ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಏನೋ ಇರಬೇಕು ಎಂದುಕೊಂಡೆ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ಕೀಳರಿಮೆಯಿಂದ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಚಿಕ್ಕಪ್ಪ ಬಿಚ್ಚಿ ಕೊಟ್ಟ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

‘ತತ್; ಇನ್ನು ಸ್ಕೂಲ್ ಬ್ಯಾಡವೇ ಬ್ಯಾಡ’ ಎಂದು ಗಟ್ಟಿಯಾಗಿ ನಿರ್ಧರಿಸಿಕೊಳ್ಳುತ್ತಿದ್ದೆ. ತಡವಾಗಿ ಅಪ್ಪ ಬಂದ. ಬಾಗಿಲ ಸಂದಿಗೆ ಸಿಗಿಸಿ ಇಟ್ಟಿದ್ದ ಉದ್ದನೆಯ ಕುಡುಲ ಚರಕ್ಕನೆ ಎಳೆದುಕೊಂಡ. ಇವನು ಬಹಳ ಅಪಾಯಕಾರಿ ಎಂದು ತಾತ ಮೆಲ್ಲಗೆ ಹಿಂದೆಯೇ ಬಂದಿದ್ದ. ತಾಯಿಯೂ ನಾನೂ, ರಾಗಿ ಕಲ್ಲ ಮೂಲೆಯಲ್ಲಿ ಅನಾಥರಂತೆ ಕೂತಿದ್ದೆವು. ಅವತ್ತು ಈ ಮನುಷ್ಯ ಲೋಕದಲ್ಲಿ ಹುಟ್ಟಿದ ಅನಾಥ ಭಾವನೆ ಇವತ್ತೂ ಹಾಗೇ ಇದೆ. ಭಾಗಶಃ ನಾನು ಸಾಯುವಾಗಲೂ ನನ್ನನ್ನು ಆ ಭಾವನೆ ಬಾಧಿಸಬಹುದು! ತಾತ ತಟಕ್ಕನೆ ಅಪ್ಪನ ಎರಡೂ ಕೈಗಳಿಗೆ ಸರಪಳಿ ಹಾಕಿ ಬಿಗಿದಂತೆ ಹಿಂದಿನಿಂದ ಹಿಡಿದುಕೊಂಡ. ತಾಯಿಯೂ ನಾನೂ ಹಿಂಬಾಗಿಲಿನಿಂದ ನೆಗೆದು ಹಾರಿ ಕತ್ತಲಲ್ಲಿ ಮಾಯವಾದೆವು. ತಾತ ಸಾಕಷ್ಟು ಬಲಶಾಲಿಯಾಗಿದ್ದ. ಬೀಳಿಸಿ ಕುಡುಲ ಕಿತ್ತುಕೊಂಡಿದ್ದ. ಬುದ್ಧಿಮಾತ ಹೇಳಿದ್ದ. ಅಪ್ಪ ಅಸಾಮಾನ್ಯವಾಗಿ ಸುಮ್ಮನಾಗಿದ್ದನೇನೊ! ಆ ಕತ್ತಲಲ್ಲಿ ತಾಯಿ ಒಂದು ದಾರಿ; ನಾನೊಂದು ದಾರಿ ಹಿಡಿದು ತಪ್ಪಿಸಿಕೊಂಡಿದ್ದೆವು. ಆ ನೀರವ ರಾತ್ರಿಯಲ್ಲಿ ‘ಅಕ್ಕಾ’ ಎಂದು ತೋಟ ಹೊಲ ಮಾಳಗಳಲ್ಲಿ ಕೂಗುವಂತಿರಲಿಲ್ಲ. ಇನ್ನಾವುದೊ ಅಪಾಯಕ್ಕೆ ಕರೆ ಕೊಟ್ಟಂತಾಗುತ್ತಿತ್ತು. ಜೋರಾಗಿ ಉಸಿರು ಬಿಡಲೂ ಆಗದೆ ನಾನೊಂದು ಪೊದೆ ಸೇರಿದ್ದೆ. ಬೆಳಗಾಗಿತ್ತು.

ಮೆಲ್ಲಗೆ ಎದೆಭಾರದಿಂದ ಮನೆಗೆ ಬಂದೆ. ತಾಯಿ ಕಾಣಲಿಲ್ಲ. ಹಿತ್ತಿಲಲ್ಲೂ ಇರಲಿಲ್ಲ… ಕೇರಿಯ ಅವರಿವರ ಮನೆಗೆ ಹೋಗಿ ನೋಡಿದೆ. ನಿಮ್ಮ ತಾಯಿ ಇಲ್ಲೆಲ್ಲು ಬಂದಿಲ್ಲ ಎಂದರು. ಅಪ್ಪ ಆ ಪರಿ ಹೊಡೆದಿದ್ದರಿಂದ ನಡೆಯಲು ಕಷ್ಟವಾಗುತ್ತಿತ್ತು. ತಾಯ ಕಾಣದೆ ಮನಸ್ಸು ರೋಧಿಸುತ್ತಿತ್ತು. ಹೋಟೆಲಿನ ಪಾಡಿಗೆ ಹೋಟೆಲು ನಡೆದಿತ್ತು. ಅಕಸ್ಮಾತ್ ತಾಯಿ ಅಲ್ಲೇನಾದರೂ ತೊಳೆವ ಬಳಿವ ಕೆಲಸ ಮಾಡುತ್ತಿರಬಹುದೇ ಎಂದು ಹೋದೆ. ‘ಎಲ್ಲಾ ಅವಳೂ’ ಎಂದು ಕೇಳಿದ ಅಪ್ಪ ‘ಗೊತ್ತಿಲ್ಲ ಅಣ್ಣಾ’ ಎಂದು ದೈನ್ಯತೆಯಲ್ಲಿ ಮುದುರಿ ನಿಂತೆ. ‘ವೋಗಲ್ಲಿ ಎಂಜಲೆತ್ತಿ ತೊಳೀ’ ಎಂದ, ನನಗೆ ಕೊಂಚ ಸಮಾಧಾನವಾಯಿತು. ತಾತ ದೊಡ್ಡ ಗ್ಲಾಸಲ್ಲಿ ಚಹಾ ಕೊಟ್ಟ. ಕುಡಿದೆ. ಮನದ ತುಂಬೆಲ್ಲ ತಾಯಿಯದೇ ಚಿಂತೆ. ಗಿರಾಕಿಗಳು ಚಹಾ ಕುಡಿದು ಬಿಟ್ಟಿದ್ದ ಗ್ಲಾಸುಗಳನ್ನೆಲ್ಲಾ ಎತ್ತಿ ತಂದು ತೊಳೆದು ಜೋಡಿಸಿದೆ. ಪ್ಲೇಟುಗಳ ಬೆಳಗಿದೆ. ಎಂಜಲು ಕೈ ತೊಳೆವ ತೊಟ್ಟಿ ಪಾಚಿಗಟ್ಟಿ ಗಲೀಜಾಗಿತ್ತು. ಅಪ್ಪನ ಗಮನ ಸೆಳೆಯಲು ಆ ತೊಟ್ಟಿಯನ್ನು ಸಾದ್ಯಂತ ನೋವಿದ್ದರೂ ಚಗರೆ ಗುಚ್ಚ ಹಿಡಿದು ಉಜ್ಜಿ ತೊಳೆದೆ. ಅಪ್ಪ ಅತ್ತ ದೋಸೆ ಹಾಕಿ ಸಾಕೆಂದು ನಿಲ್ಲಿಸಿ ಟೀ ಕುಡಿಯುತ್ತ ನನ್ನನ್ನೇ ನೋಡುತ್ತಿದ್ದ. ನನ್ನ ತಾಯಿ ಎಲ್ಲಿ ಯಾವುದಾದರೂ ತೋಟದ ಬಾವಿಗೆ ಬಿದ್ದುಹೋಗಿರುವಳೇ ಎಂದು ತಲೆ ತಗ್ಗಿಸಿ ಇನ್ನೊಮ್ಮೆ ಕಡ್ಡಿ ಬರಲಿಂದ ತೊಟ್ಟಿಯ ತೊಳೆಯುತ್ತಿದ್ದೆ. ತಂತಾನೆ ಕಣ್ಣೀರು ತೊಟತೊಟನೆ ತೊಟ್ಟಿಕ್ಕಿದವು.

ಅಪ್ಪನಿಗೆ ಗೊತ್ತಾಗಿತ್ತು. ‘ಬಾ ಇಲ್ಲೀ’ ಎಂದು ಕರೆದ. ಯಾಕೆ ಅಳುತ್ತಿರುವೆ ಎಂದು ಹೊಡೆದು ಬಿಡುವನು ಎಂದು ತಕ್ಷಣ ಮುಖ ತೊಳೆದುಕೊಂಡು ಹೋಗಿ ಅಪ್ಪನ ಮುಂದೆ ನಿಂತೆ. ತಲೆ ಸವರಿದ. ಅಳು ಬಂತಾದರೂ ಮನಸ್ಸನ್ನು ಕಲ್ಲು ಮಾಡಿಕೊಂಡೆ. ಹೊಡೆಯುವೆಯಲ್ಲಾ… ತುಳಿಯುವೆಯಲ್ಲಾ… ನಾನು ಸಾಯೋದಿಲ್ಲ ಎಂದು ಮನಸ್ಸಿಗೆ ಹೇಳಿಕೊಂಡೆ. ನೀಲಿಗಟ್ಟಿದ್ದ ಬರೆಗಳ ನೋಡಿದ. ಅಂಗಿ ಬಿಚ್ಚಿ ಬೆನ್ನ ತೋರು ಎಂದ. ಆಗಿನ್ನೂ ಕುಡಿದಿರಲಿಲ್ಲ. ಬೆನ್ನ ತುಂಬ ಬೆತ್ತದ ನೀಲಿ ಬರೆಗಳಿದ್ದವು. ಮರುಗಿದಂತೆ ಸವರಿದ! ಕರುಣಿಯೊ ಕ್ರೌರ್ಯವೊ ಗೊತ್ತಾಗಲಿಲ್ಲ. ‘ಹೋಗು ದೋಸೆ ತಿನ್ನು’ ಎಂದ. ಹಾಗೆ ಎಂದೂ ಅವನು ಹೇಳಿರಲಿಲ್ಲ. ಕರಕಲಾಗಿ ಸೀದು ಹೋದ, ಕಿತ್ತು ಹೋದ ದೋಸೆಗಳನ್ನೇ ಕೊಡುತ್ತಿದ್ದರು. ತಿನ್ನುವ ಆಸೆ ಬರಲಿಲ್ಲ. ‘ಕೊನೆಗೆ ತಿಂತಿನಿ ಅಣ್ಣಾ’ ಎಂದು ಎಂಜಲೆತ್ತಲು ಬಂದೆ. ಇವನು ನನ್ನ ಅಪ್ಪನೇ! ಎಂದು ಮನಸ್ಸ ಕೇಳಿಕೊಂಡೆ. ನನ್ನ ಕಣ್ಣು ಮೂಗು ಬಾಯಿ ತಲೆ ಬೆನ್ನುಗಳಿಗೆಲ್ಲ ತೀರ್ಥ ಎರಚಿದಂತೆ ಉಚ್ಚೆ ಉಯ್ದವನು ಇವನೇ ತಾನೇ; ಹಾಗೆ ತಾಯನ್ನು ನನ್ನನ್ನೂ ಕಡಿಯಲು ಕುಡುಗೋಲು ತಂದಿದ್ದವನು ಇವನಲ್ಲದೆ ಮತ್ಯಾರು? ಅಹಾ! ದೇವರೇ ಎಂದು ಸಂಕಟವ ನುಂಗಿಕೊಂಡೆ. ತಾತ, “ಬಾ ಇಲ್ಲಿ” ಎಂದು ತಲೆಯಾಡಿಸಿ ಮೆಲ್ಲಗೆ ಹೇಳಿದ! ‘ಹೋಗು; ತೊರೆಲಿ ಸ್ನಾನ ಮಾಡ್ಕೊಂಡು ಅಂಗಿ ಚಡ್ಡಿಯ ತೊಳ್ಕೊಂಡು ಅವ್ನೇ ಹಾಕೊಂಡು ನಿಧಾನವಾಗಿ ಬಾ’ ಎಂದ. ಅದೇ ಅವಕಾಶ ಎಂದು ತೋಟ ಮಾಳಗಳತ್ತ ಓಡಿದೆ. ಬಾವಿಗಳ ಕಂಡರೆ ಭಯ ನನಗೆ. ತಾಯಿ ಎಲ್ಲಿ ಬಾವಿಗೆ ಬಿದ್ದು ಈ ಜೀವನ ಸಾಕೆಂದು ಸತ್ತಿರುತ್ತಾಳೊ ಎಂದು ಕಣ್ಣಗಲಿಸಿ ಹುಡುಕಿದೆ. ಯಾವ ಬಾವಿಯಲ್ಲು ತಾಯ ಹೆಣ ಕಾಣಲಿಲ್ಲ. ತೇಲಿಬರಲು ಇನ್ನೂ ಸಮಯ ಬೇಕೇನೊ ಎಂದುಕೊಂಡು ನನ್ನೆದೆಗೆ ನಾನೇ ಗುದ್ದಿಕೊಂಡೆ! ಉಮ್ಮಳಿಸಿ ದುಃಖ ನುಗ್ಗಿ ಬರುತ್ತಿತ್ತು. ತೊರೆಯ ಮಡುಗಳನ್ನೂ ಗಮನಿಸಿದೆ.. ತೇಲಿ ಮುಂದಕ್ಕೆ ಹೊರಟು ಹೋಗಿರಬಹುದೇ ಎಂದು ಹೊಳೆಯ ಸುಮಾರು ದೂರವನ್ನು ಹಿಂಬಾಲಿಸಿ ನೋಡಿದೆ. ತೊರೆ ಶಾಂತವಾಗಿ ಹರಿಯುತ್ತಿತ್ತು.

ಯಾವುದು ನನ್ನ ಪರಮಾಪ್ತ ಹೊಳೆಯೋ; ಅದರಲ್ಲಿ ತಾಯ ಶವವನ್ನು ಹುಡುಕುವುದು ಎಂದರೆ ಏನರ್ಥ? ವ್ಯರ್ಥ ಎನಿಸಿತ್ತು. ತಾತ ಯಾಕೊ ಹೇಳಿದ್ದಾನೆಂದು ಬಟ್ಟೆ ಬಿಚ್ಚಿ ತೊಳೆದು ಒಣಗಲು ಹಾಕಿ ನೀರ ಕಲ್ಲ ಮೇಲೆ ಕೂತು ಬೇಸರದಲ್ಲಿ ಸ್ನಾನ ಮಾಡಿದೆ. ತಾಯಿಯದೇ ಚಿಂತೆ. ತನ್ನ ತಾಯಿ ಮನೆಗೆ ಹೋಗಿರಬಹುದೇ ಎಂದುಕೊಂಡೆ. ಅಪ್ಪನ ಹಿಂಸೆ ಅತಿ ಆದಾಗಲೆಲ್ಲ ಆಕೆ ತವರಿಗೆ ಓಡಿ ಹೋಗುತ್ತಿದ್ದಳು. ಅಲ್ಲಿಗೆ ಹೋಗಿ ಒಮ್ಮೆ ಪರೀಕ್ಷೆ ಮಾಡಲೇ ಎಂಬ ವಿಚಾರ ಬಂತು. ದೂರದ ದಾರಿ. ಒಬ್ಬನೇ ಹೋಗಲು ಭಯವಾಯಿತು. ಅಷ್ಟು ಮೈಲಿ ನಡೆವ ಶಕ್ತಿಯೂ ಇರಲಿಲ್ಲ.

ಮೈ ತೊಳೆದುಕೊಂಡು ತಡವಾಗಿ ಹಿಂತಿರುಗಿದ್ದೆ. ಅದು ಅಪ್ಪ ಪೆಂಟೆಗೆ ಹೋಗಿ ಎಂಡ ಕುಡಿದು ಸುಖಿಸುವ ಸಮಯ. ತಾತ ಕಾಯುತಿದ್ದ. ಮಡಿಯಾದ ಬಟ್ಟೆ ತೊಟ್ಟಿದ್ದ ಎಲ್ಲಿ ಮೈಸೂರಿಗೆ ಕರೆದೊಯ್ಯುವನೊ ಎಂಬ ಭೀತಿಯಾಯಿತು. ಏನೊ ಗುಟ್ಟು ಮಾಡುತ್ತಿದ್ದ. ‘ಬಾಲ ಮೊಗ ಒಂದೂರ್ಗೆ ವೋಗುವಾ’ ಎಂದು ತಲೆ ಸವರಿದ. ತಾತನನ್ನು ನಾವು ಅಪ್ಪ ಎನ್ನುತ್ತಿದ್ದೆವು. ‘ಎಲ್ಲಿಗಪ್ಪಾ… ಯಾವೂರಪ್ಪಾ’ ಎಂದು ಭಯದಲ್ಲಿ ಕೇಳಿದೆ. ‘ಬಾ… ಅಮೆಕೆ ಯೇಳ್ತೀನಿ. ನನ್ನ ಮ್ಯಾಲೆ ನಿನ್ಗೆ ನಂಬ್ಕೆ ಇಲ್ಲುವೇ’ ಎಂದು ಕೇಳಿದ. ‘ಇದೇ’ ಎಂದೆ. ‘ಸುಮ್ನೆ ಬಾ ನಂಜೊತೆʼ ಎಂದು ಕೈ ಹಿಡಿದ. ಹೊರಟ. ಅವರಿವರು ಕೇಳಿದರು. ‘ಪ್ಯಾಟೆಗೆ ವೊಯ್ತಿದ್ದೀನಿ… ಇವುನ್ಗೆ ವಸ ಬಟ್ಟೆ ತಕೊಡಬೇಕು’ ಎಂದ. ಅಹಾ! ನಿಜವೇ ಎನಿಸಿತು. ಅಷ್ಟು ದೂರ ನಡೆದು ಬಂದು ಅರಳಿ ಮರದ ಕಟ್ಟೆಯ ಬಳಿ ಕೂತೆವು. ಬಸ್ಸು ಬಂತು ಹತ್ತಿಕೊಂಡೆವು. ಬಸ್ಸು ಹತ್ತಿಸಿದ ತಾತ. ಎಲ್ಲಿಗಪ್ಪಾ ಎಂದು ರಾಗ ಎಳೆದೆ. ‘ನಿನ್ಗೊಂದು ದಾರಿ ತೋರಿಸ್ತೀನಿ ನಡಿಲಾ ಮೊಗಾ’ ಎಂದ. ಆಗೋದೆಲ್ಲ ಆಗಲಿ ಎಂದು ಕಿಟಕಿಯ ಸೀಟಿನಲ್ಲಿ ಕೂತೆ. ಬೆಟ್ಟ ಗುಡ್ಡ ಹಸಿರು ಬಯಲು ರಮಣೀಯವಾಗಿದ್ದವು. ಬಹಳ ದೂರದ ದಾರಿ. ಏನೋ ಭಯ. ಏನೋ ಸಂತೋಷ. ಆಗಾಗ ತಾಯ ನೆನಪು. ಹೆಣ ತೇಲಿ ಬಂದಂತೆ ಮನಸು ಮಿಸುಕಾಡುತ್ತಿತ್ತು. ಹೇಳಿಕೊಳ್ಳುವಂತಿರಲಿಲ್ಲ. ತಾತನಿಗೆ ಅವೆಲ್ಲ ಗೊತ್ತಿದ್ದ ಸಂಕಟಗಳೇ. ಸಂಜೆ ಆಗಿ ರಾತ್ರಿ ಬಂದಿತ್ತು. ಅದೊಂದು ನಗರ. ಬಣ್ಣ ಬಣ್ಣದ ದೀಪಾಲಂಕಾರಗಳಿದ್ದ ಮನೆಗಳು. ಬೀದಿಗಳು, ‘ತಿರ್ಗ ಯಾಕಪ್ಪ ಮೈಸೂರ್ಗೆ ಕರ್ಕಬಂದೇ’ ಎಂದು ಆಕ್ಷೇಪಿಸಿದೆ. ‘ಲೋ ಇದೆ ಬ್ಯಾರೆ ಪ್ಯಾಟೆ ಕಲಾ… ದೊಡ್ಡಬಳ್ಳಾಪುರ ಅಂತ ಇದರ ಹೆಸರು. ಇಲ್ಲೇ ನಿಮ್ಮ ಚಿಕ್ಕಪ್ಪ ಪೋಲೀಸ್ ಡಿಪಾರ್ಟ್‍ಮೆಂಟೆಲಿ ಪೋಲೀಸಾಗಿರುದು. ಅವರ ಮನೆಗೆ ನಿನ್ನ ಸೇರಿಸ್ತೀನಿ. ನನ್ಮಗನಿಗೆ ಹೊಸ್ದಾಗಿ ಕೆಲ್ಸ ಸಿಕ್ಕದೆ. ಒಬ್ನೇ ಅವನೇ… ಅನ್ನ ಸಾಂಬಾರ್ ಮಾಡುದೆಂಗೆ ಅಂತಾ ನಿನ್ಗೆ ನಾನು ಕಲಿಸಿ ಕೊಟ್ಟಿರುದಿಲ್ಲವೇ. ಅಷ್ಟು ಮಾಡಿ ನಿಮ್ಮ ಚಿಕ್ಕಪ್ಪನಿಗೆ ಕೊಡು. ನೀನೂ ಉಣ್ಣು ಇಲ್ಲೇ ಇಸ್ಕೂಲ್ಗೆ ಸೇರಿಸ್ತೀನಿ ನಿನ್ನ. ಅದೆಸ್ಟಾದ್ರು ವೋದು. ನಿನ್ಗೆ ಇಲ್ಲಿ ವಡ್ದು ಬಡ್ದು ಹಿಂಸೆ ಕೊಡೋರು ಯಾರೂ ಇರೋದಿಲ್ಲ’ ಎಂದಾಗ ಆಕಾಶಕ್ಕೆ ಕೈ ಮುಗಿದಿದ್ದೆ. ‘ಅನಾದಿಗೆ ಆಕಾಶವೇ ಆಧಾರವಂತೆ’ ಎಂದು ತಾಯಿ ದುಃಖದಲ್ಲಿ ಹೇಳುತ್ತಿದ್ದ ಗಾದೆ ಮಾತು. ತಾರೆಗಳು ನಕ್ಕಂತೆ ಕಂಡವು. ತಾತನಿಗೆ ಪೋಲಿಸ್ ಕ್ವಾಟ್ರಸ್ ವಿಳಾಸ ತಿಳಿದಿತ್ತು. ಬಂದೆವು. ಬಾಗಿಲಿಗೆ ಬೀಗ ಹಾಕಿತ್ತು. ಹೊರಗೆ ಹಾಗೇ ಕೂತಿದ್ದೆವು.

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಏನೋ ಇರಬೇಕು ಎಂದುಕೊಂಡೆ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ಕೀಳರಿಮೆಯಿಂದ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಚಿಕ್ಕಪ್ಪ ಬಿಚ್ಚಿ ಕೊಟ್ಟ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ‘ಎಷ್ಟನೆ ಕ್ಲಾಸೊ’ ಎಂದು ಕೇಳಿದ ಚಿಕ್ಕಪ್ಪ. ‘ಹಾsss; ಆಗ್ಲೆ ಎಸೆಲ್ಸಿಗೆ ಬಂದು ಬಿಟ್ಟೆಯಾ’ ಎಂದು ಅಚ್ಚರಿ ಪಟ್ಟ. ಉಂಡು ಮಲಗಿದೆವು. ತಾತ ಆರಂಭಿಸಿದ ಊರ ವಿಚಾರಗಳ. ಅವೆಲ್ಲ ನನ್ನ ಬಗ್ಗೆಯೇ ಇದ್ದವು. ಹಾಗೆ ತಾತ ಹೇಳುವಾಗ ಏನೊ ಸಂಕಟ ಅಪಮಾನ ತಿವಿಯುತ್ತಿದ್ದವು. ಚಿಕ್ಕಪ್ಪ ‘ಅಯ್ಯೋ’ ಎನ್ನುತ್ತಿದ್ದ. ನನ್ನ ಮೇಲಾಗುವ ಹಿಂಸೆಯ ಪರಿಪರಿಯಾಗಿ ತಾತ ಬಿಡಿಸಿ ಬಿಡಿಸಿ ಹೇಳುತ್ತಿದ್ದ. ‘ನೋಡಪ್ಪಾ; ನಿನ್ನ ಮ್ಯಾಲೆ ವಿಶ್ವಾಸ ಮಾಡಿ ಕರ್ಕ ಬಂದಿವಿನಿ. ತಂದೆಯಾಗಿದ್ರೂ ಕೈಮುಗಿದು ಕೇಳ್ಕತಿನಿ. ಊರಲ್ಲೆ ಬಿಟ್ರೆ; ಇವನ ಅವರಪ್ಪ ಮುಲಾಜಿಲ್ಲದೆ ಒಂದಿನ ಸಾಯಿಸಿ ಬಿಡ್ತನೆ. ನೆನ್ನೆ ಅಕಸ್ಮಾತ್ ಬದಿಕಂದ; ಅವರವ್ವ ಇದ್ದಿದ್ರಿಂದ. ಆಕೆ ಹೋರಾಡಿ ಇವನ ಜೀವವ ಉಳಿಸಿದ್ಲು… ನೋಡಪ್ಪಾ ಯಂಗೆ ವಡ್ದವನೆ ಅನ್ನುದಾ’ ಎಂದು ತಾತ ಅಂಗಿ ಬಿಚ್ಚಿಸಿದ. ಆ ಬೆಳಕಿನಲ್ಲಿ ನನ್ನ ಮೈ ತುಂಬ ಎಷ್ಟೊಂದು ಏಟಾಗಿವೆ ಎಂಬ ಅಂದಾಜು ತಿಳಿಯಿತು. ಸದ್ಯ ಬದುಕಿದ್ದೀನಲ್ಲಾ; ಅಷ್ಟು ಸಾಕು ಎಂದು ಚಿಕ್ಕಪ್ಪನ ಮುಂದೆ ಅಳಲು ನಾಚಿಕೆಯಾಗಿ ಗುಂಡಿ ಹಾಕಿಕೊಂಡೆ. ಚಿಕ್ಕಪ್ಪ ಕರಗಿದ್ದ. ನಿರ್ಧರಿಸಿ ತಾತನ ಕೇಳಿದ… ‘ನಾನೀಗ ಏನು ಮಾಡಬೇಕೆಂದು ನೇರವಾಗಿ ಹೇಳಪ್ಪಾ… ಇವನು ನನ್ನ ಅಣ್ಣನ ಮಗ. ನನ್ನಿಂದಾದ್ದ ಮಾಡುವೆ’ ಎಂದ. ತಾತ ಕೇಳಿದ… ‘ಇವುನ್ನ ಇಲ್ಲೇ ನಿನ್ನ ಮನೆಲಿ ಇರಿಸ್ಕಂದು ‘ಯಸೆಲ್ಸಿ’ ವೋದ್ಸಪ್ಪಾ… ನೀನಿನ್ನೂ ಮದ್ವೆ ಆಗಿಲ್ಲ. ಒಬ್ನೇ ಇದ್ದೀಯೆ. ಅನ್ನ ಬೇಯ್ಸಾಕ್ತನೆ… ಮನೆ ಕೆಲ್ಸ ಮಾಡ್ತನೆ. ಇಸ್ಕೂಲ್ಗೂ ವೋಯ್ತನೆ… ಯೋಚ್ನೆ ಮಾಡಪ್ಪಾ; ಒಂದು ಜೀವ ಉಳಿಸ್ದ ಪುಣ್ಯ ನಿನ್ಗೆ ಬರ್ತದೆ’ ಎಂದು ತಾತ ಕೈ ಮುಗಿದು ಮಗನ ಮುಂದೆ ದುಃಖಿತ ಗಂಟಲಲ್ಲಿ ವಿನಂತಿಸಿದ.

‘ಆಯ್ತು ಬಿಡಪ್ಪಾ; ನನ್ನಿಂದ ಎಷ್ಟು ಸಾಧ್ಯವೊ ಅಲ್ಲಿತನಕ ಓದಿಸ್ತೀನಿ’ ಎಂದು ತಾತನಿಗೆ ಭರವಸೆ ಕೊಟ್ಟ. ಕಣ್ಣೀರು ಹರಿಯುತ್ತಲೇ ಇದ್ದವು. ಇದು ಕನಸೊ ಕಲ್ಪನೆಯೋ ಎಂದು ಚುಚ್ಚಿಕೊಂಡು ನನ್ನನ್ನು ನಾನೆ ಪರೀಕ್ಷೆ ಮಾಡಿಕೊಂಡೆ. ನಿಜಾ. ಬೆಳಗಾಗಿತ್ತು. ಚಿಕ್ಕಪ್ಪ ಮರುದಿನವೆ ಹೊಸ ಬಟ್ಟೆ ಕೊಡಿಸಿದ್ದ. ಜೀವನದಲ್ಲಿ ಮೊದಲ ಬಾರಿಗೆ ಪ್ಯಾಂಟ್ ಹಾಕಿದ್ದೆ. ಇನ್ನು ಮೇಲೆ ಹೊರಗೆ ಹೋಗುವಾಗ ಚಡ್ಡಿ ಹಾಕಿಕೊಳ್ಳಬಾರದೂ… ಹೀಗಿರಬೇಕು. ಹಾಗಿರಬೇಕು ಎಂದು ಪೇಟೆಯ ನಾಗರೀಕತೆಗೆ ನನ್ನನ್ನು ಅಳವಡಿಸಿದ್ದ. ದೊಡ್ಡಬಳ್ಳಾಪುರ ಸರ್ಕಾರಿ ಹೈಸ್ಕೂಲಿಗೆ ತಾತನೂ ಚಿಕ್ಕಪ್ಪನೂ ಕರೆದೊಯ್ದು ಎಸ್.ಎಸ್.ಎಲ್.ಸಿ.ಗೆ ಸೇರಿಸಿದರು. ಆಗ ನನ್ನ ಬಳಿ ಯಾವ ಶಾಲಾ ದಾಖಲಾತಿಗಳೂ ಇರಲಿಲ್ಲ. ತಾತ ಬರಿಗೈಯಲ್ಲಿ ಕರೆತಂದಿದ್ದ. ಚಿಕ್ಕಪ್ಪ ಆ ಶಾಲೆಯ ಹೆಡ್ಮಾಸ್ತರಿಗೆ ತನ್ನ ಸಬ್‌ಇನ್ಸ್‌ಪೆಕ್ಟರಿಂದ ಹೇಳಿಸಿ ತಾತ್ಕಾಲಿಕವಾಗಿ ಶಾಲೆಗೆ ಸೇರಿಸಿಕೊಳ್ಳಲು ದಾರಿ ಮಾಡಿದ್ದ. ತಾತ ಆ ಅಕ್ಕೂರು ಹೊಸಳ್ಳಿ ಶಾಲೆಗೆ ಹೋಗಿ ಪರಿಸ್ಥಿತಿಯ ವಿವರಿಸಿ ಕೈ ಮುಗಿದು ಹೇಗೋ ದಾಖಲಾತಿಗಳ ತಂದುಕೊಟ್ಟಿದ್ದ. ಕೇವಲ ಹದಿನೈದು ದಿನಗಳಲ್ಲೇ ನಾನು ತಾತನ ಕಣ್ಣಲ್ಲಿ ಬದಲಾಗಿ ಹೋಗಿದ್ದೆ. ಆತ ಬಂದ ಕೂಡಲೇ; ‘ಅಪ್ಪಾ, ನಮ್ಮಕ್ಕ ಬಂದ್ಲೇ’ ಎಂದು ಕೇಳಿದ್ದೆ. ‘ಅವಳು ಬಂದ್ರೆಷ್ಟು ಬಿಟ್ರೆಷ್ಟು ಬಿಡ್ಲಾ… ಎಲ್ಲಾನು ಮರಿಲಾ… ನಾನಾ ಮನೇಲಿ ಬಾಳಲಾರೆ ಅಂತಾ ಅಪ್ಪನ ಮನೆ ಸೇರ್ಕಂದವಳೆ ಕಲಾ… ನಾನೇ ವೋಗಿ ಕರುದ್ರೂ ಬರ್ಲಿಲ್ಲ. ಅಲ್ಲಿ ನನ್ನ ಮಗನ ಗತಿ ಏನು ಅಂತಾ ಯೋಚ್ನೆ ಮಾಡ್ಲಿಲ್ಲ… ಬಿಡ್ಲಾ ಅದಾ’ ಎಂದಾಗ ನನ್ನ ಮನಸ್ಸು ಮುರಿದುಕೊಂಡಿತು. ‘ಯಂಗಪ್ಪ ನಿನ್ನ ಚಿಕ್ಕಪ್ಪಾ… ಸರ್ಯಾಗಿ ನೋಡ್ಕಂದನೇ’ ಎಂದು ಕೇಳಿದ. ಧನ್ಯತೆಯ ಕಣ್ಣೀರು ಹಾಕಿದೆ. ಕೆಲವು ಒಳ್ಳೆಯ ತನಗಳ ವಿವರಿಸಿದರೆ ಕೃತಕವಾಗಿ ಬಿಡುತ್ತವೆ. ಶಬ್ದಗಳಿರಲಿಲ್ಲ. ಊರಿನ ಯಾವೊಂದು ಸಂಗತಿಯನ್ನೂ ಕೇಳಲಿಲ್ಲ. ತಾಯಿ ಒಬ್ಬಳನ್ನು ಬಿಟ್ಟರೆ ಯಾರೂ ನೆನಪಾಗಲಿಲ್ಲ. ಪೋಲಿಸ್ ಇಲಾಖೆಯ ದುಡಿಮೆಯಲ್ಲಿ ಚಿಕ್ಕಪ್ಪ ತಡರಾತ್ರಿಗೆ ಮಾತ್ರ ಬರುತ್ತಿದ್ದ. ಅವನ ಹಾಸಿಗೆ ಹಾಸಿ ಸೊಳ್ಳೆ ಪರದೆ ಕಟ್ಟಿ ಬಿಟ್ಟಿರುತ್ತಿದ್ದೆ.

ಯಾವ ಬಾವಿಯಲ್ಲು ತಾಯ ಹೆಣ ಕಾಣಲಿಲ್ಲ. ತೇಲಿಬರಲು ಇನ್ನೂ ಸಮಯ ಬೇಕೇನೊ ಎಂದುಕೊಂಡು ನನ್ನೆದೆಗೆ ನಾನೇ ಗುದ್ದಿಕೊಂಡೆ! ಉಮ್ಮಳಿಸಿ ದುಃಖ ನುಗ್ಗಿ ಬರುತ್ತಿತ್ತು. ತೊರೆಯ ಮಡುಗಳನ್ನೂ ಗಮನಿಸಿದೆ.. ತೇಲಿ ಮುಂದಕ್ಕೆ ಹೊರಟು ಹೋಗಿರಬಹುದೇ ಎಂದು ಹೊಳೆಯ ಸುಮಾರು ದೂರವನ್ನು ಹಿಂಬಾಲಿಸಿ ನೋಡಿದೆ. ತೊರೆ ಶಾಂತವಾಗಿ ಹರಿಯುತ್ತಿತ್ತು.

ತಾತನೇ ಆ ಪಾಪಿ ನನ್ನಪ್ಪನ ವಿಷಯ ತೆಗೆದ. ನಾನು ಹೆದರಿ ಇಲ್ಲಿಂದಲೂ ಎಲ್ಲಿಗಾದರೂ ಓಡಿ ಹೋಗುವೆನು ಎಂಬ ಮುನ್ನೆಚ್ಚರಿಕೆಯಲ್ಲಿ ಅಪ್ಪನ ಆಕ್ರೋಶದ ಮಾತುಗಳ ತಂಪು ಮಾಡಿ ಹೇಳಿದ್ದ. ‘ಬಚಾವಾಗ್ಬುಟ್ಟ… ವೋಗ್ಲಿ ಬಿಡೂ’ ಅಂದ ಕನಪ್ಪಾ’ ಎಂದು ತಾತ ಸುಳ್ಳು ಹೇಳಿದ್ದ. ನಾನು ನಂಬಿರಲಿಲ್ಲ. ಶಾಲೆಯಲ್ಲಿ ಎಂಗಪ್ಪಾ ಎನ್ನುತ್ತಿದ್ದಂತೆಯೇ ‘ಆ ಹಳ್ಳಿಗಳ ಶಾಲೆಗಳಿಗೂ ಇಲ್ಲಿನ ನಗರದ ಸ್ಕೂಲಿಗೂ ಎಷ್ಟೊಂದು ವೆತ್ಯಾಸ ಇದೆ ಅಂತಾ ಗೊತ್ತೇನಪ್ಪಾ… ನಾನೀಗ ಫ್ರೆಂಡ್ಸ್ ಜೊತೆ ಇಂಗ್ಲೀಷ್ ಮಾತಾಡೋದ ಕಲೀತಿದ್ದೀನಪ್ಪಾ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದೆ. ತಾತನ ಮನಸ್ಸು ತುಂಬಿ ಬಂದಿತ್ತು. ಸಂತೋಷದ ಕಂಬನಿ ಅವನ ಮುಪ್ಪಾದ ಕಣ್ಣುಗಳ ಎರಡೂ ತುದಿಗಳಲ್ಲಿ ತುಳುಕಿತು. ಮೌನವಾದೆ. ಜ್ಞಾನಿ ತಾತನ ಮುಂದೆ ಹೆಚ್ಚು ಮಾತೇ ಆಡಬಾರದು ಎನಿಸಿತು. ತಾಯ ಹಂಬಲ ಕಾಡುತಿತ್ತು. ‘ಅವಳು ವಾಪಸ್ಸು ಬರೋದು ಬ್ಯಾಡಾ! ನೀನು ಚೆನ್ನಾಗಿ ವೋದಿ ಮುಂದೆ ಬಾ. ಆಗ ನಿನ್ನ ತಾಯ ನೀನೇ ನೋಡ್ಕಬೋದು. ಕಾಯಬೇಕು ಅಷ್ಟೇ’ ಎಂದ ತಾತ. ಒಂದು ಕ್ಷಣ ಮಿಂಚಾಯಿತು. ಹೌದು. ನಾನು ಚೆನ್ನಾಗಿ ಓದಿ ದೊಡ್ಡವನಾಗಬೇಕು. ತಾಯ ಆಸೆಯೂ ಅದೇ ತಾನೆ ಎಂದು ಸಂಕಟವ ಮೀರಿದೆ. ಆದರೆ ದುಃಖ ಒಳಗೇ ಆತ್ಮಕ್ಕೆ ಅಂಟಿಕೊಂಡಂತೆ ಮಾಯವಾಗಿ ಇರುತ್ತದಲ್ಲಾ… ನನ್ನ ಆಲೋಚನೆಗಳು ಅತಿಯಾಗಿದ್ದವು.

ತಾತ ಬೇಕಾದಷ್ಟು ಬುದ್ದಿ ಹೇಳಿದ. ಯಾಕೊ ಮೌನ ಆವರಿಸಿತು. ಮಾತು ವ್ಯರ್ಥ ಎನಿಸಿತು. ಚಿಕ್ಕಪ್ಪ ರಾತ್ರಿಗೆ ಬಂದ. ವಾಪಸ್ಸು ಹೋಗಿ ಬಿರಿಯಾನಿ ತಂದ. ತನ್ನ ತಂದೆಯ ಬಗ್ಗೆ ಚಿಕ್ಕಪ್ಪನಿಗೆ ಬಹಳ ಗೌರವ ಪ್ರೀತಿ. ಬಿರಿಯಾನಿ ತಿಂದಿದ್ದು ಅದೇ ಮೊದಲು. ನಲಿದಾಡುವಂತಾಗಿತ್ತು. ‘ಒಹ್ ಚಿಕ್ಕಪ್ಪನ ಮನೆಯಲ್ಲಿದ್ದರೆ ಎಷ್ಟೊಂದು ಸುಖ’ ಎನಿಸಿತು. ತಕ್ಷಣವೇ ತಾಯಿ ಬೆನ್ನು ತಟ್ಟಿ ಎಚ್ಚರಿಸಿದಂತಾಯಿತು! ‘ಸುಖಾ ಸುಳ್ಳು; ಸತ್ಯವೇ ಕಷ್ಟ ಸುಖದ ಮಾತು ಇಷ್ಟೇ ಇಷ್ಟು… ಆದರೆ ಕಷ್ಟದ ಮಾತು ಎಷ್ಟೊಂದು! ಲೆಕ್ಕ ಮಾಡಿದ್ದೀಯಾ… ವಿವೇಕ ಇದ್ದದ್ದೇ ನಿನಗೇ… ನಾಕಕ್ಷರವ ಯಂಗೆ ಕಲಿತಿದ್ದೀಯೇ’ ಎಂದು ಕೇಳಿದಂತಾಯಿತು. ಕಲಿತವರ ಮಾತುಗಳೆಲ್ಲ ಒಂದೇ ಕ್ಷಣಕ್ಕೆ ಸರಣಿಯಂತೆ ನೆನಪಾದವು. ಕಷ್ಟದ ದಾರಿ ಎಷ್ಟೇ ಕಷ್ಟವಾದರೂ ಅದರಲ್ಲೇ ಪಯಣ ಮಾಡಬೇಕು ಎಂದು ಅವತ್ತೇ ನಿರ್ಧರಿಸಿದೆ. ಆ ನಮ್ಮ ಚಿಕ್ಕ ತಾತ ವೀರಭದ್ರ ನೆನಪಾದ! ‘ಅಯ್ಯೋ; ಅವತ್ತು ಎಲ್ಲಿಗೊ ಹೋದವನು ವಾಪಸ್ಸು ಬರಲೇ ಇಲ್ಲವಲ್ಲಾ. ಎಂತಹ ಮೌನ ಮುನಿ… ಏನಾದನೊ? ಅವನಂತೆ ಮೌನವಾಗಿರುವುದನ್ನು ಕಲಿಯಬೇಕೆನಿಸಿತು. ಅವನನ್ನು ಕಟ್ಟಿಹಾಕಿ ಹೊಡೆದಿದ್ದೆಲ್ಲ ಮನದ ಪರದೆಯ ಮೇಲೆ ತೇಲಿ ಬಂದವು. ಚಿಕ್ಕಪ್ಪ ತಾತನ ಜೊತೆ ಊರ ಏನೇನೊ ವಿಷಯಗಳ ಮಾತನಾಡುತ್ತಲೇ ಇದ್ದ.

‘ಬಿಟ್ಟು ಬಿಡೂ ಆ ಊರ ನೆನಪ. ಕೊಂದು ಬಿಡೂ ಅಪ್ಪನ ಭಯವ. ಮರೆ ಮರೆ ಎಲ್ಲ ಅಲ್ಲಿನ ಮಧುರ ಕನಸುಗಳ. ಸುಟ್ಟು ಬಿಡೂ ಎಲ್ಲ ಅಪಮಾನಗಳ ಹೊರೆಯ; ನಿಗೂಢ ರಾತ್ರಿಗಳ ನರಕ ಕೂಪಗಳ, ಕೊಂದ ನಿರ್ಧಯಗಳ… ಮರೆಯಲಾರೆ ಎಂದರೆ ಹೇಗೆ? ಕೊಂದುಕೊ ನಿನ್ನ ನೀನೇ! ನುಂಗಿಕೊ ಹಂಗಿನರಮನೆಯ ಯಾತನೆಗಳ. ಬಿಸಾಡು ಬರ್ಬರ ಗಳಿಗೆಗಳ; ಹುಳುಕು ಮಾತುಗಳ, ಎಳೆದ ಬರೆಗಳ, ತಿವಿದು ಇರಿದು ಬಗೆದುಂಡು ತೇಗಿದವರ; ಬಿಟ್ಟುಬಿಡೂ ಕೊಟ್ಟಕೊನೆಗೂ. ಏನಾದರೇನು? ನಿನ್ನೊಳಗೆ ನೀನೇ… ನಿನಗೆ ನೀನೇ. ನೀನೇ ನಾನು ನಾನೇ ನೀನು ನಿನಗೆ ನಾನು ನನಗೆ ನೀನು. ನಡೆ ನಡೆ. ಸುಮ್ಮನೆ ಅತ್ತಿತ್ತ ನೋಡು. ದಿಟ್ಟಿಸು ಬಿದ್ದವರ. ಗಮನಿಸು ಎದ್ದಾಡುವವರ. ಆಲಿಸು ಆಕ್ರಂಧನಗಳ, ನಿಟ್ಟುಸಿರುಗಳ… ನಟ್ಟಿರುಳಲ್ಲಿ ಹೆಪ್ಪುಗಟ್ಟಿದ ದುಃಖಳಿಕೆಗಳ… ಹೊಡೆದರೆ ಹೊಡೆಸಿಕೊ! ಉಗಿದರೆ ಉಗಿಸಿಕೊ… ಬಡಿದರೆ ನಡು ಬಗ್ಗಿಸಿ ಕೈ ಮುಗಿ; ಹೇಡಿತನವಲ್ಲ ಅದು ಧೀರತನ. ನಿನ್ನ ತಲೆ ಮೇಲೆ ಹೋರಿಸಿದ್ದಾರೆಯೆ ಹೇಸಿಗೆಯ ಬಂಡೆಯಾ! ಹೊತ್ತುಕೊ ಎಷ್ಟು ಹೊತ್ತಾದರೇನಂತೆ ಹೊತ್ತವರು ಹೊತ್ತ ಕಾಯುವರು! ನೆತ್ತಿಯ ತಂಪಾಗಿಸುವರು. ಹಸಿದಸಿದು ನೋವ ನುಂಗಿ ನುಂಗಿ ಬಂದವರಿಗೆಲ್ಲ ಎದ್ದು ನಿಂತು ನಮಸ್ಕರಿಸಿ ನಗೆ ಮೊಗ ತೋರುವರು.

ಹಾಗೇ ಇರಬೇಕು… ಅಹಂಕಾರವೇನು ದೇವರು ಕೊಟ್ಟಿರುವ ಅರ್ಹತೆಯೇ? ಮೇಲರಿಮೆಯೇನು ವೇದ ಶಾಸ್ತ್ರಗಳ ವಿವೇಕವೇ? ಯಾರು ಕೊಟ್ಟರು ನಿಮಗೆ ಈ ಅಧಿಕಾರ… ತುಳಿದವರು ಉಳಿದರೆ; ಆಳಿದವರು ಅಳಿಯಲಿಲ್ಲವೇ. ಸತ್ತ ನಂತರ ಅವನೂ ಹೆಣ; ನೀನು ಹೆಣ. ಹೇಗೆ ಬದುಕಿದ್ದೆ ಎನ್ನುವುದು ಮುಖ್ಯ… ಸದಾ ಎಚ್ಚರವಿರು ನಿದ್ದೆಯಲ್ಲೂ; ಸಾವು ಹತ್ತಿರ ಹಿಂಬಾಲಿಸಿದರೂ, ಪಾತಕಿಗಳು ಬೇಟೆಗೆ ಬಂದಾಗಲೂ ನಿನ್ನ ಎಚ್ಚರವೇ ನಿನ್ನ ಕಾಯುವುದು. ಬರುವರು ಯಾರೊ ಕಾಪಾಡಲು ಎಂದು ವ್ಯರ್ಥಗೊಳಿಸದಿರು ಕಾಲವ; ನಿನ್ನೊಳಗಿನ ನಿನ್ನದೇ ಮಾಯಾ ಶಕ್ತಿಯೇ ನಿನ್ನ ದೇವರು. ನಂಬದಿರು ಕುರುಡಾಗಿ ಈ ಲೋಕದಲ್ಲಿ ಯಾವುದನ್ನೂ! ಪ್ರತಿ ಕ್ಷಣವೂ ಬೇರೆ ಬೇರೆ; ಒಂದೇ ಬಿಳಿಯ ಬಣ್ಣದಲ್ಲಿ ಎಷ್ಟೊಂದು ಬಣ್ಣಗಳು! ಒಂದೇ ನಡೆನುಡಿಯಲ್ಲಿ ಎಷ್ಟೊಂದು ಭೇಧಗಳು… ಒಬ್ಬನ ಒಳಗೇ ಇಬ್ಬಗೆಯ ಎಷ್ಟೊಂದು ಪಾತ್ರಗಳು; ನಟನೆಯ ತರತರದ ಭಂಗಿಗಳು. ಒಂದೇ ದಾರಿಯಲ್ಲಿ ಎಷ್ಟೊಂದು ಹಾದಿಗಳು; ಪಯಣಿಸುವ ಹೆಜ್ಜೆಗಳು, ತಂಗುದಾಣಗಳು, ತಲುಪುವ ನೆಲೆಗಳು… ಒಂದೇ ಹೊಳೆಯಲ್ಲಿ ಎಷ್ಟೊಂದು ಅಲೆಗಳು; ಹಸಿದವರ ದಾಹದ ಬೊಗಸೆಯ ಕೈಗಳು; ಕುಡಿವ ನೀರು ಒಂದೇ ಆದರೂ ದಾಹದ ಪರಿ ಬೇರೆ ಬೇರೆ. ಕಾಯ್ದುಕೊ ನಿನ್ನ ನೀನೇನಿನ್ನ ನೆರಳಂತೆ ಉಸಿರಾಟದಂತೆ ನಿನ್ನಾತ್ಮ ನಿನ್ನೊಳಗೇ ಇರುವಂತೆ. ಜೋಪಾನ ಮಾಡಿಕೊ; ಹೆಬ್ಬುಲಿಯ ಅಡವಿಯಲಿ ಒಬ್ಬಂಟಿ ಹೊರಟವನಂತೆ. ಹಾರಬಹುದು ನೋಡು ರೆಕ್ಕೆಯೇ ಇಲ್ಲದೆ. ಮುಟ್ಟಬಹುದು ಆಕಾಶವನ್ನೆ. ಎಲ್ಲಿದೆ ಅದು ಎನ್ನುವೆಯಾ? ನಿನ್ನಾತ್ಮದ ಕನ್ನಡಿಯ ಮುಂದೆ ಧೀರವಾಗಿ ನಿಂತು ದಿಟ್ಟಿಸು. ನೋಡಿದೆಯಾ; ನಿನ್ನ ಕಣ್ಣುಗಳಲ್ಲೇ ತುಳುಕಿದೆ ನೀಲಾಕಾಶ. ಎಷ್ಟು ಸಲ ತೊಟ್ಟಿಕ್ಕಿತೊ ಈ ಆಕಾಶ ನನ್ನ ಕಣ್ಣುಗಳಲ್ಲಿ ಕಂಬನಿಯಾಗಿ.

ಈ ಆಕಾಶವ ನಂಬು. ಚುಕ್ಕಿಗಳ ಹಿಡಿಯಲು ಯತ್ನಿಸು. ಬಾ ಎಂದರೆ ಬರುವುದು ಆಕಾಶ. ಬಿಟ್ಟುಬಿಡುವುದಿಲ್ಲ ನಿನ್ನಂತವರ; ಕಾಯುವುದು ಸದಾ. ಹೆದರದಿರು ಅಂತೆಕಂತೆ ಬೊಂತೆಗಳಿಗೆ. ಹೋಗಿ ನೋಡು ಸಮುದ್ರಗಳ. ಕಿನಾರೆ ಬೆಟ್ಟಗುಡ್ಡ ಕಣಿವೆ ಹಿಮಾಲಯಗಳ. ಮಾತನಾಡಿಸು ಅವುಗಳ ಮೌನ ಭಾಷೆಯ ಕಲಿತು. ಕಾಣುವುದು ಆಗ ದೇವರಿಗಿಂತಲೂ ಮಿಗಿಲಾದ ದರ್ಶನ! ಕಾಯಬೇಕು ಸಹನೆಯಲ್ಲಿ ಆಕಾಶದಂತೆ. ಬಾರದೇ ಇರುತ್ತವೆಯೇ ಮಿಂಚು ಗುಡುಗು ಮಳೆ…

ತಕ್ಷಣ ಎಚ್ಚರವಾಯಿತು. ಯಾರು ಹೀಗೆ ನನ್ನೊಳಗೆ ಬಂದು ಮಾತನಾಡುತ್ತಿದ್ದವರು? ಯಾವ ಮಾತುಗಳಿವು. ನನಗೆ ನಾನೇ ಹೇಳಿಕೊಂಡೆನೇ; ತಾಯಿ ಬಂದು ಬುದ್ಧಿ ಹೇಳಿದಳೇ; ಇಲ್ಲವೇ ತಾತ ಚಿಕ್ಕಪ್ಪನಿಗೆ ಬೋಧಿಸುತ್ತಿದ್ದನೇ… ಅಸ್ಪಷ್ಟವಾಗಿದೆಯಲ್ಲ ಕನಸೆಲ್ಲಾ… ಎಬ್ಬಿಸಿದ್ದೆ ತಾತನ. ಗಾಢ ನಿದ್ದೆಯಲ್ಲೂ ಮಾತನಾಡುವ ಶಕ್ತಿಯ ರೂಢಿಸಿಕೊಂಡಿದ್ದ. ‘ನಾನು ಕನವರಿಸುತ್ತಿದ್ದೆನೇ’ ಎಂದು ಕೇಳಿದೆ. ‘ವತಾರಕೆ ಮಾತಾಡ್ಮ ಮನಿಕಲಾ’ ಎಂದಿದ್ದ. ಹೊರಳಾಡಿದೆ. ನಿದ್ದೆ ಬರಲಿಲ್ಲ. ಬಹಳ ಹೊತ್ತಿನ ತನಕ ತಾಯ ನೆನಪು ಚುಚ್ಚುತ್ತಿತ್ತು. ಚಿಕ್ಕಪ್ಪ ಬೇಗ ಎದ್ದು ಡ್ಯೂಟಿಗೆ ಹೊರಟು ಹೋಗಿದ್ದ. ತಡವಾಗಿ ಎದ್ದಿದ್ದೆ. ಯಾವೂರಲ್ಲೂ ತಾತ ಒಂದು ದಿನದ ನಂತರ ಅರ್ಧಗಂಟೆಯೂ ಹೆಚ್ಚುವರಿಯಾಗಿ ನಿಲ್ಲುತ್ತಿರಲಿಲ್ಲ. ತನ್ನ ಮಗ ಊರಲ್ಲಿ ಯಾರ ಮೇಲೆ ಜಗಳವಾಡಿ ಏನು ಆಪತ್ತು ತಂದಿರುತ್ತಾನೊ ಎಂದು ಭುಗಿಲಾಗುತಿದ್ದ. ತಾತ ಹೊರಡಲೇ ಬೇಕಿತ್ತು. ‘ಊರ ಮರೆತು ಬಿಡೂ. ಅಲ್ಲಿ ನಿನಗೆ ಯಾರೂ ಇಲ್ಲ ಎಂದು ತಿಳಿದಿಕೊ. ನಿನ್ನ ನೋಡಬೇಕು ಎನಿಸಿದಾಗ ನಾನೇ ಬರುವೆ. ನಿಮ್ಮಪ್ಪ ಇಲ್ಲಿಗಂಟ ಬರಲಾರ. ಪೋಲೀಸರೆಂದರೆ ಅವನಿಗೆ ಭಯ’ ಎಂದು ಸಂತೈಸಿ ಹಿಂತಿರುಗಿದ್ದ. ನಾನು ಅದಾಗಲೆ ಎಲ್ಲ ಮರೆತಿದ್ದೆ.

ಚಿಕ್ಕಪ್ಪ ಅವತ್ತಿಗೆ ನನ್ನ ಪಾಲಿನ ದೇವರಾಗಿದ್ದ. ಆತನಿನ್ನೂ ಮದುವೆ ಆಗಿರಲಿಲ್ಲ. ಎಷ್ಟೊಂದು ವೆತ್ಯಾಸ ದೇವರೇ. ಅವರ ಹೆಸರ ಹೇಳಲೇಬೇಕು. ಶಾಂತರಾಜ್ ಎಂದು ಅವರ ಹೆಸರು. ಮೂರು ವರ್ಷ ಮನೆಯಲ್ಲಿರಿಸಿಕೊಂಡು ನಾಲ್ಕು ಅಕ್ಷರ ಕಲಿಸಲು ಉಪಕಾರ ಮಾಡಿದ್ದರು. ನನ್ನಪ್ಪನ ಕ್ರೌರ್ಯದ ಲವಲೇಶವೂ ಚಿಕ್ಕಪ್ಪನಲ್ಲಿ ಇರಲಿಲ್ಲ. ಹೆಸರಿಗೆ ತಕ್ಕಂತಿದ್ದ ಚಿಕ್ಕಪ್ಪ ಎಂದೂ ನನ್ನನ್ನು ಕಡೆಗಣಿಸಿರಲಿಲ್ಲ. ನನ್ನಪ್ಪನ ನರಕದ ಅರಿವೇ ಚಿಕ್ಕಪ್ಪನಿಗೆ ಇರಲಿಲ್ಲ. ತನ್ನ ತಮ್ಮಂದಿರು ತಂಗಿಯರನ್ನು ಅಪ್ಪ ಅಪಾರವಾಗಿ ಪ್ರೀತಿಸುತ್ತಿದ್ದ. ಚಿಕ್ಕಪ್ಪ ಆಗಾಗ ಹೇಳುತ್ತಿದ್ದ… ‘ನಮ್ಮಣ್ಣ ನಮ್ಮನ್ನು ಹೇಗೆ ಸಾಕಿದ್ದ ಅಂತಾ ಗೊತ್ತೇನೊ ನಿನಗೇ… ನನ್ನ ಶೂಗೆ ಪಾಲಿಷ್ ಹಾಕಿ, ಟೈ ಕಟ್ಟಿ, ಬಟ್ಟೆ ಹಾಕಿಸಿಕೊಂಡು ಸೈಕಲ್ ಮೇಲೆ ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ. ಹಬ್ಬಗಳಲ್ಲಿ ಹೆಗಲ ಮೇಲೆ ಕೂರಿಸಿಕೊಂಡು ತಮಟೆ ನಗಾರಿಯವರ ಮುಂದೆ ಮೆರೆಸಿ ಕುಣಿಯುತ್ತಿದ್ದ. ಅವನ ಆ ಋಣ ತೀರಿಸೋಕೆ ನಾನು ನಿನ್ನ ಇವತ್ತು ಶಾಲೆಗೆ ಸೇರಿಸಿರೋದು’ ಎಂದು ಹೆಮ್ಮೆಯಿಂದ ತನ್ನ ಅಣ್ಣನ ಹಿರಿಮೆ ಗರಿಮೆಗಳ ವಿವರಿಸುತ್ತಿದ್ದ. ಅವತ್ತಿನ ಕನಸಿನ ಮಾತುಗಳು ನೆನಪಾದವು.

ಮತ್ತಷ್ಟು ಮೌನವಾದೆ. ಮಾತಾಡೊ ಎಂದಂತೆಲ್ಲ ನಾನು ಇನ್ನಷ್ಟು ಮೂಕನಾಗುತ್ತಿದ್ದೆ. ಅದರಷ್ಟು ಹಿತವಾದದ್ದು ನನಗಾಗ ಬೇರೆ ಏನೂ ಇರಲಿಲ್ಲ. ಅವರ ಅಣ್ಣನ ಮೇಲಿನ ಗೌರವ ಪ್ರೀತಿಯ ಸಲುವಾಗಿ ನನ್ನನ್ನು ಚಿಕ್ಕಪ್ಪ ಪರಿಗಣಿಸಿದ್ದಾರೆಂದು ಬೇಗ ತಿಳಿಯಿತು. ‘ಹಾಗೇ ಇರಲಿ ಬಿಡು! ಅದರಲ್ಲೇನು ತಪ್ಪು? ನಿನಗೆ ಏನು ಬೇಕೊ ಅದಕಷ್ಟೆ ಸೀಮಿತನಾಗು. ಅಳತೆ ಮೀರಿ ಯೋಚಿಸಬೇಡ. ನೀನು ಬದುಕಿ ಉಳಿದರೆ ಸಾಕಲ್ಲವೇ’ ಎಂದು ನನ್ನ ಆತ್ಮ ಕೇಳಿತು. ನಿಜಾ… ನೀನು ಹೀಗೇ ಎಚ್ಚರಿಸುತ್ತಿರು… ಕನಸಲ್ಲಿ ನೀನೇ ತಾನೆ ಅವತ್ತು ಬಂದು ಬುದ್ದಿ ಹೇಳಿದ್ದು ಎಂದು ನನ್ನೊಳಗೆ ನಾನೆ ಕೇಳಿಕೊಂಡೆ. ಆತ್ಮ ಮೌನವಾಗಿತ್ತು. ನನ್ನೊಳಗೆ ನಾನೇ ಎಷ್ಟೋ ಸಲ ಮಾತನಾಡಿಕೊಳ್ಳುತ್ತಿದ್ದೆ ಹಿತ್ತಲ ಹೊಂಗೆ ಮರ ಏರಿ ಕೂತು. ನನಗಾಗ ಆತ್ಮದ ಜೊತೆ ಮಾತನಾಡುತ್ತಿರುವೆ ಎಂಬುದೇ ಗೊತ್ತಿರಲಿಲ್ಲ. ಏನದು ಆತ್ಮ ಎಂದು ತಾತನ ಕೇಳಿದ್ದೆ. ದೇವರು ನಮ್ಮ ಜೀವದ ಜೊತೆಗೆ ಕಳಿಸಿರುವ ನೆಂಟನೇ ಆತ್ಮ. ಅರ್ಥವಾಗಿರಲಿಲ್ಲ. ದೇವರೇ ನಮಗಿಲ್ಲ; ಇನ್ನು ಆ ಆತ್ಮದ ನೆಂಟನ ತಕಂಡು ಏನು ಮಾಡೋದು ಎಂದು ನಿರ್ಲಕ್ಷಿಸಿದ್ದೆ.

ಊರ ಎಲ್ಲವನ್ನೂ ಬಿಟ್ಟು ಬಿಟ್ಟಿದ್ದೆ. ಆದರೆ ಆತ್ಮದ ಜೊತೆ ಬಹಳ ಸಮಯ ರಾತ್ರಿ ಮಲಗಿದಾಗ ಊರ ಬಗ್ಗೆಯೇ ನೆನೆನೆನೆದು ಮಾತನಾಡುತ್ತಿದ್ದೆ. ಹೊಳೆಯಲ್ಲಿ ಈಗ ಎಷ್ಟು ನೀರು ಹರಿಯುತ್ತಿರಬಹುದು? ಕೆರೆ ಬತ್ತಿದೆಯೇ?… ಇಲ್ಲ ಇಲ್ಲಾ. ಅಂತಹ ಸರೋವರದ ಕೆರೆಯ ನೀಲಿ ನೀರ ಅಲೆಗಳು ಯಾವತ್ತೂ ಮುಗಿಯವು. ಆ ಚಿನ್ನದ ಬಣ್ಣದ ಬತ್ತದ ಬಯಲು ಈಗ ಕೊಯ್ಲಿಗೆ ಬಂದಿರಬೇಕೂ… ಆ ಕಬ್ಬಿನ ಗದ್ದೆಗಳ ಕಬ್ಬ ತಿನ್ನಲು ಈಗ ಆಗದಲ್ಲಾ.. ಅಲ್ಲೊಂದು ಆಲೆ ಮನೆ ಇತ್ತಲ್ಲಾ… ಅಲ್ಲಿ ಈಗಲೂ ಬೆಲ್ಲದ ಕೊಪ್ಪರಿಗೆಯಲ್ಲಿ ಬೆಲ್ಲ ಹದವಾಗಿ ಕುದಿಯುತ್ತಿರಬಹುದೂ…

ಆ ಬನ್ನಿ ಮರದ ಕಟ್ಟೆಯ ಯಾರೂ ಕಿತ್ತು ಹಾಕಿರಲಾರರು. ಅಲ್ಲಿ ಎಷ್ಟೊಂದು ಆಟವಾಡಿದ್ದೇ… ತೊರೆಯ ತಾವರೆ ಹೂಗಳು ಈಗ ನೀರವ ರಾತ್ರಿಯಲ್ಲಿ ಮೊಗ್ಗಾಗಿ ಅರಳುತ್ತಿರಬಹುದು. ಮಿಂಚು ಹುಳುಗಳು ಹಾರಾಡುತ್ತಿರಬಹುದು… ಆ ಗೂಬೆಗಳು ಬಾವಲಿಗಳು ಖಂಡಿತ ಬೇಟೆಗೆ ಹೊರಟಿರುತ್ತವೆ. ಆ ತೆಂಗು ಬಾಳೆ ತೋಟಗಳು ಹಾಗೇ ಗಾಳಿಗೆ ಬಳುಕುತ್ತಲೇ ಇರುತ್ತವೆ. ಬಾಚಳಪ್ಪನ ಆ ದೈತ್ಯ ಅರಳಿ ಮರ ಗಲಗಲ ಎನ್ನುತ್ತಲೇ ಇರಬೇಕು… ಅಲ್ಲವೇ? ಅವೆಲ್ಲ ಸತ್ಯ ಅಲ್ಲವೇ? ಸುಳ್ಳೇ? ಸುಳ್ಳಲ್ಲ ತಾನೆ ಆತ್ಮವೇ… ಮಾರಿಗುಡಿಯ ದೀಪ ತಣ್ಣಗೆ ಉರಿಯುತ್ತಲೇ ಇದೆ. ದಿನವೆಲ್ಲ ತಿಪ್ಪೆ ಮಾಳವ ಕೆರೆದು ತಿಂದು ಗೂಡಿಗೆ ಬಂದ ಬಣ್ಣ ಬಣ್ಣದ ಚಂದದ ಕೋಳಿಗಳು ನಿದ್ರಿಸುತ್ತಿರುತ್ತವೆ. ಆ ಮರೆಯ ಸೂಫಿ ಸಂತರಗುಡಿಯನ್ನು ಮುಚ್ಚಿಕೊಳ್ಳುವಂತೆ ಬೆಳೆದಿದ್ದ ತರಾವರಿ ಬಳ್ಳಿಗಳು ನಿರಾಳ ರಾತ್ರಿಗೆ ಮಿಡಿಯುತ್ತಿರುತ್ತವೆ. ಅಲ್ಲಿ ಎಷ್ಟೊಂದು ಸಲ ಬಚ್ಚಿಟ್ಟುಕೊಂಡು ಮಲಗಿದ್ದೆನಲ್ಲಾ… ಅಲ್ಲಿದ್ದ ಸಮಾಧಿ ಹಾಗೇ ಅನಂತ ನಿದ್ದೆಯಲ್ಲಿ ಲೀನವಾಗಿರುತ್ತದೆ. ಆ ಬೀದಿಗಳು ಬಿಕೊ ಎನ್ನುತ್ತಿರುತ್ತವೆ. ನಾಯಿಗಳೂ ಆಗಾಗ ಅಲ್ಲಲ್ಲಿ ಬೊಗಳುತ್ತಲೇ ಇರುಳ ಕಾಯುತ್ತಿರುತ್ತವೆ.

ಹೌದಲ್ಲವೇ ಆತ್ಮವೇ? ಜೀರುಂಡೆಗಳಿಗೆ ರಾತ್ರಿ ಎಂದರೆ ಅದೇನು ವ್ಯಾಮೋಹವೊ. ಜೀಂಗರೆಯುತ್ತಲೇ ಇರುತ್ತವೆ. ಬಟಾ ಬಯಲು ಹೊಲ ಮಾಳಗಳು ಚಂದಿರನ ಬೆಳಕಲ್ಲಿ ಚಿಗುರಲು ಹಾತೊರೆಯುತ್ತಿರುತ್ತವೆ. ಆ ಕರುಗಳು ತಾಯ ಹಾಲ ಕುಡಿಯಲು ಆಗದೆ ಕಟ್ಟಿರುವ ಹಗ್ಗದ ಗುಂಟಗಳ ಎಳೆದಾಡುತ್ತಿರುತ್ತವೆ. ಮಲಕು ಹಾಕುವ ಹಸುಗಳು ನಿದ್ದೆಯಲ್ಲೂ ಮಲಕು ಹಾಕುತ್ತಲೇ ಇರುತ್ತವೆ. ಆ ಮೀನುಗಳೋ ತೊರೆಕೆರೆ ಹಳ್ಳಗಳಲ್ಲಿ ಅವು ಹೇಗೆ ನೀರೋಳಗೆ ನಿದ್ದೆ ಮಾಡುತ್ತಿರುತ್ತವೊ! ಆ ಹಿತ್ತಿಲಲ್ಲಿ ನಾನು ನೆಟ್ಟು ಬೆಳೆಸಿದ್ದ ಮಲ್ಲಿಗೆ ಬಳ್ಳಿ ಈಗ ಎಷ್ಟೊಂದು ಹೂ ಉದುರಿಸಿರುತ್ತದೊ… ಕೊಣಮಾವಿನ ಮರವನ್ನೆಲ್ಲ ಆವರಿಸಿ ಬೆಳೆದಿತ್ತಲ್ಲಾ… ಒಣಗಿ ಹೋಗಿಲ್ಲ ತಾನೇ?

ಹೀಗೆಲ್ಲ ನೆನೆಯುತ್ತಿದ್ದಂತೆಯೆ ಮಾಯದ ನಿದ್ದೆ ಬಂದುಬಿಡುತ್ತಿತ್ತು. ಮತ್ತೆ ಆ ಚಿತ್ರಗಳೆಲ್ಲ ಕಲಸಿಕೊಂಡು ಕನಸಿಗೂ ಬಂದು ಹೋಗುತ್ತಿದ್ದವು. ಎದ್ದಾಗ ವಾಸ್ತವ ಯಾವುದು ಅವಾಸ್ತವ ಯಾವುದು ಎಂದು ಗೊಂದಲವಾಗುತ್ತಿತ್ತು. ಅವೆರಡರ ಜೊತೆ ನನ್ನ ಬಾಲ್ಯ ಬೆರೆತು ಹೋಗಿತ್ತು. ಅದರ ಪರಿಣಾಮ ಹೇಗೆಲ್ಲ ನನ್ನೊಳಗೆ ಹಬ್ಬಿದೆ ಎಂಬುದು ನನಗೆ ಮಾತ್ರಗೊತ್ತು. ಅಂತಹ ಅಪ್ಪ ಅವಾಸ್ತವವಾಗಿದ್ದ. ಈ ಲೋಕದ ಎಷ್ಟೋ ಅಸಹ್ಯ ಅವಾಸ್ತವಗಳಲ್ಲಿ ನರಳಿ ಹೋಗಿರುವೆ. ವಾಸ್ತವ ಸತ್ಯಕ್ಕಾಗಿ ಬಡಿದಾಡುತ್ತಲೇ ಇರುವೆ. ಅವತ್ತಿಗೂ ಒಂಟಿ ಎನಿಸುತ್ತಿತ್ತು. ಇವತ್ತಿಗೂ ಅದೇ ಭಾವನೆ ಪ್ರಜ್ಞೆಯ ತಳದಲ್ಲಿ ಕೂತುಬಿಟ್ಟಿದ್ದೆ. ಒಂಟಿಯಾಗಿರುವುದರಲ್ಲಿ ಏನೋ ದುಃಖದ ಸುಖವಿದೆ. ದುಃಖವೇ ನನಗೆ ಸುಖ. ಅವಾಸ್ತವ ನನಗೆ ಆಗದು/ ಸುಳ್ಳು ಎಷ್ಟೊಂದು ಗುಂಪಾಗಿರುತ್ತದೆ! ವ್ಯವಸ್ಥಿತವಾಗಿ ಬೇಟೆ ಆಡಿ ಬಲಿ ತೆಗೆದುಕೋಳ್ಳುತ್ತದೆ… ನನ್ನ ತಾಯನ್ನು ಕೊಂದದ್ದು ಸುಳ್ಳುಗಳಲ್ಲವೇ… ಸುಳ್ಳಿಗೆ ಎಷ್ಟೊಂದು ಪರವಾದ ಪುರಾವೆ ಸಾಕ್ಷಿಗಳು! ಸಾಕ್ಷಿ ಪ್ರಜ್ಞೆಯ ಸತ್ಯಕ್ಕೆ ಬಿಡಿಗಾಸಿನ ಪುರಾವೆಯೂ ಸಿಗದು. ಸಾಕ್ಷಿ ಪ್ರಜ್ಞೆಯೇ ಸತ್ತು ಹೋಗಿದೆಯೇ… ಯಾವ ಪಾಪ ಪ್ರಜ್ಞೆಯೂ ಕಾಡದು ಅಂತವರಿಗೆ. ಅದನ್ನೆಲ್ಲ ತಾಯ ಸಂದರ್ಭದಲ್ಲಿ ನನ್ನ ಮನೆಯ ಜನಗಳ ನಡುವೆಯೇ ಕಂಡಿರುವೆ. ಇನ್ನು ಹೊರಗಿನವರ ದೂರಿ ಫಲವೇನು? ಬರಿ ನಿಷ್ಠೂರ! ಆ ಬಾಲ್ಯ ಕಾಲದಲ್ಲಿ ಇದ್ದ ಮುಗ್ಧ ಮೌನವ ಎಲ್ಲಿ ಕಳೆದುಕೊಂಡೆ? ಪ್ರಾಯ ಕಾಲದಲ್ಲೂ ಸುಮ್ಮನೆ ತಲೆಯಾಡಿಸಿ ಮಾತೇ ಆಡದೆ ಇರುತ್ತಿದ್ದೆನಲ್ಲಾ… ಯಾವಾಗ ನನ್ನೊಳಗೆ ದಿಕ್ಕಾರ ದಿಕ್ಕಾರ ದಿಕ್ಕಾರ ಎಂಬ ಕೂಗು ನಾಭಿಯಾಳದಿಂದ ಹುಟ್ಟಿಕೊಂಡಿತು?