ಬೇಸಿಗೆ ರಜೆಯ  ಕುರಿತು ಅನೇಕ ಅಭಿಪ್ರಾಯಗಳಿವೆ.  ವರ್ಷ ಪೂರ್ತಿ ಬಿಡುವಿಲ್ಲದೇ ಪಾಠ ಪ್ರವಚನಗಳು ನಡೆದು, ಕೊನೆಗೆ ಪರೀಕ್ಷೆಗಳು ಬರುತ್ತವೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಲಿಸಿದರೆ ಮಾತ್ರ ಮಗು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತದೆ, ಅದಕ್ಕಾಗಿ ಹಗಲು ರಾತ್ರಿ ಒಂದು ಮಾಡಿ ಓದಿ ತಯಾರಿ ನಡೆಸಿದ ಮಗುವಿಗೆ ಒತ್ತಡ ಮತ್ತು ದಣಿವು ಉಂಟಾಗಿರುತ್ತದೆ. ಆ ಒತ್ತಡದಿಂದ ಹೊರಬರಲು ರಜೆ ಕೊಡುತ್ತಾರೆ. ಬೇರೆ ಹೊಸ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲೂ ಇದರಿಂದ ಸಹಾಯವಾಗುತ್ತದೆ ಎಂಬುದು ಒಂದು ವಾದ. ಅದೇನೇ ಇರಲಿ, ರಜೆಯ ಖುಷಿಯೇ ಶಾಲೆಯೊಳಗೇಕೆ ಬರಬಾರದು ಎಂದು ಅಚ್ಚರಿಪಡುತ್ತಾರೆ ಅರವಿಂದ ಕುಡ್ಲ.
ಗಣಿತ ಮೇಷ್ಟರ ಶಾಲಾ ಡೈರಿಯಲ್ಲಿ ಹೊಸ ಬರಹ  ಇಲ್ಲಿದೆ. 

ಶಾಲೆಗಳು ಮುಗಿದು ಈಗ ಬೇಸಿಗೆ ರಜೆ. ಪ್ರತಿ ವರ್ಷ ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಯಾಕೆ ಕೊಡಬೇಕು ಎಂದು ನಾನು ಯೋಚನೆ ಮಾಡುತ್ತಿದ್ದೆ. ಇದರ ಬಗ್ಗೆ ಕೆಲವರ ಅಭಿಪ್ರಾಯ ಹೀಗಿರುತ್ತಿತ್ತು. ಬೇಸಗೆ ಕಾಲ ಬಂದಾಗ ನೀರಿಗೆ ಸಮಸ್ಯೆಯಾಗುತ್ತದೆ, ಬಹಳ ಊರುಗಳಲ್ಲಿ ನೀರು ಸಿಗುವುದು ಕಷ್ಟವಾದಾಗ ಶಾಲೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ, ಹಾಗಾಗಿ ಬೇಸಗೆಯಲ್ಲಿ ಮಕ್ಕಳಿಗೆ ರಜೆ ನೀಡಲಾಗುತ್ತದೆ. ಬಿಸಿಲಿನ ಝಳಕ್ಕೆ ಮಕ್ಕಳು ಆಟವಾಡಿ ತೊಂದರೆ ಆಗದಿರಲಿ, ನೀರಿನ ಸಮಸ್ಯೆಯಿಂದ ಶಾಲೆ ನಡೆಸುವುದು ಕಷ್ಟವಾಗದಿರಲಿ ಅಂತ ಶಾಲೆಗಳಿಗೆ ರಜೆ ನೀಡಲಾಗುತ್ತದೆ ಎಂಬ ಕಾರಣವನ್ನು ಒಪ್ಪಲೇ ಬೇಕು ಅಲ್ಲವೇ.

ಇನ್ನೊಂದಿಷ್ಟು ಜನರ ಅಭಿಪ್ರಾಯ ಹೀಗಿತ್ತು. ಬೇಸಗೆ ಕಾಲದಲ್ಲಿ ಜನರಿಗೆ ಕೃಷಿಕೆಲಸ ಕಡಿಮೆ, ಹಬ್ಬಗಳು ಇರುವುದಿಲ್ಲ ಮತ್ತು ಮಳೆ ಬರುವುದಿಲ್ಲ ಎಂಬ ಕಾರಣಕ್ಕೆ ಊರಿನ ಜಾತ್ರೆ, ಮದುವೆ, ಮುಂಜಿ ಯಂತಹ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ. ಅವುಗಳಲ್ಲಿ ಮಕ್ಕಳು ಭಾಗವಹಿಸಿ ಸಂತೋಷ ಪಡಬೇಕು ಅಲ್ಲವೇ? ಹಾಗಾಗಿ ಇಂತಹ ಕೌಟುಂಬಿಕ ಮತ್ತು ಸಮುದಾಯದ ಸಮಾರಂಭಗಳು ನಡೆಯುವ ಈ ಬೇಸಗೆ ಕಾಲದಲ್ಲಿ ಶಾಲೆಗೆ ರಜೆ ನೀಡಲಾಗುತ್ತದೆ. ಈ ಉತ್ತರವನ್ನೂ ನಾನು ಒಪ್ಪಿದೆ.

ಮಕ್ಕಳು ಎಸ್.ಎಸ್.ಎಲ್.ಸಿ, ಅಥವಾ ಪಿ.ಯು.ಸಿ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಹೋಗಬೇಕಾದಾಗ, ಬೇರೆ ಊರಿನ ಶಿಕ್ಷಣ ಸಂಸ್ಥೆಯಲ್ಲಿ ಅಥವಾ ಬೇರೆ ದೇಶದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಬಯಸಿದರೆ, ಅಂತಹ ವಿದ್ಯಾ ಸಂಸ್ಥೆಗಳಲ್ಲಿ ದಾಖಲಾಗಲು ಪ್ರವೇಶ ಪ್ರಕ್ರಿಯೆ ಆರಂಭವಾಗುವ ಕಾಲಕ್ಕೆ ಮಗುವಿನ ಪಿ.ಯು.ಸಿ ಫಲಿತಾಂಶಗಳು ಬಂದು ತಾನು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೋ ಅದಕ್ಕೆ ಅರ್ಜಿ ಹಾಕಲು, ಪ್ರವೇಶ ಪರೀಕ್ಷೆ ಬರೆಯಲು, ದಾಖಲಾತಿಗೆ ಅನುಕೂಲವಾಗುವ ಉದ್ದೇಶದಿಂದ ಶಾಲಾ ಪರೀಕ್ಷೆಗಳು ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ಮುಗಿದು, ಫಲಿತಾಂಶ ಬಂದರೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಇದು ಇನ್ನೊಂದು ಕಾರಣ. ಈ ಕಾರಣವನ್ನು ನಾನೂ ಒಪ್ಪಿದೆ. ಇಂದು ನಮ್ಮ ಶಾಲಾ ಶಿಕ್ಷಣದ ಮುಖ್ಯ ಉದ್ದೇಶವೇ ಪ್ರತಿಯೊಬ್ಬರೂ ಒಂದು ಉದ್ಯೋಗ ಮಾಡಲು ಸಾದ್ಯವಾಗುವಂತಹ ಕೋರ್ಸ್ ಮಾಡುವುದು, ಆ ಮೂಲಕ ಆತ ತನ್ನ ಸಂಪಾದನೆಯ ದಾರಿಯನ್ನು ಕಂಡುಕೊಳ್ಳುವುದು ಅಲ್ಲವೇ.

ಇದಕ್ಕೆ ಪೂರಕವಾಗಿ ಬೇಸಗೆರಜೆಯನ್ನು ಯಾಕೆ ಕೊಡುತ್ತಾರೆ ಎನ್ನುವ ಬಗ್ಗೆ ಇನ್ನೊಂದು ಅಭಿಪ್ರಾಯ ಚೆನ್ನಾಗಿತ್ತು. ಅದೇನೆಂದರೆ, ವರ್ಷ ಪೂರ್ತಿ ಬಿಡುವಿಲ್ಲದೇ ಪಾಠ ಪ್ರವಚನಗಳು ನಡೆದು, ಕೊನೆಗೆ ಪರೀಕ್ಷೆಗಳು ಬರುತ್ತವೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಲಿಸಿದರೆ ಮಾತ್ರ ಮಗು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತದೆ, ಅದಕ್ಕಾಗಿ ಹಗಲು ರಾತ್ರಿ ಒಂದು ಮಾಡಿ ಓದಿ ತಯಾರಿ ನಡೆಸಿದ ಮಗುವಿಗೆ ಒತ್ತಡ ಮತ್ತು ದಣಿವು ಉಂಟಾಗಿರುತ್ತದೆ. ಆ ಒತ್ತಡದಿಂದ ಹೊರಬರಲು ರಜೆ ಕೊಡುತ್ತಾರೆ. ಬೇರೆ ಹೊಸ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲೂ ಇದರಿಂದ ಸಹಾಯವಾಗುತ್ತದೆ ಎಂಬುದು ಇನ್ನೊಂದು ಅಭಿಪ್ರಾಯ.

ಪರೀಕ್ಷೆ, ಅಂಕಗಳು, ಅದರ ಆದಾರದಲ್ಲೇ ಆಯ್ಕೆ. ಉತ್ತಮ ಅಂಕ ಪಡೆದರೆ ಕಡಿಮೆ ಫೀಸು, ಇಲ್ಲದಿದ್ದರೆ ಇಲ್ಲ ಸೀಟು ಎಂಬ ವ್ಯವಸ್ಥೆ ಮಗುವಿನ ಮೇಲೆ ಪರೀಕೆಯ ಒತ್ತಡವನ್ನು ಸೃಷ್ಟಿ ಮಾಡುತ್ತದೆ. ವರ್ಷವಿಡೀ ಕಲಿತದ್ದನ್ನು ವರ್ಷದ ಕೊನೆಯಲ್ಲಿ ನಡೆಯುವ ಪರೀಕ್ಷೆ ನಿರ್ಧರಿಸುವುದರಿಂದ, ಅದೆಲ್ಲವನ್ನೂ ಮತ್ತೊಮ್ಮೆ ನೆನಪಿಟ್ಟುಕೊಳ್ಳಬೇಕು ಮತ್ತು ಮೂರು ಗಂಟೆಯ ಪರೀಕ್ಷೆಯಲ್ಲಿ ಬರೆಯಬೇಕು ಎಂಬುದು ಖಂಡಿತ ಒತ್ತಡ ಉಂಟುಮಾಡುತ್ತದೆ. ಪರೀಕ್ಷೆಯಲ್ಲಿ ಯಾವ ಪಾಠದ ಯಾವ ಮೂಲೆಯಿಂದ ಪ್ರಶ್ನೆ ಕೇಳುತ್ತಾರೋ ಗೊತ್ತಿಲ್ಲ. ಹಾಗಾಗಿ ಎಲ್ಲ ಪಾಠಗಳ ಎಲ್ಲ ವಿಚಾರಗಳೂ ಆ ಕ್ಷಣಕ್ಕೆ, ಪರೀಕ್ಷಾ ಸಮಯಕ್ಕೆ ನೆನಪಿರಬೇಕು ಮತ್ತು ಹಾಗೆ ನೆನಪಿಟ್ಟುಕೊಂಡದ್ದನ್ನು ಹೇಳುವುದಲ್ಲ, ಉತ್ತರ ಪತ್ರಿಕೆಯಲ್ಲಿ ಬರೆದು ತೋರಿಸಬೇಕು. ಹಾಗೆ ಬರೆದ ಉತ್ತರವನ್ನು ಓದಿ, ಮೌಲ್ಯಮಾಪನ ಮಾಡುವವನಿಗೆ ಅರ್ಥವಾಗುವಂತೆ, ಚಂದದ ಅಕ್ಷರ, ಸರಿಯಾದ ಉತ್ತರ, ಸರಳ ನಿರೂಪಣೆ ಇದ್ದರೆ ಮಾತ್ರ ಉತ್ತಮ ಅಂಕ ಸಿಗುತ್ತದೆ. ಇಲ್ಲವೇ ಕಡಿಮೆ ಅಂಕ ಸಿಗುತ್ತದೆ. ಬರವಣಿಗೆ ರೂಪದ ಉತ್ತರವೇ ಪ್ರಧಾನವಾಗಿರುವ ಪರೀಕ್ಷೆಗೆ ಇರುವ ಮಿತಿ ಇದು.

ಹೀಗೆ ಬರವಣಿಗೆಯ ಉತ್ತರ ಬರೆಯಲು ಮಗುವಿನ ಕೈ ಮತ್ತು ಕಣ್ಣು ಸರಿಯಾಗಿ ಕೆಲಸ ಮಾಡಬೇಕು. ಮಗು ಪ್ರಶ್ನೆಗಳನ್ನು ಓದಿ, ಅರ್ಥಮಾಡಿಕೊಂಡು, ಮೆದುಳಿನಲ್ಲಿ ಉತ್ತರ ತಯಾರಿಸಿಕೋಡು ಅದನ್ನು ತನ್ನನ ಕೈಯಿಂದ ಬರೆಯಬೇಕು. ಅಕ್ಷರ ಚೆನ್ನಾಗಿದ್ದರೆ, ಉತ್ತರದ ವಾಕ್ಯ ರಚನೆ ಚೆನ್ನಾಗಿದ್ದರೆ, ಉತ್ತರದಲ್ಲಿ ವಿಷಯಗಳನ್ನು ಪೋಣಿಸವ ವಿಧಾನ ಚೆನ್ನಾಗಿದ್ದರೆ, ಉತ್ತಮ ಅಂಕ ಬರುತ್ತದೆ ಇಲ್ಲವೇ ಕಡಿಮೆ ಅಂಕ ಸಿಗುತ್ತದೆ.

ಬಹಳ ಊರುಗಳಲ್ಲಿ ನೀರು ಸಿಗುವುದು ಕಷ್ಟವಾದಾಗ ಶಾಲೆಯಲ್ಲಿ ಮಕ್ಕಳಿಗೆ ತೊಂದರೆಯಾಗುತ್ತದೆ, ಹಾಗಾಗಿ ಬೇಸಗೆಯಲ್ಲಿ ಮಕ್ಕಳಿಗೆ ರಜೆ ನೀಡಲಾಗುತ್ತದೆ. ಬಿಸಿಲಿನ ಝಳಕ್ಕೆ ಮಕ್ಕಳು ಆಟವಾಡಿ ತೊಂದರೆ ಆಗದಿರಲಿ, ನೀರಿನ ಸಮಸ್ಯೆಯಿಂದ ಶಾಲೆ ನಡೆಸುವುದು ಕಷ್ಟವಾಗದಿರಲಿ ಅಂತ ಶಾಲೆಗಳಿಗೆ ರಜೆ ನೀಡಲಾಗುತ್ತದೆ ಎಂಬ ಕಾರಣವನ್ನು ಒಪ್ಪಲೇ ಬೇಕು ಅಲ್ಲವೇ.

ನನ್ನ ಮಗು ಹೀಗೆ ಉತ್ತಮ ಅಂಕ ಗಳಿಸಿ, ಉನ್ನತ ವ್ಯಾಸಂಗ ಮಾಡಿ, ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಹತ್ತನೇ ಅಥವಾ ಹನ್ನೆರಡನೇ ತರಗತಿಯಲ್ಲಿ ತಯಾರು ಮಾಡಿದರೆ ಸಾಲದು, ಒಂದನೇ ತರಗತಿಯಿಂದಲೇ ಅಲ್ಲ, ಪ್ರೀ ಕೇಜಿ ಯಿಂದಲೇ ತಯಾರು ಮಾಡಬೇಕು ಎಂಬ ಮನೋಭಾವ ಇಂದು ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣಸಿಗುತ್ತದೆ. ಇನ್ನೂ ಮೂಳೆ, ಮಾಂಸ, ನರಗಳು ಸರಿಯಾಗಿ ಬೆಳೆಯದ, ಆಟ ಆಡಬೇಕಾದ ಎಳೆಯ ಕೈಗಳಿಗೆ ಬರವಣಿಗೆಯ ಒತ್ತಡ ಕೊಟ್ಟರೆ ಏನಾಗಬಹುದು ಎಂದು ಹಲವಾರು ಶಿಕ್ಷಣ ತಜ್ಷರು ಈಗಾಗಲೇ ಹೇಳಿದ್ದಾರೆ. ಆರು ವರ್ಷದ ಒಳಗಿನ ಮಕ್ಕಳಿಗೆ ಬರೆಯಬೇಕು, ಹೋಂ ವರ್ಕ್ ಮುಗಿಸಬೇಕು ಎಂಬ ಒತ್ತಡ ಹಾಕಿದರೆ, ಕಲಿಕೆಯ ಬಗ್ಗೆ ಜಿಗುಪ್ಸೆ, ಭಯ, ಆತಂಕ, ಒತ್ತಡ ಉಂಟಾಗುವ ಎಲ್ಲ ಸಾಧ್ಯತೆಗಳೂ ಇವೆ. ಆರು ವರ್ಷದ ವರೆಗೆ ಮಕ್ಕಳು ಸಹಜವಾಗಿ ಆಡುತ್ತಾ ಪ್ರಕೃತಿಯ ಜೊತೆ ಬೆಳೆಯಬೇಕಾದ ಕಾಲ, ಅವರು ಸಹಜವಾಗಿ ಹಲವು ವಿಷಯಗಳನ್ನು ಕಲಿಯುತ್ತಾರೆ.

ಬಹುಷಃ ಈ ಕಾರಣಕ್ಕಾಗಿಯೇ ಪರೀಕ್ಷೆಗಳು ಮುಗಿದ ನಂತರ, ಒತ್ತಡಮುಕ್ತ ವಾತಾವರಣದಲ್ಲಿ ಆಟವಾಡಲು, ಹಾಡಿ, ಕುಣಿದು ಕುಪ್ಪಳಿಸಲು ಬೇಸಗೆ ಸಿಬಿರಗಳನ್ನು ಮಾಡುತ್ತಾರೆ. ಅಲ್ಲಿ ಯಾವುದೇ ಒತ್ತಡ ಅಥವಾ ನಿರ್ಬಂಧಗಳಿಲ್ಲದೇ, ಆಡುವ, ಹಾಡುವ, ಕುಣಿಯುವ, ಕಿರುಚುವ, ಓಡುವ, ನೆಗೆಯುವ, ಕುಪ್ಪಳಿಸುವ, ಮಕ್ಕಳನ್ನು ನೋಡಿದಾಗ ಬಹಳ ಸಂತೋಷವಾಗುತ್ತದೆ.

ಬೇಸಗೆ ರಜೆಯು ಬಂದಿತು ಎಂದರೆ
ಮಕ್ಕಳ ಪಾಲಿಗೆ ಅದು ಹಬ್ಬ,
ಅಜ್ಜಿಯ ಮನೆಗೆ ಲಗ್ಗೆಯ ಇಟ್ಟರೆ
ಅಲ್ಲಿಯ ಕಲರವ ಅಬ್ಬಬ್ಬ 

ಎಂಬ ಮಕ್ಕಳ ನಾಟಕವೊಂದರ ಹಾಡು ಸದಾ ನೆನಪಾಗುತ್ತದೆ. ಬೇಸಗೆ ಶಿಬಿರದಲ್ಲಿ ಪರೀಕ್ಷೆ ಇಲ್ಲ, ಅಲ್ಲಿ ಕಲಿತದ್ದನ್ನು ನೆನಪಿಡಬೇಕು, ಅಂಕ ಗಳಿಸಬೇಕು, ಎನ್ನುವ ಒತ್ತಡ ಇಲ್ಲ. ಆದರೂ ಮಕ್ಕಳು ತಮಗೆ ಇಷ್ಟವಾದುದ್ದನ್ನು ಕಲಿಯುತ್ತಾರೆ. ಆವೆ ಮಣ್ಣು ಸಿಕ್ಕರೆ ಕೆಲವು ಮಕ್ಕಳು ಗಂಟೆಗಟ್ಟಲೇ ಅದರಲ್ಲಿ ತಮ್ಮ ಕಲ್ಪನೆಯನ್ನು ಮೂಡಿಸುತ್ತಾ ಸಮಯವನ್ನು ಮರೆಯುತ್ತಾರೆ, ಪೇಪರ್ ಮತ್ತು ಬಣ್ಣ ಸಿಕ್ಕಿದರೆ ಬಣ್ಣಗಳ ಒಳಗೆ ಮುಳುಗಿ ತಮ್ಮನ್ನೇ ಮರೆತುಬಿಡುತ್ತಾರೆ. ಆಟವಾಡಲು ಒಳ್ಳೆಯ ಜೊತೆ ಸಿಕ್ಕರೆ ಊಟದ ಪರಿವೆಯೂ ಇರುವುದಿಲ್ಲ. ದೈಹಿಕ ಚಟುವಟಿಕೆ ಮಾಡಲು ಸ್ವಲ್ಪವೂ ಆಯಾಸ ಎನ್ನುವುದೇ ಇರುವುದಿಲ್ಲ.

ಕಥೆ ಕೇಳುವುದು ಎಂದರೆ ಹಲವು ಮಕ್ಕಳಗೆ ಬಹಳ ಇಷ್ಟದ ಕೆಲಸ. ರಂಗು ರಂಗಾದ ಕಥೆಯನ್ನು ಕೇಳುವಾಗ ಮಕ್ಕಳ ಮುಖದಲ್ಲಿ ಮೂಡುವ ಹೊಳಪನ್ನು ನೋಡುವ ಆಸೆಯಿಂದಲೇ ನಾನೂ ಮಕ್ಕಳ ಜೊತೆ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುತ್ತೇನೆ. ಡೋಲು, ತಮಟೆ ಏನಾದರೂ ಸಿಕ್ಕರೆ ಅದನ್ನು ಬಾರಿಸುತ್ತಾ, ನಾದ ಹೊಮ್ಮಿಸುತ್ತಾ ಅವರು ಖುಷಿ ಪಡುವುದನ್ನು ನೋಡುವುದೇ ಚಂದ. ಹಾಡು ಕುಣಿತ, ಸಂಗೀತಗಳಿದ್ದರೆ ಯಾವ ಕಥೆಯನ್ನೂ ನಾಟಕ ಮಾಡಿ ತೋರಿಸಿ ಬಿಡುತ್ತಾರೆ. ತಾವೇ ಪಾತ್ರವಾಗಿ ಸಂತೋಷ ಪಡುತ್ತಾರೆ. ವಯಸ್ಸಿನ ಬಂಧನ ಇಲ್ಲದೇ ಎಲ್ಲರೂ ಸೇರಿ ಸಂತೋಷ ಪಡುವುದು ಮತ್ತು ಹಾಗೆ ಸಂತೋಷ ಪಡುತ್ತಾ ಕಲಿಯುವುದೂ ಸಾಧ್ಯ ಅನ್ನಿಸುತ್ತದೆ. ಕಲಿಕೆಗೆ ವಯಸ್ಸು, ಸಿಲೆಬಸ್, ಪಾಠಪುಸ್ತಕ ಇದ್ಯಾವುದರ ಹಂಗೂ ಇಲ್ಲ. ಅದಿಲ್ಲದೆಯೂ ಕಲಿಯಲು ಸಾಧ್ಯ. ಸಂತೋಷದಿಂದ ಅನುಭವಿಸಿ ಕಲಿತದ್ದನ್ನು ನಾವೆಂದೂ ಮರೆಯಲು ಸಾದ್ಯವಿಲ್ಲ. ಅನುಭವಗಳು ನೆನಪಾಗಿ ಸದಾ ನಮ್ಮ ಜೊತೆಗೇ ಇರುತ್ತವೆ. ಅನುಭವದ ಮುಂದೆ ಅಂಕಗಳು ಕೇವಲ ಸಂಖ್ಯೆಗಳು ಅಷ್ಟೇ.

ಕಾರ್ಖಾನೆಯ ಕೆಲಸಗಾರರಂತೆ ಸಮವಸ್ತ್ರ ಧರಿಸಿ, ಬೆಳಗ್ಗೆಯಿಂದ ಸಂಜೆಯ ವರೆಗೆ ತಮ್ಮ ಜಾಗಗಳಲ್ಲಿ ಕುಳಿತು, ಟೀಚರ್ ಹೇಳಿದ್ದನ್ನು ಕಲಿತುಕೊಂಡು, ಪ್ರಶ್ನೆಗೆ ಉತ್ತರಿಸಿ, ಹಸಿವಾಗದಿದ್ದರೂ ಊಟದ ಸಮಯಕ್ಕೆ ಊಟ ಮಾಡಿ, ಬೆಲ್ ಹೊಡೆದಾಗ ಸಾಲಾಗಿ ನಿಂತು, ಫೀಡ್ ಮಾಡಿದ ಪ್ರೋಗ್ರಾಂಗೆ ಸರಿಯಾಗಿ ಕೆಲಸ ಮಾಡುವ ರೋಬೋಟ್ಗಳನ್ನು ತಯಾರಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಆಗಾಗ ಹುಟ್ಟುತ್ತದೆ.
ಶಾಲೆಗಳೂ ಯಾಕೆ ಬೇಸಗೆ ಶಿಬಿರಗಳಂತೆ ಬಂಧನಗಳಿಂದ ಮುಕ್ತವಾಗಿರಬಾರದು ?