ಈ ಪುಸ್ತಕದ ನಿಜವಾದ ಸತ್ವ ಇರುವುದು ಅಮೆರಿಕಾದ ಜಾಗಗಳ ವರ್ಣನೆಯಲ್ಲಲ್ಲ. ಅವರು ಅಮೆರಿಕಾ ಮತ್ತು ಕೆನಡಾ ಪ್ರವಾಸವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡರು ಅನ್ನುವುದರಲ್ಲಿ. ಅವರ ಪ್ರತಿ ನಡೆ ನುಡಿಯಲ್ಲೂ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಂತ ಎಲ್ಲವೂ ಗಂಭೀರವಾಗಿಯೇ ಸಾಗುತ್ತದೆ ಅಂತ ಅಲ್ಲ, ತಪ್ಪಿ ಅವರು ಕೆಎಫ್‌ಸಿ ಚಿಕನ್ ತಿನ್ನಲು ಹೋದ ಪ್ರಸಂಗ, ಆಮೇಲೆ ಡೋನಟ್ ಪರಿಚಯವಿಲ್ಲದ ಅವರು ಅನುಮಾನವೇ ಬೇಡವೆಂದು ತಿನ್ನದಿರುವುದು .. ಹೀಗೆ ಅಲ್ಲಿನ ಅನೇಕ ಘಟನೆಗಳನ್ನು ನವಿರು ಹಾಸ್ಯದಿಂದ ವರ್ಣಿಸುತ್ತಾರೆ. ತಮಗೆ ಸಿಕ್ಕ ಸೀಮಿತ ಅವಕಾಶದಲ್ಲೇ ಆದಷ್ಟೂ ಅರ್ಥಪೂರ್ಣವಾಗಿ ಬಳಸಿಕೊಂಡ ಬಗೆ ಇಷ್ಟವಾಯಿತು‌.
ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಅಮೆರಿಕಾದಲ್ಲಿ ಗೊರೂರು’ ಕೃತಿಯ ಪರಿಚಯ

ಈ ಬಾರಿ ಹಬ್ಬಕ್ಕೆ ಊರಿಗೆ ಹೋದಾಗ ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ ಬಗ್ಗೆ ಬರೆಯಬೇಕೆಂದು ಶುರುಮಾಡಿದ್ದೆ. ಅದನ್ನು ಮುಂದುವರೆಸಲು ಪುಸ್ತಕವನ್ನು ಊರಿನಿಂದ ಮೈಸೂರಿಗೆ ತರಬೇಕು ಅನ್ನುವಷ್ಟರಲ್ಲಿ ಜಾಗದ ಸಮಸ್ಯೆ ಎದುರಾಯಿತು. ಸಾವಿರ ಪುಟಗಳ ಮೇಲಿನ ಪುಸ್ತಕದ ಬಗ್ಗೆ ಸುಮ್ಮನೇ ಬರೆಯಲು ಆಗುವುದಿಲ್ಲ. ಅದರಲ್ಲೂ ಕುವೆಂಪುರವರಂತ ಮಹಾನ್ ವ್ಯಕ್ತಿಯ ಜೀವನಚರಿತ್ರೆ ಬಗ್ಗೆ ಬರೆಯಬೇಕೆಂದರೆ ಚೂರಾದರೂ ಸಿದ್ಧತೆ ಬೇಕು. ಸರಿ, ಯಾವುದರ ಬಗ್ಗೆ ಬರೆಯಲಿ? ಎಂದು ಯೋಚಿಸುತ್ತಿರುವಾಗ ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಅಮೆರಿಕಾದಲ್ಲಿ ಗೊರೂರು’ ಕೃತಿ ಕಣ್ಣಿಗೆ ಬಿತ್ತು.

ಹೈಸ್ಕೂಲಿನಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಓದಿದ ನನ್ನ ಓರಗೆಯವರಿಗೆ ನೆನಪಿರಬಹುದು. ಎಂಟನೆ ತರಗತಿಯ ಮೊದಲ ಪಾಠ ಗೊರೂರು ಅವರು ಬರೆದ ‘ನಾಣಿ’ ಆಗಿತ್ತು (ಅವರ ‘ನಮ್ಮೂರ ರಸಿಕರು’ ಕೃತಿಯಿಂದ ಆಯ್ದುಕೊಂಡ ಪ್ರಬಂಧ). ಅಲ್ಲಿ ಲೇಖಕರ ಪರಿಚಯದಲ್ಲಿ ಅವರು ಅಮೆರಿಕಾದಲ್ಲಿ ಗೊರೂರು ಎಂಬ ಪ್ರವಾಸಕಥನ ಬರೆದ ಉಲ್ಲೇಖವಿತ್ತು. ಆಗ ಪ್ರವಾಸ ಕಥನಗಳನ್ನು ಅತೀವ ಕುತೂಹಲದಿಂದ ಓದುತ್ತಿದ್ದ ಸಮಯ. ತೇಜಸ್ವಿಯವರ ʻಅಲೆಮಾರಿಯ ಅಂಡಮಾನ್ ʼ ಮನಸೂರೆಗೊಂಡಿತ್ತು. ಮುಂದೆ ಓದಬೇಕಾದ ಪ್ರವಾಸ ಕಥನ ಗೊರೂರು ಅವರದ್ದೇ ಎಂದು ತೀರ್ಮಾನಿಸಿಬಿಟ್ಟಿದ್ದೆ. ಇದನ್ನು ಖರೀದಿಸಿದ್ದು ೨೦೦೫ ರ ಮಾರ್ಚ್ ಒಂಬತ್ತರಂದು. ಹಿಂದೆಲ್ಲಾ ಪುಸ್ತಕ ಖರೀದಿಸಿದಾಗ ನನ್ನ ಹೆಸರು ಮತ್ತು ದಿನಾಂಕವನ್ನು ಬರೆದಿಡುವ ಅಭ್ಯಾಸವಿದ್ದ ಕಾರಣ ಅದು ನೆನಪಾಗುವಂತಾಯಿತು.

ಕನ್ನಡದ ಪ್ರವಾಸ ಕಥನದಲ್ಲಿ ಅತೀ ಹೆಚ್ಚು ಬಂದಿದ್ದು ಯಾವ ದೇಶದ ಬಗ್ಗೆ ಎಂದು ಪ್ರಶ್ನೆ ಮಾಡಿದರೆ ಹೆಚ್ಚಿನ ಮಂದಿ ನಿಸ್ಸಂಶಯವಾಗಿ ಅಮೆರಿಕಾವೆಂದೇ ಹೇಳುತ್ತಾರೆ ಮತ್ತು ಅದು ಸರಿ ಕೂಡಾ. ಸಾಹಿತಿಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಕೊಟ್ಟ ಕಲಾವಿದರು, ಮಗಳು-ಸೊಸೆಯ ಬಾಣಂತನಕ್ಕೆ ಹೋದ ತಂದೆ ತಾಯಿ ಅತ್ತೆ ಮಾವಂದಿರು, ಐಟಿ ಉದ್ಯೋಗಿಗಳು ಹೀಗೆ ನಾನಾ ಪ್ರಕಾರದ ಜನರು ಅವರವರ ಮಿತಿಯಲ್ಲಿ ವಿವಿಧ ಮಾಧ್ಯಮಗಳಲ್ಲಿ ಅಮೆರಿಕಾದ ಚಿತ್ರಣ ಕಟ್ಟಿಕೊಡುತ್ತಲೇ ಬಂದಿದ್ದಾರೆ. ಅದಕ್ಕೇ ಈ ದೇಶ ಜಗದ ಇನ್ನೊಂದು ತುದಿಯಲ್ಲಿದ್ದರೂ ನೆರೆಮನೆಯಂತೇ ಆಗಿದೆ. ಅದೂ ಅಲ್ಲದೇ ಭಾರತ ಬಿಟ್ಟರೆ ನಾನು ಅತೀ ಹೆಚ್ಚು ಓಡಾಡಿದ, ಹೆಚ್ಚು ಅರಿತಿರುವ ಮತ್ತು ಆಪ್ತವಾದ ದೇಶವೆಂದರೆ ಅಮೆರಿಕಾ ಸಂಯುಕ್ತ ಸಂಸ್ಥಾನವೇ. ಅದಕ್ಕೇ ೧೭ ವರ್ಷಗಳ ನಂತರ ಈ ಪುಸ್ತಕದ ಮರು ಓದಿನ ಅವಶ್ಯಕತೆ ಇತ್ತು ಮತ್ತು ಈ ಪಾಕ್ಷಿಕದ ಬರಹ ಅದನ್ನು ಹೇಳಲು ಸೂಕ್ತ ವೇದಿಕೆಯನ್ನೊದಗಿಸಿಕೊಟ್ಟಿತು.

ಗೊರೂರು ಅವರು ಅಮೆರಿಕಾ ನೋಡಿದ್ದು ೭೭ರಲ್ಲಿ, ಅಂದರೆ ಸುಮಾರು ೪೫ಕ್ಕೂ ಅಧಿಕ ವರ್ಷಗಳ ಹಿಂದೆ. ನಾನು ಓದಿದ್ದು ೨೦೦೫ರಲ್ಲಿ ಅಂದರೆ ೧೭ ವರ್ಷ ಮುಂಚೆ. ನಾನು ಅಮೆರಿಕಾದಲ್ಲಿದ್ದು ೨೦೧೭ರಿಂದ ೨೦೧೯ರ ನಡುವೆ. ಅದಕ್ಕೇ ಅಂದಿನ ಅಮೆರಿಕಾಗೂ, ವಿದ್ಯಾರ್ಥಿ ಜೀವನದಲ್ಲಿ ಓದಿದ ಅಮೆರಿಕಾದ ಕಥನಕ್ಕೂ ಮತ್ತು ಈಗ ಓದುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಟ್ಟಾರೆ ಪ್ರವಾಸ ಕಥನಗಳ ತೆಗೆದುಕೊಂಡರೆ ಹಳೆಯ ಪ್ರವಾಸ ಕಥನಗಳು ನಮಗೆ ಬೇರೆಯದೇ ಆದ ಅನುಭವ ಕೊಡುತ್ತವೆ. ಇತಿಹಾಸದ ಪುಟ ಸೇರಿದ ಎಷ್ಟೋ ಸಂಗತಿಗಳ ನೆನಪಿಸಿಕೊಡುತ್ತವೆ. ಇದು ಆ ಸಾಲಿಗೆ ಸೇರಿದ ಒಂದು ಕೃತಿ. ಈ ಸಮಯದಲ್ಲಿ ನಾನು ನೆನಪು ಮಾಡಿಕೊಳ್ಳಬಯಸುವ ಇನ್ನೊಂದು ಕೃತಿ ಶಿವರಾಮ ಕಾರಂತರ ‘ಅಪೂರ್ವ ಪಶ್ಚಿಮ’. ಕಾರಂತರ ಯುರೋಪ್ ಪ್ರವಾಸದ ಕುರಿತಾದ ಬರಹ.

ಭಾರತಾದ್ಯಂತ ಸುತ್ತಾಡಿದ ಲೇಖಕರು ಮೊದಲ ಬಾರಿಗೆ ಅಮೆರಿಕಾ ಮತ್ತು ಕೆನಡಾಕ್ಕೆ ವಿದೇಶಯಾತ್ರೆ ಹೋಗುವ ಯೋಚನೆ ಮಾಡುತ್ತಾರೆ. ಅವರ ಮಗಳು ಕೆನಡಾದಲ್ಲಿದ್ದುದು ಒಂದು ಕಾರಣವಾದರೆ ಅವರ ಮಗ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರಿಗೆ ಅವರ ಅಮೆರಿಕಾ ಪ್ರಯಾಣದ ಉಚಿತ ಟಿಕೇಟ್ ಸಿಕ್ಕಿರುತ್ತದೆ. ಆ ಕಾಲದಲ್ಲಿ ವಿದೇಶಯಾತ್ರೆಯೆಂದರೆ ಅತ್ಯಂತ ಅಪರೂಪದ ಸಂಗತಿ. ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಜೋಡಿಸಿಕೊಳ್ಳುವುದು, ಹಣಕಾಸಿನ ವ್ಯವಸ್ಥೆ, ಪ್ರಯಾಣ ಎಲ್ಲಾ ಕಷ್ಟವೇ. ಈಗ ತಂತ್ರಜ್ಞಾನದ ಕಾರಣದಿಂದ ಅದು ಸುಲಭಸಾಧ್ಯವಾಗಿದೆ. ಅದಕ್ಕೋಸ್ಕರ ಸಾಕಷ್ಟು ಶ್ರಮವಹಿಸಿ ಅಮೆರಿಕಾ ಯಾತ್ರೆಗೆ ಹೊರಡುತ್ತಾರೆ.

ಆಗ ಪ್ರವಾಸ ಕಥನಗಳನ್ನು ಅತೀವ ಕುತೂಹಲದಿಂದ ಓದುತ್ತಿದ್ದ ಸಮಯ. ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಮನಸೂರೆಗೊಂಡಿತ್ತು. ಮುಂದೆ ಓದಬೇಕಾದ ಪ್ರವಾಸ ಕಥನ ಗೊರೂರು ಅವರದ್ದೇ ಎಂದು ತೀರ್ಮಾನಿಸಿಬಿಟ್ಟಿದ್ದೆ.

ಗೊರೂರು ಅವರು ಗಾಂಧೀವಾದಿಗಳು. ಅವರ ಜೊತೆ ಒಡನಾಡಿದವರು, ಅದರ ಪ್ರಭಾವವನ್ನು ಪುಸ್ತಕದುದ್ದಕ್ಕೂ ಗುರುತಿಸಬಹುದು. ಅವರು ಮಾರ್ಗ ಮಧ್ಯ ಲಂಡನ್ನಿನಲ್ಲಿ ವಿಮಾನ ಬದಲಿಸಲು ಇಳಿದಾಗ ಅವರ ಮನಸ್ಸಲ್ಲಿ ಮೂಡುವ ತೊಳಲಾಟಗಳಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬ್ರಿಟಿಷರ ವಿರುದ್ಧ ಹೋರಾಟಮಾಡಿದ್ದ ಗೊರೂರು ಅವರು ಅಲ್ಲಿ ಕಾಲಿಡುವಾಗ ಸಿಟ್ಟುಗೊಂಡರೂ ಬ್ರಿಟಿಷರ ಒಳ್ಳೆಯ ಗುಣಗಳನ್ನು ಹೊಗಳಲು ಹಿಂಜರಿಯುವುದಿಲ್ಲ. ಗಾಂಧೀಜಿಯವರ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ, ಪ್ರವಾಸದ ಆರಂಭದಲ್ಲಿ ಅವರು ನ್ಯೂಯಾರ್ಕಿನ ಸಂಬಂಧಿಕರ ಮನೆಯಲ್ಲಿದ್ದಾಗ ವಿದ್ಯುತ್ ಒಲೆಯಲ್ಲಿ ಏನೋ ಸಮಸ್ಯೆಯಾಗಿ ಸೈರನ್ ಕೂಗಲು ಶುರುವಾಗುತ್ತದೆ‌. ಗಾಬರಿಕೊಂಡ ಅವರ ಪತ್ನಿ ಎದುರಿರುವ ಶಾಲೆಗೆ ಸಹಾಯಕ್ಕೆ ಕರೆಯಲು ಕಳಿಸಿದಾಗ ಮಕ್ಕಳು ಮತ್ತು ಶಿಕ್ಷಕರು ಅವರ ಉಡುಗೆ ಬಗ್ಗೆ ಕೇಳಿದಾಗ ಗಾಂಧಿ‌ ನೆನಪಾಗಿ ಬಂದ‌ ಕೆಲಸ ಮರೆತು ಅವರ ಬಗ್ಗೆ ಹೇಳಲು ಶುರುಮಾಡಿಬಿಡುತ್ತಾರೆ. ಅದೇ ರೀತಿ ನಯಾಗರಾ ಸಮೀಪ ಟ್ಯಾಕ್ಸಿ ಚಾಲಕರೊಬ್ಬರ ಮನೆಯಲ್ಲಿ ತಂಗುವ ಪ್ರಸಂಗ ಬಂದಾಗಲೂ ಅವರು ಗಾಂಧೀಜಿಯವರ ಬಗ್ಗೆ ಬಹಳ ಅಭಿಮಾನದ ಮಾತುಗಳನ್ನು ಮತ್ತು ಅವರೊಂದಿಗೆ ಕಳೆದ ಪ್ರಸಂಗಗಳ ಮೆಲುಕು ಹಾಕುತ್ತಾರೆ.

ಈ ಪುಸ್ತಕದ ನಿಜವಾದ ಸತ್ವ ಇರುವುದು ಅಮೆರಿಕಾದ ಜಾಗಗಳ ವರ್ಣನೆಯಲ್ಲಲ್ಲ. ಅವರು ಅಮೆರಿಕಾ ಮತ್ತು ಕೆನಡಾ ಪ್ರವಾಸವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡರು ಅನ್ನುವುದರಲ್ಲಿ. ಅವರ ಪ್ರತಿ ನಡೆ ನುಡಿಯಲ್ಲೂ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಂತ ಎಲ್ಲವೂ ಗಂಭೀರವಾಗಿಯೇ ಸಾಗುತ್ತದೆ ಅಂತ ಅಲ್ಲ, ತಪ್ಪಿ ಅವರು ಕೆಎಫ್‌ಸಿ ಚಿಕನ್ ತಿನ್ನಲು ಹೋದ ಪ್ರಸಂಗ, ಆಮೇಲೆ ಡೋನಟ್ ಪರಿಚಯವಿಲ್ಲದ ಅವರು ಅನುಮಾನವೇ ಬೇಡವೆಂದು ತಿನ್ನದಿರುವುದು ಹೀಗೆ ಅಲ್ಲಿನ ಅನೇಕ ಘಟನೆಗಳನ್ನು ನವಿರು ಹಾಸ್ಯದಿಂದ ವರ್ಣಿಸುತ್ತಾರೆ. ತಮಗೆ ಸಿಕ್ಕ ಸೀಮಿತ ಅವಕಾಶದಲ್ಲೇ ಆದಷ್ಟೂ ಅರ್ಥಪೂರ್ಣವಾಗಿ ಬಳಸಿಕೊಂಡ ಬಗೆ ಇಷ್ಟವಾಯಿತು‌.

ಅಮೆರಿಕಾದ ಪೂರ್ವ ಭಾಗಕ್ಕೆ ಭೇಟಿಕೊಟ್ಟವರೆಲ್ಲರೂ ಸಾಮಾನ್ಯವಾಗಿ ನಯಾಗರಾ ಜಲಪಾತ ನೋಡದೇ ಹಿಂತಿರುಗಿ ಬರುವುದಿಲ್ಲ. ನಾವು ಹೋದ ಅನುಭವವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದೆ. ಆದರೆ ಅವರ ಬರಹದ ಮುಂದೆ ನನ್ನದು ತೀರಾ ಎಳಸಾಗಿದೆ. ಅವರು ಕಟ್ಟಿಕೊಟ್ಟಿರುವ ನಯಾಗರಾ ಜಲಪಾತದ ಚಿತ್ರಣ ನಿಜಕ್ಕೂ ಅದ್ಭುತವಾದುದು. ಒಂದೇ ಒಂದು ಉದಾಹರಣೆ ಕೊಡುತ್ತೇನೆ, ನಾನು ಅಲ್ಲಿನ Maid of Mist ಅನ್ನು ಹೇಗೆ ಕನ್ನಡಾನುವಾದ ಮಾಡಬೇಕೆಂದು ಬಹಳ ತಲೆಕೆಡಿಸಿಕೊಂಡಿದ್ದೆ. ಈ ಹೊತ್ತಿಗೆಯಲ್ಲಿ ಮುಂಚೆ ಓದಿದ್ದೆಲ್ಲಾ ಹಳ್ಳ ಹಿಡಿದಿತ್ತು. ಈಗ ಇನ್ನೊಮ್ಮೆ ಓದಿದಾಗ ಅವರು ಅದನ್ನು ಮಂಜುಕನ್ಯೆ ಎಂದು ಬಹಳ ಸುಂದರವಾಗಿ ಅನುವಾದಿಸಿದ್ದರು‌. ಅವರ ತಾಯ್ನುಡಿ ತಮಿಳು, ಪುಸ್ತಕದಲ್ಲಿ ಅನೇಕಬಾರಿ ಅವರು ಪುಳಿಯೊಗರೆ ತಿಂದುದರ ಉಲ್ಲೇಖ ಬರುತ್ತದೆ. ಆದರೆ ಅದನ್ನು ಎಲ್ಲೂ ಪುಳಿಯೊಗರೆ ಎಂದು ಕರೆಯದೇ ಹುಳಿಯನ್ನ ಎಂದು ಕರೆದಿದ್ದಾರೆ. ಅವರ ಪದಬಳಕೆಯ ಸೂಕ್ಷ್ಮತೆಯ ಬಗ್ಗೆ ಹೇಳಲು ಇದನ್ನು ತೆಗೆದುಕೊಂಡೆ.

ಹೆಚ್ಚಾಗಿ ಅಮೆರಿಕಾಗೆ ಹೋದವರು ಹಿತಕರ ವಾತಾವರಣವುಳ್ಳ ಪಶ್ಚಿಮ ಕರಾವಳಿಯನ್ನು ಇಷ್ಟಪಡುತ್ತಾರೆ. ಆದರೆ ಗೊರುರು ಅವರ ಲಾಸ್ ಎಂಜಲಿಸ್ ಕುರಿತ ಅಧ್ಯಾಯ ಓದಿದಾಗ ಅದು ಅವರಿಗೆ ಅಷ್ಟು ಇಷ್ಟವಾಗದ ಹಾಗೆ ಭಾಸವಾಯಿತು. ಪಶ್ಚಿಮ ಕರಾವಳಿಯ ಬಗೆಗೆ ವಿಶೇಷವಾಗಿ ಏನೂ ಬರೆಯದೇ ಡಿಸ್ನಿಲ್ಯಾಂಡಿನ ಬಗ್ಗೆಯೇ ಜಾಸ್ತಿ ಬರೆದಿದ್ದಾರೆ. ನಾವು ಆರೇಳು ತಿಂಗಳು ಲಾಸ್ ಎಂಜಿಲಿಸ್ ನಗರದಲ್ಲಿದ್ದರೂ ಡಿಸ್ನಿ ಲ್ಯಾಂಡಿಗೆ ಭೇಟಿ ಕೊಡಲು ಆಗಿರಲಿಲ್ಲ. ಪ್ರವೇಶ ಶುಲ್ಕ ದುಬಾರಿ ಅನ್ನುವುದು ಒಂದು ಕಾರಣವಾದರೆ ಮಗ ಬಹಳ ಸಣ್ಣವನಿದ್ದ, ಆಮೇಲೆ ಹೋದರಾಯಿತು ಅಂದುಕೊಂಡಿದ್ದೆವು‌. ಆದರೆ ಆ ಊರನ್ನು ನಿರೀಕ್ಷೆಗೂ ಮೀರಿ ಬೇಗ ಬಿಡಬೇಕಾಯಿತು. ಇಲ್ಲಿ ಯಾಕೋ ಏನೋ ಡಿಸ್ನಿ ಲ್ಯಾಂಡ್ ಕುರಿತ ಅಧ್ಯಾಯ ನನಗೆ ಅಷ್ಟು ಆಸಕ್ತಿ ಹುಟ್ಟಿಸಲಿಲ್ಲ.

ಇಡೀ ಪುಸ್ತಕ ಓದಿದಾಗ ನಮಗೆ ಗೊರೂರು ಅವರ ವ್ಯಕ್ತಿತ್ವದ ಒಂದು ಚಿಕ್ಕ ಚಿತ್ರಣ ಸಿಗುತ್ತದೆ. ಅವರೆಷ್ಟು ಧಾರ್ಮಿಕರೋ, ಭಾರತದ ಪರಂಪರೆ ಸಂಸ್ಕೃತಿಗಳ ಬಗ್ಗೆ ಗೌರವ ಉಳ್ಳವರೋ ಅಷ್ಟೇ ಉದಾರವಾಗಿ ಬೇರೆ ಸಂಸ್ಕೃತಿಗಳ ಬಗ್ಗೆಯೂ ಯೋಚಿಸುತ್ತಿದ್ದರು. ಅನೇಕ ಬಾರಿ ಅವರ ವಿಶಾಲವಾದ ದೃಷ್ಟಿಕೋನ ಮೆಚ್ಚುಗೆ ಮೂಡಿಸುತ್ತದೆ. ಇದು ಸುಮಾರು ಹಳೆಯ ಪ್ರವಾಸ ಕಥನವಾಗಿದ್ದರಿಂದ ಕೆಲವೊಮ್ಮೆ ವರ್ತಮಾನದೊಡನೆ ಸಮೀಕರಿಸಿಕೊಳ್ಳುವುದಕ್ಕೆ ಚೂರು ತೊಡಕಾಗುವಂತೆ ಅನ್ನಿಸಿದರೂ ಬಹಳ ಸಲೀಸಾಗಿ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕದ ಈಗಿನ ಲಭ್ಯತೆ, ಬೆಲೆ ಇತ್ಯಾದಿಗಳ ಬಗ್ಗೆ ಹುಡುಕಲು ಹೋಗಿಲ್ಲ. ಗ್ರಂಥಾಲಯಗಳಲ್ಲಿ ಲಭ್ಯವಿರಬಹುದು. ಸಿಕ್ಕರೆ ಓದಲು ಮರೆಯದಿರಿ.