ಕನ್ನಡದ ಶ್ರೇಷ್ಠ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜರವರು ಹುಟ್ಟಿದ್ದು ೨೨-೯-೧೯೩೯ ರಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ. ತಂದೆ ಅಂದಾನಪ್ಪ, ತಾಯಿ ಸಂಗಮ್ಮ. ಅಬ್ಬಿಗೇರಿ, ನರೇಗಲ್ಲ, ರೋಣಗಳಲ್ಲಿ ಪ್ರಾರಂಭಿಕ ಶಿಕ್ಷಣ ಮಾಡಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೬೩ರಲ್ಲಿ ಎಂ.ಎ. (ಇಂಗ್ಲಿಷ್) ಪದವಿ. ಮತ್ತು ಎಂ.ಎ. (ಕನ್ನಡ) ಪದವಿ ಪಡೆದವರು. ಇಂಗ್ಲೆಂಡಿನಲ್ಲಿ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು, ಹೈದರಾಬಾದ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್‌ನಲ್ಲಿ ಅಧ್ಯಯನ ನಡೆಸಿದರು.  ಗೆಳೆಯರಾದ ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ ಜೊತೆಗೂಡಿ ‘ಸಂಕ್ರಮಣ’ ದ್ವೈಮಾಸಿಕ ಪತ್ರಿಕೆ ಹೊರತಂದಿದ್ದರು. ಶಾರದಾ ಲಹರಿ, ರಸವಂತಿ, ಮರ್ಲಿನ್ ಮನ್ರೋ (ಕವನ ಸಂಕಲನಗಳು) ಆ ಮುಖ ಈ ಮುಖ, ಹಂಗು ಮತ್ತು ಇತರ ಕಥೆಗಳು, ಒಂದು ಬೇವಿನ ಮರದ ಕಥೆ (ಕಥಾಸಂಕಲನಗಳು) ಸಣ್ಣ ಕಥೆಯ ಹೊಸ ಒಲವುಗಳು, ಜನಪದ ಕಾವ್ಯ, ನವ್ಯ ವಿಮರ್ಶೆ (ವಿಮರ್ಶಾತ್ಮಕ ಕೃತಿಗಳು) ಇವರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಫೆಲೋಷಿಪ್, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿಗಳು ದೊರೆತಿವೆ. ಗಿರಡ್ಡಿ ಗೋವಿಂದರಾಜರು ಬರೆದ ಅರೆಬೈಲು ಘಟ್ಟಗಳಲ್ಲಿ ಕವಿತೆ ‘ಕಾವ್ಯ ಮಾಲೆಯ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

ಅರೆಬೈಲು ಘಟ್ಟಗಳಲ್ಲಿ

ಗುಂಪು ಗುಂಪು ಬೆಳೆದ ಮರ
ಬಳಿಯೊಳಿರುವ ಘಟ್ಟವೇರಿ
ಎದುರು ಬದುರು ನಿಂತು ಮುಖ
ನೋಡಿಕೊಂಡವು.

ಆಳೆವಾದ ಕೊಳ್ಳಗಳನು
ಬಿದಿರು ಮೆಳೆಗಳಿಳಿದು ಹೋಗಿ
ಸುಳಿಯುತಿರುವ ಗಾಳಿಯಲ್ಲಿ
ಹಾಡಿಕೊಂಡವು.

ಉಂಗುರುಂಗುರಾದ ಕುರುಳಿ
ನಂತೆ ಬೆಟ್ಟ ಕಡಲ ಬಳಸಿ
ಮಾಲೆ ಮಾಲೆಯಾಗಿ ಮೈಯ
ನೀಡಿಕೊಂಡವು.

ಹಿಂಡುಗಟ್ಟಿ ಬಂದ ಮೋಡ
ಮುಂದೆ ಹೋಗಲಾರೆವೆಂದು
ಬಾನ ತೊಟ್ಟಿಲಲ್ಲಿ ತಾವೆ
ತೂಗಿಕೊಂಡವು.

ಬೆಟ್ಟಗಳೆನು ದಾಟಿ ಬಂದು
ಹಸಿರು ನಾಡೊಳಾಡಿಕೊಂಡು
ತೊರೆಗಳಿಲ್ಲಿ ನುಗ್ಗಿ ದಾರಿ
ಮಾಡಿಕೊಂಡವು.

ಆಲ್ಲಿ, ಇಲ್ಲಿ ನಿಂತ ನೀರು
ಸೋಗಲಾಡಿ ಹೆಣ್ಣಿನಂತೆ
ತೆರೆಯ ನಿರಿಯ ಚಿಮ್ಮಿ ಮತ್ತೆ
ತೀಡಿಕೊಂಡವು.

ಹಕ್ಕಿಬಳಗ ರೆಕ್ಕೆ ಬೀಸಿ
ನಭವ ಸುತ್ತಿ, ಹಾಡಿ ಹಾಡಿ
ದಣಿದು ಬಂದು ಇವುಗಳೊಡನೆ
ಕೂಡಿಕೊಂಡವು.

ಆಚೆ, ಈಚೆ ಬಯಲಿನಲ್ಲಿ
ತಲೆಯ ತೂಗುತ್ತಿದ್ದ ಶಾಲಿ
ಎಲ್ಲ ಆಟ ನೋಡಿ ಪಿಸುಣ
ನಾಡಿಕೊಂಡವು.

ದಿವ್ಯಲೋಕವೊಂದ ಕಟ್ಟಿ
ಸ್ವಪ್ನಮಾಯೆಯಿಂದ ಸುತ್ತಿ
ಕವಿಯ ಎದೆಯೊಳೇನೊ ಕನಸು
ಮೂಡಿಕೊಂಡವು.