ಅವನು ಒಬ್ಬ ಅಪರಾಧಿ ಎಂಬಂತೆ ನನ್ನೆದ್ರು ಕೂತು ಒಪ್ಪಿಸುತ್ತಿದ್ದ. ವಿಚಾರಣಾಧಿಕಾರಿಯಂತೆ ನನ್ನ ಪ್ರಶ್ನೆಗಳಿದ್ದವು. ಒಂದೇ ತಾಯ ಬಳ್ಳಿಯವರು. ಅವನೇ ಬೇರೆ ನಾನೇ ಬೇರೆ ಎಂಬಂತಿತ್ತು. ಅಂದು ಅವನು ದೊಡ್ಡ ಸಾಹೇಬನಾಗಿ ಬರುತ್ತಾನೆ ಎಂದು ಅವನು ಅತಾರಿ ಇರಬೇಕೂ; ಇದೇ ನನ್ನ ತಮ್ಮನ ಬಗ್ಗೆ ತಾನೆ ಅಪ್ಪನ ಮುಂದೆ ರೀಲು ಬಿಡುತ್ತಿದ್ದುದು. ಒಂದು ಕನಸಿನ ಲೋಕವನ್ನೇ ಹೆಣೆದಿದ್ದರಲ್ಲ ಆ ರಾತ್ರಿ ಅಮಲಾಗಿ. ಈಗ ಈ ತಮ್ಮನ ಬಗ್ಗೆ ಯಾರೂ ಕನಸು ಕಟ್ಟುವುದಿಲ್ಲ. ಯಾರಿಗೂ ಬೇಡವಾದವನು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 26ನೇ ಕಂತು

ಕ್ಷಣ ಮಾತ್ರದಲ್ಲಿ ಬಚಾವಾಗಿದ್ದೆವು. ಗಡಿಯಾರ ಒಂದು ಗಂಟೆಗೆ ಸಮೀಪಿಸುತ್ತಿತ್ತು. `ನೀನು ಬರಲಾರೆ ಅನ್ಸುತ್ತೆ. ಹೊತ್ತಾಗುತ್ತೆ; ಹೋಗ್ತಿನಿ’ ಎಂದು ಎದ್ದುನಿಂತ ಸಾಕೇತ್. ಮಾತು ಉಳಿಸಿಕೊಳ್ಳದೆ ದ್ರೋಹ ಮಾಡಿದೆ ಎನಿಸಿತು. ತಡೆದೆ `ಅಣ್ಣಾ… ನೋಡು ಈ ನನ್ನ ತೋಳುಗಳ… ಈ ಶಕ್ತಿಹೀನ ಎದೆಯ… ಗುಂಡು ಹಾರಿಸುವ ಸಾಮರ್ಥ್ಯ ಇದೆಯೆ ಈ ದೇಹಕ್ಕೇ… ಬೇಡಾ… ನನ್ನಿಂದಾಗದು ರಕ್ತ ಕ್ರಾಂತಿಯ ಮೋಹ. ನೀನೊಂದು ಪೆನ್ನು ಕೊಟ್ಟು ಹೋಗು ಗುರುತಿಗೆ… ಅದನ್ನೆ ಬಂದೂಕಾಗಿ ಮಾಡಿಕೊಳ್ಳುವೆ’ ಎಂದು ಸಾಕೇತನ ಮುಂಗೈ ಹಿಡಿದು ಕೊನೆಯ ನೋಟ ಎಂಬಂತೆ ಅವನ ಮುಖವ ದಿಟ್ಟಿಸಿದೆ. ಜೇಬಿಂದ ಪೆನ್ನು ತೆಗೆದುಕೊಟ್ಟ. ಬರ್ತೀನಿ ಎಂದು ತರಾತುರಿಯಲ್ಲಿ ಹೊರಟ. ಗಮನಿಸಿದೆ. ಕಾಲಿಗೆ ಚಪ್ಪಲಿ ಇರಲಿಲ್ಲ. ಹುಲಿಯ ನಿಶ್ಯಬ್ದ ಹೆಜ್ಜೆಯಂತೆ ಆಚೆಗೆ ಹೊರಟು ಹೋದ. ದೀರ್ಘವಾದ ನಿಟ್ಟುಸಿರ ಬಿಟ್ಟು ದುಃಖಳಿಸಿದೆ. ರಾಮದಾಸ್ ನೆನಪಾದರು. ಯಾವುದೇ ಕಷ್ಟ ಕಾಲದಲ್ಲು ನಾನಿರುವೆ ಜೊತೆಗೆ ಎಂದಿದ್ದರಲ್ಲಾ ಎಂದು ಸಮಾಧಾನ ಮಾಡಿಕೊಳ್ಳುತಿದ್ದೆ. ದಪ್ಪ ಬೂಟುಗಾಲಿನ ಸದ್ದು ಕಾರಿಡಾರಿನಲ್ಲಿ ಅಪ್ಪಳಿಸಿಕೊಂಡು ಬರುತ್ತಿತ್ತು. ಮುಂದಾಗಿ ನಾನೇ ಬಾಗಿಲು ತೆಗೆದಿದ್ದಕ್ಕೂ ಆ ಪೇದೆ ನನ್ನ ರಟ್ಟೆಯ ಬಲವಾಗಿ ಹಿಡಿದಿದ್ದಕ್ಕು ಒಂದೇ ಗಳಿಗೆ ಆಗಿತ್ತು.

ಎಲ್ಲಿ ಅವನು ಈಗ ಬಂದಿದ್ದವನು ಎಂದು ಕತ್ತು ಮುರಿದು ಬಿಡುವಂತೆ ಎಳೆದಿಡಿದು ಕೇಳಿದ. ಯಾರೂ ಬಂದಿಲ್ಲ; ನೀವೇ ನೋಡಿ ಬೇಕಾದರೆ… ಎಂದು ರೂಮಿನತ್ತ ಕೈ ತೋರಿದೆ. ಇಬ್ಬರು ನುಗ್ಗಿ ಮಂಚದ ಕೆಳಗೆ ಪರಿಶೀಲಿಸಿದರು. ಕಬೋರ್ಡ್ ತೆರೆದು ನೋಡಿ ಮುರಿದು ಹೋಗುವಂತೆ ಮುಚ್ಚಿದರು. `ಹೇ; ಸರ್ಯಾಗಿ ಹೇಳು… ಇಲ್ಲಿ ಯಾವ ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದಾನೆ ಅವನು’ ಎಂದು ಬಂಧಿಸಲು ಮುಂದಾದರು. ಕಿರುಚಿಕೊಂಡೆ. ಅಲ್ಲಿ ಇಲ್ಲಿ ಇದ್ದವರೆಲ್ಲ ನನ್ನ ರಕ್ಷಣೆಗೆ ಬಂದರು. `ಸಾರ್; ಇವನು ಅಮಾಯಕ ರಾಂಗ್ ಮೆಸೇಜ್ ಆಗಿದೆ. ಇವನು ಅಂತವನಲ್ಲ. ಪಕ್ಕಾ ಗಾಂಧಿವಾದಿ. ಬಿಟ್ಟುಬಿಡಿ ಎಂದು ವಾದಿಸಿದರು. ನೀವು ಇಡೀ ಹಾಸ್ಟಲನ್ನೇ ತಲಾಷ್ ಮಾಡಿ ಅಂತವರು ಇಲ್ಲಿ ಯಾರೂ ಬಂದಿಲ್ಲ; ಬರೋದು ಇಲ್ಲಾ ಎಂದು ಪೋಲೀಸರ ಪತ್ತೆ ಕಾರ್ಯಾಚರಣೆಯನ್ನೆ ಅಲ್ಲಗಳೆದು; ಒಬ್ಬ ವಿದ್ಯಾರ್ಥಿಯನ್ನು ಹೀಗೆ ಬಂಧಿಸಲು ನಾವು ಬಿಡುವುದಿಲ್ಲ ಎಂದು ತಡೆ ಒಡ್ಡಿ ವಾರ್ಡನ್ ಅವರ ಕರೆಸಿದರು. ಅವರು ಅಲ್ಲೇ ಕ್ವಾಟ್ರಸ್ಸಲ್ಲಿದ್ದರು. `ಇದು ತಪ್ಪಾಗುತ್ತದೆ. ನೀವಿಲ್ಲಿ ಬರಲು ಮೊದಲು ನಿಮಗೆ ಪರ್ಮಿಷನ್ ಯಾರು ಕೊಟ್ಟಿದ್ದೂ… ನೋ; ಐ ನೆವರ್ ಗೀವ್ ಚಾನ್ಸ್ ಟು ಅರೆಸ್ಟ್’ ಎಂದು ಹೂಂಕರಿಸಿದರು. ಪೋಲೀಸರು ಏನೇನೊ ಹೇಳಿದರು. ಕೊನೆಗೆ ನಾವೆ ಗೆದ್ದಿದ್ದೆ   ವು. ಹಾಗೆ ಬರಿಗೈಯಲ್ಲಿ ಬೇಟೆ ತಪ್ಪಿತೆಂದು ಹಿಂತಿರುಗಿ ಹೋಗುವಾಗ ಬಂದೂಕು ಧರಿಸಿದ್ದ ಆ ಪೇದೆ ದಿಟ್ಟಿಸಿ ಬೆಟ್ಟು ಮಾಡಿ ಹೇಳಿದ್ದು ಈಗ ತಾನೆ ಕಿವಿ ಮೇಲೆ ಬಿದ್ದಂತಿದೆ. ಹೇಯ್! ನೀನು ಇವತ್ತು ಒಂದು ದಿನ ತಪ್ಪಿಸ್ಕೊಂಡಿದ್ದೀಯೇ… ಅಷ್ಟೇ. ಮತ್ತೆ ಬರುತ್ತೇವೆ. ಹಿಡಿದೇ ಹಿಡಿಯುತ್ತೇವೆ. ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಬೇಟೆಯ ಕಣ್ಣುಗಳು ಇನ್ನು ಮುಂದೆ ಯಾವತ್ತೂ ನಿನ್ನತ್ತ ಜಾಗೃತವಾಗಿರುತ್ತವೆ’ ಎಂದು ಅದೇ ಬೂಟುಗಾಲಿನ ಸದ್ದಲ್ಲಿ ಕರಗಿ ಹೋದರು. ವಾರ್ಡನ್ ನಂಜೇಗೌಡರು ಎಚ್ಚರಿಸಿ; ರೂಮ್ ಖಾಲಿ ಮಾಡು… ಎಲ್ಲಿಯಾದರು ಹೋಗಿ ತಪ್ಪಿಸಿಕೊ ಎಂದರು. ಮನದಲ್ಲೆ ಅವರಿಗೆ ಕೈ ಮುಗಿದೆ.

ಆಘಾತವಾಗಿತ್ತು. ಚೇತರಿಸಿಕೊಳ್ಳಲು ಒಂದು ವಾರ ಬೇಕಾಗಿತ್ತು. ಇನ್ನೊಂದಿಷ್ಟು ದಿನ ಇಲ್ಲೇ ಇರುವೆ ಎಂದು ವಿನಂತಿಸಿಕೊಂಡಿದ್ದೆ. ಇಲ್ಲಿದ್ದರೆ ಮಾತ್ರ ರಕ್ಷಣೆ ಹೊರಗೆ ಹೋದರೆ ಬಲಿ ಹಾಕುತ್ತಾರೆಂದು ಭಯಗೊಂಡೆ. ಎಂತಹ ಚಾಣಾಕ್ಷನಿರಬೇಕು ಸಾಕೇತ್! ಏನೊ ಅನುಮಾನ ಎಂದು ತತ್‌ಕ್ಷಣವೆ ಪರಾರಿ ಆಗಿದ್ದನಲ್ಲಾ! ಸದ್ಯ ಅವನು ನನ್ನನ್ನೂ ಪಾರು ಮಾಡಿ ಮಾಯವಾದ ಎಂದುಕೊಂಡೆ. ಎಂತಹ ವಿಚಿತ್ರ ಭೆಟ್ಟಿ… ಅಷ್ಟೇ ವಿಸ್ಮಯ ವಿದಾಯ… ಅಪಾಯಕ್ಕೂ ಉಪಾಯಕ್ಕೂ ತುಂಬ ಚಿಕ್ಕ ಅಂತರ. ಚಾಣಾಕ್ಷತೆ ಒಂದೇ ಕೈ ಹಿಡಿಯದು. ನನ್ನನ್ನು ಕಾಪಾಡಿದ್ದು ಗೆಳೆಯರೇ, ವಾರ್ಡನ್ ಅವರೇ ಅಥವಾ ಅವನ್ನೆಲ್ಲ ಮೀರಿದ ಸ್ಥಿತಿಯೇ… ನಾನು ಸಂಕಟವನ್ನು ನೀಗಿಕೊಳ್ಳುವಾಗ ವಿಧಿಯ ಸಹವಾಸ ಮಾಡುವುದಿಲ್ಲ… ಅತೀಂದ್ರಿಯ ಶಕ್ತಿಗಳ ಬಗ್ಗೆ ವಿಚಾರ ಮಾಡುವ ಮೂಲಕ ನಿರಾಳತೆಯನ್ನು ಕಂಡುಕೊಳ್ಳುವೆ. ಇದು ದುಃಖವನ್ನು ಮೀರುವುದಲ್ಲಾ… ಅದನ್ನೇ ಹುಡುಕುವುದಾಗಿರುತ್ತದೆ. ಹಾಗೆ ತಡಕುವಾಗ ನನ್ನ ತಪ್ಪಿಗೆ ನಾನೇ ಕಾರಣನಾಗಿರುತ್ತೇನೆ. ತಪ್ಪನ್ನು ಹೊರಗೆ ಹುಡುಕಿ ಸಾಕಾಗಿದೆ. ಹುಡುಕಿದ್ದನ್ನು ನಿವಾರಿಸುವ ಕೀಲಿ ಕೈ ನನ್ನ ಬಳಿ ಇಲ್ಲ! ತಪ್ಪಿತಸ್ಥರು ಎಂದಾದರೂ ತಪ್ಪು ಒಪ್ಪಿಕೊಂಡಿದ್ದಾರೆಯೆ? ಬೆಳಕಾಗಿತ್ತು. ಕ್ಯಾಂಪಸ್ಸಿನ ಪ್ರಾಯಕ್ಕೆ ಮುಪ್ಪೇ ಇರಲಿಲ್ಲ. ಪ್ರಾಯ ತುಂಬಿದವರು ಹಕ್ಕಿಯಂತೆ ಹಾರಿ ಹಾರಿ ಬಂದು ಹಾಗೇ ಎಲ್ಲೆಲ್ಲಿಗೊ ತಮ್ಮ ಗೂಡುಕಂಡುಕೊಂಡು ಹೊರಟು ಹೋಗಿರುತ್ತಾರೆ.

ನಾನು ಯಾವ ಗೂಡನ್ನು ಹುಡುಕಲಿ… ಬಯಲಿಗೆ ಗೂಡಿನ ಹಂಗೇ… ಇವೆಲ್ಲ ಲಹರಿಯಲ್ಲಿ ಚೆಂದ! ಬೆಂಕಿ ಸುಡುತ್ತದೆ ನಿಜಾ… ಆದರೆ ಯಾರಾದರೂ ಹೊತ್ತಿಸಿ ಹಿಡಿದುಕೊಳ್ಳಬೇಕಲ್ಲಾ… ಬದುಕಿನ ದಾರಿ ಸಾಗುವ ಪರಿಯಲ್ಲಿ ಕೊನೆಗೂ ಮನುಷ್ಯ ಒಂಟಿಯಲ್ಲವೇ… ಮನುಷ್ಯ ಸಂಘಜೀವಿ ಎನ್ನುತ್ತದೆ ಸಿದ್ಧಾಂತ. ಅಲ್ಲಾ… ಹಾಗೇಲ್ಲಾ; ಮನುಷ್ಯ ಕೊನೆಗೆ ಒಂಟಿ ಎನ್ನುತ್ತದೆ ವೇದಾಂತ… ಅವನು ಒಟ್ಟಿಗೆ ಬಾಳುವುದೇ ಒಂಟಿತನದಿಂದ ತಪ್ಪಿಸಿಕೊಳ್ಳಲು. ಹಾಗಾಗಿಯೇ ಇಷ್ಟೆಲ್ಲ ಸಾಮಾಜಿಕ ಉಪಾಯಗಳು, ಉಪಾದಿಗಳು, ಕೊನೆಗೆ ತನ್ನ ಉಪಾಯಗಳು ವ್ಯರ್ಥ ಎನಿಸಿದಾಗ ಅಲೌಖಿಕಕ್ಕೆ ಜಿಗಿಯುತ್ತಾರೆ. ಅಲ್ಲೊಬ್ಬ ಜೊತೆಗಾರನನ್ನು ಹುಡುಕಿಕೊಳ್ಳುತ್ತಾನೆ. ಅವನ ಹೆಸರು ದೇವರು. ಅವನು ನಿಜಕ್ಕೂ ಇದ್ದಾನೊ ಇಲ್ಲವೊ; ಒಟ್ಟಿನಲ್ಲಿ ಒಂಟಿತನವ ನೀಗಿಕೊಳ್ಳಬೇಕಲ್ಲಾ… ಹಾಗಾಗಿಯೇ ಸಾವಿನ ಆಚೆಗೂ ಅಲ್ಲೊಂದು ಲೋಕ ಇದೆ ಎಂದು ನಂಬುತ್ತಾನೆ. ಆ ನಂಬಿಕೆಯಲ್ಲೇ ಏಳುಬೀಳು ಕಂಡು ಸನ್ಯಾಸತ್ವ ಸ್ವೀಕರಿಸುತ್ತಾನೆ. ವೇಷದಾರಿ ಸನ್ಯಾಸಿಗಳಿಗಿಂತ ಸಾಮಾನ್ಯ ಬಡಪಾಯಿಯೇ ದೊಡ್ಡ ಸಂತ ಸನ್ಯಾಸಿ… ಎಲ್ಲವನ್ನೂ ತನ್ನ ಪ್ರಾಣವನ್ನೂ ಬಿಟ್ಟುಬಿಡಲು ಸಿದ್ಧನಾಗಿರುತ್ತಾನೆ. ಹಲವರು ಆತ್ಮ ಸಂಗಾತದಲ್ಲಿ ಕಾಲ ಕಳೆಯುತ್ತಾರೆ… ಇನ್ನು ಕೆಲವರು ಜನ್ಮಾಂತರಗಳಲ್ಲಿ ವಿಶ್ವಾಸ ಇಟ್ಟು ಕಾಯುತ್ತಾರೆ. ಮತ್ತೆ ಎಲ್ಲರನ್ನೂ ಬೆಟ್ಟಿ ಆಗುವೆ ಎಂಬ ನಿರೀಕ್ಷೆಯಲ್ಲೆ ಪ್ರಾಣಬಿಟ್ಟಿರುತ್ತಾರೆ.

ಪ್ರೇಯಸಿ ಮಮ್ತಾಜಳಿಗಾಗಿ ಷಹಜಾನ್ ಲೋಕ ವಿಖ್ಯಾತ ತಾಜಮಹಲನ್ನೆ ಕಟ್ಟಿಸಿಬಿಟ್ಟ; ತಮ್ಮ ಪ್ರೇಮ ಅಮರ ಎಂದು! ಅಮರತ್ವಕ್ಕೆ ಹುಟ್ಟು ಸಾವಿಲ್ಲವಂತೆ! ಯಾರು ಆ ಅಮರ ಜೀವಿಗಳು? ಪ್ರತಿಕ್ಷಣವೂ ಬೇರೆ ಬೇರೆ ಅಲ್ಲವೇ… ಅಮರತ್ವ ಎಲ್ಲಿಂದ ಬಂತು? ಕ್ರಾಂತಿಗಳು ಅಮರ ಸಮಾಜಗಳ ಸ್ವರ್ಗದ ಬಾಗಿಲುಗಳೇ? ಆ ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಮಲಗಿರುವ ಫೆರೊ ದೊರೆಗಳು ಯಾವತ್ತು ಎದ್ದು ಕೂರುವರು? ನೈಲ್ ನದಿಯ ಆ ಮರುಭೂಮಿ ದಂಡೆಯಲ್ಲಿ ಮತ್ತೆ ತಮ್ಮ ಚಕ್ರಾಧಿಪತ್ಯವನ್ನು ಕಟ್ಟಬಲ್ಲರೇ… ಎಲ್ಲಿಂದ ಎಲ್ಲಿಗೆ ಬಂದ ಮನುಷ್ಯ… ಮಮ್ತಾಜಳ ಒಂಟಿತನ ಭಾದಿಸಿತ್ತೇ ನಮಗೇ… ಮಗ ಔರಂಗಜೇಬನೇ ಷಹಜಾನನ ಬಂಧಿಸಿ ಒಂಟಿ ಮಾಡಿ; ನೀನು ಈ ದೂರದ ಸೆರೆಮನೆಯ ಕಿಟಕಿಯಿಂದಲೇ ಆ ನಿನ್ನ ಪ್ರೇಯಸಿಯ ಸಮಾಧಿ ಚೆಲುವ ನೋಡು ಎಂದು ಚಿತ್ರ ಹಿಂಸೆ ಕೊಟ್ಟಿದ್ದನಲ್ಲಾ! ಮರೆಯಬಹುದೇ ಅತ್ತರಿನ ಮರೆಯ ಮಗನ ಕಗ್ಗೊಲೆಯಾ! ಚರಿತ್ರೆಯ ನಿರ್ದಯ ರಕ್ತ ಪಾತಗಳಲ್ಲಿ ಮನುಷ್ಯ ಏನನ್ನು ಗಳಿಸಿದ! ಹಾಗೆ ತಂದೆಯಾದ ಷಹಜಾನನಿಗೆ ಮಗ ಔರಂಗಜೇಬ ಕಳಿಸಿಕೊಟ್ಟಿದ್ದ ಆ ಪವಿತ್ರ ಭೋಜನವನ್ನು ಮರೆಯಬಹುದೇ… ಒಂಟಿಯಾಗಿ ಜೀವ ಹಿಡಿದುಕೊಂಡು ಸೆರೆಯಲ್ಲಿ ಕೂತಿದ್ದ ಮುಪ್ಪಾನು ಮುದುಕ ಷಹಜಾನನಿಗೆ ಕಾಡಿದ ಒಂಟಿತನ ಎಂತದ್ದು? ಮಹಾ ಸಾಮ್ರಾಜ್ಯದ ಸಿಂಹಾಸನ ಏನಾಯಿತು?

ಅದೊಂದು ದಿನ ಷಹಜಾನ್ ತಾಜಮಹಲಿನ ಎದುರಿನ ಕೋಟೆಯ ಉಪ್ಪರಿಗೆಯಲ್ಲಿ ಒಬ್ಬನೇ ನಡುಗುತ್ತ ಕೂತಿದ್ದ. ಯಮುನಾ ನದಿ ನಿರ್ಭಾವುಕವಾಗಿ ಹರಿಯುತ್ತಿತ್ತು. ಆದರೆ ಮೊಘಲ್ ದೊರೆಗಳ ರಕ್ತಪಾತಗಳೆಲ್ಲ ಯಮುನೆಯ ದಂಡೆಯಲ್ಲೇ ಘಟಿಸಿದ್ದು. ನೆತ್ತರಿನ ಕೈಗಳನ್ನು ಅದೇ ನದಿಯಲ್ಲೆ ಅವರೆಲ್ಲ ತೊಳೆದುಕೊಂಡದ್ದು. ಸುತ್ತ ಸರ್ಪಗಾವಲು. ನಮ್ಮ ನೆರಳೆಂದು ಕೊಂಚ ನಿರ್ಲಕ್ಷ್ಯ ಮಾಡಿದರೂ ಆ ನೆರಳುಗಳೇ ಇರಿದು ಬಿಡುತ್ತಿದ್ದವು. ಕಾವಲುಗಾರ ಬಂದು ಹೇಳುತ್ತಾನೆ… ಈ ರಾತ್ರಿ ನಿಮ್ಮ ಮಗ ವಿಶೇಷ ಔತಣವ ಕಳಿಸುವರಂತೆ. ನೀವದನ್ನು ಸುಖವಾಗಿ ಉಣ್ಣಬೇಕಂತೆ ಎಂದು ಹೇಳಿ ಹೊರಟು ಹೋಗಿರುತ್ತಾನೆ. ಸೆರೆಯ ಕೂಳು ಸಾಕಾಗಿರುತ್ತದೆ. ಮಗನಿಗೆ ನನ್ನ ಮೇಲೆ ಕರುಣೆ ಬಂತೇ… ನಾಳೆ ನನ್ನ ಸೆರೆವಾಸ ಮುಗಿಯುವುದೇ ಎಂದು ಯೋಚಿಸುತ್ತಿರುತ್ತಾರೆ. ಸೂರ್ಯ ಮುಳುಗುತ್ತ ಯಮನೆಯ ನೀರೆಲ್ಲ ರಕ್ತ ಎಂಬಂತೆ ಕತ್ತಲಿಗೆ ಸರಿಯುತ್ತಿರುತ್ತದೆ. ಏನೊ ಸಡಗರ ಜೊತೆಯಲ್ಲೆ ಸಂಶಯ! ಏನಾಗುವುದೊ; ಯಾರಿಗೆ ಗೊತ್ತು ಕ್ರೂರಿ ಮಗನ ವರ್ತನೆ… ಕೊಂಚ ತಡವಾಗಿತ್ತು. ಹುಡುಗಾಟದ ಭೋಜನ ಅಲ್ಲ ಅದು. ತಯಾರು ಮಾಡಲು ಸಮಯ ಹಿಡಿದಿತ್ತು.

ಹಿರಿಯ ಮಗನ ನೆನಪಾಯಿತು ಷಹಜಾನನಿಗೆ. ಅತ್ಯಂತ ಪ್ರೀತಿಯ ಹಿರಿ ಮಗ ದಾರಾಶೀಕೊ! ಔರಂಗಜೇಬನ ಕ್ರೌರ್ಯಕ್ಕೆ ವ್ಯಾಖ್ಯಾನಗಳಿಲ್ಲ. ಅಣ್ಣನನ್ನೂ ಬಂಧಿಸಿ ಹಿಂಸಿಸಿದ್ದ. ಎಂತಹ ಚೋದ್ಯ. ದಾರಾಶೀಕೊ ಜ್ಞಾನಿ… ಅಂತಃಕರಣದಲ್ಲಿ ಮಿಡಿವವನು. ಮುಸ್ಲಿಮನಾದರೂ ಅವನ ಮುತ್ತಾತ ಅಕ್ಬರನಂತೆ ಉದಾರವಾದಿ ಹಿಂದೂ ವೇದಾಂತವನ್ನು ಮಾನವೀಯತೆಗಾಗಿ ಅಭ್ಯಾಸ ಮಾಡಿ ತಿಳಿದಿದ್ದವನು. ಪಿತೃ ಹತ್ಯೆ ಸಹೋದರತ್ವದ ಹತ್ಯೆ ಇಸ್ಲಾಂ ದೊರೆಗಳಿಗೆ ಹೊಸದೇನಾಗಿರಲಿಲ್ಲ. ಕತ್ತಲಾಗಿತ್ತು. ಆಕಾಶದ ತಾರೆಗಳ ಮಬ್ಬುಗಣ್ಣಲ್ಲಿ ಅಳತೆ ಮಾಡುತ್ತಿದ್ದ ಷಹಜಾನ್. ಬಂತು ಸುಖ ಭೋಜನ. ಸುಂದರವಾಗಿ ಅಲಂಕರಿಸಿದ್ದರು ಭೋಜನ ಬುಟ್ಟಿಯನ್ನು… ಏನೊ ಘಮಘಮ.. ಕೂರಿಸಿದರು ಷಹಜಾನನ ಊಟ ಬಡಿಸಲು.. ಅಂತಹ ಸತ್ಕಾರ ಪ್ರೀತಿಯಿಂದಲೇ ಮುದುಕನ ಪ್ರೇಮದ ಎದೆಗೂಡು ನಗಾರಿಯಂತೆ ಬಡಿದುಕೊಳ್ಳುತ್ತಿತ್ತು. ಬಿಚ್ಚಿದರು ಮುಚ್ಚಿದ್ದ ಬುಟ್ಟಿಯ. ಕಾಣಲಿಲ್ಲ ಮಂದ ಬೆಳಕಲ್ಲಿ. ಬೆಳ್ಳಿಯ ತಟ್ಟೆಯಲ್ಲಿ ಕೈ ತೊಳೆಸಿ ಆಗಿತ್ತು. ಚಿನ್ನದ ತಟ್ಟೆಯವನಿಗೆ ಬೆಳ್ಳಿಯ ತಟ್ಟೆಯೆ ಸಾಕಾಗಿತ್ತು.

ಆತುರ ಮಾಡಬೇಡಿ ತಡೆಯಿರಿ. ನಿಮಗೆಂದೇ ನಿಮ್ಮ ಶೌರ್ಯಶಾಲಿ ಮಗ ಕಳಿಸಿರುವ ಬಹು ಬೆಲೆಯುಳ್ಳ ಭೋಜನ. ನೀವಿದನ್ನು ಪೂರ್ತಿ ಉಣ್ಣಬೇಕಂತೆ, ಸವಿಯಬೇಕಂತೆ. ಆ ವಾರ್ತೆಯನ್ನು ನಾವು ಹೋಗಿ ವಿವರಿಸುತ್ತೇವೆ ಎಂದು ದೀಪದ ಬೆಳಕನ್ನು ಹೆಚ್ಚು ಮಾಡಿ ತೆಗೆದರು. ಅದು ದಾರಾಶೀಕೊನ ರುಂಡವಾಗಿತ್ತು. ಕೈಯಲ್ಲಿಡಿದು ಮೇಲೆತ್ತಿ ತೋರಿ ತಟ್ಟೆಗೆ ಇಟ್ಟರು. ಮೂರ್ಛೆ ಹೋಗಿದ್ದ ಷಹಜಾನ್ ಕೊನೆಗೆ ಒಂದು ದಿನ ಷಹಜಾನನೂ ಮಗನ ಬರ್ಬರತೆಗೆ ಹೀಡಾಗಿ ಸತ್ತು ಹೋದ. ಎಂತಹ ತಂದೆ ಮಕ್ಕಳ ಸಂಬಂಧ. ಚರಿತ್ರೆಗೆ ವೈರಾಗ್ಯ ಬರುವುದೇ ಇಲ್ಲವೇ ಎಂದುಕೊಳ್ಳುತ್ತಿದ್ದಂತೆಯೇ ನನ್ನ ಅಪ್ಪ ಮಚ್ಚು ಹಿಡಿದು ನನ್ನನ್ನು ಹುಡುಕಾಡುತ್ತಿದ್ದ ದಿನಗಳು ನೆನಪಾದವು. ಅಲ್ಲಿ ಅಂತಹ ಅಪ್ಪ; ಇಲ್ಲಿ ಷಹಜಾನನಿಗೆ ಇಂತಹ ಮಗ ಔರಂಗಜೇಬ. ಆಗ ತಾನೆ ಬೇಟೆಯಿಂದ ತಪ್ಪಿಸಿಕೊಂಡಿದ್ದೆ. ಆಳವಾದ ಗಾಯವಾಗಿತ್ತು ಮನಸ್ಸಿನ ಮೂಲೆಯಲ್ಲಿ ಕಾಮ್ರೇಡರನ್ನೆಲ್ಲ ನೆನೆದುಕೊಂಡೆ. ಆ ಪ್ರಖ್ಯಾತ ನಕ್ಸಲ್‍ವಾದಿ ಗದ್ದರ ನನ್ನು ಕ್ಯಾಂಪಸ್ಸಿಗೆ ಕರೆಸಿ ಬಹಿರಂಗವಾಗಿ ಅವನಿಂದ ಕ್ರಾಂತಿಗೀತೆಗಳ ಹಾಡಿಸಿ ಕುಣಿಸಿ ಮೆರೆದಿದ್ದೆವಲ್ಲಾ. ನಾವು ನಡೆದು ಬಂದ ಒಂದೊಂದು ಹೆಜ್ಜೆಗಳೇ ಖಚಿತವಾದ ಸುಳಿವನ್ನು ಬಿಟ್ಟುಕೊಟ್ಟಿರುತ್ತವೆ. ಮರುಭೂಮಿಯಲ್ಲಿ ಗಾಳಿಯೇ ಹೆಜ್ಜೆಗಳ ಅಳಿಸಿ ನಿರ್ಜನ ಮಾಡಿರುತ್ತದೆ. ಇಲ್ಲಿ ಹಾಗೆ ಇಲ್ಲ. ನಮ್ಮ ಪಿಸುಮಾತುಗಳೂ ನಿಗೂಢವಾಗಿ ಎಲ್ಲಿಗಾದರು ಹೋಗಿ ತಲುಪಬಲ್ಲವು ಎನಿಸಿ ಮೈಕೊಡವಿಕೊಂಡೆ.

ಷಹಜಾನನ ಗತಿಯನ್ನು ನಾನ್ಯಾಕೆ ನೆನೆಸಿಕೊಂಡೆ? ಮನುಷ್ಯತಾನೆ ಅವನೂ; ಅವನ ಗತಿ ಯಾರಿಗಾದರೂ ಬರಹುದು. ಇಡೀ ಮೊಘಲ್ ಸಾಮ್ರಾಟರ ಉನ್ನತಿಯ ಕಾಲ ಷಹ ಜಾನನ ಅವಧಿ. ಅಂತವನು ಮಗನಿಂದಲೆ ಹತನಾದಾಗ ಏನೆಂದು ಭಾವಿಸುವುದು? ಸಾಮ್ರಾಜ್ಯದ ಸಲುವಾಗಿ ಹಾಗೆ ಬರ್ಬರವಾಗಿ ತನ್ನವರನ್ನೆ ಔರಂಗಜೇಬ ಕೊಲ್ಲಬೇಕಾಗಿರಲಿಲ್ಲ. ಹೊರಗಿನ ಶತ್ರುಗಳಿಗಿಂತ ಒಳಗಿನವರೇ ಅಪಾಯಕಾರಿ ಎನಿಸಿತ್ತು. ಹಾಗೆ ಒಂದು ದಿನ ತನ್ನ ತಂದೆಯ ಶವದ ಮುಂದೆ ನಿಂತಿದ್ದು; ಇದನ್ನು ಕೊಂಡೊಯ್ದು ಸುಟ್ಟಿಬಿಡಿ ಎಂದಾಗ ಇಬ್ಬರು ಸಾಧಾರಣ ಸೈನಿಕರು ಷಹಜಾನನ ಹೆಣವ ಎಳೆದುಕೊಂಡು ಬಂದು ಪುಟ್ಟ ಹಾಯಿ ದೋಣಿಯಲ್ಲಿ ಎತ್ತಾಕಿಕೊಂಡು ಯಮುನಾ ನದಿಯ ದಾಟಿ ತಾಜಮಹಲಿಗೆ ಬಂದು ಅಲ್ಲೊಂದು ಮೂಲೆಯಲ್ಲಿ ಅನಾಥ ಹೆಣವನ್ನು ಸುಟ್ಟಂತೆ ಬೂದಿ ಮಾಡಿ ಬಿಟ್ಟರಲ್ಲಾ… ಇದು ತರವೇ… ನಾಲ್ಕು ಜನರಾದರೂ ಇರುತ್ತಾರೆ ಯಾರಾದರೂ ಸತ್ತಾಗ. ಎಲ್ಲರೂ ಇದ್ದು ಯಾರೂ ಇರಲಿಲ್ಲ ಷಹಜಾನನಿಗೆ.. ಹಾಡಲಿಲ್ಲ ಯಾರೊಬ್ಬರೂ ಒಂದು ಶೋಕ ಗೀತೆಯನ್ನೂ ಯಾವ ಧಾರ್ಮಿಕ ವಿಧಿಗಳನ್ನೂ ಮಾಡಲಿಲ್ಲ ದೈವದ ನಂಬಿಕೆ ಔರಂಗಜೇಬನಿಗೆ ಇದ್ದಾಗಲೂ. ಏನೆಂದು ಬಣ್ಣಿಸುವುದು ರಕ್ತ ಪಾತದ ಈ ವಿಪರ್ಯಾಸವನ್ನು?

ಕ್ಯಾಂಪಸ್ ಬಿಟ್ಟು ಹೋಗಲು ದಾರಿಗಳೆ ಕಾಣಲಿಲ್ಲ. ಕ್ಯಾಂಟೀನಿನಲ್ಲಿ ಬಿಟ್ಟಿ ಊಟ ತಿಂಡಿ ಚಹಾ ಸಕಾಲಕ್ಕೆ ಸಿಗುತ್ತಿತ್ತು. ಐ.ಎ.ಎಸ್. ಕನಸಿನ ಗೆಳೆಯರು ಯಾವುದೊ ಕೋಚಿಂಗ್ ಸೇರಿದ್ದರು. ತಮಾಷೆ ಎನಿಸಿತು. ಇತಿಹಾಸವನ್ನು ಇನ್ನಷ್ಟು ಓದಲು ಮುಂದಾದೆ. ಹಾಸ್ಟಲಿನ ವಾಚ್‌ಮನ್ ಅನುಕಂಪ ತೋರಿದ್ದ. `ಅವತ್ತು ತಿರ್ಗ ಬಂದಿದ್ದ ಕನಕಪ್ಪ ಅವನೂ’ ಎಂದ. ಯಾವನೊ ಪೇದೆ ಮಪ್ತಿಯಲ್ಲಿ ಬಂದು ಪರೋಕ್ಷ ಬೆದರಿಕೆ ಒಡ್ಡುತ್ತಿದ್ದಾನೆ ಎನಿಸಿತು. `ಅವನು ಮತ್ತೆ ಬಂದ್ರೆ ಹಿದ್ದು ಇಲ್ಲೆ ಕೂರಿಸಿಕೊ’ ಎಂದಿದ್ದೆ. ಹಾಗೇ ಮಾಡಿದ್ದ ಎಲ್ಲೊ ಹೋಗಿ ಬಂದಿದ್ದೆ. ಆ ಗೆಳೆಯ ಸಿಕ್ಕಿರಲಿಲ್ಲ. ವಿಕ್ರಾಂತ್ ಫ್ಯಾಕ್ಟರಿಗೆ ಹೋಗಿ ವಿಚಾರಿಸಲು ಮನಸ್ಸು ಮಾಡಿದ್ದೆ. ಹತ್ತಿರವಾದಂತೆ ಸೆಕ್ಯೂರಿಟಿಯವನ ಪಕ್ಕದಲ್ಲೆ ಕೂತಿದ್ದ ಅವನು ಎದ್ದು ನಿಂತ ದೈನ್ಯತೆಯಲ್ಲಿ. ನೋಡಿದರೆ ಅವನು ನನ್ನ ತಮ್ಮ ಶ್ರೀನಿವಾಸ. ಬಾ ಎಂದು ಕೊಠಡಿಗೆ ಕರೆದೊಯ್ದೆ. ಹಿಂಜರಿಯುತ್ತಿದ್ದ ಮಾತಾಡಲು. ನನಗೂ ಅಂತಹ ಉತ್ಸಾಹ ಇರಲಿಲ್ಲ. ಏನು ಬಂದದ್ದು… ಇಷ್ಟು ದಿನ ಎಲ್ಲಿದ್ದೆ… ನಿಮ್ಮಪ್ಪ ಈಗ ಮೈಸೂರಿಗೇ ಬಂದು ರಸ್ತೆ ಬದಿಯ ನಳಮಹಾರಾಜ ಆಗಿದ್ದಾನಲ್ಲಾ ಎಂದು ವ್ಯಂಗ್ಯ ಮಾಡಿದೆ. `ಹೂಂ ಅಣ್ಣಾ ಅದೆಲ್ಲ ಗೊತ್ತು.. ಹೋಗಿದ್ದೆ. ಮಾತಾಡ್ಸಿದೆ. ಅವನ ಜೊತೆ ಬದ್ಕುಕಾದದೇ; ನೋಡ್ಕಂಡು ವೋಗ್ಮಾ ಅಂತ ಬಂದೆ’ ಎಂದ. ನನ್ನ ವಿಳಾಸ ಹೇಗೆ ಗೊತ್ತಾಯ್ತು ಎಂದೆ ಉದಾಸೀನನಾಗಿ. `ಮರಜ ಕಾಲೇಜಾಟ್ಲೆಲಿ ಕೇಳ್ದೆ ಅಣ್ಣಾ. ಅಲ್ಲವರೆ ಹೋಗು ಅಂತಾ ಕೇಳಿಸ್ನೊಟ್ರು’ ಎಂದ ಬಡಪಾಯಿ ಏನಲ್ಲಾ. ಥೇಟ್ ಅವರ ಅಪ್ಪನದೇ ರೂಪ. ಅದೇ ಎತ್ತರದ ಸಣಕಲು ಮೈಯ ಕೆಂಚು ಮೀಸೆಯವನು. ಅಪ್ಪನ ಕಣ್ಣ ಮೂಗು ಅವನಲ್ಲಿ ಪ್ರತಿಫಲಿಸಿದವು. ಕ್ಯಾಂಟೀನಿಗೆ ಕರೆತಂದೆ. ಸಿಗರೇಟು ಹಚ್ಚಿದೆ. ತಕೋ ಎಂದು ಪ್ಯಾಕ್ ಮುಂದಿಡಿದೆ. ಆತ ಸೇದಲಿಲ್ಲ. ನನ್ನ ಮುಂದೆ ಸೇದಬಾರದು ಎನಿಸಿತ್ತವನಿಗೆ.

`ನಮ್ಮ ತಾಯನ್ನು ಸರಿಯಾಗಿ ದಿಟ್ಟಿಸಿ ನೋಡಿದ್ದೆಯಾ…’

`ಇಲ್ಲ ಅಣ್ಣಾ… ಹಬ್ಬಗಳಿಗೆ ಬಂದಾಗ ಹೇಳ್ತಿದ್ರು. ಆಗ ತುಂಬ ಸಣ್ಣೋನಿದ್ದೆ. ನಂಬ್ಕೆ ಬರ್ತಿರ್ಲಿಲ್ಲ. ಯಾರೊ ಹಳ್ಳಿ ಹೆಂಗ್ಸ ನನ್ನ ತಾಯಿ ಅಂತಾ ಸುಳ್ಳು ಯೇಳ್ತವರೆ ಅನ್ನಿಸಿದ್ದೆ. ದೊಡ್ಡಮ್ಮನೆ ಹೆತ್ತಿ ಹಾಲ್ಕುಡಿಸಿರುಳು ಅಂತಾ ನಂಬಿದ್ದೆ.ʼ
`ಅಂದ್ರೆ ನಿಂತಾಯಿ ಚಿತ್ರನೇ ನಿನ್ಗೆ ನೆನಪಿಗೆ ಬರೋಲ್ಲ ಅನ್ಸುತ್ತೆ’

`ಹೌದಣ್ಣ, ಈಗ ಅವಳೆ ನಂತಾಯಿ ಅಂತನಿಸ್ತದೆ. ಆಗ ಮುಖನೆ ನೋಡ್ತಿರ್ಲಿಲ್ಲ. ಒಂದೇ ಒಂದು ಪೋಟೋನು ಇಲ್ಲ; ರೂಪವ ನೋಡ್ಕೊಳೊಣ ಅಂದ್ರೂ…’

`ನಿಮ್ಮಪ್ಪ ಏನಂದ… ನಾನಿಲ್ಲಿದ್ದೀನಿ ಅಂತ ಹೇಳ್ದಾ’

`ಇಲ್ಲಣ್ಣ ದೇವ್ರಾಣೆಗು ನೀವಿಲ್ಲಿದ್ದೀರಿ ಅಂತಾ ಮೇಳ್ಲಿಲ್ಲ. ಆ ಪಾಪಿಗೆ ಯಾಕಣ್ಣ ಯೇಳ್ಬೇಕೂ… ನಿಮ್ಮ ನೋಡ್ಲೆ ಬೇಕು ಅನಿಸ್ತು ಬಂದೆ… ಅವುನು ಏನೆಂದಾನು? ನಂಜೊತೆಗೆ ಯಾಕ್ಲಾ ಬಂದೆ. ನನ್ನ ಅನ್ನ ಕಿತ್ಕೊಕೆ ಬಂದಾ… ವೋಗ್ಲ ಎಲ್ಲಿಗಾರ ಅಂತ ಕಿಡಿಯಾದ ಕನಣ್ಣಾ… ಸಿಟ್ಟಾಯ್ತು. ಅವುನ್ಗೆ ಒಂದ್ಮಾತ ಕೇಳುದಿತ್ತು. ಅದ್ಕೆ ಬಂದಿದ್ದೆ ಕನಣ್ಣ… ಕೇಳ್ದೇ… ಅಲ್ಲಾ; ಅಪ್ಪ ಅನಿಸ್ಕೊಳೊ ನೀನು ನನ್ನ ಎತ್ತಿ ನಿಮ್ಮಣ್ಣನ ಕೈಗೆ ಕೊಟ್ಟಿಬುಟ್ಟೆ… ಹೆತ್ತವಳು ನಂತಾಯಿ ಯೇನೂ ಯೇಳುಕಾಗ್ದೆ ನಿಂಚಿಂತೆ ನರಳಿ ಸತ್ತೋದ್ಲು… ನೀನೇ ಸಾಯಿಸ್ದೆ ಅಂತಾನು ಜನ ಅಂತಾರೇ… ಈಗ ನನ್ಗೆ ಹೆತ್ತೋಳು ಇಲ್ಲಾ; ಹುಟ್ಟಿಸಿದ ನೀನೂ ಇಲ್ಲಾ. ದತ್ತು ತಕಂಡೋರೂ ಬೀದಿಗೆ ಎಸುದ್ರೂ… ನಾನೀಗ ಎಲ್ಗೆ ಹೋಗ್ಬೇಕು ಯೇಳೂ ಅಂತಾ ಕುತ್ಗೆ ಪಟ್ಟಿಯ ಇಡ್ದುಕೇಳ್ಬೇಕು ಅನ್ಕಂಡೇ ಬಂದಿದ್ದೆ ಕನಣ್ಣಾ… ಆಗ್ಲಿಲ್ಲ. ಎಣ್ಣೆ ಬಾಂಡ್ಲಿ ಮುಂದೆ ಕೂತಿದ್ದ ಬೋಂಡ ಉಯ್ತಾ… ಕೊತಕೊತ ಕುದೀತಿತ್ತು. ಕತ್ತ ಅಮುಕಿಡ್ದು ಬಾಂಡ್ಲಿಗೆ ಮುಖವ ಅಜ್ಜಬಿಡ್ಭೇಕು ಅನಿಸ್ತು. ಅದೇ ಸರಿ ಅನ್ಕಂಡು ಅವ್ನ ಹಿಂದೆ ನಿಂತೆ. ಯಿಂತಿರ್ಗಿ ನೋಡ್ದ. ಯಾಕ್ಲಾ… ಯೇನ್ಲಾ ಪ್ಲಾನು ಅಂದಾ. ಉಸಾರಾಗೋದ. ಇಲ್ಲಿ ಯೇನ್ನು ಮಾಡುಕಾಗುದಿಲ್ಲ ಅನಿಸ್ತು ಬೈಯ್ದೆ. ಮಾತಾಡ್ಲಿಲ್ಲ ಅವ್ನು. ವೋಗ್ಲಲೊ ಅಂತ ತಿರಸ್ಕಾರ ಮಾಡ್ದ. ಅವುನೆಡ್ತಿ ಮಕ್ಕಳ ನೋಡ್ದೆ. ಅವುರ್ಜೊತೆಗೆ ಬಂದವನೆ. ಇವುರ್ಗಾದ್ರು ವಳ್ಳೇದಾಗ್ಲಿ ಅಂತಾ ಬಂದ್ಬುಟ್ಟೆ ಅಣ್ಣಾ. `

`ಅವ್ನು ದೊಡ್ಡಣ್ಣ ದೊಡ್ಡಮ್ಮ ಅನ್ನುರ್ನೂ ಕೇಳ್ಬೇಕಿತ್ತು.’

`ಆ ಪಾಪಿಗಳು ಉದ್ದಾರ ಆಗುದಿಲ್ಲಾ. ಕಣ್ಣೀರಲಿ ಕೈ ತೊಳ್ಸವರೆ. ಒಂದೇ ಎರಡೇ ಅಣ್ಣಾ! ಸಾಕಪ್ಪ ಅಂತಸ ನಾನೆ ಅವುರ ಮನೆಯ ಬಿಟ್ಟೆ. ಆಗ ಮನೆ ಕೆಲ್ಸುಕ್ಕೆ ಒಂದಾಳ್ಬೇಕಿತ್ತು. ನನ್ನೆ ಆಳ್ಮಾಡ್ಕಂಡ್ರು. ಎಂಟ್ನೇ ಕ್ಲಾಸ್ಗೆ ಬಿಡಿಸಿ ಮನೆಲಿರ್ಲಾ ಅಂದ ಅವುನು. ರಾತ್ರಿಯೆಲ್ಲ ಕಾಲುಕೈಯ ಹಿಂಡಿಸ್ಬೇಕಿತ್ತು. ಅವ್ನು ಯೇಳ್ದಕೆಲ್ಸನೆಲ್ಲ ಮಾಡ್ಬೇಕಿತ್ತು. ಸೂಳೆ ಮನೆಗು ಕರ್ಕಂಡೋಗುನು. ಸಾರಾಯಿ ಗಡಂಗಿಗೂ ಎಳ್ಕಂದೋಗಿ ಕೂರಿಸ್ಕಿತದ್ದ. ನನ್ಗೆ ಇಲ್ಲೇನ್ನೆಲ್ಲ ಅಂತಿದ್ದೆ. ಲೇ; ನನ್ನ ನೋಡ್ಕಂದಿರ್ಲಾ… ಯಾರಾರ ಯಾಮಾರಿಸಿದ್ರೆ ಅಂತಾ ಯೇಳ್ತಿದ್ದ. ಯಾಕಪ್ಪ ಇವ್ನೆ ಜೊತೆ ಬಂದಿಯೆ ಅಂತಾ ಆ ಸೂಳೆರು ಬರಬ್ಯಾಡ ಕಣಪ್ಪ ಅಂತಿದ್ರು. ಅವುನ್ಗೆ ದಮ್ ಇರ್ಲಿಲ್ಲ ಅಣ್ಣ. ತೀಟೆ ಅಷ್ಟೇ… ಕುಡ್ದು ಕುಡ್ದು ಬಿದೋಯ್ತಿದ್ದ. ಎಚ್ಚರ ಆಗುಗಂಟ ಜೊತೆಲೆ ಕೂತಿದ್ದು ಕೈ ಇಡ್ಕಂಡು ಮನೆಗೆ ವೋಯ್ತಿದ್ದೆ. ಕಕ್ಕಿ ಕಕ್ಕಿ ಮನೆನೆಲ್ಲ ಗಟಾರ ಮಾಡ್ತಿದ್ದ. ನಾನೆ ತೊಳೀತಿದ್ದೆ. ತೂ; ಆ ನರ್ಕನೆಲ್ಲ ಯಾಕಣ್ಣ ಕೇಳಿಯೇ… ನೀನು ಚೆನ್ನಾಗಿದ್ದಿಯಲ್ಲಣ್ಣಾ… ಅದೇ ಸುಖಾ…’

`ಯಾಕೋ ಮನೆಯಿಂದಾಚೆಗೆ ಹಾಕಿದ್ರು… ಅವ್ರೆ ತಾನೆ ದತ್ತು ತಕಂಡಿತ್ತು…’

`ಗಂಡ ಹೆಂಡ್ರು ನಾನಿಲ್ದೆ ಇದ್ದಾಗ ಜಗಳ ಮಾಡೋರು… ಅವ್ನು ನಮುಗೆ ಬ್ಯಾಡಾ ನಾಳೆ ದಿನ ನೀ ಮಾಡಿರುದ್ಕೆಲ್ಲ ಅವ್ನೆ ಹಕ್ಕುದಾರ ಆಯ್ತಾನೆ ತಾಯಿ ಸ್ಥಾನುದೆಲಿ ನನ್ನ ಅವುನು ನೋಡುದಿಲ್ಲಾ… ನೀನಿಂಗೆ ಕುಡ್ಕಂಡು ಗೊಟುಕ್ಕಂದ್ರೆ ನನ್ನ ಮಗಳ ಗತಿಯೇನುʼ ಅಂತಾ ಯಾವಾಗ್ಲು ಕಿತ್ತಾಡುರು. ನನ್ಮುಂದೆನೂ ನಡೀತಿತ್ತು ನಾನೇನು ಯೇಳಕ್ಕೇ ಆಯ್ತಿರಲಿಲ್ಲ. ನನ್ನ ವಿಧಿ ಅಂಗಿತ್ತಣ್ಣ. ಯೀಗ ಮಾತಾಡಿ ಪ್ರಯೋಜ್ನ ಏನಣ್ಣಾ…’

`ನಾನಾಗ ಮೈಸೂರ್ಗೆ ಬಂದಿದ್ದೆ ನೋಡೂ… ಆ ಟಾಯ್ಲೆಟ್ ಕ್ಲೀನ್ ಮಾಡ್ಸಿದ್ರಲ್ಲಾ… ಆ ಘಟನೆ ನೆನಪಿದೆಯಾ ನಿನಗೆ’

`ಸ್ವಲ್ಪ ಸ್ವಲ್ಪ ಗೊತ್ತಣ್ಣ, ನೀವು ಬಾರೊ ಅಂತಾ ಕರ್ದಿದ್ರಿ. ಹೊರ್ಗೆ ಕೂತಿದ್ರಿ ಇವನ್ಯಾರೊ ಅನ್ಕಂಡಿದ್ದೆ. ನಮ್ಮಣ್ಣ ಅನ್ನುದೆ ಆಗ ಗೊತ್ತಿರ್ಲಿಲ್ಲ…’

ಮತ್ತೊಮ್ಮೆ ಚಹಾ ತರಲು ಹೇಳಿದೆ. ಸಪ್ಲಯರ್ ಯಾರೆಂದು ಕೇಳಿದ. `ತಮ್ಮ’ ಎಂದೆ. `ಸಾರ್ ಕಂಡ್ರೆ ನಮ್ಗೆ ಬಾಳ ಇಷ್ಟ’ ಎಂದು ನನ್ನ ತಮ್ಮನತ್ತ ಹೇಳಿ ನಗುತ್ತ ಟಿ ತಂದಿತ್ತ. ಮತ್ತೆ ಕುಡಿದೆವು. ಅವನ ಬಾಲ್ಯ ಮನದ ಮುಂದೆ ಸುಳಿಯುತಿತ್ತು.

`ತಾತ ನಿನಗಾಗಿ ಯೇನು ಮಾಡ್ಲಿಲ್ಲುವೆ…’

`ಯಾರಿದ್ರೆ ಏನಣ್ಣಾ. ಎಲ್ಲಾನು ಬರಿಸ್ಕಂಡು ಬರ್ಲೇಕು. ಬರಿಗೈಲಿ ಬಂದೆ ಬರಿಗೈಲಿ ವೋಗ್ತಿನಿ. ನಮ್ಮೊರೆಯ ನಾವೆ ಹೊತ್ಕಬೇಕಲುವೇನಣ್ಣಾ’

`ಆ ನಮ್ಮ ತಾಯಿ ಊರಿಗೆ ಹೋಗಿದ್ದೆಯಂತೆ…’

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಮರೆಯಬಹುದೇ ಅತ್ತರಿನ ಮರೆಯ ಮಗನ ಕಗ್ಗೊಲೆಯಾ! ಚರಿತ್ರೆಯ ನಿರ್ದಯ ರಕ್ತ ಪಾತಗಳಲ್ಲಿ ಮನುಷ್ಯ ಏನನ್ನು ಗಳಿಸಿದ! ಹಾಗೆ ತಂದೆಯಾದ ಷಹಜಾನನಿಗೆ ಮಗ ಔರಂಗಜೇಬ ಕಳಿಸಿಕೊಟ್ಟಿದ್ದ ಆ ಪವಿತ್ರ ಭೋಜನವನ್ನು ಮರೆಯಬಹುದೇ…

`ಹೂಂ ವೋಗಿದ್ದೆ. ಅವುರ್ಯಾರ್ಗೂ ಇಷ್ಟ ಆಗ್ಲಿಲ್ಲ. ಎಲ್ಲ ಮುಗುದೋದ ಮ್ಯಾಲೆ ಬಂದಲ್ಲಪ್ಪಾ… ನಿಂತಾಯಿ ಸತ್ತು ಸೌದೆ ಮ್ಯಾಲೆ ಮಲ್ಗಿದ್ದಾಗ ಬೆಂಕಿಕೊಳ್ಳಿ ಹಚ್ಚುಕೆ ಕಿರಿ ಮಗನಾಗಿ ನೀನು ಬರ್ಬೇಕಿತ್ತಲುವೇನಪ್ಪಾ. ಅವತ್ತು ಎಲ್ಲಿಗೋಗಿದ್ದಪ್ಪಾ; ಅಣ್ಣಾ; ಆ ಅಜ್ಜಿ ಅಂಗೆ ಕೇಳುವಾಗ ನನಗೆ ಎಂಗಾಗಿರ್ಬೇಕಣ್ಣಾ… ತಾಯಿ ಮುಖನೆ ಕಾಣ್ದಿದ್ದವನು… ಅವತ್ತು ನಿಂತಾಯಿ ಸತ್ತವಳ ಅಂತಾ ಯಾರೂ ಯೇಳಿರ್ಲಿಲ್ಲ. ತಿಥಿಗೂ ಕರ್ಕಬಂದಿರ್ಲಿಲ್ಲ. ನಿನಗೇ ಗೊತ್ತಿತ್ತಲ್ಲಣ್ಣಾ, ಇವುರು ಯಾರೂ ನಂತಾಯಿ ಸತ್ತಾಗ ಸಾವಿಗೆ ಯಾಕಣ್ಣ ಬರ್ಲಿಲ್ಲಾ… ಕೊಂದುಬಿಟ್ಟಿದ್ದೀವಿ ಅಂತಾ ಅವತ್ತು ಇವ್ರೆಲ್ಲ ಅವುಸ್ಕಂಡಿದ್ರಲ್ಲಾ… ಇವತ್ತು ಹೇಳ್ತಾರೆ… ನಾವು ಸಾಕಿವಿ, ಬೆಳೆಸಿವಿ, ಅನ್ನದ ದಾರಿ ತೋರಿವಿ ಅಂತಾ ಜಂಬ ಕೊಚ್ಚವೆ ನಾಚ್ಕೆ ಇಲ್ದ ನಾಯಿಗಳು’.

`ಸದ್ಯ ಬದ್ಕಿದ್ದೀಯಲ್ಲ ಬಿಡೊ… ನಿಮ್ಮಪ್ಪನಂತೆ ನೀನೂ ಸಕಲಕಲಾವಲ್ಲಭ ಎಂದು ಕೇಳಿರುವೆ… ನಿಜವೇನೊ’

`ಅಂಗಂತರಣ್ಣಾ. ಇರಬಹುದು. ಆದರೆ ಅವನಂತಾ ಕೊಲೆಗಾರ ಅಲ್ಲ. ಅಭ್ಯಾಸ ಅವೆ. ಬ್ಯಾಡಾ ಅಂದ್ರು ಬಂದ್ಬುಟ್ಟೊ… ಲಿಮಿಟೆಲಿದ್ದೀನಣ್ಣಾ’

`ನಿನ್ನೊಟ್ಟೆ ಪಾಡ್ಗೆ ಏನ್ಮಾಡ್ತಿಯೆ’

`ಮಾಡ್ಬೋದಾದ್ನೆಲ್ಲ ಮಾಡ್ತೀನಣ್ಣಾ’

`ಕೆಟ್ಟುದ್ನೂ ಮಾಡ್ಬೇಕಾಗ್ತದೆ’

`ಹೌದಣ್ಣ, ಅಂತೆದ್ನೂ ಮಾಡಿವ್ನಿ… ಬದುಕ್ಬೇಕಲ್ಲಾ’

`ಆ ಮಂಗಾಡಳ್ಳಿ ಹುಚ್ಚನ ಕತೆ ಕೇಳಿರಬಹುದೂ… ಅಂಗೇನಾದ್ರೂ’

`ಬಿಡ್ತು ಅನ್ನಣ್ಣ ಅಂತಾ ಯವಾರ್ಕೆ ಕೈಹಾಕ್ಲಿಲ್ಲ’

ಅವನು ಒಬ್ಬ ಅಪರಾಧಿ ಎಂಬಂತೆ ನನ್ನೆದ್ರು ಕೂತು ಒಪ್ಪಿಸುತ್ತಿದ್ದ. ವಿಚಾರಣಾಧಿಕಾರಿಯಂತೆ ನನ್ನ ಪ್ರಶ್ನೆಗಳಿದ್ದವು. ಒಂದೇ ತಾಯ ಬಳ್ಳಿಯವರು. ಅವನೇ ಬೇರೆ ನಾನೇ ಬೇರೆ ಎಂಬಂತಿತ್ತು. ಅಂದು ಅವನು ದೊಡ್ಡ ಸಾಹೇಬನಾಗಿ ಬರುತ್ತಾನೆ ಎಂದು ಅವನು ಅತಾರಿ ಇರಬೇಕೂ; ಇದೇ ನನ್ನ ತಮ್ಮನ ಬಗ್ಗೆ ತಾನೆ ಅಪ್ಪನ ಮುಂದೆ ರೀಲು ಬಿಡುತ್ತಿದ್ದುದು. ಒಂದು ಕನಸಿನ ಲೋಕವನ್ನೇ ಹೆಣೆದಿದ್ದರಲ್ಲ ಆ ರಾತ್ರಿ ಅಮಲಾಗಿ. ಈಗ ಈ ತಮ್ಮನ ಬಗ್ಗೆ ಯಾರೂ ಕನಸು ಕಟ್ಟುವುದಿಲ್ಲ. ಯಾರಿಗೂ ಬೇಡವಾದವನು. ಸ್ವತಃ ನನಗೆ ಇಷ್ಟವಾಗದವನು. ಪ್ರತಿ ಸಲವು ನಿನ್ನ ಅಪ್ಪ ಎಂದೇ ಕರೆಯುತ್ತಿದ್ದೆ. ಅವನ ಇನ್ನೊಂದು ಮುಖ ಎಂದು ನಾನೇ ನಿರಾಕರಿಸಿದ್ದೆ. ಅಂದು ಹತಾಶೆಯ ಕೊನೆಗಳಿಗೆಯಲ್ಲಿರುವಾಗ ಬಂದಿದ್ದಾನೆಂದು ಮನ್ನಿಸಿದ್ದೆ. ತುಂಬ ಹೊತ್ತು ಅಲ್ಲೆ ಕೂತಿದ್ದೆವು.

`ವರುಡ್ತೀನಣ್ಣಾ’ ಎಂದು ಹೇಳುತ್ತ; `ಗಾಂದಿನಗುದ್ದೆಲೆ ಬಚ್ರಿದ್ದಾರೆ. ಅಲ್ಲಿ ಉಳ್ಕಂಡು ನಾಳೆ ಬೆಂಗ್ಳೂರ್ಗೆ ವೋಗ್ತನಿ’ ಎಂದ. `ಸರಿ ಆಯ್ತು… ನಿನ್ನ ದಾರಿಯ ನೀನೆ ಹುಡಿಕ್ಕೋ ಬೇಕು… ಯಾರೂ ದಾರಿ ತೋರ್ಸೊಲ್ಲಾ’ ಎಂದೆ. ಸಮ್ಮತಿಸುವಂತೆ ತಲೆ ಆಡಿಸಿದ. ಅವನ ಬಗ್ಗೆ ಬೇಕಾದಷ್ಟು ಗೊತ್ತಿತ್ತು. ನನಗೆ ಒಬ್ಬ ತಮ್ಮ ಇದ್ದಾನೆ ಎಂಬುದೆ ಗೆಳೆಯರಿಗೆ ಗೊತ್ತಿರಲಿಲ್ಲ. ಹೇಳಬೇಕಾದ್ದೂ ಇರಲಿಲ್ಲ. ಅವನು ಯಾವತ್ತೂ ಹೊರಗಿನವನಾಗಿ ಬಿಟ್ಟಿದ್ದ. ನೆಪಕ್ಕೆ ಅವನನ್ನು ದತ್ತು ಪಡೆದಿದ್ದರು. ವಯಸ್ಸಿಗೆ ಬರುತ್ತಿದ್ದಂತೆಯೇ ಅವನು ದಾರಿತಪ್ಪಿದ್ದ. ಗಾಂಜಾಸೇದುತಿದ್ದ. ಸೂಳೆಯರ ಮನೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ. ಸಣ್ಣ ಪುಟ್ಟ ಕಳ್ಳತನಕ್ಕೂ ಇಳಿದಿದ್ದ. ಒಟ್ಟಿನಲ್ಲಿ ನಶೆಯಲ್ಲಿರುತ್ತಿದ್ದ. ನನಗೆ ಅನ್ಯಾಯ ಮಾಡಿದಿರಿ ಎಂದು ಹಳ್ಳಿಗೆ ಹೋಗಿ ವಿಪರೀತ ಗಲಾಟೆ ಮಾಡಿ ಹೊಡೆದಾಟಗಳಲ್ಲಿ ಏಟು ತಿಂದು ನಾಪತ್ತೆಯಾಗುತ್ತಿದ್ದ. ನನ್ನ ತಾತನ ಕಡೆಯಿಂದ ಬರುವ ಪಾಲು ಕೊಡಿ ಎಂದು ಕಿತ್ತಾಡಿ ಹುಚ್ಚಾಗುತ್ತಿದ್ದ. ಅವನ ಪರವಾಗಿ ನ್ಯಾಯ ಹೇಳುವವರು ಯಾರೂ ಇರಲಿಲ್ಲ. ಆಗೊಮ್ಮೆ ನನ್ನ ಸಹಾಯ ಕೇಳಿಕೊಂಡು ಬಂದಿದ್ದ. ಸಹಕರಿಸಿರಲಿಲ್ಲ. ಆ ನೀಚವಾದದ್ದನ್ನು ಬಿಟ್ಟು ಬಿಡು. ನೀನೇ ಏನನ್ನಾದರೂ ಸಂಪಾದಿಸು. ಮೊದಲು ಆ ಹಳ್ಳಿಯನ್ನು ಬಿಟ್ಟು ಪೇಟೆ ಸೇರು ಎಂದು ಹೇಳಿ ಕಳಿಸಿಬಿಟ್ಟಿದ್ದೆ. ಹತಾಶೆಯ ಮುಟ್ಟಿದ್ದ. ನನಗೆ ನಿಮ್ಮ ಯಾವ ಆಸ್ತಿಪಾಸ್ತಿಯು ಬೇಡ. ನನ್ನ ತಾತ ಕಟ್ಟಿಸಿದ ಮನೆಯ ಪಡಸಾಲೆಯಲ್ಲಿ ಮಲಗಲು ಜಾಗ ಕೊಡಿ ಎಂದರೂ ಅಲ್ಲಿದ್ದವರು ಅವಕಾಶ ಕೊಟ್ಟಿರಲಿಲ್ಲ. ಮೈಸೂರಿಗೆ ಬಂದು ಆ ದೊಡ್ಡಣ್ಣನ ಟೆನ್‌ಬೈಟೆನ್ ಟೆನ್ ಹೌಸಿನಲ್ಲಿ ಜಾಗ ಕೇಳಲು ಬಾಯಿ ಬಂದಿರಲಿಲ್ಲ. ಎಲ್ಲೆಲ್ಲೊ ಅಲೆದಾಡುತ್ತಿದ್ದ. ಬೆಂಗಳೂರು ಸೇರಿದ್ದ. ಅಲ್ಲೊಂದು ಬಟ್ಟೆಗಿರಿಣಿಯಲ್ಲಿ ದಿನಗೂಲಿಯ ಕೆಲಸಕ್ಕೆ ಸೇರಿದ್ದ. ಅಲ್ಲೊಬ್ಬಳು ಜೊತೆಗೆ ಸಿಕ್ಕಳು. ಪ್ರೇಮಿಸಿದ. ಮದುವೆ ಆಗೆಂದು ಆಕೆ ಬಲವಾಗಿ ಪಟ್ಟು ಹಾಕಿದಳು. ಆಗಲೇ ಬೇಕಿತ್ತು. ಸಂಗಮಿಸಿದ್ದರು. ಆಕೆ ಚೆಂದವಿದ್ದಳು. ಗೌಡರ ಹುಡುಗಿ, ತಂದೆ ಇರಲಿಲ್ಲ. ತಾಯಿ ಒಬ್ಬಳೇ, ಜಾತಿ ತಕಂಡು ಏನ್ಮಾಡಬೇಕೂ; ಮೊದ್ಲು ತಾಳಿ ಕಟ್ಟು ಎಂದಳು ಆಕೆಯ ತಾಯಿ. ಕಟ್ಟಿದ ವಾಲಗ ಊದಿ ಮುಗಿಸಿದ್ದರು. ಹಾಗೆ ಹೀಗೆ; ಪಾಳೆಯಗಾರರ ವಂಶ ನಮ್ಮದು ಎಂದು ಹೇಳಿಕೊಂಡಿದ್ದ. ಶಾಸ್ತ್ರದ ಪ್ರಕಾರ ಗಂಡನ ಮನೆಗೆ ಬರಬೇಕಿತ್ತು. ಕರೆದುಕೊಂಡು ಬಂದ. ಯಾರೊಬ್ಬರೂ ಮನೆಯ ಒಳಕ್ಕೆ ಬಿಟ್ಟುಕೊಳ್ಳಲಿಲ್ಲ. ಮದುವೆ ಆದವಳಿಗೆ ಆಘಾತವಾಗಿತ್ತು. ತನಗೆ ಇಂತಹ ಗಂಡ ಸಿಕ್ಕನೇ ಎಂದು ತಾನೇ ಎದ್ದು ನಿಂತಳು. ನನ್ನ ಅಕ್ಕ ಅವನಿಗೂ ಅಕ್ಕನೇ ತಾನೇ… ಅವಳ ಮನೆಗೆ ಹೋದ. ಅಕ್ಕರೆಯಲ್ಲಿ ಕರೆದುಕೊಂಡಳು. ಚೆನ್ನಾಗಿ ನೋಡಿಕೊಂಡಳು. ಆಗ ನಾನು ಅಷ್ಟಾಗಿ ಅಕ್ಕನ ಮನೆಗೆ ಹೋಗುತ್ತಿರಲಿಲ್ಲ. ಚಿಕ್ಕ ವಯಸ್ಸಿಗೇ ಮದುವೆ ಆಗಿದ್ದಳು. ಅವಳದು ನೂರೆಂಟು ಕಥೆ. ಗಂಡನನ್ನು ವಾಪಸ್ಸು ಕರೆದುಕೊಂಡು ತಾಯಿ ಮನೆಗೆ ಬಂದಳು. ವಿವರಿಸಿದಳು. ಗಂಡ ಕೆಲಸ ಮಾಡುವಲ್ಲೆ ದುಡಿಯಲು ಬಂದಳು. ಇಬ್ಬರ ನಿಯತ್ತ ನೋಡಿ ಒಳಗಿನ ನೌಕರರೆಂದು ಸೇರಿಸಿಕೊಂಡರು. ಇಲಿಯಂತಿದ್ದವನು ಹುಲಿಯಂತಾದ. ಅಪ್ಪನ ಚಾಳಿ ಅವನಿಗೂ ಬಂದಿತ್ತು. ಅದೇ ರಗಳೆ ಜಗಳ ಗಂಡ ಹೆಂಡಿರ ನಡುವೆ. ಇದಾವುದೂ ನನಗೆ ಭಾದಿಸುತ್ತಿರಲಿಲ್ಲ ಹಾಗೆಯೆ ನನ್ನ ಯಾವ ಪಾಡೂ ಸಂಬಂಧಿಕರಿಗೆ ಕಿಂಚಿತ್ತೂ ತಿಳಿಯುತ್ತಿರಲಿಲ್ಲ. ಅವನು ಬೀದಿಯಲ್ಲಿದ್ದ; ಎಲ್ಲರೂ ನೋಡುತ್ತಿದ್ದರು. ನಗುತ್ತಿದ್ದರು. ಕುಹಕವಾಡುತ್ತಿದ್ದರು. ನಾನು ಕ್ಯಾಂಪಸ್ಸಿನ ಸುಶೀಕ್ಷಿತರ ಮರೆಯಲ್ಲಿದ್ದೆ. ವಿಪರೀತ ಸ್ವಾಭಿಮಾನ. ಯಾರ ಕಣ್ಣಿಗೂ ಕಾಣುತ್ತಿರಲಿಲ್ಲ. ಅಪಮಾನಗಳನ್ನೆಲ್ಲ ಗೌರವಾನ್ವಿತವಾಗಿ ವೈಚಾರಿಕ ನಡೆ ನುಡಿಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದೆ. ನನ್ನ ತಮ್ಮನಿಗೆ ಅಂತಹ ಲೋಕವೆ ಸಿಕ್ಕಿರಲಿಲ್ಲ. ಸಾಧ್ಯವಾಗಬಹುದಾಗಿದ್ದನ್ನೆಲ್ಲ ದತ್ತು ಪಡೆದಿದ್ದವರು ಕಿತ್ತು ಹಾಕಿಬಿಟ್ಟಿದ್ದರು.

ನಾನು ಮದುವೆ ಆಗುವ ಕಾಲಕ್ಕೆ ಅವನಿಗಾಗಲೆ ಎರಡು ಮಕ್ಕಳಾಗಿಬಿಟ್ಟಿದ್ದವು. ರಗಳೆ ರಂಪ ಕುಡಿತ ಹೆಚ್ಚಾಗಿದ್ದವು. ಆ ಬಟ್ಟೆ ಗಿರಣಿ ಲಾಸಾಗಿ ಮುಚ್ಚಿತ್ತು. ಆಗ ಆತ ತಾತನಿಂದ ಕಲಿತಿದ್ದ ಹೋಟೆಲ್ ಕಸುಬಿಗೆ ಇಳಿದಿದ್ದ. ಬೆಂಗಳೂರಿನ ಹೊಸೂರು ಮಾರ್ಗದ ಹೆದ್ದಾರಿ ಬಳಿಯೇ ಅವನ ಪುಟ್ಟ ಮನೆ ಇತ್ತು. ಹೈವೇಯ ಲಾರಿ ಚಾಲಕರಿಗೆಂದು ಬೆಳಗಿನ ತಿಂಡಿ ಮಧ್ಯಾನ್ಹದ ಊಟದ ವ್ಯವಸ್ಥೆ ಮಾಡಿದ. ಅವನ ಕಷ್ಟ ಕಳೆದಿತ್ತು. ಸಂಪಾದಿಸಿದ ಅದೇ ಏರಿಯಾದಲ್ಲಿ ಅವನ ಮಟ್ಟದ ಒಂದು ಮನೆಯನ್ನು ಕಟ್ಟಿಕೊಂಡ. ಆಗಲೇ ಆರಂಭವಾದದ್ದು ಅವನ ಮಗನ ಆರ್ಭಟ. ಮುದ್ದು ಮಾಡಿ ಸಾಕಿದ್ದ. ನನ್ನ ಅಪ್ಪನ ರೂಪ ನಡತೆ ತಮ್ಮನ ಮಗನಲ್ಲಿ ಪ್ರತಿರೂಪ ಎಂಬಂತೆ ಬಂದಿತ್ತು. ಅದೇ ದುಷ್ಟ ನಡತೆ. ತಲೆ ಕೆಟ್ಟಿತ್ತು. ತಮ್ಮನಿಗೆ ಹೆಂಡತಿ ಮಗನ ಸಹವಾಸ ಬೇಡ ಎನಿಸಿತ್ತು. ವಿಪರೀತ ಕುಡಿಯುತ್ತಿದ್ದ. ಹೋಟೆಲು ಕಸುಬು ಬಿಟ್ಟಿದ್ದ. ಅವನ ಹೆಂಡತಿ ಅದೇ ಕೆಲಸವನ್ನು ಮುಂದುವರಿಸಿದಳು. ಮನೆಯಲ್ಲೆ ಅಡುಗೆ ಮಾಡಿ ದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ತಳ್ಳುಗಾಡಿಯಲ್ಲಿ ಹೇರಿಕೊಂಡು ಮಗನ ಸಹಾಯಕ್ಕೆ ಕರೆದುಕೊಂಡು ವ್ಯಾಪಾರಕ್ಕೆ ಧುಮುಕಿದಳು. ಹಠಗಾತಿ ಅವಳು. ಗಂಡನ ಚಟ ಬಿಡಿಸಲು ಹತ್ತಾರು ಉಪಾಯ ಹುಡುಕಿದಳು. ಫಲಿಸಲಿಲ್ಲ. ಕೊನೆಗೆ ಅದೇ ಸರಿ ಎಂದು ರೂಮಿನಲ್ಲಿ ಬಂದಿಸಿ ಬೀಗ ಹಾಕಿಕೊಂಡಳು. ಊಟದ ಹೊತ್ತಿಗೆ ಪ್ರಾಣಿಗೆ ಹಾಕಿದಂತೆ ಎಸೆದಳು. ಕುಗ್ಗಿ ಹೋಗಿದ್ದ. ಯಾರಿಗೂ ಗೊತ್ತಿರಲಿಲ್ಲ. ಟೆರೇಸಿನಲ್ಲಿ ತಗಡು ಮತ್ತು ಜಾಲರಿಯಲ್ಲಿ ಮಾಡಿದ್ದ ಒಂದು ವ್ಯರ್ಥ ಕೊಠಡಿ ಇತ್ತು. ನಾಟಿ ಕೋಳಿ ಸಾಕಿ ವ್ಯಾಪಾರ ಮಾಡಲೆಂದು ಮಾಡಿಸಿದ್ದಾಗಿತ್ತು. ಸರಪಳಿಯ ಜೊತೆಗೆ ಅವನ ಹೆಂಡತಿಯೇ ಕಟ್ಟಿ ಹಾಕಿದ್ದಳು. ಮಗಳನ್ನು ಹೇಗೊ ಮದುವೆ ಮಾಡಿದ್ದ. ಮಗ ಬೀದಿ ರೌಡಿಯಂತೆ ತಾಯ ರಕ್ಷಣೆಗೆ ಇದ್ದ. ಆಗೊಮ್ಮೆ ನನ್ನ ಅಕ್ಕ ಫೋನು ಮಾಡಿ ವಿಚಾರಿಸಿದ್ದಳು. ನನ್ನ ಅಕ್ಕನನ್ನು ತಾಯಿ ಎಂದು ತಮ್ಮ ತಿಳಿದಿದ್ದ. ನನಗೆ ಅಂತಹ ಬಾಂಧವ್ಯ ಸಾಧ್ಯ ಇರಲಿಲ್ಲ. ಹಬ್ಬಗಳಿಗೆ ಹೋಗಿ ಬರುವುದಿತ್ತು. ಅಧಿಕಾರ ಬದ್ಧವಾಗಿ ಅಕ್ಕ ಕೇಳಿದ್ದಳು ತಮ್ಮನ ಪರವಾಗಿ… ಇಲ್ಲಾ; ಅವನು ಸತ್ತು ಹೋದ ಎಂದಿದ್ದಳು ಸ್ವತಃ ಹೆಂಡತಿ. ದೊಡ್ಡ ಜಗಳ ತೆಗೆದಿದ್ದಳು ಅಕ್ಕ. ಅವರಿಬ್ಬರ ನಡುವೆ ಮಾತಿನ ಕದನವೆ ಆಗಿತ್ತು.

ಇದನ್ನು ಅಕ್ಕ ನನ್ನ ಗಮನಕ್ಕೆ ತಂದಿರಲಿಲ್ಲ. ಇಂತದ್ದೆಲ್ಲ ನನಗೆ ಇಷ್ಟ ಆಗಲ್ಲ ಎಂಬುದು ಆಕೆಗೆ ತಿಳಿದಿತ್ತು. ತಡವಾಗಿ ಹೇಳಿದ್ದಳು. ಅವನು ನನ್ನ ತಮ್ಮ ಹೇಗೊ ಒಂದು ದಿನ ಖೈದಿಯಂತೆ ತಪ್ಪಿಸಿಕೊಂಡಿದ್ದ. ಹುಚ್ಚನಂತೆ ಕಾಣುತಿದ್ದ. ಅಲ್ಲೊಂದು ದೊಡ್ಡ ದೇವಾಲಯ ಇತ್ತು. ಅದರ ಮುಂದೆ ಭಿಕ್ಷುಕರು ಕೂತಿದ್ದರು. ಅವರ ಜೊತೆ ಕೂತಿದ್ದ. ಎಬ್ಬಿಸಿದ್ದರು ಗಲಾಟೆ ಮಾಡಿ. ವಿನಂತಿಸಿದ್ದ. ಒಪ್ಪಿಕೊಂಡಿದ್ದರು. ಗಡ್ಡಮೀಸೆ ಬೆಳೆದು ಗುರುತು ಕಾಣದಂತಿದ್ದ. ಸದ್ಯ ಕುಡಿತದ ಚಟವ ಬಿಟ್ಟಿದ್ದ. ತನ್ನ ಗಂಡ ತಪ್ಪಿಸಿಕೊಂಡು ಹೋಗಿ ಕುಡಿದು ಎಲ್ಲೊ ಸತ್ತು ಬಿದ್ದಿರುತ್ತಾನೆ ಎಂದುಕೊಂಡಿದ್ದಳು. ಎರಡು ತಿಂಗಳು ಭಿಕ್ಷುಕನಾಗಿದ್ದ. ಕೊಳಕು ಬಟ್ಟೆ, ಸ್ನಾನ ಮಾಡಿರಲಿಲ್ಲ. ಅವಳು ನನ್ನ ಅಕ್ಕ ಅಲ್ಲ; ಸಾಕ್ಷಾತ್ ತಾಯಿ ಅವಳೇ ಎಂದು ಅಕ್ಕನ ಮನೆಯ ಮುಂದೆ ಬಂದು ನಿಂತಿದ್ದ. ಗುರುತಾಗಲಿಲ್ಲ. ದೀನ ಭಿಕ್ಷುಕನಂತೆಯೆ ನೋಡಿದ. ಅಕ್ಕನಿಗೆ ಅವನು ಯಾರೆಂದು ತಿಳಿಯಿತು. ಬಾಬಾ ಎಂದು ಕರೆದಳು. ಮಗನ ಕೂಗಿದಳು. ಅಲ್ಲಿ ಹೊಸ ಮನೆಗೆ ಇವನ ಕರೆದೊಯ್ದು ನಿನ್ನ ಬಟ್ಟೆಕೊಟ್ಟು ಕೂರಿಸು; ಹಿಂದೆಯೇ ಬರುವೆ ಎಂದು ಅವನ ಗತಿಯ ಕ್ಷಣ ಮಾತ್ರದಲ್ಲಿ ಅಳೆದಳು. ನೆರೆಹೊರೆಯವರಿಗೆ ಗೊತ್ತಾಗದಿರಲಿ ಎಂದು ಎಚ್ಚರ ವಹಿಸಿದಳು. ಆ ಕೂಡಲೆ ಮದ್ದೂರು ಬಳಿಯ ಸೇವಿಂಗ್ ಸೆಲೂನಿಗೆ ಕಳಿಸಿದಳು. ಮಗ ಸ್ಕೂಟರಲ್ಲಿ ಕೂರಿಸಿಕೊಂಡು ಹೋಗಿ ಮೀಸೆ ಗಡ್ಡ ತಲೆಕೂದಲ ಸರಿಪಡಿಸಿ ಕರೆತಂದ. ಬಿಸಿ ನೀರಿನ ಸ್ನಾನ ಮಾಡಿಸಿದಳು. ಒಂದು ವಾರ ಆರೈಕೆ ಮಾಡಿದಳು. ಬದುಕಿದೆ ಎಂದು ಅಕ್ಕನ ಕಾಲಿಗೆ ನಮಸ್ಕರಿಸಿದ. ಏನೊ; ಅವರವರ ನಂಬಿಕೆ; ಅಕ್ಕ ಅವನ ತಲೆ ಮೇಲೆ ಕೈ ಇಟ್ಟು ದೇವರ ನೆನೆದು ಆಶೀರ್ವಾದ ಮಾಡಿದಳು. ಇನ್ನೆಂದೂ ಕುಡಿಯುವುದಿಲ್ಲ ಎಂದು ಮಾತುಕೊಡು ಎಂದಳು. ಹಾಗೇ ಆಯಿತು. ತಮ್ಮನನ್ನು ಕರೆದುಕೊಂಡು ಹೋಗಿ ಪಂಚಾಯ್ತಿ ಮಾಡಿ ಹೆಂಡತಿಯ ಜೊತೆ ಬಿಟ್ಟು ಬಂದಳು.

ಅವನು ನನ್ನನ್ನು ಕಾಣಲು ಬಂದದ್ದು ಯಾವಾಗ… ಅವನಿಗೆ ಆಗಿನ್ನೂ ಮದುವೆ ಆಗಿರಲಿಲ್ಲ. ಅವತ್ತು ಹೋದವನು ಮತ್ತೆ ಎದುರಿಗೆ ಈಗಲೂ ಸಿಕ್ಕಿಲ್ಲ. ಸತ್ತು ಹೋದ ಎಂದಿದ್ದಳು ಅವನ ಹೆಂಡತಿ. ಕೆಲವೊಮ್ಮೆ ಸಂಬಂಧಗಳೂ ಸತ್ತು ಹೋಗಿರುತ್ತವೆ. ಒಮ್ಮೆ ಮಾತ್ರ ಬಂದಂತಿತ್ತು. ಅಕ್ಕನ ಮನೆಗೆ ನಾನಾಗ ಹೋಗಿದ್ದೆ. ನಿಜಾ; ಹೆಂಡತಿ ಮಕ್ಕಳ ಜೊತೆಗೆ ಆಕಸ್ಮಿಕವಾಗಿ ಎಲ್ಲಿಗೊ ಬಂದಿದ್ದು ನೋಡಿಕೊಂಡು ಹೋಗುವ ಎಂದು ಬಂದಿದ್ದ. ನಾನು ಮಲಗಿದ್ದೆ. ಏನೇನೊ ರಗಳೆ ಮಾಡಿಕೊಂಡು ಬಂದಿದ್ದಾನೆಂದು ಅಣ್ಣ ರೇಗುವನು ಎಂದು ಆ ಕೂಡಲೆ ತರಾತುರಿಯಲ್ಲಿದ್ದ. ನಾನಿರದಿದ್ದರೆ ಖಂಡಿತ ಆ ದಿನ ಅಕ್ಕನ ಮನೆಯಲ್ಲೆ ಉಳಿಯುತಿದ್ದ. ಹೊರಟೇ ಹೋಗಿದ್ದ. ಅವನ ಮಗಳು ಮತ್ತು ಮಗನ ಕೂರಿಸಿಕೊಂಡು ತಮಾಷೆ ಮಾಡಿದೆ. ಹೆದರಿದಂತಿದ್ದವು. ಅವು ಅದೇ ಮೊದಲು ನನ್ನನ್ನು ನೋಡುತ್ತಿದ್ದುದು. ನಿಲ್ಲದೆ ಹೋದರು. ಅವನದೇ ಒಂದು ನೀತಿ. ನಮ್ಮಣ್ಣ ಇರುವ ಜಾಗದಲ್ಲಿ ನಾನು ಇರಬಾರದು… ನೋಡಲು ಆ ದುಷ್ಟ ಅಪ್ಪನಂತೆಯೇ ಕಾಣುವೆ. ಅದರಿಂದ ಅಣ್ಣನಿಗೆ ಬೇಜಾರಾಗುತ್ತದೆ ಎಂದು ಮರೆಗೆ ಸರಿಯುತ್ತಿದ್ದ. ಇದನ್ನೆಲ್ಲ ಅಕ್ಕ ಹೇಳಿದ ನಂತರ ಅಯ್ಯೋ ಎನಿಸಿತು. ಅವನ ನಂಬರು ಕೊಡಕ್ಕಾ; ಮಾತಾಡುವೆ ಎಂದೆ. ಕೊಟ್ಟಳು ಎಷ್ಟೋ ವರ್ಷ ಆಗಿತ್ತು ಒಬ್ಬರಿಗೆ ಒಬ್ಬರು ಮಾತಾಡಿ ರಿಂಗಾಯಿತು.

`ಹಲ್ಲೋ… ಶ್ರೀನಿವಾಸ ಕ್ಯಾಂಟೀನಲ್ಲವಾ’

`ಹೌದು. ಏನಾಗ್ಬೇಕೂ…’

`ನಾಳೆ ನೂರು ಊಟ ಬೇಕು… ಸಪ್ಲೈ ಮಾಡ್ತೀರಾ’

`ಹೊರ್ಗಡೆ ಸರ್ವಿಸ್ ಇಲ್ಲಾ… ಇಲ್ಲೇ ಬಂದ್ರೆ ಏನಾರ ಮಾಡ್ಬಹುದು’

`ರೀ; ಆರ್ಡಿನರಿ ಊಟ ಅಲ್ಲಾ; ಸ್ಪೆಷಲ್ ಮೀಲ್ ಬೇಕೂ’

`ಹಾಗಲ್ಲಾ ಸಾರ್ ನಮ್ದು ಕಡ್ಮೆ ಬಜೆಟ್ನ ವೋಟ್ಲು… ಯಾರ್ಕೊಟ್ರು ನಂಬರ್ರಾ’

`ನಿಮ್ಮನೆ ಪಕ್ಕದ ಆಟೋದವ್ನು ಕೊಟ್ಟ. ಚೆನ್ನಾಗಿ ಮಾಡ್ತಾರೆ ಅಂತಾ ಟ್ರೈ ಮಾಡ್ರಿ ಬಿಸ್ನೆಸ್ ಯಾಕೆ ಬ್ಯಾಡ ಅಂತಿರಾ…’

`ನೀವೆಲ್ಲಿಂದ ಕಾಲ್ ಮಾಡ್ತಿದ್ದೀರಿ’

`ದಾಸ್ರಳ್ಳಿಯಿಂದ’

`ಯಾವುದ್ರಿ ದಾಸ್ರಳ್ಳಿ… ನೂರೆಂಟಿವೆ… ನಾನಿರುದು ಕಾಟುಂನಳ್ಳಿ… ಹೊಸ್ಕೋಟೆ ಪಕ್ಕ… ಹಲ್ಲೊ ಹಲೊ…’

ನನಗೆ ನಗು ತಡಿಯೋಕೆ ಆಗಿಲ್ಲ `ನಾನು ನಿಮ್ಮಗಿರಾಕಿರೀ… ಕಂಡಿಡಿಯುಕೆ ಆಗ್ತಿಲುವೇ’ ಎಂದು ಮೂಲ ದನಿಗೆ ಬಂದೆ. ಒಹೋ ಅಣ್ಣಾ… ಯೀಗ ದನಿಲಿ ಗೊತ್ತಾಯ್ತು. ಕೊನೆಗೂ ಯೀ ಪಾಪಿಗೆ ಒಂದು ಕಾಲ್ಮಾಡುದ್ರಲ್ಲಾ… ಸಾಕು ಕನಣ್ಣಾ. ಅಕ್ಕ ಯೆಲ್ಲನು ನಿಂಬಗ್ಗೆ ಯೇಳ್ತಿರ್ತದೆ. ಕೇಳಿಸ್ಕಂದು ಸಂತೋಷ ಪಡ್ತಿನಿ. ನಮ್ಮಣ್ಣನಿಗಾದ್ರು ವಳ್ಳೆದಾಯ್ತಲ್ಲ ಅಂತಾ ದೇವುರ್ಗೆ ಕೈ ಮುಕ್ಕತಿನಿ’ ಎಂದು ದುಃಖದಿಂದ ಮಾತು ಹೊರಡಿಸದಾದ ಇತ್ತ ನನಗೂ ಗಂಟಲು ಹಿಡಿದಿತ್ತು.

ನಾವು ಸತ್ತು ಸತ್ತು ಹುಟ್ಟಿದವರಲ್ಲವೇನೊ… ಅದಕ್ಕೆ ಮತ್ತೆ ಮತ್ತೆ ಹೊಸಜೀವನ ಹೊಸ ಹೊಸ ಸವಾಲುಗಳು… ಮುದುಕರಾಗಿ ಬಿಟ್ಟೆವಲ್ಲೊ… ಎಂಗಿದ್ದಿಯೊ? ಸುಖತಾನೆ? ತುಂಬ ಹುಡುಗೀರ ಸಾವಾಸ ಅಂತಾರಲ್ಲೊ! ಅದರಲ್ಲೇನೊ ಅಂತಾ ಸುಖ… ನಿಮ್ಮಪ್ಪನಿಗೂ ಅದೇ ಚಟವಿತ್ತು. ವಂಶದವರೆಲ್ಲ ಅಲ್ಲೆ ಉಂಡು ತಿಂದು ತೇಗಿ ಅಲ್ಲೇ ಮಲಗಿ ಮಜಾ ಮಾಡಿ ಲಾಡಿ ಕಟ್ಕಂಡು ಎದ್ದುಬಿದ್ದು ಹೋದರಲ್ಲೊ… ನನಗೂ ಅದೇ ಆಸೆ ಇತ್ತು ಕಣೊ… ಹೇಸಿಗೆ ಯಾಗುವಷ್ಟು ಅಪ್ಪ ಹೆಂಗಸರ ನಡುವೆ ಬಿದ್ದಿದ್ದ ಕಂಡು ವಾಕರಿಕೆ ಬಂದು ಬಿಟ್ಟಿತು. ಹೆಣ್ಣ ಜೊತೆ ಮಲಗೋದೆ ಅಪರಾಧ ಎಂಬಷ್ಟು ಮನಸ್ಸು ಸೂಕ್ಷ್ಮ ಆಗಿ ಹೋಯ್ತು. ಮದುವೆನೆ ಬೇಡ; ಒಬ್ಬ ಅವದೂತ ಆಗಬೇಕು ಅನ್ಕಂಡಿದ್ದೆ. ಸಾಧ್ಯ ಆಗ್ಲಿಲ್ಲ. ಅಕ್ಕನ ಮಗಳನ್ನೆ ಮದುವೆ ಮಾಡ್ಕೊಂಡೆ. ನೀನಾಗ ಆ ಮದುವೆಗೆ ಬಂದು ಲುಂಗಿ ಸುತ್ತಿಕೊಂಡು ಬಿಕನಾಸಿ ತರ ಬಂದಿದ್ದೆ. ನಿನಗೆ ಇಷ್ಟ ಇರಲಿಲ್ಲ. ಏನಪ್ಪಾ ಎಂದು ನಾನೇನು ನಿನ್ನ ಮಾತಾಡ್ಸಿರಲಿಲ್ಲ. ಏನೊ ಬೇಸರ ಇತ್ತು. ಈಗ ಮುದುಕರಾದ ನಂತರ ಪೋನಲ್ಲಿ ಮಾತಾಡ್ತಿದ್ದೀವಲ್ಲೊ… ಆ ನಂತರ ನಾವು ವಿಶ್ವಾಸದಿಂದ ಜೊತೆಗೆ ಕೂತು ಮಾತಾಡಿ ಊಟ ಮಾಡಲಿಲ್ಲ… ನಾನೂ ನಿನ್ನ ಕರೆಯಲಿಲ್ಲ; ಬಾರಣ್ಣ ನನ್ನ ಮನೆಗೆ ಎಂದು ಯವತ್ತೂ ಕೋರಲಿಲ್ಲ. ಮನುಷ್ಯ ಸಂಬಂಧಗಳು ಎಷ್ಟು ನಾಟಕೀಯವಾಗಿ ಇರ್ತವೆ ನೋಡು… ಪುಟ್ಟ ಭಾಷಣವನ್ನೆ ಮಾಡಿದೆ ಪೋನಲ್ಲೆ.

`ಮಕ್ಕಳು, ಅತ್ತಿಗೆ ಚೆನ್ನಾಗಿದ್ದಾರಣ್ಣಾ’

ನಿನಗೆ ಗೊತ್ತಲ್ಲ ನಾನೂ… ವಿಶ್ವಾಮಿತ್ರ ಸಿಟ್ಟಿನವನು; ಆದರೆ ಯಾವ ಮೇನಕೆ ತಿಲೋತ್ತಮೆಯರ ಸಹವಾಸವೂ ಇಲ್ಲಾ. ನನ್ನಂತವನ ಜೊತೆ ಸಂಸಾರ ಮಾಡೊದು ಬಹಳ ಕಷ್ಟ. ಯಾವ ಕ್ಷಣದಲ್ಲಿ ಹೇಗಿರ್ತಿನಿ ಅಂತ ನನಗೇ ಗೊತ್ತಿರಲ್ಲ. ತುಂಬಾ ಸೂಕ್ಷ್ಮ ಅರ್ಥ ಮಾಡಿಕೊಳ್ಳೊದು ಕಷ್ಟ. ಅಂತರಾಳದಲ್ಲಿ ಸರ್ವಾಧಿಕಾರಿ. ಬಹಿರಂಗದಲ್ಲಿ ಬಿಕಾರಿ. ಲೋಕಾಂತದಲ್ಲಿ ಒಬ್ಬಂಟಿ; ಏಕಾಂತದಲ್ಲಿ ವಿಶ್ವ ವ್ಯಾಪಿ. ಏನೋ ಚಡಪಡಿಕೆ ಅಸಹನೆ ಯಾರೂ ಬೇಡ; ಬೇಡವೇ ಬೇಡ ಎನಿಸುತ್ತಲೆ ಇರುತ್ತದೆ. ಅದೇ ಹೊತ್ತಿಗೆ ಮನಸ್ಸು ಚಂಡಿ ಹಿಡಿದ ಕೂಸಿನಂತೆ ತಾಯಿಗಾಗಿ ಹಂಬಲಿಸಿ ರೋಧಿಸುತ್ತಿರುತ್ತದೆ.

ಮಡದಿ ಮಕ್ಕಳು ಸುಖವೇ ಎಂದರೆ ಅವರು ಹೇಳಬೇಕು. ಚಿಕ್ಕ ವಯಸ್ಸಿನ ಅಕ್ಕನ ಮಗಳ ಎದೆಗಪ್ಪಿ ಎತ್ತಿ ಮೆರೆಸಿ ಮೂರು ಮಕ್ಕಳ ಪಡೆದೆ. ಆ ಮೂರು ಕೂಡ ಹೆಣ್ಣು ಮಕ್ಕಳು ಎಂದು ಹೆಂಡತಿ ನೊಂದುಕೊಂಡಳು. ನಾನು ತಾಯಿಯ ಮಗ ಆದ್ದರಿಂದ ಮೂರು ಹೆಣ್ಣು ಮಕ್ಕಳಾದೆವೆಂದು ಆನಂದ ಪಟ್ಟೆ. ಇವೆಲ್ಲ ಇದ್ದದ್ದೆ ಬಿಡು… ಆದರೆ; ಎಷ್ಟೋ ಬಾರಿ ಯೋಚಿಸಿದಾಗ ನಾನು ಒಬ್ಬ ಯೋಗ್ಯ ಗಂಡ ಅಲ್ಲವೇನೊ ಎನಿಸಿಬಿಟ್ಟಿತು. ತಂದೆಯಾಗಿ ಎಲ್ಲರಂತೆ ಏನೆಲ್ಲ ಒಳಿತು ಮಾಡಬಹುದೋ ಅದನ್ನೆಲ್ಲ ಮಾಡಿರಬಹುದು. ಮಕ್ಕಳಿಗೆ ನನ್ನ ಕಷ್ಟದ ಒಂದು ಸಾಸಿವೆ ಕಾಳು ಕೂಡ ಗೊತ್ತಿಲ್ಲ. ಹೇಳಿದರೂ ನಂಬುದಿಲ್ಲ. ನನ್ನ ಬಾಲ್ಯಕ್ಕೂ ಅವರ ಎಳೆಯ ಪ್ರಾಯದ ಕಾಲಕ್ಕೂ ಹೋಲಿಕೆ ಎಲ್ಲಿಯೂ ಒಂದಿಷ್ಟೂ ಸಿಕ್ಕುವುದಿಲ್ಲ. ನನ್ನ ಮಕ್ಕಳನ್ನು ಅಷ್ಟೋಂದು ಜೋಪಾನ ಮಾಡಿದೆ. ಯಾವ ನನ್ನ ನಂಬಿಕೆಗಳನ್ನೂ ಅವರ ಮೇಲೆ ಹೇರಲಿಲ್ಲ. ಎಲ್ಲ ಗಂಡಸರಂತೆ ಹೆಂಡತಿ ಮೇಲೆ ರೇಗಾಡಿರುವೆ. ಮುನಿದು ಮಾತು ಬಿಟ್ಟು ಪ್ರತಿಭಟಿಸಿ ನನ್ನ ಅಳತೆಗೆ ತಂದುಕೊಂಡು ಯಜಮಾನಿಕೆ ಮಾಡಿರುವೆ. ಹಳೆ ಕಾಲದವರು ನನ್ನ ಯಜಮಾನ ಬಂದ ಎನ್ನುತ್ತಿದ್ದರಲ್ಲಾ… ಹಾಗೇ ಯಜಮಾನನಾಗಿ ತಪ್ಪು ಮಾಡಿರುವೆ. ತಿದ್ದಿಕೊಂಡಿರುವೆ. ಗಳಗಳನೆ ಅತ್ತು ನನ್ನ ತಾಯ ನೆನೆದು ಹೆಂಡತಿ ಮುಂದೆ ಕ್ಷಮೆ ಕೋರಿರುವೆ. ಎಷ್ಟು ಸಲ ಕ್ಷಮಿಸಿದ್ದಾಳೊ… ಕೈ ಮುಗಿಯಬೇಕು ಅವಳಿಗೆ. ಉನ್ನತ ಶಿಕ್ಷಣ ಪಡೆದವಳಲ್ಲ; ಆದರೆ ಅಂತಹ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಎಷ್ಟು ಕಸ ಇದೆ ಎಂಬುದನ್ನು ಅರಿತಿದ್ದಾಳೆ.


ನನ್ನ ಪ್ರವರ ಸಾಕು. ನಾನು ಬರುವೆ ಒಂದು ದಿನ ವೇಷ ಮರೆಸಿ ನಿನ್ನ ಕ್ಯಾಂಟೀನಿಗೆ ನೀನೂ ನಿನ್ನ ಹೆಂಡತಿಯೂ ಊಟ ಬಡಿಸುವುದನ್ನು ಸವಿಯಬೇಕು. ನೋಡಿದೆಯೊ… ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬಂದ ನಾವಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡಲಿಲ್ಲ. ಆಗೊಮ್ಮೆ… ನೆನಪಿದೆಯೇ… ವೀರಭದ್ರ ತಾತನ ಜೊತೆ ಒಂದು ಪರಿಷೆಯಲ್ಲಿ ಬಾಳೆ ಎಲೆ ಹಾಸಿಕೊಂಡು ರಾಕ್ಷಸರಂತೆ ಊಟ ಮಾಡಿದ್ದೂ… ಅವರು ಎಬ್ಬಿಸಿ ಬಡಿದು ಕಟ್ಟಿಹಾಕಿ ಚಚ್ಚಿದ್ದೂ… ನಾವು ಅವತ್ತು ಮೂಕರಾಗಿ ತಾತನ ಕಾಲಬಳಿಯೇ ಕೂತಿದ್ದು ಅತ್ತು ಅತ್ತು ಹೊಡೆಯಬೇಡಿ ಎಂದು ಕೈ ಮುಗಿಯುತಿದ್ದುದೂ… ಕಂಡೆಯಾ ಈ ಲೋಕದ ವಿಸ್ಮಯವನ್ನು… ನೋಡು; ನಾವಿನ್ನೂ ಬದುಕಿದ್ದೇವೆ. ಹಾಗೆ ದಂಡಿಸಿದವರು ಎಲ್ಲಿದ್ದಾರೊ ಏನೊ. ನಾನು ಮರೆತರೂ ನನ್ನ ಮನಸ್ಸು ಮರೆಯಲಾರದು ಅವರನ್ನೆಲ್ಲ. ಮತ್ತೆ ಆ ತಾತನ ನೀನು ಎಲ್ಲಿಯಾದರೂ ಕಂಡಿದ್ದೆಯಾ… ಎಂತಹ ಒಳ್ಳೆಯ ಮನುಷ್ಯ! ಹೊಡೆದವರ ಬಗ್ಗೆ ಒಂದೇ ಒಂದು ಹಗುರ ಮಾತನ್ನು ಆಡಿರಲಿಲ್ಲ. ಹೋಗಿನೀವು… ನನ್ನಿಂದೆ ಬರಬೇಡಿ ಎಂದು ಎಲ್ಲಿಗೊ ಹೊರಟು ಹೋಗಿದ್ದನಲ್ಲಾ… ನಾನೂ ನೀನು ಹೆಚ್ಚು ಕಡಿಮೆ ತಾತನಂತೆಯೆ ಕಣ್ಮರೆಯಾಗಿ ಎಲ್ಲೆಲ್ಲಿಗೊ ಬಂದುಬಿಟ್ಟೆವು. ಭಾಗಶಃ ನೀನು ಎದುರಿಗೆ ಸಿಕ್ಕರೆ ನಾನಿಷ್ಟು ಆತ್ಮೀಯವಾಗಿ ಮಾತಾಡಲಾರೆನೇನೊ. ದೂರವೇ ಚೆಂದ. ಮರೆಯೇ ಅಂದ. ಅಂತರವೇ ಆನಂದ… ಈ ಸ್ವಭಾವ ಯಾಕೆ ಬಂತೊ? ಮನುಷ್ಯ ಹತ್ತಿರವಾದಂತೆಲ್ಲ ಕಾಲಕಳೆದಂತೆ ಅಸಹನೀಯ ಎನಿಸುತ್ತಾನೆ. ಸಹ್ಯ ಎನಿಸಿದ್ದು ಅಸಹ್ಯವಾಗಲು ನಾವೇ ಕಾರಣ ಇರಬೇಕು. ಬರುತ್ತೇನೆ; ಎಂದಾದರು ಒಂದು ದಿನ ನಿನ್ನ ಮನೆಗೆ. ಇಲ್ಲವಾದರೆ ಕೊನೆಗೆ ನೀನೇ ನನ್ನ ಮನೆಗೆ ಬಂದು ಹೋಗು.