ಹಿರೋಶಿಮಾಗೆ ಆ ನಾಟಕವನ್ನು ನಿರ್ದೇಶಿಸಲು ಹೊರಟವನಿಗೆ ಪ್ರಾರಂಭದಲ್ಲಿಯೇ ಅನಿರೀಕ್ಷಿತ ಪ್ರಸಂಗ ಎದುರಾಗುತ್ತದೆ. ನಾಟಕ ಸಂಸ್ಥೆಯವರು ಕಫುಕುನ ಕಾರಿಗೆ ಡ್ರೈವರೊಬ್ಬಳನ್ನು ಏರ್ಪಾಡು ಮಾಡಿರುತ್ತಾರೆ. ಆದರೆ ಕಫುಕುಗೆ ತಕ್ಷಣವೇ ಅದು ಇಷ್ಟವಾಗುವುದಿಲ್ಲ. ಅವನಿಗೆ ತನ್ನಷ್ಟಕ್ಕೆ ತಾನು ಏಕಾಂಗಿಯಾಗಿ ಕಾರಲ್ಲಿ ಓಡಾಡುವುದು ಇಷ್ಟವೆನಿಸಿ ಬೇಡವೆಂದರೂ ಕೇಳದೆ ಮಿಸಕಿ ವಕಾರಿ ಎಂಬ ಯುವತಿಯನ್ನು ಗೊತ್ತು ಮಾಡುತ್ತಾರೆ. ಅವಳು ತಾನು ಡ್ರೈವರ್ ಆಗಿರುವುದರ ಬಗ್ಗೆ ಕಫುಕುನ ಹಳೆಯ ಕಾರನ್ನು ಅತ್ಯಂತ ಸಮರ್ಪಕವಾಗಿ ಓಡಿಸಿ ತನ್ನ ಸಾಮರ್ಥ್ಯವನ್ನು ದೃಢಪಡಿಸುತ್ತಾಳೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಜಪಾನ್‌ ನ ʻಡ್ರೈವ್‌ ಮೈ ಕಾರ್ʼ ಸಿನಿಮಾದ ವಿಶ್ಲೇಷಣೆ

2022ರ ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ಆಸ್ಕರ್‌ ಪ್ರಶಸ್ತಿ ವಿಜೇತ ರುಸುಕೆ ಹಮಗುಚಿ ನಿರ್ದೇಶನದ ʻಡ್ರೈವ್‌ ಮೈ ಕಾರ್‌ʼ ವಿಶಿಷ್ಟತೆಗಳಿಂದ ಕೂಡಿದೆ. ಚಿತ್ರ ಅದೇ ದೇಶದ ಹರುಕಿ ಮುರಕಾಮಿ ಕಥೆಗಳನ್ನು ಆಧರಿಸಿದೆ. ಅದರ ಪ್ರಾರಂಭದ ದೃಶ್ಯದಲ್ಲಿ ಅರೆಕತ್ತಲಿನಲ್ಲಿ ದೀರ್ಘ ಅವಧಿಯ ಕಪ್ಪು ಬಣ್ಣದ ಹೆಣ್ಣಿನ ಆಕೃತಿ ಗೋಚರಿಸುತ್ತದೆ. ಗಾಢವಾದ ಕಪ್ಪು ಬಣ್ಣ ಕಡೆಗೆ ನಮ್ಮ ಗಮನವನ್ನು ಸೆಳೆಯುವುದರ ಮೂಲಕ ನಿರ್ದೇಶಕ ಇಡೀ ಚಿತ್ರದಲ್ಲಿ ವಿಷಾದದ ಅಂಶ ಪ್ರಧಾನವಾಗುವುದನ್ನು ಮೊದಲಿಗೇ ಸೂಚಿಸುತ್ತಾನೆ. ಸಹಜವೆನಿಸುವ ನಿರೂಪಣೆಯ ಲಯದಲ್ಲಿ ಓಟೋ ಮತ್ತು ಯುಸುಕಿ ಕಫುಕು ಯುವ ದಂಪತಿಗಳು ಮಾತನಾಡುತ್ತಿರುತ್ತಾರೆ.

(ರುಸುಕೆ ಹಮಗುಚಿ )

ಓಟೋ(ರೀಕ ಕಿರಿಶಿಮ) ಟೀವಿ ಇತ್ಯಾದಿಗೆ ಚಿತ್ರಕಥೆ ಬರೆಯುವಾಕೆ. ಕಫುಕು(ಹಿದೆತೋಶಿ ನಿಶಿಜಿಮೆ) ರಂಗ ನಿರ್ದೇಶಕ. ಅವನು ಚೆಕಾಫ್‌ನ ಅಂಕಲ್‌ ವಾನ್ಯಾ ನಾಟಕದ ಪಾತ್ರಗಳ ಅಂತಸತ್ವದ ಕಡೆ ಗಮನವಿರುತ್ತದೆ. ಅವರಿಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದರೂ ಅವರ ವೈಯಕ್ತಿಕ ಲೈಂಗಿಕ ಬದುಕು ನಿಜಕ್ಕೂ ವಿಸ್ಮಯಕಾರಿ. ಅವರಿಬ್ಬರೂ ಪರಸ್ಪರರನ್ನು ಅಗಾಧವಾಗಿ ಪ್ರೇಮಿಸುತ್ತಿದ್ದಾರೆ ಎನ್ನುವುದು ಅವರ ವರ್ತನೆ, ಸಂಭಾಷಣೆಗಳಿಂದ ವ್ಯಕ್ತವಾಗುತ್ತದೆ. ಆದರೆ ಅವಳಿಗೆ ಲೈಂಗಿಕ ಕ್ರಿಯೆಯ ಪರಾಕಾಷ್ಠೆಯಲ್ಲಿ ತನ್ನ ಸೃಷ್ಟ್ಯಾತ್ಮಕ ಶಕ್ತಿಗೆ ಪ್ರೇರಣೆ ಉಂಟಾಗುವ ವಿಶೇಷ ಗುಣವಿರುತ್ತದೆ. ಅಂಥ ಉತ್ತುಂಗ ಕ್ಷಣಗಳಲ್ಲಿ ಅವಳು ತನಗೆ ಅರಿವಿಲ್ಲದಂತೆಯೇ ತನ್ನಲ್ಲಿ ಪುಟಿದೆದ್ದ ಸೃಷ್ಟ್ಯಾತ್ಮಕ ಕ್ರಿಯೆಯಲ್ಲಿ ತೊಡಗಿ ಮಾತನಾಡುತ್ತ ಹೋಗುತ್ತಾಳೆ. ಆದರೆ ತಾನು ಹೇಳಿದ್ದೇನೆಂದು ಮರುದಿನ ಅವಳಿಗೆ ನೆನಪಿಗೆ ಬರುವುದಿಲ್ಲ. ಕಫುಕು ಅದನ್ನು ತಿಳಿಸಿದಾಗ ಅವಳು ಅದನ್ನು ಚಿತ್ರಕಥೆಯಾಗಿ ಪರಿವರ್ತಿಸುತ್ತಾಳೆ. ಅದರಲ್ಲಿ ಸ್ಕೂಲ್ ಹುಡುಗನೊಬ್ಬನನ್ನು ಅವನಿಗೆ ಅವರಿವಿಲ್ಲದೆ ಪ್ರೇಮಿಸುವ ಎಳೆ ಹುಡುಗಿಯ ವರ್ತನೆಯನ್ನು ನಿರೂಪಿಸುತ್ತಾಳೆ. ಅದು ಪ್ರೇಮಕ್ಕೆ ಅಥವ ಮೋಹಕ್ಕೆ ಸಂಬಂಧಿಸಿದ ವಿಷಯವೆನ್ನುವುದು ಗಮನಾರ್ಹ. ಹೀಗೆ ಮಾಡಿದ ಮೊದಲ ಪ್ರಯತ್ನದಲ್ಲಿ ಅವಳು ಯಶಸ್ಸು ಲಭಿಸಿ ಅದನ್ನೇ ಮುಂದುವರಿಸುತ್ತಾಳೆ.. ಇಷ್ಟು ಮಾತ್ರವಲ್ಲದೆ ಅವರು ಅಂಕಲ್‌ ವಾನ್ಯಾ ನಾಟಕದಲ್ಲಿರುವ ಮುಖ್ಯ ಭಾಗಗಳ ಸಂಭಾಷಣೆಯ ನಿರೂಪಣೆ ಮಾಡಿ, ಅದನ್ನು ರೆಕಾರ್ಡ್‌ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಂಡಿರುತ್ತಾರೆ.

ಹೀಗೆ ಸೃಷ್ಯಾತ್ಮಕ ಕ್ರಿಯೆಯಲ್ಲಿ ತೊಡಗುವ ಅವಶ್ಯಕತೆಗೆ ಅವಳಿಗೆ ಗಂಡನೊಡನೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದಿಲ್ಲ. ತಾನು ಬಯಸುವ ಯಾವುದೇ ಪುರುಷನಾದರೂ ಸಾಕು! ಹೆಂಡತಿ ಓಟೋಳ ಈ ಗುಣ ಕಫುಕುಗೆ ತಿಳಿದಿರುತ್ತದೆ. ಆದರೆ ಅವನು ಆದರಿಂದ ತನ್ನ ಅಸ್ಮಿತೆಯನ್ನು ಕಳೆದುಕೊಂಡಷ್ಟೇ ವಿಷಾದಭರಿತನಾದರೂ ಅವಳ ವರ್ತನೆಗೆ ಅಡ್ಡಿ ಬರುವುದಿಲ್ಲ. ಹೀಗಾಗಿಯೇ ಓಟೋ ಅನ್ಯರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಇಂಥ ಸನ್ನಿವೇಶವನ್ನು ಸ್ವತಃ ಕಾಣುತ್ತಾನೆ ಕೂಡ. ಇಷ್ಟಾದರೂ ಓಟೋಳನ್ನು ಗಾಢವಾಗಿ ಪ್ರೀತಿಸುತ್ತೇನೆಂದು ಕಫುಕು ಭಾವಿಸುತ್ತಾನೆ. ಅವಳ ವರ್ತನೆಗಳು ಅದನ್ನು ಪುಷ್ಟೀಕರಿಸುತ್ತದೆ. ಆಗಿನ ಮನಸ್ಥಿತಿಯಲ್ಲಿ ಲೈಂಗಿಕ ಹಾಗೂ ಪ್ರೇಮದ ವಿಷಯಗಳು ತಮ್ಮಷ್ಟಕ್ಕೆ ಪ್ರತ್ಯೇಕ ಎಂದು ಅವನ ಭಾವನೆ. ದೈಹಿಕ ಸಂಬಂಧಿತ ಅವಳ ವರ್ತನೆ, ನಿಲುವುಗಳನ್ನು ಬಿಟ್ಟರೆ ಉಳಿದಂತೆ ಅವರು ತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ ದಿನಗಳುರುಳಿದಂತೆ ಅವಳಲ್ಲಿ ತನ್ನ ವರ್ತನೆ, ಕ್ರಿಯೆ, ನಿಲುವುಗಳ ಬಗ್ಗೆ ತೀವ್ರ ಸ್ವರೂಪದ ಸಂದಿಗ್ಧತೆ ಉಂಟಾಗಿ ಹಠಾತ್ ತೀರಿಕೊಳ್ಳುತ್ತಾಳೆ. ಇಷ್ಟಲ್ಲದೆ ಅನಿರೀಕ್ಷಿತವಾದ ಈ ಘಟನೆಯಿಂದ ಕಫುಕುನ ಎಲ್ಲ ಬಗೆಯ ಕನಸುಗಳು ಭಗ್ನವಾಗುತ್ತದೆ. ಹೆಂಡತಿಯಷ್ಟೇ ಅಲ್ಲದೆ ನಾಲ್ಕು ವರ್ಷದ ಮಗಳ ಸಾವೂ ಸಂಭವಿಸಿರುತ್ತದೆ. ಪರಿಣಾಮವಾಗಿ ತನ್ನ ನೆಲೆ ಏನೆಂದು ಅರಿಯದೆ ಎರಡು ವರ್ಷಗಳು ಸುಮ್ಮನೆ ಉರುಳುವುದನ್ನು ನೋಡುತ್ತಾನೆ.

ಚಲನಚಿತ್ರ ಮಾಧ್ಯಮದ ಅತ್ಯಂತ ವಿಶಿಷ್ಟವೆನಿಸುವಂತೆ ಚಿತ್ರದ ಕ್ರೆಡಿಟ್ಸ್ ತೋರಿಸುವ ಮೊದಲ ನಿರ್ದೇಶಕ ಮೇಲಿನದನ್ನು ನಲವತ್ತಕ್ಕೂ ಹೆಚ್ಚು ನಿಮಿಷಗಳಲ್ಲಿ ನಿರೂಪಿಸುತ್ತಾನೆ! ಕಾರಣ ಪಾತ್ರಗಳಲ್ಲಿ ವ್ಯಕ್ತವಾಗುವ ಗಂಡು-ಹೆಣ್ಣಿನ ಸಂಬಂಧ, ಕಾಮ, ಪ್ರೇಮದ ಅಂತಃಸತ್ವವನ್ನು ಕಳೆದುಕೊಂಡ ಪಾಡು, ಅನಿಶ್ಚಿತ ಭವಿಷ್ಯ ಇತ್ಯಾದಿಗಳನ್ನು ಚಲನಚಿತ್ರದ ಬುನಾದಿಯಾಗಿ ಪರಿಕಲ್ಪಿಸಿದ್ದಾನೆ ನಿರ್ದೇಶಕ ರುಸುಕೆ ಹಮಗುಚಿ.

ನಾಟಕ ನಿರ್ದೇಶನ ವೃತ್ತಿಯಾದ ಅವನಿಗೆ ಹಿರೋಶಿಮಾದ ಸಾಂಸ್ಕೃತಿಕ ಸಂಸ್ಥೆಯಿಂದ ಅಂಕಲ್‌ ವಾನ್ಯಾ ನಾಟಕ ನಿರ್ದೇಶಿಸಲು ಆಹ್ವಾನ ಬರುತ್ತದೆ. ಹಿರೋಶಿಮಾ ಎಂದೊಡನೆ ಅದರೊಂದಿಗೆ ತಳಕು ಹಾಕಿಕೊಂಡಿರುವ ದುರಂತದ ಛಾಯೆ ನಮ್ಮಲ್ಲಿ ಮೂಡುತ್ತದೆ. ಇದರ ಹಿನ್ನೆಲೆಯಲ್ಲಿ ಅಂಕಲ್ ವಾನ್ಯಾನ ಅಂತರಂಗದ ನೆಲೆಗೂ, ಕಫುಕುನ ಅಂತರಂಗದ ಅಂಶಗಳಿಗೂ ಸಾಕಷ್ಟು ಸಾಮ್ಯತೆ ಇರುವ ರೀತಿಯಲ್ಲಿ ಚಿತ್ರಕಥೆಯ ನೇಯ್ಗೆ ಇದೆ. ಇವೆಲ್ಲವೂ ಸೇರಿ ನಿರ್ದೇಶಕ ಅಂಕಲ್ ವಾನ್ಯಾ ನಾಟಕವನ್ನು ಆರಿಸಿಕೊಂಡಿರುವುದು ಈ ದೃಷ್ಟಿಯಿಂದ ಆಕಸ್ಮಿಕವಲ್ಲ.

ಹಿರೋಶಿಮಾಗೆ ಆ ನಾಟಕವನ್ನು ನಿರ್ದೇಶಿಸಲು ಹೊರಟವನಿಗೆ ಪ್ರಾರಂಭದಲ್ಲಿಯೇ ಅನಿರೀಕ್ಷಿತ ಪ್ರಸಂಗ ಎದುರಾಗುತ್ತದೆ. ನಾಟಕ ಸಂಸ್ಥೆಯವರು ಕಫುಕುನ ಕಾರಿಗೆ ಡ್ರೈವರೊಬ್ಬಳನ್ನು ಏರ್ಪಾಡು ಮಾಡಿರುತ್ತಾರೆ. ಆದರೆ ಕಫುಕುಗೆ ತಕ್ಷಣವೇ ಅದು ಇಷ್ಟವಾಗುವುದಿಲ್ಲ. ಅವನಿಗೆ ತನ್ನಷ್ಟಕ್ಕೆ ತಾನು ಏಕಾಂಗಿಯಾಗಿ ಕಾರಲ್ಲಿ ಓಡಾಡುವುದು ಇಷ್ಟವೆನಿಸಿ ಬೇಡವೆಂದರೂ ಕೇಳದೆ ಮಿಸಕಿ ವಕಾರಿ(ಟೋಕೊ ಮೂರಾ) ಎಂಬ ಯುವತಿಯನ್ನು ಗೊತ್ತು ಮಾಡುತ್ತಾರೆ. ಅವಳು ತಾನು ಡ್ರೈವರ್ ಆಗಿರುವುದರ ಬಗ್ಗೆ ಕಫುಕುನ ಹಳೆಯ ಕಾರನ್ನು ಅತ್ಯಂತ ಸಮರ್ಪಕವಾಗಿ ಓಡಿಸಿ ತನ್ನ ಸಾಮರ್ಥ್ಯವನ್ನು ದೃಢಪಡಿಸುತ್ತಾಳೆ. ಹೀಗೆ ಮಾಡುವ ಕ್ರಿಯೆಯಲ್ಲಿ ಸಹಜತೆಯಿಂದ ದೂರವಾದ ಅವಳ ನಿರ್ಭಾವ ಎದ್ದು ಕಾಣುತ್ತದೆ. ಇದು ಅವಳ ಅಂತರಂಗದಲ್ಲಿರುವ ನಿಗೂಢತೆಯ ಅಂಶದ ಸೂಚನೆಯಾಗುತ್ತದೆ. ಜೊತೆಗೆ ಕಫುಕು ಇಷ್ಟು ದಿನಗಳಾದರೂ ಅದೇ ಮನಸ್ಥಿತಿಯಲ್ಲಿ ಇರುವುದರ ಸಂಕೇತವಾಗಿ ಹಳೆಯ ಕಾರು ಅವನಿನ್ನೂ ಇಟ್ಟುಕೊಂಡಿರುವುದರಿಂದ ವ್ಯಕ್ತವಾಗುತ್ತದೆ. ಜೊತೆಗೆ ಕಾರಿನ ಬಣ್ಣ ಕೂಡ ರಕ್ತವನ್ನು ನೆನಪಿಸುವ ಕೆಂಪು ಬಣ್ಣ. ಹೀಗಾಗಿ ಚಿತ್ರದ ದೃಶ್ಯಗಳಲ್ಲಿ ಪಾತ್ರಗಳ ಸ್ವರೂಪದ ಜೊತೆ ಉಪಯೋಗಿಸಲಾದ ವಸ್ತುಗಳು ಕೂಡ ಪ್ರಾಮುಖ್ಯತೆ ಪಡೆಯುತ್ತದೆ.

ಇಷ್ಟಾದರೂ ಓಟೋಳನ್ನು ಗಾಢವಾಗಿ ಪ್ರೀತಿಸುತ್ತೇನೆಂದು ಕಫುಕು ಭಾವಿಸುತ್ತಾನೆ. ಅವಳ ವರ್ತನೆಗಳು ಅದನ್ನು ಪುಷ್ಟೀಕರಿಸುತ್ತದೆ. ಆಗಿನ ಮನಸ್ಥಿತಿಯಲ್ಲಿ ಲೈಂಗಿಕ ಹಾಗೂ ಪ್ರೇಮದ ವಿಷಯಗಳು ತಮ್ಮಷ್ಟಕ್ಕೆ ಪ್ರತ್ಯೇಕ ಎಂದು ಅವನ ಭಾವನೆ. ದೈಹಿಕ ಸಂಬಂಧಿತ ಅವಳ ವರ್ತನೆ, ನಿಲುವುಗಳನ್ನು ಬಿಟ್ಟರೆ ಉಳಿದಂತೆ ಅವರು ತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ.

ಇವೆಲ್ಲದರ ಹಿನ್ನೆಲೆಯಲ್ಲಿ ಕಫುಕು ಅಂಕಲ್ ವಾನ್ಯಾ ನಾಟಕದಲ್ಲಿ ಪಾತ್ರ ವಹಿಸಲು ಬಂದವರಿಂದ ನಾಟಕ ವಾಚನ ತೆಗೆದುಕೊಳ್ಳುತ್ತಾನೆ. ಪಾತ್ರ ಬೇರೆ ದೇಶಗಳಿಂದ ಬಂದವರೂ ಇರುತ್ತಾರೆ. ಇದರಿಂದ ಚೆಕಾಫ್‌ನ ಹಿರಿಮೆ ವಿಶ್ವವ್ಯಾಪಿ ಎನ್ನುವುದು ಕೂಡ ತಿಳಿಯುತ್ತದೆ. ಪಾತ್ರಗಳು ನಾಟಕ ವಾಚನ ಮಾಡುವ ಕ್ರಿಯೆ ಇತ್ಯಾದಿಗಳು ಮುಂದುವರಿದಂತೆ ಕಫುಕು ತನ್ನ ಕಾರಿನಲ್ಲಿ ಡ್ರೈವರ್ ಮಿಸಕಿ ಜೊತೆ ಓಡಾಡುವುದು ಕೂಡ ಜರುತ್ತದೆ. ಹೀಗೆ ಮಾಡುವಾಗ ಪ್ರಾರಂಭದಲ್ಲಿಯೇ ತಾನು ಮತ್ತು ಓಟೋ ಅಂಕಲ್ ವಾನ್ಯಾ ನಾಟಕದ ರೆಕಾರ್ಡ್ ಮಾಡಿದ ಮಾತುಗಳನ್ನು ಪ್ಲೇ ಮಾಡಲು ಹೇಳುತ್ತಾನೆ. ಅದರಲ್ಲಿನ ಮಾತುಗಳು ಕೇಳಿಸಿಕೊಳ್ಳುತ್ತ ಕುಳಿತಿದ್ದರೂ ಕಫುಕು ಏಕಾಂತದಲ್ಲಿರುವವನಂತೆ ತೋರುತ್ತಾನೆ. ಇದು ಅವನ ಅಪೇಕ್ಷೆಗೆ ಪೂರಕವಾಗಿರುವಂಥಾದ್ದು. ಸುತ್ತಲಿನ ಪ್ರಪಂಚದ ಬಗ್ಗೆ ಅರಿವಿರುವುದಿಲ್ಲ. ಇದರ ಚಿತ್ರೀಕರಣವೂ ಈ ಭಾವನೆಯನ್ನು ಬೆಂಬಲಿಸುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸುವ ಮಿಸಕಿ ಕೂಡ ತನ್ನಲ್ಲೇ ಐಕ್ಯವಾಗಿರುತ್ತಾಳೆ. ಹೀಗೆ ಓಡಾಡುತ್ತಲೇ ರೆಕಾರ್ಡ್ ಕೇಳುವುದರ ಮೂಲಕ ಮಿಸಕಿಗೆ ಕಫುಕು ಈ ಮೊದಲು ಜೀವಮಾನದಲ್ಲಿ ಅನುಭವಿಸಿದ ಅವಸ್ಥೆಗಳ ಬಗ್ಗೆ ಸಾಕಷ್ಟು ಮಾಹಿತಿ ಒದಗುತ್ತದೆ.

ಹೀಗೆ ಈ ಮೊದಲು ಓಟೋ, ಕಫುಕು ಆಡುವ ಮಾತುಗಳು ಅವರ ವೈಯಕ್ತಿಕ ಜೀವನ ಹಾಗೂ ನಾಟಕದ ಪಾತ್ರಗಳೊಂದಿಗೆ ಬೆರೆತುಕೊಳ್ಳುವುದರಿಂದ ಆ ಪಾತ್ರಗಳನ್ನು ಗ್ರಹಿಸುವುದಕ್ಕೆ ಅಂಕಲ್‌ ವಾನ್ಯಾ ನಾಟಕದ ಬಗ್ಗೆ ತಿಳಿದಿರಬೇಕೆಂದು ತೋರುತ್ತದೆ. ಅಲ್ಲದೆ ಚಿತ್ರದ ನಿರೂಪಣೆಯ ಮುಂದಿನ ಭಾಗ ಅದೇ ನಾಟಕದ ಪ್ರಯೋಗವನ್ನು ಕುರಿತ ಅಭ್ಯಾಸವಿರುವುದರಿಂದ ಇದರ ಅವಶ್ಯಕತೆಯನ್ನು ಸಮರ್ಥಿಸುತ್ತದೆ.

ನಾಟಕದಲ್ಲಿ ಸೋನಿಯಾ ಎಂಬ ಮುಖ್ಯ ಪಾತ್ರ ವಹಿಸಲಿರುವವಳು ಕೇವಲ ಕೊರಿಯನ್ ಭಾಷೆ ಅರಿತ ನಟಿ. ಅವಳು ಸನ್ನೆ ಮತ್ತು ಆಂಗಿಕ ಅಭಿನಯದಿಂದ ಸಹಪಾತ್ರದ ಜೊತೆ ಸಂಭಾಷಣೆಯಲ್ಲಿ ತೊಡಗುತ್ತಾಳೆ. ಇದರಿಂದ ಸಿದ್ಧವಾಗುವ ಅಂಶವೇನೆಂದರೆ ಭಾವನೆಯ ಪದರ್ಶನಕ್ಕೆ ಮಾತುಗಳು ತೀರಾ ಅವಶ್ಯಕ ಅಲ್ಲ ಎನ್ನುವ ಸಂಗತಿ. ಅಂಕಲ್‌ ವಾನ್ಯಾ ಮತ್ತು ಸೋನಿಯಾರಿಗೆ ಸಂಬಂಧಿತ ಭಾವಸಾಂದ್ರತೆ ಬಿಂಬಿಸುವ ಅಭಿಯಯವನ್ನು ಕ್ಲೋಸಪ್‌ ಚಿತ್ರಿಕೆಗಳ ಮೂಲಕ ಬೆರಗಾಗುವಂತೆ ನಿರ್ದೇಶಕ ಪ್ರಸ್ತುತಪಡಿಸುತ್ತಾನೆ.

ನಾಟಕದ ಅಭ್ಯಾಸ ನಡೆಯುತ್ತಿರುವ ಕಾಲದಲ್ಲಿಯೇ ಅಂಕ್‌ ವಾನ್ಯಾನ ಪಾತ್ರ ವಹಿಸಲಿರುವ ತಕಟ್ಸುಕಿಗೆ ಓಟೋಳ ಜೊತೆ ಈ ಮೊದಲು ಸಂಪರ್ಕವಿದ್ದ ವಿಷಯ ಬೆಳಕಿಗೆ ಬರುತ್ತದೆ. ಸತ್ಯ ಸಂಗತಿಯನ್ನು ತಿಳಿಸಲು ವಾನ್ಯಾನ ಪಾತ್ರ ಅವನ ಅಂತರಂಗ ಹೊಕ್ಕಿದ್ದು ಕಾರಣವೆಂದು ಕಫುಕು ತಿಳಿಸುವುದು ನಿಜಕ್ಕೂ ವಿಶೇಷ. ನಿಜ ಸಂಗತಿ ತಿಳಿಯಿತಾದರೂ ಕಫುಕು ಇದರಿಂದ ವಿಹ್ವಲಗೊಳ್ಳುತ್ತಾನೆ. ಅನಂತರ ತಕಟ್ಸುಕಿ ಕೊಲೆ ಆಪಾದನೆಯಲ್ಲಿ ಬಂಧಿಸಲ್ಪಡುತ್ತಾನೆ. ಇಂಥ ಸಂದರ್ಭ ಎದುರಾಗಬಹುದೆಂದು ನಿರೀಕ್ಷಿಸಿರದ ಕಫುಕುನ ಅಂತರಂಗ ತಳಮಳಿಸುತ್ತದೆ. ಈ ಬೆಳವಣಿಗೆಯಿಂದ ಕಫುಕುಗೆ ಅಂಕಲ್ ವಾನ್ಯಾನ ಪಾತ್ರ ವಹಿಸುವ ಅನಿವಾರ್ಯತೆ ಉಂಟಾಗುತ್ತದೆ. ಇಡೀ ಚಿತ್ರದಲ್ಲಿ ಅಂಕಲ್‌ ವಾನ್ಯಾನ ನಾಟಕದ ಅಂಶಗಳನ್ನು ಪ್ರಭಾವಪೂರ್ಣವಾಗಿ ಬಳಸಿಕೊಂಡರೂ ಅದಕ್ಕೆ ವಿನಿಯೋಗಿಸಿದ ಅವಧಿ ಬಹು ದೀರ್ಘ ಮತ್ತು ಕಥನದ ದಿಕ್ಕು ಬೇರೆಡೆ ತಿರುಗಿದಂತೆ ಭಾಸವಾಗುತ್ತದೆ.

ಮಿಸಕಿ ಕಾರು ಡ್ರೈವ್ ಮಾಡುವ ಬಗೆಯನ್ನು ಕಫುಕು ಮೆಚ್ಚಿ ತಿಳಿಸಿದ ನಂತರ ಅವರ ನಡುವೆ ಆ ತನಕ ಇದ್ದ ಪರದೆ ಕಳಚಿದಂತಾಗಿ ಮನಬಿಚ್ಚಿ ಮಾತನಾಡುವ ಪರಿಸ್ಥಿತಿ ತಲುಪುತ್ತಾರೆ. ಅವಳಿಗೆ ಪ್ರಕ್ಷುಬ್ಧ ಮನಸ್ಥಿತಿಯಲ್ಲಿರುವ ಕಫುಕು ಕೇವಲ ಭೂತಕಾಲದಲ್ಲಿ ಬದುಕುತ್ತಿರುವನ ಹಾಗೆ ಕಾಣುತ್ತಾನೆ. ವಾಸ್ತವ, ಭವಿಷ್ಯ ಎರಡರ ಬಗ್ಗೆ ಅನಿಶ್ಚಿತ ಸ್ಥಿತಿಯ ಭಾವನೆ. ಅವನ ಹಾಗೆಯೇ ಮಿಸಿಕಳ ಪರಿಸ್ಥಿತಿಯೂ ಹೊಯ್ದಾಡುತ್ತಿರುತ್ತದೆ. ಇಬ್ಬರ ಮನಸ್ಥಿತಿಯೂ ಸಮಾನಾಂತರವಾಗಿದೆ ಎಂದು ಸೂಚಿಸುವ ಸಲುವಾಗಿ ಅವರು ಕಾರಿನಲ್ಲಿ ಪ್ರಯಾಣಿಸುವಾಗ ಸಿಗರೇಟು ಹಿಡಿದ ಇಬ್ಬರ ಅಂಗೈಗಳು ಮಾತ್ರ ಸ್ಫುಟವಾಗಿ ತೋರುವಂತೆ ಎತ್ತರದಿಂದ ಚಿತ್ರಿಸಿರುವುದು ಪ್ರೇಕ್ಷಕರ ಗಮನ ಸೆಳೆಯುವಂತಿದೆ.

ಕಫುಕು ಮತ್ತು ಅವನ ಮಗಳು ಬದುಕಿದ್ದರೆ ಸರಿಸುಮಾರು ಮಿಸಿಕಳ ವಯಸ್ಸಿನವಳಾದ ಅವರಿಬ್ಬರ ನಡುವೆ ಚಿಗುರಿದ ವಿಶ್ವಾಸ ಕ್ರಮೇಣ ಒಂದು ಹದಕ್ಕೆ ಬರುತ್ತದೆ. ಆಗ ಅವಳು ತನ್ನೊಳಗಿನ ಒತ್ತಡ ತಡೆಯಲಾರದೆ ತನ್ನನ್ನು ನಿಯಂತ್ರಿಸಿಕೊಂಡು ತನ್ನ ಅಮ್ಮನನ್ನು ಕೊಂದಿರುವುದಾಗಿ ಹೇಳುತ್ತಾಳೆ. ಕುಫೂಕುಗೆ ಬೆರಗು. ಉಂಟಾದ ಉಬ್ಬರದಿಂದ ಇಬ್ಬರಿಂದಲೂ ಕೆಲವು ಕ್ಷಣ ಮಾತಿಲ್ಲ. ಹಿನ್ನೆಲೆ ಸಂಗೀತವೂ ಸ್ತಬ್ಧ. ಅನಂತರ ಅದನ್ನು ವಿವರಿಸುವ ಸಲುವಾಗಿ ಕಫುಕುನನ್ನು ಹಿರೋಶಿಮಾದಿಂದ ದೂರವಿರುವ ಮಂಜು ತುಂಬಿದ ಸ್ಥಳವೊಂದಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಗೆ ತಲುಪಿದ ಮೇಲೆ ಅಷ್ಟು ದೂರ ಹೆಚ್ಚು ಮಾತಿಲ್ಲದೆ ಕೇವಲ ಪರಸ್ಪರ ವಿಶ್ವಾಸ ಇದೆ ಎಂದು ಬಿಂಬಿಸುವಂತೆ ಇಬ್ಬರೂ ಕೈಹಿಡಿದುಕೊಂಡು ನಡೆಯುತ್ತಾರೆ. ಅಲ್ಲಿ ಅಷ್ಟು ದೂರದಲ್ಲಿ ಮುರಿದುಬಿದ್ದ ಮನೆಯನ್ನು ತೋರಿಸುತ್ತಾಳೆ. ಅಪ್ಪನ ದುರ್ನಡತೆಗಾಗಿ ಅವನಿಂದ ದೂರವಾದ ತನ್ನ ಅಮ್ಮನಲ್ಲಿದ್ದ ದ್ವಂದ್ವ ವ್ಯಕ್ತಿತ್ವವನ್ನು ತಿಳಿಸುತ್ತಾಳೆ. ಅದರಲ್ಲಿ ಒಂದು ಮಾತ್ರ ತನಗೆ ಪ್ರಿಯವಾಗಿದ್ದು ಮತ್ತೊಂದನ್ನು ಸಹಿಸುವುದು ಅಸಾಧ್ಯವೆನಿಸಿತ್ತು. ಬಹುಶಃ ಅದರಿಂದಾಗಿಯೇ ತಾನು ಅಮ್ಮನನ್ನು ಉಳಿಸುವಷ್ಟು ಜಾಗೃತಳಾಗಲಿಲ್ಲ ಎನ್ನುವ ಅವಳ ಅಂತರಂಗದ ಮಾತನ್ನು ತಿಳಿಸುತ್ತಾಳೆ. ಆದರೆ ಹಾಗೆ ಮಾಡದೆ ಹೋದದ್ದರಿಂದ ಅವಳಿಗೆ ಅಪರಾಧಿ ಭಾವನೆ ಮುತ್ತಿರುತ್ತದೆ.

ಇದೇ ಬಗೆಯಲ್ಲಿ ದ್ವಂದ್ವ ವ್ಯಕ್ತಿತ್ವದ ಓಟೋಳನ್ನು ಸರಿಯಾಗಿ ಅರಿಯದೆ ಹೋದದ್ದಕ್ಕೆ ಅಪರಾಧಿ ಪ್ರಜ್ಞೆ ಮುತ್ತುವ ಸಂಭವವಿರುತ್ತಿರಲಿಲ್ಲ ಎನ್ನುವುದು ಕಫುಕುಗೆ ಅರಿವಾಗುತ್ತದೆ. ಚೆಕಾಫ್‌ನ ನಾಟಕದಲ್ಲಿ ಪಾತ್ರವಹಿಸಿದ ಅಂಕಲ್‌ ವಾನ್ಯಾನ ಪಾತ್ರ ಅವನ ಮನದಾಳದಲ್ಲಿಳಿದು ವಿವೇಕಯುತವಾಗಿ ತನ್ನನ್ನು ವಿಶ್ಲೇ಼ಷಿಸಿಕೊಳ್ಳುವ ಸಾಮರ್ಥ್ಯ ಪಡೆದಿರುತ್ತಾನೆ. ಇವೆಲ್ಲವೂ ಕೂಡಿ ಈಗ ಒಂದು ರೀತಿಯಲ್ಲಿ ಕಫುಕು ಮತ್ತು ಮಿಸಕಿ ಇಬ್ಬರೂ ವಾಸ್ತವಕ್ಕೆ ಹೊರಳುತ್ತಾರೆ. ಅಂತರಂಗದಲ್ಲಿ ಹುದುಗಿದ್ದ ಭೂತ ಕಾಲದ ಎಲ್ಲ ಬಗೆಯ ತವಕ-ತಲ್ಲಣ, ಹಿಂಸಿಸುವ ಭಾವನೆಗಳನ್ನು ಆಚೆ ತಳ್ಳಿ, ಭವಿಷ್ಯದ ಕಡೆಗೆ, ಹೊಸ ಜೀವನದ ಕಡೆಗೆ ಹೊಸ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಹೊಸಬರಾಗುತ್ತಾರೆ. ಉಳಿದ ಜೀವನದ ಅವಧಿಯನ್ನು ವ್ಯರ್ಥ ಮಾಡಬಾರದೆಂಬ ಅರಿವು ಮೂಡುತ್ತದೆ. ಇದರಿಂದಾಗಿ ಅವರಿಬ್ಬರು ಪರಸ್ಪರ ಹಿತಾಸಕ್ತಿ ಬಯಸುವ ಸಂಬಂಧದ ಕಡೆ ಒಲವು ತೋರಿಸಿದ್ದಾರೆ ಎನ್ನುವುದನ್ನು ಅಂತಿಮ ದೃಶ್ಯದ ಮೂಲಕ ನಿರ್ದೇಶಕ ನಿರೂಪಿಸುತ್ತಾನೆ.

ಚಿತ್ರದ ಯಶಸ್ಸಿಗೆ ಹಲವು ವ್ಯಕ್ತಿಗಳು ಕಾರಣರಾಗುತ್ತಾರೆ. ಪಾತ್ರಧಾರಿಗಳ ಜೊತೆಗೆ ಛಾಯಾಗ್ರಹಕ ಹಿದೆತೋಶಿ ಶಿನೋಮಿಯ ಮತ್ತು ಅತ್ಯಂತ ಸೂಕ್ತವಾದ ರೀತಿಯಲ್ಲಿ ಹಿನ್ನೆಲೆ ಸಂಗೀತ ನೀಡಿರುವ ಇಕೋ ಇಶಿಭಾಶಿ ಕೂಡ ಅಷ್ಟೇ ಕಾರಣರಾಗುತ್ತಾರೆ. ಇದು ನಿರ್ದೇಶಕ ರುಸುಕೆ ಹಮಗುಚಿಯ ಎರಡನೆಯ ಚಿತ್ರ. ಈ ಚಿತ್ರ, ಅವನ ಮೊದಲನೆ ಚಿತ್ರ ʻಹ್ಯಾಪಿ ಅವರ್‌ʼ ಕೂಡ ಸುಮಾರು ಐದು ಗಂಟೆ ಅವಧಿಯದು. ಚಲನಚಿತ್ರದ ಬಗ್ಗೆ ತಮ್ಮದೇ ಆದ ಮಾರ್ಗ ಮತ್ತು ಪರಿಕಲ್ಪನೆಗಳನ್ನು ಹೊಂದಿರುವ ಅವರಿಗೆ ಇನ್ನಷ್ಟು ಪುಸ್ಕಾರಗಳು ದೊರಕುವುದು ಅತ್ಯಂತ ಸೂಕ್ತವೆಂದು ತೋರುತ್ತದೆ.