ಬೀಜಗಣಿತವನ್ನು ಕಲಿಸುತ್ತಿದ್ದಾಗ ಮೇಷ್ಟ್ರು 4x ಗೆ 3y ಸೇರಿಸಿದರೆ ಎಷ್ಟಾಗುತ್ತದೆ ಎನ್ನುವುದನ್ನು ಅವರೆಷ್ಟು ಬಾರಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ನಿಷ್ಕ್ರಿಯಗೊಂಡಂತಿದ್ದ ನಮ್ಮ ಮೆದುಳೊಳಗೆ ಇಳಿಯದೆ ನಮ್ಮೆಲ್ಲರ ಉತ್ತರ ‘ಏಳು’ ಎಂದೇ ಇರುತ್ತಿತ್ತು.  ಅವರಿಗೆ ಕೊನೆ ಕೊನೆಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ಭಿನ್ನವಾದ ಉದಾಹರಣೆಯನ್ನು ನೀಡುತ್ತಾ “ಹೆಲೊ ಜೆಂಟಲ್‌ಮೆನ್ಸ್, ನಾಲ್ಕು ಕುದ್ರಿಗಳೊಳಗ ಮೂರು ಕತ್ತಿಗಳನ್ನ ಕುಡಿಸಿದ್ರ ಎಷ್ಟ್ ಆಗ್ತೆತಿ” ಅಂದಾಗಲೂ ನಾವು ಏಳು ಅಂತಲೇ ಒದರಿಬಿಡುತ್ತಿದ್ದೆವು. ನಮ್ಮ ದಡ್ಡತನಕ್ಕೆ ಅವರು ಹಣಿ ಹಣಿ ಜಜ್ಜಿಕೊಂಡು ಮರುಕಪಟ್ಟು “ನಾಲ್ಕು ಕುದ್ರಿಗೆ ಮೂರು ಕತ್ತಿ ಸೇರಿದ್ರ ಏಳು ಆಗಲ್ಲ ಕಣ್ರಲೇ, ಕುದ್ರಿ ಕುದ್ರಿನ… ಕತ್ತಿ ಕತ್ತಿನ…. ಅವು ಯಾವತ್ತು ಒಂದ ಅಲ್ಲ ಎನ್ನುತ್ತಿದ್ದರು. ʻತಳಕಲ್‌ ಡೈರಿʼಯಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್‌ ತಳಕಲ್‌

ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಎನ್ನುವುದು ನಿತ್ಯ ಹರಿದ್ವರ್ಣ ಕಾಡಿನ ಹಾಗೆ, ಸದಾ ಹಚ್ಚ ಹಸಿರು. ಅಲ್ಲಿರುವಷ್ಟು ಖುಷಿ, ನಿಷ್ಕಲ್ಮಶ ಮನಸು ಮತ್ತೆ ಜೀವನದ ಯಾವ ಘಟ್ಟದಲ್ಲಿಯೂ ಬರಲಾರದು. ಸಣ್ಣ ಸಣ್ಣ ಅಂಶಗಳಿಗೂ ಕಣ್ಣರಳಿಸಿ ಕುತೂಹಲಗೊಳ್ಳುತ್ತಿದ್ದ ಪರಿ ಈಗೆಲ್ಲಿ? ಈಗಿನ ಯಾವ ದೊಡ್ಡ ಖುಷಿಗಳೂ ಎಳೆವೆಯ ಪುಳಕವನ್ನು ಕೊಡಬಲ್ಲವು? ನಮ್ಮ ಕಡೆ ಅಪರೂಪಕ್ಕೊಮ್ಮೆ ಧೋ ಎಂದು ಮಳೆ ಸುರಿದಾಗ ಕೆರೆಯಂತಹ ಹೊಂಡದಲ್ಲಿ ನಿಂತ ನೀರೊಳಗೆ ಇಳಿದು ಲಪಾಟಿ(ಲುಂಗಿ)ಯಲ್ಲಿ ಮೀನುಗಳನ್ನು ಹಿಡಿದು ಸುಟ್ಟುಕೊಂಡು ತಿಂದಾಗ ಸಿಗುತ್ತಿದ್ದ ಆ ಪರಮ ಸುಖ ಈಗ ಯಾವ ಮೃಷ್ಟಾನ್ನ ಭೋಜನದಲ್ಲಿದೆ?

ಪಂಚಮಿ ಬಂತೆಂದರೆ ಮರಗಳಿಗೆ ಇಳಿಬಿದ್ದಿರುತ್ತಿದ್ದ ಜೋಕಾಲಿಯೊಳಗೆ ಜೀಕುತ್ತಿದ್ದ ಹುಮ್ಮಸ್ಸು, ಜೂಜಾಟಗಳಲ್ಲಿ ಯಾರು ಗೆಲ್ಲಬಹುದೆನ್ನುವ ಕುತೂಹಲ, ಗಣೇಶ ಚತಿರ್ಥಿಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದ ಯತ್ರಾ ಪಿತ್ರಾ ಡ್ಯಾನ್ಸೂ, ಹುಚ್ಚುಚ್ಚಾಗಿ ಆಡುತ್ತಿದ್ದ ನಾಟಕದ ಡೈಲಾಗುಗಳೂ, ಬನ್ನಿ ಹಬ್ಬ ಬಂತೆಂದರೆ ಬನ್ನಿ ಗಿಡದ ಎಲೆಗಳನ್ನು ಹರಿದುಕೊಂಡು ಅದನ್ನೆ ಬಂಗಾರವೆಂದು ಭಾವಿಸಿ ಒಬ್ಬರಿಗೊಬ್ಬರಿಗೆ ಹಂಚಿಕೊಳ್ಳುತ್ತಾ ‘ಬನ್ನಿ ತಗೊಂಡು ಬಂಗಾರದಂಗ ಇರಾಣ’ ಎಂದು ಹೇಳುತ್ತಿದ್ದ ಆ ಮುಗ್ಧತೆ ಈಗ ಎಲ್ಲಿಯಾದರೂ ಹುಡುಕಿದರೆ ಸಿಕ್ಕೀತೆ? ಅಂದು ನಾವು ಚಿಕ್ಕವರಾಗಿದ್ದಾಗಿನ ನಿಷ್ಕಲ್ಮಶ ಭಾವನೆಗಳು ಇಂದಿನ ಜನ್ರೇಶನ್‌ನಲ್ಲಿ ಬಯಸಬಹುದೆ? ಕಾಲವೇ ಹೇಳಬೇಕು.

ಆಗೆಲ್ಲ ಯಾವುದೇ ಹಬ್ಬವಿರಲಿ, ಕಾರ್ಯಕ್ರಮವಿರಲಿ, ಜಾತ್ರೆಯಿರಲಿ ಊರಿನಲ್ಲಿ ಮತ್ಯಾವುದೋ ಚಟುವಟಿಕೆಗಳು ನಡೆಯುತ್ತಿದ್ದರೆ ಗೆಳೆಯರೊಂದಿಗೆ ಬೆರೆತು ಖುಷಿಪಟ್ಟಿದ್ದಕ್ಕೆ ಕಡತಗಳೇನೂ ಇಟ್ಟಿಲ್ಲವಾದರೂ ನಮ್ಮ ಸ್ಮೃತಿಪಟಲದಲ್ಲಿ ಅವು ಒಂದೊಂದು ಅಧ್ಯಾಯಗಳಾಗಿ ಉಳಿದುಹೋಗಿವೆ. ಈಗ ಅವುಗಳನ್ನು ನೆನೆಪಿಸಿಕೊಂಡರೆ ನಾವು ಬೆಳೆದು ದೊಡ್ಡವರಾಗಿ ಎಷ್ಟೊಂದು ಗಂಭೀರವಾದೆವಲ್ಲಾ ಎಂದು ಪ್ರಶ್ನಿಸಿಕೊಂಡರೆ ಉತ್ತರ ಖಂಡಿತವಾಗಿಯೂ ಸಿಗುವುದಿಲ್ಲ.

ನಮ್ಮ ಬಾಲ್ಯದಲ್ಲಿಯ ಹಬ್ಬ, ಆಟಗಳು, ಗೆಳೆಯರೊಂದಿಗಿನ ಚೇಷ್ಟೆಗಳ ಜೊತೆಗೆ ಕೊನೆಯವರೆಗೂ ನಮ್ಮ ನೆನೆಪಿನಲ್ಲಿ ಉಳಿಯುವದೆಂದರೆ ನಮ್ಮ ಶಾಲಾ ಹಂತದ ಮಾಸ್ತಾರ್‌ಗಳು. ಕೆಲವೊಬ್ಬರಿಗೆ ಕಾಲೇಜಿನ ಉಪನ್ಯಾಸಕರೂ ಬಹಳಷ್ಟು ನೆನಪಿನಲ್ಲಿ ಉಳಿದುಕೊಂಡು ಆಗಾಗ ಮನಸಿನ ಕಿಟಕಿಯೊಳಗಿಂದ ಇಣುಕುತ್ತಲೇ ಇರುತ್ತಾರೆ. ನಾವು ಶಾಲೆಗೆ ಹೋಗುವಾಗ ನಮಗೆ ಅರಿವಿಲ್ಲದಂತೆ ಯಾರೋ ಒಬ್ಬ ಮಾಸ್ತರ‍್ರು ಅಥವಾ ಟೀರ‍್ರು ಆದರ್ಶ ವ್ಯಕ್ತಿಯಾಗಿ ನಮ್ಮೊಳಗೆ ಠಿಕಾಣಿ ಹೂಡಿರುತ್ತಾರೆ. ನಮ್ಮ ನೆಚ್ಚಿನ ಟೀಚರ್, ನಮ್ಮ ಮೆಚ್ಚಿನ ಮಾಸ್ತಾರ್ ಆಗಿ ಜೀವನದ ಪ್ರತಿ ಹಂತದಲ್ಲೂ ನಮ್ಮೊಳಗೆ ಕುಳಿತು ಬದುಕಿನ ದಾರಿಗಳನ್ನು ಆಗಾಗ ನಿರ್ದೇಶಿಸುತ್ತಿರುತ್ತಾರೆ. ಅವರು ಯಾವಾಗಲೋ ಯಾವ ಸಂದರ್ಭದಲ್ಲೋ ಹೇಳಿದ ಒಂದು ಮಾತು, ಪ್ರೋತ್ಸಾಹದಾಯಕ ನುಡಿ, ತಪ್ಪು ಮಾಡಿದಾಗ ತಿದ್ದುವುದಕ್ಕಾಗಿ ಬೈಯ್ದಿದ್ದ ಬೈಗುಳ, ಸಣ್ಣ ಬೆಂಬಲ, ಲೆಕ್ಕ ಮಾಡಿದ್ದಕ್ಕೋ ಪದ್ಯವೊಂದನ್ನು ಕಂಠಪಾಠ ಮಾಡಿ ಒಪ್ಪಿಸಿದ್ದಕ್ಕೋ, ವಿಜ್ಞಾನದ ಚಿತ್ರ ಬಿಡಿಸಿ ತೋರಿಸಿದ್ದಕ್ಕೋ ಅವರು ಶಹಬ್ಬಾಶ್ ಅಥವಾ ವೆರಿ ಗುಡ್ ಎಂದು ಬೆನ್ನು ತಟ್ಟುವ ಆ ಕೈಗಳನ್ನೆಲ್ಲಾ ನೆನೆಸಿಕೊಂಡು ಮುಗುಮ್ಮಾಗುತ್ತೇವೆ. ಅವರ ಫೋನ್ ನಂಬರ್ ಇದ್ದರೆ ಕರೆ ಮಾಡಿ ಮಾತನಾಡುತ್ತೇವೆ. ಶಿಕ್ಷಕರ ದಿನಾಚರಣೆ ಬಂತೆಂದರೆ ಶುಭಾಶಯವನ್ನೋ ಉಡುಗೊರೆಯನ್ನೋ ಕಳುಹಿಸಿ ಖುಷಿಗೊಳ್ಳುತ್ತೇವೆ. ಸಾಧ್ಯವಾದರೆ ಗುರುವಂದನಾ ಕಾರ್ಯಕ್ರಮ ಮಾಡಿ ಸತ್ಕರಿಸುತ್ತೇವೆ.

ಬಾಲ್ಯದಲ್ಲಿ ಯಾವುದೇ ಹಬ್ಬವಿರಲಿ, ಕಾರ್ಯಕ್ರಮವಿರಲಿ, ಜಾತ್ರೆಯಿರಲಿ ಊರಿನಲ್ಲಿ ಮತ್ಯಾವುದೋ ಚಟುವಟಿಕೆಗಳು ನಡೆಯುತ್ತಿದ್ದರೆ ಗೆಳೆಯರೊಂದಿಗೆ ಬೆರೆತು ಖುಷಿಪಟ್ಟಿದ್ದಕ್ಕೆ ಕಡತಗಳೇನೂ ಇಟ್ಟಿಲ್ಲವಾದರೂ ನಮ್ಮ ಸ್ಮೃತಿಪಟಲದಲ್ಲಿ ಅವು ಒಂದೊಂದು ಅಧ್ಯಾಯಗಳಾಗಿ ಉಳಿದುಹೋಗಿವೆ. ಈಗ ಅವುಗಳನ್ನು ನೆನೆಪಿಸಿಕೊಂಡರೆ ನಾವು ಬೆಳೆದು ದೊಡ್ಡವರಾಗಿ ಎಷ್ಟೊಂದು ಗಂಭೀರವಾದೆವಲ್ಲಾ ಎಂದು ಪ್ರಶ್ನಿಸಿಕೊಂಡರೆ ಉತ್ತರ ಖಂಡಿತವಾಗಿಯೂ ಸಿಗುವುದಿಲ್ಲ.

ನಮ್ಮೂರಿನ ಪ್ರೌಢ ಶಾಲೆಯಾದ ಶೀ ಅನ್ನದಾನೇಶ್ವರ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಗಣಿತವನ್ನು ಎಸ್ ಆರ್ ರಿತ್ತಿ ಎನ್ನುವವವರೂ ವಿಜ್ಞಾನವನ್ನು ಎಸ್ ಸಿ ಕೊತಾಂಬ್ರಿ ಎನ್ನುವ ಮಾಸ್ತಾರರು ಹೇಳುತ್ತಿದ್ದರು. ನನ್ನ ಬುದ್ಧಮತ್ತೆ ಅಷ್ಟಕಷ್ಟೆ ಇದ್ದಿದ್ದರಿಂದ ರಿತ್ತಿ ಮಾಸ್ತರರು ಹೇಳಿಕೊಡುತ್ತಿದ್ದ ಲೆಕ್ಕಗಳು, ಸೂತ್ರಗಳು, ಪ್ರಮೇಯಗಳು, ರೇಖಾಗಣಿತ, ಬೀಜಗಣಿತಗಳು ತಲೆಯಲ್ಲಿ ಅರ್ಧ ಮಾತ್ರವೇ ಹೊಕ್ಕರೆ ಉಳಿದರ್ಧವುಗಳು ತಲೆಯ ಮೇಲಿಂದ ಎಗರಿ ಹಾರಿ ಹೋಗಿಬಿಡುತ್ತಿದ್ದವು. ಗಣಿತ ನನಗೆ ಕಷ್ಟವಾಗುತ್ತಿದ್ದರೂ ಗಣಿತ ಹೇಳುವ ರಿತ್ತಿ ಮಾಸ್ತರರೆ ನನ್ನ ಮೆಚ್ಚಿನ ಶಿಕ್ಷಕರಲ್ಲೊಬ್ಬರಾಗಿದ್ದರು. ಸೂತ್ರಗಳನ್ನು ಪ್ರಮೇಯಗಳನ್ನು ಗಣಿತದ ಇನ್ನಿತರೆ ಅಂಶಗಳನ್ನು ನಮಗೆ ಅರ್ಥ ಮಾಡಿಸಲು ಬಳಸುತ್ತಿದ್ದ ವಿಧಾನಗಳು, ನೀಡುತ್ತಿದ್ದ ಉದಾಹರಣೆಗಳು ಗಣಿತದ ತರಗತಿ ನಮಗೆ ಬೋರಿಂಗ್ ಆಗಿಸದೆ ಯಾವಗಲೂ ಸಣ್ಣ ನಗು ಮೂಡಿಸಿ ನಾವು ಸದಾ ಚಟುವಟಿಕೆಯುಳ್ಳವರಾಗಿ ಇರುವಂತೆ ಮಾಡುತ್ತಿದ್ದದ್ದು ರಿತ್ತಿ ಮಾಸ್ತರ್‌ರವರ ಕಲಿಸುವಿಕೆಯ ವಿಧಾನದ ಒಂದು ರೂಪವಾಗಿತ್ತು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಾತ್ರ ಗಂಭೀರರಾಗಿದ್ದರೆ ಸಾಕು. ತರಗತಿಯ ವಾತಾವರಣ ಸದಾ ತಿಳಿಯಾಗಿ ಅವರು ಚಟುವಟಿಕೆಯುಳ್ಳವರಾಗಿರಬೇಕು ಎನ್ನುವುದು ಅನುಭವದಿಂದ ಕಂಡುಕೊಂಡ ಸತ್ಯ. ರಿತ್ತಿ ಮಾಸ್ತಾರರು ಮಾಡುತ್ತಿದ್ದದ್ದು ಅದನ್ನೆ.

ವಿದ್ಯಾರ್ಥಿಗಳೊಂದಿಗೆ ಬೆರೆತು ಕಲಿಕೆಯಲ್ಲಿ ಹೇಗೆ ತೊಡುಗುವಂತೆ ಮಾಡಬೇಕೆನ್ನುವುದು ಅವರಿಗೆ ಗೊತ್ತಿತ್ತು. ಕಪ್ಪು ಹಲಗೆಯ ಮೇಲೆ ಲೆಕ್ಕಗಳನ್ನು ಬಿಡಿಸುತ್ತಲೇ ನಮ್ಮ ಬದುಕಿನ ಕನಸುಗಳನ್ನು ಕೂಡಿಸುತ್ತಾ, ದುಃಖಗಳನ್ನು ಕಳೆಯುತ್ತಾ ಸಂತಸವನ್ನು ಗುಣಿಸಿ ಭಾಗಿಸುವ ಕಲೆ ಅವರಿಗೆ ಕರಗತವಾಗಿದ್ದಕ್ಕೆ ಅವರು ನನ್ನಂತಹ ನೂರಾರು ವಿದ್ಯಾರ್ಥಿಗಳ ಮೆಚ್ಚಿನ ಮಾಸ್ತಾರರಾಗಿದ್ದರು.
ಪಾಠ ಹೇಳುವುದರ ಜೊತೆಗೆ ನಾವು ದುಶ್ಚಟಗಳಿಂದ ದೂರ ಇರುವಂತೆ ಮಾಡಲು ತಮ್ಮದೇ ಉದಾಹರಣೆಯನ್ನು ನೀಡಿ ನಮಗೊಂತರ ಚಾಲೆಂಜ್ ಮಾಡುತ್ತಿದ್ದರು. “ನಾನಂತ್ರೂ ಇಲ್ಲಿಮಟ ಸರಾಯಿ ಕುಡಿದಿಲ್ಲ, ಸಿಗರೇಟ್ ಬೀಡಿ ಸೇದಿಲ್ಲ. ನಾನು ಇಂಥ ಕೆಲಸ ಮಾಡೋದನ್ನ ಎಲ್ಯಾದ್ರೂ ನೀವ್ ನೋಡಿದ್ರಂದ್ರ ಅಲ್ಲೆ ಬಂದು ನನ್ ಕಪಾಳ ಮಡ್ಡಿಗೆ ಹೊಡರ‍್ಲೆ” ಅಂತ ಹೇಳಿ ನಮಗೆ ಎಚ್ಚರಿಕೆ ರೂಪದ ತಿಳುವಳಿಕೆಯನ್ನು ನೀಡಿದಾಗ ನಮ್ಮ ಕಣ್ಣುಗುಡ್ಡೆಗಳ ಹುಬ್ಬು ಮೇಲಕ್ಕೆ ನೆಗೆಯುತ್ತಿತ್ತು. ಹೊಸ ವಿಚಾರಗಳು, ಸ್ಪೂರ್ತಿದಾಯಕ ಮಾತುಗಳು ಎಲ್ಲಿಂದಲಾದರೂ ಯಾರಿಂದಲಾದರೂ ಬಂದರು ಕೂಡ ಅದರೆಡೆಗೆ ಆಕರ್ಷಿತನಾಗುವ ನಾನು ರಿತ್ತಿ ಮಾಸ್ತಾರರನ್ನು ನಿಧಾನಕ್ಕೆ ಅನುಸರಿಸತೊಡಗಿದ್ದೆ. ಒಡಕಿನ, ದ್ವೇಶದ, ನಮ್ಮಗಳ ಮಧ್ಯೆ ಗೋಡೆಗಳೇಳುವಂತಹ ಪಾಠಗಳನ್ನ, ಬೋಧನೆಗಳನ್ನ ಯಾವ ಶಿಕ್ಷಕರೂ ಮಾಡಿರಲಾರರು ಎನ್ನುವುದು ನನ್ನ ನಂಬಿಕೆ.

ಸದ್ಯದ ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿದ್ಯಾರ್ಥಿಗಳಾದಿಯಾಗಿ ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಖೇದಕರ. ಫೋನ್ ಕೊಡಿಸಲಿಲ್ಲವೆಂದುಕೊಂಡು, ಮೊಬೈಲ್ನಲ್ಲಿ ಆಟವಾಡಲು ಬಿಡಲಿಲ್ಲವೆಂದು ಹತಾಶರಾಗಿ ಬೇರೆ ಇನ್ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೊಲೆಗಳನ್ನು ಮಾಡುವುದು ಅಥವಾ ಆತ್ಮಹತ್ಯೆಗಳಿಗೆ ಇಳಿಯುವದನ್ನೆಲ್ಲಾ ಕಲಿಸಿಕೊಟ್ಟವರು ಯಾರು? ವರ್ಗ, ಜನಾಂಗಗಳ ಮಧ್ಯೆ ಗಡಿರೇಖೆಗಳಂತಹ ಮುಳ್ಳು ಬೇಲಿಗಳು ಹುಟ್ಟಿಕೊಂಡಿದ್ದಾದರೂ ಹೇಗೆ? ಇನ್ನೊಬ್ಬರನ್ನು ಇರಿಯುವಷ್ಟು, ಮನಸ್ಸುಗಳನ್ನು ಮುರಿಯುವಷ್ಟು ನಮ್ಮಗಳ ನಡುವೆ ಬೆಂಕಿ ಹಚ್ಚಿ, ತಣ್ಣಗೆ ಉರಿಯುವ ದೀಪವನ್ನೂ ಅನುಮಾನದಿಂದ ನೋಡುವ ವಿಷಮ ಸ್ಥಿತಿ ಬಂದಿದ್ದಾದೂ ಎಲ್ಲಿಂದ?  ಪತ್ರಿಕೆಗಳ ಮೊದಲ ಪುಟದಲ್ಲಿ ನೂರಕ್ಕೆ ನೂರು ಅಂಕ ಪಡೆದು ಮೊದಲ ರ‍್ಯಾಂಕ್ ಎಂದು ಜಾಹಿರಾತು ಹಾಕಿಸಿಕೊಳ್ಳುವುದಕ್ಕಷ್ಟೆ ನಾವು ಶಾಲೆಗಳಿಗೆ ಹೋಗುತ್ತಿದ್ದೇವೆಯೇ? ಅಥವಾ ನಮ್ಮ ಶಿಕ್ಷಣ ಪದ್ಧತಿಯಲ್ಲಿಯೇ ಎಲ್ಲಾದರೂ ದೋಷವಿದೆಯೇ? ಸಾಮಾಜಿಕ ಜವಾಬ್ಧಾರಿ ಎನ್ನುವುದನ್ನು ಮರೆತುಬಿಟ್ಟಿದ್ದೇವೆಯೇ? ಗೊತ್ತಿಲ್ಲ. ಇಂದಿನ ಯುವ ಮನಸುಗಳು ಸರಿಯಾದ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳುವುದು ಉಳಿದೆಲ್ಲದವರಿಗಿಂತ ಶಿಕ್ಷಕರ ಮೇಲಿನ ಜವಾಬ್ಧಾರಿ ಪಾಲು ಹೆಚ್ಚಿನದು. ನಾನೂ ಶಿಕ್ಷಕನಾಗಿರುವುದರಿಂದ ಅದನ್ನು ನಿಭಾಯಿಸುವುದು ನನ್ನ ಮುಂದಿರುವ ಬಹುದೊಡ್ಡ ಸವಾಲು ಎಂದೆ ಭಾವಿಸಿದ್ದೇನೆ.

ರಿತ್ತಿ ಮಾಸ್ತರರನ್ನು ಇಷ್ಟಪಡಲು ಬಹಳಷ್ಟು ಕಾರಣಗಳಿವೆ. ಎಂತಹದ್ದೇ ದೊಡ್ಡ ಲೆಕ್ಕವನ್ನಾದರೂ ಅತಿ ಸರಾಗವಾಗಿ ಸುಲಭವಾಗಿ ಹೇಳಿಕೊಡುತ್ತಿದ್ದ ಶೈಲಿ ಬಹಳ ಆಪ್ತವಾಗುತ್ತಿತ್ತು. ಒಮ್ಮೆ ಅವರು ಬೀಜಗಣಿತವನ್ನು ಕಲಿಸುತ್ತಿದ್ದಾಗ 4x ಗೆ 3y ಸೇರಿಸಿದರೆ ಎಷ್ಟಾಗುತ್ತದೆ ಎನ್ನುವುದನ್ನು ಅವರೆಷ್ಟು ಬಾರಿ ಅರ್ಥ ಮಾಡಿಸಲು ಪ್ರಯತ್ನಿಸಿದರೂ ನಿಷ್ಕ್ರಿಯಗೊಂಡಂತಿದ್ದ ನಮ್ಮ ಮೆದುಳೊಳಗೆ ಇಳಿಯದೆ ನಮ್ಮೆಲ್ಲರ ಉತ್ತರ ‘ಏಳು’ ಎಂದೇ ಇರುತ್ತಿತ್ತು.  ಅವರಿಗೆ ಕೊನೆ ಕೊನೆಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ಭಿನ್ನವಾದ ಉಧಾಹರಣೆಯನ್ನು ನೀಡುತ್ತಾ “ಹೆಲೊ ಜೆಂಟಲ್‌ಮೆನ್ಸ್, ನಾಲ್ಕು ಕುದ್ರಿಗಳೊಳಗ ಮೂರು ಕತ್ತಿಗಳನ್ನ ಕುಡಿಸಿದ್ರ ಎಷ್ಟ್ ಆಗ್ತೆತಿ” ಅಂದಾಗಲೂ ನಾವು ಏಳು ಅಂತಲೇ ಒದರಿಬಿಡುತ್ತಿದ್ದೆವು. ನಮ್ಮ ದಡ್ಡತನಕ್ಕೆ ಅವರು ಹಣಿ ಹಣಿ ಜಜ್ಜಿಕೊಂಡು ಮರುಕಪಟ್ಟು “ನಾಲ್ಕು ಕುದ್ರಿಗೆ ಮೂರು ಕತ್ತಿ ಸೇರಿದ್ರ ಏಳು ಆಗಲ್ಲ ಕಣ್ರಲೇ, ಕುದ್ರಿ ಕುದ್ರಿನ… ಕತ್ತಿ ಕತ್ತಿನ…. ಅವು ಯಾವತ್ತು ಒಂದ ಅಲ್ಲ. ಅದನ್ನ ನಾಲ್ಕು ಕುದ್ರಿ ಪ್ಲಸ್ ಮೂರು ಕತ್ತಿ ಅಂತ ಹೇಳಬೇಕು ಕಣ್ರೋ” ಅಂತ ನಕ್ಕು ಬೀಜಗಣಿತದಲ್ಲಿ ೪ ಎಕ್ಸ್ ಗೆ ಮೂರು ವೈ ಕೂಡಿಸಿದಾಗ ಅದನ್ನು 4x + 3y ಅಂತನೇ ಹೇಳಬೇಕು ಎನ್ನುವುದನ್ನು ನಾವು ಎಂದೂ ಮರೆಯದ ಹಾಗೆ ಹೇಳಿಕೊಟ್ಟಿದ್ದರು.

ನಾವು ಯಾರಾದರೂ ಜಗಳವಾಡುವುದನ್ನು ಕಂಡರೆ “ಗುದ್ಯಾಡುವುದು ಇತ್ತಂದ್ರ ಗಣಿತದಾಗನ ಗುದ್ಯಾಡ್ರಿ, ಒಂದ್ ಸೂತ್ರವನ್ನ ಒಬ್ಬಾವ ಸಿಟ್ಟೀಲೆ ಹೇಳಿದ್ರ ಮತ್ತೊಬ್ಬಾವ ಮತ್ತೊಂದು ಸೂತ್ರವನ್ನು ಸಿಟ್ಟೀಲೆ ಹೇಳ್ರಿ, ನೀವ್ ಗುದ್ಯಾಡಿದಂಗೂ ಆಕೈತಿ ಸೂತ್ರಾನೂ ನೆನಪಿನ್ಯಾಗ ಉಳಿತಾವು” ಅಂತ ತಮಾಷೆಯಾಗಿ ಹೇಳಿ ಗಣಿತದಲ್ಲಿ ಗುದ್ದಾಡುವ ಪರಿಯನ್ನು ಅಭಿನಯಿಸಿ ತೋರಿಸುತ್ತಿದ್ದರು.

ಒಮ್ಮೆ ಅವರು ಗಣಿತ ವಿಷಯವನ್ನು ಬಿಟ್ಟು ಖಗೋಳಕ್ಕೆ ಸಂಬಂಧಿಸಿದ ವಿಶ್ವ ಎನ್ನುವ ಪಾಠ ಮಾಡುತ್ತಿದ್ದರು. ಆ ಪಾಠವನ್ನು ಅವರು ಅದೆಷ್ಟು ಚೆನ್ನಾಗಿ ಮಾಡಿದ್ದರೆಂದರೆ ನಾನು ತರಗತಿಯಲ್ಲಿರದೇ ಅಂತರಿಕ್ಷದಲ್ಲಿ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಜಿಗಿಯುತ್ತಿದ್ದೇನೆ ಎನ್ನುಷ್ಟರ ಮಟ್ಟಿಗೆ ಮುಳಿಗಿ ಹೋಗಿದ್ದೆ. ಗಣಿತ ವಿಷಯಕ್ಕಿಂತ ಈ ಪಾಠವೇ ನನಗೆ ಆಕರ್ಷಕ ಅನಿಸತೊಡಗಿತ್ತು. ಇಲ್ಲಿ ಲೆಕ್ಕ ಬಿಡಿಸುವುದು ಇರುತ್ತಿರಲಿಲ್ಲ ಎಂತಲೋ ಏನೋ ಅವರು ವಿಶ್ವ ಪಾಠವನ್ನು ಮಾಡಿದ ರೀತಿಗೆ, ಬೋಧನಾ ವಿಧಾನಕ್ಕೆ, ನಮ್ಮನ್ನು ಕುತೂಹಲದ ಅಂಚಿಗೆ ತಂದು ನಿಲ್ಲಿಸುವ ಪರಿಗೆ ಅಂದು ಮಾರು ಹೋಗಿದ್ದೆ. ಪ್ರತಿ ವಿದ್ಯಾರ್ಥಿಗಳ ಜೀವನ ಕುತೂಹಲ, ಕೌತುಕಗಳಿಂದ ಕೂಡಿರುವಂತೆ ನೋಡಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ನಿಧಾನಕ್ಕೆ ತಿಳಿಯುತ್ತಾ ಬಂತು. ಗುರುಗಳ ಪ್ರತಿ ಸಣ್ಣ ಮಾತು, ಚಟುವಟಿಕೆಯುಳ್ಳ ಕಾರ್ಯ, ಕಲಿಸುವ ವಿಧಾನ ಆ ಕ್ಷಣಕ್ಕೆ ಫಲ ನೀಡದಿದ್ದರೂ ಭವಿಷತ್ತಿನಲ್ಲಿ ಯಾವದೋ ಒಂದು ಸಂದರ್ಭದಲ್ಲಿ ಅಥವಾ ಜೀವನ ಪರ್ಯಂತ ಹೂವೂ ಅರಳಿ ಫಲವೂ ಆಗಿ ಹಣ್ಣೂ ಆಗುತ್ತದೆ ಎನ್ನುವುದು ನಿಶ್ಚಿತ. ಒಬ್ಬ ವಿದ್ಯಾರ್ಥಿ ತನ್ನ ತಂದೆ ತಾಯಿಗಳ ಮಾತುಗಳಿಗಿಂತ ತನ್ನ ಶಿಕ್ಷಕರ ಮಾತುಗಳಿಗೆ ಹೆಚ್ಚು ಕಿವಿಯಾಗುತ್ತಾನೆ. ಅವರನ್ನು ಅನುಸರಿಸುತ್ತಾನೆ. ವಿದ್ಯಾರ್ಥಿ ತನ್ನ ಮನೆಯ ಪರಿಸ್ಥಿತಿ ಎಷ್ಟೆ ಚೆನ್ನಾಗಿದ್ದರೂ ಚೆನ್ನಾಗಿಲ್ಲದಿದ್ದರೂ ಗುರುಗಳನ್ನು ನೋಡಿ ತನ್ನ ಬದುಕಿನಲ್ಲಿ ಒಂದು ಶಿಸ್ತನ್ನು ಬೆಳೆಸಿಕೊಳ್ಳುತ್ತಾನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತೇನೂ ಅಲ್ಲ. ಗುರುಗಳ ಸಣ್ಣ ವರ್ತನೆಯೂ ಅವರಲ್ಲಿ ಬಹಳ ದೊಡ್ಡ ಪರಿಣಾಮವನ್ನುಂಟು ಮಾಡಬಲ್ಲದು. ಶಿಕ್ಷಕರ ಮನೆ ಮತ್ತು ಮನಸುಗಳಲ್ಲಿ ಸಾವಿರ ಸಂಕಟಗಳಿದ್ದರೂ ತರಗತಿಯೊಳಗೆ ಕಾಲಿಟ್ಟಾಗ ಎಲ್ಲವನ್ನೂ ಮರೆತು ಮತ್ತದೇ ಮಂದಹಾಸದೊಂದಿಗೆ ವಿದ್ಯಾರ್ಥಿಗಳಿಗೆ ಎದುರುಗೊಳ್ಳುತ್ತಾರೆ. ತರಗತಿಯೊಳಗಿದ್ದಷ್ಟೂ ಹೊತ್ತು ನಮ್ಮನ್ನೆಲ್ಲಾ ಅಕ್ಷರದ ಲೋಕದಲ್ಲಿ ಒಂದು ಸುತ್ತು ಹೊಡೆಸಿಕೊಂಡು ಬಂದಿರುತ್ತಾರೆ.

ಮೊನ್ನೆ ಗಣೇಶ ಚತುರ್ಥಿಗೆ ಶುಭಾಶಯ ತಿಳಿಸಲು ರಿತ್ತಿ ಮಾಸ್ತಾರ್ ಮಾತ್ತು ಕೊತಾಂಬ್ರಿ ಮಾಸ್ತಾರರಿಗೆ ವಾಟ್ಸಾಪಿನಲ್ಲಿ ಮೆಸೆಜ್ ಕಳುಹಿಸಿದಾಗ ರಿತ್ತಿ ಮಾಸ್ತಾರರು ನನ್ನ ನಿಕ್ ನೇಮ್ ಬಳಸಿ ಪ್ರತಿಕ್ರಿಯಿಸಿದ್ದು ಅಂದು ಇಡಿ ದಿನ ನಾನು ಖುಷಿಯಾಗಿರಲು ಕಾರಣವಾಗಿತ್ತು. ಅವರಿಗೆ ನನ್ನಂತಹವರು ಸಾವಿರಾರು ವಿದ್ಯಾರ್ಥಿಗಳು. ಅಷ್ಟು ಜನರಲ್ಲಿ ನಿಕ್ ನೇಮ್ ನೆನಪಿಟ್ಟುಕೊಳ್ಳುವುದೆಂದರೆ, ಅದೂ ಭರ್ತಿ ಇಪ್ಪತ್ತೆರೆಡು ವರ್ಷಗಳ ನಂತರವೂ. ಕೊತಾಂಬ್ರಿ ಮಾಸ್ತಾರರೂ ಅಷ್ಟೆ ಆತ್ಮೀಯತೆಯಿಂದ ಪ್ರತಿಕ್ರಿಯಿಸಿದ್ದರು. ತಮ್ಮ ಸೇವೆಯ ಅಂತಿಮ ಘಟ್ಟದಲ್ಲಿರುವ ರಿತ್ತಿ ಗುರುಗಳಿಗೆ ಮೊನ್ನೆ ಕರೆ ಮಾಡಿ ಮಾತಾಡುವಾಗ ‘ಇಷ್ಟು ದಿನದ ನಿಮ್ಮ ಸೇವೆಯಲ್ಲಿ ನಿಮಗೆ ಸಾರ್ಥಕ ತಂದುಕೊಟ್ಟ ಘಳಿಗೆ ಯಾವುದು ಸರ್’ ಎಂದು ಕುತೂಹಲಕ್ಕೆ ಕೇಳಿದಾಗ ಅವರಿಗೆ ನೆನಪಾಗುವುದೇ ನಮ್ಮೂರು ಗೊಂಡಬಾಳ ಹಾಗೂ ನಮ್ಮೂರಿನ ವಿದ್ಯಾರ್ಥಿಗಳು. “ಈಗಿನ ಜನ್ರೇಶನ್ನಿನ ವಿದ್ಯಾರ್ಥಿಗಳು ಸ್ಕೂಲಿಗೂ ಹೋಗಿ ಟ್ಯೂಷನಲ್ಲಿಯೂ ಕಲಿತು ಉತ್ತಮ ಅಂಕಗಳನ್ನು ತಗ್ಯಾಕತ್ಯಾರ. ಆದ್ರ ನಿಮಗ ಆಗ ಟ್ಯೂಷನ್ ಅಂದ್ರನ ಗೊತ್ತಿರಲಿಲ್ಲ. ನೀವು ನೆಟ್ಟಗ ದಿನವೂ ಸಾಲಿಗೆ ಬಂದ್ರ ಸಾಕಿತ್ತು. ಅಂತಾದ್ರಾಗ ನಾನು ನಿಮಗಾಗಿ ರಾತ್ರಿ ತರಗತಿಗಳನ್ನೂ ತೆಗೆದುಕೊಂಡು ವಿದ್ಯಾ ಹೇಳುವ ಪ್ರಯತ್ನ ಮಾಡಿದ್ಯಾ. ನೀವು ಆಸಕ್ತಿಯಿಂದ ಕಲಿತು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದೀರಿ. ನನ್ನ ನೆನೆಸಿಕೊಂಡು ಕರೆ ಮಾಡಿ ವಿಚಾರಿಸ್ತೀರಲಾ ಅದ ನನಗ ಸಾರ್ಥಕದ ಕ್ಷಣ… ಎಲ್ರೂ ಇನ್ನೂ ಹೆಚ್ಚಿನ ಎತ್ತರಕ್ಕ ಬೆಳಿರಿ” ಅಂತ ಹೇಳುವಾಗ ಅವರ ಧ್ವನಿ ಗದ್ಗಧಿತವಾಗಿತ್ತು. ಮುಖ ಕಾಣದಿದ್ದರೂ ಅವರ ಕಣ್ಣಾಲಿಗಳು ತುಂಬಿಕೊಂಡಿದ್ದವು ಎನ್ನುವುದು ನನ್ನ ಕರುಳು ಅರಿಯಿತು. ಗುರು ಶಿಷ್ಯರ ಬಹು ದೊಡ್ಡ ಪರಂಪರೆ ಈ ಮಣ್ಣಿಗಿದೆ. ವಿದ್ಯಾರ್ಥಿಯಾದವನಿಗೆ ಎಂತಹ ಶಿಕ್ಷಣ ಬೇಕು ಎಂದರಿತು ಅದನ್ನು ಪೂರೈಸಿದರೆ ಅವರೊಬ್ಬ ಉತ್ತಮ ಶಿಕ್ಷಕರಾಗುತ್ತಾರೆ. ಅದರಂತೆ ಗುರುಗಳ ಆಶಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳೂ ರೂಪುಗೊಂಡರೆ ಸಾಕು ಅದೇ ನಾವು ಗುರುಗಳಿಗೆ ನೀಡಬಹುದಾದ ಬಹುದೊಡ್ಡ ಉಡುಗೊರೆ.

ನಮಗೆ ವಿಜ್ಞಾನ ವಿಷಯವನ್ನು ಬೋಧಿಸುತ್ತಿದ್ದ ಎಸ್ ಸಿ ಕೊತಾಂಬ್ರಿ ಮಾಸ್ತಾರರ ಪ್ರಭಾವವೂ ಇಲ್ಲ ಅಂತೇನಿಲ್ಲ. ಅವರು ಉಳಾಗಡ್ಡಿಯನ್ನು ಕೊಯ್ದು ಸೂಕ್ಷö್ಮದರ್ಶಕದಲ್ಲಿ ಜೀವಕೋಶಗಳನ್ನು ತೋರಿಸುವಾಗ ಅದೇನೋ ವಿಶೇ಼ವಾದದ್ದನ್ನೇ ನೋಡುತ್ತಿದ್ದೇವೆ ಎನ್ನುವ ಪುಳಕದಲ್ಲಿ ತೇಲುತ್ತಿದ್ದೆವು. ವಿಚಿತ್ರದ ವಿಷಯವೆಂದರೆ ಈ ಜೀವಕೋಶಗಳು ಕೇವಲ ಉಳ್ಳಾಗಡ್ಡಿಯೊಳಗಷ್ಟೆ ಇರ್ತಾವು ಅನಿಸಿ ನಮ್ಮ ದೇಹದೊಳಗೆ ಅಂತಹ ಯಾವ ಕೋಶಗಳೂ ಇಲ್ಲ ಅಂತಲೇ ಭಾವಿಸದ್ದೆ. ನಂತರ ಅವರೆ ಪ್ರತಿಯೊಂದು ಜೀವಿಗಳಲ್ಲಿಯೂ ಜೀವಕೋಶಗಳು ಅದಾವು ಅಂತ ತಿಳಿಸಿ ನನ್ನ ತಪ್ಪುಗ್ರಹಿಕೆಯನ್ನು ದೂರ ಮಾಡಿದಾಗ ಮೈಕೈಯೆಲ್ಲಾ ಕಣ್ಣಾಗಿಸಿಕೊಂಡು ಅವು ಎಲ್ಲಿ ಅದಾವು ಅಂತ ಹುಡುಕಾಡತೊಡಗಿದ್ದೆ. ಇದೆಲ್ಲವೂ ಈಗ ತಮಾಷೆಯಾಗಿ ಕಂಡರೂ ಕೊತಾಂಬ್ರಿ ಮಾಸ್ತಾರರು ವಿಜ್ಞಾನದೆಡೆಗಿನ ಬೆರಗನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ಹಾಕಿಕೊಟ್ಟ ಆ ಕುತೂಹಲದ ಬೇರು ಇನ್ನೂ ಚಿಗುರುತ್ತಲೇ ಇದೆ.

ಕೊತಾಂಬ್ರಿ ಹಾಗೂ ರಿತ್ತಿ ಮಾಸ್ತಾರರು ಇಬ್ಬರೂ ವಾರಗಟ್ಟಲೇ ಶಾಲೆಯಲ್ಲಿಯೆ ವಸ್ತಿ ಹೂಡಿ ಐತವಾರಕ್ಕೊಮ್ಮೆ ಮಾತ್ರ ಊರಿಗೆ ಹೋಗಿ ಬರುತ್ತಿದ್ದರು. ಅವರು ಶಾಲೆಯಲ್ಲಿಯೇ ವಸ್ತಿ ಇದ್ದಾಗ ನಮ್ಮನ್ನೆಲ್ಲಾ ಕೆಲವೊಂದು ಬಾರಿ ರಾತ್ರಿ ಹೊತ್ತು ಶಾಲೆಗೆ ಕರೆಯಿಸಿ ಬಾಜು ಮನೆಯ ಕಾಕಾನನ್ನೋ ಮಾವನನ್ನೋ ತೋರಿಸುವ ಹಾಗೆ ದೂರದರ್ಶಕದಲ್ಲಿ ಚಂದ್ರನನ್ನು ತುಂಬಾ ಹತ್ತಿರಕ್ಕೆ ಇದ್ದಾನೆನ್ನುವ ಹಾಗೆ ತೋರಿಸುತ್ತಿದ್ದರೆ ನಾವೆಲ್ಲ ಕಣ್ಣು ಬಾಯಿ ಬಿಟ್ಟುಕೊಂಡು ಸುಮಾರು ನಾಲ್ಕು ಲಕ್ಷ ಕಿಲೋಮೀಟರ್ ದೂರವಿರುವ ಅದನ್ನು ನೋಡುತ್ತ ಹೌಹಾರುತ್ತಿದ್ದರೆ ಪಕ್ಕದಲ್ಲಿ ನಿಂತಿರುತ್ತಿದ್ದ ಕೊತಾಂಬ್ರಿ ಮಾಸ್ತಾರರ ಮುಖದಲ್ಲಿ ಸಾರ್ಥಕ್ಯದ ನಗು ಮೂಡಿರುತ್ತಿತ್ತು. ಇಂದು ಪ್ರತಿಯೊಂದು ಅಂಶವೂ ನಮ್ಮ ಅಂಗೈಯಲ್ಲಿರುವಂತೆ ತೋರಿಸುವ ತಂತ್ರಜ್ಞಾನಕ್ಕೆ ಬೆರಗುಗೊಳ್ಳುತ್ತೇವೆ. ಆದರೆ ಅಂತಹ ಬೆರಗುಗಳನ್ನು ನಮ್ಮ ಬಾಲ್ಯದಲ್ಲಿಯೇ ಉಳಿಸುತ್ತಾ ಬೆಳೆಸುತ್ತಿದ್ದ ಕೊತಾಂಬ್ರಿ ಮತ್ತು ರಿತ್ತಿ ಮಾಸ್ತಾರರವರು ಅಂದು ವಿಜ್ಞಾನಿಯಂತೆ ಗಣತಜ್ಞರಂತೆ ನಮಗೆಲ್ಲ ಕಂಡಿದ್ದರು.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಕನ್ನಡ ಹೇಳುತ್ತಿದ್ದ ಅರುಣಾ ಮೇಡಮ್ ಸಾಹಿತಿಯಾಗಿಯೂ ನನ್ನನ್ನು ಬಹಳಷ್ಟು ಪ್ರಭಾವಿಸಿ ಆ ಸಾಹಿತ್ಯದ ಸೆಲೆ ನನ್ನೊಳಗೂ ಹರಿಯುವಂತೆ ಮಾಡಿದ್ದಾರೆ.


ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನೋ ರ‍್ಯಾಂಕುಗಳನ್ನೋ ಪಡೆದುಕೊಂಡು ಒಳ್ಳೆ ಹುದ್ದೆಯನ್ನು ಗಿಟ್ಟಿಸಿಕೊಂಡುಬಿಟ್ಟರೆ ಶಿಕ್ಷಣದ ನಿಜವಾದ ಉದ್ದೇಶ ಸಾಕಾರಗೊಂಡಿತು ಎಂದರ್ಥವಲ್ಲ. ನಾವು ಸಾಮಾಜಿಕ ಜವಾಬ್ಧಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸಲು ಶಕ್ತರಾಗಿದ್ದೇವೆ? ಹೇಗೆ ಸಮಾಜದಲ್ಲಿ ಒಂದಾಗಿ ಬದುಕುತ್ತಿದ್ದೇವೆ? ನಾವು ವಿಕಾಸ ಹೊಂದುವುದರ ಜೊತೆಗೆ ನಮ್ಮ ಸುತ್ತಮುತ್ತಲ ಪರಿಸರವನ್ನು ಅಭಿವೃದ್ದಿ ಹೊಂದಲು ಅವಕಾಶ ಮಾಡಿ ಕೊಟ್ಟಿದ್ದೇವೆಯೇ? ಒಂದು ಹೆಣ್ಣಿನ ಬಗ್ಗೆ ನಮ್ಮ ದೃಷ್ಟಿಕೋನಗಳೇನು, ಒಬ್ಬ ಹಿರಿಯನನ್ನು ನಾವು ಹೇಗೆ ಕಾಣುತ್ತಿದ್ದೇವೆ, ನಮಗಿಂತ ಕಿರಿಯನೊಂದಿಗಿನ ನಮ್ಮ ವರ್ತನೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ನಮ್ಮಲ್ಲಿ ಸಕರಾತ್ಮಕ ಉತ್ತರಗಳಿದ್ದರೆ ನಾವು ಪಡೆದ ಶಿಕ್ಷಣದ ಧ್ಯೇಯಗಳಿಗೆ ಬದ್ಧರಾಗಿದ್ದೇವೆ ಎಂದು ಭಾವಿಸಿಕೊಳ್ಳಬಹುದು.