ಬಾಗಿಲಿದ್ದರು ಚಿಲಕವಿಲ್ಲದ, ಹಾಕಿಕೊಂಡರೂ ಹಾಕಿದಂತೆ ಕಾಣದ ವಿಚಿತ್ರ ಮನಸ್ಸಿನ ಕೋಣೆ. ಹೊರಳಿದರೆ ಬಿದ್ದೇ ಹೋಗುತ್ತೇವೆ ಎನ್ನುವಂಥ ಒಂದು ಕರಿಮರದ ಮಂಚ! ಪಕ್ಕದಲ್ಲಿದ್ದ ಪುಟ್ಟ ಸ್ಟೂಲ್ ಮೇಲೆ ಮನೆಯಲ್ಲಿದ್ದವರ ಹಾಸಿಗೆಗಳನ್ನು ಮಡಚಿ ಒಂದರ ಮೇಲೊಂದು ಪೇರಿಸಿಡಲಾಗಿರುತ್ತಿತ್ತು. ಕೋಣೆಯಂತೆ ಹಾಸಿಗೆ ಕೂಡ ಯಾರೊಬ್ಬರಿಗೂ ಸೇರಿರಲಿಲ್ಲ. ಆರು ಹಾಸಿಗೆಯನ್ನು ನಡುಮನೆಯಲ್ಲಿ ಹಾಸಿದರೆ ಹತ್ತು ಜನ ಮಲಗುತ್ತಿದ್ದೆವು. ರಾತ್ರಿ ಯಾರದೋ ಹೊದಿಕೆಯನ್ನು ಯಾರೋ ಕಿತ್ತುಕೊಂಡು ಹೊದ್ದಿರುತ್ತಿದ್ದರು. ಕೆಲವರು ಮಲಗಿದ್ದಾಗ ಉರುಳಾಡಿಕೊಂಡು ಅಡುಗೆ ಮನೆಯವರೆಗೂ ಹೋಗಿರುತ್ತಿದ್ದರು. ಮತ್ತೆ ಕೆಲವರು ಯಾರದೋ ಕಾಲ ಬಳಿ ಬಿದ್ದಿರುತ್ತಿದ್ದರು.
ಇತ್ತೀಚೆಗಷ್ಟೇ ಪ್ರಕಟವಾದ ಲೇಖಕಿ ಎಂ.ಆರ್.ಕಮಲಾ ರವರ “ಕಸೂತಿಯಾದ ನೆನಪು” ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

 

ಕೋಣೆಯ ಹೆಸರೇ ‘ಚಿಕ್ಕಮನೆ’! ನಾಲ್ಕೈದು ಜನ ಕುಳಿತುಕೊಳ್ಳಬಹುದಾದ, ಇಬ್ಬರು ಮೂವರು ಮಲಗಬಹುದಾದ ಜಾಗವಷ್ಟೇ ಅಲ್ಲಿದ್ದುದು. ಕೋಣೆ ಇಂಥವರದ್ದು ಎನ್ನುವ ಹೆಸರನ್ನು ಅದೆಂದೂ ಹೊತ್ತಿರಲಿಲ್ಲ. ಈಗೆಲ್ಲ ಪ್ರತಿ ಮನೆಯಲ್ಲಿ ಇದು ನನ್ನದು, ಇದು ಮಕ್ಕಳದ್ದು ಎಂದು ಬಂದ ಅತಿಥಿಗಳಿಗೆ ಕೋಣೆಗಳನ್ನು ತೋರಿಸುತ್ತಾರಲ್ಲ, ಹಾಗಿರಲಿಲ್ಲ. ಬೇಕಾದಾಗ ಎಲ್ಲರದ್ದೂ, ಬೇಡವಾದಾಗ ಯಾರದ್ದೂ ಅಲ್ಲದ ಒಂದು ಕೋಣೆಯದು!

(ಎಂ.ಆರ್.ಕಮಲಾ)

ಒಳಗೊಳಗೇ ಉಕ್ಕುವ ಖುಷಿಯ ಭಾವಗಳನ್ನು ತಡೆಯಲಾಗದವರು, ಬಿಕ್ಕುವವರು, ಪ್ರೇಮ ಪತ್ರ ಬರೆಯುವವರು, ಓದುವವರು, ಕತೆ, ಕಾದಂಬರಿಗಳ ಪುಸ್ತಕ ಹಿಡಿದು ಕೂರುವವರು, ಏಕಾಂತ ಬಯಸುವವರು, ಬಟ್ಟೆ ಬದಲಿಸಿಕೊಳ್ಳುವವರು ಎಲ್ಲರಿಗೂ ಅದು ಆಶ್ರಯ ನೀಡುತ್ತಿತ್ತು. ಹೀಗೆ `ಚಿಕ್ಕಮನೆ’ ಎಂಬ ಕೋಣೆ ಎಲ್ಲರನ್ನು ಬರಮಾಡಿಕೊಂಡು ತನ್ನ ಭಾವವನ್ನು ಒಳ ಬಂದವರ ಮನಃಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿತ್ತು. ಐದಾರು ಜನ ಒತ್ತೊತ್ತಾಗಿ, ಹಾಸಿಗೆಯ ಗುಡ್ಡದ ಮೇಲೆ ಕೂತು ಕಿಲಕಿಲಿಸುವಾಗ ಜಗುಲಿಕಟ್ಟೆಯಾಗಿ ಪರಿವರ್ತಿತಗೊಳ್ಳುತ್ತಿತ್ತು. ಹಾಲುಬಾಯಿ ಹೊಯ್ದ ತಟ್ಟೆಗಳನ್ನು ಕೋಣೆಯಲ್ಲಿಟ್ಟಾಗ (ಅಡುಗೆಮನೆಯಲ್ಲಿ ಕಿಟಕಿ ಬಾಗಿಲುಗಳು ಸರಿಯಿಲ್ಲದೆ ಬೆಕ್ಕು ತಿಂದು ಹೋಗಬಹುದೆಂಬ ಭಯವಿದ್ದುದರಿಂದ) ಅಡುಗೆಮನೆಯಂತಾಗುತ್ತಿತ್ತು. ಹಾಸಿಗೆಗಳನ್ನು ಹಾಸಿದಾಗ ಮಲಗುವ ಕೋಣೆಯೆನ್ನಿಸುತ್ತಿತ್ತು. ಪುಟ್ಟ ಕನ್ನಡಿಯಲ್ಲಿ, ಕಿಟಕಿಯ ಬಳಿ ನಿಂತು ಅಲಂಕಾರ ಮಾಡಿಕೊಳ್ಳುವಾಗ ಇದು ನನಗಾಗಿಯೇ ರೂಪುಗೊಂಡ ನನ್ನದೇ ಕೋಣೆ ಎಂಬ ಭಾವ ಮೂಡುತ್ತಿತ್ತು. ನನ್ನ ತಮ್ಮ ಹುಟ್ಟುವ ಸಮಯದಲ್ಲಿ ಅಮ್ಮನ ನರಳಾಟ ಕೇಳಿದ್ದ ನನಗೆ ಅದು ಆಸ್ಪತ್ರೆಯೆನ್ನಿಸಿತ್ತು.

ಅದೊಂದು ಕೋಣೆಯೇ ಆಗಿರಲಿಲ್ಲ! ಹೆಸರಿಗೆ ತಕ್ಕಂತೆ `ಚಿಕ್ಕ ಮನೆ’ಯೇ ಆಗಿತ್ತು ಎಂದು ಈಗ ಅನ್ನಿಸುತ್ತಿದೆ.

ಟ್ರಾನ್ಸಿಸ್ಟರ್ ಬಂದ ಸಮಯದಲ್ಲಿ ಅದು ಚಿಕ್ಕಮನೆಯ ಕಿಟಕಿಯಲ್ಲಿ ಆಸೀನವಾಗುತ್ತಿದ್ದುದರಿಂದ ಮೂರು ಮನೆಯವರು ಒಟ್ಟಿಗೆ ಚಿತ್ರಗೀತೆಗಳನ್ನು ಕೇಳುತ್ತ, ಜೊತೆಯಲ್ಲಿ ಹಾಡುತ್ತ, ಒಬ್ಬರೊಬ್ಬರ ದನಿ ಕಿವಿದೆರೆಗೆ ಬಡಿಯುತ್ತ ರಮ್ಯಲೋಕದಲ್ಲಿ ಕಳೆದುಹೋಗುವ ಅವಕಾಶ ಒದಗುತ್ತಿತ್ತು! ಎದುರು ಮನೆಯ ಕಿಟಕಿಯು ನಮ್ಮದರಂತೆ ಅಂಗಳಕ್ಕೆ ತೆರೆದುಕೊಳ್ಳುತ್ತಿದ್ದುದರಿಂದ ಅಲ್ಲಿಯ ಶಬ್ದ ಇಲ್ಲಿಗೆ, ಇಲ್ಲಿಯ ಶಬ್ದ ಅಲ್ಲಿಗೆ ಬಡಿದು ಕೆಲವೊಮ್ಮೆ ಕಲಸುಮೇಲೋಗರವಾಗುತ್ತಿತ್ತು. ಹಾಗಾದಾಗ `ಅವರ ಮನೆಯಲ್ಲಿ ಯಾವ ಸ್ಟೇಷನ್ ಹಾಕಿದ್ದಾರೆ, ಎಷ್ಟು ಒಳ್ಳೆಯ ಹಾಡು ಬರ್ತಿದೆ’ ಎಂದು ನಮ್ಮದನ್ನು ಬದಲಿಸಿಕೊಳ್ಳುವ ಅಥವಾ ಬದಲಾಯಿಸಿ ಎಂದು ಹೇಳುವ ಅವಕಾಶವಿರುತ್ತಿತ್ತು. ಆ ಕೋಣೆಗೆ ಕಾಲಿಟ್ಟಾಗೆಲ್ಲ ಬಿಡುಗಡೆಯ ಭಾವ ಆವರಿಸುತ್ತಿತ್ತು. ಮೆಲುದನಿಯಲ್ಲಿ ಹಾಡುವಾಗ ನನ್ನ ದನಿಗೊಂದು ಮಾಧುರ್ಯವಿದೆ ಎಂದು ನನಗೇ ಅನ್ನಿಸುತ್ತಿತ್ತು.

ಮಳೆಗಾಲದಲ್ಲಿ ಇರುಚುಲು ಬಡಿಯುವಾಗ ಕಿಟಕಿಯನ್ನು ಮುಚ್ಚಿಯೂ ಮಳೆಯನ್ನು ನೋಡಬಹುದಾದ ಸಣ್ಣ ಗೆರೆಯಂಥ ಕಿಂಡಿ ಖುಷಿಕೊಡುತ್ತಿತ್ತು. ಅಪರೂಪಕ್ಕೊಮ್ಮೆ ಅಂಗಳದಲ್ಲಿ ಬೀಳುವ ಆಲಿಕಲ್ಲಿನ ಟಪ್ ಟಪ್ ಸದ್ದು ಚಿಕ್ಕಮನೆಗೆ ಕೇಳಿದಂತೆ ಉಳಿದ ಜಾಗಗಳಿಗೆ ಕೇಳುತ್ತಿರಲಿಲ್ಲ. ಈ ಚಿಕ್ಕಮನೆಯ ಕಿಟಕಿ ನಮ್ಮದೇ ಆದ ಅಂಗಳದ ಪುಟ್ಟ ಜಗತ್ತಿಗೆ ತೆರೆಯುತ್ತಿತ್ತೇ ಹೊರತು ಹೊರಜಗತ್ತಿಗಲ್ಲ. ನಮ್ಮ ದಾಯಾದಿಗಳ ಮನೆಯ ಪಕ್ವಾನ್ನದ ಪರಿಮಳಕ್ಕೆ, ಅಂಗಳದ ಬೃಂದಾವನದ ಕಟ್ಟೆಯಲ್ಲಿನ ಹಸಿಬಿಸಿ ಸುದ್ದಿಗಳಿಗೆ, ಒಣಗಲಿಟ್ಟ ಸಂಡಿಗೆ, ಹಪ್ಪಳದ ಘಮಕ್ಕೆ, ಮಳೆಯಲ್ಲಿ ನೆನೆದು ಒಣಗದೆ ಮೂರು ನಾಲ್ಕು ದಿನವಾದರೂ ತಂತಿಯ ಮೇಲೆ ತೂಗುತ್ತಿದ್ದ ಬಟ್ಟೆಗಳ ಮುಗ್ಗುಲು ವಾಸನೆಗೆ, ತೋಟಕ್ಕೆ ಕರೆದೊಯ್ಯಲಾಗದೆ ಅಂಗಳದಲ್ಲಿ ಕಟ್ಟಿರುತ್ತಿದ್ದ ಪುಟ್ಟ ಕರುಗಳ ಅಂಬಾ ಕೂಗಿಗೆ, ಕೊಂಡಮಾವನ್ನು ಬಳಸಿದ್ದ ಮಲ್ಲಿಗೆಯ ಗಾಳಿಗೆ… ಹೀಗೆ.

ಒಳಗೊಳಗೇ ಉಕ್ಕುವ ಖುಷಿಯ ಭಾವಗಳನ್ನು ತಡೆಯಲಾಗದವರು, ಬಿಕ್ಕುವವರು, ಪ್ರೇಮ ಪತ್ರ ಬರೆಯುವವರು, ಓದುವವರು, ಕತೆ, ಕಾದಂಬರಿಗಳ ಪುಸ್ತಕ ಹಿಡಿದು ಕೂರುವವರು, ಏಕಾಂತ ಬಯಸುವವರು, ಬಟ್ಟೆ ಬದಲಿಸಿಕೊಳ್ಳುವವರು ಎಲ್ಲರಿಗೂ ಅದು ಆಶ್ರಯ ನೀಡುತ್ತಿತ್ತು. ಹೀಗೆ `ಚಿಕ್ಕಮನೆ’ ಎಂಬ ಕೋಣೆ ಎಲ್ಲರನ್ನು ಬರಮಾಡಿಕೊಂಡು ತನ್ನ ಭಾವವನ್ನು ಒಳ ಬಂದವರ ಮನಃಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿತ್ತು.

ಚಿಕ್ಕಮನೆಯಲ್ಲಿ ಕೂತಿದ್ದಾಗ ಕಿಟಕಿ ಮುಚ್ಚಿದರೂ ಆಕಾಶದ ಬೆಳಕನ್ನು ಹೊತ್ತ ಬಿಸಿಲುಕೋಲೊಂದು ಮುಖದ ಮೇಲೆ ಬೀಳುತ್ತಿತ್ತು. ಕನ್ನಡಿಯಲ್ಲಿ ಕೋಣೆಯ ತುಂಬಾ ಅದನ್ನು ಪ್ರತಿಫಲಿಸುತ್ತ ಚುಕ್ಕೆಗಳ ಲೋಕವನ್ನು ಹಗಲಲ್ಲಿಯೇ ಸೃಷ್ಟಿಸಿಕೊಳ್ಳುವ ಅವಕಾಶ ಒದಗುತ್ತಿತ್ತು. ಮಂಚದ ಕೆಳಗಿಟ್ಟಿದ್ದ ಅಮ್ಮನ ಪುಟ್ಟ ಪೆಟ್ಟಿಗೆಯಲ್ಲಿದ್ದ ಕುತೂಹಲವನ್ನು ಬಿಚ್ಚಿಡುವ ಸಣ್ಣ ಆಸೆ ಹೊಮ್ಮುತ್ತಿತ್ತು. ಎದೆಯೊಳಗೆ ಅರಳುತ್ತಿದ್ದ ಕನಸುಗಳನ್ನು ಇತರರ ಕಿಡಿನೋಟಕ್ಕೆ ಗುರಿಯಾಗದೆ ಕಣ್ಣೊಳಗೆ ಧಾರಾಳವಾಗಿ ಹೊಮ್ಮಿಸುವ, ಸತ್ಯಕ್ಕೆ ಮುಖಾಮುಖಿಯಾಗುವ ಧೈರ್ಯ ಹೆಚ್ಚುತ್ತಿತ್ತು. ಕಿತಾಪತಿಗಳು ಹುಟ್ಟುತ್ತಿದ್ದುದು ಅಲ್ಲೇ. ನೆರೆಯವರ ಮಾತುಗಳನ್ನು ವಿಪರೀತವಾಗಿ ಕೇಳಿಸಿಕೊಂಡು, ವಿಪರೀತಾರ್ಥ ಹಚ್ಚುವವರಿಗೆ ಅದೊಂದು ಕಿಚ್ಚಿನ ಕೋಣೆ. ಈ ಎಲ್ಲ ಗೊಡವೆ ಬೇಡವೆಂದು ತಮ್ಮದೇ ಲೋಕದಲ್ಲಿ ಮುಳುಗುತ್ತಿದ್ದ ಭಾವುಕರಿಗೆ ಏಕಾಂತದಲ್ಲಿ ಕಾಂತನನ್ನು ದೊರಕಿಸಿಕೊಟ್ಟ ಕೋಣೆ. ತೂಗು ಹಾಕಿದ್ದ ಕಸೂತಿ ಪರದೆಯನ್ನು ತೆರೆದರೆ ಬಿಚ್ಚು ಮನಸ್ಸು, ಪರದೆಯನ್ನು ಕೆಳಕ್ಕೆ ಇಳಿಬಿಟ್ಟರೆ ಗೂಢತೆಯೊಂದು ಎದೆಯೊಳಕ್ಕೆ ಇಳಿದ ಹಾಗೆ!

ಬಾಗಿಲಿದ್ದರು ಚಿಲಕವಿಲ್ಲದ, ಹಾಕಿಕೊಂಡರೂ ಹಾಕಿದಂತೆ ಕಾಣದ ವಿಚಿತ್ರ ಮನಸ್ಸಿನ ಕೋಣೆ. ಹೊರಳಿದರೆ ಬಿದ್ದೇ ಹೋಗುತ್ತೇವೆ ಎನ್ನುವಂಥ ಒಂದು ಕರಿಮರದ ಮಂಚ! ಪಕ್ಕದಲ್ಲಿದ್ದ ಪುಟ್ಟ ಸ್ಟೂಲ್ ಮೇಲೆ ಮನೆಯಲ್ಲಿದ್ದವರ ಹಾಸಿಗೆಗಳನ್ನು ಮಡಚಿ ಒಂದರ ಮೇಲೊಂದು ಪೇರಿಸಿಡಲಾಗಿರುತ್ತಿತ್ತು. ಕೋಣೆಯಂತೆ ಹಾಸಿಗೆ ಕೂಡ ಯಾರೊಬ್ಬರಿಗೂ ಸೇರಿರಲಿಲ್ಲ. ಆರು ಹಾಸಿಗೆಯನ್ನು ನಡುಮನೆಯಲ್ಲಿ ಹಾಸಿದರೆ ಹತ್ತು ಜನ ಮಲಗುತ್ತಿದ್ದೆವು. ರಾತ್ರಿ ಯಾರದೋ ಹೊದಿಕೆಯನ್ನು ಯಾರೋ ಕಿತ್ತುಕೊಂಡು ಹೊದ್ದಿರುತ್ತಿದ್ದರು. ಕೆಲವರು ಮಲಗಿದ್ದಾಗ ಉರುಳಾಡಿಕೊಂಡು ಅಡುಗೆ ಮನೆಯವರೆಗೂ ಹೋಗಿರುತ್ತಿದ್ದರು. ಮತ್ತೆ ಕೆಲವರು ಯಾರದೋ ಕಾಲ ಬಳಿ ಬಿದ್ದಿರುತ್ತಿದ್ದರು. ಬಚ್ಚಲುಮನೆಗೆಂದು ಅರ್ಧ ರಾತ್ರಿಯಲ್ಲಿ ಎದ್ದ ಅಮ್ಮ ಒಬ್ಬೊಬ್ಬರನ್ನು ಹಿಡಿದೆಳೆದು ಸ್ವಸ್ಥಾನದಲ್ಲಿ ಸೇರಿಸಿ, ಹೊದಿಕೆ ಹೊದಿಸಿ ಮಲಗಿಸುತ್ತಿದ್ದಳು. ಊಟ ಮಾಡದೆ ನಿದ್ದೆ ಮಾಡಿದವರಿಗೆ ಮಲಗಿದ್ದಲ್ಲೇ ಒಂದು ಲೋಟ ಬಿಸಿ ಹಾಲು ಕುಡಿಸುತ್ತಿದ್ದಳು. ನಿದ್ದೆ ಬಂದ ತಕ್ಷಣ ಎಲ್ಲರೂ ಇಡೀ ಮನೆಯಲ್ಲಿ ಚೆಲ್ಲಾಪಿಲ್ಲಿಯಾದ ಚಿತ್ರಗಳಾಗಿರುತ್ತಿದ್ದೆವು.

ಅವರವರು ಮಲಗಿದ್ದ ಹಾಸಿಗೆಯನ್ನು ಅವರೇ ಮಡಿಸಬೇಕೆಂಬ ನಿಯಮವಿದ್ದರೂ ಎರಡು ಹಾಸಿಗೆಯಲ್ಲಿ ಮೂವರು ಮಲಗುತ್ತಿದುದರಿಂದ ಚಿಕ್ಕದೊಂದು ಹೊಡೆದಾಟ ಆಗುವ ಸಾಧ್ಯತೆಗಳಿತ್ತು. ಹೀಗಾಗಿ ತಡವಾಗಿ ಎದ್ದವರು ಹಾಸಿಗೆ ಸುತ್ತಬೇಕಾಗುತ್ತದೆಂದು, ಮತ್ತದನ್ನು ಚಿಕ್ಕಮನೆಯಲ್ಲಿ ನೀಟಾಗಿ ಜೋಡಿಸಬೇಕಾಗುತ್ತದೆಂದು ಅಮ್ಮ ಹೆದರಿಸುತ್ತಿದ್ದುದರಿಂದ ಮನಸ್ಸಿಲ್ಲದಿದ್ದರೂ ಬೇಗ ಏಳಬೇಕಾಗುತ್ತಿತ್ತು. ರಾತ್ರಿಯಲ್ಲಿ ಹಾಸಿಗೆಗಳಂತೆ ಬಿಚ್ಚಿಕೊಂಡು ಬೆಳಗಿನಲ್ಲಿ ಸುತ್ತಿಕೊಳ್ಳುವ ಮನಸ್ಸಿನಂತೆ ಚಿಕ್ಕಮನೆ ತೋರುತ್ತಿತ್ತು. ಇಡೀ ಮನೆಯಿಂದ ಪ್ರತ್ಯೇಕಗೊಂಡಂತೆ ಕಾಣುತ್ತಿದ್ದ ಆ ಚಿಕ್ಕಮನೆಯಲ್ಲಿ ರಾತ್ರಿಯ ಹೊತ್ತು ಯಾಕೋ ಯಾರೂ ಮಲಗುವುದನ್ನು ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ. ಈ ಕೋಣೆಗೆ ಕತ್ತಲು, ಬೆಳಕು, ಖುಷಿ, ದುಃಖ, ಏಕಾಂತ, ಹರಟೆಯ ಸಂತಸ, ಭಾವುಕತೆ, ನಿರ್ಲಿಪ್ತತೆ ಎಲ್ಲ ಎಲ್ಲ ಭಾವಗಳು ದೊರಕುತ್ತಿದ್ದುದು ಹಗಲಿನಲ್ಲೇ! ನಾವು ಚಿಕ್ಕವರಿದ್ದಾಗ ಹೊಳೆಯುವ ಹಲ್ಲನ್ನು ಕುರಿತು ಒಂದು ಒಗಟನ್ನು ಹೇಳುತ್ತಿದ್ದೆವು. `ಚಿಕ್ಕಮನೆಯಲ್ಲಿ ಚಕ್ಕೆ ತುಂಬಿದೆ’!

ಇಷ್ಟು ವರ್ಷಗಳಾದ ಮೇಲೂ, ತನ್ನ ಅಂದ ಸ್ವರೂಪವನ್ನು ಕಳೆದುಕೊಂಡಮೇಲೂ `ಚಿಕ್ಕಮನೆಯಲ್ಲಿ ನನಗಿನ್ನೂ ಚಕ್ಕೆ ತುಂಬಿದೆ!’