ಕೃತಿಯಲ್ಲಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳನ್ನು ಆದರ್ಶವಾಗಿರಿಸಿಕೊಂಡು ಕಳೆದ ನೂರು ವರ್ಷಗಳಿಂದ ಆದ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನೂರು ವರ್ಷಗಳ ಮುಂಚೆ ಪರಿಗಣನೆಗೆ ತೆಗೆದುಕೊಂಡ ನಾಲ್ಕೂ ರಾಜ್ಯಗಳು ಹೆಚ್ಚುಕಮ್ಮಿ ಒಂದೇ ಪರಿಸ್ಥಿತಿಯಲ್ಲಿದ್ದವು. ಆದರೆ ಉಪರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸಿಕೊಂಡ ತಮಿಳುನಾಡು ಮತ್ತು ಕೇರಳ ಪ್ರಗತಿ ಹೊಂದಿದರೆ ಆ ಪ್ರಜ್ಞೆ ಬೆಳೆಸಿಕೊಳ್ಳಲು ವಿಫಲವಾದ ರಾಜ್ಯಗಳು ಹೇಗೆ ಹಿಂದುಳಿದಿವೆ ಅನ್ನುವುದನ್ನು ವಿವರಿಸಲಾಗಿದೆ.
‘ಓದುವ ಸುಖ’ ಅಂಕಣದಲ್ಲಿ ‘ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ’ ಕೃತಿಯ ಕುರಿತು ಗಿರಿಧರ್ ಗುಂಜಗೋಡು ಬರಹ

 

ಭಾರತ ಅನ್ನುವುದು ಹೇಗೆ ಸಾರ್ವಭೌಮ ದೇಶವೋ ಹಾಗೇ ರಾಜ್ಯಗಳ ಒಕ್ಕೂಟ ಕೂಡ. ನೀವು ಭಾರತದ ವಿವಿಧ ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಕೆಲ ಅಸಮಾನ ಅಂಶಗಳನ್ನು ಕಾಣಬಹುದು. ಕೆಲ ರಾಜ್ಯಗಳು ಉತ್ತಮ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಿದ್ದರೆ ಇನ್ನು ಕೆಲ ರಾಜ್ಯಗಳು ಗಣನೀಯ ಪ್ರಮಾಣದ ಪ್ರಗತಿ ಸಾಧಿಸಬೇಕಿವೆ. ಯಾಕೆ ಈ ಅಸಮಾನತೆ? ಏಳಿಗೆ ಹೊಂದಲು ಬೇಕಾದ ಹಲವಾರು ಅನುಕೂಲತೆಗಳಿದ್ದೂ ಕೂಡಾ ಯಾಕೆ ಕೆಲ ರಾಜ್ಯಗಳು ಹಿಂದುಳಿದಿವೆ? ಸಂಪನ್ಮೂಲಗಳು ಸೀಮಿತವಾಗಿದ್ದರೂ ಯಾಕೆ ಕೆಲ ರಾಜ್ಯಗಳು ಮುಂದುವರೆದಿವೆ ಎಂಬಿತ್ಯಾದಿ ಪ್ರಶ್ನೆಗಳ ಹುಟ್ಟಿಸಿಕೊಂಡು ಅದಕ್ಕೆ ಕಾರಣವಾದ ಹಲ ವಿಷಯಗಳ ಬಗ್ಗೆ ಸಂಶೋಧನೆ ಮಾಡಬಹುದು.

(ಪ್ರೇರಣಾ ಸಿಂಗ್)

ಅದರಲ್ಲಿ ಒಂದು ಎಳೆ ಉಪರಾಷ್ಟ್ರೀಯತೆ. ಒಂದು ದೇಶದ ಭಾಗವಾಗಿದ್ದುಕೊಂಡೇ ತಮ್ಮ ಪ್ರದೇಶದ ಬಗ್ಗೆಯೂ ಸಮಾನವಾದ ಹೆಮ್ಮೆಯನ್ನಿಟ್ಟುಕೊಳ್ಳುವುದು. ಭಾರತದ ಮಟ್ಟಿಗೆ ಬಂದರೆ ರಾಜ್ಯಗಳನ್ನು ಕಲ್ಪಿಸಿಕೊಳ್ಳುವುದು. ಅಂದರೆ ನಾವು ಭಾರತೀಯರು ಅನ್ನುವ ಗುರುತನ್ನು ಇಟ್ಟುಕೊಂಡೇ ಹೆಚ್ಚುಕಡಿಮೆ ಅಷ್ಟೇ ಅನುಬಂಧವನ್ನು ನಮ್ಮ ರಾಜ್ಯದ ನಾವೆಲ್ಲರೂ ಒಂದೇ ಅನ್ನುವ ಭಾವನೆ ತಂದುಕೊಳ್ಳುವುದು. ಈ ಉಪರಾಷ್ಟ್ರೀಯತೆಯ ಪ್ರಜ್ಞೆ ಹೇಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಏಳಿಗೆಗೆ ಕಾರಣವಾಗಬಲ್ಲದು ಎಂದು ಈ ಕೃತಿಯ ಮೂಲ ಲೇಖಕಿಯಾದ ಅಮೆರಿಕಾದ ರೋಡ್ ಐಲೆಂಡಿನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾದ ಪ್ರೇರಣಾ ಸಿಂಗ್ ಅವರು ‘How Solidarity Works for Welfare: Sub-nationalism and Social Development in India’ ಅನ್ನುವ ಸಂಶೋಧನಾ ಗ್ರಂಥದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರ ಆಂಗ್ಲ ಕೃತಿಯನ್ನು ಶ್ರುತಿ ಎಚ್ ಎಂ ಅವರು ‘ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ’ ಅನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಭಾರತದ ನಾಲ್ಕು ರಾಜ್ಯಗಳನ್ನು, ಅಂದರೆ – ಕೇರಳ, ತಮಿಳುನಾಡು, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳನ್ನು ಉದಾಹರಣೆಯಾಗಿಟ್ಟುಕೊಂಡು ಉಪರಾಷ್ಟ್ರೀಯತೆಯ ಮಹತ್ವವನ್ನು ವಿವರಿಸಲಾಗಿದೆ. ಉಪರಾಷ್ಟ್ರೀಯತೆ ಅನ್ನುವುದು ಸಾಮಾಜಿಕ ಏಳಿಗೆಗೆ ಕಾರಣವಾಗಬಹುದು ಅನ್ನುವುದನ್ನು ಕೇರಳ ಮತ್ತು ತಮಿಳುನಾಡು ರಾಜ್ಯಗಳ‌ ಮೂಲಕ ಹಾಗೂ ಉಪರಾಷ್ಟ್ರೀಯತೆಯ ಪ್ರಜ್ಞೆಯ ಕೊರತೆ ಹೇಗೆ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಅನ್ನುವುದಕ್ಕೆ ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳ ಉದಾಹರಣೆ ತೆಗೆದುಕೊಳ್ಳಲಾಗಿದೆ.

ಕೃತಿಯು ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳನ್ನು ಆದರ್ಶವಾಗಿರಿಸಿಕೊಂಡು ಕಳೆದ ನೂರು ವರ್ಷಗಳಿಂದ ಆದ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನೂರು ವರ್ಷಗಳ ಮುಂಚೆ ಪರಿಗಣನೆಗೆ ತೆಗೆದುಕೊಂಡ ನಾಲ್ಕೂ ರಾಜ್ಯಗಳು ಹೆಚ್ಚುಕಮ್ಮಿ ಒಂದೇ ಪರಿಸ್ಥಿತಿಯಲ್ಲಿದ್ದವು. ಆದರೆ ಉಪರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸಿಕೊಂಡ ತಮಿಳುನಾಡು ಮತ್ತು ಕೇರಳ ಪ್ರಗತಿ ಹೊಂದಿದರೆ ಆ ಪ್ರಜ್ಞೆ ಬೆಳೆಸಿಕೊಳ್ಳಲು ವಿಫಲವಾದ ರಾಜ್ಯಗಳು ಹೇಗೆ ಹಿಂದುಳಿದಿವೆ ಅನ್ನುವುದನ್ನು ವಿವರಿಸಲಾಗಿದೆ.

ಏಳಿಗೆ ಹೊಂದಲು ಬೇಕಾದ ಹಲವಾರು ಅನುಕೂಲತೆಗಳಿದ್ದೂ ಕೂಡಾ ಯಾಕೆ ಕೆಲ ರಾಜ್ಯಗಳು ಹಿಂದುಳಿದಿವೆ? ಸಂಪನ್ಮೂಲಗಳು ಸೀಮಿತವಾಗಿದ್ದರೂ ಯಾಕೆ ಕೆಲ ರಾಜ್ಯಗಳು ಮುಂದುವರೆದಿವೆ ಎಂಬಿತ್ಯಾದಿ ಪ್ರಶ್ನೆಗಳ ಹುಟ್ಟಿಸಿಕೊಂಡು ಅದಕ್ಕೆ ಕಾರಣವಾದ ಹಲ ವಿಷಯಗಳ ಬಗ್ಗೆ ಸಂಶೋಧನೆ ಮಾಡಬಹುದು.

ಉದಾಹರಣೆಗೆ ನೂರು ವರ್ಷಗಳ ಹಿಂದೆ ರಾಜರ ಆಳ್ವಿಕೆಯಲ್ಲಿದ್ದ ಕೇರಳಕ್ಕೂ ಮತ್ತು ರಾಜಸ್ಥಾನಕ್ಕೂ ಅಭಿವೃದ್ಧಿಯಲ್ಲಿ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಹಾಗೆ ನೋಡಿದರೆ ಕೇರಳ ಅತಿಯಾದ ಮೂಢನಂಬಿಕೆ ಸಾಮಾಜಿಕ ಕಟ್ಟಳೆಗಳಿಂದ ಹಿಂದುಳಿದಿತ್ತು. ಅದೇ ರೀತಿ ಬ್ರಿಟೀಷರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಉತ್ತರ ಪ್ರದೇಶ ಅನೇಕ ವಿಚಾರಗಳಲ್ಲಿ ಮುಂದುವರಿದ ರಾಜ್ಯವಾಗಿತ್ತು ಮತ್ತು ಬ್ರಿಟೀಷರ ನೇರ ಆಡಳಿತಕ್ಕೆ ಒಳಪಟ್ಟಿದ್ದ ಇನ್ನೊಂದು ರಾಜ್ಯವಾದ ತಮಿಳುನಾಡಿಗೂ ಉತ್ತರಪ್ರದೇಶಕ್ಕೂ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಕೇರಳ ತಮಿಳುನಾಡುಗಳ ಆಡಳಿತದಲ್ಲಿ ತಮಿಳು ಬ್ರಾಹ್ಮಣರು ಪ್ರಬಲರಾಗಿದ್ದರೆ ಉತ್ತರಪ್ರದೇಶದಲ್ಲಿ ಮುಸ್ಲಿಮರು ಪ್ರಬಲರಾಗಿದ್ದರು ಮತ್ತು ರಾಜಸ್ಥಾನದಲ್ಲಿ ರಜಪೂತರ ಪ್ರಾಬಲ್ಯವಿತ್ತು. ಕೇರಳದಲ್ಲಿ ಮಲಯಾಳಿಗಳು (ಎಲ್ಲಾ ಜಾತಿ ಧರ್ಮಗಳ) vs ಹೊರಗಿನವರು ಎಂಬ ಪ್ರಜ್ಞೆ ಮೂಡಿ ಮಲಯಾಳಿ ಉಪರಾಷ್ಟ್ರೀಯತೆಯ ಪ್ರಜ್ಞೆ ಬಲಿಷ್ಟವಾಗಿ ರಾಜ್ಯದ ಏಳಿಗೆಗೆ ಕಾರಣವಾಯಿತು. ಅದೇ ಉತ್ತರ ಪ್ರದೇಶದಲ್ಲಿ ಹಿಂದೂ vs ಮುಸ್ಲಿಂ ಅನ್ನುವ ವಿಭಾಗೀಕರಣವಾಗಿ ಉಪರಾಷ್ಟ್ರೀಯತೆಯ ಪ್ರಜ್ಞೆ‌ ಮೂಡದೇ ಬರೀ ಜಾತಿ ಧರ್ಮಗಳ ನೆಲೆಯಲ್ಲಿ ವಿಭಾಗೀಕರಣವಾಗಿ ಹಿಂದುಳಿಯುವಂತಾಯಿತು. ಹಾಗೇ ತಮಿಳುನಾಡಿನಲ್ಲಾದ ದ್ರಾವಿಡ ಚಳುವಳಿ ಉಪರಾಷ್ಟ್ರೀಯತೆಯನ್ನು ಉದ್ದೀಪಿಸಿತು. ಸಂಪತ್ತು, ಅವಕಾಶಗಳ ಸಮಾನ ಹಂಚಿಕೆ ಕೂಡಾ ತಕ್ಕಮಟ್ಟಿಗೆ ನಡೆಯಿತು. ಇವು ತಮಿಳುನಾಡಿನ ಒಟ್ಟಾರೆ ಅಭಿವೃದ್ಧಿಗೆ ತನ್ನ ಕೊಡುಗೆ ಕೊಟ್ಟರೆ ರಾಜಸ್ಥಾನದಲ್ಲಿ ಉಪರಾಷ್ಟ್ರೀಯತೆಯ ಪ್ರಜ್ಞೆ ಮೊಳಕೆಯೊಡೆದರೂ ಅದು ಚಿಗುರದೇ ಆ ರಾಜ್ಯದ ಏಳಿಗೆಗೆ ಹಿನ್ನಡೆಯನ್ನುಂಟುಮಾಡಿತು ಎಂದು ಪುಸ್ತಕ ಹೇಳುತ್ತದೆ.

ಅದರರ್ಥ ಉಪರಾಷ್ಟ್ರೀಯತೆಯೊಂದರಿಂದ ಮಾತ್ರ ರಾಜ್ಯಗಳ ಅಭಿವೃದ್ಧಿಯಾಗಿ ತನ್ಮೂಲಕ ದೇಶದ ಅಭಿವೃದ್ಧಿಯಾಗುವುದೆಂದೇನೂ ಈ ಪುಸ್ತಕ ಹಟತೊಟ್ಟು ಸಾಧಿಸಹೊರಡುವುದಿಲ್ಲ. ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಏಳಿಗೆಗೆ ಕಾರಣವಾಗುವ ಅಂಶಗಳನ್ನು ವಿವರಿಸುತ್ತಲೇ ಉಪರಾಷ್ಟ್ರೀಯತೆ ಸಿದ್ಧಾಂತ ಈ ಅಂಶಗಳ ಅನುಷ್ಟಾನವನ್ನು ಹೇಗೆ ಪ್ರಭಾವಶಾಲಿಯಾಗಿ ಮಾಡಬಹುದು ಅಂತ ಹೇಳುತ್ತದೆ‌.

(ಶ್ರುತಿ ಎಚ್ ಎಂ)

ಈ ಪುಸ್ತಕದಲ್ಲಿ ಕರ್ನಾಟಕದ ಪ್ರಸ್ತಾಪವೆಲ್ಲೂ ಬರುವುದಿಲ್ಲ. ಹಾಗಂತ ಇದು ಒಂದು ಕೊರತೆಯಾಗೇನೂ ಕಂಡಿಲ್ಲ. ಲೇಖಕಿ ಅವರ ಸಂಶೋಧನೆಯ ಅನುಕೂಲಕ್ಕಾಗಿ ರಾಜ್ಯಗಳ ಆಯ್ಕೆ ಮಾಡಿಕೊಂಡಿದ್ದಾರಷ್ಟೇ. ಒಟ್ಟಾರೆ ವಿಷಯಕ್ಕೆ ಇದು ಭಂಗ ತಂದಿಲ್ಲ.

ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಸರಕಾರದಿಂದ ರಾಜ್ಯಗಳಿಗೆ ಅನ್ಯಾಯವಾಗದಂತೆಯೂ ಉಪರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸುತ್ತದೆ. ನಾನು ಗಮನಿಸಿದಂತೆ ಅಮೆರಿಕಾದಂತಹ ಮುಂದುವರೆದ ದೇಶಗಳಲ್ಲೂ ಉಪರಾಷ್ಟ್ರೀಯತೆಯ ಪ್ರಜ್ಞೆಯನ್ನು ಕಾಣಬಹುದು. ಅನೇಕ ಜನರಲ್ಲಿ ತಮ್ಮ ದೇಶದ ಬಗೆಗಿನ ಅಭಿಮಾನದ ಜೊತೆಗೆ ತಮ್ಮ ರಾಜ್ಯದ ಬಗೆಗೂ ಅಷ್ಟೇ ಅಭಿಮಾನವನ್ನಿಟ್ಟುಕೊಂಡಿರುವುದನ್ನು ಕಂಡಿದ್ದೇನೆ. ಒಂದು ಕಾಲದಲ್ಲಿ ಕೆಲ ವರ್ಷಗಳ ಮಟ್ಟಿಗೆ ಸ್ವತಂತ್ರ ದೇಶವಾಗಿದ್ದ ಟೆಕ್ಸಸ್ ರಾಜ್ಯದಲ್ಲಿ ಅದನ್ನು ಚೂರು ಹೆಚ್ಚಿಗೆಯೇ ಕಂಡಿದ್ದೇನೆ. ಆದರೆ ಈ ಬಗ್ಗೆ ಯಾವುದೇ ಸಂಶೋಧನೆಯನ್ನು ಓದಿಲ್ಲದ‌ ಕಾರಣ ಈ ಬಗ್ಗೆ ಹೆಚ್ಚಿಗೆ ಹೇಳಹೋಗುವುದಿಲ್ಲ.

ನನಗೆ ಈ ಪುಸ್ತಕದಲ್ಲಿ ಇಷ್ಟವಾದ ಇನ್ನೊಂದು ಅಂಶವೇನೆಂದರೆ, ಲೇಖಕಿ ಎಲ್ಲಾ ಅಂಶಗಳನ್ನೂ ವಸ್ತುನಿಷ್ಟವಾಗಿ ಸಂಶೋಧನೆ ಮಾಡುತ್ತಾ ಹೋಗುತ್ತಾರೆ. ಈ ನಾಲ್ಕೂ ರಾಜ್ಯಗಳ ಏಳಿಗೆ ಅಥವಾ ಹಿಂದುಳಿಯುವಿಕೆಗೆ ಕಾರಣ ಏನು ಎಂಬುದನ್ನು ಹುಡುಕುವಲ್ಲಿ ನಿಜವಾದ ಕುತೂಹಲಿಯಂತೆ ಹುಡುಕುತ್ತಾ ಹೋಗುವರೇ ವಿನಃ ಮನಸ್ಸಲ್ಲಿ ಯಾವುದೇ ಅಜೆಂಡಾ ಇಟ್ಟುಕೊಂಡು ಅದಕ್ಕೆ ಪೂರಕವಾಗಿ ತಮ್ಮ ಸಂಶೋಧನೆಯನ್ನು ಕಟ್ಟಿದಂತೆ ತೋರುವುದಿಲ್ಲ. ಅದೇ ರೀತಿ ಒಕ್ಕೂಟ ವ್ಯವಸ್ಥೆಯಿಂದ ಹೊರಬರಬೇಕೆಂಬ ಸಂದೇಶವನ್ನು ಕೂಡ ಕೊಡುವುದಿಲ್ಲ.

ಇದು ಮನೋರಂಜನೆಗೆ ಇರುವ ಪುಸ್ತಕವಲ್ಲ. ಗಂಭೀರವಾಗಿ ಕೂತು ಅಧ್ಯಯನ ಮಾಡಬೇಕಾದ ಪುಸ್ತಕ. ಖಂಡಿತವಾಗಿಯೂ ಈ ಪುಸ್ತಕ ಓದಲು ತಾಳ್ಮೆ ಬೇಕಾಗುತ್ತದೆ. ಇದು ರಾಷ್ಟ್ರವಿರೋಧಿಯನ್ನು ಭಾವನೆ ಬೆಳೆದೇ ದೇಶದ ಜೊತೆಗೆ ನಮ್ಮ ರಾಜ್ಯವನ್ನೂ ಪ್ರೀತಿಸುವತ್ತ, ನಮ್ಮ ಹಕ್ಕುಗಳನ್ನು ಹೇಗೆ ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂಬ ವಿಷಯದಲ್ಲಿ ಹೊಸ ಹೊಳಹುಗಳನ್ನು ಕೊಡುತ್ತದೆ. ಇಲ್ಲಿರುವ ಎಲ್ಲಾ ವಿಚಾರಗಳ ಒಪ್ಪಬೇಕೆಂದೇನೂ ಖಂಡಿತ ಇಲ್ಲ. ಒಪ್ಪಿಯಾಗದ ಅಂಶಗಳೂ ಸಿಗಬಹುದು. ಅದನ್ನು ವಿರೋಧಿಸಬೇಕಾದರೆ ಬೀಸಾಗಿ ಹೇಳದೇ ಸರಿಯಾದ ಓದಿನ ಮತ್ತು ಅಂಕಿ ಅಂಶಗಳ ಮೂಲಕವೇ ಇದರ ಮಿತಿಗಳನ್ನು ಹೇಳಬೇಕಾಗುತ್ತದೆ. ಕನ್ನಡದಲ್ಲಿ ಈ ರೀತಿಯ ಪುಸ್ತಕಗಳ ಸಂಖ್ಯೆ ಬಹಳ ಕಮ್ಮಿ. ಈ ರೀತಿಯ ಪುಸ್ತಕಗಳ‌ ಅನುವಾದವೂ ಸವಾಲಿನ ಕೆಲಸವೇ. ವಿಸ್ತಾರವಾದ ಓದು, ಆಳವಾದ ವಿಷಯಜ್ಞಾನ ಮತ್ತು ಅರ್ಥವಾಗುವಂತೆ ಕನ್ನಡೀಕರಿಸುವಲ್ಲಿ ಬೇಕಾಗುವ ಅಪಾರವಾದ ಪರಿಶ್ರಮ ಎಲ್ಲವನ್ನೂ ಒಟ್ಟುಗೂಡಿಸಿ ಶ್ರುತಿ ಇದನ್ನು ಅನುವಾದ ಮಾಡಿದ್ದಾರೆ. ಕ‌ನ್ನಡಕ್ಕಾಗಿ ಶ್ರಮವಹಿಸಿ ಈ ಪುಸ್ತಕ ತಂದಿದ್ದಾರೆ. ಆಸಕ್ತರು ದಯವಿಟ್ಟು ಕೊಂಡು ಓದಿ.