ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶಿಸುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ. ನೋಟದಿಂದಲೇ ಬಂಗಾರದ ಹುಡುಗನೆಂಬ ಬಿರುದು ಕೊಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಾನು ಆ ಗುಂಪಿಗೆ ಹೊಸಬನಾದ್ದರಿಂದ ಒಂದು ಸುತ್ತು ಪರಿಚಯವಾಯಿತು.
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

ನಾವು ನಾಲ್ಕು ಜನ ಕ್ಯಾಬಿಗಾಗಿ ಕಾಯುತ್ತಾ ನಿಂತಿದ್ದೆವು. ಮೂರೇ ನಿಮಿಷದಲ್ಲಿ ಡ್ರೈವರ್ ನಾವಿದ್ದ ಜಾಗ ಬಂದು ತಲುಪುತ್ತಾನೆ ಎಂದು ತೋರಿಸುತ್ತಿದ್ದ ಮೊಬೈಲು ಆ ಮೂರು ನಿಮಿಷದ ಗಡಿ ಮುಟ್ಟುತ್ತಿದ್ದಂತೆಯೇ ಮತ್ತೊಂದೆರಡು ಮಿನಿಟಿಗೆ ಖೋ ಕೊಡುತ್ತಿತ್ತು. ಹೀಗೆ ಆಟ ನಡೆಯುತ್ತಲೇ ಇರುವಾಗ ‘ಒಂದ್ಸಲ ಫೋನ್ ಮಾಡು ಸುಬ್ಬು.’ ಎಂದು ಹೇಳಿದೆ. ಸುಬ್ಬು ಫೋನ್ ರಿಂಗಣಿಸಿದವನೇ ‘ಭಯ್ಯಾ, ಆಪ್ ಕಹಾ ಹೊ?’ ಎಂದು ಶುರುವಿಕ್ಕಿಕೊಂಡ. ಆ ಕಡೆಯ ದನಿ ಕನ್ನಡದಲ್ಲಿ ಉತ್ತರಿಸಿರಬೇಕು; ಇವನು ಕನ್ನಡದಲ್ಲಿಯೇ ‘ಹಾ, ಹಾಹಾ. ಅಲ್ಲೇ ಎರಡನೇ ಕ್ರಾಸಲ್ಲೆ ಬಂದುಬಿಡಿ ಸರ್.’ ಎಂದು ಕನ್ನಡಕ್ಕೆ ತಿರುಗಿಕೊಂಡ. ಅಲ್ಲಿಯವರೆಗೂ ಸಹದೇವನ ದೇವ್ ಬೇಕ್ ನ ಅಪ್ಡೇಟುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶನಾಯಾ, ಸುಬ್ಬು ಫೋನಿಟ್ಟ ತಕ್ಷಣ ‘ಫಾಕ್, ಹೌ ಲಾಂಗ್ ದಿಸ್ ಕ್ಯಾಬ್ ಈಸ್ ಗೊನಾ ಟೇಕ್?!’ ಎಂದು ತನ್ನ ಸಿಡಿಮಿಡಿಯನ್ನು ವ್ಯಕ್ತಪಡಿಸಿದಳು. ಕೊನೆಗೂ ಕ್ಯಾಬ್ ನಿಧಾನವಾಗಿ ಬಂತು. ಆ ಗುಂಪಿನಲ್ಲಿ ನಾನೊಬ್ಬನೇ ಇತ್ತೀಚಿಗೆ ಪರಿಚಯದವನಾದ್ದರಿಂದ ಡ್ರೈವರ್ ಪಕ್ಕದ ಸೀಟಿನಲ್ಲಿ ಕೂತೆ. ಸುಬ್ಬು, ಸಹದೇವ್ ಮತ್ತು ಶನಾಯಾ ಹಿಂದಿನ ಸೀಟಿನಲ್ಲಿ ಕೂತರು. ನಾವೆಲ್ಲರೂ ಆ ಮೂವರ ಗೆಳತಿ ಉಷಾಳ ಅಲ್ವಿದಾ ಪಾರ್ಟಿಗೆ ಹೋಗುತ್ತಿದ್ದೆವು. ಉಷಾ ಪ್ರೀತಿಸಿ ಮದುವೆಯಾಗಿದ್ದಳು. ಜೋಡಿ ಮುಂದಿನ ವಾರದಲ್ಲಿ ಅಮೇರಿಕೆಗೆ ಹೋಗುವವರಿದ್ದರು. ಉಷಾಗೆ ಬಂಗಾರದಂತಹ ಹುಡುಗ ಸಿಕ್ಕಿದ್ದಾನೆ ಎಂದು ಹಿಂದೆ ಕೂತಿದ್ದ ಟ್ರಯೋ ಹಲವು ಸಲ ಮಾತಾಡಿಕೊಂಡಿದ್ದನ್ನು ಕೇಳಿಸಿಕೊಂಡಿದ್ದೆ. ನನಗೂ ಬಂಗಾರದ ಹುಡುಗ ಹೇಗಿರಬಹುದು ಎನ್ನುವ ಕುತೂಹಲವಿತ್ತು.

ಆರ್ ಬಿ ಐ ಲೇಔಟಿನಿಂದ ಕೋರಮಂಗಲದ ಒಂದು ದೊಡ್ಡ ಅಪಾರ್ಟ್ಮೆಂಟಿಗೆ ಹೋಗುವುದಿತ್ತು. ಎಂದೂ ಇಲ್ಲದ ಟ್ರಾಫಿಕ್ ಅಂದು ವಕ್ಕರಿಸಿತ್ತು. ಬೆಂಗಳೂರು ಸತಾಯಿಸುವುದು ಹಾಗೆಯೇ ಎನಿಸುತ್ತದೆ ಒಮ್ಮೊಮ್ಮೆ. ಈ ಚಂದಕ್ಕೊಂದು ಬೋನಸ್ ಎಂಬಂತೆ ನಮಗೆ ಸಿಕ್ಕಿದ್ದ ಡ್ರೈವರ್ ಕ್ಯಾಬಿಗೆ ಹೊಸಬನಾಗಿದ್ದ. ಅವನಿಗೆ ಈ ಗೂಗಲ್ ಮ್ಯಾಪನ್ನು ಬಳಸುವುದು ಬರುತ್ತಿರಲಿಲ್ಲ. ನೇರ ಹೋಗಿ ಮೂರನೇ ಎಡ ಎಂದು ತೋರಿಸಿದರೆ ಎರಡನೇ ಎಡವನ್ನೇ ತೆಗೆದುಕೊಂಡು ಮತ್ತಷ್ಟು ಟ್ರಾವೆಲ್ ಟೈಮನ್ನು ಹೆಚ್ಚಿಸಿಬಿಡುತ್ತಿದ್ದ. ನನಗೆ ಮೊದಮೊದಲು ಅವನ ವರ್ತನೆ ಅಚ್ಚರಿಯೆನಿಸಿ ಆಮೇಲೆ ಕೇಳಿದೆ.

‘ನೀವು ಈ ಕ್ಯಾಬ್ ಡ್ರೈವಿಂಗ್ ಕೆಲ್ಸಕ್ಕೆ ಹೊಸಬರ?’

‘ಹೂ ಸಾರ್. ನಾನು ಮೊದ್ಲು ಲಾರಿ ಓಡಿಸ್ತಾ ಇದ್ದೆ. ಒಂದು ವಾರದ ಹಿಂದೆ ಕೆಟ್ಟು ನಿಂತಿದೆ. ಅದು ಸರಿ ಆಗೋದು ಯಾವಾಗ್ಲೋ ಏನೋ? ಅದಿಕ್ಕೆ ಸುಮ್ನೆ ಕೂರೋದು ಯಾಕೆ ಅಂತ ಈ ಲಾರಿ ಓಡಿಸ್ತಾ ಇದೀನಿ. ನನಗೆ ಈ ಬೆಂಗಳೂರು, ಗೂಗಲ್ ಮ್ಯಾಪು ಮತ್ತೆ ಈ ದಾರಿ ಹೇಳ್ತವಳಲ್ಲ ಈವಮ್ಮನ ದನಿ ಎಲ್ಲಾ ಹೊಸತು.’ ಎಂದು ಅವರ ದನಿ ಸಣ್ಣದು ಮಾಡಿಕೊಂಡು ಹೇಳಿದರು. ನಾನು ನೋಡಿದ ಹಾಗೆ ಲಾರಿ ಡ್ರೈವರುಗಳ ದನಿ ದೊರಗಾಗಿ ಗಡುಸಾಗಿ ಜೋರಾಗಿರುತ್ತದೆ. ಅವರ ಮಾತಿನಲ್ಲಿ ಈ ಜಗತ್ತಿನ ದಾರಿಗಳೆಲ್ಲ ನನಗೆ ಗೊತ್ತು ಎನ್ನುವ ಆತ್ಮವಿಶ್ವಾಸವಿರುತ್ತದೆ. ಆದರೆ ಇಲ್ಲಿ ಹೊಸಜಾಗ ಅವರಿಗೊಂದು ಹೊಸ ಸವಾಲನ್ನು ಎಸೆದಿತ್ತು. ಅವರು ಸಣ್ಣಗೆ ಮಾಡಿಕೊಂಡ ದನಿಯಲ್ಲಿ ಇದೇನು ಮಹಾ?! ಇನ್ನೊಂದೆರಡು ದಿನಗಳಲ್ಲಿ ಕಲಿತುಬಿಡುತ್ತೇನೆ ಎನ್ನುವ ವಿನಯವಿತ್ತು. ಅನ್ನ ಸಂಪಾದಿಸುವುದಕ್ಕಾಗಿ ಅದು ಬೇಡುವ ಯಾವುದೇ ಘನತೆಯನ್ನು ಮುಕ್ಕುಗೊಳಿಸಿಕೊಳ್ಳದ ದೈನ್ಯ ವಿನಯವನ್ನು ನಾನು ಹೊಂದಬಲ್ಲೆ ಎನ್ನುವ ಭಾವವಿತ್ತು. ಅಂತಹ ದನಿಗಳೇ ಪರಸ್ಪರ ಮನುಷ್ಯ ಮನುಷ್ಯರ ನಡುವೆ ಒಂದು ಪರಿಚಿತತೆಯನ್ನು ಸೃಷ್ಟಿಸಿಬಿಡುತ್ತದೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ನಾನೂ ಆ ಕೂಡಲೇ ಅವರ ಮೊಬೈಲ್ ಮ್ಯಾಪ್ ಸೆಟ್ಟಿಂಗನ್ನು ಅವರಿಗೆ ಬಳಸಲು ಸುಲಭವಾಗುವಂತೆ ಇಟ್ಟುಕೊಟ್ಟೆ. ಅವರು ಹಾದಿ ತಪ್ಪುವುದು ಕಡಿಮೆಯಾಯಿತು. ಅವರ ಮುಖದಲ್ಲಿ ಗೆಲುವೊಂದು ಮೂಡಿತು. ಅದು ಪ್ರತಿಬಿಂಬಿತವಾಗುತ್ತಿದೆ ಎನ್ನುವಂತೆ ಅವರು ತಮ್ಮ ಊರಿನ ಬಗ್ಗೆ ತಮ್ಮ ಮನೆ ಎಲ್ಲಿದೆ ಎನ್ನುವುದನ್ನು ಹೇಳತೊಡಗಿದರು.

ಹಿಂದೆ ಕೂತಿದ್ದ ಶನಾಯ ದೇವ್ ಬೇಕ್ ಅಂಗಡಿಯಲ್ಲಿ ತಯಾರಾಗುವ ಹೊಸ ಹೊಸ ರೆಸಿಪಿಗಳ ಬಗ್ಗೆ ಮತ್ತು ಅದನ್ನು ತಾನು ಸೌದಿಯಲ್ಲೋ ಅಬುದಾಬಿಯಲ್ಲೋ ಮತ್ಯಾವುದೋ ಏರ್ ಪೋರ್ಟ್ ಲಾಂಜಿನಲ್ಲೋ ತಿಂದಿರುವುದಾಗಿ ಹೇಳಿಕೊಳ್ಳುತ್ತಿದ್ದಳು. ಸುಬ್ಬು ಮಾತ್ರ ಇಬ್ಬರು ಇಲೈಟುಗಳ ನಡುವೆ ಕೂತು ತಾನೂ ಕೂಡ ಅವರಂತಾಗುವ ಬಯಕೆಯಲ್ಲಿ ತನಗೂ ಅವರಿಗೆ ಗೊತ್ತಿರುವುದು ಗೊತ್ತಿದೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದ. ಸುಬ್ಬು ಆರ್ ಬಿ ಐ ಲೇಔಟಿನಲ್ಲಿ ಒಂದು ಅಪಾರ್ಟ್ಮೆಂಟಿನ ಟೆರೇಸ್ ಮೇಲಿನ ಒನ್ ಬಿ ಎಚ್ ಕೆ ರೂಮಿನಲ್ಲಿ ವಾಸವಾಗಿದ್ದ. ಮಕ್ಕಳಿಗೆ ಆನ್ಲೈನ್ ಟ್ಯುಟೋರಿಯಲ್ಲುಗಳನ್ನು ತೆಗೆದುಕೊಳ್ಳುತ್ತಿದ್ದ. ಅದರಲ್ಲಿಯೇ ಬೇಜಾನು ದುಡ್ಡನ್ನೂ ಮಾಡುತ್ತಿದ್ದ. ಒಬ್ಬ ಹುಡುಗನನ್ನ ಪ್ರೀತಿಸಿ ಅದು ಒಂದು ವರ್ಷದಲ್ಲಿ ಕೊನೆಗೊಂಡು ಆ ಭಗ್ನ ಪ್ರೇಮದಿಂದ ಹೊರಬರುವ ಪ್ರಯತ್ನದಲ್ಲಿದ್ದ. ಸಹದೇವ್ ಬ್ರಿಗೇಡ್ ಮಿಲೇನಿಯಂನಲ್ಲೊಂದು ಅಪಾರ್ಟ್ಮೆಂಟನ್ನು ಹೊಂದಿದ್ದ. ಅಮ್ಮ ಕ್ಯಾನ್ಸರಿನಿಂದ ಜೀವ ಬಿಟ್ಟಿದ್ದರು. ಅವರ ತಂದೆ ಡಿವೋರ್ಸ್ ಕಾರಣದಿಂದ ಬೇರೆಲ್ಲೋ ಇದ್ದರು. ಅವರ ಹೆಸರಿಗಿದ್ದ ಬ್ರಿಗೇಡ್ ಮಿಲೇನಿಯಂನ ಅಪಾರ್ಟ್ಮೆಂಟ್ ಸಹದೇವನ ಹೆಸರಿಗೆ ಬಂದಿತ್ತು. ಸಹದೇವ್ ಒಂದು ಸಣ್ಣ ಟೂರಿಸ್ಟ್ ಏಜೆನ್ಸಿಯನ್ನು ಮತ್ತು ಅವನು ಶೆಫ್ ಕೋರ್ಸ್ ಮಾಡಿದ್ದರಿಂದ ದೇವ್ ಬೇಕ್ ಹೆಸರಿನ ಆನ್ಲೈನ್ ಅಂಗಡಿಯನ್ನು ಕೂಡ ತೆರೆದಿದ್ದ. ಸುಬ್ಬು, ಶನಾಯ ಮತ್ತು ಸಹದೇವ್ ಅವರದ್ದೊಂದು ಫುಡೀ ಗ್ಯಾಂಗ್ ಎಂದು ಮಾಡಿಕೊಂಡು ಶನಿವಾರ ಭಾನುವಾರಗಳಂದು ಬೆಂಗಳೂರಿನ ರುಚಿಯ ತಾಣಗಳನ್ನು ಹುಡುಕಿ ಅಲ್ಲಿ ತಿಂದು ಇನ್ಸ್ಟಾದಲ್ಲಿ ಪೋಸ್ಟುಗಳನ್ನು ಹಾಕುತ್ತಿದ್ದರು. ಚಿಪ್ಸಿಗೆ ವೇಫರ್ಸ್, ಬಿಸ್ಕೆಟಿಗೆ ಕುಕೀಸ್, ಕರ್ಷಿಫಿಗೆ ಹ್ಯಾಂಕಿ ಎನ್ನುತ್ತಾರೆ ಎಂತಲೂ ಮಕ್ಕಳು ಮತ್ತು ಕಾಲೇಜು ಹುಡುಗ ಹುಡುಗ ಹುಡುಗಿಯರ ಈವತ್ತಿನ ಜಮಾನಾದ ಅರ್ಬನ್ ಲಿಂಗೋಗಳನ್ನು ಪ್ರಯತ್ನಪೂರ್ವಕವಾಗಿ ಕಲಿತುಕೊಳ್ಳಲು ಪ್ರಯತ್ನಪಡುತ್ತಿರುವ ನನಗೆ ದೇವ್ ಬೇಕ್ ನ ಮೆನು ಕಾರ್ಡಿನಲ್ಲಿ ಬರೆಯಲಾಗಿದ್ದ ಖಾದ್ಯಗಳನ್ನು ಉಚ್ಛಾರ ಮಾಡುವ ಸಲುವಾಗಿ ಆ ಹೆಸರನ್ನು ಗೂಗಲ್ಲಲ್ಲಿ ಬರೆದು ಫೊನೆಟಿಕ್ಸ್ ಬಟನ್ ಕ್ಲಿಕ್ ಮಾಡಿ ಕಲಿಯಬೇಕಾಗಿ ಬರುತ್ತಿತ್ತು. ನನಗೆ ಇತ್ತೀಚಿಗೆ ಪರಿಚಯವಾಗಿದ್ದ ಈ ಹೊಸ ಗ್ಯಾಂಗ್ ಹೊಸ ಸವಾಲನ್ನು ಎಸೆದಿತ್ತು. ನಾನು ಅದನ್ನು ತಾಳ್ಮೆಯಿಂದ ಎದುರುಗೊಳ್ಳುವ ಆ ಕ್ಯಾಬ್ ಡ್ರೈವರನಂತೆ!

ಎಂದೂ ಇಲ್ಲದ ಟ್ರಾಫಿಕ್ ಅಂದು ವಕ್ಕರಿಸಿತ್ತು. ಬೆಂಗಳೂರು ಸತಾಯಿಸುವುದು ಹಾಗೆಯೇ ಎನಿಸುತ್ತದೆ ಒಮ್ಮೊಮ್ಮೆ. ಈ ಚಂದಕ್ಕೊಂದು ಬೋನಸ್ ಎಂಬಂತೆ ನಮಗೆ ಸಿಕ್ಕಿದ್ದ ಡ್ರೈವರ್ ಕ್ಯಾಬಿಗೆ ಹೊಸಬನಾಗಿದ್ದ.

ಸಿಗ್ನಲ್ ಬಿದ್ದದ್ದರಿಂದ ಕಾರು ನಿಂತಿತು. ಅದೇ ಸಮಯಕ್ಕೆ ಒಬ್ಬ ಹುಡುಗ ಕೈಯಲ್ಲಿ ಟಿಶ್ಯೂ ಪೇಪರ್ ಪೊಟ್ಟಣಗಳನ್ನು ಹಿಡಿದುಕೊಂಡು ‘ಸಾರ್, ಒಂದು ತಗೋಳಿ ಸಾರ್. ನನ್ನ ತಂಗಿ ಮತ್ತೆ ನಾನು ಬೆಳಿಗ್ಗೆಯಿಂದ ಉಪಾಸ ಇದೀವಿ ಸರ್. ಇದೊಂದು ತಗಂಡ್ರೆ ನಮಗೆ ಊಟಕ್ಕಾದ್ರೂ ಆಗತ್ತೆ ಸರ್.’ ಎಂದ. ನನ್ನ ಬಳಿ ಹಾರ್ಡ್ ಕ್ಯಾಶ್ ಇಲ್ಲವಾಗಿ ಇಲ್ಲ ಎಂದೆ. ಅವನು ಕೂಡಲೇ ಹಿಂದಿನ ಕಿಟಕಿಗೆ ತೆರಳಿ ಅವನು ಹೇಳಿದ್ದ ಡೈಲಾಗನ್ನೇ ‘ಮೇಡಂ ಪ್ಲೀಸ್ ಮೇಡಂ. ಹಸಿವು ಮೇಡಂ… ಒಂದು ತಗೋಳಿ ಮೇಡಂ.’ ಎಂದು ಶನಾಯಾಗೆ ಹೇಳಿದ. ಅವರಿಗೂ ಕೊಡಲು ಮನಸ್ಸಿರಲಿಲ್ಲ. ಶನಾಯಾ ‘ಫಾಕ್, ಐ ನೋ ದಿ ಟ್ಯಾನ್ತರಮ್ಸ್ ಆಫ್ ದೀಸ್ ಪೀಪಲ್. ಆಲ್ ಲೈಸ್. ಅ ಬಂಡಲ್ ಆಫ್ ಲೈಸ್.’ ಎಂದುಬಿಟ್ಟಳು. ನನಗೆ ಉರಿದುಹೋಯಿತು. ಅದಕ್ಕೆ ಉಪ್ಪು ಸುರಿಯುವಂತೆ ಸುಬ್ಬು ಹೂಹೂಗುಟ್ಟಿದ. ಸಹದೇವ್ ಮೌನವಹಿಸಿದ್ದ. ಅಡುಗೆ ಮಾಡುವವರಿಗೆ ಕನಿಷ್ಠ ಪಕ್ಷ ಹಸಿವಿನ ಸಾಮೀಪ್ಯ ಗೊತ್ತಿರುತ್ತದೆ. ಆ ಕ್ಷಣಕ್ಕೆ ಸಹದೇವ್ ಕೊಂಚ ಸೂಕ್ಷ್ಮನಾಗಿ ನನಗೆ ಕಂಡ. ಅಷ್ಟಕ್ಕೂ ಟಿಶ್ಯೂ ಹುಡುಗನ ಕಷ್ಟ ನಿಜವೋ ಅಲ್ಲವೋ ಎನ್ನುವುದನ್ನು ನಿರ್ಧರಿಸುವುದಕ್ಕೆ ನಾವು ಯಾರು? ಕೊಡೊ ಮನಸ್ಸಿದ್ರೆ ಕೊಡ್ಬೇಕು. ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ ಕಳಿಸಿ ಮುಚ್ಚಿಕೊಂಡು ಕೂತ್ಕೋಬೇಕು. ಸುತ್ತ ಒಮ್ಮೆ ನೋಡಿದೆ. ಎದುರು ಬದುರೆಲ್ಲಾ ಗಾಡಿಗಳು ಸಿಗ್ನಲ್ಲಿನಲ್ಲಿ ಹಸಿರು ದೀಪ ಹೊತ್ತಿಕೊಳ್ಳುವುದನ್ನೇ ಕಾಯುತ್ತಿದ್ದವು. ಬೀದಿಯ ತುಂಬಾ ಬಿದ್ದಿದ್ದ ಹಳದಿ ನಿಯಾನ್ ದೀಪ ಆ ಹುಡುಗನನ್ನು ಕೋರೈಸುತ್ತಿದೆ ಎನಿಸುತ್ತಿತ್ತು. ಹೊಟ್ಟೆಯಲ್ಲಿ ಹಸಿವು ಹಾಗೂ ಕೈಯಲ್ಲಿ ಟಿಶ್ಯೂ ಪೇಪರ್ ಹಿಡಿದುಕೊಂಡು ಆರ್ತನಾಗಿ ಬೇಡುತ್ತಿದ್ದಾನೆ ಎನಿಸತೊಡಗಿ ಸಂಕಟವಾಗತೊಡಗಿತು. ಈ ಡಿಜಿಟಲ್ ಪೇ ಸಾವಾಸ ಸಾಯಲಿ ಎಂದು ಹಲುಬುತ್ತಾ ‘ಸಹದೇವ್ ನಿನ್ನತ್ರ ಐವತ್ತು ರೂಪಾಯಿ ಇದ್ರೆ ಕೊಟ್ಟಿರು. ನಿಂಗೆ ಆನ್ಲೈನ್ ಟ್ರಾನ್ಸ್ಫರ್ ಮಾಡ್ತೀನಿ’ ಎಂದೆ. ಅವನು ತನ್ನ ಜೇಬಿನಿಂದ ಐವತ್ತು ರೂಪಾಯಿ ತೆಗೆದು ನನ್ನ ಕೈಗೆ ಕೊಟ್ಟ. ನಾನು ಟಿಶ್ಯೂ ಪೇಪರ್ ಹುಡುಗನಿಗೆ ವರ್ಗಾಯಿಸಿದೆ. ಅವನು ದುಡ್ಡು ಇಸಿದುಕೊಂಡು ಒಂದು ಪ್ಯಾಕೆಟ್ ಟಿಶ್ಯೂ ಪೇಪರ್ ಪೊಟ್ಟಣ ಕೊಟ್ಟು ಹಳದಿ ಬೀದಿ ಬೆಳಕಿನಲ್ಲಿ ಎಲ್ಲೋ ಮರೆಯಾದ. ಕ್ಯಾಬಿನಲ್ಲಿ ಒಂದೈದು ನಿಮಿಷ ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಳ್ಳದ ಮೌನ ಆವರಿಸಿತು.

ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಎಂಟರ್ ಆಗುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ. ನೋಟದಿಂದಲೇ ಬಂಗಾರದ ಹುಡುಗನೆಂಬ ಬಿರುದು ಕೊಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಾನು ಆ ಗುಂಪಿಗೆ ಹೊಸಬನಾದ್ದರಿಂದ ಒಂದು ಸುತ್ತು ಪರಿಚಯವಾಯಿತು. ಹೋಮ್ ಪಾರ್ಟಿಗೆಂದೇ ವಿಧ ವಿಧವಾದ ಮದ್ಯಗಳಿದ್ದವು. ಮುರುಕು ತಿಂಡಿಗಾಗಿ ನಡುವೆ ಮೂರು ಬಾರಿ ಝೋಮ್ಯಾಟೋ ಹುಡುಗರು ಬಂದು ಹೋದರು. ಊನೋ ಆಟ ಆಡಿದೆವು. ನಡುವೆ ಎಲ್ಲರೂ ಅವರು ಕೇಳಿದ ಒಂದು ದಿ ವರ್ಸ್ಟ್ ಮತ್ತು ದಿ ಬೆಸ್ಟ್ ಹಾಡನ್ನು ಪ್ಲೇ ಮಾಡಬೇಕು ಎನ್ನುವುದಾಯಿತು. ಸುಬ್ಬು ಅವನಿಗೆ ಸೇರದ ಒಂದು ವರ್ಸ್ಟ್ ಹಾಡನ್ನು ಹಾಕಿದ. ಅದು ಯಾರೋ ಒಬ್ಬ ಮಧ್ಯವಯಸ್ಕ, ನೋಡುವುದಕ್ಕೆ ನಮ್ಮ ಕ್ಯಾಬ್ ಡ್ರೈವರನಂತೆಯೇ ಕಾಣುತ್ತಿದ್ದ. ಅವನು ಯಾವುದೋ ಸಾಂಗಿಗೆ ವಿಚಿತ್ರವಾದ ನಗುತರಿಸುವ ಭಂಗಿಯಲ್ಲಿ ನೃತ್ಯ ಮಾಡಿ ಯೂಟ್ಯೂಬಿಗೆ ಹಾಕಿದ್ದ. ಅದನ್ನ ನೋಡಿ ಎಲ್ಲರೂ ನಗುವಾಗ ಹೊಸ ಮದುಮಗ ‘ಏನೇ ಅನ್ನಿ, ಕೆಲವೊಂದಿಷ್ಟು ಜನರಿಗೆ ಉಳಿದವರು ಏನಂದುಕೊಳ್ಳುತ್ತಾರೆ ಎನ್ನುವ ಪರಿವೆಯೇ ಇರುವುದಿಲ್ಲ. ಅದು ಬಂದರೆ ಅವರಿಗೆ ತಮ್ಮನ್ನು ತಾವು ಎಕ್ಸ್ಪ್ರೆಸ್ ಮಾಡೋದಕ್ಕೆ ಆಗೋದೇ ಇಲ್ಲ. ಈ ಮನುಷ್ಯನ ಕಾಂಫಿಡೆನ್ಸನ್ನ ನಾವು ಮೆಚ್ಚಬೇಕು.’ ಎಂದು ಇಡೀ ಒಂದು ನಕ್ಕು ಮರೆತುಹೋಗಬಹುದಾದ ಒಂದು ಕ್ಷಣಕ್ಕೆ ಮಾನವೀಯ ಚೌಕಟ್ಟನ್ನು ತೊಡಿಸಿದ. ಆಗ ಅವನು ನನಗೆ ಬಂಗಾರದ ಹುಡುಗನೇ ಎನಿಸಿಬಿಟ್ಟ.

ಇವೆಲ್ಲದರ ನಡುವೆ ಸಹದೇವನಿಗೆ ಎರಡು ಮೂರು ಬಾರಿ ಕರೆ ಬಂತು. ಅವನು ಸುಮಾರು ಹತ್ತು ನಿಮಿಷ ಮಾತನಾಡಿ ಬಂದ. ಫೋನಿಟ್ಟು ಬಂದವನ ಮುಖ ಸಣ್ಣದಾಗಿತ್ತು. ಕಾರಣ ಕೇಳಿದೆ. ಸುಮ್ಮನೆ ತಲೆಯಲ್ಲಾಡಿಸಿ ಏನಿಲ್ಲವೆಂದು ಹೇಳಿ ಒಂದು ಗ್ಲಾಸ್ ಕೈಯಲ್ಲಿ ಹಿಡಿದು ಬಾಲ್ಕನಿಗೆ ಹೋದ. ಏನೋ ಆಗಿದೆ ಎಂದು ಊಹಿಸಿ ನಾನು ಶನಾಯಾ ಅವನ ಹಿಂದೆ ಓಡಿದೆವು. ಅವನಾಗ ಇರಿನಾ ಆಂಟಿ ಕಥೆಯನ್ನು ಹೇಳಿದ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಇರಿನಾ ಆಂಟಿ ಉಕ್ರೇನಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಯಾವುದೋ ಬಂಕರಿನ ಕೆಳಗೆ ಅಡಗಿಕೊಂಡಿದ್ದಾರಂತೆ. ಯಾವಾಗ ಬೇಕಾದರೂ ಬಾಂಬ್ ಬೀಳಬಹುದು ಎಂದು ಹೇಳಿದ. ಅವನ ಮುಖದಲ್ಲಿ ದುಗುಡವಿತ್ತು. ಇರಿನಾ ಆಂಟಿ ಯಾರು ಎಂಬ ನನ್ನ ಮುಖದಲ್ಲಿದ್ದ ಪ್ರಶ್ನೆಯನ್ನು ಗ್ರಹಿಸಿ ”ಇರಿನಾ ಆಂಟಿ ನನ್ನ ತಂದೆಯ ಎರಡನೇ ಹೆಂಡತಿ. ಅವರೀಗ ಉಕ್ರೇನಿನಲ್ಲಿದ್ದಾರೆ…” ಎಂದ. ಶನಾಯಾ ಸಹದೇವನ ಬೆನ್ನು ಸವರುತ್ತಾ ಸಮಾಧಾನಗೊಳಿಸುತ್ತಿದ್ದಳು. ಸಹದೇವನ ಕಣ್ಣಲ್ಲಿ ನೀರಿದ್ದವು. ಒಳಗಡೆ ಸುಬ್ಬು ಅವನ ಪ್ರೇಮಿಯ ಹಳೆಯ ಫೋಟೋ ನೋಡುತ್ತಾ ಸಿಗರೇಟ್ ಸೇದುತ್ತಿದ್ದ. ಉಷಾ ಮತ್ತು ಅನಿಕೇತ್ ಸೋಫಾದ ಮೇಲೆ ಕೈಕೈ ಬೆಸೆದು ಕೂತಿದ್ದರು. ಒಬ್ಬೊಬ್ಬರು ಒಂದೊಂದು ಕಡೆ. ಬೇರೆ ಬೇರೆ ಕಾರಣಗಳು. ಹನಿಗಣ್ಣಾದರು. ಎಲ್ಲೋ ನಡೆವ ಯುದ್ಧ, ಭಗ್ನ ಪ್ರೇಮ, ಹಳೆಯದನ್ನೆಲ್ಲಾ ಮರೆತು ಹೊಸ ಬದುಕಿನ ಕನಸು ತರುವ ಸಣ್ಣ ದಿಗಿಲು, ಶನಾಯಾಳ ನಡೆಯಲ್ಲಿ ಕಂಡ ಸಾಂತ್ವನವೇ ತಾನಾದ ಪರಿ, ನಡುವೆ ಸುಳಿವ ಖಾಲಿತನ, ತೇವದ ಕಣ್ಣುಗಳು… ಆಗಾಗ ಎನ್ನುವಂತೆ ಒಂದೊಂದೇ ಟಿಶ್ಯೂ ಪೇಪರ್ ಮೆಲ್ಲ ಮೆಲ್ಲನೆ ಹೊರಬಂದು ಅದೆಷ್ಟು ಕಣ್ಣುಗಳನ್ನು ಒರೆಸಿ ಸಂತೈಸಿತು!!! ಅಬ್ಬಾ ಆ ಟಿಶ್ಯೂ ಪೇಪರ್ ಇಲ್ಲದೆ ಹೋಗಿದ್ದರೆ ಎಂಥಾ ತೊಂದರೆಯಾಗುತ್ತಿತ್ತು. ಸರಿಯಾದ ಸಮಯಕ್ಕೆ ಬಂದು ಸಾಂತ್ವನವನ್ನು ಕೇವಲ ಐವತ್ತು ರೂಪಾಯಿಗೆ ಕೊಟ್ಟು ಹೋಗಿದ್ದ ಆ ಹುಡುಗ.

ಮರುದಿನ ಸುಬ್ಬುಗೆ ತಡೆಯಲಾರದೆ ಹೇಳಿದೆ. ‘ಸುಬ್ಬು, ಉಳಿದವರ ಕಥೆ ಹಾಳಾಗಿ ಹೋಗಲಿ. ನೀನು ಬಡತನದಿಂದ ಬಂದು ಇಷ್ಟೆಲ್ಲಾ ಸ್ವಂತಕ್ಕೆ ಮಾಡಿಕೊಂಡವನು. ಈಗ ಅದೇನೋ ನೀನು ಇಲೈಟುಗಳ ಮುಂದೆ ಅವರಂತಾಗುವುದಕ್ಕೆ ಕುಣಿತಾ ಇರ್ತಿ. ಸರಿ, ಅದು ನಿನಗಿಷ್ಟ. ಮಾಡು. ಆದರೆ ಬಡವರ ಮುಂದೆ ಅವರ ಬಡತನವೇ ಸುಳ್ಳು ಅಂತ ಹೇಳೋ ಅಧಿಕಾರ ನಿನಗಿಲ್ಲ. ಅಷ್ಟು ಮಾತ್ರದ ಒಂದಿಷ್ಟು ಕರ್ಟಸಿ ಉಳಿಸಿಕೋ ಎಂದೆಲ್ಲಾ ಭಾಷಣ ಬಿಗಿದು ಅವನ ತಪ್ಪನ್ನು ಮನವರಿಕೆ ಮಾಡಿಕೊಟ್ಟ ಅಹಂಕಾರದಲ್ಲಿ ಬೀಗಿದ್ದೆ.

ಇದಾದ ಒಂದು ವಾರಕ್ಕೆ ಸಂಜೆ ಹೊತ್ತು ಬಸ್ಸಿನಲ್ಲಿ ಕೆಲಸ ಮುಗಿಸಿ ಬಸವಳಿದು ವಾಪಸ್ ಹೋಗುವಾಗ ಒಂದು ಪುಟ್ಟ ಬಕೇಟಿನಲ್ಲಿ ಮಜ್ಜಿಗೆ ಇಟ್ಟುಕೊಂಡು ‘ಆ ಮಜ್ಜಿಗೆ, ಮಸ್ಸಾಲ್ಲಾ ಮಜ್ಜಿಗೆ!’ ಎಂದು ಕೂಗುತ್ತ ಒಬ್ಬ ಪುಟ್ಟ ಹುಡುಗ ಮಾರುತ್ತಾ ಬಂದ. ತಕ್ಷಣ ನನಗೆ ಆ ಟಿಶ್ಯೂ ಪೇಪರ್ ಹುಡುಗ ನೆನಪಾದ. ಕೂಡಲೇ ಫೋನ್ ಪೇ ತೆಗೆದು ಸಹದೇವನ ನಂಬರಿಗೆ ಐವತ್ತು ರೂಪಾಯಿ ಕಳಿಸಿ ಕೆಳಗಡೆ ‘ಟಿಶ್ಯೂ ಪೇಪರ್. ಥ್ಯಾಂಕ್ಸ್’ ಎಂಬ ಒಕ್ಕಣಿಗೆ ಬರೆದು ಕಳಿಸಿದೆ. ಸುಬ್ಬು ಅವತ್ತು ‘ಆ ಟಿಶ್ಯೂ ಬಾಯ್ ಹೇಳ್ತಾ ಇದ್ದಿದ್ದು ಸುಳ್ಳೆ ಆಗಿದ್ರೆ ಏನ್ ಮಾಡೋದು?’ ಎನ್ನುವ ಪ್ರಶ್ನೆ ಕೇಳಿದ್ದ. ನಾನಾಗ ಸಿರಿವಂತ ಸಿನಿಮಾದ ಒಂದು ಡೈಲಾಗನ್ನೇ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ತಿರುಚಿ ಹೇಳಿದ್ದೆ. ‘ಅದು ಮೋಸವೇ ಆಗಿದ್ದರೆ ಆಗಿರಲಿ. ಸದ್ಯ ಅವನ ತಂಗಿ ಮತ್ತೆ ಅವನು ಹಸಿವಿನಿಂದ ಇರಲಿಲ್ಲವಲ್ಲ! ಅಷ್ಟೇ ಸಾಕು. ನಾವು ಕೊಟ್ಟ ಹಣ ಮತ್ಯಾವುದಕ್ಕೋ ಬಳಸ್ತಾನೆ. ಒಳ್ಳೇದು.’ ಎಂದು ಮಾತು ಮುಗಿಸಿದ್ದೆ.