ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಮತ್ತು ಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಈ ರಾಶಿಯು ತಿಂಗಳುಗಟ್ಟಲೆ ಅಲ್ಲಿದ್ದು ಒಣಗಿದ ಮೇಲೆ ಪುನಃ ಯಂತ್ರಗಳ ಸಹಾಯದಿಂದ ಆ ರಾಶಿಯನ್ನು ಮುಂಭಾಗಕ್ಕೆ ತಂದು ಸಾರ್ವಜನಿಕರು ಅದನ್ನು ಪಡೆಯಲು ಅನುಮತಿ ನೀಡುತ್ತಾರೆ.  ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರದಲ್ಲಿ ಹವ್ಯಾಸೀ ಕೈ ತೋಟದ ಅನುಭವಗಳು ನಿಮ್ಮ ಓದಿಗೆ. 

 

ಒಡಲ ಕುಡಿಗೆ ಜೀವ ತುಂಬುವುದು ಅಂದರೆ ತಾಯ್ತನದ ಭಾಷೆಯಲ್ಲಿ ಏನೆಲ್ಲಾ ಅಭಿವ್ಯಕ್ತಿಗಳಿವೆ? ತನ್ನೊಳಗಿನ ಹೊಸ ಜೀವವನ್ನು ಧ್ಯಾನಿಸಿ, ಅದನ್ನು ಪ್ರೀತಿಸುತ್ತ ಮಾತನಾಡಿಸುತ್ತ ಇರುವುದರ ಜೊತೆಗೆ ಅದನ್ನು ಧರಿಸಿರುವ ತನ್ನ ದೇಹವನ್ನು ಕೂಡ ಗಮನಿಸಬೇಕಲ್ಲವೆ. ನನ್ನ ಕಣ್ಣ ಮುಂದಿರುವ ತರಕಾರಿ ಗಿಡಗಳನ್ನು ನೋಡುತ್ತ ಇರುವಾಗ ಅವು ಬೆಳೆಯುತ್ತಿರುವ ಭೂಮಿಯನ್ನು, ಮಣ್ಣು, ನೆಲವನ್ನು ಪುಷ್ಟಿ ಮಾಡುವುದರ ಕಡೆಗೆ ತಲೆ ಓಡಿತ್ತು. ಭೂಮಿಯನ್ನು ನಾವು ಮನುಷ್ಯರು ಹೆಣ್ಣೆಂದು ಕರೆದಿರುವಾಗ ಅವಳ ಆರೋಗ್ಯವನ್ನು, ಕ್ಷೇಮ-ಕುಶಲವನ್ನು ವಿಚಾರಿಸಲೇಬೇಕು.

ಆಸ್ಟ್ರೇಲಿಯದಲ್ಲೀಗ ವಸಂತಋತು ಕಂಗೊಳಿಸುತ್ತಿದೆ. ನಮ್ಮೂರಲ್ಲಂತೂ ಮನೆಮಟ್ಟದ, ಹವ್ಯಾಸಿ ಕೈ ತೋಟಗಾರರಿಗೆ ಈ ವರ್ಷ ಎಂದಿಲ್ಲದ ಕೆಲಸ. ಹೋದ ತಿಂಗಳು ಆಗಸ್ಟಿನಲ್ಲಿ ಪುಟ್ಟಪುಟ್ಟ seedling ಟ್ರೇಗಳಲ್ಲಿ ಬಿತ್ತಿದ್ದ ಬೀಜಗಳು ಮೊಳಕೆಯೊಡೆದಿವೆ. ಅವು ಬಲಿತಿದೆಯೇ ಇಲ್ಲವೇ ಎಂದು ಪರೀಕ್ಸಿಸಿ ನೋಡಿ ನಂತರ ಅವನ್ನೆಲ್ಲ ನೆಲದೊಳಗೆ ನೆಡಬೇಕು. ಅದಕ್ಕೆ ಮುಂಚೆ ಯಾವ್ಯಾವ ಗಿಡಗಳಿಗೆ ಯಾವ ರೀತಿಯ ಮಣ್ಣು ಇಷ್ಟವಾಗುತ್ತದೆ ಎನ್ನುವುದನ್ನು ಅರಿತಿರಬೇಕು. ಭೂಮಿಯನ್ನು ಗಮನಿಸಿ, ನೆಲದ ಮಣ್ಣಿನ ಗುಣವನ್ನು ಅಭ್ಯಸಿಸಿ ಅರಿತು ನೆಲದ ಹದವನ್ನು ಸಿದ್ಧಪಡಿಸಬೇಕು. ಆಯಾ ಮೊಳಕೆಗೆ ಇರುವ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳ ಬೇರನ್ನು ಇಷ್ಟಿಷ್ಟೆ ನೆಲದೊಳಗೆ ಹುಗಿಯಬೇಕು. ಕ್ಯಾರೆಟ್ ಮತ್ತು ಮೂಲಂಗಿ, ನವಿಲುಕೋಸು ಮತ್ತು ಬ್ರೋಕೊಲಿ, ಬೀನ್ಸ್ ಮತ್ತು ಅಲಸಂದೆ, ಸೊಪ್ಪುಗಳ ಪೈಕಿ, ಟೊಮೋಟೋಗಳ ವಿಧಗಳು ಎಂಬಂತೆ ಅವುಗಳ ನಡುವಿನ ಸಂಬಂಧವನ್ನು ಗೌರವಿಸಿ ವಿವರಗಳನ್ನು ಮನನ ಮಾಡಿಕೊಂಡು, ಎಷ್ಟು ಬೇಕೋ ಅಷ್ಟು ಅಂತರ ಕಾಪಾಡಿ, ನೀರು ಕೊಟ್ಟು ಬೆಳೆಸಬೇಕು.

ಸ್ವಲ್ಪವೂ ರಾಸಾಯನಿಕಗಳನ್ನು ಬಳಸಬಾರದು ಎಂಬ ನೀತಿಯ ಲಾಭ ಪಡೆದು ಎಲ್ಲೆಲ್ಲೂ ನಲಿದಾಡುವ ಕ್ರಿಮಿಕೀಟಗಳು, ಮೃದ್ವಂಗಿಗಳಿಂದ ಗಿಡಗಳ ಚಿಗುರನ್ನು ಕಾಪಾಡಬೇಕು. ಬಾವಲಿಗಳು, ಬ್ರಷ್ ಟರ್ಕಿ, ಪೊಸ್ಸುಮ್ ಕುಟುಂಬವು ತರಕಾರಿ, ಹಣ್ಣು ಗಿಡಗಳ ಚಿಗುರನ್ನು ಸವಿಯುವಾಗ ಅವನ್ನು ಸಾಯಿಸದೆ ಆದರೆ ಒಂದಷ್ಟು ಬೈಯುತ್ತಾ ಚತುರೋಪಾದಿಯಲ್ಲಿ ಗಿಡಗಳನ್ನು ರಕ್ಷಿಸಬೇಕು.

ಭೂಮಿಯನ್ನು ಗಮನಿಸಿ, ನೆಲದ ಮಣ್ಣಿನ ಗುಣವನ್ನು ಅಭ್ಯಸಿಸಿ ಅರಿತು ನೆಲದ ಹದವನ್ನು ಸಿದ್ಧಪಡಿಸಬೇಕು. ಆಯಾ ಮೊಳಕೆಗೆ ಇರುವ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳ ಬೇರನ್ನು ಇಷ್ಟಿಷ್ಟೆ ನೆಲದೊಳಗೆ ಹುಗಿಯಬೇಕು. ಕ್ಯಾರೆಟ್ ಮತ್ತು ಮೂಲಂಗಿ, ನವಿಲುಕೋಸು ಮತ್ತು ಬ್ರೋಕೊಲಿ, ಬೀನ್ಸ್ ಮತ್ತು ಅಲಸಂದೆ, ಸೊಪ್ಪುಗಳ ಪೈಕಿ, ಟೊಮೋಟೋಗಳ ವಿಧಗಳು ಎಂಬಂತೆ ಅವುಗಳ ನಡುವಿನ ಸಂಬಂಧವನ್ನು ಗೌರವಿಸಿ ವಿವರಗಳನ್ನು ಮನನ ಮಾಡಿಕೊಂಡು, ಎಷ್ಟು ಬೇಕೋ ಅಷ್ಟು ಅಂತರ ಕಾಪಾಡಿ, ನೀರು ಕೊಟ್ಟು ಬೆಳೆಸಬೇಕು.

ಪ್ರತಿವಾರವೂ ಮಣ್ಣು ಕಟ್ಟಬೇಕು, ಕಳೆ ಕೀಳಬೇಕು, ಚಿಗುರಿಗೆ ಹಬ್ಬುವ ಜೇಡರ ಬಲೆಯನ್ನು ತೆಗೆಯಬೇಕು. ಶ್ರಮದ ಜೊತೆ ಸಂತೋಷವೂ ಸೇರಿದೆ. ಗಿಡದಲ್ಲೇ ಬಲಿತ ಹುರಳಿಕಾಯಿ ಕಿತ್ತು ಅಲ್ಲೇ ಕೂತು ತಿಂದಾಗ ಬೆಂಗಳೂರಿನ ಬಾಲ್ಯದ ದಿನಗಳು ನೆನಪಾಗುತ್ತವೆ. ಅಂಗಳದಲ್ಲಿರುವ ಎಳೆಮರದ ತುಂಬಾ ಹರಡಿರುವ ದಪ್ಪದಪ್ಪ ರಸಭರಿತ ಮಲ್ಬೆರ್ರಿ ಹಣ್ಣುಗಳನ್ನು ಕಿತ್ತು ತಿಂದಾಗ ಅದೇನೋ ಖುಷಿ. ನಿಂಬೆಮರದ ತುಂಬಾ ಹರಡಿರುವ ಹೊಸಹೂ ನೋಡಿ ಅದರ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬೇಕು. ಬಾಳೆಮರದ ಗೊನೆಯ ಫೋಟೋ ತೆಗೆದು ಬೆಂಗಳೂರಿನ ತವರಿನವರ ಜೊತೆ ಹಂಚಿಕೊಂಡಾಗ ಹಿರಿಹಿರಿ ಹಿಗ್ಗು.

ಈ ವರ್ಷ ನಮ್ಮ ಹವ್ಯಾಸಿ ಕೈ ತೋಟಗಾರರ ಗುಂಪು ದೊಡ್ಡದಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಗುಂಪಿನ ಸದಸ್ಯರು ಆಹಾರ-ಮೂಲ ಗಿಡ, ತರಕಾರಿ, ಕಾಯಿ, ಹಣ್ಣುಗಳ ಪುಟ್ಟ ಪ್ರದರ್ಶನವನ್ನು ಏರ್ಪಡಿಸಿ, ಅವುಗಳ ಬಗ್ಗೆ ಮಾತನಾಡಿ, ವಿಷಯಜ್ಞಾನ ಹೆಚ್ಚಿಸಿಕೊಂಡು ಸಂತೋಷಿಸುತ್ತೀವಿ. ಒಂದಷ್ಟು ಗಿಡಗಳನ್ನು ಪರಸ್ಪರ ಬದಲಾಯಿಸಿಕೊಳ್ಳುತ್ತೀವಿ. ಇದೇನೂ ನಮ್ಮೂರಿಗೆ ಮಾತ್ರ ಸೀಮಿತವಾದದ್ದಲ್ಲ. ದೇಶದ ವಿವಿಧ ನಗರಗಳಲ್ಲಿ ಇದೆ ರೀತಿ ಎಡಿಬಿಲ್ ಗಾರ್ಡನಿಂಗ್ ಕ್ರಾಂತಿಯೆ ನಡೆಯುತ್ತಿದೆ.

ಈ ವರ್ಷದ ಆದಿಯಲ್ಲಿ ಬಿದ್ದ ಹೆಚ್ಚುವರಿ ಮಳೆಯಿಂದ ಪ್ರವಾಹವುಂಟಾಗಿ ಮನುಷ್ಯರಿಗೆ ಬೇಕಾದಷ್ಟು ತೊಂದರೆಯಾಗಿ, ಭೂಮಿಗೂ ತಾಪತ್ರಯವಾಗಿ ಅಲ್ಲಲ್ಲಿ ಮಣ್ಣು ಸವಕಳಿಯಾಗಿದೆ. ನಮ್ಮ ಜಾರು ಹಿತ್ತಲಿನಲ್ಲಿ ಕೂಡ ಮಣ್ಣಿನ ಪದರ ಕೊಚ್ಚಿಹೋಗಿತ್ತು. ಅದನ್ನು ಹಾಗೆ ಬಿಟ್ಟರೆ ಹಳ್ಳಕೊಳ್ಳಗಳಾಗಿ ಇಲಿ, ಹೆಗ್ಗಣ, ಹಾವು ಸೇರಿಕೊಳ್ಳುತ್ತವೆ ಎಂದು ನಗರಪಾಲಿಕೆಯವರು ಎಚ್ಚರಿಸಿದ್ದರು. ಒಂದೊಮ್ಮೆ ಅವರ ಮಾತು ಕೇಳದಿದ್ದರೆ, ನಿಜವಾಗಿಯೂ ಇಲಿ, ಹಾವುಗಳು ಬಂದರೆ ಅಕ್ಕಪಕ್ಕದವರು ನಮ್ಮ ಮೇಲೆ ದೂರು ಕೊಡುವ ಸಂಭವ ಉಂಟಾಗುತ್ತದೆ ಎಂದುಕೊಂಡು ಹಿತ್ತಲಿಗೆ ಎಲೆಗೊಬ್ಬರ ಪದರಗಳನ್ನು ಹೊದಿಸುವ ಹೊಸ ಸವಾಲು ಎದುರಾಯಿತು. ಅದರ ಜೊತೆಗೆ ಹಿತ್ತಲಿನಲ್ಲಿ ಯಾಕೆ ಹೊಸದಾಗಿ ತರಕಾರಿ ಹಾಸುಗಳನ್ನು (vege patch) ನಿರ್ಮಿಸಬಾರದು ಎಂದಾಯಿತು. ಕೆಲಸ ಆರಂಭಿಸಿದ್ದು ಚಳಿಗಾಲದಲ್ಲಿಯಾದರೂ ವಸಂತಗಾಲದಲ್ಲಿ ಇನ್ನೂ ಮುಂದುವರೆದಿದೆ.

ಕ್ಷೀಣವಾಗಿದ್ದ ಮಣ್ಣು ಪದರಗಳನ್ನು ಮತ್ತೆ ಪುನರುಜ್ಜೀವಗೊಳಿಸಲು ಬೇಕಾದ್ದು ಯಥೇಚ್ಛವಾದ ಎಲೆ ಗೊಬ್ಬರ. ಮೊದಲಿಗೆ ಬರಿಯ ತರಕಾರಿ ಹೊಸ ಹಾಸುಗಳಿಗೆ ಹೊದೆಸಲು ಒಂದಷ್ಟು ಒಣಕಬ್ಬು ಗೊಬ್ಬರವನ್ನು ಕೊಂಡೆವು. ಬರಿಮೈ ಬಿಟ್ಟುಕೊಂಡಿದ್ದ ಹಿತ್ತಲಿನ ಭಾಗಗಳು ಅಣಕಿಸಿದಂತಾಯಿತು. ಇದು ಸಾಲದು ಎಂದುಕೊಂಡು ಬೇರೆ ಯಾವ್ಯಾವ ತರಹದ ಎಲೆ ಗೊಬ್ಬರಗಳು ಸಿಗುತ್ತವೆ ಎಂದು ನಮ್ಮ ಹವ್ಯಾಸಿ ಗುಂಪಿನಲ್ಲಿ ಕೇಳಿದರೆ ತಿಳಿದಿದ್ದು ನಗರಪಾಲಿಕೆ ವತಿಯಿಂದ ಲಭ್ಯವಿರುವ ಪುಕ್ಕಟೆ ಎಲೆಗೊಬ್ಬರ! ಅಯ್ಯೊ ಹೌದಾ, ಇಷ್ಟು ವರ್ಷವಾದರೂ ಇದು ಗೊತ್ತಿರಲಿಲ್ಲವಲ್ಲ ಎಂದು ಹುಬ್ಬೇರಿಸಿದರೆ ನಾನಾ ಅಭಿಪ್ರಾಯಗಳು, ಸಲಹೆಗಳು ಹರಿದುಬಂದವು. ಎಲ್ಲವನ್ನೂ ಕೇಳಿ ನಗರಪಾಲಿಕೆ ಎಲೆಗೊಬ್ಬರವನ್ನು ಸಂದರ್ಶಿಸಲು ಹೋದೆ.

ನಮ್ಮ ಬಡಾವಣೆಯ ಹತ್ತಿರವಿರುವ ಸುಮಾರು ಹತ್ತು ಎಕರೆ ಪ್ರದೇಶದಲ್ಲಿರುವ ನಗರಪಾಲಿಕೆ ಮರುಬಳಕೆ (ರಿಸೈಕ್ಲಿಂಗ್) ಘಟಕದ ಒಂದು ಭಾಗದಲ್ಲಿ ಒಣ ಎಲೆಗೊಬ್ಬರ ವಿತರಣೆ ವ್ಯವಸ್ಥೆಯಿದೆ. ವಾರಾಂತ್ಯದಲ್ಲಿ ಮಧ್ಯಾಹ್ನ ಹನ್ನೆರಡರ ನಂತರ ಹೋದಾಗ ಕಂಡಿದ್ದು ಒಂದೆಡೆ ಒಂದಷ್ಟು ಜನರು ತಾವು ತಂದ ತ್ಯಾಜ್ಯ ಹಸಿಹಸಿರು ಗಿಡಮರಗಳ ಭಾಗಗಳನ್ನು ಸುರಿಯುತ್ತಿದ್ದರು. ಬೆಳಗಿನ ಸಮಯದಲ್ಲಿ ಅಲ್ಲಿ ಹೋಗಲು ಸಾರ್ವಜನಿಕರಿಗೆ ಅನುಮತಿಯಿಲ್ಲ. ಆಗ ನಗರಪಾಲಿಕೆಯ ಯಂತ್ರಗಳು ಈ ಗಿಡಮರ ಭಾಗಗಳನ್ನು ಕತ್ತರಿಸಿ, ಅರೆದು ಅವನ್ನು ಒಯ್ದು ಒಂದು ಮೂಲೆಯಲ್ಲಿ ರಾಶಿ ಮಾಡುತ್ತಿರುತ್ತವೆ. ಈ ರಾಶಿಯು ತಿಂಗಳುಗಟ್ಟಲೆ ಅಲ್ಲಿದ್ದು ಒಣಗಿದ ಮೇಲೆ ಪುನಃ ಯಂತ್ರಗಳ ಸಹಾಯದಿಂದ ಆ ರಾಶಿಯನ್ನು ಮುಂಭಾಗಕ್ಕೆ ತಂದು ಸಾರ್ವಜನಿಕರು ಅದನ್ನು ಪಡೆಯಲು ಅನುಮತಿ ನೀಡುತ್ತಾರೆ. ಈ ಎರಡೂ ಕೆಲಸಗಳನ್ನು ಅತ್ಯಂತ ಸುವ್ಯವಸ್ಥಿತವಾಗಿ, ಸುರಕ್ಷಿತವಾಗಿ ಮಾಡುತ್ತಾರೆ. ಹಸಿಹಸಿರು ಗೊಬ್ಬರವನ್ನು ಕೊಡಲು ಮತ್ತು ಒಣಎಲೆ ಗೊಬ್ಬರವನ್ನು ಪಡೆಯಲು ಹೋಗುವ ಜನರ ವಾಹನವನ್ನು weigh bridge ಮೇಲಿರಿಸಿ, ತೂಕಿಸಿ ಒಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿ ಗಮನಿಸಲಾಗುತ್ತದೆ. ವಾಹನದ ಚಾಲಕನ ಡ್ರೈವರ್ಸ್ ಲೈಸನ್ಸ್ ಸಂಖ್ಯೆ ದಾಖಲಾಗುತ್ತದೆ. ನಂತರ ವಾಹನವು ಇಂಥದ್ದೆ ನಿರ್ದಿಷ್ಟ ಜಾಗಕ್ಕೆ ಹೋಗುವ ಸೂಚನೆ ಕೊಡುತ್ತಾರೆ. ಹಲವಾರು ಗೊಬ್ಬರಗಳ ರಾಶಿಯಿರುವುದರಿಂದ ಈ ಸೂಚನೆ ಸಹಾಯವಾಗುತ್ತದೆ. ಈ ಸ್ಥಳಕ್ಕೆ ಹೋಗಲು ಹದಿನೆಂಟು ವರ್ಷ ಮೇಲ್ಪಟ್ಟು ವಯಸ್ಸಾದವರಿಗೆ ಮಾತ್ರ ಪ್ರವೇಶ. ಗೊಬ್ಬರವಿರುವ ರಾಶಿಯ ಬಳಿ ಹೋಗಿ ನಮ್ಮ ಚೀಲಗಳಲ್ಲಿ, ಟ್ರೈಲರ್ ಗಳಲ್ಲಿ ಗೊಬ್ಬರ ತುಂಬಿಸಿಕೊಂಡು ಪುನಃ ನಮ್ಮ ವಾಹನವನ್ನು weigh bridge ಮೇಲಿರಿಸಿ, ತೂಕಿಸಿಕೊಂಡು ಹೊರಡುವುದು. ಹೀಗೆ ಮಾಡುವುದರಿಂದ ವರ್ಷಕ್ಕೆ ಸರಾಸರಿ ಹಸಿಗೊಬ್ಬರ ಮತ್ತು ಒಣಗೊಬ್ಬರ ಉತ್ಪತ್ತಿ ಮತ್ತು ವಿತರಣೆಯ ಲೆಕ್ಕ ಸಿಗುತ್ತದೆ.

ಇನ್ನು ಮುಂದಿನ ಪ್ರಶ್ನೆ ಇರುವುದು ನಗರಪಾಲಿಕೆಯ ವತಿಯಿಂದ ಉಚಿತವಾಗಿ ಸಿಗುವ ಈ ರೀತಿಯ ಒಣಎಲೆ ಗೊಬ್ಬರದ ಗುಣಮಟ್ಟದ ಬಗ್ಗೆ. ನಮ್ಮ ಹವ್ಯಾಸಿ ತೋಟಗಾರಿಕೆ ಗುಂಪಿನ ಸದಸ್ಯರಲ್ಲಿ ಅದರ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಹಾಗಾಗಿ ಇದರ ಬಗ್ಗೆ ಹೆಚ್ಚು ಚರ್ಚೆಯಾಗುವುದಿಲ್ಲ. ಒಬ್ಬರು ‘ಅದರ ದಿಕ್ಕಿನಲ್ಲಿ ತಲೆ ಕೂಡ ಹಾಕುವುದಿಲ್ಲ’ ಎನ್ನುವ ಕಠೋರ ಮಾತು ಹೇಳಿದರೆ ಇನ್ನೊಬ್ಬರು ‘ನಾವು ಅನೇಕ ವರ್ಷಗಳಿಂದ ಈ ಒಣಎಲೆ ಗೊಬ್ಬರವನ್ನು ಬಳಸಿಯೆ ತರಕಾರಿ, ಹಣ್ಣು ಬೆಳೆಯುತ್ತಿರುವುದು. ಅದರ ಬಗ್ಗೆ ನಮಗೇನೂ ಸಮಸ್ಯೆಯಿಲ್ಲ,’ ಎಂದರು.

ನಾನು ಗೊಬ್ಬರದ ರಾಶಿ ನೋಡಲು ಹೋದಾಗ ಅಲ್ಲಿ ತಮ್ಮ ಟ್ರೈಲರ್ ತುಂಬಿಕೊಳ್ಳುತ್ತಿದ್ದವರು ಕಂಡರು. ಗೊಬ್ಬರದ ಗುಣಮಟ್ಟದ ಬಗ್ಗೆ ಅವರನ್ನೆ ಕೇಳಿದೆ. ತಮಗೇನೂ ಅದರಲ್ಲಿ ಹಾನಿ ಕಂಡಿಲ್ಲವೆಂದರು. ಕೆಲವರು ಇಷ್ಟಪಡುವುದಿಲ್ಲ, ಏಕೆಂದರೆ ಜನರು ತಾವು ತರುವ ಹಸಿಹಸಿರು ಗೊಬ್ಬರದ ಜೊತೆ ಸೇರಿಕೊಂಡಿರುವ ಪರಿಸರವಿರೋಧಿ ಕಸ, ಪ್ಲಾಸ್ಟಿಕ್, ರಬ್ಬರ್, ಬ್ಯಾಟರಿ ಇತ್ಯಾದಿಗಳನ್ನು ಬೇರ್ಪಡಿಸದೆ ಹಾಗೆಯೆ ತಂದು ಸುರಿಯುತ್ತಾರೆ. ನಾವು ಒಣಗೊಬ್ಬರವನ್ನು ಬಗೆಯುವಾಗ ಅವೆಲ್ಲ ಕಂಡು ಬೇಸರವಾಗುತ್ತದೆ. ನಾವೇ ಅವನ್ನು ಬೇರ್ಪಡಿಸುತ್ತೀವಿ. ಅಷ್ಟಲ್ಲದೆ ಅವುಗಳು ಗೊಬ್ಬರದ ಜೊತೆ ಬೆರೆತು ರಾಸಾಯನಿಕಗಳನ್ನು ತ್ಯಜಿಸುವುದರಿಂದ ನಗರಪಾಲಿಕೆ ಒಣಎಲೆ ಗೊಬ್ಬರವು ಹಾನಿಕಾರಕವೆನ್ನುವ ಮಾತಿದೆ. ಆದ್ದರಿಂದ ನಾವು ಈ ಗೊಬ್ಬರವನ್ನು ಆಹಾರ ಗಿಡಗಳಿಗೆ ಬಳಸುವುದಿಲ್ಲ. ದೊಡ್ಡ ಮರಗಳ ಸುತ್ತ, ಹೂ ಗಿಡಗಳ ಪಾತಿಗಳ ಪಕ್ಕ, ಮನೆಯ ಪರಿಧಿಯಂಚಿನಲ್ಲಿ, ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ಹರಡುತ್ತೀವಿ. ಆಗ ಮಣ್ಣು ಸವಕಳಿ ತಪ್ಪುತ್ತದೆ, ಎಂದರು.

ಆಹಾ, ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಎಂದು ಖುಷಿಯಾಯ್ತು. ಕಾರಿನಲ್ಲಿದ್ದ ಚೀಲಗಳನ್ನು ಹೊರತೆಗೆದು ಒಣಎಲೆ ಗೊಬ್ಬರವನ್ನು ತುಂಬಿಸಿದೆ. ಬರಡಾಗಿ ಕಾಣುತ್ತಿದ್ದ ನಮ್ಮನೆ ಹಿತ್ತಲಿನ ನೆಲಕ್ಕೆ ಈಗ ನಿಧಾನವಾಗಿ ಹೊರಮೈ ಪದರಗಳನ್ನು ಹೊದಿಸುತ್ತಿದ್ದೀವಿ. ಇದು ಕ್ರಮೇಣ ಒಳಮೈ ಮಣ್ಣು ಪದರವಾಗುತ್ತದೆ. ಮಣ್ಣಿನಲ್ಲಿ ಪರಿಸರಸ್ನೇಹಿ ಜೀವಿಗಳು ಸೇರಿಕೊಂಡು ಅದರ ಗುಣಮಟ್ಟವು ಸುಧಾರಿಸುತ್ತದೆ. ಈ ವರ್ಷ ಬೇಸಗೆಯಲ್ಲಿ ಮತ್ತೆ ಚಂಡಮಾರುತ, ಅಧಿಕ ಮಳೆ ಬರಲಿವೆಯಂತೆ. ಸರಕಾರವು ಪದೇಪದೇ ಅದರ ಬಗ್ಗೆ ಎಚ್ಚರ ಕೊಡುತ್ತಿದೆ. ಈಗಲೆ ಆಸ್ತಿಪಾಸ್ತಿಗಳನ್ನು ರಕ್ಷಿಸಿಕೊಳ್ಳಲು ತಯಾರಿ ನಡೆಸಿ ಎಂದು ಸೂಚನೆ ಕೊಡುತ್ತಿದೆ. ನಾವು ನಮ್ಮ ಹಿತ್ತಲಿನ ಮಣ್ಣು, ನೆಲ, ಭೂಮಿ, ಗಿಡಮರಗಳನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೀವಿ. ಒಡಲು ತಂಪಾಗಿದ್ದರೆ ಒಳಗಿನ ಜೀವಕ್ಕೂ ಹಿತವಲ್ಲವೆ.