ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ಜಗದ ವಿಸ್ಮಯಗಳ ಕುರಿತು ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಪ್ರವಾಸ ಲೇಖನ ಮಾಲೆಯ ಮೊದಲ ಬರಹ ಇಲ್ಲಿದೆ. 

ಮಾಯಾ ಮಾಯೆ…

ಮಾಯನ್ ಭಾಷೆಯಲ್ಲಿ “ಮಾಜಾ” ಎಂದು ಬರೆದು, ಜ ವನ್ನು ಹ ಎಂದು ಓದುವುದರಿಂದ, ಉಚ್ಚಾರದಲ್ಲಿ ಮಾಯಾ ಎಂದು ಕರೆಯುವ ಈ ಅದ್ಭುತ ಜನಾಂಗವೊಂದರ ಸಣ್ಣ ಕತೆಯಿದು. ಮಾಯಾ ಎಂದರೆ “ನೀರಿಲ್ಲದ ನಾಡಿನ ಜನರು” ಎಂದರ್ಥ! ಅದೇನು ಅವರು ನೀರೇ ಕುಡಿಯದ ಜನವೇ ಎಂದುಕೊಳ್ಳಬೇಡಿ. ಮಾಯಾ ನಾಗರೀಕತೆ ಹುಟ್ಟಿ ಬೆಳೆದ ಯುಕಾಟಾನ್ ಪ್ರದೇಶಲ್ಲಿ ಎಲ್ಲೂ ನದಿಗಳೇ ಇಲ್ಲ! ಎಲ್ಲವೂ ಅಂತರ್ಗತ ನೀರಿನ ಝರಿಗಳು, ಒರತೆಗಳು. ಸಂಪೂರ್ಣ ನದೀ ಸಮೂಹವೇ ಅಲ್ಲಿ ಅಂತರ್ಗತ! ಅಲ್ಲಲ್ಲಿ ಭೂಮಿ ಕುಸಿದು ಉಂಟಾದ ನೈಸರ್ಗಿಕ ಬಾವಿಗಳು, ಈ ಅಂತರ್ಜಲಕ್ಕೆ ದಾರಿ ತೋರುವ ಬಾಗಿಲುಗಳು. ಅಂತೆಯೇ ಯುಕಾಟಾನ್ ಕಾಡನ್ನು ನೀರಿಲ್ಲದ ನಾಡೆಂದು ಗುರುತಿಸಿಕೊಂಡು ತಮ್ಮನ್ನು ಹಾಗೆ ಕರೆದುಕೊಂಡರಿವರು. ಈ ಬಾವಿಗಳೆಲ್ಲ ಒಳಗೊಳಗೇ ಒಂದಕ್ಕೊಂದು ಹೆಣೆದುಕೊಂಡ ನದಿಯೊಳಗಿನ ರಂಗೋಲಿ ಚುಕ್ಕಿಗಳಂತೆ ಇಡೀ ಯುಕಾಟಾನ್ ಕಾಡಿನಲ್ಲಿ ಪಸರಿಸಿವೆ.

ನಮಗೆಲ್ಲ ಈಗಾಗಲೇ ತಿಳಿದಿರುವಂತೆ ಮಾಯಾ ನಾಗರೀಕತೆ ಜಗತ್ತಿನ ಅತ್ಯಂತ ಮುಂದುವರಿದ ನಾಗರೀಕತೆಗಳಲ್ಲೊಂದಾಗಿತ್ತು. ಸುವ್ಯವಸ್ಥಿತ ಗಣಿತ, ಸೌರಶಾಸ್ತ್ರ, ಆಕಾಶಕಾಯಗಳ ಚಲನೆ ಇತ್ಯಾದಿಗಳನ್ನು ಅಭ್ಯಸಿಸಿ ತಯಾರಿಸಿದ ವಿಸ್ತೃತ ಖಗೋಳಶಾಸ್ತ್ರದ ಜ್ಞಾನ ಭಂಡಾರವೇ ಮಾಯಾ ಜನರಲ್ಲಿತ್ತು. ಖಗೋಳವಿಜ್ಞಾನದ ಆಧುನಿಕ ಮತ್ತು ಕರಾರುವಕ್ಕಾದ ಜ್ಞಾನವನ್ನು ೮೦೦೦ ವರ್ಷಗಳಷ್ಟು ಮೊದಲೇ ಸಾಧಿಸಿದ ಸಮುದಾಯವದು. ಅವರ ಸೌರಮಾನ ಮತ್ತು ಚಾಂದ್ರಮಾನ ಕ್ಯಾಲೆಂಡರ್ ಅಥವಾ ಪಂಚಾಂಗ ಎಷ್ಟು ಕರಾರುವಕ್ಕಾಗಿತ್ತೆಂದರೆ ಇಂದಿಗೂ ವಿಜ್ಞಾನಿಗಳು ಅಚ್ಚರಿಪಡುವಂತಿವೆ. ಆದರೂ ಅವರು ಶಿಲಾಯುಗದ ಜನರು. ಅವರೆಂದೂ ಯಾವುದೇ ತರದ ಲೋಹಗಳನ್ನೇ ಬಳಸಿರಲಿಲ್ಲ! ಮನೆಗಳಿಂದ ಮೂಗುತಿಯವರೆಗೂ ಎಲ್ಲವೂ ಚಂದವಾಗಿ ಕೆತ್ತಿದ ಅಂದವಾಗಿ ಬಣ್ಣ ತುಂಬಿದ ಕಲ್ಲು, ಕಟ್ಟಿಗೆಯಲ್ಲಿ ತಯಾರಿಸಿದವುಗಳು. ಹದಿನಾಲ್ಕನೇ ಶತಮಾನದಲ್ಲಿ ಯೂರೋಪಿಯನ್ನರ ಆಗಮನದವರೆಗೂ ಅವರೆಂದೂ ಲೋಹವನ್ನು ಬಳಸಿಯೇ ಇರಲಿಲ್ಲ.

(ಮಾಯನ್‌ ಪಂಚಾಂಗ)

ಅವರ ವಾರದಲ್ಲಿ ೭ ದಿನಗಳಿದ್ದವು. ಅವರ ವರ್ಷ ೧೮ ತಿಂಗಳುಗಳಿಂದ ಕೂಡಿತ್ತು. ಪ್ರತಿ ತಿಂಗಳಿನಲ್ಲಿ ೨೦ ದಿನಗಳಿದ್ದವು. ಹಾಗೂ ೫ ತಿಂಗಳುಗಳಲ್ಲಿ ಒಂದೊಂದು ದಿನ ಹೆಚ್ಚು ಸೇರಿಸಲಾಗಿತ್ತು, ಅಂದರೆ ಅವರ ವರ್ಷದಲ್ಲಿ ಕರಾರುವಕ್ಕಾಗಿ ೩೬೫ ದಿನಗಳಿದ್ದವು! ಅವರ ಯುಗ ಎಂದರೆ ೫೧೨೬ ವರ್ಷಗಳು. ನಿಮಗೆ ನೆನಪಿದೆಯೋ ಇಲ್ಲವೋ, ಡಿಸೆಂಬರ್ ೨೧, ೨೦೧೨ರಲ್ಲಿ ಜಗತ್‌ಪ್ರಳಯವಂತೆ ಎಂಬ ಗುಲ್ಲೆದ್ದಿತ್ತು. ಕಂಡ ಕಂಡ ಕಂಡ ಪತ್ರಿಕೆಗಳೆಲ್ಲ ಇಲ್ಲದ್ದನ್ನೆಲ್ಲ ಹುಡುಕಿ ತಂದು ಹೆದರಿಸುತ್ತಿದ್ದವು. ಆ ಭಯ ಹುಟ್ಟಿದ್ದು ಮಾಯನ್ ಕ್ಯಾಲೆಂಡರಿನಿಂದ. ಯಾಕೆಂದರೆ ಆ ತಾರಿಖು ಮಾಯನ್ ಕ್ಯಾಲೆಂಡರಿನ ಪ್ರಕಾರ ಯುಗಾಂತ್ಯ. ಅಂದರೆ ಹೊಸಯುಗದ ಆರಂಭ! ೫೧೨೬ ವರ್ಷಗಳ ಹೊಸಯುಗ.

ಅಂದರೆ ಮೊದಲ ದಿನ, ಅಥವಾ ಡೇ ಜೀರೋ! ಅದು ಮಾಯನ್ ಕ್ಯಾಲೆಂಡರಿನ ಪದ್ಧತಿ ಬಗೆಹರಿಯದೆ ಹುಟ್ಟಿಕೊಂಡ ಪುಗಸಟ್ಟೆ ಭಯ. ಹಾಗೆ ನೋಡಿದರೆ ಅದು ಮಾಯನ್ ಸಂಕ್ರಾಂತಿ, ಅದ್ಭುತ ದಿನ. ಇಂದಿಗೂ ಪ್ರತಿ ಎಕ್ವಿನಾಕ್ಸ್ ದಿನ ಸೂರ್ಯನ ಕಿರಣ ಮಾಯಾ ಜನರ ಪ್ರತಿ ಪಿರಮಿಡ್ಡಿನ ತುದಿಯಲ್ಲಿ ಸ್ಪಷ್ಟವಾಗಿ ಕರಾರುವಕ್ಕಾಗಿ ಸೂರ್ಯ ಅದೇ ಸ್ಥಾನದಲ್ಲಿ ನಟ್ಟನಡುವಲ್ಲಿ ಕಾಣಿಸಿಕೊಳ್ಳುತ್ತಾನೆ! ಅದು ಮಾಯಾ ಜನರ ವಾಸ್ತುಶಿಲ್ಪಕ್ಕೂ ಖಗೋಳವಿಜ್ಞಾನಕ್ಕೂ ಇರುವ ಅವಿನಾಭಾವ ಕೊಂಡಿ.

ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ಧ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ.

(ಚಿಚೆನ್ ಇಟ್-ಸಾ)

ಈ ಕಟ್ಟಡಕ್ಕೆ ೯೧ ಮೆಟ್ಟಿಲುಗಳಿವೆ. ನಾಲ್ಕು ಬದಿಗಳಿರುವ ಈ ಗೋಪುರ ತನ್ನ ಪ್ರತಿಬದಿಯಲ್ಲೂ ೯೧ ಮೆಟ್ಟಿಲುಗಳನ್ನು ಒಳಗೊಂಡಿದೆ. ಮೇಲೆ ತುದಿಯಲ್ಲಿ ಒಂದು ಮೆಟ್ಟಿಲು. ಅಂದರೆ ೯೧*೪ = ೩೬೪ ಮತ್ತು ಮೇಲಿನ ಒಂದು ಸೇರಿ ಒಟ್ಟೂ ೩೬೫ ಮೆಟ್ಟಿಲುಗಳು ವಾರ್ಷಿಕ ಕ್ಯಾಲೆಂಡರ್ ಅನ್ನು ಸಂಕೇತಿಸುತ್ತವೆ. ಈ ಗೋಪುರಕ್ಕೆ ೯ ಹಂತಗಳಿವೆ. ಅಂದರೆ ವರ್ಷದಲ್ಲಿ ಬರುವ ೨ ಸಂಕ್ರಾಂತಿಗಳನ್ನು ಇವು ಪ್ರತಿನಿಧಿಸುತ್ತವೆ. ಯಾಕೆಂದರೆ ನೆನಪಿರಲಿ, ಅವರ ಕ್ಯಾಲೆಂಡರಿನಲ್ಲಿ ವರ್ಷಕ್ಕೆ ೧೮ ತಿಂಗಳು! ಹಾಗಾಗಿ ೯ ತಿಂಗಳಿಗೊಮ್ಮೆ ಸಂಕ್ರಾಂತಿ ಅಥವಾ ಇಕ್ವಿನಾಕ್ಸ್.

ಈ ಪಿರಾಮಿಡಿನಾ ಹೊಟ್ಟೆಯೊಳಗೆ ಇನ್ನೊಂದು ಪಿರಾಮಿಡ್ ಇದೆ. ಆ ಕಟ್ಟಡಕ್ಕೆ ಒಟ್ಟೂ ೨೬೦ ಮೆಟ್ಟಿಲುಗಳಿವೆ. ಅದು ಚಾಂದ್ರಮಾನ ಕ್ಯಾಲೆಂಡರ್! ಈ ಚಾಂದ್ರಮಾನ ಕ್ಯಾಲೆಂಡರ್ ಅವರಲ್ಲಿ ಬಹು ಪವಿತ್ರವಾದ ಕ್ಯಾಲೆಂಡರ್. ಹಬ್ಬ ಹರಿದಿನಗಳೆಲ್ಲ ಚಾಂದ್ರಮಾನ ಕ್ಯಾಲೆಂಡರನ್ನು ಆಧರಿಸಿ ನಡೆಯುತ್ತಿದ್ದವು. ವ್ಯವಸಾಯವೇ ಬಹುಮುಖ್ಯ ಅಂಗವಾಗಿದ್ದ ಮಾಯನ್ ನಾಗರೀಕತೆಗೆ ಈ ಇಡೀ ಚಿಚೆನ್ ಇಟ್-ಸಾ ಕಟ್ಟಡವೆಂದರೆ ಒಂದು ಕ್ಯಾಲೆಂಡರ್. ಸೂರ್ಯನ ಪ್ರತಿ ಗತಿಯನ್ನೋ, ನಡೆಯನ್ನೋ, ಅದು ಬೀರುವ ನೆರಳಿನ ಆಧಾರದ ಮೇಲೆ ಯಾವ ಮೆಟ್ಟಿಲಿನ ಮೇಲೆ ಯಾವ ದಿಕ್ಕಿನಲ್ಲಿ ಹೇಗೆ ಬೀಳುತ್ತಿದೆ ಎಂಬೆಲ್ಲ ಲೆಕ್ಕಾಚಾರದಲ್ಲಿ ಕಟ್ಟಿದ ಈ ಕಟ್ಟಡ ಇಂದಿಗೂ ಮಾನವ ವಿಕಾಸಕ್ಕೆ ಒಂದು ಸವಾಲು.

ಅವರ ಸೌರಮಾನ ಮತ್ತು ಚಾಂದ್ರಮಾನ ಕ್ಯಾಲೆಂಡರ್ ಅಥವಾ ಪಂಚಾಂಗ ಎಷ್ಟು ಕರಾರುವಾಕ್ಕಾಗಿತ್ತೆಂದರೆ ಇಂದಿಗೂ ವಿಜ್ಞಾನಿಗಳು ಅಚ್ಚರಿಪಡುವಂತಿವೆ. ಆದರೂ ಅವರು ಶಿಲಾಯುಗದ ಜನರು. ಅವರೆಂದೂ ಯಾವುದೇ ತರದ ಲೋಹಗಳನ್ನೇ ಬಳಸಿರಲಿಲ್ಲ! ಮನೆಗಳಿಂದ ಮೂಗುತಿಯವರೆಗೂ ಎಲ್ಲವೂ ಚಂದವಾಗಿ ಕೆತ್ತಿದ ಅಂದವಾಗಿ ಬಣ್ಣ ತುಂಬಿದ ಕಲ್ಲು, ಕಟ್ಟಿಗೆಯಲ್ಲಿ ತಯಾರಿಸಿದವುಗಳು.

ಕುತೂಹಲಕಾರಿ ಸಂಗತಿಯೆಂದರೆ ಅವರ ವಾರದ ೭ ದಿನಗಳೂ ಕೂಡ ಭಾರತೀಯ ಪಂಚಾಂಗದಂತೆ ಆಕಾಶಕಾಯಗಳನ್ನು ಆಧರಿಸಿದ ಹೆಸರಿನವುಗಳು. ಅವರಲ್ಲೂ ಮಗು ಹುಟ್ಟಿದಾಗ ಜಾತಕ ತಯಾರಿಸುವ ಪದ್ಧತಿಯಿತ್ತು. ಅವು ಮತ್ತೇನೂ ಅಲ್ಲ, ನಮ್ಮಲ್ಲಿಯಂತೆಯೇ, ಮಗು ಹುಟ್ಟಿದ ಸಮಯದಲ್ಲಿ ಯಾವಯಾವ ಗ್ರಹ ನಕ್ಷತ್ರಗಳು ಯಾವ ಯಾವ ಸ್ಥಾನದಲ್ಲಿದ್ದವು ಎಂದು ವಿವರಿಸುವ ವಿಸ್ತೃತ ಚಿತ್ರದ ನಕ್ಷೆ. ನಮ್ಮ ಜಾತಕದಂತೆಯೇ ಕಾಣುವ ಆಯತಾಕಾರದ ಖಗೋಳ ನಕ್ಷೆ. ಈ ಆಕಾಶ ಕಾಯಗಳು ಮಗುವಿನ ವಿದ್ಯೆ, ಬುದ್ಧಿ, ನಡವಳಿಕೆ, ಪ್ರಗತಿ ಇತ್ಯಾದಿಗಳ ಮೇಲೆ ಪ್ರಭಾವ ಬೀರುವುದೆಂದು ಅವರೂ ನಂಬಿದ್ದರು. ಆಗಲೇ ಕಾಗದ ತಯಾರಿಕೆಯ ವಿದ್ಯೆ ಅವರಿಗೆ ಗೊತ್ತಿತ್ತು. ಮರದ ಹೊಟ್ಟಿನಿಂದ ಕಾಗದ ತಯಾರಿಸಿ ಅದರ ಮೇಲೆ ಈ ಜಾತಕಗಳನ್ನು ಬರೆದಿಡುತ್ತಿದ್ದರು. ಅವರ ಶಿಲಾಶಾಸನಗಳೂ ಕೂಡ ಸಂಕೀರ್ಣವಾಗಿ ರೂಪುಗೊಂಡ ಚಿತ್ರಲಿಪಿಯಲ್ಲಿವೆ.

ಭಾರತೀಯ ನಾಗರಿಕತೆಯ ಪುರಾತನ ಖಗೋಳಶಾಸ್ತ್ರದ ಬೆಳವಣಿಗೆಗೂ ಮಾಯನ್ನರ ವಿಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ. ಇವೆರಡೂ ಜಗತ್ತಿನ ಬೇರೆ ಬೇರೆ ಭಾಗಗಲ್ಲಿ ಬಹುತೇಕ ಒಂದೇ ಸಮಯದಲ್ಲಿ ಸ್ಪಷ್ಟವಾಗಿ ಬೆಳವಣಿಗೆ ಹೊಂದಿದ ಸ್ವತಂತ್ರ ಜ್ಞಾನ, ಆದರೂ ಎಂಥ ಸಾಮ್ಯತೆ!

ಸುಮಾರು ೨೫ ಸಾವಿರ ವರ್ಷಗಳ ಹಿಂದೆ ಕೊನೆಯ ಹಿಮಯುಗದ ಅಂಚಿನಲ್ಲಿ ಸೈಬೀರಿಯಾದಿಂದ ಹೊರಟ ಸಮುದಾಯ ಅಲಾಸ್ಕ ದಾಟಿ ಇಂದು ಬೇರಿಂಗ್ ಸಮುದ್ರದಡಿಗೆ ಹುದುಗಿರುವ ನೆಲದ ಮೂಲಕ ಉತ್ತರ ಅಮೇರಿಕಾಗೂ ಮುಂದೆ ಹಾಗೆ ಸಾಗುತ್ತ ದಕ್ಷಿಣ ಅಮೆರಿಕಕ್ಕೂ ಸಾಗಿ ಅಲ್ಲಲ್ಲಿ ನೆಲೆಗೊಳ್ಳುತ್ತ ಹೋಯಿತು. ಹಾಗೆ ಸಾಗಿ ಬಂದ ಜನರ ತುಣುಕೊಂದು ಯುಕಾಟಾನ್ ಪ್ರದೇಶದಲ್ಲಿ ಮಾಯಾ ನಾಗರೀಕತೆಯಾಗಿ ರೂಪುಗೊಂಡಿತು. ತನ್ನದೇ ಆದ ಜ್ಞಾನ, ವಿಜ್ಞಾನವನ್ನೂ ಸಾಮಾಜಿಕ ವ್ಯವಸ್ಥೆಯನ್ನೂ ಬೆಳೆಸಿಕೊಳ್ಳುತ್ತಾ ಬಂದಿತು. ಮಾಯನ್ ಸಮಾಜಕೂಡ ಶ್ರೇಣೀಕೃತ ಸಮಾಜವಾಗಿತ್ತು. ಅವರ ಸಮಾಜದಲ್ಲಿ ನಿರ್ದಿಷ್ಟ ಕಸುಬುಗಳಿದ್ದವು. ಆಯಾಜನರು ಆಯಾ ಕಸುಬುಗಳಿಗೆ ನಿಯುಕ್ತರಾಗಿದ್ದರು. ವ್ಯವಸಾಯ ಬಹುಮುಖ್ಯ ಅಂಗವಾಗಿತ್ತು. ಆದರೂ ಅದು ಕೆಳವರ್ಗ. ರೈತವರ್ಗಕ್ಕೆ ಉನ್ನತ ಶಿಕ್ಷಣದ ಆಸ್ಪದವಿರಲಿಲ್ಲ. ಉನ್ನತ ವರ್ಗಗಳಿಗಲ್ಲದೆ ಖಗೋಳಜ್ಞಾನವನ್ನು ಹೊಂದುವ, ಕಲಿಯುವ ಅವಕಾಶ ಇತರ ವರ್ಗಗಳಿಗಿರಲಿಲ್ಲ. ರಾಜವರ್ಗ ಅಥವಾ ಶ್ರೀಮಂತ ವರ್ಗ ವಿದ್ಯೆಯನ್ನು, ಜ್ಞಾನವನ್ನು ವ್ಯವಸ್ಥಿತವಾಗಿ ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು. ಕೆಳವರ್ಗದ ಶೋಷಣೆಗೆ ನರಬಲಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿತ್ತು. ನರಬಲಿ ಹೋಗುವುದೆಂದರೆ ಅದೊಂದು ವೀರಮರಣ ಎಂಬ ಕಲ್ಪನೆ ಜನರಲ್ಲಿತ್ತು. ನರಬಲಿಗಾಗಿ ಒಂದು ವಿಶೇಷ ಪ್ರಾಂಗಣದ ವ್ಯವಸ್ಥೆಯಿತ್ತು. ಅದೊಂದು ವಿಧಿವತ್ತಾದ ಆಚರಣೆಯಾಗಿತ್ತು. ಹಾಗಾಗಿ ಈ ನರಬಲಿ ಎಂಬುದಕ್ಕೆ ಎಲ್ಲರೂ ಆಯ್ಕೆಯಾಗುತ್ತಿರಲಿಲ್ಲ. ಈ ನಿಯಮಗಳನ್ನೇ ಬಳಸಿಕೊಂಡು, ಬಹಳಷ್ಟು ತಾಯಂದಿರು ತಮ್ಮ ಎಳೆ ಶಿಶುಗಳ ತಲೆಯನ್ನು ಕಟ್ಟಿಗೆ ರೀಪುಗಳಂತ ಅಟ್ಟೆಕಟ್ಟಿ ಒತ್ತಿ ಚೂಪಾಗಿಸಿಬಿಡುತ್ತಿದ್ದರು. ಕನಿಷ್ಠ ಒಂದು ಮಗುವನ್ನಾದರೂ ಮನೆಯಲ್ಲಿ ಹೀಗೆ ತಲೆ ಸೊಟ್ಟಗಾಗಿಸುವ ರೂಢಿ ಮಾಡಿಕೊಂಡರು. ದೈಹಿಕ ಊನವಿದ್ದವರ ನರಬಲಿ ಕೊಟ್ಟರೆ ಅದು ದೇವರಿಗೆ ಅಪಚಾರ. ಹಾಗಾಗಿ ಮುಂದೊಂದು ದಿನ ಈ ಗುಂಡಾಗಿಲ್ಲದ ತಲೆಯ ಮಕ್ಕಳು ಗಟ್ಟಿಮುಟ್ಟಾಗಿ ಬೆಳೆದರೂ ಬಚಾವಾಗಿ ಉಳಿದುಕೊಳ್ಳುತ್ತಿದ್ದರು.

(ಚಾಕ್-ಮೂಲ್)

ನರಬಲಿಯ ರಕ್ತ ಸಂಗ್ರಹಿಸಲು ಕೈಯಲ್ಲೊಂದು ಚಿಕ್ಕ ಪಾತ್ರೆಯನ್ನು ಹಿಡಿದುಕೊಂಡ, ಹಸಿರು ಜೇಡ್ ಕಲ್ಲಿನ ಕಣ್ಣುಗಳ ಮನುಷ್ಯ ಮುಖದ ಚಿರತೆಯ ಮೂರ್ತಿ “ಚಾಕ್-ಮೂಲ್” ಇವರ ಪವಿತ್ರ ದೇವತೆಗಳಲ್ಲೊಂದು. ಚಿಚೆನ್ ಇಟ್ಜ್ಯಾದ ಗರ್ಭಗುಡಿಯಲ್ಲೂ ಇದರ ಮೂರ್ತಿಯೊಂದಿದೆ ಎಂದು ಆರ್ಕಿಯಾಲಜಿ ಮೂಲಗಳು ಹೇಳುತ್ತವೆ.

ಒಟ್ಟಿನಲ್ಲಿ ಮಾನವಿಕಾಸವೇ ಯಾಕೆ ಹೀಗೆ ಎಲ್ಲಿ ಹೋದರೂ ಹೀಗೆ ವರ್ಗ ವ್ಯವಸ್ಥೆ? ಮನುಷ್ಯ ಮೂಲದಲ್ಲೋ ಇಂದಿಗೂ ಸದಾ ತನ್ನ ಹಿತವೊಂದನ್ನೇ ಬಯಸುವ ಅದಕ್ಕಾಗಿಯೇ ಸಮಾಜ ಕಟ್ಟಿಕೊಳ್ಳುವ ಸಮಾಜಜೀವಿಯೇ? ಅಂದರೆ ಆತ ನಿಜಕ್ಕೂ ಸಮಾಜ ಜೀವಿಯಲ್ಲ, ಸ್ವಾರ್ಥಿ ಅಷ್ಟೇ. ತನ್ನ ಸ್ವಾರ್ಥಕ್ಕಾಗಿಯೇ ನಾಗರೀಕತೆ ನಿರ್ಮಿಸಿದ, ಬೆಳೆಸಿದ. ಅಂದಿನಿಂದ ಇಂದಿಗೂ ಸಕಲ ಜ್ಞಾನಗಳೆಲ್ಲದರ ಹಿಂದಿರುವುದು ಮನುಷ್ಯನ ಕೌತುಕ ಮತ್ತು ಕ್ರೌರ್ಯ.

ಅಂತ ಅನೂಹ್ಯ ವಾಸ್ತುಶಿಲ್ಪವೊಂದು ಆಕಾಶದೆತ್ತರ ಕಣ್ಮುಂದೆ ಹರಡಿಕೊಂಡ ಆ ಭವ್ಯ ಸೌಂದರ್ಯ ತನ್ನ ಒಡಲ ಕ್ರೌರ್ಯವನ್ನು ತೆರೆದಿಡುವಾಗ ಆ ಅದ್ಭುತ ಮಾನವ ನಿರ್ಮಾಣಕ್ಕೆ ಬೆರಗುವುದೋ ಮರುಗುವುದೋ ತಿಳಿಯದೆ ಚಿಚೆನ್ ಇಟ್ಜ್ಆ ಸದಾ ಕಾಡುವ ಸೌಧವಾಗಿ ಮನದಲ್ಲಿ ಉಳಿಯುವುದಂತೂ ನಿಜ.