ಭಾಗವತ 14:ಭುವಿಯ ತಳದಲ್ಲಿರುವುದು ಹರಿವನೀರೂ, ಕುದಿವ ಲಾವಾರಸವೂ

ಭಾಗವತವು ಸೃಷ್ಟಿಯ ಕಥನದಲ್ಲಿ ತೊಡಗಿದೆ. ಸೃಷ್ಟಿಯಲ್ಲಿ ಭಗವಂತನು ಅಡಗಿರುವುದರಿಂದ, ಅಡಗಿರುವುದನ್ನು ಹೊಳೆಯಿಸುವಂತೆ ಅದು ತನ್ನ ಕಥನವನ್ನು ನಿರ್ವಹಿಸಬೇಕು ಆಗಲೇ ಭಾಗವತದ ಸಾರ್ಥಕತೆ. ಅಡಗಿರೋದನ್ನು ಅವ್ಯಕ್ತವಾಗಿರೋದನ್ನು ತಾನು ಅಡಗಿಯೇ ಹುಡುಕಬೇಕಲ್ಲವೆ? ಆಳದಲ್ಲಿ ಇರುವ ಸತ್ಯವನ್ನು ನಾವು ಆಳಕ್ಕೆ ಮುಳುಗದೆ ಕಂಡುಕೊಳ್ಳಲಾಗುವುದೆ? ಅಂದರೆ, ಸೃಷ್ಟಿಯಲ್ಲಿ ಪ್ರಕಟಗೊಂಡಿರುವ ಮನುಷ್ಯ ತಾನು ಪ್ರಕಟಗೊಂಡಿದ್ದೇನೆ ಎಂಬ ಅಹಂಕಾರದ ಭಾವವನ್ನು ಬಿಟ್ಟುಕೊಡದೆ ಮನಸ್ಸಿಗೆ ಹುಡುಕಾಟದ ಪ್ರವೃತ್ತಿಯೇ ಉಂಟಾಗಲು ಸಾಧ್ಯವಿಲ್ಲ. ಬಿಟ್ಟುಕೊಡುವುದು ಸುಲಭ ಸಾಧ್ಯವೂ ಅಲ್ಲ. ಅಂದರೆ, ತನ್ನನ್ನೇ ತಾನು ಹುಡುಕದೆ ದೇವರನ್ನು ಹುಡುಕುವುದು, ತನ್ನನ್ನು ಬಿಟ್ಟು ಬೇರೆಯಾಗಿ ದೇವರನ್ನು ಹುಡುಕುವುದು ಅಸಾಧ್ಯ. ವಿಚಿತ್ರವೆಂದರೆ, ಅಡಗಿದ್ದುದನ್ನು ಹುಡುಕುವಾಗ, ಅಡಗಿದ್ದುದೆಲ್ಲ ಮೆಲ್ಲಗೆ ಗೋಚರವಾಗುವವು. ದೇವರು ಅಥವಾ ‘ಸತ್ಯ’ವು ಮಾತ್ರ ಅಡಗಿರೋದಲ್ಲ. ದೇವರೆಂಬ ಸತ್ಯವು, ಪ್ರಕೃತಿಯ- ಇನ್ನೂ ಪೂರ್ತಿಯಾಗಿ ಪ್ರಕಟವಾಗದ ಪ್ರಕೃತಿಯ- ಜತೆಗೇ ತಾನು ಅಡಗಿದೆ! ಭೂಮಿಯ ಆಳದಲ್ಲಿ ನೀರಿದೆ. ಅಂತರ್ಜಲ. ಜೀವ ಜಲ. ನಿಜ. ನೀರು ಮಾತ್ರವಲ್ಲ, ಪ್ರಚಂಡವಾಗಿ ಉರಿಯುವ ಬೆಂಕಿಯೂ ಭೂಮಿಯಾಳದಲ್ಲಿದೆ. ಹಾಗಲ್ಲದೆ ಜ್ವಾಲಾಮುಖಿ ಚಿಮ್ಮುವುದೆಲ್ಲಿಂದ? ಕುದಿಯುವ ಲಾವಾರಸ ಹರಿಯುವುದೆಲ್ಲಿಂದ? ಎಲ್ಲಿತ್ತದು? ಆದುದರಿಂದ, ನೀರು ಮಾತ್ರ ಬೇಕು; ಜ್ವಾಲಾಮುಖಿ ಬೇಡ ಎನ್ನುವಂತಿಲ್ಲ. ಕನಿಷ್ಠ- ಹುಡುಕುವವನು ಹಾಗೆ ಹೇಳುವಂತಿಲ್ಲ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದೇವರನ್ನು ಹುಡುಕುತ್ತಿದ್ದೇನೆ ಎನ್ನುವುದೇ ಅಹಂಕಾರವಾಗಬಹುದಾದ್ದರಿಂದ, ಆ ಹುಡುಕಾಟದಲ್ಲಿ ತನ್ನ ಅಹಂಕಾರವನ್ನೇ ತಾನು ಹುಡುಕುತ್ತಿದ್ದಾನೆ- ಹಾಗೆಂದು ಗೊತ್ತಿಲ್ಲದೆ! ಹುಡುಕಾಟದಲ್ಲಿ ತನ್ನೊಳಗೆ ಇರುವುದೆಲ್ಲ ಪ್ರಕಟವಾಗಬೇಕು, ಸತ್ತ್ವಗುಣ ಮಾತ್ರವಲ್ಲ, ರಜಸ್ಸೂ, ತಮಸ್ಸೂ ಎಲ್ಲವೂ.  ಪ್ರಕಟವಾಗುತ್ತವೆ ಕೂಡ. ಮುದುಡಿ ಮಲಗಿರುವ ಹಾವಿನ ಬಾಲವನ್ನು ಮೆಟ್ಟಿದರೆ ಸಾಕು, ಹೇಗೆ ಸರಕ್ಕನೆ ಚಲಿಸಿ ಹೆಡೆ ಎತ್ತಿ ಬುಸುಗುಡುತ್ತದೆ! ಇದು ಅಹಂಕಾರದ ಗುಣ. ಮೆಟ್ಟದಿದ್ದರೆ ಅದರ ಪಾಡಿಗೆ ಅದಿರುತ್ತದೆ ಎಂದುಕೊಳ್ಳಬಹುದು. ಆದುದರಿಂದಲೇ ಇದು ಮೇಲ್ನೋಟಕ್ಕೆ ವಿಪರ್ಯಾಸ. ಆಳದಲ್ಲಿ ಇದು ಸೃಷ್ಟಿಯ ಗುಣ. ದೇವರು ಸೃಷ್ಟಿಯಲ್ಲಿ ಅಡಗಿದ್ದಾನೆ ಎಂದರೆ, ಅವನು ಪ್ರಕಟವಾಗಬೇಕಾದರೆ, ಅವನೊಂದಿಗೆ ಅಡಗಿರುವ ಸೃಷ್ಟಿ ಸಮಸ್ತವೂ ಪ್ರಕಟವಾಗಬೇಕು. ಅಹಂಕಾರವೆಂಬ ಹಾವು ಎಚ್ಚತ್ತು ಬುಸುಗುಡದೆ, ನಮ್ಮ ಅಹಂಕಾರದಲ್ಲಿಯೇ ಅಡಗಿರುವ ದೇವರ ಅಥವಾ ‘ಸತ್ಯ’ದ ಅಸ್ಮಿತೆ, ಪ್ರಕಟವಾಗಲಾರದು! ಮನುಷ್ಯ ಜೀವಿಯೇ ‘ಸೃಷ್ಟಿ’ಯಾದುದರಿಂದ, ಮನುಷ್ಯನ ಎಲ್ಲ ಮುಖಗಳೂ, ಗೊತ್ತಿರುವ, ಗೊತ್ತಿಲ್ಲದಿರುವ ಅನೂಹ್ಯ ಭೀಕರ ಮುಖಗಳೂ, -ಹುಡುಕುತ್ತ ಹೋದಂತೆ ಅನಾವರಣಗೊಳ್ಳುತ್ತ ಹೋಗುತ್ತವೆ. ‘ಭಾಗವತ’ ಇದನ್ನೊಪ್ಪುತ್ತದೆ! ಸೃಷ್ಟಿಯ ಕಥನದಲ್ಲಿ ಮನುಷ್ಯನ ಅಹಂಕಾರ ಸುರುಳಿಬಿಚ್ಚುತ್ತ ಹೆಡೆ ಎತ್ತುವುದನ್ನು ಅದು ಬಣ್ಣಿಸಿಯೇ ಬಣ್ಣಿಸುತ್ತದೆ.

ಚತುರ್ಮುಖ ಬ್ರಹ್ಮನ ಪುತ್ರ ದಕ್ಷ ಪ್ರಜಾಪತಿ. ಮನು- ಶತರೂಪಾ ದಂಪತಿಗಳ ಮಗಳು ‘ಪ್ರಸೂತಿ’ಯನ್ನು ದಕ್ಷನಿಗೆ ಮದುವೆ ಮಾಡಿಕೊಟ್ಟಿದ್ದರು. ದಕ್ಷ- ಪ್ರಸೂತಿಯರಿಗೆ ಹದಿನಾರು ಮಂದಿ ಹೆಣ್ಣು ಮಕ್ಕಳು.  ಅವರಲ್ಲಿ ‘ಸತಿ’ಯು, ಮಹಾದೇವನಾದ ಶಿವನಿಗೆ ಸತಿಯೇ ಆಗಿ ಅರ್ಧಾಂಗಿಯಾಗಿದ್ದಳು. ಹೀಗೆ ದಕ್ಷ ಪ್ರಜಾಪತಿಗೆ ಶಿವನು ಅಳಿಯ. ಏನಾಯಿತೆಂದರೆ, ಹಿಂದೆ ದೇವತೆಗಳೆಲ್ಲ ಸೇರಿ ದೊಡ್ಡದೊಂದು ಯಜ್ಞವನ್ನು ನಡೆಸುತ್ತಿದ್ದರು. ದೇವತೆಗಳ ಕೋರಿಕೆಯಂತೆ ಬ್ರಹ್ಮ ದೇವ ಮತ್ತು ಶಿವ, ಈ ಯಜ್ಞ ಸಮಾರಂಭಕ್ಕೆ ಬಂದು ಜತೆಗೂಡಿದ್ದರು. ಈ ಹೊತ್ತಿನಲ್ಲಿಯೇ ದಕ್ಷ ಪ್ರಜಾಪತಿಯ ಆಗಮನವಾಯಿತು.  ದೊಡ್ಡ ಮನುಷ್ಯ! ಎಲ್ಲರೂ ಎದ್ದು ನಿಂತು ಸ್ವಾಗತಿಸಿದರು. ತಂದೆಯಾದ ಬ್ರಹ್ಮದೇವ ಮತ್ತು ಕೈಲಾಸಪತಿಯಾದ ಶಿವ- ಇವರಿಬ್ಬರೂ ಎದ್ದು ನಿಲ್ಲದೇ ಇದ್ದರು. ಅಷ್ಟಕ್ಕೆ ದಕ್ಷನ ಕಣ್ಣು ಕೆಂಪಗಾದವು.  ಬ್ರಹ್ಮದೇವನಾದರೋ ಹಿರಿಯ. ಅವನ ನಿಲುವು ಸರಿ. ಈ ಶಿವನಿಗೇನು? ಅಳಿಯನಾಗಿ ತನ್ನವನಾಗಿ ತನಗೆ ಗೌರವ ತೋರಿಸಲೇ ಬೇಕಾದವನೀತ. ಈತನಿಗೆ ಕೈಲಾಸದ ಕೋಡಿನಂತೆ ತಣ್ಣನೆಯ ಕೊರೆಯುವ ಅಹಂಕಾರ! ಇದು ಸಹಿಸಲಸಾಧ್ಯ ಎಂದುಕೊಂಡ ದಕ್ಷ ಪ್ರಜಾಪತಿ. ದಕ್ಷನ ಸುಪ್ತ ಅಹಂಕಾರ ‘ಎದ್ದು ನಿಂತಿತ್ತು’. ಆ ಯಜ್ಞ ಸಭೆಯಲ್ಲಿಯೇ ದಕ್ಷ, ಶಿವನನ್ನು ವಾಚಾಮಗೋಚರವಾಗಿ ನಿಂದಿಸಿದನಂತೆ. ಸಿಟ್ಟುಗೊಂಡು ನಿಂದಿಸುವಾಗ ಮಾತಿಗೆ ವಿಚಿತ್ರವಾದ ಸೃಷ್ಟಿಶೀಲತೆ ಬಂದುಬಿಡುತ್ತದೆ! ಈಗ ದಕ್ಷನಿಗೆ ಶಿವನ ಮೂರುಕಣ್ಣು, ಕುರೂಪದಂತೆ ಕಂಡಿತು. ಶಿವನ ವೈರಾಗ್ಯ ಮರುಳಿನಂತೆ ತೋರಿತು. ಭಸ್ಮಲೇಪನ ಅಶುಚಿಯಾಯಿತು. ಭೂತಗಣಗಳು ಶಿವನನ್ನು ಸುತ್ತುವರಿದಿವೆ; ಎನ್ನುವುದು ಮತ್ತೇರಿದ ಮದಾಂಧರ ಗುಂಪುಗಾರಿಕೆಯಂತೆ ಭಾಸವಾಯಿತು. ದಕ್ಷನ ಮುಖದಿಂದ ಶಿವನನ್ನು ಕುರಿತ ನಿಂದೆಯ ಪ್ರವಾಹವೇ ಹರಿಯಿತು.

ಶಿವನೋ ನಿಶ್ಚಲನಾಗಿದ್ದ. ವಾಸ್ತವವೇನೆಂದರೆ, ಶಿವ, ಮನಸ್ಸೆಂಬ ಮನಸ್ಸಿನ ಅಭಿಮಾನೀ ದೇವತೆ.  ಮನೋನಾಯಕ. ಮನಸ್ಸು ಸಂಕಲ್ಪಾತ್ಮಕವಾಗಿ ಅಹಂಕಾರದ ಸ್ಥಾನ. ಶಿವನು ಅಹಂಕಾರದ ಅಧಿದೈವ.  ಅಂದರೆ, ಅಹಂಕಾರ ಸ್ತರವನ್ನು ದಾಟಬೇಕಾದರೆ, ಅಹಂಕಾರವನ್ನು ಕಳಕೊಳ್ಳಬೇಕಾದರೆ, ಶಿವನ ಅನುಗ್ರಹವಾಗಬೇಕು. ಶಿವನು ಅರ್ಧಮೈಯೇ ಹೆಣ್ಣಾದವನು! ಶಿವನೊಬ್ಬನೇ ಅರ್ಧನಾರೀಶ್ವರ! ತನ್ನ ಮೈ-ಮನಗಳ ಅರ್ಧದಲ್ಲಿ ಸತಿಯೇ ಇರಲಾಗಿ ತಾನು ಪೂರ್ಣನಾದವನು ಶಿವನೊಬ್ಬನೇ! ಇದು, ಗಂಡು- ತನ್ನ ಅಹಂಕಾರವನ್ನು ಕಳೆದುಕೊಂಡುದರ ಗುರುತು. ಯಾವ ಹೆಣ್ಣಿಗಿದೆ ಈ ಭಾಗ್ಯ! ಯಾವ ತಂದೆಯ ಮಗಳಿಗಿದೆ ಈ ಭಾಗ್ಯ!

ಆದರೆ, ದಕ್ಷ ತನ್ನ ಸೂಕ್ಷ್ಮತೆಯನ್ನು ಯಾವಾಗಲೋ ಕಳಕೊಂಡಿದ್ದ. ಎಲ್ಲೆಲ್ಲೂ ತನಗೆ ಗೌರವ ಸೂಚನೆಯನ್ನು ಹುಡುಕುವವನಾಗಿ ಅವನ ಕಣ್ಣು ನೆತ್ತಿಯ ಮೇಲಿತ್ತು. ಅಹಂಕಾರದ ಎಲ್ಲ ಸುಳಿವುಗಳ ಗುರುತು ಅಹಂಕಾರ ಕಳೆದುಕೊಂಡ ಶಿವನಿಗಲ್ಲವೆ?  ಶಿವನು, ದಕ್ಷನ ಈ ಅಹಂಕಾರವನ್ನು ಕಂಡು, ಇದು ಇನ್ನಷ್ಟು ಬೆಳೆಯ ಬೇಕಾದಷ್ಟು- ಬೆಳೆಯಲಿ, ಬೆಳೆದ ಮೇಲೆ ಬಣ್ಣ ಬದಲಾಗಬಹುದು ಎಂದುಕೊಂಡು ಸುಮ್ಮಗಿದ್ದ. ಸುಮ್ಮನೆ ಇರುವುದು ತಪಸ್ವಿಗೆ ಸಹಜ.

ಶಿವ ಏನೂ ನಡೆದಿಲ್ಲ ಎಂಬಂತೆ ಸುಮ್ಮಾನ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದನಲ್ಲ- ದಕ್ಷ ಹುಚ್ಚನಂತಾದ.  ನಿನಗೆ ಯಜ್ಞಭಾಗವೇ ಸಿಗದಿರಲಿ ಎಂದು ಶಿವನಿಗೆ ಶಪಿಸಿದ. ಕಡು ಕೋಪದಿಂದ ಸಭಾತ್ಯಾಗ ಮಾಡಿ ಹೊರಟು ಹೋದ. ಶಿವನೇನೋ ಸುಮ್ಮಗಿದ್ದ. ಅದಕ್ಕೆ ಬೇರೆ ಅರ್ಥಗಳೂ ಇರಬಹುದು. ಆದರೆ, ಶಿವನ ವಾಹನವಾದ ನಂದಿಗೆ ತನ್ನೊಡೆಯನಿಗಾದ ಅಪಚಾರವನ್ನು ತಡೆದುಕೊಳ್ಳುವುದಕ್ಕಾಗಲಿಲ್ಲವಂತೆ. ನಂದಿ, ದಕ್ಷನನ್ನು, ದಕ್ಷನನ್ನು ನಿಯಂತ್ರಿಸದೆ ಅವನ ಮಾತುಗಳನ್ನನುಮೋದಿಸಿದ ಬ್ರಾಹ್ಮಣರನ್ನು ಎಲ್ಲರನ್ನೂ ಸೇರಿಸಿಯೇ ಹೀಗೆ ಶಪಿಸಿದನಂತೆ.

ದಕ್ಷನೆಂಬ ಈ ಗಾಂಪ, ದೇಹವನ್ನೇ ತಾನೆಂದುಕೊಂಡ ಈ ದೇಹಾಭಿಮಾನಿ, ವೇದ ವಾಕ್ಯಗಳ ನಿಜವಾದ ಅರ್ಥವೇ ಆಗದೆ ಕರ್ಮಕಾಂಡದಲ್ಲಿಯೇ ಬಿದ್ದಿರುವ ಈ ಪಶು, ಈ ಕರ್ಮಲಂಪಟ- ಪಶುವೇ ಆಗಿ ಹೋಗಲಿ.  ಅದು ಎಲ್ಲರಿಗೂ ತಿಳಿಯಲಿ. ಅದಕ್ಕಾಗಿ ಈತನಿಗೆ ಹೋತದ ಮುಖವೇ ಉಂಟಾಗಲಿ. ವಿದ್ಯೆ, ಅವಿದ್ಯೆಗಳ ಅಂತರವೇ ತಿಳಿಯದ ಈತ ಮತ್ತು ಈತನ ಜತೆಗಿರುವ ಮಂದಿ ಸಂಸಾರ ಚಕ್ರದಲ್ಲಿಯೇ ತಿರುಗುತ್ತಿರಲಿ. ವೇದ, ಮೋಹಕವಾದ ಮಾತಾಡುತ್ತೆ. ಅಂದರೆ, ಫಲಾಸಕ್ತಿಯ ಮಾತಾಡುತ್ತೆ. ಅದನ್ನೇ ಇದು ವೇದದ ನಿಜವಾದ ಮಾತೆಂದು ತಿಳಿದ, ಅಂದರೆ, ತಮ್ಮ ಲಾಲಸೆಗಳನ್ನೇ ವೇದದಲ್ಲಿ ಹೇಳಿದ್ದು ಎಂದು ತಿಳಿದ ಈ ಮಂದಿ, ಜ್ಞಾನದ ಕಡೆಗೆ ತಿರುಗದೆ, ಹಾಗೆಯೇ ವೇದೋಪಜೀವಿಗಳಾಗಿ, ಉದರಂಭರಣ ಮಾಡುತ್ತ ತಮ್ಮ ಆಸೆಗಳಿಗೆ ತಾವೇ ಗುಲಾಮರಾಗಿ ಬದುಕಲಿ ಎಂದು ಉಗ್ಗಡಿಸಿದನಂತೆ.

ವಾಸ್ತವದಲ್ಲಿ ಇರುವುದು ಬಹ್ವಂಶ ಹೀಗೆಯೇ. ಅದನ್ನೇ ‘ಶಾಪ’ ಎಂದು ವರ್ಣಿಸಿದ್ದು. ಇದು ‘ಧರ್ಮ’ದ ಪಾಡು. ಇತಿಹಾಸ- ಪುರಾಣಗಳಲ್ಲಿ ವೇದದ ಅರ್ಥವನ್ನು ಬೆಳೆಸಿರಿ ಎಂದ ಮಾತು ಇಂಥ ಸಂದರ್ಭಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಕೇಳಿಸುತ್ತದೆ.

ನಂದೀಶ್ವರನ ಈ ಮಾತುಗಳು ವೇದ ಮಾರ್ಗವನ್ನು ಹಳಿದಂತೆ ಕೇಳಿಸಿ, ಯಜ್ಞಕ್ಕಾಗಿ ಬಂದಿದ್ದ ಭೃಗು ಮಹರ್ಷಿ ಉಗ್ರನಾದನಂತೆ. ಆತ ಮತ್ತೆ ಬೆಂಕಿಯುಗುಳಿದ. ಇವರೆಲ್ಲ ಕಾಪಾಲಿಕರು. ಪಾಷಂಡಿಗಳು. ಶಿವವೃತವೆಂದು ಹೇಳಿಕೊಂಡು ಮದ್ಯಪಾನ ಮಾಡುತ್ತ ಜಟೆ, ಭಸ್ಮ-ಮೂಳೆಗಳನ್ನು ಧರಿಸಿಕೊಂಡು ಸನಾತನ ಧರ್ಮದ ಮರ್ಯಾದೆ ತಿಳಿಯದೆ ಅದನ್ನು ಹಳಿಯುವ ಬುದ್ಧಿಗೇಡಿಗಳು. ನೀವು ಪಾಷಂಡಿಗಳಾಗಿ ಹೋದಿರಿ ಎಂದನಂತೆ. ಪಾಷಂಡಿಗಳೆಂದರೆ ಧರ್ಮಬಾಹಿರರು- ಧರ್ಮ ವಿರೋಧಿಗಳು.

ಒಂದು ಸಾಮಾಜಿಕ ಕ್ಞೋಭೆಯನ್ನು ಭಾಗವತ ಹೀಗೆ ಬಣ್ಣಿಸುತ್ತದೆ.

ಒಟ್ಟಿನಲ್ಲಿ ಮಾತು ನಲುಗಿತು. ಪರಸ್ಪರ ಶಾಪವಾಯಿತು. ಅವಲೋಕನವಾಗಲಿಲ್ಲ. ಮಾತು ಸಮರ್ಥನೆಯಾಗಿ ಬಿಟ್ಟಿತು. ಅಹಂಕಾರದ ಪ್ರತಿರೂಪವಾಯಿತು. ಶಿವೇತರವಾಯಿತು. ಸೂಕ್ಷ್ಮತೆಗೆ ಎರವಾಗಿ ನಲುಗಿತು. ದಕ್ಷನಿಗಾದರೋ ಕೋಪ ಕುದಿಯುತ್ತಿತ್ತು. ಆತ ಇನ್ನೊಂದು ಮಹಾಯಜ್ಞವನ್ನು ಪ್ರಾರಂಭಿಸಿದ. ಈ ಯಜ್ಞಕ್ಕೆ ಶಿವನಿಗೆ ಆಹ್ವಾನವಿರಲಿಲ್ಲ. ಇದನ್ನೇ ಒಂದು ಸಾಧನೆ ಎಂದುಕೊಂಡ. ಕರ್ಮಕಾಂಡದಲ್ಲಿ ಒಂದು ಪ್ರಯೋಗ ಎಂದುಕೊಂಡ. ಇದರಿಂದ ನಂದಿಯ ಶಾಪವನ್ನು ನಿಜಮಾಡಿದಂತಾಗುತ್ತದೆ ಎಂದುಕೂಡ ಚಿಂತಿಸಲಿಲ್ಲ. ದೊಡ್ಡ ಮನುಷ್ಯನಾದುದರಿಂದ, ಇಂಥ ದು:ಸಾಹಸ ಬೇಡ ಎಂದು ಯಾರೂ ಅವನಿಗೆ ಹಿತ ಹೇಳಲಿಲ್ಲ. ‘ಬೃಹಸ್ಪತಿಸವ’ ಎಂಬ ಈ ಯಜ್ಞ ಪ್ರಾರಂಭವಾಯಿತು. ಇದು ದಕ್ಷ ಪುತ್ರಿಯಾದ ಸತಿಗೆ ತಿಳಿಯಿತು. ತನ್ನ ಅಕ್ಕ ತಂಗಿಯರಿಗೆಲ್ಲ ಆಹ್ವಾನವಿದೆ. ತನಗಿಲ್ಲ, ಸತಿಗೆ ನೋವಾಯಿತು. ತವರಿನ ಸೆಳೆತ ತೀವ್ರವಾಗ ತೊಡಗಿತು. ಕರೆದಿಲ್ಲವಾದರೂ, ತವರಿಗೆ ಹೋಗಲು ‘ಕರೆ’ ಬೇಕೇ- ಎಂದುಕೊಂಡಳು.  ಶಿವನಲ್ಲಿ ಕೇಳಿದಳು. ಶಿವ, ಬೇಡ ಎಂದ. ತನ್ನನ್ನು ಕರೆಯದೆ, ನಿನ್ನನ್ನು ಪ್ರತ್ಯೇಕವಾಗಿ ಕರೆದಿದ್ದರೂ, ನೀನು ಹೋಗುತ್ತಿರುವುದು ನ್ಯಾಯ ಸಮ್ಮತ ಆಗುತ್ತಿರಲಿಲ್ಲ. ಹೀಗಿರಲಾಗಿ ನಮ್ಮಿಬ್ಬರನ್ನೂ ಕರೆಯದೆ ಇದ್ದಾಗ- ಏನಿದು ವ್ಯಾಮೋಹ ಎಂದು ತಡೆದನಂತೆ. ಆದರೆ ಸತಿ, ಕೇಳಲಿಲ್ಲ. ಅದೆಂಥದೋ ಉದ್ವೇಗ! ತವರಿಗೆ ಹೊರಟಳು. ಶಿವನ ಗಣಗಳು ಒಡೆಯನಿಲ್ಲದಿದ್ದರೂ, ಒಡತಿಯನ್ನು ಸಂಭ್ರಮಾತಂಕಗಳಿಂದ ಹಿಂಬಾಲಿಸಿದರಂತೆ.

ತವರು ಮನೆ ಎಂಬುದು ಕರ್ಮಕಾಂಡದ ಯಜ್ಞವೇದಿಕೆಯಾಗಿಬಿಟ್ಟಿತ್ತು! ಮನೆಯ ಮಗಳನ್ನು ತಂದೆಯಾದ, ಯಜ್ಞದ ಯಜಮಾನ ಮಾತನಾಡಿಸಲಿಲ್ಲ. ತಿರಸ್ಕಾರದಿಂದ ನೋಡಿದ. ದಕ್ಷನಿಗೆ ಹೆದರಿ ಉಳಿದ ಬಂಧುಗಳೂ ಅವನನ್ನು ಅನುಸರಿಸಿದರು. ಶಿವನ ಮಡದಿಗೆ ಅಪಮಾನವಾಗಿ ಹೋಯಿತು.

ತಾಯಿ ಮತ್ತು ಒಡ ಹುಟ್ಟುಗಳು ಮಾತ್ರ ದಕ್ಷನನ್ನು ಲೆಕ್ಕಿಸದೆ ಮಗಳನ್ನು ಪ್ರೀತಿಯಿಂದ ತಬ್ಬಿಕೊಂಡರೆಂದು ಹೇಳುವುದಕ್ಕೆ ಭಾಗವತ ಮರೆಯುವುದಿಲ್ಲ.

ಆದರೆ ಮಗಳಿಗೆ ಮನಸ್ಸು ಮುರಿದು ಬಿಟ್ಟಿತ್ತು. ಲೋಕಕ್ಕೆಲ್ಲ ಮಹಾದೇವನಾದ ಶಿವನಿಗೆ ದಕ್ಷನ ಯಜ್ಞದಲ್ಲಿ ಹವಿರ್ಭಾಗವಿರಲಿಲ್ಲ. ಎಂಥ ಅಪಚಾರ! ಎಂಥ ವ್ಯುತ್ಕ್ರಮ! ದೊಡ್ಡ ಜ್ಞಾನಿಗಳೆಂದುಕೊಂಡವರು ಯಾರೂ ಇದನ್ನು ಪ್ರಶ್ನಿಸದೆ ಬಿಟ್ಟರಲ್ಲ. ತನ್ನ ಗೃಹಸ್ಥನ ಅಪಮಾನವನ್ನು ನೋಡುವುದಕ್ಕಾಗಿ ತಾನು ತವರಿಗೆ ಬಂದಂತಾಯಿತೆ? ಮುಕ್ಕಣ್ಣನ ಮಡದಿಗೆ ಮೈ ಉರಿದು ಹೋಯಿತು. ಆಕೆ ಕ್ಷಣದಲ್ಲಿ ನಿರ್ಧಾರಕ್ಕೆ ಬಂದಳು.  ಕೋಪಾವೇಶದ ನಡುಕದಲ್ಲಿ ತಂದೆ ದಕ್ಷನಿಗೆ ಹೀಗೆ ಹೇಳಿದಳು.

ನನ್ನ ಪತಿಯಾದ ಮಹೇಶ್ವರ ರಾಗ ದ್ವೇಷಗಳಿಲ್ಲದ ಪುಣ್ಯ ಪುರುಷ. ನಿನಗವನು ದ್ವೇಷಿ! ‘ಶಿವ’ ಎಂಬ ಎರಡಕ್ಷರ ಉಚ್ಚರಿಸಿದರೆ ಸಾಕು- ಪಾಪ ಹೋಗುತ್ತೆ. ಇಂಥವನು ನಿನಗೆ ಪಾಪಿ! ಬ್ರಹ್ಮಾನಂದ ಸಾರ ಮಕರಂದವನ್ನು ಬಯಸುವವರಿಗೆ ಅವನು ಆರಾಧ್ಯ- ಇಂಥವನು ನಿನಗೆ ದ್ರೋಹಿ! ಅವನ ಪಾದದಿಂದ ಬಿದ್ದ ಹೂವನ್ನು ದೇವತೆಗಳು ಮುಡಿಯುತ್ತಾರೆ- ಇಂಥ ‘ಶಿವ’ ನಿನಗೆ ಅಮಂಗಲ! ನಿನ್ನಿಂದ ಬಂದ ಈ ದೇಹ ನನಗೆ ಅಸಹ್ಯವಾಗಿ ಬಿಟ್ಟಿದೆ

ಕೊನೆಯ ಮಾತಾಗಿ ಇಷ್ಟು ಹೇಳಿ, ಯೋಗಿಗಳ ಒಡೆಯನಾದ ಮಹಾದೇವನ ಆ ಮಡದಿ, ಯಜ್ಞಾಗ್ನಿಯೇ ಹುಸಿ ಎನ್ನುವಂತೆ ತನ್ನ ಅಂತರಿಕ ಯೋಗಾಗ್ನಿಯನ್ನು ಜಾಗೃತಗೊಳಿಸಿ- ಮುಕ್ಕಣ್ಣನನ್ನು ನೆನೆಯುತ್ತ ದಗ್ಧಳಾಗಿ ಬಿಟ್ಟಳಂತೆ.

ಉಲ್ಲೋಲ ಕಲ್ಲೋಲವಾಗಿ ಹೋಯಿತು. ಶಿವನ ಗಣಗಳು ಉಗ್ರರಾದರು. ದಕ್ಷನ ಮೇಲೇರಿ ಬಂದರು. ಆದರೆ, ಭೃಗುಮುನಿ ಅಲ್ಲಿದ್ದ. ತನ್ನ ಮಂತ್ರ ಬಲದಿಂದ ಋಭುಗಳೆಂಬ ದೇವತೆಗಳ ಪ್ರತಿಸೃಷ್ಟಿಯನ್ನು ಮಾಡಿ ಅವರ ಮೂಲಕ ಆ ಕ್ಷಣಕ್ಕೆ ದಕ್ಷನನ್ನು ಕಾಪಾಡಿದನಂತೆ.

ತನ್ನ ಮೈಯ ಅರ್ಧದಂತಿದ್ದ ಸತಿ ಸುಟ್ಟುರಿದು ಹೋದುದು ಶಿವನಿಗೆ ತಿಳಿಯಿತು. ಶಿವನು ಲಯರುದ್ರನಾದ. ‘ವೀರಭದ್ರ’ನನ್ನು ಸೃಜಿಸಿದ. ವೀರ ಭದ್ರನೆಂದರೆ ರೌದ್ರರಸದ ಏಕಪಿಂಡ! ಇರುಳಿನ ಮೂರನೆಯ ಜಾಮದಲ್ಲಿ ರಂಗಸ್ಥಳಕ್ಕೆ ಬಿಜಯಮಾಡುವ ಕಿಡಿಗೆದರುವ ಬಣ್ಣದ ವೇಷ! ವೀರಭದ್ರ, ದಕ್ಷನ ಯಜ್ಞಶಾಲೆಯನ್ನು ಮುತ್ತಿದ. ಭೃಗುವನ್ನು ಬಡಿದ. ಬಿಡುಗಣ್ಣರೆಂಬ ಕೀರ್ತಿಯ ದೇವತೆಗಳ ಕಣ್ಣುಕಿತ್ತ.  ದಕ್ಷಪ್ರಜಾಪತಿಯನ್ನು ಹಿಡಿದು, ಯಜ್ಞ ಪಶುವಿನ ಕತ್ತನ್ನು ಹಿಸುಕಿ ಕೊಲ್ಲುವಂತೆ, ಆತನನ್ನು ಕೊಂದು, ದಕ್ಷನ ತಲೆಯನ್ನು ಕತ್ತರಿಸಿ ದಕ್ಷಿಣಾಗ್ನಿಯಲ್ಲಿ ಹೋಮ ಮಾಡಿಬಿಟ್ಟ. ಅಹಂಕಾರದ ಪೂರ್ಣಾಹುತಿಯಾಗಿ ಹೋಯಿತು!

ಯಜ್ಞಶಾಲೆಗೆ ಬೆಂಕಿ ಬಿತ್ತು. ಬೆಂಕಿ ಆರುತ್ತಿದ್ದಂತೆ ಕರ್ಮಕಾಂಡಕ್ಕೆ ಕತ್ತಲೆ ಆವರಿಸಿತು. 

ಮರಳಿ ದೇವತೆಗಳೆಲ್ಲ, ಬ್ರಹ್ಮದೇವರನ್ನು ಮುಂದಿಟ್ಟುಕೊಂಡು, ಕೈಲಾಸದತ್ತ ತೆರಳಿದರಂತೆ. ಅಲ್ಲಿ ಶಿವನನ್ನು ಕಂಡು ಅಚ್ಚರಿಗೊಂಡರಂತೆ.

ಸಂಜೆಯ ಕೆಮ್ಮೋಡದಂತೆ ಬೆಳಗುತ್ತಿದ್ದ ಶಿವ. ದಿವ್ಯ ದೇಹ. ತಪಸ್ವಿಗಳ ತಪಸ್ವಿ.  ಭಸ್ಮ; ಯೋಗದಂಡ, ಮೃಗಚರ್ಮ- ತಪಸ್ವಿಗಳಿಗೆ ಇಷ್ಟವಾದ ಈ ಕುರುಹುಗಳಿದ್ದವು. ತಲೆಯಲ್ಲಿ ಚಂದ್ರ ಹೊಳೆಯುತ್ತಿದ್ದ, ಶಿವನ ತಲೆಯ ಚಂದ್ರನಿಗೆ ವೃದ್ಧಿ- ಕ್ಷಯಗಳಿಲ್ಲವಂತೆ. ಆ ಅರ್ಥದಲ್ಲಿ ಸದಾ ಹುಣ್ಣಿಮೆ! ಜ್ಞಾನಮುದ್ರೆಯಲ್ಲಿ ಆಸೀನನಾಗಿದ್ದನಂತೆ ಶಿವನೆಂಬ ದಕ್ಷಿಣಾಮೂರ್ತಿ!

ದೇವತೆಗಳು ಶಿವನ ಕಾಲಿಗೆ ಬಿದ್ದರು. ಬ್ರಹ್ಮದೇವ ಅಂತ:ಕರಣದ ಮಾತುಗಳನ್ನಾಡಿದ. ಶಿವ ಅನುಗ್ರಹ ಮುಖದಲ್ಲಿದ್ದ. ದೇವತೆಗಳಿಗೆ ಮತ್ತೆ ಕಣ್ಣು ಬಂದವು. ಪೊರೆಕಳಚುವುದೆಷ್ಟು ಹೊತ್ತು! ದಕ್ಷನ ಪ್ರಶ್ನೆ ಬಂತು. ನಂದಿಯ ಕಡೆ ನೋಡುತ್ತ ನಸುನಗೆಗೂಡಿ ಶಿವ ಹೇಳಿದನಂತೆ. ದಕ್ಷನ ಮುಂಡಕ್ಕೆ ಯಜ್ಞ ಪಶುವಾದ ಆಡಿನ ತಲೆಯನ್ನು ಸಂಧಾನ ಮಾಡಿಬಿಡಿ. ಹೋತದ ಮುಖ! ಪಶುವಾಗಿ ಯಜ್ಞದಲ್ಲಿ ಬಲಿಯಾಗಬೇಕಾದದ್ದು, ಬಲಿಯಾಗಿ ಪೂರ್ಣಾಹುತಿಗೊಳ್ಳಬೇಕಾದ್ದು ಯಜಮಾನನ ಅಹಂಕಾರ ಎಂದು ಎಲ್ಲರಿಗೆ ಕಾಣುವಂತಾಗಲಿ. ಕರ್ಮ ಕಾಂಡದ ಹೊಗೆ ಮುಸುಕಿನಲ್ಲಿರುವ ಜ್ಞಾನದ ಬೆಳಕು ತಿಳಿಯಾಗಿ ಬೆಳಗಲಿ.

ಅಹಂಕಾರವು ತನ್ನನ್ನೇ ಉರಿಸಿಕೊಂಡು ಆ ಬೆಳಕಿನಲ್ಲಿ ‘ಸತ್ಯ’ವನ್ನು ಅರಸಬೇಕಲ್ಲದೆ ಬೇರೆ ಯಾವ ಬೆಳಕಿನಲ್ಲಿ ‘ಸತ್ಯ’ವನ್ನು ಅರಸಿದರೂ, ಅಹಂಕಾರವು ಅಹಂಕಾರವನ್ನೇ ಭೆಟ್ಟಿಯಾಗುವುದು ಎಂದು ತಿಳಿದಿರಲಿ.

ತೋಳ್ಪಾಡಿ ಭಾಗವತ 15:ಅಜಾಮಿಳನ ಮಗ ನಾರಾಯಣ

‘ಅರಿವು-ಮರೆವುಗಳ ಕಣ್ಣಾಮುಚ್ಚಾಲೆಯಾಗಿರುವಂತಿದೆ’ ಈ ಬದುಕು. ಮೊದಲು ‘ಅರಿವು’. ಅದಕ್ಕೆ ತಾನು ಅರಿವೆಂದೇ ತಿಳಿದಿರಲಿಲ್ಲವೇನೋ. ಅದು ನಿಜಕ್ಕೂ ಮುಗ್ಧವಾಗಿತ್ತೇನೋ. ಆದುದರಿಂದಲೇ ‘ಅರಿವು’ ತನ್ನನ್ನು ತಾನು ಮರೆತು- ಮೈಮರೆವಿನಲ್ಲಿ ಹುದುಗಿತು. ಬೆಳಕೆ ಬೆಳಕಾಗಿದ್ದು ಕತ್ತಲೆಯು ತುಂಬಿತು ಹೇಗೆ -ಎಂದು ಕವಿ ಕೇಳಿದಂತೆ. ನಾವಿದನ್ನು ಪಟ್ಟು ಹಿಡಿದು ಪ್ರಶ್ನಿಸುವುದು ಬೇಡ. ಕತ್ತಲೆ ತುಂಬಿದ್ದು ಹೌದು. ಅರಿವು ತನ್ನನ್ನು ಮರೆತುದು ಹೌದು. ಕತ್ತಲೆ ತಾನು ಕತ್ತಲೆ ಎಂದೇ ಮರೆತಿತ್ತಲ್ಲ. ಅಂಥ ಮೈ ಮರೆವು ಒಂದು ಉದ್ವೇಗವಾಗಿ, ಉದ್ವಿಗ್ನತೆ ಸಂಸಾರದಲ್ಲಿ ಬೇಕೆನಿಸುವುದೂ ಹೌದು. ಮರೆವು ಉಂಟಾದಂತೆ ಅರಿವೂ ಉಂಟಾಗಲಾರದೆ? ಮರೆತದ್ದು ನೆನಪಾಗಲಾರದೆ? ಕತ್ತಲೆ ಕಳೆದು ಬೆಳಕಾಗಲಾರದೆ? ನೆನಪಾಗುವುದೂ ಒಂದು ರೋಮಾಂಚನವಲ್ಲವೆ? ಇದುವರೆಗೆ ಇದ್ದುದು ಮರೆವು- ಕತ್ತಲೆ, ಎಂದು ಬೆಳಕಾಗುವಾಗಲೇ ತಿಳಿಯುವುದಾದರೆ, ತಾನು ಅರಿವು, ತಾನು ಬೆಳಕು ಎನ್ನುವುದೂ ಕತ್ತಲೆ ಕಳೆದ ಮೇಲಿನ ಬೆಳಕಿಗೇ ತಿಳಿಯುವುದಾಗಿರಬೇಕು! ಆಗ ಅರಿವಿನ ಅರಿವು! ಇದು ಅರಿವಿನ ಸಾಧ್ಯತೆ! ಅರಿವು ಇರುವ ಮನುಷ್ಯನ ಸಾಧ್ಯತೆ! ಈ ಅರಿವಿನ ಅರಿವನ್ನು ಉಪನಿಷತ್ತು ‘ಸತ್ಯಸ್ಯ ಸತ್ಯಂ’ -ಸತ್ಯದ ಸತ್ಯ ಎಂದು ಅದ್ಭುತವಾಗಿ ಕರೆದಿತ್ತು; ಯಾವ ಅರಿವನ್ನೂ ನಿರಾಕರಣ ಮಾಡದೆ.

ಅರಿವು-ಮರೆವು-ಅರಿವುಗಳ ಈ ಕಣ್ಣಾಮುಚ್ಚಾಲೆಯಲ್ಲಿ ‘ಅಭಿಜ್ಞಾನ’ವೊಂದು ಅಗತ್ಯವಾಗಿದೆ. ಅಭಿಜ್ಞಾನವೆಂದರೆ, ಮರೆತುದನ್ನು ನೆನಪಿಸುವ ಗುರುತು; ಕುರುಹು; ಒಂದು ಸಂಕೇತ. ಇದ್ದಕ್ಕಿದ್ದಂತೆ ದಾರಿ ಬದಲಿಸುವ ಸೂಚನೆಯನ್ನು ಕೊಡಬಲ್ಲ ಒಂದು ಸನ್ನೆ. ತಿರುವು. ನಿಜಕ್ಕಾದರೆ, ಈ ಲೋಕವೇ ಒಂದು ಅಭಿಜ್ಞಾನ. ನಾವೀ ಲೋಕಕ್ಕೆ ಬಂದೆವು. ಲೋಕವನ್ನು ಅವಲೋಕನ ಮಾಡಿದೆವು. ಅಂದರೆ ನೋಡಿದೆವು. ‘ಲೋಕ’ವೆಂದರೆ ನೋಡಲ್ಪಡುವಂಥದು ಎಂದೇ ಅರ್ಥ. ಲೋಕವನ್ನು ನೋಡಿದ್ದಕ್ಕೆ, ನೋಡಿದ ತಪ್ಪಿಗೆ ಯಾವುದನ್ನು ನೋಡಿದೆವೋ ಅದರಂತೆ ಆದೆವು. ನಮ್ಮೊಳಗಿನ ವಾಸನಾ ಪ್ರಪಂಚವನ್ನು ನಾವು ಕಂಡ ಲೋಕ; ನಾವು ಕಂಡ ದೃಶ್ಯವು ಪ್ರಚೋದಿಸಿತು. ಅಲ್ಲಿಗೆ ನಮ್ಮ ಮನಸ್ಸು ಚಲಿಸುವ ದಾರಿ, ಧಾಟಿ, ನಕಾಶೆಯೊಂದು ಸಿದ್ಧವಾಯಿತು. ಉಳಿದುದೆಲ್ಲ ಸಂಸಾರದ ಇತಿಹಾಸ! ಇಲ್ಲಿ ಲೋಕ, ಅಭಿಜ್ಞಾನವಾಗಿ ಕೆಲಸ ಮಾಡಿತೆನ್ನಬೇಕು. ಅದು ತನ್ನನ್ನು ಕಂಡ ನಮ್ಮನ್ನು ತನ್ನಂತೆ ಮಾಡಿತೆನ್ನಬೇಕು. ನಮ್ಮೊಳಗೆ ತನ್ನ ತದ್ರೂಪವನ್ನು ಸಾದೃಶ್ಯವನ್ನು, ಪ್ರತಿಬಿಂಬವನ್ನು, ಸಂತತಿಯನ್ನು ಸೃಷ್ಟಿಸಿತೆನ್ನಬೇಕು! ಇದು ಇಂದ್ರಿಯ ಲೋಕ!

ಇನ್ನೊಂದು ರೀತಿಯ ಅಭಿಜ್ಞಾನವಿದೆ. ಕವಿ ವಾಲ್ಮೀಕಿಗೆ ಕ್ರೌಂಚಪಕ್ಷಿಯ ದುರಂತವನ್ನು ಕಂಡಾಗ ಉಂಟಾದ ಸಂವೇದನೆಯಂಥದು. ಈ ಲೋಕದಲ್ಲಿ ನಿಜಕ್ಕೂ ಗುಣಾಢ್ಯನೊಬ್ಬನಿದ್ದಾನೆಯೆ ಎಂಬ ವಾಲ್ಮೀಕಿಯ ಪ್ರಶ್ನೆಗೆ ನಾರದ ರಾಮನ ಕಥೆಯನ್ನು ಹೇಳಿದ್ದ. ಆ ಕಥೆ ವಾಲ್ಮೀಕಿಯ ಮನದಲ್ಲಿ ಸುಳಿಯುತ್ತಿತ್ತು. ಆಗ ಅವನ ಕಣ್ಣ ಮುಂದೆ ನಡೆಯಿತು ಕ್ರೌಂಚ ಹಕ್ಕಿಯ ದುರಂತ ನಾಟಕ. ಸರಸದಲ್ಲಿದ್ದವು ಎರಡು ಹಕ್ಕಿಗಳು. ಬೇಟೆಗಾರನೊಬ್ಬ ಮರೆಯಿಂದ ಬಾಣ ಹೊಡೆದ. ಬಿದ್ದುರುಳಿದ್ದು ಗಂಡು ಹಕ್ಕಿ. ರಸಭಂಗವಾಯಿತು. ಹೆಣ್ಣು ಕ್ರೌಂಚ ಹೊರಳಿ ಹೊರಳಿ ಅತ್ತಿತು. ಇದನ್ನೆಲ್ಲ ನೋಡುತ್ತಿದ್ದ ವಾಲ್ಮೀಕಿಯಲ್ಲಿ ಕರುಣಭಾವ ಉಕ್ಕಿತು. ರಸಭಂಗದ ಪರಿಣಾಮವಾಗಿ ಹೊಸ ರಸವೊಂದು ಚಿಮ್ಮಿತು. ಇಲ್ಲಿಯೂ ಕ್ರೌಂಚ ದುರಂತ ಅಭಿಜ್ಞಾನವಾಗಿ ಕೆಲಸ ಮಾಡಿತು. ಆದರೆ, ಇಲ್ಲಿ ವಾಲ್ಮೀಕಿಯ ಅಂತ:ಕರಣ ಲೋಕದ ತದ್ರೂಪವನ್ನು ಪಡೆಯುವುದಿಲ್ಲ. ಲೋಕ ಹೀಗಿರಬಾರದು; ಈ ಕ್ರೌರ್ಯ ಸಲ್ಲದು ಎಂಬ ಭಾವವಿಲ್ಲಿದೆ. ಕ್ರೂರ ಲೋಕವನ್ನು ಕರುಣದಿಂದ ತಿದ್ದುವ ಪರಿ ಇದೆ. ಇದು ಕಲೆಯ ಲೋಕ. ಕಾವ್ಯದ ಲೋಕ. ಮನಸ್ಸಿನ ಪರಿಣಾಮದ ಲೋಕ. ಇಲ್ಲಿ ಎಚ್ಚರವಿದೆ. ಮರೆವು ಎಚ್ಚರವಾಗಿ, ಅಭಿಜ್ಞಾನವು ಇಲ್ಲಿ ಸೂಕ್ಷ್ಮವಾಗಿದೆ. ಇಲ್ಲಿ ಅಂತ:ಕರಣಕ್ಕೆ ತನ್ನದೇ ಕಾಣ್ಕೆ ಇದೆ.

ಇನ್ನೂ ಒಂದು ರೀತಿಯ ಅಭಿಜ್ಞಾನವಿದೆ ಎನ್ನುತ್ತದೆ ಭಾಗವತ. ಇದು ಅರಿವಿನ ಅರಿವನ್ನು, ಸತ್ಯದ ಸತ್ಯವನ್ನು ನೆನಪಿಸುವ ಅಭಿಜ್ಞಾನ. ಶಬ್ದದ ವಾಚ್ಯವಾದ ಬಳಕೆಯ ಅರ್ಥವನ್ನಲ್ಲ, ಶಬ್ದದ ‘ಧ್ವನಿ ಶಕ್ತಿ’ಯನ್ನು ಉದ್ದೀಪಿಸುವ ಅಭಿಜ್ಞಾನ. ‘ಹಂಸ’ ಎಂದಾಗ ‘ಸೋ ಹಂ’ (ಅವನೇ ನಾನು) ಎಂಬುದು ತಿರುವು ಮುರುವಾಗಿ ಕುಳಿತಂತಿದೆ ಎಂದು ಉದ್ದೀಪನವಾಗುವ ಧ್ವನಿಶಕ್ತಿ ಇದು. ‘ಕೃಷ್ಣ’ ಎಂದಾಗ ಆಕರ್ಷಣೆಯಂಟಾಗಿ, ಕೃಷ್ಣ ಎಂಬ ಪದಕ್ಕೆ ಕಪ್ಪು ಎಂದಲ್ಲ ಆಕರ್ಷಣೆ ಎನ್ನುವುದೇ ನಿಜವಾದ ಅರ್ಥ- ನಮಗೇನು ಅನುಭವವಾಗುವುದೋ ಅದೇ ಆ ಪದದ ಅರ್ಥ- ಎಂಬ ಉದ್ದೀಪನವಾಗುವ ಧ್ವನಿ ಶಕ್ತಿ ಇದು. ಗುಡುಗು ಮೂರು ಬಾರಿ ಗುಡುಗಿದಾಗ ‘ದ-ದ-ದ’ ಎಂದಂತೆ ಕೇಳಿಸಿತಂತೆ ಉಪನಿಷತ್ತಿನ ಋಷಿಗಳಿಗೆ. ಹಾಗೆಂದರೆ, ದತ್ತ; ದಯಧ್ವಂ; ದಮ್ಯತ- ದಾನಮಾಡು; ದಯೆ ಇಡು; ಇಂದ್ರಿಯ ದಮನ ಮಾಡು ಎಂಬ ಅರ್ಥವಂತೆ. ಇಂಥ ಸ್ಫುರಣವಾಗುವುದಕ್ಕೆ, ಈ ಅರ್ಥ ನೆನಪಾಗುವುದಕ್ಕೆ ಕಾರಣವಾಗುವ ಅಭಿಜ್ಞಾನ, ಧ್ವನಿ ಶಕ್ತಿ ಒಂದಿದೆಯಂತೆ. ಅಂಥದೊಂದು ಕಥೆ ಇದು. ಅಜಾಮಿಳೋಪಾಖ್ಯಾನ:ಚಿತ್ರ: ಎಂ.ಆರ್.ಪಾವಂಜೆ

ಅವನೊಬ್ಬ ಬ್ರಾಹ್ಮಣ. ಸರಳ; ಮಿತಭಾಷಿ, ಭೂತದಯಾಪರ, ಮಂತ್ರಜ್ಞ; ಸಾತ್ತ್ವಿಕ; ವಿದ್ವಾಂಸನಿದ್ದ.  ಗುರು, ಅಗ್ನಿ, ಅತಿಥಿ, ಹಿರಿಯರ ಸೇವೆ ಮಾಡುತ್ತಿದ್ದ. ಅವನ ಸುತ್ತಲಿನ ಸನ್ನಿವೇಶಕ್ಕೆ ತಕ್ಕಂತೆ, ತದ್ರೂಪವಾಗಿ ಇದ್ದ. ವಿರುದ್ಧವನ್ನು ಎಣಿಸುವವನೇ ಅಲ್ಲ. ಇದೇ ತಾನೇ ಸರಳತೆ; ಸಾತ್ತ್ವಿಕತೆ! ಅವನ ಹೆಸರು ಅಜಾಮಿಳ. ಮನೆಯ ಪಕ್ಕದಲ್ಲಿ ಕಾಡು. ಸಮಿಧೆಗಾಗಿ, ಹೂ-ಹಣ್ಣುಗಳಿಗಾಗಿ, ಕಟ್ಟಿಗೆಗಾಗಿ ಕಾಡಿನಲ್ಲಿ ತಿರುಗಾಟವಿದ್ದೇ ಇದೆ ಅಜಾಮಿಳನಿಗೆ. ಇಂಥ ಒಂದು ದಿನ ತಿರುಗಾಟದಲ್ಲಿ, ಅದುವರೆಗೆ ತಾನು ನೋಡದ ನೋಟವೊಂದನ್ನು ನೋಡಬಾರದ್ದನ್ನು (?) ನೋಡಿದ. ಸುಂದರಿಯಾದ ಒಬ್ಬಳು ಹೆಣ್ಣು, ಆಕೆಯ ಮೈಗೆ ಒರಗಿರುವ ಓರ್ವ ಗಂಡು, ಪಕ್ಕದಲ್ಲಿ ಮದ್ಯದ ಮಡಕೆ! ಇಬ್ಬರಿಗೂ ನಶೆ ಏರಿದೆ. ಅರಿವೆಯೂ ಇಲ್ಲ; ಪರಿವೆಯೂ ಇಲ್ಲ; ಲೋಕಕ್ಕೆಲ್ಲ ತಾವಿಬ್ಬರೇ ಎಂಬಂತೆ, ಅಥವಾ ಲೋಕವೇ ಸುಳ್ಳೆಂಬಂತೆ- ಮೈಯ ಮೋಜಿನ ಮೇಜವಾನಿಯಲ್ಲಿ ಕಾಡಕುದುರೆ ಕೆನೆಯುತ್ತಿದ್ದಂತೆ ಕಾಮ ಕಾಡ್ಗಿಚ್ಚಿನಂತೆ ಉರಿಯುತ್ತಿದ್ದ. ನಿಜಕ್ಕೂ ಕಾಡೆಂಬುದೇ ಒಂದು ರೂಪಕ! ಕಾಡೆಂಬುದೇ ಅನೂಹ್ಯ ಆಕರ್ಷಣೆ! ಕಟ್ಟಿದ್ದನ್ನೆಲ್ಲ ಕೆಡಹೆನ್ನುವುದೇ ಕಾಡಿನ ಕರೆ! ಆ ಕರೆ ಕೇಳದಂತೆ ಬದುಕುವುದೇ ಅಸಾಧ್ಯ. ನಿಜಕ್ಕೂ ಕಾಡು ದೂರದಲ್ಲಿಲ್ಲ. ಪಕ್ಕದಲ್ಲೇ ಇದೆ. ಸುಮ್ಮನೆ ಮೈ ಮುರಿದರೆ ಅಲ್ಲಿ ಕಾಡು ಸಿಕ್ಕೀತು. ಕಾಡಿನ ಕಡೆಗೆ ನಡೆಯುವುದೇ ಹೆಜ್ಜೆಗೆ ಸಹಜ ಗತಿ!

ಈ ಅಜಾಮಿಳನೆಂಬ ಯವಕ, ದೇಹ; ಮನಸ್ಸು; ಬುದ್ಧಿಗಳಿಗೆ ಶಾಸ್ತ್ರೀಯವಾದ ತರಬೇತಿಯನ್ನು ಕೊಡುತ್ತಿದ್ದವ- ಇವನಿಗೆ ಮೊತ್ತ ಮೊದಲ ಬಾರಿಗೆ ಕಾಡಿನ ಪರಿಚಯವಾಯಿತು! ಮದಜಲ ಸುರಿಯುತ್ತಿದ್ದಂತೆ ಮದ್ದಾನೆ, ಹೆಮ್ಮರಗಳನ್ನು ಮುರಿಯುವುದೇಕೆಂದು ಗೊತ್ತಾಯಿತು. ಅಂದಿನಿಂದ ಅಜಾಮಿಳನಿಗೆ ಮನೆಯ ದಾರಿ ಮರೆತು ಹೋಯಿತು. ಅದುವರೆಗಿನ ಬದುಕೇ ತೀರ ಜೊಳ್ಳು ಎನಿಸಿ ಬಿಟ್ಟಿತು. ಆ ಕಾಡ ಹುಡುಗಿಯ ಜತೆ ಬಾಳದಿದ್ದರೆ ಬದುಕು ಬದುಕೇ ಅಲ್ಲ ಎನ್ನಿಸಿಬಿಟ್ಟಿತು. ಯಜ್ಞಕ್ಕೆ ಬೇರೆಯೇ ಅರ್ಥ ಬಂದೊದಗಿತು. ಪ್ರಕೃತಿಯನ್ನು ಪಳಗಿಸುವ ಪ್ರಯತ್ನವಷ್ಟೂ  ವ್ಯರ್ಥ ಪ್ರಯಾಸ ಎಂಬ ಹೊಸ ಕಾಣ್ಕೆ ಉಂಟಾಯಿತು. ಅವನು ತಾನು ಕಂಡ ಕಾಡಿನ ಹುಡುಗಿಯ ಸಂಗದಲ್ಲಿ, ಪಳಗಿಸುವುದೇ ದೈನಿಕವಾಗಿರುವ ಲೋಕವನ್ನು ಮರೆತ. ಲೋಕವೂ ಅವನನ್ನು ಮರೆಯಿತು.

ಕಾಡಿನ ಸಂಸಾರ ಬೆಳೆಯಿತು. ಮಕ್ಕಳಾದವು. ಎಲ್ಲ ಮಕ್ಕಳ ಮೇಲೂ ಪ್ರೀತಿ ಇದ್ದರೂ ಅಜಾಮಿಳನಿಗೆ ಕೊನೆಯ ಮಗನ ಮೇಲೆ ಇನ್ನಿಲ್ಲದ ಅಕ್ಕರೆ ಸೂಸುತ್ತಿತ್ತು. ಆ ಕೊನೆಯ ಮಗನ ಹೆಸರು ‘ನಾರಾಯಣ’.  ಬಾಯ್ತುಂಬ ಹೆಸರು ಹೇಳಿ ಅವನನ್ನು ಕರೆದರೆ, ಅಜಾಮಿಳನಿಗೆ ಏನೋ ಹೇಳಲಾಗದ ಸಂತೋಷವಾಗುತ್ತಿತ್ತು. ಓಡೋಡುತ್ತಿವೆಯೋ ಎಂಬಂತೆ ದಿನ-ರಾತ್ರಿಗಳು ಉರುಳಿದವು. ಕಾಡಿನಲ್ಲಿ ಚಳಿಗಾಲದಲ್ಲಿ ಎಲೆ ಉದುರಿಸುವ ಮರಗಳು ಮರಳಿ ವಸಂತದಲ್ಲಿ ಹೊಸ ನನೆಯ ಸಂಭ್ರಮ ಅನುಭವಿಸುತ್ತಿರುವುದು ಅಜಾಮಿಳನಿಗೆ ಕಾಣಿಸುತ್ತಿತ್ತಾದರೂ, ಮನುಷ್ಯ ಜೀವಕ್ಕೆ ಮಾತ್ರ ಆ ಭಾಗ್ಯವಿಲ್ಲ ಎನ್ನುವಂತೆ ಕಡು ಮುಪ್ಪು ಅವನನ್ನು ಆವರಿಸಿತು. ಸಾವಿನ ನೆರಳು ಕವಿಯುತ್ತಿತ್ತು. ಅದರ ನೀಳ ತೋಳು ಕೊರಳನ್ನು ಔಕುವಂತೆ ಅವನಿಗೆ ಭಾಸವಾಗುತ್ತಿತ್ತು. ಸಾವಿನ ಕುರಿತೇ ಚಿಂತೆ ಶುರುವಾಯಿತು. ಒಂದಿರುಳು ಅಜಾಮಿಳನಿಗೆ ಘೋರ ರೂಪದ ಯಮದೂತರೇ ಕಣ್ಣೆದುರು ನಿಂತಂತಾಯಿತು. ಅವರ ಕೈಯಲ್ಲಿ ಯಮಪಾಶ! ಹೌದು ಮತ್ತೆ. ಯಾವ ಜೀವಿ ತಾನೇ ಸಾಯಲು ಸಿದ್ಧವಿದೆ? ಪಾಶ ಹಾಕಿ ದರದರ ಎಳಕೊಂಡು ಹೋಗಬೇಕಷ್ಟೆ. ಅವರ ಕಣ್ಣು ನಿರ್ದಯವಾಗಿ ದುರುಗುಟ್ಟುತ್ತಿದ್ದವು. ಘೋರ ದೃಶ್ಯ.  ಅಜಾಮಿಳನಿಗೆ ನಿಜಕ್ಕೂ ಭಯವಾಯಿತು. ತನ್ನ ಮಗನನ್ನೇ ಇರಬೇಕು; ‘ನಾರಾಯಣ’ ಎಂದು ಕೂಗಿ ಕರೆದ! ಮರುಕ್ಷಣ ಬಾಹ್ಯ ಪ್ರಜ್ಞೆ ತಪ್ಪಿತು.

ಯಮದೂತರು ಎಂದಿನಂತೆ ಜೀವವನ್ನು ಹೊರ ಸೆಳೆದು ಕೊಂಡೊಯ್ಯುವ ಕೆಲಸಕ್ಕೆ ಉಪಕ್ರಮಿಸಬೇಕು- ಅಷ್ಟರಲ್ಲಿ ಅಲ್ಲಿಗೆ ಪ್ರಸನ್ನ ರೂಪದ ವಿಷ್ಣು ದೂತರು ಹೊದ್ದ ಪೀತಾಂಬರದ ನೆರಿಯಂತೆ ಶಾಂತವಾದ ನಗು ತುಳುಕಿಸುತ್ತ ಬಂದರಂತೆ. ಆಗ ಅವರೊಳಗೆ ಹೀಗೊಂದು ಸಂವಾದ ಶುರುವಿಟ್ಟಿತು.

ಯಮದೂತರು: ನೀವೇಕೆ ಇಲ್ಲಿ? ಇದು ಪಾಪಿಯೊಬ್ಬನ ಸಾವಿನ ಸೂತಕದ ಜಾಗ. ಇಂಥಲ್ಲಿ ನಿಮ್ಮನ್ನು ನಿರೀಕ್ಷಿಸಿರಲಿಲ್ಲ.

ವಿಷ್ಣು ದೂತರು: ಪಾಪ! ನೀವು ಯಮದೂತರು. ಅನಿರೀಕ್ಷಿತವಾದುದು ಎಂದೂ ನಿಮ್ಮ ಅನುಭವಕ್ಕೆ ಬಂದಿಲ್ಲ. ಹುಟ್ಟಿದ ಮೇಲೆ ಎಲ್ಲ ಜೀವಿಗಳಿಗೂ ಸಾವು ನಿರೀಕ್ಷಿತವೇ ಅಲ್ಲವೆ? ನಮಗೆ ಹಾಗಲ್ಲ. ನಾವು ಅನಿರೀಕ್ಷಿತದ ಕಡೆಗೆ ಸದಾ ಒಂದು ಮನಸ್ಸನ್ನಿಟ್ಟ ಮಂದಿ. ಅಜಾಮಿಳನೆಂಬ ಈ ಜೀವ ನಮ್ಮವನು!  ನಿಮಗೆ ಸೇರಬೇಕಾದವನಲ್ಲ.

ಯಮದೂತರು: ಈತ ಪಾಪಿ. ತನ್ನ ಪೂರ್ವ ಸಂಸ್ಕಾರವನ್ನು ಮರೆತು ಕಾಮುಕನಾಗಿ ಇಷ್ಟು ಕಾಲ ಬದುಕಿದ. ಇವನು ನಿಮ್ಮವನಾಗುವುದೆಂತು!

ವಿಷ್ಣುದೂತರು: ನಿಮಗೆ ಪಾಪದ ಕಡೆಗೇ ಕಣ್ಣು! ನಮಗೋ ಪುಣ್ಯದ ಕಡೆಗೆ. ಆತನು ನುಡಿದ ‘ನಾರಾಯಣ’ ನಾಮ ನಿಮಗೆ ಕೇಳಿಸಲಿಲ್ಲವೇನು? ನಾರಾಯಣನೆಂದರೆ ಯಮನೇನು? ಹೋಗಿ, ಯಮನನ್ನೇ ಕೇಳಿ.

ಯಮದೂತರು: ಈತ ‘ನಾರಾಯಣ’ ಎಂದದ್ದು ಹೌದು. ಅದು ಈ ಪಾಪಿಯ ಮಗನ ಹೆಸರು.  ಸಾಯುವ ಭಯದಲ್ಲಿ ಮಗನನ್ನು ಕರೆದ ಅಷ್ಟೆ!

ವಿಷ್ಣುದೂತರು: ಹೋ ಹೋ ನಿಲ್ಲಿಸಿ ನಿಮ್ಮ ತಲೆ ಹರಟೆ. ‘ನಾರಾಯಣ’ ಎಂದರೆ, ಈತನ ಮಗನ ಹೆಸರೇನು? ‘ನಾರಾಯಣ’ ಎಂದರೆ ಲೋಕದ ಅಧಿ ದೈವದ ಹೆಸರು. ಕಾಣುವ, ಕಾಣದ, ಜೀವನದ ಸಾರಭೂತವಾದ ವಸ್ತು ಎಂದು ಆ ನಾಮದ ಅರ್ಥ. ಈ ಅಜಾಮಿಳ ಆ ‘ನಾರಾಯಣ’ ನಾಮವನ್ನು ಉಚ್ಚರಿಸಿದನೋ ಇಲ್ಲವೋ- ತತ್ ಕ್ಷಣ- ಈತನ ಬಾಲ್ಯದ ಸಂಸ್ಕಾರಗಳೆಲ್ಲ ಉದ್ ಬುದ್ಧವಾಗಿ, ಈತ ಒಂದು ಹಸುಳೆಯೇ ಆಗಿ, ನಿಸ್ಸಹಾಯಕನಾಗಿ, ಭಗವಂತನನ್ನು ನೆನೆದ. ತಾನೇ ಮಗುವಿನಂತಾಗಿ ತಂದೆಯಂಥ ದೇವರನ್ನು ಕರೆದ. ನಿಮ್ಮನ್ನು ಕಂಡವನಿಗೆ ತಾನು ಮಕ್ಕಳ ತಂದೆ ಎಂಬ ಅಹಂಕಾರವಾದರೂ ಉಳಿಯುತ್ತದೆಯೇ! ಅದೇ ನೀವು ಮಾಡುವ ಉಪಕಾರ! ಅದೇ ನಿಮಗೆ ಗೊತ್ತಿಲ್ಲ.  ತಾನು ಮಗುವಿನಂತಾಗದೆ, ತಂದೆಯನ್ನು ಕರೆಯಲಾಗದು. ಈತ ತನ್ನ ಮಗನ ನೆನಪಿನಲ್ಲಿ ತಾನು ಮಗನಂತೇ ಆಗುತ್ತಿದ್ದನಯ್ಯ. ಯಾವಾಗ ದೇವರ ನಾಮ ಉಚ್ಚರಿಸಿದನೋ ಆಗ ಇದು ಜಗದ ತಂದೆಯ ಹೆಸರು ಎಂದು ಅರಿವಿಗೆ ಬಂದು, ದೇವರ ಸಂಸಾರಕ್ಕೆ ಸೇರಿ ಬಿಟ್ಟನಯ್ಯ. ಇದು ಸಂಸಾರದ ಮಹತ್ತ್ವ.  ಸಂಸಾರದಲ್ಲಿ ಅಡಗಿರುವ ದೇವರ ನಾಮದ ಮಹತ್ತ್ವ. ನೀವು, ಯಮದೂತರು. ಬರೀ ವಾಚ್ಯಾರ್ಥ ನೋಡುತ್ತೀರಿ. ಬರಿಯ ಮೇಲ್ನೋಟದ ಅರಿವು ನಿಮ್ಮದು. ಆದರೆ, ಅರಿವಿನ ಅರಿವು ಒಂದಿದೆ. ಸತ್ಯದ ಸತ್ಯ ಎಂದ ಹಾಗೆ. ಇದನ್ನೇ ಸ್ವಲ್ಪ ಮುಂದುವರಿಸಿ, ‘ಸಾವಿನ ಸಾವೂ’ ಒಂದಿದೆ ಎಂದರೆ ತಬ್ಬಿಬ್ಬಾಗಬೇಡಿ.  ನಿಮ್ಮೊಡೆಯನಾದ ಯಮನಲ್ಲಿ ಹೋಗಿ ಕೇಳಿ. ನೀನೇ ಎಲ್ಲದಕ್ಕೂ ಕೊನೆಯೋ? ಅಥವಾ ನಿನಗೂ ಕೊನೆ ಎಂಬುದುಂಟೋ? ಇದ್ದರೆ, ಆ ಕೊನೆಯುಂಟು ಮಾಡುವವನು ಯಾರು ಎಂದು ಕೇಳಿ. ಯಮನಿಗೆ ಯಮನಾರೆಂದರೆ ಅವನೊಬ್ಬನೇ ‘ನಾರಾಯಣ’. ‘ನಾರಾಯಣ’ನನ್ನು ಕೂಗಿಕರೆದರೆ ನಾವು ತಪ್ಪದೆ ಬರುತ್ತೇವೆ. ಇನ್ನೊಮ್ಮೆ ಹೇಳುತ್ತೇವೆ. ಈ ‘ಜೀವ’ ನಮ್ಮವನು.

ಯಮದೂತರು: ಹಾಗಾದರೆ, ಈ ಅಜಾಮಿಳ ಪಾಪ ಮಾಡಿಲ್ಲವೆ? ಅದಕ್ಕೇನು ಉತ್ತರ?

ವಿಷ್ಣುದೂತರು: ಪಾಪ? ಎಲ್ಲಿದೆ ಅದು ಈಗ? ಕಾಡ್ಗಿಚ್ಚಿಗೆ ಕಾಡನ್ನು ಸುಟ್ಟು ಬೂದಿ ಮಾಡುವುದಕ್ಕೆ ಎಷ್ಟು ಹೊತ್ತು ಬೇಕೆನ್ನುತ್ತೀರಿ? ಮೂರು ತಿಂಗಳ ಬೇಸಗೆಯ ಉರಿ ಒಂದು ಮಳೆಗೆ ತಂಪಾಗುವುದಿಲ್ಲವೆ?  ನಿಮಗೆ ಇಷ್ಟು ಕಾಲ ನರಕದ ಶಿಕ್ಷೆ, ಇಷ್ಟು ಕಾಲ ಸ್ವರ್ಗದ ಪುರಸ್ಕಾರ ಎಂದು ಕಾಲ ಗಣನೆ ಮಾಡಿ ಮಾತ್ರ ಗೊತ್ತು. ಇದೇ ದೊಡ್ಡ ಆಶ್ಚರ್ಯ! ಶಿಕ್ಷೆ ಕೊಡುವುದಕ್ಕೆ ನಿಯುಕ್ತರಾದವರಿಗೆ ಪಶ್ಚಾತ್ತಾಪದ ಮಹತ್ತ್ವವೇ ತಿಳಿಯದೆ ಹೋಗುವುದು!

ಅಜಾಮಿಳ, ಯಾವಾಗ ‘ನಾರಾಯಣ’ ನಾಮ ಉಚ್ಚರಿಸಿದ ಆ ನಾಮದ ಮಾಂಗಲ್ಯದಿಂದಾಗಿಯೇ ಅವನಾಳದಲ್ಲಿ ಪಶ್ಚಾತ್ತಾಪದ ಅಗ್ನಿ ಹೋತ್ರ ಉರಿಯಲಾರಂಭಿಸಿತು. ಅಗ್ನಿ ಶುದ್ಧಿ! ತಾನು ನಾಮೋಚ್ಚಾರ ಮಾಡಿದ ಕೂಡಲೇ ತನ್ನ ಬಳಿಗೆ ಬಂದ ಭಗವಂತ! ಅಂದರೆ ತಾನು ಹೇಗಿದ್ದರೂ, ಅವನನ್ನು ಮರೆತೇ ಬಾಳಿದ್ದರೂ, ಅವನು ತನ್ನನ್ನು ಮರೆತಿರಲಿಲ್ಲ! ಆದುದರಿಂದಲೇ ಯಾರನ್ನೇ ಕರೆದರೂ, ಅವನನ್ನೇ ಕರೆದಂತೆ, ಎಂದು ಅವನಿಗೆ ತಿಳಿದಿತ್ತು. ತನಗೆ ಬೇಕಾದಂತೆ ತಾನು ಬದುಕಿದರೂ, ಅವನು ತಾನು ಕರೆದಾಗ ಓಗೊಡದೇ ಇರಲಿಲ್ಲ. ಓಗೊಡುವುದೇ ಅವನ ಸ್ವಭಾವ.  ಅವನ ಚರಿತ್ರೆ. ಆದುದರಿಂದ ಈಗ ತಾನು ಹೇಳಬೇಕಾದುದೇನು? ನಿನಗೆ ಬೇಕಾದಂತೆ ನಾನು ಬದುಕುವ ಹಾಗೆ ಕರುಣಿಸು- ಎಂದಲ್ಲದೆ!

ಅಜಾಮಿಳನ ಹಿಂದಣ ಉದ್ರೇಕವೆಲ್ಲ ಈಗ ಪಶ್ಚಾತ್ತಾಪವಾಗಿ ಹರಿಯುತ್ತಿದೆ. ಹೀಗೆ ಪಶ್ಚಾತ್ತಾಪವಾಗದಿದ್ದರೆ, ದೇವರನ್ನು ಧಾರಣ ಮಾಡುವುದು ಸಾಧ್ಯವಿರಲಿಲ್ಲ. ಅಥವಾ ಪಶ್ಚಾತ್ತಾಪಕ್ಕೆ ದೇವರನ್ನು ಧಾರಣ ಮಾಡುವ ಸಾಮರ್ಥ್ಯ ಎನ್ನುವುದಕ್ಕಿಂತ ತನ್ನನ್ನು ಧಾರಣ ಮಾಡಿಕೊಳ್ಳುವಂತೆ ದೇವರು ಜೀವಿಯಲ್ಲಿ ಪಶ್ಚಾತ್ತಾಪ ಭಾವಕ್ಕೆ ಎಡೆಕೊಡುತ್ತಿದ್ದಾನೆ ಎಂದರೆ ಹೆಚ್ಚು ಸರಿ.

ಪಶ್ಚಾತ್ತಾಪವೆನ್ನುವುದು ಜನ್ಮ ನಿವೃತ್ತಿಗೆ ಕಾರಣವಾಗಬಲ್ಲುದು. ಪಶ್ಚಾತ್ತಾಪ ಪಡುವುದು ಅಂತ:ಕರಣದ ಅಸಾಧಾರಣ ಸಾಮರ್ಥ್ಯ. ಪೆಡಸು ಮನಸ್ಸಿಗೆ ಇದು ಸಾಧ್ಯವೇ ಇಲ್ಲ. ರಸಾಲ ಮನಸ್ಸಿಗೆ ಮಾತ್ರ ಸಾಧ್ಯ.  ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುತ್ತ ಅಜಾಮಿಳ ತಾನು ಹಿಂದೆ ಬದುಕಿದ್ದ ಇಂದ್ರಿಯೋದ್ರೇಕದ ಬದುಕನ್ನು ಇನ್ನೊಮ್ಮೆ ಇನ್ನೊಂದು ರೀತಿಯಲ್ಲಿ ಬದುಕುತ್ತಿದ್ದಾನೆ. ಈಗ ಬದುಕು ಪೂರ್ತಿಯಾಯಿತು.   ಬದುಕಿನ ಪೂರ್ವಾರ್ಧ ಮತ್ತು ಉತ್ತರಾರ್ಧಗಳು ಸೇರಿದವು.

‘ನಾಮ’ದಲ್ಲಿ ಕರಗಿದ್ದಾನೆ; ಕರಗುತ್ತಾನೆ ‘ಜೀವ;. ನಮ್ಮನ್ನು ಕರಗಿಸುವಂಥದು ಒಂದಿದೆ ಎಂದು ತಿಳಿಯುವುದೇ ಆಗ. ದೇವರ ನಾಮವೆಂದರೆ, ಜೀವ ಕರಗುವ ಹೊತ್ತು! ಇನ್ನೊಮ್ಮೆ ಹೇಳುತ್ತೇವೆ; ಈ ಜೀವ ನಮ್ಮದು ಎಂದರಂತೆ ವಿಷ್ಣು ದೂತರು.

ತನ್ನೊಳಗೇ ನಡೆಯುತ್ತಿದ್ದ ಈ ಅಸಾಧಾರಣವಾದ ಸಂವಾದವನ್ನು ಸುಪ್ತವಾಗಿಯೇ ಕೇಳುತ್ತಿದ್ದನಂತೆ ಅಜಾಮಿಳ. ‘ಈ ಜೀವ ನಮ್ಮದು’ -ಎಂಬ ಮಾತು ಕೇಳುತ್ತಿದ್ದಂತೆ ಅವನಲ್ಲಿ ಕಂಬನಿಯುಕ್ಕಿತಂತೆ. ಆ ಒಂದು ಮಾತು ಕೇಳುವುದೇ ಬದುಕಿನ ಸಾರ್ಥಕತೆಯೇನು!

ತೋಳ್ಪಾಡಿ ಭಾಗವತ 16:ಕಣ್ಣು ಕೊಟ್ಟು ನೋಟವನ್ನೂ ಕೊಟ್ಟ ಭಗವಂತ

ಅಜಾಮಿಳನಿಗೆ ಉಂಟಾದ ಎಚ್ಚರ; ಅರಿವು- ಅಸಾಧಾರಣವಾದುದು. ತನ್ನನ್ನು ಕುರಿತಾಗಿಯೇ ಈ ಜೀವ ನಮ್ಮದು ಎಂಬ ಉಲ್ಲೇಖವನ್ನು ತನ್ನೊಳಗೇ ಕೇಳಿದ್ದರಿಂದ ಉಂಟಾದ ಅರಿವಿನ ಉದ್ದೀಪನವದು. ಅಪ್ರಜ್ಞಾ ಪೂರ್ವಕವಾಗಿ ನಡೆದುದು. ಪ್ರಜ್ಞಾಪೂರ್ವಕವಾಗಿ, ಎಂದರೆ, ಹೀಗೆ ಮಾಡಿದುದರಿಂದ ಹೀಗಾಯಿತು ಎಂದು ಕಾರ್ಯ- ಕಾರಣ ಸಂಬಂಧವನ್ನು ಹೇಳಲು ಸಾಧ್ಯವಾಗುವಂತೆ ಉಂಟಾದ ಉದ್ದೀಪನವಲ್ಲ.  ನಾವು ಪೂರ್ತಿ ಮರೆತರೂ, ತಾನು ನಮ್ಮನ್ನು ಎಂದೂ ಮರೆಯದ ಚೈತನ್ಯವೊಂದು ನಮ್ಮೊಳಗೆ ಇರುವುದಾದರೆ, ನಮ್ಮ ಮತ್ತು ಅದರ ಸಂಬಂಧ ತರ್ಕಬದ್ಧವೂ ವಿವರಿಸಲಾಗುವಂತೆ ವ್ಯವಸ್ಥಿತವೂ ಆಗಿರುವುದು ಸಾಧ್ಯವೇ ಇಲ್ಲ. ಮರೆಯುವ ನಾವು ಮನುಷ್ಯ ಜೀವಗಳು. ಮರೆಯದ, ಮರೆವು ಎನ್ನುವುದೇ ತಿಳಿಯದ ಅದು ನಾವು ದೇವರೆಂದು ಕರೆಯುವ ಪರಾತ್ಪರ ವಸ್ತು! ನಾವು ಮರೆತೆವು!  ನಮ್ಮ ಮರೆವೂ ಗಾಢ. ಅದು ಮರೆಯಲಾರದು. ಅದರ ನೆನಪೂ ಗಾಢ. ಎಷ್ಟು ಗಾಢವೆಂದರೆ, ಪ್ರಾಯ: ನಾವದನ್ನು ಮರೆತುದನ್ನು ಅದು ಎಂದೂ ವಿರೋಧಿಸಲಿಲ್ಲ. ಈ ಅರ್ಥದಲ್ಲಿ ಮರೆವಿಗೆ ಅದೇ ಅನುವು ಮಾಡಿಕೊಟ್ಟಿತ್ತು! ಕೃಷ್ಣ ಭಗವಂತ, ಜೀವಿಗಳಲ್ಲಿ ತನ್ನ ನೆನಪನ್ನು ಮೀಟುವವನೂ ತಾನೇ, ಮರೆವಿನ ಮುಸಕನ್ನು ಹೊದಿಸುವವನೂ ತಾನೇ ಎಂದದ್ದುಂಟು. ಭಗವಂತನನ್ನು ಮರೆತೆನೆನ್ನುವ ಪಾಪ ಪ್ರಜ್ಞೆಯಲ್ಲಿ ಜೀವಿ ಸಂಕಟಪಡುವುದು ಭಗವಂತನಿಗೆ ಬೇಕಿಲ್ಲ ಎಂದು ಈ ಮಾತಿನ ಭಾವ. ನಮ್ಮೊಡನೆ, ನಮ್ಮನ್ನು ಎಂದೂ ಮರೆಯದ ವಸ್ತುವಿನ ಚೇಷ್ಟೆ ಸ್ವಭಾವ; ರೀತಿಗಳೇ ಬೇರೆ ಇರುತ್ತವೆ. ಅದನ್ನು ಕುರಿತ ಮರೆವಿನಲ್ಲಿಯೇ ನಾವು ಮಾಡಿಕೊಂಡ ತರ್ಕಕ್ಕೆ ಅದು ಬದ್ಧವಾಗಿರದಿದ್ದರೆ, ಆಶ್ಚರ್ಯವೇನು?

ಅದು ಎಲ್ಲ ಕಡೆ ಇದೆ.  ಸರ್ವವ್ಯಾಪಿ. ಆದುದರಿಂದಲೇ ನಾವದನ್ನು ನೋಡಲಾರೆವು. ಬೇಕೆನಿಸಿದ ಯಾವುದೋ ಒಂದನ್ನು ಮಾತ್ರ ನಾವು ನೋಡಬಲ್ಲೆವು. ನೋಡುವೆವು. ಉಳಿದುದನ್ನು ಮರೆಯುವೆವು.  ಇಂಥ ನಮಗೆ ನಮ್ಮನ್ನು ನೋಡುತ್ತಲೇ ಇರುವ ಅದು ತನ್ನನ್ನು ಹೊಳೆಯಿಸುವ ಬಗೆ ಹೇಗೆ?  ನೋಡುವಾಗ ನೀನು ನೋಡಲ್ಪಡುತ್ತಲೂ ಇರುತ್ತಿ. ನೋಟವೆಂದರೆ, ಎರಡು ಕಣ್ಣು ಅಲ್ಲ- ನಾಲ್ಕು ಕಣ್ಣು ಬೆರೆಯುವುದು ಎಂದು ಅದು ಸಂಸಾರದ ಅನುಭವದ ಮೂಲಕವೇ ಸೂಚಿಸುತ್ತೆ. ನಿನಗೆ ಮಾತ್ರವಲ್ಲ. ಪ್ರಕೃತಿಗೆಲ್ಲ ಕಣ್ಣಿದೆ. ಕಣ್ಣು ತೆರೆದರೆ ದೃಶ್ಯವೆಲ್ಲ ಕಾಣುತ್ತೆ. ಅದು ಕಣ್ಣಿನ ಅನುಭವ ಎನ್ನುವಿಯಾದರೆ, ಕಣ್ಣು ಮುಚ್ಚಿಕೊಂಡರೆ, ನೀನೇ ದೃಶ್ಯವಾಗಿ, ನೋಡಲ್ಪಡುವ ಅನುಭವ ಉಂಟಾಗುವುದು ಬೇಡ ಎನ್ನುವಿಯೇನು? ನಿಜಕ್ಕಾದರೆ, ಈ ಎರಡು ಬಗೆಯ ಅನುಭವಗಳಲ್ಲಿಯೂ ನಾವು ಕೇಂದ್ರ ಪಾತ್ರವಲ್ಲ ಎನ್ನುವುದೇ ಅಜಾಮಿಳನ ಅರಿವು. ನಮಗೆ ಕಣ್ಣನ್ನು ಕೊಟ್ಟು, ಈ ಲೋಕವನ್ನೂ ಕೊಟ್ಟು ನೋಡುವ ಅನುಭವವನ್ನು ಉಂಟು ಮಾಡಿದ್ದರಲ್ಲಿ ನಮ್ಮ ಪಾತ್ರವೆಷ್ಟು? ಈ ಅನುಭವವೂ ನಾವು ಉಂಟು ಮಾಡಿಕೊಂಡದ್ದಲ್ಲ. ಸಂಭವಿಸಿದ್ದು. ಅಥವಾ ‘ಅದು’ ನಮ್ಮಲ್ಲಿ ಉಂಟು ಮಾಡಿದ್ದು. ನೋಡಿದ್ದರಲ್ಲಿ ನಾವು ಮೈ ಮರೆತರೆ, ಮರೆವಿಗೂ ಅದೇ ಕಾರಣ. ಅದೇ ‘ಕಾರಣ’ ಎಂದು ಅರಿಯುವುದೇ ಮುಖ್ಯವಾದ್ದು. ನಾವು ‘ಕಾರಣ’ ಎಂದಲ್ಲ. ಮರೆವಿಗೆ ಕಾರಣವಾಗುವುದೇ ಅರಿವಿಗೂ ಕಾರಣವಾಗುವುದು ಸಾಧ್ಯ. ಅರಿವಾಗುವಾಗಲೇ ತಿಳಿಯುವುದು ಮರೆವಿಗೂ ಅದೇ ಕಾರಣ ಎಂದು. ನಾವು ಲೋಕವನ್ನು ನೋಡುವಂತಾದುದೂ ಅದರ ಕಟಾಕ್ಷ! ಈ ನಿಜ, ಅರಿವಿಗೆ ಬರುವಂತಾದುದೂ ಅದರ ಕಟಾಕ್ಷ! ಇದು ತಿಳಿದಾಗ ಅಜಾಮಿಳನಿಗೆ ಕರ್ತೃತ್ವಭಾವ ಕಳಚಿ ಬಿತ್ತು. ಕರ್ತೃತ್ವ ಭಾವ ಕಳಚಿಕೊಂಡಾಗ ತರ್ಜುಮೆಕಾರನ ಭಾವ ಬರುತ್ತೆ!

ಚಿತ್ರ: ಅನು ಪಾವಂಜೆ

ಕಣ್ಣಿನ ಅನುಭವ ಹೇಗೆ ಕಿವಿಯ ಅನುಭವವೂ ಹಾಗೆಯೇ. ಶಬ್ದಗಳಿಗೆ ನಾವು ಮಾಡಿಕೊಂಡ ಅರ್ಥಗಳೆಲ್ಲ ನಮ್ಮ ಬಳಕೆ; ವ್ಯವಹಾರ, ಅನುಕೂಲಗಳಿಗಾಗಿ. ಪ್ರಾಪಂಚಿಕತೆಯ ಈ ವಿಕಾಸ ಸಹಜವಾದುದೇ.

ಆದರೆ, ಶಬ್ದಗಳು ಯಾವ ಸೃಷ್ಟಿ ಮೂಲದಿಂದ ಉಂಟಾಗಿವೆಯೋ, ಆ ಮೂಲವನ್ನೇ ತಮ್ಮ ಅರ್ಥವಾಗಿ ಸದಾ ಸೂಚಿಸುತ್ತವೆ. ಹಣ್ಣಿನ ರುಚಿಯು ಬೀಜ ಗುಣವನ್ನು ಸೂಚಿಸುವಂತೆ. ಶಬ್ದಗಳು ಯಾವ ಮೂಲದಿಂದ ಬಂದಿವೆಯೋ ಅದೇ ಮೂಲದಿಂದಲೇ ಶ್ರವಣ ಯೋಗ್ಯತೆಯ ಜೀವಿಗಳೂ ಬಂದಿವೆಯಲ್ಲವೆ? ಆದುದರಿಂದ, ಮೂಲಾರ್ಥದಲ್ಲಿ ಶಬ್ದಗಳನ್ನು ಕೇಳುವುದಾದರೆ, ಕೇಳುವ ಜೀವಿಯೂ ತನ್ನ ಕೃತಕ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತದೆ. ಶಬ್ದವಿಲ್ಲದೆ ಶ್ರವಣಾನುಭವವಿಲ್ಲ. ಶ್ರವಣಾನುಭವವಿಲ್ಲದೆ ಶಬ್ದವೂ ಇಲ್ಲ. ಈ ಸಂಬಂಧ- ಪರಸ್ಪರ. ಹೀಗೆ ಮೂಲದ ನೆನಪನ್ನು ಉದ್ದೀಪಿಸುವಂತೆ ಶ್ರವಣಾನುಭವ ಸಾಧ್ಯವಾಗುವುದಾದರೆ, ನಾವು ನಾವೇ ಮೂಲವೆಂದು ಬಗೆದು ಕಟ್ಟಿದ ವಾಗರ್ಥ ಪ್ರಪಂಚ ತಲೆಕೆಳಗಾಗಬಹುದು. ಮತ್ತೆ ಉಳಿಯುವುದು ತರ್ಜುಮೆಯ ಭಾವ ಒಂದೇ.

ಆಗ ಈ ಜೀವ ನಮ್ಮದು ಎಂದು ಕೇಳಿಸಿಕೊಂಡ ಪದಕ್ಕೆ- ಅಜಾಮಿಳ ಈ ಪದ ಕೇಳಿದನಲ್ಲ- ನಾನು ನಿನ್ನವನು ಎಂಬ ತರ್ಜುಮೆ ಉಂಟಾಗುತ್ತೆ. ಈ ತರ್ಜುಮೆ, ಮೂಲದ ಇನ್ನೊಂದು ಮೈ. ಬೆಳಕಿನ ಪ್ರತಿಫಲನದಂತೆ. ಇದನ್ನು ತರ್ಜುಮೆ ಎನ್ನುವುದೇಕೆಂದರೆ ‘ನಾನು ನಿನ್ನವನು’ ಎಂದು ಸ್ಫುರಿಸುವಾಗ ‘ನೀನು ನನ್ನವನಲ್ಲ’ ಎಂಬರ್ಥ ಇದೆ. ನೀನು ನನ್ನವನು, ನೀವು ನನ್ನವರು, ನೀನು ನನ್ನವಳು- ಇಂಥ ಪದಗಳು ಸಂಸಾರದಲ್ಲಿ ಅಧಿಕಾರ ಸೂಚಕ ಪದಗಳು. ಸೊಕ್ಕಿನ ಪದಗಳು. ನಮ್ಮ ಸೊಕ್ಕನ್ನು ಇನ್ನಷ್ಟು ಸೊಕ್ಕಿಸುವ ಪದಗಳು. ಅವು ಬಳಸಿ ಬಳಸಿ, ನಿಸ್ಸತ್ವವಾಗಿವೆ. ಮತಾಂಧವಾಗಿವೆ. ಈಗ ಅದನ್ನು ಅಜಾಮಿಳ ಬಳಸಲಾರ. ತರ್ಜುಮೆಯಲ್ಲಿ ಮಾತ್ರ ಮಾತು ನಿಜ! ಏಕೆಂದರೆ ಮಾತು ಬಳಸುವವನೇ ಮೂಲವಲ್ಲ. ಮೂಲ ಅರ್ಥ ನಿನ್ನದು. ನಾನು ತರ್ಜುಮೆಯಲ್ಲಿ ಮಾತ್ರ ನಿಜ! ಮಗು, ಭಾಷೆ ಕಲಿತಂತೆ! ಭಾಷೆ ಕಲಿತಾಗ ತನ್ನನ್ನೂ ಅರಿತಂತೆ. ಭಾಷೆಯ ಮೂಲಕವೇ ತನ್ನನ್ನೂ ಅರಿತಂತೆ! ಇದು ಅಜಾಮಿಳನಿಗೆ ಹೊಸ ಹುಟ್ಟು. ನೀನು ನನ್ನವನೆಂದಾಗ ನಿನ್ನನ್ನು ‘ಒಡೆಯ’ನೆನ್ನುವಂತಿಲ್ಲ. ನೀನಲ್ಲದೆ ಇನ್ನಾರೂ ಒಡೆಯರಿಲ್ಲ. ಆದುದರಿಂದ ‘ನಾನು ನಿನ್ನವ’ ನೆಂಬುದೇ ನಿನ್ನನ್ನು ಒಡೆಯನನ್ನಾಗಿಸುವ ಮಾತು. ತರ್ಜುಮೆಯೇ ನಿಜ. ನಮ್ಮ ಕುಮಾರವ್ಯಾಸ ತಾನು ‘ಲಿಪಿಕಾರ’ ಎಂದ ಹಾಗೆ! ಇದು ‘ಭಕ್ತಿಯ’ ಸಾರ. ಭಾಗವತಕ್ಕೆ ತರ್ಜುಮೆ ಇಷ್ಟ!

ಭಾಗವತದಲ್ಲಿ ಬರುವ ಪ್ರಸಿದ್ಧವಾದ ‘ಗಜೇಂದ್ರ ಮೋಕ್ಷ’ದ ಕಥೆಯಲ್ಲಿಯೂ ಇದೇ ಧ್ವನಿ. ಇದು ಅಜಾಮಿಳನ ಕಥೆಯ ಮುಂದುವರಿಕೆಯಂತಿದೆ. ಅದು- ಕಾಡಾನೆಗಳ ಹಿಂಡಿನ ನಾಯಕ ಸಲಗ. ನೀರಾಟವಾಡುತ್ತಿರುವಾಗ ಮೊಸಳೆಯೊಂದು ಸಲಗನನ್ನು ಬಲವಾಗಿ ಹಿಡಿಯುತ್ತೆ. ಆನೆಯಾದರೋ ಎಷ್ಟು ಹೋರಾಡಿದರೂ ನಿಸ್ಸಹಾಯಕವಾಗುತ್ತ ಹೋಗುತ್ತೆ. ದಡದಲ್ಲಿ ನಿಂತು ಆತಂಕಪಡುತ್ತಿದ್ದ ಹಿಂಡು ಕೂಡ ಅಸಹಾಯಕ. ಎಲ್ಲರೂ ಅಸಹಾಯಕರು. ಆಗ ಸಲಗಕ್ಕೆ ಒಳನೋಟ ಉಂಟಾಗುತ್ತೆ. ತನ್ನ ಪಾಡು ಎಲ್ಲರ ಪಾಡು. ಸಾವಿನ ಮುಂದೆ ತನಗೆ ತಾನೇ ಸಹಾಯವಾಗಲಾರದವರು ಇತರರಿಗೆ ಸಹಾಯವಾಗುವುದೆಂತು? ಹಾಗಾದರೆ, ಹಿಂಡೆಂಬುದು, ತಾನು ಹಿಂಡಿನ ನಾಯಕನೆಂಬುದು, ಹಿಂಡು ತನ್ನನ್ನು ಓಲೈಸುವುದೆಂಬುದು- ಎಲ್ಲವೂ ದೊಡ್ಡ ಭ್ರಮೆ. ದೊಡ್ಡ ಮನೋರಂಜನೆ! ಈ ಸಲಗ ತನ್ನ ಅಂತರಾಳದಲ್ಲಿ ಹಿಂಡನ್ನಗಲಿತು! ಹಿಂಡನ್ನಗಲದೆ ಅದು ಯಾರನ್ನೂ, ಭಗವಂತನನನ್ನು ಕೂಡ ನೆನೆಯಲಾರದು. ಹಿಂಡನಗಲಿದ ಸಲಗ ತನ್ನ ವಿಂಧ್ಯವ ನೆನೆವಂತೆ ಎಂದು ಅಕ್ಕ ಸುಮ್ಮನೆ ಹೇಳಿಲ್ಲ.

ಸಲಗ ನೆನೆಯಿತು. ಈಗ ಅದಕ್ಕೆ ನೆನೆಯುವುದು ಸಾಧ್ಯ. ಇಂಥ ರಾಡಿ ಎಬ್ಬಿಸುವ ಜೀವನ್ಮರಣ ಹೋರಾಟದ ನಡುವೆಯೂ ಆ ಕೊಳದಲ್ಲಿ ಒಂದು ಬೆಳ್ದಾವರೆ ಅರಳಿ ಇತ್ತಂತೆ. ಚಿತ್ತದ ಮೀಸಲು ಶುಚಿಗೆ ಎಂಥ ರೂಪಕ! ಸಲಗ, ಜರ್ಝರಿತವಾದ ಸೊಂಡಿಲಿನಿಂದ ಈ ಹೂವನ್ನು ಎತ್ತಿ ಹಿಡಿಯುತ್ತ, ಭಗವಂತನನ್ನು ನೆನೆಯಿತಂತೆ. ನೆನೆಯುವುದೆಂದರೆ- ನಾನು ನಿನ್ನವನೆಂಬ ಅರಿವು. ನಾರಾಯಣಾಖಿಲ ಗುರೋ ಭಗವನ್ ನಮಸ್ತೇ. ಭಗವಂತ ಗರುಡನ ಮೇಲೇರಿ ಬಂದು, ಮಕರವನ್ನು ತರಿದು, ಆನೆಯನ್ನು ಕಾಪಾಡಿದರೆ, ಮೊಸಳೆಯ ಜಾಗದಲ್ಲಿ ಗಂಧರ್ವನೊಬ್ಬ ನಿಂತಿದ್ದಾನೆ. ಯಾವುದೋ ಶಾಪಗ್ರಸ್ತನಾಗಿ ಈ ಚೆಲುವಿನ ಗಂಧರ್ವ ಮೊಸಳೆಯಾಗಿ ಬಿಟ್ಟಿದ್ದ. ಭಗವಂತನ ಚಕ್ರದಿಂದ ತರಿಯಲ್ಪಡದೆ ಶಾಪವಿಮೋಚನೆಯಾಗದಂತೆ. ಆದುದರಿಂದ ಮೊಸಳೆ ತನ್ನ ಬಿಡುಗಡೆಗಾಗಿ ಹೋರಾಡದೆ ಇರುವಂತಿಲ್ಲ. ಹೋರಾಟವೆಲ್ಲ ಬಿಡುಗಡೆಗಾಗಿ. ಸಲಗವಾದರೋ ತನ್ನ ಹೋರಾಟವನ್ನು ಬಿಟ್ಟು ಕೊಟ್ಟು ಭಗವಂತನನ್ನು ನೆನೆಯದೆ, ಅಂದರೆ ಹೋರಾಟವನ್ನು ಬಿಟ್ಟು ಕೊಡದೆ ಅದಕ್ಕೆ ಬಿಡುಗಡೆ ಇಲ್ಲ! ಸಲಗ, ಭಗವಂತನನ್ನು ನೆನೆಯುತ್ತಿದ್ದಂತೆ, ಮೊಸಳೆಯೂ ಸಲಗದ ಮೂಲಕವೇ ತನ್ನ ಪ್ರಾರ್ಥನೆಯನ್ನೂ ಸಲ್ಲಿಸುತ್ತಿತ್ತೇನೋ!  ಹಿಂಡನ್ನು ಅಗಲಿದರೂ ಜೀವ ಜಗತ್ತಿನೊಡನೆ ಇನ್ನೊಂದು ಅರ್ಥಪೂರ್ಣ ಸಂಬಂಧ ಭಗವಂತನ ಮೂಲಕ ಉಂಟಾಗದೆ ಇರುವುದಿಲ್ಲ. ಅಲ್ಲದೆ, ಮೊಸಳೆಯು ಗಂಧರ್ವನಾಗಿ ತನ್ನ ನಿಜರೂಪ ಪಡೆಯುತ್ತಿರುವಂತೆ, ಸಲಗಕ್ಕೂ ಕೂಡ ತಾನು ಆನೆಯಾಗಬೇಕಾಗಿ ಬಂದುದು ಏಕೆನ್ನುವ ಅರಿವು ಅಂದರೆ, ತನ್ನ ಪೂರ್ವ ಜನ್ಮದ ಅರಿವು ಉಂಟಾಯಿತಂತೆ. ಅಲ್ಲಿಗೆ ಹುಟ್ಟು- ಸಾವುಗಳ ಅರಿವು ಉಂಟಾಗಿ, ಬಿಡುಗಡೆ ಪೂರ್ಣವಾಯಿತು. ಪೂರ್ವಜನ್ಮದ ಅರಿವು ಉಂಟಾದರೆ, ಮುಂದಿನ ಜನ್ಮ- ಪುನರ್ಜನ್ಮ ಇಲ್ಲವಾಗುವುದಂತೆ. ಮತ್ತು ಪೂರ್ವ ಜನ್ಮದ ಅರಿವು ಉಂಟಾಗಬೇಕಾದರೆ, ಈಗ ಜೀವನ್ಮರಣ ಹೋರಾಟವೊಂದು ಸಂಭವಿಸಿ, ಈ ಜನ್ಮ ಸಾಕು ಎಂದು ಅನ್ನಿಸಬೇಕಂತೆ.

ಭಾಗವತ ವಂಶಾನುಕಥನವನ್ನು ಮುಂದುವರಿಸುತ್ತೆ. ಇದೊಂದು ರೀತಿ ಭವಾವಳಿಯ ಕಥೆಗಳು. ‘ಧ್ರುವ’ನ ಪರಂಪರೆಯಲ್ಲಿ ಬಂದವನು ‘ವೇನ’ನೆಂಬ ಕ್ಷತ್ರಿಯ ದೊರೆ, ಇವನೋ ಪರಮ ದುಷ್ಟ!  ಪ್ರಜೆಗಳನ್ನು ಪೀಡಿಸುವುದೇ ಇವನಿಗೆ ರಂಜನೆ! ಎಲ್ಲಿಂದ ಬಂತು ವೇನನ ದುಷ್ಟತನ? ವಿಕೃತಿಯೆ?  ತಮಸ್ಸೆ? ಈ ವೇನ, ಬಾಲ್ಯವನ್ನು ತನ್ನ ತಾಯ ತವರಿನಲ್ಲಿ ಕಳೆದಿದ್ದನಂತೆ. ತವರಿನ ಮಂದಿ, ನಾಸ್ತಿಕರೂ ಕ್ರೂರರೂ ಆಗಿದ್ದರಂತೆ. ಅವರ ಪ್ರಭಾವವೇ ವೇನನ ಮೇಲೆ ಉಂಟಾಯಿತು ಎನ್ನುತ್ತದೆ ಭಾಗವತ.  ಪರಂಪರೆ ಎಂದಾಗ ಅದರಲ್ಲಿ ಎಲ್ಲ ರೀತಿಯ ಎಳೆಗಳೂ ಇವೆ. ವೇನನ ಪ್ರಜಾಪೀಡೆಯನ್ನು ಸಹಿಸಲಾಗದೆ, ಋಷಿಗಳು ಮಾಂತ್ರಿಕ ಪ್ರಯೋಗದಿಂದ ಅವನನ್ನು ಕೊಂದರಂತೆ. ಪ್ರಜೆಗಳಿಗೆ ದೊರೆಯೊಬ್ಬ ಬೇಕಾದುದರಿಂದ, ವೇನನ ದೇಹವನ್ನು ಮಥಿಸಿ, ವೇನನ ತೋಳಿನಿಂದ ಒಂದು ಮಗುವನ್ನು ಪಡೆದರಂತೆ. ಭಗವಂತನ ತೋಳಿನಿಂದ ಕ್ಷತ್ರಿಯರು ಮೂಡಿ ಬಂದರು ಎಂಬ ವೇದದ ಮಾತನ್ನು ಇವರು ಮರೆತಿರಲಿಲ್ಲ! ಹಾಗೆ ಹುಟ್ಟಿ ಬಂದವನು ಪೃಥು ಚಕ್ರವರ್ತಿ. ಭೂಮಿಗೇ ‘ಪೃಥಿವೀ’ ಎಂಬ ಹೆಸರು ಬಂದುದು ಈ ಚಕ್ರವರ್ತಿಯಿಂದ. ‘ಪೃಥಿವೀ’ ಎಂದರೆ ವಿಶಾಲವಾದ ಭೂ ಭಾಗ ಎಂದರ್ಥ. ಭೂಮಿಯನ್ನು ಸಮತಟ್ಟು ಮಾಡುವ ಉಳುಮೆಯನ್ನು, ಬೀಜಬಿತ್ತಿ ಬೆಳೆ ತೆಗೆಯುವ ಕೃಷಿ ಪದ್ಧತಿಯನ್ನು, ಒಂದು ವ್ಯವಸ್ಥಿತ ಗ್ರಾಮ ಜೀವನವನ್ನು ರೂಪಿಸಿದವನು.

ಭೂಮಿಯಲ್ಲಿ ತಕ್ಕ ಬೆಳೆ ಬಾರದಿದ್ದರೆ, ಕೋಪಗೊಳ್ಳುವವನೀತ. ಪೃಥಿವಿಯ ಫಲವಂತಿಕೆಯನ್ನು ಬಯಸುವ ದೊರೆ. ಕರುವಿಗೆ ತಾಯಿ ಹಸು ಹಾಲೂಡುವಂತೆ, ಪ್ರಕೃತಿ ನಮಗೆ ಉಣ್ಣಿಸಬೇಕೆನ್ನುವವನು. ಕ್ಷತ್ರಿಯನ ಆಳ್ವಿಕೆಯನ್ನೂ, ಭೂಮಿಯಲ್ಲಿ ನಡೆಯಬೇಕಾದ ಕೃಷಿ ಕರ್ಮವನ್ನೂ ಬೆಸೆೆದುದರಿಂದ ಪೃಥು ಚಕ್ರವರ್ತಿ, ತೋಳಿನಿಂದ ಹುಟ್ಟಿ ಬಂದನೆನ್ನುವುದು ಅರ್ಥಪೂರ್ಣವಾಯಿತು. ತನ್ನನ್ನು ಹೊಗಳಿಸಿಕೊಳ್ಳುವುದರಲ್ಲಿ ರಂಜನೆ ಇಲ್ಲದವನಾಗಿ, ಈತ ‘ಕರ್ಮಯೋಗಿ’. ಈ ಅರ್ಥದಲ್ಲಿ ಅವತಾರ ಪುರುಷ!

ಏನಾಯಿತೆಂದರೆ, ಪೃಥು ಪರಂಪರೆ ಕರ್ಮದಲ್ಲಿ ಅತ್ಯಾಸಕ್ತವಾಗಿ ಬಿಟ್ಟಿತು. ಕರ್ಮವೆಂದರೆ, ಕರ್ಮಕಾಂಡ! ಯಜ್ಞ ಯಾಗಗಳು ಪಶುಬಲಿ ಇವು ರೂಢವಾಗಿ ಬಿಟ್ಟವು. ಇದೇ ಪರಂಪರೆಯಲ್ಲಿ ಬಂದವನು ಪ್ರಾಚೀನ ಬಹರ್ ಎಂಬೊಬ್ಬ ರಾಜ. ಈ ಹೆಸರೇ ಸೂಚಿಸುವಂತೆ, ಈತ ಕರ್ಮಕಾಂಡವನ್ನು ಬಿಟ್ಟಿರಲಾರ. ಕೆಲಸ ಕೆಟ್ಟಿತು ಎಂದುಕೊಂಡು, ಜ್ಞಾನಿಗಳಾದ ನಾರದರು ಒಮ್ಮೆ ಈ ದೊರೆಯಲ್ಲಿಗೆ ಬಂದರಂತೆ. ಒಂದು ಸರಳವಾದ ಪ್ರಶ್ನೆಯನ್ನು ಕೇಳಿದರಂತೆ: ‘ಇಷ್ಟೆಲ್ಲ ಕರ್ಮಕಾಂಡವನ್ನು ನಡೆಯಿಸಿರುವೆಯಲ್ಲ; ನಿನ್ನ ಅಂತ:ಕರಣ ನಿಜಕ್ಕೂ ದು:ಖದಿಂದ ಮುಕ್ತವಾಗಿದೆಯೇ?’

ರಾಜನಿಗೆ ಈ ಮಾತು ತಾಗಿತು. ತನ್ನ ಮನಸ್ಸನ್ನು ತೋಡಿಕೊಂಡ. ಜ್ಞಾನದ ಆನಂದ ತನಗೆ ಸಿಕ್ಕಿಲ್ಲ ಎಂದ. ತಾನು ದು:ಖಿ ಎಂದ. ಕರ್ಮವನ್ನು ಬಿಟ್ಟು ಬೇರೆ ದಾರಿ ತೋರುತ್ತಿಲ್ಲ ಎಂದ. ಬೇರೆ ದಾರಿ ಉಂಟೇನು?

ನಾರದರು ಹೇಳಿದರು: ಎಂಥ ವಿಪರ್ಯಾಸವಿದು! ಒಂದೆಡೆ, ಆನೆ-ಮೊಸಳೆಗಳಂಥ ಪ್ರಾಣಿಗಳೂ ಕೂಗಿ ಕರೆದರೆ, ಭಗವಂತ ಅವುಗಳಿಗೆ ಸ್ಪಂದಿಸುತ್ತಾನೆನ್ನುವುದು. ಪ್ರಾಣಿಗಳಾಗಿ ಅವು ಹುಟ್ಟಿ ಬಂದುದು ಒಂದು ಶಾಪಗ್ರಸ್ತ ಸ್ಥಿತಿ, ಭಗವಂತನಿಂದ ಇದು ವಿಮೋಚನೆಯಾಯಿತೆನ್ನುವುದು. ಇನ್ನೊಂದೆಡೆ ಅಂಥದೇ ಪ್ರಾಣಿಗಳನ್ನು ಯಜ್ಞಯಾಗಗಳಲ್ಲಿ ಬಲಿ ಕೊಡುತ್ತಾ ಹೋಗುವುದು! ಏನು ಮನುಷ್ಯನಾಗಿ ಹುಟ್ಟುವುದೇ ಶಾಪಗ್ರಸ್ತ ಸ್ಥಿತಿಯಾಗಿ ಹೋಯಿತೆ? ಯಜ್ಞದಲ್ಲಿ ಬಲಿಯಾದ ಪಶುಗಳಿಗೆ ಸ್ವರ್ಗದಲ್ಲಿ ಹಿರಣ್ಯಶೃಂಗ- ಬಂಗಾರದ ಕೊಂಬು ಬರುತ್ತದೆನ್ನುತ್ತಾರಲ್ಲವೆ ಮೀಮಾಂಸಕರು. ನಾನೇನು ಹೇಳುತ್ತೇನೆ ಗೊತ್ತೆ? ನಿನ್ನಿಂದ ಬಲಿಯಾದ ಪ್ರಾಣಿಗಳು, ನೀನವುಗಳಿಗೆ ಕೊಟ್ಟ ಹಿಂಸೆಯನ್ನು ಮರೆಯದೆ, ಸೇಡು ತೀರಿಸಿಕೊಳ್ಳಲು ಕಾತರವಾಗಿವೆ. ಆ ಕಾರಣಕ್ಕಾಗಿಯೇ ಅವುಗಳಿಗೆ ಮೊನಚಾದ ಉಕ್ಕಿನ ಕೊಂಬುಗಳು ಮೂಡಿವೆ. ನೀನು ಸತ್ತು ಇಲ್ಲಿಂದ ಹೊರಟ ಕೂಡಲೇ ನಿನ್ನನ್ನು ಚುಚ್ಚುತ್ತ ಪ್ರತಿ ಹಿಂಸೆ ಮಾಡುವುದಕ್ಕೆ ಅವು ಕಾದುಕೊಂಡಿವೆ!

ವೇದ ವಾಕ್ಯಗಳೆಂದರೆ ಭಗವಂತನ ಮಾತುಗಳೇ. ಆ ಮಾತುಗಳನ್ನು ನೀನು ನಿನ್ನ ಅನುಭವದಲ್ಲಿ ‘ತರ್ಜುಮೆ’ ಮಾಡದಿದ್ದರೆ, ನಿನಗೆ ಬೇಕಾದಂತೆ ಅರ್ಥವಿಸಿಕೊಂಡರೆ, ಅಪಾಯ ತಪ್ಪಿದ್ದಲ್ಲ.

ನಾನು ನಿನ್ನವನೆನ್ನು. ವಾಕ್ಯಗಳು ಸರಿಯಾಗಿ ತಿಳಿಯುತ್ತವೆ. ನಾನು ನಿನ್ನವನೆನ್ನು. ಈ ಲೋಕವೇ ನಿನಗೆ ಆಯತನವಾಗುತ್ತದೆ. ಇದೇ ಸ್ವರ್ಗವಾಗುತ್ತದೆ. ನಾನು ನಿನ್ನವನೆನ್ನು. ಶತ್ರುವೂ ಮಿತ್ರನಾಗುತ್ತಾನೆ.  ನಾನು ನಿನ್ನವ’ನೆನ್ನು. ಜೀವ ಜಾತಿಗಳಲ್ಲಿ ಮೈತ್ರಿ ಉಂಟಾಗುತ್ತದೆ. ನಾನು ನಿನ್ನವನೆನ್ನದವನು ನಿಜಕ್ಕೂ ತಬ್ಬಲಿ. ‘ತಬ್ಬಲಿ’ ಎಂದರೇನೆಂದು ಬಲ್ಲೆಯಾ. ತಬ್ಬಲಿ ಎಂದರೆ ‘ತಪ್ಪು ಬಲಿ’. ‘ತಪ್ಪು ಬಲಿ’ ಎಂಬ ಪದ ಕರ್ಮಕಾಂಡದ ಒಡಲಿನಿಂದ ಹುಟ್ಟಿದ್ದು’ ಎಂದರಂತೆ ನಾರದರು.

ತೋಳ್ಪಾಡಿ ಭಾಗವತ 17: ಜಡ ಭರತನಾದ ಭರತ ಚಕ್ರವರ್ತಿ

ಬದುಕು ಸಹಜವಾಗಿ ಕರ್ಮಪರ. ಕರ್ಮವೆನ್ನುವುದು ಒಂದು ಚಕ್ರ. ‘ಕರ್ಮ ಚಕ್ರ’. ಚಕ್ರ ಎಂದರೆ ಗತಿಗೆ- ಚಲನೆಗೆ ಕೊಟ್ಟ ಆಕಾರ. ಎಂದರೆ, ನಿಲುಗಡೆ ಇಲ್ಲದೆ ತಿರುಗುತ್ತಿರುವುದೇ ಚಕ್ರದ- ಕರ್ಮದ ಸ್ವಭಾವ. ಬೀಜದಿಂದ ಮರ. ಮರದಲ್ಲಿ ನೂರು ಹಣ್ಣು. ಒಂದೊಂದು ಹಣ್ಣಿನಲ್ಲಿ ಮತ್ತೆ ನೂರು ಬೀಜ. ತಾನು ಯಾವಾಗ ಮೊಳಕೆಯೊಡೆದು ಮರವಾದೇನು ಎಂದು ಬೀಜವು ಮಣ್ಣಿನೊಳಗಡೆ ಅನುಕೂಲ ಕಾಲಕ್ಕೆ ಕಾಯುತ್ತಿತ್ತು. ಈ ಆತಂಕದ ಕಾಯುವಿಕೆಯ ಕಾರಣವಾಗಿಯೇ ತಾನು ಇಲ್ಲದೇ ಹೋಗುವ ಕಾಲ ಬಂದೀತೇನೋ ಎಂದು ಬೀಜಕ್ಕೆ ಭಯ. ಈ ಭಯದಿಂದಾಗಿಯೇ ಹಣ್ಣಿನಲ್ಲಿ ನೂರು ಬೀಜಗಳ ಸೃಷ್ಟಿ ಸಮೃದ್ಧಿ! ಈ ಸಮೃದ್ಧಿಯ ಮೂಲಕ ತನ್ನ ಇರುವಿಕೆಯ ಸಮರ್ಥನೆ. ಇದು ಕರ್ಮಚಕ್ರದ ಚಲನೆಗೆ ಅಗತ್ಯವಾದ ಇಂಧನವೇ ಸರಿ.

ಇನ್ನೊಂದು ರೀತಿಯಲ್ಲಿ ನೋಡುವಾಗ, ಮನದಲ್ಲಿ ಯೋಚನೆಯೊಂದು ಸುಳಿಯಿತು. ಅದು ನಮ್ಮ ಅಸ್ತಿತ್ವವನ್ನು- ಇರುವಿಕೆಯನ್ನು ಸಮರ್ಥಿಸಿದಂತೆ ಅನುಭವವಾಯಿತು. ಈ ಅನುಭವವು ನಮ್ಮನ್ನು ಸದಾ ಸಮರ್ಥಿಸಿಕೊಳ್ಳುವ ಯೋಚನೆಗಳೇ ನಮ್ಮಲ್ಲಿ ಹುಟ್ಟಿಕೊಳ್ಳುವುದಕ್ಕೆ ಪ್ರಚೋದನೆಯೂ ಆಯಿತು. ಇದೇ ಯೋಚನಾ ಚಕ್ರ. ‘ಮನೋರಥ’ ಎಂದು ಸರಿಯಾಗಿ ಗುರುತಿಸಿದ್ದಾರೆ. ಮನೋರಥಕ್ಕೆ ಯೋಚನಾ ಚಕ್ರಗಳು! ಸಮರ್ಥನೆಗೆ ಎರಡು ಮುಖ. ಮಂಡನೆ ಮತ್ತು ಖಂಡನೆ. ಸ್ವ-ಮಂಡನೆ ಮತ್ತು ಪರ ಖಂಡನೆ. ಖಂಡನೆ-ಮಂಡನೆಗಳಿಂದಾಗಿ ಚಕ್ರದ ಚಲನೆಯುದ್ದಕ್ಕೆ ಒಂದು ವಿಧದ ಮನೋರಂಜನೆ! ರಂಜನೆಗೆ ಯಾವಾಗಲೂ ‘ಎರಡು’ ಬೇಕಲ್ಲವೆ? ಎರಡಿದ್ದಲ್ಲಿ ರಂಜನೆಯೇ ಅಲ್ಲವೇ?

ಚಲನೆಗೆ ನಿಲುಗಡೆಯಾಗುವ ಭಯವಿದೆ ಎನ್ನುವುದಾದರೆ, ಆ ಭಯ ನಿಷ್ಕಾರಣವಲ್ಲ. ನಿಲುಗಡೆಯ ಸ್ಥಿತಿಯೊಂದು ಇದ್ದಿರಲೇಬೇಕು. ಆರಂಭವಾದುದಕ್ಕೆ ಮುಕ್ತಾಯವಿರಲೇ ಬೇಕಲ್ಲವೆ? ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ಎಂದ ಭಗವಂತ ಕೃಷ್ಣ- ಗೀತೆಯಲ್ಲಿ. ಬದುಕಿನ ಈ ಎಲ್ಲ ಕರ್ಮಗಳೂ ಅರಿವಿನಲ್ಲಿ ಕೊನೆಗೊಳ್ಳುವವು ಎಂದ. ಚಕ್ರ ಹಿಡಿದಿದ್ದ ಕೃಷ್ಣ ಜ್ಞಾನಿಯೂ ಆಗಿದ್ದಿರಬೇಕು!

ಎಲ್ಲ ಕರ್ಮಗಳನ್ನೂ ತನ್ನೊಳಗೆ ಸೇರಿಸಿಕೊಂಡು ಉಪಶಮನ ಮಾಡುವ ಅರಿವಿನ ಸ್ವರೂಪವೇನು? 

ಅಚ್ಚರಿ ಎಂದರೆ ಅರಿವೆನ್ನುವುದು ನೆನಪು ಎನ್ನುತ್ತದೆ ‘ಭಾಗವತ’. ನೆನಪಿನಿಂದಲೇ ಎಲ್ಲವೂ ಪ್ರಾರಂಭವಲ್ಲವೆ? ನೆನಪಿನಿಂದಲೇ ಎಲ್ಲವೂ ತೊಡಗುವುದಲ್ಲವೆ? ಅದೇನೋ ನಿಜವೆನ್ನಿಸುತ್ತದೆ. ಆದರೆ, ನೆನಪಿನಿಂದ ಪ್ರಾರಂಭವಾದುದು ನೆನಪಿನಲ್ಲಿಯೇ ಮುಕ್ತಾಯವಾಗಬೇಕಾದುದೆನ್ನುವುದೂ ನಿಜವೇ. ಇದು ತಾನೇ ನೆನಪಿನಲ್ಲಿ ಪ್ರಾರಂಭವಾದುದರ ‘ತಾರ್ಕಿಕ ಅಂತ್ಯ’? ಆದರೆ, ಭಾಗವತ ಹೇಳಲು ಉದ್ದೇಶಿಸಿರುವುದು ಈ ತಾರ್ಕಿಕ ಅಂತ್ಯವನ್ನಲ್ಲ. ಅದು ಉದ್ದೇಶಿಸಿರುವುದು ತರ್ಕದ ಅಂತ್ಯವನ್ನು! ತಾರ್ಕಿಕ ಅಂತ್ಯವು ತರ್ಕದ ಅಂತ್ಯವಲ್ಲ. ತಾರ್ಕಿಕ ಅಂತ್ಯವೆನ್ನುವ ಮಾತಿನಲ್ಲಿಯೇ ತರ್ಕವು ಸಮರ್ಥಿತವಾಗುತ್ತದೆ. ಆ ಮೂಲಕ ತರ್ಕವು ಮರು ಜೀವ ಪಡೆಯುತ್ತದೆ. ಹೀಗೆ ಮರುಜೀವ ಪಡೆದು ಮತ್ತೆ ಕರ್ಮಚಕ್ರದ ಚಲನೆ ಪ್ರಾರಂಭವಾಗಬೇಕೆನ್ನುವುದೇ- ಕರ್ಮವೇ ಹುಟ್ಟು ಹಾಕಿದ ತರ್ಕದ- ಏಕಮೇವ ಇಷ್ಟವಾಗಿದೆ. ತರ್ಕವು ತನ್ನ ಅಂತ್ಯವನ್ನು ತಾನು ಊಹಿಸಲೂ ಆಗದು. ಜ್ಞಾನವು ಕರ್ಮದ ಅಂತ್ಯವೆನ್ನುವುದಾದರೆ, ಕರ್ಮದ ಬದುಕು ಮುಗಿತಾಯವಾಗಿ, ಮತ್ತೆ ಅರಿವಿನ ಬದುಕು ಪ್ರಾರಂಭವಾಗಬೇಕು. ಸಾವಿನಿಂದ ಕೂಡಿರುವ ಈ ಬದುಕಿನಿಂದ ಸಾವಿಲ್ಲದ ಆ ಇನ್ನೊಂದು ಬದುಕಿಗೆ ನನ್ನನ್ನು ಕರೆದೊಯ್ -ಎಂಬ ಉಪನಿಷತ್ತಿನ ಪ್ರಾರ್ಥನೆಗೆ ಇದೇ ಅರ್ಥ. ಇನ್ನೊಂದು ಬದುಕೆಂದರೆ ಈ ಕರ್ಮನಿರತ, ಕರ್ಮ ನಿಬಿಡ ಬದುಕಿನ ತಾರ್ಕಿಕ ಅಂತ್ಯವಲ್ಲ. ಯಾವ ತರ್ಕದಿಂದ ಈ ಕರ್ಮವು ತನ್ನನ್ನು ಸಮರ್ಥಿಸಿಕೊಳ್ಳುತ್ತ ಇಷ್ಟು ದೂರ ನಡೆದು ಬಂತೋ ಆ ತರ್ಕದ ಅಂತ್ಯ. ತರ್ಕದ ಅಂತ್ಯವಾಗದೆ ಖಂಡನೆ- ಮಂಡನೆಗಳ ಅಂತ್ಯವಾಗುವುದಿಲ್ಲ. ಖಂಡನೆ ಮಂಡನೆಗಳ ಅಂತ್ಯವಾಗದೆ, ಅರಿವಿನ ಸೇವೆ ಮತ್ತು ಈ ಸೇವೆಯನ್ನೊಪ್ಪಿ, ಅರಿವು ತನ್ನನ್ನು ತಾನು ತೆರೆಯುತ್ತ ಹೋಗುವ ಹೊಸ ಬಗೆ- ಹೊಸ ಬದುಕಿನ ಹೊಸ ಬಗೆ- ಪ್ರಕಟವಾಗುವುದಿಲ್ಲ. ಆದುದರಿಂದ ಅರಿವನ್ನು ನೆನಪೆನ್ನುವಾಗ ಭಾಗವತ, ತರ್ಕದ ಅಂತ್ಯವಾಗದೆ ಆ ಅರಿವೇ ಉದ್ಭುದ್ಧವಾಗದು ಎನ್ನುತ್ತದೆ. ನೆನಪೆಂದರೆ, ಬೀಜವು ತಾನು ಹೆಮ್ಮರವಾಗಬೇಕೆಂದು ಕಂಡ ಕನಸಲ್ಲ ಎನ್ನುತ್ತದೆ. ಇಂಥ ಕನಸನ್ನು, ನೆನಪೆಂದು ತಪ್ಪು ತಿಳಿಯದಿರಿ ಎನ್ನುತ್ತದೆ. ಬದುಕಿನ ಚಕ್ರ ಉರುಳುತ್ತ ಹೋಗುವ ಅಭ್ಯಾಸಗತ ಏಕತಾನತೆಯ ಬದುಕನ್ನು- ಬದುಕಿನ ಏಕತಾನತೆಯನ್ನು- ಆ ನೆನಪು ಮುರಿದೀತು,  ಮುರಿದರೆ ಅದೊಂದು ಸಂಭ್ರಮ ಎನ್ನುತ್ತದೆ. ಕಾರ್ಯ-ಕಾರಣ ಸಂಬಂಧವನ್ನು ಒಪ್ಪಿ, ಸಂಸಾರ ಎಂಬ ಕಾರ್ಯಕ್ಕೆ ಏನು ಕಾರಣ ಎಂದು ತೋರಿಸಿ, ಕಾರಣದ ಅರಿವಿನಿಂದಲೇ ಕಾರ್ಯವು ಮತ್ತೆ ಉಂಟಾಗದೆ ಇರುವುದು. ಇಲ್ಲಿಗೆ ಕರ್ಮಪರವಾದ ಬದುಕು ಕೊನೆಯಾಗಿ, ಹೊಸ ತಿರುವು ಪಡೆದುಕೊಳ್ಳುವುದು, ಇದೇ ಅರಿವಿನ ಮಹತ್ವ ಎನ್ನುತ್ತದೆ.

ದೃಷ್ಟಾಂತದ ಮೂಲಕ ನೋಡುವುದಾದರೆ, ಹೆಮ್ಮರವಾಗಬೇಕೆನ್ನುವುದು ಬೀಜದ ಕನಸು. ಆ ಕನಸಿಗೆ ಒಂದು ‘ಬಲ’ ಇದ್ದೇ ಇದೆ. ಆದರೆ ಮರವಾಗಬೇಕಾದರೆ, ಅನುಕೂಲಕರವಾದ ದೇಶ-ಕಾಲ ಕೂಡಿ ಬರಬೇಕಲ್ಲ. ಆ ದೇಶ- ಕಾಲಗಳ ಆನುಕೂಲ್ಯ ಉಂಟಾದುದು ಹೇಗೆ? ಅದನ್ನು ‘ದೇವರ ಇಚ್ಛೆ’ ಎನ್ನೋಣ. ಆಗ ಆ ದೇವರ ಇಚ್ಛೆ ಅದು ತನಗಾಗಿ ಅಲ್ಲ; ಎನ್ನಬೇಕು. ತನಗಾಗಿ ಅಲ್ಲದುದನ್ನು ‘ಇಚ್ಛೆ’ ಎಂದು ಕೂಡ ಹೇಳುವಂತಿಲ್ಲ. ಇರಲಿ. ಇನ್ನೊಂದರ ಬಯಕೆ, ಬೀಜದ ಬಯಕೆ, ನೆರವೇರಲಿ ಎಂದು ದೇವರು ಬಯಸಿದುದು ತಾನು ಮರವಾಗಬೇಕೆಂಬ ಬೀಜದ ಬಯಕೆಗಿಂತಲೂ ಪ್ರಬಲ ಎನ್ನಬೇಕು. ಆಗ ನಮ್ಮ ಬಯಕೆಗಳ ಹಿಂದೆ, ನಾವಲ್ಲದ- ಈ ಅರ್ಥದಲ್ಲಿ ಪರಕೀಯನಾದ- ದೇವರ ಇಚ್ಛೆ ಇದೆ ಎನ್ನಬೇಕು. ನಮ್ಮ ಅಂದರೆ, ‘ಆತ್ಮೀಯ’ವಾದುದರ ಹಿಂದೆ ‘ಪರಕೀಯ’ ವಾದುದರ ಕೈವಾಡ! ‘ಪರಕೀಯ’ವಾದುದು ಪ್ರಬಲ. ನಮ್ಮ ಬಯಕೆಗಳು ನಮ್ಮನ್ನು ಆತಂಕಕ್ಕೀಡು ಮಾಡುತ್ತವೆಯಾದರೆ, ‘ಪರಕೀಯ’ವಾಗಿ ಪ್ರಬಲವಾದುದಕ್ಕೆ ಈ ಯಾವ ಬಂಧನವೂ ಇಲ್ಲ. ಅದು ಪ್ರಬಲವಾದುದರಿಂದಲೇ ಅದಕ್ಕೆ ಬಂಧನವಿಲ್ಲ. ಅರಿವಾಗಬೇಕಾದುದು ಇದೇ. ಅರಿವೆಂದರೆ, ಇದೇ. ಆದರೆ, ಇದು ಅರಿವಾಗಬೇಕಾದರೆ, ಆ ಅರಿವು’ ಜೀವಿಯ ಕನಸಿನ ಹಿಂದೆ ಇರುವುದರಿಂದ, ಕನಸನ್ನು ಅಂದರೆ, ಬಯಕೆಗಳನ್ನು ಪೂರ್ತಿಯಾಗಿ ಅನುಭವಿಸಬೇಕು. ಚಕ್ರದ ತಿರುಗುವಿಕೆ ಪೂರ್ತಿಯಾಗಬೇಕು. ಸಂಸಾರದ ಅನುಭವ, ಕೊರತೆ ಇಲ್ಲದಂತೆ, ಸವಿಯಲಾಗಬೇಕು!  ಇದೇ ದೇವರ ಏರ್ಪಾಟು!

ಇದರಲ್ಲೇನು ವಿಶೇಷ? ನಾವೀಗ ಬದುಕುತ್ತಿರುವುದು ಹೀಗೆಯೇ ಅಲ್ಲವೆ. ಎನ್ನಿಸಬಹುದು. ಆದರೆ, ಇಲ್ಲೊಂದು ವಿಶೇಷವಿದೆ. ಈಗ ನಾವು ಬದುಕುತ್ತಿರುವುದು ಕೇವಲ ನಮಗಾಗಿ. ಆತ್ಮ ಕೇಂದ್ರಿತವಾಗಿ. ಇಲ್ಲೊಂದು ಮೈ ಮರೆವಿದೆ.  ಇದಕ್ಕಿಂತ ಭಿನ್ನನಾಗಿ ನಾವಲ್ಲದ ಇನ್ನೊಂದನ್ನು, ಇನ್ನೊಬ್ಬನನ್ನು, ಇನ್ನೊಬ್ಬಳನ್ನು ಇನ್ನೊಂದು ಜೀವಿಯನ್ನು, ಈ ಅರ್ಥದಲ್ಲಿ ಪರಕೀಯವಾದುದನ್ನು ನಮ್ಮಂತೆ ಕಂಡು, ಆಂತರಿಕವಾದ ಭಾವಸಮೃದ್ಧಿಯಿಂದ ಅದರೊಡನೆ ಬದುಕಿದೆವಾದರೆ, ನಮ್ಮ ಸ್ವಾರ್ಥವಾವುದೂ ಇಲ್ಲದೆ ಅದನ್ನು ಆದರಿಸಿದೆವಾದರೆ- ಈ ಅನುಭವದ ಕೊನೆಯಲ್ಲಿ, ಪರಕೀಯನಾದ ಭಗವಂತನ ಆತ್ಮೀಯತೆಯ ಅರಿವು ಉಂಟಾಗುತ್ತೆ ಎನ್ನುತ್ತದೆ ಭಾಗವತ. ಭಗವಂತನನ್ನು ಪರಕೀಯನೆನ್ನುವುದು ಅವನು ನಮ್ಮಂತಲ್ಲ ಎನ್ನುವ ಅರ್ಥದಲ್ಲಿ. ಆದರೂ ಅವನ ಇಚ್ಛೆಯಲ್ಲದ ಇಚ್ಛೆ ಇಲ್ಲದೆ ಬೀಜವು ಮರವಾಗದು ಎನ್ನುವ ಅರ್ಥದಲ್ಲಿ ಅವನು ಆತ್ಮೀಯ. ಇಂಥ ಭಗವಂತನ ಇಚ್ಛೆಯ ಅರಿವು, ನಾವು ಪರಕೀಯವಾದುದನ್ನು ಆತ್ಮೀಯವೆಂಬಂತೆ ಬದುಕಿದ ಬದುಕಿನ ಅನುಭವದ ಅರ್ಕ ಎನ್ನುತ್ತದೆ ಭಾಗವತ. ಮತ್ತಿನ ಬದುಕೆಂದರೆ ಅದು ನೆನಪಿನ ಬದುಕು. ಅರಿವಿನ ಬದುಕು. ಒಂದು ರಾಷ್ಟ್ರಕ್ಕೇ ಹೆಸರು ಕೊಡಬಹುದಾದ, ಪರಕೀಯರನ್ನು ಆತ್ಮೀಯವಾಗಿಸಬಹುದಾದ ಬದುಕು ಎನ್ನುತ್ತದೆ ಭಾಗವತ.  ‘ಭರತನ ಕಥೆ’ ಹಾಗೆ ಪ್ರಸ್ತುತ.

ಸ್ವಾಯಂಭುವ ಮನುವಿನ ಹಿರಿಯ ಮಗ ಪ್ರಿಯವ್ರತ. ಆಧ್ಯಾತ್ಮಿಕತೆಯಲ್ಲಿ ಆಸಕ್ತ. ರಾಜ್ಯಬೇಡವೆಂದ. ಕಾಡಿಗೆ ನಡೆಯುವೆನೆಂದ. ಆಗ ಬ್ರಹ್ಮ ದೇವ ಬಂದು ಹೇಳಿದರಂತೆ: ಕಾಡಿಗೆ ನಡೆದರೆ ಗೆದ್ದೆನೆಂದುಕೋ ಬೇಡ. ಮನೆಯಲ್ಲಿದ್ದರೆ ಕೆಟ್ಟೆನೆಂದೆನಬೇಡ. ಕಾಡಾಡಿಗಳೆಲ್ಲ ಜ್ಞಾನಿಗಳಲ್ಲ. ಬಹಳ ಸೂಕ್ಷ್ಮತೆ ಬೇಕು. ಮನೆಯಲ್ಲಿದ್ದು ಗೆದ್ದವರುಂಟು.  ಹೋರಾಡುವವನಿಗೆ ಬಯಲಿಗಿಂತ ಕೋಟೆಯ ಆಸರೆ ಒಳ್ಳೆಯದು. ಮನೆಯಲ್ಲಿದ್ದು ಸಾಧನೆ ಎಂದರೆ ಕೋಟೆಯಲ್ಲಿದ್ದು ಹೋರಿದಂತೆ. ಪ್ರಿಯವ್ರತ, ಗೃಹಸ್ಥನಾಗಿ, ರಾಜನಾಗಿ ಆಧ್ಯಾತ್ಮ ನಿಷ್ಠವಾದ ಆಳ್ವಿಕೆಯನ್ನು ನಡೆಸಿದನಂತೆ. ಇಂಥ ಪ್ರಿಯ ವ್ರತನ ಪರಂಪರೆಯಲ್ಲಿ ಬಂದವನು ಭರತ ಚಕ್ರವರ್ತಿ. ನಾಭಿ, ಋಷಭ, ಭರತ- ಇದು ಪರಂಪರೆ. ಋಷಭದೇವ, ಭಗವದವತಾರ.  ದಿಗಂಬರ ಸನ್ಯಾಸಿಗಳ, ನೈಷ್ಠಿಕ ಬ್ರಹ್ಮಚರ್ಯವುಳ್ಳ ಮುನಿಗಳ ಧರ್ಮವನ್ನು ಬದುಕಿ ತೋರಿಸುವುದಕ್ಕಾಗಿ ಅವತರಿಸಿದವನು ಎನ್ನುತ್ತದೆ ಭಾಗವತ. ಜೈನ ಪರಂಪರೆಯ ಮೊದಲ ತೀರ್ಥಂಕರನಾದ ಋಷಭದೇವನನ್ನೇ ಭಾಗವತ ಹೀಗೆ ಕೊಂಡಾಡುವುದು ಎನ್ನುವುದು ವಿದಿತವೇ ಆಗಿದೆ. ಈ ಪರಂಪರೆಯ ಮೂಲ ಪುರುಷನಾದ ಪ್ರಿಯವ್ರತನಿಗೆ ಬ್ರಹ್ಮದೇವನಿತ್ತ ಉಪದೇಶದಂತೆ, ಋಷಭದೇವನಾದರೂ, ತನ್ನ ಮನೆತನದ ಬಾಳನ್ನು ಒಂದು ಹಂತದವರೆಗೆ ಬಾಳಿ, ರಾಜ್ಯವನ್ನಾಳಿ, ಮಕ್ಕಳನ್ನು ಪಡೆದು, ಉತ್ತರ ವಯಸ್ಸಿನಲ್ಲಿ ಅವಧೂತನಾದನಂತೆ. ಅಂದರೆ, ಮನೆ ತೊರೆದು ಹೊರಟು ಹೋದ.  ಮನೆಯಲ್ಲಿ ಇರುವುದು ಮನೆ ತೊರೆಯುವ ಸಿದ್ಧತೆಗಾಗಿಯೇ! ಅವಧೂತನಾದವನು, ತಿರುಗುತ್ತ, ಕರ್ನಾಟಕಕ್ಕೂ ಬಂದಿದ್ದ ಎನ್ನುತ್ತದೆ ಭಾಗವತದ ವಿವರ. ಭಕ್ತಿ ಭಾವ, ಬೆಳವಣಿಗೆ ಕಂಡದ್ದು ಕನ್ನಡ ನಾಡಿನಲ್ಲಿ ಎಂದು ಭಾಗವತ ಉಲ್ಲೇಖ ಮಾಡಿತ್ತು. ಈಗ ಅದಕ್ಕೆ ಕಾರಣಗಳನ್ನೂ ಕೊಡುತ್ತಿರುವಂತಿದೆ.

ಋಷಭದೇವನ ನೂರು ಮಂದಿ ಮಕ್ಕಳಲ್ಲಿ ಭರತನು ಹಿರಿಯ. ಈತ ಭಗವದ್ಭಕ್ತ. ಇವನ ಹೆಸರಿನಿಂದಲೇ ಈ ಶ್ರೇಷ್ಠವಾದ ನಾಡು ‘ಭಾರತ’ ಎಂದು ಹೆಸರಾಯಿತು.

ಭರತ ಚಕ್ರವರ್ತಿ ತನ್ನ ತಂದೆಯಂತೆಯೇ ಬಹುಕಾಲ ರಾಜ್ಯವಾಳಿದ. ಮನಸ್ಸು ಪಕ್ವವಾದಾಗ, ಕಾಡಿಗೆ ನಡೆದ.  ಹಿಮಾಲಯದ ತಪ್ಪಲಿನ ಒಂದು ಆಶ್ರಮ.  ಪಕ್ಕದಲ್ಲಿ ಸ್ವಚ್ಛ ಗಂಡಕೀ ನದಿ. ಅಲ್ಲಿ ತಪಸ್ಸು- ಸ್ವಾಧ್ಯಾಯಗಳಲ್ಲಿ ತೊಡಗಿದ.  ಏನಾಯಿತೆಂದರೆ, ಒಂದು ದಿನ ಬಸುರಿನ ಭಾರ ಹೊತ್ತು ಮೆಲ್ಲನೆ ನಡೆಯುತ್ತ ಬಂದು ಹೆಣ್ಣು ಜಿಂಕೆಯೊಂದು ನದಿಯ ನೀರು ಕುಡಿಯುತ್ತಿತ್ತು. ಮುನಿ ಪ್ರೀತಿಯಿಂದ ಈ ದೃಶ್ಯ ನೋಡುತ್ತಿದ್ದ. ಆಗ ಇದ್ದಕ್ಕಿದ್ದಂತೆ ಎಲ್ಲಿಯೋ ಹೊಂಚುತ್ತಿದ್ದ ಹೆಬ್ಬುಲಿಯೊಂದು ಗರ್ಜಿಸಿತು. ನೆಗೆಯುವ ಮುನ್ನದ ಭೀಕರ ಗರ್ಜನೆ ಅದು. ಜಿಂಕೆ ಗಾಬರಿಗೊಂಡು ಧಾವಿಸುವ ಯತ್ನದಲ್ಲಿ ಗಬ್ಬದ ಮರಿ ಹೊರಬಿತ್ತು. ಅದು ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ತಾಯಿ ಜಿಂಕೆ ಎಲ್ಲಿ ಬಿದ್ದು ಸತ್ತಿತೋ.  ಮುನಿ ನೋಡಿದ. ಅವನೊಳಗಡೆ ಕರುಣೆಯ ಹೊಳೆಯೊಂದು ಹರಿಯತೊಡಗಿತು. ಇರೋದು ಒಂದೇ ರಸವಂತೆ ಏಕೋ ರಸ: ಕರುಣ ಏವ.

ಮುನಿ ಈ ಜಿಂಕೆಯ ಮರಿಯನ್ನು ನೀರಿನಿಂದೆತ್ತಿದ. ಆಶ್ರ್ರಮಕ್ಕೊಯ್ದ. ಅಲ್ಲಿ ಸಾಕಲು ತೊಡಗಿದ. ತಬ್ಬಲಿ ಮರಿ ಎಂದು ಮುನಿಗೆ ಅಪಾರ ಮರುಕ. ಮರಿ ಕೂಡ ಸಹಜವಾಗಿ ಮುನಿಯನ್ನು ಹಚ್ಚಿಕೊಂಡಿತು. ಹೀಗೆ ಮುನಿ ಬಿಟ್ಟುಕೊಟ್ಟ ಸಂಸಾರ;  ಜಿಂಕೆಯ ರೂಪದಲ್ಲಿ ಮತ್ತೆ ಪ್ರತ್ಯಕ್ಷವಾಯಿತು. ಹಿಮಾಲಯದ ಶೀತ ಕಾಲದ ದಟ್ಟ ಮಂಜಿನಂತೆ ಮುನಿಗೆ ಮರಿಯಲ್ಲಿ ಆಸಕ್ತಿ ಬೆಳೆಯುತ್ತಿತ್ತು. ಜಿಂಕೆಯನ್ನು ಬಿಟ್ಟಿರಲಾರದಾಯಿತು ಮುನಿಯ ಪಾಡು! ಅಂತ:ಕರಣವೆಲ್ಲ ಜಿಂಕೆಯ ಬಗೆಗಿನ ಪ್ರೀತಿಯಿಂದ ತುಂಬಿ ಹೋಗಿ, ಮೃಗ ಮನುಷ್ಯ ಭೇದ, ಪರಕೀಯ- ಆತ್ಮೀಯ ಭೇದ ಅಳಿದು ಹೋಯಿತು. ಹೀಗಿರುವಾಗಲೇ ಭರತಮುನಿಗೆ ಕೊನೆಯ ದಿನ ಬಂತು.  ಸಾವೆಂಬ ಹೆಬ್ಬುಲಿ ನೆಗೆಯುತ್ತಿದ್ದಂತೆ, ಜಿಂಕೆಯ ಮರಿಯನ್ನು ಹೊಳೆಯಿಂದ ತಾನೆತ್ತಿಕೊಂಡ ಚಿತ್ರವನ್ನೆ ನೆನೆಯುತ್ತ ಮುನಿ ಅಸುನೀಗಿದ.

ಮುನಿ ಮತ್ತೆ ಜಿಂಕೆಯಾಗಿಯೇ ಹುಟ್ಟಿದನಂತೆ. ಆದರೆ, ಒಂದು ವ್ಯತ್ಯಾಸ ಇತ್ತು. ಜಿಂಕೆಯಾದರೂ ಮುನಿಗೆ ಹಿಂದಣ ನೆನಪಿತ್ತು. ಜಾತಿ ಸ್ಮರ ಎನ್ನುತ್ತಾರೆ. ತನ್ನ ಕಳೆದ ಜನ್ಮದ ನೆನಪು ಅಂತ:ಕರಣಕ್ಕೆ ಇರೋದು. ಪರಕೀಯ- ಸ್ವಕೀಯ ಭೇದ ಅಳಿಸಿ ಹೋದಂತೆ ಬದುಕಿದ್ದುದರಿಂದ, ಈ ನೆನಪು! ನೆನಪಿನ ಪರಿಣಾಮ ಮಾತ್ರ ವಿಲಕ್ಷಣ! ಜಿಂಕೆಗೆ ಈ ತನ್ನ ಜನ್ಮದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಈ ಜನ್ಮದಲ್ಲಿಯೇ ಸಾವಿನ ಅರಿವಿನಿಂದ ಬದುಕನ್ನು ನೋಡಿದರೆ ನಮ್ಮ ಆದ್ಯತೆಗಳೇ ಬದಲಾಗಬಲ್ಲವು. ಜಿಂಕೆಯಾದರೋ, ತನ್ನ ಮಂದೆಯಿಂದ ಅಗಲಿತು. ಏಕಾಂಗಿಯಾಯಿತು. ಕೆಲ ಕಾಲ ಬದುಕಿ, ಕೊನೆಗೆ ಅದೇ ಗಂಡಕಿಯಲ್ಲಿ ಮುಳುಗಿ ತನ್ನನ್ನು ನೀಗಿಕೊಂಡಿತು.

ಹುಟ್ಟು ಸಾವುಗಳ ಸುಳಿಯಲ್ಲಿ ನಿರಂತರ ಹರಿಯುತ್ತಿದೆ ಗಂಡಕೀ ನದಿ!

ಭರತಮುನಿ ಮರಳಿ ಮನುಷ್ಯನಾಗಿ ಹುಟ್ಟಿದ. ಬೆಳೆದ. ಈಗಲೂ ಭರತನಿಗೆ ಎಲ್ಲವೂ ನೆನಪಿತ್ತು. ತಾನು ಜಿಂಕೆಯಲ್ಲಿ ಆಸಕ್ತನಾಗಿ ಜಿಂಕೆಯೇ ಆದುದರ ನೆನಪು! ಅಂದರೆ, ಮಮಕಾರವೇ ಬದುಕಾಗಿ ಆಕಾರ ತಾಳುವ ಜೀವನ ರಹಸ್ಯ ತಿಳಿದಿತ್ತು. ನೆನಪಿದ್ದರೆ, ರಹಸ್ಯ ತಿಳಿದಿದ್ದರೆ- ಅದು ಭಗವಂತನದೇ ಸ್ಥಿತಿ! ಭರತಮುನಿಯನ್ನು ‘ಜಡ-ಭರತ’ ಎಂದು ಕರೆಯುತ್ತಿದ್ದರು. ಏಕೆಂದರೆ, ಅವನು ಏನೂ ಕ್ರಿಯಾಶೀಲತೆಯನ್ನು ತೋರಿಸುತ್ತಿರಲಿಲ್ಲ. ಅನಾಸಕ್ತನಿದ್ದ. ಕಾರಣವನ್ನು ತಿಳಿದುದರಿಂದ, ಕಾರ್ಯ ಪ್ರಪಂಚಕ್ಕೆ ಅವನು ಸ್ಪಂದಿಸುತ್ತಿರಲಿಲ್ಲ. ಮತಿ ಹೀನನಂತೆ ಇರುತ್ತಿದ್ದ. ಗಮನವೆಲ್ಲ ತನ್ನನ್ನು ಅಡಗಿಸಿಕೊಳ್ಳುವುದರಲ್ಲೇ- ದೇವರಂತೆ!

ಒಂದು ದಿನ ನಾಡಿನ ದೊರೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಸೈನಿಕರು ನಡೆದಿದ್ದರು. ಅಲ್ಲೆಲ್ಲೋ ಜಡಭರತ ಕಾಣಿಸಿಕೊಂಡ.  ನೀನೂ ಪಲ್ಲಕ್ಕಿಗೆ ಹೆಗಲು ಕೊಡು ಎಂದರು. ಈತ ಹೆಗಲು ಕೊಟ್ಟ. ಆದರೆ, ಜಡಭರತನ ಅಡ್ಡಾದಿಡ್ಡಿ ನಡಿಗೆಯಿಂದ ಪಲ್ಲಕ್ಕಿ ಕುಲುಕಾಡುತ್ತಿತ್ತು. ದೊರೆ ಕೋಪಗೊಂಡ. ಜಡಭರತನನ್ನು ಉದ್ದೇಶಿಸಿ: ಏನಿದು? ಯಾರನ್ನು ಹೊತ್ತಿರುವೆನೆಂದಾದರೂ ತಿಳಿದಿದೆಯೆ ನಿನಗೆ? ಈಗತಾನೇ ಹೆಗಲು ಕೊಟ್ಟವನು; ಬಹಳ ಮಾರ್ಗಕ್ರಮಣದಿಂದ ಆಯಾಸಗೊಂಡಂತೆ ಇದ್ದೀಯಲ್ಲ!  ಜೋಕೆ. ನಿನ್ನನ್ನು ಶಿಕ್ಷಿಸಬಲ್ಲೆ.

ಜಡಭರತ: ನಾನು ಯಾರನ್ನೂ ಹೊತ್ತಿಲ್ಲವಯ್ಯ. ಯಾವ ಮಾರ್ಗದಲ್ಲೂ ನಡೆದೂ ಇಲ್ಲ. ಏಕೆಂದರೆ ನಾನು ಎಲ್ಲಿಗೂ ತಲಪಬೇಕಾಗಿಯೂ ಇಲ್ಲ. ಹೇಳಬೇಕಾದರೆ- ನಾನು ತಲಪಿಯೇ ಇದ್ದೇನೆ.

ರಾಜ: ನೀನೇನು ಮಾತನಾಡುತ್ತಿದ್ದೀಯೆ, ಒಗಟಿನಂತೆ?

ಜಡಭರತ: ಒಗಟಲ್ಲ.  ಇರೋದೇ ಹಾಗೆ. ಈ ಪಲ್ಲಕ್ಕಿ, ಪಲ್ಲಕ್ಕಿಯನ್ನು ಹೊರುವವರು, ಪಲ್ಲಕ್ಕಿಯಲ್ಲಿ ಕೂತಿರುವವನು- ಎಲ್ಲರೂ ಎಲ್ಲವೂ ಮಣ್ಣಿನ ವಿಕಾರಗಳೇ. ಪಂಚಭೂತ ವಿಕಾರಗಳೇ.  ಮಣ್ಣು ಮಣ್ಣನ್ನು ಹೊತ್ತಿದೆ ಎನ್ನಬೇಕಷ್ಟೆ!

ರಾಜ: ಹಾಗೇನು? ಹಾಗಾದರೆ ಹೆಣಕ್ಕೂ ಜೀವಂತ ಮನುಷ್ಯನಿಗೂ ವ್ಯತ್ಯಾಸವಿಲ್ಲವೇನು?

ಜಡಭರತ: ಆ ವ್ಯತ್ಯಾಸ ಗೊತ್ತಿಲ್ಲದುದರಿಂದಲೇ ನೀನು ನಿನ್ನಂತೆಯೇ ಇರುವವರಿಂದ ಹೊರಿಸಿಕೊಂಡು ಮೆರೆಯುತ್ತಿದ್ದೀಯ. ರಾಜ- ಪ್ರಜೆ ಎಂಬ ವ್ಯತ್ಯಾಸ ಬೇರೆ! ಹೊರಬೇಕಾದ್ದು ಹೆಣವನ್ನು. ಜೀವಂತ ಮನುಷ್ಯನನ್ನಲ್ಲ. ಈ ವ್ಯತ್ಯಾಸ ತಿಳಿಯೋದಕ್ಕೇ ಈ ದೇಹ ನಮಗೆ ಸಿಕ್ಕಿದ್ದು!

ಇಷ್ಟು ಮಾತು ನಡೆದಾಗ ರಾಜ ಜಾಗೃತನಾದ. ಈತ ನಿಜವಾಗಿ ಜ್ಞಾನಿ. ಜಡನಂತೆ ಇದ್ದಾನೆ. ತಾನು ನಿಜವಾಗಿ ಜಡ. ಈ ಜ್ಞಾನಿಯನ್ನು ಆಶ್ರಯಿಸಿ, ಅರಿವನ್ನು ಪಡೆಯಲೇಬೇಕು. ತನ್ನ ಪುಣ್ಯ ಪರಿಪಾಕದಿಂದ ಈತ ಇಂದು ಸಿಕ್ಕಿದ್ದಾನೆ.

ರಾಜ ಪಲ್ಲಕ್ಕಿಯಿಂದ ಕೆಳಗಿಳಿದ. ಮತ್ತೆ ಪಲ್ಲಕ್ಕಿ ಏರಲಿಲ್ಲ. ತಾರ್ಕಿಕ ಅಂತ್ಯವಲ್ಲ. ತರ್ಕದ ಅಂತ್ಯವಾಯಿತು.

ತೋಳ್ಪಾಡಿ ಭಾಗವತ 18:ನರಮೃಗ ರೂಪದ ಭಗವಂತ

ಸೃಷ್ಟಿ ಎಂದರೆ ಒಂದು ಮಥನ’ವೇ. ಮಥನ ಎಂದಾಗ ಆ ಶಬ್ದದ ಮರ್ಯಾದೆಗೆ ತಕ್ಕಂತೆ ಅನೇಕ ಅರ್ಥಗಳು ಹೊಮ್ಮುತ್ತವೆ. ಅನೇಕಾನೇಕ ಸಂಗತಿಗಳು- ಪರಸ್ಪರ ವಿರುದ್ಧವೆನ್ನಿಸುವ ಸಂಗತಿಗಳು- ಇಲ್ಲಿ ಒಂದೆಡೆ ಸೇರಿವೆ ಎನ್ನುವ ಅರ್ಥ, ಹಾಗೆ ಸೇರಿರುವುದರಿಂದಲೇ ಮಥನ ಮಾಡಬೇಕೆನ್ನುವ ಅನಿವಾರ್ಯ ಒತ್ತಡ ಉಂಟಾಗುವುದು ಎನ್ನುವ ಅರ್ಥ, ಮಥನದಿಂದ ನಮಗೆ ಬೇಕಾದುದನ್ನು ಪಡೆಯಬಹುದೆನ್ನುವ ಅರ್ಥ, ಬೇಕಾದುದನ್ನು ಪಡೆಯುವ ತುಡಿತವು ಸಹಜವಾದುದಾದರೂ, ಹಾಗೆ ನಮಗೆ ಬೇಕಾದುದನ್ನು ಪಡೆಯುವುದರಲ್ಲಿಯೇ ನಾವು ಗೊತ್ತಿಲ್ಲದಂತೆ ನಮ್ಮನ್ನು ಸೀಮಿತಗೊಳಿಸಿಕೊಂಡಿರುತ್ತೇವೆ ಎನ್ನುವ ಅರ್ಥ, ಇದನ್ನೊಪ್ಪಿದರೆ ಪಡೆಯಬೇಕಾದದ್ದು’ ಪಡೆಯಬಾರದ್ದು’ ಎನ್ನುವ ದ್ವಂದ್ವದಲ್ಲಿಯೇ ನಾವು ಇನ್ನೂ ಬಳಲುತ್ತಿದ್ದೇವೆ ಎನ್ನುವ ಅರ್ಥ, ಈ ದ್ವಂದ್ವವನ್ನು ಮೀರುವುದೇ ಮಥನದ ನಿಜವಾದ ಫಲ ಎನ್ನುವ ಅರ್ಥ, ದ್ವಂದ್ವವನ್ನು ಮೀರಿದರೆ ಪರಸ್ಪರ ವಿರುದ್ಧವೆಂದು ನಾವು ಅಂದುಕೊಂಡಿರುವುದು ಹಾಗಲ್ಲದೇ ಬೇರೆಯೇ ರೀತಿಯಲ್ಲಿ ಗೋಚರವಾಗಬಹುದೆನ್ನುವ ಅರ್ಥ, ಆಗ ಮಥನಕ್ಕೆ ಪೂರ್ವದಲ್ಲಿ ಹಾಲ್ಗಡಲಲ್ಲಿ ಹೇಗೆ ಎಲ್ಲವೂ ಸಮರಸವಾಗಿ ಒಟ್ಟಿಗೆ ಇದ್ದುವೋ ಹಾಗೇ ಇಲ್ಲೂ ಇರಬಹುದೆನ್ನುವ ಕಾಣ್ಕೆ ಉಂಟಾಗಬಹುದು ಎನ್ನುವ ಅರ್ಥ- ಈ ಅರ್ಥ ಪರಂಪರೆಗಳೆಲ್ಲ ಮಥನ’ದಲ್ಲಿ ಒಳಗೊಂಡಿವೆ.

ಮರಳಿ ಹಾಲ್ಗಡಲಿನಂಥ ಸ್ಥಿತಿಯನ್ನು ಪಡೆಯುವುದು ಸಾಧ್ಯ ಎನ್ನುತ್ತದೆ ಭಾಗವತ’. ಆಗ ಎಲ್ಲವೂ, ವಿಷ-ಅಮೃತ ಎಲ್ಲವೂ ಅದರದರ ಜಾಗೆಯಲ್ಲಿ ಔಚಿತ್ಯಭಂಗವಿಲ್ಲದೇ; ರಸಭಂಗವಿಲ್ಲದೇ ಇರುತ್ತವೆ ಎನ್ನುತ್ತದೆ ಭಾಗವತ’. ಈ ತಿಳುವಳಿಕೆ ದೇವತೆಗಳಿಗೂ ಉಂಟಾಗಬೇಕಾದದ್ದು ಅನ್ನುತ್ತದೆ ಭಾಗವತ’. ಈ ತಿಳುವಳಿಕೆ ಇಲ್ಲದ ಎಲ್ಲವೂ ಬರಿಯ ಕರ್ಮಕಾಂಡ’ ಎನ್ನುತ್ತದೆ ಭಾಗವತ’.

ಹಾಗೆಂದು ಸಮುದ್ರ ಮಥನ’ದ ಕತೆಯಲ್ಲಿಯೂ ಕರ್ಮಕಾಂಡದ ಗುಣಗಳಿವೆ. ಭಗವಂತ, ಅಮೃತವನ್ನು ಹಂಚಲು ಮೋಹಿನಿಯಾಗಿ ಕಣ್ಣು ಕೊರೈಸಿದನಷ್ಟೇ! ದೇವತೆಗಳಿಗೆ ಅಮೃತವನ್ನು ಹಂಚಿದನಂತೆ. ದೈತ್ಯರಿಗೆ ಅಮೃತ ಸಿಗಲಿಲ್ಲ. ಅಮೃತ ಪ್ರಾಶನದಿಂದ ಆತ್ಮವಿಶ್ವಾಸವನ್ನು ಮತ್ತೆ ಪಡೆದ ದೇವತೆಗಳು ದೈತ್ಯರನ್ನು ಸೋಲಿಸಿದರು. ದೇವಲೋಕದ ಆಳ್ವಿಕೆಯನ್ನು ಮರಳಿ ಪಡೆದರು. ದೇವರಾಜನಾದ ಇಂದ್ರನು ದೈತ್ಯೇಶ್ವರನಾದ ಬಲಿಚಕ್ರವರ್ತಿಗೆ ಸಾಯಬೀಳುವಂತೆ ವಜ್ರಾಘಾತ ಮಾಡಿದನಂತೆ. ಆದರೆ ದೈತ್ಯ ಗುರುಗಳಾದ ಶುಕ್ರಾಚಾರ್ಯರು ತಮ್ಮ ಸಂಜೀವಿನಿ ಮಂತ್ರ ಬಲದಿಂದ ಬಲಿಯು ಚೇತರಿಸಿಕೊಳ್ಳುವಂತೆ ಮಾಡಿ ಮರಳಿ ಬಲಿಯನ್ನು ಬಲಿಷ್ಠನನ್ನಾಗಿ ರೂಪಿಸಿದರು. ದೇವತೆಗಳು- ದೈತ್ಯರ ನಡುವೆ ಮತ್ತೆ ಯುದ್ಧವಾಯಿತು. ದೇವತೆಗಳು ಮತ್ತೆ ಸೋತರು. ಹೀಗೆ ಅಮೃತಮಥನವೂ ಕರ್ಮಕಾಂಡದ ಸಿಕ್ಕುಗಳಿಂದ ಮುಕ್ತವಾಗದೇ, ಅರಿವಿನ ನವನೀತವನ್ನು ಪಡೆಯದೇ ಹೋಯಿತು. ಪಡೆಯದೇ  ಹೋದುದರ ಮಹತ್ವವನ್ನು ಹೊಳೆಯಿಸುವುದೇ ಇಂಥ ಕತೆಗಳ ಗುಣವೋ ಏನೋ. ಭಗವಂತ ನರಸಿಂಹನಾಗಿ ಕಂಬವನ್ನೊಡೆದು ಪ್ರಕಟವಾದ ಕತೆ ಗುಟ್ಟಾಗಿ ಏನು ಹೇಳುತ್ತದೋ ಕೇಳೋಣ.

ದೇವರ ಮನೆಯ ಬಾಗಿಲು ಕಾಯುವವರಂತೆ ಆ ಇಬ್ಬರು. ಅವರ ಹೆಸರು ಜಯ-ವಿಜಯ’. ದೇವರ ಪಾರ್ಷದರಿಗೆ ಸೋಲೆಲ್ಲಿಯದು? ಸಮಸ್ಯೆ ಏನೆಂದರೆ ತಮಗೆ ಸೋಲಿಲ್ಲ ಎಂದು ಇವರಿಗೆ ತಿಳಿದುಬಿಟ್ಟಿತು. ತಮ್ಮ ಹೆಸರಿನ ಮೇಲೆ ಹೆಮ್ಮೆಯುಂಟಾಯಿತು. ದೇವರನಾಮ ಮರೆತುಹೋಯಿತು. ಇಂಥ ಸೇವಕರಿಂದ ಕಾಪಾಡಲ್ಪಡಬೇಕಾದ ಪಾಡು ದೇವರಿಗೂ ಬಂದಿತೆನ್ನಬೇಕು! ಆಗಿನಿಂದಲೇ ದೇವರು ಕಂಬದ ಮರೆಯಲ್ಲಿ ಅಡಗುವುದಕ್ಕೆ ಕಲಿತನೋ! ಒಮ್ಮೆ ಏನಾಯಿತೆಂದರೆ ಸನಕಾದಿ ಮುನಿಗಳು- ಇವರು ಬ್ರಹ್ಮಮಾನಸ ಪುತ್ರರು- ದೇವರ ದರ್ಶನಕ್ಕೆ ಬಂದರಂತೆ. ಆಗ ಈ ಜಯ-ವಿಜಯರು ತಮ್ಮ ಬಂಗಾರದ ಬೆತ್ತ ಝಳಪಿಸಿ ಈಗ ಸಮಯವಿಲ್ಲ ಎಂದರಂತೆ. ಎಲ ಎಲಾ!  ಮೊದಲಿಗೆ ದೇವರಿಗೆ ಮನೆಯೇ ಬೇಕಿಲ್ಲ, ಲೋಕವೇ ಮನೆ. ಮನೆಯಿದ್ದರೆ ಅದಕ್ಕೆ ಬಾಗಿಲಿದ್ದರೆ ಅದು ತೆರೆದ ಬಾಗಿಲೇ. ತೆರದ ಬಾಗಿಲಿಗೆ ಕಾವಲು ಏಕೆ? ಕಾವಲು ಇದ್ದರೆ ಹಾಗೆ ಕಾಯುವವರಿಗೆ ಸೊಕ್ಕು ಎಂಬುದೇ ಇಲ್ಲ. ಹೀಗಿರಲಾಗಿ ದೇವರು ಎಂಬ ದೇವರು ಈ ಸೊಕ್ಕಿನ ಮಂದಿಯ ನಡುವೆ ಬಾಳುವೆ ಮಾಡುವುದು ಹೇಗೆ? ಸನಕಾದಿಗಳಿಗೆ ನಿಜಕ್ಕೂ ಸಿಟ್ಟು ಏರಿತು. ದೇವರ ಬಳಿಗೆ ಹೋಗುವವರನ್ನು ತಡೆಯುವ ಮಂದಿ ನೀವು. ಇದು ರಾಕ್ಷಸೀಯ ಗುಣ. ನೀವು ರಾಕ್ಷಸರೇ ಆಗಿಹೋಗಿ. ಆಗ ನಿಮ್ಮನ್ನು ನೇರವಾಗಿ ಎದುರಿಸಬಹುದು ಎಂದು ಶಾಪವಚನ ನುಡಿದರಂತೆ.

ಹಾಗೆ ಹಿರಣ್ಯಾಕ್ಷ, ಹಿರಣ್ಯಕಶಿಪು ಎಂಬ ಈರ್ವರು ಮಹಾದೈತ್ಯರ ಜನನವಾಯಿತು. ಇವರಲ್ಲಿ ಹಿರಣ್ಯಾಕ್ಷನನ್ನು ಭಗವಂತ ಮಹಾವರಾಹನಾಗಿ ಬಂದು ಸಂಹಾರ ಮಾಡಿ ಭೂಮಿಯನ್ನು ಉದ್ಧರಿಸಿದ ಕತೆ ಮೊದಲು ನಡೆಯಿತು. ಈ ಕಾರಣದಿಂದ ಹಿರಣ್ಯಕಶಿಪುವಿಗೆ ನಾನಾ ಅವತಾರಗಳನ್ನು ತಾಳಬಲ್ಲ; ಹರಿ, ನಾರಾಯಣ, ವಿಷ್ಣು ಎಂದೆಲ್ಲ ಲೋಕದಲ್ಲಿ ಕೊಂಡಾಡಲ್ಪಡುವ ದೇವರ ಬಗ್ಗೆ ಇನ್ನಿಲ್ಲದ ದ್ವೇಷ ಉಂಟಾಯಿತು. ಅವನ ಕಿವಿಗಳಿಗೆ ದೇವರ ನಾಮ ಕೇಳಿದರೆ ಬಗೆ ಹೊತ್ತಿ ಉರಿಯುತ್ತಿತ್ತು. ಎಲ್ಲೆಡೆ ತನ್ನ ನಾಮವೇ ಕೇಳುತ್ತಿರಬೇಕು; ಎಂದರೆ ತಾನೇ ದೇವರಾಗಬೇಕು; ಹೀಗಲ್ಲದೇ ದೇವರನ್ನು ಹೊಡೆದೋಡಿಸುವುದಕ್ಕೆ ಬೇರೆ ದಾರಿಯಿಲ್ಲ ಎನಿಸಿತು. ಇದನ್ನು ಸಾಧಿಸುವುದಕ್ಕೆ ಹಿರಣ್ಯಕಶಿಪು ಉಗ್ರತಪಸ್ಸಿಗೆ ನಡೆದನಂತೆ.

ಹಿರಣ್ಯಕನ ಚಿಂತೆ ಇದು: ತನ್ನ ತಮ್ಮನನ್ನು ವರಾಹ ರೂಪದಿಂದ ಬಂದು ವಿಷ್ಣು ಕೊಂದು ತೆಗೆದ. ತಾನು ಹೀಗೆಲ್ಲ ಸಾಯಬಾರದು. ಸಾಯಲೇಬಾರದು. ಅಂಥ ವರ, ಬ್ರಹ್ಮನಿಂದ ಸಿಗದಿದ್ದರೆ ಅದಕ್ಕೆ ಅತಿಸಮೀಪವಾದ ವರ ಸಿಗಬೇಕು. ಹೀಗೆ ತನ್ನ ರಕ್ಷಣೆಯನ್ನು ಮೊದಲು ಸಾಧಿಸಿ, ಆಮೇಲೆ ದೇವತೆಗಳನ್ನೂ ಅವರ ನೆರವಿಗೆ ಬರುವ ಹರಿಯನ್ನು ತುಡುಕಬೇಕು!

ದೈತ್ಯ ಹೀಗೆ ಚಿಂತಿಸುತ್ತಾ ತಪಸ್ಸಿಗೆ ತೊಡಗಿದ. ಅವನ ಮಡದಿ ಪರಮಸಾಧ್ವಿಯಾದ ಕಯಾದು ಆಗ, ಗರ್ಭವನ್ನು ಹೊತ್ತು ಅರಮನೆಯಲ್ಲಿದ್ದಳು. ಅಲ್ಲಿಗೆ ನಾರದ ಮುನಿ ಬಂದು ಭಗವಂತನ ಹಿರಿಮೆಯ ಮಾತುಗಳನ್ನಾಡುತ್ತಿದ್ದರಂತೆ. ಅವರು ಯಾರನ್ನು ಕುರಿತು ಹೀಗೆ ಮಾತನಾಡುತ್ತಿದ್ದರೋ! ತಾಯ ಒಡಲಲ್ಲಿರುವ ಮಗುವಿಗಂತೂ ಕತ್ತರಿಸಲಾಗದ ಹೊಕ್ಕುಳ ಬಳ್ಳಿಯ ಸಂಬಂಧವೊಂದು ಹರಿನಾಮದ ಜೊತೆ ಉಂಟಾಯಿತು!

ತಂದೆ ತನ್ನ ವಿರುದ್ಧ ಮನಸ್ಸು ಮಸೆಯುತ್ತಿದ್ದರೆ, ಮಗನ ಮನದಾಳದಲ್ಲಿ ಭಗವಂತ ಅಡಗಿಕೊಂಡಿದ್ದ! ತಪಸ್ಸು ಫಲಿಸಿತು. ಹಿರಣ್ಯಕನಿಗೆ ಬ್ರಹ್ಮದೇವ ಮೈಗೊಟ್ಟ, ಓಗೊಟ್ಟ. ಬಹಳ ಯೋಚನೆ ಮಾಡಿ ದೈತ್ಯ ವರವನ್ನು ಕೇಳಿದ. ಯಾರಿಂದಲೂ ತಾನು ಸಾಯಬಾರದು-ದೇವ,ದಾನವ, ಮಾನವರಾಯ್ತಲ್ಲ; ಯಾವ ಪ್ರಾಣಿಯಿಂದಲೂ ಸಾಯಬಾರದು. ಯಾವ ಆಯುಧಗಳಿಂದಲೂ ತಾನು ಸಾಯಬಾರದು. ಹಗಲು-ಇರುಳುಗಳಲ್ಲಿ ಯಾವ ಕಾಲದಲ್ಲಿಯೂ ತಾನು ಸಾಯಬಾರದು. ಭೂಮಿ-ಆಕಾಶಗಳಲ್ಲಿ ಯಾವ ದೇಶದಲ್ಲಿಯೂ ತಾನು ಸಾಯಬಾರದು. ಹೀಗೆ… ಬ್ರಹ್ಮದೇವನಿಗೆ ಅಚ್ಚರಿಯಾಯಿತು. ತಪಸ್ಸಿನ ಕೊನೆಯಲ್ಲಿಯೂ ಸ್ವ-ಕೇಂದ್ರಿತ ಎಚ್ಚರದಲ್ಲಿ ಯಾರಾದರೂ ಇರಬಲ್ಲರೇ ಎಂದು. ಆ ಅಚ್ಚರಿಯಿಂದಲೇ ಬ್ರಹ್ಮದೇವ ಅಸ್ತು ಎಂದ.

ಮುಂದಿನದು ತನಗೆ ಸಾವಿಲ್ಲವೆಂದುಕೊಂಡವನ ಕತೆ. ಸಾವಿಗಿಂತ ಹೆಚ್ಚು ಸಾವಿನ ಭಯದಲ್ಲಿಯೇ ಸಾಯುತ್ತಿರುವ ಲೋಕವನ್ನು ಗೆಲ್ಲುವುದು ಇಂಥವನಿಗೆ ಎಷ್ಟು ಹೊತ್ತು! ಲೋಕಲೋಕಗಳು ಹಿರಣ್ಯಕನ ದಬ್ಬಾಳಿಕೆಗೆ ತಳಮಳಿಸಿದವು. ದೇವತೆಗಳು ಸೋತರು. ದೇವರನಾಮವನ್ನು ಹೇಳುವವರೇ ಇರದಂತೆ ಹಿರಣ್ಯಕ ನೋಡಿಕೊಂಡ. ಮೃದು ಮನಸ್ಸುಗಳೆಲ್ಲ ಇನ್ನಿಲ್ಲದಂತೆ ಘಾಸಿಗೊಂಡವು. ದೇವತೆಗಳು ಭಗವಂತನಲ್ಲಿ ಇದನ್ನೆಲ್ಲ ತೋಡಿಕೊಂಡರಂತೆ. ಭಗವಂತ ನಸುನಗುತ್ತಾ ಹೇಳಿದನಂತೆ: ತಂದೆ ಮಗನ ಮೈಗೆ ನನ್ನ ನೆಪದಲ್ಲಿ ಕೈ ಹಚ್ಚುವವರೆಗೆ ಸ್ವಲ್ಪ ತಡೆಯಿರಿ’. ತಂದೆಯೆಂದರೆ ಹಿರಣ್ಯಕಶಿಪು. ಮಗನೆಂದರೆ ಕಯಾದು ಹೆತ್ತ ಹಿರಣ್ಯಕನ ಮಗ ಪ್ರಹ್ಲಾದ!

ಈ ಮಾತು ಅರ್ಥವಾಗುವವರಿಗೆ ಆಯಿತು. ಜಯ-ವಿಜಯರು ಮೊದಲೇ ಸೊಕ್ಕಿದ್ದರು. ಯಾವಾಗ ಸನಕಾದಿಗಳ ಮೇಲೆ ಸೊಕ್ಕು ತೋರಿಸಿದರೋ ಆಗ ಅವರ ಪತನವಾಯಿತು. ಆ ದೃಶ್ಯ ಪುನರಭಿನೀತವಾಗಬೇಕಿತ್ತು. ಆಗಬೇಕಾದರೆ ಪ್ರಹ್ಲಾದನ ಮೇಲೆ ಹಿರಣ್ಯಕ ಕೆರಳಬೇಕು!

ಆ ದಿನ ಬಂತು!

ದೈತ್ಯರ ಗುರುಕುಲದಲ್ಲಿ ಪ್ರಹ್ಲಾದ ಓದುತ್ತಿದ್ದ. ಅಲ್ಲಿ ತಾನು ತಾಯ ಒಡಲಲ್ಲಿ ಇದ್ದಾಗ ಉಂಡ ಹರಿನಾಮದ ರುಚಿಯನ್ನು ಬಿತ್ತುತ್ತಿದ್ದ. ಬಾಲ್ಯದ ಅನುಭವವು ಪ್ರಬಲ ಎನ್ನುತ್ತಾರೆ. ಅದು ನಿಜವಾದರೆ ಬಾಲ್ಯದ ಬಾಲ್ಯವಾಗಿರುವ, ತಾಯ ಒಡಲಲ್ಲಿ ಇದ್ದಾಗ ಪಡೆದ ಅನುಭವವು ನಮ್ಮ ಜೀವಾಳದ ನಿಜವಾಗಿರಬೇಕು! ಅದನ್ನು ಬಿಟ್ಟು ಬದುಕುವಂತಿಲ್ಲ. ಹೊಕ್ಕುಳ ಬಳ್ಳಿಯಲ್ಲಿ ಹರಿದು ಬಂದದ್ದು ಕೊನೆಯ ಉಸಿರಿನವರೆಗೆ ಬಿಟ್ಟಗಲಲಾರದು. ಸಾವಿನ ಕ್ಷಣದಲ್ಲಿ ಭಗವಂತನನ್ನು ನೆನೆಯಬೇಕು ಎನ್ನಲಾಗಿದೆ. ನೆನೆಯಬೇಕಾದರೆ ತಾಯ ಒಡಲಲ್ಲಿ ಇರುವಾಗಲೇ ಕೇಳಿದುದಾಗಿರಬೇಕು. ಅದು ಬದುಕಿನ ನಿಜವಾದ ಸಂಗಾತಿ.

ತನ್ನ ಮಗ ಪ್ರಹ್ಲಾದ ಹರಿಭಕ್ತಿಯ ಮಹತ್ವವನ್ನು ಬಿತ್ತರಿಸುತ್ತಿರುವ ಸುದ್ದಿ ಹಿರಣ್ಯಕನನ್ನು ಇನ್ನಿಲ್ಲದಂತೆ ಕೆರಳಿಸಿತು. ಎಲಾ ಮನೆಮುರುಕ’. ಹಿರಣ್ಯಕ ತನ್ನ ಮಗನಿಗೆ ಹೀಗೆ ಬೈದನೋ, ದೇವರಿಗೆ ಬೈದನೋ, ಇಬ್ಬರಿಗೂ ಬೈದನೋ! ಪ್ರಹ್ಲಾದನನ್ನು ಒಲಿಸುವ ಎಲ್ಲಾ ಪ್ರಯತ್ನಗಳೂ ವಿಫಲವಾದ ಮೇಲೆ ಹುಡುಗನಿಗೆ ಚಿತ್ರಹಿಂಸೆ ಶುರುವಾಯಿತು. ಮಗನ ಮೇಲೆ ತಂದೆಗೆ ಕಡುಕೋಪ. ಮಗನಿಗೆ ತಂದೆಯ ಬಗ್ಗೆ ಅಪಾರ ಕನಿಕರ! ತನಗೆ ಬೇಕಾದದು ಸಿಗಲಿಲ್ಲವೆಂದು ದೇವರ ಮೇಲೆ ಕೋಪಗೊಳ್ಳುವ ಮಾನವರ ಕುರಿತು ದೇವರಿಗೆ ಇರುವ ಕನಿಕರದಂತೆ! ಇಂಥದ್ದೊಂದು ವಿಲಕ್ಷಣ ಸಂಘರ್ಷದಲ್ಲಿ, ಎಲ್ಲ ಬಗೆಯ ಹಿಂಸೆಗಳಿಂದಲೂ ಪ್ರಹ್ಲಾದ ಘಾಸಿಗೊಳ್ಳದೇ ಪಾರಾಗಿ ನಿರ್ಭಯವಾಗಿ ಹರಿನಾಮ ನುಡಿಯುತ್ತಿದ್ದ.

ಹರಿನಾಮದ ಬಲದಿಂದ, ಸಾವಿನ ಭೀತಿಯನ್ನು ಹುಡುಗ ಗೆದ್ದಿದ್ದ. ಸಾವಿನ ಭಯವನ್ನು ಗೆದ್ದವನನ್ನು ಯಾರೂ ಏನೂ ಮಾಡಲಾರರು ಎಂದು ಹಿರಣ್ಯಕ ತಿಳಿಯಬಹುದಾಗಿತ್ತು. ಯಾವುದರಿಂದಲೂ ಸಾಯದಂತೆ ವರಪಡೆದವನು ತಾನು. ಅಂಥ ಯಾವ ವರವನ್ನು ಪಡೆಯದೆಯೂ ಪ್ರಹ್ಲಾದ ಸಾವನ್ನು ಮೀರಿನಿಂತದ್ದು ಹೇಗೆ ಎಂದು ಯೋಚಿಸಬಹುದಾಗಿತ್ತು. ಆದರೆ ತಂದೆ, ಕೋಪದಿಂದ ಹುಚ್ಚನಾಗಿದ್ದ. ಕೊನೆಗೆ ಪ್ರಹ್ಲಾದನ ಬಳಿಯೇ ಅವನ ಪ್ರೀತಿಯ ಹರಿಯ ಬಗ್ಗೆ ಕೇಳಿದ:

ಎಲ್ಲಿದ್ದಾನೆ ನೀನು ಹೇಳುವ ಹರಿ?
ಎಲ್ಲಿದ್ದಾನೆ? ಹಾಗೆ ಕೇಳಬೇಕಾಗಿಯೇ ಇಲ್ಲ. ಎಲ್ಲಿಲ್ಲ! ಅವನು ಎಲ್ಲೆಡೆ ಇದ್ದಾನೆ. ಈ ಲೋಕವೆಲ್ಲವೂ ಅವನ ಮನೆ. ನಿಜಕ್ಕಾದರೆ ಅವನ ಮನೆಯಲ್ಲೇ ಇರುವುದು. ಅವನ ಮನೆಯಲ್ಲೇ ಇದ್ದು ಯಜಮಾನನೆಲ್ಲಿದ್ದಾನೆ ಎಂದು ಸೊಕ್ಕಿನಿಂದ ಕೇಳುವುದು ಒಳ್ಳೆಯ ಮನೆಮಂದಿಯ ಲಕ್ಷಣ ಅಲ್ಲ. ನಿನ್ನಲ್ಲಿ ಉಪದೇಶ ಕೇಳಿಲ್ಲ. ಕಾವ್ಯಾತ್ಮಕ ಮಾತು ಬೇಕಿಲ್ಲ. ನಾನು ಪ್ರಯೋಗವಿಲ್ಲದೇ ನಂಬತಕ್ಕವನಲ್ಲ. ಎಲ್ಲೆಡೆ ಇದ್ದಾನೆ ಎಂದ ಮೇಲೆ ಈ ಕಂಬದಲ್ಲೂ ಇದ್ದಾನೇನು? ಈ ಒಂದು ಮಾತಿನಿಂದ ಪ್ರಹ್ಲಾದನಲ್ಲಿ ಒಳನೋಟ ಉಂಟಾಯಿತು.

ತಾನು ಬಲಿಯಾಗುವ ಮಾತನ್ನು ತನಗೆ ಗೊತ್ತಿಲ್ಲದಂತೆ ತಂದೆ ಆಡುತ್ತಿದ್ದ. ತಂದೆಯ ಹೊಡೆತದಿಂದಲೇ ಕಂಬ ಮುರಿಯುವುದು. ಆ ಹೊಡೆತವನ್ನು ಒಪ್ಪಿಕೊಂಡೇ ಭಗವಂತ ಪ್ರಕಟವಾಗುವುದು! ಸರ್ವಶಕ್ತಿಯನ್ನೂ ಕೈಗಳಲ್ಲಿ ಕೂಡಿಸಿ ಹೊಡೆದ ಹೊಡೆತವನ್ನು ಭಗವಂತ ಒಪ್ಪಿದನೆಂದರೆ ಹೊಡೆದವನ ಸರ್ವಶಕ್ತಿಯನ್ನೂ ಹೀರಿಕೊಂಡೇ ಅವನು ಪ್ರಕಟವಾಗುತ್ತಾನೆ. ಅಲ್ಲಿಗೆ ತಂದೆ ಎಂಬ ದೈತ್ಯಲೋಕದ ಆಧಾರಸ್ತಂಭ ಮುರಿದುಬಿದ್ದಂತೆ! ಹುಡುಗ ಅಪಾರ ಮರುಕದಿಂದ, ತಂದೆಯನ್ನು ತನ್ನೆರಡು ಕಣ್ಣುಗಳಲ್ಲಿಯೂ ತುಂಬಿಕೊಂಡ. ಮರುಕ್ಷಣ ನೆನೆದ. ಭಗವಂತ ಲೋಕದ ತಂದೆ. ಲೋಕದ ಈ ತಂದೆಯನ್ನು, ತನ್ನ ತಂದೆ ಒಮ್ಮೆ ನೋಡಿಬಿಡಲಿ. ಆ ತಂದೆಯ ತೊಡೆಯಲ್ಲಿ ಮಲಗಿ ಮಗನ ಪ್ರೀತಿಯನ್ನೊಮ್ಮೆ ಪಡೆಯಲಿ!

ಹಿರಣ್ಯಕನ ಹುಡುಗ ಸ್ಪೋಟಕ್ಕೆ ಕಾದು ಕಂಪಿಸುತ್ತಿರುವ ಕಂಬಕ್ಕೆ ಕೈ ಮುಗಿದನಂತೆ. ಇದನ್ನು ನೋಡಿದ ತಂದೆಗೆ ರೋಷ ತಡೆಯಲಾಗಲಿಲ್ಲ. ತನ್ನ ಸರ್ವಶಕ್ತಿಯನ್ನು ಉಪಯೋಗಿಸಿ ಕಂಬಕ್ಕೆ ಹಿರಣ್ಯಕ ಹೊಡೆದ. ದೊಡ್ಡ ಸದ್ದಿನೊಂದಿಗೆ ಕಂಬ ಮುರಿದುಬಿತ್ತು. ಆ ಬಯಲಿನಲ್ಲಿ ಗುಹೆಯಿಂದ ಧುಮ್ಮಿಕ್ಕಿದ ರೋಷಬೀಷಣ ನರಸಿಂಹಾಕೃತಿ. ಒಂದು ಕ್ಷಣದ ಅವಕಾಶವಿತ್ತು ಹಿರಣ್ಯಕಶಿಪುವಿಗೆ- ನರಸಿಂಹನ ರೂಪವನ್ನು ಗ್ರಹಿಸುವುದಕ್ಕೆ. ಗ್ರಹಿಸಿಯೇ ಗ್ರಹಿಸಿದ.

ತಾನು ಯಾರಿಂದಲೂ ಮನುಷ್ಯರಿಂದಲೂ ಪ್ರಾಣಿಯಿಂದಲೂ ಸಾಯಬಾರದೆಂದು ವರ ಬೇಡಿದೆ. ನರಮೃಗ ರೂಪವಾಗಿ ಭಗವಂತ ಪ್ರಕಟವಾದಾನೆಂದು ಊಹಿಸಲಾರದೇ ಹೋದೆ. ಈ ರೂಪವೊದು ಅದ್ಭುತ! ಯಾವ ಆಯುಧದಿಂದಲೂ ಸಾಯಬಾರದು ಎಂದುಕೊಂಡೆ. ನರಸಿಂಹನ ಕೂರುಗುರು ನನ್ನನ್ನು ಮುಟ್ಟಬಹುದೆಂದುಕೊಳ್ಳಲಾರದೇ ಹೋದೆ. ಈಗ ಈ ಕೂರುಗುರ ಸವಿಯನ್ನು ಸವಿಯುವೆ. ಹಗಲು -ಇರುಳುಗಳಲ್ಲಿ ಸಾಯಲಾಗದೆಂದುಕೊಂಡೆ. ಹಾ. ಮುಸ್ಸಂಜೆಯಲ್ಲಿ ಸಿಂಹ ಬೇಟೆಗೆ ಹೊರಟಿದೆ. ಭೂಮಿ, ಆಕಾಶದಲ್ಲಿ ಸಾಯಬಾರದು ಎಂದೆ. ಏನು, ತನ್ನ ತೊಡೆಯಮೇಲೆ ಎಳೆದುಕೊಳ್ಳುವನೇನು?

ನನ್ನ ಮಾತುಗಳನ್ನು ಪಾಲಿಸಿಯೇ, ತಾನು ಊಹಿಸಲಸಾಧ್ಯವಾದ ಇನ್ನೊಂದು ರೀತಿಯಲ್ಲಿ ಸಜ್ಜಾಗಬಲ್ಲೆನೆಂದು ದೇವರು ತೋರಿಸಿಕೊಟ್ಟ. ದೇವರನ್ನು ನೋಡಲು ಈಗ ಸಮಯವಿಲ್ಲವೆಂದಾಗ ಸನಕಾದಿಗಳ ಕಣ್ಣಲ್ಲಿ ದಿಗ್ಭ್ರಮೆಯನ್ನು, ಕಂಬದಲ್ಲೂ ಇದ್ದಾನೇನು ಎಂದು ತಾನು ಅಬ್ಬರಿಸುವಾಗ ತನ್ನ ಕಣ್ಣುಗಳಲ್ಲಿ ಕಂಡೆ! ನನ್ನ ಮಾತುಗಳನ್ನು ಪಾಲಿಸಿದ ಈ ದೇವರ ಮನೆಯ ಬಾಗಿಲು ಕಾಯುವ ಭಂಟನಾದರೆ ಸಾಕು!
ಇಷ್ಟು ಭಾವ, ಹಿರಣ್ಯಕನ ಅಂತರಾಳದಲ್ಲಿ ಹಾದುಹೋಗುತ್ತಿರುವಾಗ, ನರಸಿಂಹ, ತನ್ನ ತೊಡೆಯ ಮೇಲೆ ರಕ್ಕಸನನ್ನು ಎಳಕೊಂಡಾಗಿತ್ತು. ಕೂರುಗುರುಗಳು ಕರುಳನ್ನು ಸೆಳೆಯುತ್ತಿದ್ದವು. ಕರುಳನ್ನು ಹೀಗೆ ಸೆಳೆಯುವುದೂ ಉಂಟೇನು!

ತೋಳ್ಪಾಡಿ ಭಾಗವತ 19:ತಿರುಪೆ ಎತ್ತಿದ ಭಗವಂತ

ನಾವು ಪ್ರಕೃತಿಯಿಂದ ಎಲ್ಲವನ್ನೂ ಪಡೆಯುವೆವು. ನಾವೆಂಬ ನಾವೇ ಪ್ರಕೃತಿಯ ಆವಿಷ್ಕಾರವಾಗಿರುವುದರಿಂದ ಪ್ರಕೃತಿಯೇ ನಮ್ಮನ್ನು ಪಡೆದಿದೆ ಎನ್ನುವುದೇ ಸರಿಯಾದ ಮಾತು. ಸ್ವಲ್ಪ ಮುಂದುವರಿದು, ಪ್ರಕೃತಿಗೆ ನಮ್ಮಿಂದ ತನ್ನೆಲ್ಲವನ್ನೂ ಪಡೆಯಬೇಕಿದೆ ಎನ್ನಬಹುದು. ಒಂದು ಅರ್ಥದಲ್ಲಿ ಪ್ರಕೃತಿ ಎಲ್ಲವನ್ನೂ ಸದಾ ಪಡೆದುಕೊಂಡೇ ಇದೆಯಾದರೂ ಅದಕ್ಕೆ ನಮ್ಮ ಮೂಲಕ ಮರಳಿ ಎಲ್ಲವನ್ನೂ ಪಡೆಯಬೇಕಿದೆ. ಸದಾ ಪಡೆದುಕೊಂಡಿರುವುದಕ್ಕೆ, ಕೊಟ್ಟು- ಪಡೆಯುವ ನಾಟಕವೇ ಇಷ್ಟ! ಮರಳಿ ಪಡೆಯುವುದೆನ್ನುವುದು, ಇನ್ನೊಮ್ಮೆ ಹುಟ್ಟುವುದೆನ್ನುವುದು, ಈಗ ಇರುವ ಜಡಸ್ಥಿತಿಯನ್ನು ಪ್ರಶ್ನಿಸುವ, ನಿರಾಕರಿಸುವ ಮನ:ಸ್ಥಿತಿಯಲ್ಲಿರುವುದು- ಇವೆಲ್ಲ ಸೃಷ್ಟಿಶೀಲತೆಯ ದಾರಿಗಳೇ ಆಗಿವೆ. ಇಂಥ ಸೃಷ್ಟಿಶೀಲತೆಯ ಮೂಲಕವೇ ಸೃಷ್ಟಿಯು ತನ್ನನ್ನು ಮರಳಿ ಕಂಡರಿಸುತ್ತ ಸಾಗುತ್ತದೆ. ತನ್ನನ್ನು ಮೀರುತ್ತಲೂ ಸಾಗುತ್ತದೆ ಎನ್ನಬಹುದು. ಹುಟ್ಟನ್ನು ದಾಟುವುದೆನ್ನುವುದು- ಇನ್ನೊಮ್ಮೆ ಹುಟ್ಟುವುದೆನ್ನುವುದು, ಇವೆರಡೂ ಸತ್ಯದ ಎರಡು ಮುಖಗಳು.

ಇನ್ನೊಮ್ಮೆ ಎನ್ನುವುದು ಪ್ರಕೃತಿಯ ನುಡಿಗಟ್ಟು. ಇನ್ನೊಮ್ಮೆ ಎನ್ನುವಾಗ ಅದು ವೈವಿಧ್ಯದ ನುಡಿಗಟ್ಟು ಕೂಡ; ಸೃಷ್ಟಿಶೀಲತೆಯ ನುಡಿಗಟ್ಟು ಕೂಡ. ಬೀಜವು ಹಣ್ಣಿನಲ್ಲಿ ಮರಳಿ ತನ್ನನ್ನು ಕಂಡರಿಸಿದಂತೆ!

ನಾವು ಪ್ರಕೃತಿಯಿಂದ ಬೇರೆ ನಿಂತು, ‘ಪ್ರಕೃತಿಯು ಕೊಡುವುದಕ್ಕೆ ಇರುವಂಥದು’ ಮತ್ತು ‘ನಾವು ಪಡೆದುಕೊಳ್ಳುವುದಕ್ಕೇ ಇರುವಂಥವರೆಂದು’ ಭಾವಿಸುವೆವು. ಈ ಸ್ಥಾನ ಕಲ್ಪನೆಯನ್ನು ಮತ್ತೆ ಮತ್ತೆ ಭದ್ರಮಾಡಿಕೊಳ್ಳುವೆವು. ಪ್ರಕೃತಿಯು ಸಹಜವಾಗಿ ‘ಇನ್ನೊಮ್ಮೆ’ ಎನ್ನುವಾಗ, ಅದು ವೈವಿಧ್ಯದ ನುಡಿಗಟ್ಟೂ ಆಗಿರುವುದರಿಂದ ಪ್ರಕೃತಿಯು ಸ್ಥಾನಪಲ್ಲಟವನ್ನು ಉದ್ದೇಶಿಸಿರುತ್ತದೆ ಎಂದು ಮನಗಾಣದವರಾಗಿರುವೆವು. ಹೀಗೆ, ಪ್ರಕೃತಿಗೆ ‘ಅನ್ಯ’ರಾಗುವೆವು- ನಿರ್ದೇಶಕನ ಸನ್ನೆ ಅರ್ಥವಾಗದ ನಟನಂತೆ. ಆಗ ‘ಅನ್ಯೋನ್ಯ ಭಾವ’ ಕೆಡುವುದು. ಆಗ ರಸಭಂಗವಾಗುವುದು. ರಂಗಭಂಗವಾಗುವುದು. ನಟನ ಊರುಭಂಗವಾಗುವುದು.  ಮತ್ತೆ ‘ಮಂಡಿ-ಕುಣಿತ’ವಿಲ್ಲ.

ಹೀಗಾಗಬಾರದು ಎಂದು ತೋರಿಸುವುದೂ ಪ್ರಕೃತಿಯದ್ದೇ ಹೊಣೆಯೋ ಏನೋ! ಅದು ಇನ್ನೊಮ್ಮೆ ಇನ್ನೊಂದೇ ‘ರೂಪಕ’ವನ್ನು ಸೃಷ್ಟಿಸುವುದು. ನೀನು ಪ್ರಕೃತಿಯಿಂದ ಏನು ಬೇಕಾದರೂ ಪಡಕೊಳ್ಳಬಲ್ಲೆ; ಮತ್ತು ಈ ಸ್ಥಾನವನ್ನು ಬದಲಿಸಲಾರೆ ಎನ್ನುವುದು ನಿನ್ನ ಅಹಂಕಾರವಾದರೆ, ನೀನು ‘ಕೊಡಬಲ್ಲೆ’ ಎನ್ನುವುದೂ ‘ಅಹಂಕಾರ’ವಾಗಲಾರದೆ? ‘ಅಹಂಕಾರ’ದಿಂದ ‘ಅಹಂಕಾರ’ಕ್ಕೆ ಹೋಗುವುದು ಸ್ಥಾನ-ಪಲ್ಲಟವಾದಂತೆ ಅಲ್ಲವಲ್ಲ! ಒಂದು ರೀತಿಯಲ್ಲಿ, ಪಡೆಯಬಲ್ಲೆನೆನ್ನುವುದು ಅಹಂಕಾರವಾದರೆ, ಕೊಡಬಲ್ಲೆನೆನ್ನುವುದು ಅಹಂಕಾರದ ಅಹಂಕಾರ! ‘ಕವಿಗಳ ಕವಿ’ ಎಂದಂತೆ.  ‘ಕವಿ’ಯಾಗಬೇಕಾದರೆ ಭಾವ ಗುರುತಿಸುವ ಶಕ್ತಿ ಬೇಕು. ಕವಿಗಳ ಕವಿಯಾಗಬೇಕಾದರೆ, ‘ಭಾವದ ಭಾವ’ ಗುರುತಿಸುವವನಾಗಬೇಕು. ತಾನು ಕೊಡಬಲ್ಲೆನೆನ್ನುವ ಅಹಂಕಾರವನ್ನು ಮನುಷ್ಯ ಜೀವಿಯಲ್ಲಿ ಉದ್ದೀಪಿಸಬೇಕಾದರೆ, ದೇವರಂಥ ದೇವರು ತಾನು ಬೇಡುವವನಾಗಬೇಕು. ಆಗ ಸ್ಥಾನ-ಪಲ್ಲಟವಾದಂತೆ!  ಅವತಾರವೆಂದರೆ, ಸ್ಥಾನ-ಪಲ್ಲಟವೇ.

ಇದು ಬಲಿಯ ದಾನದ ಕಥೆ. ಬಲಿದಾನದ ಕಥೆ.

ಅಮೃತ ಕುಡಿದ ಸೊಕ್ಕಿನಿಂದ ದೇವತೆಗಳು ಗೆದ್ದರೇನೋ ನಿಜ. ಆಗ ದೈತ್ಯರ ದೊರೆಯಾಗಿದ್ದ ಬಲಿಚಕ್ರವರ್ತಿ ವಜ್ರಾಘಾತದಿಂದ ಸಾಯಬಿದ್ದ. ದೈತ್ಯಗುರುಗಳಾಗಿದ್ದ ಶುಕ್ರಾಚಾರ್ಯರು ತಮ್ಮ ಮಂತ್ರಬಲದಿಂದ ಬಲಿ ಚೇತರಿಸುವಂತೆ ಮಾಡಿದರು. ಬಲಿಯಿಂದ, ದೊಡ್ಡ ಯಜ್ಞಗಳನ್ನು ಮಾಡಿಸಿ, ಅವನು ಮರಳಿ ಅಪಾರ ಶಕ್ತಿವಂತನಾಗುವಂತೆ ಮಾಡಿದರು. ಮತ್ತೆ ದೇವ-ದಾನವರ ನಡುವೆ ಕಾಳಗವಾಯಿತು. ಯುದ್ಧದಲ್ಲಿ ಗೆಲುವು ದೈತ್ಯರದಾಯಿತು. ಮೂರು ಲೋಕಗಳೂ ಬಲಿಯ ಆಳ್ವಿಕೆಗೆ ಬಂದವು. ಬಲಿ ಚಕ್ರವರ್ತಿ ವಾವೆಯಲ್ಲಿ ಪ್ರಹ್ಲಾದನ ಮೊಮ್ಮಗ. ತನ್ನ ಪಿತಾಮಹನ ವಿಷ್ಣುಭಕ್ತಿ ಬಲಿಯಲ್ಲಿ ತಡೆಯಿಲ್ಲದೆ ಹರಿದು ಬಂದಿತ್ತು. ದೈತ್ಯಗುರುವಾಗಿದ್ದ ಶುಕ್ರಾಚಾರ್ಯ ತನ್ನ ಕರ್ಮಕಾಂಡದ ಅಪಾರಜ್ಞಾನದಿಂದ ವಿಷ್ಣುವನ್ನೇ ಅಲ್ಲಗಳೆಯುವವನಾಗಿದ್ದ. ಗುರುವಿನ ಮೇಲೆ ಅಪಾರ ಗೌರವವಿದ್ದರೂ, ಹೀಗೊಂದು ‘ದ್ವಂದ್ವ’ವೂ ಶುಕ್ರ-ಬಲಿ ಸಂಬಂಧದಲ್ಲಿ ಮನೆ ಮಾಡಿತ್ತು.

ದೇವತೆಗಳು ಎಂದಿನಂತೆ ಭಗವಂತನನ್ನು ಪ್ರಾರ್ಥಿಸಿದರಂತೆ; ತಮ್ಮ ಸೋಲಿಗೆ ಕಂಗೆಟ್ಟು. ಭಗವಂತ, ಈ ಪ್ರಕರಣದಲ್ಲಿಯಂತೂ ದೈತ್ಯರ ವಿರುದ್ಧ ತನ್ನನ್ನು ಸಜ್ಜುಗೊಳಿಸಿಕೊಳ್ಳುವುದಕ್ಕೆ ತಾನು ದೇವತೆಯಾಗಿಯೇ ಹುಟ್ಟಬೇಕಷ್ಟೆ; ಆಗಲೇ ದೇವತೆಗಳ ಪರವಾಗಿ ನಿಲ್ಲುವುದು ನ್ಯಾಯವೆನಿಸುವುದು, ಎಂದುಕೊಂಡನಂತೆ.  ಹಾಗೆ, ಭಗವಂತ ದೇವಮಾತೆ ಅದಿತಿಗೆ ಮಗನಾಗಿ ಹುಟ್ಟಿದನಂತೆ. ಇಂದ್ರನ ತಮ್ಮ. ಈ ಅರ್ಥದಲ್ಲಿ ‘ಉಪೇಂದ್ರ’. ಇನ್ನೂ ಸಣ್ಣ ಹುಡುಗ; ಆಕಾರವೂ ಸಣ್ಣದೇ- ಈ ಅರ್ಥದಲ್ಲಿ ‘ವಾಮನ’. ಮನದೊಳಗಿನ ಒಳಮನಸ್ಸೇ- ಈ ಅರ್ಥದಲ್ಲೂ ‘ವಾ-ಮನ’.

ವಾಮನನಿಗೆ ಬ್ರಹ್ಮೋಪದೇಶ ಮಾಡಿದರಂತೆ. ಆ ಸಮಾರಂಭದಲ್ಲಿ ದಿಕ್ಪಾಲಕ ದೇವತೆಗಳೆಲ್ಲ ವಟುವಿಗೆ ಉಡುಗೊರೆಗಳನ್ನು ಕೊಟ್ಟುದುಂಟಂತೆ. ಸಂಪತ್ತಿನ ಒಡೆಯನೆನಿಸಿದ ಕುಬೇರನೇನು ಕೊಟ್ಟ? ವಾಮನನಿಗೆ ಒಂದು ‘ಭಿಕ್ಷಾ ಪಾತ್ರೆ’ಯನ್ನು ಕುಬೇರ ಕೊಟ್ಟನಂತೆ! ಲಕ್ಷ್ಮಿಯ ದೊರೆ, ವಾಮನನಾಗಿ ಬಂದಾಗ, ಭಿಕ್ಷಾ ಪಾತ್ರೆಯನ್ನು ಬೊಗಸೆಯಲ್ಲಿ ಹಿಡಿದ. ಲೋಕದಲ್ಲಿ ದೇವರ ಹೆಸರು ಹಿಡಿದು ತಿರುಪೆ ಮಾಡುವ ದಾಸರೆಲ್ಲ ಹಿಗ್ಗಿನಿಂದ ಕುಣಿದಾಡಿದರಂತೆ!

ಮನುಷ್ಯನನ್ನು ಇನ್ನಿಂಥ ‘ದಾನಿ’ ಇಲ್ಲ ಎಂದು ರೂಪಿಸಬೇಕಾದರೆ, ದೇವರು ತಿರುಪೆ ಎತ್ತಬೇಕು! ತಿರುಕನಿಗಿಂತ ಕಿರಿಯರು ಯಾರು? ಜೋಳಿಗೆ ಹೊತ್ತು ನಡೆವ ಜೋಗಿಗಿಂತ ಕಿರಿಯರು ಯಾರು? ಅವನ ಜೋಳಿಗೆಯಲ್ಲಿ ಏನಿದೆ ಎಂದು ಬಲ್ಲವರಾರು? ಅಲ್ಲಿ ಲೋಕದ ಕರುಣೆಯೇ ಇರಬಹುದು! ಸಮುದ್ರದ ಮಟ್ಟಕ್ಕಿಂತ ಇನ್ನು ಕೆಳಗಿಲ್ಲ. ಆದುದರಿಂದಲೇ ಎಲ್ಲ ನೀರುಗಳೂ ಕಡಲಿಗೆ ಹರಿದು ಬರುವವು. ಇಂಥ ಕಡಲಿನಲ್ಲೇ ದೇವರು ಮಲಗಿರೋದು! ಅವನು ಸಾಗರ ಶಯನ! ಜ್ಞಾನಿಯ ಮನಸ್ಸು; ಕವಿಯ ಮನಸ್ಸು- ಇಂಥ ಸಾಗರಶಯನನನ್ನು ಹಿಡಿಯಬಲ್ಲ ಭಿಕ್ಷಾ ಪಾತ್ರೆ!

ವಟು ವಾಮನ ಭಿಕ್ಷಾ ಪಾತ್ರೆ ಹಿಡಿದ. ದಂಡ; ಕಮಂಡಲ, ಕೌಪೀನಧಾರಿ. ಸದ್ಯೋಪನೀತ ಬ್ರಹ್ಮಚಾರಿ. ಗೃಹಸ್ಥರಲ್ಲಿ ಭಿಕ್ಷೆ ಕೇಳುವುದು ಅವನ ಆಶ್ರಮಧರ್ಮ. ಇದೇ ಕಾಲದಲ್ಲಿ ಬಲಿ ಚಕ್ರವರ್ತಿ ದೊಡ್ಡದೊಂದು ಯಾಗ- ಅದು ಅಶ್ವಮೇಧವಂತೆ- ಅದನ್ನು ಕೈಗೊಂಡಿದ್ದ. ಬಲಿ ಸ್ವಭಾವತ: ದಾನಶೀಲ. ಈಗಲಂತೂ ಯಜ್ಞದ ಯಜಮಾನ. ಕೊಡುಗೈ ದೊರೆ. ಅವನ ಯಜ್ಞಶಾಲೆಗೆ ವಾಮನ ನಡೆತಂದ.

ಎಲ್ಲರಲ್ಲಿ ಪ್ರೀತಿ ಉಕ್ಕಿಸಬಲ್ಲ ಮುಗ್ಧ ಚೆಲು ಮುಖ. ನೋಟದಲ್ಲಿ ನೇಸರ ಹೊಳಪು. ಇನ್ನೂ ಒಡೆಯದ ಗಂಟಲು. ಅದರಲ್ಲಿ ವೇದವಾಣಿ!

ಇವನನ್ನು ನೋಡಿ ಯಜ್ಞದೀಕ್ಷಿತರಾದ ಗಂಡ-ಹೆಂಡತಿ; ಬಲಿಚಕ್ರವರ್ತಿ ಮತ್ತು ಮಡದಿ ವಿಂಧ್ಯಾವಳಿ, ಎದ್ದು ನಿಂತರು. ‘ನಮೋ ಅರ್ಭಕಾಯ’. ‘ಮಗುವಿಗೆ ತಲೆಬಾಗುವೆ. ಅದೂ ವೇದದ ಮಾತೇ.

ಬಲಿ ಕೇಳಿದನಂತೆ: ಓ ಸಣ್ಣ ಯಜಮಾನ; ನನ್ನೆದೆಯಲ್ಲಿ ಪ್ರೀತಿಯ ಒರತೆ ಹರಿಯುವಂತೆ ಮಾಡಿದ ಒಲವಿನ ಅರಸೇ, ನಿನ್ನ ಕೈಯ ಭಿಕ್ಷಾಪಾತ್ರೆ ನೋಡಿದರೆ, ಅದರಲ್ಲಿ ಲೋಕವನ್ನೇ ತುಂಬಿಸಿ, ಅದನ್ನು ಹೊತ್ತ ನಿನ್ನನ್ನು ತಲೆಯ ಮೇಲಿಟ್ಟುಕೊಂಡು ಕುಣಿಯೋಣ ಎನ್ನಿಸುತ್ತೆ; ನಿನಗೇನು ಬೇಕೋ ನನಗೆ ಗೊತ್ತಿಲ್ಲ; ಏನು ಬೇಕಾದರೂ ಕೇಳು; ನನಗಂತೂ ನೀನು ಬೇಕು!

ವಾಮನ: ದೊರೆಯೇ, ನಾನು ಸಣ್ಣವ. ನನ್ನ ಗೋಪಾಳಬುಟ್ಟಿಯೂ ಸಣ್ಣದೇ. ಆದರೂ ಒಂದು ಮಾತು. ಭಿಕ್ಷಾಪಾತ್ರೆ ಎಂದ ಮೇಲೆ ಅದು ತುಂಬುವುದುಂಟೆ! ಆಸೆ-ಮುಗಿಯಿತು ಎಂದಾಗಲುಂಟೆ! ಕಿರು ಬೆರಳಿಗೆ ಬೆಟ್ಟ ಎತ್ತುವ ಆಸೆಯಂತೆ! ಅದಿರಲಿ. ದಾನ ಶಾಲೆ ಸ್ವಲ್ಪ ಒದ್ದೆಯಾಗಿತ್ತು. ನಡೆದು ಬರುವಾಗ ಮಣ್ಣಿನಲ್ಲಿ ಹೆಜ್ಜೆ ಮೂಡಿಸಿಕೊಂಡು ಬಂದೆ. ಒಂದು ಹೆಜ್ಜೆ ಎಂದರೆ ಒಗ್ಗಾಲ ತಪಸ್ಸು. ಎರಡು ಹೆಜ್ಜೆ ಎಂದರೆ ಸ್ತಬ್ಧ ನಿಂತು ಬಿಟ್ಟಂತೆ. ಮೂರು ಹೆಜ್ಜೆ ಎಂದರೆ ಚಲನೆ! ನನಗೆ, ನಾನು ನಡೆದಾಡಬಲ್ಲ ಮೂರು ಹೆಜ್ಜೆ ಭೂಮಿ ಬೇಕು. ಅಲ್ಲಿ ನಾ ಆಡಬೇಕು. ಅಷ್ಟು ಸಾಕು!

ಬಲಿ: ಆಹಾ; ಯಾಚನೆಯ ಮಾತು ಕಲಿತು ಬರುವವರುಂಟು. ಇವು ಕಲಿತ ಮಾತುಗಳಲ್ಲ; ಹೊಸ ಮಾತುಗಳು. ಮಗು; ಆದರೂ ಒಂದು ಮಾತು. ನನ್ನ ಬಳಿ ಬಂದು ಪಡೆದವರು ಇನ್ನಾರ ಬಳಿಯೂ ಎಂದೆಂದೂ ಕೇಳಬಾರದು. ಹಾಗೆ ಕೊಡುವುದು ನನಗೆ ಇಷ್ಟ. ಯೋಚಿಸು; ಇಷ್ಟೇ ಸಾಕೇನು! ಇನ್ನು ಬೇರೆ ಮಾತುಂಟೇನು?

ವಾಮನ: ನಿನ್ನ ಬಳಿ ಅಪಾರ ಇರಬಹುದಯ್ಯ. ನನಗಿಷ್ಟು ಸಾಕು. ಬೇರೆ ಮಾತಿನ ಮಾತು ಬೇರೆ. ಅದನ್ನು ಆಡುವುದಿದ್ದರೆ ನಿನ್ನಲ್ಲೇ ಆಡಬಾರದೇಕೆ?

ಈಗ ಶುಕ್ರಾಚಾರ್ಯ ಹೇಳಿದನಂತೆ: ಈ ಹುಡುಗನ ಮಾತುಗಳಲ್ಲೇ ಏನೋ ಮೋಸ ಅಡಗಿದೆ. ಕೇವಲ ವ್ಯಾವಹಾರಿಕ ಅರ್ಥದಲ್ಲಿ ವಿಶ್ರಾಂತವಾಗದ ಮಾತುಗಳಿವು. ಇವನನ್ನು ನಂಬದಿರು. ಮಾತು ಪ್ರಚ್ಛನ್ನ. ಈ ವ್ಯಕ್ತಿಯೂ ಪ್ರಚ್ಛನ್ನ ಇರಬಹುದು. ಇವನಿಗೆ ಕೇಳಿದ್ದುಕೊಟ್ಟರೆ ನೀನು ಸೋತು ಬಿಡಬಹುದು. ನೀನು ಸೋಲುವುದು ನನಗೆ ಬೇಕಿಲ್ಲ. ಎಲ್ಲವನ್ನೂ ಇನ್ನೊಮ್ಮೆ ಆಲೋಚನೆ ಮಾಡು.

ಬಲಿ: ಗುರುಗಳೇ. ‘ಇನ್ನೊಮ್ಮೆ’ ಎನ್ನುವುದು ಪ್ರಕೃತಿಯ ನುಡಿಗಟ್ಟೇನೋ ಹೌದು. ಆದರೆ, ಸ್ವಾರ್ಥದಿಂದ, ಸ್ವ-ಹಿತಾಸಕ್ತಿಯಿಂದ ಇನ್ನೊಮ್ಮೆ ಆಲೋಚಿಸಿದರೆ, ಮೊದಲ ಆಲೋಚನೆಯನ್ನು ಕೊಂದಂತೆ. ದಾರಿ ತಪ್ಪಿಸಿದಂತೆ. ಈ ಹುಡುಗನ ಹೆಜ್ಜೆಯ ಗುರುತು ನನ್ನೆದೆಯಲ್ಲಿ ಮೂಡಿಬಿಟ್ಟಿದೆ. ಅವನಿಗೆ ‘ಇನ್ನೊಮ್ಮೆ’ ಯೋಚಿಸು ಎಂದೆ. ಯೋಚಿಸುವುದೇನಿಲ್ಲ ಎಂದ ಈ ಮಗು. ನಾನೇಕೆ ಯೋಚಿಸಲಿ? ನನ್ನಿಂದಾಗದು ಎನ್ನುತ್ತ ಮಡದಿಯ ಮುಖ ನೋಡಿದ. ಅವಳು ನಸುನಗು ಬೀರುತ್ತ, ಧಾರಾದತ್ತ ಕೊಡುವುದಕ್ಕೆ ನೀರೆರೆಯುವ ಗಿಂಡಿಯನ್ನೆತ್ತಿದಳು. ಗಂಡ- ಹೆಂಡತಿಯರ ಕಂಬನಿಗೆ ವಾಮನನ ಹೆಜ್ಜೆ ಒದ್ದೆಯಾಯಿತು! ನೀರೆರೆದ ಬೀಜ, ಮಹಾವೃಕ್ಷವಾಗುವಂತೆ- ವಾಮನನ ಹೆಜ್ಜೆ ಬೆಳೆಯುತ್ತ ಹೋಯಿತು- ಒಂದು ಹೆಜ್ಜೆ ಭೂಮಿಯನ್ನಳೆಯಿತು. ಇನ್ನೊಂದು ಹೆಜ್ಜೆ ಆಕಾಶವನ್ನಳೆಯಿತು. ಅಳೆಯುತ್ತ ಹೋದಂತೆ ತಾನು ಕೊಟ್ಟುದು ಎಷ್ಟು ದೊಡ್ಡದು ಎನ್ನುವುದು ಬಲಿಗೆ ಅರಿವಾಗುತ್ತ ಹೋಯಿತು. ಅಳೆಯಬಲ್ಲವನು; ತಾನಳೆಯುವ ವಸ್ತುವಿಗಿಂತ ತಾನು ದೊಡ್ಡವನು ಎಂದು ಸೂಚಿಸಿದಂತೆ. ಇಷ್ಟು ದೊಡ್ಡವನು ನನ್ನಲ್ಲಿ ಯಾಚಕನಾಗಿ ಬಂದ!

ಬಲಿಗೆ ಕಂಬನಿತುಂಬಿತು. ಕೃತಾರ್ಥತೆಯೂ ಉಂಟಾಯಿತು. ಗುರುಗಳ ಬಗ್ಗೆ ಮರುಕವೂ ಅನಿಸಿತು. ಆಗ ಕೇಳಿಸಿತು ಗುಡುಗಿನಂಥ ದನಿ. ಆಗಸದ ಮೇಲಿಂದ.

ಇದು ಎರಡು ಹೆಜ್ಜೆಯ ವಿಶ್ವ. ಇಲ್ಲಿ ಕಾಲೂರಿ ನಾನು ಸ್ತಬ್ದನಾಗಿರಲಾರೆ. ಮೂರನೆಯ ಹೆಜ್ಜೆ ಎಲ್ಲಿಡಲಿ ಹೇಳು, ನನಗೆ ಆಡಬೇಕಿದೆ ಇದೀಗ ಬೇರೆ ಮಾತು!

ಬಲಿಗೆ ಈಗ ತಿಳಿದು ಹೋಗಿತ್ತು. ತಾನು ಕೊಟ್ಟದ್ದೆಷ್ಟು ದೊಡ್ಡದು; ತಾನು ಯಾರಿಗೆ ಕೊಟ್ಟೆನೋ ಅವನೆಷ್ಟು ದೊಡ್ಡವನು! ದೊಡ್ಡವನೆದುರು ತಲೆ ಬಾಗಬೇಕಲ್ಲವೆ? ಹಾ! ಹೊಳೆಯಿತು. ಆ ದೊಡ್ಡವನಿಗೆ, ತನ್ನ ಬಾಗಿದ ತಲೆ ಬೇಕಿದೆ. ಅದನ್ನು ಬೇಡಿಯಾದರೂ ಪಡೆಯುವಷ್ಟು!

ಮೊದಲು ನನ್ನ ತಲೆ ಎತ್ತಿಸಿ, ಈಗ ಅದರ ಬಲಿ ಕೇಳುತ್ತಿದ್ದಾನೆ. ನನ್ನ ಅಹಂಕಾರವು ಕೊಬ್ಬುವುದಕ್ಕಾಗಿ ತಾನು ತಿರುಪೆಯವನಾದ. ಹೌದು; ತಲೆ ಎತ್ತುವುದನ್ನು ಪೂರ್ತಿ ಮಾಡಿರಿ. ಅಂದರೆ, ಅಹಂಕಾರವನ್ನು ಅದರ ತಾರ್ಕಿಕ ಅಂತ್ಯದತ್ತ ಒಯ್ಯಿರಿ. ಆಗ ಅದು ತಲೆಬಾಗುವತ್ತ ನಮ್ಮನ್ನು ಕೊಂಡೊಯ್ಯುತ್ತದೆ. ತಲೆ ಬಾಗುವುದಕ್ಕಾಗಿಯೇ ತಲೆ ಎತ್ತುವುದು. ನಾವು ತಲೆ ಬಾಗಿದರೆ, ಭಗವಂತ ತಲೆ ಎತ್ತುತ್ತಾನೆ! ಸ್ಥಾನ- ಪಲ್ಲಟವಾಗುತ್ತದೆ! ಸ್ಥಾನ-ಪಲ್ಲಟವಾಗದಿದ್ದರೆ ರಸಭಂಗ.

ಆಟವೆಂದರೂ ಸ್ಥಾನ-ಪಲ್ಲಟವೇ ಅಲ್ಲವೇ? ಅವನ ಜಾಗದಲ್ಲಿ ಇವನು; ಇವನ ಜಾಗದಲ್ಲಿ ಅವನು! ಇದೇ ಆಟ! ಹೌದು; ಅಹಂಕಾರದ ‘ಬಿಗಿ’ಯಲ್ಲಿ ಆಟವಿಲ್ಲ. ‘ಬಿಗಿ’ ಕಳೆದರೆ, ಆಟವೇ ಎಲ್ಲ.

ಬಲಿ ಹೇಳಿದನಂತೆ ಎತ್ತರದ ಸ್ನಿಗ್ಧ ಧ್ವನಿಯಲ್ಲಿ:

ಪದಂ ತೃತೀಯಂ ಕುರು ಶೀಷ್ಣರ್ಮೇ ನಿಜಂ
ನಿನ್ನ ಮೂರನೆಯ ಹೆಜ್ಜೆಗೆ ನನ್ನ ‘ತಲೆ’ಯಲ್ಲೇ ಜಾಗ ಮಾಡಿಕೋ- ದಯವಿಟ್ಟು

ಲೋಕದಲ್ಲಿ ಹೊಸ ನುಡಿಗಟ್ಟು ಗೋಚರವಾಯಿತಂತೆ- ದಾಸನ ಮಾಡಿಕೋ ಎನ್ನ.

ಭಗವಂತನ ಅಳತೆ ಪೂರ್ತಿಯಾಗೋದು ಮನುಷ್ಯನ ‘ತಲೆ’ಯಲ್ಲಿಯಂತೆ. ಇದು ಅನಂತನಾದ ಭಗವಂತನ ಅನಂತ ವಿಶ್ರಾಂತಿಯ ಸ್ಥಾನವೂ ಹೌದು; ಆಟದ ಜಾಗ- ಕ್ರೀಡಾಸ್ಥಾನವೂ ಹೌದು!

ಭಾಗವತ 20:ದಶರಥರಾಮನೂ, ಕೊಡಲಿರಾಮನೂ

ತಿಳುವಳಿಕೆಯುಳ್ಳವನೆನ್ನುವ ಮನುಷ್ಯ ಜೀವಿಗೆ- ಅವನ ತಿಳುವಳಿಕೆಯೂ ಸಮಸ್ಯಾತ್ಮಕವೇ ಆಗಿದೆ. ಏಕೆಂದರೆ ಯಾವುದೇ ತಿಳುವಳಿಕೆಯೂ ಸ್ವ-ವಿಶ್ರಾಂತವಲ್ಲ. ಅದು ಸದಾ ತನ್ನನ್ನು ತಾನು ಮೀರುವ ತುಡಿತ ಉಳ್ಳದ್ದೇ ಆಗಿದೆ. ಒಂದೊಮ್ಮೆ ತಿಳುವಳಿಕೆಯು ನಿಜಕ್ಕೂ ವಿಶ್ರಾಂತವಾಗುವುದಾದರೆ, ಆಗ, ತಾನು ವಿಶ್ರಾಂತವಾಗಿದ್ದೇನೆ ಎಂಬ ಸ್ವ-ಪ್ರಜ್ಞೆ ಕೂಡ ಅಳಿದಿರಬೇಕಾಗುತ್ತದೆ. ಸ್ವ-ಪ್ರಜ್ಞೆಯ ವಿಶ್ರಾಂತಿಯೇ ನಿಜವಾದ ವಿಶ್ರಾಂತಿ. ಮತ್ತು ಇದನ್ನೊಪ್ಪಿದರೆ, ಈ ವಿಶ್ರಾಂತಿಯು ಅಪ್ರಜ್ಞೆಯ ಸ್ಥಿತಿಯಾಗಿದೆ. ಅಪ್ರಜ್ಞೆ ಎಂದರೆ ಮೂರ್ಛೆಯಲ್ಲ. ಬುದ್ಧಿಯ ಕೇಡಲ್ಲ. ಅಪ್ರಜ್ಞೆ ಎಂದರೆ ಸ್ವಪ್ರಜ್ಞೆಯನ್ನು ಮೀರಿದ ಪ್ರಜ್ಞಾಸ್ಥಿತಿಯೇ ಆಗಿದೆ. ಸ್ವ-ಪ್ರಜ್ಞಾಪೂರ್ವಕ ಬದುಕು ಮಾಡುತ್ತಿರುವ ಮನುಷ್ಯ ಜೀವಿಯನ್ನು ಇಡಿಯಾಗಿ ಇಂಥ ಅಪ್ರಜ್ಞೆಯ ವಲಯವೊಂದು ಆವರಿಸಿದೆ. ಹುಟ್ಟುವ ಮುನ್ನ ಮತ್ತು ಸತ್ತ ಮೇಲೆ ಏನು ಎನ್ನುವುದು ಮನುಷ್ಯನಿಗೆ ತಿಳಿದಿಲ್ಲ. ಈ ಎರಡು ಸ್ಥಿತಿಗಳನ್ನೂ ‘ಅವ್ಯಕ್ತ’ ಎಂದು ಸ್ವಯಂ ಕೃಷ್ಣನೇ ಕರೆದಿದ್ದಾನೆ. ಹುಟ್ಟಿ, ಬೆಳೆದು, ಸಾಯುವ ತನಕದ ಈ ಪರಿಚಿತ ಬದುಕನ್ನು ‘ವ್ಯಕ್ತ-ಮಧ್ಯ’ ಎಂದು ಅರ್ಥಪೂರ್ಣವಾಗಿ ಕರೆದಿದ್ದಾನೆ- ತನ್ನ ‘ಗೀತೆ’ಯಲ್ಲಿ. ‘ವ್ಯಕ್ತ-ಮಧ್ಯ’ವೆಂದರೆ, ಕಾಣುತ್ತಿರುವ; ತಿಳಿದು ಬರುತ್ತಿರುವ, ನಡುವಣ ಸ್ಥಿತಿ ಎಂದು. ಈ ‘ನಡುವಣ’ ಸ್ಥಿತಿಯ ಆದ್ಯಂತಗಳೆರಡೂ ಅವ್ಯಕ್ತ. ತಿಳಿಯುತ್ತಿಲ್ಲ. ಈ ‘ವ್ಯಕ್ತ-ಮಧ್ಯ’ದ ಸ್ಥಿತಿಯಾದರೋ ತಾನು ಚಿಂತಿಸುವ, ಕಾಣುವ, ತರ್ಕಿಸುವ, ಧ್ಯಾನಿಸುವ ಶಕ್ತಿಯುಳ್ಳದ್ದು. ಆದರೆ, ಇದು ‘ಅವ್ಯಕ್ತ’ವನ್ನು ಚಿಂತಿಸಿದರೆ,, ಅಂದರೆ, ‘ಸಾವ’ನ್ನು ಕುರಿತು ಚಿಂತಿಸಿದರೆ ತನ್ನ ಚಿಂತಿಸುವ ಶಕ್ತಿಯ ಮೊನಚನ್ನೆ ಕಳೆದುಕೊಂಡು, ತೀವ್ರವಾದ ಆತಂಕಕ್ಕೆ ಒಳಗಾಗುವುದು! ಇದು ಸಾರ್ವತ್ರಿಕವಾದ ಸಾರ್ವಜನೀನವಾದ ಅನುಭವ! ಈ ಆತಂಕಕ್ಕೆ ಸಾವಿನ ಭಯವೇ ಕಾರಣವಿರಬಹುದು. ಸಾವಿನ ಭಯವೆಂದರೆ, ಮೂಲದಲ್ಲಿ, ಪ್ರಜ್ಞೆಯನ್ನು- ಸ್ವಪ್ರಜ್ಞೆಯನ್ನು ಕಳೆದುಕೊಳ್ಳುವ ಭಯವೇ. ಆದರೆ, ಸಾವಿನ ಭಯವನ್ನು ಕಳೆದುಕೊಳ್ಳದೇ ನಿಜವಾಗಿ ಬದುಕಲೂ ಸಾಧ್ಯವಾಗುವುದಿಲ್ಲವಾದ್ದರಿಂದ, ಅದರ ಕುರಿತಾದ ಭಯ; ಆತಂಕಗಳನ್ನು ಅನುಭವಿಸುವುದು ಜೀವಿಗೆ ಅನಿವಾರ್ಯವೆನಿಸಿದೆ. ‘ಭಯ’ವನ್ನು ಅನುಭವಿಸದೆ, ‘ಭಯ’ವನ್ನು ದಾಟಲಾಗುವುದಿಲ್ಲ. ಮೀರಲಾಗುವುದಿಲ್ಲ. ಮೀರದೆ, ಬದುಕಿನ ನಿಜವಾದ ಅನುಭವವೇ ಇಲ್ಲ. ಮೀರಬೇಕೆನ್ನುವುದಕ್ಕಾಗಿಯೇ, ಯಾವುದೇ ತಿಳುವಳಿಕೆಯೂ ಸ್ವ-ವಿಶ್ರಾಂತವಲ್ಲ. ಜಡವಲ್ಲ, ಹುಟ್ಟಿ ಬಂದ ಮನುಷ್ಯಜೀವಿ ಈ ‘ದ್ವಂದ್ವ’ವನ್ನು ಎದುರುಗೊಳ್ಳಲೇಬೇಕಾಗುತ್ತದೆ.

ಈ ಸಮಸ್ಯೆಯನ್ನು, ಈ ದ್ವಂದ್ವವನ್ನು ವೈಯಕ್ತಿಕ ಸಮಸ್ಯೆ ಎಂದುಕೊಂಡು ಎದುರುಗೊಳ್ಳುವುದು ಒಂದು ರೀತಿ. ಅದು ತಪಸ್ಸು; ವೈರಾಗ್ಯ, ಧ್ಯಾನ; ಅಧ್ಯಾತ್ಮ ಜ್ಞಾನಗಳ ದಿಕ್ಕಿನತ್ತ ನಮ್ಮನ್ನು ಕೊಂಡೊಯ್ಯಬಹುದು. ಇಂಥ ಮಾದರಿಗಳನ್ನು ತೋರಿಸುವ ಭಗವದವತಾರಗಳೂ ಇವೆ. ಇದಕ್ಕೆ ಭಿನ್ನವಾಗಿ ಬದುಕಿನ ನಡುವೆಯೇ ಇದ್ದು, ಬದುಕನ್ನೇ ಪ್ರಯೋಗವಾಗಿಸಿಕೊಂಡ ಅವತಾರಗಳೂ ಇವೆ. ಕ್ಷತ್ರಿಯರು ಅಂದರೆ, ಆಳುವವರು ದುಷ್ಟರಾದರು. ಲೋಕ ಪೀಡಕರಾದರು. ಜನರಲ್ಲಿ ತಮ್ಮ ಭಯವನ್ನು ಅಂದರೆ ಮೂಲತ: ಸಾವಿನ ಭಯವನ್ನು ಹೆಚ್ಚಾಗಿ ಬಿತ್ತಿದರು.

ಇಂಥ ಸಂದರ್ಭದಲ್ಲಿ ಕ್ಷತ್ರಿಯರ ವಿರುದ್ಧವೇ ತಿರುಗಿಬಿದ್ದು, ಹೋರಾಡಿ, ದುಷ್ಟದಮನ ಮಾಡಿ ಲೋಕವನ್ನು ಒಂದು ಸಮಸ್ಥಿತಿಗೆ ತರುವ ಪ್ರಯೋಗ ಮಾಡಿದ ಭಾರ್ಗವರಾಮನ ಚರಿತ್ರೆ ಇದೆ. ಇಪ್ಪತ್ತೊಂದು ಬಾರಿ ಕ್ಷತ್ರಿಯ ದುಷ್ಟರ ಸಂಹಾರ ಮಾಡಿದನಂತೆ. ಕ್ಷತ್ರಿಯರ ನೆತ್ತರಿನಿಂದಲೇ ಸರೋವರಗಳು ತುಂಬಿದವಂತೆ. ಇದೊಂದು ತೀವ್ರ ಸ್ವರೂಪದ ಪ್ರತಿಕ್ರಿಯೆಯಾಯಿತಲ್ಲದೆ, ಕ್ಷತ್ರಿಯರಿಗೆ ಒಂದು ಎಚ್ಚರ ಹೇಳಿದಂತಾಯಿತಲ್ಲದೆ, ಕೊಡಲಿ ಹಿಡಿದ ಈ ರಾಮನಿಗೆ ತನ್ನನ್ನೇ ತಾನು ಮೀರುವುದಾಯಿತೋ? ಇವನ ಕಾಲದಲ್ಲಿಯೇ- ಕೊನೆಗಾಲದಲ್ಲಿಯೇ ಆದರೂ- ದಶರಥನ ಮಗನಾಗಿ ಅಂದರೆ ಕ್ಷತ್ರಿಯ ಕುಮಾರನಾಗಿಯೇ ಏಕೆ ಭಗವಂತ ಅವತಾರ ತಾಳಬೇಕಾಯಿತು?  ಈ ಇಬ್ಬರಿಗೂ ‘ರಾಮ’ ಎಂಬ ಹೆಸರೇಕೆ?  ಇಬ್ಬರೂ ‘ರಾಮ’ರಾಗಿರುವುದು ಏನನ್ನು ಸೂಚಿಸುತ್ತದೆ? ಕೊನೆಗೂ ದಶರಥನ ಮಗನ ಕೈಗೆ ತನ್ನ ಧನುರ್ಬಾಣಗಳನ್ನು ಒಪ್ಪಿಸಿ, ತನ್ನ ಕಾಲ ಮುಗಿಯಿತೆನ್ನುವುದನ್ನು ಸೂಚಿಸಿದನಲ್ಲ ಕೊಡಲಿ ರಾಮ- ಅವನ ‘ಪ್ರಯೋಗ’ವೂ ಮುಗಿಯಿತೋ? ಅವನ ‘ಪ್ರಯೋಗ’ವು ಅಪರ್ಯಾಪ್ತವೆನಿಸಿತೋ? ಅವನೇ ದೊಡ್ಡ ಪ್ರಯೋಗವೊಂದರ ಮೊದಲ ಭಾಗವೋ? ಇನ್ನೊಂದು ಪ್ರಯೋಗಕ್ಕೆ, ಹೊಸತೇ ಆದ ಪ್ರಯೋಗಕ್ಕೆ, ಲೋಕರಂಗವು, ನಮ್ಮ ಪ್ರಜ್ಞೆಯ ರಂಗವು ಸಜ್ಜುಗೊಳ್ಳುತ್ತಿತ್ತೋ? ಕೊಡಲಿ ರಾಮನು ಎರೆದ ಕೆನ್ನೀರ ಜಳಕಕ್ಕೆ ಕೂದಲು ನೆನೆಯಲಿಲ್ಲ ಎನ್ನುವ ಈ ಭೂಮಿ ತಾಯಿಗೆ, ಅವಳ ಸಂವೇದನೆಯಲ್ಲಿಯೇ ಹೊಸ ಸಂಚಲನ ಮೂಡಿಸಲು ಈ ಎಲ್ಲದಕ್ಕಿಂತ ಬೇರೆಯೇ ಆದ ಪ್ರಯೋಗವೊಂದು ಅನಿವಾರ್ಯವೋ?

ಹೌದೆನಿಸುತ್ತದೆ. ಗದ್ದುಗೆ ಏರುವ ಹೊತ್ತಿನಲ್ಲಿ ‘ಮಗ’ ಕಾಡಿಗೆ ನಡೆಯಬೇಕು. ಹದಿನಾಲ್ಕು ವರ್ಷಗಳ ವನವಾಸವೆಂದರೆ ಯಾವಜ್ಜೀವ ವನವಾಸ ಎಂದೇ ಅರ್ಥ. ನಿಮ್ಮ ಮಾತನ್ನು ಶಿರಸಾವಹಿಸೋಣವಂತೆ. ಆದರೆ ನಾನು ಯಾವ ತಪ್ಪಿಗೆ ಕಾಡಿಗೆ ನಡೆಯಬೇಕು ತಂದೆಯೇ ಎಂದು ಯಾರೇ ಆದರೂ ಕೇಳಬಹುದಾಗಿದ್ದ ಪ್ರಶ್ನೆಯನ್ನು ‘ರಾಮ’ ಕೇಳಲಿಲ್ಲ. ಈ ಪ್ರಶ್ನೆಗೆ ಉತ್ತರವಿಲ್ಲ ಎಂದವನಿಗೆ ತಿಳಿದಿತ್ತು. ಉತ್ತರವಿಲ್ಲದ ಪ್ರಶ್ನೆಯನ್ನು ಎತ್ತಬಾರದು ಎಂದೂ ತಿಳಿದಿತ್ತು. ಇದೊಂದು ರೀತಿಯಲ್ಲಿ ಅಪ್ರಜ್ಞೆಯ ಸ್ಥಿತಿ! ‘ವ್ಯಕ್ತ-ಮಧ್ಯ’ ತನ್ನನ್ನು ಆವರಿಸಿರುವ ‘ಅವ್ಯಕ್ತ’ ವನ್ನು ನೆನೆದ ಸ್ಥಿತಿ!

ದಶರಥ, ತನ್ನ ಮಗನನ್ನು ಬಲ್ಲ. ಇವನು ಕಾಡಿಗೆ ನಡೆದೇ ಬಿಡುತ್ತಾನೆ ಎಂದೂ ಸರಿಯಾಗಿಯೇ ಬಲ್ಲ. ಆದುದರಿಂದಲೇ ಅವನ ಸಂಕಟ ತೀವ್ರ. ಎಂಥವನನ್ನು ಕಾಡಿಗೆ ಹೋಗೆನ್ನಬೇಕು! ಪುತ್ರ ಕಾಮೇಷ್ಟಿ ಮಾಡಿ ಪಡೆದ ಮಗ! ತನ್ನನ್ನು ಕೊಂದು ಅಯೋಧ್ಯೆಯ ಸಿಂಹಾಸನವನ್ನೇರು ಎನ್ನುತ್ತಾನೆ ದಶರಥ; ರಾಮನಿಗೆ. ಇದು ದು:ಖದ ಉದ್ಗಾರವೇ ಆದರೂ ಅಂಥ ಘಟನೆಗಳು ನಡೆದಿದ್ದರೆ ಆಶ್ಚರ್ಯವಿಲ್ಲ. ಇಂಥಲ್ಲಿ ‘ರಾಮ’ ಕಾಡಿಗೆ ನಡೆದ; ಸೀತೆಯೊಂದಿಗೆ; ಇದು ಸರಿಯಾಗಲಿಲ್ಲ.  ಅಯೋಧ್ಯೆಯಲ್ಲಿ ಹೋರಾಡಬೇಕಿತ್ತು ಎನ್ನುತ್ತಿದ್ದ ಲಕ್ಷ್ಮಣನೂ ಹಿಂಬಾಲಿಸುತ್ತಿರುವಂತೆ!

ಇದಕ್ಕೊಂದು ವೈದೃಶ್ಯವನ್ನು ಕಾಣಿಸದೆ ರಾಮನ ಈ ಮನೋಧರ್ಮ ತಿಳಿಯಲಾರದೆಂದೋ ಏನೋ ರಾಮಾಯಣಕಾರ- ‘ವಾಲಿ’ಯ ಚಿತ್ರವನ್ನು ಕೊಟ್ಟಿದ್ದಾನೆ. ರಾಮಾಯಣದ ಪ್ರಕಾರವೇ ಭಗವಂತ ರಾಮನಾಗಿ ಅವತಾರ ತಳೆದಾಗ, ದೇವರ ಕೆಲಸದಲ್ಲಿ ಸಹಾಯಕರಾಗಲೆಂದು ದೇವತೆಗಳು ವಾನರರಾಗಿ ಹುಟ್ಟಿ ಬಂದ ಇಂದ್ರರಂತೆ. ಹಾಗೆ ಇದ್ರ; ವಾಲಿಯಾದನಂತೆ,  ಸೂರ್ಯ ಸುಗ್ರೀವನಾದನಂತೆ. ವಾಯುದೇವ ಆಂಜನೇಯನಾದನಂತೆ! ಏನಾಗಿಬಿಟ್ಟಿತೆಂದರೆ, ಈ ಲೋಕಕ್ಕೆ ಬಂದ ಮೇಲೆ, ‘ವಾಲಿ’ ರಾಮನಿಗೆ ಸಹಾಯಕನಾಗುವ ಬದಲಾಗಿ, ರಾಮನ ಶತ್ರುವಾಗುವ ಪರಿಸ್ಥಿತಿ ಬಂತು. ತನ್ನ ಬದುಕಿನ ಅರ್ಥವೇ ವಾಲಿಗೆ ಮರೆತು ಬಿಟ್ಟುದರಿಂದ- ರಾಮ ಅದನ್ನು ಸೂಚಿಸಲೆಂಬಂತೆ, ಮರದ ಮರೆಯಲ್ಲಿ ನಿಂತು ವಾಲಿಗೆ ಬಾಣ ಹೊಡೆಯಬೇಕಾಯಿತು. ನಿಜವಾದ ಕಪಿಗೆ ಹೊಡೆಯುವಂತೆ! ವಾಲಿಯದು ಇನ್ನೊಂದು ರೀತಿಯಲ್ಲಿ ಸ್ವ-ಕೇಂದ್ರಿತ ಮಾತ್ರವಾಗಿ ಪ್ರಜ್ಞೆಯು ಮೂರ್ಛೆಯಲ್ಲಿರುವ ಸ್ಥಿತಿ! ಈ ಅರ್ಥದಲ್ಲಿ ಅಪ್ರಜ್ಞೆಯ ಸ್ಥಿತಿ! ರಾಮನೆಂಬ ಭಗವದವತಾರ ಯಾರ ನಡುವೆ ನಡೆಯಬೇಕಾಗಿದೆ, ನಡೆಯುತ್ತ ಮರೆಯಲ್ಲಿ ನಿಲ್ಲಬೇಕಾಗಿದೆ, ಮರೆಯಲ್ಲಿ ನಿಂತುದಕ್ಕೆ ನಿಂದೆಯನ್ನು ಕೇಳಬೇಕಾಗಿದೆ; ನಿಂದೆಯನ್ನು ಸ್ವೀಕರಿಸುವ ಮೂಲಕವೇ ವಾಲಿಯನ್ನು ಒಳಮುಖಗೊಳಿಸಬೇಕಾಗಿದೆ- ಎಂಬೆಲ್ಲದರ ಗಂಭೀರ ಚಿತ್ರಣವಿದು.

ಭಾಗವತದ ರಸ ಕೇಂದ್ರವಾಗಿರುವ ಕೃಷ್ಣನದು ಪೂರ್ಣಾವತಾರವಂತೆ! ಪೂರ್ಣಾವತಾರವೆಂದರೆ, ‘ಅವ್ಯಕ್ತ’ವೇ ವ್ಯಕ್ತವಾದಂತೆ. ‘ವ್ಯಕ್ತ ಮಧ್ಯ’ ಎನ್ನುವ ಮಾತೇ (ಅದು ಕೃಷ್ಣನದೇ ಮಾತು!) ಬಿದ್ದು ಹೋಗಿ, ಆದಿ; ಮಧ್ಯ; ಅಂತ ಎನ್ನುವ ಹಂತಗಳೇ ಅರ್ಥಹೀನವೆನ್ನಿಸಿ, ಬದುಕು ಅಖಂಡವಾಗಿ ಹರಿವ ನದಿಯಾಗಿ ಅಥವಾ ಕಡಲಾಗಿ, ಅಥವಾ ಹಾಲ್ಗಡಲಾಗಿ ಗೋಚರವಾದಂತೆ. ಹಾಲ್ಗಡಲೆಂದ ಮೇಲೆ; ವಿಷ- ಅಮೃತಗಳ ಭೇದವೇ ಅಳಿದಂತೆ! ಭೇದವನ್ನು ತೋರಿಸುವ ಜಗತ್ತು, ತಲೆಕೆಳಗಾಗಿ ನಿಂತಿದೆ; ಅದು ಮತ್ತೆ ತಲೆ ಮೇಲಾಗಿ ಸ್ವಸ್ಥವಾದಂತೆ. ಬದುಕಿನ ನಿಜವಾದ ಅರಿವು ಮುಗ್ಧ ಗೋಗೋಪಗೋಪೀ ಜನರ ವ್ರಜಭೂಮಿಯಲ್ಲೆಂತೋ ಅಂತೇ ನೆತ್ತರಿನಿಂದ ಒದ್ದೆಯಾದ ಕುರುಕ್ಷೇತ್ರದ ಬಯಲಿನಲ್ಲೂ ಇದೆ- ಎಂದಂತೆ. ಕುಬ್ಜೆಯ ಅಂಗರಾಗಕ್ಕೆ ಆಸೆಪಟ್ಟವ, ಗಾಂಧಾರಿಯ ಶಾಪಕ್ಕೂ ಅದೇ ತೀವ್ರತೆಯಲ್ಲಿ ತಲೆ ಬಾಗಿದಂತೆ.

ಅಂಥ ಕೃಷ್ಣನ ಕಥೆಯನ್ನು ಮುಂದಿನ ನಾಲ್ಕು ಕಂತುಗಳಲ್ಲಿ ನೋಡೋಣವಂತೆ.

ತೋಳ್ಪಾಡಿ ಭಾಗವತ 21:ಮೋಹವ ಹರಿಯಲು ಬಂದ ಭಗವಂತ

ದೊರೆ ಪರೀಕ್ಷಿತನಿಗೆ, ಕೃಷ್ಣ; ತಾನು ತಾಯ ಒಡಲಲ್ಲಿ ಇದ್ದಾಗ ತನ್ನನ್ನು ಪೊರೆದ ನೆನಪಿನ ರೋಮಾಂಚನವಿತ್ತು. ಕೃಷ್ಣನ ನೆನಪೇ ಜೀವವನ್ನು ಪೊರೆಯುವಂಥದು ಎಂಬ ಅರಿವಿತ್ತು. ಈಗ ತಾನು ಸಾವಿನ ಸಮ್ಮುಖದಲ್ಲಿ ಇದ್ದೇನೆ. ಪೊರೆಯುವುದೆಂದರೆ; ಸಾವಿನಲ್ಲಿ, ಪೊರೆ ಕಳಚುವ ಹೊತ್ತಿನಲ್ಲಿ ನಿರ್ವಿಕಾರವಾಗಿ ಇರಲಾಗುವಂತೆ ಅನುಗ್ರಹಿಸುವುದು. ಬದುಕನ್ನು ಸ್ವೀಕರಿಸಿದಂತೇ ಸಾವನ್ನೂ ಸ್ವೀಕರಿಸಲು ಕಲಿಸುವುದು. ಸ್ವೀಕಾರದ ಮನೋಧರ್ಮದಲ್ಲಿಯೇ ತಿಳಿದು ಬರುವುದು- ಸಾವು ಎಲ್ಲೋ ಹೊರಗಿಂದ ಎರಗುವ ಶತ್ರುವಲ್ಲ; ಅದು ಶತ್ರುವೇ ಅಲ್ಲ. ಅದು ತನ್ನೊಳಗೇ ತನ್ನೊಡಲ ಗೂಡಿನಲ್ಲಿಯೇ ಇರುವ ಗೆಳೆಯ! ಸಾವು, ಬದುಕಾಗಿಯೇ ಇತ್ತು. ಈಗ ಇನ್ನೊಂದು ರೀತಿಯಲ್ಲಿ ಪ್ರಕಟವಾಗಲು ಮೈ-ಮುರಿಯುತ್ತಿದೆ. ಮತ್ತು ಸಾವೆಂಬ ಈ ಗೆಳೆಯ ಪ್ರಕಟವಾಗಲು ತಾನು ಅನುವು ಮಾಡಿಕೊಡಬೇಕು- ಎಂದು.

ತನ್ನ ಹುಟ್ಟಿನಲ್ಲಿ ನೆನಪಾಗಿರುವ ಕೃಷ್ಣ, ಈಗ ಸಾವಿನಲ್ಲೂ ನೆನಪಾಗಿ ಜೀವಂತನಿದ್ದಾನೆ ಎಂದ ಮೇಲೆ, ಪರೀಕ್ಷಿತನಿಗೆ, ಕೃಷ್ಣ ಹೇಳಿದ ಬದುಕೆಂದರೆ ‘ವ್ಯಕ್ತ ಮಧ್ಯ’ ಎಂಬ ಮಾತಿನ ಗೂಢ ತನ್ನಲ್ಲಿಯೇ ಅನುಭವಕ್ಕೆ ಬರತೊಡಗಿತು. ಹುಟ್ಟುವ ಮುನ್ನ ಏನು? ಅದು ‘ಅವ್ಯಕ್ತ’ ಸತ್ತ ಮೇಲೆ ಏನು? ಅದೂ ‘ಅವ್ಯಕ್ತ’.  ನಡುವಣ ಈ ಬದುಕೊಂದು ‘ವ್ಯಕ್ತ ಮಧ್ಯ’ ಎಂದಿದ್ದ ಕೃಷ್ಣ. ತಾನು ಹುಟ್ಟುವ ಮುನ್ನ ತಾಯ ಒಡಲಲ್ಲಿ ಇದ್ದೆ. ಆಗ ಕೃಷ್ಣ ಕಾಪಾಡಿದ್ದ. ಅಂದರೆ, ಅವನೇ ‘ಅವ್ಯಕ್ತ’ ಎಂದಾಯಿತು. ಈಗ ತಾನು ಶಾಪನಿಮಿತ್ತ ಸಾವಿನ ಸನಿಹದಲ್ಲಿ ಇದ್ದೇನೆ. ಕೃಷ್ಣನ ನೆನಪು ತನ್ನಲ್ಲಿ ತುಂಬಿದೆ. ಪ್ರಾಯ: ನೆನಪಿಗೆ ಸಾವಿಲ್ಲ. ಈ ಅರ್ಥದಲ್ಲಿ ಸಾವಿನ ನಂತರವೂ ಇರುವ ಕೃಷ್ಣನ ನೆನಪು ಕೂಡ ‘ಅವ್ಯಕ್ತ’. ಅವನ ನೆನಪಿನಲ್ಲಿ ಅವನೇ ಇರುವುದರಿಂದ ಅಲ್ಲೂ ಅವನೇ ‘ಅವ್ಯಕ್ತ’ ನೆಂದಾಯಿತು. ‘ಕೃಷ್ಣ’ ಎಂಬ ಪದದ ಅರ್ಥ ಕೂಡ ರಹಸ್ಯವನ್ನು ಸೂಚಿಸಿ, ‘ಅವ್ಯಕ್ತ’ಕ್ಕೆ ಸಂವಾದಿಯೂ ಆಯಿತು. ಅಂದರೆ, ಅವನ ಮಾತು ಅವನ ಅನುಭವ. ಅವನ ಮಾತಿನಲ್ಲಿ ಅವನೇ ಇದ್ದಾನೆ. ಅವನ ಮಾತು ನೆನಪಾದರೆ, ಆ ನೆನಪಿನಲ್ಲಿ ಕೂಡ ಅವನೇ ಇದ್ದಾನೆ. ಓ ದೇವರೇ! ನೆನಪೆನ್ನುವುದು ನಮ್ಮ, ಜೀವಿಗಳ ಅನುಭವವಲ್ಲವೆ? ಹಾಗಾದರೆ, ನೆನಪಿನ ಮೂಲಕ ಜೀವವು ದೇವರನ್ನೇ ಅನುಭವಿಸುವುದೆ? ಮತ್ತು ಬುಡ; ತುದಿಗಳಲ್ಲಿ ಅವ್ಯಕ್ತ ಕೃಷ್ಣನ ನೆನಪಿಗೆ ಕಚ್ಚಿಕೊಂಡಿರುವ ಈ ನಡುವಣ ‘ವ್ಯಕ್ತ ಮಧ್ಯ’ದಲ್ಲಿ ಕೂಡ ಕೃಷ್ಣನೇ ಇಲ್ಲಿ ಬದುಕಾಗಿ ಪ್ರಕಟಗೊಂಡಿದ್ದಾನೆ ಎಂದಾಯಿತಲ್ಲವೆ? ಹಾಗೆಂದಾಗ, ತನ್ನ ಬದುಕು, ಕೃಷ್ಣನ ಬದುಕು ಒಂದೇ ಆಯಿತು! ಕೃಷ್ಣನ ಕಥೆ ತನ್ನ ಕಥೆಯೇ ಆಯಿತು! ಈ ಬದುಕನ್ನು ‘ಜೀವ’ದ ಕಥೆ ಎಂದು ತೊಡಗಿದರೆ ಅದು ದೇವರ ಕಥೆಯಾಗಿ ಮುಗಿಯುವುದು. ದೇವರ ಕಥೆ ಎಂದು ತೊಡಗಿದರೆ, ‘ಜೀವ’ದ ಕಥೆಯಾಗಿ ಮುಗಿಯುವುದು!.

ವ್ಯಾಸ ಮುನಿ, ಶುಕನನ್ನು ಕೂಗಿ ಕರೆದಾಗ, ಕಾಡಿನ ಮರಗಳೇ ಓಗೊಟ್ಟುವಂತೆ. ತಮ್ಮನ್ನೇ ಯಾರೋ ವ್ಯಾಕುಲರಾಗಿ ಕರೆದಂತೆ ಅವಕ್ಕೆ ಕೇಳಿಸಿತಂತೆ! ವ್ಯಕ್ತದಲ್ಲಿ ಅವ್ಯಕ್ತವು ಸೇರಿಕೊಂಡು ಬಿಟ್ಟಿದೆ. ಮಗನನ್ನು ಕರೆದರೆ ಕಾಡು ಓಗೊಡುತ್ತೆ. ಯಾರನ್ನೋ ಕರೆಯೋದು; ಯಾರೋ ಓಗೊಡೋದು! ಕರೆದದ್ದು ಸಾರ್ಥಕ ಎಂದು ಆಗ ಕರೆದವನಿಗೆ ಅನ್ನಿಸೋದು! ಓಗೊಡುವುದಕ್ಕೆ ಹಂಬಲಿಸುತ್ತ ಪ್ರಕೃತಿಯೇ ಕಾದುಕೊಂಡಿದೆ.  ಕರೆಯುವವರಿಲ್ಲವೇನೋ! ಪ್ರಕೃತಿಯ ಪ್ರಕೃತಿಯಾಗಿರುವ ದೇವರು ಕೂಡ ಹೀಗೆ ಓಗೊಡುವುದಕ್ಕೆ ಕಾದಿದ್ದಾನೋ! ಹಾ! ದೇವರು, ‘ಅವ್ಯಕ್ತ’ನಾಗಿ ಸಾವಿನ ಆಚೆಗೂ ಇರುವವನಾದುದರಿಂದ, ದೇವರನ್ನು ಕರೆಯುವುದೆಂದರೆ ಒಂದರ್ಥದಲ್ಲಿ ಸಾವನ್ನು ಕರೆದಂತೆಯೇ ಇರಬಹುದು. ಕರೆಯುವುದೆಂದರೆ, ಅವ್ಯಕ್ತವನ್ನು ಕರೆಯುವುದಲ್ಲವೆ? ಮತ್ತು ದೇವರು ಓಗೊಡುವುದೆಂದರೆ -ಅವ್ಯಕ್ತವು ವ್ಯಕ್ತವನ್ನು ತನ್ನಲ್ಲಿ ಲೀನಗೊಳಿಸುವಂತೆ, ಸಾವಿನ ಬಾಗಿಲು ತೆರೆಯುವುದೇ ಇರಬಹುದು!

ಹೌದು. ‘ಸಾವು’ ಮುಗ್ಧವಾಗಿದೆ.  ‘ಅವ್ಯಕ್ತ’ವು ಮುಗ್ಧವಾಗಿದೆ. ಆದುದರಿಂದಲೇ ಅದು ಸದಾ ತೆರೆದಿದೆ. ಆದರೆ, ಬದುಕು ಮುಗ್ಧವಾಗದೆ, ಅದು ಸಾವನ್ನು ಕರೆಯಲಾರದು. ಜೀವವು ಮುಗ್ಧವಾಗದೆ ಅದು ದೇವರನ್ನು ಕರೆಯಲಾರದು. ಮಗು ದೇವರನ್ನು ಕರೆಯಬಲ್ಲುದು. ಸಾವನ್ನು ತನ್ನ ತಾಯಿಯಂತೆ ಕರೆಯಬಲ್ಲುದು. ದೊರೆ ಪರೀಕ್ಷಿತನಿಗೆ, ಕೃಷ್ಣನ ನೆನಪಿನಲ್ಲಿ ತಳಕು ಬಿದ್ದಿರುವ ತನ್ನ ಶೈಶವ ಮರುಕಳಿಸಿ, ಶುಕಮುನಿಯನ್ನು, ನಾಲ್ಕರ ಹರೆಯದ ಬಾಲಕನಂತೆ ಕೃಷ್ಣನ ಕಥೆಗಾಗಿ ಪೀಡಿಸಿದನಂತೆ. ಕಥೆ ಹೇಳುವ ಶುಕಮುನಿಯಾದರೋ ಎಲ್ಲರ ಒಳದನಿಯಂತಿರುವ ಮಗುವೇ ಆಗಿದ್ದ! ಅವನು, ಪ್ರಕೃತಿ ಎಂಬ ಆಲದೆಲೆಯ ಮೇಲಿರುವ ನಿತ್ಯ ಶಿಶುವಾಗಿರುವ ಕೃಷ್ಣನ ಕಥೆ ಹೇಳುವ ತವಕದಲ್ಲಿ ಇದ್ದ. ಹೀಗೆ ಕೃಷ್ಣನ ಕಥೆ ಮೂರು ಮಕ್ಕಳ ಮುಗ್ಧ ಮೇಳದಾಟ!

ಯದು ವಂಶೀಯರ ರಾಜಧಾನಿ ‘ಮಥುರಾ’. ಅದು ಮಥುರಾ ಮಂಡಳ! ಇಲ್ಲಿನ ದೊರೆ ಉಗ್ರಸೇನ. ಆದರೆ, ನಿಜಕ್ಕೂ ಆಳುತ್ತಿದ್ದವನು ಆಳ್ವಿಕೆಯಲ್ಲಿ ಭಾರೀ ಮಹತ್ತ್ವಾಕಾಂಕ್ಷೆಯನ್ನು ಹೊತ್ತಿದ್ದ ಉಗ್ರಸೇನನ ಮಗ ಕಂಸ. ಉಗ್ರಸೇನನ ತಮ್ಮ ದೇವಕನ ಮಗಳು, ದೇವಕಿ- ಹೀಗೆ ದೇವಕಿ ಕಂಸನ ತಂಗಿ- ಮತ್ತು ಶೂರಕುಲದ ವಸುದೇವನ ಮದುವೆ ನಡೆದಿತ್ತು. ಅಂಧಕ, ವೃಷ್ಣಿ, ಭೋಜ, ಶೂರ ಮುಂತಾದ ಯಾದವರ ಒಳಪಂಗಡವೆಲ್ಲ ಸೇರಿತ್ತು. ವಧೂವರರನ್ನು ಸಿಂಗರಿಸಿದ ತೇರಿನಲ್ಲಿ ಕುಳ್ಳಿರಿಸಿ, ಕಂಸ ತಾನೇ ಕಡಿವಾಣ ಹಿಡಿದು ಮೆರವಣಿಗೆ ಹೊರಟಿದ್ದ. ಎಲ್ಲೆಡೆ ಸಂಭ್ರಮವಿತ್ತು. ಆ ಸಂಭ್ರಮದ ನಡುವೆ ಕೇಳಿಸಿತಂತೆ ಆಗಸದತ್ತಣಿಂದ ಗಂಭೀರ ಅಶರೀರ ವಾಣಿಯೊಂದು:

`ಈ ದೇವಕಿಯ ಎಂಟನೆಯ ಮಗು ನಿನ್ನ ಮೃತ್ಯವಾಗುವನು’.

`ಅಸ್ಯಾ: ಅಷ್ಟಮೋ ಗರ್ಭೋ ತ್ವಾಂ ಹಂತಾ ……’

ಕೇಳುತ್ತಿದ್ದ ಕಂಸನ ಬಗೆ ಕದಡಿ ಹೋಯಿತು. ಕೈಯ ಕಡಿವಾಣ ಕಡಿದು ಹೋಯಿತು. ತನ್ನ ಮುಂದೆಯೇ ಮೃತ್ಯು ಇದ್ದಂತೆ ಅನ್ನಿಸಿತು. ಕೈ ಕರವಾಳವನ್ನು ಸೆಳೆಯಿತು. ತನ್ನ ಮೃತ್ಯುವಿನ ಮೂಲವಾಗಿರುವ ಈ ದೇವಕಿಯನ್ನೇ ಕತ್ತರಿಸಿ ಒಗೆದರೆ! ಅಶರೀರವಾಣಿ ತನ್ನ ಮಾತನ್ನು ತಾನೇ ನುಂಗಿಕೊಳ್ಳುವಂತೆ ಮಾಡುವೆ!

ಕರವಾಳವನ್ನು ಝಳಪಿಸುವ ಮುನ್ನ ಕಂಸನ ಕೈಯನ್ನು ವಸುದೇವ ತಡೆದನಂತೆ.

`ಎಂಟನೆಯ ಮಗುವಿನಿಂದ ಎಂದಲ್ಲವೆ ಆಗಸದ ನುಡಿ! ಅದು ಎಷ್ಟು ದೂರದ ಭವಿಷ್ಯ! ಅಷ್ಟು ನಿಡಿದಾದ ಕಾಲದಲ್ಲಿ ಏನೇನು ನಡೆದೀತೋ ಬಲ್ಲವರಾರು? ಅಷ್ಟಕ್ಕೂ ತಮ್ಮ ಸೋದರ ಮಾವನ ಮುಖಲಕ್ಷಣಗಳನ್ನು ಹೊತ್ತ ನಿನ್ನ ಅಳಿಯಂದಿರನ್ನು ನಿನ್ನ ಕಾಲ ಬಳಿಯೇ ಇಟ್ಟು ಬಿಡುವೆ.  ದೇವಕಿಯ ಮೇಲೆ ಕೈ ಎತ್ತದಿರು’

ಕಂಸನಿಗೂ ಆಕ್ಷಣಕ್ಕೆ ಹೌದೆನ್ನಿಸಿತು. ತಂಗಿಯನ್ನು ಬಿಟ್ಟು ಕೊಟ್ಟ.

ಹೀಗೆ ಕೇಳಿ ಬಂದ ಅವ್ಯಕ್ತದ ನುಡಿಗಟ್ಟು ಮಾನವನ ಮುಗ್ಧತೆಯನ್ನು ಪರೀಕ್ಷಿಸುತ್ತಿದೆಯೆ? ಅದನ್ನು ಹೇಗೆ ಗ್ರಹಿಸಬೇಕು? ‘ನಿಜ’ವೆಂದು ನಂಬಿದರೆ, ಅದು ನಡೆದೇ ನಡೆಯುತ್ತದಲ್ಲ; ತಡೆಯುವಂತಿಲ್ಲವಲ್ಲ! ನಿಜವಲ್ಲ ಬಯಲ ಭ್ರಾಂತಿ ಎಂದು ಗ್ರಹಿಸಿದರೆ, ಯಾವ ಪ್ರತಿಕ್ರಿಯೆಯೂ ಬೇಕಿಲ್ಲವಲ್ಲ! ಇವೆರಡೂ ಅಲ್ಲದೆ, ಆ ಮಾತೊಂದು ಸೂಚನೆ ಎಂದು ಗ್ರಹಿಸಿದರೆ, -ತನ್ನ ಎಚ್ಚರದಲ್ಲಿ ತಾನಿರಬೇಕು. ನಿಜ. ಆದರೆ, ಎಚ್ಚರವೆಂದರೇನು? ತನ್ನ ತಂಗಿಯ ಮಗನಿಗೇ ತನ್ನನ್ನು ಕೊಲ್ಲಬೇಕೆಂದು ಅನ್ನಿಸುವಂತೆ ತಾನು ಬದುಕಬಾರದಲ್ಲ! ಇದು ತಾನೇ ಎಚ್ಚರ. ಇದು ತಾನೇ ಆ ವಾಣಿಯನ್ನು ಹುಸಿ ಮಾಡುವ ರೀತಿ. ಬದಲಾಗಿ, ತನ್ನ ರಕ್ಷಣೆಯಲ್ಲಿ ತೊಡಗಿಕೊಂಡರೆ, ಸೂಚನೆಯನ್ನು ಪಾಲಿಸಿದಂತೆ ಆಗುವುದರ ಜತೆಗೆ ಪರೋಕ್ಷವಾಗಿ ಆ ವಾಣಿಯನ್ನು ನಿಜ ಮಾಡಿದಂತೆಯೂ ಆಗಬಹುದೆಂದು ಕಂಸನಿಗೆ ತೋಚದೇ ಹೋಯಿತು. ಮುಗ್ಧತೆ ನಾಶವಾಗಿ ಹೋಯಿತು.

ಅವ್ಯಕ್ತದ ನುಡಿಗಟ್ಟಿಗೆ, ಸಾವಿನ ನುಡಿಗಟ್ಟಿಗೆ ಓಗೊಡಲು ತಿಳಿಯದೆ ಮುಗ್ಧತೆ ನಾಶವಾಗುವುದೇ ಮಾನವನ ಪಾಡಿರಬಹುದು!

ಎಂಟನೆಯ ಮಗು ತಾನೇ. ಏಳು ಮಕ್ಕಳಿಂದ ಭಯವಿಲ್ಲವಲ್ಲ. ಎಂಬ ನಿನ್ನ ಲೆಕ್ಕವೂ ತಪ್ಪು ಎಂದರಂತೆ ನಾರದರು- ಕಂಸನಲ್ಲಿ. `ಅಂಕಾನಾಂ ವಾಮತೋ ಗತಿ:’ ಅಂಕಗಳನ್ನು ಎಡದಿಂದ ಬಲಕ್ಕೆ ಓದಬೇಕು. ‘ಜಯ’ ಎಂಬ ಎರಡಕ್ಷರಗಳಿಗೆ ಅವುಗಳ ಅಂಕಗಳನ್ನು ಹಚ್ಚಿದರೆ, ಅದು ಎಂಟು; ಒಂದು ಆಗಿ ಎಂಭತ್ತ ಒಂದಾಗುವುದು. ಈ ಸಂಖ್ಯೆಯನ್ನು ಪಲ್ಲಟ ಮಾಡಿದರೆ, ಆಗ ಅದು ಹದಿನೆಂಟಾಗಿ, ಮಹಾಭಾರತದ ಪರ್ವಗಳನ್ನು, ಗೀತೆಯ ಅಧ್ಯಾಯಗಳನ್ನು, ಪುರಾಣಗಳ ಸಂಖ್ಯೆಯನ್ನೂ ಸೂಚಿಸಿ, ಕೃತಾರ್ಥವಾಗುವುದು! ಪಲ್ಲಟ ಮಾಡಿನೋಡುವುದೇ ಅರಿವಿನ ರೀತಿ- ಎಂದರಂತೆ.

ಕಂಸನಿಗೆ ಮತ್ತಷ್ಟು ಗೊಂದಲವಾಯಿತು.

ಕೇಳಿದ ನುಡಿಗಟ್ಟಿನ ಅರ್ಥವನ್ನೇ ಪಲ್ಲಟ ಮಾಡಿ ನೋಡಬೇಕೆಂದು ಆಗಲೂ ಕಂಸನಿಗೆ ಅನ್ನಿಸಲಿಲ್ಲ. ಮಥುರೆಯಲ್ಲಿ ಅವನ ಆಳ್ವಿಕೆಯೇ ಪಲ್ಲಟವಾಗಿ ಹೋಯಿತು.

ಮಾರಣಹೋಮ ಪ್ರಾರಂಭವಾಯಿತು. ವಸುದೇವ- ದೇವಕಿಯರನ್ನು ಕಂಸ, ಕಾರಾಗೃಹದಲ್ಲಿರಿಸಿದ. ಇದನ್ನು ವಿರೋಧಿಸಿದ ತಂದೆ ಉಗ್ರಸೇನನನ್ನೇ ಸೆರೆಗೆ ತಳ್ಳಿದ. ಕಂಸನಿಗೊಂದು ಒಕ್ಕೂಟವಿತ್ತು. ಜರಾಸಂಧ ಕಂಸನ ಮಾವ. ಹೆಣ್ಣು ಕೊಟ್ಟವ. ಅವನ ಮಗಧ ರಾಜಕೀಯ ಭಯಾನಕವಾಗಿತ್ತು.  ತೀವ್ರವಾದ ದಬ್ಬಾಳಿಕೆ ನಡೆಸುತ್ತಿದ್ದ. ಪ್ರಲಂಬ, ಬಕ, ತೃಣಾವರ್ತ, ಕೇಶಿ, ಬಾಣ, ಭೌಮ, ಅಘ, ಚಾಣೂರ, ಮುಷ್ಟಿಕ- ಇಂಥ ಮದೋದ್ಧತರ ಒಂದು ದಂಡೇ ಇತ್ತು. ಅವರಲ್ಲಿ ‘ಪೂತನಾ’ ಇದ್ದಳು. ಕಂಸನಿಗೆ ಅವಲೋಕನ ಮಾಡುವ ಅವಕಾಶವೇ ಇರಲಿಲ್ಲ.

ಯಾದವರ ಮೇಲೆ ಇವರೆಲ್ಲರ ದಬ್ಬಾಳಿಕೆ ಶುರುವಾಯಿತು. ಯಾದವರು ವಲಸೆ ಹೋಗಬೇಕಾಗಿ ಬಂತು. ಇರುವವರು ಕಂಸನಿಗೆ ಶರಣಾಗಿ ಬದುಕಿದರು. ವಸುದೇವ- ದೇವಕಿಯರ ಆರು ಮಕ್ಕಳನ್ನೂ ಕಂಸ ಕ್ರೂರವಾಗಿ ಸಾಯಿಸಿದ. ಈ ತಂದೆ-ತಾಯಿ, ಪುತ್ರ ಶೋಕದಿಂದ ಚಿರ ದು:ಖಿಗಳಾದರು. ದೇವರು ತಾನು ಹುಟ್ಟುವುದಕ್ಕೆ ಆಯ್ಕೆ ಮಾಡಿಕೊಳ್ಳುವ ತಂದೆ-ತಾಯಿ, ಪುತ್ರ ಶೋಕದಿಂದ ಬೆಂದಿರಬೇಕೋ ಏನೋ?  ಆದರೂ ವಸುದೇವ-ದೇವಕಿ ಬದುಕಿನಲ್ಲಿ ಆಶೆಯನ್ನು ಬಿಟ್ಟಿರಲಿಲ್ಲ. ಈಗ ಹಿಂದೆ ಕೇಳಿದ ಅಶರೀರವಾಣಿಯೇ ಆಶೆಯ ಒಂದು ತಂತು! ಅಪಾರ ಕಷ್ಟ ಸಂಕಟದ ನಡುವೆ ಜೀವಂತ ಆಶೆಯೊಂದನ್ನಿಟ್ಟುಕೊಂಡು ಅದಕ್ಕಾಗಿಯೇ ಬದುಕಿದರೆ, ಭಗವಂತ ಅಲ್ಲಿ ಮೂಡಿ ಬರುತ್ತಾನೇನೋ.  ಇಲ್ಲದಿದ್ದರೆ, ಆರು ಮಕ್ಕಳನ್ನು ಕಳೆದುಕೊಂಡ ತಾಯಿ, ದೇವಕಿ ಮತ್ತೆ ತಾಯಿ ಆಗುವುದು ಕಷ್ಟ.  ಕೃಷ್ಣನ ತಾಯಿ ಆಗಬೇಕಾದವಳು ಪಡಬೇಕಾದ ಕಷ್ಟ ಅದು!

ಏಳನೇಯ ಗರ್ಭ. ದೇವಕಿಗೆ ಮತ್ತೆ ಚಿಂತೆ. ಆಗ ಒಂದು ಅಲೌಕಿಕ ಘಟನೆ ನಡೆಯಿತು. ವಸುದೇವನಿಗೆ ಇಬ್ಬರು ಪತ್ನಿಯರು. ರೋಹಿಣಿ ಮತ್ತು ದೇವಕಿ. ರೋಹಿಣಿ, ದೂರದ ‘ಗೋಕುಲ’ದಲ್ಲಿ ಇದ್ದಳು.  ಅದು ವಸುದೇವನ ಊರು. ಅಲ್ಲಿನ ಮುಖಂಡ ‘ನಂದ’. ಹಾಗಾಗಿ ಅದು ‘ನಂದ ಗೋಕುಲ’ ನಂದ, ವಸುದೇವನ ಆತ್ಮೀಯ ಗೆಳೆಯ. ನಂದನ ಹೆಂಡತಿಯೇ ಯಶೋದಾ. ನಂದ ಮತ್ತು ವಸುದೇವ ಒಂದು ಹಂಚಿಕೆ ಹೂಡಿದ್ದರು. ದೇವಕಿಗೆ ಎಂಟನೆಯ ಮಗುವಾಗುವ ಹೊತ್ತಿಗೆ (ಈಗ ಅದೊಂದೆ ಉಳಿದಿರುವ ಆಶೆ!) ಆ ಮಗುವನ್ನು ಹೇಗೋ ಉಪಾಯದಿಂದ, ಗೋಕುಲಕ್ಕೆ ಒಯ್ಯುವುದು. ಕಂಸನಿಗೆ ಇದು ತಿಳಿಯಬಾರದಾಗಿ ಗೋಕುಲದಿಂದ ಒಂದು ಮಗುವನ್ನು ದೇವಕಿಯ ಮಡಿಲಲ್ಲಿ ಇರಿಸುವುದು. ಅವಳ ಮಡಿಲ ಮಗು ಬದುಕುವಂತಿಲ್ಲವಲ್ಲ!

ಅಲೌಕಿಕ ಸಂಗತಿ ಎಂದರೆ, ದೇವಕಿಯ ಏಳನೆಯ ಗರ್ಭ, ಗೋಕುಲದಲ್ಲಿರುವ ರೋಹಿಣಿಯ ಒಡಲಲ್ಲಿ ಬೆಳೆಯುವ ಘಟನೆ. ದೇವಕಿಯ ಗರ್ಭದಿಂದ ಆ ಜೀವವನ್ನು ಸೆಳೆದು ಅದನ್ನು ರೋಹಿಣಿಯ ಒಡಲಲ್ಲಿ ಇರಿಸಲಾಯಿತು. ಇದನ್ನು ನೆರವೇರಿಸಿದವಳು ‘ಯೋಗ ಮಾಯೆ’ಯಂತೆ. ಈ ಯೋಗ ಮಾಯೆಯೇ ಮತ್ತೆ ನಂದ-ಯಶೋದೆಯರ ಮಗಳಾಗಿ ಹುಟ್ಟಿ, ಕೃಷ್ಣನ ಬದಲಾಗಿ ದೇವಕಿಯ ಮಡಿಲಲ್ಲಿ ಮಲಗಿ, ಎಂಟನೆಯ ಮಗು ಹೆಣ್ಣೇಕಾಯಿತು ಎಂದು ಕಂಸನನ್ನು ಕಂಗೆಡಿಸಿದಳು. ರೋಹಿಣಿಯ ಮಗನಾಗಿ ಹೀಗೆ ಹುಟ್ಟಿ ಬಂದವನು ಬಲರಾಮ. ಇವನು ಶೇಷಾವತಾರನಂತೆ! ಹುಟ್ಟಿಲ್ಲದ ಭಗವಂತನಿಗೆ, ಹೀಗೆ ಇಬ್ಬರು ತಾಯಂದಿರ ಗರ್ಭದಲ್ಲಿ ಬೆಳೆದ ಈ ಸಂಕರ್ಷಣ ಬಲರಾಮ ನಿತ್ಯ ಸಂಗಾತಿ!

ದೇವಕಿಗೆ ಎಂಟನೆಯ ಬಸಿರು. ತಂದೆ-ತಾಯಿಗಳಿಬ್ಬರಲ್ಲೂ ಹೇಳಲಾಗದ ದಿವ್ಯ ವರ್ಚಸ್ಸು ಹೊಳೆಯುತ್ತಿತ್ತು! ಕಂಸ, ಸೆರೆಮನೆಗೆ ಬಂದು ನೋಡಿ ಹೋಗುತ್ತಿದ್ದ. ತಂಗಿಯ ಮುಖದ ತೇಜವನ್ನು ನೋಡಿ ವಿಚಲಿತನಾಗುತ್ತಿದ್ದ. ತನ್ನನ್ನು ಕೊಲ್ಲುವ ಮಗುವನ್ನು ಕುರಿತೇ ಚಿಂತಿಸುತ್ತಿದ್ದ. ದೇವರು ಹುಟ್ಟಿ ಬರಬೇಕಾದರೆ, ಎಲ್ಲರೂ ಅವನನ್ನು ಚಿಂತಿಸಬೇಕೇನೋ; ಅವರವರ ಭಾವದಿಂದ!

ಓಡೋಡುತ್ತ ಸಿಂಹ ಮಾಸ ಬಂತು. ಕೃಷ್ಣ ಪಕ್ಷದ ಅಷ್ಟಮೀ. ಅಂದು ರೋಹಿಣೀ ನಕ್ಷತ್ರ. ಇದಕ್ಕೆ ‘ಜಯಂತೀ ಯೋಗ’ ಎನ್ನುತ್ತಾರೆ. ಮಳೆಗಾಲವಾಗಿದ್ದರೂ ಅಂದು ಪ್ರಸನ್ನ ನಿರ್ಮಲವಾಗಿತ್ತು ಆಗಸ. ಶಾಂತವಾಗಿತ್ತು ಗ್ರಹ- ತಾರಾಗಣ. ದೊಡ್ಡ ನಗರಗಳಲ್ಲಿ ಸಣ್ಣ ಹಳ್ಳಿಗಳಲ್ಲಿ, ಹಸುಗಳ ಹಟ್ಟಿಯಲ್ಲಿ ಏನೋ ಹೇಳಲಾಗದ ಮಾಂಗಲಿಕ ಭಾವನೆಯೊಂದು ಹರಡಿತ್ತಂತೆ. ಹೊಳೆಗಳ ನೀರು ತಿಳಿಯಾಗಿ ಹರಿದು ಗಾಳಿ ಸುಖವಾಗಿ ಬೀಸಿ, ಮನೆಗಳಲ್ಲಿ ಉರಿಯುವ ಎಣ್ಣೆ ದೀಪಗಳು ಹೊಗೆ ಕಾರದೆ ಸೌಮ್ಯವಾಗಿ ಉರಿಯುತ್ತಿರುವ ಮಧ್ಯರಾತ್ರಿಯ ಹೊತ್ತು- ಕೃಷ್ಣಾವತಾರವಾಯಿತು.

ವಸುದೇವ ನೋಡಿದನಂತೆ: ತಮದ್ಭುತಂ ಬಾಲಕಂ ಅಂಬುಜೇಕ್ಷಣಂ…..  ಸರ್ವ ಲಕ್ಷಣ ಲಕ್ಷಿತನಾಗಿ ಭಗವಂತ ಗೋಚರಿಸಿದನಂತೆ. ವಸುದೇವನಿಗೆ ಅರಿವಾಗಬೇಕಲ್ಲ. ನಿನ್ನ ಮಗು ಎಂದು ತಿಳಕೋಬೇಡ.  ಮೋಹಗ್ರಸ್ತನಾಗಬೇಡ. ಮೋಹವನ್ನು ಹರಿದು ಹಾಕಲೇ ಬಂದವನು ಭಗವಂತ. ಇನ್ನೊಂದು ರೀತಿಯಲ್ಲಿ ಕಂಸ, ಮೋಹದಲ್ಲಿ ಸಿಕ್ಕಿದ್ದಾನೆ. ಮಗುವನ್ನು ‘ಮಗು’ ಎಂದೇ ತಿಳಕೊಂಡಿದ್ದಾನೆ. ಅದನ್ನು ನಾಶ ಮಾಡಬಹುದು ಎಂದುಕೊಂಡಿದ್ದಾನೆ. ಪ್ರತಿ ಮಗುವೂ ವಿಶ್ವದ ಪ್ರತೀಕ; ಪುಟ್ಟ ವಿಶ್ವ ಎಂದು ಕಂಡುಕೊಂಡಿಲ್ಲ. ಮಗುವಿನಿಂದ ಕಾಪಾಡಿಕೊಳ್ಳುವುದೆಂದರೆ ಮಗುವನ್ನು ಸಾಯಿಸುವುದು ಎಂದುಕೊಂಡಿದ್ದಾನೆ. ಇದೇ ಮೋಹ.  ಮಗುವಿನಲ್ಲಿ ದೇವರನ್ನೇ ನೋಡು! ಮಗು ನಿನ್ನದಲ್ಲ!

ವಸುದೇವ ನೋಡಿದನಂತೆ: ಸಂಸಾರದಿಂದ ದಾಟಿಸುವವನು ಸಂಸಾರದ ಸಾರವಾದ ಮಗುವಾಗಿ ಕಾಣಿಸಿಕೊಳ್ಳುವ ವಿಚಿತ್ರ! ಭಗವಂತನನ್ನು ನೋಡಿ ವಸುದೇವನೇ ಮಗುವಿನಂತಾದನಂತೆ! ತಾಯಿ ದೇವಕಿ ನೋಡಿದಳಂತೆ: `ಸತ್ವಂ ಸಾಕ್ಷಾತ್ ವಿಷ್ಣು: ಅಧ್ಯಾತ್ಮ ದೀಪ:’ ನಿನ್ನ ಬೆಳಕಿನಿಂದಲೇ ನಿನ್ನನ್ನು ನೋಡುತ್ತಿರುವೆ. ನೀನೇ ನಿನ್ನನ್ನು ತೋರಿಸುತ್ತಿರುವೆ. ನಿಜವೆಂದರೆ, ಎಲ್ಲದರ ‘ಮೊದಲು’ ಮತ್ತು ‘ಕೊನೆ’ ನೀನೇ. ಈ ‘ವ್ಯಕ್ತ ಮಧ್ಯ’ವು ಅವ್ಯಕ್ತದಲ್ಲಿ ಲೀನವಾದ ಮೇಲೆ- ಉಳಿಯುವವನು ನೀನೊಬ್ಬನೇ. ನಿಜ ಹೇಳಬೇಕೇನು? ಎಲ್ಲವನ್ನೂ ತನ್ನ ಬಸುರಲ್ಲಿ ಹೊತ್ತವನು ನೀನು. ನಿನ್ನನ್ನು ನಾನು ಒಡಲಲ್ಲಿ ಹೊತ್ತಿದ್ದೇನಲ್ಲ! ಎಂಥ ವಿಚಿತ್ರ! ಇಲ್ಲ- ತಾಯಂದಿರು ಬಸುರಲ್ಲಿ ಮಗುವನ್ನು ಹೊರುವುದಲ್ಲ. ಭಗವಂತ, ಮಗುವಾಗಿ, ತಾಯ ಬಸಿರಲ್ಲಿ ಹೊಕ್ಕು, ಆಲದೆಲೆಯ ಮೇಲೆ ಮಲಗಿದಂತೆ ಮಲಗಿ ಬಿಡುವುದೇ ನಿಜ!

ಇಷ್ಟು ಬೆಳಕನ್ನು ಪಡೆದರೂ ದೇವಕಿ, ತಾಯಿ. ಆರು ಮಕ್ಕಳನ್ನು ಕಳೆದುಕೊಂಡ ತಾಯಿ. ಆ ಹಿನ್ನೆಲೆ ಈಗ ಜಾಗ್ರತವಾಯಿತು. ಹೇಳಿದಳಂತೆ: ಇದು ಧ್ಯಾನಾರ್ಹವಾದ ರೂಪ.  ಹೃದಯ ಮಂದಿರದಲ್ಲಿ ಯೋಗಿಗಳು ಧ್ಯಾನಿಸುವ ರೂಪ. ಇಂಥ ದಿವ್ಯ ರೂಪವನ್ನು, ಮನುಷ್ಯರ ಮುಂದೆ ಪ್ರಕಟಿಸಬೇಡ. ಮನುಷ್ಯರು ಧ್ಯಾನವನ್ನು ಕೆಡಿಸುವ ಸ್ವಭಾವವುಳ್ಳವರು. ಯಜ್ಞವನ್ನು ರಾಕ್ಷಸರು ಕೆಡಿಸುವಂತೆ. ಧ್ಯಾನ ಭಂಗವೇ ಮನುಷ್ಯರ ಸ್ಥಿತಿ. ದಯವಿಟ್ಟು ಕಂಸನ ಮುಂದೆ ತೋರಿಸಿಕೊಳ್ಳಬೇಡ!

ಮಗುವನ್ನು ಹೆತ್ತ ತಾಯಿ ಆ ಮಗುವನ್ನು ತೆಕ್ಕೆಯಲ್ಲಿ ತೆಗೆದುಕೊಂಡು ಈ ಲೋಕಕ್ಕೆ ಏಕೆ ಬಂದೆ ನನ್ನ ಚಿನ್ನ- ಎನ್ನುತ್ತಿದ್ದಾಳೆ!

ಕೃಷ್ಣನಿಗೆ, ದೇವಕಿ ಮಾಡಿದ ಮೊದಲ ಮಂಗಳಾ ಶಾಸನ ಇದು!

ಕೃಷ್ಣನಿಗೆ ಇದೇ ಬೇಕಿತ್ತು.

ತೋಳ್ಪಾಡಿ ಭಾಗವತ 22:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ

ಕಂಸನಿಗೆ ನಿನ್ನನ್ನು ತೋರಿಸಿಕೊಳ್ಳಬೇಡ; ದಯವಿಟ್ಟು ಎಂದು ತಾಯಿ ದೇವಕಿ ಭಗವಂತ ಕೃಷ್ಣನಿಗೆ ಹೇಳಿದಳಲ್ಲ; ಕೃಷ್ಣನಿಗೆ ಇದೇ ಬೇಕಿತ್ತು. ಸಂಸಾರಿಯ ಈ ಭಯ; ಈ ಭಾವ: ಈ ತಾಯ್ನುಡಿ- ಇದೇ ಬೇಕಿತ್ತು. ಈ ಜಾಡನ್ನೇ ಮುಂದುವರಿಸಿ ದೇವರು ಹೇಳಿದನಂತೆ: `ನನ್ನನ್ನು ಗೋಕುಲಕ್ಕೆ ಒಯ್ಯಿರಿ. ಅಲ್ಲಿ ಯಶೋದೆಗೆ ಒಂದು ಮಗು ಜನಿಸಿದೆ. ಅದನ್ನು ತಂದು ಇಲ್ಲಿ ನಿಮ್ಮ ಪಕ್ಕದಲ್ಲಿ ಮಲಗಿಸಿಕೊಳ್ಳಿ. ಅದು ಹೆಣ್ಣು. ಕಂಸನ ಎದೆ ಮೆಟ್ಟುವ ಹೆಣ್ಣು! ಇಷ್ಟು ನಡೆಸುವುದಕ್ಕೆ ಪ್ರಕೃತಿ ಅನುಕೂಲಿಸುವುದು. ನನ್ನನ್ನು ಲೋಕಕ್ಕೆ ಬಿಟ್ಟು ಕೊಡಿ. ಅಂದರೆ, ಮರಳಿ ಬರುವೆ. ಇದು ನನ್ನ ನಡೆ’.

ದೇವಕಿಗೆ ಕರುಳು ಬಾಯಿಗೆ ಬಂತು. ತಾನು ಹುಟ್ಟಿದ ಕೂಡಲೇ ತನ್ನನ್ನು ಒಪ್ಪಿಸುವುದನ್ನು ಕಲಿಸುತ್ತಿದ್ದಾನೆ. ಯಶೋದೆಯ ಮಗು ನನ್ನ ಬಳಿ ಬರುತ್ತಿದೆ! ಅದು ‘ಕಂಸನ ಎದೆ ಮೆಟ್ಟುವ ಹೆಣ್ಣು’ ಎಂದುದೇಕೆಂದು ಕ್ಷಣ ಚಿಂತಿಸಿದಳು. ಯಶೋದೆಯ ಮಗುವನ್ನು ನನ್ನ ಬಳಿಯಿಂದ ಕಂಸ ಸೆಳೆದೊಯ್ಯುವ! ಅಯ್ಯೋ ನನ್ನ ಭಾಗ್ಯವೆ! ಕೃಷ್ಣನ ತಾಯಿಯ ಭಾಗ್ಯವೆ! ಆ ಮಗು ಕಂಸನ ಎದೆ ಮೆಟ್ಟುವಳೆಂದು ಹೇಳಿದ್ದು ನನಗೆ ಸಾಂತ್ವನ! -ಭಗವಂತನ ಮಾತಿಗೆ ದೇವಕಿಗೆ ಎದೆ ಬಿರಿಯಿತು.

ಸೆರೆಮನೆಯ ಹೊರಗೆ ಮಿಂಚೊಂದು ಮಿಂಚಿತು. ದೇವಕಿ ನೋಡುತ್ತಾಳೆ- ತನ್ನ ಪಕ್ಕದಲ್ಲಿ ಮಗು ಮಲಗಿದೆ. ಸದ್ಯೋಜಾತ. ತಾನು ಸದ್ಯ: ಪಯಸ್ವಿನಿ. ಮಗು ಗಂಡು. ಅದೇ ತಾನೇ ಹೊಕ್ಕುಳ ಬಳ್ಳಿ ತುಂಡರಿಸಿದಂತಿದೆ. ನೀಲ ಆಕಾಶದ ಒಂದು ತುಂಡೆಂಬಂತೆ ಬೆಳಗುವ ಶ್ಯಾಮಸ್ಫಟಿಕ ಶಲಾಕೆ! ಅಂಗಾಲು ಒಂದು ತಾವರೆ! ಅಂಗೈ ಒಂದು ತಾವರೆ! ಮೊಗವೊಂದು ತಾವರೆ! ದೇವಕಿ ನೋಡಿದಳು: ಬಳ್ಳಿಯಲ್ಲಿ ಮೂರು ತಾವರೆ ಮೊಗ್ಗು ಒಮ್ಮೆಲೆ ಅರಳಿದಂತೆ!

ಇಂಥ ಚೆಲುವಿನ ಮಗು! ತಾಯನ್ನು ಅಗಲಲೇ ಬೇಕು. ಅಗಲಿಕೆಯನ್ನು ಕಲಿಸುವುದಕ್ಕೇ ಬಂದಂತಿದೆ ಈ ಮಗು! `ನಾಥ’ನಿಗೆ ಅನಾಥ ಭಾವದ ಮೇಲೆ ಅದೇನು ಅಕ್ಕರೆಯೋ! ಅವತರಣವೆಂದರೆ ಇದೇ ಏನು!

ತಾಯಿಗೆ ಕಂಬಿನಿ ಮತ್ತು ಎದೆ ಹಾಲು ಧಾರೆಯಾಗಿ ಹರಿಯಿತು. ಒಮ್ಮೆ ಎತ್ತಿ ಅಪ್ಪಿ ಮುತ್ತಿಟ್ಟು ತನ್ನ ಅಕ್ಕರೆಯನ್ನೆಲ್ಲ ಸೂಸಿ ಗಂಡನ ಕೈಯಲ್ಲಿಟ್ಟಳು. ಕಳೆದುಕೊಂಡ ತನ್ನೆಲ್ಲ ಮಕ್ಕಳ ಆಯುಸ್ಸನ್ನು ಕೃಷ್ಣನಿಗೆ ಹರಸಿದಳು.

ವಸುದೇವ ಗಡಿಬಿಡಿಯಲ್ಲಿದ್ದ. ಸೆರೆಕೋಣೆಯ ಮೂಲೆಯಲ್ಲಿ ಒಂದು ಬೆತ್ತದ ಬುಟ್ಟಿ. ಅದರಲ್ಲಿ ಚಿಂದಿಯ ಮೆತ್ತೆ. ಅದರಲ್ಲಿ ತನ್ನ ಹೃದಯದ ಈ ತುಂಡನ್ನು ಇರಿಸಿದ. ಹೊರಗೆ ಮಳೆ ಧೋ ಎಂದು ಸುರಿಯುತ್ತಿತ್ತು.  ತಂದೆ-ತಾಯಂದಿರ ಎದೆಯಲ್ಲೂ. ಇದು ಶ್ರಾವಣ- ಹೃದಯ ವಿದ್ರಾವಣ!

ಸೆರೆಮನೆಯ ಪಹರೆಯ ಜನ ಗಾಢನಿದ್ದೆಗೆ ಸಂದಿದ್ದರು. ಅವರು ಇಂಥದೊಂದು ಪಹರೆ ಇದುವರೆಗೆ ಮಾಡಿರಲಿಲ್ಲ. ತಾಯಿಗೆ ಪಹರೆ! ಹುಟ್ಟುವ ಮಗುವಿಗೆ ಪಹರೆ! ತಮ್ಮ ಮನೆಯಲ್ಲಿ ಹೆಂಡಿರೊಡನೆ ಈ ಬಗ್ಗೆ ಹೇಳಿದಾಗ ಮನೆಯ ಹೆಂಗಸರು ಹೇಳಿದ್ದರಂತೆ; ಖಂಡಿತ: ದೇವಕಿಯ ಮಗು ಬಹಳ ದೊಡ್ಡವನಿರಬೇಕು! ತಾಯ ಹೊಟ್ಟೆಗೇ ನೀವು ಪಹರೆ ಕೊಡುತ್ತಿದ್ದೀರಿ. ಆ ಮಗುವನ್ನು ಕಾದ ಫಲ- ನಿಮಗೆ ಮನೆಯ ಮಕ್ಕಳ ಮೇಲೆ ಅಕ್ಕರೆ ಹೆಚ್ಚಾದರೆ ಸಾಕು!

ಮಳೆ ಸುರಿಯುತ್ತಲೇ ಇತ್ತು. ಸೆರೆಮನೆಯ ದೊಡ್ಡ ಬಆಗಿಲು ಸದ್ದಿಲ್ಲದೆ ತೆರೆದುಕೊಳ್ಳುತ್ತಿತ್ತು. ಮಿಂಚೊಂದು ಕೋರೈಸಿ ತೆರೆದ ಬಾಗಿಲನ್ನು ವಸುದೇವನಿಗೆ ತೋರಿಸಿತು. ತಂದೆ ವಸುದೇವ ಒಮ್ಮೆ ಬುಟ್ಟಿಗೆ ಪೊಡಮಟ್ಟ. ಎಲೆ ವಸ್ತ್ರ ತಲೆಗೆ ಸುತ್ತಿ ಆ ಸಿಂಬಿಯ ಮೇಲೆ ಈ ಬುಟ್ಟಿಯನ್ನಿಟ್ಟ. ದೇವಕಿ, ಹತ್ತಿರ ಮತ್ತು ದೂರದ ಅಂತರವನ್ನು ಮರೆತೂ ಮರೆಯಲಾಗದೆ ಧ್ಯಾನ ಮತ್ತು ವಿಷಾದ ಬೆರೆತಂತೆ, ನೋಡುತ್ತಿರಲು- ಸೆರೆಮನೆಯ ಹೊರಗೆ ಅಡಿ ಇಟ್ಟ.

ಎಡೆ ಬಿಡದ ಮಳೆ. ದೇವಕಿ ನೆನೆದಳಂತೆ. ಮಳೆಯಿಂದ ಮಗುವಿಗೆ ರಕ್ಷಣೆ ಬೇಕು. ದೇವರೇ ಕಾಪಾಡಬೇಕು! ಭಗವಂತನನ್ನು ಕಂಡು ಅವಳು ಸ್ತುತಿಸಿದ್ದಳು. `ತ್ವಂ ಶೇಷ ಸಂಜ್ಞ:’ ಲೋಕ ಜೀವನದಲ್ಲಿ ಕೂಡಿಸಿ, ಕಳೆದು ಕೊನೆಗೆ ಉಳಿಯುವವನು ನೀನೊಬ್ಬನೇ. ನಮಗೆ ಉಳಿಯುವವನು ನೀನೊಬ್ಬನೇ ಎಂದು ಹೇಳಿದ್ದಳು. ಅಲ್ಲಿತ್ತು ಶೇಷ ಸಂಜ್ಞೆ!

ಮಗುವನ್ನು ಹೊತ್ತು ಮಳೆಯಲ್ಲೆ ಸಾಗುತ್ತಿದ್ದ ವಸುದೇವನಿಗೆ ತನ್ನ ಹಿಂದೆ ಯಾರೋ ಇದ್ದಾರೆ ಎನ್ನಿಸಿತಂತೆ. ಏನು ಮಳೆ ನಿಂತಿತೆ! ನೋಡುತ್ತಾನೆ: ಆದಿಶೇಷ ಹೆಡೆ ಅರಳಿಸಿ ಮಗುವಿಗೆ ಕೊಡೆಯಂತೆ ಹಿಡಿದಿದ್ದಾನೆ. ಮಗು ನಗುವಂತಿದೆ. ತಾನೂ ಆ ನೆರಳಲ್ಲಿ ಇದ್ದೇನೆ! ಭೂಮಿಯನ್ನು ಹೊತ್ತವನಂತೆ ಆದಿಶೇಷ! ಭೂಮಿಯ ಭಾರ ಕಳೆಯಲು ಬಂದವನಂತೆ ಕೃಷ್ಣ! ಕೃಷ್ಣನಿಗೆ ನೆರಳು ಮಾಡದೆ ಇರುತ್ತಾನೆಯೇ ಶೇಷ!

ಎದುರಿಗೆ ತುಂಬಿ ಹರಿಯುವ ಯಮುನೆ. ಹುಚ್ಚು ನೆರೆಯಂತಿದೆ. ಯಮುನೆಯ ಆ ದಡದಲ್ಲಿದೆ ಗೋಕುಲ! ವಸುದೇವ ಕ್ಷಣ ನಿಂತ: ಹೇಳಿದನಂತೆ- ನರಮನುಷ್ಯನಿಗೆ ಎಲ್ಲವೂ ಅಡ್ಡಿ. ಹೊಳೆ ಅಡ್ಡಿ, ಕಾಡು ಅಡ್ಡಿ; ಬೆಟ್ಟ ಗುಡ್ಡಗಳು ಅಡ್ಡಿ. ಇನ್ನು ಆಕಾಶವೇ ಅಡ್ಡಿ ಎನಿಸುತ್ತದೋ ಏನೋ. ನಾನು ನರಮನುಷ್ಯನೇನೋ ನಿಜ. ಆದರೆ ತಲೆಯಲ್ಲಿ ದೇವರನ್ನು ಹೊತ್ತ ಮನುಷ್ಯ. ನನಗೀಗ ತಿಳಿಯುತ್ತಿದೆ. ದೇವರಿಗೆ ಎಲ್ಲವೂ ದಾರಿ. ಹೊಳೆ ದಾರಿ. ಕಾಡುದಾರಿ. ಬೆಟ್ಟಗಳೂ ದಾರಿ. ಆಕಾಶವೂ ದಾರಿ. ಓ ತಾಯಿ; ಯಮುನೆ ದಯವಿಟ್ಟು ದಾರಿ ತೋರಿಸು.

ಯಮುನೆಗೆ ಎಚ್ಚರವಾಯಿತಂತೆ. ತನ್ನ ನೀರನ್ನು ಗೋಪಿಕೆಯರೊಡನೆ ನೀರಾಟವಾಡಿ ಧನ್ಯವಾಗಿಸುವವನು ಇಳಿದು ಬಂದಿದ್ದಾನೆ. ಲೋಕದಲ್ಲಿ ಹರಿಯುವ ಎಲ್ಲ ನೀರುಗಳಿಗೆ ಎಚ್ಚರವಾಯಿತಂತೆ. ತಾವು ಹರಿದು ಕೊನೆಗೆ ಕಡಲಿಗೆ ಹೋಗಿ ಸಾಗರ ಬಿದ್ದು ಬೆರೆಯಬೇಕು. ಕಡಲಿನ ಮೇಲೆ ಮಲಗುವ ಒಡೆಯ ಇಳೆಗೆ ಇಳಿದು ಬಂದಿದ್ದಾನೆ! ಅವನಿಗೆ ಹಾದಿ ಮಾಡಿಕೊಡಬೇಕು. ಅವನದು ನೀರ ಹಾದಿ! ಜೀವನಮಾರ್ಗ! ಹರಿಯುವ ಹಾದಿ! ಯಮುನೆಯ ಮಾತು ಎಲ್ಲ ನೀರುಗಳಿಗೆ ಕೇಳಿಸಿತಂತೆ: ಅವನು ಬಂದಿದ್ದಾನೆ! ಹಾದಿ ಬಿಡಿರೇ. ಹರಿಯುವ ನೀರಿಗೆ ಮಾತ್ರ ಹಾದಿ ಬಿಡುವುದು ಸಾಧ್ಯ. ಹಾದಿ ಮಾಡಿಕೊಳ್ಳುವುದೂ ಸಾಧ್ಯ. ನಮಗೆ ಹರಿಯುವುದನ್ನು ಕಲಿಸಿಕೊಟ್ಟವನು ಕೃಷ್ಣನಾಗಿ ಬಂದಿದ್ದಾನೆ. ಕೇಳಿಸಿತೇನಿರೇ?

ವಸುದೇವ ಗೋಕುಲವನ್ನು ತಲಪಿದ. ನಂದನ ಮನೆಯಲ್ಲಿ ಯಶೋದೆ ಹೆತ್ತು ಆಯಾಸದಲ್ಲಿ ನಿದ್ದೆ ಹೋಗಿದ್ದಳು. ಕಡು ಚೆಲುವಿನ ಹೆಣ್ಣು ಮಗು ಬಳಿಯಲ್ಲಿತ್ತು. ಇನ್ನೂ ಹಾಲು ಕುಡಿದಿದೆಯೋ ಇಲ್ಲವೋ! ಕೃಷ್ಣನನ್ನು ಯಶೋದೆಯ ಪಕ್ಕದಲ್ಲಿ ಮಲಗಿಸಿದ. ಸದ್ದು ಮಾಡದೆ ಒಳಗೇ ಅತ್ತ. ಬಿಳಿಮುಗಿಲಿನಂಥ ಈ ಹೆಣ್ಣು ಮಗುವನ್ನು ಎತ್ತಿಕೊಂಡ. ಮತ್ತೆ ಮಥುರೆಗೆ ಅದೇ ಹಾದಿಯಲ್ಲಿ ಮರಳಿದ. ಕಾತರದಿಂದ ಕಾದುಕೊಂಡಿದ್ದ ದೇವಕಿಯ ಕೈಗೆ ಮಗುವನ್ನು ಒಪ್ಪಿಸಿದ. ಯಾರು ತಂದೆ; ಯಾರು ತಾಯಿ; ಯಾರು ಮಗು- ಎಂದು ತಿಳಿಯಲಾಗದ ಅಚ್ಚರಿಗೆ ಆಯಾಸಗೊಂಡು ನಿದ್ದೆ ಹೋದ.

ದೇವಕಿ ಮಗುವನ್ನು ನೋಡಿದಳು. ಅಕ್ಕರೆ ಉಕ್ಕಿತು. ಮಗುವಿನ ಅಂಗಾಲು ನೋಡಿದಳು. ನಸುಗೆಂಪು. ಹೂವಿನಂತೆ ಮೆತ್ತಗೆ! ಇದೇ ಏನು ಕಂಸನ ಎದೆ ಮೆಟ್ಟುವ ಪಾದ? ಕಂಸನ ಎದೆಯೂ ಮೆತ್ತಗಾಗಲಿ ಎಂದು ಮೊರೆ ಇಟ್ಟಳು.

ಹೆಣ್ಣು ಮಗು ಜೋರಾಗಿ ಅತ್ತಿತು. ಜೊತೆಗೆ ತಾಯಿ ಕೂಡ.  ಪಹರೆ ಎಚ್ಚರಾದರು. ಕಂಸ ದಡಬಡಿಸಿ ಬಂದ. ನೋಡಿದರೆ ಮಗು ಹೆಣ್ಣು! ಏನು; ಅದೃಶ್ಯವಾಣಿ ಸುಳ್ಳಾಗಿ ಹೋಯಿತೆ? ಏನೇ ಇರಲಿ; ನಿನ್ನ ಎಚ್ಚರದಲ್ಲಿ ನೀನಿರು ಎಂದಿತು ಒಳಮನಸ್ಸು. ಮಗುವಿಗೆ ಕೈ ತುಡುಕಿದ.

ಈಗ ದೇವಕಿ ಉಗ್ರಳಾದಳು. ಮರಿಗಳನ್ನು ಈದ ತಾಯಿ ಮೃಗದಂತೆ. ಮಗುವನ್ನು ಕೊಡಲೊಲ್ಲೆನೆಂದಳು.  ಮಕ್ಕಳನ್ನು ಕೊಂದು ತಾನು ಬದುಕಲು ಹೊರಟವನನ್ನು ಹಳಿದಳು. ನೀನೇನು ಚಿರಂಜೀವಿಯೇ ಎಂದಳು. ಆರು ಮಕ್ಕಳನ್ನು ಅವನ ಕೈಗೊಪ್ಪಿಸಿದ ತಾನೇ ಪಾಪಿ ಎಂದು ಹಳಿದುಕೊಂಡಳು.  ವಸುದೇವನಿಗೇ ದೇವಕಿಯ ಈ ರೋಷವನ್ನು ಕಂಡು ಬೆರಗಾಯಿತು. ಇದು ಪಕ್ಕದಲ್ಲಿರುವ ಹೆಣ್ಣು ಮಗುವಿನ ಬಣ್ಣ ಎಂದುಕೊಂಡ. ಅವನಿಗೆ ಈ ಮಗು ಕಂಸನ ಎದೆ ಮೆಟ್ಟುವುದು ಖಚಿತವಾಯಿತು!

ಕಂಸ, ಮಗುವನ್ನು ಬಲಾತ್ಕಾರದಲ್ಲಿ ಸೆಳೆದುಕೊಂಡ. ಕೈಯ ಕರವಾಳವನ್ನು ಮೇಲೆತ್ತಿದ. ಇದ್ದಕ್ಕ್ಕಿದ್ದಂತೆ, ದೇವಕಿಯ ಮದುವೆಯ ಕಾಲದಲ್ಲಿ ಕೇಳಿ ಬಂದ ಕಂಠ ಮತ್ತೊಮ್ಮೆ ಉಲಿದಂತಾಯಿತು. ಎಡಗೈ ಸಡಲಿತು. ಹೆಣ್ಣು ಮಗು ಎದೆ ಒದ್ದು ಆಗಸಕ್ಕೆ ನೆಗೆದಂತಾಯಿತು. ಕರವಾಳದ ಮೊನೆಯ ಆಚೆಗೆ ಮಗು ಕಾಣಿಸಿತು. ಕೋಪ ಕೆಂಪು ಮುಖ! ಮಗುವಿನ ಕೋಪದಲ್ಲೂ ಒಂದು ಮುಗ್ಧತೆ ಇತ್ತು! `ಮಕ್ಕಳನ್ನು ಕೊಂದು ತಾನು ಬದುಕುವೆನೆನ್ನುವ ದುಷ್ಟ ಮರುಳ: ನಿನ್ನನ್ನು ಸಾಯಿಸುವವನು ಗೋಕುಲದಲ್ಲಿ ಬೆಳೆಯುತ್ತಿದ್ದಾನೆ!’

ಸಾವಿನ ಸುದ್ದಿ ಹೇಳುವ ‘ಅವ್ಯಕ್ತ’ ಮುಗ್ಧವಾಗಿದೆ! ಅದು ‘ತಂತ್ರ’ವಲ್ಲ. ಆದರೆ, ಅದನ್ನು ‘ತಂತ್ರ’ವೆಂದೇ ಮನುಷ್ಯ ಬಗೆಯುತ್ತಾನೆ. ಕಂಸನಿಗೆ ಗೋಕುಲವೊಂದು ದು:ಸ್ವಪ್ನವಾಗಿಬಿಟ್ಟಿತು. ಆ ದು:ಸ್ವಪ್ನ ಅವನನ್ನು ಕೊನೆ ತನಕ ಬಿಡಲಿಲ್ಲ! `ಧ್ಯಾನ’ ಕೆಟ್ಟರೆ ದು:ಸ್ವಪ್ನವಾಗಿ ಬಿಡುತ್ತದೋ ಏನೋ! ಕಂಸನಿಗೆ `ಪೂತನಾ’ ನೆನಪಾದಳು.

ಇತ್ತ ಗೋಕುಲದಲ್ಲಿ ಸಂಭ್ರಮ. ಯಶೋದೆ ಹೆತ್ತಿದ್ದಾಳೆ. ನಂದನಿಗೆ ಪುತ್ರೋತ್ಸವ. ಅದೊಂದು ಹಬ್ಬ. ಸಾವರ ಸಾವಿರ ಗೋವುಗಳನ್ನು ನಂದ ದಾನ ಕೊಟ್ಟನಂತೆ. ಕೃಷ್ಣನನ್ನು ಪಡೆದಾಗ, ಅದು ವಸುದೇವನ ಸಂಕಲ್ಪವಾಗಿತ್ತು. ಅದನ್ನು ನಂದ ಈಡೇರಿಸುವಂತಾಯಿತು. ಜಾತಕರ್ಮವನ್ನು ನೆರವೇರಿಸಿದ. ಬ್ರಾಹ್ಮಣರು ಮಂಗಳಾಶಾಸನ ಮಾಡಿದರು. ಪೌರಾಣಿಕರು ಪುರಾಣ ಹೇಳಿದರು. ವಂದಿ ಮಾಗಧರು ವಂಶಾವಳಿಯನ್ನು ಹಾಡಿದರು. ವ್ರಜಮಂಡಲವಾಸಿಗಳು ತಮ್ಮ ಮನೆ-ಜಗಲಿ ಅಲಂಕರಿಸಿದರು. ಹಟ್ಟಿ ಕೊಟ್ಟಿಗೆಗಳಲ್ಲಿ ಗೋವು-ಎತ್ತುಗಳನ್ನು ಸ್ನಾನ ಮಾಡಿಸಿ, ಅರಶಿನ-ಕುಂಕುಮವಿಟ್ಟು, ಹೂಮಾಲೆ ಕೊರಳಿಗೆ ಹಾಕಿ, ಕಿರುಗಂಟೆಗಳನ್ನು ಕಟ್ಟಿ, ಕೋಡನ್ನು ಸಿಂಗರಿಸಿದರಂತೆ. ಯಾವುದರಿಂದ?  ನವಿಲುಗರಿಗಳಿಂದ!

ಕೃಷ್ಣ ತಲೆಗೆ ಮುಂಡಾಸುಕಟ್ಟಿ ನವಿಲುಗರಿ ಸಿಕ್ಕಿಸಿಕೊಂಡದ್ದು ಈ ಚಿತ್ರವನ್ನು ನೋಡಿಯೇ. ಅಪ್ಪಟ ಗೊಲ್ಲ ಹುಡುಗ! ಗೋಪಾಲಕರೆಲ್ಲ ತಾವೂ ಅಲಂಕೃತರಾಗಿ ಪಾರಿತೋಷಕ ಹಿಡಿದು ನಂದನ ಮನೆಗೆ ಬಂದರು. ಗೋಪಸ್ತ್ರೀಯರ ಸಂಭ್ರಮಕ್ಕೆ ಆಗಸವೇ ಮಿತಿ. ಸಿಂಗರಿಸಿಕೊಂಡು, ಅವಸರವಸರವಾಗಿ ನಂದನ ಮನೆಗೆ ತೆರಳುತ್ತಿದ್ದರೆ, ಮುಡಿದ ಹೂವಿನ ಮಾಲೆಗಳಿಂದ ಎಸಳುಗಳು ಕೆಳಗೆ ಬಿದ್ದು ಪುಷ್ಪವೃಷ್ಟಿ! ವಾದ್ಯಗೋಷ್ಠಿ ನಡೆಯಿತು.  ರೋಹಿಣಿಯ ಮಗ ಬಲರಾಮ ಈಗ ಒಂದು ವರ್ಷದ ಹಸುಳೆ! ಈಗ ಕೃಷ್ಣನೂ ಸೇರಿದ.  ತುಂಬು ಸಂಭ್ರಮ ನಿಜ. ಆದರೆ, ವಸುದೇವ ಹೇಳಿದ್ದ. ಸಂಭ್ರಮದಲ್ಲಿ ಮೈ ಮರೆಯದಿರಿ. ಉತ್ಪಾತಗಳು ನಡೆಯಬಹುದು. ಆದುದರಿಂದ ಈ ಸುಖದ ನಡುವೆ ನಂದ ಮಾತ್ರ ಸ್ವಲ್ಪ ಆತಂಕದಲ್ಲಿದ್ದ.

ಈಗ ಬಂದಳು ಪೂತನಾ. ಕಡು ಚೆಲುವೆ. ಸರಸವಾದ ಮಾತು. ಕಿರು ನಗೆ. ನೋಡಿದ ಹೆಂಗಸರಿಗೇ ಬೆರಗು. ಗೋಕುಲದಲ್ಲಿ ಹಗಲು ಹೊತ್ತು ಹೆಚ್ಚಾಗಿ ಹೆಂಗಸರು ಮಾತ್ರ. ಗಂಡಸರು-ಹುಡುಗರು ಹಸು ಹೊಡಕೊಂಡು ಹೋಗುತ್ತಾರೆ. ಪೂತನಿ ನಂದನ ಮನೆಗೆ ಬಂದಳು. ರೋಹಿಣಿ, ಯಶೋದೆ ಇಬ್ಬರೂ ಇದ್ದಾರೆ. ರಾಮನ ತಾಯಿ. ಕೃಷ್ಣನ ತಾಯಿ.

ಪೂತನಾ ಕೃಷ್ಣನನ್ನೆತ್ತಿಕೊಂಡಳು. ಹಾಲೂಡಿಸುವ ಆಸೆಯಾಗುತ್ತಿದೆ ಎಂದಳು. ತಾಯಂದಿರು ಹೆಮ್ಮೆಯಿಂದ ನಕ್ಕರು. ಅದು ಹಾಲು ಹರಿವ ಹೆಂಗಸರ ಸಹಜ ಆಸೆ! ಪೂತನಾ ಹಾಲೂಡಿಸತೊಡಗಿದಳು. ಅದರಲ್ಲಿ ಇತ್ತು ವಿಷ!

ತನ್ನ ಮರಿಯನ್ನು ತಾನೇ ತಿನ್ನುವ ಹಾವಿನಂತೆ ಈ ಪೂತನಾ. ಕಂಸನ ಸ್ತ್ರೀರೂಪ! ಅವಳ ಎದೆ ಹಾಲಲ್ಲಿ ವಿಷವಿತ್ತು; ಹಾಲೂ ಇತ್ತು; ಅವಳ ಪ್ರಾಣವೂ ಇತ್ತು! ಕೃಷ್ಣ ಎದೆ ಹಾಲು ಹೀರುತ್ತ, ಅಂಗೈಯಲ್ಲಿ ಇನ್ನೊಂದು ಎದೆ ತಡವುತ್ತ, ಮೃದು ಅಂಗಾಲಿನಿಂದ ಹೊಟ್ಟೆಗೆ ಒದೆಯುತ್ತ, ಇನ್ನಿಲ್ಲದ ಸುಖವನ್ನು ಪೂತನಿಗೆ ಕರುಣಿಸುತ್ತ- ಹಾಲು ಕುಡಿದನಂತೆ.

ದೇವರು ಒಂದು ಮುಖದಲ್ಲಿ ಪ್ರಕೃತಿಯಂತೆ. ಕೊಟ್ಟುದೆಲ್ಲವನ್ನೂ ತೆಗೆದುಕೊಳ್ಳುತ್ತಾನೆ. ಎಲ್ಲ ಕೊಡಬಲ್ಲವನು ಎಲ್ಲವನ್ನೂ ಸ್ವೀಕರಿಸಬಲ್ಲ. ಹಾಲ್ಗಡಲ ಒಡೆಯ. ವಿಷ; ಅಮೃತ ಎರಡನ್ನೂ ಸ್ವೀಕರಿಸಬಲ್ಲ. ದೇವರ ಈ ಸರ್ವ ಸ್ವೀಕಾರ ಎಂಬ ಗುಣವೇ ಭಕ್ತರಲ್ಲಿ ಶರಣಾಗತಿಯಾಗಿ ಪ್ರಪತ್ತಿಯಾಗಿ ಪರಿಣತವಾಗಬಹುದು. ಎಲ್ಲವನ್ನೂ ಸ್ವೀಕರಿಸುವವನಿಗೆ ಎಲ್ಲವನ್ನೂ ಕೊಡಬಲ್ಲೆವೇ ನಾವು?

ಪೂತನಾ ಕೊಟ್ಟಳು. ಮೊದಲು ಹಾಲು; ಮತ್ತೆ ವಿಷ; ಕೊನೆಗೆ ಪ್ರಾಣ. 

ಮಕ್ಕಳಿಂದ ಮೊಲೆ ಬಿಡಿಸುವುದೇನು ಸಾಮಾನ್ಯವೆ? ಕೃಷ್ಣ ಬಿಡಲೊಲ್ಲ. ಪೂತನಾಗೆ ತಿಳಿದು ಬಿಟ್ಟಿತು. ಈ ಮಗು ಎಲ್ಲರಂತಲ್ಲ. ತಾನು ಅವನನ್ನು ಹಿಡಿದುದಲ್ಲ. ಅವನೇ ತನ್ನನ್ನು ಹಿಡಿದು ಬಿಟ್ಟಿದ್ದಾನೆ. ಕೊನೆ ಮುಟ್ಟದೆ ಬಿಡಲೊಲ್ಲ. ಓ ದೇವರೇ, ಏನಾಗಿ ಹೋಯಿತು. ಪೂತನಾ, ‘ತನ್ನನ್ನು ಬಿಡು’ ಎಂದಳು. ಬಿಡುವುದು ನನಗೆ ಗೊತ್ತೇ ಇಲ್ಲ ಎಂಬಂತೆ ಹಾಲು ಕುಡಿಯುತ್ತಿತ್ತು ಮಗು. ಕೂಗಾಡಿದಳು. ಅವಳ ಚೆಲುವು ಕರಗಿತು. ತನ್ನ ಘೋರ ರೂಪವನ್ನು ಮತ್ತೆ ತಾಳಿ, ತನ್ನೆಲ್ಲ ಘೋರದಿಂದ ಬಿಡುಗಡೆ ಪಡೆದಳು.  ಮಗುವಿಗೆ ಎದೆ ಹಾಲೂಡುತ್ತ, ತನ್ನ ಅಸುವನ್ನೇ ನೈವೇದ್ಯ ಮಾಡುತ್ತಿದ್ದಾಳೆ ತಾಯಿ!

ಈ ಒಂದು ಚಿತ್ರ ಭಾರತೀಯ ಚಿತ್ತವನ್ನು ಬಹಳ ಕಾಡಿದೆ.

ತಾಯಿ ಕೊಲ್ಲಬಲ್ಲಳೆ?

ಆದರೆ, ತಾತ್ತ್ವಿಕವಾಗಿ, ಭಗವಂತೆ ಸಂಸಾರಕ್ಕೆ ಇಳಿದು ಬರುವುದೆಂದರೆ ಎಲ್ಲವೂ ಪ್ರಕೃತಿಯಲ್ಲಿ ಏರುಪೇರಾಗಬೇಕು. ಉಲ್ಬಣವಾಗಬೇಕು. ವಿಪರೀತವಾಗಬೇಕು. ಆ ಉಲ್ಬಣದ ಸ್ಥಿತಿಗೆ ಈ ಪೂತನಾ ಚಿತ್ರ ಹೊಂದುತ್ತದೆ!

ಪೂತನಾ ಮೋಕ್ಷ ಎಂದು ಕರೆದಿದೆ ಈ ಕಥೆಯನ್ನು- ಭಾಗವತ. ಈ ಕಥೆಯ ಫಲಶ್ರುತಿಯನ್ನೂ ಹೇಳಿದ್ದಾರೆ: `ಗೋವಿಂದೇ ಲಭತೇ ರತಿಮ್’ ಕೃಷ್ಣನಲ್ಲಿ- ಮಕ್ಕಳಲ್ಲಿ- ಅಕ್ಕರೆ ಉಕ್ಕುತ್ತದಂತೆ!

ತೋಳ್ಪಾಡಿ ಭಾಗವತ 23:ಸೃಷ್ಟಿಯ ಮುಖ,ಸಂಹಾರದ ಮುಖ

ತಮಗೆ ದೇವರೇ ಆಗಿರುವ ಈ ತಮ್ಮ ಮಗು ಕೃಷ್ಣ, ದೇವರ ದಯೆಯಿಂದಲೇ ಗಂಡಾಂತರಗಳಿಂದ ಪಾರಾದ ಎಂದು ನಂದ-ಯಶೋದೆ ಭಾವಿಸಿದರು. ಮಗುವಿನ ಬಗ್ಗೆ ಕ್ಷಣಕ್ಷಣಕ್ಕೆ ಆತಂಕಗೊಳ್ಳುವ ತಾಯ್ತಂದೆಯರ ಮಡಿಲಲ್ಲಿ, ಮಗುವಾಗಿರುವ ‘ದೇವರಂಥ ದೇವರೂ ತನ್ನ ದಯೆಯನ್ನು ತಾನೇ ಮೊದಲು ಸವಿಯಬೇಕು. ತನ್ನ ಕಾಲ ಹೆಬ್ಬೆರಳನ್ನು ಬಾಯಿಗಿಟ್ಟುಕೊಳ್ಳಬೇಕು! `ಅತಿ ಸ್ನೇಹ: ಪಾಪಶಂಕೀ’ -ಎಂದ ಕಾಳಿದಾಸ. ಉತ್ಕಟವಾದ ಪ್ರೀತಿ, ಪ್ರೀತಿ ಪಾತ್ರರಿಗೆ ಕೇಡು ನಡೆದೀತು ಎಂದು ಊಹಿಸುತ್ತಲೇ ಇರುತ್ತದೆ. ಪ್ರೀತಿಯಿಂದಲೇ ಕೇಡನ್ನು ಊಹಿಸುವ ಮುಗ್ಧ ಭಕ್ತ ಜನ! ಪ್ರೀತಿಯಿಂದಲೇ ಕೇಡನ್ನು ನಿವಾರಿಸುವ ಮುಗ್ಧರ ಮುಗ್ಧ ಭಗವಂತ! ಆದುದರಿಂದಲೇ ಅಸುರ ಸಂಹಾರಕ್ಕೆಂದು ಅವತರಿಸಿದವನೆಂದು ಕೊಂಡಾಡಲಾಗುವ ದೇವರು ಕೃಷ್ಣ, ಈ ದುಷ್ಟ ದಮನ ಚಕ್ರವನ್ನು ನಡೆಯಿಸಿದುದು ಬಾಲ್ಯದಲ್ಲಿ ಮತ್ತು ಪೂರ್ವ ತಾರುಣ್ಯದಲ್ಲಿ. ಅದು ಕೃಷ್ಣನ ಬಾಲಕಾಂಡ. ಬಾಲಬೋಧೆ!

ಮಗುವನ್ನು ಕೊಲ್ಲುವ ಅನೇಕ ತಂತ್ರಗಳನ್ನು ಕಂಸ ಯೋಜಿಸಿದ. ಬಂಡಿಯ ರೂಪದಲ್ಲಿ ಒಬ್ಬ ಅಸುರ ಕಾಣಿಸಿಕೊಂಡ! ಶಕಟಾಸುರ! ನಂದನ ಮನೆಯಲ್ಲಿ ಹಬ್ಬದ ದಿನ. ಹೆಂಗಸರಿಗೆ ಸಡಗರ. ಈ ಬಂಡಿಯ ಪಕ್ಕದಲ್ಲಿ ಮಗು ಕೃಷ್ಣನನ್ನು ಮಲಗಿಸಿದ್ದರು. ಮಗು ಸಹಜವಾಗಿ ಗಾಳಿಯಲ್ಲಿ ಕಾಲು ಒದೆದಿರಬೇಕು. ಅದು ಶಕಟಕ್ಕೆ ತಗಲಿತು. ದೊಡ್ಡ ಸದ್ದಿನೊಂದಿಗೆ ಗಾಡಿ ಮುರಿದು ಬಿತ್ತು. ಆ ಸದ್ದಿಗೆ ಮಗು ಗಾಬರಿಗೊಂಡು ಅಳುತ್ತಿತ್ತು. ತಾಯಿಗೆ ಸಂತೈಸುವ ಸುಖ. ಮುಂದೆ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಂಡಿಯ ಬೋವನಾಗುವನು. ಸಾರಥಿಯಾಗುವನು. ಇನ್ನಿಲ್ಲದ ಕೌಶಲದಿಂದ ತೇರನ್ನು ರಣರಂಗದಲ್ಲಿ ಮುನ್ನಡೆಸುವನು. ಅರಿಯ ಬಲ್ಲವರು ಅರಿಯಬಹುದಾಗಿತ್ತು; ಶಕಟ ಪ್ರಭಂಜನನೇ ಶಕಟವನ್ನು ಮುನ್ನಡೆಯಿಸಲೂ ಬಲ್ಲ!

ಇನ್ನೊಮ್ಮೆ ಗೋಕುಲದಲ್ಲಿ ಸುಂಟರಗಾಳಿ ಬೀಸಿತು. ಮಗು ಅದರಲ್ಲಿ ಸಿಕ್ಕಿ ಹಾಕಿಕೊಂಡಿತು. ಹೆಮ್ಮರಗಳನ್ನು ಉರುಳಿಸುವ ಗಾಳಿಗೆ ಮಗುವೇನು ಲೆಕ್ಕ? ನಿಜ. ಆದರೆ, ಮಗು ಹುಲ್ಲುಗರಿಕೆಯಂತೆ. ಅದರ ಮಾರ್ದವವೇ ಅದರ ಬಲ! `ಮೃದುನಾ ದಾರುಣಂ ಹಂತಿ’-ಕಠೋರದಾರುಣವಾದುದನ್ನು `ಮೃದು’ವಾದುದು ಗೆಲ್ಲುತ್ತೆ ಎಂದು ವೇದವ್ಯಾಸರು ಗುಟ್ಟು ಹೇಳಿದ್ದುಂಟು. ಹೊಳೆಯ ನಡುವಣ ಬಂಡೆಯನ್ನು ಹರಿವ ನೀರು ಕಡೆಯುವುದಿಲ್ಲವೆ? ಮೃದುವಾದುದು ತಾದಾತ್ಮ್ಯಗೊಳ್ಳಬಲ್ಲುದು. ತಾದಾತ್ಮ್ಯಗೊಂಡರೆ ಕೇಡನ್ನೆಸಗುವವನನ್ನು ಅವನ ಕೇಡೇ ಕೆಡೆಯಬಲ್ಲುದು. ತೃಣಾವರ್ತನಿಗೆ- ಸುಂಟರಗಾಳಿಯ ರೂಪದಲ್ಲಿ ಬಂದ ಅಸುರನಿವನು- ಈ ಮಗು ತನ್ನ ಉಸಿರಲ್ಲಿ ಸಿಕ್ಕಿಕೊಂಡಂತಾಗಿ ಅವನ ಉಸಿರು ಅಡಗಿತು. ಅರಿಯಬಲ್ಲವರು ಅರಿಯಬಹುದಾಗಿತ್ತು. ಮುಂದೆ ಮಹಾಭಾರತ ಯುದ್ಧದಲ್ಲಿ ಸುಂಟರಗಾಳಿಯಂತೆ ಮುನ್ನುಗ್ಗಿದ ಭೀಮಸೇನನಿಗೆ ಬೆಂಬಲವಾಗಿದ್ದವನು, ಅವನ ಇಷ್ಟದೈವವಾದ, ತೃಣಾವರ್ತ ಸಂಹಾರಿಯಾದ ಹುಲ್ಲುಗರಿಕೆಯಂಥ ಇದೇ ಕೃಷ್ಣ!

ದೇವರ ದಯೆಯೊಂದಿಗೆ ದೇವರು ಬೆಳೆಯುತ್ತಿದ್ದ. ರಾಮ; ಕೃಷ್ಣ ಆಡುತ್ತಿದ್ದರು; ಮಣ್ಣಿನಲ್ಲಿ. ರಾಮ ಬಂದು ತಾಯ ಬಳಿ ದೂರಿದ: `ಅಮ್ಮ; ಕೃಷ್ಣ ಮಣ್ಣು ತಿಂದ’. ತಾಯಿ ಗದರಿದಳು. `ಇಲ್ಲ, ಅಣ್ಣ, ನಿಜ ಕಂಡಿಲ್ಲ’ ಎಂದಿತು ಮಗು. `ಹೋ; ನಿಜ ಕಾಣಿಸುವವನೇನು ನೀನು? -ಎಲ್ಲಿ, ಬಾಯಿತೆರೆ’ ಎಂದಳು ತಾಯಿ. ಕೃಷ್ಣ ಈಗ ಬಾಯಿ ತೆರೆದ. ಕೃಷ್ಣ; ಚಿಟಿಕೆ ಮಣ್ಣು ಬಾಯಿಗೆ ಎಸೆದುಕೊಂಡದ್ದು ಹೌದು. ಅದು ಮಣ್ಣಿಗೆ, ವಾಸ್ತವಕ್ಕೆ, ಸಲ್ಲಿಸಿದ ನ್ಯಾಯದಂತಿತ್ತು. ಚಿಟಿಕೆ ಮಣ್ಣು ಮೂರು ಲೋಕವಾಗಬಾರದೇನು? ಅನಂತವು ‘ಕ್ಷಣ’ದಲ್ಲಿಯೇ ಇದೆಯಲ್ಲವೆ! ಅದು ತಾಯಿಯ ನೋಟ! ಯಶೋದೆ ನೋಡಿದಳು: ತನ್ನ ಮನೆ, ಹರಿವ ಯಮುನೆ, ಈ ಪರಿಚಿತ ಗೋಕುಲ, ಪಕ್ಕದ ಕಾಡು, ಹಳ್ಳಿ- ನಗರಾವಳಿ; ಈ ಮನುಷ್ಯಲೋಕ, ಮೇಲಿನ ನೀಲಾಗಸ, ದೇವ-ಯಕ್ಷ- ಗಂಧರ್ವಲೋಕ, ಅವರ ಅಲೌಕಿಕ ನೃತ್ಯ, ಗಾನ, ಆಭೂಷಣ. ಚಂದ್ರ ಸೂರ್ಯ, ತಾರಾಗಣ, ನೀಹಾರಿಕೆಗಳಾಚೆಯ ಸಮಾಚಾರ- ಈ ಎಲ್ಲ, ಮಣ್ಣಿನ ರೂಪಾಂತರ, ‘ಮಣ್ಣಿ’ನ ಸಾಧ್ಯತೆ. ನಮ್ಮ ಕಣ್ಣಿನ ಸಾಧ್ಯತೆ!

ನಿಜ ಕಂಡರೆ, ಕಂಡಾಗಲೇ- ದೊಡ್ಡ ಅಚ್ಚರಿ! ಆಶ್ಚರ್ಯಚಕಿತಳಾದ ತಾಯಿ ಯಶೋದೆ ಈಗ ಬಾಯಿ ತೆರೆದಿರಬೇಕು!

ವಸ್ತು ಪ್ರಪಂಚ ಮತ್ತು ವಾಗರ್ಥ ಪ್ರಪಂಚ, ಹೀಗೆ ಎರಡು ಪ್ರಪಂಚಗಳು. ಹೌದೆ? ಹೀಗೆ ಎರಡು ಪ್ರಪಂಚಗಳಿವೆಯೆ? ಅಥವಾ ವಸ್ತು ಪ್ರಪಂಚದಲ್ಲಿ ವಾಗರ್ಥ ಪ್ರಪಂಚ ಅಡಗಿದೆಯೆ ಅಥವಾ ವಾಗರ್ಥದಲ್ಲಿ ವಸ್ತು ಪ್ರಪಂಚವೋ? ಪರಸ್ಪರ ಒಂದರೊಳಗೊಂದು ಈ ಎರಡೂ ಬೆರೆತಿವೆಯೆ? ಇದು ತಾಯಿ-ಮಕ್ಕಳ ಪ್ರಪಂಚ! ಕೃಷ್ಣ ತಾಯಿಗೆ ತನ್ನಲ್ಲಿ ವಿಶ್ವವನ್ನೇ ತೋರಿಸಿದ. ತಾಯಿಗೆ ಮಗುವೇ ಮೂರು ಲೋಕವಲ್ಲವೆ! ಹಾಗೂ ಸರಿ. ವಿಶ್ವದಲ್ಲಿ ತನ್ನನ್ನು ಕಾಣೋದನ್ನು ಕಲಿಸಿದ. ಕನ್ನಡಿಯಲ್ಲಿ ಕಂಡಂತೆ. `ವಿಶ್ವಂ ದರ್ಪಣ ದೃಶ್ಯಮಾನ  ನಗರೀತುಲ್ಯಂ’ ಎನ್ನುತ್ತದೆ ದಕ್ಷಿಣಾಮೂರ್ತಿ ಸ್ತೋತ್ರ. ಅವನು ಕನ್ನಡಿ. ದೇವರು ಕನ್ನಡಿ, ಮಗು ಕನ್ನಡಿ. ನಮ್ಮನ್ನು ಮರಳಿ ನೋಡುವುದಕ್ಕೆ!

ಅರಿಯುವವರು ಅರಿಯಬಹುದಾಗಿತ್ತು. ಕೃಷ್ಣ ತನ್ನ ಬಾಯಲ್ಲಿ ತಾಯಿ ಯಶೋದೆಗೆ ತೋರಿಸಿದ ವಿಶ್ವರೂಪ ಅವನ ಸೃಷ್ಟಿ ಮುಖ. ಸೃಷ್ಟಿಶೀಲಮುಖ. ಮಗು; ತಾಯಿಗೆ ತೋರಿಸಬಲ್ಲ ಮುಖ. ಪರಮಾಶ್ಚರ್ಯಗೊಂಡರೂ ತಾಯಿ ಅರಿಯಬಹುದಾದ ಮುಖ. ಇನ್ನೊಂದು ಮುಖ ಇದೆ. ಅದು ಸೃಷ್ಟಿಯ ಜತೆಗೂಡಿರುವ ಸಂಹಾರದ ಮುಖ. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಕೃಷ್ಣ- ಇದೇ ಯಶೋದೆಯ ಮಗು- ತೋರಿಸಿದ ಮುಖ. ಅಲ್ಲೂ ಬಾಯಿಯೇ ಪ್ರಧಾನ. ಬಾಯಲ್ಲಿರುವ ಕೋರೆ ಹಲ್ಲುಗಳಿಗೆ ಸಿಕ್ಕಿ ಲೋಕವೆಲ್ಲ ನುಗ್ಗುನುರಿಯಾಗುತ್ತಿರುವ ಚಿತ್ರ. `ದಂಷ್ಟ್ರಾಕರಾನಿ ಚ ತೇ ಮುಖಾನಿ’. ಈ ಎರಡು ವಿಶ್ವರೂಪದ ಚಿತ್ರಗಳಲ್ಲಿ ಮನುಕುಲದ ಇಡಿಯ ಕಥೆಯೇ ಇದೆ. WORSHIP THE TERRIBLE ಎಂದರು ವಿವೇಕಾನಂದರು. ಕಾಳಿಯ ಅನನ್ಯ ಉಪಾಸಕನೊಬ್ಬನ ಶಿಷ್ಯನಿಗೆ ಆ ಸ್ಥೈರ್ಯ, ಆ ಧೈರ್ಯವಿತ್ತು. ಗುಟ್ಟೇನೆಂದರೆ- ದೇವರು ಅವತಾರ ತಾಳಿ ದುಷ್ಟದಮನ ನಡೆಸುತ್ತಾನೆಂದರೆ ಅದು ಇನ್ನೊಂದು ರೀತಿಯಲ್ಲಿ ಕಠೋರ ದಾರುಣವಾದುದರ ಉಪಾಸನೆಯೇ ಆಗಿದೆ. WORSHIPING THE TERRIBLE!

ರಾಮ, ಕೃಷ್ಣರು, ಅವರ ಜೊತೆಗಾರರಾದ ಗೊಲ್ಲ ಹುಡುಗರು, ಇವರ ತುಂಟತನ; ಬಂಟತನ- ಇದೊಂದು ಕಪಿಸೈನ್ಯ. ಇದು ಗೋಕುಲದ ಸಂಸಾರದ ಜೀವಂತ ಭಾಗವಾಯಿತು. ಶೃಂಗಾರ; ವಾತ್ಸಲ್ಯ ಮತ್ತು ಮಕ್ಕಳ ತುಂಟಾಟ ಇವು ಒಂದೇ ಜೀವಂತ ಭಾವದ ಮೂರು ಉತ್ಕಟ ಬಿಂದುಗಳು. ಯಶೋದೆಯ ಪಾಲಿಗೆ ತಾನು ಮೊಸರು ಕಡೆಯುವ ಒರಳುಗಲ್ಲು ವಾತ್ಸಲ್ಯದ ಒಂದು ಸಂಕೇತದಂತೆ ಇತ್ತು. ಒಮ್ಮೆ ಕೃಷ್ಣನ ತುಂಟತನ ಮಿತಿ ಮೀರಿತೆನ್ನುವಂತೆ, ಕಡೆದಾರದಿಂದ ಅವನನ್ನು ಒರಳು ಕಲ್ಲಿಗೆ ಯಶೋದೆ ಕಟ್ಟಿ ಹಾಕಿದಳು. ತನ್ನ ಎದೆಗೇ ಕಟ್ಟಿ ಹಾಕಿಕೊಂಡಳೆಂಬಂತೆ. ಮನೆಗೆಲಸದ ನಡುವೆ ಅದನ್ನು ಮರೆತೂ ಬಿಟ್ಟಳು. ಮನೆಯಂಗಳದಲ್ಲಿ ಎರಡು ಒಟ್ಟಿಗೆ ಬೆಳೆದ ಮತ್ತಿಯ ಮರಗಳಿದ್ದವು. ಕಡೆಗೋಲು ಮಾಡುವುದಕ್ಕೆ ಒದಗುವ ಗಟ್ಟಿಕೊಂಬೆಗಳ ಮರ. ಮರಗಳು ಮಗು ಕೃಷ್ಣನನ್ನು ಕರೆದಂತಾಯಿತು. ಮೆಲ್ಲಗೆ, ಅವುಗಳೆಡೆಗೆ ನಡೆದ. ಒರಳುಗಲ್ಲು ಗೋಪ ಹುಡುಗನಂತೆ ಹಿಂಬಾಲಿಸಿತು. ತಾಯಿ, ಕಟ್ಟಿದರೆ ಎಷ್ಟು ಗಟ್ಟಿ ಕಟ್ಟಿಯಾಳು? ಮರಗಳ ಬಳಿ ಬಂದ ಕೃಷ್ಣ. ಒರಳುಗಲ್ಲು ಮರಗಳ ನಡುವೆ ಸಿಕ್ಕಿ ಹಾಕಿಕೊಂಡಿತು. ಪ್ರೀತಿಯಿಂದ ಎಳೆದ. ಮರಗಳ ಬೇರು ಕಳಚಿದವು. ದೊಡ್ಡ ಸದ್ದಿನೊಂದಿಗೆ ಮರಗಳು ಉರುಳಿ ಬಿದ್ದವು. ಆ ಮರಗಳೆಂದರೆ, ಅವು ಶಾಪಗ್ರಸ್ತ ಯಕ್ಷರಂತೆ. ಕುಬೇರನ ಮಕ್ಕಳಂತೆ. ಮರಗಳೆಂದರೆ ದುಡ್ಡಿನ ಮರಗಳೆಂದೇ ತಿಳಿದ ದುರಾಸೆಯ ನವ ಶ್ರೀಮಂತರೇನೋ. ಶಾಪಗ್ರಸ್ತರಾಗಿ ಮರಗಳೇ ಆಗಿದ್ದರು. ಈಗ ಆ ಜನ್ಮ ಕಳಚಿತು. ಮರಳಿ ಯಕ್ಷ ಹುಡುಗರಾದರು. ಕಡೆಗೋಲುಗಳಾಗಿ ಮೊಸರು ಕಡೆದು ಕೃಷ್ಣನಿಗೆ ಬೆಣ್ಣೆ ತೆಗೆದುಕೊಟ್ಟ ಪುಣ್ಯ ವಿಶೇಷವಿರಬೇಕು!

ಈಗ ಅಂತ:ಕರಣ ಪಕ್ವವಾಗಿತ್ತು. ಯಶೋದೆಯ ಮಗು ನಮ್ಮ ಶಾಪ ವಿಮೋಚನೆ ಮಾಡಿದ. ತಾನೇನೂ ಮಾಡಿಲ್ಲ; ಎಲ್ಲವೂ ಸಹಜವಾಗೇ ನಡೆದಿದೆ ಎಂಬಂತೆ ಒರಳು ಕಲ್ಲು ಕಟ್ಟಿಕೊಂಡು ನಡುವೆ ನಿಂತನಷ್ಟೆ. ಮಗುವೊಂದರ ತುಂಟತನಕ್ಕೂ ತಮ್ಮ ಶಾಪವಿಮುಕ್ತಿಗೂ ಇರುವ ಸಂಬಂಧವನ್ನು ನೆನೆದು ಯಕ್ಷರಿಗೆ, ಬದುಕಿನಲ್ಲಿ ಕಾಣುವ ಕಾಣದ ಎಲ್ಲವನ್ನೂ ಸೇರಿಸಬಲ್ಲ ಈ ಇಹದ ಸಂದರ್ಭಕ್ಕೆ ಇರುವ ಗಹನತೆಯ ಅರಿವಾಯಿತು. ಇದೇ ತಾನೇ ಶಾಪವಿಮೋಚನೆ! ಮತ್ತೆ ಮತ್ತೆ ಮರಳುತ್ತೇನೆ ಈ ಇಹದ ಸಂದರ್ಭಕ್ಕೆ ಎಂದು ದೇವರಿಂದ ಯಾರಾದರೂ ವಚನ ಪಡೆಯುವಂತಾಗಲಿ ಎಂದು ಅನ್ನಿಸಿತು. ಇವರ ಮನಸ್ಸನ್ನು ಓದಿಕೊಂಡನೆಂಬಂತೆ ಕೃಷ್ಣ ಹೇಳಿದ; `ಇಲ್ಲಿನ ವಿಚಿತ್ರ ನೋಡಿದಿರಾ. ನಾನು ಮುಕ್ತ. ‘ಮುಕ್ತಾನಾಂ ಪರಮಾಗತಿ:’ ಎಂದು ನನ್ನ ಕೊಂಡಾಡುವವರುಂಟು. ಸಂಸಾರದಲ್ಲಿ ಬಂಧಿತರಾದ ಜೀವಿಗಳು ಈ ಮೋಹಪಾಶದಿಂದ ಬಿಡಿಸೆಂದು ನನ್ನ ಪ್ರಾರ್ಥಿಸುವುದುಂಟು. ಇರಬಹುದು. ಈಗಲಾದರೋ ನೀವು ಮುಕ್ತರಾದಿರಿ. ನಾನಿನ್ನೂ ಪಾಶಬದ್ಧ. ನೋಡಿ ನನ್ನನ್ನು. ಒರಳು ಕಲ್ಲಿಗೆ ತಾಯಿ ಕಟ್ಟಿ ಬಿಟ್ಟಿದ್ದಾಳೆ. ನಿಮ್ಮ ಸ್ತೋತ್ರದ ಪಾಶವೊಂದು ಬೇರೆ ನನ್ನನ್ನು ಬಿಗಿಯುತ್ತಿದೆ. ನನ್ನನ್ನು ಈ ಪಾಶದಿಂದ ಬಿಡಿಸುವವರಾರು!’ ಎಂದು ಮನಸೆಳೆಯುವಂತೆ ನಕ್ಕನಂತೆ.

ಯಕ್ಷ ಹುಡುಗರಿಗೆ ವಿಮೋಚನೆಯ ನಿರಾಳದಲ್ಲಿಯೂ ಬೆರೆತಿರುವ ಚಮತ್ಕಾರದ ಗುಣವೊಂದು ಕಾಣಿಸಿ, ಮಗುವಿನ ಮೇಲೆ ಅತಿ ಪ್ರೀತಿಯುಂಟಾಯಿತು. ಇನ್ನೂ ಅಷ್ಟು ಹೊತ್ತು ಇಲ್ಲಿ ಇದ್ದರೆ, ಇವನನ್ನು ಮಗುವೆಂದೇ ಬಗೆಯುವಂತಾದೀತೆಂದು ಕೃಷ್ಣನಿಗೆ ಎದೆ ತುಂಬಿ ನಮಸ್ಕರಿಸಿ ಮರೆಯಾದರಂತೆ.

ಕೃಷ್ಣ ಕರ್ಣಾಮೃತ ಬರೆದ ಬಿಲ್ವಮಂಗಲನ ಮಾತಿದು: ವೇದದ ಗಿರಿ ಗಹ್ವರಗಳಲ್ಲಿ ಸತ್ಯವನ್ನು ಅರಸಿ ಬಸವಳಿದವರೇ, ಇಲ್ಲಿ ಕೇಳಿ ಈ ಗುಟ್ಟು. ಉಪನಿಷತ್ತ್ತುಗಳು ಬಚ್ಚಿಟ್ಟ ಪರಮಾರ್ಥವಿದೆಯಲ್ಲ ಅದನ್ನು ಗೊಲ್ಲತಿಯ ಮನೆಯ ಒರಳುಕಲ್ಲಿಗೆ ಕಟ್ಟಿ ಹಾಕಲಾಗಿದೆ. ‘ಉಪನಿಷದರ್ಥಮುಲೂಖಲೇ ನಿಬದ್ಧಂ’, ಸಂಸಾರದಲ್ಲಿ, ಇಹದ ಸಂದರ್ಭದಲ್ಲಿ ಸತ್ಯವನ್ನು ಹುಡುಕಿ ಎನ್ನುತ್ತಿದ್ದಾನೆ!

ದೇವರು ಅಲೆಮಾರಿ. ಎಲ್ಲೆಲ್ಲೂ ಇರುವವ ನಿಂತಲ್ಲಿ ನಿಲ್ಲಲಾರನೇನೋ. ಕೃಷ್ಣನ ತುಂಟತನಕ್ಕೂ ಈ ಗುಣ. ಆದರೆ, ತಾನಾಗಿ ಹೋಗಲಾರ. ಅದಕೆಂದೇ ತಂದೆ ನಂದನಿಗೆ ಒಮ್ಮೆ ಅನ್ನಿಸಿಬಿಟ್ಟಿತು. ಈ ಗೋಕುಲದಲ್ಲಿ ಕೃಷ್ಣ ಹುಟ್ಟಿದಂದಿನಿಂದಲೂ ಎಂಥ ಉತ್ಪಾತಗಳು! ಗೋಕುಲವೇ ನಮಗೆ ಹೊಂದುವುದಿಲ್ಲವೇನೋ. ಪಕ್ಕದಲ್ಲೇ ಇರುವ ಇನ್ನೊಂದು ಹಳ್ಳಿ. ಅದರ ಹೆಸರು ವೃಂದಾವನ. ಅಲ್ಲಿಯೇ ಬೀಡುಬಿಟ್ಟರೆ ಹೇಗೆ! ಹೀಗೆ ಗೊಲ್ಲರ ವಾಸ ಬದಲಾಯಿತು. ತುರುಗಾಹಿಗಳಿಗೆ ವಲಸೆ ಹೊಸದೇನೂ ಅಲ್ಲ.

ವೃಂದಾವನ! ಅದು ಯಮುನೆಯ ದಡ. ಮೆಲ್ಲಗೆ ರಭಸವಿಲ್ಲದೆ ಹರಿವ ನೀರು. ತಮಾಲ [ಹೊಂಗೆ] ವೃಕ್ಷಗಳ ನಿಬಿಡವಾದ ತೋಪು. ವಿಸ್ತಾರವಾದ ಹುಲ್ಲು ಬಯಲು. ಸುಖ ಸುಳಿವಗಾಳಿ. ಗೋವರ್ಧನ ಎಂಬ ಗಿರಿ ಅಲ್ಲೇ ಇದೆ. ವೃಂದವನ! ಇದು ನಿಜವಾದ ವೈಕುಂಠ.

ಇಲ್ಲೇ ಕೃಷ್ಣ, ಹಸುಗಳನ್ನು ಮೇಯಿಸುವುದಕ್ಕೆ ತೊಡಗಿದ್ದು. ಇಲ್ಲೇ ಮೊದಲ ಬಾರಿಗೆ ಕೊಳಲಲ್ಲಿ ಉಸಿರು ಊದಿ ಪುಲಕಿತಗೊಳಿಸಿದ್ದು. ಇಲ್ಲೇ ವತ್ಸ, ಬಕ, ಅಘ, ಧೇನುಕಾದಿ ಅಸುರರ ಸಂಹಾರ ಮಾಡಿದ್ದು. ಇಲ್ಲೇ ಬೆಟ್ಟ, ಮರುನುಡಿ ಕೊಡುವುದನ್ನು ಕೇಳಿ ಗೋಪಬಾಲರು ಕೃಷ್ಣನ ಮಾತನ್ನು ಪ್ರಕೃತಿಯೇ ಪಾಲಿಸುತ್ತದೆ ಎಂದು ನಿಜವನ್ನೇ ಮುಗ್ಧವಾಗಿ ನಂಬಿದ್ದು ಮತ್ತು ಇಲ್ಲೇ ಬ್ರಹ್ಮದೇವನಿಗೆ ಗೊಲ್ಲ ಹುಡುಗರ ಮೇಲೆ ಅಸೂಯೆಯಾಗಿ ಹೋದದ್ದು.

ಆಗಸದಿಂದ ಇಣುಕುತ್ತಿದ್ದ ಬ್ರಹ್ಮನಿಗೆ ಕಂಡ ಕೃಷ್ಣನ ಚಿತ್ರ ಹೀಗಿತ್ತು. ಬಟ್ಟೆಯಲ್ಲಿ ಸಿಕ್ಕಿಸಿಕೊಂಡ ಕೊಳಲು; ಕಂಕುಳಲ್ಲಿ ಬೆತ್ತ; ಎಡಗೈಯಲ್ಲಿ ಕೆನೆಮೊಸರಿನ ಅನ್ನದ ದೊನ್ನೆ, ಬೆರಳುಗಳಲ್ಲಿ ಉಪ್ಪಿನಕಾಯಿಯ ಹೋಳು, ಸುತ್ತ ಗೊಲ್ಲ ಹುಡುಗರು, ನಗು, ನಗು; ನಗು; ಮತ್ತು ಊಟ!

ಬ್ರಹ್ಮನಿಗೆ ಆಸೆಯಾಯಿತಂತೆ. ತಾನೊಬ್ಬನೇ ಕೃಷ್ಣನ ಜತೆ ಆಡಬೇಕೆಂದು, ಎಲ್ಲ ಗೊಲ್ಲ ಬಾಲರನ್ನೂ ಕಾಣದಂತೆ ಮಾಡಿದನಂತೆ. ಕೃಷ್ಣ ತಾಯಿಗೆ ಬಾಯಲ್ಲಿ ವಿಶ್ವರೂಪ ತೋರಿಸಿದ್ದನ್ನು ಬ್ರಹ್ಮ ಮರೆತೇಬಿಟ್ಟಿದ್ದ. ಕೃಷ್ಣನಿಗೆ ಈ ಆಟ ಅರ್ಥವಾಯಿತು. ಅವನು ಎಲ್ಲವೂ ತಾನೇ ಆದ. ಹಸು; ಕರು; ಗೊಲ್ಲಬಾಲರು- ಎಲ್ಲವೂ. ತುರುಗಾಹಿಗಳ ಬಾಳು ಆತಂಕವಿಲ್ಲದೆ ನಡೆಯಿತು. ಆದರೆ, ಒಳ ನೋಟವಿರುವವರು ತಮ್ಮ ಅನುಭವದಲ್ಲೇ ಗುರುತಿಸಬಹುದಿತ್ತು. ರಾಮನಿಗೆ ತಿಳಿದುಬಿಟ್ಟಿತು. ಎಲ್ಲೆಲ್ಲೂ ಮಾತೃಭಾವದ ಅತಿಶಯ. ಹಸುಗಳ ಕೆಚ್ಚಲಿನಿಂದ ಸುರಿವ ಹಾಲು! ಕರುಗಳ; ಮಕ್ಕಳ ಕಟವಾಯಿಯಿಂದ ಸೋರುವ ಹಾಲು!

`ವಾಸುದೇವೇ ಅಖಿಲಾತ್ಮನಿ ಅಪೂರ್ವಂ ಪ್ರೇಮ ವರ್ಧತೇ’

ನಾವು ದೇವರನ್ನು ಪ್ರೀತಿಸೋದು ಎನ್ನುವುದು ಹುಸಿ. ಅವನೇ ಪ್ರೀತಿಯನ್ನುಂಟು ಮಾಡೋದು ಎನ್ನುವುದು ಪ್ರೀತಿಯ ನಿಜ.

ಬ್ರಹ್ಮ ಕೈಮುಗಿದು ಸ್ತುತಿ ಮಾಡಿದನಂತೆ: `ನೀರು ಕಟ್ಟಿದ ಮೋಡದ ಬಣ್ಣ; ಮಿಂಚುವ ಪೀತಾಂಬರ, ಗುಲಗಂಜಿಯ ಕರ್ಣಾಭರಣ, ತಲೆಯಲ್ಲಿ ನವಿಲಗರಿ, ಕೊರಳಲ್ಲಿ ಕಾಡಿನ ಹೂಗಳ ಹಾರ, ಕೈಯಲ್ಲಿ ಮೊಸರನ್ನದ ತುತ್ತು; ಉಡಿಯಲ್ಲಿ ಕೊಳಲು,. ನಗೆ ಮೊಗದರಸ; ನಂದಗೋಪನ ಮಗನೆ; ಮಣಿದೆ. ಗೋಪಬಾಲನ ಭಾಗ್ಯವನ್ನಾದರೂ ನನಗೆ ಕೊಡು!’

ವೃಂದಾವನದಲ್ಲೇ ಕೃಷ್ಣ ಕಾಳಿಯನ ತಲೆಯಲ್ಲಿ ಕುಣಿದದ್ದು ಮತ್ತು ಕುಣಿದದ್ದೇ ಅವನನ್ನು ಹಣಿದದ್ದು! ಯಮುನೆಯ ಮಡುವನ್ನು ತನ್ನದಾಗಿ ಮಾಡಿಕೊಂಡು ಅದನ್ನು ವಿಷಾಕ್ತಗೊಳಿಸುವ ಮುನ್ನ ತಿಳಿಯಬಹುದಿತ್ತು ಕಾಳಿಯ. ಯಮುನೆಯು ಮೊದಲೇ ಕೃಷ್ಣನಿಗೆ ದಾರಿಕೊಟ್ಟವಳೆಂದು. ಕೃಷ್ಣನಿಗೆ ವಿಷವುಣಿಸಿ, ಪೂತನಿ ತಾನೇ ಅಸುನೀಗಿದಳೆಂದು. ತನ್ನ ಜನಾಂಗದ ಹಿರಿಯ; ಶೇಷ, ಕೃಷ್ಣನಿಗೆ ಹೆಡೆಬಿಚ್ಚಿ ನೆರಳಿತ್ತನೆಂಬ ಕಥೆಯನ್ನು ದಂತಕಥೆ, ಎಂದಾದರೂ ನಂಬಹುದಿತ್ತು.

ಅವನು ಇದನ್ನೆಲ್ಲ ನಂಬಬೇಕಾದರೆ, ಕೃಷ್ಣನಪಾದ ಅವನ ತಲೆ ಮೆಟ್ಟಬೇಕಿತ್ತು!

ಕಾಳಿಯನಷ್ಟು ಹೊತ್ತು ಕೃಷ್ಣನನ್ನು ತನ್ನ ತಲೆಯಲ್ಲಿ ಯಾರೂ ಹೊತ್ತಿರಲಿಲ್ಲ; ಕಂಸನನ್ನು ಹೊರತುಪಡಿಸಿ. ಕಾಳಿಯನ ಹೆಡೆ ಮಣಿಯಿಂದ ಬೆಳಗಿದ ಪದಕಮಲ ಎಂದು ಕೃಷ್ಣನ ಪಾದಗಳನ್ನು ಕವಿಗಳು ಬಣ್ಣಿಸಿದರು. ಅದು ಕಾಳಿಯನ ಭಾಗ್ಯ!

ವೃಂದಾವನದ ಭೂಮಿ; ಹುಲ್ಲು ಬಯಲು; ಯಮುನೆ; ತಮಾಲವನ; ಮೇಯುವ ಹಸುಗಳ ಹಿಂಡು, ಅವುಗಳ ಹಿಂದೆ ಗೊಲ್ಲ ಹುಡುಗರ ಕೇಕೆ, ಕೊಳಲನ್ನು ನುಡಿಸುತ್ತಿರುವ ಶ್ಯಾಮಸುಂದರ- ಈ ಚಿತ್ರದಲ್ಲಿ ಸೇರಲೇಬೇಕಾದ ಒಂದು ವಿವರವಿದೆ. ಅದು ಗೋಪಿಕೆಯರದು. ಅವರು ಮೊದಲಬಾರಿಗೆ ಕೃಷ್ಣನ ಅದ್ಭುತವಾದ ಕೊಳಲಿನ ನಾದವನ್ನು ಕೇಳಿದರು. ಏನಾಯಿತೆಂದರೆ, ಕೃಷ್ಣ ಕೊಳಲು ನುಡಿಸಿದ್ದೋ- ಎದೆಯ ಭಾವದ ಕಡಲನ್ನು ನಾದದ ಕಡೆಗೋಲಿನಿಂದ ಕಡೆದದ್ದೋ- ಈ ಗೋಪ ಹೆಣ್ಣುಗಳಿಗೆ ತಿಳಿಯಲಿಲ್ಲ. ಹೀಗೊಂದು ಭಾವದ ಕಡಲು ತಮ್ಮೊಳಗೆ ಇತ್ತು ಎನ್ನುವುದೇ ಅವರಿಗೆ ತಿಳಿದಿರಲ್ಲಿಲ್ಲ. ಮೊದಲ ಬಾರಿಗೆ ನಿಸರ್ಗ ತನ್ನ ಪೂರ್ಣತೆಯಲ್ಲಿ ಎಚ್ಚರಗೊಂಡಿತು. `ಪೂರ್ಣಮದ: ಪೂರ್ಣಮಿದಂ’.  ಕಟ್ಟಿಕೊಂಡ ತರ್ಕಗಳು ಸರಿದು ಹೋದವು. ಪ್ರಜ್ಞೆಗೆ ನವೋನವವಾದ ‘ಬಿಡುವು’ ಉಂಟಾಯಿತು. ತರ್ಕದಲ್ಲಿ ಪ್ರಜ್ಞೆಗೆ ಹೇಳಲಾಗದ ಒಂದು ಬಿಗಿತ. ಅದು ತಾನೇ ಕಟ್ಟಿಕೊಂಡ ತಿಳುವಳಿಕೆಯ ಬಂಧನ. ಈ ಬಿಡುವಿನಲ್ಲಿಯಾದರೋ ತಿಳುವಳಿಕೆ ಎಂದರೆ ಹೊಳಹು. ಅದೇ ನಮ್ಮನ್ನು ಹುಡುಕಿಕೊಂಡು ಬಂದಂತೆ. ಚಾವಡಿಯಲ್ಲಿ ಇಳಿದ ಬಿಸಿಲ ಕೋಲು. ಗಿಡದಲ್ಲಿ ಗಿಳಿವಿಂಡು ಹಾರಿ ಬಂದು ಕೂತು ಕ್ಷಣ ರೋಮಾಂಚನವೆಬ್ಬಿಸಿ, ಹಾಗೆಯೇ ಹಾರಿ ಹೋದಂತೆ! ಹಾರಿ ಹೋದದ್ದೂ ಒಂದು ರೋಮಾಂಚನವೇ. ಗೋಪಿಕೆಯರಿಗೆ ಒಂದು ಚಕಿತ ಭಾವ, ತೀವ್ರವಾದ ಸೆಳೆತ- ದೇಹದ ಮಟ್ಟದಲ್ಲಿ ನಡೆಯುತ್ತಿದ್ದ ಬದುಕು ಭಾವಸ್ತರದಲ್ಲಿ ತೊನೆಯಲಾರಂಭಿಸಿತು.

ಕೃಷ್ಣ ಕೊಳಲು ನುಡಿಸುತ್ತಿದ್ದರೆ- ಇವನು ನಮ್ಮನ್ನು ನಂಬಿದಾನೆ ಎಂಬ ಭಾವ. ಸಂಸಾರದಲ್ಲಿ ಎಲ್ಲವೂ ನಂಬಿದಂತಿದೆ. ಅಷ್ಟೆ. ಎಲ್ಲ ಮೇಲ್ನೋಟಕ್ಕೆ. ಒಳಗೆ ಘರ್ಷಣೆ. ವ್ಯಕ್ತಿತ್ವಗಳ ಘರ್ಷಣೆ. ಘರ್ಷಣೆ ಮಾಯವಾದರೆ, ಅಲ್ಲಿ ಅದೇ ಜಾಗದಲ್ಲಿ ಆಕರ್ಷಣೆ. ‘ಕೃಷ್ಣ’ ಎಂದರೆ ಆಕರ್ಷಣೆಯೇ. ‘ನಂಬಿದಾನೆ’ ಎಂದರೇನು? ನಮಗೋಸ್ಕರವೇ ನುಡಿಸ್ತಾ ಇದಾನೆ ಎಂಬ ಭಾವ. ನಮ್ಮನ್ನು ಕರೀತಾ ಇದಾನೆ, ನಮ್ಮನ್ನು ಅರಳಿಸ್ತಾ ಇದಾನೆ ಎಂಬ ಭಾವ. ಆಕರ್ಷಣೆಯ ತಳದಲ್ಲಿ ಇರೋದು ನಂಬಿಕೆಯೇ. ಕಡಲಿಗೆ ಅನ್ನಿಸಬಹುದು. ಚಂದ್ರ ನನಗಾಗಿಯೇ ಇರೋದು. ಇದು ಚಂದ್ರನನ್ನು ಅಧೀನ ಮಾಡಿಕೊಳ್ಳುವ ಭಾವ ಅಲ್ಲ. ಇಲ್ಲಿರೋದು- ನನಗಾಗಿ ನುಡಿಸ್ತಾ ಇದಾನೆ, ನನಗಾಗಿ ತನ್ನನ್ನು ತಾನು ತೆರೆದುಕೊಳ್ತಾ ಇದಾನೆ, ಅವನಿಗೆ ತನ್ನನ್ನು ತೋಡಿಕೊಳ್ಳುವುದಕ್ಕೆ ನಾವು ಬೇಕು- ಎಂಬ ಭಾವ. ಹಾಗೆಯೇ ಅವನಿಲ್ಲದೆ ಅವನ ಕೊಳಲು ಕೇಳದೆ ಬಾಳು ವ್ಯರ್ಥ ಎಂಬ ಭಾವ. ಕೃಷ್ಣ ಮತ್ತು ಗೋಪಿಕೆಯರ ನಡುವೆ ಹರಿಯುತ್ತಿರುವುದು ಕೊಳಲಿನ ಗಾನ ಮಾತ್ರ. ನಿಜಕ್ಕಾದರೆ, ಇಬ್ಬರೂ ಸೇರಿ ನುಡಿಸ್ತಾ ಇದಾರೋ ಎಂಬ ಭಾವ. ಅದೇ ನಿಜವಿರಬೇಕು!

ಗೋಪಿಕೆಯರ ಹೃದಯದಲ್ಲಿ ಕ್ರಾಂತಿಯ ಅಲೆಯೊಂದು ಎದ್ದಿತು. ಅದುವರೆಗಿನ ಏಕತಾನದ ಬದುಕು ಮುಗಿಯಿತು. ಹೆಂಗಸರನ್ನು ಸಂಸಾರದಿಂದ ಬಿಡಿಸೋದು ಎಂದರೇನು! ಕೊಳಲಿನ ನುಡಿಕಾರ ಕೇಳದಿದ್ದರೆ, ಅವರು ಚಡಪಡಿಸುವರು. ಕೇಳಿದರೆ, ವಿಹ್ವಲರಾಗುವರು! ಕೇಳದಿದ್ದರೆ ವಿರಹ. ಕೇಳಿದರೆ, ವಿರಹ-ವಿಹ್ವಲತೆ! ಏನಿದು! ಇಂಥ ವಿರಹವನ್ನೆಂದೂ ಅನುಭವಿಸಿರಲಿಲ್ಲ ಗೋಪಿಕೆಯರು; ವಿರಹದ ಅನುಭವವೇ ಇರಲಿಲ್ಲ ಅವರಿಗೆ, ಈಗ ವಿರಹವೊಂದೇ ‘ಸತ್ಯ’ ಎನ್ನುವಂತೆ ಆಯಿತು.

ಬಲ್ಲವರು ಹೇಳುತ್ತಾರೆ. ವಿರಹವನ್ನು ಅನುಭವಿಸುವ ಜೀವಿ ಹೆಣ್ಣೇ ನಿಜ. ಗಂಡೂ ಹೆಣ್ಣೇ. ಗಂಡೂ ಪ್ರಕೃತಿಯೇ. ಅಹಂಕಾರಕ್ಕೆ ವಿರಹಾನುಭವದ ಯೋಗ್ಯತೆ ಇಲ್ಲ! ಏಕೆಂದರೆ ಅಹಂಕಾರವು ‘ಅನ್ಯ’ನನ್ನು ಸಹಿಸುವುದಿಲ್ಲ. ಭಗವಂತನಾದರೋ ಪ್ರಕೃತಿಯಿಂದ ‘ಅನ್ಯ’ನಂತೆ. ಪ್ರಕೃತಿಯನ್ನು ಮೀರಿದವನಂತೆ. ಉತ್ತಮ ಪುರುಷಸ್ತು ‘ಅನ್ಯ:’ -ಎಂದು ಗೀತೆ. `ಇತರೇಣ ತು ಜೀವಂತಿ’ -ಎಂದು ಉಪನಿಷತ್ತು. ಅವನು ‘ಅನ್ಯ’; ಅವನು ‘ಇತರ’ ಎಂದು ಕರೆದಿವೆ. ವಿರಹಾನುಭವದ ಅರ್ಥವೇನೆಂದರೆ, ಅತ್ಯುತ್ಕಟವಾದ ವಿರಹಾನುಭವದಲ್ಲಿಯೇ ‘ಅನ್ಯ’ನಾದ, ‘ಇತರ’ನಾದ- ಭಗವಂತನ ಸ್ವರೂಪ ತಿಳಿದು ಬರುವುದು! ನಿಜವಾದ ಪ್ರೀತಿ ಅಥವಾ ‘ಭಕ್ತಿ’, ಅವನ ‘ಬೇರೆತನ’ವನ್ನು ವಿಹ್ವಲವಾಗಿ ಅನುಭವಿಸುತ್ತೆ. ಈ ಅನುಭವವೇ ಎಲ್ಲ ಕಲೆಗಳ ತವರು. ಎಲ್ಲ ಹೊಳಹುಗಳ ನೆಲೆ. ಅವನ ‘ಬೇರೆತನ’ವಿಲ್ಲದೆ ನಮ್ಮಲ್ಲಿ ವಿರಹಾನುಭವವೇ ಇಲ್ಲ. ಈ ಅನುಭವದ ಮೂಲಕವೇ ಅವನು ನಮ್ಮೆಡೆಗೆ ತಿರುಗುವುದು. ಅಚ್ಚರಿ ಎಂದರೆ ಕೃಷ್ಣ ಕೊಳಲು ನುಡಿಸಿ, ವಿರಹದ ಅಲೆಗಳನ್ನು ಎಬ್ಬಿಸಿದ್ದುದು ತನ್ನ ಸ್ಥಿತಿಯನ್ನು ತೋಡಿಕೊಂಡದ್ದು ಕೂಡ. ಗೋಪಿಕೆಯರಿಗೆ ಇದು ತಿಳಿದು ಬಿಟ್ಟಿತು!

ತೋಳ್ಪಾಡಿ ಭಾಗವತ 24: ಕೃಷ್ಣ ಕೊಳಲ ಗಾನಕ್ಕೆ ಒದ್ದೆ ಒದ್ದೆ ಸುಖ!

ಕೃಷ್ಣ ಎಂದರೆ ಪ್ರೇಮಾವತಾರ. ಸ್ವಲ್ಪ ಹಿಂದೆ ಬ್ರಹ್ಮದೇವ ಚಕಿತಗೊಂಡಿದ್ದನಲ್ಲ- ವೃಂದಾವನದಲ್ಲಿ ಎಲ್ಲಿ ನೋಡಿದರೂ ಪ್ರೇಮಭಾವ ಹಾಲು ಉಕ್ಕುವಂತೆ ಉಕ್ಕುವುದನ್ನು ನೋಡಿ. `ಅಪೂರ್ವಂ ಪ್ರೇಮ ವರ್ಧತೇ’.  ಕೃಷ್ಣ ಗೋಗೋಪಬಾಲಕರನ್ನೆಲ್ಲ ತನ್ನ ವ್ಯಕ್ತಿತ್ವದಲ್ಲಿ ಆವಾಹಿಸಿಕೊಂಡುದರಿಂದ ಈ ಭಾವ ಸಮೃದ್ಧಿ. ಆಗ ಬ್ರಹ್ಮ ಸಹಜವಾಗಿ ಕೃಷ್ಣನನ್ನು ಸ್ತುತಿ ಮಾಡಿದ್ದ. ಮಾತು ಅವನೊಳಗಿಂದ ಉಕ್ಕಿ ಬರುತ್ತಿತ್ತು. `ಶ್ರೀಕೃಷ್ಣ ವೃಷ್ಣಿಕುಲ ಪುಷ್ಕರ ಜೋಷದಾಯಿನ್, ಕ್ಷ್ಮಾನಿರ್ಜಿರ ದ್ವಿಜ ಪಶೂದಧಿ ವೃದ್ಧಿಕಾರಿನ್’. ಭೂಮಿ; ಭೂಮಿಯಲ್ಲಿರುವ ಪಶುಗಳು; ಆಗಸದಲ್ಲಿರುವ ದೇವತೆಗಳು; ಬಲ್ಲ ವಿದ್ವಾಂಸರು- ಇಂಥದೊಂದು ಕಡಲು ಭಾವದಲ್ಲಿ ಉಕ್ಕುವಂತೆ ಮಾಡುವ ಚಂದ್ರನಂತೆ ನೀನಿರುವೆ ಎಂದು ಕೃಷ್ಣನನ್ನು ಕೊಂಡಾಡಿದ್ದ. ಆ ಕಡಲಿನ ರೂಪಕದಲ್ಲಿ ಗೋಪಿಕೆಯರನ್ನು ಸೇರಿಸಬೇಕೆಂದು ಬ್ರಹ್ಮನಿಗೆ ಕಂಡಿರಲಿಲ್ಲ. ಅವನು ಗಂಡಸು. ಅಥವಾ ತಾನು ಗಂಡಸೆಂದು ತಿಳಕೊಂಡುಬಿಟ್ಟಿದ್ದ. ಅಥವಾ ತಾನು ಗಂಡಸೆನ್ನುವುದನ್ನು ಮರೆಯಲಾರದವನಾಗಿದ್ದ. ಕೃಷ್ಣನಾದರೋ ತನ್ನನ್ನು ಮರೆಯಬಲ್ಲವ. ತನ್ನನ್ನು ಮರೆಯಬಲ್ಲವನೇ ಎಲ್ಲರಲ್ಲಿ ಮೈ ಮರೆವಿನ ರೋಮಾಂಚನವನ್ನುಂಟು ಮಾಡಬಲ್ಲ. ತನ್ನನ್ನು ಮರೆಯಬಲ್ಲವನು ಎಲ್ಲರ ನೆನಪಿನ ವಸ್ತುವಾಗಬಲ್ಲ. ಇದೇ ಮರೆವು- ನೆನಪುಗಳ ನಡುವಣ ವಿಚಿತ್ರ ಸಂಬಂಧ. ತನ್ನನ್ನು ಮರೆಯುವುದೆಂದರೆ, ಈ ಲೋಕದಲ್ಲಿ ಕಳೆದು ಹೋದಂತಲ್ಲ; ತನ್ನನ್ನು ಮರೆಯುವುದೆಂದರೆ ಪರ್ಯಾಯ ಲೋಕವನ್ನೇ ತೋರಿಸಿದಂತೆ.

ಭೂಮಿ; ದೇವತೆ; ವಿದ್ವಾಂಸ; ಗೋವು ಮತ್ತು ಸ್ತ್ರೀಯರು ಇವರಲ್ಲಿ ಪ್ರೀತಿ ಉಕ್ಕುವುದೆಂದರೆ- ಮಣ್ಣು ಫಲವತ್ತಾಗುವುದು! ವ್ಯಾಸರು ಮಹಾಭಾರತದ ಒಂದು ಸಂದರ್ಭದಲ್ಲಿ ಹೇಳಿದ್ದುಂಟು- `ಪೃಥಿವೀ ಗತಯೌವನಾ’ -ಎಂದು. ಕಾಲ ಕೆಡೋದು ಎಂದರೆ, ಮಣ್ಣಿನ ಯೌವನ ಕಳೆದುಹೋಗುವುದು ಎಂದು. ವೃಂದಾವನದ ಕೃಷ್ಣ ಸಂದರ್ಭದಲ್ಲಿ `ಪೃಥಿವೀ ಚಿರ ಯೌವನಾ’ ಎನ್ನಬೇಕು!

ದೇವತೆಗಳು ಎಂದರೆ ಪರೋಕ್ಷ ಲೋಕ. ಕಾಣದ ಲೋಕ. ಕಾಣದ ಲೋಕಕ್ಕೆ ಕಾಣುವ ಈ ಲೋಕದ ಮೇಲೆ ಅಕ್ಕರೆ ಹೆಚ್ಚುವುದಂತೆ. ಅಂದರೆ ಯಜ್ಞ ಭಾವನೆಯ ಸಾರ್ಥಕ ಅರಿವು!

ವಿದ್ವಾಂಸರಲ್ಲಿ ಭಾವವೃದ್ಧಿಯಾಗುವುದೆಂದರೆ, ಜ್ಞಾನವು ಅಹಂಕಾರವಾಗದೆ, ಪ್ರೀತಿಯಾಗಿ ಪರಿಣಮಿಸುವುದು! ಇದೆಷ್ಟು ಕಷ್ಟ ಎನ್ನುವುದನ್ನು ಪಂಡಿತ-ಪಾಮರರಿಬ್ಬರೂ ಬಲ್ಲರು.

ಗೋವುಗಳು ನೆಮ್ಮದಿಯಾಗಿ ಹಾಲು ಕೊಡುವುವು. ಕರುವಿಗೆ ಕುಡಿಸದೆ ಹಾಲು ಕರೆದರೆ ಅದು ನೆಮ್ಮದಿಯ ಹಾಲಲ್ಲ.

ಸ್ತ್ರೀಯರು! ಅವರ ಭಾವ ಸಾಮರ್ಥ್ಯ ಸಂಸಾರದ ಸ್ವಾರ್ಥದಿಂದ ಬಿಡುಗಡೆ ಪಡೆಯುವುದು. ಕೃಷ್ಣನ ಕೊಳಲಿನ ಗಾನದಲ್ಲಿ ಇಂಥ ಭಾವದ ಉಕ್ಕುವಿಕೆ!

ಮಗುವಾಗಿದ್ದ ಕೃಷ್ಣ ಹೆಂಗಸರ ಹಾಡು ಕೇಳಿಯೇ ಬೆಳೆದಿದ್ದ. ಮೊಸರು ಕಡೆವಾಗ ಹಾಡು. ಹೂ ಕಟ್ಟುವಾಗ ಹಾಡು. ಹಾಲು ಕರೆಯುವಾಗಲೂ ಹಾಡು. ಬೆನ್ನಿಗೆ ಚುಕ್ಕುತಟ್ಟಿ ನಿದ್ದೆ ಮಾಡಿಸುವಾಗ ಹಾಡು.  ತೊಟ್ಟಿಲು ತೂಗುವ ಜೋಗುಳ ಹಾಡು. ಎಷ್ಟು ಹಾಡು! ಬದುಕೆಲ್ಲ ಹಾಡೇ! `ಎಚ್ಚರಗೊಂಡುದಕ್ಕರೆ ಕೃಷ್ಣನೊಳು ಗಾನ ಮೂಲಂ. ತರುಣಿಯರಿಂಚರದಿ ಮೂಡಿಬಹಸರಮೇಳಕೆ ಇಂಬನು ಕೊಡಲು ಮುರಲಿಯನೆತ್ತುವನು  ಚೆಂದುಟಿಗೆ ಮುರಲೀಧರಂ ಕರವಿಡಿದು ನುಡಿಗಳನು ನಡಸುವ ತೆರದಿ’  [ಪು.ತಿ.ನ. ಶ್ರೀ ಹರಿಚರಿತೆ]

ಈ ಎಲ್ಲ ಹಾಡು ಕೇಳಿದ್ದಕ್ಕೆ ಮರುಹಾಡು ಸಲ್ಲಿಸಬೇಕಲ್ಲ. ಹಾಡಿನ ಮರು- ಹುಟ್ಟು! ಕೇಳಿದ ಆ ಎಲ್ಲ ಹಾಡೆಂಬ ಅಕ್ಕರೆಯ ಸಾರ ಈ ಹಾಡಿನಲ್ಲಿರಬೇಕಲ್ಲ! ಅವರ ಹಾಡಿಗೆ ಜೊತೆ ಇರಲಿ- ಸರಮೇಳಕೆ ಇಂಬನು ಕೊಡಲು- ಕೊಳಲನ್ನು ಎತ್ತಿಕೊಂಡು ಅದರಲ್ಲಿ ಉಸಿರು ಊದಿದರೆ, ಇದು ಪ್ರಕೃತಿಯ ಹಾಡಾಗಿ ಹೋಯಿತು! ಭೂಮಿಯಿಂದ ಹುಟ್ಟಿದ ಹಾಡು ನೀಲಾಗಸವನ್ನು ಮುಟ್ಟಿ ಮರು ಹುಟ್ಟು ಪಡೆದು ಸ್ವಾತಿಯ ಮಳೆಯಂತೆ ಕೆಳಗಿಳಿಯಿತು. `ರುಚಿ ಇಲ್ಲ ಎಳೆಗರಿಕೆಯೊಳು ಮಂದೆಗೆ. ಕುಡಿವುದ ತೊರೆದು ಮೊಲೆ ತೊಟ್ಟ ಕಳಚುತ ಕಣ್ಣರಳಿಪುದು ಹಸುಳೆ. ಮನೆ ವಾಳ್ತ್ತೆ ವಾರ್ತೆಗಳು ರುಚಿಸವು ಹೆಂಗಳಿಗೆ. ಆಟದ ಬಯಕೆ ಇಲ್ಲ ಹುಡುಗರಿಗೆ. ಹಿರಿಯರಿಗೆ; ಕುಲ ವೃದ್ಧರಿಗೆ ಬೇಹರದ ಸುದ್ದಿಯೊಳಿಲ್ಲ ರುಚಿ. ಏಕಾತ್ಮವಾದುದು ಸಹೃದಯ ನೆರವಿ!. [ಪು.ತಿ.ನ. ಶ್ರೀ ಹರಿಚರಿತೆ]

ಇದು ಪರ್ಯಾಯ ಲೋಕ!

ಮರು ಹುಟ್ಟಿದ ಹಾಡಿಗೆ ಇಂಥ ಚಮತ್ಕಾರ! ಇಂಥ ಪರಿಣಾಮ. ಈ ಹುಟ್ಟಿನ ಸ್ವಾರ್ಥದ ಕಕ್ಷೆಯನ್ನು ಮೀರಬಲ್ಲ ವೇಗವನ್ನುಂಟು ಮಾಡುವ ಭಾವದ ಇಂಧನ ಉರಿಯುತ್ತಿತ್ತು ಗೋಪಿಕೆಯರಲ್ಲಿ, ಕೊಳಲಿನ ಇನಿದನಿ ಗೋಪಿಕೆಯರ ಒಳಗಿವಿಯಿಂದ ಮರೆಯದೆ ಉಳಿಯಿತು.

`ಮೂಲ ಹಿಡಿದು ಅಲ್ಲಾಡಿಸಿದ; ಬಳ್ಳಿಯಂತೆ ಬಳುಕಿತು ಜೀವ’

`ಏನೋ ಕಂಡು ಕಾಣದಂತೆ, ಏನೋ ಕೇಳಿ ಕೇಳದಾಗಿ, ಏನೋ ಹೇಳ ಹೋಗಿ ಹೇಳದೇನ ಇರುವಿ ನೀನು’

ರಂಗ ತಾನು ಇದ್ದಲ್ಲಿಂದ ಗಾಳಿ ಸುಳಿಯ ತಾನವಿಡಿದು ಮುದ್ದು ತೇಲಿ ಬಿಟ್ಟನೇನ’

`ಯಾವ ಜನ್ಮದಲ್ಲೋ ಏನೋ ನಾವು ತೊರೆದು ಬಂದ ಕರುಳುಗಳು ಜೀವ ಮಿಡಿಸಿ, ನುಡಿಸಿ ನುಡಿಸಿ ತಾಯೆ ಬಾರೆ ಎನ್ನುವಂತೆ’.

`ಬಿದಿರು ಮೆಳೆಗಳೆಲ್ಲ ಇನ್ನೂ ಸಿಳ್ಳು ಹಾಕುತಾವ ಹಾಂಗ ಮರುಳು ಹಿಡಿದ ನಲ್ಲನಂತೆ ತೆರಳಿ ಹೋದ ನಲ್ಲೆಗಾಗಿ!’

`ಕಳೆದ ಕರುವಿಗಾಗಿ ಗೋಪಿ ನೆಲವ ಮೂಸಿ ಮೂಸಿ ಮೂಸಿ ಹುಡುಕುವಂತೆ ಹುಚ್ಚುಗಾಳಿ ತಡೆದು ತಡವುತಿಹುದು ಇನ್ನೂ’ : [ಅಂಬಿಕಾತನಯದತ್ತ]

ಹೀಗೆ ಕೃಷ್ಣನ ಉಸಿರು ಕೊಳಲಿನಲ್ಲಿ ಹರಿಯಿತು.

`ತಿರುವುಗಿವಿಯ ಮಾಡಿ ಆವು ನಿಂತವಕ್ಕ ನಿಂತಲ್ಲೇನ’.

ಗೋಪಿಕೆಯರಿಗೆ ಈ ಕೊಳಲು ಕೇಳುವಾಗ ಇದ್ದಕ್ಕಿದ್ದಂತೆ ಧೋ ಎಂದು ಸುರಿದ ಮಳೆಯಲ್ಲಿ ಒದ್ದೆಯಾದ ಅನುಭವ. ಒದ್ದೆಯಾದ ಸುಖ. ಆಗ ಅವರಿಗೆ ಹಿಂದಿನ ನೆನಪೊಂದು ಹೊಳೆಯುವುದು. ವಸ್ತ್ರಾಪಹರಣ ಪ್ರಸಂಗ! ತಾವು ದಂಡೆಯಲ್ಲಿ ಬಟ್ಟೆ ಬಿಚ್ಚಿಟ್ಟು ಯಮುನೆಯ ಕಿರಿ ಮಡುವಿನಲ್ಲಿ ಮೀಯುತ್ತಿದ್ದಾಗ, ಕೃಷ್ಣ ಮೆಲ್ಲಗೆ ಬಂದು ಆ ಬಟ್ಟೆಗಳ ಗಂಟನ್ನು ಹೊತ್ತೊಯ್ದು ತಮಾಲದ ಕೊಂಬೆಯೊಂದರಲ್ಲಿ ಆಚೆ ಈಚೆ ಕಾಲು ಹಾಕಿ ಕೂತಿದ್ದ. ತಾವು ಅವನನ್ನು ಬಟ್ಟೆಗಾಗಿ ಇನ್ನಿಲ್ಲದಂತೆ ಗೋಗರೆದಿದ್ದೆವು. ನಮ್ಮನ್ನೆಷ್ಟು ಗೋಳು ಹೊಯ್ದುಕೊಂಡ! ಆಗ ನಡೆದ ಮಾತುಕತೆ ….

ಹೆಂಗಸರ ಬಟ್ಟೆ ನಿನಗೇಕೋ ಕೃಷ್ಣ; ನೀನು ಹೆಣ್ಣೇನೋ?
ಅಲ್ಲವೆಂದವರಾರು? ನೀವು ಹೇಗೆ ಭಾವಿಸಿದರೆ ಹಾಗೆ!
ಓಹೋ; ಹಾಗೇನು? ಹಾಗಾದರೆ ಹೆಣ್ಣಿಗೆ ಹೆಣ್ಣುಗಳ ಕಷ್ಟ ಗೊತ್ತಾಗಬೇಕಲ್ಲ!
ಅದು ಗೊತ್ತಾಗುತ್ತಿದೆ. ಆದರೆ ಹೆಣ್ಣು, ಹೆಣ್ಣಿನ ಮುಂದೆ ನಾಚುವುದೇಕೆಂದು ಮಾತ್ರ ಗೊತ್ತಾಗುತ್ತಿಲ್ಲವಲ್ಲ.

ಏನು ಮಾಡಬೇಕೆನ್ನುತ್ತಿ; ಪುಣ್ಯಾತ್ಮ?
ಪುಣ್ಯಾತ್ಮ ಎಂದು ಗಂಡಸನ್ನು ಕರೆದಂತೆ ಕರೆಯುತ್ತಿದ್ದೀರಲ್ಲ; ನಿಮ್ಮ ವ್ಯಾಕರಣ ತಪ್ಪಿತು. ಆಯಿತು. ತಪ್ಪಿತು. ಸರಿ ಮಾಡಿಕೋ ಗುರುವೆ. ಏನು ಮಾಡಬೇಕು; ಹೇಳು.
ಕೈ ಎತ್ತಿ ತಪ್ಪು ಒಪ್ಪಿಕೊಳ್ಳಿ ನೋಡೋಣ.
ಥೂ; ನಾಚಿಕೆ ಇಲ್ಲದವನೆ!
ಅಕೋ. ಮತ್ತೆ ತಪ್ಪು. ನೀವು ನಾಚಿದರೆ ಏನರ್ಥ ಗೊತ್ತೇನು?
ನೀನೇ ಹೇಳು.
ನೀವು ನನ್ನನ್ನು ನೋಡಿ ನಾಚಿದರೆ ಅರ್ಥ ಇಷ್ಟೇ. ನನ್ನನ್ನು ಗಂಡು ಎಂದು ಬಗೆದಂತೆ. ಮಗುವನ್ನು ನೋಡಿ ನಾಚಿದರೆ ಮಗುವಿನಲ್ಲಿ ತಾರುಣ್ಯವನ್ನು ಆವಾಹಿಸಿದಂತೆ!
ಏನೋ ಅಪ್ಪ! ಇದೆಲ್ಲ ನಮ್ಮ ನಡುವಿನ ಮಾತು ಕೃಷ್ಣ. ಕೇಳಿದವರಿಗೆ ಏನು ಹೇಳೋದು? ಹಾಗೋ. ಹಾಗಾದರೆ ಧರ್ಮಶಾಸ್ತ್ರದ ಮಾತೊಂದನ್ನು ಹೇಳುತ್ತೇನೆ. `ನವಿವಸನ: ಸ್ನಾಯಾತ್.’ ಎಲ್ಲ ಬಟ್ಟೆ ಬಿಚ್ಚಿ ಸ್ನಾನ ಮಾಡಬಾರದಂತೆ. ಈ ಸೂತ್ರ ತಿಳಿಸುವುದಕ್ಕಾಗಿ ನಾನು ನಿಮ್ಮ ವಸ್ತ್ರಾಪಹಾರ ಮಾಡಿದೆ ಎಂದು ಹೇಳಿ. ಹಾಗೆ ನನ್ನ ಮರ್ಯಾದೆ ಕಾಪಾಡಿ!

ನೆನೆಯುತ್ತಿದ್ದ ಗೋಪಿಕೆಯರಿಗೆ ನಗು ಬಂತು. ಈಗ ಕೃಷ್ಣನ ಕೊಳಲನ್ನು ಕೇಳುತ್ತಿದ್ದರೆ, ಈ ಎಲ್ಲ ಬಟ್ಟೆಗಳನ್ನು ಉಟ್ಟೂ ಮಳೆಯಲ್ಲಿ ಒದ್ದೆಯಾದಂತೆ ಆಗುತ್ತಿದೆ. ಈ ಸುಖ ಎಂಥ ಮೀಹದಲ್ಲೂ ಸಿಕ್ಕಿರಲಿಲ್ಲ. ಕೃಷ್ಣನ ಮಾತಿಗೆ ಬೇರೆಯೇ ಅರ್ಥ ಹೊಳೆಯಿತು. ಹೊರ ನೋಟಕ್ಕೆ ಏನನ್ನೂ ಕಳಚದೆ ಮೀಯುವ ಬಗೆ ಒಂದಿದೆ! ಇದ್ದೂ ಇಲ್ಲದಂತೆ. ಬಟ್ಟೆ ಎಂದೇನು? ಮೈಯನ್ನೇ ಮರೆತಂತೆ. ಮೈ ಇರುವಾಗಲೇ ಮೈ ಮರೆಯಬೇಕು! ಮೈಗೆ ನಾಚಿಕೆ. ಮೈ ಮರೆತರೆ?

ಅದು ಕೃಷ್ಣನ ಅವಸ್ಥೆ ಎಂದು ಹೊಳೆಯಿತು! ಕೃಷ್ಣ ತಾನು ಒಯ್ದ ಬಟ್ಟೆಗಳನ್ನು ಮರಳಿಕೊಟ್ಟು ಗೋಪಿಕೆಯರು ಅದನ್ನು ಉಟ್ಟು ಮನೆಗೆ ಮರಳುವ ಹೊತ್ತಲ್ಲಿ, ನಿನ್ನನ್ನು ಬಿಟ್ಟಗಲುವುದೇ ಬಟ್ಟೆ ಉಟ್ಟದ್ದಕ್ಕೆ ಫಲವಾಯಿತಲ್ಲ ಎಂದು ಅತ್ತು ಬಿಟ್ಟಿದ್ದರು. ಆಗ ಸಂತೈಸುತ್ತ ಕೃಷ್ಣ ಒಂದು ಮಾತು ಹೇಳಿದ್ದ: `ಮುಂದೆ ಬರಲಿರುವ ಶರದೃತುವಿನ ಹುಣ್ಣಿಮೆಯ ಇರುಳಲ್ಲಿ ನನ್ನೊಡನೆ ವಿಹರಿಸುವಿರಂತೆ’. ವಿಹಾರವೆಂದರೆ, ಕೃಷ್ಣನ ಅವಸ್ಥೆಯನ್ನು ತಾವೂ ಅನುಭವಿಸುವುದು ಎಂದು ಗೋಪಿಕೆಯರಿಗೆ ಹೊಳೆದು ಬಿಟ್ಟಿತ್ತು. ಆ ಕ್ಷಣದಿಂದ ಅವರಿಗೆ ಕೃಷ್ಣನ ಅವಸ್ಥೆ ಇಳಿದು ಬರತೊಡಗಿತು!

ಶರದೃತುವಿನ ಹುಣ್ಣಿಮೆಯ ಇರುಳು ಇಳಿದು ಬರತೊಡಗಿತು. ಕಡಲಿಗೆ ಭರತ ಹೆಚ್ಚಾಗುತ್ತಿತ್ತು. ಮನುಷ್ಯರೇ ಮಾಡಿಕೊಂಡ ಕಟ್ಟು ಕಟ್ಟಳೆಗಳ ಭರತವಾಕ್ಯದಂತೆ ಕಡಲು ಮೊರೆಯುತ್ತಿತ್ತು. ವೃಂದಾವನದ ಇರುಳನ್ನು ನೋಡಬೇಕೆಂದು ಚಂದ್ರ ಇಣುಕುತ್ತಿದ್ದಂತೆ ಗಾಳಿಯಲ್ಲಿ ಕೊಳಲಿನ ನಿನಾದ ಕೇಳಿದಂತಾಯಿತು,  ಗೋಪಿಕೆಯರಿಗೆ. ಕಟ್ಟು ಹರಿದವು.  ಬಾಗಿಲು ತೆರೆದವು. ಆಗಸದ ನೀಲಿಮೈ ಅವರನ್ನು ಸ್ವಾಗತಿಸಿತು. ಯಮುನೆಯ ದಡದಲ್ಲಿ, ತಮಾಲವೃಕ್ಷದ ಕೆಳಗೆ ಮೋಡದ ಒಂದು ತುಂಡೆಂಬಂತೆ ಕೃಷ್ಣ ಕುಳಿತಿದ್ದ. ಕೊಳಲನ್ನು ತುಟಿಗೆ ಹಚ್ಚಿದ್ದ. ಗೋಪಿಕೆಯರು ಅಲ್ಲಿಗೆ ಧಾವಿಸಿದರು. ಕೃಷ್ಣನಿಗೆ ಅಚ್ಚರಿಯಾಯಿತಂತೆ. ಏಕೆ ಬಂದಿರಿ ಇಲ್ಲಿಗೆ? ಎಂದ. ಇರುಳು ಘೋರವಾಗಿದೆ ಎಂದ. `ಪ್ರತಿಯಾತ ವ್ರಜಂ’ -ಮನೆಗೆ ಮರಳಿ ಎಂದ. ನಿಮ್ಮನ್ನು ನಿಮ್ಮ ಬಂಧುಗಳು ಹುಡುಕುವರು; ಅವರಿಗೆ ಮನೋವ್ಯಥೆಯುಂಟು ಮಾಡಬೇಡಿ ಎಂದ. ಹೋಗಲಿ; ಬಂದದ್ದಾಯಿತು; ಈ ಯಮುನೆ, ಬೀಸಿ ಬರುವ ತಂಗಾಳಿ; ಕಾಡು ಕಾಡಬೆಳದಿಂಗಳು ಎಲ್ಲ ನೋಡಿಯಾಯಿತಲ್ಲ, ಎಂದ. ಮಕ್ಕಳು ಹಾಲಿಗೆ ಅಳಬಹುದು ಎಂದ. ಕರುಗಳು ತಾಯಿ ಹಸುವಿನ ಬಳಿ ಬಿಡಬೇಕೆಂದು ಹಗ್ಗ ಜಗ್ಗಾಡುತ್ತಿರಬಹುದು ಎಂದ. ಸಂಸಾರದ ಶುಶ್ರೂಷೆ ನೀವಲ್ಲದೆ ಬೇರಾರು ಮಾಡಬೇಕು? ಎಂದ.

ಈ ಮಾತು ನಿನಗುಚಿತವೆ ಎಂದು ಗೋಪಿಕೆಯರು ತಿರುಗಿ ಕೇಳಿದರಂತೆ. ಕೊಳಲನ್ನು ಮತ್ತೆ ಬಿದಿರು ಮಾಡಲಿಕ್ಕಾಗುತ್ತ? ಕೊಳಲಿನಲ್ಲಿಯೇ ಒಮ್ಮೆ ನಾದವಾಗಿ ಹೊರಬಂದ ಉಸಿರು ಮತ್ತೆ ಉಸಿರಾಗಲಿಕ್ಕುಂಟ? ಕಡಲಿನ ಕಡೆಗೆ ಹರಿಯುವ ಹೊಳೆಯನ್ನು ಮತ್ತೆ ಹಿಂದೂಡಲುಂಟೆ? ಹಿಂದೆ ಹೋಗೆನ್ನದಿರು. ನಾವು ಎಲ್ಲರ ಶುಶ್ರೂಷೆ ಮಾಡಿದೆವು. ನಿನ್ನ ಶುಶ್ರೂಷೆ ಮಾಡುವುದು ಎಂದು? ಏನು ವಿಚಿತ್ರವಿದು! ಪತಿ-ಸುತ-ಸಂಸಾರದಲ್ಲಿಟ್ಟ ಪ್ರೀತಿ ದು:ಖಾನುವರ್ತಿಯಾಗಿದೆ. ಆ ಪ್ರೀತಿಯಲ್ಲಿ ದು:ಖದ ನೆರಳಿದೆ. ಏಕೋ ನಾವರಿಯೆವು. ನಿನ್ನ ವಿರಹವೂ ಆನಂದವನ್ನು ಕೊಡುತ್ತಿದೆ. ಅದೂ ಏಕೆಂದು ನಾವರಿಯೆವು. ನಿನ್ನನ್ನು ಬಿಟ್ಟು ಇನ್ನೊಬ್ಬರ ಮುಂದೆ ನಿಲ್ಲಲು ನಿಜಕ್ಕೂ ದುರ್ಬಲರಿದ್ದೇವೆ- ಎಂದರಂತೆ. ಗೋಪಿಕೆಯರ ಈ ಅನುಭವದಿಂದ `ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ! ಉಳಿದೆಲ್ಲ ಧರ್ಮಗಳ ಚಿಂತೆ ಮಾಡದೆ ನನ್ನ ಬಳಿ ಬರಲಾರೆಯೇನು- ಎಂದು ಕೃಷ್ಣ ತನ್ನ ಮಾತನ್ನು ತಾನು ಕಂಡುಕೊಂಡನಂತೆ.

ಹಾಗೆ ತೊಡಗಿತು ಮಹಾರಾಸ:

ಯಮುನೆಯ ತರಲ ತರಂಗಗಳ ಸೋಂಕಿನಿಂದ ಅಲುಗಾಡುತ್ತಿದ್ದ ಕಮಲ; ಕನ್ನೈದಿಲೆಗಳ ಪರಿಮಳದ ಗಾಳಿಯಿಂದ ಕೂಡಿದ್ದ ತೀರದ ಶೀತಲ ಪುಲಿನ ವಿಸ್ತಾರದಲ್ಲಿ, ಚಂದ್ರಿಕೆಯ ಬೆಳಗಿನಲ್ಲಿ; ತಮಾಲವನದ ಸಾಕ್ಷಿಯಲ್ಲಿ ಮಹಾರಾಸತೊಡಗಿತು. ಕೃಷ್ಣ ಶಿಶುವನ್ನು ಹೊತ್ತ ವಸುದೇವನಿಗೆ ಗೋಕುಲಕ್ಕೆ ತೆರಳಲು ದಾರಿ ಕೊಡುವುದಕ್ಕಾಗಿ ತನ್ನನ್ನು ತಾನು ಇಬ್ಬಾಗ ಮಾಡಿಕೊಂಡ ಯಮುನೆ ತಾನು ಇಬ್ಬಾಗವಾಗಬಲ್ಲೆನೆಂದೇ ಮರೆತು ಮೊದಲ ಬಾರಿಗೆ ಅಖಂಡವಾಗಿ ಕೃಷ್ಣ ರಾಸಕ್ಕೆ ಸಾಕ್ಷಿಯಾದಳಂತೆ. ಪ್ರಕೃತಿಯಿಂದಲೇ ಎಲ್ಲ ಇಬ್ಬಗೆಯೂ ತೊಲಗಿತಂತೆ! ಅಖಂಡೈಕರಸ! ತಮ್ಮ ವಂಶದ ಕುಡಿಯೊಂದು ಕೃಷ್ಣನ ಉಸಿರನ್ನು ಉಂಡು ಚಿಗುರುತ್ತಿದೆ ಎಂದು ಬಿದಿರು ಮೆಳೆಗಳು ತಾವು ಧನ್ಯರಾದೆವೆಂದುಕೊಂಡವಂತೆ. ಕುಣಿಯುವ ನೀರಿನ ಗರಿಚಾಮರದ ಕೆಳಗೆ ಕೃಷ್ಣನ ಮುಖ ಮೂಡಿದುವಂತೆ. ಸದಾ ಕರೆಯುವ ಕರೆದೇ ಗೊತ್ತಿರುವ ಕೋಗಿಲೆ ಓಗೊಡಲು ಶುರು ಮಾಡಿತಂತೆ. ಹಣ್ಣು ಹಳದಿಯಾಗಿ ಬೀಳುವ ಎಲೆಗಳಲ್ಲಿ ಪೀತಾಂಬರದ ನೆರಿಗೆಗಳು ಮೂಡಿದುವಂತೆ. ನಸುನೀಲಿಯ ಮೋಡಗಳು ಕೆಳಗಿಳಿದುವಂತೆ. ಗೋಪಿಕೆಯರು ಮೋಡಗಳಲ್ಲಿ ತೇಲಿದರಂತೆ. ಬಾನು ನೆಲ ತಬ್ಬಿತು. ಮಣ್ಣಿಗೆ ಜುಮ್ಮುದಟ್ಟಿತು. `ಬೆಳ್ಳಂಬೆಳಕಿನಲ್ಲಿ ಬಿಳಿ ಹಾಯಿಗಳು ಪರದಾಡಿದವು’. ರಾಜ ಹಂಸಗಳು ಹಾಲ್ಗಡಲ ಬಗೆದೊಲೆದವು! ಹೀಗೆ ತೊಡಗಿತು ಮಹಾರಾಸ.

ಯಮುನೆಯಲ್ಲಿ ಆಳದ ಮೀನುಗಳು ಮೇಲಿನ ನೀರಿಗೆ ಬಂದವು. ಕೃಷ್ಣ-ಗೋಪಿಕೆಯರ ರಾಸನೃತ್ಯ ಆ ನೀರಿನಲ್ಲಿ ಪ್ರತಿಫಲಿಸಿ ನೀರಿನ ಜೀವಗಳು ಆ ನೃತ್ಯದಲ್ಲಿ ಬೆರೆತವು. ಗೂಡಿನಲ್ಲಿ ಮಲಗಿದ್ದ ಹಕ್ಕಿಗಳಿಗೆ ಸುಖ ಸ್ವಪ್ನ ಕಚ್ಚಿದವು. ಗಿಡ ಮರಗಳ ನಿಲುವು ತ್ರಿಭಂಗಿಯಲ್ಲಿ ನಿಂತ ಕೃಷ್ಣನ ನಿಲುವಾಗಿ ಬದಲಾಗಿ ಬಿಟ್ಟಿತು. ಶಬ್ದವು ಒಂದು ಬೆಳಕಾದುದರಿಂದ, ಕೊಳಲಿನ ನಾದದ ಒಂದೊಂದು ಅಲೆಯೂ ಬೆಳದಿಂಗಳ ಒಂದೊಂದು ಎಳೆಯೊಡನೆ ಬೆರೆತು, ಚಂದ್ರನಿಂದ ನಾದ ಬಂದಂತೆ, ಕೃಷ್ಣನಿಂದ ಬೆಳದಿಂಗಳು ಸೂಸುತ್ತಿತ್ತು. ಹೀಗೆ ತೊಡಗಿತು ಮಹಾರಾಸ.

ಈ ಪರಿಯ ಸೊಬಗು ಇನ್ನಾವ ದೇವರಿಗುಂಟು ಗೋಪೀ ಜನಪ್ರಿಯ ಗೋಪಾಲಗಲ್ಲದೆ!

ತೋಳ್ಪಾಡಿ ಭಾಗವತ 25:ಹೇಳದ ಹುಡುಗಿಯ ಹೆಸರೇನು?

ವೃಂದಾವನದಲ್ಲಿ ಕೃಷ ಗೋಪೀ ನೃತ್ಯರಾಸ.ಅಹಂಕಾರ ನಿರಸನಗೊಂಡಂತೆ, ಮನದ ಜಡಭಾರ ಕಳೆದಂತೆ, ಮೈಗೆ ಕುಣಿಯುವ ಚೈತನ್ಯ. ಕುಣಿಯುವ ಆವೇಶ. ಕುಣಿತವು ಮೈಯ ಸಾಧ್ಯತೆ!  ಮೈಯಲ್ಲಿ ತಂಗಿರುವ ಪ್ರಾಣಶಕ್ತಿಗೆ ತಂತ್ರಶಾಸ್ತ್ರದಲ್ಲಿ ‘ಕುಂಡಲಿನಿ’ ಎನ್ನುವುದುಂಟು. ‘ಶಕ್ತಿ’ ಎಂದರೆ, ಚಲನೆ. ‘ಪ್ರಾಣ’ ಪದದ ಅರ್ಥವೂ ಚಲನೆ ಎಂದೇ. ನೃತ್ಯವೆಂದರೆ, ಚಲನೆಯ ಅಂತಿಮ; ಪರಾ- ಅವಸ್ಥೆ. ಪರಾ- ಶಕ್ತಿ!

ಮಲಗಿಕೊಂಡು ಅರೆಗಣ್ಣಾಗಿ ದೇವರ ನಾಮವನ್ನು ಪ್ರೀತಿಯಿಂದ ಗುನುಗುತ್ತಿದ್ದನಂತೆ ಓರ್ವ ಹಾಡುಗ- ದಾಸ. ಪಕ್ಕದಲ್ಲಿ ಯಾರೋ ಇದ್ದಂತೆ ಅನ್ನಿಸಿತು. ನೋಡುತ್ತಾನೆ- ದೇವರು ಚಕ್ಕಳ ಮಕ್ಕಳ ಹಾಕಿ ಕೂತು ಹಾಡು ಕೇಳುತ್ತಿದ್ದಾನೆ; ತನ್ನಂತೆ ಅರೆಗಣ್ಣಾಗಿ. ಓ ದೇವರೇ ಎಂದುಕೊಂಡು ದಾಸ ಎದ್ದು ಕೂತ. ಈಗ ಹಾಡು ಅವನ ನಾಭಿಯಿಂದ ಹರಿದು ಬಂತು. ಹಾಡಿದ. ನೋಡಿದ. ದೇವರು ಉಲ್ಲಾಸದಲ್ಲಿ ಎದ್ದು ನಿಂತು ಬಿಟ್ಟಿದ್ದಾನೆ. ಭಕ್ತನೂ ಹಾಡುತ್ತಲೇ ಎದ್ದು ನಿಂತ. ನಿಂತು ಹಾಡುವ ಸಂತಸವೇ ಬೇರೆ. ಅಲ್ಲಿ ಮೈಗೆ ಇನ್ನಷ್ಟು ಬಿಡುವು. ಬಿಡುಗಡೆ. ಆಗ ದೇವರು ಕುಣಿಯುವುದಕ್ಕೆ ತೊಡಗಿದನಂತೆ! ಹರಿಕುಣಿದ- ನಮ್ಮ ಹರಿ ಕುಣಿದ. ಅಲ್ಲಿಗೆ, ಭಕ್ತನ ಮೈ ಕೂಡ ತೊನೆದಾಡಿತು- ನಲಿವಿನಲ್ಲಿ. ನಲಿವು ಎಂಬ ಪದ ಕುಣಿತ ಮತ್ತು ಹಿಗ್ಗು ಎನ್ನುವ ಎರಡು ಅರ್ಥಗಳಲ್ಲೂ ಕೃತಾರ್ಥವಾದ ಪದ. ಸುಲಭನೋ ಹರಿ, ನಲಿದರೆ ಒಲಿವನೋ -ಎಂದು ದಾಸನ ಹಾಡು.

ದೇವರು, ಮನುಷ್ಯನಿಗಿಂತ ಒಂದು ಹೆಜ್ಜೆ ಮುಂದಿರುತ್ತಾನಂತೆ. ಒಂದೇ ಹೆಜ್ಜೆ! ಹೆಜ್ಜೆ ಮುಂದೆ ಎನ್ನುವುದೇ ಕುಣಿತದ ಕಡೆಗೆ ನಡೆದಂತೆ. ಬೇಡೆನೊಡನೆಯೆ ಸಾಕು ನನಗೊಂದು ಹೆಜ್ಜೆ -ಎಂದು ಒಂದು ಹೆಜ್ಜೆಯ ಸಹಾಯಕ್ಕಾಗಿ ಮಾತ್ರ ಹಂಬಲಿಸಿದವನಿಗೆ ದೇವರ ಕೈ ಹಿಡಿದು ಕುಣಿಯುವ ಕನಸು ಬಿದ್ದಿರಬೇಕು!

ಒಂದು ಹೆಜ್ಜೆ ಮುಂದೆ. ಇನ್ನು ಹಿಂದೆ ಬರಲಾರೆವು ಎನ್ನಿಸಿತು ಗೋಪಿಕೆಯರಿಗೆ. ಒಂದು ಹೆಜ್ಜೆ ಏನೋ ನಿಜ. ಆದರೆ ಅದು ಸಾವಿರ ಹೆಜ್ಜೆ, ಸಾವಿರ ಕಾಲು ಎನ್ನುವುದೂ ನಿಜ. ಇದು ನೃತ್ಯದಲ್ಲಿ ನಿಜ.  ನೃತ್ಯವೆಂದರೆ, ಮೈಯ ವಿಶ್ವರೂಪ. ಮೈಯ ಸಾಕ್ಷಾತ್ಕಾರ. ಮೈಗೆ ಸಾವಿರ ಬಗೆಯ ಬಾಗು- ಬಳುಕು.  ಎಲ್ಲೆಲ್ಲೂ ಮೈ ಎಂದಂತೆ! ಅನಂತ ಅನಂಗ ಅಭಂಗ ಅಂಗ ಭಂಗಿ! ದೇವರಿಗೆ ಸಾವಿರ ಕಾಲು- ಸಹಸ್ರಪಾತ- ಎಂದು ವೇದ ಬಣ್ಣಿಸುವುದರ ನಿಜ, ರಾಸ ನೃತ್ಯದ ರಸಾನುಭವವಾಗಿ ಗೋಪಿಕೆಯರಲ್ಲಿ ಪರಿಣತವಾಯಿತು.

ಕೃಷ್ಣನ ಜತೆ ತಾವು ನಲಿಯುತ್ತಿದ್ದಂತೆ ಗೋಪಿಕೆಯರು ನೆನೆದರು. ಹಕ್ಕಿಗಳಲ್ಲಿ ನವಿಲು; ಉರಗಗಳಲ್ಲಿ ಹಾವು, ನೃತ್ಯಕ್ಕೆ ಒಲಿದ; ನಲಿಯುವ ಜೀವಿಗಳು. ಹೋ! ಬರಿಯ ಚಂದಕ್ಕಲ್ಲ ಈ ಕೃಷ್ಣ ನವಿಲುಗರಿ ತಲೆಯಲ್ಲಿ ಮುಡಿದದ್ದು. ಮಳೆಗರೆವ ಕಪ್ಪು ಮೋಡಗಳನ್ನು ಕಂಡಾಗ ನವಿಲು, ಗರಿಕೆದರಿ ಹುಚ್ಚು ಸಂತಸದಿಂದ ಕುಣಿಯುವಂತೆ ನೀಲ ಮೋಡದ ಮೈಯ ಈ ಶ್ಯಾಮಲ ಕೃಷ್ಣ ನವಿಲಂತೆ ಕುಣಿಯ ಬಲ್ಲ. ಮೋಡ, ನವಿಲಗರಿ- ಎರಡೂ ಅವನ ಮೈಯ ಸೊಗಸಿನ ಭಾಗವಾಗಿದೆ. ಆದರೂ ತಾನು ಮೋಡದಂತಿರುವವನು ನವಿಲಗರಿಯನ್ನೇಕೆ ತಲೆಯಲ್ಲಿ ಮುಡಿದ? ಹೊಳೆಯಲಿಲ್ಲ ಗೋಪಿಕೆಯರಿಗೆ.  ಅಲ್ಲೇ ತಪ್ಪಾಯಿತೇನೋ.

ತಂತ್ರದಲ್ಲಿ ಪ್ರಾಣಶಕ್ತಿಗೆ ಕುಂಡಲಿನಿ ಎನ್ನುತ್ತಾರೆ. ಕುಂಡಲಿನಿ ಎಂದರೆ, ‘ಹಾವು’ ಎಂದೂ ಅರ್ಥ. ಸಿಂಬಿಸುತ್ತಿ, ಕುಂಡಲದಂತೆ ಮಲಗುತ್ತೆ- ಅದು ಕುಂಡಲಿ. ಹಾವು. ಎಚ್ಚರವಾದರೆ, ಅದರ ಕುಂಡಲಿ ಬಿಚ್ಚಿಕೊಳ್ಳುತ್ತೆ. ಆಗ ಅದಕ್ಕೇ ಅದರ ಮೈಯ ಸಾಕ್ಷಾತ್ಕಾರವಾಗುತ್ತೆ. ಸಿಂಬಿಸುತ್ತಿ ಮಲಗಿರುವಾಗ- ಅಹಂಕಾರ, ಮದ, ಅಜಾಗ್ರತೆ. ಅಹಂಕಾರ ಎಂದರೆ, ಅಜಾಗ್ರತ ಸರೀಸೃಪ!

ಯಮುನೆಯ ಮಡುವಿನಲ್ಲಿದ್ದ ಕಾಳಿಂಗನಂತೆ. ಕಾಳಿಂಗ ಯಮುನೆಯೇ ತನ್ನದೆಂದುಕೊಂಡಿದ್ದ. ಯಮುನೆಯನ್ನೇ ಸಿಂಬಿಸುತ್ತಿ ಇಟ್ಟು ಬಿಟ್ಟಿದ್ದ! ಕಾಳಿಂಗನೆಂದರೆ ಕಪ್ಪು. ಅದೂ ಕೃಷ್ಣನ ಬಣ್ಣವೇ. ಗೋಪಿಕೆಯರು ಬಿಟ್ಟ ಕಣ್ಣುಗಳಿಂದ ಕೃಷ್ಣನನ್ನು ನೋಡುತ್ತಿದ್ದರು. ಇವನದು ಕಾಳಿಂಗನ ಬಣ್ಣ ಎಂದು ಯಾರಿಗೋ ಹೊಳೆಯಿತು. ತಾವು ಕೃಷ್ಣನ ಮೂಲಕ ಕಾಳಿಂಗನನ್ನು ನೆನೆಯುತ್ತಿದ್ದೇವೆ ಎಂದು ಆಕ್ಷಣಕ್ಕೆ ತಿಳಿಯದೆ ಹೋಯಿತು. ಅದೇ ತಪ್ಪಾಯಿತೇನೋ.

‘ಮೈ’ ಒಂದು ವೀಣೆ ಎನ್ನುತ್ತೆ ಉಪನಿಷದೈತರೇಯ. ಅಂದರೆ ದೇವರು ಮಹಾ ವೈಣಿಕ ಎಂದಂತೆ. ವೀಣೆ ತನ್ನನ್ನು ತಾನು ವೈಣಿಕನ ಕೈಗಳಲ್ಲಿ ಒಪ್ಪಿಸಬೇಕು. ವೈಣಿಕ ಅದನ್ನು ತನ್ನ ಮಡಿಲಲ್ಲಿ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುವುದೆಂದರೂ ಅದು ತನ್ನನ್ನು ಒಪ್ಪಿಸಿಕೊಂಡಂತೆಯೇ. ಆಗಲೇ ಬೆರಳಿಗೆ ಮಿಡಿಯುವ ಶಕ್ತಿ. ಈ ಪರಸ್ಪರ ಒಪ್ಪಿಗೆಯಲ್ಲಿ ಎಲ್ಲಿ ಕೊಂಚ ನಲುಗಿದರೂ ಮರೆಯಾದ ಅಹಂಕಾರ ತನ್ನ ಹಾಜರಿ ತೋರುವುದು. ಅಲ್ಲಿಗೆ ಶ್ರುತಿ ಭಂಗವಾಗುವುದು.

ಇನ್ನು ಹಿಂದೆ ಬರಲಾರೆವು ಎನ್ನಿಸುತ್ತಿತ್ತು ಗೋಪಿಕೆಯರಿಗೆ. ಆದರೆ, ಹಿಂದೆ ಬಿಟ್ಟ ಸಂಸಾರ; ಮರೆಯಲ್ಲಿ ಅವರನ್ನು ಹಿಂಬಾಲಿಸುತ್ತಿತ್ತು. ಏನಾಗಿ ಬಿಟ್ಟಿತೆಂದರೆ- ಕೃಷ್ಣನೊಡನೆ ಕುಣಿಯುತ್ತಿದ್ದಂತೆ ಒಂದು ಕ್ಷಣ. ಒಂದೇ ಒಂದು ಕ್ಷಣ ಗೋಪಿಕೆಯರಿಗೆ ಅನ್ನಿಸಿತು. ತಮ್ಮ ‘ಮೈ’ ತಮ್ಮ ವಶದಲ್ಲಿದೆ. ತಾವು ಬಯಸಿದಂತೆ ಮೈ ಬಳುಕುತ್ತಿದೆ.  ತಮ್ಮ ಮೈ ಬಳುಕಿದಂತೆ ಕೃಷ್ಣನೂ ಅವನೊಂದು ಕನ್ನಡಿ ಎಂಬಂತೆ ಬಳುಕುತ್ತಿದ್ದಾನೆ.  ಅಂದರೆ? ಹೋ! ಇವನು ತಮ್ಮ ಮೈಯ ವಶವಾಗಿದಾನೆ. ತಮ್ಮ ಅಧೀನವಾಗಿದಾನೆ. ಇವನಿಗೆ ತಮ್ಮ ‘ರುಚಿ’ ಗುರುತಾಗಿದೆ. ಇನ್ನು ತಾವು ಇವನನ್ನು ಬೇಕೆಂದಂತೆ ಕುಣಿಸಬಲ್ಲೆವು. ಲೋಕದಲ್ಲಿ ಕೃಷ್ಣನನ್ನು ಕುಣಿಸಬಲ್ಲ ಯೋಗ್ಯತೆ ತಮಗಲ್ಲದೆ ಬೇರಾರಿಗಿದೆ? ಆತ್ಮಾನಂ ಮೇನಿರೇ ಸ್ತ್ರೀಣಾಂ ಮಾನಿನ್ಯೋ ಅಭ್ಯಧಿಕಂ ಭುವಿ!.

ಒಮ್ಮೆಲೇ ಹುಣ್ಣಿಮೆಯ ಚಂದ್ರ ಮಂಕಾದನಂತೆ. ಕೊಳಲಲ್ಲಿ ನಿಟ್ಟುಸಿರು ಸೂಸಿತಂತೆ. ಯಮುನೆಯ ನೀರು ಕದಡಿತಂತೆ. ಹಟ್ಟಿಯ ಹಸುಗಳು ಯಾರೋ ಕಲ್ಲೆಸೆದರೆಂಬಂತೆ ಮೈ ಅಲುಗಿಸುತ್ತ ಒಂದು ಮತ್ತೊಂದನ್ನು ತಿವಿದುವಂತೆ. ಗೊಲ್ಲರಿಗೆ ಇದ್ದಕ್ಕಿದ್ದಂತೆ ಹಳ್ಳಿಯ ಬಾಳು ಸಾಕೆನಿಸಿ, ಮಥುರೆಯ ಕನಸು ಕಟ್ಟಿತಂತೆ. ಮಥುರೆಯ ಅರಮನೆಯಲ್ಲಿ ಚಿಂತಾಕ್ರಾಂತನಾಗಿ ಮಲಗಿದ್ದ ಕಂಸನಿಗೆ, ಇನ್ನು ಕೃಷ್ಣನನ್ನು ಮಥುರೆಗೇ ಕರೆಯಿಸಿ, ಅಲ್ಲೇ ಅವನನ್ನು ಹೊಡೆಯಬೇಕು ಎಂಬ ಯೋಚನೆ ಹೊಳೆಯಿತಂತೆ!

ಗೋಪಿಕೆಯರು ಕುಣಿಯುತ್ತ ತಮ್ಮ ಒಂದು ತೋಳಿನಲ್ಲಿ ಕೃಷ್ಣನನ್ನು ಹಿಡಿದಿದ್ದರು. ಅವರ ಇನ್ನೊಂದು ತೋಳನ್ನು ಕೃಷ್ಣ ಹಿಡಿದುಕೊಂಡಿದ್ದ. ಯಾವಾಗ, ಕೃಷ್ಣ ತಮ್ಮ ವಶ ಎಂಬ ಭಾವ ಗೋಪಿಕೆಯರ ಮನವನ್ನು ಹೊಕ್ಕಿತು ಆಗ ತನ್ನನ್ನು ಹಿಡಿದ ತೋಳಿನಿಂದ ಕೃಷ್ಣ ಜಗುಳಿ ನಿಂತಂತಾಯಿತು. ಅವನು ಹಿಡಿದುಕೊಂಡಿದ್ದ ತೋಳು ಅಷ್ಟು ಹೊತ್ತು ಅವನ ಸ್ಪರ್ಶದಲ್ಲೇ ಇತ್ತು. ಕ್ಷಣಗಳುರುಳಿದಂತೆ. ಅದೂ ಜಗುಳಿತು. ತಾಳದ ಆವರ್ತನವೊಂದು ಮುಕ್ತಾಯದ ಮುನ್ನ ನಡುವೆಯೇ ಸ್ಥಗಿತವಾಯಿತು. ಲಯ ಭಂಗವಾಯಿತು. ನೃತ್ಯದ ಹೆಜ್ಜೆ ಒಜ್ಜೆಯಾಗಿ ಇನ್ನು ಕುಣಿಯಲಾರೆನೆಂದಿತು. ‘ಕಾಲಿಗೆ ಗೆಜ್ಜೆಯೇ ಭಾರವಾಗಿ ಬಿಟ್ಟಿತು. ಇದೇನಾಯಿತೆಂದು ಗೋಪಿಕೆಯರು ನೋಡುತ್ತಾರೆ: ರಂಗ ನಿರ್ಜನವಾದಂತೆ ಇದೆ. ಯಾರೋ ಚಪ್ಪರ ಕೀಳುತ್ತಿರುವಂತಿದೆ. ಏನು ನೋಡೋದು ಈ ನಾಟಕ ಎಂದು ಗೊಣಗುತ್ತ ಹೋಗುತ್ತಿರುವ ಮಂದಿಯ ಮಾತುಗಳು ದೂರದಿಂದ ಕೇಳಿ ಬರುತ್ತಿರುವಂತಿದೆ. ಗಾಳಿ ಬೀಸುತ್ತಿಲ್ಲ, ನವಿಲಗರಿ ಗಾಳಿಗೆ ಒಲೆಯುತ್ತಿಲ್ಲ. ಕೊಳಲ ಇಂಚರವಿಲ್ಲ. ಕೃಷ್ಣ ಕಾಣುತ್ತಿಲ್ಲ. ಪರ್ಯಾಯ ಲೋಕ ಮುರಿದು ಬಿದ್ದು ಅದರ ಅವಶೇಷಗಳ ನಡುವೆ ತಾವು ಅನಾಥರಾಗಿ ನಿಂತಿರುವಂತಿದೆ. ಗೋಪಿಕೆಯರಿಗೆ ಈಗ ನಿಜಕ್ಕೂ ವಸ್ತ್ರಾಪಹಾರವಾದಂತೆ ಅನ್ನಿಸಿತು. ಅವರ ಎದೆಯೊಡೆಯಿತು. ದಾರಿ ಕಾಣದಾಯಿತು. ಕೃಷ್ಣನನ್ನು ಹುಡುಕಾಡಲು ತೊಡಗಿದರು. ನೋಡಿದಲ್ಲೆಲ್ಲ ಮತ್ತೊಬ್ಬ ಗೋಪಿಕೆಯ ಕಣ್ಣನೋಟ ಸಂಧಿಸುತ್ತಿತ್ತು.  ಇವನು ನಮ್ಮ ವಶವಾಗಿದಾನೆ ಎಂದು ಭಾವಿಸಿದ್ದುದು ಎಂಥ ಕೇಡು ಅನ್ನುತ್ತಿತ್ತು ಆ ನೋಟ. ಮೋಡ, ಮೇಲೆ ಎತ್ತರದಲ್ಲಿದೆ. ನವಿಲು ಕೆಳಗಿದೆ. ಆದರೂ ಮೋಡದ ಮೈ ಬಣ್ಣದ ನಮ್ಮ ಕೃಷ್ಣ ನವಿಲಗರಿಯನ್ನು ತಲೆಯ ಮೇಲೆ ಹೊತ್ತಿದ್ದಾನೆ. ಪುರುಷ ಪ್ರಕೃತಿಯನ್ನು ಹೊತ್ತಿದ್ದಾನೆ! ನಮಗೆ ತಿಳಿಯದೆ ಹೋಯಿತು.

ನಾವು ಮನೆ ಬಿಟ್ಟು ಅವನ ಬಳಿ ಬಂದಾಗ, ಇಲ್ಲೇಕೆ ಬಂದಿರಿ; ಮನೆಗೆ ಹಿಂತಿರುಗಿರಿ ಎಂದಿದ್ದನಲ್ಲ. ಈಗ ತಿಳಿಯುತ್ತಿದೆ: ನಾವು ಅವನ ಬಳಿ ಬಂದು ನಿಲ್ಲುವ ಯೋಗ್ಯತೆ ಹೊತ್ತು ಬಂದಿರಲಿಲ್ಲವೆಂದು. ಆದರೂ ನಮ್ಮಂಥವರ ಜತೆ ಕೈ ಜೋಡಿಸಿ, ಕುಣಿದ. ನಾಕಲೋಕದ ಸೀಮೆಯಾಚೆಯ ನಲಿವನ್ನು ಉಣ್ಣಿಸಿದ. ಅಂಥವನು ಈಗ ಮರೆಯಾಗಿದ್ದಾನೆ. ಗೋಪಿಕೆಯರಿಗೆ ಹೊಳೆಯಿತು. ನಾವು ಅಹಂಕಾರದಿಂದ ಕುರುಡರಾಗಿದ್ದೇವೆ. ಅವನಿಗೆ ಕಾಣಿಸಬೇಕೆಂದಿದ್ದರೂ ದೇವರು ನಮಗೆ ಕಾಣಿಸೋದು ಹೇಗೆ? ಗೊಲ್ಲ ಹೆಣ್ಣುಗಳು ಕರುಕಳೆದ ಹಸುವಿನಂತೆ ಆರ್ತರಾದರು.

ಅಹಂಕಾರದ ಬಿಗಿತ ಕಳೆಯದೆ ಮೈ ಕುಣಿಯಲಾರದು. ಹಾಗೆಯೇ, ಅಹಂಕಾರದ ಬಿಗಿತ ಕಳೆಯದೆ ಅಂತ:ಕರಣ ಯಾವುದನ್ನೂ ಹುಡುಕಲಾರದು. ಅಹಂಕಾರವಿದ್ದಾಗ ತಮಗೆ ಬೇಕೆನಿಸಿದುದನ್ನು ಪಡೆಯುವ ಧಾವಂತ. ಅದಕ್ಕಾಗಿ ಸ್ಪರ್ಧೆ. ಇದು ಬೇರೇನೋ ಆಗಿರಬಹುದು. ಆದರೆ, ಸತ್ಯದ ಹುಡುಕಾಟವಂತೂ ಅಲ್ಲ. ತನ್ನನ್ನು ಮರೆಯದೆ ಇನ್ನೊಂದನ್ನು ಹುಡುಕೋದು ಹೇಗೆ ತಾನೇ ಸಾಧ್ಯ? ಹುಡುಕೋದು ಎನ್ನುವಾಗಲೇ ಒಮ್ಮೆ ಸಿಕ್ಕಿತ್ತು. ಈಗ ಕಳೆದು ಹೋಗಿದೆ, ಹುಡುಕಿದರೆ, ಮರಳಿ ಸಿಗಬಹುದು ಎಂಬ ಧ್ವನಿ ಇದೆ. ಅಂತ:ಕರಣದ ಈ ಹುಡುಕಾಟವನ್ನು ‘ಜಿಜ್ಞಾಸಾ’ ಎಂಬ ಇನ್ನೊಂದು ಪದದಿಂದ ಕರೆಯುತ್ತದೆ ವೇದಾಂತ ಸೂತ್ರ.

ಗೋಪಿಕೆಯರಲ್ಲಿ ಇಂಥದೊಂದು ಹುಡುಕಾಟ; ಇಂಥದೊಂದು ಸೃಜನಶೀಲ ಸಂದರ್ಭ ಸಂಭವಿಸಿಬಿಟ್ಟಿತು. ಇದೊಂದು ಆಧ್ಯಾತ್ಮಿಕ ಕ್ರಾಂತಿ. ಕ್ರಾಂತಿ ಹೇಗೆಂದರೆ- ನಿತ್ಯ ಪರಿವರ್ತನಶೀಲವಾದ, ಸಾವಿರ ಕಾಲುಗಳಲ್ಲಿ ನಡೆಯುವ, ನಿತ್ಯ ಬಹುವಾಗುವ ಈ ಪ್ರಕೃತಿಯಲ್ಲಿ; ಈ ಬದುಕಿನಲ್ಲಿ ಬದಲಾಗದೆ ಇರೋದು ಇದ್ದರೆ ಅದಾವುದು ಎಂಬ ಹುಡುಕಾಟವಿದಾದುದರಿಂದ. ಅದು ಈಗ ಮರೆಯಾಗಿದೆ ಎಂದರೂ ಅದು ನಮ್ಮನ್ನು ಹುಡುಕುತ್ತಲೂ ಇದೆ. ಅದು ಹುಡುಕುತ್ತಿರುವುದರಿಂದಲೇ ಅದನ್ನು ಹುಡುಕುವ ಪ್ರೇರಣೆ ನಮ್ಮಲ್ಲಿ ಉಂಟಾಗಿರೋದು. ಆದುದರಿಂದಲೇ ದೇವರಿಗೆ ಸಂಬಂಧಪಟ್ಟ ಎಲ್ಲ ನಡೆಯೂ ಪರಸ್ಪರ. ದ್ವಿಮುಖ. ದ್ವಿ -ಕೇಂದ್ರಿತ. ಸಂಸಾರದ ನಡೆ ಸ್ವಕೇಂದ್ರಿತ. ಆದುದರಿಂದಲೇ ಏಕ ಮುಖ. ಈ ಅರ್ಥದಲ್ಲಿಯೂ ಅಧ್ಯಾತ್ಮದ ನಡೆ ಕ್ರಾಂತಿಕಾರಕ. ಅದು ಮರೆಯಾಗಿದೆ. ನಾವು ಪ್ರಕಟವಾಗಿದ್ದೇವೆ. ನಾವು ಮರೆಯಾದರೆ ಅದು ಪ್ರಕಟವಾಗಬಹುದು. ನಾವು ಬುದ್ಧಿಪೂರ್ವಕವಾಗಿ ಮರೆಯಾಗಲಾರೆವು. ಅಂದರೆ, ಅದನ್ನು ಬುದ್ಧಿಪೂರ್ವಕವಾಗಿ ಕಂಡು ಹಿಡಿದು ಪ್ರಕಟಗೊಳಿಸಲಾರೆವು. ಅದಕ್ಕೆ ಬುದ್ಧಿಪೂರ್ವಕವಾಗಿ ಪ್ರಕಟವಾಗುವ ಉತ್ಸಾಹವಿದ್ದಂತಿಲ್ಲ; ನಮಗಿರುವಂತೆ. ರಂಗವನ್ನು ನಾವಾಗಿ ತೆರವುಗೊಳಿಸದೆ ಅದು ರಂಗಕ್ಕೆ ಬರಲಾರದು. ಏಕೆಂದರೆ, ಅದಕ್ಕೆ ರಂಗ-ಅಂತರಂಗ ಬೇರೆಯಲ್ಲ. ನಾವು ಮರೆಯಾಗುವುದೆಂದರೆ ಅದಕ್ಕಾಗಿ ನಿಜಕ್ಕೂ ಹಂಬಲಿಸುವುದು.

ಗೋಪಿಕೆಯರಲ್ಲಿ ಕೃಷ್ಣನಿಗಾಗಿ ಇಂಥ ಹೃದಯ ಕರಗುವ, ಎಲ್ಲವನ್ನೂ ತೆರವುಗೊಳಿಸಬಲ್ಲ ಹಂಬಲ ಹುಟ್ಟಿಕೊಂಡಿತು.

ವೃಂದಾವನದಲ್ಲಿ ಅವರು ಎಲ್ಲವನ್ನೂ ಮಾತನಾಡಿಸುವರು. ಕೃಷ್ಣನ ಹೆಜ್ಜೆಯನ್ನು ಮುದ್ದಿಸಿದ ಹುಲ್ಲುಗರಿಕೆಯನ್ನು, ಕೃಷ್ಣನ ಉಸಿರು ಬೆರೆತ ಗಾಳಿಯನ್ನು, ಕೃಷ್ಣನ ಬಣ್ಣವನ್ನು ಹೋಲುವ ತಮಾಲವನ್ನು ಕೃಷ್ಣನ ಪಾದ ತೊಳೆವ ಯಮುನೆಯನ್ನು ಕೃಷ್ಣನನ್ನು ಕಂಡಿರೇ ಎಂದು ಕೇಳುವರು.

ಚಂದ್ರನನ್ನು, ಚಂದ್ರನೊಳಗೆ ತಣ್ಣಗೆ ಮಲಗಿರುವ ಮೊಲವನ್ನು, ಭೂಮಿಯನ್ನು, ನೀಲಾಗಸವನ್ನು ಕೇಳುವರು- ಕೃಷ್ಣನನ್ನು ಎಲ್ಲಿ ಬಚ್ಚಿಟ್ಟಿರಿ? ಗೋಪಿಕೆಯರು ಪರಸ್ಪರ ಕೇಳಿಕೊಳ್ಳುವರು- ಶ್ಯಾಮನಕುರುಹು ನಿನಗಾದರೂ ಸಿಕ್ಕಿತೇನೇ? ಹೀಗೆ ಕೇಳುತ್ತಲೇ ಹೀಗೆ ಅಳುತ್ತಲೇ ಎಲ್ಲಿಯೂ ಕೃಷ್ಣನಿಲ್ಲವೆಂದು ಘೋರ ನಿರಾಸೆಗೆ ಒಳಗಾಗುತ್ತಲೇ, ಎಲ್ಲೆಡೆ ಕೃಷ್ಣನ ನೆನಪಿನ ದೀಪ ಉರಿಸಿದರು. ಎಲ್ಲವನ್ನೂ ಕೃಷ್ಣರಂಗವಾಗಿ ಮಾಡಿಬಿಟ್ಟರು. ಈ ಸಂದರ್ಭದಲ್ಲಿ ಗೋಪಿಕೆಯರ ಹೃದಯದಿಂದ ಹೊಮ್ಮಿದ್ದು ಗೋಪೀಗೀತವೆಂದೇ ಹೆಸರಾದ ಅತಿಮಧುರ ಗೀತಗುಚ್ಛ. ನೀನು ಗೊಲ್ಲರ ಹುಡುಗನಲ್ಲವಂತೆ. ಜ್ಞಾನಿಗಳಾದ ಮಂದಿ ನಿನ್ನನ್ನು ಪ್ರಾರ್ಥಿಸಿ ಜಗದುದ್ಧಾರಕನಾಗಿ ಇಳೆಗಿಳಿದು ಬಂದವನಂತೆ ನೀನು. ಆದರೂ ಗೊಲ್ಲರ ನಡುವೆ ಹುಟ್ಟಿದೆಯಲ್ಲ; ಓ ನಮ್ಮ ಇಷ್ಟ ದೈವವೇ, ನಿನಗೆ ನಾವು ಮನಸೋತರೆ ಅದು ತಪ್ಪೇನು? ಎಂದು ಹಾಡುವರು. ನೀನೊಮ್ಮೆ ಕಂಡು ಬಿಟ್ಟರೆ ಸಾಕಪ್ಪ, ನಾವು ಬೇರೇನೂ ಬೇಡುವುದಿಲ್ಲ, ನಿನ್ನ ಸೇವೆಗೆ ನಿಂತ ವೇತನವಿಲ್ಲದ ಊಳಿಗದ ಹೆಣ್ಣುಗಳೆನ್ನುವರೊಮ್ಮೆ. ನಮ್ಮೆದೆಗಳ ಮೇಲೆ ನಿನ್ನ ಮೃದು ಪಾದಗಳನ್ನಿಡು; ಕಾಳಿಂಗನ ಹೆಡೆ ಮೆಟ್ಟಿ ಅವನ ಮುದಮುರಿದ ಪಾದಗಳಲ್ಲವೆ ಅದು ಎಂದು ಉತ್ಕಟವಾಗಿ ಕೇಳುವರೊಮ್ಮೆ. ತನ್ನ ತಲೆಯ ಮೇಲೆ ನಿನ್ನ ಪಾದವನ್ನಿಡು ಎಂದಿದ್ದನಂತೆ ಬಲಿ ಚಕ್ರವರ್ತಿ. ತಮ್ಮೆದೆಯ ಮೇಲೆ ಪಾದಗಳನ್ನಿಡು ಎಂದು ಹೊಳೆಯಿಸಿದ ಮೊದಲ ಕವಿಗಳು ಈ ಗೋಪಿಕೆಯರು! ಎಲ್ಲ ಕಟ್ಟುಗಳನ್ನೂ ಮುರಿದು ಅಥವಾ ಮುರಿಯುತ್ತಿದೇವೆಂದು ಗೊತ್ತೇ ಇಲ್ಲದೆ, ‘ಸುರತನಾಥ; ಎಂದು ಕೃಷ್ಣನನ್ನು ಕರೆದಿದ್ದಾರೆ ಗೋಪೀಗೀತದಲ್ಲಿ,  ಕೃಷ್ಣ ಎಲ್ಲ ಅವಸ್ಥೆಗಳಲ್ಲೂ ಮಗುವಿನ ಮುಗ್ಧತೆ ಕಳೆದುಕೊಂಡಿರಲಿಲ್ಲ. ಅದು ಜ್ಞಾನಿಯ ಲಕ್ಷಣವಂತೆ. ಹಾಗೆಯೇ ಎಲ್ಲ ಅವಸ್ಥೆಗಳಲ್ಲೂ ಕೃಷ್ಣ ತಾರುಣ್ಯದ ಉತ್ಸಾಹವನ್ನೂ ಕಳೆದುಕೊಂಡಿರಲಾರ. ಅವನು ಚಿರ ಬಾಲಕ. ಚಿರ ತರುಣ. ಮತ್ತು ಚಿರ ವೃದ್ಧ. ಎಲ್ಲ ಒಂದರೊಳಗೊಂದು ಬೆರೆತಿರುವುದೇ ಬದುಕಿನ ನಿಜವಾಗಿರುವಂತಿದೆ!

ಗೋಪಿಕೆಯರ ಪರೀಕ್ಷೆ ಇನ್ನೂ ಮುಗಿದಿರಲಿಲ್ಲ. ಹುಚ್ಚಿಯರಂತೆ ಹಾಡಿಕೊಳ್ಳುತ್ತ ವೃಂದವನದ ಮಣ್ಣಿನಲ್ಲಿ ಕೃಷ್ಣನ ಪದ ಚಿಹ್ನೆಯನ್ನು ಅವರು ಹುಡುಕುತ್ತಿದ್ದರು. ಇದ್ದಕಿದ್ದಂತೆ, ಸಣ್ಣ ಮಂಜಿನ ತೇವ ಬಿದ್ದ ಮಣ್ಣಿನಲ್ಲಿ ಕೃಷ್ಣನ ಹೆಜ್ಜೆ ಗುರುತು ಕಂಡು ಬಿಟ್ಟಿತು! ಧ್ವಜ- ಕಮಲ ಚಿಹ್ನೆಗಳಿರುವ ಅಂಗಾಲಿನ ಗುರುತು ಅದು ಆ ಗೊಲ್ಲರ ಹುಡುಗನದೇ ನಿಜ. ಗೋಪಿಕೆಯರಿಗೆ ರೋಮಾಂಚನವಾಯಿತು. ಅಚ್ಚರಿ ಎಂದರೆ, ಕೃಷ್ಣನ ಹೆಜ್ಜೆ ಗುರುತಿನ ಪಕ್ಕದಲ್ಲಿ ಇನ್ನೊಂದು ಪದ ಚಿಹ್ನೆ! ಅದು ಓರ್ವ ಯುವತಿಯದು. ಹೆಣ್ಣಿನ ಹೆಜ್ಜೆ ಹೆಣ್ಣಿಗೆ ಗೊತ್ತಾಗುವುದಿಲ್ಲವೆ? ಕೃಷ್ಣ ನಡೆದಾಡಿದಲ್ಲೆಲ್ಲ ಈ ಯುವತಿಯ ಹೆಜ್ಜೆಯೂ ಇದೆ. ಒಮ್ಮೆ ಕಂಡ ಮೇಲೆ ಈಗ ಎಲ್ಲೆಡೆ ಸ್ಫುಟವಾಗಿ ಕಾಣಿಸುತ್ತಿದೆ. ಒಂದು ಕ್ಷಣ ಗೋಪಿಕೆಯರಿಗೆ ಎದೆ ಹಿಂಡಿತು. ಮರುಕ್ಷಣ ಹೃದಯಪೂರ್ತಿ ತೆರೆದುಕೊಂಡಿತು!

ನಮ್ಮ ಗೋಪಿಕೆಯರ ನಡುವೆ ಒಬ್ಬಳಿದ್ದಾಳೆ! ಯಾರೋ! ಅವಳು ಕೃಷ್ಣನ ಹೆಜ್ಜೆಯ ಜತೆ ಹೆಜ್ಜೆ ಹಾಕುವಳು. ಇತರರು ಅಹಂಕಾರ ಪಟ್ಟಾಗಲೂ ತಾನು ಅಹಂಕಾರಪಡದವಳು. ಮರೆಯಾದ ಕೃಷ್ಣನ ಜತೆಗೂ ಇರುವಳು! ಕೃಷ್ಣ ನಮ್ಮ ನಡುವೆ ಪ್ರಕಟವಾಗಿದ್ದಾಗಲೂ ಈ ತರುಣಿ ಮರೆಯಾಗಿದ್ದಳೇನೋ.  ಮರೆಯಾಗಿಯೇ ಕೃಷ್ಣನ ಜತೆ ಇರಬಲ್ಲಳೇನೋ! ಹಾಗಾದರೆ, ರಾಸ ನೃತ್ಯ ರಸಭಂಗವಾಗಿಲ್ಲ! ತಾಳ ತಪ್ಪಿದರೂ ತಾಳ ತಪ್ಪಿಲ್ಲ! ಕೃಷ್ಣನ ಜೊತೆ ಅದೃಶ್ಯ ಗೋಪಿಕೆ ಸದಾ ಒಬ್ಬಳಿರುವಳು. ಹಾಗಿಲ್ಲದೆ ಕೃಷ್ಣನೂ ಇರಲಾರನೇನೋ! ಈ ಹುಡುಗಿ ಕೃಷ್ಣನ ಒಳ ಮನಸ್ಸಿನಂತೆ ಇರುವಳೋ?

ಗೋಪಿಕೆಯರಿಗೆ ಒಮ್ಮೆಲೇ ಹೊಳೆಯಿತು: ಅಲ್ಲಿ ಮರೆಯಲ್ಲಿ, ನಮ್ಮ ಅದೃಷ್ಟದಲ್ಲಿ, ರಾಸ ನೃತ್ಯ ಸದಾ ನಡೆಯುತ್ತಿದೆ. ಆದುದರಿಂದಲೇ ಇಲ್ಲಿ ನಮಗೆ ನೃತ್ಯದ ಬಯಕೆಯಾಗುವುದು. ಅಲ್ಲಿ ಪುರುಷ -ಪ್ರಕೃತಿ ಸದಾ ಜೊತೆಯಾಗಿವೆ. ಆದುದರಿಂದಲೇ ಸಂಬಂಧ ಕಡಿದು ಹೋದಂತಿರುವ ಇಲ್ಲಿ, ಅದರ ನೆನಪು ಕಾಡುವುದು! ಇದು ಏನು ವಿಚಿತ್ರ ಪಲ್ಲಟ! ಈ ಭಾವ ಹೊಳೆದ ಕೂಡಲೇ, ಗೋಪಿಕೆಯರು ತಮ್ಮ ಮನದಾಳದಲ್ಲಿ ಕೃಷ್ಣನ ಜೊತೆ, ಹೆಸರೇ ಗೊತ್ತಿಲ್ಲದ ಆ ಹುಡುಗಿಯನ್ನೂ ಕಲ್ಪಿಸಿ ಪೂಜಿಸತೊಡಗಿದರಂತೆ!  ಅವಳು ತಮ್ಮ ಪ್ರತಿನಿಧಿ ಎನ್ನುವಂತೆ, ನಮಗಾಗಿ ಕೃಷ್ಣನನ್ನು ಕಾದುಕೊಂಡಿದ್ದವಳೆನ್ನುವಂತೆ!

ಭಾಗವತ ಆ ಹುಡುಗಿಯ ಹೆಸರು ಹೇಳುವುದಿಲ್ಲ. ಗೋಪಿಕೆಯರೆಲ್ಲರೂ ತಮ್ಮ ಹೆಸರಿನಲ್ಲಿಯೇ ಆಕೆಯನ್ನು ಬಗೆಯಲಿ; ಭಾವಿಸಲಿ ಎಂದಿರಬೇಕು. ವಿಷ್ಣು ಪುರಾಣ ಹೆಸರು ಹೇಳುತ್ತೆ; ಉತ್ತರ ಕಾಲೀನ ಗ್ರಂಥಕಾರರು ಹೇಳುತ್ತಾರೆ. ಅವಳ ಹೆಸರಲ್ಲಿ ಪರಂಪರೆಯೇ ಬೆಳೆದಿದೆ!

ಅವಳು ‘ರಾಧಾ’ ಅವನು ‘ಕೃಷ್ಣ’.

ತೋಳ್ಪಾಡಿ ಭಾಗವತ 26:ಕೃಷ್ಣಪಾದದಲಿ ಗೋಪಿಕೆಯರ ಎದೆಯ ಕುಂಕುಮ

ಕೃಷ್ಣನನ್ನೇ ಒಂದು ಸ್ತ್ರೀ-ಮೂರ್ತಿ ಎನ್ನಬಹುದು. ಕೃಷ್ಣನ ಸ್ತ್ರೀ-ಮೂರ್ತಿ ‘ರಾಧಾ’. ಕೃಷ್ಣನೊಳಗಿನ ‘ಕೃಷ್ಣ’ ಎಂದ ಹಾಗೆ. ಕಣ್ಣಿನ ಕಣ್ಣು, ಪ್ರಾಣದ ಪ್ರಾಣ, ಸತ್ಯದ ಸತ್ಯ- `ಸತ್ಯಸ್ಯ ಸತ್ಯಂ’- ಎಂಬಂಥ ನುಡಿಗಟ್ಟುಗಳಿವೆ ಉಪನಿಷತ್ತಿನಲ್ಲಿ. ಹಾಗೆ ರಾಧೆಯನ್ನು ಕೃಷ್ಣನ `ಕೃಷ್ಣ’ ಮತ್ತು ಕೃಷ್ಣನನ್ನು ರಾಧೆಯ `ರಾಧೆ’ ಎನ್ನಬಹುದು. ಇಂಥ ರಾಧೆಯನ್ನು ಕಂಡರಿಸಿದ್ದು ಗೋಪಿಕೆಯರು. ಬದುಕು-ಸಾವಿನ ಪ್ರಶ್ನೆ ಎಂಬಂತೆ ಕೃಷ್ಣನನ್ನು ಹುಡುಕುತ್ತ ಗೋಪಿಕೆಯರಿಗೆ ರಾಧೆಯ ಸುಳಿವು ಸಿಕ್ಕಿತು. ಅಂದರೆ ತಮ್ಮ ಸುಳಿವೇ ತಮಗೆ ಸಿಕ್ಕಂತೆ. ದೇವರನ್ನು ಹುಡುಕುತ್ತ ಜೀವ ತನ್ನನ್ನೇ ಮರಳಿ ಪಡೆಯುವುದು. ಹಾಗೆ ದೇವರು ಕೊನೆಗೂ ಜೀವನ ಮರೆಯಲ್ಲಿ ನಿಲ್ಲುತ್ತಾನೆ. ಮತ್ತು ದೇವರಿಗೆ ಜೀವನ ಮರೆಯೇ ಬೇಕಾಗಿದೆ! ಆದುದರಿಂದಲೇ ಜೀವನಿಗೆ ತನ್ನ ಅಂತ:ಕರಣದಲ್ಲಿ ಹುಡುಕಾಟದ ಎಳೆಯೊಂದು ನಾಡಿಯೊಂದು ಸದಾ ಮಿಡಿಯುತ್ತಿರುತ್ತದೆ.

ರಾಧೆಯ ಸುಳಿವು ಗೋಪಿಕೆಯರಿಗೆ ಸಿಕ್ಕಿತೆಂದರೆ ಕೃಷ್ಣನೇ ಸಿಕ್ಕಿದಂತೆ. ಕೃಷ್ಣ ಮರಳಿ ಕಾಣಸಿಕ್ಕಿದಾಗ ಗೋಪಿಕೆಯರಿಗೆ ರಾಧೆಯ ನೆನಪಾಗಲಿಲ್ಲ! ಕೃಷ್ಣನ ಪಾದಗಳನ್ನು ತಮ್ಮೆದೆಯ ಮೇಲಿಟ್ಟುಕೊಂಡರು. ಪಾದ, ನೋಯುತ್ತಿದೆಯೇನು ಎಂದು ಕೇಳಿದರು. ನಿಮ್ಮ ಎದೆ ನೊಂದಿರುವುದು ನನ್ನ ಅಂಗಾಲಿಗೂ ತಿಳಿಯುತ್ತೆ ಎಂದ ಕೃಷ್ಣ.

ಮತ್ತೇಕೆ ಮರೆಯಾದೆ ಕೃಷ್ಣ? ನಮ್ಮ ಉಸಿರೇ ನಿಂತಂತಾಗಿತ್ತು.
ನನಗೆ ನಿಮ್ಮನ್ನು ನೆನೆಯಬೇಕಿತ್ತು. ನಿಮ್ಮನ್ನು ಧ್ಯಾನಿಸಬೇಕಿತ್ತು. ಅದಕ್ಕೆ ಮರೆಯಾದೆನಷ್ಟೆ! (ಮಯಾ ಪರೋಕ್ಷಂ ಭಜತಾ ತಿರೋಹಿತಂ)
ಇದೇನು ಕೃಷ್ಣ ನೀನು ಹೇಳುತ್ತಿರೋದು? ನಾವು ಕಣ್ಣೆದುರೇ ಇದ್ದೆವಲ್ಲ!
ಇದ್ದೀರಿ ಹೌದು. ನನಗೆ ಕಣ್ಣು ಮಂಜಾಯಿತೇನೋ. ರಾಸನೃತ್ಯದ ಧೂಳು ಕಣ್ಣಿಗೆ ಕವಿದಿರಬೇಕು!

ಈಗ ಗೋಪಿಕೆಯರಿಗೆ ಹೊಳೆಯಿತು- ನಮ್ಮ ಅನುಭವವನ್ನು ತನ್ನ ಅನುಭವದಂತೆ ಹೇಳುತ್ತಿದ್ದಾನೆ- ನಂದಗೋಪನ ಮಗ! ಈತ ದೇವರಲ್ಲದೆ ಇನ್ನಾರು ದೇವರು? ಅಹಂಕಾರದಿಂದ ನಮ್ಮ ಕಣ್ಣು ಮಂಜಾಗಿತ್ತು. ಧೂಳೆಂದರೆ ರಜಸ್ಸು. ರಜೋಗುಣ. ಅದು ನಮ್ಮನ್ನು ಕವಿದಿತ್ತು. ಆಗ ನಮಗೆ ಕಾಣುತ್ತಿದ್ದುದು ನಾವೇ; ಕೃಷ್ಣನಲ್ಲ- ಅವನು ಎದುರಿಗೇ ಇದ್ದರೂ. ಓ ದೇವರೇ, ನಮ್ಮ ಈ ತಪ್ಪನ್ನು ತನಗೆ ಅನ್ವಯಿಸಿಕೊಂಡು ಹೇಳುತ್ತಿದ್ದಾನೆ. ಇದನ್ನೇ ಕರುಣೆ ಎನ್ನುವುದೇನು? ಅಲ್ಲ- ಇದನ್ನೇ `ಪ್ರೀತಿ’ ಎನ್ನುವುದು! ಹೀಗೆ ಹೇಳುವವನು ನಮ್ಮನ್ನೆಂದೂ ಅಗಲಲಾರ. ಈಗ ಗೋಪಿಕೆಯರಿಗೆ ಕಣ್ಣು ಹನಿಯಿತು. ಹನಿಯುವ ಕಣ್ಣಿಗೆ ಕಾಣ್ಕೆಯೊಂದರ ಕಾಮನ ಬಿಲ್ಲು!

ಗೋಪಿಕೆಯರ ಕಾಣ್ಕೆ ಏನೆಂದರೆ: ನಾವು ಅಹಂಭಾವದಿಂದ ಬೀಗಿದಾಗ; ಸೊಕ್ಕಿದಾಗ, ನಮ್ಮ ಸೊಕ್ಕಿಗಾಗಿ ತನ್ನಲ್ಲೇ ದೀನವಾಗಿ ಕೊರಗುವ ನಮ್ಮ ಜೀವಾಳದ ನಿಜವೊಂದು ನಮ್ಮಲ್ಲೇ ಅಡಗಿದೆ. ಕೊರಗಿದರೂ ಅದು ಎಂದೂ ನಮ್ಮನ್ನಗಲುವುದಿಲ್ಲ. ಆದುದರಿಂದಲೇ ಕೊರಗುತ್ತೆ ನಮಗಾಗಿ. ನಾವೇ ಅದನ್ನಗಲಿದಂತೆ ಇರುತ್ತೇವೆ. ಈ ನಮ್ಮ ನಿಜವೇ ದೇವರು! ನಾವೇ ಅದನ್ನಗಲಿರುವುದರಿಂದ ನಾವೇ ಅದನ್ನು ಹುಡುಕಿ ಪಡೆಯಬೇಕಿದೆ. ನಾವು ಲೋಕವನ್ನು ದ್ವೇಷಿಸಿದರೆ- ನಮ್ಮ ದ್ವೇಷದ ಹೊಗೆಯಿಂದ ತಳಮಳಿಸುವ ಮೃದುಕೋಮಲ ಜೀವವೊಂದು ನಮ್ಮಲ್ಲೇ ಅಡಗಿದೆ. ತಳಮಳಿಸುತ್ತಲೇ ಇದ್ದರೂ ಅದು ನಮ್ಮನ್ನು ಬಿಟ್ಟಗಲದು. `ಕಂದನಿಗೆ ಕಾಲಿಲ್ಲವಮ್ಮ ಎಂದೆಂದೂ ಅಂಬೆಗಾಲು ಬಿಡನಮ್ಮ’. ಈ ಕಂದನನ್ನು ನಾವು ಮರಳಿ ಪಡೆಯಬೇಕಿದೆ.

ಈ ಲೋಕದಲ್ಲಿ ನಾವು ಬದುಕುತ್ತಿರುವಾಗ ಕೀಳರಿಮೆಯಲ್ಲಿ ನಾವು ತೊಳಲಾಡುತ್ತಿದ್ದರೆ, ಎಲ್ಲೆಲ್ಲೂ ಇರುವ ತಾನು ಇವರಲ್ಲೂ ಇರುತ್ತ, ಅದನ್ನು ಗ್ರಹಿಸಲಾಗದೆ ಹೀಗೆ ತೊಳಲುವರಲ್ಲ ಎಂದು ನಮಗಾಗಿ ಕನಿಕರಿಸುವ ದೊಡ್ಡ ಜೀವವೊಂದು ನಮ್ಮಲ್ಲೇ ಅಡಗಿದೆ. ಅದರ ಆಶ್ರಯದ ಬಿಸುಪನ್ನು ನಾವು ಅನುಭವಿಸಬೇಕಿದೆ.

ಈ ಕಾಣ್ಕೆಯನ್ನು ಒಂದು ಹೆಜ್ಜೆ ಮುಂದುವರಿಸಿದರೆ, -ನಾವು ಅಹಂಕಾರ ಪಡುವಾಗ, ಯಾರಿಂದ ನಾವು ಶ್ರೇಷ್ಠರು ಎಂದು ಅಹಂಕರಿಸುವೆವೋ ಅವರಲ್ಲಿ, ನಮ್ಮ ದೇವರ ಸಾನ್ನಿಧ್ಯ ನಮಗಿಂತ ಹೆಚ್ಚಿರಬಹುದು. ರಾಧೆಯಲ್ಲಿ ಕೃಷ್ಣನ ಸನ್ನಿಧಿ ಮರೆಯಾಗಿ ಇದ್ದಂತೆ. ನಾವು ದ್ವೇಷಿಸಿದಾಗ, ನಮ್ಮ ದ್ವೇಷ ಪಾತ್ರರಲ್ಲೇ ನಮ್ಮ ದೇವರ ಸಾನ್ನಿಧ್ಯ ನಮಗಿಂತ ಹೆಚ್ಚಿರಬಹುದು. ಆದರೆ, ಕೀಳರಿಮೆಯ ಮಾತು ಮಾತ್ರ ಬೇರೆ. ನಾವು ನಾನಾ ಕಾರಣಗಳಿಗಾಗಿ ಕೀಳೆಂದು ನಮ್ಮನ್ನೇ ಬಗೆಯುವೆವು. ಹಾಗೆ ಬಗೆಯುವುದಕ್ಕೆ ಕಾರಣವಾದ ಲೋಕ ವ್ಯವಸ್ಥೆಯನ್ನು ದೇವರು ಬೆಂಬಲಿಸಲಾರ. ಬದಲಾಗಿ ಲೋಕದ ದಾಸರೆಂದು ಬಗೆಯುವ ನಮ್ಮನ್ನು ನನ್ನ ದಾಸರಾಗುತ್ತೀರೇನು ಎಂದು ತುಂಟ ನಗು ನಗುತ್ತ ಕೇಳುವಂತಿದೆ. ನಿನ್ನ ದಾಸರಾದರೆ? ನನ್ನ ದಾಸರಾದರೆ ಆ ಕ್ಷಣಕ್ಕೆ ನೀನು ಲೋಕದ ದಾಸ್ಯವನ್ನು ಕಿತ್ತೊಗೆದಂತೆ! ಲೋಕದ ದಾಸ್ಯ ಎಂದರೇನು? ಜಾತಿ, ಮತ, ಕುಲ, ಪಕ್ಷ, ಪ್ರತಿಷ್ಠೆ, ದುಡ್ಡು, ಅಧಿಕಾರ, ವಿದ್ಯೆ, ಪ್ರತಿಭೆ- ಈ ಎಲ್ಲದರ ದಾಸ್ಯ. ಈ ದಾಸ್ಯವೇ ಪ್ರಜ್ಞೆಯ ನರಕ. ಇಹದ ನರಕ. ದೇವರ ದಾಸನಿಗೆ ಹಾಗೆ ದಾಸನಾದ ಕ್ಷಣದಿಂದ ಈ ನರಕದಿಂದ ಬಿಡುಗಡೆ. ಆದುದರಿಂದಲೇ ದೇವರ ದಾಸ- ಒಂದು ತೀರ ವಿಚಿತ್ರವಾದ ರೀತಿಯಲ್ಲಿ ಲೋಕದಲ್ಲಿ ಸ್ವತಂತ್ರ!

ಗೋಪಿಕೆಯರ ಒಳಮನದಲ್ಲಿ ಇವೆಲ್ಲ ಹಾಯುತ್ತಿರುವಂತೆ ಅವರೆದುರಿಗೆ ಕೃಷ್ಣ ನಿಂತಿದ್ದ. ನಿಮ್ಮನ್ನು ನೆನೆಯುವುದಕ್ಕಾಗಿಯೇ ಮರೆಯಾಗಿದ್ದೆನೆನ್ನುತ್ತ; ತಾನೇ ದಾಸನಂತೆ!

ಗೋಪಿಕೆಯರಿಗೆ ಕೃಷ್ಣನ ಮೇಲಿನ ಪ್ರೀತಿ ಹುಚ್ಚುಕೋಡಿ ಹರಿಯಿತು. ಹಾಡಿದರಂತೆ. `ಅಧರಂ ಮಧುರಂ, ವದನಂ ಮಧುರಂ….. …. ಮಧುರಾಧಿಪತೇ ತ್ವಮಖಿಲಂ ಮಧುರಂ’ `ನಿನ್ನ ತುಟಿ ಮಧುರ; ಆ ತುಟಿಯಲ್ಲರಳಿರುವ ನಸುನಗೆ ಅತಿಮಧುರ. ಆ ನಸುನಗೆಯ ಹಿನ್ನೆಲೆಯಲ್ಲಿ ಹೊಮ್ಮುವ ‘ಮಾತು’ ಮಧುರಾತಿಮಧುರ. ಆ ‘ಮಾತಿ’ನ ಅರ್ಥ- ನೀನು; ನಾನು ಎನ್ನುವುದೇಕೆ? ನೀನೆಂದರೆ ನಾನು; ನಾನೆಂದರೆ ನೀನು. ‘ನಾನು’ ಎಂದೇ ಹೇಳಬಹುದಿತ್ತು. ನಿಜ. ಆದರೆ ಹಾಗೆ ಹೇಳುವಾಗ ಅಹಂಕಾರದ ಬಣ್ಣ ಬಂದು ತಪ್ಪು ಅರ್ಥವಾದೀತೆಂದು, ‘ನಾನು’ ಎಂಬ ಮೂಲ ಪದ ‘ನೀನು’ ಎಂಬ ಪದವನ್ನು ಸೃಜಿಸಿತು. ಆದುದರಿಂದ ನಾನೆಂದರೆ ನೀನು. ನೀನೆಂದರೆ ನಾನು. ಈ ಅರ್ಥವೋ! ಮಾಧುರ್ಯದ ಓಕುಳಿ ಚೆಲ್ಲಿದಂತೆ!

‘ನಾನು’ ಎನ್ನುವಾಗ ನನ್ನಿಂದ ಬೇರೆಯಾಗಿ ನೀನೆನ್ನುವುದು ದ್ವಂದ್ವ. ‘ನೀನು’ ಎನ್ನುವಾಗ ನಿನ್ನಿಂದ ಬೇರೆಯಾಗಿ ನಾನೆನ್ನುವುದು ದ್ವಂದ್ವ. ಈ ದ್ವಂದ್ವವನ್ನು ಮೀರುವುದು ಹೇಗೆ? ಪದಗಳ ಅರ್ಥವನ್ನೇ ಪಲ್ಲಟಿಸುವ ಮೂಲಕ. ಅರ್ಥವೇ ನಮ್ಮನ್ನು ದ್ವಂದ್ವದಲ್ಲಿ ಕಟ್ಟಿ ಹಾಕಿದ್ದು. ಅರ್ಥವನ್ನು ಪಲ್ಲಟಿಸುವ ಮೂಲಕವೇ ನಾವು ದ್ವಂದ್ವದ ಕಟ್ಟಿನಿಂದ ಹೊರಬರಬೇಕು. ಪದಗಳಾದರೋ ಯಾವ ಅರ್ಥಕ್ಕೂ ಒದಗಿ ಬರುತ್ತವೆ. ಅವು ಮೂಲತ: ಅಷ್ಟು ನಮನೀಯ! ನಮನೀಯವಾದುದೆಲ್ಲ ಹಾಡು. ಕವಿತೆ. ಮಣ್ಣು ಮತ್ತು ಆಗಸಗಳನ್ನು ಒಂದು ಮಾಡಬಲ್ಲ ಆಲಾಪ!

ಗೋಪಿಕೆಯರು ದ್ವಂದ್ವವನ್ನು ಕಳೆದುಕೊಂಡರು ಎಂದು ಹೇಳಿಯೇ ಹೇಳುತ್ತೆ ಭಾಗವತ.
`ನಾನು-ನೀನು’ ಎನ್ನುವುದು ಅಸ್ತಿತ್ವದ ದ್ವಂದ್ವ. `ಪಾಪ-ಪುಣ್ಯ’ ಎನ್ನುವುದು ಸಂಸ್ಕೃತಿಯ ದ್ವಂದ್ವ. ಈ ಎರಡನ್ನೂ ಕಳೆದುಕೊಂಡರಂತೆ ಗೋಪಿಕೆಯರು!
ಹೇಗೆ?
`ದು:ಸಹ ಪ್ರೇಷ್ಠ ವಿರಹ ತೀವ್ರ ತಾಪಧುತಾಶುಭಾ:
ಧ್ಯಾನ ಪ್ರಾಪ್ತ ಅಚ್ಯುತಾಶ್ಲೇಷ ನಿರ್ವಾತ್ಯಾಕ್ಷೀಣ ಮಂಗಲಾ:’

ಸಹಿಸಲಸಾಧ್ಯವೆನ್ನುವಂಥ ತೀವ್ರವಾದ ವಿರಹಾನುಭವದಿಂದಾಗಿ ಗೋಪಿಕೆಯರಲ್ಲಿ ಅವರ ‘ಪಾಪ’ದ ನಿರಸನವಾಯಿತಂತೆ. ನಿರಂತರ ನೆನೆದುದರಿಂದ ಬಗೆಯೊಳಗೆ ಕಾಣಿಸಿಕೊಂಡ ಕೃಷ್ಣನ ಬಿಗಿಯಾದ ಅಪ್ಪುಗೆಯಿಂದ ಗೋಪಿಕೆಯರ ‘ಪುಣ್ಯ’ವೂ ನಿರಸನವಾಯಿತಂತೆ!

ಉತ್ಕಟವಾಗಿ ಉರಿಯುವ ಒಂದು ಕ್ಷಣ! ಈ ಕ್ಷಣವನ್ನು ‘ಜೀವ’ ಹಾರಯಿಸುತ್ತಿರುತ್ತೆ. ‘ಜೀವ’ ಎಂದರೆ ಗೋಪಿಕೆಯೇ. ರಾಧೆಯೇ.

ಗೋಪಿಕೆಯರ ಎದೆಯ ಕುಂಕುಮ ಕೃಷ್ಣನ ಪಾದಗಳಲ್ಲಿ ಹರಡಿತ್ತಂತೆ. ಅವನು ನಡೆದಾಡುವ ವೃಂದಾವನದ ಹುಲ್ಲುಗರಿಕೆಗಳಲ್ಲಿ ಆ ಕುಂಕುಮ ಕಂಗೊಳಿಸುತ್ತಿತ್ತಂತೆ. ಅಲ್ಲಿ ಸುಳಿವ ಬೇಡಿತಿಯರು; ಹಳ್ಳಿಯ ಹೆಂಗಸರು ಅದನ್ನು ಹುಡುಕಿ ತಮ್ಮೆದೆಗೆ ಹಚ್ಚಿಕೊಳ್ಳುವರಂತೆ. ಹೀಗೆ ಎದೆಯಿಂದ ದೇವರ ಪಾದಕ್ಕೆ ಮುಟ್ಟಿ ಮರಳಿ ಎದೆಗೆ ಹರಿಯುವುದು ಗೋಪಿಕೆಯರ ಎದೆಯ ಕುಂಕುಮದ ಪಯಣ. ರಾಧಾ ಪರಂಪರೆ ಕೂಡ ಇತಿಹಾಸದುದ್ದಕ್ಕೆ ಹೀಗೆ ಪಯಣಿಸಿದೆ. ಉತ್ತರದ ಮೀರಾ, ದಕ್ಷಿಣದ ಅಂಡಾಳ್, ಬೀಬಿನಾಚ್ಚಿಯಾರ್, ನಮ್ಮ ಅಕ್ಕಮಹಾದೇವಿ ಕೂಡಾ ರಾಧಿಕೆಯರೇ. ಅವರ ವ್ಯಕ್ತಿತ್ವ, ಬಣ್ಣ, ಕಸುವುಗಳಲ್ಲಿ ಅಂತರವಿರಬಹುದು. ಕೃಷ್ಣ ಚೈತನ್ಯ ಮತ್ತು ರಾಮಕೃಷ್ಣ ಪರಮಹಂಸ ಕೂಡಾ ರಾಧಾ ಭಾವ ಆವಿಷ್ಟರೇ. ಒಂದು ಕುತೂಹಲದ ಸಂಗತಿ ಕಾಣಿಸಬೇಕಾದರೆ, ಅದು ರಾಮಕೃಷ್ಣ ಪರಮಹಂಸರು ತಮ್ಮ ಬದುಕಿನಲ್ಲಿ ಹಾಕಿದ ಒಂದೇ ಒಂದು ಸಹಿಯ ಸಂಗತಿ. ಯಾರು ರಾಮನೋ ಯಾರು ಕೃಷ್ಣನೋ ಅವನೇ ಇಲ್ಲಿ ರಾಮಕೃಷ್ಣನಾಗಿದ್ದಾನೆ ಎಂದ ಪರಮಹಂಸರು, ರಾಮನ ಸಹಿ, ಕೃಷ್ಣನ ಸಹಿ ಹಾಕಲಿಲ್ಲ. ಅವರು ರಾಧೆಯ ಸಹಿ ಹಾಕಿದ್ದರು. ಅದು ಇಷ್ಟೇ ಇತ್ತು. `ಜಯ್ ರಾಧೇ’. ಭಾಗವತದಲ್ಲಿ ರಾಧೆಯ ಹೆಜ್ಜೆ ಗುರುತು! ರಾಮಕೃಷ್ಣರಲ್ಲಿ ಅದು `ಜಯ್ ರಾಧೇ’ ಎಂಬ ಹಸ್ತಾಕ್ಷರ! ಕೃಷ್ಣ ತನ್ನ ಸಹಿ ಹಾಕಬೇಕೆಂದರೆ ಹೀಗೆಯೇ ಹಾಕುತ್ತಿದ್ದ!

ನಾವು ವೃಂದಾವನದಲ್ಲಿ ಸುಳಿವ ಬೇಡಿತಿಯರಿಂದಲೂ ಕೀಳಾಗಿ ಹೋದೆವು ಎಂದು ವೃಂದಾವನದ ಬ್ರಾಹ್ಮಣಿಯರು ಮನದಲ್ಲೇ ಕೊರಗುತ್ತಿದ್ದರಂತೆ. ಆ ಕಥೆ ಹೀಗೆ.

ಒಮ್ಮೆ ಹಸುಗಳನ್ನು ಮೇಯಿಸುತ್ತ ಇರಬೇಕಾದರೆ, ಗೊಲ್ಲ ಬಾಲಕರು ಹಸಿದುಕೊಂಡು ಕೃಷ್ಣನೊಡನೆ ಹೇಳಿದರಂತೆ. `ಅಸುರರನ್ನೆಲ್ಲ ಸಂಹಾರ ಮಾಡಿದವನು ನೀನು. ನಮ್ಮ ಹಸಿವೆಯನ್ನೇನು ಮಾಡೋಣ ಹೇಳು! ಹುಡುಗರು ಚಮತ್ಕಾರದ ಮಾತು ಕಲಿತಿದ್ದರು. ಕೃಷ್ಣ ಹೇಳಿದನಂತೆ. `ಇಲ್ಲೆಲ್ಲೋ ವನ ಮಧ್ಯದಲ್ಲಿ ಬ್ರಾಹ್ಮಣರು ಯಾಗ ಮಾಡ್ತಿದಾರೆ. ಆಂಗೀರಸ ಸತ್ರ. ಅಲ್ಲಿಗೆ ಹೋಗಿ, ನಮ್ಮಣ್ಣನ ಮತ್ತು ನನ್ನ ಹೆಸರೆತ್ತಿ. ಹಸಿವಾಗುತ್ತಿದೆ ಎನ್ನಿ. ಉಂಡು ಬನ್ನಿ’. ಹುಡುಗರು ಹೋಗಿ ಅನ್ನಬೇಡಿದರೆ, ಯಾಗ ನಿರತರಾದ ಗಂಡಸರು ಗಮನಿಸಲೇ ಇಲ್ಲ. ಪೆಚ್ಚಾಗಿ ಮರಳಿ ಬಂದರು. ಕೃಷ್ಣ ಮತ್ತೆ ಹೇಳಿದ. `ಆ ಗಂಡಸರನ್ನೇಕೆ ಕೇಳಿದಿರಿ. ಹಸಿವೆನ್ನಬೇಕಾದುದು ಹೆಂಗಸರ ಮುಂದೆ. ಅವರನ್ನು ಕೇಳಿ’.

ಬ್ರಾಹ್ಮಣಿಯರು ಕರ್ಮ, ಧರ್ಮಗಳಲ್ಲಿ ತಮ್ಮ ಗಂಡಸರಿಗೆ ನೆರವಾಗುತ್ತಿದ್ದರೇನೋ ನಿಜ. ಆದರೆ, ಮನಸ್ಸೆಲ್ಲ ಆ ನೀಲ ಬಣ್ಣದ ಹುಡುಗನಲ್ಲಿತ್ತು. ಗೋಪಿಕೆಯರ ವಾರ್ತೆ ಅವರನ್ನು ಮುಟ್ಟಿತ್ತು. ‘ಸ್ತ್ರೀ’ ಎಂದರೆ ಒಂದು ವಿರಹ-ವಿಗ್ರಹ ಎಂಬ ಮೂಲಾನುಭವವನ್ನು ಯಜ್ಞಯಾಗಗಳ ಕರ್ಮ ಕಾಂಡ ಬದಲಾಯಿಸಲಾರದು ಎಂಬುದನ್ನು ಈ ಬ್ರಾಹ್ಮಣಿಯರು ತಿಳಿಯತೊಡಗಿದ್ದರು. ಆದರೂ ಇವರು ಗೋಪಿಕೆಯರಂತೆ ಮನೆ ಬಿಟ್ಟು ಹೋಗಲಾರರು. ಈಗ ನೋಡಿದರೆ, ಕೃಷ್ಣನೇ ಈ ಗೊಲ್ಲ ಹುಡುಗರನ್ನು ತಮ್ಮ ಬಳಿಗೆ ಕಳುಹಿಸಿದ್ದಾನೆ. ಅವನಿಗೆ ತಮ್ಮ ಮನದಾಳ ತಿಳಿದಂತಿದೆ. ಕೃಷ್ಣನು ಬಂದಿಲ್ಲವೆಂದರೆ ತಾವೇ ಅವನ ಬಳಿ ಸಾರಬೇಕೆಂಬ ಸೂಚನೆ! ಗೊಲ್ಲ ಹುಡುಗರೊಂದಿಗೆ, ಕೃಷ್ಣನಿಗಾಗಿ ಮೊಸರನ್ನದ ತಪ್ಪಲೆ ಹೊತ್ತು, ಬ್ರಾಹ್ಮಣಿಯರು ಹೊರಟುಬಿಟ್ಟರಂತೆ. ಗಂಡಸರು ತಡೆದರು; ಆದರೆ ನಿಲ್ಲಿಸಲಾಗಲಿಲ್ಲ. ವಿಚಾರ ಮಾಡಿದ ಗಂಡಸರಿಗೆ ತಿಳಿಯಿತಂತೆ. ತಮ್ಮ ‘ಕರ್ಮಕಾಂಡ’ ತಮ್ಮನ್ನು ಎಲ್ಲೂ ಒಯ್ದಿಲ್ಲ. ತಾವು ಇನ್ನಷ್ಟು ಬರಡಾಗಿದ್ದೇವೆ. ಕೃಷ್ಣನನ್ನು ನೆನೆಯುತ್ತ ತಮ್ಮ ಮನೆಯ ಹೆಂಗಸರಿಗೆ ತಿಳಿದು ಬಿಟ್ಟಿದೆ- `ಪೂರ್ಣಾಹುತಿ’ ಎಂದರೇನೆಂದು. ಈ ಗಂಡಸರಲ್ಲಿ ಒಬ್ಬ ಒರಟನಿದ್ದನಂತೆ.  ಆತ ಮನೆಯಾಕೆಯನ್ನು ಕೃಷ್ಣನಲ್ಲಿಗೆ ಹೋಗದಂತೆ ಬಲಾತ್ಕಾರವಾಗಿ ತಡೆದ. ಆ ಬ್ರಾಹ್ಮಣಿ; ಕೃಷ್ಣನನ್ನೇ ನೆನೆಯುತ್ತ ದೇಹತ್ಯಾಗ ಮಾಡಿದಳಂತೆ. `ಪೂರ್ಣಾಹುತಿ’ಯಾಗಿಬಿಟ್ಟಿತು!

ಈ ಎಲ್ಲ ಅನುಭವಗಳಿಂದ ಕೃಷ್ಣನಲ್ಲಿ ಅವನದೇ ನುಡಿಗಟ್ಟು ರೂಪುಗೊಳ್ಳುತ್ತಿತ್ತು.

ನೀವು ಅಹಂಕಾರದಿಂದ ಸೊಕ್ಕಿದರೆ, ಅದು ನಿಮ್ಮೊಳಗಿರುವ ನನ್ನನ್ನು ಹಿಂಸಿಸಿದಂತೆ- `ಮಾಂ ಚೈವ ಅಂತ: ಶರೀರಸ್ಥಂ ಕರ್ಶಯಂತಿ’- ಎಂಬ ನುಡಿಗಟ್ಟು, ನೀವು ನನ್ನನ್ನು ಮರೆತರೆ, ಅದರ ಹೊಣೆಯನ್ನು ನಾನೇ ಹೊರುವೆ; ನೀವು ಪಾಪಪ್ರಜ್ಞೆಯಲ್ಲಿ ನರಳುವುದನ್ನು ನೋಡಲಾರೆ- `ಮತ್ತ: ಸ್ಮೃತಿ: ಜ್ಞಾನಂ ಆಪೋಹನಂ ಚ’- ಎಂಬ ನುಡಿಗಟ್ಟು, ಇಲ್ಲಿ ಎಲ್ಲವೂ ಪಲ್ಲಟವಾದಂತಿದೆ, ಆದುದರಿಂದ ಎಲ್ಲವನ್ನೂ ಪಲ್ಲಟ ಮಾಡಿ ನೋಡುವುದೇ ಅರಿವಿನ ದಾರಿ- `ಊರ್ಧ್ವ ಮೂಲಂ ಅಧ: ಶಾಖಂ ಅಶ್ವತ್ಥಂ’- ಬೇರು ಮೇಲಾಗಿ ಕೊಂಬೆ ಗೆಲ್ಲುಗಳು ಕೆಳಗಾಗಿ ಇರುವ ಅಶ್ವಥ್ಥವಿದು ಎಂಬ ರೂಪಕಾತ್ಮಕ ನುಡಿಗಟ್ಟು- ಇವೆಲ್ಲ ರೂಪುಗೊಳ್ಳುತ್ತಿತ್ತು. ನಿರಂತರ ನಡೆವ ಮಹಾರಾಸವೆಂದರೆ ನೃತ್ಯಗಾನ ಕೀರ್ತನಗಳೆಂಬ ಹರಿಗಡೆಯದ ಭಕ್ತಿ ಪರಂಪರೆ ಎಂಬ ನುಡಿಗಟ್ಟು ಕೂಡಾ.

ನುಡಿಗಟ್ಟು ರೂಪುಗೊಳ್ಳುವುದೆಂದರೆ ತನ್ನ ವ್ಯಕ್ತಿತ್ವವನ್ನು ತಾನೇ ಸಾಕ್ಷಾತ್ಕರಿಸಿಕೊಂಡಂತೆ. ಕೃಷ್ಣನಲ್ಲಿ ಗೋಪಿಕೆಯರ ಕುರಿತು ಕೃತಜ್ಞತೆಯ ಭಾವ ತುಂಬಿ ಬಂತಂತೆ. ನೀವು ನನಗೆ ಕೊಟ್ಟಿರುವುದಕ್ಕೆ ಮರಳಿ ಸಲ್ಲಿಸಲು ನನ್ನಲ್ಲಿ ಏನೂ ಉಳಿದಿಲ್ಲ ಎಂದನಂತೆ. ನಿಮ್ಮ ಹಂಗಿನಿಂದ ನಾನು ಎಂದೆಂದೂ ಮುಕ್ತನಾಗಲಾರೆ ಎಂದನಂತೆ. ನಿಮಗೆ ಚಿರಕೃತಜ್ಞನಾಗಿದ್ದೇನೆ ಎಂದನಂತೆ. ಕೊಳಲೆತ್ತಿಕೊಂಡನಂತೆ.

ತೋಳ್ಪಾಡಿ ಭಾಗವತ 27:ಕೃಷ್ಣ ಕಿರುಬೆರಳಲ್ಲಿ ಓಲಾಡಿದ ಗೋವರ್ಧನಗಿರಿ!

ಒಮ್ಮೆ ಹೀಗಾಯಿತು.

ವೃಂದಾವನದ ಗೋಪ ಹಿರಿಯರೆಲ್ಲ ದೊಡ್ಡ ಸಡಗರದಲ್ಲಿದ್ದಂತೆ ಕಾಣಿಸುತ್ತಿತ್ತು. ಒಂದು ಬೆಳಿಗ್ಗೆ ಎಲ್ಲ ಸೇರಿದ್ದರು. ನೇತಾರನಾದ ನಂದಗೋಪನೊಡನೆ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಕೃಷ್ಣ ಅಲ್ಲಿ ಸುಳಿದಾಡಿದ. ಹಿರಿಯರಿಗೆಲ್ಲ ಅವನ ಬಗ್ಗೆ ಮುಗ್ಧ ವ್ಯಾಮಿಶ್ರಭಾವ! ನೋಡುವುದಕ್ಕೆ ಎಂಟು ವರ್ಷದ ಹುಡುಗ. ಅವನ ಇದುವರೆಗಿನ ಚರಿತ್ರೆಯೋ- ಅದರ ಆಳ; ಅಗಲ ನಿಲುಕದು- ನಂಬಲಾರೆವು; ನಂಬದುಳಿಯಲಾರೆವು. ಕೃಷ್ಣನ ಬಗ್ಗೆ ಪ್ರೀತಿ ಮಾತ್ರ ಗಾಢ. ಏನು ಮಾತುಕತೆ? ಎಂದು ಸಹಜವಾಗಿ ಕೇಳಿದ ಕೃಷ್ಣ. ತಂದೆ ನಂದ ಹೇಳಿದ: `ಆಶ್ವಯುಜ ತದಿಗೆ ನಾಳದು ಬರುತ್ತದಲ್ಲ; ಅಂದು ಇಂದ್ರ ದೇವನಿಗೆ ಪೂಜೆ ನಡೆಯಬೇಕಾಗಿದೆ. ಅದಕ್ಕೆ ಇಷ್ಟೆಲ್ಲ ಸಡಗರ ನಮ್ಮ ಗೋಪರಿಗೆ’. ಇಂದ್ರಪೂಜೆ? ಏಕಂತೆ? …ನಂದನಿಗೆ ಪರಂಪರೆಯ ನಂಬಿಕೆಗಳ ಬಗ್ಗೆ ಮಗನಿಗೆ ಹೇಳುವ ಉತ್ಸಾಹ ಬಂತು. ಹೇಳಿದ: `ಮಗು, ನಾವು ಗೊಲ್ಲಮಂದಿ. ನಮ್ಮ ಹಸುಗಳಿಗೆ ಹುಲ್ಲು ನೀರು ಸದಾ ಬೇಕು. ನಮಗೆ ಉಣ್ಣುವುದಕ್ಕೆ ಧಾನ್ಯಗಳು, ಅದಕ್ಕೆ ಮಳೆ, ಮಳೆಗರೆಯುವ ಮೋಡಗಳ ರಾಶಿ ಇವಕ್ಕೆಲ್ಲ ಒಡೆಯ ಇಂದ್ರ. ಅಂಥ ಇಂದ್ರನನ್ನು ಮಳೆಗಾಲ ಮೆಲ್ಲಗೆ ಕೊನೆಯಾಗುತ್ತಿರುವಂತೆ ದೊಡ್ಡದಾಗಿ ಪೂಜಿಸುವುದು ನಮ್ಮ ಪದ್ಧತಿಯಾಗಿದೆ’. ಕೃಷ್ಣ ಈ ಮಾತಿಗೆ ಏನೋ ಚಿಂತಿಸುತ್ತ ಬದಲು ಹೇಳಿದ.

ಕೃಷ್ಣ: ಇದೇನೋ ನಿಜವೇ. ಕೇಳುವುದಕ್ಕೂ ಚೆನ್ನಾಗಿದೆ. ಆದರೆ ಮುಖ್ಯವಾದ ಮಾತೆಂದರೆ, ನಾವು ನಮ್ಮ ಅನುಭವವನ್ನು ನೋಡಬೇಕು.

ನಂದ: ನಮ್ಮ ಅನುಭವವನ್ನೇ ಹೇಳುತ್ತಿರುವುದು ಮಗು. ಹಿಂದಿನಿಂದ ನಡೆದುಕೊಂಡು ಬಂದದ್ದು. ಅಂದರೆ, ಅನುಭವ ಬಹುಕಾಲದ ಬಾಳಿಕೆಯ ಮೇಲೆ ನಿಂತಿರೋದು. ಮಳೆ ಬಾರದೆ ಇದ್ದರೆ ನಮ್ಮ ಬದುಕಿನ ನಿರ್ವಹಣೆ ಹೇಗೆ? ಮಳೆ ಇಂದ್ರನ ಅಧೀನದಲ್ಲಿದೆ.

ಕೃಷ್ಣ: ಅನುಭವವನ್ನು ನೋಡಬೇಕು ಎನ್ನುವಾಗ ಅನುಭವವನ್ನು ಇನ್ನೊಮ್ಮೆ ನೋಡಬೇಕು ಅಂತ. ಬಹುಕಾಲ ಮಾಡಿಕೊಂಡು ಬಂದಿದ್ದೇವೆ ಎಂದರೆ, ಆದುದರಿಂದಲೇ ಅದನ್ನು ವಿಮರ್ಶಿಸಲೇಬೇಕು ಅಂತ. ಇಲ್ಲದಿದ್ದರೆ ಎಷ್ಟು ಸಂಭ್ರಮವಿದ್ದರೂ ಅದು ಹುಚ್ಚು ಸಂಭ್ರಮವಾಗಬಹುದು. ಪದ್ಧತಿಯನ್ನು ನಾವು ಮುಂದುವರಿಸದಿದ್ದರೆ ತೊಂದರೆಯಾದೀತು ಎಂಬ `ಭಯ’. ಕೈಬಿಟ್ಟರೆ ‘ಪಾಪ’ ಎಂಬ ಭಾವನೆ. ‘ಈ ಎರಡರ ಮೇಲಿನಿಂದ ಹಿಂದಿನಿಂದ ಬಂದದ್ದು ಹಾಗೆಯೇ ನಡೆಯುತ್ತಿದೆಯಷ್ಟೆ. ಅನುಭವವನ್ನು ವಿಮರ್ಶಿಸದೆ ಇದ್ದರೆ, ಆ ಅನುಭವವೇ ‘ಭಯ’ ಮತ್ತು ‘ಪಾಪ’ ಭಾವನೆಗಳನ್ನು ಹುಟ್ಟಿಸಿ ಬಿಡುತ್ತದೆ. ಅನುಭವ- ಅದು ಯಾವುದೇ ಆದರೂ- ನಮ್ಮನ್ನು ತಿಳುವಳಿಕೆಯುಳ್ಳವರನ್ನಾಗಿ ಮಾಡಬೇಕಲ್ಲ.

ನಂದ: ಮಗು; ಏನೋ ಹೊಸ ಮಾತು ಆಡುತ್ತಿರುವೆ. ಅನುಭವವನ್ನು ವಿಮರ್ಶಿಸುವುದೆಂದರೆ?

ಕೃಷ್ಣ: ವಿಮರ್ಶಿಸುವುದಕ್ಕೆ ಭಯವೇಕೆ ಅಪ್ಪ? ಬದುಕಿಗಾಗಿ ನಾವು ನಾನಾ ಕರ್ಮಗಳನ್ನು ಮಾಡಲೇಬೇಕಲ್ಲ. ಬೆಳೆ ಬರಬೇಕಾದರೆ ಮಣ್ಣನ್ನು ಉತ್ತು ಬಿತ್ತಿ ಸೆಗಣಿ ಗಂಜಳ ಸೇರಿಸಬೇಕಲ್ಲ. ಅಣ್ಣ ಬಲರಾಮನಂತೂ ನೇಗಿಲನ್ನೇ ಹೊತ್ತುಕೊಂಡು ತಿರುಗೋದು ಅಭ್ಯಾಸ ಮಾಡಿದ್ದಾನೆ. ಅವನು ಕರ್ಮವೀರ! ಹಸುಗಳನ್ನು ಸಾಕೋದು ಎಂದರೂ ಅವುಗಳನ್ನು ಚೆನ್ನಾಗಿ ನೋಡಿಕೊಂಡು, ಹಾಲು, ಹಯನು ನಗರಗಳಿಗೆ ಒಯ್ದು ಮಾರುವ ತನಕವೂ ನಾವು ‘ಕರ್ಮ’ ಮಾಡುತ್ತಲೇ ಇರಬೇಕಲ್ಲ.

ನಂದ: ಹೌದು. ಅದನ್ನು ಮಾಡುತ್ತಲೇ ಇದ್ದೇವಲ್ಲ ಮಗು.

ಕೃಷ್ಣ: ಮಾಡುತ್ತಿದ್ದೇವೆ. ಅದನ್ನೇ ಒತ್ತಿ ಹೇಳುತ್ತಿರೋದು ನಾನು. ‘ಕರ್ಮ’ ಮಾಡುವುದಕ್ಕೇ ಮನುಷ್ಯನ ಅವತಾರವಾಗಿದೆ. ಕರ್ಮ ಮಾಡದೆ ಇದ್ದರೆ ಜೀವನವೇ ಇಲ್ಲ. ಲೋಕವೇ ಇಲ್ಲ. ಕರ್ಮದ ಮೇಲೆ ಲೋಕ ಜೀವನವೇ, ವಿಶ್ವ ಜೀವನವೇ ನಿಂತಿದೆ. ತಿಳಿಯಿತೇ ಅಪ್ಪ.

ನಂದ: ಅಂದರೆ?

ಕೃಷ್ಣ: ಅಂದರೆ, ಪ್ರಕೃತಿಯೂ ಕರ್ಮ ಮಾಡುತ್ತಿದೆ. ಮಳೆ ಬರೋದು ಕೂಡ ಪ್ರಕೃತಿಯೇ ನಡೆಸುತ್ತಿರುವ ಕರ್ಮ. ಪ್ರಕೃತಿಯೇ ನಮ್ಮನ್ನು ಕರ್ಮದಲ್ಲಿ ತೊಡಗಿಸುತ್ತಿದೆ. ನೀವು, ಇಂದ್ರ ಮಳೆಗರೆಯುತ್ತಾನೆಂದುಕೊಂಡರೂ ಅದೇನೂ ಅವನ ಅನುಗ್ರಹವಲ್ಲ! ಅದು ಅವನು ಮಾಡಲೇಬೇಕಾದ ಕರ್ತವ್ಯ ಎಂದು ತಿಳಿಯಿರಿ. ಅದನ್ನು ಮಾಡದೆ ಇರುವಂತಿಲ್ಲ ಅವನು. ನಮ್ಮ ‘ಕರ್ಮ’ದ ಮೇಲೆ ನಮಗೆ ಎಚ್ಚರದ ಅಭಿಮಾನವಿದ್ದಾಗ ಲೋಕವೆಲ್ಲ ಕರ್ಮನಿರತನಾಗಿರುವುದು ತಿಳಿಯುತ್ತೆ. ಆಗ ‘ಭಯ’, ‘ಪಾಪ’ ಎಂಬ, ನಮ್ಮ ಮನವನ್ನು ಮುಸುಕಿದ ಈ ಕತ್ತಲೆ ಕಳೆದೀತು. ಅರಿವು ನಿಚ್ಚಳವಾದೀತು.

ನಂದ: ನಾವು ಮಾಡುವುದು ಏನಿದ್ದರೂ ಮಳೆ ಸುರಿಯದೆ ಇದ್ದರೆ ಎಲ್ಲವೂ ನಿಷ್ಫಲವಲ್ಲವೆ ಮಗು? ಮಳೆ ಸುರಿಯೋದು ಪರ್ಜನ್ಯನ ಇಚ್ಛೆಯಲ್ಲವೆ? ‘ಪುಂಸಾಂ ಪುರುಷಕಾರಾಣಾಂ ಪರ್ಜನ್ಯ: ಫಲಭಾವನ:’

ಕೃಷ್ಣ: ನಾವು ಮಾಡಿದ್ದಕ್ಕೆ ಅವನು ಫಲಕೊಡುತ್ತಾನೆ ಎನ್ನುವ ತಿಳುವಳಿಕೆ ಮೇಲ್ನೋಟಕ್ಕೆ ಸರಿಯೇ. ಆದರೆ, ಫಲ ಕೊಡುವುದೆನ್ನುವುದು ಅವನು ಮಾಡಬೇಕಾದ ‘ಕರ್ಮ’. ನಮಗೆ ಫಲವಾಗಿ ಕಾಣಿಸುವ ಅವನ ಕರ್ಮವು ನಾವು ಮಾಡುವ ಕರ್ಮದ ಮೇಲೆ ನಿಂತಿದೆ ಎನ್ನುವ ತಿಳುವಳಿಕೆ ನಿಜವಾಗಿ ಸರಿ. ಸರಿಯೇ ಸರಿ. ತಿಳಿದವರು ಬಳಸುವ ‘ಯಜ್ಞ’ ಎಂಬ ಪದ ಇಟ್ಟುಕೊಂಡು ನೋಡುವುದಾದರೆ,- ‘ಯಜ್ಞ’ವೆಂದರೆ ದೇವತೆಗಳು ಮಾಡುವ, ಮಾಡಲೇಬೇಕಾದ ‘ಕರ್ಮ’. ಆದುದರಿಂದ ನಾವು ಮಾಡುವ ‘ಕರ್ಮ’ವೆಂದರೆ, ಮನುಷ್ಯರು ಮಾಡುವ ಮಾಡಲೇಬೇಕಾದ ‘ಯಜ್ಞ’ ಕರ್ಮಕ್ಕೆ ಫಲಕೊಡುವ ಒಬ್ಬ ಈಶ್ವರನನ್ನು ಕಲ್ಪಿಸಿದರೂ, ನಾವು ಕರ್ಮ ಮಾಡದೇ ಇದ್ದರೆ, ಅವನು ಫಲಕೊಡುವುದು ಸಾಧ್ಯವೇ? `ಅಸ್ತಿ ಚೇತ್ ಈಶ್ವರ: ಕಶ್ಚಿತ್ ಫಲರೂಪ್ಯನ್ಯ ಕರ್ಮಣಾಮ್, ಕರ್ತಾರಂ ಭಜತೇ ಸೋಪಿ ನಹ್ಯಕರ್ತು: ಪ್ರಭುಹಿಸ:’ ಅವನು ಫಲಕೊಡಲಾಗದೆ ಇದ್ದರೆ, ಈಶ್ವರನಾಗಿರುವುದು ಸಾಧ್ಯವೇ? ಆದುದರಿಂದ ಈ ‘ಈಶ್ವರ’ನೆಂಬವನನ್ನು ನಿಜವಾಗಿ ‘ಈಶ್ವರ’ನನ್ನಾಗಿ ಮಾಡಿದ್ದು ನಾವು. ನಮ್ಮ ‘ಕರ್ಮ’. ಇದು ಪಂಚೇಂದ್ರಿಯಗಳನ್ನು ಪಡೆದು ಭೂಮಿಯ ಮೇಲೆ ನಿಂತ ಕಾರ್ಮಿಕನಾದ ಮನುಷ್ಯನ ನಿಜ! ಮನುಷ್ಯನ ಅನುಭವ! ಈ ಅನುಭವ ಪ್ರಪಂಚದಲ್ಲಿ ‘ಭಯ’-ಪಾಪ’ಗಳು ನುಸುಳಿಕೊಳ್ಳುವುದೇಕೆ?

ನಂದ: ಏನೋ ಹೊಸ ಲೋಕವನ್ನು ನೋಡುತ್ತಿರುವಂತೆ ಆಗುತ್ತಿದೆ ಕೃಷ್ಣ. ಸ್ವಲ್ಪ ಮುಜುಗರವೂ ಆಗುತ್ತಿದೆ. ನಾವು ಹಳಬರಲ್ಲವೇ?

ಕೃಷ್ಣನ ಮುಖದಲ್ಲಿ ದೊಡ್ಡ ನಗು ಅರಳಿತು. ಹೇಳಿದ: ನಾನೂ ಹಳಬನೇ. ಇಷ್ಟು ಕಾಲದಿಂದ ಲೋಕ ಹೀಗೆ ನಡೆಯುತ್ತಾ ಇದೆ ಎಂಬ ಅರಿವು ಬಂದವರೆಲ್ಲ ಹಳಬರೇ. ಆ ‘ಅರಿವು’ ಮಾತ್ರ ಅವರನ್ನು ಹೊಚ್ಚ ಹೊಸದಾಗಿ ಇಡುತ್ತದೆ. ಹಳಬ-ಹೊಸಬ ಇಬ್ಬರೂ ಒಬ್ಬನಲ್ಲೇ ಇದ್ದಾರೆ ಎನಿಸುತ್ತದೆ ಅಪ್ಪ. ‘ಅಂಜಿಕೆ’ ಮತ್ತು ‘ಪಾಪಭಾವ’ ಇವೇ ಹಳತಿನ ದೋಷ. ಇವಿಲ್ಲದೇ ಅನುಭವವನ್ನು ಪ್ರೀತಿಸುವುದೇ ಹೊಸತನ.  ನಾವು ಗೋಕುಲವನ್ನು ಬಿಟ್ಟು ಬಂದೆವು. ವೃಂದಾವನವನ್ನು ಮನೆ ಮಾಡಿಕೊಂಡೆವು. ಹೊಸಬರಾದೆವು. ಇನ್ನೂ ನಾನೆಲ್ಲಿಗೆಲ್ಲ ಹೋಗಲಿದೆಯೋ ಬಲ್ಲವರಾರು? ಲೋಕ ಕರೆದಂತೆ ಕೇಳಿಸುತ್ತಿದೆ. ತಾಯ ಬಳಿ ಮಲಗಿರುವ ಮಗು, ತಾಯಿ ಹೆತ್ತ ಮಗು ಹೌದು. ಅದೇ ತಾಯಿ ಹೆತ್ತದ್ದೋ ಬಲ್ಲವರಾರು? ಒಂದೊಮ್ಮೆ ಅಲ್ಲದಿದ್ದರೂ- ಮಗುವನ್ನು ಬದಲಿಸಿದರೂ ಆಶ್ಚರ್ಯವಿಲ್ಲ- ತಾಯಿಗೆ ತನ್ನ ಪಕ್ಕದಲ್ಲಿ ಉಸಿರಾಡುವ ಮಗು, ತನ್ನ ಎದೆ ಉಣ್ಣುವ ಮಗು ತನ್ನ ಮಗುವೇ ಅಲ್ಲವೆ? ಆ ಮಗುವಿಗೂ ತಾಯಿಯೆಂದರೆ ತಾನು ಯಾರ ಹಾಲು ಉಂಡೆನೋ ಅವಳೇ ಅಲ್ಲವೆ?- ಇದು ಅನುಭವದ ನಿಜ. ನಮ್ಮ ಅನುಭವವೇ ನಮ್ಮ ಗರ್ಭಗೃಹ! ದೇವರಿರುವ ಜಾಗ! ನಮ್ಮ ಕರ್ಮ, ನಮ್ಮ ಅನುಭವ ಇವಲ್ಲದೆ ಆ ದೇವರಿಗೆ ಬೇರೆ ಜಾಗವಿಲ್ಲ. ನಮ್ಮ ನಿಜವನ್ನು ನಾವೇ ಪಡೆಯಬೇಕಾಗಿದೆ.

ನಂದ: ಅನುಭವವನ್ನು ಇನ್ನೊಮ್ಮೆ ನೋಡಬೇಕು ಎನ್ನುವ ನಿನ್ನ ಮಾತು ಈಗ ಸ್ವಲ್ಪ ತಿಳಿಯುತ್ತಿದೆ ಕೃಷ್ಣ. ಅಂದರೆ, ಏನು ಮಾಡಬೇಕೆನ್ನುತ್ತಿ ನೀನು? ಇಂದ್ರ ಹಬ್ಬ ಬೇಡವೆನ್ನುತ್ತೀಯ? ಹುಡುಗರೆಲ್ಲ ಬಹಳ ಉಲ್ಲಾಸದಲ್ಲಿ ಸೇರಿದ್ದಾರೆ.

ಕೃಷ್ಣ: ಹಬ್ಬ ಬೇಡವೆನ್ನುವವನೇ ನಾನು? ತನ್ನ ಕರ್ಮದಲ್ಲಿ ತಾನು ತೊಡಗಿರುವ ಮನುಷ್ಯನನ್ನು ಕಂಡರೆ  ದೇವತೆಗಳ ಕಣ್ಣಿಗೆ ಹಬ್ಬವಾಗಬೇಕು! ಹಾಗೆ ಮಾಡೋಣ. ನೋಡಿ. ಅಲ್ಲಿ ಕಾಣಿಸುತ್ತಿದೆಯಲ್ಲ ಆ ಬೆಟ್ಟ. ‘ಗೋವರ್ಧನಗಿರಿ’. ಅದನ್ನು ನೋಡುವಾಗಲೇ ಕಣ್ಣಿಗೆ ಹಬ್ಬವಾಗುವುದಿಲ್ಲವೆ? ಎಷ್ಟು ಜೀವಿಗಳಿಗೆ ಆಶ್ರಯವಿದು- ಈ ಬೆಟ್ಟ! ನಿಜಕ್ಕಾದರೆ, ಈ ಗಿರಿಯೇ `ದೇವತಾತ್ಮಾ’. ಈ ಬೆಟ್ಟವನ್ನೇ ನಮ್ಮ ಹಬ್ಬದ ಕೇಂದ್ರವಾಗಿ ಮಾಡೋಣವಂತೆ.

ನಂದ: ಅಂದರೆ?

ಕೃಷ್ಣ: ತಂದೆ, ಮನುಷ್ಯರು ಇಂದ್ರಾದಿ ದೇವತೆಗಳನ್ನು ಪೂಜಿಸುತ್ತಾರೆ. ಪೂಜಿಸುವ ಮನುಷ್ಯ ಒಂದು ಬದಿ. ಪೂಜೆಗೊಳ್ಳುವ ದೇವತೆ ಇನ್ನೊಂದು ಬದಿ. ದೇವತೆಗಳು ಕಾಣಿಸುವುದಿಲ್ಲ. ದೇವತೆಗಳನ್ನು ಪೂಜಿಸುತ್ತ ತನ್ನನ್ನೇ ತಾನು ಮನುಷ್ಯ ಪೂಜಿಸಿಕೊಳ್ಳುತ್ತಾನೆ. ಈ ನಡುವೆ ‘ನಿಸರ್ಗ’ ಇದೆ. ಕಣ್ಣಿಗೆ ಕಾಣುತ್ತಿರುವ, ನಮ್ಮ ಅನುಭವದ ಭಾಗವಾಗಿರುವ ನಿಸರ್ಗ. ಪ್ರಕೃತಿ. ಕಣ್ಣ ಮುಂದಿರೋದನ್ನು ನಿರ್ಲಕ್ಷಿಸಬಾರದು. ನಿರ್ಲಕ್ಷಿಸಿದರೆ, ಕಾಣದೆ ಇರೋದನ್ನು ಅನುಭವಿಸಬಲ್ಲ ಸೂಕ್ಷ್ಮ ಕೂಡ ಕಳೆದು ಹೋಗಬಹುದು. ಬನ್ನಿ; ಹೋಗೋಣ; ಬೆಟ್ಟದಲ್ಲಿ ಹಬ್ಬ ಮಾಡೋಣ.

ತಂದೆ ಮಕ್ಕಳ ನಡುವಣ ಮಾತುಕತೆ ಕೇಳುತ್ತಿದ್ದ ಗರ್ಗರಿಗೆ ಪರಮಾಶ್ಚರ್ಯವಾಯಿತು. ಅವರಿಗೆ ಅನ್ನಿಸಿತು- ಇದು ವಯಸ್ಸಿಗೆ ಮೀರಿದ ಮಾತು. ಮನುಷ್ಯ ಪ್ರಜ್ಞೆಗೇ ಮೀರಿದಂತಿರುವ ಮಾತು. ಭೂಮ್ಯಾಕಾಶಗಳೇ ಒಪ್ಪುವ ಮಾತು. ಬೆಟ್ಟಗಳೇ ತಲೆದೂಗುವಂಥ; ಕುಣಿದಾಡುವಂಥ, ಭೂಮಿಯಿಂದ ನಾಲ್ಕಂಗುಲ ಮೇಲೆ ನಿಲ್ಲ ಬಲ್ಲಂಥ ಮಾತು! ದೇವತೆಗಳಿಗೇ ಅಮೃತ ಸಿಗಬೇಕಾದರೆ ‘ಮಂದರ’ ಎನ್ನುವ ಬೆಟ್ಟವನ್ನು ಕಡೆಗೋಲಾಗಿಸಬೇಕಾಯಿತು. ಆ ಕಥೆಗೆ ಬೇರೆಯೇ ಒಂದು ಅರ್ಥ ಈಗ ಹೊಳೆಯುತ್ತಿದೆ. ಇದೇ ಸರಿ. ಈ ಹುಡುಗ ದೇವರ ಅವತಾರವೇ. ದೇವರೇ!

ಹಾಗೆ ವೃಂದಾವನದ ಹಿರಿಯರು; ಹುಡುಗರು; ಹೆಂಗಸರು ಕೂಡಿ ಗೋವರ್ಧನವನ್ನು ಏರಿದರು. ಸೇರಿದರು. ದೊಡ್ಡ ಹಬ್ಬವಾಗಿ ಹೋಯಿತು. ಎಲ್ಲರೂ ಸೇರುವುದೇ ಒಂದು ಹಬ್ಬ. ಕೂಡುಕಟ್ಟಿನ ಜಾಗವಾದ ಗೋವರ್ಧನವೇ ಹಬ್ಬದ ಕೇಂದ್ರವಾಯಿತು. ಹಸುಗಳನ್ನು ಮುಂದಿಟ್ಟುಕೊಂಡು ಬೆಟ್ಟವನ್ನು ಸುತ್ತಿದರು. ಗೋಪಿಕೆಯರು ವೀರಗಾಥೆಗಳನ್ನು ಹಾಡಿದರು. ಬ್ರಾಹ್ಮಣರು ಸ್ವಸ್ತಿವಾಚನ ಹಾಡಿದರು. ಹುಡುಗರು ಕುಣಿದಾಡಿದರು. ಕೆನೆ ಮೊಸರಿನ ಊಟವಾಯಿತು. ಈ ಎಲ್ಲದರ ನಡುವೆ ಕೃಷ್ಣನಿಗೆ ಗೋವರ್ಧನಗಿರಿಯ ಜತೆಗೆ ತಾದಾತ್ಮ್ಯ ಭಾವವೇ ಉಂಟಾಗಿ ಅವನು ಆವಿಷ್ಟನಾದನಂತೆ. ಬೆಟ್ಟಕ್ಕೆ ಇರಿಸಿದ್ದ ಬಲಿಯನ್ನು ತಾನೇ ಉಂಡನಂತೆ!

ಇಂದ್ರನಿಗೆ ಸಿಟ್ಟೇರಿತು. ಅನೂಚಾನವಾಗಿ ನಡೆದು ಬಂದ ಪದ್ಧತಿಗೆ ತಡೆಯಾಯಿತು. ವಿಶ್ವ ಮನಸ್ಸಿಗೆ ಅಭ್ಯಾಸವಾಗಿ ಹೋದ ಚಟವೊಂದು ಪೂರೈಸಲ್ಪಡದೆ ಇದ್ದಾಗ ಇಂದ್ರನಿಗೆ ಆಗ್ರಹ ಉಂಟಾಯಿತು. ಮನುಷ್ಯರಿಗೆ ಭಯ. ದೇವತೆಗಳಿಗೆ ಆಗ್ರಹ. ಬಹಳ ಹಳಬರಾದುದರಿಂದ ಪೂರ್ವಗ್ರಹ! ಆ ಆಗ್ರಹದ ಪರಿಣಾಮವೋ ಎಂಬಂತೆ ಮಳೆ ನಿಲ್ಲದೆ ಧಾರಾಕಾರ ಸುರಿಯಿತು. ಆಲಿಕಲ್ಲುಗಳ ಮಳೆ. ವೃಂದಾವನದಲ್ಲಿ ನೆರೆ ಏರಿತು. ಜೀವನ ತತ್ತರಿಸಿತು. ಇದು ಇಂದ್ರನ ಕೋಪವೆಂದೇ ಎಲ್ಲರೂ ಬಗೆದರು.

ಕೃಷ್ಣ ಹೇಳಿದನಂತೆ: ಇಂಥ ಸಂಕಟ ಬಾರದೆ ಬೆಟ್ಟವೊಂದು ಕೊಡಬಹುದಾದ ಆಶ್ರಯವೇನು ಎಂದು ತಿಳಿಯುವುದಿಲ್ಲ. ಎಲ್ಲರೂ ಬನ್ನಿ. ಬೆಟ್ಟದ ಮರೆಯಲ್ಲಿ ನಿಲ್ಲೋಣ ಎಂದನಂತೆ. ಮರೆ ಎಲ್ಲಿ?

ಕೃಷ್ಣ ತನ್ನನ್ನು ತಾನು ಗೋವರ್ಧನ ಗಿರಿ ಎಂದೇ ಬಗೆದು ಆವಿಷ್ಟನಾದವನು ತನ್ನನ್ನು ತಾನೇ ಎತ್ತರಿಸಿಕೊಂಡನಂತೆ. ಹಾಗೆ ಬೆಟ್ಟವನ್ನೆತ್ತಿದನಂತೆ. ಎತ್ತಿದರೆ ಲೀಲೆಯಿಂದೆಂಬಂತೆ ಎತ್ತಬೇಕು. ಅಂದರೆ ಕಿರುಬೆರಳಿನಿಂದಲೇ ಎತ್ತಬೇಕು!

ಎಂಟು ವರ್ಷದ ಹುಡುಗ. ಅವನ ಕಿರಿಬೆರಳು. ಅದರ ಮೇಲೆ ನಿಂತಿರುವ ಗೋವರ್ಧನಗಿರಿ! ಬೆಟ್ಟವೆಂದೇನು ಇಡಿಯ ಬ್ರಹ್ಮಾಂಡವೇ ಹುಡುಗನ ಕಿರಿ ಬೆರಳಿನ ಮೇಲೆ ನಿಂತಿದೆ. ಮಕ್ಕಳ ಕನಸುಗಳೆಲ್ಲ ಅಂಗೈಯಲ್ಲಿ ಗೆರೆಗಳಾಗುತ್ತವಂತೆ. ಕಿರಿ ಬೆರಳಿನ ಕನಸು- ಬೆಟ್ಟವನ್ನು ಎತ್ತೋದು. ಬೆಟ್ಟದ ಪ್ರೀತಿ ದೊಡ್ಡದು. ಬೆಟ್ಟದಷ್ಟು ಪ್ರೀತಿ! ಅದು ಕೃಷ್ಣನ ಕಿರಿ ಬೆರಳಿನಲ್ಲಿ ಓಲಾಡುತ್ತಾ ನಿಲ್ಲುವುದಕ್ಕೆ ಒಪ್ಪಿಬಿಟ್ಟಿತು! ತಾನು ಕಾಣದ ಕೈಯ ಮೇಲೆ ನಿಂತಿರುವುದು ಗೋವರ್ಧನಕ್ಕೆ ಎಂದೂ ಮರೆತಿರಲಿಲ್ಲ!

ಅದು ಇಂದ್ರನಿಗೆ ಮರೆತಿತ್ತು. ಕೃಷ್ಣ ಹೇಳಿದ್ದು ಸರಿ ಇರಬಹುದು. ಮನುಷ್ಯರ ಅತಿ ವಿನಯ; ಕೀಳರಿಮೆ, ದೇವತೆಗಳ ಅಹಂಕಾರಕ್ಕೆ ಕಾರಣವಾಗಬಹುದು. `ಪರಸ್ಪರಂ ಭಾವಯಂತ:’ ಎನ್ನುವುದು ಕೃಷ್ಣನ ನುಡಿಕಟ್ಟು ದೇವತೆಗಳು ಮತ್ತು ಮನುಷ್ಯರ ಪರಸ್ಪರತೆಯ ಅಹಂಕಾರವನ್ನು ನಿಯಂತ್ರಿಸುವ ಮಾತಾಗಿದೆ. ನೀನು ಕರ್ಮದಲ್ಲಿ ತೊಡಗು, ಫಲವನ್ನು ತ್ಯಾಗಮಾಡು ಎಂದಾಗ ಅದು ದೇವತೆಗಳ ಅಹಂಕಾರವನ್ನು ಧಿಕ್ಕರಿಸು, ನಿನಗೆ ಆ ಶಕ್ತಿ ಇದೆ ಎಂಬ ಅರ್ಥವನ್ನು ಹೊಳೆಯಿಸತಕ್ಕ ಮಾತಾಗಿದೆ. ಇಂದ್ರನಿಗೆ ಈಗ ಕಾಣದ ಕೈಯ ನೆನಪಾಯಿತು. ಅದರ ಪ್ರತೀಕವಾಗಿ ಕೃಷ್ಣನ ಕಿರಿಬೆರಳು ಕಾಣಿಸಿತು. ತನ್ನ ಅಹಂಕಾರ ಬೆಟ್ಟದಷ್ಟಿತ್ತು ಎಂದು ಸಂಕೋಚವಾಯಿತು. ಇಂದ್ರ ಆ ಕಿರಿ ಬೆರಳಿಗೆ ಕೈಜೋಡಿಸಿದನಂತೆ. `ಮನ್ನಿಸು ಗೊಲ್ಲರ ಹುಡುಗ’- ಎಂದನಂತೆ. ಮಜ್ಜಿಗೆಯಲ್ಲಿ ಬೆಣ್ಣೆಯಂತೆ ತೇಲುವ ಮನಸ್ಸನ್ನು ಕೊಡು ಎಂದು ಬೇಡಿದನಂತೆ. ನಿನ್ನ ಕೃಪೆ ಇದ್ದರೆ ಬೆಟ್ಟವೂ ಮೇಲೇರಬಹುದು; ಇಂದ್ರನೂ ಕೆಳಗಿಳಿಯಬಹುದು. ಎಂದನಂತೆ. ಸಾವಿರ ಕಣ್ಣಿದ್ದರೂ ಮದಾಂಧನಾಗಬಹುದು; ನನ್ನದು ತಪ್ಪಿತು ಎಂದನಂತೆ. ಮನುಷ್ಯರಲ್ಲಿ ಭಯವನ್ನೂ, ಪಾಪ ಭಾವವನ್ನೂ ಉಂಟು ಮಾಡಿದ್ದು ನಮ್ಮ ಮದಾಂಧತೆಯೇ ಎಂದು ಒಪ್ಪಿಕೊಂಡನಂತೆ. ನಾವು ಪೂಜೆಗೊಳ್ಳುತ್ತಿರುವುದೂ ಯಾಂತ್ರಿಕವಾಗಿ ಬಿಟ್ಟದ್ದು ತಿಳಿಯದೆ ಹೋಯಿತು ಎಂದು ತೋಡಿಕೊಂಡನಂತೆ. ನೀನು ಬೆಟ್ಟವನ್ನೂ ಎತ್ತಿದ್ದು, ನನ್ನ ಅಹಂಕಾರದ ಬೆಟ್ಟ ಕುಸಿಯುವಂತೆ ಮಾಡಿದ್ದು- ಎರಡೂ ನಿಜ ಎಂದು ಕೃಷ್ಣನ ಕಿರಿ ಬೆರಳನ್ನೂ ಅದರ ತುದಿಯಲ್ಲಿ ನಿಂತ ಬೆಟ್ಟವನ್ನೂ ಅಚ್ಚರಿಯ ಕಣ್ಣುಗಳಿಂದ ನೋಡಿದನಂತೆ.

ಕೃಷ್ಣ ನಗುತ್ತ ಹೇಳಿದನಂತೆ: ರಾಕ್ಷಸರು ಭೂ ಭಾರಕರು ಎನ್ನುತ್ತಾರೆ. ನೀವು ದೇವತೆಗಳು ಏನೂ ಕಡಿಮೆಯಿಲ್ಲ! ಹೋಗಲಿ ಬಿಡು. ನಾನು ಬೆಟ್ಟ ಎತ್ತಿದ್ದು ಈ ಗೋವಳರಿಗಾಗಿ ಅಲ್ಲ. ಅದು ನಿನಗಾಗಿ. ನಿನಗಾಗಿ ಮಾಡಿದ ‘ಇಂದ್ರ ಜಾಲ’ ಎಂದುಕೋ. ನಿಜವಾದ ತಿಳುವಳಿಕೆಗೆ ಈ ಗೊಲ್ಲರನ್ನು ನೋಡು. ಬೆಟ್ಟ ಎತ್ತಿದ ಮಾತು ಬಿಡು. ‘ಒಂದು ಹುಲ್ಲಗರಿಕೆಯೂ ದೇವರ ಇಚ್ಛೆ ಇಲ್ಲದೆ ಅಲ್ಲಾಡದು’ ಎನ್ನುತ್ತಾರೆ ಇವರು. ಇದು ತಿಳುವಳಿಕೆ. ಹುಲ್ಲು; ಹಸು; ಈ ಗೋಪಾಲಕರು- ಇವರ ಈ ತಿಳುವಳಿಕೆ ಹೇಗೆ ಒಂದಾಗಿದೆ ನೋಡು! ನಾನು ಬೆಟ್ಟ ಎತ್ತಿ ನಿನಗೆ ದೇವರಾಗಬೇಕಾಯಿತು. ಅದು ನಿನ್ನ ತಿಳುವಳಿಕೆಯ ಮಟ್ಟ. ಗೋವಳರಿಗೆ ದೇವರು ಹುಲ್ಲಗರಿಕೆಯಲ್ಲಿದ್ದಾನೆ! ಅವರ ನಡುವೆ ನಡೆದಾಡಿ ಈ ಅರಿವು ನನಗೆ ಬಂತು- ಎಂದನಂತೆ.

ಹೊಸ ಅರಿವು ಹೊತ್ತು ಇಂದ್ರ ಮರಳಿದ. ಕೃಷ್ಣ, ಬೆಟ್ಟ ಎತ್ತಿದ ಅದ್ಭುತವನ್ನು ಆಚರಿಸಬೇಡವೇ ಎಂದು ಗೋವಳರಿಗೆ ತೀವ್ರವಾಗಿ ಅನ್ನಿಸಿತು. ಅವರು, ಆ ಗೋವರ್ಧನದಲ್ಲಿಯೇ ಗೋವಿಂದನಾದ ಕೃಷ್ಣನಿಗೆ ಪಟ್ಟಾಭಿಷೇಕವನ್ನೇ ಮಾಡಿದರಂತೆ. ಇದು ಕೃಷ್ಣನಿಗೆ ಗೊಲ್ಲರು ನಡೆಸಿದ ‘ಅಗ್ರ ಪೂಜೆ’.

 

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ ಭಾಗ ಒಂದಕ್ಕೆ ಇಲ್ಲಿ ಕ್ಲಿಕ್ ಮಾಡಿ
ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ  ಭಾಗ ಮೂರಕ್ಕೆ ಇಲ್ಲಿ ಕ್ಲಿಕ್ ಮಾಡಿ