ಇನ್ನು ಭವಿಷ್ಯತ್ತಿನ ಕಾಲಕ್ಕೆ ಹೊರಳೋಣ. ಇಂದಿನಿಂದ ಇಪ್ಪತ್ತು ವರುಷಗಳ ನಂತರ ಅಂದರೆ 2040ರ ಹೊತ್ತಿಗೆ ನಿಮ್ಮ ಕತೆಯೇನು? “ಕ್ರಿಸ್ತಪೂರ್ವ” ದಂತೆ ಹಿಂದಿನಿಂದ ಲೆಕ್ಕ ಹಾಕಿದರೆ ನಮ್ಮಲ್ಲಿ ಎಷ್ಟೋ ಜನರ ಎಕ್ಸ್ಪೈರಿ ಡೇಟು ಮುಗಿದಿರುತ್ತದೆ! ಶತಾಯುಷಿಯಾಗುವ ಇಚ್ಛೆಯಿರದಿದ್ದಲ್ಲಿ. ಎಲ್ಲ ಚನ್ನಾಗಿದ್ದರೆ ನಾನು 53 ವರ್ಷ ಆಯಸ್ಸು ಸವೆಸಿರುತ್ತೇನೆ. ಇತ್ತಲಾಗೆ ಪೂರ್ತಿ ಮುದುಕನೂ ಅಲ್ಲ ಅತ್ತಲಾಗೆ ದುಡಿವ ವಯಸ್ಕನೂ ಅಲ್ಲ. ಮಕ್ಕಳೆಲ್ಲ ದೊಡ್ಡವರಾಗಿರುತ್ತಾರೆ. ಈಗಿನ ಅನಿಶ್ಚಿತ ಕಾಲದಲ್ಲಿ ನಾವು ವಯಸ್ಸಿನ ಭವಿಷ್ಯವನ್ನಷ್ಟೆ ನುಡಿಬಹುದು ಮಿಕ್ಕಿದ್ದೆಲ್ಲವೂ ಪರದೆ ಹಿಂದೆ. ಸರಿಸುತ್ತಾ ಹೋದಂತೆ ಮಾತ್ರ ಗೋಚರವಾಗುವುದು.
ಮಧುಸೂದನ್ ವೈ ಎನ್ ಅಂಕಣ

 

ಎರಡು ಸಾವಿರದ ಇಪ್ಪತ್ತು ಎನ್ನುವುದಕ್ಕಿಂದ ಟ್ವೆಂಟಿ ಟ್ವೆಂಟಿ ಎಂದು ಕರೆಸಿಕೊಳ್ಳಲಿರುವ ಇದು ಫನ್ನಿ(Funny) ವರುಷ. ಕಾಲ ಪಥದಲ್ಲಿ ಹಲವಾರು ಕಾರಣಗಳಿಗೆ ಬಹಳ ಮುಖ್ಯವೆನಿಸಿದ ವರುಷ. ಇದು ಇಪ್ಪತ್ತೊಂದನೆಯ ಶತಮಾನದ ಇಪ್ಪತ್ತನೇ ವರುಷವೋ ಇಪ್ಪತ್ತೊಂದನೇ ವರುಷವೋ ಎಂದು ತಲೆಕೆಡಿಸಿದ ವರುಷ. ನಾವೆಲ್ಲ ಇಪ್ಪತ್ತೊಂದನೇ ಶತಮಾನದ ಆದಿಯನ್ನು ಆಚರಿಸಿದ್ದು 2000 ಇಸವಿಯ ಮೊದಲನೇ ದಿವಸ. ಆ ಲೆಕ್ಕದಲ್ಲಿ ನಾವೀಗ ಮೂರನೇ ದಶಕಕ್ಕೆ ಕಾಲಿಟ್ಟಿದ್ದೇವೆ. ಈಗಿನ ಕ್ರಿಸ್ತಶಕ ಕ್ಯಾಲೆಂಡರ್ ಶುರುವಾಗಿದ್ದು ಒಂದನೇ ವರುಷದಿಂದ, ಸೊನ್ನೆಯಿಂದಲ್ಲ. ಅಂದರೆ ಕ್ರಿಸ್ತಪೂರ್ವ ಒಂದನೇ ಇಸವಿ ನಂತರ ಸೊನ್ನೆ ಇಸವಿ ಬರದೆ ಕ್ರಿಸ್ತ ಶಕ ಒಂದನೇ ಇಸವಿ ಬಂತು.

ಈ ಇಸವಿಗಳನ್ನು ಬರೆವಾಗ ಅನುಸರಿಸಬೇಕಾದ ಒಂದು ಅಂಶವನ್ನು ಗಮನಿಸಬೇಕು. ನಾವು ಕ್ರಿಸ್ತಶಕ 2000(AD 2000) ಎನ್ನುತ್ತೇವೆ. ಹಾಗೆಯೆ ಕ್ರಿಸ್ತಪೂರ್ವ ಎರಡು ಸಾವಿರ ಎನ್ನುವುದು ತಪ್ಪು. 2000 ಕ್ರಿಸ್ತಪೂರ್ವ (2000 BC) ಎನ್ನಬೇಕು, ಅಂದರೆ ಕ್ರಿಸ್ತನಿಗಿಂತ ಎರಡು ಸಾವಿರ ವರ್ಷ ಹಿಂದೆಯೆಂದು ಅರ್ಥ. ಹಾಗಾಗಿ ಕ್ರಿಸ್ತಪೂರ್ವ ಒಂದನೆ ಇಸವಿಯ ಮೊದಲ ದಿವಸ ಕ್ರಿಸ್ತಶಕ ಒಂದನೇ ಇಸವಿಯ ಮೊದಲ ದಿವಸದ ಹಿಂದಿನ ದಿನ! ಅಲ್ಲಿ ಕ್ಯಾಲೆಂಡರ್ ಹಿಮ್ಮುಖವಾಗಿ ಓಡುತ್ತದೆ. ಈ ಅರ್ಥದಲ್ಲಿ ಇಪ್ಪತ್ತೊಂದನೇ ಶತಮಾನವು ಶುರುವಾಗಿದ್ದು 2001 ರಲ್ಲಿ, ನಾವೆಲ್ಲ ಮಿಲ್ಲೇನಿಯಂ ಆರಂಭವನ್ನು ಒಂದು ವರುಷ ಮುಂಚಿತವಾಗಿಯೆ ಆಚರಿಸಿದ್ದೆವು!

ಅದ್ಯಾಕೋ ಏನೋ ನಾವು ಯಾವಾಗಲೂ ಇಪತ್ತು ವರುಷ ಎಂಬುದನ್ನು ಮಾನದಂಡ ಅಂದರೆ ಸ್ಕೇಲ್ ಆಗಿ ಬಳಸುತ್ತ ಬಂದಿದ್ದೇವೆ. ಎಲ್ಲ ಬಗೆಯ ಸಾಹಿತ್ಯದಲ್ಲಿ, ಸಿನಿಮಾಗಳಲ್ಲಿ ಹೆಚ್ಚಾಗಿ ವಿಲನ್ ಸಮ್ಮುಖದಲ್ಲಿ ಫ್ಲ್ಯಾಶ್ ಬ್ಯಾಕ್ ನೆನೆಸಿಕೊಳ್ಳುವುದೇ “ಇಲ್ಲಿಗೆ ಇಪ್ಪತ್ತು ವರುಷಗಳ ಹಿಂದೆ…(ಹಿನ್ನೆಲೆ ಸಂಗೀತ: ಢಢಢಢಾಣ್)” ಎನ್ನುತ್ತ. ಹೀಗಾಗಿ ಈ ವರುಷ ನಮ್ಮ ಬದುಕಿನ ಸಿನಿಮಾದಲ್ಲೂ “ಇಲ್ಲಿಗೆ ಇಪ್ಪತ್ತು ವರುಷಗಳ ಹಿಂದೆ..” ಎಂದು ಒಂದಷ್ಟು ಗತ ಸ್ಮರಣೆಗೆ ಅವಕಾಶ ಒದಗಿಸಿರುವುದು ಹೌದು. ಪಾರ್ಕಿನಲ್ಲೋ ಅಡಿಗೆ ಮನೆಯಲ್ಲೋ ಬಾತುರೂಮಿನಲ್ಲೋ ಆಫೀಸಿನಲ್ಲೋ, ನೀವು ಎಲ್ಲಿದ್ದರೂ ಸ್ವಲ್ಪಹೊತ್ತು ಏಕಾಂತ ಹೊಂದಿಸಿಕೊಂಡು ಗತಕಾಲಕ್ಕೆ ಮರಳಿ, ಇಪ್ಪತ್ತು ವರುಷಗಳ ಹಿಂದೆ ನೀವೇನಾಗಿದ್ದಿರಿ? ಎಲ್ಲಿದ್ದಿರಿ? ಅವತ್ತು ಇಪ್ಪತ್ತು ವರುಷಗಳ ನಂತರ ನೀವು ಏನಾಗಬಹುದೆಂದು ಬಯಸಿದ್ದಿರಿ? ನಿಮ್ಮ ಕನಸುಗಳೇನಿದ್ದವು? ಸಾಕಾರಗೊಂಡವೇ? ನಿಮ್ಮ ಮೆದುಳಿಗೊಂದಿಷ್ಟು ಕೆಲಸ. ನೆನಪಿಸಿಕೊಂಡು ತುಲನೆ ಮಾಡಿ. ಚಂದದ್ದು ಆಗಿದ್ದರೆ ಖುಷಿ ಪಡಿ ಆಗಿಲ್ಲಾಂದರೆ ಗೋಲಿ ಹೊಡೀರಿ. ನನ್ನ ಅನಿಸಿಕೆ ಪ್ರಕಾರ ನೀವು ಬಯಸದಿರುವ ಎಷ್ಟೋ ಒಳ್ಳೆಯದು ಆಗಿರುತ್ತದೆ, ಅಂತೆಯೇ ನೀವು ಬಯಸದಿರುವ ಎಷ್ಟೋ ಕೆಟ್ಟದೂ ಆಗಿರುತ್ತದೆ. ಇಷ್ಟೇ ಜೀವನ. ಒಳ್ಳೆಯ ಮೊತ್ತ ಕೆಡುಕಿನ ಮೊತ್ತ ಅಲ್ಪಸ್ವಲ್ಪ ಅತ್ತಿತ್ತ ಇರಬಹುದು.

ಈಗಷ್ಟೆ ನಾನು ಒಂದು ಸುತ್ತು ಹಿಂದೆ ಹೋಗಿ ಬಂದೆ. ಎರಡು ಸಾವಿರದ ಇಸವಿಯಲ್ಲಿ ನಾನು ಮಧ್ಯ ಪ್ರದೇಶದಲ್ಲಿ ಒಂಭತ್ತನೆಯ ತರಗತಿ ಓದುತ್ತಿದ್ದೆ ಎಂಬುದೇ ನನ್ನ ಪಾಲಿನ ವಿಶೇಷ. ಮೊಟ್ಟಮೊದಲ ಬಾರಿಗೆ ರೈಲು ಹತ್ತಿದ್ದೆ ಆ ವರುಷ. ಮೂರು ದಿವಸಗಳ ದೂರ ಪ್ರಯಾಣ. ರೈಲು ಇಳಿದಾಗ ಮೈಯೆಲ್ಲ ಮಸಿಮಸಿ, ಲಗೇಜುಗಳೆಲ್ಲ ಮಸಿಮಸಿ. ರೈಲಿನ ಊಟ. ಚಪಾತಿ. ಸಾರಾಯಿ ಪ್ಯಾಕೆಟ್ಟಿನಂತಹ ನೀರಿನ ಪ್ಯಾಕೆಟ್ಟು. ಸಾಗುತ್ತ ಸಾಗುತ್ತ ಬದಲಾಗುತ್ತಿದ್ದ ಜನರ ವೇಷಭೂಷಣ, ಭಾಷೆ, ಊರುಗಳು, ಹಳ್ಳಿಗಳು, ಅದೊಂದು ಅದ್ಭುತ ಪ್ರಯಾಣ. ನನ್ನ ಕನ್ನಡ ಪ್ರೇಮ, ಕನ್ನಡ ಸಾಹಿತ್ಯ ಪರಿಚಯ ಇತ್ಯಾದಿಯೆಲ್ಲ ಘಟಿಸಿದ್ದೂ ಅದೇ ವರುಷ. ನನಗೆ ಮುಖ್ಯವಾದವರು ಗತಿಸಿದ್ದೂ ಅದೇ ವರುಷ. ನನ್ನ ಅಕ್ಕನ ಮದುವೆಯಾಗಿದ್ದೂ ಅದೇ ವರುಷ. ಸಾಹಿತಿಯೂ ಆಗಿರುವ ಶ್ರೀ ಮಾರುತಿ ದಾಸಣ್ಣನನವರ್ ಅವರು ನಮಗೆ ಕನ್ನಡ ಶಿಕ್ಷಕರಾಗಿದ್ದರು ಅಲ್ಲಿ, ಹಿಂದಿ ನಾಡಿನಲ್ಲಿ. ಒಂದೇ ವರ್ಷದಲ್ಲಿ ಒಂಭತ್ತನೇ ಹತ್ತನೇ ಹನ್ನೊಂದನೇ ತರಗತಿವರೆಗಿನ ಕನ್ನಡ ಪಠ್ಯದಲ್ಲಿ ಬರುವ ಕವನಗಳನ್ನು ಹೆಚ್ಚಾಗಿ ಹಳಗನ್ನಡ ವಸ್ತುವನ್ನೆಲ್ಲವನ್ನೂ ಓದಿಸಿದ್ದರು, ವಿವರಿಸಿದ್ದರು. ಭಿನ್ನ ಸಂಸ್ಕೃತಿ ನಾಗರೀಕತೆ ಭಾಷೆ ಊಟ- ಒಂದು ವರ್ಷ ಕತೆ ಹಾಕಿದ್ದೇ ಗೊತ್ತಾಗಲಿಲ್ಲ. ಎಲ್ಲವೂ ಅವಿಸ್ಮರಣೀಯ.

ನಿಮಗೆ ಆಶ್ಚರ್ಯವಾಗಬಹುದು, ಆರ್ಯರಿಗಿರುವ ದ್ರಾವಿಡರ ಮೇಲಿನ ಅನಾದರ ಭಾವನೆ ಪರಿಚಯವಾಗಿದ್ದೂ ಅಲ್ಲಿಯೆ. ನಮಗಿಂತ ಅಲ್ಲಿಯೆ ಅನಾಗರೀಕತೆ ಹೆಚ್ಚಿತ್ತು ಎಂದು ತಿಳಿದುಬಂದದ್ದು ಆಗಲೆ. ಒಂದೊಳ್ಳೆ ಮರೆಯಲಾಗದ ಅನುಭವ. ಯಾರದೇ ಬದುಕಿನ ಎಲ್ಲ ವರುಷಗಳೂ ಇಷ್ಟು ಸಮೃದ್ಧಿಯಾಗಿರಲು ಸಾಧ್ಯವಿಲ್ಲ. ನನ್ನ ಪಾಲಿಗೆ ದಂಡಿ ನೆನಪು ಅನುಭವಗಳನ್ನು ಕಟ್ಟಿಕೊಟ್ಟ ಸಮೃದ್ದ ವರುಷವದು.

ಅದೆಲ್ಲ ಬರೋಬ್ಬರಿ ಇಪ್ಪತ್ತು ವರುಷಗಳ ಹಿಂದೆ. ಆಗಲೇ ನನಗೆ ಇನ್ನಿಪ್ಪತ್ತು ವರುಷಗಳ ನಂತರ ಎಲ್ಲಿ ವಾಸಿಸುತ್ತಿರುವೆ ಏನು ಉದ್ಯೋಗ ಮಾಡುತ್ತಿರುವೆ ಎಂದೆಲ್ಲ ಯೋಚನೆ ಹತ್ತುತ್ತಿತ್ತು. ಅಷ್ಟೊತ್ತಿಗೆ ನನಗೂ ಮದುವೆ ಆಗಿರುತ್ತದೆ ಎಂದು ಅನಿಸುತ್ತಿತ್ತು! ದೊಡ್ಡವನಾಗಿರುತ್ತೀನಲ್ಲ ಏನು ಎತ್ತ ಎಂಬ ಸಣ್ಣ ಅಳುಕೂ ಇರುತ್ತಿತ್ತು. ಯಾಕಂದರೆ ಸಣ್ಣವರನ್ನು ಸಾಕಲು ಊಟ ಬಟ್ಟೆ ಹೊಂದಿಸಲು ದೊಡ್ಡವರು ಇರುತ್ತಾರೆ. ನಾವೇ ದೊಡ್ಡವರಾಗುವುದನ್ನು ಈ ಜವಾಬ್ದಾರಿಗಳನ್ನೆಲ್ಲ ಹೊತ್ತುಕೊಳ್ಳುವುದನ್ನು ಕಲ್ಪಿಸಿಕೊಂಡಾಗ ಭಯವಾಗುವುದು ಸಹಜ. ಆಗಿನ ಸುತ್ತಮುತ್ತಲಿನ ಇತಿಮಿತಿ ಅರಿತಿದ್ದ ನನಗೆ ಇದ್ದ ಕನಸುಗಳು ಪುಟ್ಟವು. ಅದನ್ನೆಲ್ಲ ಮೀರಿರುವ ಸಂತಸವಿದೆ. ಇನ್ನು ಇಪ್ಪತ್ತು ವರುಷಗಳ ನಂತರ ಇಲ್ಲಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಊರಿನಲ್ಲಿರುತ್ತೇನೆ ಎಂದು ಊಹಿಸುವುದು ಕಷ್ಟ. ಅಂಥದರಲ್ಲಿ ಭೂಮಿಯನ್ನು ಎರಡು ಸುತ್ತು ಹೊಡೆದಿರುತ್ತೇನೆ ಎಂಬ ಊಹೆಯು ಅಸಾಧ್ಯ. ಈಗ ನೆನೆದಾಗ ಸೋಜಿಗ! ಇಷ್ಟಿರಲಿ ಸಾಕು, ನೀವೂ ನೆನಪಿಸಿಕೊಳ್ಳಲಿ ಎಂಬುದಷ್ಟೆ ನನ್ನ ಉದ್ದೇಶವಾಗಿತ್ತು.

ಅವತ್ತು ಇಪ್ಪತ್ತು ವರುಷಗಳ ನಂತರ ನೀವು ಏನಾಗಬಹುದೆಂದು ಬಯಸಿದ್ದಿರಿ? ನಿಮ್ಮ ಕನಸುಗಳೇನಿದ್ದವು? ಸಾಕಾರಗೊಂಡವೇ? ನಿಮ್ಮ ಮೆದುಳಿಗೊಂದಿಷ್ಟು ಕೆಲಸ. ನೆನಪಿಸಿಕೊಂಡು ತುಲನೆ ಮಾಡಿ. ಚಂದದ್ದು ಆಗಿದ್ದರೆ ಖುಷಿ ಪಡಿ ಆಗಿಲ್ಲಾಂದರೆ ಗೋಲಿ ಹೊಡೀರಿ. ನನ್ನ ಅನಿಸಿಕೆ ಪ್ರಕಾರ ನೀವು ಬಯಸದಿರುವ ಎಷ್ಟೋ ಒಳ್ಳೆಯದು ಆಗಿರುತ್ತದೆ, ಅಂತೆಯೇ ನೀವು ಬಯಸದಿರುವ ಎಷ್ಟೋ ಕೆಟ್ಟದೂ ಆಗಿರುತ್ತದೆ.

ಸರಿ, ಇಪ್ಪತ್ತು ವರುಷಗಳ ಹಿಂದೆ ಸುತ್ತಮುತ್ತಲಿನ ಸಮಾಜ ಹೇಗಿತ್ತು ಏನಿತ್ತು, ಏನಿರಲಿಲ್ಲ? ಫಕ್ಕನೆ ಹೊಳೆಯುವುದು ನಮ್ಮ ದೇಶಕ್ಕಿನ್ನೂ ಮೊಬೈಲ್ ಬಂದಿರಲಿಲ್ಲವೆಂಬುದು. ಬೆಂಗಳೂರಿನ ಬಳಿಯಿದ್ದ ನಮ್ಮ ಚಿಕ್ಕಪ್ಪ ಒಬ್ಬರು ಹೊಸತಾಗಿ ಲ್ಯಾಂಡ್ ಲೈನ್ ಕನೆಕ್ಷನ್ ತಗೊಂಡಿದ್ದರು. ಮಧ್ಯಪ್ರದೇಶದಲ್ಲಿದ್ದ ನನಗೆ ಅಂದರೆ ನಮ್ಮ ಪ್ರಿನ್ಸಿಪಾಲರ ಮನೆಗೆ ಫೋನ್ ಮಾಡಿ ನನ್ನನ್ನು ಕರೆಸಿಕೊಂಡು ಮನೆಮಂದಿಯೆಲ್ಲ ಮಾತಾಡಿದ್ದ ನೆನಪು. ಅದರ ಹಿಂದಿನ ವರುಷ ಒಂದೂರಿಂದ ಇನ್ನೊಂದೂರಿಗೆ ಸಂದೇಶ ಕಳಿಸಬೇಕಿದ್ದರೆ ಮನೆಯವರು ನನ್ನನ್ನು ಬಸ್ಸು ಹತ್ತಿಸುತ್ತಿದ್ದರು!

ಹಿಂದಿನ ವರುಷ ಜರುಗಿದ ಕ್ರಿಕೆಟ್ ವರ್ಲ್ಡ್ ಕಪ್ ನನಗೆ ಮೊಟ್ಟ ಮೊದಲ ವರ್ಲ್ಡ್ ಕಪ್. ಆಗೆಲ್ಲ ಹೆಸರಾಂತರನ್ನು ಹೊರತುಪಡಿಸಿ ಸಡಗೋಪನ್ ರಮೇಶ್ ದೇಬಶಿಶ್ ಮೊಹಾಂತಿ ಸಾಬಾ ಕರೀಂ ಇತ್ಯಾದಿ ಆಟಗಾರರಿದ್ದರು. ಆಸ್ಟ್ರೇಲಿಯಾ ಸೌತ್ ಆಫ್ರಿಕಾ ಪಂದ್ಯ ಕೆಟ್ಟ ಟೈ ಆದ್ದದ್ದು ಆಗಲೆ. ಕನ್ನಡದ ಜನಪ್ರಿಯ ಧಾರಾವಾಹಿ ದಂಡಪಿಂಡಗಳು ಇದೇ ಕಾಲದಲ್ಲಿ ಶುರುವಾಗಿದ್ದು ಎಂಬ ನೆನಪು. ಪ್ರೀತ್ಸೆ, ಶಬ್ಧವೇದಿ ಸಿನಿಮಾಗಳು ಬಂದದ್ದು 2000ದಲ್ಲಿ. ಸಿನಿಮಾಗಳ ಗುಣಮಟ್ಟ ಮೇಲಕ್ಕೇರಿದ್ದರೆ ಧಾರಾವಾಹಿಗಳದ್ದು ಕೆಳಗಿಳಿದಿರುವುದು ದುರಂತ. ಮಾಯಾಮೃಗ, ದಂಡಪಿಂಡಗಳು ನಂತರ ಬಂದ ಮಾಂಗಲ್ಯ, ಮೂಡಲ ಮನೆ, ಪಾಪ ಪಾಂಡು ಇತ್ಯಾದಿ ಘಟಾನುಘಟಿ ಧಾರಾವಾಹಿಗಳ ಕಾಲವದು.

ಇನ್ನು ಇಂಟರ್ನೆಟ್ಟಿನ ಸಮಾಚಾರಕ್ಕೆ ಬಂದರೆ ನಾನು ಗೂಗಲ್ಲಿನಲ್ಲಿ 2000 ಇಸವಿಯಲ್ಲಿ ಒಂದಷ್ಟು ಸಂಗತಿಗಳನ್ನು ಹುಡುಕಿದೆ. ಉದಾಹರಣೆಗೆ 2020 ರಲ್ಲಿ ಗೂಗಲಿನಲ್ಲಿ “ಇಂಡಿಯ” ಎಂದು ಹುಡುಕಿದರೆ ನಮಗೆ ಸಿಗುವ ಪುಟಗಳ ಸಂಖ್ಯೆ 12,390,000,000. ಅದೇ 2000ನೇ ಇಸವಿಯ ಮುಂಚಿನ ಪುಟಗಳು ಸಿಗುವುದು 150ಕ್ಕಿಂತ ಕಡಿಮೆ! ಕಳೆದ ಇಪ್ಪತ್ತು ವರ್ಷಗಳಲ್ಲಿ ಅದೆಷ್ಟು ಡೇಟಾ ಉತ್ಪತ್ತಿ ಮಾಡಿದ್ದೇವೆ ನಾವು! 365*20 ರಿಂದ ಭಾಗಿಸಿದರೆ ಒಂದು ದಿನಕ್ಕೆ 16 ಲಕ್ಷಕ್ಕೂ ಹೆಚ್ಚು ಪುಟಗಳ ಲೆಕ್ಕ. ನಮ್ಮ ದೇಶದಲ್ಲಿ ಇಂಟರ್ನೆಟ್ ಕ್ರಾಂತಿಯಾಗಿದ್ದು ಈ ಎರಡು ದಶಕಗಳಲ್ಲಿ. 2004 ರಲ್ಲಿ ನಾವು ಉಚಿತ ಸಿಗುವ 100 ಎಸ್ಸೆಮ್ಮೆಸ್ಸುಗಳನ್ನು ವ್ಯರ್ಥ ಮಾಡಬಾರದೆಂದು ರಾತ್ರಿ ಮಲಗುವ ಮುಂಚೆ ಗುಡ್ ನೈಟ್ ಮೆಸೇಜು ಕಳಿಸಿ ಖಾಲಿ ಮಾಡುತ್ತಿದ್ದೆವು. ಇವತ್ತು ನನ್ನ ಜಿಯೋ ಫೈಬರ್ ನ ಬಳಕೆ ತಿಂಗಳಿಗೆ ಮುನ್ನೂರು ಜೀಬಿಯಾಗಿದೆ. ಆಗ ಸ್ನೇಕ್ ಆಡುತ್ತಿದ್ದೆವು. ಈಗಿನ ಮಕ್ಕಳು 3-D ಗೇಮ್ಸ್ ಆಡುತ್ತಾರೆ.

ಆ ವರ್ಷದ ಬ್ಲಾಗರ್ಸ್ 2020 ರ ಬಗ್ಗೆ ಏನು ಬರೆದಿದ್ದಾರೆಂದು ಹುಡುಕುತ್ತಿದ್ದೆ. ಒಬ್ಬ ಹೇಳಿದ್ದಾನೆ: ಈಗ ನಮ್ಮ ಮನೆಗಳಲ್ಲಿ ಟಿವಿ ಬಲ್ಪು ಏಸಿಗಳೆಲ್ಲವೂ ಸ್ವತಂತ್ರವಾಗಿರುವವು, ಒಂದೊಂದರ ಸ್ವಿಚ್ಚನ್ನೂ ಹೋಗಿ ಒತ್ತಿ ಆನ್ ಮಾಡಬೇಕು. 2020 ರ ಹೊತ್ತಿಗೆ ರೊಬೋಟು ಇರುತ್ತದೆ, ಅದರ ಜೊತೆ ನೀವು ಒಂದು ಮಾತು ಆಡಿದರೆ ಸಾಕು, ನಿಮ್ಮ ಮೂಡಿನ ಅನುಸಾರ ಬಲ್ಬು ಏಸಿ ಟೀವಿಗಳೆಲ್ಲ ಆನ್ ಆಗಿಬಿಡುತ್ತವೆ ಎಂದು. ಮುಂದೆ ಆಟೋಮೇಟೆಡ್ ಕಾರ್ ಬರುತ್ತವೆಂದು. ಇವತ್ತಿನ ಅಲೆಕ್ಸಾ, ಓಕೆ ಗೂಗಲ್, ಟೇಸ್ಲಾ ಕಾರುಗಳನ್ನು ನೆನಪಿಸಿಕೊಳ್ಳಿ! ಇದೇ ವ್ಯಕ್ತಿ ಮುಂದೆ ಬರೆಯುತ್ತಾನೆ,

Even in 2020 you will always need to know if the facts you’ve dredged up are accurate and truthful. With so many sources doling out information, you will need to know: What is he selling, and why is he selling it? Most unsettling is the fact that these precious touchstones are not permanent. They never will find their way to the library stacks. Instead we are moving closer to Orwell’s nightmare: the truth ceaselessly modified, altered, edited, or altogether obliterated.

(https://www.discovermagazine.com/mind/what-youll-need-to-know-in-2020-that-you-dont-know-now)

ಈತನು ಇನ್ನೊಬ್ಬ ಆರ್ವೆಲ್ ನಂತೆ ತೋರುತ್ತಾನೆ!

ಅಷ್ಟು ದೂರ ಹೋಗುವುದು ಬೇಡ ನಮ್ಮ ಕಲಾಂ 2020 vision ಎಂದು ಪುಸ್ತಕ ಬರೆದಿದ್ದರು. ಪುಟ್ಟದಾಗಿ ಪಟ್ಟಿ ಇಲ್ಲಿದೆ ಓದಿ, ನಾವೆಲ್ಲಿದ್ದೇವೆಂದು ನೆನೆದರೆ ನಾಚಿಕೆಯಾಗುತ್ತದೆ(https://en.wikipedia.org/wiki/India_Vision_2020).

ಇನ್ನು ಭವಿಷ್ಯತ್ತಿನ ಕಾಲಕ್ಕೆ ಹೊರಳೋಣ. ಇಂದಿನಿಂದ ಇಪ್ಪತ್ತು ವರುಷಗಳ ನಂತರ ಅಂದರೆ 2040ರ ಹೊತ್ತಿಗೆ ನಿಮ್ಮ ಕತೆಯೇನು? “ಕ್ರಿಸ್ತಪೂರ್ವ” ದಂತೆ ಹಿಂದಿನಿಂದ ಲೆಕ್ಕ ಹಾಕಿದರೆ ನಮ್ಮಲ್ಲಿ ಎಷ್ಟೋ ಜನರ ಎಕ್ಸ್ಪೈರಿ ಡೇಟು ಮುಗಿದಿರುತ್ತದೆ! ಹೆಸರು ಎತ್ತಿಕೊಳ್ಳಬಾರದು ಜನ ನೊಂದುಕೊಳ್ಳುತ್ತಾರೆ, ಇವತ್ತಿನ ಮಟ್ಟಿಗೆ ಎಂಭತ್ತು ದಾಟಿರುವವರೆಲ್ಲರೂ ಗೋತಾ ಅಂತಲೇ ಅರ್ಥ! ಶತಾಯುಷಿಯಾಗುವ ಇಚ್ಛೆಯಿರದಿದ್ದಲ್ಲಿ. ಎಲ್ಲ ಚನ್ನಾಗಿದ್ದರೆ ನಾನು 53 ವರ್ಷ ಆಯಸ್ಸು ಸವೆಸಿರುತ್ತೇನೆ. ಇತ್ತಲಾಗೆ ಪೂರ್ತಿ ಮುದುಕನೂ ಅಲ್ಲ ಅತ್ತಲಾಗೆ ದುಡಿವ ವಯಸ್ಕನೂ ಅಲ್ಲ. ಮಕ್ಕಳೆಲ್ಲ ದೊಡ್ಡವರಾಗಿರುತ್ತಾರೆ. ಈಗಿನ ಅನಿಶ್ಚಿತ ಕಾಲದಲ್ಲಿ ನಾವು ವಯಸ್ಸಿನ ಭವಿಷ್ಯವನ್ನಷ್ಟೆ ನುಡಿಬಹುದು ಮಿಕ್ಕಿದ್ದೆಲ್ಲವೂ ಪರದೆ ಹಿಂದೆ. ಸರಿಸುತ್ತಾ ಹೋದಂತೆ ಮಾತ್ರ ಗೋಚರವಾಗುವುದು.

ಕಳೆದ ಇಪ್ಪತ್ತು ವರುಷಗಳಲ್ಲಿ ತಲಾ ಹತ್ತು ವರುಷಗಳಂತೆ ನಮ್ಮ ದೇಶದವನ್ನು ಎರಡು ವಿರುದ್ಧ ದಿಕ್ಕಿನ ಆಲೋಚನೆಗಳು ಆಳಿವೆ. ಅದೂ ಇದೂ ಲಾಗಾಟದ ನಂತರ ಡೆಮಾಕ್ರಿಸಿಯೆಂಬ ಈ ಸಿಸ್ಟಂ ಮುಂದಿನ ಇಪ್ಪತ್ತು ವರುಷಗಳಿಗೂ ಇದೇ ನ್ಯಾಯವನ್ನು ಮುಂದುವರೆಸಬಹುದು. ಆದರೆ ಮಾಧ್ಯಮ ಲೋಕವು ಪಾತಾಳ ಮುಟ್ಟಿರುವುದರಿಂದ ಇಲ್ಲಿಂದ ಬದಲಾವಣೆ ಅಂತಾದರೆ ಅದೆಲ್ಲವೂ ಉತ್ತಮದ್ದೇ ಆಗಿರಲು ಸಾಧ್ಯ. ನ್ಯಾಯಾಂಗವು ಇನ್ನಷ್ಟು ಹದಗೆಟ್ಟು ಆಮೇಲೆ ಸರಿಹೋಗಬಹುದು. 2010 ರಿಂದ 2030 ರವರೆಗೆ ತಂತ್ರಜ್ಞಾನವು ಸ್ಯಾಚುರೇಶನ್ ಹಂತ ತಲುಪಿ ಒಂದು ಮಟ್ಟಿಗೆ ನಿಧಾನ ಹರಿವ ನೀರು. ನಾನು ಹೇಳುತ್ತಿರುವುದು ಮೂಲಭೂತ ತಂತ್ರಜ್ಞಾನ. ಫೇಸ್ ಬುಕ್, ಟ್ವಿಟ್ಟರ್ ನಂತಹದ್ದಲ್ಲ. ಅವೂ ಇನ್ನೇನು ಸ್ಯಾಚುರೇಟ್ ಆಗಲಿವೆ.

ಇನ್ನು ಹತ್ತು ವರುಷಗಳಲ್ಲಿ ಸಾರ್ವಜನಿಕ ಬಳಕೆಯಲ್ಲಿ ತಂತ್ರಜ್ಞಾನವು ಗರಿಗೆದರಬಹುದು. ಹಾಗೆ ನೋಡಿದರೆ ಇಷ್ಟೊತ್ತಿಗೆ ಫ್ಲೈಯಿಂಗ್ ಕಾರುಗಳು ಇರಬೇಕಿತ್ತು! ಆಟೋಮೊಬೈಲ್ ಮೇಲೆ ಅಷ್ಟು ನಿರೀಕ್ಷೆಯಿತ್ತು. ಅದಾಗದಿದ್ದರೂ ಸಾರಿಗೆ ವಿಭಾಗದಲ್ಲಿ ಏನಾದರೂ ಅಂಥದೊಂದು ಮಹತ್ವದನ್ನು ನಿರೀಕ್ಷಿಸಬಹುದು ನಾವು. ಎರಡು ದೊಡ್ಡ ಕಂಪನಿಗಳು ಇತ್ತೀಚೆಗೆ ಬ್ಯಾಟರಿ ತಂತ್ರಜ್ಞಾನದಲ್ಲಿ ಮಹತ್ವದ ಅವಿಷ್ಕಾರವನ್ನು ಘೋಷಿಸಿವೆ. ಕಾದು ನೋಡಬೇಕು. ಇವೆಲ್ಲ ವೈಯುಕ್ತಿಕ ಭವಿಷ್ಯವಾಣಿ ಪಟ್ಟಿಗಳು! ಪ್ರತಿಯೊಬ್ಬರಲ್ಲೂ ಇಂಥದೊಂದು ಪಟ್ಟಿ ಇದ್ದೇ ಇರುತ್ತದೆ. ನಿಮ್ಮ ಪಟ್ಟಿಯಲ್ಲೇನಿದೆ ಎಂಬುದನ್ನು ನೀವು ಕಂಡುಕೊಳ್ಳಿ.