ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡಿರಬೇಕಾಗಿತ್ತು. ಜೊತೆಗೆ ವೇಷ ಮರೆಸಿಕೊಂಡಿದ್ದೆ. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇರಾನ್‌ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ

ಅದು 2001ರ ಕಾನ್ ಚಲನಚಿತ್ರೋತ್ಸವ. ಅದರಲ್ಲಿ ಭಾಗವಹಿಸಿದ ದೃಶ್ಯ ಮಾಧ್ಯಮದ ಬೆಳವಣಿಗೆಯೆ ಬಗ್ಗೆ ಆಸಕ್ತಿ ಹೊಂದಿದ್ದ ಸೂಕ್ಷ್ಮ ಮನಸ್ಸಿನವರಿಗೆ ಆಶ್ಚರ್ಯವಾಗುವಂತೆ ಇರಾನಿನ ಮೊಹಿಸಿನ್ ಮಕ್ಬಲ್‌ಬಫ್‌ನ ಆಫ್ಘಾನಿಸ್ತಾನದ ಜನರ ದಾರುಣ ಪರಿಸ್ಥಿತಿಯನ್ನು ಕುರಿತ 85 ನಿಮಿಷಗಳ ಕಾಂದಹಾರ್ ಚಿತ್ರಕ್ಕೆ ಲೋಕವ್ಯಾಪಿ ಸಂಗತಿ [ಎಕ್ಯುಮೆನಿಕಲ್] ಎಂಬ ನಾಮಕಾವಾಸ್ತೆ ಪ್ರಶಸ್ತಿಯನ್ನು ಮಾತ್ರ ನೀಡಲಾಯಿತು. ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಇಂತಹ ಪ್ರಸಂಗ ನಡೆದಿರುವುದು ಇದೇ ಮೊದಲಲ್ಲ ಮತ್ತು ಇದೊಂದೇ ಕ್ಷೇತ್ರವಲ್ಲ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಉದಾಹರಣಗೆ ತನ್ನ ಕೃತಿಗಳಿಂದ ಇಡೀ ಸಾಹಿತ್ಯ ಪ್ರಪಂಚಕ್ಕೇ ಬೆರಗು ಮೂಡಿಸಿದ ಅರ್ಜಂಟೀನಾದ ಮಹಾನ್ ಲೇಖಕ ಯೋರ್ಹ್ ಲೂಯಿ ಬೋರ್ಹೆಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲವಲ್ಲ, ಹಾಗೆ.

(ಮೊಹಿಸಿನ್ ಮಕ್ಬಲ್‌ಬಫ್)

ಮೊಹಿಸಿನ್ ಮಕ್ಬಲ್‌ಬಫ್ ʻಕಾಂದಹಾರ್ʼ ಚಿತ್ರವನ್ನು ತಯಾರಿಸಿದ್ದು ಅಮೆರಿಕದಲ್ಲಿ ನಡೆದ 2001ರ ಸೆಪ್ಟೆಂಬರ್ 11ರ ಘಟನೆಗೂ ಮೊದಲು. ಆಗ ಆಫ್ಘಾನಿಸ್ತಾನ ತಾಲಿಬಾನ್‌ರ ಕೈಯಲ್ಲಿತ್ತು.(ಈಗ ಮತ್ತೆ ಅವರ ಕೈಯಲ್ಲಿದೆ) ಮಕ್ಬಲ್‌ಬಫ್ ಹೇಳುವಂತೆ ಆಗ ಅಮೆರಿಕದವರಿಗಷ್ಟೇ ಏಕೆ, ಇಡೀ ಪ್ರಪಂಚಕ್ಕೇ ಆ ದೇಶದ ಜನರ ಸ್ಥಿತಿಗತಿಯ ಬಗ್ಗೆ ಇರಲಿ ಅದರ ಅಸ್ತಿತ್ವದ ಬಗ್ಗೆಯೇ ಗಮನವಿರಲಿಲ್ಲ. ಹೀಗಾಗಿ ಆ ದೇಶದವರ ದಯನೀಯ ಪರಿಸ್ಥಿತಿಯನ್ನು ಬಿಂಬಿಸುವ ಚಿತ್ರ ಚಿತ್ರೋತ್ಸವದ ಜ್ಯೂರಿಯ ಮೇಲೆ ಪ್ರಭಾವ ಬೀರಲಿಲ್ಲ.

1957ರಲ್ಲಿ ಬಡತನ ಕಿತ್ತು ತಿನ್ನುತ್ತಿದ್ದ ಕುಟುಂಬದಲ್ಲಿ ಹುಟ್ಟಿದ ಮೊಹಿಸಿನ್ ಮಕ್ಬಲ್‌ಬಫ್ ಎಂಟನೇ ವರ್ಷದಿಂದ ದುಡಿಮೆಗೆ ತೊಡಗಿ ತನ್ನ ತಾಯಿಯ ಬೆಂಬಲಕ್ಕೆ ನಿಂತ. ಹದಿನೇಳನೆ ವರ್ಷದ ತನಕ ಹದಿಮೂರು ಕೆಲಸ ಮಾಡಿದ ಅವನು ಉಗ್ರರ ಸಂಘಟನೆಯಲ್ಲಿ ಸೇರಿಕೊಂಡ. ಅಲ್ಲಿ ಪೋಲೀಸನೊಬ್ಬನಿಗೆ ಗುಂಡು ಹಾಕಿದ್ದಕ್ಕೆ ನಾಲ್ಕೂವರೆ ವರ್ಷದ ಕಾಲ ಜೈಲು ಶಿಕ್ಷೆ ಅನುಭವಿಸಿ ಇರಾನಿನಲ್ಲಿ ನಡೆದ ಕ್ರಾಂತಿಯ ನಂತರ ಬಿಡುಗಡೆ ಹೊಂದಿದ. ಜೈಲಿನಲ್ಲಿದ್ದಾಗ ಅವನು ಸಾಹಿತ್ಯ, ಸಿನಿಮಾ, ಸಮಾಜ ಶಾಸ್ತ್ರ ಮತ್ತು ತನ್ನ ದೇಶದ ಬಗ್ಗೆ ನಡೆಸಿದ ಆಳವಾದ ಅಭ್ಯಾಸ ಅವನ ಒಳಗಣ್ಣನ್ನು ತೆರೆಯಿಸಿತು. ಅನಂತರ ರಾಕ್ಷಸನಂತೆ ಸೃಷ್ಟಿಕ್ರಿಯೆಯಲ್ಲಿ ತೊಡಗಿದ. ಕಾದಂಬರಿ, ಕಥಾ ಸಂಕಲನ, ಚಿತ್ರಕಥೆ ಮುಂತಾದ ಇಪ್ಪತ್ತೇಳು ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಪ್ರಪಂಚದ ಹನ್ನೆರಡು ಭಾಷೆಗಳಿಗೆ ಅನುವಾದವಾಗಿವೆ. ಇರಾನಿನ ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯ ಇವುಗಳ ಕುರಿತು ಅನೇಕ ಯೋಜನೆಗಳನ್ನು ಕೈಗೊಂಡು ಪೂರೈಸಿದ. 1994ರಲ್ಲಿ ತನ್ನ ʻಟೈಮ್ ಆಫ್ ಲವ್’ ಮತ್ತು ʻಸಲಾಮ್’ ಸಿನಿಮಾ ಚಿತ್ರಗಳೊಂದಿಗೆ ಕಾನ್ ಚಿತ್ರೋತ್ಸವವನ್ನು ಪ್ರವೇಶಿಸಿದ. 1996ರಲ್ಲಿ ಮಕ್ಬಲ್‌ಬಫ್ ಫಿಲ್ಮ್ ಇನ್‌ಸ್ಟಿಟೂಟ್ ಪ್ರಾರಂಭಿಸಿದ. ಸಾಮಾನ್ಯವಾಗಿ ಅವನ ಚಿತ್ರಗಳಲ್ಲಿ ತಮ್ಮ ಹಿಂದಿನ ಆಲೋಚನೆಗಳಿಂದ ಭ್ರಮನಿರಸನ ಹೊಂದಿದವರು, ಸಮಾಜ ಅಥವಾ ವ್ಯಕ್ತಿಗಳಿಂದ ಶೋಷಣೆಗೆ ಒಳಗಾದವರು ಪ್ರಮುಖ ಪಾತ್ರ ವಹಿಸಿರುವುದನ್ನು ಹೆಚ್ಚಾಗಿ ಕಾಣಬಹುದು.

ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡಿರಬೇಕಾಗಿತ್ತು. ಜೊತೆಗೆ ವೇಷ ಮರೆಸಿಕೊಂಡಿದ್ದೆ. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು. ಇದಕ್ಕಾಗಿ ಸ್ಥಳೀಯರ ಅದರಲ್ಲೂ ಹೆಂಗಸರ ಮನವೊಲಿಸುವ ಕೆಲಸ ಕಷ್ಟಕರವಾಗಿತ್ತು. ಅವರಿಗೆ ಚಿತ್ರೀಕರಣದ ವಾತಾವರಣವೇ ಹೊಸದು. ಕೇವಲ ಕುತೂಹಲ ಮತ್ತು ಮಾನವ ಸಹಜವಾದ ಆಸೆಯಿದ್ದರೂ ಜೀವ ಭಯದಿಂದ ಹಿಂಜರಿಯುತ್ತಿದ್ದರು ಎಂದು ಅವನೇ ಹೇಳಿದ್ದಾನೆ. ವಿದ್ಯುಚ್ಛಕ್ತಿ ಇರದ ಆ ಪ್ರದೇಶದಲ್ಲಿ ಚಿತ್ರೀಕರಣದ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.

2001ರಲ್ಲಿ ಕಾನ್ ಚಲನ ಚಿತ್ರೋತ್ಸವದಲ್ಲಿ `ಕಾಂದಹಾರ್’ ಚಿತ್ರವನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಮಕ್ಬಲ್‌ಬಫ್ ನಲವತೈದು ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಿದ. ಅದರಲ್ಲಿ ಅವನು, “ಅಲ್ಲಿನ ಜಗತ್‌ಪ್ರಸಿದ್ಧ ಬುದ್ಧನ ವಿಗ್ರಹವನ್ನು ಕೆಡವಲಿಲ್ಲ. ಅದು ನಾಚಿಕೆಯಿಂದ ತಾನೆ ಉರುಳಿಬಿತ್ತು, ಆಫ್ಘಾನಿಸ್ತಾನ ಸಕಲ ರೀತಿಯಿಂದಲೂ ಹಿಂದುಳಿದ ದೇಶ. ಧಾರ್ಮಿಕ, ಮೂಢ ನಂಬಿಕೆ, ಸ್ಮಗ್ಲಿಂಗ್, ಬರಡು-ಬರಗಾಲಗಳಿಗೆ ಪ್ರಸಿದ್ಧ. ರಷ್ಯದ ವಿರುದ್ಧ ನಡೆದ ಯುದ್ಧದ ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿ ನೆಲ ಕಚ್ಚಿದೆ. ಅಲ್ಲಿನ ಸುಮಾರು ಆರು ಮಿಲಿಯನ್ ಜನರು ದೇಶ ಬಿಟ್ಟು ಹೋಗಿದ್ದಾರೆ, ಹತ್ತು ಮಿಲಿಯನ್ ಹೆಂಗಸರು ಕಾಣೆಯಾಗಿದ್ದಾರೆ ಮತ್ತು ಅಲ್ಲಿರುವ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿಲ್ಲ. ನೀವು ಈ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಅಲ್ಲಿ ಹದಿನಾಲ್ಕು ಜನ ಸತ್ತಿರುತ್ತಾರೆ ಮತ್ತು ಅರವತ್ತು ಜನ ದೇಶ ತೊರೆದು ಹೋಗಿ ಪರದೇಶದಲ್ಲಿ ನಿರಾಶ್ರಿತರಾಗಿರುತ್ತಾರೆ…” ಎಂದು ವಿವರಿಸಿದ್ದಾನೆ.

ಪ್ರಪಂಚದ ಅನೇಕ ನಿರ್ದೇಶಕರಂತೆ ಮಕ್ಬಲ್‌ಬಫ್ ಒಂದೇ ವಿಷಯ, ವಸ್ತುವನ್ನು ಅನೇಕ ರೀತಿಗಳಲ್ಲಿ ಹೇಳುವ ಗುಂಪಿಗೆ ಸೇರುವುದಿಲ್ಲ. ಅವನು ಸುಮಾರು ಮೂವತ್ತು ವರ್ಷದ ಅಂತರದಲ್ಲಿ ತನ್ನ ದೇಶದಲ್ಲಿ ಬದಲಾದ ರಾಜಕೀಯ ಸ್ಥಿತಿಗಳಿಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ. ಇದನ್ನು ಅವನು ದೇಶದ ಹೊರಗಿದ್ದು ನಿರ್ವಹಿಸುವುದಿಲ್ಲ. 1979ರ ಕ್ರಾಂತಿಗೆ ಮುಂಚೆ, ಕ್ರಾಂತಿಯಲ್ಲಿ ಮತ್ತು ಅನಂತರದ ಅಲ್ಲಿನ ಆಗುಹೋಗುಗಳಲ್ಲಿ ಭಾಗವಹಿಸುತ್ತಲೇ ವಿವಣಾತ್ಮಕವಾಗಿಯಲ್ಲದೆ ವಿಶ್ಲೇಷಣಾತ್ಮಕವಾಗಿ ನಿಭಾಯಿಸುತ್ತಾನೆ. ಇದನ್ನೇ ಅವನು ಅಲ್ಲಿ ಸಾಮಾಜಿಕ ಸ್ಥಿತ್ಯಂತರಗಳಿಗೂ ಅನ್ವಯಿಸುತ್ತಾನೆ. ಈಗ ಹೊರಗಿದ್ದು ಸುಧಾರಣೆಗಳಿಗೆ ಶ್ರಮಿಸುತ್ತಿದ್ದಾನೆ. ಇವಲ್ಲದೆ ಅವನಿಗೆ ಜನಾಂಗೀಯ ಸಂಸ್ಕೃತಿಗೆ ಸಂಬಂಧಿದ ವಿಷಯಗಳ ಬಗ್ಗೆಯೂ ಆಸಕ್ತಿ. ಇದನ್ನು ಅವನು ಸಾಂಪ್ರದಾಯಿಕ ರಗ್(ಹೊದಿಕೆ)ಯನ್ನು ಕುರಿತ ಚಿತ್ರ 1995ರ `ಗಬ್ಬಾ’ದಲ್ಲಿ ಕಾಣಬಹುದು. 1956ರ ಹೆರ್ಮನ್ ಮೆಲ್ವಿಲ್ಲೆ ಕಾದಂಬರಿ ಆಧಾರಿತ ಅದೇ ಹೆಸರಿನ ಜಾನ್ ಹಸ್ಟನ್ ನಿರ್ದೇಶನದ `ಮಾಬಿ ಡಿಕ್’ ನೆನಪಿಸುವ ಈ ಚಿತ್ರದಲ್ಲಿ ಹಲವಾರು ಬಣ್ಣಗಳ ವಿನ್ಯಾಸವುಳ್ಳ ಮತ್ತು ಪ್ರತಿ ಬಣ್ಣದ ಹರಹಿಗೂ ಲಯಗಾರಿಕೆಯಿರುವ ಅದನ್ನು ತಯಾರಿಸುವ ಬಗೆ ಹೇಗೆ ಎನ್ನುವುದಲ್ಲದೆ ವಯಸ್ಸಾದ ದಂಪತಿ ರಗ್‌ನ ಹೊಂದಿರುವ ಭಾವನಾತ್ಮಕ ರೀತಿ ಹಾಗೂ ಅದರೊಂದಿಗೆ ತಳಕು ಹಾಕಿಕೊಂಡಿರುವ ಅನೇಕ ಕಥೆಗಳು ಗೋಚರಿಸುತ್ತವೆ. ಒಟ್ಟಾರೆಯಾಗಿ ಸಾಂಸ್ಕೃತಿಕ ಕಣಜವೊಂದು ತೆರೆದುಕೊಳ್ಳುತ್ತದೆ. ಈ ಚಿತ್ರ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದರೆ ಅದೇ ವರ್ಷ ʻಎ ಮೊಮೆಂಟ್ ಆಫ್ ಇನ್ನೊಸೆನ್ಸ್’ ಚಿತ್ರ ಲೊಕಾರ‍್ನೊ ಚಿತ್ರೋತ್ಸವದಲ್ಲಿ ಭಾಗವಹಿಸಿತ್ತು.

ಮಕ್ಬಲ್‌ಬಫ್ ಆಫ್ಘಾನಿಸ್ತಾನವನ್ನು ಕುರಿತು ತಯಾರಿಸಿರುವ ಚಿತ್ರ ಇದೊಂದೇ ಅಲ್ಲ. ಅವನಲ್ಲಿ ಅದರ ಬಗ್ಗೆ ತೀವ್ರ ಕಾಳಜಿ ಉಂಟಾದದ್ದು ʻಸೈಕ್ಲಿಸ್ಟ್ʼ ಎಂಬ ಚಲನಚಿತ್ರವನ್ನು ನಿರ್ಮಿಸಿದಾಗ. ಆಫ್ಘನ್ ನಿರಾಶ್ರಿತನೊಬ್ಬ ತನ್ನ ಹೆಂಡತಿಯ ವೈದ್ಯಕೀಯ ಖರ್ಚಿಗೆ ತಗಲುವ ಹಣದ ಸಂಪಾದನೆಗಾಗಿ ಭಾರಿ ವೃತ್ತವೊಂದರಲ್ಲಿ ಹಗಲಿರುಳೆನ್ನದೆ ಸೈಕಲ್ ತುಳಿಯುವ ಮನಕರಗುವ ವಸ್ತುವನ್ನು ಹೊಂದಿದ ಆ ಚಿತ್ರ ಅನೇಕ ಬಗೆಯ ಹರ್ಷೋದ್ಗಾರಗಳಿಗೆ ಕಾರಣವಾಗಿತ್ತು.

ಅಲ್ಲಿ ಪೋಲೀಸನೊಬ್ಬನಿಗೆ ಗುಂಡು ಹಾಕಿದ್ದಕ್ಕೆ ನಾಲ್ಕೂವರೆ ವರ್ಷದ ಕಾಲ ಜೈಲು ಶಿಕ್ಷೆ ಅನುಭವಿಸಿ ಇರಾನಿನಲ್ಲಿ ನಡೆದ ಕ್ರಾಂತಿಯ ನಂತರ ಬಿಡುಗಡೆ ಹೊಂದಿದ. ಜೈಲಿನಲ್ಲಿದ್ದಾಗ ಅವನು ಸಾಹಿತ್ಯ, ಸಿನಿಮಾ, ಸಮಾಜ ಶಾಸ್ತ್ರ ಮತ್ತು ತನ್ನ ದೇಶದ ಬಗ್ಗೆ ನಡೆಸಿದ ಆಳವಾದ ಅಭ್ಯಾಸ ಅವನ ಒಳಗಣ್ಣನ್ನು ತೆರೆಯಿಸಿತು. ಅನಂತರ ರಾಕ್ಷಸನಂತೆ ಸೃಷ್ಟಿಕ್ರಿಯೆಯಲ್ಲಿ ತೊಡಗಿದ.

ʻಕಾಂದಹಾರ್ʼ ಚಿತ್ರದ ಕಾಲ ಆಫ್ಘಾನಿಸ್ತಾನದಲ್ಲಿ ತಾಲಿಬಾನಿನ ಆಡಳಿತದ ಸಮಯದ್ದು. ಅಲ್ಲಿನ ಆಡಳಿತವನ್ನು ಸಹಿಸಲಾಗದೆ ಕಾಂದಹಾರ್‌ನಲ್ಲಿರುವ ತನ್ನ ಸೋದರಿ ಮೂರು ದಿನಗಳ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಅವಳನ್ನು ಹುಡುಕಿಕೊಂಡು ಆಫ್ಘನ್ ಮೂಲದವಳೇ ಆದರೂ ಕೆನೆಡಾದಲ್ಲಿ ನೆಲೆಸಿರುವ ಪತ್ರಕರ್ತೆ ನಫಾಸಾಳ ಅನುಭವವನ್ನು ಈ ಚಿತ್ರ ಪ್ರಸ್ತುತಪಡಿಸುತ್ತದೆ. ಇರಾನಿಗೆ ಹೊಂದಿಕೊಂಡ ಗಡಿ ಪ್ರದೇಶದಲ್ಲಿ ಸಂಚರಿಸುವ ಅವಳು ಚಿಕ್ಕ ಟೇಪ್ ರೆಕಾರ್ಡರ್‌ನಲ್ಲಿ ತನ್ನ ಅನಿಸಿಕೆಗಳನ್ನು ದಾಖಲುಪಡಿಸಿಕೊಳ್ಳುತ್ತ ಮುಂದುವರಿಯುತ್ತಾಳೆ. ಅವಳು ಅಲ್ಲಿ ಸಂಚರಿಸಲು ಸಾಧ್ಯವಾಗುವ ಹಾಗೆ ಅಲ್ಲಿಯವನೇ ಆದ ವಯಸ್ಸಾದವನೊಬ್ಬ, ಅವಳು ತನ್ನ ನಾಲ್ಕನೆ ಹೆಂಡತಿ ಎಂದು ಹೇಳಿ ಅವಳಿಗೆ ಅನುಕೂಲ ಮಾಡಿಕೊಡುತ್ತಾನೆ. ಹೆಣ್ಣೊಬ್ಬಳಿಗೆ ಉಂಟಾಗುವ ಈ ಅವಸ್ಥೆ ಪ್ರಾರಂಭಕ್ಕೇ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಇದರ ಜೊತೆಜೊತೆಯಾಗಿಯೇ ಹೆಲಿಕ್ಯಾಪ್ಟರ್‌ನಿಂದ ಹತ್ತಾರು ಆಕೃತಿಗಳು ಪ್ಯಾರಾಚ್ಯೂಟ್ ಸಹಾಯದಿಂದ ಹರಡಿದ ವಿಸ್ತಾರದಲ್ಲಿ ಕೆಳಗಿಳಿಯುತ್ತಿದ್ದಂತೆ ಜನರು ಒಂಟಿಗಾಲಿನಲ್ಲಿ ಅವು ಬೀಳುವ ಕಡೆ ಓಡುವುದನ್ನು ಮೇಲಿನಿಂದ ತೆಗೆದ ಚಿತ್ರಿಕೆ (ಟಾಪ್ ಆಂಗಲ್ ಶಾಟ್)ಯಲ್ಲಿ ನೋಡುತ್ತೇವೆ. ಆ ಆಕೃತಿಗಳು ಕೃತಕ ಕಾಲುಗಳೆಂದು ತಿಳಿಯುತ್ತಿದ್ದಂತೆ ನಮ್ಮ ಮೈ ಕೊಂಚ ಬಿಗಿಯಾಗುತ್ತದೆ. ಬಿದ್ದಿದ್ದನ್ನು ತೆಗೆದುಕೊಳ್ಳುವ ಒಂದು ಕಾಲು ಕಳೆದುಕೊಂಡವರು ನಿಧಿ ಸಿಕ್ಕಂತೆ ಸಂಭ್ರಮಿಸುತ್ತಾರೆ. ಅವರ ಸೋತ ಕಣ್ಣುಗಳಲ್ಲಿ ಕೊಂಚ ನಿರಾಳ ಭಾವ ವ್ಯಕ್ತವಾಗುತ್ತದೆ. ಅದು ಸಿಕ್ಕದೇ ಹೋದವರಲ್ಲಿ ಹತಭಾಗ್ಯ ನೋಟ ಕಾಣುತ್ತದೆ. ಆದರೆ ಅದರ ತೀವ್ರತೆಯ ಮಟ್ಟ ನಮಗೆ ಅರಿವಾಗುವಷ್ಟು ನಿರ್ದೇಶಕ ಸಂದರ್ಭದ ಬೆಳವಣಿಗೆಯನ್ನು ಉಂಟುಮಾಡಿರುವುದಿಲ್ಲ. ತನ್ನ ಗುರಿಯಾದ ಕಾಂದಹಾರ್ ಕಡೆ ಹೋಗಲು ಪ್ರಯತ್ನಿಸುವ ನಫಾಸಾ ಅಲ್ಲಿನವರ ಫೋಟೋ ತೆಗೆಯಲು ಏರ್ಪಾಡು ಮಾಡಿದಾಗ ಅವಳನ್ನು ಅನುಮಾನಿಸುವ ಗಂಡಸರು, ಇಡೀ ಮೈಯನ್ನು ಬುರ್ಖಾದಲ್ಲಿ ಅಡಗಿಸಿಕೊಂಡ ಹೆಂಗಸರು ಮತ್ತು ಬೆರಗುಗಣ್ಣು ಬಿಡುತ್ತ ಸಾಲು ಸಾಲು ನಿಂತ ಎಳೆಯ ಹುಡುಗಿಯರು ಸಿಗುತ್ತಾರೆ. ಇಂಥವೆಲ್ಲ ತೀರ ಹೊಸದೆನಿಸುವ ಅವರ ಪ್ರತಿಕ್ರಿಯೆಗಳನ್ನು ನಿರ್ದೇಶಕ ನಮಗೆ ಸಮರ್ಥವಾಗಿ ರವಾನಿಸುವ ರೀತಿಯಲ್ಲಿ ಮಧ್ಯಮ ಮತ್ತು ಸಮೀಪ ಚಿತ್ರಿಕೆ (ಮಿಡ್ ಶಾಟ್ ಮತ್ತು ಕ್ಲೋಸ್ ಶಾಟ್)ಗಳ ಮಿಶ್ರಣದಲ್ಲಿ ನಿಭಾಯಿಸುತ್ತಾನೆ. ನಫಾಸಾಳ ಪಯಣ ಸಾಗುತ್ತಿದ್ದಂತೆ ವಿಸ್ತಾರವಾದ ಮರಳುಗಾಡಿನಲ್ಲಿ ದೂರದಿಂದ ತೋರಿಸುವ ಚಿತ್ರಿಕೆ (ಲಾಂಗ್ ಶಾಟ್)ಯಲ್ಲಿ ಪರದೆಯಗಲಕ್ಕೂ ಹರಡುತ್ತದೆ. ಅದರಲ್ಲಿ ಬುರ್ಖಾಗಳಲ್ಲಿ ಮೈ-ಮುಖ ಮರೆಸಿಕೊಂಡ ಹಲವಾರು ಹೆಂಗಸರು ಹೆಜ್ಜೆ ಹಾಕುತ್ತಿರುವುದನ್ನು ಕಂಡಾಗ ಪ್ರತ್ಯೇಕ ಅಸ್ತಿತ್ವವೇ ಇಲ್ಲದ ಅವರ ಜೀವದ ಮಿಡುಕಾಟದ ಬಗ್ಗೆ ನಮಗೆ ಮರುಕ ಉಂಟಾಗುತ್ತದೆ. ಸ್ವಲ್ಪ ಸಮಯದಲ್ಲಿಯೇ ಬದುಕಲು ಬೇರೆ ದಾರಿ ಕಾಣದ ಕೆಲವರು ನಫಾಸಾಳಿದ್ದ ಗುಂಪಿನವರ ಬಳಿ ಇದ್ದದ್ದನ್ನು ಲೂಟಿ ಮಾಡುತ್ತಾರೆ. ಅನಂತರದ ದೃಶ್ಯವೊಂದರಲ್ಲಿ ಮದರಸಾವೊಂದರಲ್ಲಿ ಇಡೀ ದೇಹವನ್ನು ಯಾವುದೋ ಲಯದಲ್ಲಿ ಹಿಂದುಮುಂದಾಡಿಸುತ್ತ ಕುರಾನು ಪಠಿಸುವ ಬಾಲಕರನ್ನು ಕಾಣುತ್ತೇವೆ. ಅವರಿಗೆ ಹೇಳಿಕೊಡುವ ಮುಲ್ಲಾ ಆಗೀಗ ತಡೆದು ನಿಲ್ಲಿಸಿ, ಆಯಧಗಳ ಬಗ್ಗೆ ಪ್ರಶ್ನಿಸಿ ಪರೀಕ್ಷೆ ಮಾಡುತ್ತಾರೆ. ಮಕ್ಬಲ್‌ಬಫ್ ಈ ದೃಶ್ಯವನ್ನು ಹೆಚ್ಚಾಗಿ ಹತ್ತಿರದಿಂದ ಚಿತ್ರಿಸಿ ಇಡೀ ಸನ್ನಿವೇಶದಲ್ಲಿ ಅಡಕವಾಗಿರುವ ವಿರೋಧಾಭಾಸವನ್ನು ಮನಗಾಣಿಸುತ್ತಾನೆ. ಆ ಹುಡುಗರಲ್ಲಿ ಕಾಕ್ ಎಂಬುವನೊಬ್ಬ ಸರಿಯಾಗಿ ಕುರಾನ್ ಓದದ ಕಾರಣ ಮುಲ್ಲಾ ಅವನನ್ನು ಹೊರಗಟ್ಟುತ್ತಾನೆ. ಅನಂತರ ಆ ಹುಡುಗ ಹೊಟ್ಟೆಪಾಡಿಗಾಗಿ ನಫಾಸಾ ಕೊಡುವ ಐವತ್ತು ಡಾಲರ್‌ಗೆ ಒಪ್ಪಿಕೊಂಡು ಅವಳ ಜೊತೆ ಪ್ರಯಾಣ ಮಾಡುತ್ತಾನೆ. ಆದರೆ ಸ್ವಲ್ಪ ಸಮಯದ ನಂತರ ಅವಳಿಂದ ದೂರ ಹೋಗಿ ಆ ಮರಳುಗಾಡಲ್ಲಿ ಅಲ್ಲೆಲ್ಲೋ ಬಿದ್ದಿದ್ದ ಮನುಷ್ಯನ ಅಸ್ತಿಪಂಜರದಲ್ಲಿದ್ದ ಉಂಗುರವನ್ನು ಕಿತ್ತುಕೊಳ್ಳುವುದು ಅಲ್ಲಿನವರ ಬದುಕಿನ ರೀತಿಗೊಂದು ವ್ಯಾಖ್ಯೆಯಾಗುತ್ತದೆ.

ನಫಾಸಾ ಮುಂದುವರಿದ ತನ್ನ ಪ್ರಯಾಣದಲ್ಲಿ ಡಾಕ್ಟರೊಬ್ಬನನ್ನು ಭೇಟಿಯಾಗುವ ಮೊದಲು ಅಲ್ಲಿ ರೂಢಿಗತವಾದ ರೀತಿಯಲ್ಲಿ ಹೆಣ್ಣು ರೋಗಿಗಳನ್ನು ಅವನು ಪರೀಕ್ಷಿಸುವ ರೀತಿಯಿಂದ ಆ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಇರುವ ಧೋರಣೆಯನ್ನು ಅತ್ಯಂತ ಸಮರ್ಥವಾಗಿ ಮಕ್ಬಲ್‌ಬಫ್ ಬಿಂಬಿಸುತ್ತಾನೆ. ಅದೇನೆಂದರೆ  ಸದಾ ಬುರ್ಖಾ ಹಾಕಿಕೊಂಡಿದ್ದರೂ ಹೆಣ್ಣನ್ನು ಮುಟ್ಟುವುದಿರಲಿ, ಡಾಕ್ಟರ್ ನೇರವಾಗಿ ನೋಡಿ ಕೂಡ ಪರೀಕ್ಷಿಸುವಂತಿಲ್ಲ ಎನ್ನುವುದು ತಿಳಿಯುತ್ತದೆ. ಆ ಡಾಕ್ಟರ್ ಅಡ್ಡ ಪರದೆಯಲ್ಲಿ ಮಾಡಿದ ಮೂರಿಂಚಿನ ರಂಧ್ರದ ಮೂಲಕ ಪರದೆಯ ಆಚೆ ಕಡೆ ಇರುವ ಹೆಣ್ಣಿನ ಕಣ್ಣು, ನಾಲಗೆಗಳನ್ನು ಪರೀಕ್ಷಿಸಬೇಕು. ಈ ದೃಶ್ಯದ ಅತಿಸಮೀಪ ಚಿತ್ರಿಕೆ(ಎಕ್ಸ್ಟ್ರೀಮ್ ಕ್ಲೋಸ್ ಶಾಟ್)ಯಲ್ಲಿ ಇಡೀ ಪರದೆಯಲ್ಲಿ ಒಂದು ದೊಡ್ಡ ರಂಧ್ರ, ಅದಕ್ಕೆ ಹತ್ತಿರ ಜರುಗಿದ ಹೆಣ್ಣು, ಬಾಯಿ ತೆರೆದು ಚಾಚಿದ ನಾಲಗೆ, ರಂಧ್ರಕ್ಕೆ ಸರಿಯಾಗಿ ಹೊಂದಿಸಿ ಜರುಗುವ ಆಕೆಯ ಕಣ್ಣು ಇವುಗಳಿಂದ ಯಾರೇ ಆದರೂ ಕೊಂಚ ವಿಚಲಿತಗೊಳ್ಳದೆ ಇರುವುದು ಅಸಾಧ್ಯ. ಇಷ್ಟೇ ಅಲ್ಲದೆ ಸಾಮಾನ್ಯವಾಗಿ ಹೆಣ್ಣಿನ ಜೊತೆಗೆ ಬಂದಿರುವವರಿಂದ ಕೇಳಿ ತಿಳಿದು, ರೋಗಿಯ ಕಾಯಿಲೆಯ ವಿವರಗಳನ್ನು ಪಡೆಯಬೇಕು. ಹೀಗಾಗಿ ಆಫ್ಘನ್ ಮಹಿಳೆಯರಿಗೆ ಕನಿಷ್ಠ ಗೌರವದ ನಿರಾಕರಣೆಯನ್ನು ಕಂಡಾಗ ನಾವು ರೆಪ್ಪೆಯನ್ನು ಒಮ್ಮೆ ಕೆಳಗೆ ಹಾಕಿದರೆ ಅದು ತೀರ ಸಹಜ ಪ್ರತಿಕ್ರಿಯೆಯಾಗುತ್ತದೆ. ನಫಾಸಾಳು ಅಲ್ಲಿಗೆ ಬಂದಾಗ ಅವಳು ಬುರ್ಖಾ ತೆಗೆದೇ ಮಾತನಾಡುತ್ತಾಳೆ. ಕ್ರಮೇಣ ಡಾಕ್ಟರ್ ಅಮೆರಿಕದವನು ಎನ್ನುವುದು ಸಂಗತಿ ತಿಳಿಯುತ್ತದೆ. ಅಲ್ಲಿಗೆ ದೇವರನ್ನು ಹುಡುಕಿಕೊಂಡು ಬಂದಿದ್ದಾಗಿ ಹೇಳುತ್ತಾನೆ. ಅಲ್ಲಿನ ಸಮಾಜದ ರೀತಿ ರಿವಾಜುಗಳಿಗೆ ಅನುಗುಣವಾಗಿ ಮತ್ತು ಅವರೊಂದಿಗೆ ಸಹಜ ಸಂಬಂಧ ಹೊಂದುವುದಕ್ಕಾಗಿ ಹಾಕಿ-ತೆಗೆದು ಮಾಡುವಂತಹ ಗಡ್ಡ ಇಟ್ಟುಕೊಂಡಿರುತ್ತಾನೆ. ಅವನು ನಫಾಸಾಳಿಗೆ ಕಂಡಂತೆ ನಮಗೂ ವಿಲಕ್ಷಣವೆನ್ನಿಸಿ ಸಂದಿಗ್ಧಗೊಳ್ಳುತ್ತೇವೆ.

ಹೀಗೆ ಸಾಗುವ ನಫಾಸಾಳ ಗುಂಪಿನ ಜೊತೆ ಇನ್ನೂ ಒಂದೆರಡು ಗುಂಪುಗಳು ಸೇರಿಕೊಳ್ಳುತ್ತವೆ. ಎಲ್ಲರೂ ಬಟಾಬಯಲಿನಲ್ಲಿ, ಹಸಿರಿಲ್ಲದ ವಿಸ್ತಾರದಲ್ಲಿ ಸೋತ ಹೆಜ್ಜೆಗಳನ್ನಿಡುತ್ತಾರೆ. ಈ ದೃಶ್ಯ ಸರಣಿಯಲ್ಲಿ ಮರದ ಕೃತಕ ಕಾಲುಗಳನ್ನು ಹಾಕಿಕೊಂಡು ನಡೆಯುವವರನ್ನು ಕಾಣುತ್ತೇವೆ. ಕೆಲವರಿಗೆ ಆ ಕೃತಕ ಕಾಲುಗಳು ಸರಿಯಾಗಿ ಹೊಂದದ ಸಮಸ್ಯೆ, ಅವುಗಳ ಬದಲಾವಣೆಗೆ ಅವರ ಅಹವಾಲು ಇತ್ಯಾದಿಗಳನ್ನು ರೆಡ್ ಕ್ರಾಸ್ ಸಂಸ್ಥೆಯವರು ನಿರ್ವಹಿಸುವುದು ನಫಾಸಾಳಿಗೆ ತಿಳಿಯುತ್ತದೆ. ಅವಳು ಪ್ರಯಾಣ ಮುಂದುವರಿಸುತ್ತಿದ್ದಂತೆ ನಾವು ಚಿತ್ರದ ಪ್ರಾರಂಭದಲ್ಲಿ ನೋಡಿದ ರೆಡ್ ಕ್ರಾಸ್ ಸಂಸ್ಥೆಯ ಹೆಲಿಕ್ಯಾಪ್ಟರ್ ಬರುತ್ತದೆ. ಅದು ಹತ್ತಿರವಾಗುತ್ತಿದ್ದಂತೆ ಗುಂಪುಗುಂಪಾಗಿದ್ದ ಜನರು ಚದುರಿ ಹೋಗಿ ಅದರ ಕಡೆ ಧಾವಿಸುತ್ತಾರೆ. ಇದೆಲ್ಲವನ್ನು ಬೆರಗಿನಿಂದ ನೋಡುವ ನಫಾಸಾ ಕಂಡದ್ದನ್ನು ಟಾಪ್ ರೆಕಾರ್ಡರ್‌ನಲ್ಲಿ ದಾಖಲಿಸುತ್ತಾಳೆ. ಈಗ ಬುರ್ಖಾ ಹಾಕಿಕೊಂಡ ಹೆಂಗಸರ ಜೊತೆ ನಡೆಯುವವನೊಬ್ಬ ತಾನೂ ಬುರ್ಖಾ ಹಾಕಿಕೊಂಡು ಓಡುತ್ತಾನೆ. ನಫಾಸಾಳ ಪಯಣದ ಪರಿಣಾಮ ಏನಾಯಿತು ಎನ್ನುವುದರ ಬಗ್ಗೆ ಮಕ್ಬಲ್‌ಬಫ್ ಇತ್ಯಾತ್ಮಿಕವಾಗಿ ತಿಳಿಸುವ ಗೋಜಿಗೆ ಹೋಗುವುದಿಲ್ಲ. ಅದು ಅವನು ಬಯಸಿದಂತೆಯೂ ಕಾಣುವುದಿಲ್ಲ. ಚಿತ್ರದ ಕೊನೆಯಲ್ಲಿ ಹೆಣ್ಣೊಬ್ಬಳ ಮುಖಕ್ಕೆ ಮುಚ್ಚಿದ ಬುರ್ಖಾದೊಳಗಿನ ಚೌಕು ರಂಧ್ರದ ಮೂಲಕ ಮುಂದೆ ಹರಡಿದ ವಿಸ್ತಾರವನ್ನು ಕಾಣುವ ನಮಗೆ ಮಕ್ಬಲ್‌ಬಫ್ ತನ್ನ ಆಶಯಕ್ಕೆ ಸಮರ್ಥವಾದ ಒತ್ತು ಕೊಟ್ಟು ಮುಕ್ತಾಯ ಮಾಡಿದ್ದಾನೆ ಎನ್ನಿಸುತ್ತದೆ. ಚಿತ್ರದಲ್ಲಿ ಮಕ್ಬಲ್‌ಬಫ್ ಅಗತ್ಯವೆನಿಸಿದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಲಾಪನೆಯನ್ನು ಬಳಸಿದ್ದಾನೆ ಮತ್ತು ಈ ಚಿತ್ರದ ತಯಾರಿಕೆಯಲ್ಲಿ ಸಹಕರಿಸಿದ ನೀಲೊಫರ್ ಪಜೀ಼ಜಾ಼ ನಫೀಸಾಳ ಪಾತ್ರ ವಹಿಸಿದ್ದಾಳೆ.


ಮಕ್ಬಲ್‌ಬಫ್ ಸಾಕ್ಷ್ಯ ಮತ್ತು ಕಥನದ ಹದವಾದ ಮಿಶ್ರಣದೊಂದಿಗೆ ತಯಾರಿಸಿದ `ಕಾಂದಹಾರ್’ಗೆ ಒತ್ತಡದ ಘಟನೆಗಳ ಬೆಂಬಲವಿಲ್ಲದಿದ್ದರೂ ಅವನ ಉದ್ದೇಶವನ್ನು ಸಮರ್ಥವಾಗಿ ಪೂರೈಸುತ್ತದೆ. ಈ ಚಿತ್ರದ ಮೂಲಕ ಏನಿಲ್ಲದಿದ್ದರೂ ಕೇವಲ ಮಾನವೀಯ ದೃಷ್ಟಿಯಿಂದ ಜಗತ್ತು ಆಫ್ಘಾನಿಸ್ತಾನದ ಕಡೆ ಗಮನಹರಿಸಬೇಕಾದ ತೀವ್ರತರ ಒತ್ತಡವನ್ನು ಉಂಟುಮಾಡುತ್ತಾನೆ. ಮನುಷ್ಯನಾದವನಿಗೆ ಸಹಜೀವಿಗಳ ಒಳಿತಿನ ಬಗ್ಗೆ ಕೈಗೊಳ್ಳುವ ಕಾರ್ಯಕ್ಕಿಂತ ಬೇರೆ ಸಾರ್ಥಕತೆ ಇನ್ನೇನಿರಲು ಸಾಧ್ಯ, ಹೇಳಿ?