ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರ  ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ
ರವಿರಾಜ್ ಸಾಗರ್ ಬರೆದ ಸಂಶೋಧನಾ ಕೃತಿ “ಕರ್ನಾಟಕ ದೇಶಿ ಚಿತ್ರಕಲೆ ಹಸೆ ಚಿತ್ತಾರ” ಕುರಿತು ಮಧು ಗಣಪತಿರಾವ್ ಮಡೆನೂರು ಬರಹ .

ಚಿತ್ತಾರ ಯಾರಿಗೆ ಇಷ್ಟಾಗುವುದಿಲ್ಲ ಹೇಳಿ; ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಅತಿಶಯೋಕ್ತಿಯಿಂದ ಕಲಾಕೃತಿಯನ್ನು ಆಸ್ವಾದಿಸುವರು. ಕಲೆ ಪ್ರತಿಯೊಬ್ಬರಲ್ಲೂ ಹುದುಗಿರುವ ಚಿತ್ತಾಕರ್ಷಕ ರಸಸಂವೇದನೆ. ಭಾಷೆಗಳಿಗೆ ಲಿಪಿಯೇ ಹುಟ್ಟದ ಕಾಲದಲ್ಲೇ ನಮ್ಮ ಜನಪದರು ಚಿತ್ರಕಲೆ ಮೂಲಕ ಸಂವಹನ ನಡೆಸಲು ಆರಂಭಿಸಿದರು. ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಆರಂಭಿಸಿದ ಮೇಲೆ ಹಬ್ಬ, ಮದುವೆಗಳ ಸಂಭ್ರಮ ಸಡಗರವನ್ನು, ಶಾಸ್ತ್ರವನ್ನು ಚಿತ್ತಾರ ಕಲೆಯ ಮೂಲಕ ವ್ಯಕ್ತಪಡಿಸುತ್ತಾ ತಮ್ಮ ದೈನಂದಿನ ಜೀವನದ ಏಕತಾನತೆಯಿಂದ ಹೊರಬರಲು ಹಂಬಲಿಸಿದ ಪರಿಣಾಮ ಹಲವು ಬಗೆಯ ಚಿತ್ತಾರ ಕಲೆಗಳು ಜಗತ್ತಿನಾದ್ಯಾಂತ ಬೆಳೆದವು.

ಸಹ್ಯಾದ್ರಿಯ ಘಟ್ಟಗಳ ಮಲೆನಾಡಿನ ತವರು ಭಾಗದಲ್ಲಿ ಇಂದಿಗೂ ಹೆಚ್ಚಾಗಿ ದೀವರ ಮನೆಗಳಲ್ಲಿ ಕಾಣಸಿಗುವ ಆಚರಣೆಗಳ ಕಲೆ ಹಸೆ ಚಿತ್ತಾರ ವಿಶಿಷ್ಟ ವಿನ್ಯಾಸದ್ದು, ಅನನ್ಯವಾದುದು. ಶಿಷ್ಟ ಚಿತ್ರಕಲೆಯ ಎದುರು ಸಹ ತನ್ನದೇ ಸಾಂಪ್ರದಾಯಿಕ ಅಂತಃಸತ್ವ ಉಳಿಸಿಕೊಂಡಿರುವ ಜನಪದರ ಚಿತ್ರಕಲೆಗಳನ್ನು ಅಕ್ಷರ ಕಲಿತವರು ಕಡೆಗಣಿಸಿದ್ದೆ ಹೆಚ್ಚು. ಹಾಗಾಗಿ ಈವರೆಗೂ ಕರ್ನಾಟಕದ್ದೆ ಆದ ನೆಲಮೂಲದ ಹಸೆ ಚಿತ್ತಾರದ ಕುರಿತು ಸಮಗ್ರ ಸಂಶೋಧನಾ ಕೃತಿಗಳು ಹೊರಬಂದಿರಲಿಲ್ಲ.

ರವಿರಾಜ್ ಸಾಗರ್‌ ಅವರು “ಕರ್ನಾಟಕ ದೇಶೀ ಹಸೆಚಿತ್ತಾರ” ಎಂಬ ಶೀರ್ಷಿಕೆಯಡಿ ಕರ್ನಾಟಕದ ನೆಲಮೂಲದ ಜನಪದರ ಹಸೆ ಚಿತ್ತಾರದ ವೈವಿಧ್ಯಮಯ ರೂಪಕಗಳನ್ನು ಅಳವಾಗಿ ಅಧ್ಯಯನಮಾಡಿ ಸಮಗ್ರವಾದ ಒಂದು ಉತ್ತಮವಾದ ಸಂಶೋಧನಾ ಕೃತಿಯನ್ನು ಕಲಾಸಕ್ತರಿಗೆ ನೀಡಿದ್ದು ಓದಲೇಬೇಕಾದ ಸಂಗ್ರಹ ಯೋಗ್ಯ ಕೃತಿಯಾಗಿದೆ.

(ರವಿರಾಜ್ ಸಾಗರ್)

ಶಿಷ್ಟ ಚಿತ್ರಕಲೆಯ ಎದುರು ಸಹ ತನ್ನದೇ ಸಾಂಪ್ರದಾಯಿಕ ಅಂತಃಸತ್ವ ಉಳಿಸಿಕೊಂಡಿರುವ ಜನಪದರ ಚಿತ್ರಕಲೆಗಳನ್ನು ಅಕ್ಷರ ಕಲಿತವರು ಕಡೆಗಣಿಸಿದ್ದೆ ಹೆಚ್ಚು. ಹಾಗಾಗಿ ಈವರೆಗೂ ಕರ್ನಾಟಕದ್ದೆ ಆದ ನೆಲಮೂಲದ ಹಸೆ ಚಿತ್ತಾರದ ಕುರಿತು ಸಮಗ್ರ ಸಂಶೋಧನಾ ಕೃತಿಗಳು ಹೊರಬಂದಿರಲಿಲ್ಲ.

ಲೇಖಕರು “ವಸೀ ನೋಡಿ ಹಸೆಚಿತ್ತಾರ ಮತ್ತದರ ವಿನ್ಯಾಸ ಹಾಗೂ ವೈವಿಧ್ಯತೆ” ಎಂದು ಹೇಳುವ ಮೂಲಕ ಕೃತಿಯತ್ತ ಓದುಗರ ಗಮನಸೆಳೆಯುತ್ತಾರೆ. ಸಾಮಾನ್ಯವಾಗಿ ಇಂದಿಗೂ ಮಲೆನಾಡಿನಲ್ಲಿ ಮಾತ್ರ ಕಂಡುಬರುವ ದೀವರ ಸಮುದಾಯದಲ್ಲಿನ ಮದುವೆ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ಮದುಮಕ್ಕಳು ಕೂರುವ ಸ್ಥಳದಲ್ಲಿನ ಹಿಂಭಾಗದ ಗೋಡೆಯ ಮೇಲೆ ಬರೆಯುವ, ಅಥವಾ ‘ಎಳೆ’ ಎಳೆಯುವುದರಿಂದಲೇ ಮೂರ್ತರೂಪ ತಳೆಯುವ ದೈವೀಭಾವದ ಶಾಸ್ತ್ರ ಕಲೆಯೇ ಹಸೆಚಿತ್ತಾರ ಆಗಿದೆ.

ಭಾರತದ ಹಲವು ಸಮುದಾಯಗಳಲ್ಲೂ ಕೂಡ ತಮ್ಮದೇ ಸಂಪ್ರದಾಯದ ಚಿತ್ತಾರ ಕಲೆಯ ಸೊಬಗು ರೂಢಿಯಲ್ಲಿವೆ. ಕಲೆಯು ಮಾನವನ ಬುಡಕಟ್ಟು ಜೀವನ ವಿಧಾನದಿಂದ ಬೆಳವಣಿಗೆ ಹೊಂದುತ್ತಾ ಇಂದಿನ ಪ್ರತಿಮಾಲೇಖನರೂಪಕ್ಕೆ ತಲುಪಿದೆ.

ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಆಯಾಕಾಲದಲ್ಲಿ ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರ  ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ. ಮಲೆನಾಡಿನ ಹಸೆಚಿತ್ತಾರ ಬುಡಕಟ್ಟು ಸಂಸ್ಕೃತಿಯ ಅತಿ ಪುರಾತನ ಕಲೆಯಾಗಿದ್ದು ಆಳವಾದ ಅಧ್ಯಯನಮಾಡಿ, ಹಲವು ಕಲಾವಿದರನ್ನು ಸಂದರ್ಶಿಸಿ ಕ್ಷೇತ್ರ ಅಧ್ಯಯನ ಮಾಡಿ ಚಿತ್ತಾರದ ಪರಾಮರ್ಶೆಯನ್ನು ನೀಡಿದ್ದಾರೆ.

ಕ್ರಿ.ಶ. 2 ನೇ ಶತಮಾನದಿಂದ ಕ್ರಿ.ಶ. 15 ನೇ ಶತಮಾನಗಳ ನಡುವೆ ರಚಿಸಲ್ಪಟ್ಟಿರುವ ವಿಷ್ಣುಧರ್ಮೋತ್ತರ ಪುರಾಣ, ವಾತ್ಸಾಯನನ ಕಾಮಸೂತ್ರ, ವಿನಯ ಪೀಠಕ, ಬೃಹತ್ ಸಂಹಿತೆಗಳಲ್ಲಿ ಚಿತ್ರಕಲೆಯ ಮಹತ್ವ, ಶಾಸ್ತ್ರಬದ್ಧ ನಿಯಮಗಳು, ಪ್ರಮಾಣ, ಚಿತ್ರಪರಿಕರಗಳ ತಯಾರಿಕೆ ಇತ್ಯಾದಿ ವಿಷಯಗಳ ವಿವರವನ್ನೂ ಲೇಖಕರು ಗಮನಿಸಿದ್ದಾರೆ.

ಶಿಷ್ಟಕಲೆಯಲ್ಲಿ ಕಲಾವಿಮರ್ಶಕರು ಕಲಾತಂತ್ರದ ಷಡಂಗಗಳನ್ನು ವಿಮರ್ಶಿಸಿದ್ದಾರೆ. ಅಂದರೆ ರೂಪಭೇದ, ಪ್ರಮಾಣ, ಭಾವ, ಲಾವಣ್ಯ, ಯೋಜನೆ ಸಾದೃಶ್ಯ ಹಾಗೂ ವರ್ಣಿಕಾಚರಣವೆಂಬ ಆರು ಕಲಾಸೂತ್ರಗಳು ಅತ್ಯಂತ ಶಾಸ್ತ್ರೀಯವಾಗಿದ್ದವೆಂದು ಪರಿಗಣಿಸಲಾಗಿದೆ. ಇಲ್ಲಿ ಹಸೆಚಿತ್ತಾರ ರಚನೆಯಲ್ಲೂ ದೀವರರ ಹೆಣ್ಣುಮಕ್ಕಳು   ಅವರೇ ಆದ ನಿಬಂಧನೆಗಳನ್ನು ರೂಢಿಯಲ್ಲಿಟ್ಟುಕೊಂಡಿರುವುದನ್ನು ಲೇಖಕರು ಚಿತ್ತಾರಗಳನ್ನು ಉದಾಹರಿಸಿ ವಿಮರ್ಶಿಸುತ್ತಾರೆ.

ಮೊದಲು ಹಸೆಯ ಅಧಿಷ್ಠಾನದ ತಯಾರಿ ಮಾಡಿಕೊಳ್ಳುವರು. ವನಸ್ಪತಿ ಜನ್ಯವಾದ ಬಿಳಿ, ಕಪ್ಪು, ಕೆಂಪು ಹಾಗೂ ಹಳದಿ ಬಣ್ಣವನ್ನು ಮತ್ತು ಕುಂಚದ ತಯಾರಿಯನ್ನೂ ಅವರೇ ತಯಾರಿಸಿಕೊಳ್ಳುವುದನ್ನೂ ವಿಧಿವತ್ತಾಗಿ ಹೇಳಿದ್ದಾರೆ. ಹಸೆಯ ಗಾತ್ರ, ಅದರೊಳಗೆ ವಿನ್ಯಾಸಗೊಳ್ಳುವ ಚಿತ್ರರೂಪಕಗಳನ್ನು ತಮ್ಮ ಮನಸ್ಸಿನಲ್ಲಿಯೇ ಅಣಿಹಾಕಿಕೊಂಡು ಚಿತ್ರಿಸುವುದು ಕುತೂಹಲದ ಸಂಗತಿ.

ಹಸೆಚಿತ್ತಾರವು ಶೈವ, ವೈಷ್ಣವ ಇಲ್ಲವೇ ಇನ್ನಾವ ಧರ್ಮದ ಸಂಕೇತಕ್ಕೂ ಒಳಪಡದೆ ಪೂಜ್ಯತಾ ಭಾವಪಾರಮ್ಯದ ಪ್ರಕೃತಿಯ ಆರಾಧನಾ ರೂಪಕಗಳೆಂದು ಪರಿಗಣಿಸಲಾಗಿದೆ. ಚಿತ್ರ ರಚನಾಕಾರರ ಉದಾತ್ತ ಕಲ್ಪನೆ, ವನಸ್ಪತಿಯ ಉಜ್ವಲ ವರ್ಣಸಂಯೋಜನೆಗಳಲ್ಲಿ ಕೇವಲ ಕೈಚಳಕದಲ್ಲೇ ಮೂಡಿಸುವುದು ವಿಸ್ಮಯ ಕಲಾಫ್ರೌಡಿಮೆಯಾಗಿದೆ. ದೀವರರ ಈ ಹಸೆಚಿತ್ತಾರಗಳು ಪ್ರಕೃತಿಯನ್ನು ಪ್ರತಿನಿಧಿಸುವ ಸ್ವರೂಪಹೊಂದಿವೆ ಎನ್ನುತ್ತಾರೆ ಲೇಖಕರರು. ಈ ಹಸೆಚಿತ್ತಾರ ಆದಿಮ ಜನಾಂಗದಿಂದ ಇಂದಿನ ವೈಜ್ಞಾನಿಕ ಜೀವನ ಶೈಲಿಯವರೆಗೆ ಅನೇಕ ಮಗ್ಗುಲುಗಳ ನವ್ಯತೆಯ ಬದಲಾವಣೆಗಳನ್ನು ಪಡೆದುಕೊಂಡು ಇಂದಿನ ಸ್ವರೂಪಕ್ಕೆ ಬಂದು ನಿಂತಿವೆ. ಈ ಚಿತ್ರಗಳು ಸಾಮಾನ್ಯವಾಗಿ ಕಂಡರೂ ಸಮಸ್ತ ಪ್ರಕೃತಿಯಲ್ಲಿ ಪ್ರವಹಿಸುವ ಜೀವಚೈತನ್ಯವಾಗಿರುತ್ತವೆ ಎಂಬುದನ್ನು ತಮ್ಮ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರೇಖಾಕೃತಿಯಲ್ಲಿ ಮೂಡಿದ ಈ ಚಿತ್ತಾರಗಳು ಆದಿಭೌತಿಕ ತತ್ವವಿಶೇಷಗಳೊಡನೆ ಸಂಗಮಿಸಿ ಆತ್ಮಾನುಭೂತಿಯ ದಿವ್ಯಕಲ್ಪನೆಯನ್ನು ಸಾರುತ್ತವೆ. ಹಸೆಚಿತ್ತಾರ ಲೋಕಜೀವನ ಚಿತ್ರಣವನ್ನೂ ಗರ್ಭೀಕರಿಸಿಕೊಂಡಿದೆ.  ಆದಿಮ ಮಾನವನು ಬಂಡೆಗಳ ಮೇಲೆ, ಗುಹೆಗಳ ಒಳಗೆ ತನ್ನಿಷ್ಟದ ಚಿತ್ರಗಳನ್ನು ಬಿಡಿಸಿದ್ದನ್ನು ಈ ಅಧ್ಯಯನದಲ್ಲಿ ಪ್ರಸ್ತಾಪಿಸಿದ್ದಾರೆ. ಚಿತ್ರಗಳ ಹುಟ್ಟು ಬೆಳವಣಿಗೆಯ ಕಡೆಗೂ ಗಮನಹರಿಸಿದ್ದನ್ನು ಈ ಕೃತಿಯಲ್ಲಿ ಕಾಣಬಹುದು.

ಹಸೆಚಿತ್ತಾರದ ಕಲಾವಿದೆಯರನ್ನು ಚಿತ್ತಾರಗಿತ್ತಿಯರೆಂದು ಕರೆದಿದ್ದಾರೆ. ಬಹುಮುಖ್ಯವಾಗಿ ಪ್ರತಿ ಚಿತ್ತಾರಗಳಲ್ಲಿ ಚಿತ್ತಾರಗಿತ್ತಿಯರು ತಮ್ಮ ಕಲಾಕೌಶಲ್ಯವನ್ನು ಮೆರೆದಿದ್ದಾರೆ. ಇಲ್ಲಿ 50 ಕ್ಕೂ ಹೆಚ್ಚು ಚಿತ್ತಾರದ ಪಟಗಳನ್ನೂ ಕೊಟ್ಟಿದ್ದಾರೆ. ಈ ಚಿತ್ತಾರಗಳು ರೇಖಾಪ್ರಧಾನ ಗಮ್ಯಗಳು. ಸರಳರೇಖೆಯ ಒಳಗಡೆ ಚಚ್ಛೌಕ ಇಲ್ಲವೆ ತ್ರಿಕೋನಾಕೃತಿಲ್ಲಿ ಮೂಡಿದ ಎಳೆಗಳ ನಿರ್ಮಿತಿಯನ್ನೊಳಗೊಂಡಿವೆ. ಹಸೆಚಿತ್ತಾರವು ಸಂಪೂರ್ಣವಾಗಿ ಎಳೆಗಳ ಸಮನ್ವಯದಿಂದಲೇ ಮೂಡುವ ಸುಂದರ ಕೃತಿ. ಹಸೆಯ ವಿದ್ಯೆ ಅನಂತವಿದ್ಯೆಯಲ್ಲ, ಇದು ಕೈ ಅಳತೆಯ ಅಚ್ಚುಕಟ್ಟಾದ ಎಳೆ ಎಳೆಯುವ ಚಮತ್ಕಾರದ ವಿದ್ಯೆ. ಚಿತ್ತಾರ ಬರೆಯುವವರು ಇದು ಒಂದು ತಪಸ್ಸೆಂಬಂತೆ ಭಾವಿಸುತ್ತಾರೆ.  ಹಾಗು ಬರೆದದ್ದು ಸಾರ್ಥಕವಾಯಿತು ಎಂದುಕೊಳ್ಳುತ್ತಾರೆ.

ಲೇಖಕರು ಈ ಹಸೆಚಿತ್ತಾರವನ್ನು ತಮ್ಮ ಮನೋಭಿತ್ತಿಯಲ್ಲಿ ಕಂಡದ್ದನ್ನು ಹೀಗೆ ವರ್ಣಿಸುತ್ತಾರೆ: “ಎಳೆಗಳ ಮೂಲಕವೇ ಎಲ್ಲಾ ಹೇಳುವ, ಕುರಿತೋದದೆಯೂ ಚಿತ್ತಾರ ಕಲಾಪರಿಣಿತಿಮತಿಗಳಾಗಿದ್ದ ನಮ್ಮ ಜನಪದರ ಚಿತ್ತಾರಗಿತ್ತಿಯರ ಅಭಿವ್ಯಕ್ತಿ ಕೌಶಲ್ಯದಿಂದ ವಿನ್ಯಾಸಗೊಂಡ ಹಸೆಚಿತ್ತಾರವು ಹಬ್ಬಗಳ, ಸಂಪ್ರದಾಯಗಳ ಹಾಗು ಮದುವೆ ಸಂಭ್ರಮದ ಗಂಡು ಹೆಣ್ಣಿನ ಮೌನಸಂಭಾಷಣೆಯನ್ನು, ತಳಕ ಪುಳಕಗಳನ್ನೂ, ತುಮುಲಗಳನ್ನೂ, ಫಲವಂತಿಕೆಯಾಚಾರಣೆಗಳನ್ನೂ ಸಾರುವ ವಿಶ್ವಭಾಷೆ ಹಸೆಚಿತ್ತಾರ” ಎನ್ನುವರು.

ಈ ಕಲೆಯನ್ನು ದೀವರರ ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ. ಮಲೆನಾಡಿನ ಹಸೆಚಿತ್ತಾರ ಬುಡಕಟ್ಟು ಸಂಸ್ಕೃತಿಯ ಅತಿ ಪುರಾತನ ಕಲೆಯಾಗಿದ್ದು ಆಳವಾದ ಅಧ್ಯಯನಮಾಡಿ, ಹಲವು ಕಲಾವಿದರನ್ನು ಸಂದರ್ಶಿಸಿ ಕ್ಷೇತ್ರ ಅಧ್ಯಯನ ಮಾಡಿ ಚಿತ್ತಾರದ ಪರಾಮರ್ಶೆಯನ್ನು ನೀಡಿದ್ದಾರೆ.

ಹಸೆಯಲ್ಲಿ ಕೌಶಲ ಸೂಚಕವಾದ ಎಷ್ಟೋ ಅಂಶಗಳನ್ನು ಗಮನಿಸಬಹುದು. ಕಲಾವಿದರ ಕೈಚಳಕ, ಬರೆಯುವಲ್ಲಿನ ತನ್ಮಯತೆ ಹಾಗೂ ದೈವೀಭಾವದ ಪೂಜ್ಯತೆಯನ್ನು ಕಾಣುತ್ತೇವೆ. ಸಂಗೀತಗಾರನು ಚಿತ್ರವನ್ನು ಹಾಡುತ್ತಾನೆ, ಚಿತ್ರಕಲಾವಿದನು ಸಂಗೀತವನ್ನು ಚಿತ್ರಿಸುತ್ತಾನೆ ಎಂದು ಪ್ರಸಿದ್ಧ ಕಲಾವಿದ ಪರ್ಶಿಚ್ಚಾನ್ ಹೇಳುತ್ತಾನೆ.

ಸುಂದರವಾಗಿ ಚಿತ್ತಾರಗೈದ ಕಲಾವಿದರ ಹೆಸರುಗಳನ್ನೂ ಚಿತ್ತಾರದೊಂದಿಗೆ ಪರಿಚಯಿಸಿದ್ದಾರೆ. ಲೇಖಕರು ಈ ದೇಶೀಚಿತ್ತಾರ ಕಲೆ ಕಂಡುಬರುವ ಪ್ರದೇಶಗಳ ನಕ್ಷೆಯನ್ನೂ ತಯಾರಿಸಿ ಗುರುತುಮಾಡಿದ್ದು ಓದುಗರ ತಿಳಿವಳಿಕೆಗೆ ಸಹಕಾರಿಯಾಗಿದೆ. ಅನ್ಯ ಬುಡಕಟ್ಟು ಜನಾಂಗಗಳ ಕಲೆಗಳಾದ ಮಹಾರಾಷ್ಟ್ರದ ವರ್ಲಿಕಲೆ, ಬಿಹಾರದ ಮಧುಬನಿ, ಒರಿಸ್ಸಾದ ಸೌರಾ ಕಲಾಚಿತ್ತಾರಗಳನ್ನೂ ಪರಾಮರ್ಶಿಸಿದ್ದಾರೆ.

ಹಸೆಚಿತ್ತಾರ ಕಲಾವಿದರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾಗಿರುವುದನ್ನು ಪ್ರಸ್ತಾಪಿಸುತ್ತಾರೆ. ಹಸುವಂತೆ ಈಶ್ವರನಾಯ್ಕ ಅವರು ಹಸೆಚಿತ್ತಾರವನ್ನು ಪ್ರಾಯೋಗಿಕವಾಗಿ ರಚಿಸಿ ರಾಷ್ಟ್ರ ಪ್ರಶಸ್ತಿಯನ್ನೂ, ಗಡೇಮನೆ ಲಕ್ಷ್ಮಮ್ಮ ಇವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದನ್ನೂ, ಮೊದಲ ಬಾರಿಗೆ ಹಸೆ ಚಿತ್ತಾರವನ್ನು ಸಂಪ್ರದಾಯದ ಆಚೆ ಹೊರಜಗತ್ತಿಗೆ ಪ್ರದರ್ಶನ ಏರ್ಪಡಿಸಿ ಚಿತ್ರಕಲಾವಿದರಿಗೆ ಪರಿಚಯಿಸಿದ ಗೌರಮ್ಮ ಹುಚ್ಚಪ್ಪ ಮಾತ್ರ ಚಿತ್ತಾರ ಕಲಾಸೇವೆಯನ್ನು, ಸಿರಿವಂತೆ ಚಂದ್ರಶೇಖರ ಮತ್ತು ಇವರ ಪತ್ನಿ ಗೌರಮ್ಮ ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಹಸೆಚಿತ್ತಾರ ಪ್ರದರ್ಶನ ನೀಡಿದ್ದು ಅಂತಾರಾಷ್ಟ್ರೀಯ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಮಲೆಕರ್ನಾಟಕದ ಹಸೆಚಿತ್ತಾರದ ಹುಟ್ಟು, ಬೆಳವಣಿಗೆ, ವಿಧಾನ, ಸ್ವರೂಪ, ಸಾಂಪ್ರದಾಯಿಕ ಮಹತ್ವ, ಅಂತಃಸತ್ವದ ತಳಸ್ಪರ್ಶಿ ಅಧ್ಯಯನ ಮಾಡಿ ವಿವಿಧ ರಾಜ್ಯಗಳ ಆಚರಣೆಯ ಮೂಲ ದಾಖಲೆಗಳೊಂದಿಗೆ ತೌಲನಿಕ ಅಧ್ಯಯನ ಸಹ ನಡೆಸಿರುವುದು ವಿಶೇಷ. ನಾವೀನ್ಯ, ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಹ ವಿವರಿಸಿದ್ದಾರೆ. ರಾಜ್ಯವ್ಯಾಪಿ ಹಸೆಚಿತ್ತಾರ ಅಧ್ಯಯನ ಮಾಡಿ ಇದೆ ಮಾದರಿ ಹೋಲುವ ಮಹಾರಾಷ್ಟ್ರದ ವರ್ಲಿ, ಬಿಹಾರದ ಮಧುಬನಿ ,ಒರಿಸ್ಸಾದ ಸೊರಾ ಗೋವಾದ ಕಾವಿ ಹಾಗೂ ಮಂಡಲ ಕಲೆ, ಉತ್ತರ ಕನ್ನಡ ಜಿಲ್ಲಾ ಭಾಗ ಹಾಗೂ ಕರಾವಳಿಯ ಹಲಿಚಿತ್ತಾರ, ಹಸಗರ ಚಿತ್ತಾರ, ಸೇಡಿ, ರಂಗೋಲಿ, ಹಚ್ಚೆಯಂತಹ ಕಲೆಗಳನ್ನೂ ಒಳಗೊಂಡಂತೆ ತೌಲನಿಕ ವಿಶ್ಲೇಷಣೆಗಳೊಂದಿಗೆ ಸ್ಪಷ್ಟ ಉದ್ದೇಶಗಳನ್ನಿಟ್ಟುಕೊಂಡು ಲೇಖಕರು ಅಧ್ಯಯನ ನಡೆಸಿದ್ದು ಈ ಕೃತಿಯ ವಿಶೇಷ.

ಪರಂಪರೆಯಿಂದ ಪ್ರಧಾನವಾಗಿರಿಸಿಕೊಂಡು ಬಂದ ದೀವರ ಹಸೆಚಿತ್ತಾರದ ಕಲೆಯ ಸೊಗಸಿನಂತೆ ಮಲೆನಾಡಿನ ಕೆಲವು ಊರುಗಳಲ್ಲಿ ಒಕ್ಕಲಿಗ ಕುಟುಂಬಗಳಲ್ಲಿ, ಮಡಿವಾಳರು, ಹಸಲರು, ಹಾಲಕ್ಕಿಯವರು, ಹವ್ಯಕರು ಪ್ರಭಾವಿತರಾಗಿ ಹಸೆಕಲೆಯನ್ನು ಕೆಲವು ಕಡೆ ಆಚರಣೆಗಳಿಗೆ ಬರೆದಿರುವುದನ್ನು, ಕೆಲವರು ಆಸಕ್ತಿಯಿಂದ ಕಲಿತು ಬರೆಯುತ್ತಿರುವುದನ್ನು ಸಹ ಗುರುತಿಸಿ ಆಧಾರಗಳೊಂದಿಗೆ ವಿಶ್ಲೇಷಿಸಿದ್ದಾರೆ.

“ಹಸೆಚಿತ್ತಾರವಿಲ್ಲದೆ ದೀವರ ಮನೆಯಲ್ಲಿ ಮದುವೆ ನಡೆಯದು”, “ಭೂಮಣ್ಣಿಬುಟ್ಟಿಯಿಲ್ಲದೆ ಗದ್ದೆಗೆ ಚರಗ ಚೆಲ್ಲುವಂತಿಲ್ಲ” ಅನ್ನುವಷ್ಟು ಕಟ್ಟುನಿಟ್ಟು ವಿಧಿವಿಧಾನ ಪಾಲಿಸಿಕೊಂಡು ಬಂದಿದ್ದರಿಂದ ಹಸೆಚಿತ್ತಾರ ಇಂದಿಗೂ ಉಳಿದಿದ್ದು, ಇಂದಿನ ಜಾಗತೀಕರಣಕ್ಕೆ ತಕ್ಕಂತೆ ಹಸೆ ಚಿತ್ತಾರದಲ್ಲಿ ಸಾಂಪ್ರದಾಯದಾಚೆ ಪ್ರಯೋಗಶೀಲತೆಯನ್ನು ತರುವಾಗ ಸಾಂಪ್ರದಾಯಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿ ಚಿತ್ರಿಸಬೇಕು. ಚಿತ್ತಾರದಲ್ಲಿ ಬದುಕಿನ ತಾತ್ವಿಕತೆ, ಅಂತಃಸತ್ವ ಅರಿಯಬೇಕಿದೆ ಎನ್ನುವ ಅಭಿಪ್ರಾಯವೂ ಇದೆ.

ದೀವರರು ಆಚರಿಸುವ ನದೀಪೂಜೆ, ಸೂರ್ಯ ಚಂದ್ರರ ಪೂಜೆ, ಹೊಲ, ಗದ್ದೆ, ಪ್ರಕೃತಿಯ ಪೂಜೆಗಳನ್ನೂ ಉಲ್ಲೇಖಿಸುತ್ತಾರೆ. ಹಸೆ ಕಲೆಯ ಸ್ವರೂಪ ಮತ್ತು ವಿನ್ಯಾಸಗಳನ್ನು ಚಿತ್ರಪಟದೊಂದಿಗೆ ವಿವರಿಸಿದ್ದಾರೆ. ಹಸೆಚಿತ್ತಾರ ಕಲೆಯ ರಚನೆ ಪ್ರಧಾನವಾಗಿ ಸರಳರೇಖೆಗಳು, ತ್ರಿಭುಜ, ಚೌಕ, ಆಯತ, ವಜ್ರಾಕೃತಿ, ವೃತ್ತ ಮೊದಲಾದ ಜಾಮಿತಿಯ ಅಂಶಗಳ ವಿನ್ಯಾಸವಾಗಿರುತ್ತದೆ. ಹಸೆಚಿತ್ತಾರದ ನಡುವೆ ಗರ್ಭಗುಡಿಯಂತಹ ಪ್ರಾಂಗಣವಿದ್ದು ಮದುವೆಯ ಹಸೆಯಾದರೆ ಅಲ್ಲಿ ದಂಡಿಗೆ, ಅದರೊಳಗೆ ಮಧುಮಕ್ಕಳನ್ನು ಚಿತ್ರಿಸುವರು. ಇತರೆ ಉದ್ದೇಶಕ್ಕೆತಕ್ಕಂತೆ ಚಿತ್ರರಚನೆ ಗೈಯುತ್ತಾರೆ. ಕೃಷಿ ಸಸ್ಯಗಳು, ಪಕ್ಷಿಗಳು, ಕಳಸ, ಮದನಕೈ ವಿನ್ಯಾಸಗಳೂ ಹಸೆಯಲ್ಲಿ ಕಂಡುಬರುತ್ತಿದ್ದು ಒಟ್ಟಾರೆಯಾಗಿ ಚಿತ್ರವು ಒಂದು ನಿಯಮಬದ್ಧ ಗುಡಿಯನ್ನು ನಿದರ್ಶನಿಸುತ್ತದೆ. ಪ್ರಮಾಣ ಬದ್ಧತೆಯ ಷಡಾಂಗಗಳು, ವರ್ಣವೈವಿಧ್ಯತೆಗೆ ಆಧ್ಯತೆ ಕಡಿಮೆಯಿದ್ದರೂ, ಮೇಲ್ನೋಟಕ್ಕೆ ಸರಳರೇಖೆಗಳ ಸರಳ ಸಂಯೋಜನೆ ಎನಿಸಿದರೂ; ಇವುಗಳ ರಚನೆಯು ಸಂಕೀರ್ಣವೂ, ಕ್ಲಿಷ್ಟವೂ, ಸಾಂಕೇತಿಕವೂ ಆದುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಆಧುನಿಕ ಯುಗದಲ್ಲಿ ಹಸೆಚಿತ್ತಾರಗಳು ನಶಿಸುವ ಹಂತ ತಲುಪುವ ಅಪಾಯವಿದೆಯೆಂದೂ, ಅದನ್ನು ಉಳಿಸಿ ಬೆಳೆಸುವ ಕಳಕಳಿ ಲೇಖಕರದು. ಬಹುಮುಖ್ಯವಾಗಿ ಚಿತ್ತಾರ ಪರಂಪರೆಯು ಪುನರುಜ್ಜೀವನ ಗೊಳಿಸುವುದರಿಂದ ಮಹಿಳೆಯರಿಗೆ ಒಂದು ಉತ್ತಮ ಕರಕುಶಲ ಕಲೆಯಾಗಿ ಉದ್ಯೋಗವಾಗಿಯೂ ಬೆಳೆಸುವುದು ಸೂಕ್ತವೆನ್ನುವ ಸಲಹೆ ನೀಡುತ್ತಾರೆ.

ಲೇಖಕರು ಚಿತ್ತಾರ ಬರೆಯುವ ಕೆಲವು ಕಟ್ಟಳೆಗಳನ್ನು ಪ್ರಸ್ತಾಪಿಸಿದ್ದು ಅವುಗಳು: ಒಮ್ಮೆ ಎಳೆ ಎಳೆದಾದಮೇಲೆ ಅದನ್ನು ಅಳಿಸುವಂತಿಲ್ಲ. ಒಮ್ಮೆ ಬರೆದ ಹಸೆಯನ್ನು ಮೂರು ವರುಷ ಅಳಿಸುವಂತಿಲ್ಲ. ವರ್ಷತುಂಬುವುದರೊಳಗೆ ಆ ಮನೆಯಲ್ಲಿ ಮತ್ತೊಂದು ಮದುವೆ ನಡೆದರೆ ಅದರ ಪಕ್ಕದಲ್ಲಿ ಹೊಸದಾಗಿ ಚಿತ್ತಾರ ಬರೆಸುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಚಿತ್ತಾರ ಬರೆಯುತ್ತಾರೆ. ಚಿತ್ತಾರ ಬರೆಯಲು ಪ್ರಾರಂಭಿಸಿದವರು ಮಧ್ಯದಲ್ಲಿ ಬಿಟ್ಟುಹೋಗುವಂತಿಲ್ಲ; ಕೇವಲ ಒಂದು ವಾರದೊಳಗೆ ಹಗಲು, ರಾತ್ರಿಯೆನ್ನದೆ ಚಿತ್ತಾರ ಬರೆದು ಮುಗಿಸಬೇಕು.

ಜನಪದರ ಚಿತ್ತಾರಗಳಲ್ಲಿ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅನುಭವ ಜನ್ಯ ಜ್ಞಾನ, ಪರಿಸರ ಪ್ರೇಮ, ನಿಸರ್ಗದೊಂದಿಗಿನ ಅನನ್ಯ ಬದುಕಿನ ಸ್ತ್ರೀ ಜ್ಞಾನಕೋಶದಿಂದ ಚಿತ್ತಾರಗಳು ಸಂಯೋಜನೆಗೊಳ್ಳುತ್ತವೆ. ರೇಖೆಗಳು ಮೂರ್ತಪಡೆದು ಲೈಂಗಿಕತೆ ಮತ್ತು ಫಲವಂತಿಕೆಯ ಅಭಿವ್ಯಕ್ತಿ ಸ್ವರೂಪ ಪಡೆಯುತ್ತದೆ.

ಹಸೆಚಿತ್ತಾರ ಮತ್ತು ಭೂಮಣ್ಣಿಬುಟ್ಟಿಗಳು ಪ್ರತ್ಯೇಕವಾದ ಕಲಾವಿನ್ಯಾಸವನ್ನು ಹೊಂದಿವೆ. ಹಸೆ ಮತ್ತು ಬುಟ್ಟಿಚಿತ್ತಾರ ಬರೆಯುವ ಕಲಾವಿದೆಯರು ಮಹಿಳೆಯರೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವವರು ಮತ್ತು ಬೆಳೆಸುವವರು ಈ ಮಣ್ಣಿನ ಮಹಿಳೆಯರೆ.

ಚಿತ್ರ ರಚನಾಕಾರರ ಉದಾತ್ತ ಕಲ್ಪನೆ, ವನಸ್ಪತಿಯ ಉಜ್ವಲ ವರ್ಣಸಂಯೋಜನೆಗಳೊಂದಿಗೆ ಕೇವಲ ಕೈಚಳಕದ ಎಳೆಯಲ್ಲೇ ಮೂಡಿಸುವುದು ಚಿತ್ತಾರದ ಕಲಾಫ್ರೌಡಿಮೆಯಾಗಿದೆ. ಹಸೆ; ಬುಡಕಟ್ಟು ಸಂಸ್ಕೃತಿಯ ಗಾಢರಸಭಾವ ಹೊಮ್ಮಿಸುವ ಪ್ರಕೃತಿ ಆರಾದನಾ ಕಲೆ. ಈ ಚಿತ್ತಾರಗಳು ಸಂಪ್ರದಾಯಬದ್ಧವಾಗಿದ್ದು ಅವುಗಳು ಮನೋಗಮ್ಯ ರೇಖೆ, ಮನೋಗಮ್ಯ ವರ್ಣಗಳೇ ಅವುಗಳ ಮೂಲ ಲಕ್ಷಣ. ಚಿತ್ತಾರದಲ್ಲಿ ಪ್ರಮಾಣ ಬದ್ಧವಾದ ಎಳೆ ಅಥವಾ ರೇಖೆಯೇ ರೂಪಕ ಪ್ರಾಧಾನ್ಯತೆ ಪಡೆದಿದ್ದು ರೇಖಾಚಿತ್ತಾರವೆಂದೂ ಪರಿಗಣಿಸಬಹುದು. ಚಿತ್ತಾರಗಳು ಧಾರ್ಮಿಕ, ಆಧ್ಯಾತ್ಮಿಕ ಪ್ರಾಕೃತಿಕ ಹಾಗೂ ಸಾಮಾಜಿಕ ಸಂಪ್ರದಾಯವನ್ನು ಬೌದ್ಧಿಕ ಜೀವನವನ್ನೂ ಪ್ರತಿಬಿಂಬಿಸುತ್ತವೆ.

ರವಿರಾಜ್ ಸಾಗರ್ ಸ್ವತಃ ಹಸೆಚಿತ್ತಾರ ಕಲೆಯ ಕಲಾವಿದರು. ಅವರು ಹಸೆಯಲ್ಲಿನ ಎಳೆಯ ಪ್ರಾಮುಖ್ಯತೆ, ಹಸೆಯ ರಚನಾ ವಿನ್ಯಾಸ, ಬಣ್ಣಗಳು, ಭೂಮಣ್ಣಿಬುಟ್ಟಿ, ಇನ್ನೂ ಕೆಲವು ಕಲಾಕೃತಿಗಳು, ಆದಿಮ ಬಂಡೆ ಹಾಗೂ ಗವಿಚಿತ್ತಾರಗಳನ್ನೂ ಮತ್ತು ಚಿತ್ತಾರಗಿತ್ತಿಯರ ಕಲಾಕೌಶಲ್ಯವನ್ನೂ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇದುವರೆಗೂ ಪೂರ್ಣಪ್ರಮಾಣದ ಹಸೆ ಕುರಿತು ಯಾವುದೇ ಕೃತಿ ಬಂದಿದಿಲ್ಲ. ಆ ಕೊರತೆಯನ್ನು ರವಿರಾಜ್ ಸಾಗರ್ ತುಂಬಿದ್ದಾರೆ. ಇದು ಒಂದು ಪೂರ್ಣಪ್ರಮಾಣದ ಹಸೆಚಿತ್ತಾರದ ಸಂಶೋಧನಾ ಕೃತಿಯಾಗಿರುತ್ತೆ. ಲೇಖಕರ ಶ್ರಮ ನಿಜವಾಗಿಯೂ ಇಲ್ಲಿ ಸಾರ್ಥಕಪಡೆದಿದೆ.

(ಕೃತಿ: ಕರ್ನಾಟಕ ದೇಶಿ ಚಿತ್ರಕಲೆ ಹಸೆ ಚಿತ್ತಾರ, ಲೇಖಕರು: ರವಿರಾಜ್‌ ಸಾಗರ್‌, ಪ್ರಕಾಶಕರು: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ, ಗುಲ್ಬರ್ಗ, ಪುಟಗಳು: 252, ಬೆಲೆ: 330/-)