ಒಮ್ಮೆ ಬ್ರಿಟನ್ ತಲುಪಿದ ಮೇಲೆ ಕೆಲವು ಆಯಾಗಳು ಯಜಮಾನರ ಬಂಧುಗಳ ಮನೆಯನ್ನು ಭೇಟಿ ಮಾಡುವಾಗ ಜೊತೆಗೆ ಹೋಗುವ ಸಾಧ್ಯತೆ ಇತ್ತು. ಮತ್ತೆ ಕೆಲವರನ್ನು ವಾಪಸು ಕಳುಹಿಸಲಾಗುತ್ತಿತ್ತು. ಅಂತಹ ಆಯಾಗಳು, ತಮ್ಮ ಅಗತ್ಯ ಇರುವ, ಭಾರತಕ್ಕೆ ಮರಳುವ ಬ್ರಿಟಿಷ್ ಕುಟುಂಬಗಳಿಗೋಸ್ಕರ ಕಾಯಬೇಕಿತ್ತು. ಇಂತಹ ಆಯಾಗಳಲ್ಲಿ ಕೆಲವರು ಬ್ರಿಟನ್ನಿಗೆ ಹಲವು ಭೇಟಿ ಮಾಡಿದವರೂ ಇದ್ದರು. ಹೆಚ್ಚಿನವರಿಗೆ  ವಾಪಸು ಹೋಗುವ ಟಿಕೇಟು ನೀಡಲಾಗುತ್ತಿತ್ತು. ಆದರೆ ಎಲ್ಲರಿಗೂ ಅಲ್ಲ. ಬಹಳ ಆಯಾಗಳನ್ನು ಅವರನ್ನು ಬ್ರಿಟನ್ನಿಗೆ ಕರೆತಂದ ಕುಟುಂಬದವರು ಬಿಟ್ಟುಬಿಡುತ್ತಿದ್ದರು. ಯಾವ ಹಣ ಆಶ್ರಯ ನೀಡದೆ ಮನೆಯಿಂದ ಹೊರಹಾಕುತ್ತಿದ್ದರು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯ ಹೊಸ ಬರಹ

ಪೂರ್ವ ಲಂಡನ್ ನ ಹಾಕ್ನೇ ಪ್ರದೇಶದ ಕಿಂಗ್ ಎಡ್ವರ್ಡ್ ರಸ್ತೆಯ 26ನೆಯ ನಂಬ್ರದ ಮನೆಯ ಗೋಡೆಯ ಮೇಲೆ ನೂರು ವರ್ಷಗಳ ಹಿಂದಿನ ಪ್ರಕ್ಷುಬ್ದ ಸಮಯವೊಂದು ಮರೆವು ಅಸಡ್ಡೆಗಳ ಧೂಳಿನಿಂದ ಮೇಲೆದ್ದು ಬಂದು ವರ್ತಮಾನದ ಸ್ವಚ್ಛ ನೆನಪಾಗುವ ಪ್ರಯಾಸದಲ್ಲಿದೆ. ಇದೇ ಜೂನ್ ತಿಂಗಳಿನ ಮಧ್ಯದಲ್ಲಿ ಗೋಡೆಯ ಮೇಲೆ ನೀಡಲಾದ ನೀಲಿಫಲಕ ಅನಾಮಿಕ ನಿರ್ಲಕ್ಷಿತ ಸಮುದಾಯವೊಂದಕ್ಕೆ ಗುರುತು ನೀಡುವ ದುರ್ಬಲ ಪ್ರಯತ್ನದಲ್ಲಿ ತೊಡಗಿದೆ. ಬದುಕಿದಷ್ಟೂ ದಿನ ಹೆಸರು ಊರು ವಿಳಾಸ ಒಂದೂ ಇರದ, ಸಾಂತ್ವನ ಕರುಣೆ ಆದರ ಪಡೆಯದ, ಯಾವ ದಾಖಲೆಯಲ್ಲೂ ಯಾವುದೇ ರೂಪದಲ್ಲೂ ಬದುಕದ ಹಲವು ನೂರು ಮಹಿಳೆಯರಿಗೆ ಈ ಹೊಚ್ಚ ಹೊಸ ನೀಲಿ ಫಲಕ ಗೌರವದ ಸ್ಮರಣೆ ನೀಡುವ ಪ್ರತೀಕ್ಷೆಯಲ್ಲಿದೆ.

ತಾವು ಬದುಕಿದ್ದಷ್ಟು ದಿನವೂ ಯಾವುದೇ ಅಸ್ತಿತ್ವ ಇಲ್ಲದೆ ಕಳೆದ ಆ ಮಹಿಳೆಯರು ಏಷ್ಯಾ ಪ್ರಾಂತ್ಯದವರು. ತಮ್ಮನ್ನು ಕೆಲಸಕ್ಕೆ ಇಟ್ಟುಕೊಂಡ ಆಂಗ್ಲ ಕುಟುಂಬಗಳಿಂದ “ಆಯಾ” ಎಂದು ಕರೆಸಿಕೊಳ್ಳುತ್ತಿದ್ದವರು. ಮತ್ತೆ ನಿಘಂಟುಗಳ ಪರಿಶುದ್ಧ ಅರ್ಥವ್ಯಾಪ್ತಿಯಲ್ಲಿ ಇವರು ಸೇವಕಿ, ದಾಸಿ, ಆಳು, ಪರಿಚಾರಕಿ ಹೀಗೆಲ್ಲ ಕರೆಸಿಕೊಳ್ಳಬಹುದಾದವರು.

ಒಂದಾನೊಂದು ಕಾಲದ ಕೌಟುಂಬಿಕ ಸಮಾಜದಲ್ಲಿ ಬಹಳ ಬೇಡಿಕೆ ಇದ್ದ ಆಯಾಗಳು, ಅದೇ ಕಾಲದ ಸೂರ್ಯ ಮುಳುಗದ ನಾಡಿನ ತುಂಡುಗಳಾಗಿದ್ದ ಭಾರತ, ಚೈನಾ, ಹಾಂಗ್‌ಕಾಂಗ್ ಶ್ರೀಲಂಕಾ ಬರ್ಮಾ ಮಲೇಶಿಯಾ ಇಂಡೋನೇಷಿಯಾ ಮೂಲದವರು. ಭಾರತ ಎಂಬ ಬ್ರಿಟಿಷ್ ವಸಾಹತಿನಲ್ಲಿ ಇಂಗ್ಲಿಷ್ ಸಂಸಾರಗಳ ಬೆನ್ನೆಲುಬಾಗಿ ದುಡಿಯುತ್ತಿದ್ದವರು. ಅಂದರೆ ಬ್ರಿಟಿಷರ ಮಕ್ಕಳನ್ನು ಆಡಿಸುತ್ತಿದ್ದವರು, ಅವರಿಗೆ ಕತೆ ಹೇಳುತ್ತಿದ್ದವರು, ಮತ್ತೆ ಮತ್ತೆ ತೂಗಿ ಮಲಗಿಸುತ್ತಿದ್ದವರು. ಅಂದು ಆಯಾಗಳ ಲಾಲನೆ ಪಾಲನೆಯಲ್ಲಿ ಉಂಡು ಆಡಿ ಮಲಗಿ ಎದ್ದು ಬೆಳೆದು ದೊಡ್ಡದಾಗಿರುವ ಆ ಮಕ್ಕಳು ಅವರ ಮೊಮ್ಮಕ್ಕಳು ಬ್ರಿಟನ್ ಅಥವಾ ಜಗತ್ತಿನ ಇನ್ಯಾವುದೋ ಭಾಗದಲ್ಲಿ ಈಗ ತಣ್ಣಗೆ ಬದುಕುತ್ತಿರುವಾಗ ಹಳೆಯ ನೆನಪಿನ ಎಳೆಯೊಂದನ್ನು ಆಯಾಗಳ ಕುರಿತಾದ ನೆನಪಿನ ಫಲಕ ಕಣ್ಣೆದುರು ತೂಗಿ ಬಿಟ್ಟಿದೆ.

1858ರ ಆಸುಪಾಸಲ್ಲಿ ಬ್ರಿಟಿಷರು ಭಾರತದಲ್ಲಿ ಬಲವಾಗಿ ಬೇರೂರಿದ ನಂತರ, ನಾಗರಿಕ ಸೇವೆಗೆಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಸರಕಾರಿ ಸೇವೆಯಲ್ಲಿ ಬರುವವರ ಸಂಖ್ಯೆ ಹೆಚ್ಚಾಯಿತು. ಆ ಆಂಗ್ಲ ಆಫೀಸರುಗಳು ಜೊತೆಯಲ್ಲಿ ಹೆಂಡತಿಯರನ್ನೂ ಕರೆದುಕೊಂಡು ಬಂದಿಳಿಯುತ್ತಿದ್ದರು. ಆಂಗ್ಲ ಅಧಿಕಾರಿಗಳು ಸಾಹಿಬ್ ಎಂದು ನೌಕರರಿಂದ ಕರೆಸಿಕೊಂಡರೆ, ಅವರ ಹೆಂಡತಿಯರಿಗೆ “ಮೇಂಸಾಹಿಬ್” ಎಂಬ ಸಂಬೋಧನೆ ಇತ್ತು. ಇಂಗ್ಲಿಷ್ ನ ಮೇಡಂ ಹಾಗು ಹಿಂದಿಯ ಸಾಹಿಬ್ ಗಳು ಸೇರಿ ಮೇಂಸಾಹಿಬ್ ಆಗಿರಬೇಕು. ಬ್ರಿಟಿಷ್ ಅಧಿಕಾರಿಗಳ ಸಂಸಾರ ನೆಲೆಯಾಗಿ ಅವರಿಗೆ ಮಕ್ಕಳು ಹುಟ್ಟಿದಾಗ ಮನೆಕೆಲಸದಲ್ಲಿ ನೆರವಾಗುವವರ, ಮಕ್ಕಳನ್ನು ನೋಡಿಕೊಳ್ಳುವವರ ಅಗತ್ಯ ಬಿತ್ತು. ಆ ಕಾಲದ ಶ್ರೀಮಂತ ಭಾರತೀಯರ ಮನೆಗಳಲ್ಲಿ ಕೆಲಸದವರು ಪುರುಷರೇ ಆಗಿರುತ್ತಿದ್ದರು, ಮಕ್ಕಳ ಆರೈಕೆ ಮಾಡುವವರು ಕೂಡ. ಆದರೆ ಬ್ರಿಟಿಷ್ ಮೇಂಸಾಹಿಬ್ ಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಸೇವಕಿಯರೇ ಬೇಕು ಎಂದು ಬಯಸಿದರು. ಬ್ರಿಟಿಷ್ ಮನೆಗಳಲ್ಲಿ ಕೆಲಸಕ್ಕಿದ್ದವರಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯ “ಆಯಾ”ಗಳು ಮಾತ್ರ ಮಹಿಳೆಯರು. ಮತ್ತೆ ಉಳಿದ ನೌಕರ ಚಾಕರರೆಲ್ಲ ಗಂಡಸರೇ ಆಗಿದ್ದರು. ಆಯಾಗಳು ವಯಸ್ಸಿನಲ್ಲಿ ಹಿರಿಯರು ಮತ್ತೆ ಬಹುತೇಕ ವಿಧವೆಯರು. ಅವರೆಲ್ಲ ಮಕ್ಕಳ ಆರೈಕೆಯನ್ನು ಸುಲಭವಾಗಿ ಬಲ್ಲವರಾಗಿದ್ದರು. ಅವರಿಗೆ ಬ್ರಿಟಿಷ್ ತಂದೆ ತಾಯಿಯರು ತಮ್ಮ ಮಕ್ಕಳನ್ನು ಹಿತವಾಗಿ ಮೃದುವಾಗಿ ನೋಡಿಕೊಳ್ಳುವಂತೆ ಆಗ್ರಹಿಸುತ್ತಿದ್ದರು. ಆದರೆ ಆಯಾಗಳ ಬಗ್ಗೆ ಆಂಗ್ಲ ದಂಪತಿಗಳ ವರ್ತನೆ ನಿಷ್ಠುರವೂ ಕಠೋರವೂ ಆಗಿರುತ್ತಿತ್ತು. ಇಂಗ್ಲಿಷ್ ಮಕ್ಕಳು ಬಹಳ ಸಮಯವನ್ನು ಆಯಾಗಳ ಜೊತೆಗೆ ಕಳೆಯುತ್ತಿದ್ದರು. ಆಯಾಗಳು ಮಾತನಾಡುವ ಭಾಷೆ ಮತ್ತು ಆಂಗ್ಲ ಭಾಷೆ ಎರಡನ್ನೂ ಕಲಿಯುತ್ತ ಮಕ್ಕಳು ಬೆಳೆಯುತ್ತಿದ್ದವು.

ಭಾರತದ ಹವಾಮಾನ ಆಂಗ್ಲ ಮಕ್ಕಳಿಗೆ ಕಷ್ಟ ಆಗುತ್ತಿತ್ತು. ಅಲ್ಲೇ ದೀರ್ಘ ಕಾಲದ ವಾಸ ಅವರ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆಂಗ್ಲ ಹೆತ್ತವರು ಭಾವಿಸುತ್ತಿದ್ದರು. ಆಯಾಗಳ ಒಡನಾಟದಲ್ಲಿ ಮಕ್ಕಳು ಭಾರತದಲ್ಲೇ ತುಂಬಾ ದಿವಸ ಇರುವುದು ಒಳ್ಳೆಯ ಪರಿಣಾಮ ಬೀರಲಿಕ್ಕಿಲ್ಲ ಎಂದೂ ಅವರಿಗೆ ಅನಿಸುತ್ತಿತ್ತು. ಹಾಗಾಗಿ ಮಕ್ಕಳಿಗೆ ಏಳು ವರ್ಷ ಆಗುವಾಗ ಬ್ರಿಟನ್ನಿನ ವಸತಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ರಿವಾಜು ಶುರು ಆಯಿತು. ಭಾರತದಲ್ಲೇ ಹುಟ್ಟಿದ್ದ ಆಂಗ್ಲ ಮಕ್ಕಳು ಬ್ರಿಟನನ್ನು ನೋಡಿಯೇ ಇರದವು ಅಥವಾ ಕೆಲವೇ ಕೆಲವು ಸಲ ಹೋಗಿ ಬಂದವು. ಬ್ರಿಟನ್ ಗೆ ಮರಳಿದ ಕೆಲವು ವರ್ಷಗಳ ನಂತರ ಆ ಮಕ್ಕಳು ಆಯಾಗಳನ್ನು ತಾವೆಷ್ಟು ನೆನಪಿಸುತ್ತೇವೆ ಎಂದು ಡೈರಿಯಲ್ಲಿ ಪತ್ರದಲ್ಲಿ ಬರೆದದ್ದಿದೆ. ಮಕ್ಕಳ ಮತ್ತು ಆಯಾಗಳ ನಂಟೇನೋ ಆಪ್ತವಾಗಿತ್ತು, ಆದರೆ ಬ್ರಿಟನ್ ತಲುಪಿದ ಮೇಲೆ ಬಹಳ ಮಕ್ಕಳು ಆಯಾಗಳನ್ನು ಮತ್ತೆ ನೋಡುವ ಸಾಧ್ಯತೆಯೇ ಇರುತ್ತಿರಲಿಲ್ಲ.

ಹತ್ತೊಂಭತ್ತನೆಯ ಶತಮಾನದಲ್ಲಿ ಹಡಗು ಸಾಗಾಟದಲ್ಲಿ ಬದಲಾವಣೆಗಳು ಆದವು. ನಾಲ್ಕರಿಂದ ಆರು ತಿಂಗಳುಗಳ ನಿಧಾನ ಪ್ರಯಾಣದಲ್ಲಿ ಭಾರತದಿಂದ ಬ್ರಿಟನ್ ಮುಟ್ಟುತ್ತಿದ್ದ ಹಡಗುಗಳು ಸೂಯೆಜ್ ಕಾಲುವೆಯ ಮೂಲಕದ ಕಡಿಮೆ ದೂರದ ಮಾರ್ಗವನ್ನು (1869ರಿಂದ) ಬಳಸಿ, ಹೊಸ ತಂತ್ರಜ್ಞಾನದ ಹಡಗುಗಳಲ್ಲಿ ಮೂರು ವಾರಗಳಲ್ಲಿ ತಲುಪಲಾರಂಭಿಸಿದವು. ಜಲಯಾನದ ಅವಧಿಯಲ್ಲಿ ಆದ ಬದಲಾವಣೆ ಭಾರತದಲ್ಲಿದ್ದ ಬ್ರಿಟಿಷ್ ಕುಟುಂಬಗಳಿಗೆ ಬ್ರಿಟನ್ನಿಗೆ ಮತ್ತೆ ಮತ್ತೆ ಹೋಗಿಬರಲು ಪ್ರೇರೇಪಿಸಿತು. ಬ್ರಿಟಿಷ್ ಕುಟುಂಬಗಳು ಇಂಗ್ಲೆಂಡ್‌ನಲ್ಲಿರುವ ಬಂಧುಗಳನ್ನು ಭೇಟಿಯಾಗಲು ಅಥವಾ ಮಕ್ಕಳನ್ನು ಬೋರ್ಡಿಂಗ್ ಶಾಲೆಗೆ ಸೇರಿಸಲು ಪ್ರಯಾಣ ಮಾಡಲಾರಂಭಿಸಿದರು. ಕೆಲವು ಕುಟುಂಬಗಳು ಈ ಪ್ರಯಾಣದಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಯಾಗಳನ್ನೂ ಕರೆದುಕೊಂಡು ಹೋಗುತ್ತಿದ್ದರು. ಇನ್ನು ಕೆಲವರು ವಿಶೇಷ ಪರಿಣತಿ ಇರುವ ಆಯಾಗಳನ್ನು ಬಾಡಿಗೆಗೆ ಪಡೆದು ಬರೇ ಹಡಗು ಪ್ರಯಾಣದಲ್ಲಿ ಮಕ್ಕಳನ್ನು ಆರೈಕೆ ಮಾಡಲೆಂದೇ ಕರೆದೊಯ್ಯುತ್ತಿದ್ದರು. ದೀರ್ಘ ಜಲಯಾನದಲ್ಲಿ ಜೊತೆಗಿರಬೇಕಿದ್ದ ಆಯಾಗಳು ಹಡಗು ಪ್ರಯಾಣ ಒಗ್ಗುವಂತಹವರಾಗಿರಬೇಕಿತ್ತು, ನಂಬಿಗಸ್ಥರು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವವರು ಆಗಬೇಕಿತ್ತು. ಅಂತಹವರಿಗೆ ಭಾರತದಲ್ಲಿ ಮನೆಗೆಲಸದಲ್ಲಿರುವ ಆಯಾಗಳಿಗಿಂತ ಹೆಚ್ಚಿನ ಸಂಭಾವನೆ ನೀಡಿ, ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಲು ಹಣ ನೀಡಿ ಕರೆದೊಯ್ಯುತ್ತಿದ್ದರು.

ಭಾರತದಿಂದ ಇಂಗ್ಲೆಂಡ್ ಗೆ ಹೊರಟ ಹಡಗುಗಳಲ್ಲಿ ಅಡುಗೆ ಮತ್ತಿತರ ಸೇವೆಯಲ್ಲಿರುತ್ತಿದ್ದ ಆಂಗ್ಲ ಸೇವಕಿಯರಿಗೆ ತಮ್ಮದೇ ಕೊಠಡಿಗಳಲ್ಲಿ ಉಳಿಯುವ ಅವಕಾಶ ನೀಡುತ್ತಿದ್ದರು. ಆಯಾಗಳು ಮಾತ್ರ ಯಜಮಾನರ ಕೋಣೆಗಳ ಹೊರಗಿನ ಕಾಲುದಾರಿಯಲ್ಲಿ ಅಥವಾ ಹಡಗಿನ ಡೆಕ್ ನ ಮೇಲೆ ಹಾಸಿಗೆ ಬಿಡಿಸಿಕೊಂಡು ಮಲಗಬೇಕಿತ್ತು.

ಅವರೆಲ್ಲ ಮಕ್ಕಳ ಆರೈಕೆಯನ್ನು ಸುಲಭವಾಗಿ ಬಲ್ಲವರಾಗಿದ್ದರು. ಅವರಿಗೆ ಬ್ರಿಟಿಷ್ ತಂದೆ ತಾಯಿಯರು ತಮ್ಮ ಮಕ್ಕಳನ್ನು ಹಿತವಾಗಿ ಮೃದುವಾಗಿ ನೋಡಿಕೊಳ್ಳುವಂತೆ ಆಗ್ರಹಿಸುತ್ತಿದ್ದರು. ಆದರೆ ಆಯಾಗಳ ಬಗ್ಗೆ ಆಂಗ್ಲ ದಂಪತಿಗಳ ವರ್ತನೆ ನಿಷ್ಠುರವೂ ಕಠೋರವೂ ಆಗಿರುತ್ತಿತ್ತು. ಇಂಗ್ಲಿಷ್ ಮಕ್ಕಳು ಬಹಳ ಸಮಯವನ್ನು ಆಯಾಗಳ ಜೊತೆಗೆ ಕಳೆಯುತ್ತಿದ್ದರು.

ಒಮ್ಮೆ ಬ್ರಿಟನ್ ತಲುಪಿದ ಮೇಲೆ ಕೆಲವು ಆಯಾಗಳು ಯಜಮಾನರ ಬಂಧುಗಳ ಮನೆಯನ್ನು ಭೇಟಿ ಮಾಡುವಾಗ ಜೊತೆಗೆ ಹೋಗುವ ಸಾಧ್ಯತೆ ಇತ್ತು. ಮತ್ತೆ ಕೆಲವರನ್ನು ವಾಪಸು ಕಳುಹಿಸಲಾಗುತ್ತಿತ್ತು. ಅಂತಹ ಆಯಾಗಳು, ತಮ್ಮ ಅಗತ್ಯ ಇರುವ, ಭಾರತಕ್ಕೆ ಮರಳುವ ಬ್ರಿಟಿಷ್ ಕುಟುಂಬಗಳಿಗೋಸ್ಕರ ಕಾಯಬೇಕಿತ್ತು. ಇಂತಹ ಆಯಾಗಳಲ್ಲಿ ಕೆಲವರು ಬ್ರಿಟನ್ನಿಗೆ ಹಲವು ಭೇಟಿ ಮಾಡಿದವರೂ ಇದ್ದರು. ಹೆಚ್ಚಾಗಿ ವಾಪಸು ಹೋಗುವ ಟಿಕೇಟು ನೀಡಲಾಗುತ್ತಿತ್ತು. ಆದರೆ ಎಲ್ಲರಿಗೂ ಅಲ್ಲ. ಬಹಳ ಆಯಾಗಳನ್ನು ಅವರನ್ನು ಬ್ರಿಟನ್ನಿಗೆ ಕರೆತಂದ ಕುಟುಂಬದವರು ಬಿಟ್ಟುಬಿಡುತ್ತಿದ್ದರು. ಯಾವ ಹಣ ಆಶ್ರಯ ನೀಡದೆ ಮನೆಯಿಂದ ಹೊರಹಾಕುತ್ತಿದ್ದರು. ಲಂಡನ್‌ನ ರೈಲು ನಿಲ್ದಾಣದಲ್ಲೋ ಬಸ್ಸು ತಂಗುದಾಣದಲ್ಲೋ ಆಯಾಗಳನ್ನು ಅವರ ಪಾಡಿಗೆ ಬಿಟ್ಟು ಹೋದ ಘಟನೆಗಳೂ ಇದ್ದವು. ತಮ್ಮಷ್ಟಕ್ಕೆ ಭಾರತಕ್ಕೆ ವಾಪಾಸು ಮರಳಲು ಆಗದ ಆಯಾಗಳು ಇನ್ಯಾವುದೋ ಕುಟುಂಬ ಎಂದು ಭಾರತಕ್ಕೆ ಹೋಗುವುದೆಂದು ಕಾಯುತ್ತಿದ್ದರು. ಯಾರೂ ಜೊತೆಗೆ ಸಿಗದೇ ಹಲವರು ಇಂಗ್ಲೆಂಡ್‌ನಲ್ಲೇ ಉಳಿದುಬಿಡುತ್ತಿದ್ದರು. ತಮ್ಮನ್ನು ತಾವೇ ನೋಡಿಕೊಳ್ಳವ ತುರ್ತಿನಲ್ಲಿ ಬೀಳುತ್ತಿದ್ದರು.

ಬ್ರಿಟನ್ನಿನ ವಿಶ್ವವಿದ್ಯಾಲಯವೊಂದರ ಸಂಶೋಧನೆಯ ಪ್ರಕಾರ ಹೀಗೆ ವಾಪಾಸು ಹೋಗಲಾಗದೇ ಉಳಿಯುತ್ತಿದ್ದ ಆಯಾಗಳಿಗಂತಲೇ 1825ರಲ್ಲಿ ಮನೆಯೊಂದು ಲಂಡನ್‌ನಲ್ಲಿ ಅಸ್ತಿತ್ವಕ್ಕೆ ಬಂತು. ಅಲ್ಡ್ ಗೇಟ್ ಪ್ರಾಂತ್ಯದಲ್ಲಿ ಎಲಿಜಿಬೆತ್ ರೋಗರ್ಸ್ ಎನ್ನುವಾಕೆ ಮುತುವರ್ಜಿಯಲ್ಲಿ ವ್ಯವಸ್ಥೆಯಾದ “ಆಯಾಗಳ ಮನೆ” ಅವಳ ಮರಣಾನಂತರ ಏಷ್ಯಾದಿಂದ ಬರುವ ಪರಿಚಾರಕಿಯರ ತಂಗುದಾಣ ಠಾವು ಆಯಿತು. ನೌಕರಿ ನೀಡುವ ಕೇಂದ್ರದಂತೆಯೂ ಕೆಲಸ ಮಾಡಿತು. ಕೆಲವು ಆಂಗ್ಲ ಕುಟುಂಬಗಳು ಈ ಮನೆಗೆ ಬಂದು ತಮಗೆ ಬೇಕಾದ ಸೇವಕಿಯನ್ನು ಆಯ್ದುಕೊಂಡು ಹೋಗುತ್ತಿದ್ದರು.

೧೯ನೆಯ ಶತಮಾನದ ಎರಡನೆಯ ಭಾಗದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಬಲವಾದಾಗ, ಇಂಗ್ಲೆಂಡ್ ಹಾಗು ಭಾರತದ ನಡುವಿನ ಪ್ರಯಾಣ ಹೆಚ್ಚು ನಿರಂತರ ಆಗಿ, ಬ್ರಿಟನ್ನಿಗೆ ಬರುವ ಆಯಾಗಳ ಸಂಖ್ಯೆಯೂ ಹೆಚ್ಚಿತು. ಪ್ರತಿ ವರ್ಷವೂ ಸುಮಾರು 200 ಆಯಾಗಳು “ಆಯಾಗಳ ಮನೆ”ಯಲ್ಲಿ ಬಂದು ವಾಸ ಮಾಡುತ್ತಿದ್ದರು. ಕೆಲವರು ಸ್ವಲ್ಪ ದಿನಗಳ ಮಟ್ಟಿಗೆ, ಇನ್ನು ಕೆಲವರು ತಿಂಗಳುಗಳ ಕಾಲ. ಅಲ್ಲಿ ವಾಸಿಸುವ ಆಯಾಗಳು ಮನೆಬಾಡಿಗೆ ಕೊಡಬೇಕಾಗಿರಲಿಲ್ಲ. ಆ ವಸತಿಯ ಹತ್ತಿರದ ದಯಾಧರ್ಮ ಸಂಸ್ಥೆಗಳಿಂದ ಹಣ ಬರುತ್ತಿತ್ತು. ಸ್ಥಳೀಯ ಚರ್ಚ್ ಗಳು ದೇಣಿಗೆ ನೀಡುತ್ತಿದ್ದವು. ಮರಳಿ ಹೋಗುವ ಟಿಕೇಟು ಆಯಾಗಳ ಬಳಿ ಇದ್ದರೂ ವಾಪಸು ಹೋಗುವ ಪ್ರಯಾಣಕ್ಕೆ ಸಾಕಾಗುವಷ್ಟು ಹಣ ಅವರಲ್ಲಿ ಇರುತ್ತಿರಲಿಲ್ಲ. ಮತ್ತೆ ಅವರ ಜೊತೆಗೆ ಭಾರತದ ತನಕ ಬರುವವರ ಆಂಗ್ಲರು ಎಲ್ಲ ಸಲ ಸಿಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರ ಟಿಕೇಟುಗಳನ್ನು ಇವರ ಸೇವೆ ಬೇಕಾದ ಇನ್ನೊಂದು ಸಂಸಾರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ಮೂಲಕವೂ ಸಹಾಯಧನ ಬರುತ್ತಿತ್ತು.

ಆಯಾಗಳ ಮನೆ ಬರೇ ವಸತಿ, ಆಶ್ರಯ ಆಗಿರಲಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿಸುವ ತಾಣವೂ ಆಗಿತ್ತು ಎಂದು ಕೆಲವು ಇತಿಹಾಸಕಾರರು ಬರೆದದ್ದಿದೆ. ಎಷ್ಟು ಆಯಾಗಳು ಇಲ್ಲಿ ಮತಾಂತರಗೊಂಡರು ಎನ್ನುವುದಕ್ಕೆ ದಾಖಲೆ ಇಲ್ಲ, ಮತ್ತೆ ಇವರನ್ನು ಬಲವಂತವಾಗಿ ಮತಾಂತರ ಮಾಡಲಾಯಿತೇ ಅಥವಾ ಸ್ವಇಚ್ಛೆಯಿಂದ ಎನ್ನುವ ಬಗ್ಗೆಯೂ ಮಾಹಿತಿ ಇಲ್ಲ. ೧೯೦೦ರಲ್ಲಿ ಆಯಾಗಳ ಅಲ್ಡ್ ಗೇಟ್ ಪ್ರಾಂತ್ಯದ ಮನೆಯನ್ನು ಲಂಡನ್ ನಗರ ಮಂಡಳಿ ತನ್ನ ಅಧಿಕಾರಕ್ಕೆ ತೆಗೆದುಕೊಂಡಿತು. ಇದು ಒಂದು ಕ್ರೈಸ್ತ ಸಂಘ ಆಗಿತ್ತು. ಅವರು ಅದೇ ವರ್ಷ ಆಯಾಗಳ ವಾಸ್ತವ್ಯವನ್ನು ಕಿಂಗ್ ಎಡ್ವರ್ಡ್ ರಸ್ತೆಯ 26ನೆಯ ಸಂಖ್ಯೆಯ ಮನೆಗೆ ವರ್ಗಾಯಿಸಿದರು. ಈ ಹನ್ನೆರಡು ಕೋಣೆಗಳ ವಸತಿಯಲ್ಲಿ 1900 ಮತ್ತು 1921ರ ನಡುವೆ ವರ್ಷಕ್ಕೆ ನೂರು ಪರಿಚಾರಕಿಯರು ಬಂದಿರುತ್ತಿದ್ದರಂತೆ. 1921ರಲ್ಲಿ ಆಯಾಗಳ ಮನೆ ಅದೇ ರಸ್ತೆಯ 4ನೆಯ ನಂಬ್ರದ ವಸತಿಗೆ ಬದಲಾಯಿತು. ಇಪ್ಪತ್ತನೆಯ ಶತಮಾನದ ಮಧ್ಯ, ಭಾರತದಲ್ಲಿ ಬ್ರಿಟಿಷ್ ಆಡಳಿತ ಕೊನೆಗೊಂಡಾಗ ಆಯಾಗಳ ಅಗತ್ಯವೂ ಕಡಿಮೆ ಆಯಿತು. ನಾಲ್ಕು ನಂಬ್ರದ ಮನೆಯನ್ನು ಖಾಸಗಿ ವಾಸ್ತವ್ಯವಾಗಿ ಬದಲಾಯಿಸಲಾಯಿತು.

(ಆಯಾಸ್‌ ಹೋಮ್‌ ಮುಂದೆ ಮಿಸ್ ಮಮುಜಿ)

ಅಂದಿನಿಂದ ತೀರ ಇತ್ತೀಚಿನ 2018ರ ತನಕವೂ ಏಷ್ಯಾದ ಆಯಾಗಳ ಲಂಡನ್ ಹಡಗು ಪ್ರಯಾಣ, ವಾಪಸಾಗುವ ಸಂಕಷ್ಟಗಳು, ಲಂಡನ್ ಅಲ್ಲಿಯೇ ದಿನಕಳೆಯುವಾಗಿನ ಸಂಕಟಗಳು ಎಲ್ಲವೂ ಅಜ್ಞಾತವಾಗಿಯೇ ಇದ್ದವು. 2018ರಲ್ಲಿ ಬಿಬಿಸಿ ವಾಹಿನಿಯಲ್ಲಿ ಪ್ರಸಾರವಾದ “ಪ್ಯಾಸೇಜ್‌ ಟು ಇಂಡಿಯಾ” ಎನ್ನುವ ಸಾಕ್ಷ್ಯಚಿತ್ರ, ಲಂಡನ್‌ನಲ್ಲಿದ್ದ ಆಯಾಗಳ ಮನೆಯ ಬಗ್ಗೆ ಸಂಕ್ಷಿಪ್ತ ಉಲ್ಲೇಖ ಮಾಡಿತು. ಲಂಡನ್ ವಾಸಿ “ಮಿಸ್ ಮಮುಜಿ” ಎಂಬಾಕೆಗೆ ತಾನು ವಾಸಿಸುತ್ತಿರುವ ಮನೆಯ ಹತ್ತಿರವೇ ಇದ್ದ ಆಯಾಗಳ ಮನೆಯ ಬಗ್ಗೆ ಕುತೂಹಲ ಹುಟ್ಟಿತು. ಪೂರ್ವ ಲಂಡನ್‌ನಲ್ಲಿ ವಾಸಿಸುತ್ತಿರುವ ದಕ್ಷಿಣ ಏಷ್ಯಾ ಮೂಲದವಳಾದ ಮಮುಜಿಗೆ ಏಷ್ಯಾದ ಅನಾಮಿಕ ಮಹಿಳೆಯರ ಮಹತ್ವಪೂರ್ಣ ಸೇವೆ ಮತ್ತು ಅವರ ಲಂಡನ್ ವಾಸ್ತವ್ಯದ ಬಗ್ಗೆ ಈಗಿನ ಜನರಿಗೆ ತಿಳಿಸುವ ಯಾವ ಮಾಹಿತಿಯೂ ದೊರಕದಿರುವುದು ಸ್ಮರಣೆಯೂ ಇಲ್ಲದಿರುವುದು ಐತಿಹಾಸಿಕ ಅನ್ಯಾಯ ಅನಿಸಿತು. ಲಂಡನ್ ಗೆ ಬಂದಿದ್ದ ಆಯಾಗಳ ಹೆಸರು ಗುರುತುಗಳನ್ನು ಪತ್ತೆ ಹಚ್ಚಲು, 1878ರಿಂದ -1960ರ ತನಕ ಭಾರತ ಹಾಗು ಇಂಗ್ಲೆಂಡ್ ಮಧ್ಯ ಪ್ರಯಾಣಿಸಿದ ಎಲ್ಲರ ಮಾಹಿತಿಯನ್ನು ಶೋಧಿಸಲಾಯಿತು. ಲಭ್ಯ ಇರುವ ಯಾವುದೇ ಮಾಹಿತಿಗಳು ಪೂರ್ತಿ ಚಿತ್ರಣವನ್ನು ನೀಡದೇ ಅಲ್ಪಸ್ವಲ್ಪ ವಿಚಾರಗಳಷ್ಟೇ ತಿಳಿಸಿದವು. ಪ್ರಯಾಣದ ಯಾವುದೇ ದಾಖಲೆಗಳಲ್ಲೂ ಆಯಾಗಳ ಹೆಸರು ಉಲ್ಲೇಖ ಆಗುತ್ತಿರಲಿಲ್ಲ. ಭಾರತೀಯ ನುಡಿಯಲ್ಲಿ “ಆಯಾ” ಎಂತಲೂ, ಚೈನಾದವರ ಭಾಷೆಯಲ್ಲಿ “ಆಮಹ್ ” ಎಂದಷ್ಟೇ ದಾಖಲೆಗಳಲ್ಲಿ ನಮೂದಾಗಿದ್ದವು. ಬಹಳ ಸಲ ಅವರಿಗೊಂದು ಕ್ರೈಸ್ತ ಹೆಸರಿಟ್ಟು ಅವರ ನಿಜವಾದ ನಾಮಧೇಯ ಪೂರ್ತಿ ಮರೆಯಾಗಿರುತ್ತಿದ್ದವು.

ಆಯಾಗಳಿಗೆ ಗೌರವದ ಸ್ಮರಣೆ ಒದಗಿಸುವ ಉದ್ದೇಶದಿಂದ ಮಮುಜಿ ಆಯಾಗಳ ಲಂಡನ್ ಮನೆಯ ಕುರಿತಾಗಿಯೇ ಮಾಹಿತಿ ಕಲೆಹಾಕುವ, ಅವರ ಕುರಿತು ಪ್ರಚಾರ ಮಾಡುವ ಸಂಘಟನೆ ಸ್ಥಾಪಿಸಿದಳು. ಆಯಾಗಳು ಅಂದು ವಾಸಿಸಿದ್ದ ಮನೆಯ ಗೋಡೆಯಲ್ಲಿ ಸ್ಮರಣೆಯ ನೀಲಿ ಫಲಕವನ್ನು ನೆಡಲು ಆಗ್ರಹಿಸುವ ಅಭಿಯಾನ ಕೈಗೊಂಡಳು. ಕೋರಿಕೆಯನ್ನು ಮನ್ನಿಸಿ 2021ರ ಆರಂಭದಲ್ಲಿ ಅಲ್ಲಿ ಇಂಗ್ಲೆಂಡ್ ನ ಹೆರಿಟೇಜ್ ಸಂಸ್ಥೆ ನೆನಪಿನ ನೀಲಿ ಫಲಕವನ್ನು ನೆಡುವ ಅನುಮತಿ ನೀಡಿತು, ಮತ್ತೆ ಈ ವರ್ಷದ ಜೂನ್ ತಿಂಗಳಲ್ಲಿ ಆಯಾಗಳು ಇದ್ದ ಕಿಂಗ್ ಎಡ್ವರ್ಡ್ ರಸ್ತೆಯ 26ನೆಯ ನಂಬ್ರದ ಮನೆಯ ಗೋಡೆಯ ಮೇಲೆ ನೆನಪಿನ ಫಲಕವನ್ನು ನೆಟ್ಟಿತು. “1900-21ರ ನಡುವೆ ಏಷ್ಯಾ ಮೂಲದ ಆಯಾಗಳು ಪರಿಚಾರಕಿಯರು ಈ ಮನೆಯಲ್ಲಿದ್ದರು” ಎಂದು ನೀಲಿ ಫಲಕ ಕಿಂಗ್ ಎಡ್ವರ್ಡ್ ರಸ್ತೆಯ ೨೬ನೆಯ ನಂಬ್ರದ ಮನೆಯನ್ನು ಹಾದುಹೋದವರಿಗೆ ತಿಳಿಸುತ್ತದೆ. ಅಂತರ್ಜಾಲ ತಾಣಗಳಲ್ಲಿಯೂ ಈ ಕುರಿತು ಮಾಹಿತಿ ಸಿಗುತ್ತದೆ.

ಒಂದು ದೇಶಕಾಲದ ಕೌಟುಂಬಿಕ ವ್ಯವಸ್ಥೆಯ ಪ್ರಧಾನ ಪಾತ್ರಧಾರಿಯಾಗಿದ್ದು ಶತಮಾನಕ್ಕಿಂತ ಹೆಚ್ಚು ಕಾಲ ನಿರ್ಲಕ್ಷ್ಯ, ಮರೆವುಗಳ ಹೊಡೆತದಲ್ಲಿ, ಕನಿಷ್ಠಪಕ್ಷ ಇಂತಹ ಹೆಸರಿನವರು ಎನ್ನುವ ಮೂಲಭೂತ ಗುರುತೂ ಇಲ್ಲದೇ ಕಳೆದ ಅನಾಮಿಕ ಪರಿಚಾರಕಿಯರ ಸಮುದಾಯಕ್ಕೆ ಗೌರವದ ಸ್ಮರಣೆ ನೀಡುವ ಕಿರು ಪ್ರಯತ್ನವನ್ನು ನೀಲಿ ಫಲಕ ಮತ್ತು ಅದನ್ನು ಸ್ಥಾಪಿಸಲು ನಡೆದ ಅಭಿಯಾನ ಮಾಡಿದವು. ಕರಾಳ ಇತಿಹಾಸವನ್ನು ಹಳೆಯ ವಿಷಾದವನ್ನು ಮುಂದೆಂದೋ ಸಂಭ್ರಮದಲ್ಲಿ ಮೆಲುಕುಹಾಕುವ ಬ್ರಿಟನ್ನಿನ ಸಂಪ್ರದಾಯದ ತೆಕ್ಕೆಯಲ್ಲಿ ಇದೀಗ ಆಯಾಗಳ ಮನೆಯೂ ಸಂಸ್ಮರಣೆಯಾಗಿ ಬಂಧಿಯಾಗಿದೆ. ಆಯಾಗಳ ಲಂಡನ್ ವಸತಿಯ ಗೋಡೆಯ ಮೇಲೆ ಹೊಳೆಯುತ್ತಿರುವ ಹೊಚ್ಚಹೊಸ ನೀಲಿ ಫಲಕ ಶತಮಾನದ ಹಿಂದೆ ಸಿಗಬೇಕಾಗಿದ್ದ ಗೌರವವನ್ನು ವೇತನವನ್ನು ಗುರುತನ್ನು ಮರಳಿಸುವ ಸಾಧ್ಯತೆ ಇಲ್ಲದಿದ್ದರೂ ಅಂದಿನ ಮಾತ್ರವಲ್ಲದೇ ಇಂದಿನ ಸಮಸ್ತ ಅಜ್ಞಾತ ದಾದಿ, ನಾನಿ ಆಯಾಗಳ ಪ್ರತಿನಿಧಿಯಾಗಿದೆ, ಮೂಕ ಮೌನ ಸಂದೇಶವನ್ನು ಬಿತ್ತರಿಸುತ್ತಿದೆ.