ಎಂಆರ್ ಪಿಎಲ್ ಕಂಪೆನಿಗೆ ತಮ್ಮ ಕೃಷಿ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸಿದವರು ಗ್ರೆಗರಿ ಪತ್ರಾವೋ. ಕೊನೆಗೆ ತಮ್ಮ ಫಲವತ್ತಾದ ಕೃಷಿ ಜಮೀನನ್ನು ಬಿಟ್ಟುಕೊಡುವುದು ತೀರಾ ಅನಿವಾರ್ಯವಾದಾಗ, ಜುಜುಬಿ ಬೆಲೆಗೆ ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಹೋರಾಟವನ್ನು ನಿರಂತರವಾಗಿ ನಡೆಸಿದವರು. ಅವರ ಹೋರಾಟದ ದೀರ್ಘ ಹಾದಿಯೊಂದಕ್ಕೆ ಈಗ ವಿರಾಮ ಬಿದ್ದಿದೆ. ಸುಪ್ರೀಂ ಕೋರ್ಟ್ ನಲ್ಲಿಅವರು ಎಂಆರ್ ಪಿಎಲ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ. ಅಭಿವೃದ್ಧಿಗಾಗಿ ನಡೆದ ಭೂ ಸ್ವಾಧೀನ ಪ್ರಕ್ರಿಯೆಯ ಒಂದು ಕೇಸ್‌ ಸ್ಟಡಿಯಂತೆ ಕಾಣುವ ಪತ್ರಾವೋ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಂತಹುದು. ಗ್ರೆಗರಿ  ಕ್ರಮಿಸಿದ ಹಾದಿಯ ಕುರಿತು ಸ್ಥೂಲವಾಗಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

 

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿರುವ ಗೋವಿಂದ ದಾಸ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದರೂ ಗ್ರೆಗರಿ ಪತ್ರಾವೋ ಕಾಲೇಜಿಗೆ ಹೋಗಿದ್ದಿಲ್ಲ. ಈಗವರಿಗೆ 62 ವರ್ಷಗಳು ದಾಟಿದವು. ತಮ್ಮ 40ನೇ ವಯಸ್ಸಿಗೇ ಹೋರಾಟದ ಕ್ಷೇತ್ರಕ್ಕೆ ಅನಿವಾರ್ಯವಾಗಿಕಾಲಿಟ್ಟ ಅವರು ಬದುಕನ್ನೆಲ್ಲ ಹೋರಾಟದ ಹಾದಿಯಲ್ಲಿಯೇ ಸವೆಸಬೇಕಾಯಿತು. ʻಇದೇನೂ ನಾನು ಆಯ್ಕೆ ಮಾಡಿಕೊಂಡ ಹೋರಾಟವಲ್ಲ. ಕೃಷಿಕರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವವ ರ ವಿರುದ್ಧ ಕೆಂಡಾಮಂಡಲ ಸಿಟ್ಟುಬರುತ್ತದೆ ನನಗೆ. ಅದಕ್ಕಾಗಿ ಹೀಗೆ ಹೋರಾಟದ ಹಾದಿಯನ್ನು ಹಿಡಿದೆ. ಯಾಕೆಂದರೆ ನಾನು ಅನುಸರಿಸುವ ಧರ್ಮವೇನಾದರೂ ಇದ್ದರೆ ಅದು ಕೇವಲ ಕೃಷಿ ಧರ್ಮ. ನಮ್ಮನ್ನು ಆಳುವವರೂ ಕೃಷಿಕರನ್ನು ನಿಕೃಷ್ಟವಾಗಿ ನೋಡಿದರೆ ಹೋರಾಟ ಮಾಡದೇ ಬೇರೆ ದಾರಿಯಿದೆಯೇ ʼ ಎಂದು ಅವರು ಪ್ರಶ್ನಿಸುತ್ತಾರೆ.

‘ಪಿಯುಸಿಯಲ್ಲಿ ಯಾವ ಸಬ್ಜೆಕ್ಟ್ ತೆಗೆದುಕೊಂಡಿದ್ರಿ ?’ ಎಂದು ಪ್ರಶ್ನೆ ಕೇಳಿದರೆ, ‘ಅದೇನೂ ನೆನಪಿಲ್ಲ. ಕಳವಾರದ ಪೇಜಾವರ ಹೈಸ್ಕೂಲಿನಲ್ಲಿ ನಾನು ಎಸ್ಸೆಸ್ಸೆಲ್ಸಿ ಓದಿದ್ದೆ. ನಂತರ ಕಾಲೇಜಿಗೆ ಫೀಸು ಕಟ್ಟಿದರೂ ತರಗತಿಗೆ ಹೋಗಲಿಲ್ಲ. ಮನೆಯ ಕೆಲಸಕಾರ್ಯಗಳಲ್ಲೇ ಮುಳುಗಿದ್ದೆ. ಸಾಮಾನ್ಯವಾಗಿ ಕಾಲೇಜು ತರಗತಿಗಳು ಜೋರು ಮಳೆಗಾಲದಲ್ಲಿ ಆರಂಭವಾಗುತ್ತವೆ. ಮಳೆಗಾಲದಲ್ಲಿ ಗದ್ದೆ ಉಳುವ ಕೆಲಸವೇ ತುಂಬಾ ಇರುತ್ತದಲ್ಲ. ಹಾಗಾಗಿ ನಾಳೆ ಹೋಗೋಣ, ಇಂದು ಗದ್ದೆ ಉಳೋಣ ಎಂದು ಮುಂದೆ ಹಾಕುತ್ತಲೇ ವರ್ಷಗಳೇ ಕಳೆದು ಹೋದವು. ಮತ್ತೆ ಕಾಲೇಜು ಸಹವಾಸ ಬೇಡವೆಂದು ಬಿಟ್ಟೆ’ ಎನ್ನುತ್ತಾರೆ.

‘ಆ ಕಾಲದಲ್ಲಿ ಗದ್ದೆ ಸಾಗುವಳಿ ಮಾಡುವುದೆಂದರೆ ಅದು ಹೆಮ್ಮೆಯ ವಿಷಯವಾಗಿತ್ತು. ಭತ್ತ ಬೆಳೆಯುವುದು ಎಂದರೆ ಅದು ಪ್ರತಿಷ್ಠೆಯ ವಿಷಯವೇ ಆಗಿರುವಾಗ -ಈ ಕಾಲೇಜು ಪಾಠಗಳು ಯಾವ ಲೆಕ್ಕ ..- ಎಂಬ ಪ್ರತಿಷ್ಠೆ ನನ್ನ ಮನಸ್ಸಿನಲ್ಲಿಯೂ ಇತ್ತುಬಿಡಿ. ನೀರು ತುಂಬಿದ ಗದ್ದೆಯಲ್ಲಿ ಹಸಿ ಮಣ್ಣಿನ ಕಂಪಿನಲ್ಲಿಕೋಣಗಳನ್ನು ಕಟ್ಟಿ, ಗದ್ದೆ ಉಳುವುದೆಂದರೆ ನನಗೆ ಬಹಳ ಇಷ್ಟ. ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಭತ್ತದ ನೆತ್ತಿಯಲ್ಲಿ ಅತೀ ಚಿಕ್ಕದಾದ ಬಿಳಿ ಮೊಳಕೆಯು ಹಸಿರು ಬಣ್ಣಕ್ಕೆ ತಿರುಗುತ್ತದಲ್ಲಾ.. ಅದನ್ನು ನೋಡುವಾಗ ವಿಸ್ಮಯವೆನಿಸುತ್ತದೆʼ ಎಂದು ನಗುತ್ತ ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಳಿಯ ಬಾಳಾ ಗ್ರಾಮ ಪಂಚಾಯಿತಿಗೆ ಸೇರಿದ ಕಳವಾರು ಗ್ರಾಮದ ನಿವಾಸಿ ಗ್ರೆಗರಿ ಪತ್ರಾವೋ ಕೃಷಿಕರಾಗಿ ಗುರುತಿಸಿಕೊಂಡದ್ದಕ್ಕಿಂತ ಹೆಚ್ಚಾಗಿ `ಹೋರಾಟಗಾರ’ ಎಂದೇ ಗುರುತಿಸಿಕೊಂಡವರು. ಎಂಆರ್ ಪಿಎಲ್ (Mangalore Refinery and Petrochemicals Limited) ನಂತಹ ಬೃಹತ್ ಕಂಪೆನಿಗೆ ತಮ್ಮ ಕೃಷಿ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಹೋರಾಟ ನಡೆಸಿದರು. ಕೊನೆಗೆ ತಮ್ಮ ಫಲವತ್ತಾದ ಕೃಷಿ ಜಮೀನನ್ನು ಬಿಟ್ಟುಕೊಡುವುದು ತೀರಾ ಅನಿವಾರ್ಯವಾದಾಗ, ಜುಜುಬಿ ಬೆಲೆಗೆ ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಹೋರಾಟವನ್ನು ನಿರಂತರವಾಗಿ ನಡೆಸಿದವರು. ಅವರ ಹೋರಾಟದ ದೀರ್ಘ ಹಾದಿಯು 2022ರ ಜುಲೈ 16 ರಂದು ಮುಕ್ತಾಯವಾಗಿದೆ ಎನ್ನಬಹುದು. ಸುಪ್ರೀಂ ಕೋರ್ಟ್ ನಲ್ಲಿಅವರು ಎಂಆರ್ ಪಿಎಲ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತೀರ್ಪು ಅವರ ಪರವಾಗಿ ಬಂದಿದೆ.

ಎಂ.ಆರ್. ಪಿ.ಎಲ್ ಕಂಪೆನಿಯು ಗ್ರೆಗರಿ ಪತ್ರಾವೋ ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಗ್ರೆಗರಿ ಪತ್ರಾವೋ ಅವರು ಈ ಹೋರಾಟದ ಹಾದಿಯನ್ನು ಕ್ರಮಿಸಿದ ಬಗೆಯನ್ನು ಒಮ್ಮೆ ಹಿಂತಿರುಗಿ ನೋಡಿದಾಗ ಅವರ ಕೃಷಿ ಪ್ರೀತಿ ಮತ್ತುಛಲವನ್ನು ಕಂಡು ಅಚ್ಚರಿಯಾಗುತ್ತದೆ.

ಕಳವಾರು ಗ್ರಾಮದ ನಿವಾಸಿಗಳಾದ ಥಾಮಸ್ ಪತ್ರಾವೋ ಮತ್ತು ಮೇರಿ ಪತ್ರಾವೋ ಎಂಬ ಕೃಷಿಕ ದಂಪತಿಯ ಮಗನಾಗಿ 1960 ರ ಮೇ 20ರಂದು ಹುಟ್ಟಿದ ಗ್ರೆಗರಿ ಪತ್ರಾವೋ ತುಂಬು ಕುಟುಂಬದಲ್ಲಿ ಬೆಳೆದವರು. ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಎಂದು ಒಟ್ಟು ಹನ್ನೊಂದು ಜನ ಮಕ್ಕಳಿರುವ ಕುಟುಂಬದಲ್ಲಿ ಗ್ರೆಗರಿ ಪತ್ರಾವೋ ತನ್ನ ಬಾಲ್ಯವನ್ನು ಸಮೃದ್ಧವಾಗಿ ಕಳೆದರು. ‘ಸಮೃದ್ಧಿ ಎಂದರೆ ಇಂದಿನಂತೆ , ಅಂದು ಖರೀದಿ ಮತ್ತು ಶೋಕಿಯೇ ಜೀವನ ನಮ್ಮದಾಗಿರಲಿಲ್ಲ. ಕೃಷಿಕುಟುಂಬದ ಕಾಯಕಗಳನ್ನು ನಾವೆಲ್ಲ ಸೇರಿ ಮಾಡುತ್ತಿದ್ದೆವು. ದುಡಿಮೆಯೇ ನಮ್ಮ ಸಂಭ್ರಮ. ಆ ದುಡಿಮೆಯೇ ನಮ್ಮ ಸಂಬಂಧವನ್ನು ಗಟ್ಟಿಯಾಗಿ ಇಟ್ಟಿದ್ದ ಬಂಧವಾಗಿತ್ತು. ಅಪ್ಪನಿಗೆ ನಾಲ್ಕು ಎಕರೆ ಭತ್ತದ ಗದ್ದೆಯಿತ್ತು. ಮತ್ತೆ ನಾಲ್ಕೆಕರೆ ಕಂಗು ಮತ್ತು ತೆಂಗಿನ ತೋಟವಿತ್ತು. ಅಂದಾಜು ಏಳು ಎಕರೆ ಜಾಗದಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದೆವು. ಹಣ್ಣ ಹಂಪಲು, ತರಕಾರಿಗಳನ್ನು ಬೆಳೆಯುತ್ತ ಬಹಳ ಸ್ವಾಭಿಮಾನದಿಂದ ಅಪ್ಪ ಜೀವನ ನಡೆಸುತ್ತಿದ್ದರು’ ಅಪ್ಪನ ಬಗ್ಗೆ ಅವರಿಗೆ ಹೆಮ್ಮೆ.

ಕೃಷಿ ಕಾಯಕದ ಮಟ್ಟಿಗೆ ಗ್ರೆಗರಿ ಅವರಿಗೆ ಅವರ ತಂದೆ ಥಾಮಸ್ ಅವರೇ ಆದರ್ಶ. ಥಾಮಸ್ ಪತ್ರಾವೋ ಅವರು ತಮ್ಮ ಜಮೀನಿನಲ್ಲಿ ಬೆಳೆ ತೆಗೆಯಲು ಒಂದು ಹಿಡಿ ರಸಗೊಬ್ಬರವನ್ನೂ ಬಳಸುತ್ತಿರಲಿಲ್ಲ. ಅವರಿಗೆ ಸಾವಯವ ಕೃಷಿ ಎಂಬ ಪರಿಕಲ್ಪನೆಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ತಮ್ಮ ಜಮೀನಿಗೆ ಏನೇನು ಗೊಬ್ಬರ ಬೇಕೋ ಅದನ್ನೆಲ್ಲ ತಾವೇ ತಯಾರಿಸಿಕೊಳ್ಳಬೇಕು ಎಂಬ ಸ್ವಾಭಿಮಾನವಿತ್ತು. ದುಡ್ಡು ಕೊಟ್ಟು ಏನನ್ನೂ ಖರೀದಿಸಿ ತರಬಾರದು, ಬದಲಾಗಿ ಸ್ವಂತ ಶ್ರಮದಿಂದ ಬೆಳೆ ತೆಗೆಯಬೇಕು ಎಂಬುದು ಅವರ ಇರಾದೆಯಾಗಿತ್ತು. ಹಾಗಾಗಿ ಅವರ ಕೃಷಿ ಪದ್ಧತಿಯು ಸಹಜವಾಗಿ ಸಾವಯವ ಪದ್ಧತಿಯೇ ಆಗಿತ್ತು.

ಕೃಷಿ ಕಾಯಕದ ಮಟ್ಟಿಗೆ ಗ್ರೆಗರಿ ಅವರಿಗೆ ಅವರ ತಂದೆ ಥಾಮಸ್ ಅವರೇ ಆದರ್ಶ. ಥಾಮಸ್ ಪತ್ರಾವೋ ಅವರು ತಮ್ಮ ಜಮೀನಿನಲ್ಲಿ ಬೆಳೆ ತೆಗೆಯಲು ಒಂದು ಹಿಡಿ ರಸಗೊಬ್ಬರವನ್ನೂ ಬಳಸುತ್ತಿರಲಿಲ್ಲ. ಅವರಿಗೆ ಸಾವಯವ ಕೃಷಿ ಎಂಬ ಪರಿಕಲ್ಪನೆಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ತಮ್ಮ ಜಮೀನಿಗೆ ಏನೇನು ಗೊಬ್ಬರ ಬೇಕೋ ಅದನ್ನೆಲ್ಲ ತಾವೇ ತಯಾರಿಸಿಕೊಳ್ಳಬೇಕು ಎಂಬ ಸ್ವಾಭಿಮಾನವಿತ್ತು.

‘ಕೃಷಿ ಭೂಮಿಯಲ್ಲಿ ಆಳುಗಳ ಜೊತೆಗೆ ಸ್ವತಃ ದುಡಿಯುತ್ತ ಅಪ್ಪ ಒಂದಂಗುಲವೂ ಬಿಡದೇ ಬೆಳೆ ತೆಗೆಯುತ್ತಿದ್ದರು. ಅದಕ್ಕೆ ತಕ್ಕಂತೆ ನೀರಿನ ಒರತೆ ಇರುವ ಭೂಮಿಯಲ್ಲಿ ಫಸಲಿಗೆ ಏನೂ ಕೊರತೆ ಇರಲಿಲ್ಲ. ಹನ್ನೊಂದು ಜನ ಮಕ್ಕಳು ಸಮೃದ್ಧಿಯಾಗಿ ಬಾಳುವೆ ಮಾಡಲು ಆ ಭೂಮಿ ತಾಯಿಯೇ ಆಸರೆಯಾಗಿದ್ದಳು’ ಎನ್ನುವ ಗ್ರೆಗರಿ ಪತ್ರಾವೋ, ಅಪ್ಪನ ಕೃಷಿ ಪದ್ಧತಿಯನ್ನು ತಾನು ವಹಿಸಿಕೊಂಡು ಮುಂದುವರೆಸಿದೆ ಎನ್ನುತ್ತಾರೆ.
ಗ್ರೆಗರಿ ಪತ್ರಾವೋ ಅವರ ಕುಟುಂಬದ ಬಳಿಯಿದ್ದ ಹದಿನಾಲ್ಕೂವರೆ ಎಕರೆಗೂ ಹೆಚ್ಚು ಜಾಗದಲ್ಲಿ, ಈಗ ಒಂದಂಗುಲವೂ ಅವರ ಬಳಿಯಿಲ್ಲ. ಅವರು ಹೀಗೆ ಭೂಮಿ ಕಳೆದುಕೊಳ್ಳುವ ಪ್ರಮೇಯ ಆರಂಭವಾದುದು 1984ರಲ್ಲಿ. ಥಾಮಸ್ ಪತ್ರಾವೋ ಅವರ ನೇತೃತ್ವದಲ್ಲಿಯೇ ಕೃಷಿಯ ಪಾರುಪತ್ಯೆ ನಡೆಯುತ್ತಿದ್ದಾಗ ಕರ್ನಾಟಕದ ಕರಾವಳಿಯಲ್ಲಿ ಪೆಟ್ರೋಲಿಯಂ ಶುದ್ಧೀಕರಣ ಕಂಪೆನಿ ಸ್ಥಾಪನೆಯ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಕರಾವಳಿಯ ಕಡೆಗೆ ಕೈಗಾರಿಕೆಗಳು ಧಾಂಗುಡಿಯಿಡಲು ಸಜ್ಜಾಗುತ್ತಿದ್ದ ಕಾಲವದು. ಜಿಲ್ಲೆಯ ಧಾರಣ ಸಾಮರ್ಥ್ಯ, ಪರಿಸರ ಮಾಲಿನ್ಯದ ಸಾಧ್ಯತೆಗಳ ಕುರಿತು ಅನೇಕ ಆಯಾಮಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದ್ದವು. ಹೀಗೆ ಪರವಿರೋಧಗಳ ನಡುವೆಯೇ ಎಂಆರ್ ಪಿಎಲ್ ಕಂಪೆನಿಯು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿತು. ಈ ಕಂಪೆನಿಗೋಸ್ಕರ ಪತ್ರಾವೋ ಕುಟುಂಬಕ್ಕೆ ಸೇರಿದ 52 ಸೆಂಟ್ಸ್ ಜಾಗವನ್ನು ಕೊಡಬೇಕು ಎಂದು ಕಂಪೆನಿಯು ಮನವಿ ಮಾಡಿದಾಗ, ಥಾಮಸ್ ಪತ್ರಾವೋ ಅವರು ಜಾಗವನ್ನು ಬಿಟ್ಟುಕೊಟ್ಟರು. ಈ ಭೂ ಸ್ವಾಧೀನ ಪ್ರಕ್ರಿಯೆಯ ಸಂದರ್ಭದಲ್ಲಿ ಕಂಪೆನಿಯು ಪತ್ರಾವೋ ಕುಟುಂಬಕ್ಕೆ ಪರಿಹಾರ ಮತ್ತು ಉದ್ಯೋಗದ ಭರವಸೆ ನೀಡಿತ್ತು. ಆದರೆ ನಿರೀಕ್ಷೆಯಂತೆ ಬರಬೇಕಿದ್ದ ಪರಿಹಾರವನ್ನು ಕಂಪೆನಿ ಕೊಡಲಿಲ್ಲ. ಮನೆಯ ಸದಸ್ಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರೂ ಅದನ್ನು ನೆರವೇರಿಸದೇ ಇದ್ದಾಗ, ಇನ್ನು ಮುಂದೆ ಈ ಕಂಪೆನಿಗಳ ಮಾತು ಕೇಳಿ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳಬಾರದು ಎಂದು ಥಾಮಸ್ ಪತ್ರಾವೋ ನಿರ್ಧರಿಸಿದರು. ಅವರ ಹೆಗಲಿಗೆ ಹೆಗಲಾಗಿ ಗ್ರೆಗರಿ ಪತ್ರಾವೋ ಸಾಗುವಳಿ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದರು.

ಆದರೆ ಎಂಆರ್ ಪಿಎಲ್ ಕಂಪೆನಿಯು ಹಂತ ಹಂತವಾಗಿ ವಿಸ್ತರಣೆಯಾಗುತ್ತಿತ್ತು. ಕಂಪೆನಿಯನ್ನು ಇನ್ನಷ್ಟು ವಿಸ್ತರಿಸಲು ಪತ್ರಾವೋ ಅವರಿಗೆ ಸೇರಿದ ಮತ್ತಷ್ಟು ಜಾಗವನ್ನು ಕೊಡಬೇಕು ಎಂದು 1994ರಲ್ಲಿ ನೋಟಿಸ್ ನೀಡಲಾಯಿತು. ಆದರೆ ಒಮ್ಮೆ ಭೂಮಿ ಕೊಟ್ಟು ನಿರೀಕ್ಷಿಸಿದಷ್ಟು ಪರಿಹಾರ ದೊರೆಯದೇ ಇದ್ದಾಗ, ಇನ್ನು ತಮ್ಮ ಫಲವತ್ತಾದ ಭೂಮಿಯನ್ನು ಕೊಡುವುದು ಬೇಡವೆಂದೇ ಮನೆಯವರೆಲ್ಲ ನಿರ್ಧರಿಸಿದರು.

2002ರಲ್ಲಿ ಥಾಮಸ್ ಪತ್ರಾವೋ ಅವರು ತೀರಿಕೊಂಡಿದ್ದರು. 2006ರಲ್ಲಿಕಂಪೆನಿಯ ಮೂರನೇ ಹಂತದ ವಿಸ್ತರಣೆಗೆ ಮತ್ತೆ ಮನೆಯು ಸೇರಿದಂತೆ 14.27 ಎಕರೆ ಎಕರೆ ಜಾಗವನ್ನು ಬಿಟ್ಟುಕೊಡಬೇಕು ಎಂದು ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಗ್ರೆಗರಿ ಪತ್ರಾವೋ ಅವರಿಗೆ ನೋಟಿಸ್ ನೀಡಿತು.

ಹೀಗೆ ಕಂಪೆನಿಗೆ ಜಮೀನು ಕೊಡುತ್ತ ಹೋದರೆ ಕೃಷಿಗಾಗಿ ತಮಗೆ ಭೂಮಿಯೇ ಉಳಿಯುವುದಿಲ್ಲ ಎಂದು ಭಾವಿಸಿದ ಗ್ರೆಗರಿ, ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಕುರಿತು ರಾಜ್ಯ ಹೈ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ ಹೋರಾಡಲು ನಿರ್ಧರಿಸಿದರು. 2006ರಲ್ಲಿ ಅವರು ಕಾನೂನು ಹೋರಾಟ ಆರಂಭಿಸಿದರು. ಆದರೆ ಸತತ ನಾಲ್ಕು ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದ ಬಳಿಕ, ನ್ಯಾಯಾಲಯದಲ್ಲಿ ತೀರ್ಪು ಗ್ರೆಗರಿ ಪತ್ರಾವೋ ಅವರ ಪರವಾಗಿ ಬರಲಿಲ್ಲ. ಕಂಪೆನಿ ವಿಸ್ತರಣೆಗಾಗಿ ಗ್ರೆಗರಿ ಪತ್ರಾವೋ ಅವರ ಮನೆ ಮತ್ತು ಕೃಷಿ ಜಮೀನನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು 2010ರಲ್ಲಿ ಕರ್ನಾಟಕ ಹೈ ಕೋರ್ಟ್ ನಲ್ಲಿ ತೀರ್ಪು ಪ್ರಕಟವಾಯಿತು.

ಅಭಿವೃದ್ಧಿಯ ದೃಷ್ಟಿಯಿಂದ ಕಂಪೆನಿಯ ವಿಸ್ತರಣೆಗೆ ಜಮೀನು ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು. 2010ರ ಏಪ್ರಿಲ್ 28ರಂದು ಹೈಕೋರ್ಟ್ ತೀರ್ಪಿನ ಪ್ರತಿಯು ಗ್ರೆಗರಿ ಅವರ ಕೈ ಸೇರುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಗ್ರೆಗರಿ ಪತ್ರಾವೋ ಅವರ ಮನೆಯನ್ನು ಕೆಡವಿ ಹಾಕಿತು. ತೀರ್ಪು ತನ್ನ ಪರವಾಗಿ ಬಂದಿಲ್ಲ ಎಂಬ ಸುದ್ದಿಯನ್ನಷ್ಟೇ ಬಲ್ಲ ಗ್ರೆಗರಿ ಪತ್ರಾವೋ ಅವರು ತಕ್ಷಣವೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಇದ್ದಕ್ಕಿದ್ದಂತೆಯೇ ಪೊಲೀಸರು, ಆಳುಗಳು, ಅಧಿಕಾರಿಗಳು ಮನೆಯ ಅಂಗಳದಲ್ಲಿ ಜಮಾಯಿಸಿದ್ದನ್ನು ನೋಡಿ ಗ್ರೆಗರಿ ಪತ್ರಾವೋ ಕಂಗಾಲಾದರು. ಅತ್ತ ನೋಡಿದರೆ ತೋಟದಲ್ಲಿ ಬೆಳೆದು ನಿಂತಿದ್ದ ಕಂಗಿನ ಗಿಡಗಳನ್ನು ಮುರಿದು ಹಾಕುತ್ತಲೇ ಮನೆಯ ಬಳಿಗೆ ಬಂದ ಕ್ರೇನ್ ಬಂದಿತ್ತು. ಒಲೆಯ ಮೇಲೆ ಬೇಯುತ್ತಿರುವ ಅನ್ನ, ಬಿಸಿ ಬಿಸಿ ಇಡ್ಲಿಗಳಿರುವ ಪಾತ್ರೆಗಳನ್ನುಹಿಡಿದು ಹೊರಗೆ ಓಡಿ ಬಂದ ವೃದ್ಧೆ ತಾಯಿ ಮೇರಿ ಪತ್ರಾವೊ ಮನೆಯ ಹೊರಗಿನ ದೃಶ್ಯವನ್ನು ಕಂಡು ಅವಾಕ್ಕಾಗಿದ್ದರು. ಮನೆಯಲ್ಲಿ, ಸೋದರಿ ಲೀನಾ, ಅಳಿಯ ವಿಲ್ಸನ್ ಇದ್ದರು. ಹಟ್ಟಿಯಲ್ಲಿ ಏಳು ದನಗಳು, ಎರಡು ಎತ್ತುಗಳು ಮತ್ತು ಎರಡು ಕೋಣಗಳು, 50ಕ್ಕೂ ಹೆಚ್ಚು ಕೋಳಿಗಳು, ನಾಯಿ ಬೆಕ್ಕುಗಳೆಲ್ಲ ಬೊಬ್ಬೆ ಗಲಾಟೆಗಳನ್ನು ಕೇಳಿ ಬೆದರಿ ಚೆಲ್ಲಾಪಿಲ್ಲಿಯಾಗಿದ್ದವು.
3,500 ಕಂಗಿನ ಗಿಡಗಳು, 250ಕ್ಕೂ ಹೆಚ್ಚು ತೆಂಗಿನ ಮರಗಳು, ವೆನಿಲ್ಲಾ, ತರಕಾರಿ ಬೆಳೆಗಳು, ಹಸಿರಾಗಿದ್ದ ಭತ್ತದ ಪೈರು ನಲಿಯುತ್ತಿದ್ದ ಗದ್ದೆಗಳನ್ನು ಬಿಟ್ಟು ತಕ್ಷಣವೇ ಹೊರಡುವಂತೆ ಪೊಲೀಸರು ತಾಕೀತು ಮಾಡಿದ್ದರು. ಕೋರ್ಟು ತೀರ್ಪಿನ ಪ್ರತಿ ಕೈ ಸೇರಿದ ತಕ್ಷಣವೇ ಮನೆ ಖಾಲಿ ಮಾಡುವುದಾಗಿ, ಕೆಐಎಡಿಬಿ ಅಧಿಕಾರಿಗಳು ಮತ್ತು ಪೊಲೀಸರ ಮುಂದೆ ಗ್ರೆಗರಿ ಪತ್ರಾವೋ ಅವರು ಗೋಗರೆಯುತ್ತಿದ್ದರು. ಮೇರಿ ಪತ್ರಾವೋ ಅವರು ಬಾಗಿಲಿಗೆ ಅಡ್ಡ ನಿಂತು ಪ್ರತಿರೋಧಿಸುತ್ತಿದ್ದರು. ಆದರೆ ಯಾವುದೇ ಪ್ರತಿರೋಧವನ್ನೂ ಲೆಕ್ಕಿಸದ ಪೊಲೀಸರು ಮನೆಯೊಳಗಿನ ಸಾಮಾನುಗಳನ್ನು ತೆರವು ಮಾಡಿದರು. ಟೀವಿ, ಫ್ರಿಜ್ಜು, ವಾಷಿಂಗ್ ಮೆಷಿನ್ ಗಳನ್ನು ಹೊರಕ್ಕಿಡಲಾಯಿತು. ಪ್ರತ್ಯೇಕ ಲಾರಿಯೊಂದರಲ್ಲಿ ಭತ್ತದ ಚೀಲಗಳನ್ನು ತುಂಬಲಾಯಿತು. ಪಾತ್ರೆ ಸಾಮಾನು, ಬೀರುಗಳು, ಸಂಗ್ರಹಿಸಿಟ್ಟ ಅಕ್ಕಿ ಸಾಮಾನುಗಳನ್ನೆಲ್ಲ ಮನೆಯಿಂದ ಹೊರಕ್ಕೆ ಬಿಸಾಕಲಾಯಿತು. ಬೆಳೆದು ನಿಂತ ಕಂಗುಗಳನ್ನು ಮಗುಚಿ ಹಾಕುತ್ತ ತನಗೆ ತಾನೇ ದಾರಿ ಮಾಡುತ್ತ ಬಂದ ಕ್ರೇನನ್ನು ನೋಡಿ ಗ್ರೆಗರಿ, ಆಲ್ವಿನ್ ಮತ್ತು ಮೇರಿಯವರು ಕಣ್ಣೀರುಗರೆದು ಬೇಡಿಕೊಂಡರು. ಕ್ರೇನಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ಮಾಡಿದ ಅಲ್ವಿನ್ ಅವರನ್ನು ಪೊಲೀಸರು ಹೊತ್ತೊಯ್ದು ಪಕ್ಕಕ್ಕೆ ಇರಿಸಿದರು. ಕ್ರೇನು ಮನೆಯಂಗಳವನ್ನು ತಲುಪಿ ಮನೆಯನ್ನು ಒಂದು ಬದಿಯಿಂದ ಒಡೆದು ಹಾಕಲು ಶುರು ಮಾಡಿತು. ಮನೆಯೊಳಗೆ ಒಲೆಯಲ್ಲಿದ್ದ ಬಿಸಿ ಬೂದಿಯನ್ನು ಹೊಸ್ತಿಲ ಮೇಲೆ ಚೆಲ್ಲಿದ ಮೇರಿ ಪತ್ರಾವೋ, ಹಿಡಿ ಶಾಪ ಹಾಕುತ್ತಾ ಮನೆಯಿಂದ ಹೊರಬಂದರು. ಹಟ್ಟಿಯಲ್ಲಿಹಸುಗಳು ಬೊಬ್ಬಿಡುತ್ತಿದ್ದವು. ಸುಮಾರು ಮೂರು ಶತಮಾನಗಳಿಂದ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಆಶ್ರಯವಾಗಿದ್ದ ಮನೆಯೊಂದು ಒಂದೆರಡು ಗಂಟೆಗಳ ಅವಧಿಯಲ್ಲಿ ನೆಲಸಮವಾಗಿಬಿಟ್ಟಿತು.ಕ್ರೇನು ಮನೆಯನ್ನು ಕೆಡವಿ ಹಾಕಿತು. 300 ವರ್ಷಗಳ ಹಿಂದೆ ಪೇಜಾವರ ಚರ್ಚ್ ನಿರ್ಮಾಣವಾಗುವುದಕ್ಕೆ ಮುನ್ನ, ಗೋವಾ ಮಿಶನರಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದ ಮನೆ ಎಂಬ ಹಿರಿಮೆ ಹೊಂದಿದ್ದ, ಪತ್ರಾವೋ ಅವರ ಮನೆ ನೆಲಸಮವಾಯಿತು.

ಅಭಿವೃದ್ಧಿಯ ಕ್ರೂರ ಮಾದರಿಯೊಂದನ್ನು ಇಡೀ ರಾಜ್ಯವು ಮೌನವಾಗಿ ನೋಡುತ್ತಿತ್ತು ಎಂದರೆ ತಪ್ಪಾಗದು. ಹಿರಿಯಜ್ಜಿಯಾಗಿ ಅಸಹಾಯಕರಾಗಿದ್ದ ಮೇರಿ ಪತ್ರಾವೋ, ಯಾರಾದರೂ ಸಹಾಯ ಮಾಡಿ ಎಂದು ರೋದಿಸುತ್ತಿದ್ದರು. ಟೀವಿ ಚಾನೆಲ್ ಗಳು ಧಾವಿಸಿ ಬಂದು, ವರದಿಗಳನ್ನು ಮಾಡಿದ್ದೇ ಸುದ್ದಿಯು ರಾಜ್ಯಾದ್ಯಂತ ಹಬ್ಬಿತು.
ಇಷ್ಟೆಲ್ಲ ಆದಮೇಲೆ, ಇನ್ನು ಗ್ರೆಗರಿಪತ್ರಾವೋ ಜಮೀನನ್ನು ಕಂಪೆನಿಗೆ ಕೊಟ್ಟು, ಮತ್ತೊಂದು ಊರಿಗೆ ತೆರಳಿ ನೆಲೆಸಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ನೆಲಸಮಗೊಂಡ ಮನೆಯ ಜಾಗದಲ್ಲಿಯೇ ನಾಲ್ಕು ಕಂಬಗಳನ್ನು ಹಾಕಿದ ಪತ್ರಾವೋ ಕುಟುಂಬ ಒಂದು ಶೆಡ್ ಮಾದರಿಯ ಮನೆಯನ್ನು ಕಟ್ಟಿಕೊಂಡರು. ಚೆಲ್ಲಾಪಿಲ್ಲಿಯಾಗಿದ್ದ ತಮ್ಮ ಹಸು ಕರು, ಕೋಳಿ ಬೆಕ್ಕುಗಳನ್ನು ಕರೆದುಕೊಂಡು ಬಂದು ಅಲ್ಲಿಯೇ ವಾಸಿಸಲು ಶುರು ಮಾಡಿದರು. ಅದೇ ವೇಳೆಗೆ ‘ನನ್ನ ಮನೆ ಮತ್ತು ಜಮೀನನ್ನು ಸರ್ಕಾರ ಮರಳಿ ಕೊಡಲೇಬೇಕು’ ಎಂದು ಆಗ್ರಹಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರೆಗರಿ ಪತ್ರಾವೋ ಧರಣಿ ಸತ್ಯಾಗ್ರಹ ಆರಂಭಿಸಿದರು. ಮಳೆಗಾಲವಾದ್ದರಿಂದ ಮುಂಜಾನೆ ಬಿತ್ತನೆ ಮುಂತಾದ ಕೃಷಿ ಕೆಲಸಗಳನ್ನು ನಿರ್ವಹಿಸಿ, ನಂತರ ಮಂಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಧರಣಿ ಕುಳಿತುಕೊಳ್ಳುತ್ತಿದ್ದರು. ಸ್ಥಳೀಯ ಮುಖಂಡರು, ಸಮಾಜ ಸೇವಕರು ಮತ್ತು ರಾಜಕೀಯ ಪ್ರತಿನಿಧಿಗಳು ಸೇರಿದಂತೆ ಬೃಹತ್ ಸಮೂಹವೇ ಪತ್ರಾವೋ ಅವರ ಧರಣಿಯನ್ನು ಬೆಂಬಲಿಸಿತ್ತು.

ಗ್ರೆಗರಿ ಪತ್ರಾವೋ ಅವರ ಧರಣಿಯು ರಾಜ್ಯಾದ್ಯಂತ ಸಂಚಲನ ಮೂಡಿಸಿತು. ನಿಷ್ಕರುಣೆಯಿಂದ ಮತ್ತು ತರಾತುರಿಯಿಂದ ಮನೆಯನ್ನು ಕೆಡವಿ ಹಾಕಿದ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಗ್ರೆಗರಿ ಪತ್ರಾವೋ ಅವರಿಗೆ ಫೋನ್ ಮಾಡಿದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಡೀ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಪ್ರಾದೇಶಿಕ ಆಯುಕ್ತರಿಂದ ಪಡೆದು, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿಯೂ, ಧರಣಿಯನ್ನು ಹಿಂತೆಗೆಯಬೇಕೆಂದೂ ಹೇಳಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಗ್ರೆಗರಿ ವಾಪಸ್ ಪಡೆದರು. ಆದರೆ ಅದೇ ಶೆಡ್ ನಲ್ಲಿ ವಾಸ ಮುಂದುವರೆಸಿದ್ದರು.
ಭೂಮಿ ಸ್ವಾಧೀನಪಡಿಸಿಕೊಂಡ ಅಂಗವಾಗಿ 2.5 ಕೋಟಿ ರೂಪಾಯಿಯನ್ನು ವರ್ಗಾಯಿಸುವುದಾಗಿ ಗ್ರೆಗರಿ ಅವರಿಗೆ ತಿಳಿಸಲಾಗಿತ್ತು. ʻಆದರೆ ಕಾನೂನು ಹೋರಾಟವನ್ನುಮುಂದುವರೆಸಬಾರದು, ಕೊಟ್ಟ ಹಣವನ್ನು ಪಡೆದುಕೊಂಡು ಇಡೀ ಪ್ರಕರಣವನ್ನುಇಲ್ಲಿಯೇ ಕೈ ಬಿಡಬೇಕು. ಅದಕ್ಕಾಗಿ 30 ಲಕ್ಷ ರೂಪಾಯಿಯನ್ನು ವೈಯಕ್ತಿಕವಾಗಿ ತಮಗೇ ಕೊಡುವುದಾಗಿ ಆಮಿಷವೊಡ್ಡಲಾಗಿತ್ತು. ಪರೋಕ್ಷವಾಗಿ ಈ ಮಾತುಗಳನ್ನು ಹೇಳಿದ್ದರೂ, ಅದರ ನೇರ ಅರ್ಥ, ನನ್ನ ಒಡಹುಟ್ಟಿದವರಿಗೆ ಮೋಸ ಮಾಡಬೇಕು ಎಂಬುದೇ ಆಗಿತ್ತು. ಅಂದರೆ 30 ಲಕ್ಷ ರೂಪಾಯಿಯನ್ನು ಸ್ವಂತಕ್ಕೆ ಇರಿಸಿಕೊಂಡು, ಉಳಿದ ಹಣವನ್ನು ಸೋದರರಿಗೆ ಆಸ್ತಿ ಪಾಲು ಎಂಬುದಾಗಿ ಹಂಚಿಕೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ನನ್ನ ಮುಂದೆ ಇರಿಸಲಾಗಿತ್ತು. ರಕ್ತ ಹಂಚಿಕೊಂಡು ಹುಟ್ಟಿದವರಿಗೆ ಹೀಗೆ ಮೋಸ ಮಾಡುವುದನ್ನು ನನಗೆ ತಂದೆ ಕಲಿಸಿಯೇ ಇಲ್ಲ. ಕುಟುಂಬವೊಂದರಲ್ಲಿ ಎಲ್ಲರೂ ಒಟ್ಟಾಗಿ, ಪ್ರಾಮಾಣಿಕವಾಗಿ ಜೀವನ ಮಾಡಬೇಕು ಎಂಬುದು ಕೃಷಿಯ ಧರ್ಮವಾಗಿದೆʼ ಎಂದು ಗ್ರೆಗರಿ ಹಳೆ ವಿಚಾರಗಳನ್ನು ನೆನಪಿಸಿಕೊಳ್ಳುತ್ತಾರೆ.

ಅವರ ಮಾತುಗಳು ಹೀಗಿವೆ: ʻಎಲ್ಲದಕ್ಕೂ ಮುಖ್ಯವಾಗಿ ಪರಿಹಾರ ತೆಗೆದುಕೊಂಡು ಅಲ್ಲಿಂದ ಹೊರಡುವುದು ಎಂದರೆ ತೆನೆ ತುಂಬಿ ನಿಂತ ಪೈರಿನ ಮೇಲೆ ಮಣ್ಣು ಹಾಕುವುದಕ್ಕೆ ಒಪ್ಪಿಗೆ ಕೊಟ್ಟಂತೆ. ಉತ್ತು ಬಿತ್ತು ಬೆಳೆದ ಭತ್ತದ ಪೈರಿನ ಮೇಲೆ ಮಣ್ಣು ಹಾಕಿದರೆ ನಮಗೆಂದೂ ಒಳ್ಳೆಯದಾಗುವುದಿಲ್ಲ.ನಮಗಷ್ಟೇ ಅಲ್ಲ, ಅದು ಊರಿಗೇ ಕೆಡುಕುಂಟು ಮಾಡುವ ಕೆಲಸ. ಆದ್ದರಿಂದ ಪೈರು ಕೊಯ್ಲಾಗುವವರೆಗಾದರೂ ಕಾಯುವುದಕ್ಕೆ ಅವಕಾಶ ಕೊಡಬೇಕೆಂದು ಕೋರಿದೆ. ಹಣದ ಮುಖೇನ ಎಲ್ಲವನ್ನೂ ವಿಲೇವಾರಿ ಮಾಡುವ ಪ್ರಸ್ತಾವನೆಯನ್ನು ನಾನು ನಿರಾಕರಿಸಲೇಬೇಕಾಯಿತು. ಹೋರಾಟವನ್ನು ಮುಂದುವರೆಸದೇ ವಿಧಿಯೇ ಇರಲಿಲ್ಲʼಎನ್ನುತ್ತಾರೆ.

ಈ ಎಲ್ಲ ವಿಚಾರಗಳ ನಡುವೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಗ್ರೆಗರಿ ಪತ್ರಾವೋ ಭೂಮಿಯನ್ನು ಬಿಟ್ಟು ಕೊಡಬೇಕು ಎಂಬುದಾಗಿ ಆಗ್ರಹಿಸಿ, 2015ರಲ್ಲಿ ಎಂಆರ್ ಪಿಎಲ್ ರಾಜ್ಯ ಹೈಕೋರ್ಟ್ ನಲ್ಲಿ ಗ್ರೆಗರಿ ವಿರುದ್ಧ ಕೇಸು ದಾಖಲಿಸಿತು. ಈ ಪ್ರಕರಣವನ್ನು ಎದುರಿಸಲು ಸಜ್ಜಾದ ಗ್ರೆಗರಿ, ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಪ್ರತಿವಾದ ಮಂಡಿಸಿದಾಗ ಕೋರ್ಟ್ ವಿಚಾರಣೆ ನಡೆಸಿತು. ಪರಿಹಾರಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಕಲ್ಪಿಸಿದ್ದು, ಅಲ್ಲಿಯೇ ಪರಿಹಾರವನ್ನು ಪಡೆಯಬೇಕು ಎಂದು ಸೂಚಿಸಿತು.

ಅದರ ಪ್ರಕಾರ 2020ರಲ್ಲಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪರಿಹಾರ ಘೋಷಿಸಿ ತೀರ್ಪು ಗ್ರೆಗರಿಯ ಪರವಾಗಿ ಪ್ರಕಟಿಸಲಾಯಿತು. ಆದರೆ ಪರಿಹಾರ ನೀಡುವ ವಿಷಯವಾಗಿ ಜಿಲ್ಲಾ ನ್ಯಾಯಾಲಯ ತೀರ್ಪಿಗೆ ತಾನು ಬದ್ಧವಲ್ಲ ಎಂದು ಎಂಆರ್ ಪಿಎಲ್ ಹೇಳಿತು. ಯಾಕೆಂದರೆ ಇಡೀ ಪ್ರಕರಣದ ವಿಚಾರಣೆಯಲ್ಲಿ ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಪರಿಗಣಿಸಿಲ್ಲ. ಭೂ ಸ್ವಾಧೀನ ಮಾಡಿಕೊಂಡ ಕೆಐಎಡಿಬಿ ಪ್ರತಿವಾದಿಯಾಗಿರುವುದರಿಂದ, ಪರಿಹಾರ ಮೊತ್ತ ನೀಡುವಂತೆ ನ್ಯಾಯಾಲಯ ತನಗೆ ಸೂಚಿಸಿಲ್ಲ. ಆದ್ದರಿಂದ ತಾನು ಪರಿಹಾರ ನೀಡಬೇಕಾಗಿಲ್ಲ ಎಂದು ಕಂಪೆನಿ ಮತ್ತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಿತು. ದುರದೃಷ್ಟವಶಾತ್, ರಾಜ್ಯ ಹೈಕೋರ್ಟ್ ನಲ್ಲಿ ಈ ಪ್ರಕರಣದ ತೀರ್ಪು ಕೂಡ ಎಂಆರ್ ಪಿಎಲ್ ಪರವಾಗಿಯೇ ಬಂದಿತ್ತು. ಐದು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ತೀರ್ಪು ಎಂ.ಆರ್.ಪಿ.ಎಲ್ ಪರವೇ ಬಂದುದರಿಂದ ಪತ್ರಾವೋ ತಮ್ಮ ಪೂರ್ವಜರಿಂದ ಬಂದ 14.27 ಎಕರೆ ಆಸ್ತಿ, ಮನೆಯನ್ನು ಬಿಟ್ಟುಕೊಟ್ಟರು. ಆದರೆ ಪರಿಹಾರ ಮೊತ್ತವನ್ನು ಪಡೆಯಲು ಹೋರಾಟ ಮುಂದುವರೆಸುವುದು ಮತ್ತೆ ಅನಿವಾರ್ಯವಾಗಿತ್ತು.

ಈ ನಡುವೆ 2015ರಲ್ಲಿ ಕುತ್ತೆತ್ತೂರಿನಲ್ಲಿ 4.8 ಎಕರೆ ಜಾಗ ಖರೀದಿಸಿದ ಗ್ರೆಗರಿ ಪತ್ರಾವೋ ತೆಂಗು, ಕಂಗು, ಬಾಳೆ , ಭತ್ತದ ಕೃಷಿಯನ್ನು ಪುನರಾರಂಭಿಸಿದರು. ಅದೇವೇಳೆಗೆ ಅತ್ತಲಿಂದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್ ಕೂಲಂಕಷ ವಿಚಾರಣೆ ನಡೆಸಿತು. ಗ್ರೆಗರಿ ಅವರಿಂದ ಸ್ವಾಧೀನಪಡಿಸಿಕೊಂಡ ಬಳಿಕ ಭೂಮಿಯನ್ನು ಬಳಕೆ ಮಾಡಿಕೊಳ್ಳುವ ಎಂಆರ್ ಪಿಎಲ್, ಅವರಿಗೆ ಪರಿಹಾರ ಮೊತ್ತ ಕೊಡಬೇಕಾಗುತ್ತದೆ; ಆದ್ದರಿಂದ ಹೈಕೋರ್ಟ್ ನ ತೀರ್ಪನ್ನು ರದ್ದು ಪಡಿಸಿ, ಜಿಲ್ಲಾ ನ್ಯಾಯಾಲಯ ಪರಿಹಾರ ಘೋಷಿಸಿ ನೀಡಿದ ತೀರ್ಪನ್ನು ಎತ್ತಿ ಹಿಡಿಯಲಾಗುವುದು ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ಪೀಠ ಹೇಳಿದೆ.
ಈ ನಡುವೆ ತನ್ನ ಪಾಡಿಗೆ ತನ್ನ ಕೃಷಿ ಎಂಬಂತೆ ಗ್ರೆಗರಿ ಅವರು ನೆಟ್ಟ ಕಂಗಿನ ಗಿಡಗಳು ಮೇಲೆದ್ದಿದ್ದು ಈಗ ಅಡಿಕೆ ಕೊಯ್ಲು ಮಾಡುತ್ತಿದ್ದಾರೆ. ಭತ್ತದ ಕೃಷಿಯೆಂದು ಸಂಭ್ರಮದಿಂದ ಉಳುಮೆ ಮಾಡುತ್ತಿದ್ದಾರೆ. ತೆಂಗು ಫಸಲು ಕೊಡಲಾರಂಭಿಸಿದೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರೆ, ʻಕೃಷಿ ಹೊರತು ಬೇರೆ ಯಾವುದೇ ಕೆಲಸ ನನಗೆ ತಿಳಿದಿಲ್ಲ. ಆದ್ದರಿಂದ ಹಿರಿಯರಿಂದ ಬಂದ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಅದು ಸಾಧ್ಯವಾಗಲಿಲ್ಲ. ಅದನ್ನು ಕೇವಲ ಬಿಡಿಗಾಸಿಗೆ ಬಿಟ್ಟುಕೊಟ್ಟು ದೇಶಾಂತರ ಹೋಗಿಬಿಡುವುದು ನನಗೆ ಬೇಕಿರಲಿಲ್ಲ. ಆದ್ದರಿಂದ ಸರಿಯಾದ ರೇಟು ಕೊಡಿ ಎಂದು ಹೋರಾಟ ನಡೆಸಿದ್ದೇನೆ. ನನ್ನೂರಿನ ಜನರು, ನನ್ನದೇ ಸಹಪಾಠಿಗಳು ಕೂಡ ಇದೇ ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಂಡಿದ್ದಾರೆ. ಬಾಳಾ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನಾಗಿ ರಾಜಕೀಯದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಆದರೆ ಈಗ ಬಾಳಗ್ರಾಮವೇ ಇಲ್ಲವಾಗಿದೆ. ಮನೆ ಮಠ ಕಳೆದುಕೊಂಡ ನನ್ನದೇ ಸ್ನೇಹಿತರ ಪೈಕಿ ಕೆಲವರಿಗೆ ಉದ್ಯೋಗವೂ ದೊರೆತಿದೆ. ಅವರೆಲ್ಲ ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಗ್ರಾಚ್ಯುಟಿ, ಪಿಎಫ್ ಮತ್ತು ಪಿಂಚಣಿ ಪಡೆದುಕೊಂಡು ನಿವೃತ್ತಿ ಹೊಂದುತ್ತಿದ್ದಾರೆ. ನನ್ನಬದುಕು ನಿರಂತರ ಹೋರಾಟ ಹಾದಿಯೇ ಆಗಿದೆ. ಆದರೆ ಬೇಸರವೇನೂ ಇಲ್ಲ’ ಎನ್ನುತ್ತಾರೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಗ್ರೆಗರಿ ಪತ್ರಾವೋ ಅವರಿಗೆ 3.76 ಕೋಟಿ ರೂಪಾಯಿ ಪರಿಹಾರ ದೊರೆಯಲಿದೆ. ಆದರೆ ಪತ್ರಾವೋ ಅವರು ಮನೆಕೆಡವಿದ ಸಂದರ್ಭದಲ್ಲಿ ಒಂದು ಸಂಗೀಸು ಚೀಲ ಹಿಡಿದು, ದಾಖಲೆ ಪತ್ರಗಳನ್ನು ಹಿಡಿದು ನ್ಯಾಯಾಲಯಗಳಿಗೆ, ವಕೀಲರ ಕಚೇರಿಗಳಿಗೆ ತೆರಳುತ್ತಿದ್ದರು. ಅದೇ ಸಂಗೀಸು ಚೀಲವು ಇಂದು ಹರುಕು ಮುರುಕಾಗಿದ್ದು ಅವರ ಬಳಿಯೇ ಇದೆ. ‘ಇದೇ ಸಂಗೀಸು ಚೀಲದಲ್ಲಿ ದಾಖಲೆ ಪತ್ರಗಳನ್ನು ಹಿಡಿದುಕೊಂಡೇ ಎಲ್ಲಿಗಾದರೂ ಓಡಾಡುತ್ತೇನೆ. ನಾನು ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿರುವ ಒಬ್ಬ ರೈತ ಎಂದುಹೇಳಿದರೆ ಯಾರೂ ನಂಬುವುದಿಲ್ಲ. ಕೇಸಿನ ಬಗ್ಗೆ ಯಾರೊಡನೆ ಚರ್ಚೆ ಮಾಡುವಾಗಲೂ, ಈ ಎಲ್ಲ ದಾಖಲೆಗಳನ್ನು ತೋರಿಸಿಯೇ ಮಾತು ಶುರು ಮಾಡುತ್ತೆನೆ’ ಎನ್ನುತ್ತಾರೆ.


‘ಮನೆಕೆಡವಿದ್ದಾಗ ಮತ್ತು ಹೋರಾಟದ ಸಂದರ್ಭದಲ್ಲಿ ಜೊತೆಗಿದ್ದವರೆಲ್ಲನಂತರದ ದಿನಗಳಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಸಹಜವಾಗಿ ತೊಡಗಿಸಿಕೊಂಡರು. ಇಂದು ಕೋಟಿ ಹಣವು ನನ್ನ ಬಳಿಗೆಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಸಂತ್ರಸ್ತ ರೈತನೆಂದರೆ ಬಾಗಿದ ಬೆನ್ನಿನ, ದಯನೀಯ ಸ್ಥಿತಿಯಲ್ಲಿರುವ ವ್ಯಕ್ತಿಯ ಚಿತ್ರಣವನ್ನು ಜನರೇಕೆ ಮಾಡಿಕೊಳ್ಳುತ್ತಾರೆ. ಯಾರಿಗೂ ತಲೆಬಾಗದೇ ಸ್ವಾಭಿಮಾನದಿಂದ ಜೀವನ ನಡೆಸಲು ನಮ್ಮ ದೇಶದ ಕಾನೂನು ನಮಗೆ ಅವಕಾಶ ನೀಡಿದೆ. ಅಂದಮೇಲೆ ನಮ್ಮ ಅನ್ನವನ್ನು ನಾವೇ ಬೆಳೆಯುವ ನಮಗೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಇರಬೇಕಲ್ಲವೇ…’ ಎಂದು ಗ್ರೆಗರಿ ಪ್ರಶ್ನಿಸುತ್ತಾರೆ.