ವಯೋಮಾನವನ್ನು ಪರಿಗಣಿಸದೆ ಗಂಡು ಮತ್ತು ಧಾರ್ಮಿಕ ಮನೋನೆಲೆಯ ಹೆಣ್ಣಿನಲ್ಲಿ ಕಾಮಪ್ರಜ್ಞೆ ಜಾಗೃತಗೊಂಡ ನಂತರ ಅವು ಮುನ್ನಡೆಯುವ ಪರಿಯಲ್ಲಿ ಉಂಟಾಗುವ ಸೂಕ್ಷ್ಮತರ ಭಾವ ಪದರುಗಳನ್ನು ಪ್ರಸ್ತುತಪಡಿಸುವ ಪರಿಕಲ್ಪನೆಯನ್ನು ಚಿತ್ರೀಕರಿಸುವ ಪ್ರಯತ್ನ ಮಾಡಿದ್ದಾಳೆ ʻದ ಹೋಲಿ ಗರ್ಲ್ʼ ಚಿತ್ರದ ನಿರ್ದೇಶಕಿ  ಲುಕ್ರೇಷಿಯಾ ಮಾರ್ಟೆಲ್‌ . ಆಕೆ ತನ್ನ ಆಶಯವನ್ನು ಪೂರ್ಣಗೊಳಿಸಿಕೊಳ್ಳಲು ಎರಡು ಮಕ್ಕಳ ತಂದೆ ಹಾಗೂ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳ ಪಾತ್ರಗಳನ್ನು ಬಳಸಿಕೊಂಡಿದ್ದಾರೆ. ಚಿತ್ರಿಕೆಗಳನ್ನು ಸೆರೆ ಹಿಡಿದ ವಿಧಾನ, ಆಶಯವನ್ನು ಯಶಸ್ವಿಯಾಗಿ  ಅನಾವರಣಗೊಳಿಸುತ್ತವೆ. ವಿವಿಧ ಬಗೆಯ ದೈಹಿಕಾಕರ್ಷಣೆಯ ಭಾವಲಹರಿಗಳನ್ನು ಒಳಗೊಂಡ ವಿಷಯವನ್ನು ಅಲ್ಪ ವಿಸ್ತಾರದ ಕಥನಕ್ರಮವನ್ನು ಬಳಸಿ ಚಿತ್ರಿಸಲಾಗಿದೆ.
ಈ ಚಿತ್ರದ ಕುರಿತು ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಎ.ಎನ್.ಪ್ರಸನ್ನ ಬರೆದಿದ್ದಾರೆ. 

ಅದೊಂದು ಅರ್ಜಂಟೀನಾದ ಸಾಲ್ಟಾ ಎನ್ನುವ ಊರಿನಲ್ಲಿರುವ ಹೊಟೇಲ್. ಅದರಲ್ಲಿನ ಸಭಾಂಗಣದಲ್ಲಿ ನಡೆಯಲಿರುವ ಸಂಗೀತೋತ್ಸವಕ್ಕೆ ನೆರೆದಿರುವ ಜನರು ನೂರಾರು. ಹೆಚ್ಚಿನ ಜನರ ಲಕ್ಷ್ಯ ವೇದಿಕೆಯ ಕಡೆಗೆ. ಆದರೆ ನಲವತ್ತು ದಾಟಿರುವ ಎರಡು ಮಕ್ಕಳ ತಂದೆ ಡಾ. ಜಾನೊ ತನ್ನಿಂದ ಅಷ್ಟು ದೂರದಲ್ಲಿ ನಿಂತಿರುವ ಹರೆಯದ ಕ್ಯಾಥೊಲಿಕ್ ವಿದ್ಯಾರ್ಥಿನಿಯಿಂದ ಆಕರ್ಷಣೆಗೊಂಡು ಅವಳಿದ್ದ ಕಡೆ ದಾರಿ ಮಾಡಿಕೊಂಡು ಮೆಲ್ಲನೆ ಜರುಗಿ ಅವಳ ಹಿಂಬದಿಯಲ್ಲಿ ನಿಲ್ಲುತ್ತಾನೆ. ಕೆಲವೇ ಕ್ಷಣಗಳಷ್ಟೆ ಮೆಲ್ಲನೆ ಅವಳನ್ನು ಬೆರಳುಗಳಿಂದ ಸ್ಪರ್ಶಿಸುತ್ತಾನೆ. ಅವನು ಆ ಹಾಗೆ ಮಾಡುವುದರಿಂದ ದೊರಕುವ ಸಂತೋಷ, ಪುಟಿದೇಳುವ ಕಾಮ ಪ್ರಚೋದಿತ ಭಾವಗಳು ನಿರೀಕ್ಷಿತ. ನರನಾಡಿಗಳಲ್ಲಿ ಪ್ರವಹಿಸುವ ತರಂಗದುನ್ಮಾದ ದಿಢೀರನೆ ಕಿರುನಗೆಯಲ್ಲಿ ಸೂಚಿತವಾಗುತ್ತದೆ, ನಿಜ. ಆದರೆ ಆ ಹುಡುಗಿಗೆ ಅವನ ವರ್ತನೆ ಅನಿರೀಕ್ಷಿತ. ಅವಳ ಮೈ ಒಮ್ಮೆಲೇ ಕಂಪಿಸಿದರೂ ಭಾವಗಳು ಬೇರೆ. ಅವಳು ಅವನಿಗಿಂತ ಭಿನ್ನವಾಗಿ ವರ್ತಿಸುತ್ತಾಳೆ.

(ಲುಕ್ರೇಷಿಯಾ ಮಾರ್ಟೆಲ್‌)

ಇದು ಬೆಲ್ಜಿಯಂನ ಲುಕ್ರೇಷಿಯಾ ಮಾರ್ಟೆಲ್‌ ನಿರ್ದೇಶನದ 2004ರ ʻದ ಹೋಲಿ ಗರ್ಲ್‌ʼ ಚಿತ್ರದಲ್ಲಿ ಕಂಡು ಬರುವ ಪ್ರಮುಖ ದೃಶ್ಯ. ವಯೋಮಾನವನ್ನು ಪರಿಗಣಿಸದೆ ಗಂಡು ಮತ್ತು ಧಾರ್ಮಿಕ ಮನೋನೆಲೆಯ ಹೆಣ್ಣಿನಲ್ಲಿ ಕಾಮಪ್ರಜ್ಞೆ ಜಾಗೃತಗೊಂಡ ನಂತರ ಅವು ಮುನ್ನಡೆಯುವ ಪರಿಯಲ್ಲಿ ಉಂಟಾಗುವ ಸೂಕ್ಷ್ಮತರ ಭಾವ ಪದರುಗಳನ್ನು ಪ್ರಸ್ತುತಪಡಿಸುವ ಪರಿಕಲ್ಪನೆ ನಿರ್ದೇಶಕಿಯದು. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಸಂದರ್ಭದ ವೈಪರೀತ್ಯವನ್ನು ಮೀರಿ ಮನುಷ್ಯನ ಮೂಲ ಗುಣಗಳು ಸಂಕೀರ್ಣ ಬೆರೆತ ಭಾವಗಳು ಪ್ರಕಟವಾಗುವ ಬಗೆಯ ಕಡೆ ಆಕೆಯ ಪ್ರಮುಖ ಗಮನ. ಆಕೆ ತನ್ನ ಆಶಯವನ್ನು ಪೂರ್ಣಗೊಳಿಸಿಕೊಳ್ಳಲು ಎರಡು ಮಕ್ಕಳ ತಂದೆ ಹಾಗೂ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳ ಪಾತ್ರಗಳನ್ನು ಕಥನದ ಭಾಗವಾಗಿ ಬಳಸಿಕೊಳ್ಳುತ್ತಾಳೆ.

ಹೊಟೇಲಿನ ಮಾಲೀಕಳಾದ ಸುಮಾರು ನಲವತ್ತರ ಹೆಲಿನಾ(ಮರ್ಸಿಡೆಸ್‌ ಮೋರನ್), ಹದಿನೈದರ ಮಗಳು ಆಮೀಲಿಯಾ (ಮರೀಯಾ ಅಲ್ಚೆ) ಮತ್ತವಳ ಗೆಳತಿಯರು ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿರುತ್ತಾರೆ. ಇವರಲ್ಲದೆ ಇ. ಎನ್‌. ಟಿ. ಡಾಕ್ಟರುಗಳ ಕಾನ್ಫೆರೆನ್ಸ್‌ ಪ್ರಯುಕ್ತ ಬಂದಿರುವ ಡಾಕ್ಟರ್ ಜಾನೊ(ಕಾರ್ಲೋಸ್‌ ಬೆಲ್ಲೋನೊ) ಅವರೊಂದಿಗಿರುತ್ತಾನೆ. ಈ ವಿದ್ಯಮಾನದಲ್ಲಿ ಡಾಕ್ಟರ್‌ ಜಾನೊ ಮತ್ತು ಅಮೀಲಿಯಾ ನಡುವೆ ಉಂಟಾದ ಪರಸ್ಪರ ಆಕರ್ಷಣೆ ಮತ್ತು ಅದರಿಂದ ಪ್ರೇರಿತವಾದ ಕಾಮನೆಗಳ ಬಗೆಯನ್ನು ಚಿತ್ರದಲ್ಲಿ ಕಾಣುತ್ತೇವೆ. ಹೀಗೆ ಮಾಡುವಲ್ಲಿ ಭಾವದುಬ್ಬರಕ್ಕೆ ಅನುಗುಣವಾಗಿ ಸಮೀಪ ಚಿತ್ರಿಕೆಗಳ ವಿನ್ಯಾಸವನ್ನು ಬಳಸಿರುವುದು ಯುಕ್ತವಾಗಿದೆ.

ಚಿತ್ರಿಕೆಗಳ ಪರಿ ಹೀಗಿದೆ : ಸಭಿಕರಲ್ಲಿ ನಿಂತುಕೊಂಡಿರುವ ಡಾಕ್ಟರ್ ಜಾನೊ ಸ್ವಲ್ಪ ದೂರದಲ್ಲಿದ್ದ ಅಮೀಲಿಯಾಳಿಂದ ಆಕರ್ಷಿತನಾಗುವುದನ್ನು ಕಾಣುತ್ತೇವೆ. ಆಕರ್ಷಣೆಯ ಭಾವ ಅವನ ಮನಸ್ಸನ್ನು ಆವರಿಸಿದ ಕೂಡಲೆ ಸ್ವಲ್ಪ ಜರುಗಿ ಅವಳನ್ನು ಬೆರಳುಗಳಿಂದ ಸ್ಪರ್ಶಿಸುತ್ತಾನೆ. ಆ ಸ್ಪರ್ಶದ ಪ್ರತಿಕ್ರಿಯೆಯಾಗಿ ಅವನು ಹರ್ಷಗೊಳ್ಳುತ್ತಾನೆ. ಆದರೆ ಅಮೀಲಿಯಾಳದು ಅದಕ್ಕಿಂತ ಭಿನ್ನ. ಸ್ಪರ್ಶದ ಅರಿವು ಆದಕೂಡಲೇ ಅಮೀಲಿಯಾ ತಾನು ಕಂಡರಿಯದ ಹಿತ ಭಾವನೆಗೆ ಒಳಗಾಗಿ ಸುತ್ತಲಿನ ಎಲ್ಲವನ್ನೂ ಮರೆತು ತನ್ನಲ್ಲಿ ಐಕ್ಯವಾದಂತೆ ಅರೆಕ್ಷಣ ಸುಮ್ಮನಿದ್ದು ನಂತರ ಮುಖ ತಿರುಗಿಸುತ್ತಾಳೆ. ಪ್ರಫುಲ್ಲಗೊಂಡ ಅವಳ ಮುಖ ಮತ್ತು ಕಣ್ಣುಗಳಿಗೆ ಡಾಕ್ಟರ್ ಜಾನೊ ಗೋಚರಿಸುತ್ತಾನೋ ಇಲ್ಲವೋ ಎನ್ನುವುದನ್ನು ಕೂಡ ನಮಗೆ ತೋರಿಸುವುದಿಲ್ಲ. ನಿರ್ದೇಶಕಿಗೆ ಹೀಗೆ ಮಾಡುವುದರಲ್ಲಿ ಅಮೀಲಿಯಾಗೆ ಹೊಸದಾಗಿ ಹುಟ್ಟಿದ ಭಾವದ ವಿಸ್ತಾರ ರೂಪವನ್ನು ಮಾತ್ರ ತಿಳಿಸಬೇಕಾದ ಉದ್ದೇಶವಿದ್ದಂತೆ ತೋರುತ್ತದೆ ಮತ್ತು ಪ್ರಜ್ಞಾಪೂರ್ವಕವಾಗಿ ಅವಳನ್ನು ಸ್ಪರ್ಶಿಸಿದ ಡಾಕ್ಟರ್ ಜಾನೊಗಿಂತ ಅನಿರೀಕ್ಷಿತವಾಗಿ ಆ ಭಾವ ಸ್ಫುರಿಸಿದ ಅಮೀಲಿಯಾ ಪ್ರಮುಖಳಾಗುತ್ತಾಳೆ.

ಉದ್ದೇಶಪೂರ್ವಕವಾಗಿ ಅವಳನ್ನು ಸ್ಪರ್ಶಿಸಿದ ಡಾಕ್ಟರ್ ಜಾನೊ ಆ ವಿಷಯದಲ್ಲಿ ಇನ್ನಷ್ಟು ಮುಂದುವರೆಯುವ ಸೂಚನೆಯನ್ನು ತೋರುವುದಿಲ್ಲ. ಒಟ್ಟಾರೆಯಾಗಿ ಅಮೀಲಿಯಾಳ ಆಕೃತಿ, ಮುಖಚಹರೆ ಇವುಗಳಿಂದ ಆಕರ್ಷಣೆಯುಂಟಾಗಿ ಕಾಮಭಾವಗಳು ಜಾಗೃತಗೊಂಡು ಅವಳನ್ನು ಮುಟ್ಟುವುದಕ್ಕೆ ಪ್ರಚೋದಿಸಿದರೂ ಅನಂತರ ದಕ್ಕಿದ್ದಕ್ಕೆ ಸಂತೃಪ್ತನಾದಂತೆ, ಹಿಂಜರಿಕೆಯಿಂದ ಸುಮ್ಮನಿರುತ್ತಾನೆ. ಆದರೆ ಅವನ ಕ್ರಿಯೆ ಅಮೀಲಿಯಾಳಲ್ಲಿ ಉಂಟುಮಾಡಿದ ಭಾವದ ತೀವ್ರತೆಯೇ ಬೇರೆ. ಅದು ಧಾರ್ಮಿಕ ನೆಲೆಯಲ್ಲಿನ ಅವಳ ಮನಸ್ಥಿತಿಯಲ್ಲಿ ವಿಶಿಷ್ಟ ಭಾವವನ್ನು ಉಂಟುಮಾಡುತ್ತದೆ. ತನಗೊಂದು ಹೊಸದಾರಿ ದೊರಕಿತೆಂದು ತಿಳಿಯುತ್ತಾಳೆ, ಸಂಭ್ರಮಗೊಳ್ಳುತ್ತಾಳೆ.

ಸಮಾರಂಭದ ಸ್ಥಳದಲ್ಲಿ ಸುತ್ತುವರಿದ ಮುಖಗಳು, ಜನರು ಇವುಗಳಿಂದ ಅಮೀಲಿಯಾ ದೂರವಾಗಿ ತನ್ನ ಗೆಳತಿ ಜೋಸೆಫಿನಾ, ಐನೆಸ್ರಿಗೆ ತನಗುಂಟಾದ ಅನುಭವವನ್ನು ತಿಳಿಸುತ್ತಾಳೆ. ಇಷ್ಟಲ್ಲದೆ ಗೆಳತಿಯರೆಲ್ಲರು ಕೂಡಿ ಧಾರ್ಮಿಕ, ರೋಚಕ ಸಂಬಂಧಿತ ವಿಷಯಗಳನ್ನು ಗೆಲುವಿನಿಂದ ಮಾತನಾಡುತ್ತ ಕಳೆಯುತ್ತಾರೆ. ಇವುಗಳ ಮಧ್ಯೆ ಅವಳು ತನಗುಂಟಾದ ಅನುಭವದ ವಿವರಗಳನ್ನು ಹೇಳುವ ಬಗೆಯಲ್ಲಿ ಅದನ್ನು ಮರು ಜೀವಿಸುವಂತೆ ಕಾಣಿಸುತ್ತಾಳೆ. ನಂತರದ ಅವಧಿಯಲ್ಲಿಯೂ ಹಬ್ಬವನ್ನು ಆಚರಿಸುವಂತಿರುವಂತೆ ಅಮೀಲಿಯಾಳ ಚಟುವಟಿಕೆಯಲ್ಲಿ ಗೋಚರಿಸುತ್ತದೆ. ಅವಳು ಸ್ನೇಹಿತೆ ಜೋಸೆಫಿನಾ ಜೊತೆ ಮತ್ತೆ ಮತ್ತೆ ಗೆಲುವನ್ನು ಹಂಚಿಕೊಳ್ಳುವುದರಲ್ಲಿ ಕಳೆಯುತ್ತಾಳೆ. ಅವಳ ಸ್ನೇಹಿತೆ ತನ್ನ ಗೆಳತಿಯ ಮನೋಲ್ಲಾಸಕ್ಕೆ ತಕ್ಕಹಾಗೆ ಖುಷಿಯಿಂದ ಪ್ರತಿಕ್ರಿಯಿಸುತ್ತಾಳೆ ಮದುವೆಯಾಗಿರುವ ಜೋಸಿಫಿನಾಗೆ ಅವಳಿಜವಳಿ ಮಕ್ಕಳಾಗುವ ಸಂಭವವಿದೆ ಎಂದು ತಿಳಿದು ಅವಳ ಜೊತೆಗೂಡಿ ಅಮೀಲಿಯಾ ಉಲ್ಲಾಸ ಹಂಚಿಕೊಳ್ಳುತ್ತಾಳೆ. ಅಮೀಲಿಯಾ ಡಾಕ್ಟರ್‌ ಜಾನೊನಿಂದ ತನಗುಂಟಾದ ಅನುಭವವನ್ನು ತಾಯಿ ಹೆಲಿನಾಳಿಗೆ ಹೇಳುವುದಿಲ್ಲ. ವಿಷಯ ತಿಳಿಯದ ಆಕೆ ಮಗಳೊಂದಿಗೆ ಸಹಜವಾಗಿ ನಡೆದುಕೊಳ್ಳುತ್ತಿರುತ್ತಾಳೆ.

ಸ್ಪರ್ಶದ ಅರಿವು ಆದಕೂಡಲೇ ಅಮೀಲಿಯಾ ತಾನು ಕಂಡರಿಯದ ಹಿತ ಭಾವನೆಗೆ ಒಳಗಾಗಿ ಸುತ್ತಲಿನ ಎಲ್ಲವನ್ನೂ ಮರೆತು ತನ್ನಲ್ಲಿ ಐಕ್ಯವಾದಂತೆ ಅರೆಕ್ಷಣ ಸುಮ್ಮನಿದ್ದು ನಂತರ ಮುಖ ತಿರುಗಿಸುತ್ತಾಳೆ. ಪ್ರಫುಲ್ಲಗೊಂಡ ಅವಳ ಮುಖ ಮತ್ತು ಕಣ್ಣುಗಳಿಗೆ ಡಾಕ್ಟರ್ ಜಾನೊ ಗೋಚರಿಸುತ್ತಾನೋ ಇಲ್ಲವೋ ಎನ್ನುವುದನ್ನು ಕೂಡ ನಮಗೆ ತೋರಿಸುವುದಿಲ್ಲ.

ಚಿತ್ರದಲ್ಲಿ ಜನರು ಸೇರುವ ಸಭಾಂಗಣ ಎಷ್ಟು ಮುಖ್ಯವೋ ಅಷ್ಟೇ ಅಲ್ಲಿಯ ಸ್ವಿಮಿಂಗ್‌ ಪೂಲ್ ಕೂಡ ಮುಖ್ಯ. ನಿರ್ದೇಶಕಿ ಸ್ವಿಮಿಂಗ್‌ ಪೂಲನ್ನು ರೂಪಕದ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಇಬ್ಬರು ಗೆಳತಿಯರ ಮಾತನಾಡುವಾಗ, ತಾಯಿ ಮತ್ತು ಮಗಳು ಮಾತನಾಡುವಾಗ, ಅಮೀಲಿಯಾ ಮತ್ತು ಡಾಕ್ಟರ್‌ ಜಾನೊ ಪ್ರತ್ಯೇಕವಾಗಿ ಅಥವ ಇಬ್ಬರೂ ಒಟ್ಟಿಗೇ ಇರುವಾಗ ಮುಂತಾದ ಸನ್ನಿವೇಶಗಳಲ್ಲಿ ಅಭಿನಯದೊಂದಿಗೆ, ಸಂಭಾಷಣೆಗಳು ಭಾವದ ಎಳೆಗಳನ್ನು ಸೂಚಿಸುವ ರೀತಿಯಲ್ಲಿ ಕಾಣುತ್ತೇವೆ. ಇಂಥ ಯಾವುದೇ ಸನ್ನಿವೇಶದಲ್ಲಿ ಪಾತ್ರಗಳ ಮಾತಿನ ಲಯ, ಆಂಗಿಕ ವಿನ್ಯಾಸ ಹಾಗೂ ವರ್ತನೆಗಳು ಸಹಜಕ್ಕೆ ಅತಿ ಸಮೀಪವಾಗಿರುತ್ತವೆ. ಇಷ್ಟಿದ್ದರೂ ಕ್ಯಾಮೆರಾ ಬಳಕೆಯಲ್ಲಿ ಅವುಗಳನ್ನು ಸಮೀಪ. ಮಧ್ಯಮ ಮತ್ತು ಅಲ್ಲಲ್ಲಿ ದೂರ ಚಿತ್ರಿಕೆಗಳ ಮೂಲಕ ಬೆಂಬಲ ವ್ಯಕ್ತಪಡಿಸಿರುವುದು ಕೂಡ ಅತ್ಯಂತ ಸಮರ್ಪಕ.

ನಲವತ್ತಕ್ಕಿಂತ ಕಡಿಮೆ ವಯಸ್ಸಿನವಳಂತೆ ಕಾಣುವ ಅಮೀಲಿಯಾಳ ತಾಯಿ ಹೆಲಿನಾ ಈಗ ವಿವಾಹ ವಿಚ್ಛೇದಿತೆ. ಅವಳು ಹಿಂದೊಮ್ಮೆ ಡೈವಿಂಗ್ ನಲ್ಲಿ ಚಾಂಪಿಯನ್ ಆಗಿದ್ದವಳು. ಅಮೀಲಿಯಾ, ಅವಳ ತಾಯಿ ಹಿಲಿನಾ ಮತ್ತು ಡಾಕ್ಟರ್ ಜಾನೊ ಸ್ವಿಮಿಂಗ್‌ ಪೂಲ್ ಬಳಿ ಕಾಣಿಸಿಕೊಳ್ಳುವುದುಂಟು. ತನ್ನಲ್ಲಿ ದೈಹಿಕಪ್ರಜ್ಞೆಯನ್ನು ಜಾಗೃತಗೊಳಿಸಿದ ಡಾಕ್ಟರ್ ಜಾನೊ ಬಗ್ಗೆ ಅಮೀಲಿಯಾ ಹೆಚ್ಚಿನ ಆಕರ್ಷಣೆ ಹೊಂದಿರುವುದರಿಂದ ಅವಳು ಡಾಕ್ಟರ್ ಜಾನೊನ ಮುಖಚಹರೆಯನ್ನು ಕುತೂಹಲದಿಂದ ವೀಕ್ಷಿಸುವುದು ಮತ್ತು ಅವನನ್ನು ನೋಡುತ್ತಿದ್ದರೂ ಅವನಿಗೆ ತಿಳಿಯಬಾರದೆಂಬ ರೀತಿಯಲ್ಲಿ ಮರೆಮಾಚುವುದು ಇತ್ಯಾದಿಯನ್ನು ಮಾಡುತ್ತಾಳೆ. ಹಾಗಿದ್ದರೂ ಅಮೀಲಿಯಾ ಮತ್ತು ಡಾಕ್ಟರ್ ಜಾನೊ ಒಬ್ಬರಿಗೊಬ್ಬರು ಎದುರಾಗುವುದು ಜರುತ್ತದೆ. ಆದರೆ ಅವರಿಬ್ಬರ ನಡುವೆ ಸಂಭಾಷಣೆ ಸೊನ್ನೆ. ಜೊತೆಗೆ ಅವರಿಬ್ಬರ ನಡುವೆ ಈ ಮೊದಲು ಉಂಟಾದ ದೈಹಿಕ ಸಂಪರ್ಕ ಹೊರತು ಪಡಿಸಿದರೆ ಇನ್ನು ಯಾವ ಬಗೆಯ ಉನ್ಮಾದಗೊಳ್ಳುವ ಸನ್ನಿವೇಶ ಉಂಟಾಗುವುದಿಲ್ಲ. ಇವುಗಳಿಂದ ನಿರ್ದೇಶಕಿಗೆ ಅವರಲ್ಲಿನ ಭಾವ ವಿನ್ಯಾಸಗಳನ್ನು ಚಿತ್ರಿಕೆಗಳ ಮೂಲಕ ಗ್ರಹಿಸುವಂತೆ ಮಾಡುವ ಉದ್ದೇಶವಿರುವುದು ಸ್ಪಷ್ಟವೆನಿಸುತ್ತದೆ.

ಆದರೆ ಅಮಿಲಾಳ ತಾಯಿ ಹೆಲಿನಾಳದು ಇನ್ನೊಂದು ಬಗೆ. ಅದು ಗಂಡು-ಹೆಣ್ಣಿಗೆ ಸಂಬಂಧಿಸಿದ ಪ್ರಕೃತಿ ಸಹಜವಾದ ಆಕರ್ಷಣೆಯ ಇನ್ನೊಂದು ಸ್ವರೂಪವನ್ನು ಕಥನದ ಚೌಕಟ್ಟಿನಲ್ಲಿ ತೆರೆದುಕೊಳ್ಳುತ್ತದೆ. ಇದರ ಮೂಲ ಪರಿಕಲ್ಪನೆ ಗಂಡಸಿನ ಲಜ್ಜಾ ರಹಿತ, ಎಲ್ಲ ಸೂಕ್ಷ್ಮಗಳನ್ನು ಬದಿಗೊತ್ತಿ, ಕಾಮ ತೃಷೆಯನ್ನು ತಣಿಸಲು ಕೈಗೊಳ್ಳುವ ಮಾರ್ಗವನ್ನು ನಿರ್ದೇಶಕಿ ತೆರೆದಿಡುತ್ತಾಳೆ. ಇಲ್ಲಿ ಪುರುಷನನ್ನು ಪ್ರತಿನಿಧಿಸುವ ಬಗೆಯಲ್ಲಿ ಡಾ ಜಾನೊ ಇದ್ದು ಅವನ ಹೀನ ವರ್ತನೆಯ ವಲಯದಲ್ಲಿ ಮಗಳು ಅಮೀಲಿಯಾ ಹಾಗೂ ಅವಳ ತಾಯಿ ಹೆಲಿನಾ ಇರುತ್ತಾರೆ. ಅದರ ಯೂ ವಿಶಿಷ್ಟವೆನಿಸುವ ನಿರೂಪಣೆ ಈ ಕೆಳಗಿನಂತಿದೆ.

ಚಿತ್ರದ ಬೆಳವಣಿಗೆಯಲ್ಲಿ ಡಾಕ್ಟರುಗಳ ಕಾನ್‌ಫೆರನ್ಸ್‌ಗೆ ಸಂಬಂಧಿಸಿದಂತೆ ಅಲ್ಲಿ ಮುಖ್ಯ ಅಂಶಗಳನ್ನು ಒಂದು ಎಪಿಸೋಡಿನ ರೀತಿಯಲ್ಲಿ ಪ್ರಸ್ತುತಪಡಿಸುವ ಆಲೋಚನೆ ಉಂಟಾಗುತ್ತದೆ. ಅದರಲ್ಲಿ ಡಾಕ್ಟರೊಬ್ಬರು ಪೇಷಂಟ್‌ ಜೊತೆ ಸಂಭಾಷಿಸುವ ರೀತಿಯಲ್ಲಿ ಪ್ರಸ್ತುತಪಡಿಸಬೇಕೆಂದು ನಿಶ್ಚಯಿಸುತ್ತಾರೆ. ಈ ಸಂದರ್ಭದಲ್ಲಿ ಪೇಷಂಟ್ನ ಪಾತ್ರ ಯಾರಿಗೆ ವಹಿಸಿಕೊಡುವುದು ಎನ್ನುವ ಪ್ರಶ್ನೆಗೆ ಅಮೀಲಿಯಾಳ ತಾಯಿ ಹೆಲಿನಾ ತನಗೆ ಇಂಥದನ್ನು ನಿರ್ವಹಿಸುವುದು ಸಾಧ್ಯವೆಂದು ತಿಳಿಸುತ್ತಾಳೆ. ಹೀಗಾಗಿ ತಯಾರಿಸುವ ಎಪಿಸೋಡಿನಲ್ಲಿ ಡಾಕ್ಟರ್ ಪಾತ್ರವನ್ನು ಡಾಕ್ಟರ್ ಜಾನೊ ಮತ್ತು ಪೇಷಂಟ್ ಪಾತ್ರವನ್ನು ಹೆಲಿನಾ ನಿರ್ವಹಿಸುವುದೆಂದು ತೀರ್ಮಾನಿಸುತ್ತಾರೆ. ಅದಕ್ಕೆ ಸಂಬಂಧಿತ ರಿಹೆರ್ಸಲ್‌ಗಳೂ ಜರುಗುತ್ತವೆ. ಹೀಗೆ ಎಪಿಸೋಡಿನ ತಯಾರಿಕೆ ಎನ್ನುವುದು ಕೇವಲ ನೆಪ ಮಾತ್ರವಾಗಿ ಡಾಕ್ಟರ್ ಜಾನೊ ಮತ್ತು ಹೆಲಿನಾ ಕೇವಲ ಪರಿಚಿತರು ಎನ್ನುವ ಮಟ್ಟದಿಂದ ಹೆಚ್ಚು ಆತ್ಮೀಯ ಮಟ್ಟಕ್ಕೆ ಪರಿವರ್ತಿತವಾಗುತ್ತದೆ. ಅನಂತರ ಅದು ತೀವ್ರಸ್ವರೂಪದ ಆಕರ್ಷಣೆಯಾಗುವುದಕ್ಕೆ ಹೆಚ್ಚಿನ ಅವಧಿ ಬೇಕಾಗುವುದಿಲ್ಲ. ಬಹಳ ಬೇಗನೆ ನಾವು ನಿರೀಕ್ಷಿಸುವ ಮಟ್ಟವನ್ನು ತಲುಪುತ್ತದೆ. ವಿವಾಹ ವಿಚ್ಛೇದನ ಹೊಂದಿ ದೈಹಿಕ ಒತ್ತಾಸೆಗಳನ್ನು ಪೂರೈಸಿಕೊಳ್ಳಲು ಅವಕಾಶವಿರದ ಹೆಲಿನಾಗೆ ಎಪಿಸೋಡ್‌ ತಯಾರಿಕೆಯ ಸಂದರ್ಭ ತನ್ನ ಅಗತ್ಯ ಪೂರೈಸಿಕೊಳ್ಳುವ ಭೂಮಿಕೆಯಾಗಿ ಕಾಣುತ್ತದೆ. ಡಾಕ್ಟರ್‌ ಜಾನೊನೊಂದಿಗೆ ಹದಿಹರೆಯದ ಅಮೀಲಿಯಾಳ ಭಾವಸಂಬಂಧಕ್ಕಿಂತ ಹೆಲಿನಾಳದು ತೀವ್ರ ಸ್ವರೂಪದಲ್ಲಿರುತ್ತದೆ.

ಹೀಗೆ ಹತ್ತಾರು ಜನರು ಸೇರುವ ಒಂದು ಸಮಾರಂಭದ ಹಿನ್ನೆಲೆಯಲ್ಲಿ ಜರುಗುವ ವಿಭಿನ್ನ ಸ್ವರೂಪದ ದೈಹಿಕಾಕರ್ಷಣೆಯ ಭಾವಪದರುಗಳು ಹೆಚ್ಚಿನ ತಿರುವುಗಳಿಲ್ಲದೆ ಚಿತ್ರದಲ್ಲಿ ನಿರೂಪಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೀಲಿಯಾ ಧಾರ್ಮಿಕ ಭಾವನೆಗಳ ಜೊತೆ ಮಿಳಿತಗೊಂಡ ದೈಹಿಕಪ್ರಜ್ಞೆ ಜಾಗೃತಗೊಂಡು ತಾನು ಭಾವ ಪರವಶಳಾದದ್ದು ತಪ್ಪೋ ಸರಿಯೋ ಎಂಬ ಗೊಂದಲದಲ್ಲಿ ಸಿಲುಕಿರುತ್ತಾಳೆ. ಇಂಥ ವಿಶೇಷ ಪರಿಸ್ಥಿತಿಗೆ ಸಿಲುಕಿದ ಅವಳು ಒಂದು ವಿಧವಾಗಿ ವರ್ತಿಸಿದರೆ ಹೆಲಿನಾಳದು ಇನ್ನೊಂದು ಬಗೆ. ಇವೆಲ್ಲವುಗಳನ್ನು ನಿರೂಪಿಸುವ ವಿಧಾನ ಅತ್ಯಂತ ಸಹಜ ರೀತಿಯಲ್ಲಿದೆ .ಚಿತ್ರ ಮೆಲು ನಡಿಗೆಯದು. ಪಾತ್ರಗಳು ಅಂಗ ವಿನ್ಯಾಸದಿಂದ, ಕೆಲವೊಮ್ಮೆ ಮುಖಚಹರೆ ಮತ್ತು ಕಣ್ಣಿನ ನೋಟದಿಂದ ಭಾವನೆಗಳನ್ನು ವ್ಯಕ್ತಪಡಿಸಿರುದನ್ನು ಕಾಣುತ್ತೇವೆ.

ಕಥನದ ಬೆಳವಣಿಗೆಯಲ್ಲಿ ಡಾಕ್ಟರ್‌ ಜಾನೊ ಮತ್ತು ಅಮೀಲಿಯಾಳ ತಾಯಿ ಹೆಲಿನಾ ಭಾಗವಹಿಸಿ ನಡೆಸಿಕೊಡುವ ಎಪಿಸೋಡ್ ನೇರವಾಗಿ ಪ್ರಸಾರವಾಗುವ ಏರ್ಪಾಡಾಗಿರುತ್ತದೆ. ಇದೆಲ್ಲದರ ನಡುವೆ ಈ ಕಾರ್ಯಕ್ರಮಕ್ಕೆ ತೊಡಕು ಕಾಣಿಸಿಕೊಳ್ಳುತ್ತದೆ. ಅದೆಂದರೆ ಡಾಕ್ಟರ್ ಜಾನೊ ಅಮೀಲಿಯಾಳ ಜೊತೆ ಅನುಚಿತವಾಗಿ ವರ್ತಿಸಿರುವುದರ ವಿರುದ್ಧ ಅವನ ಮೇಲೆ ಆರೋಪ ಹೊರಿಸಬೇಕೆಂದು ಅಮೀಲಿಯಾಳ ಗೆಳತಿ ಕೈಗೊಳ್ಳುವ ಪ್ರಯತ್ನ. ಹೀಗೆಲ್ಲಾ ಉಂಟಾದ ಗೊಂದಲಗಳಲ್ಲಿ ಪ್ರಮುಖ ವ್ಯಕ್ತಿಗಳ ನಡುವೆ ಉಂಟಾದ ಸಂಬಂಧಗಳನ್ನು ನಿರ್ದೇಶಕಿ ಲುಕ್ರೇಷಿಯಾ ಮಾರ್ಟೆಲ್ ನಿಶ್ಚಿತ ನೆಲೆಗೆ ತಲುಪಿಸುವುದಿಲ್ಲ. ಅವುಗಳನ್ನು ನಮ್ಮ ಊಹೆಗೆ ಬಿಟ್ಟಿದ್ದಾರೆ.

ವಿವಿಧ ಬಗೆಯ ದೈಹಿಕಾಕರ್ಷಣೆಯ ಭಾವಲಹರಿಗಳನ್ನು ಒಳಗೊಂಡ ವಿಷಯವನ್ನು ಅಲ್ಪ ವಿಸ್ತಾರದ ಕಥನಕ್ರಮವನ್ನು ಬಳಸಿಕೊಂಡು ನಿರ್ದೇಶಕಿ ಲುಕ್ರೇಷಿಯಾ ಮಾರ್ಟಿಲ್ ತಮ್ಮ ಆಶಯವನ್ನು ಪೂರ್ಣಗೊಳಿಸುತ್ತಾರೆ. ಈ ಪ್ರಯತ್ನದಲ್ಲಿ ಅವರಿಗೆ ಛಾಯಾಗ್ರಾಹಕ ಫೆಲಿಕ್ಸ್ ಮಾನ್ಟಿ‌ ಮತ್ತು ಸಂಕಲನಕಾರ ಸ್ಯಾಂಟಿಯಾಗೋ ರಿಚ್ಚಿ ನೀಡಿದ ಬೆಂಬಲದಿಂದ ಪೂರೈಸಿಕೊಳ್ಳುತ್ತಾರೆ ಅದಕ್ಕೆ ಸೂಕ್ತವಾದ ವಿಶಿಷ್ಟ ಅಭಿನಯವನ್ನು ಅಮೀಲಿಯಾ ಮತ್ತು ಹೆಲಿನಾಳ ಪಾತ್ರಧಾರಿಗಳು ನೀಡಿದ್ದಾರೆ.