ಕವಿಶೈಲಕ್ಕೆ ಎಷ್ಟೊಂದು ಜನರು  ಪ್ರವಾಸಿಗರಾಗಿ ಬಂದಿದ್ದರು!  ಬಂದಷ್ಟು ಜನರಲ್ಲಿ ಕೇವಲ ಒಂದು ಪರ್ಸೆಂಟ್‌ ನಷ್ಟು ಮಾತ್ರದವರು ಕೆಲಕಾಲ ಸುಮ್ಮನೆ ಇದ್ದು ಹೋದರು. ಬಹುತೇಕರು ಎಲ್ಲಿ ನಿಂತುಕೊಂಡರೆ ಫೋಟೋ ಚೆನ್ನಾಗಿ ಬರಬಹುದು? ರೀಲ್ಸ್‌ಗೆ ಯಾವ ಜಾಗ ಸೂಕ್ತ? ಅನ್ನುವ ಯೋಚನೆಯಲ್ಲಿದ್ದವರೇ. ‘ಮಾತಿಲ್ಲಿ ಮೈಲಿಗೆ’ ಎಂಬ ಕವಿವಾಣಿಯ ಫಲಕವು ಯಾವುದೇ ಸಂದೇಶವನ್ನು ರವಾನಿಸುತ್ತಿಲ್ಲವೇ ಎಂದು ಅಚ್ಚರಿ ಪಡುತ್ತ, ಪ್ರಕೃತಿಯ ರಮ್ಯತೆಯನ್ನು ಸವಿಯಲು ನಡೆಸಿದ ಒಂದು ಪ್ರಯತ್ನವಿದು.  ಸುತ್ತಲಿನ ಮೌನವನ್ನು ಸವಿಯುವುದಕ್ಕೆ ಮುಂಜಾನೆ  ಮಂಜಿನಲ್ಲಿ ಕುಪ್ಪಳಿಯ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದ ಒಂದು ಅನುಭವವನ್ನು ಪ್ರಸ್ತುತಪಡಿಸಿದ್ದಾರೆ ರೂಪಶ್ರೀ ಕಲ್ಲಿಗನೂರು.

“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ”- ಪೂರ್ಣಚಂದ್ರ ತೇಜಸ್ವಿ

ನಾವು ಕಟ್ಟಿಕೊಂಡಿರುವ ಜಗತ್ತಿನಲ್ಲಿ ಏನುಂಟು? ಏನಿಲ್ಲ? ಈಗೆಲ್ಲ ನಾವು ಎಲ್ಲಿಗೆ ಬಂದು ನಿಂತಿದ್ದೇವೆಂದರೆ ದುಡ್ಡು ಕೊಟ್ಟರೆ ಅಪ್ಪ-ಅಮ್ಮನ ಹೊರತು ಅಕ್ಷರಶಃ ಮಿಕ್ಕಿದ್ದೆಲ್ಲವೂ ನಮ್ಮ ಬೆರಳ ತುದಿಗೆ ಬಂದು ನಿಲ್ಲುತ್ತವೆ. ಆದರೆ ಪ್ರಕೃತಿಯನ್ನು ಮಾತ್ರ ನಮಗೆ ಬೇಕಾದಂತೆ ತಿರುಚಿಬಿಡಲು ಸಾಧ್ಯವೇ ಇಲ್ಲ. ಪ್ರಕೃತಿಯೊಂದಿಗೆ ಬಾಂಧವ್ಯ ಬೆಸೆದುಕೊಳುವ ಬಯಕೆಯಿದ್ದಲ್ಲಿ ನಮ್ಮನ್ನು ನಾವು ಅದಕ್ಕೆ ಅರ್ಪಿಸಿಕೊಂಡರೇನೆ, ಅದು ತಂತಾನೇ ಗರಿ ಬಿಚ್ಚಿ ನಿಲ್ಲುವ ನವಿಲಿನಂತೆ, ತನ್ನೊಡಲೊಳಗಿನ ಬೆರಗುಗಳನ್ನು ಒಂದೊಂದಾಗಿ ಒಂದೊಂದಾಗಿ ನಮ್ಮ ಮುಂದಿಡುತ್ತಾ ಹೋಗುತ್ತದೆ. ಇಲ್ಲವಾದರೆ ಅದರೊಟ್ಟಿಗಿನ ಅನುಸಂಧಾನವನ್ನು ಆಗುಮಾಡಲು ಸಾಧ್ಯವೇ ಇಲ್ಲ. ಶಿಶು ಸಹಜ ಕುತೂಹಲವನ್ನು ನಮ್ಮೊಳಗೆ ಉಳಿಸಿಕೊಂಡಷ್ಟೂ ನಾವು ನಿರಂತರವಾಗಿ ಪ್ರಕೃತಿಯ ಬೆರಗುಗಳಿಗೆ ಕಣ್ಣಾಗಿ, ನಮ್ಮ ಹುಟ್ಟಿಗೆ ಇನ್ನಷ್ಟು ಮತ್ತಷ್ಟು ಅರ್ಥ ದೊರಕಿಸಬಹುದು.
ಕಳೆದವಾರ ಸ್ನೇಹಿತನ ಮದುವೆಯ ನಿಮಿತ್ತ ಕೊಪ್ಪಕ್ಕೆ ಹೋಗಿದ್ದೆವು. ಕೊಪ್ಪಕ್ಕೆ ಹೋದಮೇಲೆ ಕುಪ್ಪಳಿಗೆ ಹೋಗದೇ ಬರಲಾಗುತ್ತದೆಯೇ? ಒಂದು ಕಿಲೋಮೀಟರೀನ ಹಾದಿಯಷ್ಟೇ ಇರುವ ಕುಪ್ಪಳಿಯ ರಸ್ತೆಯಲ್ಲಿ, ಕುಪ್ಪಳಿಸುತ್ತ… ಕುಪ್ಪಳಿಸುತ್ತ… ಕವಿಮನೆ, ಕವಿಶೈಲ, ಪೂಚಂತೇ ಸ್ಮಾರಕದ ಜೊತೆಗೆ ನವಿಲುಕಲ್ಲು ಗುಡ್ಡವನ್ನು ನೋಡದೇ ಬರುವುದಾದರೂ ಹೇಗೆ.

ವಾರಾಂತ್ಯಕ್ಕೆ ಅಲ್ಲಿನ ನಮ್ಮ ಭೇಟಿಯನ್ನು ಹಮ್ಮಿಕೊಂಡಿದ್ದರಿಂದ ಒಂದು ದಿನ ಮಧ್ಯಾಹ್ನದ ಧಗಧಗಿಸುವ ಬಿಸಿಲು ಮತ್ತು ಸೆಖೆಯನ್ನು ಕಳೆದು ಸಂಜೆ ಕುಪ್ಪಳಿಗೆ ಹೋಗಿ ಕವಿಮನೆಯ ದಾರಿ ಹಿಡಿದೆವು. ಆ ದಿನ ಬೆಳಗ್ಗೆ ನಾಲ್ಕಕ್ಕೆ ಎದ್ದು ಕುಂದಾದ್ರಿ ಬೆಟ್ಟಕ್ಕೆ ಹೋಗಿ, ನಂತರ ಶೃಂಗೇರಿಗೂ ಹೋಗಿ ಬಂದದ್ದರಿಂದ ಮಧ್ಯಾಹ್ನ ಮೂರರ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಇಲ್ಲವಾದರೆ ನಾವು ಮಧ್ಯಾಹ್ನ ಊಟ ಮಾಡುವವರಲ್ಲ. ಹಾಗಾಗಿ ಮೊದಲು ಕ್ಯಾಂಟೀನ್‌ನಲ್ಲಿ ಒಂದೊಂದು ರೈಸ್‌ ಬಾತ್‌ ಹಾಗೂ ಒಂದು ಪ್ಲೇಟ್‌ ಮಿರ್ಚಿ ಭಜ್ಜಿ ಬಾರಿಸಿಕೊಂಡೆ ಕವಿಮನೆಯ ಹಾದಿ ಹಿಡಿದೆವು. ಅಲ್ಲಿ ನೋಡಿದರೆ ಜನ ಜಂಗುಳಿ. ಹೊರಗೂ ಒಳಗೂ ರೇಶ್ಮೆ ಸೀರೆಯುಟ್ಟ ಹೆಣ್ಮಕ್ಕಳ ಜೊತೆಗೆ ಜೋರು ದನಿಯಲ್ಲಿ ಮಾತಾಡುವ ಗಂಡಸರ ದಂಡು. ಅಷ್ಟು ಸದ್ದುಗದ್ದಲಗಳ ನಡುವೆ ಯಾಕೋ ಕವಿಮನೆಯ ಒಳಗೆ ಹೋಗಲು ಮನಸ್ಸಾಗಲೇ ಇಲ್ಲ. ದೂರದಿಂದಲೇ ಕಾಂಪೌಂಡ್‌ನ ಆಚೆ ನಿಂತು, ಇಡೀ ಮನೆಯನ್ನೊಮ್ಮೆ ಕಣ್ತುಂಬ ನೋಡಿಕೊಂಡು, ಕವಿಶೈಲದ ಕಡೆ ಹೆಜ್ಜೆಯಿಟ್ಟೆವು.

ಕವಿಶೈಲಕ್ಕೆ ಹೋಗುವಾಗ ಒಂದು ನಂಬಿಕೆ ನನ್ನದು. ಕವಿಶೈಲ ಇಂಥ ಪ್ರವಾಸಿಗರಿಗೆ ಬೋರ್‌ ಎನ್ನಿಸಬಹುದು, ಹಾಗಾಗಿ ಅಲ್ಲಿ ಒಂಚೂರು ಗದ್ದಲ ಗೌಜು ಕಡಿಮೆ ಇರಬಹುದು ಎಂದು. ಆದರೆ ಕವಿಶೈಲದಲ್ಲಿನ ಪಾರ್ಕಿಂಗ್‌ ಜಾಗದಲ್ಲಿ ನಿಂತ ವಾಹನಗಳನ್ನು ನೋಡಿಯೇ ಅವಾಕ್ಕಾಗಿ ಹೋದೆ.

ಅಲ್ಲಲ್ಲಿ ನೆಡಲಾಗಿದ್ದ ಕವಿವಾಣಿಗಳ ಫಲಕವನ್ನು ಓದಿಕೊಂಡು, ಬಂಡೆಗಳ ಮೇಲೆ ಹಾದು, ಕಲಾವಿದ ಕೆ.ಟಿ. ಶಿವಪ್ರಕಾಶರ ಕೈಚಳಕದಲ್ಲಿ ಮೂಡಿದ ಉದ್ದ-ಅಗಲದ ಬೃಹದಾಕಾರದ ಕಲ್ಲಿನ ಕಲಾಕೃತಿಗಳನ್ನು ನೋಡುತ್ತ, ಕವಿ ಸಮಾಧಿಗೊಂದು ನಮನ ಸಲ್ಲಿಸಿದೆವು. ಸಂಜೆ ನಾಲ್ಕೂವರೆ ಆದರೂ ಆಗಿನ್ನೂ ಬಿಸಿಲು ತಣಿದಿರಲಿಲ್ಲ. ಹಾಗಾಗಿ ಮರದ ನೆರಳನ್ನು ಹುಡುಕಿಕೊಂಡು, ಬಂಡೆಗಲ್ಲೊಂದರ ಮೇಲೆ ಸುಮ್ಮನೆ ಕುಳಿತೆವು.

ಜನ ಸಮೂಹ ನಿರಂತರವಾಗಿ ಬಂದು ಹೋಗುತ್ತಲೇ ಇತ್ತು. ಕುಟುಂಬಗಳು, ಸ್ನೇಹಿತರ ಗುಂಪು, ಅಪ್ಪ-ಅಮ್ಮ ಮಕ್ಕಳ ಪುಟ್ಟ ಕುಟುಂಬ, ಹೀಗೆ ಬೇರೆ ಬೇರೆ ತೆರನಾದ ಗುಂಪುಗಳು ಬಂದು ಹೋಗುತ್ತಿದ್ದವು. ದೊಡ್ಡದೊಡ್ಡ ಗುಂಪಿನಲ್ಲಿ ಬಂದು ಹೋಗುವ ಕುಟುಂಬಗಳದ್ದಂತೂ ಭಾರೀ ಗದ್ದಲ. ಮಕ್ಕಳಕ್ಕಿಂತ ದೊಡ್ಡವರ ಗಂಟಲುಗಳು ಊರಗಲ. ಆಚೀಚೆ ಕುವೆಂಪುರವರ ಸಮಾಧಿಯ ಮೇಲೂ ಓಡಾಡುವ ಮಕ್ಕಳನ್ನು ಹಿಡಿದಿಡಲಾರದೇ, ದೊಡ್ಡ ಬಾಯಿಯಲ್ಲಿ ಸಂಸಾರದ ತಾಪತ್ರಯಗಳನ್ನು ಅಲ್ಲಿ ಮಾತಾಡುತ್ತ ಓಡಾಡುತ್ತಿದ್ದರೆ, ಕವಿಶೈಲದ ಪ್ರಶಾಂತತೆಯಲ್ಲಿ ಕಳೆದುಹೋಗಲು ಬಂದಿದ್ದ ನಾವು ಪೆಚ್ಚುಮೋರೆ ಹಾಕಿಕೊಂಡು ಜನರ ಮಂಗಾಟಗಳನ್ನು ನೋಡುತ್ತಿದ್ದೆವು. ಸಾಕಷ್ಟು ನೋಡಿನೋಡಿಯೇ ಅಲ್ಲಿದ್ದ ಸ್ಮಾರಕ ನಿರ್ವಹಣೆಯ ಸಿಬ್ಬಂದಿಯನ್ನು ಇಲ್ಲಿ ಕನಿಷ್ಠ ಒಂದೈದಾರು ಆದರೂ “ಶ್‌…” ಬೋರ್ಡನ್ನು ಹಾಕಿಸಲು ಪ್ರಯತ್ನಿಸಿ.. ಎಂದು ವಿನಂತಿಸಿಕೊಂಡೆ. ಆದರವರು ನಸುನಗುತ್ತ… ಮೇಡಂ ಹೊರಗಡೆ,  ‘ಮಾತಿಲ್ಲಿ ಮೈಲಿಗೆ’ ಅಂತ ಹೇಳಿರುವ ಕುವೆಂಪು ಅವರ ಮಾತನ್ನೇ ಕೆತ್ತಿಸಿ ಹಾಕಿದ್ದಾರೆ. ಆದರೆ ಅದನ್ನ ಓದುವರ್ಯಾರು? ಅಂತ ಕೇಳಿದರು ಹೌದು. ಅಷ್ಟು ಸೂಕ್ಷ್ಮ ಮನಸ್ಸಿನ ಯಾರಿಗಾದರೂ ಈ ಮಾತು ಮನಸ್ಸಿಗೆ ನಾಟುತ್ತದೆ… ಅಲ್ಲದವರಿಗೆ? ಶ್… ಅಂತಲೇ ಹೇಳಬೇಕಲ್ಲವೇ..

ಪ್ರಕೃತಿಯೊಂದಿಗೆ ಬಾಂಧವ್ಯ ಬೆಸೆದುಕೊಳುವ ಬಯಕೆಯಿದ್ದಲ್ಲಿ ನಮ್ಮನ್ನು ನಾವು ಅದಕ್ಕೆ ಅರ್ಪಿಸಿಕೊಂಡರೇನೆ, ಅದು ತಂತಾನೇ ಗರಿ ಬಿಚ್ಚಿ ನಿಲ್ಲುವ ನವಿಲಿನಂತೆ, ತನ್ನೊಡಲೊಳಗಿನ ಬೆರಗುಗಳನ್ನು ಒಂದೊಂದಾಗಿ ಒಂದೊಂದಾಗಿ ನಮ್ಮ ಮುಂದಿಡುತ್ತಾ ಹೋಗುತ್ತದೆ. ಇಲ್ಲವಾದರೆ ಅದರೊಟ್ಟಿಗಿನ ಅನುಸಂಧಾನವನ್ನು ಆಗುಮಾಡಲು ಸಾಧ್ಯವೇ ಇಲ್ಲ.

ಕವಿಮನೆಯಾಗಲೀ, ಅಥವಾ ಕವಿಶೈಲವಾಗಲೀ ಅವುಗಳ ಗುಣವೇ ಬೇರೆ… ತನ್ನನ್ನು ನೋಡಬರುವವರನ್ನು ತನ್ನ ಪ್ರಶಾಂತ ಒಡಲಿಗಿ ಹಾಕಿಕೊಂಡು ಮಂತ್ರಮುಗ್ಧರನ್ನಾಗಿಸುತ್ತವೆ. ನೋಡಲು ಬರುವ ಪ್ರವಾಸಿಗರಿಗೆ ಆ ಸ್ಥಳದ ಮಹತ್ವದ ಅರಿವಿದ್ದರೆ ಈ ಅನುಭೂತಿ ಸಾಧ್ಯ. ಅಲ್ಲದೇ ಮದುವೆಯ ದಿಬ್ಬಣದಂತೆ ಸದ್ದು ಗದ್ದಲಗಳೊಟ್ಟಿಗೆ ಬಂದು ಹೋಗುವ ಜನರಿರುವವರೆಗೂ, ಆ ಸ್ಥಳ ತನಗೆ ತಾನೇ ಅಪರಿಚಿತವಾದಂತೆ ಕಂಡಿತು. ಕವಿ ಸಮಾಧಿಯ ಸುತ್ತಮುತ್ತಲಿನ ಹಸಿರು ಹುಲ್ಲು ಹಾಸು, ಬಂಡೆಗಲ್ಲುಗಳು ಎಲ್ಲೆಲ್ಲೂ ಜನವೋ ಜನ. ಅಮ್ಯೂಸ್‌ಮೆಂಟ್‌ ಪಾರ್ಕುಗಳಲ್ಲಿ ಓಡಾಡುವಂತೆ ಜನ ಅಲ್ಲಿ ಗದ್ದಲ ಮಾಡುತಲಿ ನಿರತರಾಗಿದ್ದರು. ಅರೇ ಏನಿದು… ಇವರೆಲ್ಲ ಇಲ್ಲಿ ಬಂದದ್ದು ಯಾಕೆ? ಕವಿಮನೆಯೂ ಕವಿಶೈಲಿಯೂ ಕೇವಲ ಪ್ರವಾಸಿಗರ ಒಂದು ಪ್ರೇಕ್ಷಣೀಯ ತಾಣಗಳಲ್ಲಿ ಒಂದಾಗಿ ಹೋಯ್ತ ಎಂದು ಬೇಸರವಾಯ್ತು. ನಿಜಕ್ಕೂ ಇಂಥ ಪ್ರವಾಸಿಗರು ಕುಪ್ಪಳಿಗೆ ಬರದಿರುವುದೇ ಲೇಸು.

ಮಿತ್ರರಿರೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋ¬ಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುತಲ ಧರಾತಲದಿ!
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? – ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಎಂದು ಹೇಳಿರುವುದು ಸುಮ್ಮನೆಯೇ…

ಬಂದಷ್ಟು ಜನರಲ್ಲಿ ಕೇವಲ ಒಂದು ಪರ್ಸೆಂಟ್‌ ನಷ್ಟು ಮಾತ್ರದವರು ಕೆಲಕಾಲ ಸುಮ್ಮನೆ ಇದ್ದು ಹೋದರು. ಬಹುತೇಕರು ಎಲ್ಲಿ ನಿಂತುಕೊಂಡರೆ ಫೋಟೋ ಚೆನ್ನಾಗಿ ಬರಬಹುದು? ರೀಲ್ಸ್‌ಗೆ ಯಾವ ಜಾಗ ಸೂಕ್ತ? ಅನ್ನುವ ಯೋಚನೆಯಲ್ಲಿದ್ದವರೇ.

ಸಮಯ ೫:೧೫ರ ಹೊತ್ತಿಗೆ ಒಂದು ದೊಡ್ಡ ಕುಟುಂಬವೊಂದು ಬಂದು. ಹದಿನೈದು ಇಪ್ಪತ್ತು ಜನರಿದ್ದಿರಬಹುದು ಅವರಲ್ಲಿ. ತಲೆನೋವು ಬರುವ ಮಟ್ಟಿಗೆ ವಿಪರೀತ ಗದ್ದಲ ಮಾಡುತ್ತಿದ್ದರು. ಒಂದು ಕಡೆ ನಿಲ್ಲುವವರು ಯಾರೆಂದರೆ ಯಾರೂ ಇಲ್ಲ. ಸಾಲನ್ನು ಯಾರಾದರೂ ಡಿಸ್ಟರ್ಬ್‌ ಮಾಡಿದಾಗ ದಿಕ್ಕೆಟ್ಟು ಓಡಾಡುವ ಇರುವೆಗಳಂತೆ ಅವರೆಲ್ಲ ಓಡಾಡುತ್ತಿದ್ದರು. ಅವರ ಕುಟುಂಬದ ಒಬ್ಬ ಹುಡುಗ ಬಂದವನೇ… “ಓ ಬಂಡೆ ಚೆನ್ನಾಗಿದೆ.. ಒಂದ್‌ ಕಲ್‌ ಕೊಡಿ… ಏನಾದ್ರೂ ಗೀಚ್ತೀನಿ..” ಅಂದುಬಿಡೋದ! ಒಂದು ಕ್ಷಣ ಎದೆ ಧಸಕ್ಕೆಂದು ಹೋಯ್ತು. ಅವನ ಮಾತಿಗೆ ಯಾರೂ ಹೂಂ ಅಂತಲೂ ಅನ್ನಲಿಲ್ಲ.. ಹಾಗೆ ಮಾಡ್ಬಾರ್ದಪ್ಪ ಅಂತಲೂ ಅನ್ನಲಿಲ್ಲ. ಹಾಗಾಗಿ ನಾವು ಆ ಕುಟುಂಬ ಅಲ್ಲಿಂದ ಜಾಗ ಖಾಲಿ ಮಾಡುವವರೆಗೆ ಹುಡುಗನ ಮೇಲೆ ಎರಡೂ ಕಣ್ಣಿಟ್ಟು ಕುಳಿತಿದ್ವಿ. ಸದ್ಯ ಆವತ್ತು ಅವನು ಹಾಗೆ ಎಲ್ಲೂ ಗೀಚಲು ಹೋಗಲಿಲ್ಲವಷ್ಟೆ!

ಹಿಂದಿನ ದಿನ ಸಂಜೆಯ ಭೇಟಿ ಮನಸ್ಸಿಗೆ ಒಂಚೂರು ಸಮಾಧಾನ ತಂದಿರಲಿಲ್ಲ ಹಾಗಾಗಿ. ಮಾರನೆಯ ದಿನ ಬೆಳಗ್ಗೆ ಆರು ಗಂಟೆಗೇ ಕುಪ್ಪಳಿಗೆ ಹಾಜರಾಗಿದ್ವಿ. ಎಲ್ಲೆಲ್ಲೂ ಮಂಜೆಂದರೆ ಮಂಜು. ಹಸಿರ ಮೇಲೆಲ್ಲ ಇಬ್ಬನಿಯ ಹನಿಗಳು ಕುಳಿತು, ಹಸಿರ ಬಣ್ಣ ಮಸುಕು ಮಸುಕಾಗಿ ಕಾಣುತ್ತಿತ್ತು. ಆ ಹೊತ್ತಿಗೆ ಕವಿಮನೆಯ ಸುತ್ತಮುತ್ತೆಲ್ಲ ಯಾರೊಬ್ಬರ ಸುಳಿವೂ ಇಲ್ಲದೇ, ತನ್ನ ಪಾಡಿಗೆ ತಾನು ಬೆಳಗನ್ನು ಆನಂದಿಸುತ್ತಿತ್ತು.

ಕವಿಮನೆಯ ಪಕ್ಕದಲ್ಲಿರುವ ಕಾಲುಹಾದಿಯನ್ನು ಹಿಡಿದು, ಕವಿಶೈಲಕ್ಕೆ ಹೋದೆವು. ಅಲ್ಲಲ್ಲಿ ನೀಲಿ, ಹಳದಿ, ಬಿಳಿ ಹೂವಿನ ಗಿಡಮರಗಳು ನಮ್ಮನ್ನು ಕರೆದಂತೆ ಅನ್ನಿಸುತ್ತಿತ್ತು. ಅವುಗಳಿಂದ ನಾಲ್ಕೈದು ಹೂಗಳನ್ನು ಕಡ ಪಡೆದು, ಹೂ ಪಕಳೆಗಳಿಗೆ ಘಾಸಿಯಾಗದಂತೆ ಅಂಗೈಯಲ್ಲಿ ಹಿಡಿದುಕೊಂಡು, ಒಂದೊಂದೆ ಮೆಟ್ಟಿಲೇರಿ ಕವಿಶೈಲ ತಲುಪಿದೆವು. ಆಹಾ… ಎಂಥ ಬೆಳಗದು… ಯಾರೆಂದರೆ ಯಾರೂ ಇಲ್ಲ… ಆ ತಣ್ಣನೆಯ ಬೆಳಗಿನಲ್ಲಿ ಕವಿ ಇನ್ನೊಂಚೂರು ಹೊತ್ತು ಹೆಚ್ಚು ನಿದ್ರಿಸುತ್ತಿರಬಹುದು. ನಮ್ಮ ಅಂಗೈಯಲ್ಲಿನ ಹೂಗಳು ಕವಿ ಸಮಾಧಿಯ ಮೇಲೆ ಕೂತು ನಗಲಾರಂಭಿಸಿದ್ದೇ, ನಾವು ಬಲಗಡೆ ಕಾಣುವ, ಕರಿ ಚಾದರದಂತೆ ಹಬ್ಬಿರುವ ಬಂಡೆಗಲ್ಲುಗಳ ಮೇಲೆ ಕೂತು ಸೂರ್ಯನಿಗಾಗಿ ಕಾಯಲಾರಂಭಿಸಿದೆವು… ಸುತ್ತೆಲ್ಲ ಸಂಪೂರ್ಣ ನಿಶ್ಯಬ್ಧ. ತಣ್ಣನೆಯ ಬಂಡೆಯ ಮೇಲೆ ಕೂತು ಮೈಯೆಲ್ಲ ಕಣ್ಣಾಗಿಸಿ ಕುಳಿತವರಿಗೆ ಸುತ್ತಮುತ್ತಲು ಯಾವೆಲ್ಲ ಪಕ್ಷಿಗಳು ಬಿಡಾರ ಹಾಕಿವೆ ಎಂದು ಅವುಗಳ ಕೂಗಿನಿಂದಲೇ ತಿಳಿಯುತ್ತಿತ್ತು. ಎಲ್ಲಕ್ಕಿಂತ ಅಲ್ಲೆಲ್ಲೋ ಯಾರದ್ದೋ ಮನೆಯ ಕೋಳಿಯಂತೂ, ನಾನಿಲ್ಲಿದ್ದೀನಿ… ನಾನಿಲ್ಲಿದ್ದೀನಿ… ಕೊಕ್ಕೊಕ್ಕೋ.. ಕ್ಕೋ…. ಎಂದು ಕೂಗುತ್ತಲೇ ಇತ್ತು. ಜೊತೆಗೆ ಸುಯ್ಯೆಂದು ತಣ್ಣಗೆ ಬೀಸುವ ತಂಗಾಳಿ.. ಆದರೆ ಅವತ್ತು ಮಂಜಿನ ಮುಸುಕು ಸುಮಾರು ಕಾಲ ಸರಿಯಲೇ ಇಲ್ಲ. ಸೂರ್ಯನನ್ನು ನೋಡುವ ನೆವದಲ್ಲಿ ಸಾಕಷ್ಟು ಹೊತ್ತು ನಾವೂ ಕವಿಶೈಲದ ಬೆಳಗಿನ ಪ್ರಸನ್ನತೆಯಲ್ಲಿ ಕಳೆದುಹೋಗಿದ್ದೆವು.

ಮತ್ತೆ ಅದೇ ಧ್ಯಾನದಲ್ಲಿ ಸುಮ್ಮನೇ ಕವಿಶೈಲದ ಮೆಟ್ಟಿಲುಗಳನ್ನು ಇಳಿದು ಬರುವಾಗ ಎರಡು ನವಿಲುಗಳೂ ಸಿಕ್ಕು ಅಂದಿನ ನಮ್ಮ ಬೆಳಗು ಮತ್ತಷ್ಟು ನಳನಳಿಸಿತು.

(ಫೋಟೋ ಕೃಪೆ: ವಿಪಿನ್‌ ಬಾಳಿಗಾ)