(ಚಿತ್ರಕೃಪೆ: ಕಣಜ)

ಚಾಮರಾಜನಗರ ಜಿಲ್ಲೆಯ ಹರುವೆ ಎಂಬಲ್ಲಿ ಜನಿಸಿದ ನಾಗರಾಜ ರಾವ್ ಅವರು ಕಥೆ, ಕವನ ಮತ್ತು ಪ್ರವಾಸ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಅನುವಾದಗಳನ್ನೂ ಮಾಡಿದ್ದಾರೆ. ಐದು ದೀಪದ ಕಂಬ ಮತ್ತು ಮಹಾತ್ಮಾ ಗಾಂಧಿ ರಸ್ತೆ ಮತ್ತು ಇತರ ಕವನಗಳು ಅವರ ಕವನಸಂಕಲನಗಳು. ಕತ್ತಲೆಬೆಳಕು ಎಂಬ ಕಥಾಸಂಕಲನ. ನವರಷ್ಯದ ನೋಟ ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ. ಆದರೆ ಅವರು ಪತ್ರಕರ್ತರಾಗಿ ಪ್ರಜಾಮತ ವಾರಪತ್ರಿಕೆಯಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ಅವರು ಬರೆದ ಐದು ದೀಪದ ಕಂಬ ಎಂಬ ಕವನವನ್ನು  ‘ಕಾವ್ಯಮಾಲೆಯ ಕಾಣದ ಹೂಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ ನೀಡಲಾಗಿದೆ.

 

ಐದು ದೀಪದ ಕಂಬ
ಈ ಡಿಂಬ
ತಂದು ನಟ್ಟರು ಇಲ್ಲಿ
ಮಾರುಕಟ್ಟೆಯ ಮಹಾಚೌಕದಲ್ಲಿ
ತಂತಿ ಸಂಪರ್ಕವೀಯುತ ಹಾಯಿಸುತ ವಿದ್ಯುತ್ ಚ್ಛಕ್ತಿ
ದಿಗ್ಗನುರಿಯಿತು ಹತ್ತಿ ಇದರ ನೆತ್ತಿ.
ಐದು ದೀಪದ ಕಂಬ
ಈ ಡಿಂಬ
ತಾಯಿ ಅಂಗೈಯೊಳಗೆ ಹಚ್ಚಿ ಹಿಡಿದಿರುವಂಥ ದೀಪಾರತಿ;
ಹೊಸೆದು ಬಾಳಿನ ಬುತ್ತಿ
ಬೆಳಗಿ ಪಂಚೇಂದ್ರಿಯ
ಇವ ನಿಶೆ ಗರ್ಭದೊಳಗಾದ ವಿಸ್ಮಯ
ಬಾಲ ಚಂದ್ರೋದಯ;
ಕಣ್ಣ ಕಾಣಿತ, ಕೇಳಿ ಕಿವಿ ;
ಮೂಗು ಮೂಸುತ್ತ; ನಾಲಿಗೆ ಸವಿದು,
ಚರ್ಮ ಸ್ಪರ್ಶದಲಿ ಮಿಂಚು ಪಳಂಚಿ ಮುಡಿಯೊಳಗಾಡಿ
ಜೀವ ತುಳುಕಿ
ಕ್ರಿಯೆ ತೊಡಗಿ
ಕಾಲ ಬ್ರಹ್ಮಾಂಡದಲಿ ಭೂಮಂಡಲದಿ
ತಾನಿದ್ದ ಕಡೆಗೇ ಕೇಂದ್ರ ಬಿಂದುವೆನಿಸಿ
ನಡುವೆ ನಿಂತಿದೆ ಕಂಬ
ಈ ಡಿಂಬ
ನಿಶ್ಚಲದಿ
ಹತ್ತಾರು ರಸ್ತೆಗಳ ಪೂರ್ಣ ಪ್ರವಾಹ ನುಗ್ಗಿ ಬರುವೀ ಮಹಾ ಚೌಕದಲ್ಲಿ
ಬಾಳು ಸುಳಿ ಸುತ್ತಿ
ಕಾಲನು ಕತ್ತಲೆ ಮೊತ್ತ ಒತ್ತೊತ್ತಿ ಮುಸುಗಿದರು
ಮಿಸುಗದಿದೆ
ಈ ಡಿಂಬ
ಐದು ದೀಪದ ಕಂಬ
ನಿಂತು ನಿಲುವಿನಲ್ಲಿ
ಒಂದೆ ನಿಟ್ಟಿನಲ್ಲಿ