ಬರಹಗಾರನಾಗಿ ನಾನು Hanger on ಸ್ಥಾನದ ಪಾತ್ರವನ್ನೇ ತುಂಬಾ ಇಷ್ಟಪಡುತ್ತೇನೆ. ಯಾರೂ ನಿಮ್ಮನ್ನು ಗಮನಿಸುವುದಿಲ್ಲ, ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೆಚ್ಚು ಜನ ನಿಮ್ಮನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಪರಿಗಣಿಸಿ ನಿಮ್ಮ ತಂಟೆಗೇ ಬರುವುದಿಲ್ಲ. ನಿಮ್ಮ ಸ್ವಾತಂತ್ರ್ಯ, ನಿಮಗೆ ಸಿಗುವ ಸಮಯ ಎಲ್ಲವೂ ಹೆಚ್ಚಾಗುತ್ತದೆ. ಎಲ್ಲರನ್ನೂ ನೀವು ನಿರಾಳವಾಗಿ ಗಮನಿಸಬಹುದು. ನಿಮಗೇ ಗೊತ್ತಿಲ್ಲದಂತೆ ನಿಮ್ಮ ವ್ಯಕ್ತಿತ್ವಕ್ಕೆ ಒಂದಕ್ಕಿಂತ ಹೆಚ್ಚು ಆಯಾಮಗಳು ಸಿಗುತ್ತವೆ. ನನ್ನ ಕುಟುಂಬದ ಸದಸ್ಯರು ಇದನ್ನೆಲ್ಲ ಒಪ್ಪುವುದಿಲ್ಲ. ಇದನ್ನು ಒಂದು ತಂತ್ರವೆಂದು ಭಾವಿಸುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೆರಡನೆಯ ಪ್ರಬಂಧ ನಿಮ್ಮ ಓದಿಗೆ

ಇವರು ಸರ್ವವ್ಯಾಪಿಗಳು, ಸರ್ವಾಂತರ್ಯಾಮಿಗಳು, ಬದುಕಿನ ಎಲ್ಲ ಕ್ಷೇತ್ರಗಳನ್ನು, ಸ್ತರಗಳನ್ನು ವ್ಯಾಪಿಸಿಕೊಂಡಿರುವವರು. ಆದರೂ ಇವರ ಕಛೇರಿ, ವಿಳಾಸ ಏನು ಎಂಬುದನ್ನು ಹೇಳಲು ಯಾರೊಬ್ಬರಿಗೂ ಸಾಧ್ಯವಾಗುವುದಿಲ್ಲ.

ಮಾನ್ಯ ಶ್ರೀ…. ಇವರು ಯಾರು, ಏನು ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮಗೆ ತಟಕ್ಕನೆ ಉತ್ತರಿಸಲು ಸಾಧ್ಯವಾಗದಿದ್ದರೆ, ಹಾಗಿದ್ದೂ ಅವರು ಸಾರ್ವಜನಿಕವಾಗಿ ಮಿಂಚುತ್ತಿದ್ದರೆ, ಪ್ರಭಾವಿಗಳಾಗಿ ಕಾಣುತ್ತಿದ್ದರೆ, ಗಡಿಬಿಡಿ ಮನುಷ್ಯರಾಗಿದ್ದರೆ, ಅವರನ್ನು Hangers on ಎಂದು ಸ್ಥೂಲವಾಗಿ ಹೇಳಬಹುದು. ಯಾವುದೇ ಕ್ಷೇತ್ರದ ಗಣ್ಯರ, ಸಾಧಕರ, ಅಧಿಕಾರಸ್ಥರ ಸುತ್ತ ನಕಲಿಶಾಮರಂತೆ ಕಾಣುವ ಇವರು, ಅವರ ಸುತ್ತಲೇ ಸುತ್ತುತ್ತಿರುತ್ತಾರೆ. ಯಾವಾಗಲೂ ಅವರಿಗೆ ಅಂಟಿಕೊಂಡಿರುತ್ತಾರೆ. ಆದರೂ ಇವರು ಇಂಥವರು, ಇಷ್ಟೇ ಎಂದು ಕರಾರುವಾಕ್ಕಾಗಿ ಹೇಳುವುದು ತುಂಬಾ ಕಷ್ಟ ಎಂಬುದನ್ನು ಯಾಕೆ ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದರೆ, ಇವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನಾನು ವಿಫಲನಾಗಿರುವುದರಿಂದ. ಇನ್ನೂ ಒಂದು ಕಾರಣವಿದೆ. ಕೆಲವರು ನನ್ನನ್ನು ಕೂಡ Hanger on ಎಂದೇ ಭಾವಿಸಿದ್ದಾರೆ. ನಿನಗೆ ಯಾವ ಕ್ಷೇತ್ರದಲ್ಲೂ ಆಳವಾದ ಪರಿಣತಿ ಇಲ್ಲ, ನಿಷ್ಠೆ ಇಲ್ಲ, ಸುಮ್ಮನೆ ಎಲ್ಲ ಕ್ಷೇತ್ರದ ಪ್ರಮುಖರ ಸುತ್ತ ಸುತ್ತುತ್ತ, ಅವರ ಪ್ರಭೆಯ ಹೊಳಪಿನಲ್ಲಿ ಕಾಣುವವನು ನೀನು ಎಂದು ಮಿತ್ರರು, ಕುಟುಂಬದವರು ಹೇಳುತ್ತಲೇ ಇದ್ದಾರೆ. ಏನೇ ಆದರೂ ನನ್ನ ಕಷ್ಟವನ್ನು ಬರವಣಿಗೆಯಲ್ಲಿ ಹೇಳಿಕೊಂಡುಬಿಡುವುದು ಒಳ್ಳೆಯದು ಎಂದು ಇದನ್ನೆಲ್ಲ ಬರೆಯಲು ಕುಳಿತಿದ್ದೇನೆ.

ಸಿದ್ದಪ್ಪನೋ, ಕಾಳಪ್ಪನೋ, ನಾಗರಾಜನೋ, ನಾರಾಯಣನೋ, ಜಗದೀಶನೋ, ಸುರೇಶನೋ, ರವಿಯೋ, ಚಂದ್ರನೋ ನನಗೆ ಗೊತ್ತಿದೆಯೆಂದು ಯಾರಿಗಾದರೂ ಅನಿಸಿದರೆ, ಯಾರು ಅವರು, ನಿನಗೆ ಹೇಗೆ ಪರಿಚಯ ಎಂದು ಎಲ್ಲರೂ ನನ್ನನ್ನು ಕೇಳುತ್ತಾರೆ. ಒಂದು ಸಲ ನಮ್ಮ ಭಾವನ ಮನೆಯಲ್ಲಿ ಕುಳಿತಿದ್ದೆ. ಕೌಟುಂಬಿಕ ವಿಷಯಗಳನ್ನು ಕುರಿತು ಹರಟುತಿದ್ದೆವು. ಒಬ್ಬ ಗೆಳೆಯನ ಪ್ರವೇಶವಾಯಿತು. ನಮಗೆ ಮಾತುಕತೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಅವನೇ ಮಾತನಾಡುತ್ತಿದ್ದ, ಮಾತನಾಡುತ್ತಲೇ ಇದ್ದ. ಅವನಿಗೆ ಗೊತ್ತಿಲ್ಲದವರೇ ಇಲ್ಲ, ಗೊತ್ತಿಲ್ಲದ ವಿಷಯಗಳೇ ಇಲ್ಲ. ನಂತರ ಇನ್ನೊಬ್ಬ ಗೆಳೆಯ ಬಂದ. ಆದರೂ ಮೊದಲು ಬಂದ ಗೆಳೆಯನೇ ಇನ್ನೂ ಮಾತನಾಡುತ್ತಿದ್ದ, ಮಾತನಾಡುತ್ತಲೇ ಹೋದ. ಮಾತುಗಾರಿಕೆಯ ಗತ್ತು, ವ್ಯಾಪ್ತಿಗೆ ಎಲ್ಲರೂ ದಂಗುಬಡಿದು ಹೋದರು. ಸರಿಯಾಗಿ ಹೇಳಬೇಕೆಂದರೆ, ಮೂಕವಿಸ್ಮಿತರಾದರು. ನೆರೆದಿದ್ದವರೆಲ್ಲ ಕೇಳಿಸಿಕೊಂಡರು. ಮಹನೀಯರು ಹೋದ ಮೇಲೆ ಮಾತುಕತೆ ಹೀಗೆ ನಡೆಯಿತು –

ಯಾರದು ಬಂದಿದ್ದವರು?
ನಮ್ಮ ಸ್ನೇಹಿತರು, ಕುಟುಂಬದ ಎಲ್ಲ ಸದಸ್ಯರಿಗೂ ಪರಿಚಯವಿರುವವರು.
ಅದು ಗೊತ್ತಾಯಿತು ಏನು ಕೆಲಸ ಮಾಡ್ತಾರೆ? ಯಾವ Postನಲ್ಲಿದ್ದಾರೆ?
ಇಲ್ಲ, ಏನೂ ಕೆಲಸ ಮಾಡೋಲ್ಲ. ಯಾವ ಹುದ್ದೆಯೂ ಇಲ್ಲ.

ಆದರೂ ಎಷ್ಟೊಂದು ಪ್ರಭಾವ ಇದೆ. ಎಷ್ಟೊಂದು ಜನ ಗೊತ್ತಿದ್ದಾರೆ. ಎಷ್ಟು ವಿಷಯ ತಿಳಕೊಂಡಿದಾರೆ? ಎಷ್ಟು ಚೆನ್ನಾಗಿ ಮಾತನಾಡತಾರೆ?
ಇಲ್ಲ, ಇಲ್ಲ, ಹಾಗೇ ಸುಮ್ಮನೆ ಮಾತಾಡ್ತಾರೆ.

ಆದರೂ ಎಷ್ಟು ಸಂಗತಿಗಳ ಬಗ್ಗೆ ಎಷ್ಟೊಂದು ಅಭಿಪ್ರಾಯವಿದೆ ಅವರಿಗೆ?
ಹಾಗಲ್ಲ, ಅದು ಅವರು ಮಾತನಾಡುವ ರೀತಿ ಅಷ್ಟೆ.
ಯಾವುದಾದರೂ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯೇ?
ಇಲ್ಲ, ಹಾಗೇನಿಲ್ಲ.
ಚಿಂತಕರೇ, ಕವಿಗಳೇ, ಅಂಕಣಕಾರರೇ, ಸಂಪಾದಕರೇ?
ಇಲ್ಲ, ಅವರಲ್ಲಿ ಕೆಲವರ ಪರಿಚಯವಿರಬಹುದು.
ಹಾಗಾದರೆ, ಜೀವನಕ್ಕೆ ಏನು ಮಾಡ್ತಾರೆ?
ಹೀಗೆ ಎಲ್ಲ ಕಡೆ ಓಡಾಡಿಕೊಂಡು, ಎಲ್ಲದರ ಬಗ್ಗೆ ಮಾತನಾಡಿಕೊಂಡು, ಎಲ್ಲ ಕಡೆಯೂ ಇರುತ್ತಾರೆ. ಈಗ ಈವತ್ತು ನಿಮಗೆ ಪರಿಚಯವಾಯಿತಲ್ಲ. ಇನ್ನು ಎಲ್ಲೆಲ್ಲೂ ಅವರು ನಿಮಗೆ ಕಾಣಿಸ್ತಾರೆ.

*****

ಈ ಮಾತುಕತೆ ಮುಗಿದ ನಂತರ ನನ್ನ ಮಿತ್ರರು ಮೇಲೆ ಹೇಳಿದ ಮಹಾನುಭಾವರನ್ನು Follow up ಮಾಡುತ್ತಾ ಹೋದರು. ಅದೇ ಒಂದು ಸಂಭ್ರಮವಾಯಿತು ಅವರಿಗೆ. ನಿಮ್ಮ ಸ್ನೇಹಿತರನ್ನು ಅಲ್ಲಿ ಇಲ್ಲಿ ನೋಡಿದೆ. ನಾಯಕರ ಪಕ್ಕವೂ ಅವರೇ, ಚಿಂತಕರ ಪಕ್ಕವೂ ಅವರೇ, ಸ್ವಾಮಿಗಳ ಪಕ್ಕವೂ ಅವರೇ! ಎಲ್ಲ ಕಡೆಯೂ ಇವರಿಗೆ ಪ್ರಾಮುಖ್ಯತೆ ಇದೆ. ಯಾರೂ ಅವರನ್ನು ಗೇಲಿ ಮಾಡಬಾರದು.

ಇಲ್ಲ, ಹಾಗೆ ಮಾಡುವುದಿಲ್ಲ ಎಂದು ನಾನು ಭರವಸೆ ನೀಡಿದೆ. ಇಂಥ ಮಹನೀಯರನ್ನು Hangers on ಎಂದು ಕರೆಯಬಹುದೆ?

ಇವರನ್ನು ಹೀಗೇ, ಇಷ್ಟೇ ಎಂದು ನಿಗದಿಪಡಿಸುವುದು ಕಷ್ಟ. ಈವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ. ನಾನು ಒಂದು ಕಾಲದಲ್ಲಿ ಈತ ಒಬ್ಬ ಅಲಾಲ್‌ಟೋಪಿ ಮನುಷ್ಯ ಎಂದು ಯಾರ ಬಗ್ಗೆ ಭಾವಿಸಿದ್ದೆನೋ ಆತ ಮುಂದೆ ನಾಯಕನಾಗಿ, ಚಿಂತಕನಾಗಿ ಬೆಳೆದ ಅಥವಾ ಬೆಳೆದ ಹಾಗೆ ಎಲ್ಲರನ್ನೂ ಒಪ್ಪಿಸಿದ. ಇನ್ನೊಬ್ಬನನ್ನು ನಾನು ಕೇವಲ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತ್ರ ಎಂದು ಭಾವಿಸಿದ್ದೆ. ಆ ದಿನಗಳಲ್ಲಿ ನಮ್ಮ ಮನೆಗೆ ಪ್ರಭಾವಿ ಸಾಹಿತಿಯೊಬ್ಬರು ನಿಗದಿಯಾಗಿ ಬರುತ್ತಿದ್ದರು. ಅವರನ್ನು ಹುಡುಕಿಕೊಂಡು ಈತ ಬರುತ್ತಿದ್ದ. ಬೆಂಗಳೂರಿನಲ್ಲಿ ಯಾವ ಯಾವ ಹೋಟೆಲುಗಳು ಹೊಸದಾಗಿ ಪ್ರಾರಂಭವಾಗಿವೆ, ಏನೇನು ಪದಾರ್ಥಗಳನ್ನು ರುಚಿ ರುಚಿಯಾಗಿ ಮಾಡುತ್ತಾರೆ ಎಂಬುದರ ವಿವರಗಳನ್ನು ಹಿಡಿದುಕೊಂಡು ಬಂದು ಆ ಸಾಹಿತಿಯನ್ನು ಊಟಕ್ಕೆ ಕರೆಯುತ್ತಿದ್ದ – ವರ್ಷಕಾಲ. ಇದೇ ಸಮಯದಲ್ಲಿ ಇನ್ನೊಬ್ಬ ಸಾಹಿತಿ ಮುಂಬೈನಿಂದ ಬೆಂಗಳೂರಿಗೆ ಬಂದರು. ಅವರು ಬೆಂಗಳೂರಿನಲ್ಲಿ ನೆಲೆಗೊಳ್ಳಲು ನಮ್ಮ “ಈತ” ಎಲ್ಲ ರೀತಿಯಲ್ಲೂ ನೆರವಾಗಿ ನಂತರ ಅವರಿಗೇ ಅಂಟಿಕೊಂಡ. ಮನೆಯಲ್ಲಿ ಸಂಬಳಕ್ಕೆ ಇಟ್ಟುಕೊಂಡ ಸಹಾಯಕರ ರೀತಿಯಲ್ಲಿ ಕೆಲಸ ಮಾಡುತ್ತಿದ್ದ. ಯಾವಾಗಲೂ ಅವರ ಹಿಂದೆ-ಮುಂದೆ. ಏನಪ್ಪಾ “ಈತ” ತಾನೇ ಒಬ್ಬ ಪ್ರಾಧ್ಯಾಪಕ, ಹೀಗೆಲ್ಲಾ ವರ್ತಿಸುತ್ತಾನೆ ಎಂದು ನಮಗೆಲ್ಲ ಬೇಸರ. ಕಾಲಾಂತರದಲ್ಲಿ “ಈತ”ನೇ ಒಳ್ಳೆಯ ಹುದ್ದೆ ಸ್ಥಾನಗಳನ್ನು ಆಕ್ರಮಿಸಿದ.

ಇನ್ನೂ ಕೆಲವು Hangers onಗಳು ತಮ್ಮ ಪಾತ್ರವನ್ನು ಸರಿಯಾಗಿ ತಿಳಿದುಕೊಳ್ಳದೆ ಬಹುಬೇಗ ಜಿಗಿಯಲು ಪ್ರಯತ್ನಿಸುತ್ತಾರೆ. ನಾಯಕರೊಬ್ಬರು ಗೆಳೆಯನನ್ನು ಪತ್ರಿಕೆಗಳಿಂದ ಸಾರಾಂಶ ಓದಿ ಹೇಳಲು ನೇಮಿಸಿಕೊಂಡರು. ಇವನು ಒಂದೆರಡು ವಾರಗಳಲ್ಲೇ ತನ್ನ ಪಾತ್ರವನ್ನೂ ಮೀರಿ, ಅವರಿಗೆ ಸಲಹೆಗಾರನಾಗಲು ಪ್ರಯತ್ನಿಸಿದ. ಅವರು ಓಡಿಸಿದರು. ಏನು ಮಾಡಿದರೂ ಈತನಿಗೆ ಒಂದು ಹಂತದ ನಂತರ ಮುಂದೆ ಹೋಗಲು ಆಗುತ್ತಿರಲಿಲ್ಲ. ಕೊನೆಗೆ ಜಾತಕ ತೋರಿಸಿದ. ನಿಮ್ಮ ಕುಂಡಲಿಯ ಪ್ರಕಾರ ನಿಮಗೆ ಎರಡನೆ-ಮೂರನೆ ದರ್ಜೆ ಸ್ಥಾನಕ್ಕಿಂತ ಎಂದೆಂದೂ ಹೆಚ್ಚಿನ ಸ್ಥಾನ ಸಿಗಲಾರದು ಎಂದು ತಿಳಿಸಿದರು. ಈಗ ಈ ನೇತಾಡಿಕೊಂಡಿರುವ ಮನುಷ್ಯ ತುಂಬಾ ಹಿಂಸಾತ್ಮಕವಾಗಿದ್ದಾನೆ.

ನಾನೇ ಒಬ್ಬರ ಹತ್ತಿರ ಅವರು ನನ್ನ ಸಂವೇದನಾಶೀಲತೆ, ಸೃಜನಶೀಲತೆಯನ್ನು ಗುರುತಿಸಿ ಪೋಷಿಸಲಿ ಎಂದು ನಿರಂತರವಾಗಿ ಕೈ ಕೈ ಹಿಸುಕಿಕೊಂಡು ಓಡಾಡುತ್ತಿದ್ದೆ. ಆದರೆ ಅವರಿಗೆ ನಾನು ಏನೇನು ಸೇವೆ ಮಾಡಿದರೂ Hanger on ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ನೀಡಲು ಮನಸ್ಸು ಮಾಡಲಿಲ್ಲ. ಇದನ್ನು ತಿಳಿದ ಒಬ್ಬ ಮಿತ್ರ ಕುಶಾಲಿನಿಂದ ಕೆಲ ಕಾಲ ಆ ಕೆಲಸ ಮಾಡಿ ಕ್ರಮೇಣ ಪ್ರಭಾವಿಯಾದ.

ಗಣ್ಯತೆಯಿಲ್ಲದವರು, ಒಳ್ಳೆಯ ಸ್ಥಾನದಲ್ಲಿಲ್ಲದವರು ಮಾತ್ರ ಇಂತಹ ಪಾತ್ರ ವಹಿಸಲು ತಹತಹ ಪಡುತ್ತಾರೆ ಎಂದು ತಪ್ಪು ತಿಳಿಯಬಾರದು. ಮದ್ರಾಸಿನಲ್ಲಿ ಒಬ್ಬ ಉನ್ನತ ಬ್ಯಾಂಕ್‌ ಅಧಿಕಾರಿ; ಬಂಗಲೆ, ಕಾರು, ಆಳು, ಸಹಾಯಕರು ಎಲ್ಲರೂ ಇದ್ದಾರೆ. ಆದರೆ ಈತನಿಗೆ ಆ ಸ್ಥಾನದಿಂದ ತೃಪ್ತಿ ಇಲ್ಲ. ಸಿನೆಮಾ ನಟ-ನಟಿಯರೊಡನೆ ಒಡನಾಡಲು ಇಷ್ಟ. ತನ್ನ ಹುದ್ದೆಯ ಘನತೆ, ಗಾಂಭೀರ್ಯ ಮರೆತು ನಟ-ನಟಿಯರೊಡನೆ ಒಡನಾಡಲು, ಅಂಟಿಕೊಳ್ಳಲು ಪ್ರಯತ್ನಿಸಿದ. ಒಬ್ಬ ನಟಿ ಚೆನ್ನಾಗಿ ಬೈದು ಕಳಿಸಿದಳು. ಸ್ವಲ್ಪ ದಿನ ಸುಮ್ಮನಾದ. ಹಳೆಯ ಚಾಳಿ ಬಿಡಬೇಕಲ್ಲ. ಮತ್ತೆ ಹಿಂದಿನದೇ ಅಭ್ಯಾಸ. ಈಗ Super hanger on ಆಗಿ ರೂಪಗೊಂಡು ಇನ್ನಿಲ್ಲದ ಸಂತೋಷ, ಸಮಾಧಾನಗಳನ್ನು ಅನುಭವಿಸಿದ.

ಸಾಮಾಜಿಕ ಮಾಧ್ಯಮಗಳ ದೆಸೆಯಿಂದಾಗಿ ನಾನು ಪೇಚಿಗೆ ಸಿಕ್ಕಿಹಾಕಿಕೊಳ್ಳಬೇಕಾಯಿತು. ಸದರಿ ಮನುಷ್ಯ FaceBook ಲೋಕದ Hanger on. ಮತ್ತು ಆ ವಲಯದಲ್ಲಿ ತುಂಬಾ ಪ್ರಖ್ಯಾತ. ನನಗೆ ಅದು ಗೊತ್ತಿರಲಿಲ್ಲ. ನಾನು ಆತನನ್ನು ಒಬ್ಬ ಸಾಮಾನ್ಯ ಮನುಷ್ಯನಂತೆ ಪರಿಗಣಿಸಿ ವರ್ತಿಸಿದೆ. ಆತನಿಗೆ ಕೋಪ ಬಂತು. ನನ್ನ ಗೆಳೆಯರ ಹತ್ತಿರ ಕೂಗಾಡಿದ. ನಂತರ ನಾನು ಹೊಸದಾಗಿ ಖಾತೆ ತೆರೆದು ಅವನು ಪ್ರವರ, ಪ್ರಭಾವವನ್ನೆಲ್ಲ ತಿಳಿದುಕೊಂಡು, ಸರಿಯಾದ ಸ್ವರೂಪ, ಪ್ರಮಾಣದಲ್ಲಿ ಮುಜುರೆ ಒಪ್ಪಿಸಿದೆ.

ಒಂದು ಸಲ ನಮ್ಮ ಭಾವನ ಮನೆಯಲ್ಲಿ ಕುಳಿತಿದ್ದೆ. ಕೌಟುಂಬಿಕ ವಿಷಯಗಳನ್ನು ಕುರಿತು ಹರಟುತಿದ್ದೆವು. ಒಬ್ಬ ಗೆಳೆಯನ ಪ್ರವೇಶವಾಯಿತು. ನಮಗೆ ಮಾತುಕತೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಅವನೇ ಮಾತನಾಡುತ್ತಿದ್ದ, ಮಾತನಾಡುತ್ತಲೇ ಇದ್ದ. ಅವನಿಗೆ ಗೊತ್ತಿಲ್ಲದವರೇ ಇಲ್ಲ, ಗೊತ್ತಿಲ್ಲದ ವಿಷಯಗಳೇ ಇಲ್ಲ. ನಂತರ ಇನ್ನೊಬ್ಬ ಗೆಳೆಯ ಬಂದ. ಆದರೂ ಮೊದಲು ಬಂದ ಗೆಳೆಯನೇ ಇನ್ನೂ ಮಾತನಾಡುತ್ತಿದ್ದ, ಮಾತನಾಡುತ್ತಲೇ ಹೋದ.

ಇನ್ನೊಬ್ಬ ನಿಜವಾಗಿ ಬಲಶಾಲಿ, ಪ್ರಭಾವಿ. ಆದರೆ Hanger on ಆಗಿಯೇ ಕಾಣಿಸಿಕೊಂಡು ಎಲ್ಲರಿಗೂ ಮೋಸ ಮಾಡುತ್ತಿದ್ದ. ಏಕೆ ಹೀಗೆ ಎಂದು ಕೇಳಿದೆ. ನೋಡಿ ಈ ರೀತಿ ಕಾಣಿಸಿಕೊಂಡರೆ ಯಾರೂ ನಿಮ್ಮನ್ನು ಸ್ಪರ್ಧಿಯೆಂದು ಭಾವಿಸುವುದಿಲ್ಲ. ಎಲ್ಲರೂ ನಿಮ್ಮ ಬಗ್ಗೆ ಕರುಣೆ, ಪ್ರೀತಿಯಿಂದಿರುತ್ತಾರೆ. ನಿಮಗೆ ಮೊದಲನೆ ಅಥವಾ ಪ್ರಮುಖ ಸ್ಥಾನ ಸಿಗದೆ ಹೋದರೂ ಎರಡನೇ ಅಥವಾ ಸುಮಾರಾದ ಸ್ಥಾನಮಾನಗಳು ಅನಾಯಾಸವಾಗಿ ಸಿಗುತ್ತಾ ಹೋಗುತ್ತವೆ. ಓ, ಈತ ನಾಟಕ ಮಾಡುತ್ತಿರಬಹುದೆಂದು ನನಗನಿಸಿತು. ಆದರೆ ಆತ ದಿನ ಕಳೆದಂತೆ ಇನ್ನೂ ಹೆಚ್ಚು ಹೆಚ್ಚು ಸಂತೋಷ, ನೆಮ್ಮದಿಯಿಂದ ಕಂಡ. ಮತ್ತೆ ಭೇಟಿ ಮಾಡಿದೆ. ನೋಡಿ, ನಾನು ಜಾತಕ ಕೂಡ ತೋರಿಸಿದೆ. ನನಗೆ Hanger on ಸ್ಥಾನವೇ ಶಾಶ್ವತ ಮತ್ತು ನಾನು ಆ ಸ್ಥಾನದಲ್ಲೇ ಬೆಳೆಯುವುದು ಎಂದಿದೆ ಎಂದು ವಿವರಿಸಿದ.

ಇನ್ನೊಬ್ಬರ ಪ್ರಕಾರ ನನ್ನದೇ ಕುಹಕ ಬುದ್ಧಿ. ಎಲ್ಲವನ್ನೂ, ಎಲ್ಲರನ್ನೂ ಪ್ರಭಾವಿಗಳ, ಪ್ರಸಿದ್ಧರ ಕಣ್ಣಿನಿಂದ ಮಾತ್ರವೇ ಏಕೆ ನೋಡಬೇಕು ಎಂದು ನನಗೇ ಪ್ರಶ್ನೆ ಹಾಕಿದ. ಆದರೆ ಕಾಲಕ್ರಮೇಣ ಈತ ತುಂಬಾ ಬೆಳೆದ. ನಿಜವಾದ ಅರ್ಥದಲ್ಲಿ ಪ್ರಸಿದ್ಧಿ ಪಡೆದ. ಆತನ ಪ್ರಕಾರ Hanger on ವೃತ್ತಿ, ಪಾತ್ರದ ಕಾಲಾವಧಿಯನ್ನು ಕೀಳಾಗಿ, ನಗಣ್ಯವಾಗಿ ಕಾಣಬಾರದು. ಒಂದು ರೀತಿಯಲ್ಲಿ ಅದು ತರಬೇತಿಯ ಅವಧಿ. ಆ ಕಾಲಾವಧಿಯಲ್ಲಿ ಸಿಕ್ಕ ಅನುಭವ, ನೋವು, ತಿರಸ್ಕಾರ ಇವುಗಳ ಹಿನ್ನೆಲೆಯಲ್ಲೇ ನಾನು ಇಷ್ಟು ಬೆಳೆದದ್ದು.

ಲಿಂಗ ಅಸಮಾನತೆಗೆ ಹೆಸರಾಗಿರುವ ನಮ್ಮ ಸಮಾಜದಲ್ಲಿ ವೃತ್ತಿಯಲ್ಲಿರುವ ಹೆಂಗಸರನ್ನು ಕೀಳಾಗಿ ಕಾಣುವ, ಎರಡನೆ ದರ್ಜೆಯವರಾಗಿ ಪರಿಗಣಿಸುವ ರೂಢಿಗೆ ಒಂದು ರೀತಿಯ ಮಾನ್ಯತೆ ಬಂದುಬಿಟ್ಟಿದೆ. ಹೆಂಗಸರು ಈ ವೃತ್ತಿಯಲ್ಲಿ ನಿಜವಾಗಿಯೂ ಆಸಕ್ತಿ ತೋರುವುದಿಲ್ಲ. ಅವರಿಗಿರುವ ಲೈಂಗಿಕ ಆಕರ್ಷಣೆಯಿಂದಾಗಿ ಈ ಪಾತ್ರದಲ್ಲಿ ಯಶಸ್ಸು ಗಳಿಸುತ್ತಾರೆ. ಹೀಗಿದ್ದೂ ಹೆಂಗಸರು ತಮ್ಮ ಹತ್ತಿರವಿರುವ Hangers onಗಳನ್ನು ಯಾವ ರೀತಿಯ ಭೇದ ಭಾವ ತೋರಿಸದೆ ಬಳಸುತ್ತಾರೆ. ಇಂದಿರಾಗಾಂಧಿ, ಮಾರ್ಗರೆಟ್‌ ಥ್ಯಾಚರ್‌, ಗೋಲ್ಡಾ ಮೆಯಿರ್‌ ಬಳಿ ಇದ್ದ ಹಿಂಬಾಲಕರು ನಾನಾ ದಿಕ್ಕಿನಲ್ಲಿ ಬೆಳೆದ ರೀತಿಯನ್ನು ಪ್ರಸ್ತಾಪಿಸುತ್ತಾರೆ. ಇಂದಿರಾಗಾಂಧಿಯನ್ನು Hanger on ಆಗಿ ಮಾತ್ರವೇ ನೋಡಿದ ಕಾಮರಾಜ್‌, ನಿಜಲಿಂಗಪ್ಪ ಮಂಡಳಿ, ಮುಂದೆ ಆಕೆ ಬೆಳೆದ ರೀತಿಯನ್ನು ಕಂಡು ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಸ್ವತಃ ತಾವೇ ಗಣ್ಯರಾಗಿದ್ದರೂ, ನಾಯಕರಾಗಿದ್ದರೂ ಕೆಲವರು Hanger on ಪಾತ್ರವನ್ನು ತಮ್ಮ ವ್ಯಕ್ತಿತ್ವದ ಒಂದು ಭಾಗವಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೆಹರೂ ದೇಶದ ಪ್ರಧಾನಿಯಾದ ಮೇಲೂ ಗಾಂಧಿಯ ಬಳಿ ಒಬ್ಬ ಶಾಲಾ ಬಾಲಕನಂತೆ ನಡೆದುಕೊಳ್ಳುವುದನ್ನು ಬಿಡಲೇ ಇಲ್ಲ. ಹಾಗಾಗಿ ವೈಯಕ್ತಿಕ ಸಾಕ್ಷಾತ್ಕಾರ ಪಡೆಯಲು Hanger on ಸ್ಥಿತಿ ಅಡ್ಡಿ ಬರಲಾರದೇನೋ? ಹನುಮಂತ ಯಾವಾಗಲೂ, ಲಕ್ಷ್ಮಣ ಯಾವಾಗಲೂ, ಸೀತಾ ಯಾವಾಗಲೂ ರಾಮನಿಗೆ “ಸೀತಾ, ಲಕ್ಷ್ಮಣ, ಹನುಮಂತ ಸಮೇತರೇ.” ಆದರೆ ಅವರೆಲ್ಲರೂ ತಮ್ಮ ತಮ್ಮ ಸಾಕ್ಷಾತ್ಕಾರವನ್ನು ಕಂಡುಕೊಂಡವರೇ. ಶ್ರೀಕೃಷ್ಣ ಅರ್ಜುನನಲ್ಲಿ ಇಷ್ಟಪಟ್ಟದ್ದು ಈ Hanger on ಗುಣವನ್ನೇ.

Hanger on ಗಳನ್ನು ಇವರು ನನ್ನ ತಮ್ಮ ಇದ್ದಂತೆ, ನನ್ನ ಮಾನಸಪುತ್ರ ಇದ್ದಂತೆ, ನನಗೆ ಉತ್ತರಾಧಿಕಾರಿಯನ್ನು ಹುಡುಕುವ ಸಮಸ್ಯೆಯೇ ಇಲ್ಲ ಎಂದು, ಇವರಿಲ್ಲದೆ ಉಸಿರಾಡಲು ಸಾಧ್ಯವಿಲ್ಲ ಎಂದು ಧೀಮಂತರು, ನಾಯಕರು ಹೇಳುತ್ತಾರೆ. ನನಗೂ ಇಂಥವರನ್ನು ಕಂಡಾಗ, ಇಂಥ ಹೇಳಿಕೆಗಳನ್ನು ಓದಿದಾಗ ತುಂಬಾ ಹೆಮ್ಮೆಯಾಗುತ್ತಿತ್ತು. ಏನಪ್ಪಾ ಎಂತ ವಿಕೇಂದ್ರೀಕರಣವಾದಿಗಳು ಇವರು, ನಿಜವಾಗಿ ಪ್ರಜಾತಾಂತ್ರಿಕ ಮನೋಭಾವದವರು ಎಂದೆಲ್ಲಾ ಹೆಮ್ಮೆ ಪಡುತ್ತಿದ್ದೆ. ಆದರೆ ಒಂದು ಚೂರು ಬಾಲ ಆಡಿಸಿದರೆ ಸಾಕು, ಸ್ವಲ್ಪ ಉಸಿರಾಟದ ವೇಗವನ್ನು ಬದಲಾಯಿಸಿಕೊಂಡರೂ ಸಾಕು, ಧೀಮಂತರು ತಮ್ಮ ಅನುಯಾಯಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿದ್ದರು. ವ್ಯಕ್ತಿಗಳಿರಲಿ, ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಕೂಡ Hangers onಗಳು ಸ್ವತಂತ್ರರಾಗಲು ಇಷ್ಟಪಟ್ಟಾಗ ಎಲ್ಲ ರೀತಿಯಲ್ಲೂ ಹಿಂಸೆ ಕೊಟ್ಟು ಅವರನ್ನು ನಾಶಮಾಡಿಬಿಡುತ್ತವೆ. ಮಿತ್ರದ್ರೋಹದ, ರಾಜದ್ರೋಹದ ಆಪಾದನೆಯನ್ನು ಮಾಡುತ್ತವೆ. ಮಠಮಾನ್ಯಗಳಲ್ಲಂತೂ ಗಿಂಡಿಮಾಣಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸದೆ, ಮೊದಲನೆಯದಿರಲಿ, ಎರಡನೇ ಮೂರನೇ ಮಟ್ಟದ ಜಗದ್ಗುರುವಾಗುವುದು ತುಂಬಾ ಕಷ್ಟ. Hangers onಗಳನ್ನು ಗುರುತಿಸಲು ಬೇಕಾಗಿರುವಷ್ಟು ಪ್ರತಿಭೆ, ಸಂವೇದನೆ, Hangers on ಸ್ಥಿತಿಯಿಂದ ಬಿಡಿಸಿಕೊಳ್ಳಲು ಕಷ್ಟ ಪಡುತ್ತಿರುವವರನ್ನು ಅರ್ಥ ಮಾಡಿಕೊಳ್ಳಲು ಕೂಡ ಬೇಕಾಗುತ್ತದೆ.

ಬರಹಗಾರನಾಗಿ ನಾನು Hanger on ಸ್ಥಾನದ ಪಾತ್ರವನ್ನೇ ತುಂಬಾ ಇಷ್ಟಪಡುತ್ತೇನೆ. ಯಾರೂ ನಿಮ್ಮನ್ನು ಗಮನಿಸುವುದಿಲ್ಲ, ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೆಚ್ಚು ಜನ ನಿಮ್ಮನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಪರಿಗಣಿಸಿ ನಿಮ್ಮ ತಂಟೆಗೇ ಬರುವುದಿಲ್ಲ. ನಿಮ್ಮ ಸ್ವಾತಂತ್ರ್ಯ, ನಿಮಗೆ ಸಿಗುವ ಸಮಯ ಎಲ್ಲವೂ ಹೆಚ್ಚಾಗುತ್ತದೆ. ಎಲ್ಲರನ್ನೂ ನೀವು ನಿರಾಳವಾಗಿ ಗಮನಿಸಬಹುದು. ನಿಮಗೇ ಗೊತ್ತಿಲ್ಲದಂತೆ ನಿಮ್ಮ ವ್ಯಕ್ತಿತ್ವಕ್ಕೆ ಒಂದಕ್ಕಿಂತ ಹೆಚ್ಚು ಆಯಾಮಗಳು ಸಿಗುತ್ತವೆ. ನನ್ನ ಕುಟುಂಬದ ಸದಸ್ಯರು ಇದನ್ನೆಲ್ಲ ಒಪ್ಪುವುದಿಲ್ಲ. ಇದನ್ನು ಒಂದು ತಂತ್ರವೆಂದು ಭಾವಿಸುತ್ತಾರೆ. ಮುನ್ನೆಲೆಗೆ ಬರುವುದೆಂದರೆ ಒಂದು ಮಟ್ಟದ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಿಮಗೆ ಯಾವ ರೀತಿಯ ಜವಾಬ್ದಾರಿಯೂ ಇಷ್ಟವಿಲ್ಲ. ಹಾಗಾಗಿ ನೀವು Hanger on ಆಗಿಯೇ ಇರಲು ಬಯಸುತ್ತೀರಿ ಎಂದು ತಕರಾರು ತೆಗೆಯುತ್ತಾರೆ.

ಈ ರೀತಿಯ ಅಭಿಪ್ರಾಯಗಳಿಂದ ನಾನೇನೂ ವಿಚಲಿತನಾಗುವುದಿಲ್ಲ. ಏಕೆಂದರೆ, ನಾನು ಸಂತೋಷವಾಗಿಯೇ ಇದ್ದೇನೆ. ಅಲ್ಲದೆ ಜೀವನದ ಎಲ್ಲ ಕ್ಷೇತ್ರಗಳಲ್ಲು ಧೀಮಂತರಾದವರಿಗೆ, ಮುನ್ನುಗ್ಗುವವರಿಗೆ, ನಾಯಕಮಣಿಗಳಿಗೆ ನನ್ನಂಥ Hanger onಗಳ ಅವಶ್ಯಕತೆ ಇದ್ದೇ ಇದೆ. ಒಂದು ನಿಮಿಷ ನೀವೇ ಯೋಚಿಸಿ. ಜಗತ್ತಿನಲ್ಲಿರುವವರೆಲ್ಲ ನಾಯಕರಾಗಲು, ಮುಂಚೂಣಿಯಲ್ಲಿರಲು, ಧೀಮಂತರಾಗಲು ಮಾತ್ರವೇ ಇಷ್ಟಪಟ್ಟರೆ, ಜಗತ್ತಿನಲ್ಲಿ ಒಂದು ದೊಡ್ಡ ಅಲ್ಲೋಲಕಲ್ಲೋಲವೇ ಆಗಿಹೋಗುತ್ತದೆ. ಜಗತ್ತು ಹೀಗಿರುವ ರೀತಿಯಲ್ಲಿ ಮುಂದುವರೆಯಲು ಶಾಂತಿ, ನೆಮ್ಮದಿ ಸದಾ ನೆಲೆಸಿರಲು, ಹೆಚ್ಚು ಸಂಖ್ಯೆಯ ಸಮರ್ಥ Hangers onಗಳ ಅಗತ್ಯವಿದೆ. ಹೀಗೆ ನಾನು ಪ್ರಾಮಾಣಿಕವಾಗಿ, ಪ್ರಾಂಜಲವಾಗಿ ಇದೇ ಸ್ಥಿತಿಯಲ್ಲಿರಲು ಇಷ್ಟ ಪಟ್ಟರೂ, ನನ್ನನ್ನು ಮಹತ್ವಾಕಾಂಕ್ಷಿಯೆಂದು, ಸ್ಥಾನಮಾನಕ್ಕೆ ಸ್ಪರ್ಧಿಸುವವನೆಂದು ತಿಳಿದು ತಪ್ಪು ತಪ್ಪಾಗಿ ಭಯಬಿದ್ದು ಅವರವರ ವಲಯದಿಂದ ದೂರ ಓಡಿಸಿದವರೆಲ್ಲ ನನ್ನನ್ನು ಮತ್ತೆ ಕರೆದು ಸೀನಿಯರ್‌ ಗ್ರೇಡಿನ Hanger on ಆಗಿ ನೇಮಿಸಿಕೊಳ್ಳಬೇಕೆಂದು ಕೋರುತ್ತೇನೆ.

ಜೀವನದಲ್ಲಿ ನಾನು ಎಲ್ಲ ಕ್ಷೇತ್ರಗಳ ಗಣ್ಯರನ್ನು, ಪ್ರತಿಭಾವಂತರನ್ನು ಭೇಟಿ ಮಾಡಿದ್ದೇನೆ. ಅದೃಷ್ಟವಿದ್ದಾಗ ಕೆಲವು ದಿನಗಳನ್ನು ಕೂಡ ಅವರೊಡನೆ ಕಳೆದಿದ್ದೇನೆ. ಈಗ ನನಗೆ ಯಾರನ್ನು ಭೇಟಿ ಮಾಡಲು ಇಷ್ಟವೆಂದರೆ, “ಆಯ್ತು, ಇಂತಹ ಮನುಷ್ಯ ನನಗೆ ಇಷ್ಟು ದಿನ Hanger on ಆಗಿದ್ದ. ಅವನ ಸೇವೆ, ವಿಧೇಯತೆಯಿಂದ ನನಗೆ ತುಂಬಾ ಸಂತೋಷವಾಗಿದೆ, ಈಗ ಈ ಮನುಷ್ಯನ ರೆಕ್ಕೆಗಳಿಗೆ ಬಲ ಬಂದಿದೆ, ಸ್ವತಂತ್ರವಾಗಿ ಹಾರಲು ಇದೇ ಸಮಯ. ಈ ವ್ಯಕ್ತಿ ಕೂಡ ಸ್ವತಂತ್ರವಾಗಿ ಹಾರಲಿ, ಗರಿಗೆದರಲಿ, ನಭೋಮಂಡಲದಿಂದಾಚೆಗೂ ಹಾರಲಿ, ಸಂತೋಷವಾಗಿರಲಿ, ಸಾಕ್ಷಾತ್ಕಾರ ಪಡೆಯಲಿ. ಇದರಿಂದ, ಇದರಿಂದಲೇ ನಮಗೂ ಸಂತೋಷ, ಹೆಮ್ಮೆ” ಹೀಗೆಂದು, ಹೀಗೆಲ್ಲ ಬಯಸಿ ಹೇಳಿದವರು ಯಾರಾದರೂ ಒಬ್ಬರು ಇದ್ದು, ಅವರು ನಿಮಗೆ ಪರಿಚಯವಿದ್ದರೆ ಅವರ ಬಗ್ಗೆ ತಿಳಿಸಿ, ಕಾತುರದಿಂದ, ಸಂತೋಷದಿಂದ ಹೋಗಿ ಭೇಟಿ ಮಾಡುತ್ತೇನೆ.