ಆಸ್ಪತ್ರೆಗೆ ಸೇರಿಸಿದ ಒಂಬತ್ತು ದಿನದವರೆಗೆ ಶೆಟ್ರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರು ನಂಬಿಕೊಂಡು ಬಂದ ಮನೆ ದೈವವಾದ ಅಬ್ಬಗ-ದಾರಗೆಯ ದಿನನಿತ್ಯದ ಪೂಜೆ ಪುನಸ್ಕಾರ ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯ ಎಲ್ಲ ವಿಧಿ ವಿಧಾನಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದವರು. ಈಗ ಆ ದೇವಾಲಯದ ಪೂಜೆ ಮಾಡುವ ಭಟ್ರು ವಿಠ್ಠಲಶೆಟ್ಟಿಗಾಗಿ ವಿಶೇಷ ಹೂವಿನ ಪೂಜೆಯನ್ನು ಮಾಡಿ ಅದರ ಗಂಧ ಪ್ರಸಾದವನ್ನು ಆಸ್ಪತ್ರೆಗೆ ತಂದು ವಿಠಲ ಶೆಟ್ರ ಹಣೆಗೆ ಹಚ್ಚಿದ ನಂತರ ಅವರ ದೇಹಸ್ಥಿತಿಯಲ್ಲಿ ತುಸು ತುಸುವೇ ಬದಲಾವಣೆ ಆಗಿ ಅವರು ಚೇತರಿಸತೊಡಗಿದ್ದರು.
ದೇವಿಕಾ ನಾಗೇಶ್‌ ಬರೆದ ಪ್ರಬಂಧ ನಿಮ್ಮ ಓದಿಗೆ

ಅಜ್ಜನೆಂಬ ಅಚ್ಚರಿಗೆ ಹೊಯಿದಷ್ಟು ನೀರು. ಬೆಳ್ಳಂ ಬೆಳಕಿನ ಪುಳಕ. ಲೋಕದ ಅಜ್ಜಂದಿರು ಎಲ್ಲಾ ಒಟ್ಟಿಗೆ ಗಾಂಧಿ ತಾತನ ಜೊತೆಜೊತೆಗೆ ಪುಳ್ಕು ಪುಳ್ಕು ಜಿಗಿಯುತ್ತ ದಂಡಯಾತ್ರೆಗೆ ಉಪ್ಪಿನ ತಯಾರಿಕೆಗೆ ನಡೆದಂತೆ ಕನಸೋ ನನಸೋ ಎನ್ನುವ ಬಿಗುಮಾನದಲ್ಲಿ ಮಿಂದೇಳುತ್ತಿರಲಾಗಿ ಭೂತದ ಗರ್ಭದಿಂದ ರವ್ವಂತ ತೇಲುತ್ತ ಬಂದವರು ನನ್ನ ಅಜ್ಜವಿಠ್ಠಲ ಶೆಟ್ರು.

ಹೌದು ಅಜ್ಜರಕಾಡು ಬ್ರಹ್ಮಗಿರಿ ರಸ್ತೆಯ ದಟ್ಟ ಕಾಡಿನ ರಸ್ತೆಯಲ್ಲಿ ನಡೆದು ಬರಬೇಕೆಂದರೆ ಎಂಟೆದೆ ಇರಬೇಕು. ನಡುರಾತ್ರಿ 12 ಗಂಟೆಗೆ ರಸ್ತೆಯಲ್ಲಿ ಆಗೊಮ್ಮೆ-ಈಗೊಮ್ಮೆ ಟಾಕೀಸಿನಿಂದ ಸಿನಿಮಾ ನೋಡಿ ಹಿಂತಿರುಗುವ ಸೈಕಲ್ ಸವಾರರ ಹೊರತಾಗಿ ರಸ್ತೆಯೆಲ್ಲ ಖಾಲಿ ಖಾಲಿ. ಅಜ್ಜ ಹೆಂಡತಿ ಮಕ್ಕಳೊಡನೆ ಉಡುಪಿಯಲ್ಲಿ ರಾತ್ರಿಯ ಸಿನೆಮಾ ನೋಡಿ ಜಟಕ ಹಿಡಿದು ಬಂದು ತಾಲೂಕು ಆಫೀಸಿನ ಹತ್ತಿರ ಇಳಿದಿದ್ದರು. ಮೂರು ರೂಪಾಯಿ ತೆತ್ತು ಟಾಕ್ಸಿ ಹಿಡಿದಿದ್ದರೆ ಬ್ರಹ್ಮಗಿರಿಯಲ್ಲಿರುವ ತಂಗಿಯ ಮನೆಯ ಹತ್ತಿರ ಇಳಿದು ಬೇಗ ಮನೆ ಸೇರಿಕೊಳ್ಳಬಹುದಿತ್ತು ಎನ್ನುವ ಅಜ್ಜಿಯ ಗೊಣಗಾಟಕ್ಕೆ ಕಿವಿ ಕೆಪ್ಪು ಕಟ್ಟಿದವರಂತೆ ದುಡು ದುಡು ಹೆಜ್ಜೆಹಾಕುತ್ತ ಮುಂದೆ ಮುಂದೆ ನಡೆದಿದ್ದರು. ಅವರ ಬೆನ್ನು ಹಿಡಿದು ಅಜ್ಜಿ ಹರೆಯದ ಮಗಳು ಇನ್ನೊಬ್ಬ ಅವಳಿಗಿಂತ ಚಿಕ್ಕವ ಮಗನನ್ನು ಜೊತೆಗಿಟ್ಟುಕೊಂಡು ಓಡು ನಡಿಗೆಯಲ್ಲಿ ನಡೆಯುತ್ತಾ ಮುಂದೆ ಸಾಗಿದ್ದರು.

ಕೂಡುಕುಟುಂಬದ ಮನೆಯ ಯಜಮಾನನಾದ ಅಜ್ಜನಿಗೆ ಕೃಷಿಯೆಂದರೆ ಇವತ್ತೇನು ಅವತ್ತು ಖೋತಾ ಬಜೆಟ್ಟೇ ಹೀಗಿರುವಾಗ ತಾಲೂಕು ಆಫೀಸಿನಿಂದ ಮಾರು ದೂರದಲ್ಲಿರುವ ನಾದಿನಿಯ ಮನೆ ಸೇರಲು ತಲೆಗೆ ಎರಡು ಆಣೆಯನ್ನು ಕೊಡಬೇಕಾದ ಜಟಕ ಬಿಟ್ಟು ಮೂರು ರೂಪಾಯಿ ಟ್ಯಾಕ್ಸಿ ಬಾಡಿಗೆ ಹಿಡಿಯುವುದು ಸುಮ್ಮನೆ ಯಾತಕ್ಕೆ? ಸಿನಿಮಾ ಮತ್ತು ರಾತ್ರಿ ಊಟ ಗಡದ್ದಾಗಿ ಆಗಿದೆ ಹೀಗಿರುವಾಗ ತಿಂದದ್ದು ಕರಗುತ್ತದೆ ಎನ್ನುವ ಲೆಕ್ಕಾಚಾರ ಹಾಕಿ ಜಟಕ ಹತ್ತಿದ್ದರು. ಮಗಳಿಗೆ ವರಾನ್ವೇಷಣೆ ಮಾಡಲು ಅವಳ ಫೋಟೋ ತೆಗೆಸಿದ ನಂತರ ಹೆಂಡತಿಯನ್ನು ಕೇಳುವ ಗೋಜಿಗೆ ಹೋಗದೆ ಜಟಕ ಹತ್ತಿ ಈಗ ಇಳಿದಿದ್ದರು.

ಗ್ರಹಚಾರ ಅವರನ್ನು ಕಾದಿತ್ತು ಎಂದು ಕಾಣುತ್ತದೆ. ನಾದಿನಿಯ ಮನೆಯ ಕಂಪೌಂಡ್ ದಾಟುವ ದಾರಿ ನಟ್ಟಿರುಳಿನಲ್ಲಿ ಅಯೋಮಯ ಆದಂತಾಗಿ ಅದನ್ನು ದಾಟಿ ಮುಂದಕ್ಕೆ ಇದ್ದ ಪಾಳು ಬಾವಿಗೆ ದುಡುಮ್ ಎಂದು ಬಿದ್ದುಬಿಟ್ಟರು. ಅವರನ್ನು ಮೇಲೆತ್ತಲು ಮುಂದಾಗಿದ್ದ ಅಮ್ಮನನ್ನು ತಮ್ಮನನ್ನು ಮಗಳು ಶಾಲು ಹಿಂದಕ್ಕೆ ಎಳೆದು ಜೋರಾಗಿ ಬೊಬ್ಬೆ ಹಾಕಿದ್ದಳು. ಯಾರೊಬ್ಬರೂ ಹತ್ತಿರದಲ್ಲಿ ಇರದ ಆ ಕಾಳರಾತ್ರಿ ಯಲ್ಲಿ ಸಮಯಕ್ಕೆ ಒದಗಿ ಬಂದವರು ರಾತ್ರಿ ಫಿಲ್ಮ್ ಶೋ ನೋಡಿ ಹಿಂತಿರುಗುತ್ತಿದ್ದ ಸೈಕಲ್ ಸವಾರರು ಏನಾಗಿದೆಯೆಂದು ಹತ್ತಿರ ಬಂದ ಇವರು ವಿಷಯ ತಿಳಿದು ಸೈಕಲ್ ಹೆಡ್ ಲೈಟ್ ಹಾಕಿ ಪಾಳು ಬಾವಿಗೆ ಬಿದ್ದಿದ್ದ ರಕ್ತದ ಮಡುವಿನಲ್ಲಿ ತೇಲುತ್ತಿದ್ದ ದೇಹ ಕಂಡು ನೆರೆಕರೆಯಲ್ಲಿದ್ದ ಮನೆಮಂದಿಯನ್ನು ಕಲೆಹಾಕಿದ್ದರು. ಬಾವಿಗೆ ಬಿದ್ದಿದ್ದ ಆಸಾಮಿಯನ್ನು ಬದುಕಿಸುವ ಏಕಮಾತ್ರ ಇರಾದೆಯಿಂದ ತೊಟ್ಟಿಲ ಸಹಿತ ಒಂದಿಬ್ಬರನ್ನು ಬಾವಿಗೆ ಇಳಿಸಲು ನಿರ್ಧರಿಸಿದ್ದರು.

ತೊಟ್ಟಿಲಿಗೆ ಬಾವಿಯ ಹಗ್ಗ ಕಟ್ಟಿ ಇತರೆ ಇಬ್ಬರನ್ನು ಬಾವಿಗೆ ಇಳಿಸಿದ್ದರು. ಬೇಸಿಗೆಯ ರಣಬಿಸಿಲು ನೀರಿನ ಪಸೆ ಇರದ ಪಾಳು ಬಾವಿಯಲ್ಲಿ ಕಸಕಡ್ಡಿ, ಗಾಜುಚೂರು ತುಂಬಿಕೊಂಡಿತ್ತು. ಮೈತುಂಬಾ ಗಾಯಗಳಾಗಿ ಮೂರ್ಛೆಹೋದ ಸ್ಥಿತಿಯಲ್ಲಿದ್ದ ಅಜ್ಜನನ್ನು ಬಾವಿಗಿಳಿದ ಇಬ್ಬರು ಎತ್ತಿ ಜೋಪಾನವಾಗಿ ತೊಟ್ಟಿಲಿಗೆ ಇಳಿಸಿ ಕೈಕಾಲುಗಳನ್ನು ಗಟ್ಟಿಯಾಗಿ ಕಟ್ಟಿ ಹಗ್ಗವನ್ನು ಬಾವಿಯ ಮೇಲೆ ಇದ್ದವರಲ್ಲಿ ಎಳೆಯುವಂತೆ ಹೇಳಿದ್ದರು. ಅಪಾಯದ ಸ್ಥಿತಿಯಲ್ಲಿದ್ದ ಅಜ್ಜನ ದೇಹವನ್ನು ಮೇಲೆ ನೆರೆದಿದ್ದ ಕೆಲವರು ತಕ್ಷಣ ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದರು. ಈ ಕಡೆ ಬಾವಿಗೆ ಇಳಿದಿದ್ದ ಇಬ್ಬರೂ ಮೇಲೆ ಬಂದು ವಿಠ್ಠಲಶೆಟ್ಟಿಯವರ ಹೆಂಡತಿಯ ಮನೆಗೆ ಸುದ್ದಿ ಮುಟ್ಟಿಸಿದ್ದರು.

ಬಾವಿಯಲ್ಲಿ ಬಿದ್ದಿದ್ದ ವಿಠಲ ಶೆಟ್ರ ಮಕ್ಕಳಿಬ್ಬರನ್ನು ಅವರ ಅಮ್ಮನ ತವರುಮನೆಗೆ ಮಕ್ಕಳ ಮಾವ ಬಂದು ಕರೆದುಕೊಂಡುಹೋಗಿದ್ದರು. ಇಷ್ಟೆಲ್ಲ ಘಟನೆಗಳು ನಡೆದಿದ್ದರೂ ಬಾವಿಗೆ ಬಿದ್ದ ಜಾಗದ ಹತ್ತಿರದಲ್ಲೇ ಇದ್ದ ಸೇಸಮಜ್ಜಿಯ ತಂಗಿಯ ಮನೆಯಲ್ಲಿದ್ದ ಆಕೆಯ ಮಕ್ಕಳಿಗೆ ಯಾವೊಂದು ಸುದ್ದಿಯೂ ಗೊತ್ತಿರಲಿಲ್ಲ. ಶೆಟ್ರನ್ನು ಆಸ್ಪತ್ರೆಗೆ ಸೇರಿಸಿದ ತಕ್ಷಣ ಅವರ ಮನೆಗೂ ಸುದ್ದಿ ಮುಟ್ಟಿಸಲಾಗಿತ್ತು. ಅಲ್ಲಿಂದ ಅವರ ಅಳಿಯ ಮತ್ತು ಮಗ ಕುಟ್ಟಿ ಧಾವಿಸಿ ಬಂದಿದ್ದರು.

ವಿಠ್ಠಲಶೆಟ್ಟಿ ಆ ಕಾಲದಲ್ಲಿ ನೂರು ಮುಡಿ ಭತ್ತ ಬೆಳೆಯುತಿದ್ದ ಗುತ್ತಿನ ಯಜಮಾನ್ರು. ಉಡುಪಿ ಕಾರ್ಕಳ ತಾಲೂಕಿನಲ್ಲಿ ದೊಡ್ಡ ಭೂಕಂದಾಯ ಕಟ್ಟುತ್ತಿದ್ದ ಕೆಲವೇ ಕೆಲವರಲ್ಲಿ ಒಬ್ಬರು. ಸಾಕಷ್ಟು ಕಾರುಬಾರಿನ ಅಸಾಮಿ. ಇದ್ದಕ್ಕಿದ್ದಂತೆ ಬಾವಿಗೆ ಬಿದ್ದು ದೇಹದ ಮೇಲೆ ಸ್ವಾಧೀನ ಇಲ್ಲದ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ ಎಂದರೆ ಇಡೀ ಕುಟುಂಬದ ಊರುಗೋಲೇ ಬಿದ್ದ ಹಾಗಾಗಿತ್ತು. ಆಸ್ಪತ್ರೆಯಲ್ಲಿ ಗಂಡ ಇಹದ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮಲಗಿದ್ದರೆ ಹೆಂಡತಿ ಸೇಸಮ್ಮ ದಂಗು ಬಡಿದವರಂತೆ ಕೂತು ಗಂಡನನ್ನು ಕಾಯುತ್ತಿದ್ದರು. ಗಂಡ ಬದುಕುತ್ತಾರೆ ಎನ್ನುವ ಲವಲೇಶವೂ ಧೈರ್ಯವಿಲ್ಲದೆ ಕೂತ ಅವರನ್ನು ಆಯಾ, ನರ್ಸುಗಳು ಸಮಾಧಾನ ಮಾಡುತ್ತಿದ್ದರು. ಡಾಕ್ಟರರು “ನೋಡಮ್ಮ ಬದುಕಿಸಲು ನಮ್ಮ ಕೈಯಲ್ಲಾದ ಪ್ರಯತ್ನ ಮಾಡುತ್ತಿದ್ದೇವೆ, ತಲೆಗೆ ಪೆಟ್ಟುಬಿದ್ದಿದೆ. ನೀಡಿದ ಔಷಧಿಗೆ ಮಾಡಿದ ಚಿಕಿತ್ಸೆಗೆ ತಕ್ಷಣ ಪ್ರತಿಫಲ ನಿರೀಕ್ಷಿಸಲಾಗುವುದಿಲ್ಲ. ಕಾಯಬೇಕು ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ದೇವರ ಮೇಲೆ ಭಾರ ಹಾಕಿ” ಎಂದಿದ್ದರು. ಕುಟುಂಬದ ದೈವ ದೇವರ ಧಾರ್ಮಿಕ ವಿಧಿ ವಿಶೇಷಗಳನ್ನು ನಿಷ್ಠೆಯಿಂದ ಯಾವುದೇ ಚ್ಯುತಿಯಿಲ್ಲದೆ ಮಾಡಿಕೊಂಡು ಬಂದವರು. ವಿಠ್ಠಲಶೆಟ್ಟಿ ಮರ್ಯಾದೆಗೆ ಅಂಜುವ ಮನುಷ್ಯ. ಹಿರಿಯರು ಹೆಣ್ಣುಮಕ್ಕಳು ಅಂದ್ರೆ ಗೌರವ. ತನ್ನ ಮದುವೆಯ ಕಾಲಕ್ಕೆ ಹೆಂಡತಿಯ ಮನೆಯವರಿಂದ ಪಡೆದ ವರದಕ್ಷಿಣೆಯ ಹಣ ಖರ್ಚು ಮಾಡಿದರೆ ಅದು ತಾನು ಕೈಹಿಡಿದವಳಿಗೆ ಮಾಡಿದ ಅನ್ಯಾಯ ಎಂಬ ಎಚ್ಚರದಿಂದ 500ರೂಪಾಯಿ ಕೊಟ್ಟು ಹೆಂಡತಿಯ ಮನೆ ಹತ್ತಿರದಲ್ಲಿ ಹೆಂಡತಿಯ ಹೆಸರಿನಲ್ಲೇ ಜಾಗೆ ಕೊಂಡು ರಿಜಿಸ್ಟರ್ ಮಾಡಿಸಿದ್ದರು. ಅವರು ಬಾವಿಗೆ ಬಿದ್ದ ಕಾಲಕ್ಕಾಗಲೇ ಆ ಜಾಗದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದ್ದರು. ಜೊತೆಗೆ ಮಗಳ ಮದುವೆ ಮಾಡಿ ಮುಗಿಸಿಬಿಡುವ ಯೋಚನೆಯಲ್ಲಿದ್ದರು. ಇಂತಹ ಸ್ಥಿತಿಯಲ್ಲಿ ಇದ್ದಕ್ಕಿದ್ದಹಾಗೆ ಬಾವಿಗೆ ಗಂಡ ಬಿದ್ದಾಗ ಬದುಕುತ್ತಾರೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದ ಸೇಸಮ್ಮಜ್ಜಿ ರಾತ್ರಿ ಹಗಲು ಗಂಡನನ್ನು ಉಳಿಸುವಂತೆ ಕಂಡ ಕಂಡ ದೇವರನ್ನು ಬೇಡಿಕೊಂಡು ಒಂದೇ ಸವನೆ ಅಳುತ್ತಿದ್ದರು.

ಆಸ್ಪತ್ರೆಗೆ ಸೇರಿಸಿದ ಒಂಬತ್ತು ದಿನದವರೆಗೆ ಶೆಟ್ರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರು ನಂಬಿಕೊಂಡು ಬಂದ ಮನೆ ದೈವವಾದ ಅಬ್ಬಗ-ದಾರಗೆಯ ದಿನನಿತ್ಯದ ಪೂಜೆ ಪುನಸ್ಕಾರ ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯ ಎಲ್ಲ ವಿಧಿ ವಿಧಾನಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದವರು. ಈಗ ಆ ದೇವಾಲಯದ ಪೂಜೆ ಮಾಡುವ ಭಟ್ರು ವಿಠ್ಠಲಶೆಟ್ಟಿಗಾಗಿ ವಿಶೇಷ ಹೂವಿನ ಪೂಜೆಯನ್ನು ಮಾಡಿ ಅದರ ಗಂಧ ಪ್ರಸಾದವನ್ನು ಆಸ್ಪತ್ರೆಗೆ ತಂದು ವಿಠಲ ಶೆಟ್ರ ಹಣೆಗೆ ಹಚ್ಚಿದ ನಂತರ ಅವರ ದೇಹಸ್ಥಿತಿಯಲ್ಲಿ ತುಸು ತುಸುವೇ ಬದಲಾವಣೆ ಆಗಿ ಅವರು ಚೇತರಿಸತೊಡಗಿದ್ದರು. ನಂತರವೂ ಒಂಬತ್ತು ದಿನ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಮುಂದುವರಿಸಿದ ಅಜ್ಜ ಕೂರುವ ಸ್ಥಿತಿಯಲ್ಲಿ ಆದ ನಂತರ ಡಾಕ್ಟರರ ಸಲಹೆಯಂತೆ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗಲಾಯಿತು. ಅಷ್ಟು ದಿನವೂ ಶಾಲು ತನ್ನ ಅಮ್ಮನ ತವರಿನಲ್ಲಿ ದೊಡ್ಡಮ್ಮನ ಮಗಳು ಶೀಲಾಳ ಜೊತೆ ಕಳೆದಿದ್ದಳು. ವರದ ಈ ಮೊದಲೇ ಕುದ್ರೆಪಾಡಿಗೆ ಅಣ್ಣನ ಜೊತೆಗೆ ಹೋಗಿದ್ದ.

ಅಪ್ಪನ ಮನೆಯಲ್ಲಾದರೆ ಮನೆ ತುಂಬ ಜನ. ಕೈತುಂಬ ಕೆಲಸ. ಇಲ್ಲಿ ಮನೆಗೆಲ್ಲ ದೊಡ್ಡಮ್ಮ ಅವರ ಪುಳ್ಳಿ ಶೀಲಕ್ಕ ದೊಡ್ಡಮ್ಮನ ಮಗ ಶೇಖಣ್ಣ ಅವರ ಹೆಂಡತಿ ವಿಮಲತ್ತಿಗೆ ಅವರ ಪುಟ್ಟ ಮಗು ಪೃಥ್ವಿ ಅಪರೂಪಕ್ಕೆ ಬರುವ ಮಹಾಬಲ ಮಾವ ಇಷ್ಟೇ ಮಂದಿ ಬಂಧುಗಳು. ಮೊದಲೇ ಅಪ್ಪ ಬಾವಿಗೆ ಬಿದ್ದು ಆದ ಆಘಾತದಲ್ಲಿ ಕುಸಿದು ಹೋಗಿದ್ದ ಶಾಲುಗೆ ಒಮ್ಮೆ ಅಪ್ಪನ ಆರೋಗ್ಯ ಸರಿಯಾದರೆ ಸಾಕು. ಊರು ಸೇರಿ ಬಿಡುತ್ತಿದ್ದೆ ಎಂಬ ಚಡಪಡಿಕೆ ಶುರು ಆಗಿತ್ತು. ಅಮ್ಮನ ಮನೆಗೆ ಅಪರೂಪಕ್ಕೊಮ್ಮೆ ಬರುತ್ತಿದ್ದ ಶಾಲುಗೆ ಅಲ್ಲಿ ಇದ್ದವರಲ್ಲಿ ಅಷ್ಟು ಆತ್ಮೀಯತೆ ಬೆಳೆದಿರಲಿಲ್ಲ. ಶೀಲ ಮತ್ತು ಪೃಥ್ವಿ ಸಾಧ್ಯವಾದಷ್ಟು ಶಾಲು ಜೊತೆಯಲ್ಲಿ ಇರುತ್ತಿದ್ದರು. ಆದರೇನು ಶಾಲುಗೆ ತಾನಿರುವ ಸ್ಥಿತಿಯಲ್ಲಿ ಯಾರ ಸಹವಾಸವೂ ಬೇಡವೆನಿಸಿತ್ತು. ವಾರ ಕಳೆದು ಬಂದ ಅವಳ ಅಣ್ಣ ಕುಟ್ಟಿ ಅಪ್ಪ ಈಗ ತುಸು ಕಣ್ಣುಬಿಡುತ್ತಿದ್ದಾರೆ. ಡಿಸ್ಚಾರ್ಜ್ ತಡವಾಗುತ್ತದೆ ಎಂದಿದ್ದ. ಶೇಖಣ್ಣ ಮಾಮ ಆಸ್ಪತ್ರೆಗೆ ದಿನಂಪ್ರತಿ ಹೋಗುತ್ತಿದ್ದರೂ ಅವರು ಅಲ್ಲಿಯ ಯಾವ ವಿಚಾರವನ್ನು ದೊಡ್ಡಮ್ಮನ ಹೊರತಾಗಿ ಕಿರಿಯರಲ್ಲಿ ಮಾತಾಡುತ್ತಿರಲಿಲ್ಲ. ಶಾಲುಗೆ ಅಪ್ಪನ ಆರೋಗ್ಯದ ವಿಚಾರ ಇವರಲ್ಲಿ ಕೇಳುವುದಕ್ಕೆ ಭಯ. ಅಣ್ಣನ ಮಾತು ಕೇಳಿ ತುಸು ನಿಟ್ಟುಸಿರುಬಿಟ್ಟ ಶಾಲುಗೆ ಸದ್ಯ ಬಚಾವಾದೆ ಎನ್ನುವ ಭಾವ ಮೂಡಿ ಬಿಟ್ಟಿತ್ತು. ಮತ್ತೂ ಒಂದು ವಾರ ಅಮ್ಮನ ಮನೆಯಲ್ಲಿ ಉಳಿದ ಶಾಲು ಅಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಕ್ಕೆ ನಾಲ್ಕು ದಿನ ಇದೆ ಎನ್ನುವಾಗ ಕುದ್ರೆ ಪಾಡಿಗೆ ಹೊರಟು ನಿಂತಳು. ಅಪ್ಪನ ಮನೆ ಸೇರುವ ಮೊದಲೊಮ್ಮೆ ಅಪ್ಪನನ್ನು ಆಸ್ಪತ್ರೆಗೆ ಹೋಗಿ ನೋಡಿ ಕಣ್ಣು ತುಂಬಿಸಿಕೊಂಡಳು. ಬೆಡ್ ನಲ್ಲಿ ಮಲಗಿದ್ದ ಅಪ್ಪ ಮಗಳ ಕೈ ಸವರಿ ಪ್ರೀತಿ ತೋರಿಸಿದರು. ಕುದ್ರೆ ಪಾಡಿಯ ಮನೆಗೆ ಹೋದರೆ ಅಲ್ಲಿ ಗೆಳತಿ ಶಾಂತ ಇರುತ್ತಾಳೆ, ಅಮ್ಮನ ಪ್ರೀತಿ ತೋರಿಸುವ ಸುಗುಣ ಸನ್ನಮ್ಮ ಇರುತ್ತಾರೆ. ಅವರಿಬ್ಬರಲ್ಲಿ ತನ್ನ ಇಷ್ಟು ದಿನದ ದುಗುಡವೆಲ್ಲ ಹೇಳಿಕೊಂಡು ಹಗುರ ಆಗಬಹುದು ಎನ್ನುವ ಆತುರ ಶಾಲುಗೆ ಇತ್ತು..

ಮುಟ್ಟಿಕಲ್ಲಿನ ಅವರ ಮನೆ ಶಾಲುಗೆ ಇನ್ನೊಂದು ತವರೇ. ಅಲ್ಲಿ ಶಾಂತ ಹಾಗೂ ಅವಳ ಅಮ್ಮನ ಹತ್ತಿರ ಕೂತು ಶಾಲು ಸುದ್ದಿ ಸುಲಕ ಮಾತನಾಡುತ್ತಿದ್ದಳು. ಶಾಲು ಕ್ರೋಶ ಹೆಣಿಗೆ ಕಲಿತದ್ದು ಇಲ್ಲಿಯೇ. ಶಾಲುಗೆ ಕುದ್ರೆಪ್ಪಾಡಿ ತಂದೆಯ ಮನೆಯಾದರೆ ಶಾಂತಗೆ ಅಮ್ಮನ ಮನೆ. ಶಾಂತಾಳ ಅಣ್ಣ ರಾಮಕೃಷ್ಣ ಶಾಲುಗೆ ಸಹಪಾಠಿ. ಅತ್ತೆಯ ಮಗ ಅನ್ನುವ ಸಲಿಗೆ ಇದ್ದರೂ ಜೊತೆಯವರ ಹರಕು ಬಾಯಿಗೆ ವಸ್ತುವಾಗಬಾರದು ಎಂಬ ಎಚ್ಚರದಲ್ಲಿ ಇಬ್ಬರ ನಡುವೆ ಇಲ್ಲವೇ ಇಲ್ಲ ಅನ್ನುವಷ್ಟು ಮಾತು ಕಡಿಮೆಯಾಗಿತ್ತು. ಓದಿನಲ್ಲಿ ಜಾಣನಿದ್ದ ರಾಮಕೃಷ್ಣನೆಂದರೆ ಶಾಲುಗೆ ಮೆಚ್ಚುಗೆ ಇತ್ತು. ಆದರೆ ಮಾತಿನಲ್ಲಿ ವ್ಯಕ್ತಪಡಿಸುವ ಹಾಗಿರಲಿಲ್ಲ. ಇಬ್ಬರೂ ಎದುರಾದಾಗ ನಾಚಿಕೆ ಮುಳ್ಳಿನಂತೆ ಮುದುರಿಕೊಳ್ಳುತ್ತಿದ್ದರು: ಇದೇ ರಾಮಕೃಷ್ಣ ಕಲಿಕೆಯಲ್ಲಿ ಮುಂದೆ ಮುಂದೆ ಹೋಗಿ ರಾಜ್ಯ ದೇಶದ ಗಡಿ ದಾಟಿ ದೂರದ ಅಮೆರಿಕದಲ್ಲಿ ನೆಲೆಸಿದ. ಶಾಲು ಶಾಂತ ಜೊತೆಯಾದಾಗ ಮಾತಿನಲ್ಲಿ ಸುಳಿದು ಮಾಯವಾಗಿಬಿಡುತ್ತಿದ್ದ.

ಆಸ್ಪತ್ರೆಯಿಂದ ಹಿಂತಿರುಗಿದ ಅಜ್ಜನಿಗೆ ಕೂಡುಕುಟುಂಬದ ಪುಳಿ ರಗಳೆಗಳ ನಡುವೆ ನೆಮ್ಮದಿಯಿಂದ ಇರುವುದು ಕಷ್ಟವಾಗುತ್ತದೆ ಎಂದು ಮಂಜರ ಪಳಿಕೆಯಲ್ಲಿ ಬಾಡಿಗೆ ಮನೆ ಹಿಡಿದು ಅಲ್ಲಿ ಅಜ್ಜಿ ಅಜ್ಜ ವಾಸಿಸತೊಡಗಿದರು. ಶಾಲು ಕೂಡುಕುಟುಂಬದ ಮನೆಯಲ್ಲಿದ್ದುಕೊಂಡು ಅತ್ತೆಯೊಂದಿಗೆ ಸೇರಿ ಮನೆಯ ಎಲ್ಲ ಕೆಲಸವನ್ನುಅಚ್ಚು ಕಟ್ಟಾಗಿ ಮಾಡಿಕೊಂಡಿದ್ದಳು. ಅಪ್ಪ ಅಮ್ಮ ಮನೆಯಲ್ಲಿ ಇಲ್ಲದೇ ಹೋದರೂ ಅಲ್ಲಿ ಎಲ್ಲ ಓರಗೆಯವರು ಇದ್ದದ್ದರಿಂದ ಶಾಲುಗೆ ಇಲ್ಲಿ ಅಂತಹ ಕಷ್ಟವೇನೂ ಆಗಲಿಲ್ಲ. ಅಮ್ಮ ಮನೆಯಲ್ಲಿದ್ದಾಗ ನೋಡಿಕೊಳ್ಳುತ್ತಿದ್ದ ಐದು ಹಾಲು ಕರೆಯುವ ಹಸುಗಳ ಸಂಪೂರ್ಣ ಜವಾಬ್ದಾರಿ ಇವಳದಾಗಿತ್ತು. ಹೊತ್ತು ಹೊತ್ತಿಗೆ ದನಗಳ ಹಾಲು ಕರೆಯುವುದು ಅವುಗಳಿಗೆ ಮೇವು ನೀರು ಒದಗಿಸುವುದು ಇವಳ ಕೆಲಸವಾಗಿತ್ತು. ಮನೆಯ ಉಪಯೋಗಕ್ಕೆ ಹಾಲು ಮಜ್ಜಿಗೆ ಬಳಕೆಯಾಗುತ್ತಿತ್ತು. ಬೆಣ್ಣೆಯನ್ನು ತುಪ್ಪ ಮಾಡಿ ಕೃಷ್ಣಮಠಕ್ಕೆ ಮಾರುವ ವ್ಯವಸ್ಥೆಯನ್ನು ಅಜ್ಜ ಮೊದಲೇ ಮಾಡಿದ್ದರು. ಅಜ್ಜನಿಗೆ ಅನಾರೋಗ್ಯವಾದಾಗಲೂ ಇದೇ ಪರಿಪಾಠ ಮುಂದುವರಿದು ಮಠಕ್ಕೆ ತುಪ್ಪ ಮುಟ್ಟಿಸುವ ಜವಾಬ್ದಾರಿ ಕುಟ್ಟಿ ಹೊತ್ತಿದ್ದ.

ವಿಠ್ಠಲಶೆಟ್ಟಿ ಮರ್ಯಾದೆಗೆ ಅಂಜುವ ಮನುಷ್ಯ. ಹಿರಿಯರು ಹೆಣ್ಣುಮಕ್ಕಳು ಅಂದ್ರೆ ಗೌರವ. ತನ್ನ ಮದುವೆಯ ಕಾಲಕ್ಕೆ ಹೆಂಡತಿಯ ಮನೆಯವರಿಂದ ಪಡೆದ ವರದಕ್ಷಿಣೆಯ ಹಣ ಖರ್ಚು ಮಾಡಿದರೆ ಅದು ತಾನು ಕೈಹಿಡಿದವಳಿಗೆ ಮಾಡಿದ ಅನ್ಯಾಯ ಎಂಬ ಎಚ್ಚರದಿಂದ 500ರೂಪಾಯಿ ಕೊಟ್ಟು ಹೆಂಡತಿಯ ಮನೆ ಹತ್ತಿರದಲ್ಲಿ ಹೆಂಡತಿಯ ಹೆಸರಿನಲ್ಲೇ ಜಾಗೆ ಕೊಂಡು ರಿಜಿಸ್ಟರ್ ಮಾಡಿಸಿದ್ದರು.

ಇನ್ನೂ ಪುಟ್ಟವಳಿದ್ದ ಶಾಲುನ ತಂಗಿ ನಮಿತಾ ದಿನಕ್ಕೆ ಹತ್ತು ಸಲವಾದರೂ ಅತ್ತೆಯನ್ನು ಅಕ್ಕನನ್ನು ಅಮ್ಮ-ಅಪ್ಪ ಎಲ್ಲಿದ್ದಾರೆ ಯಾವಾಗ ಬರ್ತಾರೆ ಎಂದು ಕೇಳುತ್ತಿದ್ದಳು. ಅಪ್ಪ ಬಾವಿಗೆ ಬಿದ್ದಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ತಮ್ಮ ವರದ ತಂಗಿಯಲ್ಲಿ ಅದೇನು ಹೇಳಿದ್ದನೊ ಆ ಹುಡುಗಿ ಅಪ್ಪ ಅಮ್ಮನನ್ನು ನೆನಪಿಸಿಕೊಂಡು ಅಳುತ್ತಿದ್ದಳು.

ಇದನ್ನು ನೋಡಿದ ಚಂದತ್ತೆ ಒಂದು ದಿನ ಬಿಡುವು ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ತಮ್ಮ ಬಾಡಿಗೆಗಿದ್ದ ಮನೆಗೆ ಹೋದರು. ಅಲ್ಲಿ ಅಪ್ಪ-ಅಮ್ಮನನ್ನು ಕಂಡ ನಮಿತಾ ಅಲ್ಲಿಂದ ಹಿಂತಿರುಗಲು ಕೇಳಲೇ ಇಲ್ಲ. ಉಳಿದವರು ಕುದ್ರೆಪಾಡಿಗೆ ಹಿಂತಿರುಗಿದರು. ಒಮ್ಮೆ ಡಾಕ್ಟರ ಹತ್ತಿರ ಗಂಡನ ತಪಾಸಣೆ ಮಾಡಿಸಿಕೊಂಡು ಮನೆಗೆ ಗಂಡನ ಜೊತೆ ಹಿಂತಿರುಗುವ ಆಲೋಚನೆಯಲ್ಲಿದ್ದ ಅಜ್ಜಿ ನಮಿತಾಳನ್ನು ತಮ್ಮ ಜೊತೆಗಿರಿಸಿಕೊಂಡರು. ಇಷ್ಟು ಹೊತ್ತಿಗಾಗಲೇ ಗಂಡ ಮೊದಲಿನಂತೆ ಆಗುವುದು ಸಾಧ್ಯವಿಲ್ಲ ಅನ್ನೋದನ್ನು ಮನಗಂಡಿದ್ದ ಅಜ್ಜಿ ಮಗಳ ಮದುವೆಯನ್ನು ಮಾಡಿ ಮುಗಿಸುವ ಆತುರದಲ್ಲಿದ್ದಳು. ಆಗಿನ್ನೂ ಹದಿನಾರರ ಹರೆಯದಲ್ಲಿದ್ದ ಶಾಲುಗೆ ಇದು ತಮಾಷೆಯಾಗಿ ಕಾಣುತ್ತಿತ್ತು. ಅಮ್ಮ ಯಾವಾಗಲೂ ಕಂಡ ಕಂಡವರಲ್ಲಿ ಮಗಳ ಪುಣ್ಯ ದೊಡ್ಡದಿತ್ತು. ಹಾಗೆ ಗಂಡ ಬದುಕಿ ಬಂದರು, ಅವಳ ಮದುವೆ ಬೇಗ ಮಾಡಬೇಕು. ವರ ಇದ್ದರೆ ಹೇಳಿ ಎನ್ನುವುದಿತ್ತು.

ಆ ಕಾಲದಲ್ಲಿ ವರ ಮುಂಬೈಯವ ಎಂದರೆ ಅದರಲ್ಲೂ ಹೋಟೆಲು ಇಟ್ಟುಕೊಂಡಿದ್ದಾನೆ ಎಂದರೆ ಆತನಿಗೆ ಬೇಡಿಕೆ ತುಂಬ, ಶಾಲುಗೆ ನಿಶ್ಚಯವಾದ ವರ ಇಂತಹ ಯಾವುದೇ ವಿಶೇಷಣ ಇಲ್ಲದವ. ಕಾಫಿ ತೋಟದಲ್ಲಿ ರೈಟರ್ ಕೆಲಸದಲ್ಲಿದ್ದಾನೆ ಎಂದಾಗ ಶಾಲುಗೇನು ಅವಳ ಅಮ್ಮನಿಗೂ ತುಸು ಪಿಚ್ಚೆನಿಸಿತ್ತು. ತನ್ನ ಗಂಡ ಈಗಿರುವ ಸ್ಥಿತಿಯಲ್ಲಿ ಮಗಳ ವರನಾಗುವವರು ಜವಾಬ್ದಾರಿ ಇರುವವರು ಆಗಿರಬೇಕು ಎಂಬ ಆಸೆ ಇತ್ತು. ಹೆಣ್ಣುಮಕ್ಕಳ ಮದುವೆಯೆಂದರೆ ಲಾಟರಿ ಟಿಕೆಟ್ ತೆಗೆದ ಹಾಗೆ. ಅದೃಷ್ಟವಿದ್ದರೆ ಲಕ್ಷ್ಮಿ ಕಾಲು ಮುರಿದು ಮನೆಯಲ್ಲಿ ಉಳಿಯುತ್ತಾ ಳೆ. ಇಲ್ಲವೆಂದರೆ ಊರಿನಲ್ಲಿ ದುಡಿಯಲು ಗದ್ದೆ ತೋಟಕ್ಕೆ ಬರವಿಲ್ಲವಲ್ಲ ಎಂಬ ನಂಬಿಕೆಯಲ್ಲಿದ್ದ ಕಾಲವಾಗಿತ್ತದು.

ಶಾಲೂನ ಮದುವೆ ಸಿದ್ಧತೆ ಭರದಿಂದ ಸಾಗುತ್ತಿತ್ತು. ಮದುವೆಯ ಖರ್ಚುವೆಚ್ಚಕ್ಕೆ ಅಜ್ಜ-ಅಜ್ಜಿಯ ಪಾಲಿಗೆ ಬಂದಿದ್ದ ಪಡುಕೆರೆಯ ಹೊಳೆ ಬದಿಯ ತೆಂಗಿನ ತೋಟ ಮಾರುವ ಯೋಚನೆಯಲ್ಲಿದ್ದರು. ಕುಟ್ಟಿ ಅಪ್ಪನ ಪರವಾಗಿ ಎಲ್ಲ ವ್ಯವಹಾರ ಮಾಡುತ್ತಿದ್ದು, ಈ ವಿಷಯ ಅಮ್ಮನ ಮೂಲಕ ಅಪ್ಪನಿಗೆ ವರದಿ ನೀಡುತ್ತಿದ್ದ. ಅಪ್ಪನ ಆರೋಗ್ಯದ ಕಾಳಜಿ ಮಾಡುತ್ತಿದ್ದ. ಇದು ಅಪ್ಪ ಬಾವಿಗೆ ಬಿದ್ದ ನಂತರ ಅವನಲ್ಲಿ ಆಗಿರುವ ಸಣ್ಣ ಬದಲಾವಣೆ. ಆದರೆ ಇದು ಹೆಚ್ಚು ದಿನ ಮುಂದುವರಿಯಲಿಲ್ಲ.

ಅಜ್ಜ ಆರೋಗ್ಯದಿಂದ ಇರುವಷ್ಟು ಕಾಲ ಕುಟ್ಟಿಯ ಪುಂಡಾಟಿಕೆಗೆ ಒಂದು ಕಡಿವಾಣವಿತ್ತು. ಹೈಸ್ಕೂಲ್ ವಿದ್ಯಾಭ್ಯಾಸವನ್ನೂ ನೆಟ್ಟಗೆ ಮುಗಿಸಲಾಗದ ಮಗನನ್ನು ಮನೆಯಿಂದ ದೂರವಿಟ್ಟರೆ ಬುದ್ಧಿ ಕಲಿಯುತ್ತಾನೆ ಎಂದು ಅಜ್ಜ ಉಡುಪಿಯಲ್ಲಿ ಶಾಲೆಗೆ ಸೇರಿಸಿದ್ದರು. ಅಲ್ಲಿ ಊರು ಉಸಾಬರಿಯಲ್ಲಿ ತಿರುಗಿಕೊಂಡು ಶಾಲೆಗೆ ಮಣ್ಣು ಹೊತ್ತಿದ್ದೇ ಬಂತು, ಪಾಸಾಗುವ ಲಕ್ಷಣ ಕಾಣಿಸಲಿಲ್ಲ. ಕೂಡು ಕುಟುಂಬದ ಯಜಮಾನನ ಮಗ ಹೀಗೆ ಉಂಡಾಡಿ ಗುಂಡನಂತೆ ತಿರುಗಿ ಮಜಾ ಉಡಾಯಿಸುತ್ತಿದ್ದಾನೆ. ನಾವು ಅಳಿಯಂದಿರು ಗದ್ದೆ ತೋಟವೆಂದು ಬೆವರು ಸುರಿಸಿ ದುಡಿಯಬೇಕೇ.. ಇದು ಯಾವ ನ್ಯಾಯವೆಂದು ಕುಟುಂಬದೊಳಗೆ ಇತರ ಸದಸ್ಯರು ಬುಸುಗುಡುತ್ತಿದ್ದರು. ಒಡಹುಟ್ಟಿದವರು ಕುಟುಂಬದ ಆಸ್ತಿ ಪಾಲು ಆಗಬೇಕೆಂದು ಒತ್ತಾಯಿಸುತ್ತಿದ್ದರು. ಇದು ಅಜ್ಜನ ಗಮನಕ್ಕೆ ಬಂದಿದ್ದರೂ ಮಗಳ ಮದುವೆ ಒಂದು ಕಳೆಯಲಿ ನಂತರ ಪಾಲು ಮಾಡಿಕೊಡುತ್ತೇನೆ ಎಂದು ಈ ಪ್ರಸ್ತಾಪವನ್ನು ಮುಂದೆ ಹಾಕಿಕೊಂಡು ಬಂದಿದ್ದರು.

ಇಂತಹ ಕಷ್ಟಕಾಲದಲ್ಲಿ ಅಜ್ಜ ಬಾವಿಗೆ ಬಿದ್ದು ಆದ ಆಘಾತದಿಂದ ಆಸ್ಪತ್ರೆ, ಮನೆ, ಅಜ್ಜನ ಚಾಕರಿಯೆಂದು ದುಡಿದು ದುಡಿದು ಸೋತಿದ್ದ ಅಜ್ಜಿ ಇನ್ನೂ ಚೇತರಿಸಿಕೊಂಡಿರಲಿಲ್ಲ. ಇಂತಹ ಸರಿಹೊತ್ತಿನಲ್ಲಿ ಕುಟ್ಟಿ ಸಹಾಯಕ್ಕೆ ಆಗಿ ಬರುತ್ತಾನೆ: ಓದದಿದ್ದರೇನಂತೆ ವ್ಯವಹಾರದಲ್ಲಿ ಜಾಣ ಇದ್ದಾನೆ ಸಾಕು ಎಂದು ಭಾವಿಸಿ ಅಜ್ಜಿ ಮಗನ ಜೊತೆ ಮನೆಯ ಕಷ್ಟಸುಖ ಹಂಚಿಕೊಳ್ಳಲು ತೊಡಗಿದ್ದರು. ಸಾಲದ್ದಕ್ಕೆ ಈ ಮೊದಲೇ ಅಜ್ಜ ಅಜ್ಜಿಯ ಪಾಲಿಗೆ ಬಂದಿದ್ದ ಗದ್ದೆಯನ್ನು ಗೇಣಿಗೆ ಕೊಟ್ಟಿದ್ದು ಆ ಗೇಣಿ ವಸೂಲಿಗೆ ಮಗನನ್ನು ನೇಮಿಸಿದ್ದರು.

ಅಜ್ಜ ಬಾವಿಗೆ ಬೀಳುವ ಮೊದಲು ಉಡುಪಿ ತಾಲೂಕಿನಲ್ಲಿ ಬಾರೀ ಕಾರು ಬಾರಿನ ಮನುಷ್ಯ ಎಂದು ಹೆಸರಾಗಿದ್ದರು. ಎರಡನೇ ಮಹಾಯುದ್ಧ ಬಹಳ ಬಿರುಸಿನಿಂದ ನಡೆಯುತ್ತಿದ್ದ ಕಾಲವದು. ಮನೆಯಲ್ಲಿದ್ದ ಅಕ್ಕಿ ಮುಡಿಗೂ ಸರಕಾರದಿಂದ ಉಳಿಗಾಲವಿರಲಿಲ್ಲ. ಮನೆಯವರ ಹೊಟ್ಟೆ ತುಂಬಿಸಲು ಅಕ್ಕಿ ಮುಡಿಯನ್ನು ಅಡಗಿಸಿಡಬೇಕಾದ ಪರಿಸ್ಥಿತಿ ಇತ್ತು. ಎರಡನೆಯ ಮಹಾಯುದ್ಧ ಮುಗಿದ ನಂತರ ದೇಶಕ್ಕೆ ಸ್ವಾತಂತ್ರ್ಯ ನೀಡುವುದೆಂದು ಬ್ರಿಟಿಷ್ ಆಡಳಿತ ಸಾರಿತ್ತು. ಇಂತಹದೇ ಬಿಸಿ ವಾತಾವರಣ ಇರುವಾಗ ಗಾಂಧಿ ತಾತ ಅಜ್ಜರಕಾಡು ಮೈದಾನಕ್ಕೆ ಬರುವರೆಂದು ಸುದ್ದಿಯಾಗಿತ್ತು. ಅಜ್ಜ ತನ್ನ ಸಂಗಡಿಗರನ್ನು ಕಟ್ಟಿಕೊಂಡು ಅಜ್ಜರಕಾಡು ಮೈದಾನಕ್ಕೆ ಬಂದರು. ಗಾಂಧೀಜಿಯ ಮಾತಿನ ಮೋಡಿಗೆ ಮರುಳಾಗಿ ಅಮ್ಮನ ನೆನಪಿಗೆಂದು ತನ್ನ ಕಿವಿಯಲ್ಲಿ ಧರಿಸಿದ್ದ ಎರಡು ಮುರುಗಳನ್ನೂ ದಾನವಾಗಿತ್ತರು. ರೈತನಾಗಿದ್ದ ತಾನು ಇದು ಬಿಟ್ಟು ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಗಾಂಧೀಜಿಗೆ ಬೇರೆ ಏನು ಕೊಡಲಿ ಎಂಬ ವಿನಮ್ರತೆ ಆಗ ಅಜ್ಜನಲ್ಲಿ ಇತ್ತು. ಆ ಒಂದು ಕ್ಷಣ ಭಾವಾವೇಶಕ್ಕೆ ಒಳಗಾದ ಅಜ್ಜನ ಕಣ್ಣುಗಳಲ್ಲಿ ಆಗ ನೀರಾಡಿತ್ತು.

ಅಜ್ಜ ಬಾವಿಗೆ ಬೀಳುವ ಕಾಲಕ್ಕಾಗಲೇ ದೇಶ ಸ್ವಾತಂತ್ರ್ಯವಾಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿತ್ತು. ಜನ ತಮ್ಮ ಸರಕಾರ ಬಂತು ಎಂದು ಬೀಗುತ್ತಿದ್ದರು. ಚುನಾವಣೆ ಬಿರುಸಿನಿಂದ ನಡೆಯುತ್ತಿತ್ತು. ಪ್ರಜೆಗಳೇ ಪ್ರಭುಗಳು ಎಂದು ಸಾರಲಾಗುತ್ತಿತ್ತು. ಆಗಲೇ ನಾಲ್ಕು ಊರು ಸುತ್ತಿದ್ದ ಕುಟ್ಟಿ ರಾಜಕೀಯದ ಅಮಲೇರಿಸಿಕೊಂಡಿದ್ದ. ಖರ್ಚಿಗೆ ದಾರಿಗಳನ್ನು ಹುಟ್ಟಿಸಿಕೊಂಡಿದ್ದ. ಅಜ್ಜನಿಗಿದ್ದ ದೇಶಪ್ರೇಮ ಗಾಂಧಿಪ್ರೀತಿ ಮಗನನ್ನು ಈ ಮಟ್ಟಕ್ಕೆ ಇಳಿಸುತ್ತದೆ ಎಂದು ಅವರು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಮಗನನ್ನು ಸರಿ ದಾರಿಗೆ ತರಲು ಅವರೂ ಆರೋಗ್ಯವಾಗಿದ್ದಷ್ಟು ಕಾಳಜಿ ಪ್ರಯತ್ನಿಸುತ್ತಲೇ ಬಂದಿದ್ದರು. ದೇಶ ಸೇವೆಯೆಂದರೆ ಉಂಡು ತಿಂದು ಉಡಾಯಿಸುವುದು. ಚುನಾವಣೆಯಲ್ಲೂ ಗೆಲ್ಲುವುದು ಎಂದಷ್ಟೇ ಭಾವಿಸುತ್ತಿದ್ದ ಮಗನ ಚರ್ಯೆ ಕಂಡು ಅವರು ಒಳಗೊಳಗೆ ಚಡಪಡಿಸುತ್ತಿದ್ದರು. ಇದು ಅವರ ಆರೋಗ್ಯದಲ್ಲಿ ಆಗುತ್ತಿದ್ದ ಏರುಪೇರಿನಿಂದ ಗಮನಿಸಬಹುದಾಗಿತ್ತು.

ಹೊರಪ್ರಪಂಚದ ಜ್ಞಾನವಿಲ್ಲದ ಅಜ್ಜಿ ಅಜ್ಜನನ್ನು ನೋಡಿಕೊಳ್ಳುತ್ತ ಡಾಕ್ಟರರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಗಂಡನಿಗೆ ಯಾವುದೇ ತಲೆಬಿಸಿ ತಾಗದಂತೆ ಜೋಪಾನ ಮಾಡುವುದು ಮುಖ್ಯವೆಂದು ಮನೆಯ ಕಿರಿಕಿರಿ ಒಬ್ಬಳೇ ನಿಭಾಯಿಸಲು ಪ್ರಯತ್ನಿಸುತ್ತಿದ್ದಳು. ಅಮ್ಮನ ಪ್ರಶ್ನೆಗಳಿಗೆ ಮಾತಿನ ಮಂಟಪ ಕಟ್ಟಿ ರಂಜಿಸುತ್ತಿದ್ದ ಮಗ ಮನೆಯಿಂದ ಹೊರಗೆ ಕಾಲಿಡುವಾಗ ಅಮ್ಮನಿಂದ ಹಣ ಕೀಳುತ್ತಿದ್ದ. ಯಾಕೆ ಎಂದು ಆಕೆ ಪ್ರಶ್ನಿಸಿದರೆ ಅವಳಿಗೆ ಬೈದು ಬಾಯಿಮುಚ್ಚಿಸುತ್ತಿದ್ದ. ಕೂಡು ಕುಟುಂಬದಲ್ಲಿ ಇವರ ಮಾತು ಮಂದಿಯ ಕಿವಿಗೆ ಮಾನ ಹರಾಜಾಗುತ್ತದೆ ಎಂದು ಅಜ್ಜಿ ತನ್ನ ಸಂಕಟವನ್ನು ತಾನೇ ನುಂಗಿಕೊಳ್ಳುತ್ತಿದ್ದಳು.

ಅಪ್ಪ ನೂರುಮುಡಿ ಹುಟ್ಟುವಳಿಯ ಒಡೆಯ ಎನ್ನುವ ಜಂಬ ನೆತ್ತಿಗೇರಿದ್ದರಿಂದ ಆತನ ಹೃದಯಕ್ಕೆ ಅಮ್ಮನ ಸಂಕಟ ಅರ್ಥವಾಗುತ್ತಿರಲಿಲ್ಲ. ರಾಜಕೀಯದ ಅಮಲು ನೆತ್ತಿಗೇರಿದ್ದರಿಂದ ಉಡುಪಿಗೆ ಹೋದರೆ ಅಜ್ಜರಕಾಡು ಮೈದಾನ ಆತನನ್ನು ಕರೆಯುತ್ತಿತ್ತು. ಕಲಿಕೆಯಲ್ಲಿ ಹಿಂದೆ ಇದ್ದರೇನಂತೆ ಮಾತಿನಲ್ಲಿ ಜಾಣನಿದ್ದರೂ ರತ್ನ ಗಂಬಳಿ ಹಾಸಿ ರಾಜಕೀಯ ಕರೆಯುತ್ತದೆ ಎನ್ನುವ ಗೆಳೆಯರು ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿ ಅವನೇ ಎಂದು ಪುಕ್ಕಟೆ ಉಬ್ಬಿಸುತ್ತಿದ್ದರು.

ಅಜ್ಜ ಅವರ ಹೆತ್ತವರಿಗೆ ಆರು ಹೆಣ್ಣು ಮಕ್ಕಳ ನಡುವೆ ಹುಟ್ಟಿದ ಒಬ್ಬನೇ ಗಂಡು ಮಗ. ಅಜ್ಜನಿಗೆ ಮೊದಲು ಒಂದು ಮದುವೆ ಆಗಿದ್ದು ಆ ಮದುವೆ ಮುರಿದು ಬಿದ್ದಿತ್ತು. ಈ ಮದುವೆಯಾಗಿಯು ಹತ್ತು ವರ್ಷದ ನಂತರ ಹುಟ್ಟಿದ ಮೊದಲ ಸಂತಾನ ಕುಟ್ಟಿ. ಈ ಮೋಹದಲ್ಲಿ ಗಂಡ ಹೆಂಡತಿ ಮಗನನ್ನು ಮೇಲೆ ಇಟ್ಟರೆ ಈ ಕಾಗೆ ಕೊಂಡು ಹೋದೀತು… ಕೆಳಗೆ ಇಟ್ಟರೆ ಇರುವೆ ಕೊಂಡು ಹೋದೀತು… ಎನ್ನುವಂತೆ ಸಾಕಿದ್ದರು. ಹೆತ್ತವರ ಈ ಪ್ರೀತಿಯೇ ಮುಳುವಾಯಿತೇನೊ ಎನ್ನುವ ಸಂಕಟ ಕಾಡುವಷ್ಟು ಹೊತ್ತಿಗೆ ಹುಡುಗ ಕೈಮೀರಿ ಹೋಗಿದ್ದ. ಅಜ್ಜ ಬಾವಿಗೆ ಬಿದ್ದು ಬಚಾವಾಗಿದ್ದರು. ಬೆಳೆದ ಮಗಳ ಮದುವೆಯ ಚಿಂತೆ ಕಾಯಿಲೆಯಲ್ಲಿ ಇದ್ದ ಗಂಡನ ಚಿಂತೆ ಖರ್ಚುಗಾರ ಮಗನನ್ನು ಸಂಭಾಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಅಜ್ಜಿ ಸೋತು ಸುಣ್ಣವಾಗಿದ್ದರು. ಊರಿಗೆ ಉಪಕಾರಿ ಮನೆಗೆ ಮಾರಿ ಅನ್ನುವಂತಿದ್ದ ಮಗನ ವರ್ತನೆಯಿಂದ ರೋಸಿ ಹೋಗಿದ್ದರು.

ಮಗಳು ಶಾಲೂನ ಮದುವೆ ಆಗುತ್ತಿದ್ದಂತೆ ಕುದ್ರೆಪ್ಪಾಡಿ ಕುಟುಂಬದ ಆಸ್ತಿಯ ಪಾಲು ಪಟ್ಟಿ ಸಿದ್ಧವಾಗಿತ್ತು. ಮಾತೃ ಮೂಲ ಸಮುದಾಯದ ನಿಯಮದಂತೆ ಅಜ್ಜನಿಗೆ ಅವನ ಜೀವಮಾನದ ಅವಧಿಗೆ ಒಂದು ಮಂಡೆ ಪಾಲು ಬಂದಿತ್ತು. ಆಸ್ತಿ ಪಾಲಾದ ನಂತರವೂ ಎರಡು ವರ್ಷ ಅಲ್ಲೇ ನಿಂತ ಅಜ್ಜ-ಅಜ್ಜಿ ಮಗಳು ನಮಿತಾಳನ್ನು ಕರೆದುಕೊಂಡು ಕಡೇಕಾರಿಗೆ ತಾವು ಹೊಸತಾಗಿ ಕಟ್ಟಿಸಿದ್ದ ಮನೆಗೆ ವಾಸಕ್ಕೆ ಬರಲು ನಿರ್ಧಾರ ಮಾಡಿದ್ದಕ್ಕೆ ಪ್ರಬಲವಾದ ಕಾರಣವಿತ್ತು. ಶಾಲುನ ಗಂಡ ತಮ್ಮ ಮಕ್ಕಳನ್ನು ಅಲ್ಲಿ ಶಾಲೆಗೆ ಹಾಕುವ ಸಿದ್ಧತೆ ಮಾಡಿದ್ದ. ಹೊಸ ಮನೆಗೆ ಕರೆಂಟ್ ಕನೆಕ್ಷನ್ ಕೊಡಿಸಿ ಸುಣ್ಣ ಬಣ್ಣ ಹಚ್ಚಿ ವ್ಯವಸ್ಥೆ ಮಾಡಲಾಯಿತು. ಇದಕ್ಕೆ ಹಣದ ವ್ಯವಸ್ಥೆ ಅಳಿಯ ಮಾಡಿದ್ದರು. ಕುಟ್ಟಿ ಕುದ್ರೆಪಾಡಿ ಮನೆಯಲ್ಲಿ ಉಳಿದ.

ಕೂಡು ಕುಟುಂಬದ ಮನೆ ಬಿಟ್ಟು ಬಂದ ನಂತರ ಅಜ್ಜ ನಿವೃತ್ತಿ ಜೀವನದ ಸುಖ ಅನುಭವಿಸುತ್ತಿದ್ದರು. ಅಜ್ಜಿಯ ಮನೆ ಕಿದಿಯೂರಿನಿಂದ ಅಜ್ಜ ದಿನವೂ ವಾಕಿಂಗ್ ಹೋಗುವಾಗ ರಸ್ತೆಯ ಎರಡೂ ಬದಿ ನೆಟ್ಟಿದ್ದ ಸಾಲು ಮರಗಿಡಗಳ ಜೊತೆ ಅವರ ಸಂವಾದ ನಿರಂತರ ಮುಂದುವರಿಯುತಿತ್ತು. ಅವರ ಸ್ಪರ್ಶ ಸುಖಕ್ಕಾಗಿ ಕಾದಿದ್ದಾವೇನೋ ಅನ್ನುವಂತಿದ್ದ ಮರಗಿಡ ಹೂವುಗಳ ಪರಿಮಳ ಅಜ್ಜನನ್ನು ಒಂದು ರೀತಿ ಧ್ಯಾನಸ್ಥ ಸ್ಥಿತಿಗೆ ಒಯ್ಯುತ್ತಿದ್ದವು. ನಂತರ ನಿಧಾನಕ್ಕೆ ಅಜ್ಜರಕಾಡು ಮೈದಾನಕ್ಕೆ ತೆರಳಿ ಅಲ್ಲಿ ಅವರಿಗಾಗಿ ಕಾಯುತ್ತಿದ್ದ ಗೆಳೆಯರೊಂದಿಗೆ ಹರಟೆಗೆ ಇಳಿಯುತ್ತಿದ್ದರು. ಇಳಿ ಸಂಜೆಯಾಗುತ್ತಿದ್ದಂತೆ ಇಲ್ಲಿಂದ ಎದ್ದು ಒಂದಿಬ್ಬರು ಗೆಳೆಯರೊಂದಿಗೆ ಹತ್ತಿರವೇ ಇದ್ದ ಲಕ್ಷ್ಮಿ ವಿಲಾಸ ಹೋಟೆಲ್ ಗೆ ತೆರಳಿ ಚಾ ಕುಡಿದು ಕಿದಿಯೂರಿನ ಅಜ್ಜಿ ಮನೆಗೆ ಅವರ ಸವಾರಿ ಹಿಂತಿರುಗುತಿತ್ತು. ಅಲ್ಲಿ ಔಷಧ ಪಾನ ಪಥ್ಯವೆಲ್ಲ ಸೇಸಮಜ್ಜಿ ಅಚ್ಛೆಯಿಂದ ನೋಡಿಕೊಳ್ಳುತ್ತಿದ್ದರು.

ಅಜ್ಜನ ಸ್ಪರ್ಶ ಸುಖದಲ್ಲಿ ತೇಲುತ್ತ ಮುಳುಗುತ್ತ ಅವರ ಕಥೆಗೆ ಕಿವಿಯಾಗಲು ಮೊಮ್ಮಕ್ಕಳಿಬ್ಬರೂ ಜೊತೆಗಿದ್ದರು. ಕುಟ್ಟಿಯ ಊರು ಉಸಾಬರಿ ಏನಿದ್ದರೂ ಆತ ಕಡೆಕಾರಿನ ಮನೆಗೆ ಬಂದಾಗ ಆಡಿಕೊಳ್ಳುವುದಿತ್ತು. ಕುದ್ರೆಪಾಡಿಯಲ್ಲಿ ಒಕ್ಕಲು ಮಕ್ಕಳ ಜೊತೆಗೆ ಸಲುಗೆಯಿಂದ ಇರುತ್ತಾನೆ. ಅವರಿಗೆ ತಿನ್ನಿಸುತ್ತಾನೆ ಎನ್ನುವ ದೂರು ಅಜ್ಜಿಯ ಕಿವಿಗೆ ಬೀಳುತ್ತಿದ್ದರೂ ಗಂಡನ ಕಿವಿಗೆ ಇದು ಬೀಳದಂತೆ ಎಚ್ಚರವಹಿಸುತಿದ್ದರು. ಒಮ್ಮೆ ಮದುವೆಯಾದರೆ ಸರಿಯಾಗುತ್ತಾನೆ ಎಂದು ಲೆಕ್ಕಾಚಾರ ಹಾಕುತ್ತ, ಮಗನಿಗಾಗಿ ವಧು ಹುಡುಕುತ್ತಿದ್ದರು.

ಈ ನಡುವೆ ಅಜ್ಜರಕಾಡು ಮೈದಾನದ ಒಂದು ಬದಿಗೆ ಸರಕಾರಿ ಆಸ್ಪತ್ರೆ ನಿರ್ಮಾಣವಾಗಿತ್ತು. ಅಜ್ಜ ಅಲ್ಲಿನ ಖಾಯಂ ಅತಿಥಿಯಾಗಿದ್ದರು. ಕುಟ್ಟಿ ಮಾಮನ ಮದುವೆ ನಿಶ್ಚಯವೂ ಆಗಿತ್ತು: ದಿನಂಪ್ರತಿ ಬೆಳಗ್ಗೆ ಸಂಜೆ ವಾಕಿಂಗ್ ಹೋಗಿ ಬಂದು ತನ್ನ ಆರೋಗ್ಯ ಕಾಪಾಡುತ್ತಿದ್ದ ಶಿಸ್ತಿನ ಸಿಪಾಯಿಯಂತಿದ್ದ ಅಜ್ಜನ ಆರೋಗ್ಯದಲ್ಲಿ ಯಾವಾಗ ಏರುಪೇರಾಗುತ್ತದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.

ಇಂತಹದೇ ಒಂದು ದುಃಸ್ಥಿತಿ ಎದುರಾಗಿದ್ದು ಕುಟ್ಟಿ ಮಾವನ ಮದುವೆಯ ದಿನ. ಅಜ್ಜ ಸಡನ್ನಾಗಿ ಆಸ್ಪತ್ರೆಗೆ ಹೋಗಬೇಕಾಯ್ತು. ಅಲ್ಲಿ ಡಾಕ್ಟರರು ಅಡ್ಮಿಟ್ ಮಾಡಿಕೊಂಡರು. ಮದುವೆಯ ಕಾರ್ಯಕ್ರಮವೆಲ್ಲಾ ಸಾಂಗವಾಗಿ ಈಡೇರಿತು. ವಧು-ವರರು ಅಜ್ಜನ ಆಶೀರ್ವಾದ ಪಡೆಯಲು ಆಸ್ಪತ್ರೆಗೆ ಹೋದರು. ಮದುಮಗಳಿಗೆ ಅಪಶಕುನದವಳು ಎಂಬ ಬಿರುದು ಕಪ್ಪುಚುಕ್ಕೆಯಾಗಿ ಅಂಟಿ ಹೋಯಿತು. ಈ ಸಲವೂ ಚೇತರಿಸಿಕೊಂಡು ಅಜ್ಜ ಮನೆಗೆ ವಾಪಾಸು ಬಂದರು. ಯಾವುದೇ ಖುಷಿಯ, ದುಃಖದ ಸಮಾಚಾರ ಅಜ್ಜನಿಗೆ ಒಮ್ಮೆಲೇ ತಿಳಿಸಬಾರದು ಎಂದು ಡಾಕ್ಟರರು ತಿಳಿಸಿದ್ದರು. ಯಾವ ಹೊತ್ತಿಗೆ ಏನಾಗುತ್ತದೆ ಎಂಬ ಗ್ಯಾರಂಟಿ ಇಲ್ಲದೆ ನಮ್ಮ ದಿನಗಳು ಜಾರುತ್ತಿದ್ದವು. ಆ ದಿನವೂ ಎಂದಿನಂತೆ ವಾಕಿಂಗ್ ಮುಗಿಸಿ ಮನೆಗೆ ವಾಪಸ್ಸು ಬರುವಾಗ ಅಜ್ಜ ಮೀನು ಮಾರುವ ಹೆಂಗಸನ್ನು ಜೊತೆಗೆ ಕರೆ ತಂದಿದ್ದರು. ಅಜ್ಜ ಆಸೆಪಟ್ಟರು ಎಂದು ಅಜ್ಜಿ ಆಕೆಯಿಂದ ಕಾಣೆ ಮೀನು ಕೊಂಡಿದ್ದರು. ಅಜ್ಜ ಮಧ್ಯಾಹ್ನ ಮತ್ತು ರಾತ್ರಿ ಕಾಣೆ ಮೀನು ಸಾರಿನಲ್ಲಿ ಗಡದ್ದು ಉಂಡರು. ನಡುರಾತ್ರಿ ಆಗುವಾಗ ಅವರಿಗೆ ವಾಂತಿಭೇದಿ ಶುರುವಾಗಿ ಬೆಳಗ್ಗೆ ಹೊತ್ತು ಮೂಡುವ ಹೊತ್ತಿಗೆ ಪೂರಾ ಸುಸ್ತಾಗಿದ್ದರು. ಆದರೂ ಆಸ್ಪತ್ರೆಗೆ ಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು. ಅಷ್ಟರಲ್ಲಿ ಅವರು ತೀರಿಕೊಂಡರು ಎನ್ನುವ ಸುದ್ದಿ ಡಾಕ್ಟರರು ಕೊಟ್ಟರು.


ಏನಿದ್ದರೇನು? ಅಜ್ಜರಕಾಡು, ಅಜ್ಜ, ಕಾಣೆ ಮೀನು ಸಾರು ಇವುಗಳ ಸುತ್ತ ಗಿರಕಿ ಹೊಡೆಯುವ ಪುಂಖಾನುಪುಂಖವಾಗಿ ಮುನ್ನುಗ್ಗುವ ಬಾಲ್ಯದ ನೆನಪುಗಳಿಗೆ ಜೋತುಬೀಳುವುದು ನನಗೆ ಸಂತಸದ ಕ್ಷಣಗಳು ಎನ್ನುವುದು ದಿಟವಾದರೂ ಆದ್ರವಾದ ಭಾವನೆಗಳು ಮಧುಗಟ್ಟಿದ ಕ್ಷಣಗಳೂ ಆಗಿವೆ ಎಂಬುದನ್ನು ಮರೆಯಲಾದೀತೇ?