ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬುದು ನಿಜವಾದರೂ, ಔದಾರ್ಯವು, ನೀಡುವವನ ಬದುಕನ್ನೆ ಕಸಿದುಕೊಳ್ಳುವಷ್ಟು ಅತಿಯಾಗಿ ಇರಬಾರದೇನೋ. ಜನಪದ ಕಥನ ಕಾವ್ಯವಾದ ‘ಚಿಕ್ಕೋಳು ಹಿರಿದಿಮ್ಮಿ’ಯಲ್ಲಿ ಮನುಷ್ಯರ ಔದಾರ್ಯ, ಪ್ರಾಣಿಗಳ ಪ್ರಾಮಾಣಿಕತೆಯ ಉತ್ತುಂಗದ ಪರಿಚಯವಾದಂತೆಯೇ, ಮನುಷ್ಯರು ಮೃಗಕ್ಕಿಂತಲೂ ಕೀಳಾಗಿ ವರ್ತಿಸುವ ಮತ್ತೊಂದು ಪಾತ್ರದ ಪರಿಚಯವೂ ಆಗುತ್ತದೆ. ಈ ಖಂಡಕಾವ್ಯದ ಕತೆಯನ್ನು ಹೇಳಿದ್ದಾರೆ ಲೇಖಕಿ ಸುಮಾವೀಣಾ.

ತಪ್ಪಾಗುತ್ತಿದೆ ಎಂದು ತಿಳಿದಿದ್ದರೂ, ತಪ್ಪನ್ನು ತಿದ್ದಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಿದರೂ ತಪ್ಪನ್ನು ತಿದ್ದಿಕೊಳ್ಳದೆ ಹೋದಾಗ, ತಾನೇ ಸಿಡಿದೇಳುವ ಜಾನಪದ ನಾಯಕಿ ಈ ಲೇಖನದ ನಾಯಕಿಯೂ ಕೂಡ. ಅಪಾಯದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆಯುವ, ಸಾಹಸಗಳನ್ನು ಮಾಡುವ, ಅನ್ಯಾಯದ ವಿರುದ್ಧ ಸಿಡಿದೇಳುವ ಹಿರಿದಿಮ್ಮಿ ಇಲ್ಲಿದ್ದಾಳೆ. ಜಿ.ಶಂ.ಪ ಅವರು ಸಂಪಾದಿಸಿರುವ ಖಂಡಕಾವ್ಯಗಳಲ್ಲಿ ‘ಚಿಕ್ಕೋಳೂ ಹಿರಿದಿಮ್ಮಿ’ ಕೂಡ ಒಂದು. ಈಕೆ ಎಲ್ಲರಿಗೂ ಚಿಕ್ಕವಳು. ಆದರೆ ಈಕೆಗೆ ಹಿರಿದಿಮ್ಮಿ (ಹಿರಿಯ+ತಿಮ್ಮಿ) ಎಂಬ ಮುದ್ದಿನ ಹೆಸರಿರುತ್ತದೆ.

ಈ ಕತೆಯಲ್ಲಿ ಹಿರಿದಿಮ್ಮಿ ದನಮೇಯಿಸುವಾಗ ಸುಸ್ತಾಗಿ ಆಲದ ಮರದ ಕೆಳಗೆ ಮಲಗಿರುತ್ತಾಳೆ. ಆ ಸಂದರ್ಭದಲ್ಲಿ ಅಲ್ಲಿಯೇ ಮರದ ಮೇಲೆ ಕುಳಿತಿದ್ದ ಬೇಡರ ಬೊಮ್ಮೆಲಿಂಗ ಎಂಬ ಚಿಕ್ಕ ಬಾಲಕನ ಪರಿಚಯ ಆಕೆಗಾಗುತ್ತದೆ. ದಿಢೀರನೆ ಆತನನ್ನು ಕಂಡ ಕೂಡಲೆ ಹಿರಿದಿಮ್ಮಿ ಹೆದರಿಕೆಯಿಂದ ಇನ್ಯಾರನ್ನೊ ಸಹಾಯಕ್ಕೆ ಕರೆಯಬಹುದಿತ್ತು. ಆದರೆ ಹಾಗೆ ಮಾಡದೆ ಧೈರ್ಯದಿಂದ ಅವನನ್ನು ಮಾತನಾಡಿಸಿದಾಗ

“ತಂದೆಯಿಲ್ಲ ನನಗೆ, ತಾಯಿಯಿಲ್ಲ ನನಗೆ ಪರದೇಶಿ ಕಂದಯ್ಯ…” ಎಂದು ದೈನ್ಯತೆಯಿಂದ ಪರಿಚಯ ಮಾಡಿಕೊಳ್ಳುತ್ತಾನೆ. ಉಡಲು ಬಟ್ಟೆಯಿಲ್ಲದ, ತಿನ್ನಲು ಅನ್ನವಿಲ್ಲದ, ಹೊದೆಯಲು ಹೊದಿಕೆಯಿಲ್ಲದ, ಮಲಗಲು ನೆರಳಿಲ್ಲದ ಬೊಮ್ಮೇಲಿಂಗನಿಗೆ ಹಿಟ್ಟು ಬಟ್ಟೆ ಕೊಟ್ಟು ಆಶ್ರಯ ನೀಡಿ ತನ್ನ ಮನೆಯ ದನಕಾಯುವ ಕೆಲಸ ನೀಡುತ್ತಾಳೆ. ಈ ಉಸಾವರು ನಿನಗೇಕೇ ಎಂದು ಅಣ್ಣ ಅತ್ತಿಗೆಯರು, ಊರವರು ಎಷ್ಟು ಹೇಳಿದರೂ ಕೇಳುವುದಿಲ್ಲ. ಅವರೆಲ್ಲರನ್ನು ಓಲೈಸಿ ನಿರ್ಗತಿಕನಿಗೆ ಆಸರೆಯಾಗುತ್ತಾಳೆ. ಹಿತವಚನ ಹೇಳಿದವರ ಮಾತು ಕೇಳದೇ, ತನ್ನ ಬದುಕಿನ ದುರಂತಕತೆಯ ಮೊಳಕೆ ಬೆಳೆಯಲು ಹಿರಿದಿಮ್ಮಿ ತಾನೆ ಕಾರಣವಾದಳು ಎನ್ನಬಹುದು.

ಇಲ್ಲಿ ಕಾಣುವ ಬೊಮ್ಮೇಲಿಂಗ ಮುಂದೆ ಆಗಬಹುದಾದ ಅನಾಹುತದ ಸೂಚನೆಯನ್ನೂ ನೀಡುತ್ತಾನೆ. ‘ಹಿರಿದಿಮ್ಮಿ’ ಅಪರಿಚಿತನನ್ನು ಕಂಡು ಬೆದರುವ ಬಾಲೆ ಆಗುವುದಿಲ್ಲ. ನಿಷ್ಕಲ್ಮಷ ಹೃದಯದಿಂದ ಆತನನ್ನು ನಂಬಿ ಆತನನ್ನು ಸಲಹಲು ತಯಾರು ಮಾಡುತ್ತಾಳೆ. ಆದರೆ ಬೊಮ್ಮೇಲಿಂಗ ಹಿರಿದಿಮ್ಮಿಯ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ. ಇವನೊಬ್ಬ ದುಷ್ಟ, ಖಳ. ಇವನನ್ನು ರಕ್ಷಿಸಿದರೆ ತನಗೆ ಅಪಾಯ ಎಂಬುದನ್ನು ಹಿರಿದಿಮ್ಮಿ ನಿರೀಕ್ಷೆ ಕೂಡ ಮಾಡುವುದಿಲ್ಲ.

ತಾನೇ ನೀಡಿದ ಅನ್ನ ತಿಂದವನು ಅತಿಯಾಗಿ ತನಗೆ ಮೋಸ ಮಾಡಲಾರ ಎಂಬ ಭ್ರಮೆಯಲ್ಲಿರುವ ಹಿರಿದಿಮ್ಮಿಯ ಈ ಕತೆಯು ಔದಾರ್ಯಕ್ಕೆ ಮಿತಿಯಿರಬೇಕು ಎಂಬ ಪಾಠವನ್ನು ಹೇಳುವಂತಿದೆ. ಏಳು ಮಂದಿ ಅಣ್ಣಂದಿರ ಪ್ರೀತಿಯ ತಂಗಿಯು ವೈಭವದ ಜೀವನ ಕಾಣುವುದು ಸಾಧ್ಯವಾಯಿತೇ.. ಎಂಬುದನ್ನು ವಿವರಿಸುವ ಜನಪದ ಕತೆಯಿತು.

ಹೀಗೆ ಒಂದು ದಿನ ಏಳು ಜನ ಅತ್ತಿಗೆಯಂದಿರು ಸ್ನಾನಮುಗಿಸುವುದು ತಡವಾದಾಗ ತನ್ನ ಏಳು ಜನ ಅಣ್ಣಂದಿರಿಗೆ ಊಟ ತೆಗೆದುಕೊಂಡು ಹೋಗುತ್ತಾಳೆ. ಅತ್ತಿಗೆಯರು ನಿರಾಕರಿಸಿದರೂ ಅವರ ಮಾತು ಕೇಳುವುದಿಲ್ಲ. ಹಾಗೆ ತೆರಳುವಾಗ, ಬೊಮ್ಮೇಲಿಂಗ ಮತ್ತೆ ಎದುರಾಗಿ ಅವಳ ಕೈ ಹಿಡಿದು ಅವಳ ಸೆರಗನ್ನು ಎಳೆಯಲು ಪ್ರಯತ್ನಿಸುತ್ತಾನೆ.

ಚಿಕ್ಕೋಳೆ ಹಿರಿದಿಮ್ಮವ್ವ
ಸಿಕ್ಕಿದೇನೆ ದಕ್ಕಿದೇನೆ
ಬೇಡರ ಬೊಮ್ಮೇಲಿಂಗ
ಸಿಕ್ಕಲಿಲ್ಲ ದಕ್ಕಲಿಲ್ಲ
ಬಿಡಯ್ಯ ನನ್ನ ಸೆರಗ
ನಮ್ಮ ಏಳು ಜನ ಅಣ್ಣಂದಿರು
ಏಳು ಏಟ ಹೊಡೆದಾರು
ತಲೆಯ ಚೆಂಡಾಡುತಾರೆ
ಎಂದಾಗ ಹಿರಿದಿಮ್ಮಿಗೆ ಇವನೊಬ್ಬ ಕಾಮ ಪಿಪಾಸು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಅವನಿಗೆ ಹೆದರುವ ಜಾಯಮಾನದವಳು ಹಿರಿದಿಮ್ಮಿ ಆಗಿರುವುದಿಲ್ಲ. ಉಡಾಫೆಯಾಗಿ ಇಲ್ಲವೆ ಗಂಭೀರವಾಗಿ ಅವನ ನಡವಳಿಕೆಯನ್ನು ತೆಗೆದುಕೊಳ್ಳುವುದಿಲ್ಲ. ‘ನನಗೆ ಏಳು ಜನ ಅಣ್ಣಂದಿರು, ನಿನಗೆ ಆಳಿಗೊಂದು ಏಟು ಹೊಡೆದರೂ ನೀನು ಏಳಲಾರೆ ನಾನು ಈ ವಿಷಯವನ್ನು ಅವರಲ್ಲಿ ಹೇಳಿದರೆ ನಿನ್ನ ತಲೆ ಚೆಂಡಾಡುತ್ತಾರೆ’ ಎಂದು ಎಚ್ಚರಿಸಿ, ‘ಅವಿವೇಕದಿಂದ ಹೀಗೆ ಮಾಡಿದ್ದಾನೆ ತಿದ್ದಿಕೊಳ್ಳುತ್ತಾನೆ’ ಎಂಬ ನಂಬಿಕೆಯಲ್ಲಿಯೇ ಇದ್ದು ಬಿಡುತ್ತಾಳೆ.

ತಂಗೀ ನಿನ್ನ ತಲೆಕೆದರಿರುವುದು ಯಾಕೆ ಎಂದು ಅಣ್ಣಂದಿರು ಕೇಳಿದಾಗ, ಏನೋ ಕರಡಿ ಅಡ್ಡಲಾಯಿತು ಎಂಬ ನೆಪ ಹೇಳಿ ಸುಮ್ಮನಾಗುತ್ತಾಳೆ. ಇಲ್ಲಿ ಬೊಮ್ಮೇಲಿಂಗ ಮುಂದೆ ಆಗಬಹುದಾದ ಅನಾಹುತದ ಸೂಚನೆಯನ್ನೂ ಮತ್ತೊಮ್ಮೆ ನೀಡುತ್ತಾನೆ. ಆದರೂ ನಿಷ್ಕಲ್ಮಷ ಹೃದಯದಿಂದ ‘ಆತ ತಪ್ಪನ್ನು ತಿದ್ದಿಕೊಳ್ಳುತ್ತಾನೆ’ ಎಂದು ತನಗೇ ಅಂದುಕೊಂಡುಬಿಡುತ್ತಾಳೆ. ಇಲ್ಲಿ ಹಿರಿದಿಮ್ಮಿಅಂಧವಿಶ್ವಾಸಿಯಾಗುತ್ತಾಳೆ. ಆದರೆ ಬೊಮ್ಮೇಲಿಂಗ ಹಿರಿದಿಮ್ಮಿಯ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ.

ಮನೆಗೆ ಬಂದು ಊಟದ ಕುಕ್ಕೆಯನ್ನು ಮನೆ ಹಿತ್ತಿಲ ಬಳಿ ಇಟ್ಟು ನುಗ್ಗೆ ಮರದ ಬಳಿ ಮಲಗುತ್ತಾಳೆ. ಅತ್ತಿಗೆಯರು ಹಿರಿದಿಮ್ಮಿ ಇಷ್ಟು ಹೊತ್ತಾದರೂ ಬಂದಿಲ್ಲ ಎಂದು, ಬಂದು ಹುಡುಕುವಾಗಲೆ ಅವಳು ಋತುಮತಿ ಆಗಿರುವ ವಿಷಯ ತಿಳಿಯುತ್ತದೆ. ಅತ್ತಿಗೆಯರು ಸಂಭ್ರಮದಿಂದಲೆ ಅಣ್ಣಂದಿರಿಗೆ ಹೇಳಿ ಕಳುಹಿಸಿ ಅವಳನ್ನು ಗುಡಲಿನಲ್ಲಿ ಕೂರಿಸಿ ತಾವು ಹಿರಿದಿಮ್ಮಿಯ ಗುಡಲಿನ ಬಳಿ ಮಲಗುತ್ತಾರೆ.

ಬೊಮ್ಮೇಲಿಂಗ ಅಲ್ಲಿಗೂ ಬಂದು ಹಿರಿದಿಮ್ಮಿಯನ್ನು ಕಾಡಲು ಪ್ರಾಂಭಿಸುತ್ತಾನೆ. ತನ್ನ ಮನಸ್ಸಿನ ಬಯಕೆಯನ್ನು ಆಕೆಯೊಂದಿಗೆ ಹಂಚಿಕೊಳ್ಳುವ ಸಲುವಾಗಿ ಕೊಬ್ಬರಿಯೊಂದನ್ನು ಎಸೆಯುತ್ತಾನೆ ಬೇಡರ ಬೊಮ್ಮೇಲಿಂಗ. ಹಿರಿದಿಮ್ಮಿ ಪ್ರತಿಭಟನೆ ಎಂಬಂತೆ ತಾನೂ ಕೊಬ್ಬರಿ ಎಸೆಯುತ್ತಾಳೆ. ರಭಸದಿಂದ ಕೊಬ್ಬರಿ ಎಸೆಯುವಾಗ ಆಕೆಯ ಕೈಬಳೆಗಳು ಸದ್ದು ಮಾಡಿದಾಗ, ಅದನ್ನು ಕೇಳಿದ ಅಣ್ಣಂದಿರಿಗೆ ಕೊಬ್ಬರಿಗೆ ಇರುವೆ ಮುತ್ತಿದ್ದವು, ಎನ್ನುತ್ತಲೇ ಭಂಡಧೈರ್ಯದಿಂದ ಬೊಮ್ಮೇಲಿಂಗನನ್ನು ಎಚ್ಚರಿಸುತ್ತಾಳೆ.

ಗುಡಿಲಿಗೆ ಎಸೆದಾನೆ
ಬೆಲ್ಲದ ಜಿಡ್ಡಿಗೆ ಗೊದ್ದಾವೆ ಮುತ್ತಿದೊ
ಗೊದ್ದಾವ ಕೆಡವಿದೆ ಗೆಜ್ಜೆಯ ಘಲಿರೆಂದೊ

ಆಗ ಅಣ್ಣಂದಿರು ಇದೇಕೆ ಎಂದಾಗ ಬೆಲ್ಲದುಂಡೆಯನ್ನು ಬೊಮ್ಮೇಲಿಂಗ ಎಸೆದ ಬಳಿಕ ಗೊದ್ದಗಳನ್ನು ಓಡಿಸಿದೆ ಎಂದು ಬೊಮ್ಮೆಲಿಂಗನನ್ನು ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತಾಳೆ. ಇಲ್ಲಿ ಹಿರಿದಿಮ್ಮಿಯ ಅಣ್ಣಂದಿರು ತಂಗಿಗೆ ಯಾವಾಗಲೂ ಬೆಂಗಾವಲಾಗಿಯೇ ಇರುತ್ತಾರೆ. ಆದರೆ ಅವರನ್ನೂ ದಿಕ್ಕುತಪ್ಪಿಸಿ ಬೊಮ್ಮೇಲಿಂಗನನ್ನು ಹಿರಿದಿಮ್ಮಿ ಉಳಿಸುತ್ತಾಳೆ.

ತಾನೇ ನೀಡಿದ ಅನ್ನ ತಿಂದವನು ಅತಿಯಾಗಿ ತನಗೆ ಮೋಸ ಮಾಡಲಾರ ಎಂಬ ಭ್ರಮೆಯಲ್ಲಿರುವ ಹಿರಿದಿಮ್ಮಿಯ ಈ ಕತೆಯು ಔದಾರ್ಯಕ್ಕೆ ಮಿತಿಯಿರಬೇಕು ಎಂಬ ಪಾಠವನ್ನು ಹೇಳುವಂತಿದೆ. ಏಳು ಮಂದಿ ಅಣ್ಣಂದಿರ ಪ್ರೀತಿಯ ತಂಗಿಯು ವೈಭವದ ಜೀವನ ಕಾಣುವುದು ಸಾಧ್ಯವಾಯಿತೇ..

ಏನೋ ಮಾಡಲು ಹೋಗಿ ಇನ್ನೇನೋ ಆದಂತೆ ಆಪತ್ತೆಂಬ ಮುಳ್ಳುಗಂಟಿಯನ್ನು ಬಗಲಲ್ಲೇ ಹಿರಿದಿಮ್ಮಿ ಪೋಷಿಸುತ್ತಿರುವುದು ಕಂಡುಬರುತ್ತದೆ.
ಹಿರಿದಿಮ್ಮಿಯ ಮದುವೆ ಬಾಲ್ಯದಲ್ಲಿಯೇ ನಡೆದಿರುತ್ತದೆ. ಬಾಲ್ಯವಿವಾಹವಾಗಿದ್ದ ಹಿರಿದಿಮ್ಮಿ ತಂದೆಯ ಮನೆಯಲ್ಲಿರುತ್ತಾಳೆ. ಆಕೆ ವಿವಾಹಿತೆ ಎಂಬುದನ್ನು ತಿಳಿದ ಬಳಿಕವೂ ಬೊಮ್ಮೇಲಿಂಗನ ವರ್ತನೆ ಮುಂದುವರೆಯುತ್ತದೆ.

ಋತುಮತಿಯಾದ ನಂತರ ಆಕೆಯ ಗಂಡನ ಮನೆಯವರನ್ನು ಕರೆಸಿ ಆಕೆಗೆ ಶೋಬನ ಕಾರ್ಯಮಾಡಿ ಒಂದು ತಿಂಗಳ ಆರೈಕೆಯ ಬಳಿಕ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಡಬೇಕಾದ ಸಂದರ್ಭ ಒದಗಿ ಬರುತ್ತದೆ.

ಬೇಕಾದ ಅಡಿಗ್ಯೂಟ ಮಾಡ್ಯಾರೆ ಬೇಗದಿಂದ
ಚಿಕ್ಕೋಳು ಹಿರಿದಿಮ್ಮವ್ನ ತಲೆಯನ್ನೆ ಬಾಚ್ಯಾರು
ಅರಿಸಿಣ ಕುಂಕುಮವಿಟ್ಟು ಹೊಸಸೀರೆ ಹೊಸ ರವಿಕೆ
ಇಟ್ಟಾರು ಬೇಗದಿಂದ ಏಳು ಜನ ಅತ್ತಿಗೇರ್ಗೆ
ಒಬ್ಬಳೆ ನಾದುನೀ ಅವರು ಮಾತನೇ ಆಡಿಕೊಂಡು
ಮಡಿಲಕ್ಕಿ ಹೂದಾರು
ಎಂಬಂತೆ ಸಂಭ್ರಮದಿಂದ ತವರು ಮನೆಯಿಂದ ಮಡಲಕ್ಕಿ ನೀಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಗಂಡನ ಮನೆಗೆ ಆಕೆ ಹೋಗುವಾಗ ತಾನು ಸಾಕಿದ ನಾಯಿಯನ್ನೂ ಕರೆದುಕೊಂಡು ಹೋಗುತ್ತಾಳೆ.

ಚಿಕ್ಕೋಳು ಹಿರಿದಿಮ್ಮವ್ವ
ಒಂದೂ ನಾಯನೆ ಸಾಕಿದ್ಲು
ನಾಯೂವೆ ಹೊರಟಿತು
ನಾಯೂವೆ ಹೋಗತದೆ
ಬೇಡರ ಬೊಮ್ಮೇಲಿಂಗ ಬೆನ್ನಾಡಿ ಹೋಗುತಾನೆ

ಹಿರಿದಿಮ್ಮಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿಯೂ ಆಕೆಯನ್ನು ಬೆನ್ನು ಹತ್ತಿದ ಬೇತಾಳನಂತೆ ಬೊಮ್ಮೇಲಿಂಗ ಕಾಡುತ್ತಾನೆ. ನಾಯಿಯನ್ನು ಬಲವಂತವಾಗಿ ಅಟ್ಟುವಂತೆ ಇವಳು ಬೊಮ್ಮೇಲಿಂಗನನ್ನು ಅಟ್ಟಬಹುದಿತ್ತು. ಆದರೆ ಮತ್ತೆ ಮತ್ತೆ ಕ್ಷಮಿಸುವ ಉದಾರತೆ ತೋರುತ್ತಾಳೆ. ಅಲ್ಲಿಯೂ ಕೂಡ ಬೊಮ್ಮೇಲಿಂಗನಿಗೂ ಊಟ ನೀಡುತ್ತಾಳೆ. ಆದರೆ ಆತ ತನ್ನ ಕೃತ್ರಿಮ ಬುದ್ಧಿಯನ್ನು ತೋರಿಸಿಬಿಡುತ್ತಾನೆ. ಕಾಮಾಂಧನಾಗಿ ಸಮಯ ಸಾಧಿಸಿ ಚಂದ್ರಾಯುಧದಿಂದ ಹಿರಿದಿಮ್ಮಿಯ ಗಂಡನನ್ನು ಕೊಂದುಬಿಡುತ್ತಾನೆ.

ಒಂದು ತುತ್ತು ಬಾಯಾಗೆ
ಒಂದು ತುತ್ತು ಕಯಾಗೆ
ಎರಡೇಯ ತುಂಡಿಗೆ
ಕಡಿದೇಯ ಬುಟ್ಟನಲ್ಲೋ

ಗಂಡನ ಪ್ರಾಣವನ್ನು ಅಪಹರಿಸಿದ ಬೊಮ್ಮೇಲಿಂಗನ ಮೇಲೆ ಹಿರಿದಿಮ್ಮಿಗೆ ಅಸಾಧ್ಯ ಕೋಪ ಬರುತ್ತದೆ.

ತಾನು ಸಾಕಿದ ನಾಯಿ ನನಗೆ ಬೊಗಳುವಂತಾಯಿತೆ … ಇನ್ನೆಂದೂ ಎತ್ತರಿಸಿಕೊಳ್ಳಲಾಗದ ನೋವನ್ನು ತಂದಿಟ್ಟಿತೇ- ಎಂದು ಏನೂ ಆಗಿಲ್ಲವೆಂಬಂತೆ ನಾಟಕವಾಡುತ್ತ ಧೈರ್ಯತಂದುಕೊಂಡು ವರ್ತಿಸುತ್ತಾಳೆ. ಹಿಂದೆಂದಿಗಿಂತಲೂ ಅತ್ಯಂತ ಜಾಗರೂಕಳಾಗಿ ತಾನೂ ಮೋಸದಾಟ ಆಡುತ್ತಾಳೆ. ಚೀರಾಡಿ ಬಿದ್ದು ಹೊರಳಾಡಿ ಅಲ್ಲೆ ಎದೆ ಒಡೆದುಕೊಂಡು ಸತ್ತು ಬಿಡುವಂತಹ ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ನಿಭಾಯಿಸುತ್ತಾಳೆ.

ನೀನೆಯ ಗಂಡ ಕಾಣೊ
ನಾನೆಯ ಹೆಂಡ್ತಿ ಕಾಣೊ
ಬೇಡರ ಬೊಮ್ಮೆಲಿಂಗ

ಎಂದು ಹೇಳಿ ಅವನನ್ನು ನಂಬಿಸಿ, ಆತ ಬುತ್ತಿಯನ್ನು ತಿನ್ನುತ್ತಿರುವಾಗಲೆ ಸಮಯಸಾಧಿಸಿ ಬೊಮ್ಮೇಲಿಂಗನ ತಲೆಯನ್ನು ಹಾರಿಸಿಬಿಡುತ್ತಾಳೆ. ಚತುರಮತಿಯಾಗಿ ಬೊಮ್ಮೇಲಿಂಗನನ್ನು ಕಡೆಯವರೆಗೂ ಹಿಮ್ಮೆಟ್ಟಿಸುತ್ತಲೇ ಕ್ಷಮಿಸುತ್ತಲೇ ಬಂದಿದ್ದಳು. ಆದರೆ ಕಡೆಗೂ ತನ್ನ ಹೀನ ಬುದ್ಧಿ ತೋರಿಸಿದ ಮೇಲೆ ಹಿರಿದಿಮ್ಮಿ ಆತನ ಮೇಲೆ ಸಿಡಿದೇಳಲೇ ಬೇಕಿತ್ತು. ಕಡೆಗೆ ಮನುಷ್ಯರೂಪಿ ಕೃತಘ್ನ ಮೃಗವನ್ನು ಕೊಂದೇ ಬಿಡುತ್ತಾಳೆ.

ಮನುಷ್ಯನಿಗಿಂತ ಮೃಗ ಎಷ್ಟೋ ವಿಷಯಗಳಲ್ಲಿ ಪ್ರಾಣಿಗಳು ಮಿಗಿಲು ಎಂಬಂತೆ ಹಿರಿದಿಮ್ಮಿ ಸಾಕಿದ ನಾಯಿ, ಅನ್ನ ಹಾಕಿದ ಒಡತಿಗಾದ ಆಪತ್ತನ್ನು ರಕ್ತದ ಮಡುವಿನಲ್ಲೆ ಒದ್ದಾಡಿ ಬಹುಬೇಗ ಹೋಗಿ ಹಿರಿದಿಮ್ಮಿಯ ಅಣ್ಣಂದಿರಿಗೆ ಸಂಜ್ಞೆಯ ಮೂಲಕ ಮಾಹಿತಿ ನೀಡುತ್ತದೆ. ಒಡತಿಯ ಮನೆಯ ಬಳಿ ಹೋಗಿ ವಿಚಿತ್ರ ಸದ್ದು ಮಾಡಿ ಅವರೆಲ್ಲರನ್ನು ಕರೆತರುತ್ತಿದ್ದರೆ, ಹಿರಿದಿಮ್ಮಿ ತನ್ನ ಗಂಡನ ರುಂಡವನ್ನು ತನ್ನ ಸೆರಗಿನಲ್ಲಿ ಕಟ್ಟಿಕೊಂಡು, ಬೊಮ್ಮೇಲಿಂಗನ ತಲೆಯನ್ನು ತನ್ನ ಕಾಲಿನಲ್ಲಿ ಒದ್ದುಕೊಂಡು ಬರುತ್ತಿರುತ್ತಾಳೆ. ಒಂದು ಕಾಲದಲ್ಲಿ ಅನ್ನ ಹಾಕಿದ ಕೈ ಈಗ ಕೊಲೆ ಮಾಡಬೇಕಾಗಿ ಬಂದಿದೆ.

ತನಗೂ ಚಿತೆ ತಯಾರು ಮಾಡಲು ತನ್ನ ಅಣ್ಣಂದಿರಿಗೆ ಹೇಳಿದರೆ, ಅವಳ ಅಣ್ಣಂದಿರು, ‘ನಾವು ಏಳು ಜನ ಅಣ್ಣಂದಿರು ಒಂದೊಂದು ತುತ್ತು ನೀಡಿದರೂ ನಿನ್ನ ಜೀವನ ನಡೆದು ಹೋಗುತ್ತದೆ, ನೀನು ಚಿತೆ ಏರಬೇಡ’ ಎನ್ನುತ್ತಾರೆ. ಅವಳನ್ನು ಸಮಾಧಾನ ಪಡಿಸುತ್ತಾ ನಾವು ಎಂಟು ಜನ ಅಣ್ಣ ತಮ್ಮಂದಿರು ಹುಟ್ಟಿದ್ದು ಎಂದು ತಿಳಿಯೋಣ ಎಂದೇ ಹೇಳಿದರೂ, ಆಕೆ ಸಮ್ಮತಿಸುವುದಿಲ್ಲ.

ಆಕೆ ಚಿತೆ ಏರುವಾಗ ಗಂಡನ ತಲೆಯನ್ನು ತನ್ನ ತಲೆಯ ಬಳಿ ಬೊಮ್ಮೇಲಿಂಗನ ತಲೆಯನ್ನು ತನ್ನ ಕಾಲಬಳಿ ಇರಿಸಿಕೊಂಡು ಚಿತೆ ಏರುತ್ತಾಳೆ. ಗಂಡನಿಗೆ ಆಕೆ ಉನ್ನತ ಸ್ಥಾನಕೊಟ್ಟರೆ ಬೊಮ್ಮೇಲಿಂಗ ಎಂಬ ನೀಚನಿಗೆ ಕಾಲಬಳಿ ಸ್ಥಾನ ಕೊಡುತ್ತಾಳೆ. ಔದಾರ್ಯವೇ ಉರುಳಾದದ್ದಕ್ಕೆ ಇದೊಂದು ಉದಾಹರಣೆ.

ಆದರೆ ಅಪಾಯದ ಸುಳಿವು ಮೊದಲಿಂದಲೂ ತಿಳಿದಿದ್ದ ಹಿರಿದಿಮ್ಮಿ ಕ್ಷಮಿಸುತ್ತಲೇ ಬಂದ್ದರಿಂದ ಹಿಗೆ ದುರಂತ ನಡೆಯುತ್ತದೆ. ಸಮಸ್ಯೆ ಚಿಕ್ಕದಿರುವಾಗಲೆ ಅವಳ ಅಣ್ಣಂದಿರಿಗೆ ಹೇಳಿದ್ದರೆ ಆ ಸಮಸ್ಯೆ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಹಿರಿದಿಮ್ಮಿಯ ಒಳ್ಳೆಯತನ ದುರುಪಯೋಗ ಆಗುತ್ತದೆ.

“ಪಗೆಯಮ್ ಬಾಲಕನೆಂಬರೆ” ಎನ್ನುವಂತೆ ಪರಸ್ತ್ರೀ ಮೇಲೆ ಕಣ್ಣಿಟ್ಟ ಕಾಮುಕ ಬೊಮ್ಮೇಲಿಂಗನಿಗೆ ಹಿರಿದಿಮ್ಮಿ ತಿದ್ದಿಕೊಳ್ಳಲು ನೀಡಿದ ಅವಕಾಶಗಳು ಅತಿಯಾದವೇನೋ ಅನ್ನಿಸುತ್ತದೆ. ಹೇಗಾದರೂ ಇವನು ಏನೂ ಮಾಡಲಾಗದು ಎಂಬ ತಾತ್ಸಾರ ಭಾವನೆ ತಳೆದ ಹಿರಿದಿಮ್ಮಿಯದು ತಪ್ಪು ನಿರ್ಧಾರ ಮಾಡಿರುತ್ತದೆ.