ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು…
ಚಂದ್ರಕಾಂತ ಪೋಕಳೆ ಅನುವಾದಿಸಿದ ಆಶಾ ಬಗೆಯವರ ಮರಾಠಿ ಕಾದಂಬರಿ “ಸೇತು” ಇಂದ ಕೆಲವು ಪುಟಗಳು ನಿಮ್ಮ ಓದಿಗೆ

ಐದು ಗಂಟೆಗೆ-
ಸುಚಿತಾ ರಾಘವನ ಹಾದಿಯನ್ನು ಕಾಯುತ್ತ ಹಾಲ್ ಹೊರಗೆ ನಿಂತಿದ್ದಳು. ಅವನೇ ಅವಳಿಗೆ ಫೋನು ಮಾಡಿ, ಸಮಯವನ್ನು ನೀಡಿದ. ಕಾನ್ಫರೆನ್ಸ್ ಬಳಿಕ ಅಲ್ಲೇ ಭೇಟಿಯಾಗಲು ಕರೆಸಿಕೊಂಡನು. ಐದು ಹೊಡೆದು ಹೋಗಿತ್ತು. ಮೇಲೆ ಹತ್ತು ನಿಮಿಷ ಉರುಳಿತ್ತು. ಗಡಿಯಾರ ನೋಡುತ್ತ ಹಾದಿ ಕಾಯುವದು ಅವಳಿಗೆ ತೀರ ಕಷ್ಟವೆನಿಸಿತು. ಹೊರಟು ಬಿಡಬೇಕು ಎನ್ನುವಷ್ಟರಲ್ಲಿ ರಾಘವ ಬಂದ. ಅವಳ ಒಂದು ಕಡೆಯ ಮುಖ ಅವನಿಗೆ ಗೋಚರಿಸಿತು. ಸೂರ್ಯನ ಹೊಂಬಣ್ಣದ ಕಿರಣ ಅವಳ ಮುಖದ ಮೇಲೆ ಬಿದ್ದಿತ್ತು. ಗಾಳಿಗೆ ಹಾರುವ ಓಢನಿಯನ್ನು ಅವಳು ಸತತ ಸರಿ ಮಾಡಿಕೊಳ್ಳುತ್ತಿದ್ದಳು. ಅವಳ ಮೈಬಣ್ಣ ಬಿಳಿ, ಎತ್ತರ, ಗೋಣಿನವರೆಗೆ ಕತ್ತರಿಸಿದ ಕೂದಲು, ನಿನ್ನೆ ಗಮನಕ್ಕೆ ಬಂದ ಕಣ್ಣೊಳಗಿನ ಹಳದಿ ಗೆರೆ… ಅವಳಂತೂ ಡಾ. ನಿಯೋಗಿಯಂತೆ ಖಂಡಿತ ಕಾಣುತ್ತಿರಲಿಲ್ಲ.

“ಬಹಳ ಹೊತ್ತು ಹಾದಿ ಕಾಯಬೇಕಾಯಿತೇ?’’

“ಹೆಚ್ಚೇನಿಲ್ಲ” ಎಂದು ಹೇಳುವದು ಕಷ್ಟವಾಗಿತ್ತು.

“ಈಗ ಚಹಾ ಸಮಯ. ನೀವು ಬರುತ್ತೀರೋ, ಏನು ಹಾದಿ ಕಾಯುತ್ತೀರೋ? ಅದನ್ನು ತಪ್ಪಿಸಿ ಬರುವದು ಯೋಗ್ಯವೆನಿಸುವದಿಲ್ಲ”.

“ನಾನೇ? ನಾನೇಕೆ ಬರಲಿ?’’

“ಬನ್ನಿ, ನಿಮ್ಮ ಪರಿಚಯ ಮಾಡಿಕೊಡುತ್ತೇನೆ. ಡಾ. ನಿಯೋಗಿಯವರ ಪರಿಚಯ ಎಲ್ಲರಿಗೂ ಇದೆ”.

“ಡಾ. ನಿಯೋಗಿಯ ಮಗಳೆಂದು ಪರಿಚಯ ಮಾಡಿಕೊಡುವದಾಗಿದ್ದರೆ ಬೇಡವೇ ಬೇಡ”. ಅವಳು ನಗುತ್ತ ಹೇಳಿದಳು.

“ಬೇರೆ ಹೇಗೆ ಪರಿಚಯ ಮಾಡಿಸಲಿ?’’ ಎಂದು ಚೇಷ್ಟೆಯಿಂದ ಅವನಿಗೆ ಕೇಳ ಬೇಕೆಂದೆನಿಸಿತು. ಆದರೂ ತಡೆದುಕೊಂಡ.

“ನಾನಿಲ್ಲೇ ಹಾದಿ ಕಾಯುತ್ತೇನೆ” ಅವಳು ಹೇಳಿದಳು.

“ಹಾಗಾದರೆ ನಾನು ಹೇಳಿ ಬರುತ್ತೇನೆ” ಅವನು ಎಂದ.

ಅವರಿಬ್ಬರೂ ಹೊರಗೆ ಬಿದ್ದಾಗ ಸಾಕಷ್ಟು ಕತ್ತಲಾಗಿತ್ತು. ತನ್ನ ಸಿಟ್ಟನ್ನು ನೆನಪು ಮಾಡಿಕೊಡಲು ಅವಳು ಹೇಳಿದಳು, ‘‘ನೀವೇಕೆ ಐದು ಗಂಟೆ ಎಂದು ಹೇಳಿದಿರಿ? ಸ್ವಲ್ಪ ಹೊತ್ತು ಬಿಟ್ಟು ಬರಲು ಹೇಳಿದ್ದರೆ ಆಗುತ್ತಿತ್ತು”.

“ಇಷ್ಟು ಹೊತ್ತು ಆಗಬಹುದೆಂದು ನಾನು ಭಾವಿಸಿರಲಿಲ್ಲ. ಹೊರ ಬರುವದು ಕಷ್ಟವಾಯಿತು. ಈ ಪರಿಸರ ಸುಂದರವಾಗಿದೆ. ಐದು ನಿಮಿಷ ಹಾದಿ ಕಾಯುವದೇನೂ ಕಷ್ಟವಾಗಲಾರದು ಎಂದೆನಿಸಿತು”.

ಆಗವಳು ಮುದುಡಿ ಹೇಳಿದಳು, ‘‘ಬೇರೆ ಕಡೆ ಲಕ್ಷ್ಯವಿರಲಿಲ್ಲ”.

(ಆಶಾ ಬಗೆ)

“ನನಗೂ ಸಮಯವಿದ್ದಿದ್ದರೆ ಆ ದಿಕ್ಕಿಗೆ ಹೋಗುತ್ತಿದ್ದೆ. ಬೆಟ್ಟವಿದೆ, ಅದರಾಚೆ ಕೆರೆಯಿದೆ. ನಾನು ಬೆಳಿಗ್ಗೆ ತಿರುಗಾಡಲು ಹೋಗಿದ್ದೆ. ಆ ಸಮಯದಲ್ಲಿ ನಿಮ್ಮನ್ನು ಕರೆಯುವದು ಸರಿ ಕಾಣಲಿಲ್ಲ”.

ಅವಳು ಸ್ವಲ್ಪ ಜೋರಾಗಿ ನಕ್ಕಳು. ಕೆಲ ಕ್ಷಣ ಯಾರೂ ಮಾತಾಡಲಿಲ್ಲ.
“ಚಳಿ ಎಂದರೆ ನನಗೆ ಇಷ್ಟ” ಅವನು ಹೇಳಿದ.

“ಇಷ್ಟವೇ? ದಿಲ್ಲಿಗೆ ಬಂದು ನೋಡಿ, ಹೆಪ್ಪುಗಟ್ಟಿದಂತೆ ಆಗುತ್ತದೆ”.

“ನಾನು ಹಲವು ಸಲ ದಿಲ್ಲಿಗೆ ಹೋಗುತ್ತೇನೆ”.
ಅವನು ಸ್ವಲ್ಪ ಸಮಯದ ನಂತರ ಸ್ನಿಗ್ಧತೆಯಿಂದ ನೋಡುತ್ತ ಮೆಲ್ಲಗೆ ಕೇಳಿದ-

“ದಾದಾ ನಿಮಗೇನಾದರು ಹೇಳಿದರೆ?’’

“ಇಲ್ಲ”

“ಸರಿ ಹಾಗಾದರೆ. ನಾನೇ ನಿಮ್ಮ ಜೊತೆ ಮಾತಾಡುತ್ತೇನೆ ಎಂದಿದ್ದೆ. ನಿಮಗೂ ಎಲ್ಲ ಗೊತ್ತಿದೆ ಎಂದೆ ಭಾವಿಸುತ್ತೇನೆ”.

“ಗೊತ್ತಿದೆ”

“ನನಗೆ ಒಪ್ಪಿಗೆಯಿದೆ. ದಾದಾ ನಿಮ್ಮ ಸ್ವತಂತ್ರ ಪ್ರವೃತ್ತಿಯ ಬಗೆಗೆ ಹೇಳಿದ್ದರು. ಹಳೇ ರೂಢಿಗಿಂತ ಬೇರೆ ಅಂತ. ಹಾಗೆ ಪ್ರತಿಯೊಬ್ಬನು ಸ್ವತಂತ್ರವಾಗೇ ಬದುಕುತ್ತಿರುತ್ತಾನೆ. ಒಬ್ಬ ಮತ್ತೊಬ್ಬನಿಗಿಂತ ಭಿನ್ನ. ಒಬ್ಬನ ಬದುಕು ಮತ್ತೊಬ್ಬನದು ಆಗಿರುವದಿಲ್ಲ. ಹೀಗಾಗಿ ನನಗೆ ನಿಮ್ಮ ಪ್ರತ್ಯೇಕ ಸ್ವಭಾವವನ್ನು ಸ್ವೀಕರಿಸುವದೇನೂ ಕಷ್ಟವಾಗಲಾರದು. ಯೋಚಿಸ ಬೇಕಾಗಿರುವದು ನೀವು”.

“ನೀವು ನನ್ನ ಬಗೆಗೆ ಏಕೆ ಯೋಚಿಸುತ್ತಿದ್ದೀರಾ? ಡಾ. ನಿಯೋಗಿಯ ಮಗಳೆಂದೇ?’’

ಅವನು ಬೆಚ್ಚಿದ ಮತ್ತು ನಸುನಕ್ಕ, “ಡಾ. ನಿಯೋಗಿಯವರ ಸಂಬಂಧವನ್ನು ನಾನು ನಿರಾಕರಿಸುವದಿಲ್ಲ. ಆದರೆ ಅವರ ಕಾರಣದಿಂದಾಗಿ ನಾನು ನಿಮ್ಮ ಬಗ್ಗೆ ಯೋಚಿಸುತ್ತೇನೆ ಎನ್ನುವದು ತಪ್ಪು. ನೀವಾದರೂ ಈ ಸಂಬಂಧವನ್ನು ಅದು ಹೇಗೆ ನಿರಾಕರಿಸುತ್ತೀರಿ?”

“ನಾನಂತೂ ಅವರ ಮಗಳೇ”

“ನಾನು ಹೇಳುವದೂ ಅದನ್ನೇ. ಅವರ ದೊಡ್ಡಸ್ತಿಕೆ ನಿರ್ವಿವಾದ. ನೀವು ಅವರ ಮಗಳಾಗಿರುವುದೂ ಸತ್ಯವೇ. ಅವರ ಪತ್ರ ಬಂದ ಬಳಿಕವೇ ನಾನು ನಿಮ್ಮ ಬಗೆಗೆ ಯೋಚಿಸಿದೆ. ಆದರೆ ನಿಮ್ಮ ಭೇಟಿಯಾಗಬೇಕಾದರೆ ಈ ಸಂದರ್ಭಗಳೆಲ್ಲ ಬೇಕೇ ಬೇಕು ಎನ್ನುವುದನ್ನಾದರೂ ಒಪ್ಪುತ್ತೀರಾ?”
ಅವಳಿಗೆ ನಗೆ ಬಂತು.

“ಈಗ ಮಾತ್ರ ಡಾ. ನಿಯೋಗಿಯ ಸಂದರ್ಭದ ಹೊರತಾಗಿಯೂ ನಿಮ್ಮ ಬಗೆಗೆ ಸ್ವತಂತ್ರವಾಗಿ ಯೋಚಿಸಬಲ್ಲೆ”.
ಸ್ವಲ್ಪ ಸಮಯ ನಡೆದ ಬಳಿಕ ಅವಳು ನಿಂತಳು. ಓಢನಿಯಿಂದ ಮೈ ಮುಚ್ಚಿ ಕೊಂಡಳು.

“ನಿಮಗೆ ಚಳಿ ಎನಿಸುತ್ತಿದೆಯೇ?’’

“ಬರುವಾಗ ಸ್ವೆಟರು, ಶಾಲು ತರುವ ನೆನಪಾಗಲಿಲ್ಲ”.
ಅವನು ಸ್ವಂತ ಕೋಟನ್ನು ಅವಳಿಗೆ ನೀಡಿದ.

“ನಿಮಗೆ?’’

“ಸ್ವೆಟರ್ ಧರಿಸಿದ್ದೇನೆ?’’

“ನೀವು”

“ನೀವು ತಪ್ಪು ಭಾವಿಸದಿದ್ದರೆ ಒಂದು ಮಾತು ಹೇಳುತ್ತೇನೆ”. ಅವಳು ನಡೆಯುತ್ತ ನಡೆಯುತ್ತ ಹೇಳಿದಳು.

“ಪ್ರಯತ್ನಿಸುತ್ತೇನೆ”

“ದಾದಾ ಒಮ್ಮೆಲೆ ಫೋನು ಮಾಡಿ ಕರೆಯಿಸಿಕೊಂಡರು. ಕಾರಣ ಏನೂ ಹೇಳಲಿಲ್ಲ. ಪತ್ರ ಸಹ ಬರೆಯಲಿಲ್ಲ. ಗಾಬರಿಯಿಂದ ನಾನು ಓಡಿ ಬಂದೆ. ಪತ್ರ ಕಳಿಸಿ, ವಿವರವಾಗಿ ಬರೆದಿದ್ದರೆ ನನಗೂ ಯೋಚಿಸಲು ಅವಕಾಶ ಸಿಗುತ್ತಿತ್ತು. ಸರಿಯಾಗಿ ನಾನು ಹೇಳಬಹುದಿತ್ತು. ನಿಮಗೂ ತೊಂದರೆ ಕೊಡುವ ಪ್ರಶ್ನೆ ಬರುತ್ತಿರಲಿಲ್ಲ”.

ಅವನೂ ತನ್ನ ಉಸಿರು ಬಿಗಿ ಹಿಡಿದು, ಬಳಿಕ ಹೇಳಿದ – ‘‘ನಾನಂತೂ ಬರಲೇ ಬೇಕಿತ್ತು”.

“ಅದು ನಿಮ್ಮ ಕೆಲಸಕ್ಕಾಗಿ” ಸ್ವಲ್ಪ ತಡವರಿಸಿ ಹೇಳಿದಳು, ‘‘ನಾನು ಮತ್ತು ಬ್ರಿಜ್ ಮೋಹನ ಸಿಂಗ್, ಅವರು ಇಲೆಕ್ಟ್ರಾನಿಕ್ಸ್ ಇಂಜಿನಿಯರ್, ದಿಲ್ಲಿಯಲ್ಲೇ ಸರ್ವಿಸ್ ಮಾಡುತ್ತಾರೆ. ಮೂರು ವರುಷಗಳ ಪರಿಚಯ ನಮ್ಮದು. ನಮ್ಮಿಬ್ಬರ ವಿಷಯಗಳಿಗೆ ವಿದೇಶದಲ್ಲಿ ತುಂಬ ಸ್ಕೋಪ್ ಇದೆ. ಇಷ್ಟೆಲ್ಲ ಲಭಿಸಿದ ಬಳಿಕ ಕೇವಲ ಲಗ್ನಕ್ಕಾಗಿಯೇ ಅದನ್ನೆಲ್ಲ ಬಿಡುವದು ಸರಿ ಕಾಣುವದಿಲ್ಲ. ನಾವು ಮದುವೆಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ನಾವು ಕೂಡಿಯೇ ಓಡಾಡುತ್ತಿದ್ದಾಗ, ಎಂದೂ ಈ ವಿಷಯ ಪ್ರಸ್ತಾಪಗೊಳ್ಳಲಿಲ್ಲ” ಅವಳು ಒಂದೇ ಉಸಿರಿಗೇ ಹೇಳಿದಳು.

ಅವನು ನೋಡುತ್ತಲೇ ಇದ್ದ.

“ನಿಮ್ಮ ಮನದೊಳಗೆ ಇದೆಯೇ?’’

“ಇರಬಹುದು. ನೀವು ತುಂಬ ಒಳ್ಳೆಯವರು, ಇದರಲ್ಲಿ ಶಂಕೆಯೇ ಇಲ್ಲ. ದಾದಾ ಅವರಿಗೆ ನೀವು ಇಷ್ಟವಾಗಿದ್ದೀರಿ. ಇಲ್ಲದಿದ್ದರೆ ನಮ್ಮ ದಾದಾ ನನ್ನ ಲಗ್ನದ ಬಗೆಗೆ ಯೋಚಿಸಿ, ನಿಮ್ಮನ್ನು ಕರೆಯಿಸಿ ಇಷ್ಟೆಲ್ಲ ಮಾಡಬಹುದೆಂದು ಯೋಚಿಸಿಯೂ ಇರಲಿಲ್ಲ. ನೀವು ಸಂತೋಷದ ಆಸೆ ನೀಡಿದಿರಿ ನನಗೆ. ಆದರೂ… ನನಗನಿಸುತ್ತದೆ ನಾನು ಸಾಕಷ್ಟು ಹೇಳಿದ್ದೇನೆ”.

“ಹೌದು. ನನಗೆಲ್ಲ ಅರ್ಥವಾಯಿತು” ಅವನ ಮುಖದ ಮೇಲೆ ನಸುನಗೆ ಮೂಡಿತು…

“ನಾನು ನಾಳೆಯೇ ಹೊರಡುತ್ತೇನೆ…’’ ಅವಳು ಅಲ್ಲಿಗೇ ವಿಷಯ ಮುಗಿಸಿದಳು.

“ನಾಳೆಯೇ?’’ ಅವನು ಕೇಳಿದ.

“ಹೌದು. ನಾನು ನನ್ನ ಕೆಲಸ ಬೇಗ ಮುಗಿಸಬೇಕಿದೆ” ಈಗವಳು ಮನೆಗೆ ಮರಳುವ ಯೋಚನೆಯಲ್ಲಿದ್ದಳು.

“ನಿಮ್ಮ ಕೆಲಸದ ವಿಷಯದ ಬಗೆಗೆ ಹೇಳುತ್ತೀರಾ?”

“ಕೆಲಸದ ಬಗೆಗೆ?’’ ಅವಳು ಅಚ್ಚರಿಯಿಂದ ಕೇಳಿದಳು.

“ಹೌದು. ನಿಮ್ಮ ವಿಷಯ… ನಿಮ್ಮ ಥೀಸಿಸ್…”

ಅವಳು ನಡಿಗೆಯ ವೇಗವನ್ನು ಕಡಿಮೆ ಮಾಡಿದಳು. ಅವನಿಗೆ ಹೇಳಲಾ ರಂಭಿಸಿದಳು. ಅವನು ಕೇಳಿದ್ದು ಕೇವಲ ಒಂದು ನಿಮಿತ್ತವಾಗಿತ್ತು.
“ನನ್ನ ಪಿಎಚ್.ಡಿ.ಯ ವಿಷಯವು ರಿಪ್ರಾಡಕ್ಟಿವ್ ಇಮ್ಯುನಾಲಜಿ. ಆದರೆ ಈಗಲೇ ಈ ವಿಷಯದ ಅಂತಿಮ ಹಂತಕ್ಕೆ ಅನುಸರಿಸಿ ಮುಂದಿನ ಹಲವು ಸಾಧ್ಯತೆಗಳು ನನಗೆ ಗೋಚರಿಸುತ್ತಿವೆ. ಪ್ರಾಯಶಃ ನನ್ನ ಪಿಎಚ್.ಡಿ.ಗೆ ಇದು ಆರಂಭವಾಗಿರಲೂಬಹುದು. ನಿಜವಾದ ಆಳ, ಅನಂತವೀಗ ಮುಂದೆ ಇರಬಹುದು. ನಾನು ಈಗ ದಡದಲ್ಲಿ ನಿಂತಿರ ಬಹುದು. ಲ್ಯಾಬ್‍ನಲ್ಲಿ…”

ಮಾತಿನ ನಡುವೆ ಅವಳು ನಿಂತಳು. ಒಬ್ಬ ಅಪರಿಚಿತನ ಎದುರಿಗೆ ತಾನೇಕೆ ತನ್ನ ವಿಷಯದ ಬಗೆಗೆ ಹೇಳಿಕೊಳ್ಳುತ್ತಿದ್ದೇನೆ ಎಂಬ ಅರಿವಿನಿಂದ ಮುದುಡಿದಳು. ಆದರೂ ಅವನು ಆಲಿಸುತ್ತಲೇ ಇದ್ದ. ಅವಳು ನಡುವೆ ನಿಲ್ಲಿಸಿದ್ದು ಅವನ ಅರಿವಿಗೆ ಬಂತು.

“ಹೇಳಿ… ಹೇಳಿ…”

“ದಾದಾ ಒಮ್ಮೆಲೆ ಫೋನು ಮಾಡಿ ಕರೆಯಿಸಿಕೊಂಡರು. ಕಾರಣ ಏನೂ ಹೇಳಲಿಲ್ಲ. ಪತ್ರ ಸಹ ಬರೆಯಲಿಲ್ಲ. ಗಾಬರಿಯಿಂದ ನಾನು ಓಡಿ ಬಂದೆ. ಪತ್ರ ಕಳಿಸಿ, ವಿವರವಾಗಿ ಬರೆದಿದ್ದರೆ ನನಗೂ ಯೋಚಿಸಲು ಅವಕಾಶ ಸಿಗುತ್ತಿತ್ತು. ಸರಿಯಾಗಿ ನಾನು ಹೇಳಬಹುದಿತ್ತು. ನಿಮಗೂ ತೊಂದರೆ ಕೊಡುವ ಪ್ರಶ್ನೆ ಬರುತ್ತಿರಲಿಲ್ಲ”.

“ತಾನು ರಾಚೆಸ್ಟರ್ ಯೂನಿವರ್ಸಿಟಿಯ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದೇನೆ. ನನಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಸಿಗಬಹುದು. ಡಾ. ಮಾರೀಸ್ ಝಾವೂಡರಸಿ, ಅಲ್ಲಿ ಕ್ಯಾನ್ಸರ್ ರಿಸರ್ಚ್ ಸೆಂಟರ್‌ನಲ್ಲಿದ್ದಾರೆ”.

“ಕ್ಯಾನ್ಸರ್?’’ ಅವನು ಕೇಳಿದ.

“ಹೌದು. ಕ್ಯಾನ್ಸರ್ ಇದ್ದಾಗ ದೇಹದ ಮೆಕೆನಿಝಂ ಹೇಗಿರುತ್ತದೆ, ಅದಕ್ಕೆ ಸಂಬಂಧಿಸಿದ ರಿಸರ್ಚ್… ಕ್ಯಾನ್ಸರಿನ ಮೂಲ ಕಾರಣದವರೆಗೂ ಅದು ತಲುಪ ಬಹುದು…’’

ಅವಳು ಮತ್ತೆ ತನ್ನ ಮಾತು ನಿಯಂತ್ರಿಸಿಕೊಂಡಳು. ತನ್ನ ವಿಷಯದ ಕುರಿತು ತನ್ಮಯಳಾಗಿ ಹೇಳುವ ಅವಳನ್ನು ಅವನು ನೋಡುತ್ತಲೇ ಇದ್ದ.
ಕೆಲಕ್ಷಣ ಆ ಶಾಂತ ರಸ್ತೆಯಲ್ಲಿ ಅವರ ಹೆಜ್ಜೆಯ ಸದ್ದು ಕೇಳಿಬರುತ್ತಿತ್ತು. ಅದೇ ಕಾಲಕ್ಕೆ ಸ್ಕೂಟರ್ ಒಂದು ವೇಗದಿಂದ ಹಾದು ಹೋಯಿತು. ಅನಂತರ ಸುಚರಿತಾ ಹೇಳಿದಳು,

“ಹೋಗುವ ಮೊದಲು ನೀವು ದಾದಾನಿಗೆ ಹೇಳಿ”.

“ಅಗತ್ಯವಿದೆಯೆ? ನನ್ನ ಬಗೆಗೆ ನಿಮಗೆ ಎಲ್ಲ ಹೇಳುವ ಜವಾಬ್ದಾರಿಯನ್ನು ನಾನೇ ಹೊತ್ತಿದ್ದೇನೆ ಈಗ ಅವರ ಅಗತ್ಯವಿಲ್ಲ, ಆದ್ದರಿಂದ…’’

“ಜವಾಬ್ದಾರಿಯಂತ…’’
ಅದಿರಲಿ,

“ನಾನು ತುಂಬ ಕಠೋರವಾಗಿರುವದರಿಂದ, ದಾದಾ ಈ ಜವಾಬ್ದಾರಿಯನ್ನು ನಿಮ್ಮ ಮೇಲೆ ಹೊರಿಸಿರಬಹುದೇ?’’

“ಇದ್ದಿರಬಹುದು. ಆದರೆ ನನಗೆ ಮಾತ್ರ ನೀವು ತೀರ ಸುಲಭ ಮತ್ತು ನೇರ ವ್ಯಕ್ತಿ ಅನಿಸಿದಿರಿ”

“ಸುಲಭ ವ್ಯಕ್ತಿಯೇ?’’

“ಹೌದು. ನೇರ ಮತ್ತು ಸಾದಾ. ಹಾಗಿರದೆ ಇದ್ದಿದ್ದರೆ ನನ್ನಂತಹ ಒಬ್ಬ ಪರಕೀಯ ಮನುಷ್ಯನ ಎದುರಿಗೆ ಹೀಗೆಲ್ಲ ನೇರವಾಗಿ ಹೇಳುವದು ಸಾಧ್ಯವಿರಲಿಲ್ಲ. ನೀವೆಷ್ಟೇ ನಿರಾಕರಿಸಿದರೂ ನೀವಂತೂ ಡಾ. ನಿಯೋಗಿಯವರ ಮಗಳೇ. ಅವರಂತೆ ನೇರ ಮತ್ತು ಸಾದಾ! ಸುತ್ತಲಿನ ಜಗತ್ತು ಹಾಗಿಲ್ಲ”.
ಸ್ವಲ್ಪ ಹೊತ್ತಿನ ಬಳಿಕ ಮತ್ತೊಂದು ಮಾತು ಹೇಳಿದ ‘‘ನಿಮಗೊಂದು ಮಾತು ಹೇಳುವ ಮೋಹವಾಗುತ್ತಿದೆ”

“ಏನದು?’’

“ನಿಮ್ಮ ಫಿಗರ್ ನೃತ್ಯಕ್ಕೆ ತುಂಬ ಅನುಕೂಲವಾಗಿದೆ”.

(ಚಂದ್ರಕಾಂತ ಪೋಕಳೆ)

“ನೃತ್ಯಕ್ಕೇ?’’ ಅವಳು ಬೆರಗಿನಿಂದ ಕೇಳಿದಳು.

“ಹೌದು. ನೀವು ಮತ್ತು ನಮ್ಮ ಅಮ್ಮನ ನಡುವೆ ತುಂಬ ಸಾಮ್ಯವಿದೆ”.
ಅವನ ಮಾತು ಮರ್ಮಾಂತಿಕವಾಗಿದೆ ಎಂದವಳಿಗನಿಸಿತು. ಅವನು ಮುಂದಕ್ಕೆ ಕೈಯೊಡ್ಡಿ ಹೇಳಿದ –

“ಹೊರಡೋಣ. ನಿಮ್ಮನ್ನು ನಾನು ತಲುಪಿಸಿ ಮರಳುತ್ತೇನೆ”

“ನಾನು ಹೋಗುತ್ತೇನೆ. ನಾನೊಬ್ಬಳೇ ಹೋಗಬಲ್ಲೆ.’’ ಅವನ ಕೈಯಲ್ಲಿದ್ದ ತನ್ನ ಕೈ ಬಿಡಿಸಿಕೊಂಡು ಹೇಳಿದಳು.

“ಆಟೋ ನಿಲ್ಲಿಸುತ್ತೇನೆ. ಕತ್ತಲೆಯಾಗಿದೆ.’’

“ನಾನೇ ಕರೆಯುತ್ತೇನೆ. ಇದು ನನ್ನದೇ ನಗರ. ಥ್ಯಾಂಕ್ಸ್”.

“ಆಲ್ ದಿ ಬೆಸ್ಟ್!’’
ಅವಳು ಕೈ ಎತ್ತಿ ವಿದಾಯ ಹೇಳಿದಳು.

ಅವಳು ಮುಂದೆ ಹೋದಳು. ಮತ್ತೆ ತಿರುಗಿ ನಿಂತಳು. ಅವನ ಕೋಟ್ ಮೈಯಲ್ಲಿತ್ತು. ಅದನ್ನು ಕಳಚಿ ಅವನ ಮುಂದೆ ಹಿಡಿದಳು.

“ಕೋಟು ಇರಲಿ, ಚಳಿಯಿದೆ. ನೀವು ಮನೆಯಲ್ಲಿ ಇಟ್ಟು ಹೋಗಿ. ನಾನು ಡಾ. ನಿಯೋಗಿ ಅವರಿಂದ ಕೇಳಿ ಪಡೆಯುತ್ತೇನೆ. ನೀವು ಯಾವಾಗ ಹೊರಡುತ್ತೀರಿ?’’

“ನಾಳೆ” ಎಂದವಳು ಹೇಳಿ ಸರಸರ ನಡೆದು ಹೋದಳು.
ಎಲ್ಲ ಮಾತಾಡಿ ಮುಗಿದರೂ ಮನದೊಳಗೆ ಎಂಥದೋ ಹೊರೆಯಿತ್ತು.

*****

ದಾದಾ ಬರೆಯುತ್ತ ಕೂತಿದ್ದರು. ಅವರ ಚಿಕ್ಕ-ಚಿಕ್ಕ ಡೊಂಕು ಅಕ್ಷರ ಸರಸರ ಮೂಡಲಾರಂಭಿಸಿತ್ತು. ವಿಷಯ ಟಿಬೇಟಿನ ಸಾಂಸ್ಕೃತಿಕ ಚರಿತ್ರೆಗೆ ಸಂಬಂಧಿಸಿದ್ದು. ಸುಚಿತಾ ಸಮೀಪ ನಿಂತು ಹಿಂಬದಿಯಿಂದ ಸರಸರ ಚಲಿಸುವ ದಾದಾ ಅವರ ಬೆರಳು ನೋಡಲಾರಂಭಿಸಿದಳು. ಬರೆದ ಕಾಗದಗಳ ಪುಟದ ದಪ್ಪವನ್ನು ನೋಡಿದಾಗ, ಅವರು ಬಹಳ ಹೊತ್ತಿನಿಂದ ಬರೆಯುತ್ತಿರಬೇಕೆಂದು ಅನಿಸಿತು. ಅವರನ್ನು ಕರೆಯಲೇ ಬೇಡವೇ? ಇಲ್ಲದಿದ್ದರೆ ತಾನಿಂದು ಹೋಗುತ್ತಿರುವ ವಿಷಯ ತಿಳಿಸುವುದು ಹೇಗೆ? ಕ್ಷಣ ಕಾಲ ನಿಂತು ಅವಳು ದಾದಾ ಬರೆಯುವ ವಿಷಯವನ್ನು ಓದಿದಳು. ದಾದಾ ಅವರಿಗೆ ಈ ಹಠವೇಕೆ ಎಂದೂ ಅನಿಸಿತು. ದಾದಾ ಒಬ್ಬರೇ ಅಲ್ಲ, ದಾದಾನಂತಹ ಹಲವು ಇತಿಹಾಸಕಾರರು, ಚರಿತ್ರೆ ನೀಡುವುದು ಏನು? ನಿನ್ನೆಯದು ಇಂದಿರುವದಿಲ್ಲ. ಇಂದಿನದು ನಾಳೆ ಇರುವುದಿಲ್ಲ. ಪ್ರತಿಕ್ಷಣ ಹೊಸದಾಗಿ ಬರುತ್ತದೆ. ದಾದಾ ಅವರ ಬೆರಳು ಸರಸರ ಸಾಗಿತ್ತು.

“ದಾದಾ…’’ ಸುಚಿತಾ ಕರೆದಳು.

ಬರೆಯುವದನ್ನು ನಿಲ್ಲಿಸದೆ ‘ಏನು?’ ಎಂಬಂತೆ ನೋಡಿದರು.

“ಆಯಾಸವಾಗಲಿಲ್ಲವೇ? ಎಷ್ಟೋ ಹೊತ್ತಿನಿಂದ ಬರೆಯುತ್ತಿದ್ದೀರಿ!’’

“ಇಲ್ಲ. ಕೂತುಕೋ” ಎಂದರು.

“ಬಿಸಿ-ಬಿಸಿ ಚಹಾ ತರಲೇ?’’

ಆಗವರು ಬರವಣಿಗೆಯನ್ನು ನಿಲ್ಲಿಸಿದರು. ಅವಳತ್ತ ನೋಡಿದರು. ಅವಳು ಏನೋ ಹೇಳಲು ನಿಂತಿರುವುದನ್ನು ಕಂಡು, ಕಾಗದಗಳನ್ನು ಎತ್ತಿಟ್ಟರು. ಅದರ ಮೇಲೆ ಭಾರವಿಟ್ಟರು.

“ಇಂದು ತಿರುಗಾಡಲು ಹೋಗಲಿಲ್ಲವೇ?’’

“ಬೇಗ ಎದ್ದು ಹೋಗಿದ್ದೆ. ಬೇಗ ಮರಳಿದೆ.’’

“ದಾದಾ.. ನಾನಿಂದು ಹೊರಡಬೇಕೆಂದಿದ್ದೇನೆ.’’

“ಇಂದೇ?’’

“ಹೌದು, ಪ್ರಬಂಧವನ್ನು ಬರೆದು ಮುಗಿಸಬೇಕಿದೆ. ಅದನ್ನೆಲ್ಲ ಹಾಗೆ ಬಿಟ್ಟು ಬಂದಿದ್ದೇನೆ. ಇಂದು ಹೋದರೆ ಮುಗಿಸಬಹುದು.’’

“ರಿಝರ್ವೇಶನ್?’’

“ಆಫ್ ಸೀಝನ್ ಇದೆ. ಸಿಗುತ್ತದೆ.’’

“ಈಶ್ವರನಿಗೆ ಕಳಿಸು.’’

“ಸರಿ”

“ರಾಘವನ ಜೊತೆ ಮಾತುಕತೆ ಆಯಿತೇ?’’

‘ಹೌದು’ ಅವಳು ತುಣುಕಾಗಿ ಉತ್ತರಿಸಿದಳು. ದಾದಾ ಸಹ ಹಿಂಜರಿಕೆಯಿಂದ ಏನು, ಹೇಗೆ ಎಂದೆಲ್ಲ ಕೇಳಲಿಲ್ಲ. ಆಗ ಅವಳೇ ಹೇಳಿದಳು, ‘‘ನೀವು ಯೋಚಿಸಿದಂತೆ ಏನೂ ಆಗಲಿಲ್ಲ”.

ದಾದಾ ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದರು. ಬಳಿಕ ನಸುನಕ್ಕರು. ಅವರು ಕುರ್ಚಿಯನ್ನು ಹೊರಳಿಸಿ ಸರಿಯಾಗಿ ಕೂತರು. ಆದರೆ ಏನೂ ಹೇಳಲಿಲ್ಲ.

ಅವಳು ಒಮ್ಮೆಲೆ ಹೇಳಿದಳು, ರಾಘವನ ಜೊತೆಯಲ್ಲಿ ಮಾತಾಡಿದಂತೆ, ‘‘ದಾದಾ, ಆಕಸ್ಮಿಕವಾಗಿ ನಿಮ್ಮ ಫೋನ್ ಬಂತು…’’ ಇದನ್ನೆಲ್ಲ ಹೇಳುವಾಗ ರಾಘವನ ಜೊತೆ ಸುಲಭವಾಗಿದ್ದು ಈಗ ತುಂಬ ಕಷ್ಟಕರವೆನಿಸುತ್ತಿರುವದು ಅವಳ ಗಮನಕ್ಕೆ ಬಂತು. ಮುಖ್ಯವಾಗಿ ಬ್ರಿಜ್ ಮೋಹನನ ಬಗೆಗೆ ಹೇಳುವಾಗ ಮತ್ತೂ ಕಷ್ಟವಾಗುತ್ತಿತ್ತು. ತಾವಿಬ್ಬರೂ ಲಗ್ನದ ಬಗೆಗೆ ಏನೂ ಯೋಚಿಸದೆ ಇರುವಾಗ ತಾನು ಬ್ರಿಜ್ ಮೋಹನನ ಬಗೆಗೆ ಯೋಚಿಸುತ್ತಿದ್ದೇನೆ. ರಾಘವನನ್ನು ಹೋಲಿಸಿದಾಗ, ಈ ವಿಷಯವನ್ನು ದಾದಾರಿಗೆ ತಲುಪಿಸುವಾಗ ದಣಿದಂತಾಯಿತು.

ದಾದಾ ಎಲ್ಲವನ್ನೂ ಆಲಿಸಿದರು. ಉಪನ್ಯಾಸ ನೀಡುವಾಗ ಶಾಂತವಾಗಿ ಕ್ರಮೇಣ ಧ್ವನಿಯನ್ನು ಏರಿಸಿ ಒಂದೊಂದೇ ಸಂಗತಿಯನ್ನು ಮಂಡಿಸುವ ರೀತಿಯಲ್ಲಿ ಹೇಳಿದರು, ‘‘ನನಗೆ ಡಾ. ಮೂರ್ತಿ ಹೈದರಾಬಾದಿನ ಒಂದು ವಿಚಾರ ಸಂಕಿರಣದಲ್ಲಿ ಭೇಟಿಯಾದರು. ಅಲ್ಲಿ ಅವರು ನನ್ನ ಭಾಷಣವನ್ನು ಆಲಿಸಲೆಂದೇ ಬಂದಿದ್ದರು. ಅನಂತರ ಪತ್ರ ವ್ಯವಹಾರ ಮುಂದುವರಿಯಿತು. ನನ್ನ ಎದುರಿಗೆ ಕೇವಲ ಅವರು ಮಾತ್ರ ಇದ್ದುದರಿಂದ ಅವರ ಬಗೆಗೆ ಯೋಚಿಸಿದ್ದೇನೆ ಎಂದೇನೂ ಭಾವಿಸಬೇಕಿಲ್ಲ. ನನಗೂ ಅವರ ವರ್ತನೆ ಒಪ್ಪಿಗೆ ಯಾಯಿತು. ಜೀವನದ ಬಗೆಗೆ ಅವರಿಗೆ ಆಳವಾದ ತಿಳುವಳಿಕೆಯಿರುವದು ಗೊತ್ತಾಯಿತು. ಆದರೆ ನಿನಗೆ ಬೇಡವೆಂದಾದರೆ ಮುಂದುವರಿಯುವ ಪ್ರಶ್ನೆಯೇ ಇಲ್ಲ. ನೀನೂ ಅವರಿಗೆ ಇದನ್ನೆಲ್ಲ ಹೇಳಿರಬೇಕಲ್ಲ”.

“ಹೌದು, ಹೇಳಿದ್ದೇನೆ”.

“ಈಗ ನನ್ನ ಪಾತ್ರವೇನು ಎನ್ನುವುದನ್ನು ಹೇಳು”.

“ನಿಮ್ಮ ಪಾತ್ರ?’’

“ಸಂಪ್ರದಾಯವೆಂದು ನಾನು ಬನಾರಸ್‍ನಲ್ಲಿರುವ ಅವರ ಮನೆಗೆ ಅಪ್ರೋಚ್ ಮಾಡಬೇಕೆ?’’

“ದಾದಾ! ನೀವು?’’ ಅವಳು ಬೆರಗಾದಳು.

“ಹಾಗೆ ನಾನು ಯಾವ ಸಂಪ್ರದಾಯವನ್ನೂ ಹೆಚ್ಚು ಒಪ್ಪಿಕೊಂಡವನಲ್ಲ. ಹಾಗೆ ನೀವಿಬ್ಬರೂ ಪರಸ್ಪರರು ಏನೂ ಪ್ರಶ್ನಿಸಲೇ ಇಲ್ಲ. ಹೀಗಾಗಿ ಶುರು ಮಾಡಿಕೊಡಲು ಈ ಪದ್ಧತಿಯೇನು ತಪ್ಪಲ್ಲ…’’

ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು… ಸುಚಿತಾಳ ಎದೆ ತುಂಬಿ ಬಂತು. ದಾದಾನ ಈ ಶಾಂತ ಸ್ವಭಾವವೇ ಅವಳನ್ನು ಚುಚ್ಚಿ ಘಾಸಿಗೊಳಿಸುತ್ತಿತ್ತು. ಅವರು ಸಿಟ್ಟಿಗೆದ್ದು ಫಡಫಡ ಬಯ್ದಿದ್ದರೆ, ತನಗೆ ಸಮಾಧಾನವಾಗುತ್ತಿತ್ತೇ? ಒಳಗಿನಿಂದ ದುಃಖವುಕ್ಕಿ ಬಂದವಳಂತೆ ‘ದಾದಾ!’ ಎಂದು ಗದ್ಗದಿಸಿದಳು.

ದಾದಾ ಅವಳ ಬೆನ್ನ ಮೇಲೆ ಕೈಯಾಡಿಸಿದರು. ಏನೋ ಬಡಬಡಿಸಿದರು. ಆ ಕೈಯಲ್ಲಿ ಆಶೀರ್ವಾದವಿತ್ತು. ಅವರು ತನ್ನನ್ನು ಉದ್ದೇಶಿಸಿ ಏನಾದರೂ ಹೇಳಿದರೆ! ಬಡಬಡಿಸಿದರೆ? ಗೋ ಅಹೆಡ್ ಮೈ ಚೈಲ್ಡ್ – ಇದು ಅವರ ಮೊದಲಿನ ವಾಕ್ಯ. ತಾನು ಬಾಲ್ಯದಲ್ಲಿದ್ದಾಗಿನದು. ಅದನ್ನೇ ಅವರು ಹೇಳಿರಬಹುದೇ?

“ದಾದಾ…’’ ಅರ್ಧಕ್ಕೇ ಮಾತು ನಿಲ್ಲಿಸಿದಳು.

“ಏನಮ್ಮ?’’

“ಡಾ. ಮೂರ್ತಿಯವರ ಕೋಟನ್ನು ನಿಮ್ಮ ಕೋಣೆಯಲ್ಲಿರಿಸಿ ಹೋಗುತ್ತೇನೆ. ನಿನ್ನೆ ಅಲ್ಲಿಗೆ ಹೋಗುವಾಗ ಏನೂ ತೆಗೆದುಕೊಂಡು ಹೋಗಿರಲಿಲ್ಲ. ಅವರೇ ನೀಡಿದರು. ನಿಮ್ಮ ಹತ್ತಿರ ಇಟ್ಟು ಹೋಗುವುದಾಗಿ ಅವರಿಗೆ ತಿಳಿಸಿದ್ದೇನೆ”.

“ನನಗೆ ಗೋಚರಿಸುವಂತೆ ಇಡು. ನೆನಪಾಗದಿದ್ದರೆ ಸಮಸ್ಯೆಯಾಗಬಾರದಲ್ಲ!’’

“ನಿಮಗೆ ನೆನಪಾಗದಿದ್ದರೂ, ಅವರಿಗೆ ಆಗೇ ಆಗುತ್ತದೆ. ಅವರೂ ಒಂದೇ ತಂದಿರಬೇಕು ಚಳಿಯಂತೂ ಇದ್ದೇ ಇದೆ” ಅವಳು ನಗುತ್ತ ಹೇಳಿದಳು.

“ಹೌದು. ಹೋಗುವಾಗ ಮತ್ತೊಮ್ಮೆ ಹೇಳಿ ಹೋಗು. ಹಾಗೆಯೇ ಈ ವಿಷಯವನ್ನು ನಿನ್ನ ಮಾವಶಿಗೂ ಹೇಳಿ ಹೋಗು. ಅವಳೂ ಹಾದಿ ಕಾಯುತ್ತಿರಬೇಕು”.
ಅವಳು ಬೇಬಿ ಮಾವಶಿಗೆ ಇಂದು ಹೊರಡುವುದಾಗಿ ತಿಳಿಸಿದಾಗ, ಅವಳು ಹತ್ತಾರು ಪ್ರಶ್ನೆಗಳನ್ನು ಕೇಳಿದಳು, ‘‘ಆ ವರನ ವಿಷಯ ಏನಾಯ್ತು? ಅವನು ಇಲ್ಲವೆಂದು ಹೇಳಿದನೆ? … ದಾದಾ ಅವರಿಗೆ ಒಪ್ಪಿಗೆಯಿತ್ತು. ಈಗ ನಿನ್ನ ವಯಸ್ಸೂ ಕಡಿಮೆಯಲ್ಲ. ಇಪ್ಪತೈದು ಮುಗಿಯುತ್ತದೆ. ಎಷ್ಟು ಒಳ್ಳೆಯ ಹುಡುಗ ಅವನು. ಇಂದೇ ಹೋಗುವ ನಿರ್ಣಯ ಮಾಡಿದ್ದೀಯಾ? ಮತ್ತೇನಾದರೂ ಒಯ್ಯುವ ವಸ್ತು ಉಳಿದಿದೆಯೇ… ಈಗೀಗ ವರ್ಷಕ್ಕೆ ಒಂದೋ ಎರಡೋ ಬಾರಿ ಮಾತ್ರ ಬರುತ್ತೀಯಾ…’’
ಸುಚಿತಾ ಶಾಂತವಾಗಿ ಆಲಿಸಿದಳು. ಆದರೆ ಬ್ರಿಜ್ ಮೋಹನನ ವಿಷಯ ಮಾತ್ರ ಹೇಳಲಿಲ್ಲ. ಈ ಮೊದಲು ದಾದಾ ಹೇಳಿದ ವಿಷಯವನ್ನೇ ಸ್ವಲ್ಪ ಬದಲಾಯಿಸಿ, ಬೇಬಿ ಮಾವಶಿ ತನ್ನ ಪದ್ಧತಿಯಲ್ಲಿ ಹೇಳುತ್ತಿದ್ದಾಳೆ. ಭಾವನೆಯನ್ನು ವ್ಯಕ್ತ ಮಾಡಲು ಎಲ್ಲರಿಗೂ ಇರುವ ತೀರ ಸುಲಭದ ಸರಳ ಪದ್ಧತಿಯಿದು. ಅಧೈರ್ಯದ, ಅವಸರದ ಮತ್ತು ಉದ್ರೇಕದ ಪದ್ಧತಿ. ಅಪರೂಪಕ್ಕೆ ಅವಳ ದೌರ್ಬಲ್ಯ ಹೊರಬಿದ್ದಿತ್ತು… ಅಮ್ಮ

ಹೀಗಿರಲಿಲ್ಲ… ದಾದಾ ಅವರಂತೂ ಇಲ್ಲವೇ ಇಲ್ಲ. ತಾನಾಗಲಿ, ಬ್ರಿಜ್ ಮೋಹನನಾಗಲಿ ಹೀಗಿರಲಿಲ್ಲ – ಆದರೂ ದಾದಾ? ವರ್ತನೆ ಸ್ವಲ್ಪ ಘಾಸಿಗೊಳಿಸುತ್ತಿದೆ. ಕಾಸಿದ ಹಾಲಿನ ಮೇಲಿನ ಕೆನೆಯಂಥ ಅವರ ಸ್ಥಿರವಾದ ತೊಗಲು… ಅನಂತರ ಬೇಬಿ ಮಾವಶಿ ಏನೇನೋ ಹೇಳುತ್ತ ಎದ್ದಳು. ಸುಭದ್ರಾಳಿಗೆ ಅಡುಗೆಯ ಬಗೆಗೆ ಹತ್ತಾರು ಸೂಚನೆ ನೀಡಿದಳು. ಕೆಲಸಕ್ಕೆ ವೇಗ ನೀಡಿದಳು. ಬಳಿಕ ಸ್ವತಃ ಸ್ಟೂಲಿನ ಮೇಲೆ ಕೂತು ಉಳಿದಳು. ಸುಚಿತಾ ಸಿದ್ಧಳಾಗಿ ಬಂದಾಗ ಬೇಬಿ ಮಾವಶಿಯ ಎಲ್ಲ ತಯಾರಿ ಯಾಗಿತ್ತು. ಈಶ್ವರನಿಗೂ ಎರಡನೇ ಸಲ ಸುದ್ದಿ ಕಳಿಸಿದಾಗ ಅವನು ಹಾಜರಾದ. ಬೇಬಿ ಮಾವಶಿಯ ಈ ಅವಸರವನ್ನು ಕಂಡು, ಅವಳಿಂದಾಗಿಯೇ ದಾದಾ ನಿಶ್ಚಿಂತರಾಗಿ ದ್ದಾರೆ ಎಂದೆನಿಸಿತು. ಈ ಕಡೆಯಂತೂ ಗಮನ ಹರಿಸಬೇಕಾದ ಅಗತ್ಯವೇ ಇಲ್ಲ. ಅಮ್ಮನ ಜೊತೆಗಿದ್ದಾಗ ದಾದಾ ಹೀಗಿರಲಿಲ್ಲ. ಅವರ ಊಟ-ತಿಂಡಿ ವಗೈರೆಯ ಬಗೆಗೆ ಅವಳು ಯೋಚಿಸುತ್ತಿರಲಿಲ್ಲ. ತನ್ನ ಶಾಲೆಯನ್ನು ಅವಳು ಬೆಳೆಸಿದಳು. ಅಡುಗೆ ಮಾಡಿಟ್ಟು ಅವಳು ಹೋಗಿ ಬಿಡುತ್ತಿದ್ದಳು. ದಾದಾನೇ ಊಟ ಬಡಿಸಿಕೊಳ್ಳುತ್ತಿದ್ದರು. ಇಬ್ಬರದು ಎರಡು ಸಂಸಾರವಾದರೂ ಏನೂ ತೊಂದರೆಯಾಗಲಿಲ್ಲ. ಬೇಬಿ ಮಾವಶಿಯಂತೆ ಅಮ್ಮ ಹೀಗೆ ಸಂಸಾರದೊಳಗೆ ಸಿಲುಕಿಕೊಂಡಿರಲಿಲ್ಲ. ಹಲವು ಸಲ ಬೇಬಿ ಮಾವಶಿಗೆ ತಾನು ಕೇಳಿದ ಪ್ರಶ್ನೆ ನೆನಪಾಯಿತು. ಹಾಗೆಯೇ ಅವಳು ನೀಡಿದ ಉತ್ತರವೂ ನೆನಪಾಯಿತು.

“ಮಾವಶಿ, ನೀವೇಕೆ ದಾದಾನ ಸಂಸಾರವನ್ನು ನೋಡಿಕೊಳ್ಳುತ್ತಿದ್ದೀಯಾ? ಸ್ವಂತ ಸಂಸಾರ ಮಾಡೋದು ಬಿಟ್ಟು”.

“ಅಕ್ಕ ಸ್ವಂತ ಸಂಸಾರ ಮಾಡುತ್ತಿರುವದರಿಂದ, ನಾನು ನಿನ್ನ ದಾದಾನ ಸಂಸಾರ ನೋಡಿಕೊಳ್ಳುತ್ತಿದ್ದೇನೆ” ಅವಳು ನಕ್ಕು ಹೇಳುತ್ತಿದ್ದಳು.

“ಆದರೆ ಸ್ವಂತದ್ದೇಕೆ ಮಾಡಲಿಲ್ಲ? ಸ್ವಂತ ಸಂಸಾರ ಮಾಡಬೇಕೆಂದು ನಿನಗೆ ಅನಿಸಲಿಲ್ಲವೇ?’’

“ನನ್ನಲ್ಲಿ ಅಂಥ ಶಕ್ತಿ ಎಲ್ಲಿದೆ? ತಾರುಣ್ಯದಲ್ಲೇ ಸಂಧಿವಾತ ರೋಗಕ್ಕೆ ಬಲಿಯಾದೆ ನಾನು! -’’ ಅದೆಲ್ಲ ನೆನಪಾಯಿತು. ಮಾವಶಿಯ ಕೃಶವಾದ ದೇಹ ಸ್ಟೂಲ್ ಮೇಲೆ ಕುಳಿತು… ಸುಚಿತಾ ತನ್ನ ಮೈಮೇಲಿನ ಶಾಲನ್ನು ಮಾವಶಿಗೆ ಹೊದಿಸಿದಳು. ಅವಳು ಬೆಚ್ಚಿದಳು.

“ಏನೇ ಇದು?’’

“ನಿನಗಾಗಿಯೇ ತಂದಿದ್ದೆ. ಒಂದೇ ತಂದಿರುವದರಿಂದ ಕೊಟ್ಟಿರಲಿಲ್ಲ.’’

“ನನಗಾಗಿ?’’ ಶಾಲನ್ನು ಮೈತುಂಬ ಸುತ್ತಿಕೊಂಡು ಸಂತೋಷದಿಂದ ಕೇಳಿದಳು.

“ನನಗೇಕೆ ಬೇಕು?’’ ಎಂದವಳು ಔಪಚಾರಿಕವಾಗಿಯೂ ಹೇಳಲಿಲ್ಲ.

“ನಿನಗೆ ಶಾಲು ಬೇಕಾಗಿದ್ದರೆ ನನ್ನದು ತೆಗೆದುಕೊಂಡು…’’

“ನನ್ನ ಹತ್ತಿರ ಸ್ವೆಟರ್ ಇದೆ” ಸುಚಿತಾ ಉತ್ತರಿಸಿದಳು.
ಈಶ್ವರ ಗ್ಯಾರೇಜಿನಿಂದ ಕಾರು ಹೊರಗೆ ತಂದು ನಿಲ್ಲಿಸಿದಾಗ ಮಾವಶಿ ಹೇಳಿದಳು,

“ದಾದಾ ಅವರಿಗೆ ಹೇಳಿಬಾ”.

“ಈಗಾಗಲೇ ಹೇಳಿದ್ದೇನೆ”.

“ಆದರೂ ಹೋಗಿ ಬರುವದಾಗಿ ಮತ್ತೊಮ್ಮೆ ಹೇಳು”.

ಸುಚಿತಾಳಿಗೆ ಅನಿಸಿತು, ಇದೇನಿದು! ಐದು ನಿಮಿಷಗಳ ಹಿಂದಷ್ಟೇ ಭೇಟಿಯಾಗಿದ್ದೇನೆ. ಈಶ್ವರ ಗ್ಯಾರೇಜಿನಿಂದ ಕಾರು ಹೊರ ತಂದಾಗ, ಅದರ ಸದ್ದು ಅವರಿಗೆ ಕೇಳಿರುವದಿಲ್ಲವೇ? ತನ್ನ ಲಗ್ನದ ಬಗೆಗೆ ಇಷ್ಟೆಲ್ಲ ಸೂಕ್ಷ್ಮವಾಗಿ ಯೋಚಿಸುವ ದಾದಾನಿಗೆ, ತನ್ನ ಮಗಳು ಊರಿಗೆ ಹೊರಟಾಗ ಬೀಳ್ಕೊಡಬೇಕೆನ್ನುವ ಪರಿಜ್ಞಾನವೂ ಇಲ್ಲವೇ, ಸಮಯವೂ ಇಲ್ಲವೇ, ‘ಹೋಗುತ್ತೇನೆ’ ಎಂದು ತಾನೇ ಹೇಳಬೇಕು.

ಸುಚಿತಾ ಮಾತ್ರ ಮರಳಿ ದಾದಾನ ಕೋಣೆಗೆ ಹೋಗಲಿಲ್ಲ. ಆಗ ಬೇಬಿ ಮಾವಶಿಯೇ ಗೋಡೆ ಹಿಡಿದು ಮುಂದಡಿಯಿಟ್ಟಳು. ಕೋಣೆಯ ಪರದೆಯನ್ನು ಸರಿಸಿ ‘ಸುಚೂ ಹೋಗುತ್ತಿದ್ದಾಳೆ ಹಾಂʼ ಹೇಳಿದಳು.

ಆ ಬಳಿಕ ಸಹ ತಮ್ಮ ಸಮಯಕ್ಕೇ ಎದ್ದರು. ಸುಚಿತಾಳ ಗಮನಕ್ಕೆ ಬಂತು ಇದು. ಯಾರೋ ಬಲವಂತದಿಂದ ಎಳೆದು ತಂದವರಂತೆ ಕಾರಿನ ಹತ್ತಿರ ನಿಂತರು.

‘‘ಜಾಗ್ರತೆಯಿಂದ ಹೋಗು. ಪತ್ರವನ್ನು ಬರೆ. ಬ್ರಿಜ್ ಮೋಹನನ ಬಗೆಗೆ ತಿಳಿಸು..’’ ಎಂದೂ ಅವರು ಹೇಳಲಿಲ್ಲ.
ಎಂದಿನಂತೆ ಬೇಬಿ ಮಾವಶಿಯ ಕಣ್ಣುಗಳಲ್ಲಿ ನೀರು ಬಂತು. ಸುಚಿತಾ ಹೋಗುವಾಗ ಸಹ ಅವಳ ಕಂಗಳಲ್ಲಿ ನೀರು ಕಾಣಿಸುವದು, ಪ್ರಾಯಶಃ ಅವಳ ಒಂಟಿತನಕ್ಕಾಗಿ. ಸುಚಿತಾ ಇದ್ದಾಗ ಎರಡು ದಿನವಿರುವ ಗದ್ದಲ ಮುಗಿದದಕ್ಕೋ ಅಥವಾ ಚಿಕ್ಕ ಪುಟ್ಟ ಕಾರಣಕ್ಕಾಗಿ ಅಳುವುದು ಅವಳ ಸ್ವಭಾವವಾಗಿದ್ದಕ್ಕೋ, ಅಂತೂ ಅವಳ ಅಳು ಸಾಮಾನ್ಯವಾಗಿತ್ತು!

ಈಶ್ವರ ಕಾರು ಚಾಲೂ ಮಾಡಿದ. ತಕ್ಷಣ ದಾದಾ ತಿರುಗಿ ಹೊರಟೇಬಿಟ್ಟರು. ಕಾರು ಪೂರ್ಣ ದಾಟಿಯೂ ಇರಲಿಲ್ಲ. ಬಂಗಲೆಯ ಸುತ್ತಲಿನ ಗಿಡಮರಗಳು ಹಿಂದೆ ಸರಿದವು. ಕಾರು ಹೊರಳಿತು. ಸುಚಿತಾ ಒಮ್ಮೆ ಹಿಂದಕ್ಕೆ ತಿರುಗಿ ನೋಡಿದಳು. ಹೊರಗಿನ ಗೇಟ್ ಹತ್ತಿರ ಕತ್ತಲೆಯಲ್ಲಿ ಮಾವಶಿ ಒಬ್ಬಳೇ ನಿಂತಿದ್ದಳು.

(ಕೃತಿ: ಸೇತು (ಕಾದಂಬರಿ), ಮರಾಠಿ ಮೂಲ: ಆಶಾ ಬಗೆ, ಕನ್ನಡಕ್ಕೆ: ಚಂದ್ರಕಾಂತ ಪೋಕಳೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ:  330/-)