ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೋ ಹೇಳಿದರು. ಸರಿರಾತ್ರಿಯವರೆಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ತೊಡುವುದು. ನಾನು ಹೇಗೂ ಭಕ್ತೆ ಅಲ್ಲವಲ್ಲ, ಹಾಗಾಗಿ ಹಸಿರಾದರೂ ಏನಂತೆ ಎಂದುಕೊಂಡು ಇದ್ದ ಒಂದು ಹಸಿರು ಬಣ್ಣದ ಚೂಡಿದಾರ್ ಹಾಕಿಕೊಂಡು ಹೊರಟೆ. ಕೈಯಲ್ಲಿ ಕ್ಯಾಮೆರ ಹಿಡಿದ್ದಿದ್ದರೆ ಊರೆಲ್ಲಾ ಕ್ಷುದ್ರಗ್ರಹ ಜೀವಿಗಳನ್ನು ನೋಡುವಂತೆ ನೋಡುತ್ತಾರೆ ಮತ್ತು ಪ್ರಯೋಜನವೂ ಇಲ್ಲ. ಎಲ್ಲೂ ಫೋಟೋ ಕ್ಲಿಕ್ಕಿಸುವ ಹಾಗಿಲ್ಲ.  “ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

ಇವತ್ತು ಹೇಳಬೇಕಿದೆ ಹಳೇ ಕಥೆಯೊಂದನ್ನು. ಹುಡುಗಾಟದ ಹುಡುಗಿಯ ದಿನಗಳಲ್ಲಿ ಪುಟ್ಟಬರ್ತಿ ಸಾಯಿಬಾಬ ಹೇರ್‌  ಸ್ಟೈಲ್‌ಗಾಗಿ ಎಲ್ಲರ ಬಾಯಲ್ಲೂ ಇದ್ದರು. ಶಿರಡಿಯ ಸಾಯಿಬಾಬಾ ಭಕ್ತರಿಗೆ ಇವರು ವರ್ಜ್ಯ ಎನ್ನುತ್ತಿದ್ದರು. ಲಾಜಿಕ್‌ನ ಹಾದಿ ಹಿಡಿದು ಹೊರಟ ಹರೆಯಕ್ಕೆ ಸಾಯಿಬಾಬಗಳು ದೂರವೇ ಇದ್ದರು. ದೇವರು ನಿರಾಕಾರ ಎನ್ನುವುದು ಅರಿವಾಗುವವರೆಗೂ ಒಂದು ನಿರ್ದಿಷ್ಟ ಆಕಾರದಲ್ಲೆ ಪ್ರತಿಷ್ಠಾಪನೆಗೊಂಡಿದ್ದ, ಫೋಟೋಗಳ, ದೇವರಮನೆಯ, ದೇವಸ್ಥಾನದ ಮೂರ್ತಿಗಳ ನಕಲಾಗಿ! ಅವನು ಮನುಷ್ಯನಲ್ಲ. ಹಾಗಾಗಿ ಸಾಯಿಬಾಬಾರಂಥವರನ್ನು ದೇವರು ಅನ್ನುವುದು ಅಪರಾಧ ಎನ್ನುವ ವಾತಾವರಣದಲ್ಲೇ ಬೆಳೆದಿದ್ದು ಆಯಿತು.

ಒಂದೊಮ್ಮೆ ಪುಟ್ಟಬರ್ತಿ ಸಾಯಿಬಾಬ ಅವರು ಬಾಯಿಂದ ಲಿಂಗ ಉಗುಳುತ್ತಿದ್ದದ್ದನ್ನು ಟಿವಿಯಲ್ಲಿ ಕಂಡು ವಾಕರಿಸಿಕೊಂಡಿದ್ದೆ. ಹುಟ್ಟಿದ ಹಬ್ಬದ ದಿನ ಅವರು ನಡೆದಾಡಿದ ಕೇಕ್ ತಿನ್ನುವ ಭಕ್ತರನ್ನು ಕಂಡು ಅಸಹ್ಯಿಸಿಕೊಂಡಿದ್ದೆ. ಸತ್ಯ ಹೇಳಬೇಕೆಂದರೆ ಅವರು ನನಗೆ ಎಂದೂ ಅಪಹಾಸ್ಯದ ವಸ್ತುವಾಗೇ ಕಂಡಿದ್ದರು. ಸಾಯಿಬಾಬ ಎಂದರೆ ದಿನಪತ್ರಿಕೆ, ಮ್ಯಾಗ್ಜೀನ್, ಟಿವಿ, ಚರ್ಚೆ, ಗಾಳಿಮಾತು, ಗುಟ್ಟಿನ ಭಯ ಇಷ್ಟೆ ಆಗಿದ್ದ ದಿನಗಳವು. ಅವರ ಖಾಸಗೀ ಕೋಣೆಯನ್ನು ವಿದ್ಯಾರ್ಥಿಯೊಬ್ಬ ಪ್ರವೇಶಿಸಲು ಹೋಗಿ ನಂತರ ಏನೇನೋ ಆಗಿದ್ದನ್ನು ಪತ್ರಿಕೆಗಳು ಪ್ರಕಟಿಸುತ್ತಿದ್ದವು.

ಪ್ರವಾಸದ ಗೆಜ್ಜೆ ತೊಟ್ಟವರಿಗೆ ಜಾಗಗಳಲ್ಲಿ ಮಾತ್ರ ಬೇಧಭಾವ ಇರುವುದಿಲ್ಲ. ಟೈಂ ಪಾಸ್‌ಗಾಗಿ ಪುಟ್ಟಬರ್ತಿಗೆ ಹೋದೆ. ಬೆಂಗಳೂರಿನಿಂದ ದೇವನೂರಿನ ಮಾರ್ಗವಾಗಿ, ಹೈದರಾಬಾದಿನ ರಾಷ್ಟ್ರೀಯ ರಸ್ತೆಯಲ್ಲಿ ಹೋಗುವಾಗ ಒಂದೆಡೆ ಬಲಗಡೆಗೆ ಒಂದು ಕಮಾನು ಸಿಗುತ್ತೆ ಅದರೊಳಗಿನ ದಾರಿ ಸವೆಸಿದರೆ ಎದುರಾಗುತ್ತೆ ಪ್ರಶಾಂತಿ ಧಾಮ. ಅ ಕಮಾನಿನವರೆಗೂ ಆಂಧ್ರದ ಬಿಸಿಲು, ಬಿರುಸು, ಧಗೆ ಮತ್ತು ಕಂದು. ನೀರು ಎನ್ನುವ ಪದವೇ ನಿಘಂಟಿನಲ್ಲಿ ಇಲ್ಲವೇನೋ ಅನ್ನುವಷ್ಟು ಅನುಮಾನ. ಒಮ್ಮೆ ಬಲಕ್ಕೆ ತಿರುಗಿದರೆ ಏಕ್‌ದಂ ಎದುರಾಗುತ್ತೆ ಹಸಿರು, ಹಸಿರು ಎಲ್ಲೆಲ್ಲೂ ಹಸಿರು ಅಲ್ಲಿಂದಲೇ ಶುರು ಬಾಬಾ ಜಾದು.

ಆ ದಿನ ಊಟ ವಿಶ್ರಾಂತಿಗಳು ಮುಗಿದು ಆಶ್ರಮ ಭೇಟಿಯ ಸಮಯ. ತಂಗಿದ್ದ ಹೋಟೆಲ್‌ನ ಮಾಲೀಕನೊಡನೆ ಮಾತಿಗಿಳಿದೆ. ಬಾಬಾರ ಮೇಲಿದ್ದ ಭಕ್ತಿಯಿಂದ ಪವಾಡದವರೆಗೂ ಮಾತು ಹರಿಯಿತು. ಅವರ ಮೇಲಿದ್ದ ಅಪವಾದಗಳ ಬಗ್ಗೆ ಏನೇನೋ ಕೇಳಿದೆ ಆತ ಮತ್ತೂ ಏನೇನೋ ಹೇಳಿದರು. ಮಾತು ಮುಗಿಯಿತು. ಕೊನೆಯಲ್ಲಿ ಅವರು ಹೇಳಿದರು “ಮೇಡಂ, ನನ್ನ ಜೊತೆ ಮಾತನಾಡಿದ ಹಾಗೆ ಇಲ್ಲಿ ಯಾರ ಬಳಿಯೂ ಮಾತಾಡ್ಬೇಡಿ. ಪ್ಲೀಸ್” ಇದೊಂದೇ ಮಾತು ನನಗೆ ಬಾಬರ ಮೇಲಿದ್ದ ಅನುಮಾನ, ಕುತೂಹಲ, ಅಸಡ್ಡೆ, ಆಸಕ್ತಿ ಎಲ್ಲವನ್ನೂ ಹೆಚ್ಚಿಸಿಬಿಡ್ತು!

ಆಶ್ರಮಕ್ಕೆ ಕಾಲಿಡಲು ಏನೋ ಅವ್ಯಾಖ್ಯೆಯ ಭಾವ. ಚಪ್ಪಲಿಯನ್ನು ದೂರದ ಗೇಟಿನ ಬಳಿಯೇ ಬಿಟ್ಟು ಸಾಕಷ್ಟು ಹಾದಿ ಬರಿಗಾಲಿನಲ್ಲಿ ನಡೆಯ ಬೇಕು ಎಂದಾಗ ಮತ್ತಷ್ಟು ಕಿರಿಕಿರಿ. ಅನುಮಾನದಿಂದಲೇ ಸುತ್ತಾಟ ಆರಂಭವಾಯಿತು. ಮೊಟ್ಟಮೊದಲ ಬಾರಿಗೆ ಸ್ವಚ್ಛತೆ ಎನ್ನುವ ಪದ ಜೀವಂತವಾಗಿದ್ದು ಕಂಡಿತು. ನೆಲಮಾಳಿಗೆಯಲ್ಲಿ ಬಾಬಾರ ಬೆಡ್ ರೂಂ ಎಂದು ಓದಿದ್ದ ಸಾಲುಗಳು ಕಣ್ಣ ಮುಂದೆ ನೆನಪಾಗಿ ಉರುಳುತ್ತಿದ್ದವು. ಅವಕಾಶ ಸಿಕ್ಕರೆ ನುಗ್ಗಿಯೇ ಬಿಡು ಎನ್ನುತ್ತಿತ್ತು ಧಾರ್ಷ್ಟ್ಯ. ಆದರೆ ಗೋಪ್ಯತೆ, ಸೆಕ್ಯೂರಿಟಿ ಊಹಾತೀತ. ಅಲ್ಲಿನ ಕಾವಲುಗಾರರಿಗೆ, ರಂಗೋಲಿಯೇನು, ಪಾತಾಳ ಲೋಕದ ನಾಗರಾಜನ ಸುರುಳಿಯಡಿಯಲ್ಲೂ ಛಕ್ ಅಂತ ಬಗ್ಗಿ ನೋಡುವ ಚತುರತೆ. ನನ್ನ ಕುತೂಹಲ ತಣಿಯಲಿಲ್ಲ ಎನ್ನುವುದು ಈಗ ಜಗಜ್ಜಾಹೀರು.

ನಂತರ ಸರ್ವಧರ್ಮ ಸಮನ್ವಯ ಸಾರುವ ಮ್ಯೂಸಿಯಂ ನೋಡಲು ಹೊರಟೆ. ಓಹ್, ಅದೊಂದು ಅತ್ಯಾಧುನಿಕವಾದ ಅದ್ಭುತ ಜಗತ್ತು. ರಾಮಾಯಣ, ಮಹಾಭಾರತ, ಬೈಬಲ್, ಕುರಾನ್, ಸಿಕ್ಖ್, ಪಾರ್ಸಿ, ಜೂಯಿಷ್, ಬುದ್ಧ, ಜೈನ ಎಲ್ಲರೂ ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೂ ಒಂದಾಗಿರುವ ತಾಂತ್ರಿಕ ಲೋಕ. ಒಂದಷ್ಟೇ ದರದ ಟಿಕೇಟಿನಲ್ಲಿ ಆಡಿಯೋ ಗೈಡ್ ತೆಗೆದುಕೊಂಡು ಒಳಹೋದರೆ ಹತ್ತಾರು ಭಾಷೆಯಲ್ಲಿ ಯಾವ ಧರ್ಮದ ಬಗ್ಗೆ ಬೇಕಾದರೂ ಇತಿಹಾಸ, ಪುರಾಣ, ಜಾನಪದ ಎಲ್ಲವನ್ನೂ ಕೇಳಿಸಿಕೊಳ್ಳಬಹುದಾದ ಅನುಕೂಲತೆ. ದುಂಡನೆಯ ನೀಲಿ ದೀಪದ ಕೆಳಗೆ ನಿಂತುಕೊಂಡು ನಮಗೆ ಬೇಕಾದ ಭಾಷೆಯ, ದೇವರ, ಧರ್ಮದ ಫೋಟೊ ಅಥವಾ ಗುಂಡಿ ಒತ್ತಿದರೆ ಆ ಆಡಿಯೋ ಯಂತ್ರದಿಂದ ಹಿನ್ನಲೆ ಸಂಗೀತದೊಂದಿಗೆ ಮಾಹಿತಿ ಲಭ್ಯ. ಅಲ್ಲಲ್ಲಿ ಕುಳಿತುಕೊಂಡಿದ್ದ ಸ್ವಯಂಸೇವಕರು. ನನ್ನ ಗಮನವೆಲ್ಲಾ ಸ್ವಚ್ಛತೆಯ ಮೇಲೆ. ವಿದೇಶಿಯರೂ ದೇಶಿಯರೇ ಆಗಿರುವ ಏಕೈಕ ಗ್ರಹ ಪುಟ್ಟಬರ್ತಿ. ಅದನ್ನು ಜಗತ್ತು ಎನ್ನಬೇಕೋ ಲೋಕವೇ ಎನ್ನಬೇಕೋ, ಸ್ಥಳ, ಜಾಗ, ಊರು ಇತ್ಯಾದಿ ಇತ್ಯಾದಿ ಅನ್ನಬಹುದೋ ಗೊತ್ತಿಲ್ಲ ಅದುಪುಟ್ಟಬರ್ತಿ.

ಆಮೇಲೆ ಹೆಜ್ಜೆ ಹೋಗಿದ್ದು ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯ ಕಡೆಗೆ. ವಿನಾಕಾರಣ ಒಳಕ್ಕೆ ಪ್ರವೇಶ ಇಲ್ಲ ಎನ್ನುವ ತಾಕೀತು. ನನಗೋ ಹಠ, ಕಾವಲುಗಾರನ ಬಳಿ ಅತೀ ವಿನಯ ಹರಿಸಿದೆ. ಉಹೂಂ, ಬಗ್ಗಲ್ಲ ಜಗ್ಗಲ್ಲ. ವಾಪಸ್ಸು ಬಂದೆ. ದೂರ ನಿಂತೆ. ಬದಲಾಯಿತು ಪಾಳಿ ಮತ್ತು ನನ್ನ ನಸೀಬು. ಬರುವ ಮುರುಕು ಹರಕು ತೆಲುಗುವಿನಲ್ಲಿ ಸುಳ್ಳು ಖಾಯಿಲೆಗಳ ಸರಮಾಲೆ ಕಟ್ಟಿ ಆಗತಾನೆ ಬಂದಿದ್ದ ಕಾವಲುಗಾರನ ಮುಂದಿಟ್ಟೆ. ಬರಿಗೈಯಲ್ಲಿ ಒಳಬಿಟ್ಟ. ನರಕಕ್ಕೆ ನನ್ನಲ್ಲಿ ಇದ್ದ ಸಮನಾರ್ಥಕ ಪದವೆಂದರೆ ಯಾವುದೇ ಆಸ್ಪತ್ರೆಯ ಸಾಮಾನ್ಯ ವಾರ್ಡ್. ಓಹ್, ದೇವರೇ! ಆದರೆ ಈ ಆಸ್ಪತ್ರೆಯಲ್ಲಿನ ಸ್ವಚ್ಛತೆ ಕನ್ನಡಿಗಿಂತಲೂ ಫಳ ಫಳ. ಮಾತಿಗೆ ಇರಲಿ ಕಲ್ಪನೆಗೂ ಸಿಗಲಾರದ್ದು. ಕಣ್ಣಳತೆಗೂ ಮೀರಿದ್ದು. ಅನುಭವವನ್ನೂ ದಾಟಿದ್ದು. “ಕೊಳಕಿಗೆ ಕಣ್ಣ್ಕತ್ತಲಿಟ್ಟಿತ್ತು” ಅಂದರೆ ಸಹಜ, ಸಾಮಾನ್ಯ ಆದರೆ ನನಗಲ್ಲಿ “ಸ್ವಚ್ಛತೆಗೆ ತಲೆ ಗಿರಗಿರನೆ ಸುತ್ತಿತ್ತು” ಅಂದರೆ ಊಹೆಗೆ ಏನು ನಿಲುಕುತ್ತೆ? ಕಂಡಷ್ಟೂ ಪ್ರಪಂಚ. ಅಪ್ರತಿಭಳಾಗಿದ್ದೆ.

ಸಾಯಿಬಾಬ ಎಂದರೆ ದಿನಪತ್ರಿಕೆ, ಮ್ಯಾಗ್ಜೀನ್, ಟಿವಿ, ಚರ್ಚೆ, ಗಾಳಿಮಾತು, ಗುಟ್ಟಿನ ಭಯ ಇಷ್ಟೆ ಆಗಿದ್ದ ದಿನಗಳವು. ಅವರ ಖಾಸಗೀ ಕೋಣೆಯನ್ನು ವಿದ್ಯಾರ್ಥಿಯೊಬ್ಬ ಪ್ರವೇಶಿಸಲು ಹೋಗಿ ನಂತರ ಏನೇನೋ ಆಗಿದ್ದನ್ನು ಪತ್ರಿಕೆಗಳು ಪ್ರಕಟಿಸುತ್ತಿದ್ದವು.

ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೋ ಹೇಳಿದರು. ಸರಿರಾತ್ರಿಯವರೆವಿಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ತೊಡುವುದು. ನಾನು ಹೇಗೂ ಭಕ್ತೆ ಅಲ್ಲವಲ್ಲ, ಹಾಗಾಗಿ ಹಸಿರಾದರೂ ಏನಂತೆ ಎಂದುಕೊಂಡು ಇದ್ದ ಒಂದು ಹಸಿರು ಬಣ್ಣದ ಚೂಡಿದಾರ್ ಹಾಕಿಕೊಂಡು ಹೊರಟೆ. ಕೈಯಲ್ಲಿ ಕ್ಯಾಮೆರ ಹಿಡಿದ್ದಿದ್ದರೆ ಊರೆಲ್ಲಾ ಕ್ಷುದ್ರಗ್ರಹ ಜೀವಿಗಳನ್ನು ನೋಡುವಂತೆ ನೋಡುತ್ತಾರೆ ಮತ್ತು ಪ್ರಯೋಜನವೂ ಇಲ್ಲ. ಎಲ್ಲೂ ಫೋಟೋ ಕ್ಲಿಕ್ಕಿಸುವ ಹಾಗಿಲ್ಲ. ಕೈಯಲ್ಲಿ ಒಂದು ಪರ್ಸ್, ನೀರಿನ ಬಾಟಲ್ ಹಿಡಿದು ಹೊರಟೆ.

ಆಶ್ರಮದೊಳಗೊಂದು ಸಾಗರದಗಲದ ಭಜನಾ ಹಾಲ್. ಅದಾಗಲೇ ಅರ್ಧ ತುಂಬಿತ್ತು. ಮತ್ತೆ ಅದೇ ಟೈಟ್ ಟೈಟ್ ಸೆಕ್ಯೂರಿಟಿ. ಹಾಕಿಕೊಂಡಿದ್ದ ಬಟ್ಟೆ ಸಮೇತವಾದ ಈ ಶರೀರವೊಂದನ್ನ ಬಿಟ್ಟು ಮತ್ತೇನನ್ನೂ ಒಳಬಿಡಲಿಲ್ಲ. ದುಡ್ಡು ಕಾಸು, ರೂಮಿನ ಕೀಲಿ ಕೈ ಎಲ್ಲದರ ಆಸೆ ಬಿಟ್ಟು ಆದದ್ದಾಗಲಿ ಅಂತ ಒಂಟಿ ದೇಹದೊಂದಿಗೆ ಒಳಗೆ ಹೋದೆ. ಗಂಡಸರು ಹೆಂಗಸರು ಎನ್ನುವ ಎರಡು ಪಂಗಡಗಳಲ್ಲಿ ಸಾಲುಗಳು. ಸ್ವಯಂಸೇವಕರು ದಬ್ಬಿಕೊಂಡು ಹೋಗಿ ಕೂರಿಸಿದ ಕಡೆ ಕೂತೆ. ಬರೀ ನೆಲದ ಮೇಲೆ ಆಸನ. ಅಬ್ಬ, ಆ ಸ್ವಚ್ಛತೆಗೆ ವೈಕುಂಠದ ಕ್ಷೀರ ಸಾಗರದ ಮೇಲೆ ಕುಳಿತಂತಹ ಭಾಸ.

ಲಕ್ಷಾಂತರ ಜನ. ಆಕಾರದಲ್ಲಿ ಭಿನ್ನತೆ. ಸ್ವರಸದ್ದಿನಲ್ಲಿ ವಿಭಿನ್ನತೆ. ಸ್ತರದಲ್ಲಿ ವೈವಿಧ್ಯತೆ. ನಡವಳಿಕೆಗಳಲ್ಲಿ ವಿವಿಧತೆ ಆದರೆ ಸ್ವಚ್ಛತೆಯಲ್ಲಿ ಮಾತ್ರ ಏಕತೆ ಇತ್ತು ಅಲ್ಲಿ. ಕ್ಲೆಂನ್ಲೀನೆಸ್ಸ್ ಕೂಡ ಒಂದು ಮಾಯೆಯಂತೆ ಅನ್ನಿಸಿತ್ತು. ಎದುರುಗಡೆ ಸಾಯಿಬಾಬಾರಿಗಾಗಿ ತಯಾರಾದ ವೇದಿಕೆ ಅದರ ಪಕ್ಕದಲ್ಲೊಂದು ಶ್ವೇತ ವಸ್ತ್ರ ಧರಿಸಿ ಭಜನೆ ಮಾಡುವ ಭಕ್ತ ವೃಂದ. ಹೆಂಗಸರು, ಮಕ್ಕಳು, ಗಂಡಸರು, ವೃದ್ಧರು, ಯುವಕರು, ಹಸುಗೂಸುಗಳು, ಮಲೆಯಾಳಿಗಳು, ಗುಜರಾತಿಗಳು, ಫ್ರೆಂಚರು, ಚೀನಿಯರು ಹೀಗೆ ಜನ ಜನ ಜನ. ತೆಲುಗು, ಹಿಂದಿ, ಸಂಸ್ಕೃತ ಭಾಷೆಗಳ ಭಜನೆಗಳು ತಾರಕ್ಕಕ್ಕೇರುತ್ತಿತ್ತು. ನನಗೆ ಅವರುಗಳು ಹಾಡುತ್ತಿದ್ದ ಒಂದು ಹಾಡೂ ಬಾರದು. ರಾಗವಂತೂ ನಿಜಕ್ಕೂ ಭೂಮಿಯ ಮೇಲೆ ಇಲ್ಲದ್ದು ಹಾಗಾಗಿ ಅಪಶೃತಿಯೆನ್ನಿಸುತ್ತಿತ್ತು.

ಕಮಂಗಿಯ ಹಾಗೆ ಅಲ್ಲಿ ಇಲ್ಲಿ ನೋಡುತ್ತಿದ್ದೆ. ಸ್ವಯಂಸೇವಕರು ನೀರು ಬೇಕೆಂದವರಿಗೆ ಕೊಡುತ್ತಿದ್ದರು. ಒಂದು ಹನಿ ಕೆಳಗೆ ಬೀಳಿಸುತ್ತಿದ್ದರೆ ನನ್ನಾಣೆ ನೋಡಿ. ಅದೇನು ಅಚ್ಚುಕಟ್ಟುತನವಪ್ಪ ಪರಮಾತ್ಮ. ಮೊದಲೇ ನಿಯೋಜಿತಗೊಂಡು ಊರೂರಿಂದ ಬಂದಿದ್ದ ಭಜನಾ ಮಂಡಳಿಗಳು ಒಬ್ಬರಾದ ಮೇಲೆ ಒಬ್ಬರು ಸರದಿಯಲ್ಲಿ ಗುಂಪಿನಲ್ಲಿ ಹಾಡುತ್ತಿದ್ದರು. ಹೀಗೆ ಅದೆಷ್ಟೋ ಹೊತ್ತು ನೆರೆದಿದ್ದವರೆಲ್ಲಾ ಭಕ್ತಿಪರವಶವಾದದ್ದು ನನಗೆ ಮಾತ್ರ ಮನೋರಂಜನೆಯಾಗಿತ್ತು. ಇದ್ದಕ್ಕಿದ್ದಂತೆ ಏಕತಾನತೆಯೊಳಗಿಂದ ಮಿಸುಕಾಟ. ಇನ್ನೇನು ಬಾಬಾ ಬರುತ್ತಾರೆ ಭಕ್ತ ಸಮೂಹದ ಮಧ್ಯದಿಂದ ನಡೆದು ಹೋಗುತ್ತಾರೆ. ಸಾವಿರಾರು ಜನರಲ್ಲಿ ಯಾರನ್ನು ಬೇಕಾದರೂ ಬೆಟ್ಟು ಮಾಡಿ ಕರೆಯುತ್ತಾರೆ. ಮುಟ್ಟಿ ಆಶೀರ್ವಾದ ನೀಡುತ್ತಾರೆ. ಎನ್ನುವ ವಿಷಯ ಆ ಸಂಚಲನಕ್ಕೆ ಕಾರಣ.

ನನ್ನನ್ನು ಕರೆದರೆ ಮಾತ್ರ ಅವರು ದೇವರೇ ಸರಿ ಅಂತ ಮನದಲ್ಲಿ ನಿರ್ಧರಿಸಿದ್ದೆ. ಬಂದರು ಸಾಯಿಬಾಬಾ. ಕೆಳಗೆ ಕಮಲದಂತೆ ಅರಳಿಕೊಂಡಿದ್ದ ಕೇಸರಿ ಬಣ್ಣದ ಗೌನ್ ಧರಿಸಿದ್ದಾರೆ. ಗಜಗಾಂಭೀರ್ಯದ ನಡಿಗೆ, ಮುಖದಲ್ಲಿ ಮಂದಹಾಸ ಹೊತ್ತು ಭಕ್ತರೆಡೆಗೆ ಕೈಯಾಡಿಸುತ್ತಾ ಇದ್ದರು. ಎಲ್ಲರೂ ಹೋ ಎನ್ನುತ್ತಿದ್ದದ್ದು ಎಷ್ಟು ಸುಶ್ರಾವ್ಯವಾಗಿ ಹೋಯಿತು ಶಬ್ದ. ಇದ್ದಕ್ಕಿದ್ದಂತೆ. ಓಹ್, ನನಗೇನಾಯ್ತು? ಅರಿವಿಲ್ಲದಂತೆ ಹಸ್ತಗಳು ಅಂತರವಿಲ್ಲದೆ ಹತ್ತಿರವಾದವು. ನನ್ನ ತುಟಿಗಳಿಗೆ ನಗು ಯಾವಾಗ ಮೆತ್ತಿಕೊಂಡಿತು ಗೊತ್ತಾಗಲಿಲ್ಲ. ಅಲ್ಲಿಯವರೆಗೂ ಪಕ್ಕದ ಹೆಂಗಸಿನ ಬೆವರು ಚರ್ಮ ತಗುಲಿದ್ದಕ್ಕೆ ಗೊಣಗಿಕೊಳ್ಳುತ್ತಿದ್ದವಳು ಎಲ್ಲಿ ಹೋದಳು? ಆ ಘಳಿಗೆಯಲ್ಲಿ ಅಲ್ಲಿರುವ ಸಾವಿರಗಟ್ಟಲೆ ಜನರಲ್ಲಿ ಒಬ್ಬರೂ ಕಾಣುತ್ತಿಲ್ಲ. ಸಾಯಿಬಾಬಾ ನಡೆಯುತ್ತಿದ್ದಾರೆ ನಗುತ್ತಿದ್ದಾರೆ ಆಶೀರ್ವಾದ ಮಾಡುತ್ತಿದ್ದಾರೆ ಅಷ್ಟೇ ಕಾಣುತ್ತಿದೆ. ಹೊರಡುತ್ತಿದ್ದ ದನಿ ಈಗ ಕರ್ಕಶವಾಗಿರಲಿಲ್ಲ. ಶೃತಿಬದ್ಧವಾದ ರಾಗ ಅನ್ನಿಸುತ್ತಿತ್ತು. ಪರಮಾನಂದದ ಸ್ಥಿತಿ ಅಂದರೆ ಇದೇ ಏನು. ಒಂದಷ್ಟು ನಿಮಿಷಗಳ ನಡಿಗೆಯ ನಂತರ ಒಂದು ಗಂಟೆಯ ಕಾಲ ಸಿಂಹಾಸನದಲ್ಲಿ ಕುಳಿತು ಭಜನೆ ಕೇಳಿದರು ಮತ್ತೆ ಹಿಂತಿರುಗಿ ಹೊರಟರು. ಮುಗಿಯಿತು.

ರೂಮಿಗೆ ಬಂದೆ. ಈಗ ನನ್ನಲ್ಲಿ ಅವರ ಬಗ್ಗೆ ಅನುಮಾನ ಅಸಡ್ಡೆ ಏನೂ ಮೂಡಲಿಲ್ಲ. ಅಪಹಾಸ್ಯ ಒಂದೊಮ್ಮೆ ಮಾಡಿದ್ದಕ್ಕೆ ಮನದಲ್ಲೇ ಮುಜುಗರ ಪಟ್ಟುಕೊಂಡೆ. ಒಂದಷ್ಟೇ ಗಂಟೆಗಳ ಹಿಂದಿದ್ದ ನಾನು ಎಲ್ಲಿ ಹೋದೆ?! ಯಾವ ಪ್ರವಚನವನ್ನೂ ಕೇಳಲಿಲ್ಲ, ಭಜನೆಯ ರುಚಿ ಹತ್ತಲಿಲ್ಲ, ಯಾವುದೇ ಪರ್ಯಾಯ ಥೆರಪಿ ತೆಗೆದುಕೊಂಡಿಲ್ಲ. ಸಾಯಿಬಾಬಾ ನನ್ನ ಕಡೆ ನೋಡಲೂ ಇಲ್ಲ. ಆದರೂ ನಾನು ನಿರುಮ್ಮಳಳಾಗಿದ್ದೆ. ಅವರು ನನ್ನನ್ನು ನೋಡದಿದ್ದರೂ ನನ್ನ ಕಣ್ಣು ತೆರೆದಿತ್ತೇನೋ?!

ಅವರು ದೇವರಾಗಿ ಕಾಣಲಿಲ್ಲ. ಬೇಸಿಕ್ ಇನ್‌ಸ್ಟಿಂಕ್ಟ್ ಮೀರಿದ ಅತಿಮಾನವನಾಗಿಯೂ ಅಲ್ಲ. ನಗೆಪಾಟಲಾಗುವ ಪವಾಡಪುರುಷನಾಗಿಯೂ ಅಲ್ಲ. ನನಗೆ ಬರಬಾರದ್ದು ಬಂದು ಅದನ್ನು ಪರಿಹಾರ ಮಾಡಿದವರಾಗಿಯೂ ಅಲ್ಲ. “ಏನೋ ಇಲ್ಲದೆ ಏನೂ ಆಗಲಾರದು” ಎನ್ನುವ ಒಂದು ಸತ್ಯವಾಗಿ ಮಾತ್ರ ಕಂಡಿದ್ದರು ಸಾಯಿಬಾಬಾ ಆ ಘಳಿಗೆಯಲ್ಲಿ. ಆಶ್ರಮದೊಳಗೆ ಒಂದು ಪುಸ್ತಕದ ಮಳಿಗೆಯಿದೆ. ಜಗತ್ತಿನ ಎಲ್ಲಾ ಭಾಷೆಗಳಲ್ಲಿ, ಅವರ ಭಕ್ತವೃಂದದಷ್ಟೇ ಸಂಖ್ಯೆಯ ಪುಸ್ತಕಗಳಿದ್ದವು ಅಲ್ಲಿ.

ಮತ್ತೊಮ್ಮೆ ಪುಟ್ಟಬರ್ತಿಗೆ ಹೋದೆ. ಸಾಯಿಬಾಬಾ ಈಗ ನಡೆದು ಬರುತ್ತಿರಲಿಲ್ಲ. ತಲೆಗೂದಲಿನ ಗುಂಗುರು ನೆತ್ತಿಯಲ್ಲಿ ಪೂರ್ತಿ ಬರಡಾಗಿತ್ತು. ಸಿಂಹಾಸನಕ್ಕೆ ಗಾಲಿ ಅಳವಡಿಸಿ ಬ್ಯಾಟರಿ ಸಿಕ್ಕಿಸಿತ್ತು. ಅದರಲ್ಲಿ ಕೂತು ಬರುತ್ತಿದ್ದರು ಅವರು. ಚರ್ಮ ಸುಕ್ಕುಗಟ್ಟಿತ್ತು. ಬಾಯಿಯ ಒಸರಿಗೆ ಕರವಸ್ತ್ರ ಇರಲೇಬೇಕಿತ್ತು ಅವರ ಬಳಿ. “ಎಲ್ಲಾ ಸಾಧನೆಗೂ ಶರೀರ ಒಂದೇ ಸಾಧನ” ಎನ್ನುವ ಉಕ್ತಿಯ ಜೀವಂತ ಉದಾಹರಣೆಯಾಗಿದ್ದರು ಅವರು ಆಗ. ಸಾಯಿಬಾಬಾಗೆ ವಯಸ್ಸಾಗಿತ್ತು, ಕೈ ನಡುಗುತ್ತಿತ್ತು, ಕಾಲು ಏಳುತ್ತಿರಲಿಲ್ಲ, ಮುಖ ಬಿಳುಚಿಕೊಂಡಿತ್ತು, ಕಣ್ಣು ಜೋತು ಬಿದ್ದಿದ್ದವು, ಪವಾಡ ಮುಗಿದಿತ್ತು ಎನ್ನುವುದನ್ನು ಬಿಟ್ಟರೆ ಮತ್ತೇನೂ ಏನೂ ಬದಲಾಗಿರಲಿಲ್ಲ ಪುಟ್ಟಬರ್ತಿಯಲ್ಲಿ.

ಒಂದಷ್ಟು ವರ್ಷಗಳ ನಂತರ ಸಾಯಿಬಾಬ ತೀರಿಹೋದರು. ನಂತರ ಪುಟ್ಟಬರ್ತಿ ಹೇಗಿದೆ ನನಗೆ ಗೊತ್ತಿಲ್ಲ. ಕಾಲ ಜಾರುತ್ತಾ ಅಲ್ಲಿಯ ಬಗ್ಗೆ ಏನೇನೂ ಸುದ್ದಿ ಮಾಧ್ಯಮಗಳಲ್ಲೂ ಕಣ್ಣಿಗೆ ಬೀಳುತ್ತಿಲ್ಲ. ಆಸ್ಪತ್ರೆ ನಡೆಯುತ್ತಿದೆ ಎಂದು ಹತ್ತಿರದವರೊಬ್ಬರಿಂದ ತಿಳಿಯಿತು. ಪುಟ್ಟಬರ್ತಿಯ ಭೇಟಿ ಪ್ರವಾಸ ಎನ್ನುವ ತಾತ್ವಿಕ ವ್ಯಾಖ್ಯಾನಕ್ಕೆ ಬರುವುದೇನು? ಆದರೆ ಮನುಷ್ಯ ಆಕೃತಿಯಲ್ಲಿ ಇರಬಹುದಾದ ಅಪಾರ ಶಕ್ತಿಗೆ ಅದರ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗಿ ನಿಂತಿದ್ದ ಪುಟ್ಟಬರ್ತಿಗೆ ಹೋಗಿದ್ದು ಮಾತ್ರ ಒಂದು ವಿಶಿಷ್ಟ ಅನುಭವ. ಅಲ್ಲಿನ ಪುಸ್ತಕ ಮಳಿಗೆಯಲ್ಲಿ ಕೊಂಡ ಪುಸ್ತಕ “Life is the best Teacher” .