ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್‌  ಮತ್ತು ಅವನ ಅಧಿಕಾರಿ ವರ್ಗದಲ್ಲಿ, ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್‌ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ.
ಎ.ಎನ್.‌ ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼಸರಣಿಯಲ್ಲಿ ಇಸ್ರೇಲ್‌ನ ʻಲೆಮನ್‌ ಟ್ರೀʼ ಚಿತ್ರದ ವಿಶ್ಲೇಷಣೆ

ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಯುದ್ಧವಾಗುತ್ತಿರುವುದು ಗೊತ್ತಿರುವ ಸಂಗತಿಯೇ. ಆದರೆ 2008ರಲ್ಲಿ ಇಸ್ರೇಲಿನ ನಿರ್ದೇಶಕ ಇರನ್‌ ರಿಕಲಿಸ್‌ ನೈಜವಾಗಿ ನಡೆದದ್ದನ್ನು ಆಧರಿಸಿದ ʻಲೆಮನ್‌ ಟ್ರೀʼ ಚಿತ್ರದಲ್ಲಿ ಈ ಎರಡು ದೇಶಗಳ ನಡುವೆ ಯುದ್ಧದ ಸೋಂಕಿಲ್ಲ. ಆದರೆ ಸಂಕೀರ್ಣತೆಯ ಸಂಘರ್ಷವಿದೆ. ಚಿತ್ರ ಬರ್ಲಿನ್‌ ಚಿತ್ರೋತ್ಸವದಲ್ಲಿ ವಿಕ್ಷಕರ ಪ್ರಶಸ್ತಿ ಪಡೆಯುವುದರ ಜೊತೆ ಇಸ್ರೇಲ್‌ ಫಿಲ್ಮ್‌ ಅಕಾಡೆಮಿಯಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ಹಿಯಮ್‌ ಪಾತ್ರಧಾರಿ ಸಾಲ್ಮಾ ಜಿ಼ಡೇನ್‌ಳಿಗೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ದೊರಕಿತು. ಅಲ್ಲದೆ ಇದೇ ನಿರ್ದೇಶಕನ ʻದ ವಿಸಿಟರ್‌ʼ ಚಿತ್ರದಲ್ಲಿನ ಅಭಿನಯದಿಂದಲೂ ಆಕೆಗೆ ಖ್ಯಾತಿ ಲಭಿಸಿದೆ.

(ಇರನ್‌ ರಿಕಲಿಸ್‌)

ಇಂಗ್ಲೆಂಡಿನ ಬೀಕಾನ್ಸ್‌ ಫೀಲ್ಡ್‌ ನ್ಯಾಷನಲ್‌ ಫಿಲ್ಮ್ ಸ್ಕೂಲ್‌ನಲ್ಲಿ ಅಭ್ಯಾಸ ಮಾಡಿದ ಇರನ್‌ ರಿಕಲಿಸ್‌ ನೈಜ ಘಟನೆಗಳನ್ನು ಆಧರಿಸಿದ ಮೊದಲ ಚಿತ್ರ ʻಆನ್‌ ಎ ಕ್ಲಿಯರ್‌ ಡೆ ಯು ಕೆನ್‌ ಸೀ ಡೆಮಾಸ್ಕಸ್‌ʼ ನಿರ್ಮಿಸಿದ್ದು 1984ರಲ್ಲಿ. ಅವನಿಗೆ ಖ್ಯಾತಿ ದೊರಕಿದ ʻಕಪ್‌ ಫೈನಲ್‌ʼ ಚಿತ್ರ ಬರ್ಲಿನ್‌ ಮತ್ತು ವೆನಿಸ್‌ ಚಿತ್ರೋತ್ಸವಗಳು ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲ್ಪಟ್ಟಿತು. 1993ರ ʻಜೋ಼ಹರ್‌ʼ ಅವನ ಖ್ಯಾತ ಚಿತ್ರಗಳಲ್ಲೊಂದು. ಆ ನಂತರವೇ ಅವನ 2004ರ ʻಸಿರಿಯನ್‌ ಬ್ರಿಡ್ಜ್‌ʼ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದೆ.

ಅದೊಂದು ಪ್ಯಾಲೆಸ್ಟೈನ್‌ನ ಪಶ್ಚಿಮದಂಚಿನ ಗಡಿಯಲ್ಲಿರುವ ಸಾಮಾನ್ಯವೆನಿಸುವ ಕಾಂಕ್ರೀಟ್ ಬ್ಲಾಕುಗಳ ಹಾಗೂ ಇಟ್ಟಿಗೆಯಿಂದ ಕಟ್ಟಿದ ಮನೆ. ಮನೆಯಿಂದ ಸುಮಾರು ನೂರೈವತ್ತು ಅಡಿಗಳ ಆಚೆ ಅಷ್ಟುದ್ದಗಲಕ್ಕೂ ಹರಡಿದ ವಿಸ್ತಾರವಾದ ಎಕರೆಗಟ್ಟಲೆ ನಿಂಬೆ ಗಿಡದ ತೋಟ. ಮನೆಯಲ್ಲಿ ನಡುವಯಸ್ಸಿನ ಒಂಟಿ ಹಿಯಮ್‌ ಅಬ್ಬಾಸ್‌ಳ ವಾಸ. ಅವಳ ಗಂಡ ಹತ್ತು ವರ್ಷಗಳ ಹಿಂದೆಯೇ ತೀರಿಕೊಂಡಿದ್ದು ಈಗ ಮಗನಿಗೆ ಅಮೆರಿಕದಲ್ಲಿ ಕೆಲಸ. ಮಗಳ ವಾಸವೂ ಬೇರೆ ಊರಿನಲ್ಲಿದ್ದು ಒಂಟಿ ಸಂಸಾರ ಅವಳದ್ದು. ಹೀಗಿದ್ದರೂ ಮನೆಯಾಕೆಗೆ ಒಂಟಿತನ ಸಮಸ್ಯೆ ಅನ್ನಿಸುವುದೇ ಇಲ್ಲ. ನಿಂಬೆ ಗಿಡಗಳ ಜೊತೆಗೇ ಅವಳ ವಾಸ. ಅವಳನ್ನು ಮಾತನಾಡಿಸುವ, ಮುದ್ದಿನಿಂದ ನಸುನಕ್ಕು ಪ್ರೀತಿ ತೋರಿಸುವಂಥ ಎಳೆಯ ಮುಖಗಳ ಪುಟಾಣಿಗಳು ಆ ಗಿಡಗಳ ಹಣ್ಣುಗಳು. ಅವುಗಳನ್ನು ನೋಡಿದಷ್ಟೂ ಅವಳಿಗೆ ಸಂತೋಷ. ಜೊತೆಗೆ ಎಂದಿಗೂ ಈ ಸುಖದ ಹಂಬಲ ತೀರಬಾರದೆಂಬ ಅಭಿಲಾಷೆ ಕೂಡ. ಆಕೆ ಇಡೀ ದಿನ ಕಳೆಯುವುದು ಅವುಗಳ ಆರೈಕೆಯಲ್ಲಿ. ನಿಂಬೆ ಗಿಡಗಳಲ್ಲಿ ಎಳೆಯ ದಿನಗಳ ನಲಿದಾಟದ ಒಡನಾಟ ಮುಗಿದ ಮೇಲೆ ಅವು ಮೈಕೈ ತುಂಬಿಕೊಂಡು ಬೆಳೆದು, ಇಗೋ ನೋಡಿ ನಾನೀಗ ನಿಮ್ಮ ಉಪಯೋಗಕ್ಕೆ ಎಂದು ತಮ್ಮನ್ನೇ ಅರ್ಪಿಸಿಕೊಳ್ಳುವ ಭಾವದಿಂದ ಇರುವ ಜಗಮಗಿಸುವ ನಿಂಬೆಹಣ್ಣುಗಳು. ಮೈ ಚರ್ಮಕ್ಕೆ ಕೊಂಚವೂ ನಂಜು ಬರದ ಹಾಗೆ ಅವುಗಳನ್ನು ಗಿಡದಿಂದ ಕಿತ್ತು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಪೂರೈಸಿದರೆ ಆಯಿತು. ನಂತರ ಮಾರ್ಕೆಟ್‌ಗೆ ಕೊಂಡೊಯ್ದು, ಮಾರಾಟದಿಂದ ಬರುವ ಹಣಕಾಸಿನಿಂದ ಅವಳ ಜೀವನಪಥ ಸಾಗಬೇಕು. ನಿಂಬೆ ಗಿಡಗಳ ದಿನನಿತ್ಯದ ಆರೈಕೆಗೆ ಅವಳಿಗೆ ಸಹಕಾರ ಕೊಡುವವನು ಅವಳು ಹತ್ತು ವರ್ಷದವಳಾಗಿದ್ದಾಗಿಂದ ಆಡಿಸಿ ಬೆಳೆಸಿದ‌ ತಾತ ತಾರಿಕ್‌ ಕೋಪ್ಟಿ. ಇವರ ಕೆಲಸಗಳಿಗೆಲ್ಲ ಪರಿವೀಕ್ಷಕರಾಗಿ ನಿಲ್ಲುತ್ತಿದ್ದದ್ದು ಗಿಡಗಳ ಎಲೆಗಳ ಮೇಲೆ ಬೆಳಗಾಯಿತೆಂದರೆ ಮುತ್ತಿಕ್ಕುವ ಹದವಾದ ಶಾಖದ ಸೂರ್ಯನ ಹಸ್ತ.

ತನ್ನ ಪಾಡಿಗೆ ತಾನು ಎಲ್ಲವನ್ನು ಅಗತ್ಯಕ್ಕೆ ತಕ್ಕಂತೆ ನಿಭಾಯಿಸುವ ನಡುವಯಸ್ಸಿನ ಮನೆಯಾಕೆ ಹಿಮನ್‌ ಅಬ್ಬಾಸ್(ಸಾಲ್ಮಾ ಜಿ಼ಡಾನಿ) ನೋಡಲು ಸ್ಪುರದ್ರೂಪಿ. ಚೌಕು ಮುಖದ ಹೊಳೆವ ಕಣ್ಣುಗಳ ನೀಳಕಾಯದವಳು. ನಿಂಬೆಹಣ್ಣಿನ ಮರಗಳನ್ನು ಜೋಪಾನ ಮಾಡುವ ತಾತ ತಾರಿ ಕೊಪ್ಟಿ(ಅಬು ಹಸಾನ್) ಎಪ್ಪತ್ತೈದರ ಆಸುಪಾಸಿನವನು. ಬಿಳಿ ಮೀಸೆ. ಕೊಂಚ ಒಳಗೆ ಸೇರಿದ ಕಣ್ಣಿನ ದಪ್ಪ ಗುಡ್ಡೆಗಳ ಎತ್ತರದ ಮನುಷ್ಯ. ಹಲವಾರು ವರ್ಷಗಳು ಯಾವ ವಿಧವಾದ ವಿಶೇಷವೂ ಇಲ್ಲದೆ ಸುಮ್ಮನೆ ಹಾಗೆಯೇ ಸಾಗಿ ಹೋಗಿರಬೇಕು. ಇದರ ಲೆಕ್ಕ ಇಡುವವರು ಯಾರು ಇಲ್ಲ. ಯಾರ ಗಮನಕ್ಕೂ ಬಾರದ ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಪೂರ್ವದಂಚಿನಲ್ಲಿರುವ ಪ್ರದೇಶ ಅದು. ಜೀವನಪಥ ಹೀಗೆ ಮುಂದುವರಿಯಲು ಸಾಧ್ಯವೇ? ತೊಡಕುಗಳು ಇಲ್ಲದಿದ್ದರೆ ಬದುಕೆಂತು? ಆಕೆಗೆ ಎದುರಾದದ್ದು ಅದೇ. ಆದರೆ ಉಂಟಾದ ತೊಡಕು ಅಥವಾ ಪರಿಸ್ಥಿತಿ ಅವಳು ಸೃಷ್ಟಿಸಿದ್ದಲ್ಲ.

ಆ ದಿನ ಬೆಳಗು ಎಂದಿನಂತಿರಲಿಲ್ಲ. ಅದರೊಂದಿಗೆ ಮಿಳಿತಗೊಂಡ ಬೀಸುತ್ತಿದ್ದ ಗಾಳಿ ಬೇರೆ ಬಗೆಯದು. ಮನೆಯಿಂದ ಹೊರಗೆ ಏನೋ ಶಬ್ದವಾದಂತೆ ಕಂಡು ಕಿವಿ ನಿಮಿರಿ ಹೊರಬಂದಾಗ ಅವಳಿಗೆ ಕಂಡದ್ದು ದೊಡ್ಡ ವಾಹನಗಳಲ್ಲಿ ಇಸ್ರೇಲ್‌ ಸರ್ಕಾರದ ಅಧಿಕಾರಿಗಳು. ಜೊತೆಗೆ ಅವಳು ಎಂದೂ ನೋಡದಂಥ ನೋಡಿರದ ವಸ್ತುಗಳು. ಕ್ರಮೇಣ ಅವಳಿಗೆ ಕೆಲವೊಂದು ವಿಷಯಗಳು ಅರ್ಥವಾಗುತ್ತದೆ. ಆ ವಸ್ತುಗಳೆಲ್ಲವೂ ಅಲ್ಲಿ ಆಚೆ ನಿಂಬೆ ಗಿಡಗಳ ತೋಟದ ಪಕ್ಕದಲ್ಲಿರುವ ದೊಡ್ಡ ಭವ್ಯವಾದ ಮನೆಗೆ ಸಂಬಂಧಿಸಿದವು ಎಂದು ಅರಿವಾಗುತ್ತದೆ. ಜೊತೆಗೆ ಇದರಲ್ಲಿ ಅಲ್ಲಿಗೆ ನಡು ವಯಸ್ಸಿನ ಇಸ್ರೇಲಿನ ರಕ್ಷಣಾ ಮಂತ್ರಿ(ಡೋರಾನ್‌ ಟಾವೊರಿ) ವಾಸ ಮಾಡುವುದಕ್ಕೆ ಬರುತ್ತಿದ್ದಾರೆಂದು ತಿಳಿಯುತ್ತದೆ.

ಮನೆಯಾಕೆ ಈ ವಿಷಯವನ್ನು ಅರಗಿಸಿಕೊಳ್ಳುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ನೆಲದಿಂದ ಮೇಲೆ ಎತ್ತರಕ್ಕೂ ಹಬ್ಬಿ ನಿಲ್ಲುವ, ಅಲ್ಲಿ ಮೇಲೆ ನಿಂತು ಸುತ್ತಲ ಎಲ್ಲವನ್ನು ನೋಡಲು ಸಾಧ್ಯವಾಗುವ ಕೊಠಡಿ ನಿರ್ಮಾಣವಾಗುತ್ತದೆ. ಅವಳಿಗೆ ಇದೆಲ್ಲವೂ ಹೊಸದು. ಇಷ್ಟು ದಿನ ತನ್ನಷ್ಟಕ್ಕೆ ತಾನು ಎಂದು ಅಷ್ಟಗಲಕ್ಕೂ ಸುಮ್ಮನೆ ಹರಿದಾಡಿದ ಸೊಗಸು ಹಬ್ಬಿದ್ದ ಕಡೆ ಈಗ ಬೇರೆ ದೃಶ್ಯಗಳು ಬೆರೆಯಲು ಹವಣಿಸುತ್ತವೆ.

ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್‌ (ರೋನಾ ಲಿಪಾಜ಼್ ಮೈಖೇಲ್) ಮತ್ತು ಅವನ ಅಧಿಕಾರಿ ವರ್ಗದಲ್ಲಿ ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್‌ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ. ಮನೆಯಾಕೆಗೆ ವಸ್ತುಸ್ಥಿತಿ ಬದಲಾಗುತ್ತಿರುವುದರ ಅರಿವಾಗುತ್ತದೆ. ಹೀಗೆಯೇ ಮುಂದುವರಿದರೆ ತನ್ನ ಜೀವನ ಸಾಗಿಸಲು ಸಾಧ್ಯವಿಲ್ಲವೆಂದು ತಿಳಿಯುತ್ತದೆ.

ರಕ್ಷಣಾ ಮಂತ್ರಿಯ ಮಡದಿ ಮೀರಾ ನವಾನ್‌ ನಿಂಬೆ ಗಿಡಗಳ ತೋಟದ ಮನೆಯಾಕೆಯನ್ನು ಅಷ್ಟು ದೂರದಿಂದ ನೋಡುತ್ತಿರುತ್ತಾಳೆ. ಅವಳಿಗೆ ತಮ್ಮಿಬ್ಬರ ಮಧ್ಯೆ ನೋಟದ ಸಂಪರ್ಕದ ಎಳೆ ಸುಳಿದಾಡುವುದು ಗೋಚರಿಸುತ್ತದೆ. ಆದರೆ ಒಬ್ಬರಿಗೊಬ್ಬರು ಮಾತಿಲ್ಲ. ಅವರಿವರ ಮಾತುಗಳಿಂದ ಪರಿಸ್ಥಿತಿಯನ್ನು ತಿಳಿದ ರಕ್ಷಣಾ ಮಂತ್ರಿಯ ಮಡದಿಗೆ ನಿಂಬೆ ಗಿಡಗಳ ತೋಟದೊಡತಿಯ ಬಗ್ಗೆ ಅನುಕಂಪ ಉಂಟಾಗುತ್ತದೆ. ಆದರೆ ಅವಳೇನೂ ಸಹಾಯ ಮಾಡುವಂತಿರುವುದಿಲ್ಲ. ಪರಸ್ಪರ ಮಾತನಾಡುವ ಅವಕಾಶಗಳು ಸಾಕಷ್ಟು ಉಂಟಾದರೂ ಅವರು ಮಾತನಾಡದಿರಲು ರಾಜಕೀಯ ಅಂಶಗಳೇ ಪ್ರಭಾವಿಸುತ್ತವೆ. ಇಷ್ಟಲ್ಲದೆ ಗಂಡಿನ ದರ್ಪದ ಎದುರು ಹೆಣ್ಣು ದನಿಯೆತ್ತುವಂತಿಲ್ಲ ಎನ್ನುವುದೂ ಅನ್ನಿಸಿದಂತೆ ಮಾಡಲು ಬಿಡುವುದಿಲ್ಲ.

ನಿಂಬೆ ಗಿಡಗಳ ತೋಟದಾಕೆಗೆ ಒಂದು ಕಾಗದ ತಲುಪುತ್ತದೆ. ಹೀಬ್ರೂ ಭಾಷೆಯಲ್ಲಿರುವ ಅದರ ಬರಹವನ್ನು ಅವಳಿಗೆ ಓದಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಬೇರೊಬ್ಬನನ್ನು ಅವಲಂಬಿಸುತ್ತಾಳೆ. ಅನಂತರ ಅದರಲ್ಲಿರುವ ವಿಷಯ ಕೇಳಿ ಬೆಚ್ಚಿ ಬೀಳುತ್ತಾಳೆ. ಅದರಲ್ಲಿ ನಿಂಬೆ ಗಿಡದ ಬೆಳೆಯನ್ನು ಕಡಿದು ಹಾಕಲ್ಪಡುತ್ತದೆ ಮತ್ತು ಅದಕ್ಕೆ ಪರಿಹಾರದ ರೂಪದಲ್ಲಿ ಹಣ ಕೊಡಲಾಗುತ್ತದೆ ಎಂದಿರುತ್ತದೆ. ದಿಕ್ಕು ತೋಚದೆ ಆಕೆ ಊರಿನಲ್ಲಿ ಅವಳಿಗೆ ನ್ಯಾಯವನ್ನು ಒದಗಿಸಿ ಕೊಡಲು ಶಕ್ತಿ ಇರುವವನ ಬಳಿಗೆ ಹೋಗಲು ತೀರ್ಮಾನಿಸುತ್ತಾಳೆ.

ಆ ಊರಿನಲ್ಲಿನ ಕಿರಿದಾದ ರಸ್ತೆಗಳು ಮತ್ತು ಅಕ್ಕಪಕ್ಕ ಸಣ್ಣಪುಟ್ಟ ಮನೆಗಳು ಅವಳಿಗೆ ಮುಂದಿನ ಹಾದಿ ಸುಗಮವಲ್ಲ ಎಂದು ಸೂಚಿಸುತ್ತವೆ. ಅವಳು ಹುಡುಕಿಕೊಂಡು ಹೋದ ಯುವ ಲಾಯರ್‌ ಅಲಿ ಸುಲ್ಲಿಮಾನ್ (ಜಿ಼ಯಾದ್‌ ದಾವೂದ್‌) ಕಾಗದಲ್ಲಿ ತಿಳಿಸಿರುವಂತೆ ಅಧಿಕಾರಿಗಳು ಮಾಡುವುದು ಸುಲಭವೆಂದು ಅವಳಿಗೆ ಮನವರಿಕೆ ಮಾಡುತ್ತಾನೆ. ಅವಳು ಅದನ್ನು ಒಪ್ಪುವುದಿಲ್ಲ. ಆದರೆ ವಿಷಯ ಬಲಿಷ್ಠರಿಗೆ ಸಂಬಂಧಪಟ್ಟದ್ದರಿಂದ ಲಾಯರ್ ಅವಳಿಗೆ ಸಹಾಯ ಮಾಡಲು ಹಿಂಜರಿಯುತ್ತಾನೆ. ಕೆಲವು ಕ್ಷಣ ಸುಮ್ಮನಿದ್ದ ಅವಳಿಗೆ ನಿಂಬೆ ಗಿಡಗಳು ಕೈಜೋಡಿಸಿದಂತೆ, ಹಣ್ಣುಗಳು ಬರೀ ಕಣ್ಣೀರನ್ನೇ ತುಂಬಿಕೊಂಡಂತೆ ಭಾಸವಾಗುತ್ತದೆ. ಅವಳು ಎದುರಿಸಬೇಕಾದ ವ್ಯಕ್ತಿ ಇಸ್ರೇಲಿನ ರಕ್ಷಣಾ ಮಂತ್ರಿ. ಅವನಿಗೆ ಬಲವಿದೆ, ಅನುಕೂಲವಿದೆ. ಆದರೆ ದಶಕಗಳಿಂದ ಆರೈಕೆ ಮಾಡಿ ಬೆಳೆಸುತ್ತಿರುವ ಎಳೆಯ ಮಕ್ಕಳ ಹಾಗಿರುವ ನಿಂಬೆ ಗಿಡಗಳ ಸಹವಾಸವನ್ನು ಕಳೆದುಕೊಳ್ಳುವುದು ಹೇಗೆ? ಅವುಗಳ ರಕ್ಷಣೆ ಯಾರು ಮಾಡುತ್ತಾರೆ? ಏನಿದ್ದರೂ ಸಂಬಂಧಿಸಿದವರಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಾಳೆ. ಅವಳ ಉತ್ತರಕ್ಕಾಗಿ ಕಾದಿದ್ದ ಲಾಯರ್‌ಗೆ ಕೋರ್ಟಿಗೆ ಹೋಗೋಣ ಎಂದದ್ದಕ್ಕೆ ಅವನು ಒಪ್ಪಿಕೊಳ್ಳುತ್ತಾನೆ.

ನಿಂಬೆ ಗಿಡಗಳ ಜೊತೆಗೇ ಅವಳ ವಾಸ. ಅವಳನ್ನು ಮಾತನಾಡಿಸುವ, ಮುದ್ದಿನಿಂದ ನಸುನಕ್ಕು ಪ್ರೀತಿ ತೋರಿಸುವಂಥ ಎಳೆಯ ಮುಖಗಳ ಪುಟಾಣಿಗಳು ಆ ಗಿಡಗಳ ಹಣ್ಣುಗಳು. ಅವುಗಳನ್ನು ನೋಡಿದಷ್ಟೂ ಅವಳಿಗೆ ಸಂತೋಷ. ಜೊತೆಗೆ ಎಂದಿಗೂ ಈ ಸುಖದ ಹಂಬಲ ತೀರಬಾರದೆಂಬ ಅಭಿಲಾಷೆ ಕೂಡ. ಆಕೆ ಇಡೀ ದಿನ ಕಳೆಯುವುದು ಅವುಗಳ ಆರೈಕೆಯಲ್ಲಿ.

ಅದೊಂದು ದಿನ ಎದುರುಗಡೆಯ ರಕ್ಷಣಾ ಮಂತ್ರಿಗಳ ಮನೆಯಲ್ಲಿ ಸಡಗರ. ಹತ್ತಾರು ಜನರು ಮಾತನಾಡುತ್ತ ಸುತ್ತುತ್ತಿರುತ್ತಾರೆ. ಆಮಂತ್ರಿತರರಿಗೆ ಸಾಕಾಗುವಷ್ಟು ಮತ್ತು ಅಡುಗೆ ಇತ್ಯಾದಿಗೆ ಅಗತ್ಯವಾದಷ್ಟು ನಿಂಬೆಹಣ್ಣುಗಳನ್ನು ತಂದಿಲ್ಲ ಎನ್ನುವುದು ಗಮನಕ್ಕೆ ಬರುತ್ತದೆ. ನಿಂಬೆಹಣ್ಣುಗಳು ಎದುರಿಗೇ ಇವೆಯಲ್ಲ, ಇನ್ನೇಕೆ ಯೋಚನೆ ಎಂದು ಅವರಿಗೆ ಅನಿಸುತ್ತದೆ. ಅವರ ಸೂಚನೆಯಂತೆ ತಕ್ಷಣವೇ ಮೂರ್ನಾಲ್ಕು ಜನರು ಸ್ಟೀಲಿನ ಬೇಲಿಯನ್ನು ದಾಟಿ ನಿಂಬೆಹಣ್ಣಿನ ತೋಟದೊಳಕ್ಕೆ ಹಾರಿ ಬಂದು ಎಲ್ಲೆಂದರಲ್ಲಿ ಕಂಡ ನಿಂಬೆಹಣ್ಣುಗಳನ್ನು ಕೀಳುವುದಕ್ಕೆ ಪ್ರಾರಂಭಿಸುತ್ತಾರೆ. ಇದನ್ನು ಕಂಡ ಮನೆಯಾಕೆಗೆ ತನ್ನ ಮೈ ಮೇಲಿನ ಕೂದಲನ್ನು ಕೀಳುತ್ತಿದ್ದಾರೆ ಎನ್ನಿಸಿದಂತೆ ಓಡಿಬಂದು ಅವರ ವಿರುದ್ಧ ಕೂಗಾಡುತ್ತಾಳೆ. ಅಷ್ಟು ದೂರದಿಂದ ನೋಡುವ ರಕ್ಷಣಾ ಮಂತ್ರಿಯ ಹೆಂಡತಿಗೆ ಇದು ಸೋಜಿಗವೆನಿಸುತ್ತದೆ. ಅರೆ! ಇಷ್ಟೊಂದು ಹಣ್ಣು ಇದೆಯಲ್ಲ! ಅವುಗಳಲ್ಲಿ ಕೆಲವನ್ನು ತೆಗೆದುಕೊಂಡರೆ ಏನು ದೊಡ್ಡ ತಪ್ಪು ಎಂದು ಅವಳ ನಿಲುವು. ಈ ಸಂದರ್ಭದಲ್ಲಿಯೇ ಅವಳ ಅರಿವಿಗೆ ಪಕ್ಕದ ಮನೆಯಾಕೆಯ ಸಂಕಟ ಅರ್ಥವಾಗುವುದಿಲ್ಲ. ಆಕೆಯ ಭಾವನೆಯ ನೆಲೆ ಬೇರೆ ಈಕೆಯ ಭಾವನೆಯ ನೆಲೆ ಬೇರೆ. ನಿಂಬೆ ಗಿಡಗಳನ್ನು ಬೆಳೆಸಿದವಳಿಗೆ ತನ್ನ ಭಾವಗಳ ಒಡಲಿಗೆ ಸಾವಿನ, ನೋವಿನ ಅಲೆಗಳು ಅಪ್ಪಳಿಸಿದ ಹಾಗಾಗುತ್ತದೆ.

ನಿಂಬೆ ಹಣ್ಣುಗಳನ್ನು ತರುವುದಕ್ಕೆ ಹೋದವರು ಇನ್ನೂ ಬಾರದಿರುವ ಚಿಂತೆಯ ಜೊತೆಗೆ ಇದ್ದಕ್ಕಿದ್ದಂತೆ ಉಂಟಾಗುವ ಗಲಭೆಯಿಂದ ರಕ್ಷಣಾ ಮಂತ್ರಿಯ ಮನೆಗೆ ಬಂದಿದ್ದವರಿಗೆ ಆಶ್ಚರ್ಯವಾಗುತ್ತದೆ. ಸಾಮಾನ್ಯ ಮನುಷ್ಯಳಾದ ಆಕೆಗೆ ಈ ಮಟ್ಟಿನ ಸೊಕ್ಕು ಇರಲು ಸಾಧ್ಯವೇ ಅನ್ನಿಸುತ್ತದೆ ರಕ್ಷಣಾ ಮಂತ್ರಿಗೆ.

ನಿಂಬೆ ಗಿಡಗಳ ತೋಟದಾಕೆ ವಿಷಯವನ್ನು ಕೋರ್ಟಿಗೆ ತೆಗೆದುಕೊಂಡು ಹೋಗುವುದರಿಂದ ಅದಕ್ಕೆ ಅಗತ್ಯವಾದ ಸಕಲವನ್ನು ಕೊಟ್ಟಿರುತ್ತಾಳೆ. ಕೋರ್ಟಿನಲ್ಲಿ ಕೇಸಿನಲ್ಲಿ ವಿಚಾರಣೆಗೆ ತೆಗೆದುಕೊಂಡಾಗ ರಕ್ಷಣಾ ಮಂತ್ರಿಯ ಕಡೆಯವರು ಇದೊಂದು ಲೆಕ್ಕಕ್ಕಿಲ್ಲದ ಸಂಗತಿ ಎನ್ನುವಂತೆ ವಾದ ಮಾಡಿದರೆ, ಆಕೆಯ ಲಾಯರು ಆಡುತ್ತಿದ್ದ ಮಾತುಗಳಿಗಿಂತ ನಿಂಬೆ ಗಿಡಗಳನ್ನು ನೋಡಿಕೊಳ್ಳುತ್ತಿದ್ದ ತಾತ ಆಡುವ ಮಾತುಗಳನ್ನು ಕೇಳಿ ಇಡೀ ಕೋರ್ಟ್ ರೂಮಿನಲ್ಲಿದ್ದವರಿಗೆ ಬೆಳಕಿಗೆ ಮಿಂಚು ಹೊಳೆದಂತಾಗುತ್ತದೆ. ಬೆಳೆಗಳಿಗೆ, ಎಲೆ, ಹಣ್ಣುಗಳಿಗೆ ಮನುಷ್ಯರಿಗೆ ಇರುವಂತೆಯೇ ಮನಸ್ಸಿರುತ್ತದೆ. ಅವುಗಳಿಗೆ ಉಂಟಾಗುವ ನೋವು ಹರ್ಷ ಮುಂತಾದುವನ್ನು ಕಾಣಬೇಕಾದ ಅಗತ್ಯ ತಿಳಿಸುತ್ತಾನೆ. ಯಾವುದೇ ಬಗೆಯ ಸಿದ್ಧತೆ ಇರದ ಮುದುಕನೊಬ್ಬ ಈ ಬಗೆಯಲ್ಲಿ ಸಮಸ್ಯೆಯ ಮೂಲವನ್ನು ಪರಿಶೋಧಿಸುವುದನ್ನು ನೋಡಿ ಸಂಬಂಧಿಸಿದ ಎಲ್ಲರಿಗೂ ಆಶ್ಚರ್ಯ.

ತೀರ್ಪಿನಲ್ಲಿ ತಮಗೆ ನ್ಯಾಯ ಒದಗುವುದು ಖಂಡಿತ ಎಂದು ನಿಂಬೆ ಗಿಡಗಳ ತೋಟದಾಕೆ ಹಿಯಮ್‌ ತಾರಿಕ್‌, ಲಾಯರ್‌ ಜಿ಼ಯಾದ್‌ ಹರ್ಷದಿಂದ ಇರುತ್ತಾರೆ. ಆದರೆ ನ್ಯಾಯಾಧೀಶರು ಕೊಡುವ ತೀರ್ಪು ಆಕೆಯನ್ನು ದಿಗ್ಭ್ರಮೆಗೊಳಿಸುತ್ತದೆ. ಗಿಡಗಳನ್ನು ಕಡಿಯುವುದು ಸಮಂಜಸ ಎಂದು ಓದಿ ಹೇಳುತ್ತಿದ್ದಂತೆ ಆಕೆ ಅಸಮಾಧಾನ ವ್ಯಕ್ತಪಡಿಸಿ ಕೂಗಿಕೊಳ್ಳುತ್ತಾಳೆ. ಈ ನಡುವೆ ಲಾಯರ್‌ಗೆ ಅವಳ ವರ್ತನೆ, ಧೋರಣೆ ಇವುಗಳಿಂದ ಉಂಟಾದ ಆತ್ಮೀಯತೆ ಅನುರಾಗದ ಕಡೆ ಹೊರಳಿರುತ್ತದೆ.

ಇಡಿ ದೇಶದ ಗಮನ ಸೆಳೆಯುವಂತೆ ಮಾಡಿದ ಈ ಪ್ರಕರಣ ಅವಳ ಮಕ್ಕಳಿಗೂ ತಿಳಿಯುತ್ತದೆ. ಅಲ್ಲದೆ ಕೋರ್ಟಿನಲ್ಲಿ ನಡೆಯುತ್ತಿರುವುದು ಟೀವಿಯಲ್ಲಿ ಕೂಡ ಪ್ರಸಾರವಾಗುತ್ತಿರುತ್ತದೆ. ಮಗಳು ಇದ್ದಲ್ಲಿಂದಲೇ ವಾಯ್ಸ್ ಕಾಲ್ ಮೂಲಕ ತಾಯಿಯನ್ನು ಸಂಪರ್ಕಿಸುತ್ತಾಳೆ. ಅವಳು ತೀರಾ ಅಧೋಗತಿಗೆ ಇಳಿದಿರುವುದನ್ನು ಕಂಡು ನೊಂದುಕೊಳ್ಳುತ್ತಾಳೆ.

ನಿಂಬೆ ಗಿಡಗಳಾಕೆಗೆ ವಿಷಯವನ್ನು ಇಷ್ಟಕ್ಕೆ ಬಿಡುವ ಮನಸ್ಸಾಗುವುದಿಲ್ಲ. ಮುಂದೇನು ಎಂದು ಲಾಯರ್ ಕೇಳುವ ಮೊದಲೇ ಈ ತೀರ್ಪನ್ನು ವಿರೋಧಿಸಿ ಸುಪ್ರೀಂಕೋರ್ಟಿಗೆ ಹೋಗೋಣ ಎಂದು ತನ್ನ ನಿರ್ಧಾರದ ಮಾತುಗಳನ್ನು ಹೇಳುತ್ತಾಳೆ. ಅಲ್ಲಿಯೂ ಕೂಡ ಹೆಚ್ಚಿನದೇನನ್ನು ಅಪೇಕ್ಷಿಸುವಂತಿಲ್ಲ ಎಂದು ಹೇಳಿದರೂ ಅವಳಿಗೆ ಸುಮ್ಮನಿರಲು ಮನಸ್ಸಾಗುವುದಿಲ್ಲ. ಅದಕ್ಕೆ ಅವಳ ಪ್ರತಿಕ್ರಿಯೆ ಬೆಂಬಲಿಸುವಂತಿರುತ್ತದೆ. ಆದರೆ ಅಂತಿಮವಾಗಿ ಅವಳು ತನ್ನ ಅಭಿಲಾಷೆ ನಾಶವಾಗಿರುವುದನ್ನು ನೋಡಬೇಕಾಗುತ್ತದೆ.

ಚಿತ್ರದ ಯಶಸ್ಸಿಗೆ ಮುಖ್ಯವಾಗಿ ನಾಯಕಿ ಪಾತ್ರದ ಸಾಲ್ಮಾ ಜಿ಼ಡಾನಿ ಅವರ ಕೊಡುಗೆ ಅಮೂಲ್ಯ. ಅಂತೆಯೇ ಇತರ ಪಾತ್ರಗಳದು ಕೂಡ. ತಾಂತ್ರಿಕ ವಿಭಾಗದಲ್ಲಿ ಫೋಟೋಗ್ರಫಿ(ರೇನರ್‌ಕ್ಲಾಸ್‌ ಮಾನ್‌) ಮತ್ತು ಸಂಕಲನಕಾರ(ತೋವ ಆಸ್ಚರ್)ರ ಕೊಡುಗೆ ಬಹಳ ಉಪಯುಕ್ತವೆನಿಸುತ್ತದೆ.