ಕೆನಡಾದಿಂದ ಅಮೇರಿಕಾಗೆ ಓಡಾಡುವ ಟ್ರಕ್ ಗಳ ಸಂಖ್ಯೆ ದೊಡ್ಡದಿದೆ. ಆರ್ಥಿಕವಾಗಿ ಕೆನಡ ಮತ್ತು ಅಮೇರಿಕಾ ಮಧ್ಯೆ ಬಹಳ ದೊಡ್ಡ ಒಡನಾಟವಿದೆ. ಪ್ರಪಂಚಕ್ಕೆ ಗೊತ್ತಿರುವಂತೆ ಅತೀ ಹೆಚ್ಚು ಕೊರೋನ ಸೊಂಕಿತರನ್ನು ಕಂಡ ದೇಶ ಅಮೇರಿಕಾ. ಹಾಗಾಗಿ ಸುಮಾರು ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಮೇರಿಕಾ ಮತ್ತು ಕೆನಡಾದ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕೇವಲ ಸರಕು ಸಾಗಾಣಿಕೆಗೆ ಸಣ್ಣ ಪ್ರಮಾಣದ ಓಡಾಟ ಇತ್ತು. ಇತ್ತೀಚೆಗೆ ಎರಡೂ ದೇಶಗಳ ಮಧ್ಯೆ ಓಡಾಟ ತೆರೆಯಲಾಗಿದ್ದ ಕಾರಣ, ಟ್ರಕ್ ಚಾಲಕರಿಗೆ ಒಂದು ನಿಯಮವನ್ನು ಮಾಡಿದರು.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

ಕೆನಡಾದಲ್ಲಿ ಸ್ಟೇಟ್ ಆಫ಼್ ಎಮರ್ಜೆನ್ಸಿ ಅಂತೆ? ನೀನು ಸೌಖ್ಯವಾಗಿದ್ದೀಯ? ಜೀವನಕ್ಕೆ ಏನು ತೊಂದರೆ ಇಲ್ಲವಾ? ಎಂದು ಒಂದರ ಹಿಂದೆ ಒಂದರಂತೆ ಪ್ರಶ್ನೆಗಳ ಬಾಣಗಳು ಬರುತ್ತಲಿದ್ದವು.

ಹಿಂದೆ ಮುಂದೆ ತಿಳಿಯದೆ, ನನಗೆ ಗೊತ್ತಿಲ್ಲದೆ ಕೆನಡಾದಲ್ಲಿ ನನಗಾಗುತ್ತಿರುವ ಅನಾಹುತದ ಬಗ್ಗೆ ಭಾರತದಿಂದ ಸ್ನೇಹಿತನ ಕರೆ ಅದಾಗಿತ್ತು. ಅವನ ದೂರವಾಣಿಯ ನಂತರ ಇದೇ ವಿಷಯವನ್ನು ಕೇಳಿದ ಸ್ನೇಹಿತರ ಪಟ್ಟಿ ದೊಡ್ಡದಿದೆ. ಭಾರತದ ಅದರಲ್ಲೂ ಕನ್ನಡ ನ್ಯೂಸ್ ಚಾನಲ್‌ಗಳ ಅಬ್ಬರ ಎಷ್ಟಿದೆಯೆಂದರೆ, ನಮಗೆ ಗೊತ್ತಿಲ್ಲದೆ ನಮ್ಮ ಮನೆಯಲ್ಲಿ ಅಮೇರಿಕಾ ಗೂಢಾಚಾರಿಗಳು ದೊಡ್ಡದೊಂದು ಬಾವಿ ಅಗೆದು, ಅದರಲ್ಲಿ ವಿಷವನ್ನು ತುಂಬಿ, ಅಂತರ್ಜಲವನ್ನು ವಿಷಮಯಮಾಡಿರುತ್ತಾರೆ. ಆ ವಿಷಯ ನ್ಯೂಸ್ ಚಾನೆಲ್ ರವರಿಗೆ ಗೊತ್ತಾಗಿರುತ್ತದೆ. ಆದರೆ ನಮಗೆ ಅದರ ಅರಿವೇ ಇರುವುದಿಲ್ಲ. ಟೀವಿಯಲ್ಲಿ ಅದನ್ನು ನೋಡಿದಾಗ, ಅದು ನಿಜವೆಂದು ನಂಬಿ ಮನೆಯ ಮೂಲೆ ಮೂಲೆಯನ್ನು ಹುಡುಕುತ್ತೇವೆ, ಅಂಥಹ ಪರಿಸ್ಥಿತಿಗೆ ತಲುಪಿರುವುದು ಸುಳ್ಳಲ್ಲ.

ಕೊರೋನ ಲಸಿಕೆಯ ರಾಮಾಯಣಗಳು ಒಂದಲ್ಲ ಎರಡಲ್ಲ, ಕೊರೋನದ ಲಕ್ಷಣ ಮತ್ತು ಅವಲಕ್ಷಣಗಳು ನೂರಾರಾದರೆ ಅದಕ್ಕಾಗಿ ಮೂಡಿ ಬಂದ ಲಸಿಕೆಗಳ ರಂಪಾಟ ಸಾವಿರಾರು. ರಷ್ಯಾದ ಲಸಿಕೆ, ಚೀನಾದ ಲಸಿಕೆ, ಅಮೇರಿಕಾದ ಲಸಿಕೆ, ಗ್ರೇಟ್ ಬ್ರಿಟನ್‌ನ ಲಸಿಕೆ, ಭಾರತದ ಲಸಿಕೆ, ಹೀಗೆ ಎಷ್ಟೋಂದು ದೇಶಗಳು ಲಸಿಕೆಯನ್ನು ಕಂಡುಹಿಡಿದರು, ಒಂದು ದೇಶದ ಲಸಿಕೆಯನ್ನು ಇನ್ನೊಂದು ದೇಶದವರು ಒಪ್ಪದಿದ್ದ ಕಾರಣಗಳು ಅನೇಕವಿದ್ದವು. ಆದರೂ ಅವರವರ ದೇಶದವರು ಅವರವರ ಲಸಿಕೆಯನ್ನು ಶ್ರೇಷ್ಟವೆನ್ನುವಂತೆ ಪಡೆದುಕೊಂಡರು. ಲಸಿಕೆಯೆ ಒಂದು ಮೋಸ, ಔಷಧಿ ಕಂಪನಿಗಳ ಒಳ ಒಪ್ಪಂದ, ಇದು ವೈಜ್ಞಾನಿಕ ಮಾಫಿಯಾದ ಒಳಸಂಚು ಎಂದು ಸಾಧಿಸುವವರ ಪಟ್ಟಿ ದೊಡ್ಡದಿದೆ. ಆದರೂ ಲಸಿಕೆಯನ್ನು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಒಪ್ಪಿ, ಅವರವರ ಪ್ರಜೆಗಳಿಗೆ ನೀಡಿದೆ. ಬಹಳಷ್ಟು ದೇಶಗಳಲ್ಲಿ ಲಸಿಕೆ ಪಡೆಯುವ ನಿರ್ಧಾರವನ್ನು ಪ್ರಜೆಗಳಿಗೆ ಬಿಟ್ಟರೂ ಬೇರೆ ರೀತಿಯಲ್ಲಿ ಲಸಿಕೆ ಪಡೆಯಲು ಒತ್ತಡ ಹಾಕುತ್ತಿದ್ದಾರೆ.

ಕೆಲವು ಕಂಪೆನಿಗಳಲ್ಲಿ ಕೆಲಸ ಮಾಡಬೇಕಿದ್ದರೆ ಲಸಿಕೆ ಪಡೆಯುವುದು ಕಡ್ಡಾಯ, ಅದೇ ಕಾರಣಕ್ಕೆ ಕೆಲಸಬಿಟ್ಟವರು ಇದ್ದರೆ, ಕೆಲವರು ದೇಶವನ್ನೆ ಬಿಟ್ಟಿದ್ದಾರೆ. ಲಸಿಕೆಯ ಮೇಲಿನ ಅಪನಂಬಿಕೆ ಮತ್ತು ತಮ್ಮ ಸ್ವಾತಂತ್ರ್ಯಕ್ಕೆ ಕುತ್ತು ಬಂದಿದೆ ಎನ್ನುವುದು ಅವರ ವಾದ.

ಕೆನಡಾದಿಂದ ಅಮೇರಿಕಾಗೆ ಓಡಾಡುವ ಟ್ರಕ್ ಗಳ ಸಂಖ್ಯೆ ದೊಡ್ಡದಿದೆ. ಆರ್ಥಿಕವಾಗಿ ಕೆನಡ ಮತ್ತು ಅಮೇರಿಕಾ ಮಧ್ಯೆ ಬಹಳ ದೊಡ್ಡ ಒಡನಾಟವಿದೆ. ಪ್ರಪಂಚಕ್ಕೆ ಗೊತ್ತಿರುವಂತೆ ಅತೀ ಹೆಚ್ಚು ಕೊರೋನ ಸೊಂಕಿತರನ್ನು ಕಂಡ ದೇಶ ಅಮೇರಿಕಾ. ಹಾಗಾಗಿ ಸುಮಾರು ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಮೇರಿಕಾ ಮತ್ತು ಕೆನಡಾದ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಕೇವಲ ಸರಕು ಸಾಗಾಣಿಕೆಗೆ ಸಣ್ಣ ಪ್ರಮಾಣದ ಓಡಾಟ ಇತ್ತು. ಇತ್ತೀಚಿಗೆ ಎರಡೂ ದೇಶಗಳ ಮಧ್ಯೆ ಓಡಾಟ ತೆರೆಯಲಾಗಿದ್ದ ಕಾರಣ, ಟ್ರಕ್ ಚಾಲಕರಿಗೆ ಒಂದು ನಿಯಮವನ್ನು ಮಾಡಿದರು. “ಎರಡೂ ಹಂತದ ಲಸಿಕೆ ಪಡೆದವರು ಮಾತ್ರ ಕೆನಡಾದಿಂದ ಅಮೇರಿಕಾಗೆ ಮತ್ತು ಅಮೇರಿಕಾದಿಂದ ಕೆನಡಾಗೆ ಟ್ರಕ್ ಚಾಲನೆ ಮಾಡಬಹುದು. ಎರಡೂ ಹಂತದ ಲಸಿಕೆ ಪಡೆಯದವರು ಟ್ರಕ್ ಓಡಿಸುವಂತಿಲ್ಲ”.

ಭಾರತದ ಅದರಲ್ಲೂ ಕನ್ನಡ ನ್ಯೂಸ್ ಚಾನಲ್‌ಗಳ ಅಬ್ಬರ ಎಷ್ಟಿದೆಯೆಂದರೆ, ನಮಗೆ ಗೊತ್ತಿಲ್ಲದೆ ನಮ್ಮ ಮನೆಯಲ್ಲಿ ಅಮೇರಿಕಾ ಗೂಢಾಚಾರಿಗಳು ದೊಡ್ಡದೊಂದು ಬಾವಿ ಅಗೆದು, ಅದರಲ್ಲಿ ವಿಷವನ್ನು ತುಂಬಿ, ಅಂತರ್ಜಲವನ್ನು ವಿಷಮಯ ಮಾಡಿರುತ್ತಾರೆ. ಆ ವಿಷಯ ನ್ಯೂಸ್ ಚಾನೆಲ್ ರವರಿಗೆ ಗೊತ್ತಾಗಿರುತ್ತದೆ. ಆದರೆ ನಮಗೆ ಅದರ ಅರಿವೇ ಇರುವುದಿಲ್ಲ.

ಈ ನಿಯಮ ಟ್ರಕ್ ಚಾಲಕರಿಗೆ ಕೆರಳುವಂತೆ ಮಾಡಿತು. ಲಸಿಕೆ ಪಡೆಯುವುದು ನಮ್ಮ ಇಚ್ಚೆಗೆ ಬಿಟ್ಟಿದ್ದು, ನೀವು ಈ ರೀತಿಯಾಗಿ ಒತ್ತಡ ಹಾಕಬಾರದು. ಹಾಗೇನಾದರೂ ಒತ್ತಡ ಹಾಕಿದರೆ, ನಾವು ಕೆನಡಾ ಮತ್ತು ಅಮೇರಿಕಾ ನಡುವಿನ ಸರಹದ್ದುಗಳನ್ನು ತಡೆಯುತ್ತೇವೆ ಎಂದು ಕೆನಡಾದ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಸರ್ಕಾರ ಇವರ ಹೆದರಿಕೆಗೆ ಬಗ್ಗದೆ ಇದ್ದಾಗ ದೊಡ್ಡ ದೊಡ್ಡ ಟ್ರಕ್ ಗಳನ್ನು ಸರಹದ್ದುಗಳಲ್ಲಿ ನಿಲ್ಲಿಸಿ ಓಡಾಟವನ್ನು ತಡೆದರು. ಇದಕ್ಕೂ ಸರ್ಕಾರ ಮಣಿಯದಿದ್ದಾಗ ಕೆನಡಾದ ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿದರು, ಇದಕ್ಕೂ ಮಣಿಯದಿದ್ದಾಗ ಕೆನಡಾದ ಪ್ರಧಾನ ಮಂತ್ರಿಯ ಮನೆಯನ್ನು ಮುತ್ತಿಗೆ ಹಾಕಿದರು. ಇದೆಲ್ಲಾ ನಡೆದದ್ದು ಕೆನಡಾದ ಒಟ್ಟಾವ ನಗರದಲ್ಲಿ. ಇಷ್ಟೆಲ್ಲಾ ರಂಪ ರಾಮಾಯಣ ನಡೆಯುತ್ತಿದ್ದರೂ ಕೆನಡಾದ ಅರ್ಧಕ್ಕಿಂತ ಜಾಸ್ತಿ ಜನರಿಗೆ ಇದ್ಯಾವುದರ ಅರಿವಿರಲಿಲ್ಲ. ಆದರೆ ಭಾರತದ ಮುಕ್ಕಾಲು ಭಾಗದ ಜನರಿಗೆ ಇದರ ವಿಷಯ ತಿಳಿದಿತ್ತು.

ಟ್ರಕ್ ಚಾಲಕರು ಸುಮಾರು ದಿನಗಳು ಈ ರೀತಿಯ ದಿಗ್ಭಂದನವನ್ನು ಹಾಕಿದ್ದರಿಂದ, ಕೆನಡಾದ ಪ್ರಧಾನಮಂತ್ರಿಗಳ ಚಟುವಟಿಕೆಗಳು ಸ್ಥಬ್ದವಾದವು. ಏನೇ ಪ್ರಯತ್ನಪಟ್ಟರೂ ಮಾತುಕೇಳದಿದ್ದಾಗ, ಇದೊಂದು ಸಮಾಜ ವಿರೋಧಿ ಕಾರ್ಯಕ್ರಮ ಎಂದು ಘೋಷಿಸಿ, ಇಂತಹ ಕೆಲಸಗಳಿಗೆ ಹಣ ಒದಗಿಸುತ್ತಿದ್ದವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಫರ್ಮಾನು ಹೊರಡಿಸಿದರು. ಇದನ್ನು ಸ್ಟೇಟ್ ಆಫ಼್ ಎಮರ್ಜೆನ್ಸಿ ಎಂದು ಘೋಷಿಸಿದರು. ಎಮರ್ಜೆನ್ಸಿ ಎನ್ನುವ ಪದವೆ ಸಾಕು, ಭಾರತದ ಅದರಲ್ಲೂ ಕನ್ನಡದ ನ್ಯೂಸ್ ಚಾನೆಲ್ಗಳು ರೆಕ್ಕೆ ಪುಕ್ಕ ಕಟ್ಟಿ ಕೆನಡಾದಲ್ಲಿ ಏನೋ ಆಗಬಾರದ್ದು ಆಗಿ ಹೋಗಿದೆ ಎನ್ನುವ ಹಾಗೆ ಬಿಂಬಿಸಿದರು.

ನಿಜ ಹೇಳಬೇಕೆಂದರೆ, ಕೆನಡಾದಲ್ಲಿ ಇದ್ದುಕೊಂಡು ಕೆನಡಾದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಶುರು ಮಾಡಿದ್ದೇ ಭಾರತದಿಂದ ಸ್ನೇಹಿತರ ಕರೆ ಬಂದ ನಂತರ. ಹಾಗೆ ನೋಡಿದರೆ ನಾನು ತಿಳಿದುಕೊಳ್ಳುವ ಹೊತ್ತಿಗೆ ಟ್ರಕ್ ಚಾಲಕರ ಚಳುವಳಿ ಮುಗಿಯುವ ಹಂತಕ್ಕೆ ಬಂದಿತ್ತು.

ಪ್ರತೀ ದೇಶಕ್ಕೆ ಅದರದ್ದೆ ಆದ ರೀತಿ ನೀತಿಗಳು, ನಿಯಮಗಳು ಇರುತ್ತವೆ, ಪ್ರಾದೇಶಿಕ ನ್ಯೂಸ್ ಚಾನೆಲ್‌ಗಳು ಹೇಗೆ ವಿಶ್ವದ ಎಲ್ಲಾ ದೇಶದ ಸುದ್ದಿಯನ್ನು ಕ್ರೋಢೀಕರಿಸುತ್ತಾರೆ ಎನ್ನುವುದೆ ಸೋಜಿಗ.