಯಲ್ಲಿದೆ, ಯತಿಯಂತೆ ವೇಷತೊಟ್ಟಿದ್ದ ಆರುಷ್‌ನ ಕೈಯಲ್ಲಿದ್ದ ತಾಳೆಗರಿ ಸುರುಳಿಯನ್ನು ನೋಡಿದ ಮಿ.ಸ್ಟೀವನ್ಸ್ ಗೆ ಅದು ಸಂಸ್ಕೃತ ವಿಶ್ವವಿದ್ಯಾಲಯ ತನಗೆ ಸಂಸ್ಕೃತ ಭಾಷೆಯಲ್ಲಿ ವಿಶಿಷ್ಟ ಸಾಂಸ್ಕೃತಿಕ ಬಗೆಯಲ್ಲಿ ನೀಡುತ್ತಿರುವ ಪ್ರಮಾಣ ಪತ್ರವೆಂದೇ ಭಾಸವಾಗುತ್ತದೆ. ತನಗೆ ಸಿಗುತ್ತಿರುವ ೧೫೦ ನೇ ಪ್ರಮಾಣಪತ್ರವನ್ನು ತೂಗು ಹಾಕಲು ಸ್ಟೀವನ್ಸ್ ಗೋಡೆಯತ್ತ ನಡೆಯುವುದು ‘ಕಾಮಿಡಿ ಆಫ್ ಅಬ್ಸರ್ಡ’ ಆಗಿದೆ. ಕತೆಯ ಕ್ಲೈಮ್ಯಾಕ್ಸ್ ಕತೆಯನ್ನು ಒಂದು ಅಸಾಮಾನ್ಯ ಹಾಸ್ಯ ನಾಟಕದ ಮಟ್ಟಕ್ಕೇರಿಸಿದೆ.(ಅಸಂಬದ್ಧ ವಿನೋದಿನಿ)

(ಕಾವ್ಯಾ ಕಡಮೆ)

‘ಮಾಕೋನ ಏಕಾಂತ’ ಅಮೇರಿಕನ್ ಸಮಾಜದಲ್ಲಿ ಬದುಕುತ್ತಿರುವ ಇಂಡಿಯನ್ ಕುಟುಂಬದ ಒಡಕು ಬದುಕಿನ ಮಾಲಿನ್ಯದ ಕಥೆಯಾಗಿದೆ. ಮಲ್ಲಿಕಾರ್ಜುನ ಅಂದರೆ ಮಾಕೊ ತನ್ನ ತಾಯಿಯೊಂದಿಗೆ ಅಮೇರಿಕೆಯ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾನೆ, ಇಲ್ಲಿ ಬೆಳೆಯುತ್ತಿರುವ ಟೀನೇಜ್ ಮಗ ಇಂಡಿಯನ್ ಟೀನೇಜಿನ ಮಾಡೆಲ್ಲಿನಂತಾಗದೇ ಎಲ್ಲಿ ಅಮೇರಿಕನ್ ಆಗಿಬಿಡುತ್ತಾನೋ ಎಂಬ ಆತಂಕ ತಾಯಿಯ ತಲೆಯನ್ನು ಕೆಡಿಸಿಬಿಟ್ಟಿದೆ. ಅಮೇರಿಕನ್ ಕುಟುಂಬ ಜೀವನದ (ನಾರ್ಮ) ನಾರ್ಮನಂತೆ ಮಗನ ಪ್ರೈವಸಿಯನ್ನು ಅವಳು ರೆಸ್ಪೆಕ್ಟ್ ಮಾಡಲೇಬೇಕು, ಆದರೆ ಮಾಕೋನೇನಾದರೂ ಮಾದಕ ದ್ರವ್ಯಗಳ ವ್ಯಸನಕ್ಕೆ ಬಿದ್ದುಬಿಟ್ಟರೇ?… ಹತ್ತಿಕ್ಕಿಕೊಳ್ಳಲಾಗದ ಇನ್ನೊಂದು ದೊಡ್ಡ ಭಯ, ಆತಂಕ ಅವಳನ್ನು ಕಾಡುತ್ತದೆ. ಮಧ್ಯರಾತ್ರಿಯ ನೀರವದಲ್ಲಿ ಮನೆಯ ಸ್ಟೇರ್‌ಕೇಸನ್ನು ಹತ್ತಿ ಮಹಡಿಯ ಮೇಲಿನ ಮಾಕೋನ ರೂಮನ್ನು ಕದ್ದು ಸೇರಿಕೊಳ್ಳುವ ಹುಡುಗಿಯರ ಹೈಹೀಲ್ಡ್‌ ಶೂಗಳ ಸದ್ದುಗಳು.. ಸತ್ಯವೋ?.. ಭ್ರಮೆಯೋ ?.. ಸತ್ಯ ಅನಿರೀಕ್ಷಿತವಾಗಿ ಸ್ಫೋಟಗೊಳ್ಳುತ್ತದೆ. ಕುಟುಂಬ ಜೀವನದ ಅಡಿಪಾಯ ಕುಸಿದು ಹೋಗಿದೆ. ಟೀನೇಜರ್ ಮಗನ ಸ್ವಚ್ಚಂದತೆಯಲ್ಲ, ತಾಯಿಯ ಸಡಿಲ ನೈತಿಕತೆಯೇ ಕಾರಣ…

ಈ ಕತೆಯಲ್ಲಿ ಅಪರೂಪದ ಸ್ಫೋಟ ಗುಣವಿದೆ… ಮಾಕೋನಲ್ಲಿ ಮ್ಯಾಜಿಕಲ್ ಶಕ್ತಿಯಿದೆ. ಮಾನವನ ಸುಪ್ತ ಪ್ರಜ್ಞೆಯಾಚೆಯ ಅತೀಂದ್ರಿಯ ಲೇಸರ್ ಕಿರಣಕ್ಕೆ.. ಯಾವುದೂ ಅಗಮ್ಯವಲ್ಲ… ಈ ಕತೆಯ ಕಥನ ಕಲೆ ಅಂಥ ಕಿರಣದಿಂದಲೇ ಹರಿವಿದೆಯೆನಿಸುತ್ತದೆ.

‘ತಂದೆ’ ಕತೆಯಲ್ಲಿ ತನ್ಮಯಿ ಗಂಡನಿಗಿಂತ ಮುಂದೆ ಹೋಗುತ್ತಾಳೆ. ಭಾವನಾತ್ಮಕ ಸಮತೋಲನ ಸಾಧಿಸುತ್ತಾಳೆ. ತನ್ನ ಗರ್ಭದಿಂದ ಹೊರಬಂದಿರುವುದು ಒಂದು ಜೀವವಿಲ್ಲದ ಮಾಂಸದ ಪಿಂಡವಷ್ಟೆ, ಆತ ಸಮನ್ವಯನಲ್ಲ, ಸಮನ್ವತ ತಮ್ಮಿಬ್ಬರ ಒಂದು ತನದಲ್ಲಿ ಆಕಾರಗೊಂಡಿದ್ದ ದಿವ್ಯ ಶಿಶು. ಈ ಮಾಂಸದ ಮುದ್ದೆ ತಮ್ಮ ‘ಸಮೂ’ ಅಲ್ಲ. ಈ ನಿಲುವು ಅವಳು ಸಾಧಿಸಿದ ‘ದಿವ್ಯ’ದಂತಿದೆ.

‘ಮೀಲೊ’ ಕನ್ನಡ ಸಣ್ಣ ಕತೆಗಳ ಆಗಸದಲ್ಲಿ ಮಿನುಗಿ ಬಂದ ಮಿನುಗುತ್ತಿರುವ ‘ಫೆಂಟಾಸ್ಟಿಕ್’ ತಾರೆ. ಯಾಕೆಂದರೆ ‘ಫ್ಯಾಂಟಸಿ’ಯನ್ನು ಥೀಮ್ ಆಗಿಸಿಕೊಂಡು ಕಟ್ಟಿದ ಇನ್ನೊಂದು ಸಣ್ಣಕತೆ ಎಲ್ಲಿಯೂ ನನ್ನ ಗಮನಕ್ಕೆ ಬಂದಿಲ್ಲ, ಇದ್ದರೂ ಇರಬಹುದೇನೋ, ಜಾನಪದ-ಪೌರಾಣಿಕ ಕತೆಗಳಲ್ಲಿ ಈ ಕಾಲದ ನಮ್ಮ ಕಾಲದ ಕತೆಗಳಲ್ಲಿ ಮಾತ್ರ ಇಲ್ಲ. ಒಂದಡಿಗಿಂತ ಚಿಕ್ಕದಾದ, ಗೂಬೆಯನ್ನು ಹೋಲುವ ಅಚ್ಚಗೆಂಪು ಮೈಬಣ್ಣದ ಹಕ್ಕಿಯೋ ಹುಳವೋ ಒಂದು ಜೀವ, ಅದರ ಕಣ್ಣುಗಳು ಮಾತ್ರ ಅದರದೇ ಕಣ್ಣುಗಳು, ಆಸ್ಟ್ರೇಲಿಯಾದ ಯಾಲಿನ್ನಪ್ಪಿನ ಹೋಟೆಲ್ ಒಂದರಲ್ಲಿ ಕಣ್ಣಿಗೆ ಬಿದ್ದ ಈ ಹಕ್ಕಿ ತಿರುತಿರುಗಿ ಲೇಖಕಿಯನ್ನು ಸಂದಿಸುತ್ತದೆ, ಬೆಳವಣಿಗೆಯಂತೂ ಒಂದೇ ದಿನದಲ್ಲಿ ಐದು ಪಟ್ಟಿಗಿಂತ ಹೆಚ್ಚಿಗೆ ಬೆಳೆದಿದೆ. ನೆಗೆಟಿವ್ ಬೆಳವಣಿಗೆಯೂ ಅದಕ್ಕಿದೆ. ಅರ್ಧ ಅಡಿಗೂ ಇಳಿದು ಬಿಡುತ್ತದೆ. ತನ್ನ ಹೊರತಾಗಿ ಯಾರೂ ಅದನ್ನು ನೋಡಿಯೇ ಇಲ್ಲ, ತನಗಾಗಿ ಮಾತ್ರವಿರುವ ಈ ಹಕ್ಕಿ ಜೀವ ಸಂಕುಲದ ಹೊಸ ಸದಸ್ಯನೇ(ಳೇ) ಅಥವಾ ತನ್ನ ಫ್ಯಾಂಟಸಿಯ ತ್ರಿಶಂಕುವೇ? ಆ ಜೀವವನ್ನು ‘ಮೀಲೋ’ ಎಂದು ಹೆಸರಿಸುವಾಗ ಲೇಖಕಿ ಒಳಗಿದ್ದ ಫ್ಯಾಂಟಸಿ ಲೋಕವನ್ನು ಹೊರಗಿಟ್ಟಿದ್ದಾರೆ, ತನ್ನ ಪುಟ್ಟ ಕಂದಮ್ಮನಿಗಾಗಿ ತಾನೇ ಹೊಲಿದು ಸೃಷ್ಟಿಸಿದ್ದ ತಲೆದಿಂಬಿನ ಗೊಂಬೆಯೇ ಕಂದನ ಫ್ಯಾಂಟಸಿ ಲೋಕದಲ್ಲಿ ಅಗಲಿರಲಾಗದ ಸಖ ‘ಮೀಲೋ’ ಆಗಿಬಿಟ್ಟಿದ್ದ!

‘ಸುನೇತ್ರಾ ಪಬ್ಲಿಷರ್’ ನಲ್ಲಿ ಸುನೇತ್ರಾ ಗಂಡ ಸುನೀಲನನ್ನು ಬಿಟ್ಟು ತಾನು ಮನೆ ಸೇರಿಕೊಂಡಿದ್ದಾಳೆ. ಅಣ್ಣ ಪಬ್ಲಿಷರ್, ಅಲ್ಲಿ ಇವಳು ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಗಂಡನ ಆಧಿಪತ್ಯ ಧಿಕ್ಕರಿಸಿ ತೌರುಮನೆಗೆ ಬಂದಳು. ಪಬ್ಲಿಷಿಂಗ್ ಹೌಸ್ ತೆಗೆದಿದ್ದು ಇವರಿಬ್ಬರ ಅಪ್ಪನ ಪ್ರಾವಿಡೆಂಟ್ ಫಂಡ್‌ನ ಹಣದಿಂದ, ಇಲ್ಲಿಯೂ ಇಬ್ಬರಿಗೂ ಓನರ್‌ಶಿಪ್ ಸಮಾನವೇ ಇದೆ, ಗಂಡನ ಆಧಿಪತ್ಯ ಧಿಕ್ಕರಿಸಿದಂತೆ ಇಲ್ಲಿಯೂ ಅಣ್ಣನೊಂದಿಗೆ ಜಗಳ ನಡೆದಿರುತ್ತದೆ. ಅಣ್ಣನಿಗೆ ಅನಿಸುತ್ತದೆ, ಬಾಯಿ ತೆರೆದರೆ ಸ್ತ್ರೀವಾದ, ಸ್ತ್ರೀ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳು, ಸೆಕ್ಷುಯಲ್ ಫ್ರೀಡಮ್, ಇಂಥವೇ ಅಧಿಕ ಪ್ರಸಂಗಗಳು, ಹೋಗಲಿ ಅಂದರೆ ಬರಹಗಾರರು ಹೋರಾಟಗಾರರು ಚಳುವಳಿಯವರು ಸ್ವಯಂಸೇವಾ ಸಂಘದವರು.. ಇಂಥ ಕೆಲಸಕ್ಕೆ ಬಾರದವರೆಂದರೆ ಇವಳಿಗೆ ಬಲು ಅಕ್ಕರೆ ‘ಕಲಾವಿದರು ಕಥೆಗಾರರು ಅಂದರೆ ಮನುಷ್ಯತ್ವದ ಮೂಲಕ್ಕೆ ಬಹಳ ಹತ್ತಿರವಿರುವರು ಅಂತ, ಅಣ್ಣಾ ದಯವಿಟ್ಟು ಅವರನ್ನು ಹಾಗೆಲ್ಲ ಆಡಿಕೊಳ್ಳಬೇಡ’ ಇದು ಅಣ್ಣನಿಗೆ ಅವಳು ಹೇಳುವ ಬುದ್ಧಿಮಾತು, ಪಬ್ಲಿಷಿಂಗ್ ಹೌಸಿನ ಎಡಿಟೋರಿಯಲ್ ಪಾಲಿಸಿ ಬಗ್ಗೆಯೇ ಇಬ್ಬರಲ್ಲಿಯೂ ಮೂಲಭೂತ ಭಿನ್ನಾಭಿಪ್ರಾಯ ಇದೆ. ‘ಬೀದಿ ಬದಿಯಲ್ಲಿ ಹಣ್ಣು ಮಾರುವವರು, ಕೈಮಗ್ಗ ನೇಯುವವರು, ಹೌಸ್ ವೈಫ್ ಗಳು, ಊರಿನ ಕೆರೆ ಸಂರಕ್ಷಿಸುವವರು, ಬತ್ತಿ ಹೊಸೆಯುವವರು, ಇಂಥವರ ಸಣ್ಣ ಪುಟ್ಟ ಜೀವನ ಚರಿತ್ರೆ ಪ್ರಕಟಿಸಿದರೆ ಹೇಗಿರುತ್ತದೆ?’ ಇವು ಸುನೇತ್ರಾಳನ್ನು ಇನ್ಸ್ಪೈರ್ ಮಾಡುವ ಥೀಮ್‌ಗಳು, ‘ಹಣ್ಣು ಮಾರುವವನ ಗೋಳಿನ ಕಥೆ ಯಾರಿಗೆ ಬೇಕಾಗಿದೆ, ಪುಸ್ತಕಗಳು ಧೂಳು ತಿನ್ನುತ್ತ ಬೀಳುತ್ತವೆ’ ಇದು ಅಣ್ಣನ ವ್ಯವಹಾರಿಕ ಯೋಚನೆಯ ದಾರಿ.

ಅಣ್ಣನಿಗೆ ಇಬ್ಬರು ಮೂವರು ದಾದಾಗಳ ಪರಿಚಯ ಇದೆ, ಒಬ್ಬ ದಾದಾನ ಆತ್ಮ ಚರಿತ್ರೆಯನ್ನು ಪಬ್ಲಿಷ್ ಮಾಡಲು ಬರೆಸುತ್ತಿದ್ದಾನೆ. ಅದಕ್ಕೆ ಲಿಪಿಕಾರನನ್ನೂ ನಿಯಮಿಸಿದ್ದಾನೆ, ರಾಕೇಶ- ದಾದಾನ ಆತ್ಮ ಚರಿತ್ರೆಯ ಘೋಸ್ಟ್ ರೈಟರ್, ರೋಚಕವಾಗಿ ಕಥೆ ಬರೆದು ೨೫ ಸಾವಿರ ಕಾಪಿಗಳನ್ನು ಸುಲಭವಾಗಿ ಸೇಲ್ ಮಾಡಬಹುದು, ಪಬ್ಲಿಷಿಂಗ್ ಹೌಸ್ ತೆಗೆದುಕೊಂಡಿರುವ ಈ ಅಸೈನ್ಮೆಂಟ್‌ಗೆ ಸುನೇತ್ರಾ ಉರಿದುರಿದು ಬೀಳುತ್ತಾಳೆ. ‘ಇಂಥ ಪುಸ್ತಕಗಳಿಂದ ಯಾರಿಗೇನು ಲಾಭ? ಹಣ ಸಿಗುತ್ತೆಂತ ಕೊಳಚೆ ನೀರು ಕುಡಿಯೋದು ಎಷ್ಟು ಸರಿ?’ ಅಂತ ಅಪದ್ಧ ನುಡಿಯುತ್ತಾಳೆ. ಅವಳೂ ಕೂಡ ಸಂಸ್ಥೆಯ ಓನರ್ ಅಲ್ಲವೇ?

ಈಗೇನು ಮಾಡುವುದು? ದಾದಾ ಅಣ್ಣನಿಗೆ ಮೊದಲೇ ಹೇಳಿಬಿಟ್ಟಿದ್ದಾನೆ, ಯಾರಿಂದಲಾದರೂ ನಿನಗೆ ತೊಂದರೆ ಬಂದರೆ ನನಗೆ ಫೋನ್ ಮಾಡಿ ‘ಗೋ ಅಹೆಡ್’ ಎಂದು ಹೇಳಿಬಿಡು ಸಾಕು, ಮುಂದಿನದನ್ನು ನಾನು ನೋಡಿಕೋತೇನೆ’ ಬೆಳ್ಳಂಬೆಳಿಗ್ಗೆ ಅಣ್ಣ ದಾದಾನಿಗೆ ಫೋನ್ ಮಾಡುತ್ತಾನೆ, ಕೆಲವೇ ದಿನಗಳಲ್ಲಿ ಕಾಡಿನಲ್ಲಿ ಚಾರಣಕ್ಕೆಂದು ಹೋಗಿದ್ದ ಸುನೇತ್ರಾ ಕಾಡಾನೆ ದಾಳಿ ತಪ್ಪಿಸಿಕೊಳ್ಳಲು ಕಾಡಿನೊಳಗೆ ಓಡುತ್ತ ನಾಪತ್ತೆಯಾಗಿದ್ದಾಳೆಂದು ಅವಳ ಫ್ರೆಂಡ್ ಮಾಲಿನಿ ಪೊಲೀಸರಿಗೆ ಕರೆ ಮಾಡುತ್ತಾಳೆ, ಲೇಟೆಸ್ಟ್ ೩ ದಿನಗಳ ಬಳಿಕ ಕಾಡಿನಲ್ಲಿ ಸುನೇತ್ರಾಳ ಹೆಣ ಪತ್ತೆಯಾಗಿದೆ, ಆನೆ ತಿರುಗಿಸಿ ಎಸೆದರೆ ಆಗುವಂಥ ಗಾಯಗಳು ದೇಹದ ಮೇಲಿವೆ, ಕಾಡಾನೆಯ ದಾಳಿಯಿಂದ ಸುನೇತ್ರಾ ಸತ್ತಳೆಂದು ಒಪ್ಪಲಿಕ್ಕೆ ಇವು ಸಾಕು, ಮಾಲಿನಿಯ ಹೇಳಿಕೆಯೂ ಇದೇ, ಕೊಲೆಯ ಹಳವಂಡ ಅಣ್ಣನ ಮನಸ್ಸಿನಿಂದ ಮಾಯವಾಗುವಂಥದ್ದಲ್ಲ, ಸುನೇತ್ರಾಳ ಸಾವು ಲಾಭಬಡಕ ಅರ್ಥ ಪ್ರಪಂಚದಲ್ಲಿ ಮನಸ್ಸಾಕ್ಷಿಯ ಸಾವು, ಒಡೆದುಹೋದ ಕೌಟುಂಬಿಕ ಒಂದುತನದೊಳಗಿದ್ದ ಅಂತಃಕರಣದ ಸಾವು….

‘ಕ್ಲಾರಾ ನನ್ನ ಗೆಳತಿ’ ಕತೆ ಪುರುಷ ಹೆಣ್ಣನ್ನೂ ನಡೆಸಿಕೊಳ್ಳುವ ಕ್ರೂರ ರೀತಿಯನ್ನೇ ತೋರಿಸುವ ಕತೆ, ಆದರೆ ಅಮೇರಿಕನ್ ಜೀವನ ವ್ಯವಸ್ಥೆಗಳ ಸರಿಯಾದ ಅನುಭವವಿರುವ ಕ್ಲಾರಾ ಅನನುಭವಿ ಇಂಡಿಯನ್ ಹೆಣ್ಣಿಗೆ ಫ್ರೆಂಡ್ ಆಗಿ, ಗೈಡ್ ಆಗಿ ಕಷ್ಟದ ದಿನಗಳಲ್ಲಿ ಜೊತೆಗಿದ್ದಾಳೆ, ಜೊತೆಗಿರಬೇಕಾಗಿದ್ದ ರೋಹಿತ್ ಅವಳನ್ನು ಬಿಟ್ಟು ಹೋಗಿದ್ದಾನೆ, ಅವಳನ್ನು ರೇಪ್ ಮಾಡಿದ ಬ್ರೂಟ್, ಕೈಕೊಟ್ಟು ಹೋದ ರೋಹಿತ್ ಇಬ್ಬರಲ್ಲಿ ಅವಳ ಜೀವನ ಹಾಳು ಮಾಡಿದವರು ಯಾರು?

‘ಆ ಒಂದು ಥರಾ’ ಕಥೆಯು ಕೂಡ ಅಮೇರಿಕನ್ ಜೀವನ ಶೈಲಿಯಲ್ಲಿಯ ಹೆಂಡತಿಯ ಒಳಮನಸ್ಸಿನ ಅಭದ್ರತೆಯ ಸುತ್ತ ಇದೆ, ಕಾರ್ ಓಡಿಸುವ ಸ್ಕಿಲ್ಲು ಅವಳಿಗೆ ಎಟುಕದಷ್ಟು ಕ್ಲಿಷ್ಟವಾಗಲು ಅವನ ಓವರ್ ಪೊಸೆಸಿವ್ ನೇಚರೇ ಕಾರಣವೇ? ಅದು ಅವಳಿಗೆ ಎಟುಕಲಾರದ ವಿದ್ಯೆ, ಅವನೊಬ್ಬನೇ ಅದಕ್ಕೆ ಹಕ್ಕುದಾರನೇ?

ಒಂದಡಿಗಿಂತ ಚಿಕ್ಕದಾದ, ಗೂಬೆಯನ್ನು ಹೋಲುವ ಅಚ್ಚಗೆಂಪು ಮೈಬಣ್ಣದ ಹಕ್ಕಿಯೋ ಹುಳವೋ ಒಂದು ಜೀವ, ಅದರ ಕಣ್ಣುಗಳು ಮಾತ್ರ ಅದರದೇ ಕಣ್ಣುಗಳು, ಆಸ್ಟ್ರೇಲಿಯಾದ ಯಾಲಿನ್ನಪ್ಪಿನ ಹೋಟೆಲ್ ಒಂದರಲ್ಲಿ ಕಣ್ಣಿಗೆ ಬಿದ್ದ ಈ ಹಕ್ಕಿ ತಿರುತಿರುಗಿ ಲೇಖಕಿಯನ್ನು ಸಂದಿಸುತ್ತದೆ, ಬೆಳವಣಿಗೆಯಂತೂ ಒಂದೇ ದಿನದಲ್ಲಿ ಐದು ಪಟ್ಟಿಗಿಂತ ಹೆಚ್ಚಿಗೆ ಬೆಳೆದಿದೆ.

‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ, ೩೨ ವರ್ಷಗಳ ಕರಾಳ ಇತಿಹಾಸದಲ್ಲಿ ಕೇವಲ ಏಳೇ ಏಳು ಕೈದಿಗಳು ಆ ಪ್ರಯತ್ನ ಮಾಡಿದ್ದಾರಷ್ಟೇ, ಬೆರಳುಗಳನ್ನು ಕೈಕಾಲುಗಳನ್ನು ತುಂಡು ತುಂಡು ಮಾಡಿಕೊಂಡು ರಕ್ತ ಬಸಿಯುತ್ತ ತಮ್ಮ ತಮ್ಮ ಬ್ಯರಾಕ್ಕುಗಳಿಗೆ ಮರಳಿಸಲ್ಪಟ್ಟಿದ್ದೇ ಅವರಿಗೆ ಸಿಕ್ಕ ದೊಡ್ಡಸ್ತಿಕೆ, ಬೇರೆ ರಾಜ್ಯಗಳ ಬೇರೆ ಬೇರೆ ಜೈಲುಗಳ ದುರ್ದಮ್ಯ ಕೈದಿಗಳನ್ನು ಗೋಡೆ ಹಾರಿ ಓಡುವ ಪಲಾಯನವಾದಿಗಳನ್ನು ಇಲ್ಲಿಗೆ ಟ್ರಾನ್ಫರ್ ಮಾಡಿ ಕಳಿಸುತ್ತಾರೆ. ಪಾಪಿಗೆ ನರಕವೇ ಕಡೆಯ ಲೋಕವೆಂದ ಹಾಗೆ, ಒಮ್ಮೊಮ್ಮೆ ಬೇರೆ ಜೈಲುಗಳು ಪೂರ್ತಿ ಭರ್ತಿಯಾಗಿದ್ದಾಗಲೂ ಕೆಲವು ನತದೃಷ್ಟ ಪಾಪಿಗಳು ಇಲ್ಲಿಗೆ ತಳ್ಳಲ್ಪಡುತ್ತಾರೆ. ಹಾಗೆ ಬಂದವರಲ್ಲಿ ಒಬ್ಬ, ಪ್ರಪಂಚದಲ್ಲಿಯೇ ಸೌಮ್ಯಾತಿಸೌಮ್ಯ ಸ್ವಭಾವದವನೆಂದು ಪ್ರಸಿದ್ಧನಾಗಿರುವ ‘ಕನ್ನಡಮೆನಿಪ್ಪಾ ನಾಡಿನ ಸುಪುತ್ರ- ದತ್ತ’ ಎಲ್ಲ ಕನ್ನಡ ಕುಟುಂಬಿಗರ ಪುರುಷಾರ್ಥಗಳಂತೆ ಈತನೂ ಐಟಿ-ಬಿಟಿ ಎಂಜಿನಿಯರ್, ನಂತರ ಎಂ.ಎಸ್, ನಂತರ ಯು.ಎಸ್. ನಂತರ ಯೇಲ್ ಯೂನಿವರ್ಸಿಟಿಯ ಪಿ.ಹೆಚ್.ಡಿ, ನಂತರ ಡಾಲರುಗಳಲ್ಲಿ ಸಂಬಳ. ಈ ಹಾದಿಯಲ್ಲಿ ನಡೆಯುತ್ತಿರುವಾಗಲೇ ಎಡವಟ್ಟು ಮಾಡಿಕೊಂಡ, ಯಾವುದೋ ಒಂದು ಫ್ರಾಡ್ ಕೇಸಿನಲ್ಲಿ ತಗಲು ಹಾಕಿಕೊಂಡ, ೨೦೦ ಮಿಲಿಯನ್ ಡಾಲರುಗಳ ದೊಡ್ಡ ಕೇಸಾಗಿದ್ದರಿಂದ ಜೀವಾವಧಿ ಶಿಕ್ಷೆಯಾಯಿತು. ದತ್ತ ಈಗ ಕಿತ್ತಳೆ ಬಣ್ಣದ ದೊಗಳೆ ಜೇಲ್ ಯೂನಿಫಾರ್ಮ ತೊಟ್ಟು ಈಲಿ ಕಾರಾಗ್ರಹದಲ್ಲಿ ೩೭ ವರ್ಷಗಳ ಲೈಫ್ ಟರ್ಮ ಸರ್ವ ಮಾಡುತ್ತಿದ್ದಾನೆ.

ಜೇಲ್ ಒಳಗಿನ ಅಪಾಯಗಳ ಕುರಿತು ದತ್ತನಿಗೆ ಆತನ ಜೇಲ್ ಮೇಟ್ ಫೆಡ್ರಿಕ್ ನಿಂದ ಮುನ್ನೆಚ್ಚರಿಕೆ ಸಿಗುತ್ತಿರುತ್ತದೆ. ಮೊದಲನೇ ಮುನ್ನೆಚ್ಚರಿಕೆ ಅಂದರೆ ‘ಡೋಂಟ್ ಡ್ರಾಫ್ ದಿ ಸೋಪ್’ ಈ ಜೈಲು ಒಂದು ಹೊಮೋ ಸೆಕ್ಷುಯಲ್ ರಾಜ್ಯ, ಹೋಮೋ ಸೆಕ್ಷುಯಲ್ ದಾಳಿಯಿಂದ ರಕ್ಷಿಸುವವರು ಯಾರೂ ಇಲ್ಲ, ಇಲ್ಲಿ ಎಲ್ಲರೂ ಬ್ರೂಟ್ಸ್‌ ಗಳೇ. ಒಂದು ಸಲ ಸೋಪನ್ನು ಡ್ರಾಪ್ ಮಾಡಿದರೆ ಆಯ್ತು, ಜೀವನದಲ್ಲಿ ಜಾರೋದೊಂದೇ ಉಳಿಯೋದು’

ಅಂತಹ ಒಂದು ಎನ್‌ಕೌಂಟರ್ ಎದುರಾದಾಗ ಫೆಡ್ರಿಕ್‌ನೇ ಹುಸಿ ಬಾಂಬು ಹಾರಿಸಿ ದತ್ತನನ್ನು ಬಚಾವು ಮಾಡುತ್ತಾನೆ. ‘ಲೀವ್ ಹಿಮ್ ಅಲೋನ್, ಅವನ್ಯಾರು ಗೊತ್ತಿಲ್ಲವೇ? ಡೇವ್ ಡ್ಯಾಡಿಯ ಮಗ ಅವನು’ ಇವನ ಮೇಲೆ ಎರಗಲು ಬಂದಿದ್ದ ಒಬ್ಬ ರೌಡಿ ಕೈದಿ ಹೋಸೆ ಅಲ್ಲಿಂದ ಕಾಲು ಕಿತ್ತುತ್ತಾನೆ. ಜೈಲಿನ ಆವರಣದಲ್ಲಿ ‘ಡೇವ್ ಡ್ಯಾಡಿ’ ಹೆಸರಿಗೆ ಎಂಥ ಭಯಮಿಶ್ರಿತ ಗೌರವವಿದೆಯೆಂದರೆ ಅಂದಿನಿಂದ ಯಾರೂ ದತ್ತನನ್ನು ಕೆಣಕುವ ಉಸಾಬರಿಗೆ ಹೋಗುವುದಿಲ್ಲ, ಈ ಡೇವ್ ಹೇಳಿಕೇಳಿ ಒಂದೇ ರಾತ್ರಿಯಲ್ಲಿ ಎಂಟು ಹೆಣಗಳನ್ನು ಉರುಳಿಸಿ ಮರಣ ದಂಡನೆಗಾಗಿ ಕಾಯುತ್ತಿರುವ ಕೈದಿ, ಡೇರ್ ಡೆವಿಲ್ ರೇಜರ್ ಗೋಡೆ ಹಾರಲು ಯತ್ನಿಸಿ ರಕ್ತ ಬಸಿದಿರುವ ರೆಪ್ಯುಟೇಷನ್ ಇವನಿಗಿದೆ. ದಿನಕ್ಕೆ ೨೩ ಗಂಟೆ ಮ್ಯಾಕ್ಸಿಮಮ್ ಸೆಕ್ಯುರಿಟಿ ಸೆಲ್ಲಿನಲ್ಲಿ ಕೂಡಿಟ್ಟಿರುತ್ತಾರೆ.

ಈಗ ಇನ್ನೊಂದು ಯೋಚನೆ ದತ್ತನ ತಲೆ ತಿನ್ನತೊಡಗಿದೆ. ಡೇವ್ ತನ್ನ ತಂದೆಯೆಂದು ಎಲ್ಲರೂ ಹೇಗೆ ನಂಬುತ್ತಾರೆ? ತಾನು ಭಾರತೀಯನಂತೆ ಕಾಣುತ್ತೇನೆ, ಡೇವ್‌ನೂ ಹಾಗೆಯೇ ಕಾಣುತ್ತಾನಾ? ಹಾಗಾದರೆ ಡೇವ್ ಭಾರತೀಯನೇ ಇರಬಹುದೇ? ದತ್ತನಂತೂ ಡೇವ್‌ನನ್ನು ಎಂದೂ ನೋಡಿಯೇ ಇಲ್ಲ. ಇರಲಿಕ್ಕಿಲ್ಲ, ಮ್ಯಾಕ್ಸಿಕನ್ ಇರಬಹುದು, ಇಂಡಿಯನ್ ಎಂದು ಕಂದು ಚರ್ಮ ನೋಡಿ ಇವರು ತಿಳಿದಿರಬಹುದು. ಇಡೀ ಕಾರಾಗೃಹದ ಸಾವಿರಕ್ಕೂ ಹೆಚ್ಚು ಕೈದಿಗಳಲ್ಲಿ ಒಂದೇ ಒಂದು ಭಾರತೀಯ ಮುಖವೂ ದತ್ತನ ಕಣ್ಣಿಗೆ ಬಿದ್ದಿಲ್ಲ. ಫೆಡ್ರಿಕ್‌ನಿಂದ ಕಲಿತ ಇನ್ನೊಂದು ಪಾಠ ‘ಈ ಜಾಗದಲ್ಲಿ ಅವ ಬಿಳಿಯ ಇವ ಕರಿಯ ಇವ ಕಂದು ಇವ ಇಂಡಿಯನ್ ಹೀಗೆಲ್ಲ ಮಾತಾಡಬಾರದು, ಸಣ್ಣ ಮಾತುಗಳಿಗೂ ಹೆಣ ಬೀಳ್ತಾವೆ ಹೆಣ’ ಕೈದಿಗಳಲ್ಲಿ ಗುಂಪುಗಳಿವೆ, ಬಿಳಿಯ ಅಮೇರಿಕನ್ನರದೇ ಒಂದು ಗುಂಪು, ಕಪ್ಪು ಅಮೇರಿಕನ್ನರದು ಇನ್ನೊಂದು ಗುಂಪು, ಮೆಕ್ಸಿಕನ್ನರದು ಬೇರೆಯದೇ ಗುಂಪು, ೭೦ ವರ್ಷ ದಾಟಿದವರು ಮತ್ತೊಂದು ವರ್ಗದವರು, ತಮ್ಮದೇ ಕಾಲದ ಯಾವುದೋ ರಾಜಕೀಯ ಹರಟೆಯಲ್ಲಿರುತ್ತಾರೆ, ೨೦ ರ ತರುಣರು ತಮ್ಮಷ್ಟಕ್ಕೆ ಕುಪ್ಪಳಿಸುತ್ತಿರುತ್ತಾರೆ, ದತ್ತ ಎಲ್ಲರ ಬಾಯಲ್ಲಿ ನರ್ಡ್‌ ಅಂದರೆ ಕುಡುಮಿ. ಯಾವ ಗುಂಪಿನಲ್ಲಿಯೂ ಇವನಿಗೆ ಪ್ರವೇಶ ಇಲ್ಲ. ಎಲ್ಲರೂ ಇವನ ಡಿಗ್ರಿಗಳನ್ನು ಅಪಹಾಸ್ಯ ಮಾಡುವವರೇ. ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ ಕೈದಿಗಳಿಗೆ ಟೆಲಿಫೋನ್ ಮಾಡಲು ಸಿಗುತ್ತದೆ. ದತ್ತನಿಗೆ ಹಾಗೆ ಕರೆ ಮಾಡಿ ಮಾತನಾಡಲು ಯಾರೂ ಇಲ್ಲ. ತಾಯಿ ದೂರದ ಬೆಂಗಳೂರಿನಲ್ಲಿ ಒಂಟಿಯಾಗಿದ್ದಾಳೆ. ಡ್ಯಾಡಿ ತನ್ನ ಶಿಕ್ಷೆಯ ಸುದ್ದಿ ದಿನ ಪತ್ರಿಕೆಯಲ್ಲಿ ಓದಿ ಹೃದಯಾಘಾತದಿಂದ ಕುಸಿದು ಬಿದ್ದು ಅಲ್ಲಿಯೇ ಹೋಗಿಬಿಟ್ಟಿದ್ದಾನೆ, ಸ್ನೇಹಿತರು ಬಂಧುಗಳೆಲ್ಲ ಇವನಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಿಂದೆ ಒಬ್ಬಳು ಗರ್ಲ್‌ಫ್ರೆಂಡ್ ಇದ್ದಳು. ಅವಳೊಂದಿಗೆ ಸಂಬಂಧ ಯಾವಾಗಲೋ ಕಡಿದು ಹೋಗಿದೆ. ಊಟ ತಿಂಡಿ ನಿದ್ದೆ ಎನ್ನುತ್ತ ಸಮಯ ಕಳೆದು ಹೋಗುತ್ತಿದೆ… ಒಮ್ಮೊಮ್ಮೆ ವೇಗವಾಗಿ.. ಒಮ್ಮೊಮ್ಮೆ ನಿಧಾನವಾಗಿ. ಆಯುಷ್ಯ ಸವೆದು ಹೋಗುತ್ತಿದ್ದು ದತ್ತ ಒಮ್ಮೊಮ್ಮೆ ಖಿನ್ನನಾಗುತ್ತಾನೆ,

ಇಂತಹ ಖಾಲಿ ಖಾಲಿ ಜೈಲಿನ ಜೀವನದಲ್ಲಿ ಸಮ್ಮತಿಯ ಸಲಿಂಗ ಕಾಮ, ಹಸ್ತ ಮೈಥುನಗಳು ನಿತ್ಯ ಸತ್ಯಗಳಾಗಿವೆ. ಹೀಗಿದ್ದಾಗ ದತ್ತ ನೀರೀಕ್ಷಿಸುತ್ತಿದ್ದ ಆ ದಿನ ತನ್ನಷ್ಟಕ್ಕೆ ತಾನೇ ಬಂತು. ಅದು ಡೇವ್‌ನನ್ನು ನೋಡಿದ ವಿಶೇಷ ದಿನವೆಂದೇ ಹೇಳಬೇಕು, ಜೈಲಿನ ಆವರಣದ ಒಳಗಡೆ ಆಟದ ಬಯಲಿಗೆ ಹೋಗುವ ದಾರಿಯಲ್ಲಿದ್ದ ವಾಟರ್ ಫೌಂಟೇನಿನಲ್ಲಿ ಬಗ್ಗಿ ನೀರು ಕುಡಿಯುತ್ತಿದ್ದ ಡೇವ್ ಡ್ಯಾಡಿಯನ್ನು ದತ್ತ ನೋಡಿದ. ಡೇವ್ ಭಾರತೀಯನಂತೆ ಕಾಣುತ್ತಿದ್ದ, ದತ್ತ ಅಲ್ಲಿಗೆ ನಡೆದು ಡೇವ್ ಡ್ಯಾಡಿಯ ಕುರ್ಚಿಯ ಸಾಲಿನಲ್ಲಿದ್ದ ಕೊನೆಯ ಕುರ್ಚಿಯಲ್ಲಿ ಕೂತ. ಆತನೂ ದತ್ತನನ್ನು ಭಾರತೀಯನೆಂದು ಗುರುತಿಸಿದ್ದಕ್ಕೆ ಹೊರಬಂದ ಆತನ ಧ್ವನಿ ಸಾಕ್ಷಿಯಾಗಿತ್ತು. ‘ನಯಾ ಹೈ ಕ್ಯಾ?’ ಹಿಂದಿಯಲ್ಲಿ ಬಂದ ಪ್ರಶ್ನೆ. ಇಂಗ್ಲೀಷ್ ಸ್ಪ್ಯಾನಿಷ್‌ಗಳನ್ನು ಬಿಟ್ಟು ಬೇರೇನೂ ಕೇಳಿರದಿದ್ದ ಕಿವಿಯಲ್ಲಿ ನೀರು ಹೊಕ್ಕಂತಾಯಿತು. ದತ್ತ ಡೇವ್‌ನ ಎಡಗೈ ಮೇಲಿದ್ದ ರಬ್ಬರಿನ ನೀಲಿ ಬ್ಯಾಂಡ್ ಮೇಲೆ ಇಂಗ್ಲೀಷ್ ಅಕ್ಷರಗಳನ್ನು ನೋಡಿದ. ಡಿ-ಇ-ವಿ-ಎ ದೇವಾ ಈತನ ಹೆಸರು. ‘ಓಹ್’ ದತ್ತ ಕೇಳಿದ. ‘ಇಂಡಿಯಾ ಮೇ ಕಹಾ ಸೇ ಹೈ ಆಪ್ ?’ ನಿಮಿಷದ ಮೌನ. ‘ಸೌಥ್ ಮೇ ನಾಗಮಂಗಲ ಸೇ, ಓ ಥಾ ಹಮಾರಾ ಗಾಂವ್’ ‘ಅಯ್ಯೋ ನಮ್ಮ ಮಂಡ್ಯ ಜಿಲ್ಲೆ ನಾಗಮಂಗಲದವರಾ ಸಾರ್?’ ಅಚ್ಚ ಕನ್ನಡ ಪಲಕು ದತ್ತನ ನಾಲಿಗೆಯಿಂದ ಹರಿದಿತ್ತು. ದೂರದ ಪರದೇಶದಲ್ಲಿ ಇಬ್ಬರು ಒಂದೇ ಭಾಷೆಯ ದೇಶ ಬಾಂಧವರು ಎದುರು-ಬದುರಾದಾಗ ಅವರು ಬ್ಯಾಂಕ್ ಉದ್ಯೋಗಿ ಪ್ರಾಧ್ಯಾಪಕರಾಗಿರಲಿ, ಇಲ್ಲವೇ ಕಳ್ಳ ಕೊಲೆಗಡುಕರಾಗಿರಲಿ, ಆತ್ಮೀಯತೆಯ ಒಂದುತನದ ತಂತಿಗಳು ಹೇಗೆ ಮಿಡಿದು ಬಿಡುತ್ತದೆ! ಆ ಕಡೆಯಿಂದಲೂ ಅಚ್ಚಗನ್ನಡ ಪಲಕು ಬಂತು, ‘ಅದನ್ನೆಲ್ಲಾ ತೆಗೆದುಕೊಂಡು ಈಗ ಏನು ಮಾಡ್ತೀಯಾ ಬಿಡಪ್ಪ’ ಅನ್ನುತ್ತ ಎದ್ದು ನಡೆದ ದೇವಾ, ಕೆಲವು ದಿನಗಳಲ್ಲಿ ಗಲ್ಲುಗಂಬವನ್ನೇರಲಿದ್ದ ಕೈದಿ ಆತ. ಇನ್ನೇನು ನುಡಿದಾನು!… ಭಾನುವಾರ ಮುಂಜಾನೆ ವಾರ್ಡನ್‌ ದತ್ತನನ್ನು ಕರೆಸಿದರು, ಕೇಳಿದರು. ‘ಇಂಡಿಯನ್ ಕುಕಿಂಗ್ ಬರುತ್ತಿದೆಯೇನು ನಿನಗೆ?’ ನಾಳೆ ಒಬ್ಬ ಕೈದಿಗೆ ಮರಣದಂಡನೆಯಿದೆ. ನಮ್ಮ ನಿಯಮಗಳಂತೆ ಸಾಯುವ ಹಿಂದಿನ ದಿನ ಆತನ ಬಯಕೆಯಂತೆ ಅವನಿಷ್ಟದ ಲಾಸ್ಟ್ ಮೀಲ್ ಕೊಡಬೇಕು, ಈ ಖೈದಿಗೆ ಇಂಡಿಯನ್ ಊಟವೇ ಬೇಕಂತೆ, ಈ ದರಿದ್ರ ಊರಿನಲ್ಲಿ ಇಂಡಿಯನ್ ಊಟ ಎಲ್ಲಿ ಸಿಗುತ್ತದೆ? ಲಾಸ್ಟ್ ಊಟಕ್ಕಾಗಿ ಸ್ಯಾಂಕ್ಷನ್ ಇರುವುದು ೪೦ ಡಾಲರ್ ಮಾತ್ರ. ದೂರದೂರಿನಿಂದ ಏನಾದರೂ ತರಿಸಲು ಸಾಧ್ಯವಿಲ್ಲ, ನಮ್ಮನ್ನು ಪರೀಕ್ಷೆ ಮಾಡಲೆಂದೇ ವಕ್ಕರಿಸುತ್ತಾರೇನೋ ಇಂಥ ಬೋಳೀ ಮಕ್ಕಳು, ನಮ್ಮ ಕಿಚನ್ನಿನಲ್ಲಿ ಸಿಗುವ ಪದಾರ್ಥ ಉಪಯೋಗಿಸಿ ಏನಾದರೂ ಇಂಡಿಯನ್ ಫುಡ್ ಮಾಡಿಕೊಡಲು ನಿನ್ನಿಂದ ಆಗುತ್ತದೆಯೇನು? ಸಂಜೆ ನಾಲ್ಕಕ್ಕೆ ತಯಾರಿಸಬೇಕು ನೋಡು, ಇನ್ನೊಂದು ಕೆಲಸ ಮಾಡು, ಕಿಚನ್ನಿಗೆ ಹೋಗಿ ಅಡುಗೆಗೆ ಮತ್ತೇನೇನು ತರಿಸಬೇಕಾಗ್ತದೆ, ೨೦ ಡಾಲರ್ ಮಿಕ್ಕದಂತೆ ಐದು ಪದಾರ್ಥಗಳ ಲಿಸ್ಟು ಬರೆದು ಕೊಡು, ಪ್ರಿಸನ್ನಿನ ಗಾಡಿ ಸಿಟಿಗೆ ಹೊರಟಿದೆ, ಇಂಡಿಯನ್ ಸ್ಟೋರಿನಿಂದ ತರಿಸಿದರಾಯ್ತು’

ದತ್ತನಿಗೆ ಮರಣದಂಡನೆ ಕಡೆಗೆ ಹೆಜ್ಜೆಗಳನ್ನಿಡಲಿರುವ ಕೈದಿ ಯಾರೆಂದು ತಿಳಿದುಹೋಗಿತ್ತು. ಮಧ್ಯಾಹ್ನ ಎರಡೂವರೆಗೆ ದತ್ತ ಕಿಚನ್ನಿಗೆ ಹೊರಟ. ತಾನು ಬರೆದ ಲಿಸ್ಟಿನಲ್ಲಿ ಗೋಧಿ ಹಿಟ್ಟಿದ್ದರೆ ರಾಗಿ ಹಿಟ್ಟು ಬಂದಿತ್ತು… ತೊಗರಿ ಬೇಳೆಗೆ ಬದಲು ಹುರುಳಿ ಕಾಳು ಬಂದಿದ್ದವು. ಹರಿವೆ ಸೊಪ್ಪಿನ ಗೊಂಚಲು, ದತ್ತ ಒಂದು ಪಾತ್ರೆಯಲ್ಲಿ ಅಕ್ಕಿ ಬೇಯಲಿಟ್ಟು ಇನ್ನೊಂದು ಪಾತ್ರೆಯಲ್ಲಿ ಹುರುಳಿಕಾಳು ಕುದಿಯಲಿಟ್ಟ, ಶ್ಯಾವಿಗೆ ಹುರಿದ, ಹಾಲು ಬತ್ತಿಸಿ ಸಕ್ಕರೆ ಹಾಕಿದ, ಸೊಪ್ಪನ್ನು ತೊಳೆದು ಹೆಚ್ಚಿ ಈರುಳ್ಳಿಯ ಜೊತೆ ಎಣ್ಣೆಯಲ್ಲಿ ಒಗ್ಗರಣೆ ಹಾಕಿದ, ಹುರುಳಿ ಕಾಳು ಬೆಂದ ಮೇಲೆ ತಿಳಿ ಕಟ್ಟನ್ನು ಬೇರೆ ಬಸಿದಿಟ್ಟು ಬೆಂದ ಕಾಳನ್ನು ಪಲ್ಯಕ್ಕೆ ಸೇರಿಸಿದ, ಕಟ್ಟಿನ ಸಾರಿಗೆ ಸ್ವಲ್ಪ ಮಸಾಲೆ ಪೌಡರನ್ನು ಸೇರಿಸಿ ಬೆಳ್ಳುಳ್ಳಿಯ ವಗ್ಗರಣೆ ಹಾಕಿದ. ನುರಿತ ಅಡುಗೆ ಭಟ್ಟನಂತೆ ಅಂಗೈ ಮೇಲೆ ಸಾರಿನ ಹುಂಡು ಬೀಳಿಸಿಕೊಂಡು ರುಚಿ ನೋಡಿದ. ರಾಗಿ ಮುದ್ದೆ ತೊಳೆಸಿಟ್ಟ, ನೋಡ ನೋಡುತ್ತಲೇ ಇಂಡಿಯನ್ ಅಡುಗೆ ತಯಾರಾಗಿಬಿಟ್ಟಿತು. ಅಡುಗೆಯ ವಿಶಿಷ್ಟ ಪರಿಮಳ ಬಾಲ್ಯದ ಯೌವನದ ಯಾವು ಯಾವುದೋ ನೆನಪುಗಳನ್ನು ಹೊತ್ತು ತರುತ್ತಿತ್ತು. ಭಾರತೀಯ ತಿನಿಸೇಬೇಕೆಂದು ಹೇಳಿದ ದೇವ್ ಯಾವ ವಿಶಿಷ್ಟ ಪರಿಮಳದ ಯಾವ ನೆನಪನ್ನು ಬೇಡುತ್ತಿದ್ದಾನೆಂದು ಕಳವಳಗೊಂಡ, ಪ್ಲಾಸ್ಟಿಕ್ಕು ಪ್ಲೇಟು ಬಾಳೆಲೆಯಂತೆ ಅನಿಸಿತು. ಒಂದು ಮೂಲೆಯಲ್ಲಿ ಅನ್ನ ಬಡಿಸಿದ, ಪಕ್ಕಕ್ಕೆ ರಾಗಿ ಮುದ್ದೆಯಿಟ್ಟ. ಶ್ಯಾವಿಗೆ ಪಾಯಸ ಸುರಿದ, ಕೊನೆಯ ಖಾನೆಯಲ್ಲಿ ಬಟ್ಟಲಿಟ್ಟು ಅದರ ತುಂಬ ಸಾರು ಸುರಿದ..

ಕೊನೆಯ ಊಟದ ತಟ್ಟೆಯ ತಯಾರಿಯನ್ನು ಕತೆಗಾರ್ತಿ ವಿವರಿಸುತ್ತ ಹೋಗುವ ಶಬ್ದ ಶಬ್ದವೂ ಹೃದಯಸ್ಪರ್ಶಿಯಾಗುತ್ತ ಹೋಗುತ್ತದೆ, ದೇವಾ ನ ಜೀವನದಂತೆ ದತ್ತನ ಬದುಕೂ ಮುಗಿದಿದೆ. ಪರದೇಶದಲ್ಲಿ ಬಂಧಿಗಳಾಗಿದ್ದಾರೆ. ದೂರದ ತನ್ನೂರಿನ ಯಾವು ಯಾವುದೋ ಹಳೆಯ ನೆನಪುಗಳು ಮೂಗಿನಲ್ಲಿವೆ. ಹಿನ್ನೆಲೆಯಲ್ಲಿ ದೊಡ್ಡ ಜೈಲು, ಹಿನ್ನೆಲೆಯಲ್ಲಿ ಅನುಭವಿಸಲೇಬೇಕಾದ ಪ್ರಾರಬ್ಧ ಕರ್ಮ, ಶಿಕ್ಷೆ, ದೇವಾ-ದತ್ತರ ಸಂಬಂಧ ಖಂಡ ಖಂಡಗಳನ್ನು ಕಡಲುಗಳನ್ನು ಸುತ್ತಿ ಬಂದ ಸಂಬಂಧ.. ಒಂದು ದಿನದ ಒಂದು ಕ್ಷಣದ ಒಂದು ಊಟದ ಋಣ.

ಈ ಸಂಕಲನದ ಎಲ್ಲ ಕತೆಗಳೂ ಮನುಷ್ಯ ಸಂಬಂಧಗಳನ್ನು ಪರಿಶೀಲನೆಗೆ ಒಡ್ಡುವ ಕಥೆಗಳಾಗಿವೆ. ಸಂಬಂಧಗಳು ಎಷ್ಟು ಗಟ್ಟಿಯಾಗಿವೆ? ಎಷ್ಟು ಸುಳ್ಳಾಗಿವೆ? ಸಾಮಾಜಿಕ ಸಾಂಸ್ಕೃತಿಕ ಮೌಲ್ಯಾಂತರಗಳಿಗೆ ಒಳಗಾದ ಭಾರತೀಯ ಹೆಣ್ಣು ಎದುರಿಸುವ ಅನುಭವಗಳು ಈ ಕತೆಗಳಲ್ಲಿ ಹಾಸು ಹೊಕ್ಕಾಗಿವೆ. ನಮ್ಮ ತಲೆಮಾರು ಸಮುದ್ರದಾಚೆಯ ಜೀವನವನ್ನು ಶ್ರೀ ಅನಂತಮೂರ್ತಿಯವರ, ಶ್ರೀ ಶಾಂತಿನಾಥ ದೇಸಾಯರ ಕಣ್ಣುಗಳಿಂದ ನೋಡಿತ್ತು. ಶ್ರೀಮತಿ ಕಾವ್ಯಾ ಕಡಮೆಯವರು ತಮ್ಮ ನೋಟದಲ್ಲಿ ಅಪೂರ್ವವಾದ ಸಮತೋಲನವನ್ನು ಸಾಧಿಸಿದ್ದಾರೆ.

ಹೊಸ ಶತಮಾನದ ಹೊಸ ತಲೆಮಾರಿನ ಯುವ ಲೇಖಕರಿಂದ ಹೊಸ ಸಾಹಿತ್ಯ ಯುಗದ ಸೃಷ್ಟಿಯನ್ನು ನಿರೀಕ್ಷಿಸುತ್ತಿರುವ ಸಾಹಿತ್ಯಾಸಕ್ತರು ತಪ್ಪಿಸಿಕೊಳ್ಳದೇ ಓದಲೇಬೇಕಾದ ಕೃತಿ ಮಾಕೋನ ಏಕಾಂತ.