ಮಲೆನಾಡಿನ ಮಡಿಲಲ್ಲಿರುವ ಸಕ್ರೆಬೈಲಿನಲ್ಲಿ ಬಹುತೇಕ ನಡೆಯುವ ಈ ಕತೆಗಳು ಮನುಷ್ಯ ಸಂಬಂಧಗಳಲ್ಲಿನ ತಾಕಲಾಟಗಳನ್ನು ಬಿಂಬಿಸುತ್ತವೆ. ಸಮಾಜದ ಅಧೋಮುಖಿ ಬೆಳವಣಿಗೆಗಳನ್ನು, ಸೋಗಲಾಡಿತನವನ್ನು, ಮುಖವಾಡದ ಹಂಗನ್ನು, ಸುಖದ ಹಪಾಹಪಿಯನ್ನು, ಆಧುನಿಕತೆ ತಂದೊಡ್ಡಿರುವ ಅಪಾಯಗಳನ್ನು, ವ್ಯಕ್ತಿತ್ವದ ವಿಕಾಸವನ್ನು, ಬದುಕಿನ ಸಂಕೀರ್ಣತೆಗಳನ್ನು ಕತೆಗಳು ಹದವಾಗಿ ಮೈಗೂಡಿಸಿಕೊಂಡು ಬೆಳೆದಿವೆ.
ಅಲಕಾ ಕಟ್ಟೆಮನೆಯವರ ʻಹೊರಳು ಹಾದಿಯ ನೋಟʼ ಕಥಾಸಂಕಲನದ ಕುರಿತು ನಿವೇದಿತಾ ಎಚ್. ಬರಹ

ಅಲಕಾ ಕಟ್ಟೆಮನೆ ಈಗಾಗಲೇ ಕನ್ನಡ ಕಥಾಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿರುವವರು. ʻಶಾಲ್ಮಲೆಯ ಹೊನಲಲ್ಲಿʼ ಕಥಾಸಂಕಲನವನ್ನು ಈಗಾಗಲೇ ಹೊರತಂದಿರುವ ಅಲಕಾ, ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ಕಾಣಬರುವ ಹೆಸರು. ತಮ್ಮ ಸಂವೇದನಾಶೀಲ ಕಥೆಗಳ ಮೂಲಕ ಮನುಷ್ಯನ ಅಂತರಂಗಕ್ಕೆ ಲಗ್ಗೆ ಹಾಕುವ ಕತೆಗಾರ್ತಿ ಮನಸ್ಸಿನ ಸೂಕ್ಷ್ಮಾತಿ ಸೂಕ್ಷ್ಮ ಕೋಣೆಗಳನ್ನು ಓದುಗರ ಹೊಕ್ಕು ಬಳಕೆಗೆ ತೆರೆದಿಡುತ್ತಾರೆ.

ಪ್ರಸ್ತುತ ʻಹೊರಳು ಹಾದಿಯ ನೋಟʼ- ೧೪ ಕಥೆಗಳುಳ್ಳ ಸಂಕಲನ. ಅಲಕಾ ಅವರ ಎಂದಿನ ಸಾವಕಾಶ ಮೃದು ಮಧುರ ಶೈಲಿಯಲ್ಲಿ ಮೂಡಿ ಬಂದಿರುವ ಕಥೆಗಳು, ಆವರಿಸಿಕೊಳ್ಳುವಂತಹ ಗುಣವುಳ್ಳವು. ಆಧುನಿಕ ಜಗತ್ತಿನಲ್ಲಿಯೇ ನಡೆಯುವ ಕಥೆಗಳಾದರೂ, ಇನ್ನೂ ಪ್ರಪಂಚದಲ್ಲಿ ಅಳಿದುಳಿದಿರುವ ಮಾನವೀಯ ಮುಖಗಳ ಅನಾವರಣ, ಓದುಗರನ್ನು ಒಂದು ಭ್ರಮಾ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.

(ಅಲಕಾ ಕಟ್ಟೆಮನೆ)

ಅಲಕಾರ ಕಥೆಗಳಲ್ಲಿ, ಆಧುನಿಕತೆ, ನಗರೀಕರಣ, ಫಾರಿನ್‌ ವ್ಯಾಮೋಹಕ್ಕೆ ಬಿದ್ದು, ತಮ್ಮ ಅಸ್ಮಿತೆಯನ್ನು ಕಳೆದುಕೊಂಡು ಏದುಸಿರು ಬಿಡುತ್ತಿರುವ ಇಂದಿನ ಹಳ್ಳಿಗಳ ಮನೋಜ್ಞ ಚಿತ್ರಣವಿದೆ. ಎಲ್ಲಿಯೂ ಯಾರನ್ನೂ ದೂಷಿಸದೆ, ʻಕಾಲನ ಮಹಿಮೆ ಮಾತ್ರ ಇದುʼ ಎಂಬಂತಹ ನಿರ್ಲಿಪ್ತ ನಿರೂಪಣೆ ಕತೆಗಾರ್ತಿಯ ಶಕ್ತಿಯೇ ಆಗಿದೆ. ಮುದುಕರ, ಕೈಲಾಗದವರ, ʻಸೋತವರʼ ಜಗತ್ತಾಗಿರುವ ಹಳ್ಳಿಗಳಲ್ಲಿ ಹೇಗೆ ಜನ ತಮ್ಮ ಮೂಲ ಗುಣಗಳಾದ ನಿಸ್ವಾರ್ಥ, ಸರಳತೆ, ಸಹಾಯಪರತೆ, ಸಹಜೀವನಗಳಂತಹ ಉತ್ತಮ ಮೌಲ್ಯಗಳನ್ನು ಬಿಟ್ಟೂ ಬಿಡಲಾಗದೆ ಕಟ್ಟಿಕೊಂಡು ದ್ವಂದ್ವವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಹಲವು ಕಥನಗಳಲ್ಲಿ ಹೇಳಲೆತ್ನಿಸಿದ್ದಾರೆ. ಪೀಳಿಗೆಯ ನಡುವಿನ ಅಂತರ ಹೇಗೆ ಬದುಕಿನ ಅರ್ಥವನ್ನು ಅವರವರ ಮೂಗಿನ ನೇರಕ್ಕೆ ಅರ್ಥೈಸುವಂತೆ ಮಾಡುತ್ತದೆ ಎಂಬುದನ್ನು ಗುರುತಿಸಿದ್ದಾರೆ.

ಮಲೆನಾಡಿನ ಮಡಿಲಲ್ಲಿರುವ ಸಕ್ರೆಬೈಲಿನಲ್ಲಿ ಬಹುತೇಕ ನಡೆಯುವ ಕತೆಗಳು ಮನುಷ್ಯ ಸಂಬಂಧಗಳಲ್ಲಿನ ತಾಕಲಾಟಗಳನ್ನು ಬಿಂಬಿಸುತ್ತವೆ. ಸಮಾಜದ ಅಧೋಮುಖಿ ಬೆಳವಣಿಗೆಗಳನ್ನು, ಸೋಗಲಾಡಿತನವನ್ನು, ಮುಖವಾಡದ ಹಂಗನ್ನು, ಸುಖದ ಹಪಾಹಪಿಯನ್ನು, ಆಧುನಿಕತೆ ತಂದೊಡ್ಡಿರುವ ಅಪಾಯಗಳನ್ನು, ವ್ಯಕ್ತಿತ್ವದ ವಿಕಾಸವನ್ನು, ಬದುಕಿನ ಸಂಕೀರ್ಣತೆಗಳನ್ನು ಕತೆಗಳು ಹದವಾಗಿ ಮೈಗೂಡಿಸಿಕೊಂಡು ಬೆಳೆದಿವೆ.

ಸಂಕಲನದ ಪ್ರಥಮ ಕತೆ ʻವಸ್ತ್ರಗಳುʼ ಅಲ್ಲಿ, ಮಾನಸಿಕ ಅಸ್ವಸ್ಥನೊಬ್ಬ ಹೆಂಗಸರ ಒಳ ಉಡುಪುಗಳನ್ನು ಕದಿಯುವ ಪ್ರಕರಣವಿದೆ. ಇಲ್ಲಿ ಅಲಕಾ, ಈ ಮೂಲಕ ಇಡೀ ಹೆಣ್ಣು ಜಾತಿಗೆ ಕಂಟಕಪ್ರಾಯವಾಗಿರುವ ಹಲವು ಸಮಸ್ಯೆಗಳು, ಇಂತಹಾ ಅಸ್ವಸ್ಥತೆಯ ಹಿಂದೆ ಕೆಲಸ ಮಾಡುವುದನ್ನು ಅದೆಷ್ಟು ಬುದ್ಧಿವಂತಿಕೆಯಿಂದ ತೆರೆದಿಡುತ್ತಾರೆಂದರೆ, ಸಮಸ್ಯೆಯ ಕುರಿತು ಓದುಗ ಆಮೂಲಾಗ್ರವಾಗಿ ಚಿಂತನೆಗೆ ತೊಡಗುವಂತೆ ಪ್ರೇರೇಪಿಸುತ್ತದೆ.

ʻತನುವಿನೊಳಗೆ ಅನುದಿನವಿದ್ದುʼ ಕತೆ, ಮೇಲುನೋಟಕ್ಕೆ ಸರಳವೆನಿಸುವ, ಮರದ ಕಸದ ಸಮಸ್ಯೆ ಹೇಗೆ ಎರಡು ಕುಟುಂಬಗಳ ನೆಮ್ಮದಿ, ಸಾಮರಸ್ಯಗಳನ್ನು ಹಾಳುಗೆಡವುತ್ತದೆ ಎಂದು ಹೇಳುತ್ತದೆ. ಕತೆ ಓದುಗನ ಮನಸ್ಸಿನಲ್ಲಿ ಒಂದು ಮುಂದುವರೆದ ಭಾಗವಾಗಿ ರೂಪುಗೊಂಡು, ಜಗತ್ತಿನಲ್ಲಿ ಇರುವ ಗಡಿ ಸಮಸ್ಯೆ ಎಷ್ಟು ಸಂಕೀರ್ಣವಾದುದು ಎಂಬಲ್ಲಿಗೆ ತೆಗೆದುಕೊಂಡು ಹೋಗಿ, ಕುಟುಂಬದಿಂದ, ʻವಸುದೈವ ಕುಟುಂಬಕಂʼ ಸಾಧಿಸುವುದು ಹೇಗೆ ಎಂಬ ಜಿಜ್ಞಾಸೆಯನ್ನು ಹುಟ್ಟು ಹಾಕುವುದು ಸ್ವಾರಸ್ಯಕರವೆನಿಸುತ್ತದೆ.

ಅಲಕಾರ ಕಥೆಗಳಲ್ಲಿ, ಆಧುನಿಕತೆ, ನಗರೀಕರಣ, ಫಾರಿನ್‌ ವ್ಯಾಮೋಹಕ್ಕೆ ಬಿದ್ದು, ತಮ್ಮ ಅಸ್ಮಿತೆಯನ್ನು ಕಳೆದುಕೊಂಡು ಏದುಸಿರು ಬಿಡುತ್ತಿರುವ ಇಂದಿನ ಹಳ್ಳಿಗಳ ಮನೋಜ್ಞ ಚಿತ್ರಣವಿದೆ. ಎಲ್ಲಿಯೂ ಯಾರನ್ನೂ ದೂಷಿಸದೆ, ʻಕಾಲನ ಮಹಿಮೆ ಮಾತ್ರ ಇದುʼ ಎಂಬಂತಹ ನಿರ್ಲಿಪ್ತ ನಿರೂಪಣೆ ಕತೆಗಾರ್ತಿಯ ಶಕ್ತಿಯೇ ಆಗಿದೆ.

ʻಶಿಥಿಲʼ ಕಥೆ, ಸಂಬಂಧಗಳಿಗೆ ರೂಪಕದಂತೆ ಇದೆ. ʻಮನಸ ಹಾದಿಯಲೊಂದು ಮನೆಯ ಮಾಡಿʼ ಕತೆ, ಮನುಷ್ಯನ ಸುಖದ ವ್ಯಾಖ್ಯಾನವನ್ನು ಪ್ರಶ್ನಿಸುವಂತಹ ಒಂದು ಪ್ರಯತ್ನ. ʻಕನಸೆಂಬೋ ಕುದುರೆಯ ಬೆನ್ನ ಹತ್ತಿʼ, ಮನುಷ್ಯನ ಸಂಬಂಧಗಳು, ನಿರೀಕ್ಷೆಗಳು, ಜವಾಬ್ದಾರಿಗಳು ಹೇಗೆ ನಿಲ್ಲದ ನಾಗಾಲೋಟ ನಡೆಸಿ ಮನುಷ್ಯನ ಜೀವನ ನಿಂತ ನೀರಾಗದಂತೆ ನೋಡಿಕೊಳ್ಳುತ್ತವೆ ಎಂದು ಚಿತ್ರಿಸುತ್ತದೆ. ʻಬಯಲು ಆಲಯವೆರಡೂ ನಯನದೊಳಗೋʼ ಕಥೆ, ದಾಂಪತ್ಯದ ಸುಂದರ ವ್ಯಾಖ್ಯೆ ಕಟ್ಟಿಕೊಡುತ್ತದೆ. ಜೊತೆಗೆ, ಸಂಬಂಧಗಳು ರಕ್ತದಿಂದಲ್ಲ, ಭಾವದಿಂದ ಏರ್ಪಡುವ ಸುಂದರ ಬಂಧುರಗಳು ಎಂಬುದನ್ನು ರೂಪಿಸುವ ಕಥನ.

(ನಿವೇದಿತಾ ಎಚ್. ಮೈಸೂರು)

ʻಕೊಂಡಿʼ ಕತೆಯಲ್ಲಿ ಅಲಕಾ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತಾರೆ. ವಯೋವೃದ್ಧ ಸೋದರರಾದ ಸುಬ್ಬಜ್ಜ, ಸೂರಜ್ಜರ ಸಂಬಂಧ ವಿಚಿತ್ರವಾದುದು. ವಯಸ್ಸಿನ ಹುಮ್ಮಸ್ಸಿರುವಾಗ ಒಬ್ಬರನ್ನೊಬ್ಬರು ಆಶ್ರಯಿಸದ ಸೋದರರದು, ಮಕ್ಕಳ ವಿಷಯದಲ್ಲಿ ನಿರ್ವ್ಯಾಜ ಪ್ರೇಮ ತುಂಬಿದ ಅಂತಃಕರಣ. ವಯಸ್ಸಾಗಿ, ದೇಹದಲ್ಲಿ ಕಸುವು ತೀರಿದಾಗ ಒಬ್ಬರನ್ನೊಬ್ಬರು ಆಶ್ರಯಿಸುವ ಇವರು, ಆದರ್ಶ ಸೋದರರಂತೆ ಬಾಳುವುದು ಸೋಜಿಗ ಹುಟ್ಟಿಸುತ್ತದೆ. ಮಗನ ಮದುವೆ ಸುಗಮವಾಗಿ ನಡೆಯಲೆಂದು ಸೂರಜ್ಜನನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವ ನಿರ್ಣಯಕ್ಕೆ ಸುಬ್ಬಜ್ಜ ದಂಪತಿಗಳು ಬರುತ್ತಾರಾದರೂ, ಅಲ್ಲಿ ನಿಜವಾದ ಮಾನವೀಯ ಅಂತಃಕರಣ, ಪ್ರೇಮ ಕೆಲಸ ಮಾಡುವುದು ಅಚ್ಚರಿಯನ್ನುಂಟು ಮಾಡುತ್ತದೆ. ಎಂದಿದ್ದರೂ ಮನುಷ್ಯ ʻಮಾನವತೆಯʼ ಮೂರ್ತಿಯೇ ಎಂಬುದನ್ನು ಅಲಕಾ ಹೇಳಬಯಸಿದಂತಿದೆ. ಸಂಕಲದಲ್ಲಿ ಇದು ನನಗೆ ಪ್ರಿಯವೆನಿಸಿದ ಕಥೆ.

ʻಹರಿಚಿತ್ತವೆಂಬ ಹರಿಗೋಲುʼ ಕತೆ, ಮನುಷ್ಯ ವಯಸ್ಸಿನ ಜೊತೆ ಮಾಗುತ್ತಾ, ತನ್ನ ರಾಗ-ದ್ವೇಷಗಳನ್ನು ಕಳೆದುಕೊಂಡು ಸಮಚಿತ್ತನಾಗುತ್ತಾನೆ, ಹಾಗೆ ಆದರೆ ಮಾತ್ರ ಅವನ ʻಮಾನವʼನೆಂಬ ಅಸ್ಮಿತೆ ಸಾರ್ಥಕ, ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ. ಮಗ-ಸೊಸೆ, ಮೊಮ್ಮಗಳ ಸಾವಿಗೆ ಕಾರಣನಾದ ವ್ಯಕ್ತಿಯ ಮಗನಿಗೆ ಮೊಮ್ಮಗಳನ್ನು ಕೊಡುವ ನಿರ್ಧಾರದ ಹಿಂದಿನ ಆ ʻಮಾನಸಿಕ ವಿಕಾಸʼ ಅದ್ಭುತ.

ಹೀಗೆ ಸಂಕಲನದ ಪ್ರತಿಯೊಂದು ಕತೆಯೂ, ಓದುಗ ಮಹಾಶಯ ತನ್ನೊಳಗೆ ತಾನೆ ಒಂದು ಇಣುಕು ಹಾಕಿಕೊಳ್ಳುವಂತೆ ಮಾಡುವ ಗುಣ ಹೊಂದಿರುವುದು ಕತೆಯ ಯಶಸ್ಸು. ಹವ್ಯಕ ಕನ್ನಡದ ಹಿತಮಿತವಾದ ಬಳಕೆ, ಕತೆಗಳಿಗೆ ಪ್ರಾದೇಶಿಕ ಸೊಗಡನ್ನು ನೀಡಿ ಸುಂದರಗೊಳಿಸಿದೆ. ಎಲ್ಲ ಕತೆಗಳ ಶೀರ್ಷಿಕೆಗಳೇ ಬಹಳಷ್ಟನ್ನು ಹೇಳದೆಯೇ ಹೇಳಿಬಿಡುವುದು, ಕತೆಗಾರ್ತಿಯ ಕೆಲಸ ಹಗುರವಾಗಿಸುವುದರ ಜೊತೆಗೆ, ಶೀರ್ಷಿಕೆಗಳ ಆಯ್ಕೆಯಲ್ಲಿ ಅವರು ವಹಿಸಿರುವ ಜಾಣ್ಮೆಯನ್ನೂ ತೆರೆದಿಡುತ್ತವೆ.