ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ತನ್ನ ಜೀವಿತಾವಧಿಯಲ್ಲಿ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಸಿಂಹದ ಮುಂದೆ ಜಿಂಕೆ ಹೋರಾಡಿದಂತೆ! ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮಧ‍್ಯೆ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹೊಸ ಕಂತು.

ಮನುಷ್ಯ ಹುಟ್ಟಿ ಬೆಳೆದ ಕಾಲಮಾನ ಸಮನಾಂತರವಾಗಿದ್ದರೂ ಅವರ ಜೀವನ ಕ್ರಮಗಳು ತುಂಬ ಏರುಪೇರಾಗಿರುತ್ತವೆ. ಇಲ್ಲಿ ಬಿದ್ದಿದ್ದ ಬದುಕು ಮತ್ತೆಲ್ಲೊ ತೇಲಿ ಹೋಗಿರುತ್ತದೆ. ಗುಂಡುಕಟ್ಟಿ ಮುಳುಗಿಸಿದ್ದ ಜೀವನ ಹೇಗೊ ತೇಲಿಬಿಡುತ್ತದೆ. ಆಯಸ್ಸು ಹಾಗಲ್ಲ. ಅಷ್ಟೆಲ್ಲ ಕಷ್ಟಗಳಲ್ಲಿ ಮುಳುಗಿದ್ದರೂ ನಾನು ಎದ್ದು ಮೈಸೂರು ಸೇರಿದ್ದೆ. ತರ್ಕಕ್ಕೆ ಮೀರಿ ಬಚಾವಾಗಿದ್ದೆ. ಕೊಲ್ಲುವ ಕೈಗಳಿಂದ ಪಾರಾಗಿದ್ದೆ. ಅದಾಗಲೇ ನನ್ನ ತಾಯ ಹೆಣವ ಸುಟ್ಟು ಹಾಕಲಾಗಿತ್ತು. ಕಾಲ ಯಾರನ್ನೂ ಅಲ್ಲೇ ಬಿಟ್ಟು ಹೋಗಿರುವುದಿಲ್ಲ. ಹಲವರು ಅಲ್ಲೇ ಕೂತುಬಿಟ್ಟಿರುತ್ತಾರೆ. ಕಾಲದ ಜೊತೆ ತೂರಿ ಹೋಗಿದ್ದೆ. ನಾನಾಗ ಮೈಸೂರಿನ ಮಹರಾಜ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದೆ. ನಮ್ಮ ತಾತನಿಗೆ ಐದು ಜನ ಗಂಡು ಮಕ್ಕಳು ಪ್ರತಿಯೊಬ್ಬರೂ ಒಂದೊಂದು ತರ. ಮಕ್ಕಳಿಗೆ ವಿದ್ಯೆ ಕಲಿಸಿ ಜಾತಿ ಶಾಪದಿಂದ ವಿಮೋಚನೆ ಮಾಡಬೇಕು ಎಂಬುದು ಅವನ ಸಂಕಲ್ಪ. ಅವನೇ ಓದು ಬರಹವನ್ನು ಅರೆಬರೆಯಾಗಿ ಐಯ್ನೋರಿಗೆ ಸೇವೆ ಮಾಡಿ ಕಲಿತಿದ್ದ. ತಾತನಿಗೆ ಸಂಪತ್ತು ಸಾಕಷ್ಟು ಇತ್ತು. ಹಾಗಾಗಿ ಅಪ್ಪ ನಗರಗಳತ್ತ ಹೋಗಿ ನೌಕರಿ ಬೇಡಿರಲಿಲ್ಲ. ಆಗ ಅವನ ಪ್ರಕಾರ ಸರ್ಕಾರಿ ಕೆಲಸ ಗುಲಾಮಿಯ ಗೇಮೆಯಾಗಿತ್ತು. ತಾತನ ಹೊಲವೇ ಸಾಕಾಗಿತ್ತು. ದುಡ್ಡಿಗೆ ಬರವೇ ಇರಲಿಲ್ಲ. ತಾತನ ಐದೂ ಗಂಡು ಮಕ್ಕಳಲ್ಲಿ ಹಿರಿಯವನು ಶಿವರುದ್ರ. ಆ ಕಾಲಕ್ಕೆ ಆತ ಮೈಸೂರಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್. ಇಬ್ಬರು ತಮ್ಮಂದಿರ ಕರೆದೊಯ್ದು ಬಿ.ಎ. ಓದಿಸಿದ್ದ. ಆ ಕಾಲಕ್ಕೆ ನಮ್ಮೂರ ಸೀಮೆಯಲ್ಲಿ ಅಷ್ಟು ಓದಿದ್ದವರೇ ಅಪರೂಪ. ಇಷ್ಟಪಟ್ಟು ಅವರಿಬ್ಬರೂ ಪೋಲೀಸ್ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಅದು ದೊಡ್ಡ ಕೆಲಸ. ಹಳ್ಳಿಯ ಬೇರುಗಳೆ ಸರಿಯಾಗಿ ಅವರಿಗೆ ಗೊತ್ತಿರಲಿಲ್ಲ. ಅಷ್ಟು ಸುಖವಾಗಿ ಬೆಳೆದಿದ್ದರು. ನನ್ನ ತಮ್ಮನನ್ನು ದತ್ತು ತೆಗೆದುಕೊಂಡಿದ್ದರಲ್ಲವೇ; ಅವನು ಕೂಡ ದೊಡ್ಡಣ್ಣನ ಮನೆಯಲ್ಲಿ ಬೆಳೆಯುತ್ತಿದ್ದ. ಸಂತೋಷ ಸಂಭ್ರಮ ಅವರ ಹಳೆ ಕಾಲದ ಬಂಗಲೆಯಲ್ಲಿ ಅವರಿಗೆ ಹೆದರಿಕೊಂಡು ಬಿದ್ದತ್ತು. ಅಪರೂಪಕ್ಕೆ ತಾತ ನನ್ನನ್ನು ಆ ಬಂಗಲೆಗೆ ಕರೆದೊಯ್ಯುತ್ತಿದ್ದ. ಯಾರೂ ನನ್ನನ್ನು ಲೆಕ್ಕಿಸುತ್ತಿರಲಿಲ್ಲ. ನನ್ನನ್ನು ವಿಚಾರಿಸಿ ಮಾತಾಡಿಸುವ ಅಗತ್ಯವಾದರು ಅವರಿಗೆ ಏನಿತ್ತು… ಮೈಸೂರು ನೋಡಬೇಕು ಎಂಬುದು ನನ್ನ ಸುಖ. ಆದರೆ ಆ ಮನೆಯ ಯಾರನ್ನೇ ಕಂಡರೂ ಭಯ. ಏನು ತಪ್ಪು ಮಾಡಿ ಬಿಡುವೆನೊ ಎಂದು ಚಡಪಡಿಸುತ್ತಿದ್ದೆ. ಯಾವಾಗಲೂ ತಾತನ ಬೆನ್ನ ಹಿಂದೆಯೆ ಇರುತ್ತಿದ್ದೆ. ಅವರ ಜೊತೆ ಕೂತು ತಾತ ಮಾತಾಡುವಾಗ ಅವನ ಬೆನ್ನನ್ನೆ ಮರೆ ಮಾಡಿಕೊಂಡು ತಲೆ ತಗ್ಗಿಸಿ ಜೋರಾಗಿ ಉಸಿರಾಡದೆ ಕೂತಿರುತ್ತಿದ್ದೆ. ದೊಡ್ಡಣ್ಣ ಅಪ್ಪನಷ್ಟೇ ಕೋಪಿಷ್ಟ. ಅವನೂ ಕುಡಿಯುತ್ತಿದ್ದ.

ದೊಡ್ಡಣ್ಣನ ಹೆಂಡತಿ ಕರೆದು; ‘ಹೇ ಮರೀ; ಅಲ್ಲಿ ಹೊತಗೆ ಪಾತ್ರೆಗಳನೆಲ್ಲ ನೆನೆಹಾಕಿದ್ದೀನಿ. ತೊಳೆದುಕೊಂಡು ಬಾರೊ’ ಎನ್ನುತ್ತಿದ್ದಳು. ಆಕೆ ನನ್ನ ಹೆಸರನ್ನೆ ಕರೆಯುತ್ತಿರಲಿಲ್ಲ. ಮರೀ ಎಂದರೆ ಆಳಿಗೆ ಸಮಾನ ಅವಳ ಲೆಕ್ಕದಲ್ಲಿ ಹೌದು, ನಾನು ಆಳಲ್ಲದೆ ಅರಸನೇ ಎಂದುಕೊಂಡು ಕೆಲಸ ಮಾಡುತ್ತಿದ್ದೆ. ಮೈಸೂರ ಅರಮನೆ ತೋರಿಸುವೆ ಎಂದು ತಾತ ಕರೆದುಕೊಂಡು ಹೋಗಿದ್ದ. ಈ ಕೋತಿಯ ಯಾಕೆ ಕರೆತಂದೆ ಎಂದು ದೊಡ್ಡಣ್ಣ ಸಿಟ್ಟು ತೋರಿದ. ತಮ್ಮನ್ನ ನೋಡಬೇಕು ಅಂತಿದ್ದ ಬಾರಪ್ಪ ಎಂದೆ… ಪಾಪ ಹೋಗ್ಲಿ ಬಿಡೂ ಎಂದಿದ್ದ ತಾತ. ಆ ನನ್ನ ತಮ್ಮನೊ ನನ್ನನ್ನು ಬಹಳ ಕೀಳಾಗಿ ಕಂಡಿದ್ದ. ನನ್ನನ್ನು ರಾತ್ರಿ ಊಟಕ್ಕೆ ಅತ್ತ ಈಚೆ ಮೂಲೆಯಲ್ಲಿ ಕೂರಿಸಿದ್ದರು. ಅಲ್ಲೆಲ್ಲ ಚೆಪ್ಪಲಿಗಳ ಬಿಟ್ಟಿರುತ್ತಿದ್ದರು. ತಾತನಿಗೆ ಅರ್ಥವಾಗಿತ್ತು ಮಾತಾಡಲು ಅವಕಾಶ ಇರಲಿಲ್ಲ. ತಮ್ಮ ಯಾಕೆ ನನ್ನನ್ನು ಮಾತನಾಡಿಸಲಿಲ್ಲ ಎಂದು ನಿದ್ದೆ ಇಲ್ಲದೆ ಹೊರಳಾಡಿದೆ. ಬಂಗಲೆಯ ಹೊರಗಿನ ಪಡಸಾಲೆಯಲ್ಲಿ ಮಲಗಿಸಿದ್ದರು. ಇವನ ತಲೆಯ ಹೇನು ಕೂರೆಗಳು ನಮ್ಮ ಮೈಗೆ ಬಟ್ಟೆಗೆ ಬಂದು ಬಿಡುತ್ತವೆ ಎಂದು ಹಾಗೆ ಹೊರಗೆ ಮಲಗಿಸಿದ್ದರು. ನನಗೇನೂ ಬೇಸರ ಅಪಮಾನ ಆಗಿರಲಿಲ್ಲ. ನಾನಿದ್ದಿದ್ದು ಅಂತಹ ಹೀನ ದೀನ ಸ್ಥಿತಿಯಲ್ಲಿ ತಾನೇ. ಅವರವರ ನಡತೆಯ ಕಾರಣ ಅವರಿಗೆ ಸರಿ ಎನಿಸಿರುತ್ತದೆ. ದೂರುವಷ್ಟು ದೊಡ್ಡವನಾಗಿರಲಿಲ್ಲ.

ಬೆಳಿಗ್ಗೆ ಬೇಗ ಎದ್ದಿದ್ದೆ. ಬಂಗಲೆಯ ಆಚೆ ಮೂಲೆಯಲ್ಲಿ ಕಕ್ಕಸು ಮನೆಯಿತ್ತು. ಅಂತಲ್ಲಿ ಮಲ ಮೂತ್ರ ಮಾಡುವ ಕ್ರಮವೇ ನನಗೆ ಗೊತ್ತಿರಲಿಲ್ಲ. ಹೋಗಬಂದಿದ್ದೆ. ಸರಿಯಾಗಿ ನೀರು ಹಾಕಿರಲಿಲ್ಲ. ಇವನೇ ಹೀಗೆ ಮಾಡಿರುವುದು ಎಂದು ಎಲ್ಲರಿಗೂ ಗೊತ್ತಾಯಿತು. ದೊಡ್ಡಮ್ಮ ಕೆಂಡಮಂಡಲವಾದಳು. ದೊಡ್ಡಣ್ಣ ಬಡಿದು; ‘ಕ್ಲೀನ್ ಮಾಡು’ ಎಂದು ಆದೇಶಿಸಿದ. ಗೊತ್ತಾಗಲಿಲ್ಲ. ಕಡ್ಡಿ ಬರಲು ಅಲ್ಲೆ ಮೂಲೆಯಲ್ಲಿತ್ತು. ‘ತೊಳೀ’ ಎಂದು ಕಣ್ಣು ಮೆಡರಿಸಿದ. ನಾನೊಬ್ಬ ಮಹಾ ಅನಾಗರೀಕ ಎಂದು ಉಗಿದರು. ತಾತ ಸಂತೈಸಿದ. ‘ತೊಳೆಯೊ ಲೋಫರ್’ ಎಂದು ದೊಡ್ಡಣ್ಣ ಗುದ್ದಿದ. ನಲ್ಲಿಯ ನೀರು ಬಿಟ್ಟು ತೊಳೆದೆ. ಅಲ್ಲೇ ಏನೊ ಒಂದು ಬಾಟಲ್ ಇತ್ತು. ‘ಅದನ್ನು ಎಲ್ಲೆಡೆ ಚೆಲ್ಲಿ ಕಾಲಲ್ಲಿ ಉಜ್ಜಿ ಉಜ್ಜಿ ಕ್ಲೀನ್ ಮಾಡು; ಇಲ್ಲಾ ಅಂದ್ರೆ ಹೇಲು ತಿನ್ನಿಸಿ ಬಿಡ್ತೀನಿ’ ಎಂದು ಬೆದರಿಸಿದ. ಘಾಟು ಟಿಂಚರ್ ವಾಸನೆಯಂತಿತ್ತು. ಉಜ್ಜಿದೆ ಅನಂತರ ಬ್ರಶ್ ಕೊಟ್ಟರು. ಕಮೋಡನ್ನು ಬ್ರಶ್‌ನಿಂದ ಸಾಧ್ಯಂತ ಬಲವಾಗಿ ಉಜ್ಜಿದೆ, ಹೇಸಿಗೆಯ ವಾಸನೆ ನನಗೆ ಅಸಹ್ಯ ಎನಿಸಿರಲಿಲ್ಲ. ಹೇಲು ತಿನ್ನು ಎಂದರೂ ಬದುಕಿ ಉಳಿವ ಆಸೆಯಲ್ಲಿ ತಿಂದು ಬಿಡುತ್ತಿದ್ದೆನೇನೊ! ಎಲ್ಲಿ ತುಳಿದು ಈ ದೊಡ್ಡಣ್ಣ ಸಾಯಿಸಿ ಬಿಡುತ್ತಾನೊ… ಜೀವನದಲ್ಲಿ ನನ್ನದೆಲ್ಲ ಬರಿ ತಪ್ಪೇ ಆಯಿತಲ್ಲಾ ಎಂದು ನಡುಗುತ್ತಲೇ ಕಮೋಡಿನ ಸಂದಿಗಳನ್ನೂ ಸವರಿ ಸವರಿ ಅಲ್ಲೆಲ್ಲ ಅಂಟಿದ್ದ ಹಳೆಯ ಕಸವನ್ನೆಲ್ಲ ಕಿತ್ತು ಹಾಕಿದೆ. ‘ಬೇಗ ಮಾಡಿ ಮುಗಿಸು’ ಎಂದಳು ದೊಡ್ಡಮ್ಮ. ಅವಳಿಗೆ ಅವಸರವಾಗಿತ್ತು. ಬಕೇಟ್ ಕೊಟ್ಟರು. ನೀರು ಹಿಡಿದು ಎಲ್ಲೆಡೆ ಎರಚಿ ಸುರಿದು ಹಸನು ಮಾಡಿದೆ.

ಹೇಸಿಗೆಯಿಂದ ಏಸಿಗೆಯೇ ಆಗಿ ಹೋಗಿದ್ದೆ. ಹೊರಗೊಂದು ನಲ್ಲಿ ಇತ್ತು. ಅಲ್ಲಿ ಸ್ನಾನ ಮಾಡಿಕೊ ಎಂದು ತಾತ ಸಹಾಯ ಮಾಡಿದ. ಅದೇ ಬಟ್ಟೆಗಳ ಹಾಕಿಕೊಂಡಿದ್ದೆ. ನನ್ನನ್ನು ಹೊರಗೇ ಕೂರಿಸಿದ್ದರು. ನನ್ನ ತಮ್ಮ ಶಾಲೆಗೆ ರೆಡಿಯಾಗಿದ್ದ. ಎರಡೂ ಕೈಗಳಿಗೆ ಬೆಲ್ಟು ಹಾಕಿದಂತೆ ಸ್ಕೂಲ್ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡಿದ್ದ. ಶೂ ಧರಿಸಿದ್ದ. ಚೆಂದದ ಯೂನಿಫಾರಂ, ಟೈ… ಇವನು ನನ್ನ ತಮ್ಮ ಅಲ್ಲ ಅಥವಾ ಇವನಿಗೆ ಅಣ್ಣನಾಗುವ ಯೋಗ್ಯತೆ ನನಗಿಲ್ಲ ಎನಿಸಿತು. ‘ತಾತಾ; ಊರಿಗೆ ಹೋಗುವ ನಡೀ’ ಎಂದು ಗೋಗರೆದೆ. ಅರಮನೆ ನೋಡುವ ಆಸೆಯೆ ಸತ್ತು ಹೋಗಿತ್ತು. ಹೇ ಮರೀ; ಅಲ್ಲಿರುವ ಗಿಡಗಳಿಗೆಲ್ಲ ನೀರು ಹಾಕು ಎಂದಳು ದೊಡ್ಡಮ್ಮ, ಅವೆಲ್ಲ ಕಷ್ಟದ ಕೆಲಸಗಳೇ…… ತಕ್ಷಣವೆ ಮಾಡಿ ಮುಗಿಸಿದೆ. ಚಿತ್ರಾನ್ನ ಮಾಡಿದ್ದರು. ತಡವಾಗಿ ಕೊಟ್ಟಿದ್ದರು; ಅದೂ ತಾತ ನೆನಪಿಸಿದ್ದರಿಂದ… ದೊಡ್ಡದೊಂದು ಗಿಡದ ಕೆಳಗೆ ಕೂತಿದ್ದೆ. ಕೊಟ್ಟರಲ್ಲಾ… ನನ್ನ ಮುಂದೆ ಇಟ್ಟರು. ಎತ್ತಿಕೊಂಡೆ ಚಟ್ನಿಗೆ ಕಲೆಸಿದೆ. ಬಾಯಿಗಿಡುತ್ತಿದ್ದಂತೆಯೆ ದೊಡ್ಡಣ್ಣ ಅಬ್ಬರಿಸಿ ಹೇಳಿದ್ದ ‘ಹೇಲು ತಿನ್ನಿಸಿ ಬಿಡುವೆ’ ಎಂದಿದ್ದು ಪ್ರತಿಧ್ವನಿಸಿತು. ಅದೇ ವಾಸನೆ. ತಿನ್ನಲಾರದೆ ಕಸಿವಿಸಿಗೊಂಡೆ. ಗಿಡಗಳಿಗೆ ಹೇಗೆ ನೀರು ಹಾಕಿದ್ದಾನೆಂದು ನೋಡಲು ದೊಡ್ಡಮ್ಮ ಹೊರ ಬಂದಳು. ಎದ್ದು ನಿಂತೆ. ದೊಡ್ಡವರ ಕಂಡಾಗ ಎದ್ದುನಿಂತು ಗೌರವಿಸಬೇಕು ಎಂದು ಯಾವತ್ತೂ ನನ್ನ ತಾಯಿ ಹೇಳುತ್ತಿದ್ದಳು. ‘ತಿನ್ನೊ; ಕೊಟ್ಟು ಎಷ್ಟೊತ್ತಾಯಿತು? ನಿಮ್ಮಮ್ಮ ಮಾಡ್ತಾಳಲ್ಲ ಎಮ್ಮೆ ಚರ್ಮದಂತೆ ರಾಗಿ ರೊಟ್ಟಿಯಾ..… ಅದೇ ಲಾಯಕ್ಕು ನಿನ್ನಂತವರಿಗೆ’ ಎಂದು ಒಳಕ್ಕೆ ಹೋದಳು.

ಸಂಕಟದಲ್ಲಿ ಬಾಯಿಗೆ ಹಾಕಿಕೊಂಡು ಅಗಿದಂತೆಲ್ಲ ನಾನು ಏನನ್ನು ತಿನ್ನುತ್ತಿರುವೆ ಎಂಬ ಅನುಮಾನ ಮೂಡುತ್ತಿತ್ತು. ತಾತ ಒಳಗೆ ತನ್ನ ಮಕ್ಕಳ ಜೊತೆ ಏನೋ ಗಹನವಾದ ಮಾತಿಗಿಳಿದಿದ್ದ. ಎಷ್ಟೊತ್ತಿಗೆ ಊರಿಗೆ ಹೊರಡುವನೊ ಶಿವನೇ… ಎಂದು ತಾತ ಹೊರಬರುವುದನ್ನೇ ಕಾಯುತ್ತಿದ್ದೆ. ದೊಡ್ಡಣ್ಣ ದೊಡ್ಡ ಸಾಹೇಬ ತಾನೇ.. ಎದ್ದು ನಿಂತು ಕೈ ಮುಗಿದೆ. ನನ್ನತ್ತ ತಿರುಗಿಯೂ ನೋಡಲಿಲ್ಲ. ಹೊರಟು ಹೋದ. ತಾತ ಬಂದ. ನಡಿಲಾ ಮೊಗ ವೂರಿಗೆ ಹೋಗುವಾ’ ಎಂದ. ಪರಮಾನಂದವಾಯಿತು. ನನ್ನ ಜೀವ ಮತ್ತೆ ಬಂದು ಕೂಡಿಕೊಂಡಂತೆ. ಅವನ ಇನ್ನಿಬ್ಬರು ಮಕ್ಕಳು ಹಾಗೂ ದೊಡ್ಡಮ್ಮ ಹೋಗಿದ್ದು ಬನ್ನಿ ಎಂದರು. ಆದರೆ ಮತ್ತೊಮ್ಮೆ ಇವನ ಕರೆತರಬೇಡಿ ಎಂದು ದೊಡ್ಡಮ್ಮ ಆಗ್ರಹಿಸಿದಳು. ನನ್ನೊಳಗೆ ಸಂತೋಷವೇ ಆಗಿತ್ತು. ಅಂತಲ್ಲಿಗೆ ಯಾಕೆ ತಾನೆ ಮತ್ತೊಮ್ಮೆ ಹೋಗಬೇಕು ಎಂದು ನನ್ನ ಮನಸ್ಸೇ ನನ್ನನ್ನು ಕೇಳಿದಂತಾಗಿತ್ತು. ಬಾಲ್ಯದ ಈ ಘಟನೆಯನ್ನು ಈ ತನಕ ಯಾರಿಗೂ ಹೇಳಿರಲಿಲ್ಲ. ಹಳ್ಳಿಗೆ ವಾಪಸ್ಸು, ಬದುಕಿ ಬಂದ ಕೂಡಲೇ ನನ್ನ ತಾಯಿ ಹಿತ್ತಲ ಹೊಂಗೆ ಮರದ ಬಳಿ ಕರೆದೊಯ್ದು; ‘ಮೈಸೂರರಮನೆ ಹೆಂಗಿತ್ಲಾ’ ಎಂದು ಕತೂಹಲದಿಂದ ಕಣ್ಣರಳಿಸಿ ಕೇಳಿದ್ದಳು. ಆಗಲೂ ಅವಳ ಕಣ್ಣುಗಳು ಈಗ ತಾನೆ ಕಣ್ಣೀರ ಒರೆಸಿಕೊಂಡಿದ್ದಂತೆ ಕಂಡವು. ‘ಅಕ್ಕಾ; ಯಂತಾ ಚೆನ್ನಾಗಿತ್ತು ಅಂದ್ರೆ ಅದಾ ಬಾಯೆಲಿ ಯೇಳು ಕಾಗುದಿಲ್ಲಾ. ನಾನಂತು ಆ ಅರಮನೆಯ ಮರಿಲಾರೆ ಅಕ್ಕಾ’ ಎಂದು ಸುಳ್ಳು ಹೇಳಿದೆ. ‘ನನ್ನ ಮಗ ಮೈಸೂರ ಅರಮನೆಯ ನೋಡಿ ಬಂದನಲ್ಲಾ ಅಷ್ಟೇ ಸಾಕು ಬಿಡೂ’ ಎಂದು ತಾಯಿ ಕಂಪಿಸಿದಳು. ಅವಳಿಗೆ ಇಷ್ಟ ಇಲ್ಲದಿದ್ದರೂ ಹಠ ಮಾಡಿ ತಾತನ ಜೊತೆ ಹೋಗಿದ್ದೆ. ನಿಜ ಹೇಳಿದ್ದರೆ; ನನ್ನ ತಾಯಿ ಭಾಗಶಃ ಸಾಯುವ ತನಕ ಆ ಹೇಸಿಗೆಯ ಘಟನೆಯ ನೆನೆದು ನರಳುತ್ತಿದ್ದಳು.

ಸುಳ್ಳುಗಳು ಕೆಲವೊಮ್ಮೆ ಲೋಕ ಕಲ್ಯಾಣವನ್ನೂ ಮಾಡುತ್ತವಂತೆ. ಜಗದ ಸರ್ವನಾಶಕ್ಕೂ ಅದೇ ಸುಳ್ಳುಗಳು ಕಾರಣವಂತೆ. ಆದರೆ ಸತ್ಯ? ಅದನ್ನು ಅರ್ಥೈಸುವ ಪ್ರಭುದ್ಧತೆ ನನಗಿನ್ನೂ ಬಂದಿಲ್ಲ. ಸಾಧ್ಯವಾದರೆ ಮುಂದೆ ಕೇವಲ ವಿವರಿಸುವೆ. ಬಾಲ್ಯದ ಹೇಸಿಗೆಯ ಪ್ರಸಂಗ ನನ್ನನ್ನು ಸತ್ಯದ ದಾರಿಗೆ ಕರೆತಂದಿರಬಹುದು! ಅದಕ್ಕಾಗಿ ಅವತ್ತಿನ ಅವರಿಗೆಲ್ಲ ನಮಸ್ಕರಿಸುವೆನು. ಬಾಲ್ಯದಲ್ಲಿ ನನ್ನಿಂದ ಅವರು ಹಾಗೆ ಹೇಯವಾಗಿ ಹೇಸಿಗೆ ತೊಳೆಸಿದ್ದರಿಂದ ನನ್ನ ತಲೆಯಲ್ಲಿ ಕಸ ಉಳಿಯಲಿಲ್ಲ. ಆದರೆ ಆ ನೆನಪು ಯಾವತ್ತೂ ನನ್ನ ಆತ್ಮದ ಮುಂದೆ ಬಂದು ನಿಲ್ಲುತ್ತದೆ. ಇರಲಿ; ನಾನು ಅರಿವಿಲ್ಲದೆ ಒಂದು ಕಾಲಕ್ಕೆ ಜಾಡು ಮಾಲಿಯ ಕೆಲಸ ಮಾಡಿದ್ದೆ. ಪಶ್ಚಾತ್ತಾಪವಿಲ್ಲ. ಎಲ್ಲವನ್ನೂ ಕ್ರಮಬದ್ಧವಾಗಿ ಹೇಳುವ ಉತ್ಸಾಹಿ ನಾನಲ್ಲ. ಕಾಲ ಕೆಲವರನ್ನು ಬಹಳ ವೇಗವಾಗಿ ಅಪಹರಿಸಿದಂತೆ ಎತ್ತಿಕೊಂಡು ಹೋಗಿ ಸುರಕ್ಷಿತವಾದ ಒಂದು ನೆಲೆಯಲ್ಲಿ ಬಚ್ಚಿಟ್ಟು ಸಲಹುವುದಂತೆ. ನಾನೂ ಹಾಗೇ ಆಗಿದ್ದೆ. ಆ ಕಾಲದ ಆ ಮೈಸೂರಿನ ದೊಡ್ಡಣ್ಣನ ಮನೆ ಬಿಳಿಗಿರಿ ರಂಗಯ್ಯನ ಮನೆ. ಎತ್ತರದ ವ್ಯಕ್ತಿ. ಆ ಮನೆಯಲ್ಲಿ ಬಾಡಿಗೆಗೆ ಇದ್ದದ್ದು. ತಾತ ಅವರತ್ತ ಕೈ ತೋರಿ; ‘ಅವರು ಬಹಳ ದೊಡ್ಡವರು! ಅಂಬೇಡ್ಕರ್ ಅವರನ್ನು ಬಿಟ್ಟರೆ ಇವರೇ ಬಹಳ ಓದಿರೋದು, ನಮ್ಮ ಜಾತಿಯವರು! ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡು. ನಾನೂ ಇವರಂಗೇ ಓದಬೇಕು ಎಂದು ದೇವರ ಕೇಳಿಕೊ ಹೋಗು’ ಎಂದು ಅವರ ಬಳಿ ಕಳಿಸಿ ಕಾಲಿಗೆ ನಮಸ್ಕಾರ ಮಾಡಿಸಿದ್ದ ತಾತ. ನಿಜಾ; ಅವರು ಆ ಕಾಲಕ್ಕೆ ಇಡೀ ದೇಶದಲ್ಲೆ ಅಪರೂಪದ ವಿದ್ಯಾವಂತರಾಗಿದ್ದರು. ಅವರು ಎಂತವರು ಎಂಬುದೆ ನನಗಾಗ ಗೊತ್ತಿರಲಿಲ್ಲ. ನಮಸ್ಕರಿಸಿದೆ ಭಕ್ತಿಯಿಂದ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಸಂತೋಷ ಸಂಭ್ರಮ ಅವರ ಹಳೆ ಕಾಲದ ಬಂಗಲೆಯಲ್ಲಿ ಅವರಿಗೆ ಹೆದರಿಕೊಂಡು ಬಿದ್ದತ್ತು. ಅಪರೂಪಕ್ಕೆ ತಾತ ನನ್ನನ್ನು ಆ ಬಂಗಲೆಗೆ ಕರೆದೊಯ್ಯುತ್ತಿದ್ದ. ಯಾರೂ ನನ್ನನ್ನು ಲೆಕ್ಕಿಸುತ್ತಿರಲಿಲ್ಲ. ನನ್ನನ್ನು ವಿಚಾರಿಸಿ ಮಾತಾಡಿಸುವ ಅಗತ್ಯವಾದರು ಅವರಿಗೆ ಏನಿತ್ತು… ಮೈಸೂರು ನೋಡಬೇಕು ಎಂಬುದು ನನ್ನ ಸುಖ. 

‘ಹೇ… ಏಳಪ್ಪಾ; ಯಾರು ನೀನು’ ಎಂದು ಕೇಳಿದ್ದರು. ಹೇಳಿದ್ದೆ. ತಲೆ ಸವರಿದರು. ಬಹಳ ಹಿರಿಯರು. ‘ಖಂಡಿತ ನೀನು ವಿದ್ಯಾವಂತನಾಗಬೇಕು. ಅದೇ ನಮಗೆ ದೇವರು’ ಆ ಮಾತು ನನ್ನೆದೆಗೆ ಬಲವಾಗಿ ನೆಟ್ಟಿತ್ತು. ತಾಯಿಗೆ ಒಬ್ಬರು ದೊಡ್ಡವರು ಹೀಗೆ ಹೇಳಿ ತಲೆ ಮುಟ್ಟಿ ಆಶೀರ್ವಾದ ಮಾಡಿದರು ಎಂದು ಹೇಳಿದೆ. ತಾಯಿಯ ಯಾವತ್ತೂ ಒದ್ದೆಯಾದ ಕಣ್ಣಲ್ಲಿ ಮಿಂಚಿನ ಸಂಚಾರವಾಗಿತ್ತು. ಅದೂ ನಾವು ಊರಿಗೆ ಹಿಂತಿರುಗುವಾಗ ಆ ದೊಡ್ಡ ಬಂಗಲೆಗೆ ಅಂಟಿಕೊಂಡಿದ್ದ ಇನ್ನೊಂದು ಮನೆಯ ಪ್ರಾಂಗಣದಲ್ಲಿ ಬೆತ್ತದ ಖುರ್ಚಿಯಲ್ಲಿ ಕೂತು ಬಿಳಿಗಿರಿ ರಂಗಯ್ಯನವರು ಯಾವುದೊ ಇಂಗ್ಲೀಷ್ ಪತ್ರಿಕೆ ಓದುತ್ತಿದ್ದರು. ತಾತನೂ ನಮಸ್ಕರಿಸಿದ್ದ. ಘಟನೆ ಆಗಿದ್ದರಿಂದ ಮತ್ತೆ ಆ ಮೈಸೂರಿನತ್ತ ತಿರುಗಿಯೂ ನೆನಪು ಮಾಡಿಕೊಂಡಿರಲಿಲ್ಲ. ಅರಮನೆಯನ್ನು ನೋಡದೆಯೂ; ಆ ಮೈಸೂರ ಅರಮನೆಯ ಮೂಲೆ ಮೂಲೆಯನ್ನು ಹೀಗಿದೆ ಆಗಿದೆ ಎಂದು ಕಲ್ಪನೆಯಲ್ಲೇ ಕಟ್ಟಿ ತಾಯಿಗೆ ಹೇಳಿದ್ದೆ. ಅಂತಾ ಒಂದು ಅರಮನೆಯಲ್ಲಿ ಬಾಗಿಲು ಕಾಯುವ ಇಲ್ಲವೆ ಕಸಗುಡಿಸುವುದಕ್ಕಾದರೂ ನಾಲ್ಕು ಅಕ್ಷರ ಕಲಿತಿಕೊ ಎಂದು ತಾಯಿ ಆದ್ರವಾಗಿ ಬೇಡಿಕೊಂಡಿದ್ದಳು. ನೀನೊಬ್ಬ ಜವಾನನಾಗಿ ಊರಿಗೆ ಬಂದರೂ ನನ್ನ ಮಗನೂ ‘ಸಾಹೇಬ’ ಎಂದು ಹೇಳಿಕೊಳ್ಳುವೆ… ನಿನ್ನ ದಮ್ಮಯ್ಯ ನಾಲ್ಕು ಅಕ್ಷರ ಕಲಿತಿಕೊ ಎಂದು ಚಡಪಡಿಸುತ್ತಿದ್ದಳು.

ನನಗೆ ಶಾಲೆ ಎಂದರೇ ಆಗುತ್ತಿರಲಿಲ್ಲ. ನಮ್ಮಪ್ಪನಿಗೆ ಅದೇ ಬೇಕಿದ್ದುದು. ಹೋಟೆಲಿನ ಎಂಜಲೆತ್ತಿ ತೊಳೆದುಕೊಂಡು ಬಿದ್ದಿರಲಿ ಎಂಬುದೇ ಅವನಾಸೆ. ತಾಯಿಗೆ ಗೊತ್ತಿತ್ತು ನಾಲ್ಕು ಅಕ್ಷರದ ಮಹತ್ವ. ಹೆಬ್ಬೆಟ್ಟಿನ ಆ ನನ್ನ ತಾಯಿ ವಿದ್ಯಾವಂತೆ ಅಲ್ಲ. ಅಕ್ಷರ ಬಲ್ಲವರು ಮಾತ್ರ ವಿದ್ಯಾವಂತರಲ್ಲ. ನನ್ನ ತಾಯಿ ದೂರಾಲೋಚನೆ ಮಾಡಿದ್ದಳು. ನಿನ್ನ ತಮ್ಮ ನಾಳೆ ಮೈಸೂರಲಿ ಓದಿ ಸಾಹೇಬನಾಗಿ ಬರ್ತಾನಲ್ಲಾ ಆಗ ನೀನವನ ಮುಂದೆ ಹೇಗೆ ನಿಲ್ಲುವೆ ಎಂಬಲ್ಲಿಗೆ ಯೋಚಿಸಿ ಕೇಳುತ್ತಿದ್ದಳು. ಹೇಗೊ ಶಾಲೆಯತ್ತ ಕಾಲು ಹಾಕಿದ್ದೆ. ಮಾಸ್ತರುಗಳು ಅಚ್ಚರಿ ಪಟ್ಟಿದ್ದರು. ಒಬ್ಬ ಬ್ರಾಹ್ಮಣ ಮಾಸ್ತರನಿದ್ದ. ಪಾಠ ಮಾಡಿದ ಮೇಲೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದ. ನಾವು ಕೆಲವು ಹೈಕಳು ಕೊಠಡಿಯ ಹಿಂದೆ ವ್ಯರ್ಥವಾದವರು ಎಂಬಂತೆ ಕೂತಿರುತ್ತಿದ್ದೆವು. ನಮ್ಮನ್ನು ಆ ಮಾಸ್ತರ ಪರಿಗಣಿಸಿಯೇ ಇರಲಿಲ್ಲ. ‘ಹೇ ಶಾಲೆಯ ಆವರಣದಲ್ಲಿ ಹಿಂದೆ ಮುಂದೆ ಗಿಡಗಂಟೆ ಬೆಳೆದುಕೊಂಡಿವೆ. ಅವನ್ನು ಕಿತ್ತು ಹಾಕಿ ಕಸ ಗುಡಿಸಿ’ ಎಂದು ನಮ್ಮನ್ನು ಹೊರಗೆ ಕಳಿಸಿ ಬಿಡುತ್ತಿದ್ದರು. ಅವರ ಪಾಠಕ್ಕಿಂತ ಬಹಳ ಇಷ್ಟವಾದ ಕೆಲಸವೇ ಕಸ ಬಳಿಯುವುದಾಗಿತ್ತು.

ಒಂದು ದಿನ ದೊಡ್ಡದನಿಯಲ್ಲಿ ಆತ ಪಾಠ ಹೇಳಿಕೊಡುತ್ತಿದ್ದರು. ಅವರ ಪ್ರಶ್ನೆಗಳ ಮಳೆಗೆ ಹುಡುಗರು ತತ್ತರಿಸುತ್ತಿದ್ದರು. ಅವರು ಕೇಳುತ್ತಿದ್ದ ಬಹುಪಾಲು ಪ್ರಶ್ನೆಗಳಿಗೆ ನನಗೆ ಉತ್ತರ ಹೇಗೊ ಗೊತ್ತಾಗುತ್ತಿತ್ತು. ಹೊರಗೆ ಕೆಲಸ ಮಾಡುತ್ತಲೇ ಅವರ ಪಾಠ ಪ್ರವಚನಗಳನ್ನು ಆಲಿಸಿ ಅರಿಯುವ ಬುದ್ಧಿ ಬಂದು ಬಿಟ್ಟಿತ್ತು. ‘ಯಾರಿಗೂ ಉತ್ತರ ಗೊತ್ತಿಲ್ಲವೇ… ನಿಮ್ಮಂತಹ ದಡ್ಡ ಮಕ್ಕಳು ಈ ಪ್ರಪಂಚದಲ್ಲಿ ಎಲ್ಲೂ ಇಲ್ಲ’ ಎಂದು ಗುಡುಗಿದರು. ‘ಸಾರ್ ನಾನು ಹೇಳುವೆ’ ಎಂದು ಎಲ್ಲ ಪ್ರಶ್ನೆಗಳಿಗೂ ಶಾಲೆಯ ಹಿಂಬದಿಯ ಆಚೆ ಕಿಟಕಿಯ ಬಳಿ ನಿಂತು ಗಟ್ಟಿ ದನಿಯಲ್ಲಿ ಹೇಳಿದೆ. ಒಬ್ಬೊಬ್ಬರನ್ನೂ ಎದ್ದು ನಿಲ್ಲಿಸಿ ಪ್ರಶ್ನೆ ಕೇಳಿದ್ದರಿಂದ ಎಲ್ಲರೂ ಉತ್ತರಿಸಲಾಗದೆ ಕೈಕಟ್ಟಿ ನಿಂತಿದ್ದರು. ‘ಯಾವನೋ ಅವನು ಉತ್ತರ ಕೊಟ್ಟವನೂ… ನನ್ನ ಮಾನ ಉಳಿಸಿದೆಯಲ್ಲಪ್ಪಾ… ಮುಂದೆ ಬಾ’ ಎಂದು ಕರೆದರು. ‘ನಾವಲ್ಲ ಸಾ; ಅವನು’ ಎಂದರು ಹುಡುಗರು.

‘ಅವನು ಅಂದರೆ ಯಾರೊ; ಹೇ ಯಾರೋ ನೀನೂ, ಮುಖ ತೋರಿಸೊ’ ಎಂದು ಕರೆದರು. ‘ನಾನು ಸಾ. ಇಲ್ಲಿ ಗಿಡಕಿತ್ತಾಕ್ತ ಇವ್ನಿ ಸಾ’ ಎಂದೆ. ಗೊತ್ತಾಗಿತ್ತು. ಕಿಟಕಿಯತ್ತ ಬಂದು ಹೊರಗೆ ಕೈ ಕಟ್ಟಿ ಹೆಮ್ಮೆಯಿಂದ ಮುಂದೆ ನಿಂತಿದ್ದ ನನ್ನನ್ನು ಕಂಡು; ‘ಭಲೇ, ಶಹಬ್ಬಾಷ್. ನೀನು ಬುದ್ಧಿವಂತ. ನಾನೇ ನಿನ್ನ ಬಳಿ ಬರುವೆ ತಾಳು’ ಎಂದು ಬಂದು ಬೆನ್ನು ತಟ್ಟಿದರು. ನನಗಾದ ಅವತ್ತಿನ ಸಂತೋಷ ಇವತ್ತು ಯಾರು ಎಷ್ಟೇ ಹೊಗಳಿದರೂ ಸಿಗಲಾರದು. ಆ ಮೆಚ್ಚುಗೆ ಎಷ್ಟು ಬದಲಾವಣೆ ಮಾಡಿತ್ತು ಎಂದರೆ; ಮತ್ತೆಂದು ಅವರು ಶಾಲೆಯ ಯಾವುದೇ ಕಸ ಬಳಿಯುವ ಕೆಲಸಕ್ಕೆ ಹಚ್ಚಿರಲಿಲ್ಲ. ಅಚ್ಚರಿ ಪಟ್ಟು ಮೊದಲ ಸಾಲಿನಲ್ಲಿಯೇ ಕೂರಿಸಿಕೊಳ್ಳುತ್ತಿದ್ದರು. ನನಗಂತೂ; ತಾಯಿ ಕೇಳಿದ ನಾಲ್ಕಕ್ಷರವೇನು? ಲಕ್ಷಾಂತರ ಅಕ್ಷರಗಳ ಕಲಿಯುವೆ ಎಂಬ ಆತ್ಮವಿಶ್ವಾಸ ತುಂಬಿ ಬಂತು.

ಪ್ರಾಥಮಿಕ ಶಾಲಾವಧಿ ಮುಗಿದಿತ್ತು. ಹೈಸ್ಕೂಲಿಗೆ ಅಕ್ಕೂರು ಹೊಸಳ್ಳಿಗೆ ಸೇರಿದೆ. ಅಪ್ಪನಿಗೆ ಇಷ್ಟವೇ ಇರಲಿಲ್ಲ. ಹೊಟೆಲ್ ಕಸುಬು ಕಲಿತುಕೊಂಡರೆ ಸಾಕು; ‘ಓದಿ ಇವುನು ದಬ್ಬಾಕುದು ಸಾಕು’. ಎಂದು ಪದೇ ಪದೆ ಶಾಲೆಗೆ ತಪ್ಪಿಸುತ್ತಿದ್ದ. ಅವನ ಮಾತು ಮೀರಿ ಶಾಲೆಗೆ ಹೋಗಿ ಬಂದರೆ ಏನಾದರು ನೆಪ ತೆಗೆದು ಬಡಿಯುತ್ತಿದ್ದ. ತಾತ ಬಿಡಿಸುತ್ತಿದ್ದ. ಒಂದು ದಿನ ತಾತ ಇಲ್ಲದನ್ನು ಖಾತ್ರಿ ಮಾಡಿಕೊಂಡು; ಮನೆಯ ಕೊಠಡಿ ಅದು ರೇಷ್ಮೇ ಹುಳು ಸಾಕುತ್ತಿದ್ದ ಮನೆ. ಅದರ ಬಾಗಿಲು ಚಿಲಕ ಹಾಕಿ ಚಂಗನೆ ನೆಗೆದು ಬಂದು ಹಿಡಿದು; ‘ಏನಾರ ಸದ್ದು ಮಾಡ್ದೋ; ಕತ್ತ ಮುರಿದು ಬಿಡ್ತೀನಿ; ನಿನ್ನ ಬಾಯಿಗೆ ಉಚ್ಚೆ ಉಯ್ದು ಬಿಡ್ತೀನಿ! ಕಮಕ್ ಕಿಮಕ್ ಅನ್ನುವಂಗಿಲ್ಲ’ ಎಂದು ಭೀತಿ ಹುಟ್ಟಿಸಿದ. ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಪಾಠವನ್ನು ಉರು ಹೊಡೆಯುತ್ತಿದ್ದೆ. ‘ನಾನು ಕೆಟ್ಟೇ’ ಎನಿಸಿತು ಅಪ್ಪನ ಸಡಗರ ಕಂಡು. ‘ಹೋಯ್ತದೆ ಇವತ್ತು ನನ್ನ ಜೀವ’ ಎಂದುಕೊಂಡೆ. ಹಿಂದೊಮ್ಮೆ ಮೊಕ್ಕತ್ಲೆಯ ದಾರಿಯಲ್ಲಿ ಅಪ್ಪ ಕತ್ತು ಮುರಿಯಲು ಮುಂದಾಗಿದ್ದು ನೆನಪಾಯಿತು. ‘ಆಗ್ಲೀ ಬಿಡೂ… ಬಾಳಿ ಬದ್ಕಿ ನಾನೇನು ಬಾಡ್ಬೇಕಿದ್ದದೂ’ ಎಂದುಕೊಂಡು ಇವನ ಕೈಯಿಂದಲೇ ಸಾಯುವ ಬಿಡೂ’ ಎಂಬ ನಿರ್ಧಾರಕ್ಕೆ ಬಂದೆ. ಆದರೂ ಇಡೀ ದೇಹ ನಡುಗುತ್ತಿತ್ತು. ಎರಡೂ ಕೈಗಳ ಬೆನ್ನಿನ ಹಿಂದಕ್ಕೆ ಎಳೆದು ಹಗ್ಗ ಕಟ್ಟಿದ್ದ! ಕಾಲಿಗೂ ಹಾಗೇ ಕಟ್ಟಿದ್ದ. ನನಗೆ ಅಂದಾಜೇ ಇರಲಿಲ್ಲ. ನೇಣಿಗೆ ಏರಿಸುವಂತೆ ತೊಲೆಗೆ ಎಳೆದು ಕಟ್ಟಿ ನೇತು ಹಾಕಿದ. ಎರಡೂ ಕೈಗಳು ಮುರಿದಂತಾಗಿ ಛೀರಿಕೊಂಡೆ. ಹೇಯ್ ಎಂದು ಎಚ್ಚರಿಸಿ ಬಾಯಿಗೆ ಬಟ್ಟೆ ತುರುಕಿದ. ವದರಾಡಿದೆ. ಉಸಿರಾಡಲೂ ಕಷ್ಟವಾಗುತ್ತಿತ್ತು. ನನ್ ತಾಯಿ ಹಿತ್ತಲಲ್ಲಿ ಆ ಸಂಜೆಯಲ್ಲಿ ಹೋಟೆಲಿನ ಎಲ್ಲ ಪಾತ್ರೆಗಳ ತೊಳೆಯುತ್ತಿದ್ದಳು. ಅಪ್ಪ ಕುಡಿದು ತೂರಾಡುತ್ತಿದ್ದ. ಅವನ ಹತಾಶೆಯ ಮೂಲವೇ ನನಗೆ ಗೊತ್ತಿರಲಿಲ್ಲ.

‘ಇಸ್ಕೂಲ್ಗೆ ವೋಗ್ಬೇಡಾ ಅಂದ್ರೂ ನನ್ಮಾತ ಮೀರಿ ವೋಯ್ತಿ ಯಲ್ಲವೆ ನೀನೂ! ಸೂಳೇ ಮಗನೇ! ನಿನ್ನಾ ಯಮಲೋಕಕ್ಕೆ ಕಳಿಸ್ತೀನಿ ತಾಳು’ ಎಂದು ಅಲ್ಲೇ ಇದ್ದ ಬೆತ್ತ ತಂದು; ‘ಎಂಗಿದ್ದದು ನೋಡು’ ಎಂದು ಮುಖದ ಮುಂದಿಡಿದು ಅದರ ತುದಿಯಿಂದ ಕೆನ್ನೆಗೆ ತಿವಿದ. ಅದಾಗಲೇ ಕಣ್ಣೀರು ತೊಟ್ಟಾಡುತ್ತಿದ್ದವು. ಬಲವಾಗಿ ಬಾಯಿಗೆ ಬಟ್ಟೆ ಕಟ್ಟಿದ್ದ. ಅಣ್ಣಾ ಅಣ್ಣಾ ಎನ್ನುತ್ತಿದ್ದಂತೆಯೆ ಹುಚ್ಚನಾಗಿ ಹೊಡೆಯಲು ಆರಂಭಿಸಿದ. ಅಪ್ಪನಿಗೆ ಅಮಾಯಕರನ್ನು ಬಡಿದು ಹಿಂಸಿಸುವುದರಲ್ಲಿ ವಿಪರೀತ ಸುಖ ಹಾಗೂ ಸಾಮರ್ಥ್ಯ. ಮನಸೋ ಇಚ್ಚೆ ಚಚ್ಚಿದ. ಕಿರುಚಾಡಿದೆ. ಅಣ್ಣಾ ಅಣ್ಣಾ ನಿನ್ನುಚ್ಚೆ ಕುಡೀತಿನಿ, ನಿನ್ನೆಕ್ಕಡವ ತಿಂತೀನಿ… ವಡ್ದು ಸಾಯಿಸಬ್ಯಾಡ ಬುಟ್‌ಬುಡಣ್ಣಾ… ವೋಟ್ಲು ಚಾಕ್ರಿ ಮಾಡ್ಕಂಡು ಬಿದ್ದಿರ್ತೀನಿ’ ಎಂದು ಬೇಡಿದೆ. ತುರುಕಿದ್ದ ಬಟ್ಟೆ ಸಡಿಲವಾಗಿತ್ತು. ತೂರಾಡುತ್ತಲೇ ನನ್ನ ಕುಂಡಿ ಮೇಲೆ ತನ್ನೆಲ್ಲ ಬಲ ಬಿಟ್ಟು ಬಿಟ್ಟು ಬಾರಿಸುತ್ತಿದ್ದ, ಬಟ್ಟೆ ಬಾಯಿಂದ ಬಿದ್ದು ಹೋಗಿತ್ತು. ಹಿತ್ತಲಲ್ಲಿದ್ದ ನನ್ನ ತಾಯಿ ಕರುಳಿಗೆ ನನ್ನ ಆಕ್ರಂದನ ಮುಟ್ಟಿತ್ತು. ಹಾರಿ ಬಂದಿದ್ದಳು ನನ್ನನ್ನು ಉಳಿಸಿಕೊಳ್ಳಲು.

ಬಾಗಿಲಿನ ಚಿಲಕವ ಒಳಗಿನಿಂದ ಹಾಕಲಾಗಿತ್ತು. ತಾಯಿ ಡಮ ಡಮನೆ ಬಾಗಿಲು ಬಡಿದು ಜನರೆಲ್ಲ ಬರಲೆಂದು ಕೇರಿಯೇ ಮೊಳಗುವಂತೆ ಬಾಗಿಲು ತೆಗೀ ಎಂದು ಕೂಗಾಡಿದಳು. ತಾಯಿ ಬಂದಳೆಂದು ನಾನೂ ಜೋರಾಗಿ ಕಿರುಚಿದೆ. ಅಪ್ಪ ವಿಕಾರಿ. ಚಡ್ಡಿಯ ಬದಿಯಿಂದ ತೆಗೆದು ಅರಚುತ್ತಿದ್ದ ನನ್ನ ಬಾಯಿಗೆ ಉಚ್ಚೆ ಉಯ್ದ! ಆ ಕ್ಷಣದ ನನ್ನ ದನಿ ನನ್ನನ್ನೇ ನುಂಗಿದಂತಿತ್ತು. ಕತ್ತು ಮುರಿಯುತ್ತಿದ್ದ. ಕಲ್ಪನೆಗೂ ಅಸಾಧ್ಯವಾದದ್ದು. ತಾಯಿ ಢೀಂ ಢೀಂ ಎಂದು ತನ್ನ ತಲೆಯಿಂದ ಬಾಗಿಲಿಗೆ ಡಿಕ್ಕಿ ಹೊಡೆದೊಡೆದು ಚಿಲಕವನ್ನೇ ಕಿತ್ತು ಹಾಕಿ ಒಳನುಗ್ಗಿ ಬಂದೇ ಬಿಟ್ಟಳು. ನೋಡಿದಳು ನನ್ನ ಸ್ಥಿತಿಯ. ಅಪ್ಪ ಇನ್ನೂ ಉಚ್ಚೆ ಉಯ್ಯುತ್ತಲೇ ಇದ್ದ. ಬಲವಾಗಿ ನೂಕಿದಳು. ಕಟ್ಟನ್ನು ಬಿಚ್ಚಲು ಮುಂದಾದಳು. ಮೂಲೆಗೆ ಬಿದ್ದಿದ್ದ ಅಪ್ಪ ಎದ್ದು ಅದೇ ಬೆತ್ತದಿಂದ ಹೊಡೆಯಲು ಮುಂದಾದ. ‘ನನ್ನ ಪ್ರಾಣ ತಕೋ! ಅವನ ಹೆತ್ತಿರೋಳು ನಾನು! ನನ್ನ ಕಣ್ಣೆದುರೇ ಅವನ ಪ್ರಾಣ ಪಕ್ಷಿಯ ಕಿತ್ತುಕೋ ಬ್ಯಾಡ! ಬಾ, ಅದೆಷ್ಟು ವಡಿತಿಯೋ ನನಗೆ ವಡೀ’ ಎಂದು ತಾಯಿ ಅಡ್ಡ ನಿಂತಳು. ನನ್ ತಾಯಿ ಯಾವತ್ತೂ ಅಷ್ಟು ಮಾತಾಡಿರಲಿಲ್ಲ; ಧೈರ್ಯ ತೋರಿರಲಿಲ್ಲ! ಅದು ತಾಯಿಯ ಕೊಲೆಯ ಹತ್ತಿರದ ದಿನಗಳು! ಬೆತ್ತವ ಬೀಸಿದ. ತಾಯ ಮುಂಗೈಗಳಿಗೆ ಹೊಡೆತ ಬಿದ್ದು ಅವಳಿಗೆ ಇಷ್ಟವಾಗುತ್ತಿದ್ದ ಕೈತುಂಬ ಇದ್ದ ಹಸಿರು ಬಳೆಗಳು ಚೂರು ಚೂರಾದವು.

ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ತನ್ನ ಜೀವಿತಾವಧಿಯಲ್ಲಿ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಸಿಂಹದ ಮುಂದೆ ಜಿಂಕೆ ಹೋರಾಡಿದಂತೆ! ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮದ್ಯೆ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು. ಅಪ್ಪ ಅಷ್ಟು ಹೊತ್ತಿಂದ ಹೊಡೆದು ದಣಿದಿದ್ದ. ಅವನೆಂದೂ ಹೀಗಾಗುತ್ತೆ ಎಂದು ಭಾವಿಸಿರಲಿಲ್ಲ. ಈಗಲೇ ಇವನ ಸಾಯಿಸಿ ಬಿಡುವಾ ಎಂದು ಕತ್ತಿನ ಗೋಮಾಳೆ ಮುರಿವಂತೆ ಅದುಮದುಮಿ ಹೊಂಕರಿಸುತ್ತಿದ್ದಳು. ನನ್ನನ್ನು ಹುಟ್ಟಿಸಿದವರು. ಅವರಿಬ್ಬರು. ಆ ಸ್ಥಿತಿಯಲ್ಲಿ ಹಾಗೆ ನೇತಾಡುತ್ತ ನೋಡುವುದನ್ನು ಹೇಗೆ ವಿವರಿಸಲಿ? ಅಪ್ಪನ ಕೊರಳನ್ನು ತಾಯಿ ಮುರಿದೇ ಮುರಿವಳು ಎಂದು ‘ಅಕ್ಕಾ ಅಕ್ಕಾ’ ಎಂದು ಕೂಗುತ್ತಿದ್ದೆ ತರ್ಕವಿಲ್ಲದೆ ಅಪ್ಪನ ಉಚ್ಚೆ ತಲೆ ಮೇಲೆಲ್ಲ ಹಾಗೇ ಹಸಿಯಾಗಿತ್ತು. ಯಾರೂ ಬಿಡಿಸಲು ಬಂದಿರಲಿಲ್ಲ. ನನ್ನ ಅಜ್ಜಿ ಯಾವತ್ತೂ ಮಗ ಮಾಡುವುದೇ ಸರಿ ಎಂದು ವಾದಿಸುತ್ತಿದ್ದಳು ತಟಸ್ಥವಾಗಿದ್ದಳು.

ಅವನು ಬಹಳ ಹೊಲಸು ಮನುಷ್ಯ. ತಡೆಯಲು ಹೋದವರತ್ತಲೇ ಮಚ್ಚು ಬೀಸುವವನು. ಎಷ್ಟೇ ಆಗಲಿ ಆ ಮಂಗಾಡಳ್ಳಿ ಪಾತಕಿಯ ಗೆಳೆಯ ಆಗಿದ್ದವನಲ್ಲವೇ! ಹಾಗೇ ಒಂದು ದಿನ ಸಾಯುತ್ತಾನೆ ಬಿಡಿ ಎಂದು ಅಕ್ಕ ಪಕ್ಕದ ಮನೆಯ ಜನ ದೂರ ಸರಿಯುತ್ತಿದ್ದರು. ತಾಯ ತೋಳುಗಳು ಬಲ ಸಾಲಲಾರದೆ ನಡುಗುತ್ತಿದ್ದವು. ಅಪ್ಪನಿಗೆ ದೊಣ್ಣೆಯ ತುದಿಗಳ ಹಿಡಿತವಿತ್ತು. ಅಪ್ಪ ತಾಯನ್ನು ಹಿಂದಕ್ಕೆ ನೂಕಿಕೊಂಡು ಬಂದ. ಅಪ್ಪ ಕ್ಷಣ ಮಾತ್ರದಲ್ಲಿ ಬಚಾವಾಗಿದ್ದ. ‘ನನ್ನನ್ನೆ ಕೊಲ್ಲುವೆಯೇನ ಮ್ಮೀ… ನಾನೇ ನಿನಗೆ ದಾರಿ ತೋರಿಸ್ತೀನಿ ತಾಳಮ್ಮಿ’ ಎಂದು ನೂಕಿ ನನ್ನ ಮುಂದೆಯೇ ತಾಯ ಕತ್ತನ್ನು ಬೆತ್ತದಿಂದ ಅದುಮಿಡಿಯಲು ಎಲ್ಲ ಬಲವ ಒಗ್ಗೂಡಿಸುತ್ತಿದ್ದ. ತಾಯಿ ನನ್ನನ್ನೂ ಉಳಿಸಿಕೊಂಡು ತಾನೂ ತನ್ನ ಜೀವನ ಕಾಯ್ದುಕೊಳ್ಳಲು ಹರಸಾಹಸ ಮಾಡುತ್ತಿದ್ದಳು. ‘ಅಣ್ಣಾ ಅಣ್ಣಾ’ ಎಂದು ಸುಸ್ತಾಗಿ ಕೂಗುತ್ತಿದ್ದೆ ಕ್ಷೀಣವಾಗಿ. ತಾಯಿ ಸಾವು ಬದುಕಿನ ಅಂತಹ ಕಿಚ್ಚಿನ ಹೋರಾಟವ ನಾನೆಂದೂ ಕಂಡಿರಲಿಲ್ಲ! ತಾಯನ್ನು ಇವತ್ತು ಅಪ್ಪ ಮುಗಿಸಿ ನನ್ನ ಕತ್ತನ್ನೂ ಮುರಿದು ಬಿಡುತ್ತಾನೆಂದು; ಭೂಮ್ತಾಯಿಯೇ, ನೀನಾರ ಕಾಪಾಡವ್ವಾ’ ಎಂದು ನೇತಾಡುತ್ತಾ ಬೇಡಿದೆ. ಇಲ್ಲ; ಯಾರ ಸಹಾಯವೂ ಇರಲಿಲ್ಲ. ನಮಗೆ ನಾವೇ ನಮ್ಮ ಸಾವಿನ ವಿರುದ್ಧ ಹೋರಾಡಿ ಬದುಕ ಬೇಕಿತ್ತು!

ಸಮಬಲದಲ್ಲಿ ತಾಯಿ ನಿರ್ಣಾಯಕವಾಗಿ ಅಪ್ಪನ ಪೈಶಾಚಿಕ ಶಕ್ತಿಯ ತಡೆ ಹಿಡಿದ್ದಿದ್ದಳು. ಅಂತಲ್ಲಿ ಯಾಕೊ ಅಪ್ಪನ ಅಣ್ಣ ದೊಡ್ಡ ಸಾಹೇಬ ಹೇಲಿಗೆ ಹೇಲ ತಿನ್ನಿಸಿ ಬಿಡುವೆ ಎಂದು ಗದರಿದ್ದು ನೆನಪಾಯಿತು. ಕಾರಣವೇ ಇಲ್ಲದ ಹಿಂಸೆಯ ಆನಂದ! ತಾಯಿ ಬಲವಾಗಿ ನೂಕಿದಳು. ಹಿಂಗಾಲು ಜಾರಿ ಬಿದ್ದ ಅಪ್ಪ. ಬೆತ್ತ ಕಿತ್ತುಕೊಳ್ಳಲು ಆಗಿರಲಿಲ್ಲ. ಅಷ್ಟರಲ್ಲಿ; ನಿಮ್ಮ ಮನೆಯ ಇವತ್ತು ಒಂದೊ ಎರಡೊ ಹೆಣ ಬೀಳುತ್ತವೆ ಎಂದು ಎಲ್ಲೊ ಇದ್ದ ತಾತನಿಗೆ ಯಾರೊ ಹೇಳಲಾಗಿ ತಾತ ಓಡೋಡಿ ಬಂದಿದ್ದ. ಮತ್ತದೇ ತಾಯಿಯೂ ಅಪ್ಪನೂ ಹೋರಾಡುತ್ತಿದ್ದರು. ಅಪ್ಪನಿಗೆ ಇವನನ್ನು ಇವತ್ತೇ ಕೊಲ್ಲಬೇಕೂ… ಸಾಧ್ಯವಾದರೆ ಇವಳನ್ನೂ ಕೂಡ ಎಂದು ರುದ್ರವಾಗುತ್ತಿದ್ದ. ನನ್ನ ತಾಯಿಯೋ; ಮಗನ ಪ್ರಾಣವ ಉಳಿಸಿಕೊಳ್ಳಲೇಬೇಕೆಂದು ಸಾಕ್ಷಾತ್ ಕಾಳಿಕಾ ಮಾತೆಯೇ ಆಗಿ ಬಿಟ್ಟಿದ್ದಳು.

ಎಂತಹ ಮಾನವೀಯತೆ, ಅಮಾನವೀಯತೆ? ಎರಡೂ ಮಾನವ ಸಂಗತಿಗಳೇ. ನನ್ನ ಹುಟ್ಟಿಗೆ ಕಾರಣರಾದ ಅವರಿಬ್ಬರಲ್ಲಿ ಆ ಎರಡು ಸಂಗತಿಗಳು ನನ್ನ ನೆಲೆಯಲ್ಲಿ ಬರ್ಬರವಾಗಿ, ಅಮಾನುಷವಾಗಿ ಹೋರಡುತ್ತಿವೆಯಲ್ಲಾ… ಅಷ್ಟರಲ್ಲಿ ತಾತ ಬಂದು ಇಬ್ಬರ ಕೈಯಲ್ಲೂ ಇದ್ದ ಆ ಬೆತ್ತವ; ಆಯುಧವ ಕಿತ್ತುಕೊಂಡ. ತಾತ ಬರುತ್ತಿದ್ದುದು ಯಾವತ್ತೂ ಅಂತಹ ಗಳಿಗೆಯಲ್ಲೇ! ಏನು ವಿಚಿತ್ರವೋ ಏನೊ… ತಾಯಿ ಕಟ್ಟು ಬಿಚ್ಚಿ ಅಪ್ಪಿ ಹಿಡಿದುಕೊಂಡು ಗೊಳೋ ಎಂದು ಅತ್ತಳು. ತಾತ ಸಂತೈಸಿದ್ದ. ‘ಇಂತಾ ರಾಕ್ಷಸ ಮಗನ ನಾನು ಮುದ್ದಿನಿಂದ ಬೆಳೆಸಿದೆನಲ್ಲಾ’ ಎಂದು ವಿಷಾದ ಪಡುತ್ತಿದ್ದ. ತಾಯಿ ನನ್ನ ಮೈ ಮೇಲಿನ ಬರೆಗಳ ಮುಟ್ಟಿ ಮುಟ್ಟಿ ನೋಡಿ ಬಿಕ್ಕಳಿಸುತ್ತ ಅಳುತ್ತಿದ್ದಳು. ಅಜ್ಜಿ ಬಂದು ‘ಏನ್ ತಪ್ಪ ಮಾಡಿದ್ಲಾ’ ಎಂದು ಕೇಳಿದ್ದಳು. ನಾನು ಉತ್ತರಿಸಿರಲಿಲ್ಲ. ತಾಯಿ ಅತ್ತ ಮುಖ ತಿರುವಿಕೊಂಡಳು. ‘ನಿಮ್ ಕರ್ಮ ನಾವೇನ್ಮಾಡುಕಾದದು’ ಎಂದು ನಿರ್ಲಕ್ಷಿಸಿ ಬೀದಿಯತ್ತ ಹೊರಟು ಹೋದಳು. ತಾಯ ಕಣ್ಣೀರು ಮೌನವಾಗಿ ಹರಿಯುತ್ತಲೇ ಇದ್ದವು. ಉಳಿದಿದ್ದ ಒಂದೆರಡು ಬಳೆಗಳನ್ನೂ ಮುರಿದು ಬಸಾಡಿದಳು. ಅಪ್ಪನ ಬಗ್ಗೆ ಅಷ್ಟೊಂದು ತಿರಸ್ಕಾರ ಬಂದಿತ್ತು.

ಹಿತ್ತಲಿಗೆ ಕರೆದೊಯ್ದಳು. ಅವನು ತಲೆ ಮುಖ ಬೆನ್ನಿಗೆಲ್ಲ ಉಯ್ದಿದ್ದ ಉಚ್ಚೆಯ ತೊಳೆದು ಸ್ನಾನ ಮಾಡಿಸಿದಳು. ನನ್ನ ದೇಹ ಆಗಲೂ ನೋವಿನಿಂದ ಅಪ್ಪನ ಭಯದಿಂದ ನಡುಗುತ್ತಿತ್ತು. ಅಪ್ಪನೇ ತಾಯಿಗೂ ನನಗೂ ಯಮನಾಗಿ ಬಿಟ್ಟಿದ್ದ. ‘ನನ್ನ ಮ್ಯಾಲೆ ಕೈ ಮಾಡ್ದೆ ಇಲ್ಲಾ ಇವತ್ತೂ ಮುಂದೆ ಅದೆ ನಿನಗೆ ಮಾರಿಹಬ್ಬʼ ಎಂದು ಅಪ್ಪ ಎತ್ತಲೊ ಹೊರಟು ಹೋಗಿದ್ದ. ತಾಯಿ ಆಗಲಿ ಎಂಬಂತೆ ನಿರ್ಣಾಯಕ ಭಾವದಲ್ಲಿ ಹಿತ್ತಿಲಲ್ಲಿ ಕೂತು ನನ್ನ ಸಂತೈಸುತ್ತಿದ್ದಳು. ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ‘ಇನ್ನೂ ಯಾಕತ್ತಿಯೇ ಸುಮ್ನಿರೂ… ನನ್ನ ನೋವ ನಾನೆ ಸುದಾರಿಸ್ಕತಿನೀ’ ಎಂದೆ. ಮೌನ ಆವರಿಸಿತ್ತು. ಕತ್ತಲಾಗಿತ್ತು. ಹಿತ್ತಿಲ ತಿಪ್ಪೆಯತ್ತ ಮಿಂಚು ಹುಳುಗಳು ಸುಖವಾಗಿ ಮಿನುಗಿ ಹಾರಾಡುತ್ತಿದ್ದವು. ತಾಯಿ ಗಾಢವಾಗಿ ಏನೋ ಯೋಚಿಸುತ್ತಿದ್ದಳು. ಅವಳ ಮಂಡಿ ಮೇಲೆ ತಲೆ ಇಟ್ಟು; ‘ಅಪ್ಪ ವಾಪಸ್ಸು ಬಂದು ಏನು ಮಾಡುವನೊ’ ಎಂದು ಯೋಚಿಸುತ್ತಿದ್ದೆ. ‘ಆಗೋದೆಲ್ಲ ಆಗಲಿ’ ಎಂಬಂತೆ ತಾಯಿ ಮನೆ ಒಳಕ್ಕೆ ಕರೆತಂದಿದ್ದಳು. ಅವಳ ನೆರಳಂತೆ ಅಂಟಿಕೊಂಡಿದ್ದೆ. ಅಜ್ಜಿ ಅಡುಗೆ ಮಾಡುತ್ತಿದ್ದಳು. ತಾಯ ಬರಿಗೈಗಳು ಏನ್ನನ್ನೊ ಹೇಳುತ್ತಿದ್ದವು. ಗ್ರಹಿಸಲಾರದವನಾಗಿದ್ದೆ. ‘ನಾಕಕ್ಷರ ಕಲ್ತುಕೊ ಅಂತಿಯಲ್ಲಾ; ನೋಡು ಯೀಗ ಯೆಂಗಾಯ್ತು… ನಂಗೂ ಸುಖವಿಲ್ಲಾ ನಿಂಗೂ ಸುಖವಿಲ್ಲಾ. ‘ನಾ ಸತ್ತು ಮಣ್ಣಿಗೋದ್ರೂ ಸರಿಯೇ… ನೀನಕ್ಷರ ಕಲಿಲೇ ಬೇಕು ಕಲಾ’ ಎಂದು ಹೇಳಿ ಸೆರಗಿಂದ ಕಣ್ಣೀರ ಒರೆಸಿಕೊಂಡಳು. ತಾತ ಪಡಸಾಲೆಯಲ್ಲಿ ಬೀಡಿ ಸೇದುತ್ತ ‘ಏನು ಮಾಡಲಿ’ ಎಂದು ಯೋಚಿಸುತ್ತ ಕೂತಿದ್ದ. ತಾತ ಇದ್ದಾನೆಂದು ಧೈರ್ಯ ಬಂತು.