ಕತೆಯ ವರ್ಣನೆಯಲ್ಲಿಯ ಎಲ್ಲ ವಿವರಗಳೂ ಸಂಜ್ಞೆಗಳಾಗುವದಿಲ್ಲ. ಸಂಜ್ಞೆಗಳು ಪ್ರತೀಕಗಳಾಗುವದಿಲ್ಲ. ವಿವರಗಳಿಗಿಂತ ಸಂಜ್ಞೆಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಭಾವಸಂಜ್ಞೆಗಳಾಗಿದ್ದರೆ ಮನಸ್ಸನ್ನು ಕಲಕುತ್ತವೆ. ಆದರೆ ಪ್ರತೀಕಗಳು ಹೆಚ್ಚು ಲಕ್ಷ್ಯವನ್ನು ಅಪೇಕ್ಷಿಸುತ್ತವೆ. ಉದಾಹರಣೆಗೆ ದುರ್ಗಿ ಸಾಯುವ ರಾತ್ರಿ ಕಿಟಕಿಯಲ್ಲಿ ಕಾಣುವ ಸೇವಂತಿಗೆ ಹೂವಿನ ಟ್ರಕ್ಕು ಒಂದು ಪ್ರತೀಕವಾಗಿರುವದರಿಂದ ಅದು ತನ್ನ ಅರ್ಥವನ್ನು ಬೇಗ ಬಿಟ್ಟುಕೊಡುವದಿಲ್ಲ. ಅದು ಕೂಡ ಕತೆಯ ವಾಸ್ತವ ವಿವರಗಳಲ್ಲಿ ಒಂದಾಗಿದೆ, ಆದರೂ ವಿಸಂಗತವಾಗಿದೆ.
ಹಿರಿಯ ವಿಮರ್ಶಕ  
ಪ್ರೊ. ಕೀರ್ತಿನಾಥ ಕುರ್ತಕೋಟಿ ಅವರು ಕಥೆಗಾರ ಜಯಂತ್‌ ಕಾಯ್ಕಿಣಿ ಕತೆಗಳ ಕುರಿತು ಬರೆದ ಅಪರೂಪದ ಬರಹವೊಂದು ಇಲ್ಲಿದೆ. 

‘ದಗಡೂ ಪರಬೂನ ಅಶ್ವಮೇಧ’ ಸಂಕಲನದ ಕತೆಗಳಲ್ಲಿ ಜಯಂತ ಕಾಯ್ಕಿಣಿಯವರು ತಮಗೆ ನೈಜವಾದ ಕಥನ ಮಾರ್ಗವನ್ನು ಕಂಡುಕೊಂಡರು. ವಿವರಗಳ ಸಮೃದ್ಧ ಪ್ರತಿಮೆಗಳ ಮೆರವಣಿಗೆ, ಅದಮ್ಯವೆನ್ನಬಹುದಾದ ಜೀವನಪ್ರಿಯತೆ – ಇವು ಯಾವಾಗಲೂ ಜಯಂತರ ಕಥೆಗಳ ಪ್ರಮುಖ ಲಕ್ಷಣಗಳಾದರೆ ಅವರ ಕತೆಗಳಲ್ಲಿನ ಪರಿಣತಿ ಎಂದರೆ, ಕತೆ ವಾಚ್ಯಾರ್ಥಕ್ಕೆ ಮಾತ್ರ ಸೀಮಿತವಾಗದೆ, ವಿವರಗಳ ಧ್ವನಿ ಸಾಮರ್ಥ್ಯದಿಂದ ಬೇರೆ ಅರ್ಥಗಳನ್ನು ಪಡೆಯಲು ಪ್ರಯತ್ನ ಮಾಡಿದ್ದು. ಕತೆ ತನ್ನನ್ನು ತಾನೇ ಮೀರಿ ಹೋಗಲು ಆಕಾರತೆಯನ್ನು ಪಡೆದಿರುವದು. ಜಯಂತ ಕಾಯ್ಕಿಣಿಯವರು ತಮ್ಮ ‘ಬಣ್ಣದ ಕಾಲು’ ಸಂಕಲನದ ಮುನ್ನುಡಿಯಲ್ಲಿ, ಪಂಚತಂತ್ರದ ಒಂದು ಕತೆಯ ಉದಾಹರಣೆಯನ್ನು ಕೊಡುತ್ತ, ಕಥನಸೃಷ್ಟಿ ಕಥನಕಾರನನ್ನೇ ತಿಂದು ಹಾಕುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆಯಲ್ಲಿನ ಉತ್ಪ್ರೇಕ್ಷೆಯ ಅಂಶ ಏನೇ ಇರಲಿ, ಒಂದು ಮಾತು ಮಾತ್ರ ನಿಜ. ಕಥನಕಾರ ತನ್ನ ಕತೆಯನ್ನು ಸೃಷ್ಟಿಸುವಾಗ ಕೇವಲ ದೇಹ ಮತ್ತು ಪ್ರಾಣಗಳಷ್ಟನ್ನೇ ದಾನ ಮಾಡುವದಿಲ್ಲ, ಅದಕ್ಕೊಂದು ಮನಸ್ಸನ್ನು ಯೋಚಿಸುವ ಶಕ್ತಿಯನ್ನೂ ಕೊಟ್ಟಿರುತ್ತಾನೆ. ಕತೆ ಕಥನಕಾರನಿಂದ ಬಿಡುಗಡೆಯನ್ನು ಪಡೆದು ತಾನೇ ಸ್ವತಂತ್ರವಾಗಿ ಯೋಚಿಸಬೇಕಾಗುತ್ತದೆ. ಒಮ್ಮೊಮ್ಮೆ ಕಥೆಯ ಯೋಚನೆ ಕಥೆಗಾರನ ಯೋಚನೆಗಿಂತ ಭಿನ್ನವಾಗಿರಬಹುದು. ಶ್ರೇಷ್ಠ ಕತೆಗಳಲ್ಲಂತೂ ಕತೆಯ ಅರ್ಥವಂತಿಕೆ ಪದರು ಪದರಾಗಿರುತ್ತದೆ ಅಥವಾ ಆಗಬೇಕು.

ಕತೆಯೇ ಆಗಲಿ, ಕವಿತೆಯೇ ಆಗಲಿ ಅದು ಎಷ್ಟು ಪ್ರಯತ್ನದ ಫಲವೋ ಅಷ್ಟೇ ದೈವಾಯತ್ತವೂ ಹೌದು. ಪ್ರತಿಯೊಬ್ಬ ಪ್ರಜ್ಞಾವಂತ ಲೇಖಕ ಪ್ರಮುಖ ಕೃತಿಯನ್ನೇ ಬರೆಯಲು ಪ್ರಯತ್ನ ಮಾಡುತ್ತಾನೆ. ಆದರೆ ಅದು ಪ್ರಮುಖವಾಗುವದು ಅಥವಾ ಆಗದಿರುವದು ಅವನ ಕೈಯಲ್ಲಿಲ್ಲ. ಜಯಂತ ಕಾಯ್ಕಿಣಿಯವರು ಕತೆಗಳ ಲೋಕದಲ್ಲಿ ಪ್ರವೇಶ ಮಾಡುವದಕ್ಕಿಂತ ಮೊದಲೇ ಅನೇಕ ಪ್ರಮುಖ ಕೃತಿಗಳು ಪ್ರಕಟವಾಗಿದ್ದವು. ಅವು ತಮ್ಮ ಬರವಣಿಗೆಯಲ್ಲಿ ಪುನರುಕ್ತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರಿಗಿತ್ತು. ಪುಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಫಲವತ್ತಾದ ನೆಲ ಅವರಿಗೆ ಜೀವನದ ಅನೇಕ ಹೊಸ ವಿವರಗಳನ್ನು ದಯಪಾಲಿಸಿತು. ಯಾವುದೇ ಕತೆ ಆಗಿರಲಿ ಅದಕ್ಕೆ ಪ್ರಾದೇಶಿಕತೆ ಅನಿವಾರ್ಯವೆಂದು ತೋರುತ್ತದೆ. ಒಂದು ಪ್ರದೇಶದ ಗಾಳಿ, ನೀರು ಬಿಸಿಲುಗಳನ್ನುಂಡು ಕತೆಯೊಳಗಿನ ವ್ಯಕ್ತಿಗಳು ವಿಶಿಷ್ಟತೆಯನ್ನು ಪಡೆಯುತ್ತವೆ. ಜಯಂತರ ಕತೆಗಳೂ ಆ ಮಾತಿಗೆ ಅಪವಾದವಲ್ಲ. ಅವರ ಕತೆಗಳಲ್ಲಿ ಕೆಲವು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದರೆ ಇನ್ನು ಕೆಲವು ಮುಂಬಯಿಯ ಗಾಳಿ ಬಿಸಿಲುಗಳನ್ನುಂಡು ಬೆಳೆದಿವೆ. ಕೆಲವು ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛಂದವಾಗಿ ಉಸಿರಾಡುತ್ತವೆ, ಕೆಲವು ಮುಂಬಯಿಯ ಇಕ್ಕಟ್ಟಿನಲ್ಲಿ ಉಸಿರುಕಟ್ಟಿ ಒದ್ದಾಡುತ್ತವೆ. ಈ ಮಾತನ್ನು ವಿಸ್ತರಿಸಿ ಹೇಳಲು ಕಾರಣವಿದೆ. ಜಯಂತರ ಕತೆಗಳು ಈ ಶತಮಾನದ ಒಂದಕ್ಕೊಂದು ವಿರುದ್ಧವಾದ ಎರಡು ಪರಿಸರಗಳಲ್ಲಿ ಜೀವಿಸುತ್ತವೆ. ಮೊದಲನೆಯ ಪರಿಸರವೆಂದರೆ ಭವಿಷ್ಯವೇ ಇಲ್ಲದಂತಿರುವ ಹಳ್ಳಿಗಾಡಿನ ಪರಿಸರ, ಎರಡನೆಯದು ಭವಿಷ್ಯವಿದ್ದರೂ ಉಸಿರು ಕಟ್ಟಿಸುವ ವರ್ತಮಾನದ ಮುಂಬಯಿ, ಕತೆಗಳು ಇಂಥ ಪರಿಸರಗಳ ನೋವು-ನಲಿವುಗಳನ್ನು, ಬೇಸರ ವೇದನೆಗಳನ್ನು ಚಿತ್ರಿಸುತ್ತವೆ.

ಸೇವಂತಿಗೆ ಹೂವಿನ ಟ್ರಕ್ಕಿನ ಮೇಲೆ ಕಣ್ಣಿಟ್ಟು ಸಾವನ್ನು ಅಪ್ಪಿಕೊಳ್ಳುವ ದುರ್ಗಿ, ಕುರುಡ ಹಾರ್ಮೋನಿಯಮ್ ಮಾಸ್ತರನ ಸಂಗೀತಕ್ಕೆ ಮಾರುಹೋದ ಪಮ್ಮೇಚ, ಎಂಥ ಸನ್ನಿಯಲ್ಲೂ ಬಳೆ ಮಾಡಿಸಿಯೇ ತೀರುತ್ತೇನೆಂಬ ಭವಾನಿ, ಪೋಲೀಸ್ ವ್ಯಾನಿನಿಂದ ಇಳಿದು ಬಂದ ಗಂಡನಿಗೆ ಹೊಸಕ್ಕಿ ಪಾಯಸ ಕುಡಿಸುವ ನಾಗಮ್ಮ – ಇಂಥವರೆಲ್ಲ ಎಂಥ ದಾರುಣ ಪರಿಸ್ಥಿತಿಯಲ್ಲೂ ಬದುಕಿಯೇ ತೀರುತ್ತೇವೆಂದು ಹಟ ಹಿಡಿದ ವ್ಯಕ್ತಿಗಳು. ಆದರೆ ಇವರೆಲ್ಲ ಕತೆಯೊಳಗಿನ ವ್ಯಕ್ತಿಗಳೇ ಹೊರತು ಇವರೇ ಕತೆಯಲ್ಲ. ಕತೆ ಈ ವ್ಯಕ್ತಿಗಳನ್ನಲ್ಲದೆ ಮತ್ತೇನನ್ನೋ ಒಳಗೊಂಡಿರುತ್ತದೆ. ಜಯಂತರ ‘ಚುಕ್ಕಾಣಿ’ ಎಂಬ ಕತೆಯನ್ನು ಉದಾಹರಣೆಯಾಗಿ ನೋಡಬಹುದು. “ಅಂಗಡಿಯ ಹೊರಗೆ ನಿಂತವರೆಲ್ಲ ಗೋಕರ್ಣದಿಂದ ಬಂದು ಹೋಗುವ ನಾಲ್ಕೂವರೆಯ ಕೆಂಪು ಬಸ್ಸಿನ ಸದ್ದಿಗಾಗಿ ಕಾಯುತ್ತಿದ್ದರು.” ಈ ವಾಕ್ಯವೆಂದರೆ ಕತೆಯೊಳಗಿನ ಒಂದು ವರ್ಣನೆಯಲ್ಲ, ವಿವರವಲ್ಲ. ಎಂಟು ಪುಟಗಳಷ್ಟು ವಿಸ್ತಾರವಾಗಿ ಹರಡಿಕೊಂಡ ಕತೆ ಎಂದರೆ ಮೇಲೆ ಉದ್ಧರಿಸಿದ ವಾಕ್ಯದ ವಿಸ್ತರಣೆ ಎಂದೇ ಹೇಳಬಹುದು. ತದಡಿಯ ಬಂದರು ಕೆಂಪು ಬಸ್ಸಿಗಾಗಿ ಕಾಯುತ್ತಿದೆ, ಬಸ್ಸು ಯಾವ ಕಾರಣಕ್ಕೂ ಬರಲಿಲ್ಲ, ಇದಿಷ್ಟೇ ಕತೆ. ಇದೊಂದು ಸಂಗತಿಯನ್ನು ಬಿಟ್ಟರೆ ಉಳಿದದ್ದೆಲ್ಲ ತದಡಿಯ ಬಂದರಿನ, ಅಲ್ಲಿಯ ಜನಸಮುದಾಯದ, ಅಲ್ಲಿಯ ಹೊಳೆ, ಬೆಟ್ಟ, ಕಡಲು ಮತ್ತು ಮುಗಿಲುಗಳ ವಾಸ್ತವ ವರ್ಣನೆ.

ಈ ವರ್ಣನೆ ಎಷ್ಟು ವಾಸ್ತವವೆಂದರೆ ಇಂದಿಗೂ ತದಡಿಗೆ ಹೋಗಿ ಅದನ್ನೆಲ್ಲ ಕಾಣಬಹುದು. ಆದರೆ ವಾಸ್ತವತೆ ತನಗೆ ತಾನೇ ಅರ್ಥಪೂರ್ಣವಲ್ಲ. ಅದಕ್ಕೆ ಅರ್ಥ-ಕಲಾತ್ಮಕ ಅರ್ಥ-ಬರಬೇಕಾದರೆ ‘ಅಂಗಡಿಯ ಹೊರಗೆ ಜನರು ದಿನವೂ ಬರುವ ನಾಲ್ಕೂವರೆಯ ಕೆಂಪು ಬಸ್ಸಿಗಾಗಿ ಕಾಯುತ್ತಿರಬೇಕು’, ಮತ್ತು ಬಸ್ಸು ಬರಬಾರದು. ಇಡೀ ತದಡಿ ದಿನವೂ ಬಂದು ಹೋಗುವ ಬಸ್ಸು ಬಾರದಿದ್ದರೆ ಉದ್ವಿಗ್ನಗೊಳ್ಳುತ್ತದೆ, ನಿರ್ವಿಣ್ಣವಾಗುತ್ತದೆ. ಈ ಚಿಕ್ಕ ಸಂಗತಿಯೇ ಕಥಾಸೂತ್ರ, ವಾಸ್ತವತೆಯ ಒಡಲಲ್ಲಿ ಒಂದು ಹೊಸ ಸೃಷ್ಟಿ ಸ್ಪಂದನಗೊಳ್ಳುತ್ತದೆ. ಈ ಸ್ಪಂದನದಿಂದಾಗಿ ವಾಸ್ತವತೆಯ ವರ್ಣನೆಯ ಪ್ರತಿಯೊಂದು ವಿವರ ಅರ್ಥಪೂರ್ಣವಾಗುತ್ತದೆ.

‘ಟೈಸಿಕಲ್’ ಕತೆಯ ನಾಯಕ ಮಾಸ್ತರರು ರಥ ಬೀದಿಯಲ್ಲಿಯ ಜೋಯಿಸರ ವೀಳ್ಯದ ಹರಿವಾಣದಿಂದ ವೀಳ್ಯವನ್ನು ಜಗಿಯುವದಕ್ಕೂ ಅವರು ಗೋಕರ್ಣಕ್ಕೆ ಯಾವ ಉದ್ದೇಶದಿಂದ ಬಂದರೋ ಅದಕ್ಕೂ ಕಲಾತ್ಮಕವಾದ ಸಂಬಂಧ ಏರ್ಪಡುತ್ತದೆ. ನಾಯಕ ಮಾಸ್ತರರು ತಿರುಗಿ ಊರಿಗೆ ಹೋಗುವಾಗ ಪ್ರಭಾಕರ ಅವರ ಕೈಗೆ ಕೊಡುವ ‘ಬಸಲೆಕಟ್ಟು’ ಕೃತಜ್ಞತೆಯ, ಮಾನವೀಯತೆಯ ಸಂಜ್ಞೆಯಾಗಿ ಬಿಡುತ್ತದೆ.

ಆದರೆ ಕತೆಯಲ್ಲಿಯ ಅಥವಾ ಹೆಚ್ಚು ಸರಿಯಾಗಿ ಹೇಳಬೇಕೆಂದರೆ, ಕತೆಯ ವರ್ಣನೆಯಲ್ಲಿಯ ಎಲ್ಲ ವಿವರಗಳೂ ಸಂಜ್ಞೆಗಳಾಗುವದಿಲ್ಲ. ಸಂಜ್ಞೆಗಳು ಪ್ರತೀಕಗಳಾಗುವದಿಲ್ಲ. ವಿವರಗಳಿಗಿಂತ ಸಂಜ್ಞೆಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಭಾವಸಂಜ್ಞೆಗಳಾಗಿದ್ದರೆ ಮನಸ್ಸನ್ನು ಕಲಕುತ್ತವೆ. ಆದರೆ ಪ್ರತೀಕಗಳು ಹೆಚ್ಚು ಲಕ್ಷ್ಯವನ್ನು ಅಪೇಕ್ಷಿಸುತ್ತವೆ. ದುರ್ಗಿ ಸಾಯುವ ರಾತ್ರಿ ಕಿಟಕಿಯಲ್ಲಿ ಕಾಣುವ ಸೇವಂತಿಗೆ ಹೂವಿನ ಟ್ರಕ್ಕು ಒಂದು ಪ್ರತೀಕವಾಗಿರುವದರಿಂದ ಅದು ತನ್ನ ಅರ್ಥವನ್ನು ಬೇಗ ಬಿಟ್ಟುಕೊಡುವದಿಲ್ಲ. ಅದು ಕೂಡ ಕತೆಯ ವಾಸ್ತವ ವಿವರಗಳಲ್ಲಿ ಒಂದಾಗಿದೆ, ಆದರೂ ವಿಸಂಗತವಾಗಿದೆ. ದುರ್ಗಿಯ ಜೀವನದ ಮತ್ತು ಸಾವಿನ ನಿಕೃಷ್ಟತೆ ಮತ್ತು ಅಸಹಾಯ ನಿರ್ದಯತೆಗೂ ಈ ವಿವರಕ್ಕೂ ಸಂಬಂಧವಿಲ್ಲ. ಆದರೂ ಅದು ಕಿಟಕಿಯ ಮೂಲಕ ಕಾಣುತ್ತದೆ. ಸಾಯುವ ರಾತ್ರಿ ಕೂಡ ದುರ್ಗಿ ವರ್ಷಾ ಮತ್ತು ರಶ್ಮಿ ತನಗೆ ಜಡೆ ಹಾಕಬೇಕೆಂದು ಹಟ ಮಾಡುತ್ತಾಳೆ. ಅವರು ಜಡೆ ಹಾಕಿದಾಗ ಅವಳ ಕಣ್ಣುಗಳು ಹೊಳೆಯುತ್ತವೆ. ದುರ್ಗಿ ಬದುಕಿ ಬದುಕಿ ದಣಿದಿದ್ದಾಳೆ. ಈ ದಣಿವು ಒಂದು ಅಪರೂಪದ ಅನುಭವ. ಎಷ್ಟು ದಣಿದರೂ ಅವಳಿಗೆ ಸಾಯಬೇಕೆನ್ನಿಸುವದಿಲ್ಲ. ಅವಳ ಕಣ್ಣು ಸೇವಂತಿಗೆ ಹೂವಿನ ಟ್ರಕ್ಕಿನ ಮೇಲೆ ನಟ್ಟಿವೆ. ತಾನು ಸಾಯುತ್ತೇನೆಂದು ಗೊತ್ತಿದ್ದೂ ಅವಳ ಕಣ್ಣು ಏನನ್ನೋ ಹುಡುಕುತ್ತಿವೆ. ಜಯಂತ ಕಾಯ್ಕಿಣಿಯವರ ಮಾನವದರ್ಶನ ಇಲ್ಲಿ ನಿಚ್ಚಳವಾಗಿ ಬೆಳಗುತ್ತಿದೆ ಎಂದು ತೋರುತ್ತದೆ. ಜಯಂತರ ಮನುಷ್ಯ ದಣಿದಿದ್ದಾನೆ, ಅವನ ಚಟುವಟಿಕೆಗಳೆಲ್ಲ ಈ ದಣಿವಿನಿಂದ ಪ್ರೇರಿತವಾದವುಗಳು. ಎಷ್ಟು ದಣಿದಿದ್ದರೂ ಅವನು ಬದುಕುವದನ್ನು ಬಿಡುವದಿಲ್ಲ. ಬಹುಶಃ ಇದೇ ಜಯಂತ ಕಾಯ್ಕಿಣಿಯವರ ಕತೆಗಳ ಆಧುನಿಕತೆಯ ಅಂಶವಾಗಿರಬೇಕು. ಈ ದರ್ಶನಕ್ಕೂ ಅವರ ಕತೆಗಳ ಪ್ರಾದೇಶಿಕತೆಗೂ – ಉತ್ತರ ಕನ್ನಡ ಜಿಲ್ಲೆ ಮತ್ತು ಮುಂಬಯಿ – ನಿಕಟವಾದ ಸಂಬಂಧವಿದೆ. ಈ ಸಂಬಂಧವಿದೆಯೆಂದೇ ಜಯಂತರ ಕತೆಗಳು ಎರಡೂ ಪ್ರದೇಶಗಳಲ್ಲಿ ಲೀಲಾಜಾಲವಾಗಿ ತಮ್ಮ ಬದುಕನ್ನು ನಡೆಸುತ್ತವೆ.

‘ಸೇವಂತಿ ಹೂವಿನ ಟ್ರಕ್ಕು’ ಕತೆಯ ವಾಸ್ತವ ವಿವರಗಳಲ್ಲಿಯ ಒಂದು ಪ್ರತೀಕವಾಗುತ್ತದೆ. ಆದರೆ ಈ ಪ್ರತೀಕಕ್ಕೆ ಒಂದೇ ಅರ್ಥವಿರುವದಿಲ್ಲ, ವಿಚಾರ ಮಾಡುತ್ತ ಹೋದಂತೆ ಅದರ ಅರ್ಥಗಳು ಬದಲಾಗುತ್ತವೆ. ಆದರೆ ಈ ಪ್ರತೀಕದ ನಿಜವಾದ ಅರ್ಥವೆಂದರೆ ಕತೆಯೊಡನೆ ಇರುವ ಅದರ ವಿಸಂಗತಿ. ಇಂಥ ವಿಸಂಗತಿ ಇದ್ದೂ ಅದರ ಸಮೀಪದಲ್ಲಿಯೇ ಕತೆ ಹುಟ್ಟುತ್ತದೆಂಬುದೇ ಕತೆಯ ನಿಜವಾದ ಶಕ್ತಿಯಾಗಿದೆ. ಕತೆ ಹಾಳಾಗಿ ಹೋಗಬೇಕಾದಂಥ ಜೀವನಕ್ರಮದಲ್ಲಿಯೇ ಕತೆ ಹುಟ್ಟುತ್ತದೆನ್ನುವದೇ ಒಂದು ವಿಸ್ಮಯ, ಒಂದು ರೀತಿಯ ರಕ್ಷಣೆ, ಅನಾಥರು, ವಿಧವೆಯರು, ಅಗತಿಕರು, ನಿರುದ್ಯೋಗಿಗಳು, ಅಂಗವಿಕಲರು, ಮನೋರೋಗಿಗಳು – ಜಯಂತರ ಕತೆಗಳಲ್ಲಿಯ ಪಾತ್ರಗಳೆಂದರೆ ಹೆಚ್ಚಾಗಿ ಇಂಥವೇ. ಇವರ ಬದುಕಿನ ವೈಯಕ್ತಿಕವಾದ ನೋವಿಗಿಂತ ಇವರ ಬದುಕಿನ ಗತಿ ಕುಂಠಿತವಾಗಿರುವದೇ ಒಂದು ಸಮಸ್ಯೆಯಾಗಿರುತ್ತದೆ. ಆದರೂ ಅವರಲ್ಲಿ ಜೀವನಪ್ರೀತಿ ಕಡಿಮೆಯಾಗುವದಿಲ್ಲ. ಕ್ಲಿಯೋಪಾತ್ರಾಳಂತೆ ದುರ್ಗಿ ಸಾಯುವ ಮೊದಲು ಜಡೆ ಹಾಕಿಸಿಕೊಳ್ಳುತ್ತಾಳೆ. ನಾಗಮ್ಮನ ಗಂಡ ವೆಂಕಟೇಶ ಕಾರವಾರ ಜೇಲಿಗೆ ಹೋಗುವ ಮೊದಲು ಹೆಂಡತಿ ತಂದಿದ್ದ ಹೊಸಕ್ಕಿ ಪಾಯಸವನ್ನು ಪ್ರೀತಿಯಿಂದ ಉಣ್ಣುತ್ತಾನೆ. ಈ ಮುದತರುವ ಅನುಭವಗಳು ಕ್ಷಣಿಕವಾದವುಗಳು ನಿಜ. ಹಾಗೆ ನೋಡಿದರೆ ಯಾವ ಅನುಭವ ಕ್ಷಣಿಕವಾಗಿಲ್ಲ? ಯಾವ ಅನುಭವಕ್ಕೂ ಮೊದಲು ಮತ್ತು ಕೊನೆಗಳು ಇರಲೇಬೇಕು. ಆದರೆ ಬದುಕು ವಿಷಮಗತಿಯಲ್ಲಿದ್ದಾಗಲೂ ಇಂಥ ಅನುಭವವನ್ನು ಅನುಭವಿಸಲು ಮನಸ್ಸಿನ ಸೈರ್ಯ ಬೇಕು. ಅಂಥ ಸೈರ್ಯದ ಒಂದು ನೋಟ ಈ ಕತೆಗಳಲ್ಲಿದೆ.

ಕತೆ ಕಥನಕಾರನಿಂದ ಬಿಡುಗಡೆಯನ್ನು ಪಡೆದು ತಾನೇ ಸ್ವತಂತ್ರವಾಗಿ ಯೋಚಿಸಬೇಕಾಗುತ್ತದೆ. ಒಮ್ಮೊಮ್ಮೆ ಕಥೆಯ ಯೋಚನೆ ಕಥೆಗಾರನ ಯೋಚನೆಗಿಂತ ಭಿನ್ನವಾಗಿರಬಹುದು. ಶ್ರೇಷ್ಠ ಕತೆಗಳಲ್ಲಂತೂ ಕತೆಯ ಅರ್ಥವಂತಿಕೆ ಪದರು ಪದರಾಗಿರುತ್ತದೆ ಅಥವಾ ಆಗಬೇಕು.

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಜಯಂತರ ಒಂದು ಸಣ್ಣ ಕತೆಯನ್ನು ವಿಶ್ಲೇಷಿಸಬೇಕೆನಿಸುತ್ತದೆ. ಸಣ್ಣ ಕತೆಯೇ ಜಯಂತರ – ಬಹುತೇಕ ಇಂದು ಬರೆಯುತ್ತಿರುವ ಎಲ್ಲ ಕತೆಗಾರರ – ಪ್ರಮುಖ ಮಾಧ್ಯಮವಾಗಿದೆಯೆಂದು ತೋರುತ್ತದೆ. ಸಣ್ಣಕತೆ ಕಾದಂಬರಿಯಂತೆ ಮುಂದುವರಿಯಲಾರದು. ಅದು ಸಂಕುಚಿತವಾಗಿದ್ದರೂ ಸ್ವಯಂಪೂರ್ಣ ಕಾದಂಬರಿಯಂತೆ ಅದಕ್ಕೂ ಮೊದಲು ಮತ್ತು ಕೊನೆಗಳಿವೆ. ಆದರೆ ಕಾದಂಬರಿಯಲ್ಲಿಯಂತೆ ಅದರಲ್ಲಿ ಅನುಭವಗಳ ವಂಶಿಕತೆಯಿಲ್ಲ. ಅನುಭವಗಳ ಕ್ಷಣಿಕತೆಯೇ ಈ ಕಾರಣವಾಗಿರಬಹುದು. ಅದೇನೇ ಇದ್ದರು ಈಗ ನಾನು ವಿಶ್ಲೇಷಿಸ ಬಯಸುವ ಕತೆಯ ಹೆಸರು ‘ಬಿಡುಬಿಡು ನಿನ್ನಯ…….’ ಅದು ಅವರ ‘ಬಣ್ಣದ ಕಾಲು’ ಎಂಬ ಸಂಕಲನದಲ್ಲಿದೆ. ‘ಬಿಡು ಬಿಡು ನಿನ್ನಯ ಪಾಶುಪತಾಸ್ತ್ರವ’ ಎಂದು ಶುರುವಾಗುವ ಯಕ್ಷಗಾನದ ಹಾಡಿನ ಒಂದು ತುಣುಕು ಕಥೆಯ ತಲೆಬರಹವಾಗಿರುವದು ಬಹಳ ಸಾರ್ಥಕವಾಗಿದೆ. ಅದು ಬಹುಶಃ ಕರ್ಣ ಮತ್ತು ಅರ್ಜುನರ ಕಾಳಗವನ್ನು ನಿರೂಪಿಸುವ ಯಕ್ಷಗಾನದೊಳಗಿನದು. ಅಂಥ ಒಂದು ಕಾಳಗ ಈ ಕತೆಯ ವಸ್ತುವಾಗಿದೆ. ಈ ಕಾಳಗದೊಳಗಿನ ಎದುರಾಳಿಗಳು ಇಬ್ಬರು, ಪಡಸಾಲೆ ಮಾಸ್ತರರು ಮತ್ತು ಘನಶ್ಯಾಮ ಎಂಬ ಹೈಸ್ಕೂಲು ಶಿಕ್ಷಕ. ಇವರಿಬ್ಬರ ದ್ವೇಷಕ್ಕೆ ಕಾರಣವೆಂದರೆ ಮಿರ್ಜಾನ್ ಕೋಟೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ನವಿಲುಗಳು. ಅಘನಾಶಿನಿ ನದಿಗೆ ಸೇತುವೆ ಕಟ್ಟುವ ಮೊದಲೇ ಬಹುಶಃ ನವಿಲುಗರಿಗಳ ವ್ಯಾಪಾರ ಪ್ರಾರಂಭವಾಗಿರಬೇಕು.

ಪಡಸಾಲೆ ಮಾಸ್ತರರು ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರು. ನವಿಲು ರಾಷ್ಟ್ರ ಪಕ್ಷಿ. ಅದನ್ನು ಬೇಟೆಗಾರರಿಂದ ರಕ್ಷಿಸಬೇಕೆಂಬ ಹುಳ ಅವರಲ್ಲಿ ಹೊಕ್ಕಿದ್ದೇ ಈ ಸಂಘರ್ಷಕ್ಕೆ ಪ್ರಾರಂಭವಾಗುತ್ತದೆ. ಪಡಸಾಲೆ ಮಾಸ್ತರರು ಗಾಂಧಿ ಮಾದರಿಯ ಸತ್ಯಾಗ್ರಹದ ಸಮರವನ್ನೇ ಪ್ರಾರಂಭಿಸುತ್ತಾರೆ. ಅಹಿಂಸೆಯಿಂದ ಕೂಡಿದ್ದರೂ ಸತ್ಯಾಗ್ರಹ ಕೂಡ ಒಂದು ಸಮರವೇ. ಈ ಸಮರದಲ್ಲಿ ಅವರಿಗೆ ಶತ್ರುವಾಗುವವನು ಹೈಸ್ಕೂಲ ಶಿಕ್ಷಕನಾದ ಮತ್ತು ಪೇಟೆಯಲ್ಲಿ ಅಂಗಡಿಯನ್ನಿಟ್ಟುಕೊಂಡ ಘನಶ್ಯಾಮ. ಅವನು ನವಿಲುಗರಿಗಳನ್ನು ಮಾರುತ್ತಾನೆಂದು ಪಡಸಾಲೆ ಮಾಸ್ತರರಿಗೆ ತಿಳಿದದ್ದು ತಮ್ಮ ವಿದ್ಯಾರ್ಥಿ ಮತ್ತು ಘನಶ್ಯಾಮನ ಮಗ ದಿಲೀಪನ ಗೂಢಚಾರಿಕೆಯಿಂದ, ಪಡಸಾಲೆ ಮಾಸ್ತರರು ತಮ್ಮ ವಿದ್ಯಾರ್ಥಿಗಳಿಗೆ ನವಿಲಿನ ಮಹತ್ವವನ್ನು ತಿಳಿಸಿ, ಅವುಗಳ ಬೇಟೆಯಾಡದಂತೆ, ಅವುಗಳನ್ನು ಪಹರೆ ಮಾಡಬೇಕೆಂದು ಕಲಿಸಿದಾಗ ಘನಶ್ಯಾಮನ ಕೋಪ ತಾರಕಕ್ಕೇರುತ್ತದೆ. ಅವನು ಮಾಸ್ತರರಿಗೆ ಸಾಧ್ಯವಿದ್ದಷ್ಟು ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಸರಕಾರಕ್ಕೆ ದೂರು ಕೊಡುತ್ತಾನೆ. ಅದರ ಫಲವಾಗಿಯೋ ಏನೋ ಮಾಸ್ತರರಿಗೆ ಸಿದ್ದಾಪುರಕ್ಕೆ ವರ್ಗವಾಗುತ್ತದೆ. ಅವರು ಸಂತೋಷದಿಂದಲೇ ಸಿದ್ಧಾಪುರಕ್ಕೆ ಹೋಗುತ್ತಾರೆ. ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಿದ್ದರೂ ಮಿರ್ಜಾನ್‌ನ್ನು ಅವರು ಮರೆಯುವದಿಲ್ಲ.

ಮಿರ್ಜಾನ್‌ದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಕೊಳ್ಳುತ್ತಾರೆ. ನಿವೃತ್ತರಾದ ಮೇಲೆ, ಹೆಂಡತಿ ಮಕ್ಕಳು ಬೇಡವೆಂದರೂ ಮಿರ್ಜಾನಿನಲ್ಲಿ ಒಬ್ಬರೇ ವಾಸ ಮಾಡುತ್ತಾರೆ. ವಯಸ್ಸು ಎಪ್ಪತ್ತು ದಾಟಿದ್ದರೂ ಅವರು ಆರೋಗ್ಯವನ್ನು ಕಾಪಾಡಿಕೊಂಡು ಗಟ್ಟಿಯಾಗಿರುತ್ತಾರೆ. ಘನಶ್ಯಾಮ ಮಾತ್ರ ಮೊದ ಮೊದಲು ಹಾರಾಡಿ, ಮಾಸ್ತರರು ಊರು ಬಿಟ್ಟ ಮೇಲೆ ಮನಸ್ಸು ಖಾಲಿಯಾಗಿ ಕೊನೆ ಕೊನೆಗೆ ಏನೇನೋ ರೋಗಗಳಿಗೆ ತುತ್ತಾಗುತ್ತಾನೆ. ಇಳಿಗಾಲದಲ್ಲೂ ಅವನಿಗೆ ಮಾಸ್ತರರ ಮೇಲೆ ದ್ವೇಷ ತಗ್ಗಿಲ್ಲ. ಅದು ಒಂದು ದೃಷ್ಟಿಯಿಂದ ಅಕಾರಣವಾದ ದ್ವೇಷ, ಕಾರಣಗಳನ್ನು ಹುಡುಕಿಕೊಂಡು ಹೋಗುವ ದ್ವೇಷ.

ಈ ಕತೆಯ ಕೊನೆಯ ಸನ್ನಿವೇಶ ಹೀಗಿದೆ. ಘನಶ್ಯಾಮ ಈಗ ಕುಮಟೆಯಲ್ಲಿದ್ದಾನೆ. ಅವನ ಮಗ ದಿಲೀಪ ಒಂದು ದಿನ ಮಿರ್ಜಾನಿಗೆ ಬಂದು ಮಾಸ್ತರರನ್ನು ಕಾಣುತ್ತಾನೆ. ಅಪ್ಪ ಬಹಳ ಇಳಿದು ಹೋಗಿದ್ದಾನೆಂದು, ಆದರೂ ಆಗಾಗ ಮಾಸ್ತರರನ್ನು ನೆನಪು ಮಾಡಿಕೊಳ್ಳುತ್ತಾನೆಂದು ಹೇಳಿ ಹೋಗುತ್ತಾನೆ. ಮಾಸ್ತರರಿಗೆ ಅವನನ್ನು ಕಾಣಬೇಕೆಂಬ ಆಸೆ. ಅದಕ್ಕಾಗಿ ರಸ್ತೆಗೆ ಬಂದು ಬಸ್ಸು ಹಿಡಿಯಲು ಪ್ರಯತ್ನ ಮಾಡುತ್ತಾರೆ. ಯಾವ ಬಸ್ಸೂ ನಿಲ್ಲುವದಿಲ್ಲ. ನಿರಾಶರಾಗಿ ಮನೆಗೆ ತಿರುಗಿ ಹೋಗುತ್ತಾರೆ. ಇಬ್ಬರ ನಡುವಿನ ದ್ವೇಷ ಏನಾಯಿತೆಂಬುದನ್ನು ಕತೆ ಬಾಯಿಬಿಟ್ಟು ಹೇಳುವದಿಲ್ಲ. ತಿರುಗಿ ಬರುವಾಗ ಮಾಸ್ತರರು ಕೋಟೆಯ ಗೋಡೆಗೆ ಆತು ನಿಂತುಕೊಂಡ ಒಂದು ಮುದಿ ನವಿಲನ್ನು ಮಾತ್ರ ಕಾಣುತ್ತಾರೆ. ಅಲ್ಲಿಗೆ ಕತೆ ಮುಗಿಯುತ್ತದೆ.

ಮಾಸ್ತರರ ಕಣ್ಣಿಗೆ ಬಿದ್ದ ಮುದಿ ನವಿಲು ಒಂದು ಶಕ್ತಿಯುತವಾದ ಪ್ರತೀಕವಾಗಿ ಕತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಒತ್ತಾಯ ಪಡಿಸುತ್ತದೆ. ಪ್ರತೀಕ ಯಾವುದೇ ಆಗಿರಲಿ ಅದಕ್ಕೆ ಕಾಲದ ಒಂದು ಆಯಾಮವಿರುತ್ತದೆ. ಮಾಸ್ತರರ ಕಣ್ಣಿಗೆ ಬಿದ್ದದ್ದು ಮುದಿ ನವಿಲು, ಪಡಸಾಲೆ ಮಾಸ್ತರರೂ ಈಗ ಮುದುಕರಾಗಿದ್ದಾರೆ. ಅವರ ದೇಹ ‘ಹಳೆಯ ಜೇನುತುಪ್ಪದ ಬಾಟಲಿ’ಯಂತೆ ಮಿರುಗುತ್ತಿದ್ದರೂ ಅವರಿಗೆ ವಯಸ್ಸಾಗಿದೆ. ಅವರು ಕುಮಟೆಗೆ ಹೋಗಬೇಕೆಂದರೆ ಯಾವ ಬಸ್ಸೂ ನಿಲ್ಲುವದಿಲ್ಲ. ಈಗ ಅಘನಾಶಿನಿಯ ಮೇಲೆ ಸೇತುವೆಯಾಗಿ, ಕುಮಟೆ ಹತ್ತಿರವಾಗಿದ್ದರೂ ಬಸ್ಸು ಏರದೆ ಗತಿ ಇಲ್ಲ. ಹೊಸದಾಗಿ ನಿರ್ಮಿತವಾದ ಹೈವೇದಿಂದಾಗಿ, ಕೊಂಕಣ ರೈಲ್ವೆಯ ಕಾಮಗಾರಿಯಿಂದಾಗಿ ಮಿರ್ಜಾನ್ ಊರಿನ ಹಳೆಯ ಶಿಲ್ಪ ಈಗ ಬದಲಾಗಿಬಿಟ್ಟಿದೆ. ಮಾಸ್ತರರ ಕಣ್ಣಿಗೆ ಬಿದ್ದ ಮುದಿ ನವಿಲು ಹಳೆಯ ಕ್ಯಾಲೆಂಡರಿನಂತೆ ಒಂದು ಕಾಲಕ್ರಮದ ಭಂಗವಾಗಿ ಕಾಣುತ್ತದೆ. ಮಾಸ್ತರರು ಮುದುಕರಾಗಿದ್ದಾರೆ. ಅವರಿಗಿಂತ ಚಿಕ್ಕವನಾಗಿದ್ದ ಘನಶ್ಯಾಮನೂ ಈಗ ಮುದುಕ. ಮಿರ್ಜಾನಿನ ಕೋಟೆ ಈಗ ಮೊದಲಿನಂತಿಲ್ಲ. ಅದು ಗುಟಕಾದ ಹರಿದು ಹೋದ ಪ್ಯಾಕೆಟ್ಟುಗಳಿಂದ ತುಂಬಿದೆ. ಮಾಸ್ತರರು ನೋಡಿದ ಈ ಮುದಿ ನವಿಲಿಗೆ ಹಳೆಯ ಸಂಘರ್ಷವನ್ನು ಪ್ರೇರಿಸುವ ಶಕ್ತಿ ಇಲ್ಲ. ಆದರೆ ನವಿಲಿನ ಪ್ರತೀಕದ ಅರ್ಥವಂತಿಕೆ ಇಷ್ಟಕ್ಕೇ ಮುಗಿಯುವದಿಲ್ಲ. ಪಡಸಾಲೆ ಮಾಸ್ತರರು, ಘನಶ್ಯಾಮ ಮತ್ತು ನವಿಲು ಇವರ ನಡುವಿನ ಸಂಬಂಧ ಬಹಳ ತೊಡಕಿನದಾಗಿದೆ. ಪಡಸಾಲೆ ಮಾಸ್ತರರು ನವಿಲನ್ನು ರಕ್ಷಿಸಬೇಕೆನ್ನುವವರು. ಆದರೆ ಘನಶ್ಯಾಮ ಸಾಧ್ಯವಿದ್ದರೆ ನವಿಲುಗಳನ್ನು ಕೊಂದು ನವಿಲು ಗರಿಗಳು ಮಾರಿ ದುಡ್ಡು ಮಾಡಿಕೊಳ್ಳಬೇಕೆನ್ನುವವನು. ಘನಶ್ಯಾಮ ಮತ್ತು ಮಾಸ್ತರರ ನಡುವಿನ ದ್ವೇಷಕ್ಕೆ ಕಾರಣ ಈ ನವಿಲು. ಆದರೆ ನವಿಲುಗಳಿಗೆ ಘನಶ್ಯಾಮನಾಗಲಿ, ಪಡಸಾಲೆ ಮಾಸ್ತರರಾಗಲಿ ಗೊತ್ತಿಲ್ಲದಿರುವದರಿಂದ ಅದು ಕತೆಯಲ್ಲಿ ತಾನೇ ಒಂದು ಸ್ವತಂತ್ರವಾದ ಪ್ರತೀಕವಾಗುತ್ತದೆ. ಇವರಿಬ್ಬರ ಸಂಘರ್ಷಕ್ಕೆ ನವಿಲು ಒಂದು ನಿಮಿತ್ತವಾಗುತ್ತದೆ. ಈ ಸಂಘರ್ಷ ಬೆಳೆದಂತೆ ನವಿಲುಗಳು ಕಡಿಮೆಯಾಗಿ ಕೊನೆಗೆ – ಕತೆಯ ಕೊನೆಗೆ ಉಳಿಯುವದು ಒಂದು ಮುದಿ ನವಿಲು ಮಾತ್ರ. ನದಿ, ಗುಡ್ಡ, ಕಡಲುಗಳಂತೆ ನವಿಲುಗಳು ಪರಿಸರದ ಅಂಗವಾಗಿದ್ದಾಗ ಅವುಗಳ ಪ್ರತೀಕಾತ್ಮಕತೆ ಕಾಣುವದಿಲ್ಲ. ಮನುಷ್ಯ ಪ್ರಯತ್ನ ಪ್ರಕೃತಿಯಲ್ಲಿ ಏನನ್ನೋ ಮಾಡಬೇಕೆಂದಾಗ ಮಾತ್ರ ಪ್ರಕೃತಿಗೆ ಒಂದು ಮಾನವೀಯವಾದ ಅರ್ಥ ಬರುತ್ತದೆ. ಇದರ ಪರಿಣಾಮವಾಗಿ ನವಿಲು ರಾಷ್ಟ್ರಪಕ್ಷಿಯಾಗುತ್ತದೆ. ಅದರ ಗರಿಗಳು ಮಾರಾಟದ ಸರಕಾಗುತ್ತವೆ – ಹೀಗೆ ನವಿಲಿಗೆ ಅನೇಕ ಅರ್ಥಗಳು ಅಂಟಿಕೊಳ್ಳುತ್ತವೆ.

ಪಡಸಾಲೆ ಮಾಸ್ತರರು ಮತ್ತು ಘನಶ್ಯಾಮ ಇವರದು ದ್ವೇಷದ ಸಂಬಂಧ, ಘನಶ್ಯಾಮ ಅಹಂಕಾರಿ ಮತ್ತು ಅವನಿಗೆ ದುಡ್ಡು ಮಾಡಬೇಕೆನ್ನುವ ಹಂಬಲ, ಪಡಸಾಲೆ ಮಾಸ್ತರರು ನಿರಹಂಕಾರಿ, ದುಡ್ಡಿಗೆ ಆಸೆ ಮಾಡಿದವರಲ್ಲ. ಆದರೆ ಅವರು ನವಿಲುಗಳನ್ನು ರಕ್ಷಿಸಬೇಕೆಂದು ಹಟ ತೊಟ್ಟಾಗ ಘನಶ್ಯಾಮನ ದ್ವೇಷ ಭುಗಿಲೆನ್ನುತ್ತದೆ. ಇದಿಷ್ಟೇ ಸಂಗತಿಯ ನೀತಿ ನಿಯಮಗಳು ಸ್ಪಷ್ಟವಾಗಿವೆ. ಪಡಸಾಲೆ ಮಾಸ್ತರರ ಬಗ್ಗೆಯೇ ಓದುಗನ ಸಹಾನುಭೂತಿ ವಾಲುತ್ತದೆ. ಈ ಸಂಘರ್ಷದಲ್ಲಿ ಒಂದು ದೃಷ್ಟಿಯಿಂದ ಸೋಲುವವನು ಘನಶ್ಯಾಮ. ಮಾಸ್ತರರು ವರ್ಗವಾಗಿ ಊರುಬಿಟ್ಟು, ಹೋದಾಗ ಅವನ ಮನಸ್ಸಿಗೆ ಶೂನ್ಯ ಕವಿಯುತ್ತದೆ. ಅವನ ಮನಸ್ಸು ಕಹಿಯಾಗುತ್ತದೆ. ಮಾಸ್ತರರು ಊರು ಬಿಟ್ಟು ಹೋದರೂ ಮಿರ್ಜಾನಿನಲ್ಲಿ ಜಾಗ ಕೊಂಡು ಮನೆ ಕಟ್ಟಿಸುತ್ತಾರೆಂದು ಸಂಕಟವಾಗುತ್ತದೆ. ದ್ವೇಷದ ಸಂಬಂಧ ಸ್ನೇಹದ ಸಂಬಂಧದಂತೆ ಮನಸ್ಸನ್ನು ವ್ಯಾಪಿಸಿಬಿಡುತ್ತಾರೆ. ಅವನು ಕತ್ತಲಾದ ಮೇಲೆ ಬ್ಯಾಟರಿ ಬಿಟ್ಟು ಮಾಸ್ತರರನ್ನು ಹುಡುಕುತ್ತಿರುತ್ತಾನೆ. ಮಾಸ್ತರರದು ನಿರಸ್ತ್ರವಾದ ಸಮರ. ಅವರೂ ಅವನನ್ನು ಮರೆಯುವದಿಲ್ಲ.

ಘನಶ್ಯಾಮ ಮತ್ತು ಮಾಸ್ತರರು ಇವರ ನಡುವಿನ ಸಂಘರ್ಷದ ಸೋಲು ಗೆಲವುಗಳಷ್ಟೇ ಕತೆಯಲ್ಲ. ಕತೆಯಲ್ಲಿ ಮತ್ತೇನೋ ಇದೆ. ಘನಶ್ಯಾಮ ಕ್ರಮೇಣ ಕಣ್ಣಿಗೆ ಕಾಣದಾಗುತ್ತಾನೆ. ಅವನು ಮಿರ್ಜಾನ್‌ನ್ನು ಬಿಟ್ಟು ಕುಮಟೆಗೆ ಹೋಗಿ ಮಗನ ಮನೆಯಲ್ಲಿ ನೆಲೆಸುತ್ತಾನೆ. ಆದರೂ ಅವನಿಗೆ ಪಡಸಾಲೆ ಮಾಸ್ತರರ ನೆನಪು ಹೋಗಿಲ್ಲ. ದ್ವೇಷ ಬಹುಶಃ ಕಡಿಮೆಯಾಗಿಲ್ಲ. ಮಾಸ್ತರರು ಸ್ಥಿತಪ್ರಜ್ಞರಾಗಿಯೇ ಉಳಿದಿದ್ದಾರೆ. ಅವನನ್ನು ಕಂಡು ಬರಬೇಕೆಂದು ರಸ್ತೆಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾರೆ. ಮಾಸ್ತರರ ಈ ನಿಲುವು ಬಹುಶಃ ಸಂಘರ್ಷದ ನಿಲುಗಡೆಯಾಗಬೇಕು.

ಆದರೆ ಈ ಸಂಘರ್ಷದ ತುದಿಗೆ ಮತ್ತೆ ನವಿಲು ನಿಂತಿದೆ. ಈ ಸಾರೆ ಅದು ಮುದಿಯಾದ ನವಿಲು. ಈ ನವಿಲಿನ ಕನ್ನಡಿಯಲ್ಲಿ ಮಾಸ್ತರರಿಗೆ ಬಹುಶಃ ಘನಶ್ಯಾಮನ ರೋಗಗ್ರಸ್ತವಾದ ಶರೀರ ಕಂಡಿರಬೇಕು. ನವಿಲು ಘನಶ್ಯಾಮನೇ? ಒಂದು ದೃಷ್ಟಿಯಿಂದ ಹೌದು. ನವಿಲಿನಂತೆ ಮಾಸ್ತರರು ಅವನನ್ನೂ ಕಾಪಾಡಿಕೊಂಡವರೇ. ಅವರು ಅವನಿಗೆ ಎಂದೂ ಕೇಡು ಬಗೆಯಲಿಲ್ಲ. ಘನಶ್ಯಾಮ ತಮ್ಮನ್ನು ದ್ವೇಷಿಸುತ್ತಾನೆಂದು ತಿಳಿದಿದ್ದರೂ ಅವರ ಮಗ ದಿಲೀಪನಿಗೆ ಅವರು ನಪಾಸು ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಅಂದರೆ ಘನಶ್ಯಾಮ ನವಿಲಿನಂತ ಅವರಿಂದ ಉಪಕೃತನಾದವನು. ‘ಬಹುಶಃ ಅವನ ದ್ವೇಷ ಹೆಚ್ಚಾಗಲು ಅದೇ ಕಾರಣವಿರಬೇಕು. ಘನಶ್ಯಾಮನನ್ನು ನೋಡಲು ಬಸ್ಸಿನ ದಾರಿ ಕಾಯುತ್ತಿದ್ದ ಅವರ ಕಣ್ಣಿಗೆ ಈ ಮುದಿನವಿಲು ಬೀಳುತ್ತದೆ.

ಈ ಮುದಿನವಿಲು ಪಡಸಾಲೆ ಮಾಸ್ತರರ ರಾಷ್ಟ್ರಪಕ್ಷಿ ಅಲ್ಲ, ಘನಶ್ಯಾಮನ ಬೇಟೆಯೂ ಅಲ್ಲ. ಅದು ಒಂದು ಪ್ರತೀಕ ಮಾತ್ರ. ಈ ದಣಿದ ನವಿಲು ಒಮ್ಮೆ ಮಾತ್ರ ಸಾಯುವ ಅಂಚಿನಲ್ಲಿರುವ ಘನಶ್ಯಾಮನನ್ನು ನೆನಪಿಸುತ್ತದೇನೋ ನಿಜ. ಆದರೆ ಇದಕ್ಕೆ ಬೇರೆ ಲಕ್ಷಣಗಳೂ ಇವೆ. ಅಘನಾಶಿನಿಯ ಮೇಲೆ ಸೇತುವೆ ನಿರ್ಮಾಣವಾಗಿ, ಹೈವೇ ಬಂದು, ಕೊಂಕಣ ರೇಲ್ವೆಯ ಕಾಮಗಾರಿ ನಡೆದಾಗಲೂ ಮಿರ್ಜಾನಿನ ಕೋಟೆಯನ್ನು ತೊರೆಯದ ಈ ನವಿಲು, ಪಡಸಾಲೆ ಮಾಸ್ತರರ ಪ್ರತೀಕವೂ ಆಗುತ್ತದೆ. ನವಿಲುಗಳನ್ನು ಓಡಿಸಿದಂತೆ, ಬೇಟೆಯಾಡಿದಂತೆ ಘನಶ್ಯಾಮ ಇವರನ್ನೂ ವರ್ಗ ಮಾಡಿಸಿದ. ಮಾಸ್ತರರ ಮಕ್ಕಳು ಹುಬ್ಬಳ್ಳಿಗೆ ಹೋಗಿ ನೆಲೆನಿಂತರು. ಅವರ ಹೆಂಡತಿಯೂ ಮಕ್ಕಳಿದ್ದಲ್ಲಿಗೆ ಹೋದಳು. ಆದರೆ ಮಾಸ್ತರರು ಮಾತ್ರ ಈ ಮುದಿ ನವಿಲಿನಂತೆ ಮಿರ್ಜಾನಿನ ನೆಲವನ್ನು ಕಟ್ಟಿಕೊಂಡು ಉಳಿದರು. ಈಗ ಮೊದಲಿನ ಲವಲವಿಕೆ ಅವರಲ್ಲಿ ಇಲ್ಲ. ಅವರ ಆರೋಗ್ಯ ಚನ್ನಾಗಿಯೇ ಇದೆ. ಆದರೆ ಸುತ್ತಲಿನ ಜಗತ್ತು ಬದಲಾಗಿದೆ. ಈಗ ಒಂದು ಬಸ್ಸು ನಿಲ್ಲುವದಿಲ್ಲ. ಮೊದಲಾಗಿದ್ದರೆ ಮಿರ್ಜಾನ್ ಅವರ ಹಿಡಿತದಲ್ಲಿತ್ತು. ನವಿಲುಗಳಂತೆ ಅವರ ವಿದ್ಯಾರ್ಥಿಗಳೂ ಆಜ್ಞಾಧಾರಕರಾಗಿದ್ದರು. ಜನ ಪರಿಚಿತರಾಗಿದ್ದರು. ಈಗ, ಬಸ್ ಸಿಗಲಿಲ್ಲವೆಂದು ಬೆವರೊರೆಸಿಕೊಳ್ಳುತ್ತ ನಿಂತ ಅವರನ್ನು ನೋಡಿ ನಗುವ ಜನ ಅವರಿಗೆ ಪರಿಚಿತರಲ್ಲ. ಹೀಗೆ ಬದಲಾದ ಕಾಲವನ್ನೂ ಕೂಡ ಈ ನವಿಲು ಪ್ರತಿಬಿಂಬಿಸುತ್ತದೆ.

ಆದರೆ ಕಾಲದ ಇನ್ನೊಂದು ವಿಚಿತ್ರ ಪ್ರಕ್ರಿಯೆಯೂ ಈ ಕತೆಯಲ್ಲಿ ಸೂಚಿತವಾಗಿದೆ. ಪಡಸಾಲೆ ಮಾಸ್ತರರು ಮತ್ತು ಘನಶ್ಯಾಮ ಇವರ ಸಂಘರ್ಷ ಮಿರ್ಜಾನಿಗೆ ಹಳೆಯ ಮಾತು. ಕಾಲ ಈ ಸಂಘರ್ಷವನ್ನು ಗುಡಿಸಿಹಾಕಿದೆ. ಆದರೆ ಕಾಲ ನಾಶ ಮಾಡುವದನ್ನು ಭಾಷೆ ಉಳಿಸಿಕೊಳ್ಳುತ್ತದೆ. ಕರ್ಣಾರ್ಜುನರ ಕಾಳಗ ನಡೆದು ಸಾವಿರಾರು ವರ್ಷಗಳಾಗಿ ಹೋಗಿದ್ದರೂ, ‘ಬಿಡುಬಿಡು ನಿನ್ನಯ ಪಾಶುಪತಾಸ್ತ್ರವ’ ಎಂಬ ಆ ಹಾಡು ಆ ಕಾಳಗದ ನೆನಪನ್ನು ಉಳಿಸಿಕೊಂಡಿದೆ. ಪಡಸಾಲೆ ಮಾಸ್ತರರು ಮತ್ತು ಘನಶ್ಯಾಮರ ಸಂಘರ್ಷದಲ್ಲಿ ಹಳೆಯ ಕಾಳಗ ಪುನರುಕ್ತವಾಗುತ್ತದೆ. ಅದೇ ಈ ಕತೆಯ ತಲೆಬರಹವಾಗಿದೆ.

 ಪ್ರೊ. ಕೀರ್ತಿನಾಥ ಕುರ್ತಕೋಟಿ (೧೩.೧೦.೧೯೨೮ ೩೧.೭.೨೦೦೩) ಅವರು ವಿದ್ವಾಂಸರಾಗಿ ಮತ್ತು ವಿಮರ್ಶಕರಾಗಿ ಗುರುತಿಸಿಕೊಂಡವರು. ಮನ್ವಂತರ ಎಂಬ ವಿಮರ್ಶೆಯ ನಿಯತಕಾಲಿಕೆಯ ಸಂಪಾದಕರಾಗಿದ್ದರು.  ಕಾವ್ಯ, ಹರಟೆ, ನಾಟಕ, ಅನುವಾದ ಕ್ಷೇತ್ರದಲ್ಲಿಯೂ ಕೆಲಸ ಮಾಡಿದವರು. ನವ್ಯಕಾವ್ಯ ಪ್ರಯೋಗ, ಯುಗಧರ್ಮ ಹಾಗು ಸಾಹಿತ್ಯದರ್ಶನ, ಯಶೋಧರ ಚರಿತ್ರೆಯ ಕಾವ್ಯತಂತ್ರ, ಅವರು ಬರೆದ ವಿಮರ್ಶಾ ಕೃತಿಗಳಲ್ಲಿ ಪ್ರಮುಖವಾದವು.  ಸ್ವಪ್ನ ವಾಸವದತ್ತೆ -ಭಾಸನ ಸಂಸ್ಕೃತ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉರಿಯ ನಾಲಿಗೆ ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ