ಮದುವೆಯಾಗುವಾಗ ಜಯಂತಿ ಕುಲಕರ್ಣಿ ರಾಂಪುರದ ಒಂದು ಹೈಸ್ಕೂಲಿನಲ್ಲಿ ಕನ್ನಡ ಟೀಚರಾಗಿದ್ದಳು. ಅದು ಖಾಸಗಿ ಹೈಸ್ಕೂಲಾಗಿದ್ದುದರಿಂದ ಸಂಬಳವೆನ್ನುವುದು ‘ನಾಮ್ಕಾವಸ್ಥೆ’ಯದಾಗಿತ್ತು. ಎಂ.ಎ ಓದಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಿಂತ ಹವ್ಯಾಸದ ಥರ ಪಾಠವನ್ನಾದರೂ ಮಾಡಿ ‘ಟೈಂಪಾಸ್’ ಮಾಡಬಹುದು ಎಂಬಂತೆ ಆಕೆ ಹೈಸ್ಕೂಲಲ್ಲಿ ದುಡಿಯುತ್ತಿದ್ದಳು. ಬಸವೇಶ್ವರ ಕಾಲೇಜಿನಲ್ಲಿರುವ ಸತೀಶ್ ಕುಲಕರ್ಣಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಾರೆ ಎಂಬುದರಿಂದ ಮದುವೆಯ ಪೂರ್ವದಲ್ಲೇ ಆಕೆ ತಾನೂ ಆ ಕಾಲೇಜಿನಲ್ಲಿ ಸೇರಬೇಕೆಂಬ ಕನಸು ಕಂಡಿದ್ದಳು.
ಡಾ. ನಾ. ಮೊಗಸಾಲೆಯವರ “ನೀರಿನೊಳಗಿನ ಮಂಜು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

ಜಯಂತಿ ಕುಲಕರ್ಣಿಯ ಪರಿಚಯ ಈಚೆಗಿನ ಸುಮಾರು ಇಪ್ಪತ್ತೈದು ವರುಷಗಳಿಂದ ರಾಯರಿಗಿದೆ. ಅವಳ ಗಂಡ ಸತೀಶ ಕುಲಕರ್ಣಿ ಅವರು ಇಂಗ್ಲೀಷ್ ವಿಭಾಗದಲ್ಲಿ ರಾಯರ ಕೈಕೆಳಗಿನ ಅಧ್ಯಾಪಕರಾಗಿದ್ದಾಗಿನಿಂದ ಅದು ಪ್ರಾರಂಭವಾಗಿತ್ತು. ಕುಲಕರ್ಣಿ ಅವರು ತನ್ನ ಮದುವೆಗೆ ಹುಡುಗಿ ನೋಡುವ ಶಾಸ್ತ್ರಕ್ಕೆ ರಾಯರನ್ನು ಕರೆಯುತ್ತಾ ಹೇಳಿದ ಮಾತನ್ನು ರಾಯರು ಈ ತನಕವೂ ಮರೆಯಲಿಲ್ಲ. ಅವರು ‘ಸರ್ ನಾನು ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ಹುಡುಗ. ನನ್ನನ್ನು ಓದಿಸಿ ಈ ಹಂತಕ್ಕೆ ತಂದವರು ನನ್ನ ಸೋದರ ಮಾವ. ಅವರೂ ಕಳೆದ ವರುಷ ತೀರಿಕೊಂಡಿದ್ದಾರೆ. ಹಾಗಾಗಿ ಇಂಥ ಶುಭಸಮಾರಂಭಗಳಲ್ಲಿ ನನ್ನ ತಂದೆಯಾಗಿ ಅಥವಾ ಮಾವನಾಗಿ ಬರುವವರು ಬೇರೆ ಯಾರೂ ಇಲ್ಲ. ಅದೆಲ್ಲ ನೀವೇ ಅಂದುಕೊಂಡಿದ್ದೇನೆ’ ಎಂದಿದ್ದರು. ಆಗ ರಾಯರು ‘ಛೆ!’ ಎಂದು ಕುಲಕರ್ಣಿಯವರ ಬಗ್ಗೆ ಕನಿಕರ ವ್ಯಕ್ತಪಡಿಸಿ ‘ಇಟ್ ಈಸ್ ಪ್ರೆಸ್ಟೀಜ್ ಟು ಮಿ’ ಎಂದು ನಿಶ್ಚಿತಾರ್ಥಕ್ಕೂ ಹೋಗಿದ್ದರು. ಅಲ್ಲಿ ಕುಲಕರ್ಣಿಯವರು ‘ಇವರೇ ನನ್ನ ಮಾವ’ ಎಂದೇ ಅಲ್ಲಿ ನೆರೆದಿದ್ದವರಿಗೆ ರಾಯರನ್ನು ಪರಿಚಯ ಮಾಡಿಸುವಾಗ, ರಾಯರಿಗೆ ಮುಜುಗರವಾದರೂ ಕೈ ಕುಲುಕಿದವರಿಗೆಲ್ಲ ರಾಯರು ‘ನೈಸ್ ಟು ಮೀಟ್ ಯು’ ಎಂದು ಹೇಳುತ್ತಾ ಮುಗುಳು ನಗುತ್ತಿದ್ದರು. ಮುಂದೆ ‘ಮದುವೆಗೂ ನೀವೇ ಧಾರೆ ಎರೆಸಿಕೊಳ್ಳಬೇಕು’ ಎಂದು ಕುಲಕರ್ಣಿ ಒತ್ತಾಯಿಸಿದಾಗ ‘ನೋ ನೋ ಅದು ಸರಿ ಅಲ್ಲ. ನಿಮ್ಮ ಆಪ್ತೇಷ್ಟರಲ್ಲಿ ಅಥವಾ ಕುಟುಂಬವರ್ಗದಲ್ಲಿ ಯಾರಿದ್ದಾರೆ ಎಂದು ನಿಮ್ಮ ತಾಯಿಯನ್ನು ಕೇಳಿ ಆಯ್ಕೆ ಮಾಡಿ’ ಎಂದು ರಾಯರು ಉಚಿತವಾಗಿ ಧಾರೆ ಎರೆಸಿಕೊಳ್ಳಲು ಬಂದ ಆಹ್ವಾನವನ್ನು ನಯವಾಗಿ ನಿರಾಕರಿಸಿದ್ದರು. ಕೊನೆಗೂ ಸತೀಶ ಕುಲಕರ್ಣಿಯವರು ತಮ್ಮ ದೂರದ ಬಂಧುಗಳನ್ನು ಮುಂದಿಟ್ಟುಕೊಂಡು ಧಾರೆ ಎರೆಸಿಕೊಂಡಿದ್ದರು. ಆದರೆ ರಾಯರು ಸತೀಶ್ ಕುಲಕರ್ಣಿಯ ಆ ಸಮಾರಂಭದಲ್ಲಿ ನಿಜವಾದ ಮಾವನಂಥ ಮಾವನಾಗಿ ಬಂದವರನ್ನೆಲ್ಲ ಎದುರ್ಗೊಂಡು ಸಂಭ್ರಮಿಸಿದ್ದರು ಮತ್ತು ಹತ್ತಾರು ಸಲ ಮದುವೆ ಮಂಟಪವನ್ನು ಏರಿ ಫೋಟೋಕ್ಕೆ ಬೇರೆ ಬೇರೆ ರೀತಿಯಲ್ಲಿ ಫೋಸು ಕೊಟ್ಟಿದ್ದರು.

ಮದುವೆಯಾಗುವಾಗ ಜಯಂತಿ ಕುಲಕರ್ಣಿ ರಾಂಪುರದ ಒಂದು ಹೈಸ್ಕೂಲಿನಲ್ಲಿ ಕನ್ನಡ ಟೀಚರಾಗಿದ್ದಳು. ಅದು ಖಾಸಗಿ ಹೈಸ್ಕೂಲಾಗಿದ್ದುದರಿಂದ ಸಂಬಳವೆನ್ನುವುದು ‘ನಾಮ್ಕಾವಸ್ಥೆ’ಯದಾಗಿತ್ತು. ಎಂ.ಎ ಓದಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಿಂತ ಹವ್ಯಾಸದ ಥರ ಪಾಠವನ್ನಾದರೂ ಮಾಡಿ ‘ಟೈಂಪಾಸ್’ ಮಾಡಬಹುದು ಎಂಬಂತೆ ಆಕೆ ಹೈಸ್ಕೂಲಲ್ಲಿ ದುಡಿಯುತ್ತಿದ್ದಳು. ಬಸವೇಶ್ವರ ಕಾಲೇಜಿನಲ್ಲಿರುವ ಸತೀಶ್ ಕುಲಕರ್ಣಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಾರೆ ಎಂಬುದರಿಂದ ಮದುವೆಯ ಪೂರ್ವದಲ್ಲೇ ಆಕೆ ತಾನೂ ಆ ಕಾಲೇಜಿನಲ್ಲಿ ಸೇರಬೇಕೆಂಬ ಕನಸು ಕಂಡಿದ್ದಳು. ಆ ಕನಸನ್ನು ಆಕೆ ಮದುವೆಯಾದ ಹೊಸದಿನಗಳಲ್ಲೇ ಗಂಡನ ಮುಂದಿಟ್ಟಾಗ ಆತ ‘ವೈ ನಾಟ್ ಮೈ ಡಿಯರ್?. ಲೆಟ್ ಅಸ್ ಟ್ರೈ’ ಎಂದು ಹೇಳಿ ‘ನಾನು ಶ್ರೀನಿವಾಸರಾಯರನ್ನು ಕೇಳುತ್ತೇನೆ. ಅವರು ‘ಎಸ್’ ಅಂದರೆ ಕೆಲಸ ಆದ ಹಾಗೇ ಎಂದು ಹೇಳಿದ್ದರು. ಆ ಮೇಲೆ, ಅದೇ ದಿನ ಸಂಜೆ ಕಾಲೇಜ್ ಮುಗಿಸಿ ರಾಯರು ಹೊರಟುನಿಂತಾಗ ಅವರ ಬಳಿ ಬಂದು ‘ಮಾವ ನೀವು ಈ ದಿನ ನಮ್ಮಲ್ಲಿಗೆ ಬರಬೇಕು ಮತ್ತು ಟೀ ಕುಡಿದು ಹೋಗಬೇಕು’ ಎಂದು ವಿನಂತಿಸಿದ್ದರು.

(ಡಾ. ನಾ. ಮೊಗಸಾಲೆ)

ಮದುವೆಯ ದಿನದ ತನಕ ಶ್ರೀನಿವಾಸರಾಯರನ್ನು ‘ಸರ್’ ಎಂದು ಕರೆಯುತ್ತಿದ್ದ ಸತೀಶ ಕುಲಕರ್ಣಿ ಮದುವೆಯ ಮರುದಿನದಿಂದ ಅವರನ್ನು ‘ಮಾವ’ ಎಂದೇ ಕರೆಯಹತ್ತಿದ್ದರು. ‘ಎಸ್, ಇದು ಯಾಕೆ?’ ಎಂದು ರಾಯರು ಪ್ರಶ್ನಿಸಿದಾಗ ಕುಲಕರ್ಣಿ ‘ಎಲ್ಲಾ ಅರ್ಥದಲ್ಲೂ ಈಗ ನೀವು ನನ್ನ ಮಾವ. ಸೋ, ಇನ್ನು ಮುಂದೆ ನಾನು ನಿಮ್ಮನ್ನು ಕರೆಯುವುದು ಹಾಗೇ!’ ಎಂದಿದ್ದರು. ರಾಯರು ನಕ್ಕು ಕುಲಕರ್ಣಿಯವರ ಹೆಗಲ ಮೇಲೆ ಕೈ ಇಟ್ಟು ‘ದೇಟೀಸ್ ಗುಡ್! ಓಕೆ’ ಎಂದು ಅದನ್ನು ಒಪ್ಪಿಕೊಂಡಿದ್ದರು.

ಶ್ರೀನಿವಾಸರಾಯರು ಸತೀಶ್ ಕುಲಕರ್ಣಿ ಅವರ ಮನೆಗೆ ಹೋದಾಗ ಬಾಗಿಲು ತೆರೆದು ಸ್ವಾಗತಿಸಿದ ಜಯಂತಿ ಕುಲಕರ್ಣಿ ಶ್ರೀನಿವಾಸರಾಯರು ಸೋಫಾದಲ್ಲಿ ಕುಳಿತುಕೊಳ್ಳುತ್ತಿದ್ದ ಹಾಗೆ ಅವರ ಪಾದಮುಟ್ಟಿ ನಮಸ್ಕರಿಸಿ ‘ನಮ್ಮ ಮನೆಗೆ ಮೊತ್ತಮೊದಲು ಬರುತ್ತಿದ್ದೀರಿ. ನಾವು ಕೊಟ್ಟದ್ದನ್ನೆಲ್ಲ ಬೇಡ ಎನ್ನಬಾರದು’ ಎಂದು ಅವರು ಕುಳಿತ ಕುರ್ಚಿಯ ಇದಿರಿದ್ದ ಟೀಪಾಯಿಯಲ್ಲಿ ಎರಡು ತಟ್ಟೆಗಳಲ್ಲಿ ತುಂಬ ಸಿಹಿ ತಂದಿರಿಸಿ ‘ಈಗ ಈ ಎರಡೂ ಪ್ಲೇಟುಗಳನ್ನು ಮಾವ ಅಳಿಯ ಇಬ್ಬರೂ ಸೇರಿ ಖಾಲಿ ಮಾಡಬೇಕು. ಅಷ್ಟರಲ್ಲಿ ನಾನು ನಿಮ್ಮ ಆಯ್ಕೆ ಕಾಫಿಯೋ ಟೀಯೋ ಏನು ಹೇಳಿ, ಅದನ್ನು ಸಿದ್ಧಪಡಿಸುತ್ತೇನೆ’ ಎಂದು ಕೈ ಮುಗಿದಿದ್ದಳು.

ರಾಯರಿಗೆ ಆ ಪ್ಲೇಟುಗಳಲ್ಲಿದ್ದ ಐಟಂಗಳನ್ನು ನೋಡಿಯೇ ಭಯವಾಯಿತು. ‘ಸಾರಿ ಜಯಂತಿ ನಾನು ಒಂದೇ ಒಂದು ಪೀಸ್ ಇದರಲ್ಲಿ ತೆಗೆಯುವುದು. ಈ ಧಾರವಾಡ ಪೇಡವನ್ನು ಮಾತ್ರ’ ಎಂದರು. ಜಯಂತಿ ‘ನೋ ಸರ್’ ಎಂದಳು. ಸತೀಶ್ ಕುಲಕರ್ಣಿಯವರೂ ‘ಇಲ್ಲ ಮಾವ’ ಎಂದು ಒತ್ತಾಯಿಸಿದರು. ರಾಯರು ‘ಇಷ್ಟನ್ನೆಲ್ಲ ತಿಂದರೆ ನಾನು ಸತ್ತೇ ಹೋದೇನು. ನನ್ನ ಹೆಂಡತಿಗೆ ಮಾತ್ರ ಏನೂ ಆಗದು’ ಎಂದು ಒಂದು ನಗೆ ಬಾಂಬು ಸಿಡಿಸಿ ಪೇಡವನ್ನು ಸವಿಯ ಹತ್ತಿದರು. ಇದರಿಂದ ಉತ್ತೇಜಿತರಾದ ಜಯಂತಿ ‘ಹಾಗಾದರೆ ಈ ಎರಡೂ ತಟ್ಟೆಗಳಲ್ಲಿದ್ದುದನ್ನು ಪ್ಯಾಕ್ ಮಾಡಿಕೊಡುತ್ತೇನೆ ಸರ್. ಮೇಡಂಗೆ ಕೊಡಿ’ ಎಂದಳು. ರಾಯರು ‘ಛೆ ಛೆ! ಹಾಗೆಲ್ಲ ಮಾಡಬೇಡಿ. ನನ್ನ ಹೆಂಡತಿಗೆ ಅದು ಇಷ್ಟವಾಗುವುದಿಲ್ಲ. ಶಿ ಈಸ್ ಫ್ರಮ್ ಗುತ್ತು ಫ್ಯಾಮಿಲಿ’ ಅಂದರೆ ಶ್ರೀಮಂತ ಬಂಟರ ಮನೆತನದಿಂದ ಬಂದವಳು. ಗುತ್ತು ಅಂದರೆ ಇಲ್ಲಿನ ವಾಡೆಯ ಹಾಗೆ. ಅವರಿಗೆಲ್ಲ ಮರ್ಯಾದೆಯದ್ದೇ ಒಂದು ಪ್ರಶ್ನೆ ಇರುತ್ತದೆ. ಇಂಥದ್ದನ್ನೆಲ್ಲ ಕೊಂಡು ಹೋದರೆ ‘ನೀವು ನಿಮ್ಮ ಬ್ರಾಹ್ಮಣ ಬುದ್ಧಿ ಬಿಡಲಿಲ್ಲ! ಎಲ್ಲಿ ಬಿಡುತ್ತೀರಿ, ಎಷ್ಟೇ ಓದಿದರೂ?’ ಎಂದು ಹಂಗಿಸುತ್ತಾಳೆ’ ಎಂದರು. ಸತೀಶ್ ಕುಲಕರ್ಣಿ ರಾಯರ ಮನೆಗೆ ಅನೇಕ ಬಾರಿ ಹೋಗಿದ್ದರೂ ಅವರ ಪತ್ನಿ ಬಂಟರ ಪಂಗಡದಿಂದ ಬಂದವರೆಂಬ ಸತ್ಯ ಅವರಿಗೆ ಗೊತ್ತಿರಲಿಲ್ಲ. ರಾಯರು ಬ್ರಾಹ್ಮಣರಾದ್ದರಿಂದ ಅವರ ಪತ್ನಿಯೂ ಬ್ರಾಹ್ಮಣರೇ ಎಂದುಕೊಂಡಿದ್ದ ಅವರಿಗೆ ಈ ಸುದ್ದಿ ‘ಶಾಕ್’ ನೀಡಿದರೂ ಅದು ವಿಶೇಷ ಅಂತ ಅನಿಸಲಿಲ್ಲ. ಆದರೆ ಬಂಟರು ಇಷ್ಟು ಸ್ವಾಭಿಮಾನಿಗಳು ಎಂದಿರುವಾಗ ಈ ಬ್ರಾಹ್ಮಣನನ್ನು ಆಕೆ ಹೇಗೆ ಮದುವೆಯಾದಳು ಎಂದು ಕುತೂಹಲ ಅವರಲ್ಲಿ ಹುಟ್ಟಿತ್ತು. ಆದರೆ ಈ ಕುತೂಹಲವನ್ನು ಬೇಧಿಸುವುದು ಎಷ್ಟು ಸರಿ ಎಂದು ಅವರಿಗೆ ಅನಿಸಿದರೂ ಅವರ ಮನಸ್ಸು ಸುಮ್ಮನಿರಲಿಲ್ಲ. ಸತೀಶ್ ಅಳುಕುತ್ತಾ ‘ಹಾಗಾದರೆ ನಿಮ್ಮದು ಪ್ರೇಮವಿವಾಹ ಇರಬೇಕಲ್ಲ ಮಾವ?’ ಎಂದಿದ್ದರು. ರಾಯರು ‘ಆಫ್‍ಕೋರ್ಸ್ ಲೌ ಮ್ಯಾರೇಜ್! ಅದು ಹೇಗಾಯಿತು ಏನಾಯಿತು ಎಂದೆಲ್ಲ ಕೇಳಬೇಡಿ. ನೌ ಇದೆಲ್ಲ ಏನೂ ಅಲ್ಲ ಅಥವಾ ವಿಶೇಷದ್ದಲ್ಲ’ ಎಂದರು.

ಆ ಮಾತು ಅಲ್ಲಿಗೆ ನಿಂತಿತ್ತು. ಆಮೇಲೆ ರಾಯರ ಅಪೇಕ್ಷೆ ಮೇರೆಗೆ ಜಯಂತಿ ಬ್ರೂ ಕಾಫಿ ಸಿದ್ಧಪಡಿಸಿ ತಂದಿಟ್ಟಳು. ರಾಯರು ಒಂದೊಂದೇ ಸಿಪ್ ಕಾಫಿಯನ್ನು ಹೀರುವಾಗ ಸತೀಶರು ‘ಮಾವ ನಮ್ಮ ಕಾಲೇಜಿನಲ್ಲಿ ಇದೇ ತಿಂಗಳಲ್ಲಿ ಕನ್ನಡ ವಿಭಾಗದ ಮಂಜುನಾಥಯ್ಯ ನಿವೃತ್ತರಾಗುತ್ತಾರೆ ಎನ್ನುವುದು ನನಗೆ ಗೊತ್ತಾಗಿದೆ. ನನ್ನ ಹೆಂಡತಿಯನ್ನು ಆ ಪೋಸ್ಟಿಗೆ ಯಾಕೆ ಪ್ರಯತ್ನ ಮಾಡಬಾರದು ಎಂಬ ಆಸೆ ನನಗೆ ಹುಟ್ಟಿದೆ. ಏನೆನ್ನುತ್ತೀರಿ ನೀವು?’ ಎಂದು ಪ್ರಶ್ನಿಸಿದರು.

‘ಆಫ್‍ಕೋರ್ಸ್, ಖಂಡಿತ ಮಾಡಬಹುದು’

‘ಆದರೆ ಅದು ಹೇಗೆ ಎಂಬುದೆಲ್ಲ ನನಗೆ ಗೊತ್ತಿಲ್ಲ ಮಾವ, ನನಗೇನೊ ಆಯಾಚಿತವಾಗಿ ಈಗಿರುವ ಪೋಸ್ಟ್ ಸಿಕ್ಕಿದೆ. ನಾನು ಓದಿದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದವರ ದೂರದ ಸಂಬಂಧಿಯಂತೆ ಈ ನಮ್ಮ ಕಾಲೇಜಿನ ಪ್ರಾಂಶುಪಾಲರು. ನಾನು ನಮ್ಮ ಪ್ರಾಂಶುಪಾಲರಿಂದ ‘ಒಂದು ಮಾತು’ ಹೇಳಿಸಿದ್ದರಿಂದ ನನ್ನ ಅಪೊೈಂಟ್‍ಮೆಂಟ್ ಸುಲಭದಲ್ಲಿ ಆಯ್ತು. ಬಟ್ ಈಗ ನನ್ನ ಹೆಂಡತಿಗೆ ಅವರ ಪ್ರಭಾವ ಬಳಸುವುದು ಕಷ್ಟ ಸಾಧ್ಯ”

‘ಎಸ್ ಹೌದು ಹೌದು! ಮತ್ತೆ ಮತ್ತೆ ಅವರನ್ನು ಕೇಳೋದು ಸರಿ ಅಲ್ಲ!’

‘ಹಾಗಾದರೆ ಏನೂ ದಾರಿಯೇ ಇಲ್ವಾ ಮಾವ’?”

‘ಹಾಗೆಂದು ನಾನು ಹೇಳಿಲ್ಲ’ ಎಂದು ಕಾಫಿಯನ್ನು ಪೂರ್ತಿ ಹೀರಿದ ರಾಯರು ಕಾಫಿಯ ಕಪ್‍ನ್ನು ಟೀಪಾಯಿಯ ಮೇಲಿಟ್ಟು ಸಣ್ಣಗೆ ತಲೆಯನ್ನು ತುರಿಸುತ್ತಾ ‘ಎಸ್ ಎಸ್. ಅದೇ ಸರಿ’ ಎಂದು ತಮ್ಮಷ್ಟಕ್ಕೆ ತಾವು ಹೇಳುತ್ತಾ ‘ನೋಡಪ್ಪ ಸತೀಶ ನಾವು ನಮ್ಮ ಮ್ಯಾನೇಜ್‍ಮೆಂಟಿನ ಅಧ್ಯಕ್ಷರನ್ನು ನೋಡೋಣ. ಅವರು ಜಂಟ್ಲ್‍ಮೆನ್. ನಾನೆಂದರೆ ಅವರಿಗೆ ತುಂಬಾ ಇಷ್ಟ. ನಾನು ಅವರ ಭೇಟಿಗೆ ಹೋಗೋದೇ ಅಪರೂಪ. ಹೋದಷ್ಟು ಸಲ ‘ಏನು ಬರೆದಿರಿ ಮೇಸ್ಟ್ರೇ’ ಎನ್ನುವುದು ಅವರ ಮೊದಲಪ್ರಶ್ನೆ. ಆಗ ‘ಏನೂ ಇಲ್ಲ’ ಎಂದು ಅಂದರೆ ‘ಇನ್ನು ಯಾರು ಬರೆಯುತ್ತಾರೆ ನೀವು ಬರೆಯುವಂಥ ವಿಚಾರ? ನೀವು ವಚನಸಾಹಿತ್ಯವನ್ನು ತುಂಬಾ ಚೆನ್ನಾಗಿ ಓದಿದ್ದೀರಿ ಮತ್ತು ವಿಶಿಷ್ಟರೀತಿಯಲ್ಲಿ ವ್ಯಾಖ್ಯಾನಿಸುತ್ತೀರಿ. ನನಗೆ ನೀವು ಬಸವಣ್ಣನ ಬಗ್ಗೆ ಅಲ್ಲಮನ ಬಗ್ಗೆ ಈ ಹಿಂದೆ ಬರೆದ ಆ ಎರಡು ಲೇಖನಗಳು ತುಂಬ ಇಷ್ಟವಾಗಿದ್ದುವು. ಇಂದಿನ ಶರಣ ಚಿಂತಕರೆಲ್ಲ ನಿಮ್ಮ ಹಾಗೆ ಬರೆದಿಲ್ಲ! ಅದಕ್ಕೆ ನನಗೆ ನಿಮ್ಮ ಬಗ್ಗೆ ಏನೋ ಒಂದು ನಿರೀಕ್ಷೆ. ಬಟ್ ಆ ನಿರೀಕ್ಷೆಯನ್ನು ನೀವು ಇಗ್ನೋರ್ ಮಾಡಬಾರದು’ ಎಂದು ಪ್ರಾರಂಭಿಸಿ ‘ಈಗ ಏನು ಬಂದಿರಿ?’ ಎಂದು ನನ್ನನ್ನು ಕೇಳುತ್ತಲೇ ಇರುತ್ತಾರೆ. ನಾನು ‘ಥ್ಯಾಂಕ್ ಯು ಸರ್. ಖಂಡಿತ ಬರೆಯುತ್ತೇನೆ’ ಎಂದು ಹೇಳಿ ‘ನನ್ನದೇನಾದರೂ ಚಿಕ್ಕಪುಟ್ಟ ಅಹವಾಲುಗಳು ಇದ್ದಾಗ ಅವನ್ನು ಅವರ ಮುಂದೆ ಇಡುತ್ತಿದ್ದೆ. ಆಗ ಅವರು ‘ಎಸ್ ಡನ್’ ಎನ್ನುವರು’ ಎಂದ ರಾಯರು ತಮ್ಮ ಮತ್ತು ಟ್ರಸ್ಟಿನ ಅಧ್ಯಕ್ಷರ ಸಂಬಂಧವನ್ನು ವಿವರಿಸಿ ‘ನಿಮ್ಮ ಹೆಂಡತಿಯ ವಿಚಾರವನ್ನು ಅವರ ಮುಂದಿಟ್ಟರೆ ಪೊಸೆಟಿವ್ ಆನ್ಸರ್ ಬರಬಹುದು ಅಂತ ಅನಿಸುತ್ತದೆ’ ಎಂದರು.

ಸತೀಶರಿಗೆ ಎದ್ದು ರಾಯರ ಕಾಲು ಹಿಡಿಯಬೇಕು ಎನ್ನುವಷ್ಟು ಉದ್ವೇಗ ಮತ್ತು ಸಂತೋಷವಾಯಿತು. ಜಯಂತಿಯ ಕಣ್ಣಲ್ಲಿ ಮಿಂಚುಮಿಂಚಿ ಅಲ್ಲಿ ಕಾಮನಬಿಲ್ಲು ಹುಟ್ಟಿ ಅದು ಅವಳ ಹುಬ್ಬುಗಳ ನಡುವೆ ಹಾದು ಹೋಯಿತು.

ರಾಯರು ದಿಢೀರಾಗಿ ತನ್ನ ಕಾಲುಮುಟ್ಟಿ ನಮಸ್ಕರಿಸಿದ ಸತೀಶ್ ಕುಲಕರ್ಣಿಯವರನ್ನು ಹಿಡಿದೆತ್ತಿ ‘ಛೆ! ಛೆ! ಇಂತದ್ದೆಲ್ಲ ಮಾಡಬಾರದು. ಐ ಡೋಂಟ್ ಲೈಕ್ ದಿಸ್’ ಎಂದು ನಯವಾಗಿ ನಿರಾಕರಿಸಿ ‘ಅವಸರ ಬೇಡ ಸತೀಶ್. ತಿಂಗಳೊಪ್ಪತ್ತಿನಲ್ಲಿ ನಾನು ಅವರನ್ನು ಒಮ್ಮೆ ಕಾಲೇಜಿಗೆ ಕರೆಸುವ ಯೋಚನೆ ಹಾಕಿದ್ದೇನೆ. ಆ ಕಾರ್ಯಕ್ರಮ ಮುಗಿಯಲಿ. ಆ ಮೇಲೆ ಈ ವಿಷಯದ ಕುರಿತು ಮಾತನಾಡಲು ಹೋಗುತ್ತೇನೆ. ಆಗ ನೀವಿಬ್ಬರು ಬನ್ನಿ’ ಎಂದರು.

ರಾಯರು ಬ್ರಾಹ್ಮಣರಾದ್ದರಿಂದ ಅವರ ಪತ್ನಿಯೂ ಬ್ರಾಹ್ಮಣರೇ ಎಂದುಕೊಂಡಿದ್ದ ಅವರಿಗೆ ಈ ಸುದ್ದಿ ‘ಶಾಕ್’ ನೀಡಿದರೂ ಅದು ವಿಶೇಷ ಅಂತ ಅನಿಸಲಿಲ್ಲ. ಆದರೆ ಬಂಟರು ಇಷ್ಟು ಸ್ವಾಭಿಮಾನಿಗಳು ಎಂದಿರುವಾಗ ಈ ಬ್ರಾಹ್ಮಣನನ್ನು ಆಕೆ ಹೇಗೆ ಮದುವೆಯಾದಳು ಎಂದು ಕುತೂಹಲ ಅವರಲ್ಲಿ ಹುಟ್ಟಿತ್ತು.

ವಾರದ ಮೇಲೆ ಕಾಲೇಜಿನ ಸಾಹಿತ್ಯ ಸಂಘದಲ್ಲಿ ಮುಂದಿನ ತಿಂಗಳು ಹದಿನೆಂಟರಂದು ನಡೆಯುವ ಕಾರ್ಯಕ್ರಮದ ಆಮಂತ್ರಣವನ್ನು ಸತೀಶರ ಕೈಯಲ್ಲಿಟ್ಟ ರಾಯರು ‘ವೆರಿ ಇಂಟರೆಸ್ಟಿಂಗ್ ಪರ್ಸನಾಲಿಟಿ ಇರುವವರೊಬ್ಬರು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾರೆ ಸತೀಶ್. ನಿಮಗೆ ಇಂಥದ್ದರಲ್ಲಿ ಆಸಕ್ತಿ ಇಲ್ಲ ಎಂದು ನನಗೆ ಗೊತ್ತು. ಬಟ್ ಯು ಮಸ್ಟ್ ಡೆವಲಪ್ ಸಚ್ ಇಂಟರೆಸ್ಟ್’ ಎನ್ನುತ್ತಾ ಸತೀಶ ಕುಲಕರ್ಣಿಯವರ ಬೆನ್ನನ್ನು ಹೂಸಿ ‘ಕಳೆದ ಐದು ವರುಷಗಳಲ್ಲಿ ವರ್ಷಕ್ಕೆ ಒಬ್ಬರ ಹಾಗೆ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಇವರನ್ನೆಲ್ಲ ನಾನು ಕರೆಸಿದ್ದು ನಿಮಗೆ ಗೊತ್ತಿದೆ. ಈ ವರ್ಷ ವಿಶ್ವನಾಥ ಖೈರೆ ಎಂಬ ಮರಾಠಿ ಚಿಂತಕರೊಬ್ಬರನ್ನು ಕರೆಸುತ್ತಿದ್ದೇನೆ’ ಎಂದರು.

ಸತೀಶ ಕುಲಕರ್ಣಿ ‘ವಿನಮ್ರವಾಗಿ ನಾನು ಖಂಡಿತ ಇರ್ತೇನೆ ಸರ್’ ಎಂದರು.

ರಾಯರು ‘ಗುಡ್ ನಿಮ್ಮ ಮಾತನ್ನು ನೀವು ಎಷ್ಟು ಉಳಿಸಿಕೊಳ್ಳುತ್ತೀರಿ ಅಂತ ನೋಡುತ್ತೇನೆ’ ಎಂದು ನಗುತ್ತಾ ‘ಈ ಖೈರೆ ಅನ್ನುವವರು ಇದ್ದಾರಲ್ಲ, ಅದ್ಭುತ ವ್ಯಕ್ತಿ. ಅವರ ಹುಟ್ಟೂರು ಪುಣೆಯ ಸುಪೆ. ಸಿವಿಲ್ ಇಂಜಿನಿಯರ್ ಪದವೀಧರರಾಗಿ ಭಾರತ ಸರಕಾರದ ದೊಡ್ಡ ಇಲಾಖೆಯೊಂದರ ಚೀಫ್ ಇಂಜಿನಿಯರಾಗಿ ಸೇವೆ ಸಲ್ಲಿಸಿದ್ದ ಅವರು ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ, ಜವಾಹರ ಸುರಂಗ, ನೇಪಾಳದ ಸಿದ್ದಾರ್ಥ ರಾಷ್ಟ್ರೀಯ ಹೆದ್ದಾರಿ ಮೊದಲಾದವುಗಳ ನೇತೃತ್ವ ವಹಿಸಿದ್ದರು. ಮರಾಠಿಯಲ್ಲದೆ, ಇಂಗ್ಲೀಷ್, ಹಿಂದಿ, ಸಂಸ್ಕøತ, ನೇಪಾಳಿ, ತಮಿಳು ಭಾಷೆಗಳನ್ನು ಅವರು ಚೆನ್ನಾಗಿ ಬಲ್ಲವರಿದ್ದು ನಮ್ಮಲ್ಲಿನ ಶಂಬಾ ಜೋಶಿಯವರ ಹಾಗೇ ಇರುವ ಚಿಂತಕರು. ಅವರದ್ದು ಸಂಶೋಧನೆ ಮತ್ತು ಚಿಂತನೆಗೆ ಒತ್ತುಕೊಡುವ ಬರೆಹಗಳೇ ಹೆಚ್ಚು. ಅವರು ‘ಏಕಲವ್ಯ’, ‘ವಂಶಾಚಾ ವ್ಯಾಸ’ ‘ಯುರೇಕಾ’, ‘ಹಿರಕನಿ’, ‘ಘೋಡ್ಯಾ ಪುಡೇ ಗೀತಾ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಆದರೆ ಇವುಗಳಿಗಿಂತ ದೊಡ್ಡ ಹೆಸರು ಅವರಿಗೆ ಬಂದದ್ದು ಅವರ ಇತರ ಕೃತಿಗಳಿಗೆ. ‘ದ್ರವಿಡ ಮಹಾರಾಷ್ಟ್ರ’, ‘ಭಾರತೀಯ ಮಿಥ್ಯಾಂಚಾ ಮಾಗೋವಾ’ ‘ವೇದಾತಿಲ ಗಾಣೀ’ ‘ಜ್ಞಾನೇಶ್ವರಾಂಚೇ ಚಮತ್ಕಾರ’ ಮೊದಲಾದವುಗಳಿಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಭಾಷಾ ಸನ್ಮಾನ್ ಪ್ರಶಸ್ತಿ, ಮಹಾರಾಷ್ಟ್ರ ಶಾಸನ ಪ್ರಶಸ್ತಿಗಳಂಥವು ಬಂದಿವೆ. ಅವರು ಉಪನ್ಯಾಸಕ್ಕೆ ಬರುತ್ತಾರೋ ಇಲ್ಲವೋ ಎಂಬ ಆತಂಕ ನನಗೆ ಇತ್ತು. ಈಗ ಅವರು ಒಪ್ಪಿದ್ದು ತುಂಬ ಸಂತೋಷ ನೀಡಿದೆ’ ಎಂದರು.

ಸತೀಶ್ ಕುಲಕರ್ಣಿ ಎರಡೆರಡು ಬಾರಿ ಆ ಆಮಂತ್ರಣವನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ‘ತುಂಬಾ ಚೆನ್ನಾಗಿ ಆಮಂತ್ರಣ ಪ್ರಿಂಟ್ ಮಾಡಿಸಿದ್ದೀರಿ ಸರ್ ಕಂಗ್ರಾಟ್ಸ್’ ಎಂದರು.

ರಾಯರು ಸುಮ್ಮನೆ ಮುಗುಳುನಕ್ಕು ‘ನಾನು ಕಾಟಾಚಾರಕ್ಕೆ ಯಾವುದನ್ನೂ ಮಾಡುವುದಿಲ್ಲ ಕುಲಕರ್ಣಿ. ನಮ್ಮ ಬಸವೇಶ್ವರ ಕಾಲೇಜ್ ಟ್ರಸ್ಟಿನ ಅಧ್ಯಕ್ಷರಿದ್ದಾರಲ್ಲ ಎಂ.ಎಸ್.ಪಾಟೀಲರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾರದ ಮೆಗಝಿನ್‍ನಲ್ಲಿ ಒಮ್ಮೆ ನಾನು ‘ಅಲ್ಲಮ ಮತ್ತು ಬುದ್ಧ’ ಎಂದು ಬರೆದ ಲೇಖನವೋದಿ ನನ್ನನ್ನು ಮನೆಗೆ ಕರೆಸಿ ‘ತುಂಬಾ ಚೆನ್ನಾಗಿ ಬರೆದಿದ್ದೀರಿ ಮಿ.ರಾವ್.ಐ ಆಮ್ ವೆರಿಮಚ್ ಇಂಪ್ರೆಸ್‍ಡ್ ಬೈದಟ್ ಆರ್ಟಿಕಲ್’ ಎಂದು ಅಭಿನಂದಿಸಿ ‘ಕನ್ನಡದಲ್ಲಿ ನೀವು ಹೆಚ್ಚು ಹೆಚ್ಚು ಬರೆಯಬೇಕು’ ಎಂಬ ಸಲಹೆ ನೀಡಿದ್ದರು. ಆದರೆ ಬರವಣಿಗೆ ಅನ್ನುವುದು ನನಗೆ ತುಂಬಾ ಉದಾಸೀನದ ಕೆಲಸ. ಬಟ್ ಸ್ಪೀಚ್ (Speech) ಕೊಡೋದು ಅಂದರೆ ತುಂಬಾ ಇಷ್ಟ. ನನ್ನ ಭಾಷಣಗಳನ್ನು ರೆಕಾರ್ಡ್ ಮಾಡಿಸಿಕೊಳ್ಳಿ ಅಂದವರೂ ಇದ್ದಾರೆ. ಅದೇನು ಮಹಾಘನಕಾರ್ಯ ಅಂತ ನಾನು ಸುಮ್ಮನಿದ್ದೇನೆ. ಒಟ್ಟು ಇಪ್ಪತ್ಮೂರು ಇಪ್ಪತ್ತನಾಲ್ಕು ಲೇಖನಗಳನ್ನು ಈ ತನಕ ನಾನು ಬರೆದಿರಬಹುದು. ಇಂಗ್ಲೀಷಿನಲ್ಲಿ ಸುಮಾರು ಹತ್ತರಷ್ಟು’ ಎಂದು ಗಂಭೀರವಾಗಿಯೇ ಹೇಳಿ ‘ಮತ್ತೊಮ್ಮೆ ಅದೇ ಡೆಕ್ಕನ್ ಹೆರಾಲ್ಡ್‍ನಲ್ಲಿ ನಾನು ಬರೆದ ‘ಬಸವಣ್ಣ ಮತ್ತು ಕಾರ್ಲ್‍ಮಾಕ್ರ್ಸ್’ ಲೇಖನವೋದಿದ ಪಾಟೀಲರು ಆ ಲೇಖನ ಪ್ರಕಟವಾದ ಸಂಜೆಯೇ ನನ್ನನ್ನು ಅವರ ಮನೆಗೆ ಖುಶಿಯಿಂದ ಆಹ್ವಾನಿಸಿದ್ದರು. ಅವರಲ್ಲಿಗೆ ನಾನು ಹೋದಾಗ ‘ಅದ್ಭುತವಾಗಿದೆ ನಿಮ್ಮ ಲೇಖನ. ಎಷ್ಟಿವೆ ಹೇಳಿ ನಿಮ್ಮ ಇಂಥ ಲೇಖನಗಳು?’ ಎಂದು ವಿಚಾರಿಸಿದ್ದ ಅವರು ‘ಇರಲಿ ಇನ್ನೂ ಒಂದಷ್ಟು ಬರೆಯಿರಿ. ನಾವೇ ಪ್ರಕಟಿಸೋಣವಂತೆ’ ಎಂದು ಹೇಳಿ ‘ಮಿ.ರಾವ್, ನಮ್ಮ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕೆಲವು ಚಿಂತಕರ ಉಪನ್ಯಾಸಗಳನ್ನು ಯಾಕೆ ಏರ್ಪಡಿಸಬಾರದು ನಾವು? ಈಗಿರುವ ಕಾಲೇಜಿನ ಕನ್ನಡ ಸಂಘದಲ್ಲಿ ಇಂಥ ಕಾರ್ಯಕ್ರಮಗಳು ನಡೆಯುತ್ತಿಲ್ಲ ಅಂತ ಅಲ್ಲ. ಬಟ್ ಅವರಿಗೆ ಹೌ ಟು ಆರ್ಗನೈಸ್ ಅನ್ನೋದು ಗೊತ್ತಿದ್ದ ಹಾಗಿಲ್ಲ!’ ಎಂದಿದ್ದರು’ ಎಂದರು.

ರಾಯರು ಪಾಟೀಲರ ಸಲಹೆಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಪಾಟೀಲರೇ ಆಮೇಲೆ ‘ಡೋಂಟ್ ಮಿಸ್ ಅಂಡರ್‍ಸ್ಟೇಂಡ್ ಮಿ ರಾವ್. ನಮ್ಮ ಕನ್ನಡವಿಭಾಗ ಚೆನ್ನಾಗಿಲ್ಲ ಅಂತ ನಾನು ಹೇಳುತ್ತಿಲ್ಲ. ನಿಮ್ಮಂತಹ ಇಂಗ್ಲೀಷ್ ಪ್ರಾಧ್ಯಾಪಕರ ನೆರವು ಪಡೆದು ಅದನ್ನು ನಮ್ಮ ರಾಜ್ಯದ ಒಂದು ಪ್ರತಿಷ್ಠಿತ ಕನ್ನಡ ಸಂಘವಾಗಿ ಮಾಡಬೇಕು ಅಂತ ನನಗೆ ಅನಿಸಲಿಕ್ಕೆ ಹತ್ತಿದೆ. ಹಿಂದೆ ಜಿ.ಪಿ.ರಾಜರತ್ನಂ ಸೆಂಟ್ರಲ್ ಕಾಲೇಜಿನಲ್ಲಿ, ಚಿ. ಶ್ರೀನಿವಾಸರಾಜು ಕ್ರೈಸ್ತ ಕಾಲೇಜಿನಲ್ಲಿ ತುಂಬಾ ಚೆನ್ನಾಗಿ ಇಂಥದ್ದನ್ನು ನಡೆಸಿದ್ದಾರೆ ಎಂದು ಕೇಳಿಬಲ್ಲೆ. ಹಾಗೆ ರಾಂಪುರದ ಬಸವೇಶ್ವರ ಕಾಲೇಜಿನಲ್ಲೂ ಒಂದು ಒಳ್ಳೆ ಕನ್ನಡ ಸಂಘವೋ ಸಾಹಿತ್ಯ ಸಂಘವೋ ಇದೆ ಅಂತ ಜಗಜ್ಜಾಹೀರಾಗಲಿ ಎಂಬ ಕನಸು ನನ್ನದು!’ ಎಂದಿದ್ದರು. ಆಗ ರಾಯರು ಅದಕ್ಕೆ ‘ಆಗಬಹುದು ಸರ್’ ಎಂದು ಒಪ್ಪಿಗೆ ಸೂಚಿಸಿ ಬಂದಿದ್ದರು.

ಆಮೇಲೆ ಪಾಟೀಲರ ಭೇಟಿಗೆ ಒಪ್ಪಿಗೆ ಪಡೆದ ರಾಯರು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮುದಿಗೌಡರನ್ನು ಕೂಡಿಕೊಂಡು ಪಾಟೀಲರನ್ನು ಭೇಟಿಮಾಡಿ ‘ನಮ್ಮ ಮೇಟಿ ಮುದಿಗೌಡರು ನಿಮ್ಮ ಸೂಚನೆಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸರ್, ಅದನ್ನು ಹೇಳೋಣ ಅಂತ ಬಂದಿದ್ದೇವೆ’ ಎಂದರು.

‘ಎಸ್.ಮಿ ಮುದಿಗೌಡರ’ ಎಂದು ಬಸವೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರನ್ನು ಸಂಬೋಧಿಸಿದ ಪಾಟೀಲರು ‘ನಿಮ್ಮಿಬ್ಬರಿಗೂ ನನ್ನದೊಂದು ಸೂಚನೆ ಇದೆ. ನಮ್ಮ ಕಾಲೇಜಿನಲ್ಲಿ ವರುಷಕ್ಕೆ ಕನಿಷ್ಠ ಮೂರು ಸಲ ನಾಡಿನ ಪ್ರಖ್ಯಾತ ವ್ಯಕ್ತಿಗಳನ್ನು ಕರೆಸಿ ಅವರಿಂದ ಒಂದು ಅದ್ಭುತವಾದ ಉಪನ್ಯಾಸವನ್ನು ಈ ವರ್ಷದಿಂದಲೇ ನೀವು ಏರ್ಪಡಿಸಬೇಕು. ಅವರಿಗೆ ಬಂದು ಹೋಗುವ ಪ್ರಯಾಣವೆಚ್ಚ ಉಳಕೊಳ್ಳುವ ವ್ಯವಸ್ಥೆಯ ಎಲ್ಲಾ ಖರ್ಚನ್ನೂ ನಮ್ಮ ಟ್ರಸ್ಟ್ ನೋಡಿಕೊಳ್ಳುತ್ತದೆ. ನಿಮ್ಮ ಸಂಘದಲ್ಲಿ ಫಂಡ್ಸ್ ಇಲ್ಲವಾದರೆ ಅತಿಥಿಗಳ ಗೌರವ ಸಂಭಾವನೆಯನ್ನು ಕೂಡಾ ನಾವೇ ಕೊಡುತ್ತೇವೆ!’ ಎಂದು ಇಬ್ಬರ ಮುಖ ನೋಡಿದ್ದರು.

ರಾಯರಿಗೆ ಖುಶಿಯಾಗಿತ್ತು. ‘ವೆರಿಗುಡ್ ಐಡಿಯಾ ಸರ್, ಮೆನಿ ಥ್ಯಾಂಕ್ಸ್’ ಎಂದು ಅವರು ತನ್ನ ಕೈಬೆರಳುಗಳ ನೆಟಿಕೆ ತೆಗೆದಿದ್ದರು. ಮುದಿಗೌಡರು ಎರಡೂ ಕೈಗಳನ್ನು ಜೋಡಿಸಿ ‘ತುಂಬಾ ಥ್ಯಾಂಕ್ಸ್ ಸರ್. ಖಂಡಿತ ಹಾಗೇ ಮಾಡ್ತೇವೆ. ಬಟ್ ಈ ವಿಶೇಷ ಕಾರ್ಯಕ್ರಮಕ್ಕೆ ಕನ್ವೀನರ್ ಆಗಿ ನಮ್ಮ ರಾಯರೇ ಇರಬೇಕು. ಅದನ್ನು ಅವರಿಗೆ ತಾವು ಹೇಳಬೇಕು’ ಎಂದಿದ್ದರು.

ಪಾಟೀಲರು ‘ಇಲ್ಲ ಅಂತ ಎಲ್ಲಿ ಹೇಳುತ್ತಾರೆ ಅವರು? ಏನ್ರೀ ರಾಯರೇ’ ಎಂದು ಶ್ರೀನಿವಾಸ ರಾಯರ ಮುಖ ನೋಡಿದ್ದರು.

‘ಖಂಡಿತ ಸರ್, ನಾನು ನಡೆಸಿಕೊಡುತ್ತೇನೆ. ಬಟ್ ಒಂದು ರಿಕ್ವೆಸ್ಟ್ ಇದೆ ಸರ್. ತಾವು ಅಂಥ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಬೇಕು’.

‘ನೋಡೋಣ ನೋಡೋಣ. ನಿಮ್ಮ ಪ್ರಿನ್ಸಿಪಲ್ ಸಾಹೇಬರಿದ್ದಾರಲ್ಲ ಅವರಿಗೆ ಹೇಳಿ. ಅವಕಾಶ ಇದ್ದರೆ ನಾನು ಬಂದು ಕೇಳುಗನಾಗಿ ಇರುತ್ತೇನೆ’ ಎಂದಿದ್ದರು ಪಾಟೀಲರು.

ಹೀಗೆ ಬಸವೇಶ್ವರ ಕಾಲೇಜಿನ ಕನ್ನಡಸಂಘದ ಆಶ್ರಯದಲ್ಲಿ ತಪ್ಪದೇ ವರುಷಕ್ಕೆ ಎರಡು ಮೂರು ಉಪನ್ಯಾಸಗಳು ನಡೆಯತೊಡಗಿದುವು. ಪಾಟೀಲರ ಒಪ್ಪಿಗೆ ಪಡೆದೇ ಈ ಕಾರ್ಯಕ್ರಮಗಳನ್ನು ರಾಯರು ಸಂಯೋಜಿಸುತ್ತಿದ್ದರು. ದೊಡ್ಡ ಉದ್ಯಮಿಯಾಗಿರುವ ಪಾಟೀಲರು ಕೆಲವೊಂದು ಸಂದರ್ಭದಲ್ಲಿ ಈ ಉಪನ್ಯಾಸ ಕಾರ್ಯಕ್ರಮಗಳ ಸಂದರ್ಭ ಇರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಆ ಭಾಷಣವನ್ನು ಅವರು ರೆಕಾರ್ಡ್ ಮಾಡಿಸಿ ಮನೆಗೆ ತರಿಸಿಕೊಂಡು ಮನೆಯ ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಂಡು ಕೇಳುತ್ತಿದ್ದರು. ಆಮೇಲೆ ಖುಶಿಯಿಂದ ರಾಯರಿಗೆ ಫೋನು ಮಾಡಿ ‘ವೆಲ್‍ಡನ್ ವೆಲ್‍ಡನ್’ ಎಂದು ಹೇಳಲು ಮರೆಯುತ್ತಿದ್ದಿಲ್ಲ. ಇದರಿಂದಾಗಿ ಬಸವೇಶ್ವರ ಕಾಲೇಜಿನಲ್ಲಿ ರಾಯರ ಸ್ಥಾನಮಾನ ಏರಿತ್ತು ಮತ್ತು ಕಾಲೇಜ್ ಟ್ರಸ್ಟಿನ ಅಧ್ಯಕ್ಷರ ಜೊತೆ ರಾಯರ ಸಂಬಂಧ ಒಳ್ಳೆದಿದೆ ಎನ್ನುವುದು ರುಜುವಾತಾಗಿ ಅನೇಕರು ರಾಯರ ಬಗ್ಗೆ ಇನ್ನಿಲ್ಲದ ಗೌರವ ತೋರಿಸಹತ್ತಿದ್ದರು. ಸ್ವತ: ಪ್ರಾಂಶುಪಾಲರು ಸಹ ಕಾಲೇಜ್‍ಡೇ ಅಥವಾ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ರಾಯರನ್ನು ಕರೆಸಿ ‘ಹೀಗೆ ಮಾಡಿದರೆ ಹೇಗೆ?’ ಎಂದು ಕೇಳಹತ್ತಿದರು. ಅಥವಾ ‘ಇದು ನನ್ನ ಯೋಚನೆ. ನಿಮ್ಮದು ಇದ್ದರೆ ಹೇಳಿ ಸರ್’ ಎಂದು ಅಭಿಪ್ರಾಯ ಕೇಳಿ ‘ಎಸ್ ಹಾಗೇ ಮಾಡೋಣ’ ಎಂದು ಅದನ್ನೇ ನಡೆಸಿಕೊಡುತ್ತಿದ್ದರು.

ಇದೆಲ್ಲ ಸತೀಶ ಕುಲಕರ್ಣಿಯವರಿಗೆ ಸ್ವಲ್ಪ ಸ್ವಲ್ಪ ಗೊತ್ತಿತ್ತು. ರಾಯರು ಸಾಂದರ್ಭಿಕವಾಗಿ ಈ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದಾಗ ‘ಹೌದಾ?’ ಎಂದು ಅಶ್ಚರ್ಯವ್ಯಕ್ತಪಡಿಸಿದ ಅವರು ಮನಸ್ಸಿನಲ್ಲೇ ಈ ಮನುಷ್ಯ ‘ಅದ್ಭುತ ವ್ಯಕ್ತಿ’ ಎಂದುಕೊಂಡರು.

ಬಸವೇಶ್ವರ ಕಾಲೇಜಿನಲ್ಲಿ ಖೈರೆ ಅವರ ಉಪನ್ಯಾಸ ತುಂಬ ಚೆನ್ನಾಗಿ ನಡೆಯಿತು. ಖೈರೆಯವರು ‘ಬಯಲಿನ ಮ್ಹಾತು ಬಾ’ ಎಂದು ಬರೆದಿದ್ದ ಲೇಖನದ ಹಿನ್ನೆಲೆಯಲ್ಲಿ ಮಾತನಾಡಿದರು. ಅದು ಜನಪದ ಸಂಸ್ಕೃತಿ, ಮಹಾರಾಷ್ಟ್ರದ ಪರಿಸರ, ಮಿಸ್ರದ ದೈವಸ್ಥಾನ, ಮೊಹೆಂಜೊದಾರೋದ ಸಂಸ್ಕೃತಿ ವೈದಿಕ ಸಂಪ್ರದಾಯಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡ ಉಪನ್ಯಾಸವಾಗಿತ್ತು. ಆ ಲೇಖನ ಆಗಲೇ ಮರಾಠಿಯಲ್ಲಿ ಪ್ರಕಟವಾದಾಗ ಖೈರೆಯವರು ಒಬ್ಬ ಅಪರೂಪದ ಚಿಂತಕ ಮತ್ತು ಸಂಶೋಧಕರೆಂದು ಪ್ರಸಿದ್ಧಿಗೆ ಬಂದಿದ್ದರು. ಅದು ಇರಾವತಿ ಕರ್ವೆಯವರ ಸರ್ವೋತ್ತಮ ಲೇಖನಗಳ ಎತ್ತರವನ್ನು ತಲುಪಿದೆ ಅಥವಾ ಇದು ಕರ್ವೆಯವರ ಲೇಖನಕ್ಕಿಂತ ಎತ್ತರದಲ್ಲಿ ಇದೆ ಎಂದು ಮಹಾರಾಷ್ಟ್ರದ ಪ್ರಸಿದ್ಧ ಲೇಖಕ ಪ್ರೊ! ಲೀಲಾ ಅರ್ಜುನವಾಡಕರಂಥವರು ಹೇಳಿದ ಮಾತನ್ನು ಸಹ ಶ್ರೀನಿವಾಸರಾಯರು ಖೈರೆಯವರನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಸ್ತುತಪಡಿಸಿದ್ದರು.

ಖೈರೆಯವರು ತಮ್ಮ ಉಪನ್ಯಾಸದಲ್ಲಿ ಸಂಶೋಧನೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳನ್ನು ಆಡಿದ್ದರು.

ಮಿಥ್ಯೆಗಳ ಹಿನ್ನೋಟ ಹಾಗೂ ಮಿಥ್ಯೆಗಳ ಗ್ರಹಿಕೆ ಇವೆರಡರಲ್ಲೂ ಸಂಶೋಧನೆಯಿದೆ. ಸಂಕಲನವಿಲ್ಲ. ಮಿಥ್ಯೆ ಹಾಗೂ ಮಿಥ್ಯಕಥೆಗಳ ರೂಪುಗೊಳ್ಳುವಿಕೆಗೆ ನೆರವಾಗುವ ಮೆದುಳಿನ ಸಾಮಥ್ರ್ಯವು ಸಾಹಿತ್ಯಕ್ಕೂ ಪ್ರಯೋಜನಕಾರಿಯಾದುದು. ಇಂಥ ಸಂಶೋಧನೆಯು ಒಂದೆಡೆ ಸಂಸ್ಕೃತಿ ಹಾಗೂ ಸಾಹಿತ್ಯದೊಡನಾದರೆ ಇನ್ನೊಂದೆಡೆಗೆ ವಿಜ್ಞಾನ ಹಾಗೂ ವ್ಯವಹಾರಗಳ ಹುಟ್ಟು ವಿಕಾಸಗಳೊಡನೆ ನಂಟುಳ್ಳದ್ದು. ಹೀಗಾಗಿ ಈ ಸಂಶೋಧನೆಗಳು ಹಲವು ವಿಧವಾಗಿವೆ. ಶುರುವಿನಿಂದಲೇ ಇಂಥವು ‘ಸತ್ಯಕಥಾ’, ‘ಮೌಜ’ ಮೊದಲಾದ ರಸಿಕಮನ್ನಣೆ ಹಾಗೂ ವಿದ್ವಾಂಸಮನ್ನಣೆಯನ್ನು ಪಡೆದ ಸಂಚಿಕೆಗಳಲ್ಲಿ ಪ್ರಕಟವಾದ ಕಾರಣ ಅವು ಮರಾಠಿ ಅಧ್ಯಯನಶೀಲರ ಅರಿವಿನ ಮಟ್ಟವನ್ನು ತಲುಪಿತ್ತಾದರೂ ಅವರು ಅವನ್ನು ಕುರಿತು ಕೂಲಂಕಷವಾಗಿ ಪರ ವಿರೋಧದ ಯೋಚನೆಯನ್ನು ಮಾಡಿಲ್ಲ. ಅವು ವಿಶ್ವವಿದ್ಯಾಲಯಗಳ ಅಧ್ಯಯನಕ್ರಮ, ಸಂಶೋಧನೆ ಹಾಗೂ ಚರ್ಚೆಗಳೊಂದಿಗೆ ಬೌದ್ಧಿಕ ಹೆಣಗಾಟವನ್ನು ಮಾಡುವ ಮಟ್ಟಿಗೆ ತಲುಪಿಲ್ಲ. ಇದರಿಂದಾಗಿ ಈ ಸಂಶೋಧನೆಗಳ ಫಲಿತಾಂಶಗಳನ್ನು ಸ್ವೀಕರಿಸುವ ಮಾತಂತೂ ದೂರವೇ ಉಳಿಯಿತು. ಮಿಥ್ಯೆಗಳ ಈ ಸಾಹಿತ್ಯವು ಸಂಸ್ಕೃತಿಕಥೆ, ಅರ್ಥಾಂತರಗಳು, ಹೊಳಪಿನ ಕಲ್ಪನೆಗಳನ್ನೆಲ್ಲ ‘ಮಿಥಿಕ್’ ಎಂದುಕೊಂಡು, ಅವುಗಳ ಸಂಕಲನ, ರಸಗ್ರಹಣ ಅಥವಾ ಅಂಥವುಗಳ ಪರಿಧಿಯಲ್ಲಿ ತಡವರಿಸುತ್ತಿದೆ. ಸಾಹಿತ್ಯದ ದೇಶಿತನ ಅಥವಾ ಸಮಾಜ ಪರಿವರ್ತನೆಗಳನ್ನು ಮುಖ್ಯ ಶಬ್ದಗಳನ್ನಾಗಿ ಮಾಡಿಕೊಂಡು ಕಥೆಗಳ ಪಠ್ಯಗಳನ್ನು ಅರ್ಥೈಸುತ್ತ ಅವುಗಳನ್ನು ಬಳಸುವ ಯತ್ನ ನಡೆಯುತ್ತಿದೆ. ಈ ದೃಷ್ಟಿಯಿಂದ ಮೌಖಿಕ ಪಠ್ಯಗಳ ಹಿನ್ನೆಲೆ ಹಾಗೂ ಮೂಲವನ್ನು ತಲುಪಬಲ್ಲ ಗ್ರಹಿಕೆಯ ಬಗೆಗಿನ ಒತ್ತಾಯವನ್ನು ಒಂದು ಬಗೆಯ ತೊಡಕು ಎಂದು ಭಾವಿಸಲಾಗುತ್ತದೆ.

ಇಂಥ ವಾತಾವರಣದಲ್ಲಿ ಬೆಳೆಯುತ್ತಿರುವ ಹೊಸತಲೆಮಾರು ಈ ಸಂಶೋಧನೆಯ ತೆರೆದ ಗಾಳಿಯ ಆರೋಗ್ಯಕರವಾದ ಉಸಿರನ್ನು ಹೀರಿಕೊಳ್ಳಲೆಂದು ಅದು ಇನ್ನೊಮ್ಮೆ ಅದರೆದುರು ಬರುತ್ತಿದೆ. ಇಂಗ್ಲೀಷ್ ಲೇಖಕರ ಆಧಾರ ಇಲ್ಲವೆ ಅವರ ಅವತರಣಿಕೆಗಳನ್ನು ತೆಗೆದುಕೊಂಡು ಅದನ್ನು ಸಿಂಗರಿಸಲಾಗಿಲ್ಲ. ಅದರ ಮಾದರಿ ಅಪ್ಪಟ ದೇಸಿಯಾದರೂ ಅದರ ಗುಣ ಮಾತ್ರ ಅಭಿಜಾತ ಸಂಶೋಧನೆಯದ್ದು. ಅದು ಭಾರತವಿದ್ಯೆಯ ಯುರೋಪುಕೇಂದ್ರದ ಸ್ವರೂಪವನ್ನು ಬದಲಾಯಿಸಿ ಹೊಸ ಭಾರತವಿದ್ಯೆಯನ್ನು ಕಟ್ಟಿ ನಿಲ್ಲಿಸುವ ಅಂತ:ಸಾಮಥ್ರ್ಯವನ್ನು ಹೊಂದಿದೆ. ಕಳೆದ ತಲೆಮಾರು ರಾಜಕೀಯ ಸ್ವಾತಂತ್ರ್ಯವನ್ನು ಪಡೆದದ್ದರಿಂದ ಈ ಶತಮಾನದ ತಲೆಮಾರು ಮಾನಸಿಕ ಸ್ವಾತಂತ್ರ್ಯವನ್ನು ವಶಪಡಿಸಿಕೊಳ್ಳಬೇಕು. ಅದಕ್ಕಾಗಿ ಸಮಾಜದ ಮನಸ್ಸಿನ ಮೇಲೆ ರಾಜ್ಯವನ್ನು ಆಳುತ್ತಿರುವ ಸಂಸ್ಕೃತಿ ಕಥೆಗಳನ್ನು ಬೇರುಸಹಿತ ಅರ್ಥಮಾಡಿಕೊಳ್ಳುವುದು ಅವಶ್ಯಕ. ಅದನ್ನು ಮಾಡಿಕೊಳ್ಳುವ ಕೆಲವು ದಿಕ್ಕುಗಳು, ಕೆಲವು ದಾರಿಗಳು ಹಾಗೂ ಕೆಲವು ಸಾಧನೆಗಳು ಈ ಸಂಶೋಧನೆಯಲ್ಲಿ ಖಂಡಿತ ದೊರೆಯುವುವು. ಹೊಸ ತಲೆಮಾರು ಅವುಗಳಿಂದ ಲಾಭ ಪಡೆಯಬೇಕು. ಭವಿಷ್ಯ ಕಾಲವು ಖಂಡಿತ ಹೊಸ ತಲೆಮಾರಿನದು.
ಈ ರೀತಿಯ ಖೈರೆ ಅವರ ಉಪನ್ಯಾಸವು ಮುಗಿದ ತಕ್ಷಣ ವೇದಿಕೆಯ ಇದಿರಲ್ಲೇ ಕುಳಿತಿದ್ದ ಪಾಟೀಲರು ವೇದಿಕೆ ಹತ್ತಿ ಖೈರೆಯವರಿಗೆ ಹಸ್ತಲಾಘವ ನೀಡಿ ಅಭಿನಂದಿಸಿದರು. ‘ತುಂಬಾ ಮಹತ್ವದ ವಿಚಾರಗಳನ್ನು ತಾವು ಹೇಳಿದ್ದೀರಿ. ನನಗೆ ತುಂಬಾ ಖುಶಿಯಾಗಿದೆ’ ಎಂದವರೇ ವೇದಿಕೆಯಲ್ಲಿದ್ದ ಶ್ರೀನಿವಾಸರಾಯರ ಕೈಕುಲುಕಿ ‘ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ. ನಾನು ಬೆಳಗಾವಿಯವ. ನನಗೆ ಮರಾಠಿ ಸ್ವಲ್ಪ ಗೊತ್ತು. ನಾನು ಅವರನ್ನು ಮರಾಠಿಯಲ್ಲೇ ಅಭಿನಂದಿಸಿದೆ. ಭಾಷೆಗಳ ವಿಚಾರದಲ್ಲಿ ದುರಭಿಮಾನ ಇರಬಾರದು. ವಿಚಾರಗಳು ಯಾವ ಭಾಷೆಯದ್ದೇ ಆಗಿರಲಿ. ಅದರಲ್ಲಿ ಸತ್ವ ಮತ್ತು ಮಹತ್ವ ಇದ್ದರೆ ಅದನ್ನು ಸ್ವೀಕರಿಸಬೇಕು! ಇದೇ ಉದ್ದೇಶದಿಂದ ನಮ್ಮ ಬಸವಸಮಿತಿಯವರು ವಚನಕಾರರ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಬೇಕು ಎಂದು ಆಗಲೇ ಯೋಚಿಸಿದ್ದಾರೆ. ಇದು ಒಂದು ಒಳ್ಳೆಯ ಯೋಚನೆ. ಕನ್ನಡದ ಯೋಚನೆಗಳು ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಪ್ರಸಾರವಾಗಬೇಕು. ಅದರ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಬೇಕು’ ಎಂದು ಹೇಳಿ ‘ನೀವು ನನ್ನ ಯೋಚನೆಯನ್ನು ಅದ್ಭುತವಾಗಿ ಕಾರ್ಯಗತಗೊಳಿಸುತ್ತಿದ್ದೀರಿ. ಐ ಆಮ್ ವೆರಿ ಪ್ರೌಡ್ ಆಫ್ ಯು’ ಎಂದು ಅಭಿನಂದಿಸಿದರು.

ರಾಯರಿಗೆ ವೇದಿಕೆಯಲ್ಲೇ ಕಾಲೇಜ್ ಟ್ರಸ್ಟಿನ ಅಧ್ಯಕ್ಷರಿಂದ ಮೆಚ್ಚುಗೆ ಸಿಕ್ಕಿದ್ದು ತುಂಬ ಸಂತೋಷ ನೀಡಿತ್ತು. ಅವರು ‘ಥ್ಯಾಂಕ್ ಯೂ ಸರ್’ ‘ಥ್ಯಾಂಕ್ ಯೂ ಸರ್’ ಎಂದು ಎರಡೆರಡು ಸಲ ಕೃತಜ್ಞತೆ ಸೂಚಿಸಿ ಖೈರೆಯವರನ್ನು ಅವರು ಉಳಿದುಕೊಂಡಿದ್ದ ಹೋಟೇಲಿಗೆ ಕರೆದೊಯ್ದಿದ್ದರು.

(ಕೃತಿ: ನೀರಿನೊಳಗಿನ ಮಂಜು (ಕಾದಂಬರಿ), ಲೇಖಕರು: ಡಾ. ನಾ. ಮೊಗಸಾಲೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)