ಕರ್ಫ್ಯೂ ಆಗಿ ಅಂಚೆ ವ್ಯವಸ್ಥೆ ನಿಂತು ಹೋಗಿತ್ತು. ಒಂದು ಮುಖ್ಯವಾದ ಪಾರ್ಸೆಲ್ ಅಂಚೆ ಇಲಾಖೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಊರಿನಲ್ಲಿರುವ ಹೈಸ್ಕೂಲ್ ಗೆಳೆಯ ಆನಂದನಿಗೆ ಫೋನ್ ಮಾಡಿದ್ದೆ. ಅವರ ತಂದೆ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು. ‘ಏನಾದರೂ ಮಾಡಕ್ಕಾಗತ್ತಾ?’ ಕೇಳಿದ್ದೆ. ಆಗ ಚೆನ್ನಾಗೆ ಮಾತಾಡಿದ್ದ. ಅದಾಗಿ ಒಂದು ವಾರಕ್ಕೆ ಫೇಸಬುಕ್ಕಲ್ಲಿ ‘ರೆಸ್ಟ್ ಇನ್ ಪೀಸ್ ಆನಂದ್’ ಎಂದು ಸುದ್ದಿ ಬಂತು. ಕೋವಿಡ್ ಇಷ್ಟು ಹತ್ತಿರಕ್ಕೆ ಬಂತು. ಒಂದು ಸಾಂಕ್ರಾಮಿಕ ರೋಗ ಎಲ್ಲವನ್ನೂ ಹೀಗೆ ಕಸವನ್ನು ಬುಟ್ಟಿಯಲ್ಲಿ ಹಾಕಿ ಹೊತ್ತೊಯ್ಯುವಂತೆ ಮನುಷ್ಯರನ್ನು ಹೊತ್ತೊಯ್ಯಲು ಆರಂಭಿಸಿತ್ತು. ವ್ಯಾಪಾರವೇ ಇಲ್ಲದೆ ಜನ ಊಟಕ್ಕಾಗಿ ಪರದಾಡಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

ಸಮುದ್ರಕ್ಕೆ ಬೆನ್ನು ಮಾಡಿ ಓಡುತ್ತಿದ್ದೇನೆ. ಅಲೆಗಳು ಅಟ್ಟಿಸಿಕೊಂಡು ಬರುತ್ತಿವೆ. ನಿಂತರೆ, ತಿರುಗಿದರೆ ಅಲೆಗಳು ನುಂಗಿ ಹಾಕಿಬಿಡುತ್ತವೆ. ಓಡುತ್ತಲೇ ಇದ್ದೇನೆ. ಅಲೆಗಳೂ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳುತ್ತಿವೆ. ಓಡುತ್ತಾ ಓಡುತ್ತಾ ಉಸಿರುಗಟ್ಟಿದಂತೆ ಭಾಸವಾಗುತ್ತಿದೆ. ದೀರ್ಘವಾಗಿ ಉಸಿರೆಳೆದುಕೊಳ್ಳಲು ಪ್ರಯತ್ನಿಸಿದರೆ ಪ್ರಾಣವಾಯು ಎಲ್ಲೋ ಅಡಗಿಕೊಂಡುಬಿಟ್ಟಿದೆ. ಮುಂದೆಲ್ಲಾದರೂ ಸಿಗಬಹುದೆಂದು ತೇಕುತ್ತಲೇ ಓಟ ಮುಂದುವರೆಸಿದರೆ ನನ್ನಂತೆಯೇ ಮತ್ತಷ್ಟು ಜನ ಪಕ್ಕದಲ್ಲಿ ಸೇರಿಕೊಳ್ಳುತ್ತಿದ್ದಾರೆ. ಹೆಣ್ಣು, ಗಂಡು, ಮಕ್ಕಳು, ಮುದುಕರು ಎಂಬ ಭೇದವಿಲ್ಲದೆ ಇಡೀ ಊರಿಗೆ ಊರೇ ಓಡುತ್ತಿದೆ. ಓಡುತ್ತಾ ಓಡುತ್ತಾ ಕೊನೆಗೆ ಸ್ಮಶಾನದಲ್ಲಿರುವ ದೊಡ್ಡ ಅಗ್ನಿಕುಂಡಕ್ಕೆ ತಲುಪುತ್ತಿದ್ದಾರೆ. ಹಿಂದೆ ಅಲೆ, ಮುಂದೆ ಬೆಂಕಿ, ಇರುವಷ್ಟು ಹೊತ್ತು ಉಸಿರಾಡೋಣವೆಂದರೆ ಗಾಳಿಯ ಸುಳಿವಿಲ್ಲ… ಮತ್ತಷ್ಟು ಉಸಿರುಗಟ್ಟುತ್ತಾ ಇನ್ನೇನು ಜೀವವೇ ಹೋಯಿತು ಎನ್ನುವಾಗ ನನಗೆ ಧಡಕ್ಕನೆ ಎಚ್ಚರವಾಯಿತು.

ಎದ್ದು ಕೂತವನೇ ಸುತ್ತಲೂ ಒಮ್ಮೆ ನೋಡಿದೆ. ಆಸ್ಪತ್ರೆಯ ಜನರಲ್ ವಾರ್ಡಿನ ಬೆಡ್ಡುಗಳಲ್ಲಿ ಮಲಗಿದವರಂತೆ ಎರಡು ಅಡಿ ದೂರದಲ್ಲಿದ್ದ ಕಾಟುಗಳಲ್ಲಿ ಪೀಜಿಯ ರೂಮ್ ಮೇಟ್ ಗಳು ನಿದ್ದೆ ಹೊಡೆಯುತ್ತಿದ್ದರು. ಇನ್ನೇನು ಆರಿ ಹೋಗುವ ದೀಪ ಪ್ರಚಂಡವಾಗಿ ಉರಿಯುವಂತೆ ಫ್ಯಾನಿನ ರೆಕ್ಕೆಗಳು ಭರಪೂರ ತಿರುಗಿ ಗಾಳಿ ಬೀಸುತ್ತಿದ್ದವು. ಉಸಿರಾಡುತ್ತಿದ್ದೇನೆ. ಸದ್ಯ! ಇನ್ನೇನು ಕೆಲವೇ ಕ್ಷಣಗಳಲ್ಲಿ ಅದರ ರೆಕ್ಕೆಗಳು ಕಿತ್ತುಬಂದು ದಿಕ್ಕಿಗೊಂದೊಂದರಂತೆ ಬೀಳುತ್ತವೆ ಎನಿಸುತ್ತಿತ್ತು. ಕಿಟಕಿಯಿಂದ ಹೊರಗಡೆ ನೋಡಿದೆ. ರಸ್ತೆಯ ಪಕ್ಕದಲ್ಲಿದ್ದ ಕರೆಂಟುಕಂಬದಲ್ಲಿ ಬೀದಿದೀಪ ಉರಿಯುತ್ತಿತ್ತು. ಸಮಯ ಎಷ್ಟಾಗಿರಬಹುದೆಂದು ಬೆಡ್ಡಿನ ಪಕ್ಕದಲ್ಲಿ ಯುದ್ಧವಿರಾಮದಲ್ಲಿ ವಿಶ್ರಾಂತಿಗೈಯುತ್ತಿರುವ ಸೈನಿಕನಂತೆ ನಿದ್ದೆ ಮಾಡುತ್ತಿದ್ದ ಮೊಬೈಲನ್ನೊತ್ತಿ ನೋಡಿದಾಗ ಸಮಯ ಇನ್ನೂ ಐದೂವರೆ ಎಂದು ತೋರಿಸಿತು.

ಮೂಲೆಯಲ್ಲಿ ಹಲ್ಲಿಯೊಂದು ಅತ್ತಿಂದಿತ್ತ ಸರಿದಾಡುತ್ತಿತ್ತು. ಸದ್ಯ ಎಲ್ಲವೂ ಹಾಗೆಯೇ ಇದೆ. ನಾನಿನ್ನೂ ಬದುಕಿದ್ದೇನೆ. ಸಮಾಧಾನವಾಯಿತು. ಹಾಗೆ ಹಾಸಿಗೆಯ ಮೇಲೆ ಅಡ್ಡಾಗಿ ಕಣ್ಮುಚ್ಚಿದೆ. ಯಾಕೋ ನಿದ್ದೆ ಹತ್ತಲಿಲ್ಲ. ಅರ್ಧಕ್ಕೆ ನಿಂತ ಕನಸು ಮತ್ತೆ ವಕ್ಕರಿಸಿಕೊಂಡರೆ ಏನು ಮಾಡುವುದು? ಬೇಡವೇ ಬೇಡ ಎಂದು ಎದ್ದವನೇ ಸಪ್ಪಳ ಮಾಡದಂತೆ ಬೀರುವಿನಲ್ಲಿದ್ದ ಸಿಗರೇಟ್ ಪ್ಯಾಕ್ ಹಾಗೂ ಲೈಟರನ್ನು ತೆಗೆದುಕೊಂಡು ಬಚ್ಚಲುಮನೆಗೆ ಹೋದೆ. ದೀಪ ಹೊತ್ತಿಸಿ ಕದ ತೆರೆಯುತ್ತಿದ್ದಂತೆಯೇ ಜಿರಳೆಗಳು ಅತ್ತಿಂದಿತ್ತ ಹೊರಳಾಡುವುದು ಕಂಡವು. ಶತಮಾನಗಳಿಂದ ಜನರ ಮುಖಕ್ಕೆ ಅವರ ಮುಖವನ್ನೇ ಸೆರೆಹಿಡಿದು ತೋರುವ ಕನ್ನಡಿ ಸುಸ್ತಾದಂತೆ ಅಲ್ಲಲ್ಲಿ ಬಿಳಿಚುಕ್ಕೆಗಳು ಬಂದಿದ್ದವು. ಒಂದು ಕ್ಷಣ ಹೇಸಿಗೆಯೆನಿಸಿ ಹೊರಬಂದವನೇ ಕೋಣೆಯ ಬಾಗಿಲು ತೆಗೆದು ಕೆಳಗಿನ ಮಹಡಿಗೆ ಮೆಟ್ಟಿಲಿಳಿದು ಬಂದೆ. ದೇವರ ಕೋಣೆಯೊಳಗಡೆ ಕೆಂಪು ಬಣ್ಣದ ಜೀರೋ ಬಲ್ಬ್ ಹೊತ್ತಿಸಲಾಗಿತ್ತು. ದೇವರ ಕೋಣೆಯ ಬಾಗಿಲನ್ನು ಮುಚ್ಚಿದ್ದರೂ ಸರಳುಗಳಿದ್ದ ಆ ಬಾಗಿಲಿನಿಂದ ಕೆಂಪು ಬಣ್ಣದ ಪ್ರಭೆ ತೂರಿ ಬಂದು ಆಚೆಯೆಲ್ಲಾ ಚೆಲ್ಲಾಡಿತ್ತು. ನನಗದು ಏಕಕಾಲಕ್ಕೆ ಆಸ್ಪತ್ರೆಯ ಆಪರೇಷನ್ ಥಿಯೇಟರಿನ ಕೋಣೆಯ ಹೊರಗಿರುವ ಪುಟ್ಟ ಬಲ್ಬಿನಂತೆ, ಸರಳುಗಳಿದ್ದ ಆ ಬಾಗಿಲು ಜೈಲಿನ ಬಾಗಿಲಿನಂತೆ ಕಂಡಿತು.

ಪೀಜಿಯ ತಲಬಾಗಿಲನ್ನು ತೆರೆದವನಿಗೆ ಹಿಂದಿನ ದಿನ ರಾತ್ರಿ ಮಿಂಚು ಗುಡುಗು ಸಹಿತ ಮಳೆ ಬಿದ್ದದ್ದರಿಂದ ಕಪ್ಪು ಟಾರು ರೋಡಿನಿಂದಲೂ ಘಮ್ಮೆನ್ನುವ ವಾಸನೆ ಮೂಗಿಗೆ ಬಡಿಯಿತು. ಪಕ್ಕದ ಮರದಿಂದ ಬಿದ್ದ ಟಬೂಬಿಯಾ ಹೂವುಗಳು ಮತ್ತದರ ಎಲೆಗಳು ಎದುರಿನ ಕರೆಂಟು ಕಂಬದಿಂದ ಬೀಳುತ್ತಿದ್ದ ಹಳದಿ ದೀಪದ ಬೆಳಕಿಗೆ ಹೊಳೆಯುತ್ತಿದ್ದವು. ಗೇಟು ತೆರೆದವನೇ ಆಚೆ ಬಂದು ಪಕ್ಕದ ಕಂಪೌಂಡಿನ ಗೋಡೆಗೆ ಆತುಕೊಂಡು ಮುಖದ ಮೇಲಿನ ಮಾಸ್ಕನ್ನು ಕತ್ತಿಗಿಳಿಸಿ ಸಿಗರೇಟು ಹೊತ್ತಿಸಿದೆ. ವಾತಾವರಣದಲ್ಲಿದ್ದ ತಂಪು ಹವೆ ನನ್ನಲ್ಲೊಂದು ಆಹ್ಲಾದಕರ ಭಾವವನ್ನು ಹುಟ್ಟುಹಾಕಿತು. ಸಿಗರೇಟಿನೆರಡು ಪಫ್ ಗಳನ್ನು ತೆಗೆದುಕೊಂಡಿದ್ದೆನೋ ಇಲ್ಲವೋ ನನ್ನ ಮುಂದೆ ಆಂಬುಲೆನ್ಸ್ ರೊಯ್ ರೊಯ್ ರೊಯ್ ಎಂದು ಶಬ್ದ ಮಾಡುತ್ತಾ ಹಾದುಹೋಯಿತು. ಈಗೀಗ ಅರ್ಧ ಗಂಟೆಗೊಮ್ಮೆಯಾದರೂ ಅಂಬುಲೆನ್ಸಿನ ಸದ್ದು ಸಾಮಾನ್ಯವೇ ಆಗಿಬಿಟ್ಟಿತ್ತು. ಒಂದು ವರ್ಷದ ಕೆಳಗೆ ಪೀಜಿಯ ಹಾಲಿನಲ್ಲಿದ್ದ ಟೀವಿಯಲ್ಲಿ ಕೋವಿಡ್ ಕಾರಣದಿಂದ ಸತ್ತವರ ಸಂಖ್ಯೆಗಳನ್ನು ತೋರಿಸುವಾಗೆಲ್ಲಾ ನನಗದು ಎಲ್ಲೋ ದೂರದಲ್ಲಿ ನಡೆಯುತ್ತಿದೆ ಎನಿಸುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಪ್ರತಿಬಾರಿ ಅಂಬುಲೆನ್ಸಿನ ಸದ್ದು ಕೇಳಿದಾಗಲೂ ನನಗೆ ವಿಪರೀತ ಸಂಕಟವಾಗುತ್ತದೆ. ನಿಜ ಹೇಳಬೇಕೆಂದರೆ ನಮ್ಮನ್ನು ರೋಗಗಳು ಕೂಡ ಅಲುಗಾಡಿಸುವುದಿಲ್ಲ. ಆದರೆ ಇಂತಹ ರೋಗದಿಂದ ನಮ್ಮ ಅಂತ್ಯವಾಗಿಬಿಡುತ್ತದೆ, ‘ದಿ ಎಂಡ್’ ಅಂತ ಅನಿಸಿಬಿಡುತ್ತದಲ್ಲ, ಅವಾಗ ಶುರುವಾಗುತ್ತದೆ ನಮ್ಮ ಭಯ. ಆ ಭಯ ನಮ್ಮನ್ನು ಅಲುಗಾಡಿಸುತ್ತದೆ. ಆ ಭಯದಿಂದ ಹೊರಬರುವುದಕ್ಕಾಗಿ ನಾವು ಏನೆಲ್ಲಾ ಮಾಡಿಬಿಡುತ್ತೇವೆ!!!

ಸಾವು ಎಲ್ಲ ಕಡೆಗೂ ತಾಂಡವವಾಡುತ್ತಿದೆ. ಬಾಗಿಲು ತೆರೆಯುತ್ತಲೇ ಅದು ನಮ್ಮ ಬಳಿ ಬಂದುಬಿಡುತ್ತದೆ. ನಮ್ಮನ್ನು ಬಲವಂತದಿಂದ ಅಪ್ಪಿ, ಜೋರಾಗಿ ಜಪ್ಪಿ ನೆಲಕ್ಕೆ ಬೀಳಿಸಿ ತುಳಿದು ಮಣ್ಣನ್ನು ಬಾಯಿಗೆ ಹಾಕಿಬಿಡುತ್ತದೆ ಎನಿಸಿ ಭಯವಾಗುತ್ತದೆ. ಸಾಯುತ್ತಿದ್ದಾರೆ… ಎಲ್ಲರೂ ಸಾಯುತ್ತಿದ್ದಾರೆ. ಕಣ್ಣಮುಂದೆಯೇ ಸಾಯುತ್ತಿದ್ದಾರೆ. ಸಾವು ತನ್ನ ಘನತೆಯನ್ನು ಕಳೆದುಕೊಂಡುಬಿಟ್ಟಿದೆ. ಮನುಷ್ಯನ ಆಕ್ರಂದನಕ್ಕೆ ಸಾವು ಕಿವುಡಾಗಿಬಿಟ್ಟಿದೆ. ಈ ಸಾವಿನಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಅಡಗಿಕೊಳ್ಳುವುದು. ಪಾಂಡವರು ಅರಗಿನ ಮನೆಯಲ್ಲಿ ಅಡಗಿಕೊಂಡಂತೆ. ಚಿಕ್ಕವರಿರುವಾಗ ಕಣ್ಣಾಮುಚ್ಚಾಲೆಯಾಟದಲ್ಲಿ ಹುಡುಕಲು ಬರುವವನ ಕೈಗೆ ಸಿಗದಂತೆ ಅಡಗಿಕೊಳ್ಳುತ್ತಿದ್ದೇವಲ್ಲ, ಹಾಗೆ. ಈಗ ಮನೆಯೊಳಗೇ ಅಡಗಿಕೊಳ್ಳಬೇಕು. ಬಾಯಿ ಮತ್ತು ಮೂಗನ್ನು ಮಾಸ್ಕಿನಿಂದ ಅಡಗಿಸಿಕೊಳ್ಳಬೇಕು. ಮೊದಲನೇ ಅಲೆ ಬಂದಾಗ ಅಮ್ಮನಿಗೆ ಫೋನ್ ಮಾಡಿ ”ಅಮ್ಮ ಮನೆಯಲ್ಲಿಯೇ ಇರು. ಹೊರಗಡೆ ಹೋಗುವಾಗ ಮಾಸ್ಕ್ ಹಾಕಿಕೊಂಡೆ ಅಡ್ಡಾಡು.” ಎಂದು ಕಾಳಜಿಯಿಂದ ಹೇಳಿದಾಗ ಅಮ್ಮ ಅದಕ್ಕುತ್ತರವಾಗಿ ”ಅಯ್ಯೋ, ನಾವು ಓದುಬರಹ ಬರದ ಹಳ್ಳಿಹೆಣ್ಣುಮಕ್ಕಳು. ಹಬ್ಬ-ಹರಿದಿನ, ಜಾತ್ರೆ, ಮದುವೆ-ಮುಂಜಿ, ವ್ರತ, ತಿಥಿ, ಗೃಹಪ್ರವೇಶ ಇದು ಮತ್ತೊಂದು ಇದ್ದಾಗ ಮಾತ್ರ ಹೊರಗೆ ಹೋಗೋದು. ಆಗೆಲ್ಲಾ ಇರೋದರಲ್ಲೇ ಒಳ್ಳೆ ಸೀರೆ ಉಟ್ಟುಕೊಂಡು ಹೀಗೆ ಹೋಗಿ ಹಾಗೆ ಬರೋದು ಅಷ್ಟೇ. ಉಳಿದಹಾಗೆ ನಾವೆಲ್ಲಿ ಮನೆಯಿಂದ ಆಚೆಗೆ ಹೋಗ್ತೀವಿ ಹೇಳು? ಮನೆಕೆಲಸ ಮಾಡೋದರಲ್ಲೇ ನಮ್ಮ ಇಡೀ ಜೀವನ ಕಳೆದುಹೋಗತ್ತೆ. ಹೊರಗಡೆ ಅಡ್ಡಾಡೋರು ನೀವು. ನೀವು ಹುಷಾರಾಗಿರಿ.” ಎಂದು ಫೋನಿಕ್ಕಿದ್ದಳು. ಆ ಮಾತುಗಳು ತಾಕಿಬಿಟ್ಟಿದ್ದವು.

ಮತ್ತೊಂದು ಕರೆಯಲ್ಲಿ ‘ಆ ತೆಂಗಿನಕಾಯಿ ಮಾರುತ್ತಿದ್ದ ಪಾರ್ವತಿ ರಾತ್ರೊರಾತ್ರಿ ಉಸಿರು ತಗಳಕೆ ಆಗವಲ್ತು ಅಂತ ಆಂಬುಲೆನ್ಸಾಗ ತಗಂಡೋದ್ರು. ಹೋದದ್ದೇ ಖರೆ. ವಾಪಸ್ಸೇ ಬರ್ಲಿಲ್ಲ.’ ಅವಳ ದನಿಯಲ್ಲಿ ನಡುಕವಿತ್ತು.

ಜೇಬಿನಿಂದ ಫೋನನ್ನು ಹೊರತೆಗೆದು ಫೇಸ್ಬುಕ್ಕಿನಲ್ಲಿ, ಇನ್ಸ್ಟಾ ಮತ್ತು ಟ್ವಿಟರಿನೊಳಗಡೆ ಒಂದು ಸುತ್ತು ಹಾಕಿಬರುವ ಮನಸ್ಸಾಗಿ ಹೆಬ್ಬೆರಳಿನಿಂದ ಸ್ಕ್ರಾಲ್ ಮಾಡುತ್ತಾ ಹೋದೆ. ಕೆಲವರು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ಸೋತು ಹೋದ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದರು. ಮತ್ತೊಂದಷ್ಟು ಜನ ಸರ್ಕಾರವಾದರೂ ಎಷ್ಟು ಮಾಡಲಿಕ್ಕೆ ಸಾಧ್ಯ? ಮಂತ್ರಿಗಳು ಕೂಡ ನಮ್ಮಂತೆ ಮನುಷ್ಯರು ಎಂದು ಅವರ ಪರ ವಹಿಸಿದ್ದರು. ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕುತ್ತಿರಲಿಲ್ಲ, ಆಮ್ಲಜನಕದ ಸರಬರಾಜು ಇರದೆ ಜನ ಸಾಯುತ್ತಿದ್ದರು, ಚಿತಾಗಾರಗಳ ಮುಂದೆ ಕಿಲೋಮೀಟರುಗಟ್ಟಲೆ ಕ್ಯೂ ಇತ್ತು. ಕಳೆದುಕೊಂಡವರ ರೋದನ, ಕೋವಿಡ್ ಜಾಗೃತಿ ಮೆಸೇಜುಗಳು ಜಾಲತಾಣಗಳನ್ನು ತುಂಬಿಬಿಟ್ಟಿದ್ದವು. ಅದರ ನಡುವೆಯೇ ಜನ ಅವರವರಿಗೆ ಹೊಂದುವಂತೆ ಭೀಕರ ದಿನಗಳ ಖಾಲಿತನಗಳಿಂದ ಹೊರಬರುವುದಕ್ಕೆ ಪ್ರಯತ್ನಿಸುತ್ತಿದ್ದರು…

ದೇವರ ಕೋಣೆಯೊಳಗಡೆ ಕೆಂಪು ಬಣ್ಣದ ಜೀರೋ ಬಲ್ಬ್ ಹೊತ್ತಿಸಲಾಗಿತ್ತು. ದೇವರ ಕೋಣೆಯ ಬಾಗಿಲನ್ನು ಮುಚ್ಚಿದ್ದರೂ ಸರಳುಗಳಿದ್ದ ಆ ಬಾಗಿಲಿನಿಂದ ಕೆಂಪು ಬಣ್ಣದ ಪ್ರಭೆ ತೂರಿ ಬಂದು ಆಚೆಯೆಲ್ಲಾ ಚೆಲ್ಲಾಡಿತ್ತು. ನನಗದು ಏಕಕಾಲಕ್ಕೆ ಆಸ್ಪತ್ರೆಯ ಆಪರೇಷನ್ ಥಿಯೇಟರಿನ ಕೋಣೆಯ ಹೊರಗಿರುವ ಪುಟ್ಟ ಬಲ್ಬಿನಂತೆ, ಸರಳುಗಳಿದ್ದ ಆ ಬಾಗಿಲು ಜೈಲಿನ ಬಾಗಿಲಿನಂತೆ ಕಂಡಿತು.

ವಾರ್ತೆಯಲ್ಲಿ, ಸತ್ತ ತನ್ನ ಗಂಡನ ಶವವನ್ನು ಆಸ್ಪತ್ರೆಯಿಂದ ಹೊರಗೊಯ್ಯಲು ನಾಲ್ಕು ಲಕ್ಷ ಕೇಳಿದ್ದರಿಂದ ಗಂಡನ ಶವವನ್ನು ಅಲ್ಲಿಯೇ ಬಿಟ್ಟು ಊರಿಗೆ ಹೊರಟಿದ್ದಳು. ಉತ್ತರಪ್ರದೇಶದ ತಾಜಮಹಲಿನೂರು ಆಗ್ರಾದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಗಂಡನಿಗೆ ಹೆಂಡತಿ ತಾತ್ಕಾಲಿಕವಾಗಿಯಾದರೂ ಆಮ್ಲಜನಕ ನೀಡಲು ಬಾಯಿಗೆ ಬಾಯಿಟ್ಟು ಉಸಿರನೂದಿದ ಘಟನೆ ಕಣ್ಣೆದುರಿಗೆ ಬಂತು. ಹೋದ ವರ್ಷ ತಮ್ಮ ಸಹೋದ್ಯೋಗಿಯ ತಂದೆ, ಈ ವರ್ಷ ಮತ್ತೊಬ್ಬ ಸಹೋದ್ಯೋಗಿಯ ವೃದ್ಧ ತಂದೆ ತಾಯಿಗಳು ಒಂದು ದಿನದ ಅಂತರದಲ್ಲಿ ಸತ್ತು ಹೋಗಿದ್ದು ನೆನಪಾಯಿತು.

ಪೀಜಿಯ ಮಾಲೀಕನಿಗೆ ಕೋವಿಡ್ ಬಂದಾಗ ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಾಗ ಅವರಿವರ ಕಾಲಿಡಿದು ರಾತ್ರೋರಾತ್ರಿ ತಮ್ಮೂರು ಆಂಧ್ರಕ್ಕೆ ಬಾಡಿಗೆ ಕಾರ್ ಮಾಡಿಕೊಂಡು ತೆರಳಿದ್ದುದು ನೆನಪಾಯಿತು. ರಾತ್ರಿ ಹನ್ನೊಂದು ಗಂಟೆಗೆ ಧಡ್ ಧಡ್ ಬಾಗಿಲು ಬಡಿದವರೆ ಅಣ್ಣನಿಗೆ ಹುಷಾರಿಲ್ಲ. ಊರಿಗೆ ಹೋಗ್ತಾ ಇದೀವಿ. ಸ್ವಲ್ಪ ಪೀಜಿ ಕಡೆ ನೋಡಿಕೊಳ್ಳಿ ಎಂದು ಹೇಳಿ ಕೈಯಲ್ಲೊಂದಿಷ್ಟು ಹಣ ಇಟ್ಟು ಹೋಗಿದ್ದರು. ಹೋಗುವಾಗ ಓನರ್ ಹೆಂಡತಿಯ ಕಣ್ಣುಗಳಲ್ಲಿದ್ದ ದುಗುಡ ಅನಿಶ್ಚಿತತೆಯ ದೃಶ್ಯ, ಆ ಒದ್ದಾಟ ಕಣ್ಣಿಗೆ ಕಟ್ಟಿದಂತೆ ಇದೆ.

ಕರ್ಫ್ಯೂ ಆಗಿ ಅಂಚೆ ವ್ಯವಸ್ಥೆ ನಿಂತು ಹೋಗಿತ್ತು. ಒಂದು ಮುಖ್ಯವಾದ ಪಾರ್ಸೆಲ್ ಅಂಚೆ ಇಲಾಖೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಊರಿನಲ್ಲಿರುವ ಹೈಸ್ಕೂಲ್ ಗೆಳೆಯ ಆನಂದನಿಗೆ ಫೋನ್ ಮಾಡಿದ್ದೆ. ಅವರ ತಂದೆ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು. ‘ಏನಾದರೂ ಮಾಡಕ್ಕಾಗತ್ತಾ?’ ಕೇಳಿದ್ದೆ. ಆಗ ಚೆನ್ನಾಗೆ ಮಾತಾಡಿದ್ದ. ಅದಾಗಿ ಒಂದು ವಾರಕ್ಕೆ ಫೇಸಬುಕ್ಕಲ್ಲಿ ‘ರೆಸ್ಟ್ ಇನ್ ಪೀಸ್ ಆನಂದ್’ ಎಂದು ಸುದ್ದಿ ಬಂತು. ಕೋವಿಡ್ ಇಷ್ಟು ಹತ್ತಿರಕ್ಕೆ ಬಂತು. ಒಂದು ಸಾಂಕ್ರಾಮಿಕ ರೋಗ ಎಲ್ಲವನ್ನೂ ಹೀಗೆ ಕಸವನ್ನು ಬುಟ್ಟಿಯಲ್ಲಿ ಹಾಕಿ ಹೊತ್ತೊಯ್ಯುವಂತೆ ಮನುಷ್ಯರನ್ನು ಹೊತ್ತೊಯ್ಯಲು ಆರಂಭಿಸಿತ್ತು. ವ್ಯಾಪಾರವೇ ಇಲ್ಲದೆ ಜನ ಊಟಕ್ಕಾಗಿ ಪರದಾಡಿದ್ದರು.

ಮೊದಲ ಅಲೆಯಲ್ಲಿ ಊರು ತೊರೆದು ಉದ್ಯೋಗ ಅರಸಿಕೊಂಡುಬಂದ ಕಾರ್ಮಿಕರನ್ನು ಮಹಾನಗರ ಅದು ಹೇಗೆ ನಡೆಸಿಕೊಂಡಿತು?!

ಕತ್ತಲು
ಕೆಂಡದ ಹಾದಿ
ಬರಿಗಾಲು
ಅಟ್ಟಿಸಿಕೊಂಡು ಬರುವ ಅದೃಶ್ಯ ಅಲೆ
ಉಳಿಯವುದಕ್ಕಾಗಿ ದಿಕ್ಕೆಟ್ಟು ಓಡುವ ಚಿತ್ರಗಳು
ಬ್ಯಾಗಿನೊಳಗಡೆ ಒಂದೆರಡು ಜೊತೆ ಬಟ್ಟೆ
ಭರವಸೆಗಿರಲಿ ಎಂದು ಎದೆಯ ಜೋಳಿಗೆಯಲೊಂದು ಪುಟ್ಟ ದೇವರು
ದಾರಿಯಲ್ಲಿ ಹಸಿವಾದರೆ ಒಂದೆರಡು ಪಾರ್ಲೆಜಿ
ನಡಿಗೆ

ಡಿ
ಗೆ
ಕನಸುಗಳ ಕೈಹಿಡಿದು
ಊರಮನೆಗೆ ಬೆನ್ನು ಮಾಡಿ
ನಗರದ ಉದರದೊಳಗೆ ಬಂದು ಸೇರಿದಾಗ
ನಮ್ಮ ನಿದ್ರೆಗೆ ಸಲ್ಲಬೇಕಾದ ಒಂದಷ್ಟು ಕತ್ತಲನ್ನು ದಯಪಾಲಿಸುತ್ತಾ
ಮಡಿಲಲ್ಲಿ ಮಲಗಿಸಿ ತಟ್ಟುತ್ತಾ ಜೋಗುಳ ಹಾಡುತ್ತಿತ್ತು ನಗರ ಇಲ್ಲಿಯವರೆಗೂ
ನಗರದ ಪ್ರೀತಿಯಲ್ಲಿ ಬಿದ್ದವರು ನಾವು
ನಮಗೆ ಈ ಮಹಾನಗರವೇ ಮನೆಯಾಗಿತ್ತು

ಯಾವುದೋ ಕುದಿಬಿಂದುವಿನಲ್ಲಿ
ಬಿಲದಿಂದ ಮಾಯವಾಗುವ ಘಳಿಗೆ
ಮಹಾಮಾರಿ ಆವರಿಸಿದೆ ಊರತುಂಬಾ
ನಗರಕ್ಕೀಗ ಕರುಣೆಯಿಲ್ಲ
ನಮ್ಮ ನಡಿಗೆಯ ಹೆಜ್ಜೆಸಪ್ಪಳಕ್ಕೆ
ತಟ್ಟೆ ಬಡಿತದ ಹಿನ್ನಲೆ ಸಂಗೀತ ಕೊಡುತ್ತಿದೆ
ಬಹುಷಃ ಅದು ನಗರದ ರೋದನೆಯಿರಬಹುದು!
ಪ್ರಿಯ ಮಹಾನಗರವೇ
ಸಾಧ್ಯವಾದರೆ
ಭರವಸೆಗೆಂದು ನೀನೆ ಹಚ್ಚಿಟ್ಟ ದೀಪದ ಬೆಳಕಿನಲ್ಲಿ
ನಮ್ಮ ಹೆಜ್ಜೆಗುರುತುಗಳ ವಾಸನೆ ನೋಡು
ನಮ್ಮ ವಿದಾಯದ ನೋವು ನಿನಗೆ ತಾಗುತ್ತದೆ

ಈ ಮಹಾನ್ ವಲಸೆಯಲ್ಲಿ
ನಡೆಯುತ್ತಾ ನಡೆಯುತ್ತಾ
ಕಾರ್ಮಿಕರ ಕಾಲುಗಳು ಕುಸಿದವು
ಕೆಲವು ಹೆಜ್ಜೆಗುರುತುಗಳು ಮಧ್ಯದಲ್ಲೇ ಮಾಯವಾದವು
ಅವರು ಅರ್ಧ ಕಟ್ಟಿದ ಅಪಾರ್ಟ್ಮೆಂಟುಗಳು
ಪೂರ್ಣಗೊಳ್ಳುವ ಆಸೆ ಬಿಟ್ಟು ಬಿಕ್ಕಳಿಸಿದವು
ಹಸಿದು ಮಾಯವಾದವರ ಶಾಪದ ಫಲದಿಂದ
ನಗರಕ್ಕೆ ಅಜೀರ್ಣದ ಸಮಸ್ಯೆ
ನಗರಗಳೀಗ ನಿದ್ರಿಸುವುದಿಲ್ಲ
ಅದರ ಬೆಳಕುಗಳು ಸದಾ ಎಚ್ಚರವಿರುತ್ತವೆ
ಮುನಿಸಿಕೊಂಡು ಮನೆಬಿಟ್ಟು ಹೋದ ಮಕ್ಕಳು ಮತ್ತೆ ಮರಳಿಬರುವಾಗ ದಾರಿ ನಿಚ್ಚಳ ಕಾಣಲೆಂದು!!!

***

ಯಾವುದೇ ಮಹಾಸಾಂಕ್ರಾಮಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವುದು ಬಡವರು. ಯಾಕೆಂದರೆ ಅವರ ಬಳಿ ಪ್ರಾಣ ಉಳಿಸಿಕೊಳ್ಳಲು ಬಡಿದಾಡುವುದಕ್ಕೆ ದುಡ್ಡೇ ಇರುವುದಿಲ್ಲ. ಹಾಗಾಗಿ ಮಹಾಸಾಂಕ್ರಾಮಿಕ ನಿಷ್ಕರುಣಿ. ಈ ಹೋಲಿಕೆಗಳನ್ನು ಒತ್ತಟ್ಟಿಗಿಟ್ಟು ನೋಡಿದರೆ ಎಲ್ಲರ ದುಃಖವೂ ಒಂದೆ… ಏಕೆಂದರೆ ಕಳೆದುಕೊಳ್ಳುವುದರ ನೋವು ಗೊತ್ತು ನಮಗೆ…

ಈ ಸದ್ಯಕ್ಕೆ ಕೋವಿಡ್ ಕಾಲ ಮುಗಿದಿದೆ. ಉಳಿಯುವುದಕ್ಕಾಗಿ ಎರಡು ಡೋಸು ವ್ಯಾಕ್ಸಿನ್ ತೆಗೆದುಕೊಂಡಾಗಿದೆ. ಅದರ ಪರಿಣಾಮಗಳ ಕಥೆ ಮುಂದೆ ನೋಡಿಕೊಳ್ಳೋಣ. ಅಪ್ಪನಿಗೆ ಜನರಲ್ ಚೆಕಪ್ ಎಂದು ಧಾರವಾಡದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಪ್ರತಿಯೊಬ್ಬ ಮಧ್ಯಮ ವರ್ಗದ ಭಾರತೀಯರಂತೆ ವೈದ್ಯರ ಸಹಾಯಕಿ ನರ್ಸರನ್ನು ಪರಿಚಯ ಮಾಡಿಕೊಂಡಿದ್ದೆವು. ಊರಿಂದ ಹೋಗುವಾಗ ಅವರಿಗೆ ಕರೆ ಮಾಡಿ ವೈದ್ಯರ ಅವೆಲೆಬಿಲಿಟಿ ಚೆಕ್ ಮಾಡಿಕೊಂಡು ಹೋಗುತ್ತಿದ್ದೆವು. ಸುಮಾರು ಐವತ್ತರ ವಯಸ್ಸಿನ ನಗುಮೊಗದ ಧಡೂತಿ ಹೆಣ್ಣುಮಗಳು. ಅಪ್ಪನಂತೂ ಅವರ ಇಷ್ಟಾರ್ಥ ಕೇಳಿಕೊಂಡು ಊರಿನಿಂದಲೇ ರೊಟ್ಟಿ ಬೆಂಡಿಕಾಯಿ ಪಲ್ಯ, ನವಣೆ ಅಕ್ಕಿ ಪ್ಯಾಕೇಟ್ಟು, ಉಪ್ಪಿನಕಾಯಿ ಡಬ್ಬಿ ಎಲ್ಲವೂ ಹೊತ್ತುಕೊಂಡು ಹೋಗಿ ಅವರೆಷ್ಟೆ ಬೇಡವೆಂದರೂ ಒತ್ತಾಯ ಮಾಡಿ ಕೊಟ್ಟುಬರುತ್ತಿದ್ದರು.

ಈ ಬಾರಿ ಹೋದಾಗ ಅವರು ಕೋವಿಡ್ ಬಂದು ತೀರಿಕೊಂಡರು ಎಂದರು. ಒಂದು ಕ್ಷಣ ಮೌನ. ಅಪ್ಪನನ್ನು ನೋಡಿದೆ. ಒಂದು ಘನ ಮೌನದ ಮುಖಮುದ್ರೆ ಹೊತ್ತು ಕುಳಿತಿದ್ದರು. ಸಾವಿನ ವಿಪರೀತ ಸುದ್ದಿ ನಮ್ಮನ್ನು ಸ್ಥಿತಪ್ರಜ್ಞರನ್ನಾಗಿ ಮಾಡುತ್ತಿದ್ದಿರಬೇಕು. ತಪಾಸಣೆ ಮುಗಿಸಿಕೊಂಡು ಆಸ್ಪತ್ರೆಯಿಂದ ಹೊರಬಂದು ಕಾರಲ್ಲಿ ಕುಳಿತುಕೊಂಡೆವು. ಡ್ರೈವರ್ ಕಾರನ್ನು ಚಾಲೂ ಮಾಡಲು ಅಣಿಯಾದ. ಮುಂದಿನ ಸೀಟಲ್ಲಿ ಕೂತಿದ್ದ ಅಪ್ಪ ಹಳೆಯ ತನ್ನ ನೋಕಿಯಾ ಡಬಲ್ ಒನ್ ಡಬಲ್ ಜ್ಹೀರೊ ಸೆಟ್ಟು ಕೊಟ್ಟು ಆ ನರ್ಸ್ ನಂಬರ್ ಅಳಿಸಿಬಿಡು ಎಂದರು. ನನ್ನ ಕೈಗಳು ಅದನ್ನು ಇಸಿದುಕೊಂಡವು. ‘ಅನಿತಾ ನರ್ಸ್, ಧಾರವಾಡ’ ಎಂದು ಹುಡುಕಿದವು. ಡಿಲೀಟ್ ಮಾಡುವಾಗ ಕೈಗಳು ನಡುಗಿದವು. ಕಾರಿನಲ್ಲಿ ಅಸಾಧ್ಯ ಮೌನವಿತ್ತು… ಯಾರು ಯಾರನ್ನು ಕಳೆದುಕೊಂಡರು? ಲೋಕ ಅವರನ್ನು ಕಳೆದುಕೊಂಡಿತೇ? ಅಥವಾ ಲೋಕವನ್ನು ಅವರು ಕಳೆದುಕೊಂಡರೆ? ತಿಳಿಯಲಿಲ್ಲ…