ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ವಿಸ್ತಾರವಾದುದು. ಅವರಿಗೆ ದೊರೆತ  ತಿಳಿವಳಿಕೆಯು ಅರಣ್ಯಜನ್ಯವಾದುದು.  ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ಆದ್ದರಿಂದ ಅರಣ್ಯಗಳು ಉಳಿಯಬೇಕಾದರೆ ಇಂತಹ ಸಮುದಾಯಗಳು ಮತ್ತು ಅವುಗಳ ನಂಬಿಕೆ- ಆಚರಣೆಗಳು ಅಸ್ತಿತ್ವದಲ್ಲಿರುವುದು ಅತ್ಯವಶ್ಯಕ.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಪರಿಸರ ಕುರಿತ ಬರಹ

ಭಾರತವು ಪ್ರಕೃತಿಯನ್ನು ದೇವರಾಗಿ ಪರಿಗಣಿಸಿ, ಪ್ರಕೃತಿಯನ್ನೇ ಆರಾಧಿಸಿದ ದೇಶ. ಬದುಕಿಗೆ ಪೂರಕವಾದ ಪ್ರಕೃತಿಯನ್ನು ಆರಾಧಿಸುವುದಷ್ಟೇ ಅಲ್ಲ, ಅದು ವಿಧಿಸುವ ಸವಾಲುಗಳನ್ನು ಎದುರಿಸುತ್ತ, ಪ್ರಕೃತಿಗೆ ಶರಣಾಗಿ ಬದುಕುವುದು ನಮ್ಮ ಹಿರಿಯರು ಅನುಸರಿಸಿದ ನಡೆ.

‘ವನಸ್ಪತಿ ರಸೌಷಧಂ’ ಎಂಬ ಉಕ್ತಿಯಂತೆ ವನಮೂಲಿಕೆಗಳನ್ನೇ ಔಷಧವಾಗಿಸಿಕೊಂಡು, ಜಗತ್ತಿಗೇ ವೈದ್ಯಕೀಯ ತಿಳಿವಳಿಕೆಯನ್ನು ಒದಗಿಸಿಕೊಟ್ಟ ಹಿರಿಮೆ ನಮ್ಮ ದೇಶಕ್ಕೆ ಸಲ್ಲುತ್ತದೆ. ಪಂಚಭೂತಗಳಾದ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಎಲ್ಲದರ ಜೊತೆಗೂ ಭಾವನಾತ್ಮಕ ಬಂಧವನ್ನಿರಿಸಿಕೊಂಡು ಭಾರತೀಯ ಪರಂಪರೆ ರೂಪು ಪಡೆದಿದೆ. ಮಾನವ ಜನಾಂಗದ ಮೂಲ ಆವಾಸಸ್ಥಾನವಾಗಿದ್ದ ಅರಣ್ಯ ಪ್ರದೇಶಗಳು ಮಾನವ ಸಮಾಜಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಟ್ಟಿವೆ.

ನದಿಗಳನ್ನು ದೇವರೆಂದು, ವನಗಳನ್ನು ದೇವರಿರುವ ಜಾಗವೆಂದು ಭಾರತದ  ಎಲ್ಲ ಸಮುದಾಯಗಳು ಪೂಜಿಸುತ್ತ ಬಂದಿವೆ. ಧರ್ಮ ಮತ್ತು ಜಾತಿಯ ಗಡಿಯನ್ನು ಮೀರಿ, ನಮ್ಮ ಪೂರ್ವಜರು, ಜನಪದರು ಹಸಿರಿನ ಮಹತ್ವವನ್ನು ಎತ್ತಿಹಿಡಿದಿದ್ದರು.

‘ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||’ ಎಂಬ ಶ್ಲೋಕದಲ್ಲಿ ಉಲ್ಲೇಖವಾದ ರೀತಿಯಲ್ಲಿಯೇ ನೀರಿನ ಹನಿಹನಿಯನ್ನೂ ಪವಿತ್ರವಾಗಿ ಕಂಡ ಭಾರತೀಯರಿಗೆ ಪ್ರಕೃತಿಯ ಜೊತೆಗೆ, ಅರಣ್ಯದ ಜೊತೆಗೆ ಅವಿನಾಭಾವವಾದ ಸಂಬಂಧವಿತ್ತು.  ಪ್ರಕೃತಿಯ ಮಹತ್ವವನ್ನು ಸಾರಲು , ಹೀಗೆ ವೈಭವೀಕರಿಸುವ ಅನೇಕ ಕ್ರಮಗಳು ನಮ್ಮಲ್ಲಿವೆ. ಸಾಹಿತ್ಯದಲ್ಲಿಯೂ ಪ್ರಕೃತಿಯ ವೈಭವ ಬಹುವಾಗಿಯೇ ಇದೆ.  ಪ್ರಕೃತಿಯ ತೊಟ್ಟಿಲಲ್ಲಿಯೇ ಕುವೆಂಪು ತಮ್ಮ ಬರಹವನ್ನು ಬರೆದರು, ಪ್ರಕೃತಿಯ ಕುರಿತೂ ಸುಂದರವಾದ, ರಮ್ಯ ಸಾಹಿತ್ಯ ಸೃಷ್ಟಿಸಿದರು.

‘ನಾಟ್ಯ ಸಂಸ್ಕೃತಿ’ ಎನ್ನುವ ಲೇಖನದಲ್ಲಿ ಹಿರಿಯ ಸಾಹಿತಿ ಡಾ. ದೇ. ಜವರೇ ಗೌಡ ಅವರು ಅಭಿಪ್ರಾಯಪಟ್ಟಿರುವಂತೆ, “ಕಾಡಿನ ಒಡನಾಟದಲ್ಲಿದ್ದ ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಲೇ ನೃತ್ಯ, ಸಂಗೀತ ಮೊದಲಾದ ಕಲೆಗಳನ್ನು ರೂಪಿಸಿಕೊಂಡಿದ್ದಾನೆ. ನಿಸರ್ಗವೇ ಎಲ್ಲಾ ಕಲೆಗಳಿಗೂ ಗುರುವಾಗಿದೆ.” ಹೀಗೆ ಮಾನವ ಸಮಾಜದ ಅಭ್ಯುದಯದ ಎಲ್ಲಾ ಹಂತಗಳಲ್ಲಿಯೂ ಅರಣ್ಯ ಪರಿಸರ, ಅಲ್ಲಿಯ ಜೀವವೈವಿಧ್ಯದ ಪಾತ್ರ ಪ್ರಮುಖವಾಗಿದೆ. ಋಷಿ ಪರಂಪರೆಯಿಂದ ತೊಡಗಿ ತೀರಾ ಆಧುನಿಕವೆಂದು ಪರಿಗಣಿಸಲ್ಪಟ್ಟಿರುವ ಇಂದಿನ ಕಾಲಘಟ್ಟದವರೆಗೆ ಮನುಷ್ಯ ಬದುಕಿನಲ್ಲಿ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಅರಣ್ಯ ಪರಿಸರದ ಪ್ರಭಾವವಿದೆ. ಮಾನವ ಸಮಾಜದ ಭಾವನಾತ್ಮಕತೆ, ಆಧ್ಯಾತ್ಮಿಕತೆ, ಸಾಮಾಜಿಕತೆ, ಧಾರ್ಮಿಕತೆಗಳೆಲ್ಲವೂ ಅರಣ್ಯ ಸಂಸ್ಕೃತಿಯ ಜೊತೆಗೆ ಮಿಳಿತಗೊಂಡು, ಸಂಸ್ಕರಿತ ರೂಪದಲ್ಲಿ, ಪರಿಷ್ಕರಿಸಲ್ಪಟ್ಟ ಸ್ವರೂಪದಲ್ಲಿ ಪ್ರಕಟಗೊಂಡಿವೆ.

‘ಅರಣ್ಯ ಪ್ರದೇಶಗಳಿಲ್ಲದೆ ಮಾನವ ಜನಾಂಗಕ್ಕೆ ಅಸ್ತಿತ್ವವಿಲ್ಲ’ ಎನ್ನುವುದು ಸರಳ ಸತ್ಯವಾಗಿದೆ. ಆದರೆ ಈ ಸತ್ಯದ ಅರಿವಿದ್ದೂ, ಪ್ರಸ್ತುತ ಕಾಲಘಟ್ಟದ ಸಮಾಜವು ಅಭಿವೃದ್ಧಿಯ ನೆಪದಲ್ಲಿ ಅರಣ್ಯ ಪರಿಸರವನ್ನು ನಾಶಪಡಿಸುತ್ತಿದೆ. ಅಲ್ಲಿಯ ಜೀವ ವೈವಿಧ್ಯತೆಗಳ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಆಧುನೀಕರಣ, ನಗರೀಕರಣ, ಜಾಗತೀಕರಣ ಮೊದಲಾದ ಪ್ರಕ್ರಿಯೆಗಳು ಅರಣ್ಯ ಪರಿಸರದ ಅದಃಪತನಕ್ಕೆ ಎಡೆಮಾಡಿಕೊಡುತ್ತಿವೆ. ಅರಣ್ಯನಾಶದ ಪ್ರಕ್ರಿಯೆಯು ಪ್ರಸಕ್ತ ದಿನಗಳಲ್ಲಿ ಜಾಗತಿಕ ಸಮಸ್ಯೆಯಾಗಿ ಗುರುತಿಸಲ್ಪಟ್ಟಿದೆ. ಜಾಗತಿಕ ಹವಾಮಾನ ಬದಲಾವಣೆಯ ದೆಸೆಯಿಂದ ಮನುಷ್ಯನು ಪ್ರಕೃತಿಯ ಕುರಿತಾಗಿ ಮಾಡುವ ಪ್ರತಿಯೊಂದು ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಮಳೆಗಾಲದಲ್ಲಿ ಮಳೆಬಾರದೇ, ಬಿಸಿಲುಗಾಲದಲ್ಲಿ ಮಳೆ ನಿಲ್ಲದೇ ಜನರು ತತ್ತರಿಸುತ್ತಿರುವುದನ್ನು ನೋಡುತ್ತಿದ್ದೇವೆ.

ಪ್ರಪಂಚದ ಎಲ್ಲಾ ದೇಶಗಳೂ ಈ ಸಮಸ್ಯೆಗೆ ತುತ್ತಾಗಿವೆ. ಅಭಿವೃದ್ಧಿ ಪ್ರಕ್ರಿಯೆಯನ್ನೂ ನಡೆಸುತ್ತಾ, ಅರಣ್ಯ ಪರಿಸರ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಿಸುವುದು ನಿಜಕ್ಕೂ ಸವಾಲಿನ ವಿಷಯವಾಗಿದೆ.

ತುಳು ಜನಪದದಲ್ಲಿ ಒಂದು ಗಾದೆಯಿದೆ.  ‘ಕಪ್ಪೆನ್ ಕೆರ್‍ಂಡ ಅಪ್ಪೆನ್ ಕೆರಿಲೆಕ್ಕೊ’(ಕಪ್ಪೆಯನ್ನು ಕೊಂದರೆ ಅಮ್ಮನನ್ನು ಕೊಂದ ಹಾಗೆ) ಎನ್ನುವ ತುಳು ಮಾತನ್ನು ಗಮನಿಸಿಕೊಳ್ಳಬಹುದು. ಜೈವಿಕ ಚಕ್ರದಲ್ಲಿ ಪ್ರಧಾನ ಜೀವಿಯಾಗಿರುವ ಕಪ್ಪೆಯ ಮಹತ್ವವನ್ನು ನಮ್ಮ ಹಿರಿಯರು ಅರಿತುಕೊಂಡಿದ್ದರು. ಜೀವಜಾಲವನ್ನು, ಜೀವ ವೈವಿಧ್ಯತೆಯನ್ನು ಸಂರಕ್ಷಿಸಿ, ಮುಂದಿನ ತಲೆಮಾರಿಗೆ ರವಾನಿಸುವ ಪರಿಕಲ್ಪನೆ- ಆಶಯ ಅವರಲ್ಲಿತ್ತು. ಈ ಕಾರಣದಿಂದಲೇ ಇಂತಹ ಮಾತುಗಳ ಮೂಲಕ ಭವಿಷ್ಯದ ಜನಾಂಗವೆನಿಸಿಕೊಂಡಿರುವ ಮಕ್ಕಳಲ್ಲಿ ಜೀವಪ್ರೀತಿಯನ್ನು ಸೃಜಿಸುತ್ತಿದ್ದರು. ‘ಪಲ್ಲಿ ಕಪ್ಪೆ ಚಾಲಿಯೆನ್ ಏಪೊಲಾ ಕೆರಡ’(ಹಲ್ಲಿ, ಕಪ್ಪೆ, ಜೇಡವನ್ನು ಯಾವತ್ತಿಗೂ ಕೊಲ್ಲಬೇಡ) ಎನ್ನುವ ಮಾತನ್ನೂ ಇದೇ ನೆಲೆಯಿಂದ ಗುರುತಿಸಬಹುದಾಗಿದೆ. ಭಾವನಾತ್ಮಕತೆಯನ್ನು, ನಂಬಿಕೆಯನ್ನು ಹಿನ್ನೆಲೆಯಲ್ಲಿರಿಸಿಕೊಂಡ ಜೀವಪರವಾದ ನಿಲುವು ಭಾರತದ ಪಾರಂಪರಿಕ ವಿಶಿಷ್ಟತೆಯಾಗಿದೆ. ಈ ಬಗೆಯ ನಂಬಿಕೆ- ಭಾವನಾತ್ಮಕತೆಗಳು ದೇಶದ ಜೀವ ವೈವಿಧ್ಯತೆ ಹಾಗೂ ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಯ್ದುಕೊಳ್ಳುವಲ್ಲಿ ಹಲವಾರು ತಲೆಮಾರುಗಳಿಂದ ಪ್ರಧಾನ ಪಾತ್ರ ವಹಿಸಿವೆ.

‘ದೇವರ ಬನ’ ಹಾಗೂ ‘ನಾಗ ಬನ’ಗಳ ಅಸ್ತಿತ್ವವು ಅರಣ್ಯ ಪರಿಸರದ  ರಕ್ಷಣೆಯ  ಒಂದು ವಿಧಾನವಾಗಿದ್ದವು.  ದೇವರ ಹೆಸರಿನಲ್ಲಿ ಹಾಗೂ ನಾಗನ ಹೆಸರಿನಲ್ಲಿ ಅರಣ್ಯ ಪ್ರದೇಶಗಳನ್ನು ಗುರುತಿಸಲಾಗುತ್ತಿತ್ತು. ಇಂತಹ ದೇವರಬನ, ನಾಗಬನಗಳಿಂದ ಮರಗಳನ್ನು ಕಡಿಯುವಂತಿಲ್ಲ,  ಅಲ್ಲಿ ಬೇಟೆ ಆಡುವಂತಿಲ್ಲ. ಮರಗಳನ್ನು ಕಡಿದರೆ, ಇಲ್ಲವೇ ಬೇಟೆ ಆಡಿದರೆ ಕೆಡುಕು ಉಂಟಾಗುತ್ತದೆ, ಅಂತಹವರ ವಂಶವೇ ನಶಿಸಿಹೋಗುತ್ತದೆ ಎಂಬ ನಂಬಿಕೆಯನ್ನೂ ಇಟ್ಟುಕೊಳ್ಳಲಾಗಿತ್ತು. ನಿಯಮವನ್ನು ಮೀರಿ, ಕೆಡುಕನ್ನು ಅನುಭವಿಸಿದವರ ಉದಾಹರಣೆಯನ್ನೂ ನೀಡಲಾಗುತ್ತಿತ್ತು. ಇಂತಹ ನಂಬಿಕೆ ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ಪರೀಕ್ಷಿಸಿ ನೋಡುವುದಕ್ಕಿಂತಲೂ, ನಂಬಿಕೆಯ ಹಿಂದಿದ್ದ ಉದ್ದೇಶವನ್ನು ಅರ್ಥೈಸಿಕೊಳ್ಳಬೇಕಾದದ್ದು ತುಂಬಾ ಮುಖ್ಯ. ಜನರ ಆಸ್ತಿಕತೆಯನ್ನು ಕೇಂದ್ರೀಕರಿಸಿಕೊಂಡು ರೂಪಿಸಲಾಗಿರುವ ಪರಿಸರಪರವಾದ ನಿಯಮ ಇದಾಗಿತ್ತು. ಇವುಗಳು ಪಾರಂಪರಿಕ ನಂಬಿಕೆಗಳ ಆಧಾರದಲ್ಲಿ ರೂಪುಗೊಂಡ ‘ಮೀಸಲು ಅರಣ್ಯ ಪ್ರದೇಶ’ಗಳಾಗಿವೆ.

“ಕಾಡಿನ ಒಡನಾಟದಲ್ಲಿದ್ದ ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದ ಪ್ರಭಾವದಿಂದಲೇ ನೃತ್ಯ, ಸಂಗೀತ ಮೊದಲಾದ ಕಲೆಗಳನ್ನು ರೂಪಿಸಿಕೊಂಡಿದ್ದಾನೆ. ನಿಸರ್ಗವೇ ಎಲ್ಲಾ ಕಲೆಗಳಿಗೂ ಗುರುವಾಗಿದೆ.” ಹೀಗೆ ಮಾನವ ಸಮಾಜದ ಅಭ್ಯುದಯದ ಎಲ್ಲಾ ಹಂತಗಳಲ್ಲಿಯೂ ಅರಣ್ಯ ಪರಿಸರ, ಅಲ್ಲಿಯ ಜೀವವೈವಿಧ್ಯದ ಪಾತ್ರ ಪ್ರಮುಖವಾಗಿದೆ.

ಕರ್ನಾಟಕದ ಕರಾವಳಿ ಪ್ರದೇಶವನ್ನು ‘ಪರಶುರಾಮ ಸೃಷ್ಟಿಯ ಕ್ಷೇತ್ರ’ ಎನ್ನಲಾಗುತ್ತದೆ. ಪರಶುರಾಮ ಕೊಡಲಿಯನ್ನು ಬೀಸಿ, ಈ ಪ್ರದೇಶವನ್ನು ಸೃಷ್ಟಿಸಿದ ಎನ್ನುವ ನಂಬಿಕೆಯಿದೆ. ಕರಾವಳಿಯಲ್ಲಿ ಮಾತ್ರವಲ್ಲ ಅರಣ್ಯದಂಚಿನ ಗ್ರಾಮಗಳಲ್ಲಿ  ಇಂದಿಗೂ ಪರಂಪರಾನುಗತವಾದ ವೈದ್ಯ ಪದ್ಧತಿ(ಜನಪದ ವೈದ್ಯ ಪದ್ಧತಿ) ಚಾಲ್ತಿಯಲ್ಲಿದೆ. ಆಧುನಿಕ ಚಿಕಿತ್ಸಾ ವಿಧಾನಗಳಿಂದಲೂ ಗುಣಮುಖವಾಗದ ಅದೆಷ್ಟೋ ಕಾಯಿಲೆಗಳು ನಾಟಿ ಪಂಡಿತರ ಔಷಧಿಯಿಂದ ದೂರವಾದ ಉದಾಹರಣೆಗಳು ಸಾಕಷ್ಟಿವೆ. ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಔಷಧೀಯ ಸಸ್ಯಪ್ರಭೇದಗಳ ಸಂರಕ್ಷಣೆಯು ಇಂತಹ ನಾಟಿ ಪಂಡಿತರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಔಷಧ ನೀಡುವುದನ್ನು ಸೇವೆ ಎಂದು ಪರಿಗಣಿಸಿ, ಔಷಧೀಯ ಸಸ್ಯಗಳನ್ನು ಆಸ್ತಿಕ ಭಾವದಲ್ಲಿ ಗಮನಿಸಿಕೊಳ್ಳುವ ಮನೋಧರ್ಮ ಇವರಲ್ಲಿದೆ.

ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ಬೆರಗು ಮೂಡಿಸುತ್ತದೆ. ಇಂತಹ ತಿಳಿವಳಿಕೆಯು ಅರಣ್ಯಜನ್ಯವಾದುದಾಗಿದೆ. ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ಆದ್ದರಿಂದ ಅರಣ್ಯಗಳು ಉಳಿಯಬೇಕಾದರೆ ಇಂತಹ ಸಮುದಾಯಗಳು ಮತ್ತು ಅವುಗಳ ನಂಬಿಕೆ- ಆಚರಣೆಗಳು ಅಸ್ತಿತ್ವದಲ್ಲಿರುವುದು ಅತ್ಯವಶ್ಯಕವಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಅರಣ್ಯ ರಕ್ಷಣೆಯ ಕುರಿತು ಇನ್ನಷ್ಟು ವಿಸ್ತಾರವಾದ ವಿಷಯಗಳನ್ನು ಅಳವಡಿಸಿಕೊಂಡರೆ ಹಸಿರನ್ನು ಉಳಿಸಿಕೊಳ್ಳುವುದು ಸಾಧ್ಯವಾಗಬಹುದು. ಅರಣ್ಯ ಸಂಸ್ಕೃತಿಯ ಉಳಿಕೆ, ಬೆಳವಣಿಗೆಗೆ ಕಾರಣೀಭೂತವಾದ ಆದಿವಾಸಿ ಸಮುದಾಯಗಳ ಜೀವನಶೈಲಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಸಮುದಾಯದ ಜನರನ್ನು ಅನಾಗರಿಕರೆಂದು ಹೀಗಳೆಯುವ, ಕೀಳಂದಾಜಿಸುವ ಪ್ರವೃತ್ತಿಯನ್ನು ಕೊನೆಗಾಣಿಸಬೇಕು.

ನನ್ನ ಉಪನ್ಯಾಸಕರೊಬ್ಬರು ಹೇಳಿದ ಘಟನೆಯಿದು- ಅವರು ವಾಸವಿದ್ದ ಮನೆಯ ಸಮೀಪದಲ್ಲಿದ್ದ ಖಾಲಿ ಜಾಗವೊಂದು ಕಸದ ಆಗರವಾಗಿತ್ತಂತೆ. ಅಕ್ಕಪಕ್ಕದ ಗಲ್ಲಿಯ ಜನ ತ್ಯಾಜ್ಯಗಳನ್ನು ತಂದು ಸುರಿದು ಪ್ರತಿದಿನ ಸಹಿಸಲಸಾಧ್ಯವಾದ ವಾಸನೆ. ಪರಿಸರ ಹಾಳಾಗತೊಡಗಿತ್ತು. ಆಗಷ್ಟೇ ಬೆಳೆಯತೊಡಗಿದ್ದ ಗಿಡಗಳೂ ಕೂಡಾ ನಾಶವಾಗುವ ಹಂತ ತಲುಪಿದ್ದವಂತೆ.  ತ್ಯಾಜ್ಯ ಹಾಕಬೇಡಿ ಎಂದು ಎಷ್ಟೇ ಬಾರಿ ಹೇಳಿ ನೋಡಿದರೂ ಜನರ ನಡೆ ಬದಲಾಗಲಿಲ್ಲ. ಕೊನೆಗೆ ಉಪಾಯವೊಂದನ್ನು ಹೂಡಿದ ಇವರು ಆ ಜಾಗದಲ್ಲಿರುವ ಮರದಲ್ಲಿ ದೇವರು ನೆಲೆಸಿದ್ದಾನೆ. ಕಸ ಎಸೆದರೆ ದೇವರಿಗೆ ಮೈಲಿಗೆಯಾಗುತ್ತದೆ ಎಂದು ಫಲಕ ಹಾಕಿದ್ದರು.  ಆ ಜಾಗ ಇನ್ನಿಲ್ಲದಂತೆ ಶುಚಿಗೊಂಡಿತು.

ಮರಗಳನ್ನು ದೇವರ ಹೆಸರಿನಲ್ಲಿ ಪೂಜಿಸುವ ಪದ್ಧತಿ ಲಾಗಾಯ್ತಿನಿಂದಲೂ ಇದ್ದು, ಅಂತಹ ನಂಬಿಕೆಗಳ ಹಿಂದೆ ಬಲವಾದ ವೈಜ್ಞಾನಿಕ ಸಂಗತಿಗಳಿರುವುದು ನಿಜ. ಈ ಬಗೆಯ ಆಸ್ತಿಕತೆಯು ನಮ್ಮ ಪರಿಸರದ ಉಳಿಯುವಿಕೆಗೆ ನೆರವಾಗುವುದಾದರೆ ಅಂತಹ ನಂಬಿಕೆ- ಆಚರಣೆಗಳು ನಮ್ಮ ಬದುಕಿನ ಪ್ರಥಮ ಆದ್ಯತೆಯಾಗಬೇಕು  ಎಂದು ಅನಿಸುತ್ತದೆ.

ತೇಜಸ್ವಿಯವರು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ.  “ಪಕ್ಷಿಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೇ. ಪಕ್ಷಿಗಳು ಬದುಕಲಾರದ ಭೂಮಿಯಲ್ಲಿ ಮನುಷ್ಯನೂ ಬದುಕಲಾರ” ಎನ್ನುವ  ದೂರದೃಷ್ಟಿಯ ಮಾತುಗಳು ಅವರದ್ದಾಗಿತ್ತು.

ಸಹಜೀವಿಗಳ ಅಸ್ತಿತ್ವಕ್ಕೆ ತೊಡಕಾಗದಂತಹ, ಜೀವವೈವಿಧ್ಯತೆ ನಾಶವಾಗದಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಪರಿಸರವಾದಿ, ಚಿಂತಕರಾದ ನಾಗೇಶ ಹೆಗಡೆಯವರು ತಮ್ಮ ‘ಇರುವುದೊಂದೇ ಭೂಮಿ’ ಕೃತಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ತೇಜಸ್ವಿಯವರ ಆಶಯಕ್ಕೆ ಪೂರಕವಾಗಿದೆ.  “ಜೀವ ವೈವಿಧ್ಯವನ್ನು, ಕಾಡಿನ ಅನನ್ಯತೆಯನ್ನು ಕಾಪಿಟ್ಟುಕೊಳ್ಳಲಾಗದಿದ್ದರೆ ಮನುಷ್ಯ ತನ್ನ ಅಸ್ತಿತ್ವವನ್ನು ಬಹುಬೇಗ ಕಳೆದುಕೊಳ್ಳಲಿದ್ದಾನೆ”

ನಮ್ಮನ್ನು ನಾವು ಕಾಪಾಡಿಕೊಳ್ಳುವ ಸಲುವಾಗಿ ಈ ಅರಣ್ಯವನ್ನು ಕಾಪಾಡಬೇಕಾಗಿದೆಯೇ ಹೊರತು ಭೂಮಿಯನ್ನು ಕಾಪಾಡುವ ಸಲುವಾಗಿ ನಾವು ಕೆಲಸ ಕಾರ್ಯಗಳನ್ನು ಮಾಡಬೇಕಿಲ್ಲ. ಯಾಕೆಂದರೆ ಎಷ್ಟೊ ಕೋಟಿ ವರ್ಷಗಳಿಂದ ಭೂಮಿ ಅಸ್ತಿತ್ವದಲ್ಲಿದೆಯಲ್ಲವೇ.