ಏಳುಬಣ್ಣದ ಚಿಟ್ಟೆ

ಎಲ್ಲಿಗೂ ಹೋಗದಿರುವುದು
ಎಲ್ಲೆಡೆ ಹೋಗಿ ಬಂದಂತೆ
ಪ್ರತಿ ನಿತ್ಯ ಇರುವ ಜಾಗ
ಮತ್ತೆ ಮತ್ತೆ ಹೊಸದಾದಂತೆ

ಹಳಬರೆಲ್ಲಾ ಹೊಸಬರಾದಂತೆ
ನಿಂತಲ್ಲೇ ನಿಂತ ಜಾಗದ
ನಿರಂತರ ಪಯಣಕೆ
ತಿರುಗಿ ಬಾರದ ಜಗಕೆ
ಹೋಗುತಿಹೆವು ಕ್ಷಣ ಕ್ಷಣ

ಸೂರ್ಯನ ಸುತ್ತುವ ಭೂಮಿ
ಸೂರ್ಯನ ಸುತ್ತುವ ಸೂರ್ಯ
ಆ ಸೂರ್ಯ ತನ್ನ ಸೂರ್ಯನ
ಸುತ್ತಾ ಗಿರಗಿರ ತಿರುಗುವ
ಏಳು ಬಣ್ಣದ ಚಿಟ್ಟೆಯಾಗಿ
ಸಹಸ್ರ ಸಹಸ್ರ ಕೋಟಿ ಕೋಟಿ
ಮನುಜ ವರ್ಷ ಕಳೆದರೂ
ಚಂದಿರನಾಗಿ ಉಪಮೆಯಾಗಿ
ಅಲಂಕಾರದ ರೂಪಕವಾಗಿ
ವಿಜ್ಞಾನವೂ ಕಾವ್ಯವಾಗಿ
ಮಹಾಕಾವ್ಯವೂ ಜ್ಞಾನವಾಗಿ
ಸ್ಥಾವರವೇ ಜಂಗಮವಾಗಿ
ಜಂಗಮವು ಸ್ಥಾವರವಾಗಿ
ತಲೆಯೊಳಗೇ ಜಗವು ತಿರುಗಿ
ಜಗದೊಳಗೆ ತಲೆಯ ಗಿರಕಿ

ಬೆಳಕು ಕತ್ತಲಾಗಿ
ಕತ್ತಲು ಬೆಳದಿಂಗಳಾಗಿ
ಏಳು ಬಣ್ಣದ ಬೆಳಕಾಗಿ
ಬೆಳಕನು ಕತ್ತಲೆ ನುಂಗಿ
ಮಹಿಷನೇ ಮರ್ಧಿನಿಯಾಗಿ
ಮರ್ಧಿನಿಯ ಶಿಶುವಾಗಿ
ದೇಶಕಾಲ ಒಟ್ಟೊಟ್ಟಿಗೇ
ಬದಲಾಗಿ ಕತ್ತಲನು

ಅಣಕವಾಡುತಾ
ಬೆಳಕಿನೊಡನೆ
ಆಟವಾಡುತಾ
ಕಳೆದು ಹೋದವರು
ತಿರುಗಿ ಬಂದಂತೆ
ಕಣ್ಣೆದುರೇ ಇದ್ದವರು
ಕಳೆದು ಹೋದಂತೆ
ಕಣ್ಣಾಮುಚ್ಚಾಲೆ ಆಡುವ
ಕಂದನೇ ಭಗವಂತನಾಗಿ

ಅವನು ಬೆಚ್ಚಿ ಎಚ್ಚರವಾಗಿ
ಮೂರನೇ ಕಣ್ಣು ತೆರೆದಾಗ
ಏಳು ಲೋಕದಾಚೆಗೆ
ಮತ್ತೊಂದು ಜಗದ
ಸೃಷ್ಟಿಯಾಗಿ ಆ ಜಗವು
ತಿರುತಿರುಗಿ ತಲೆಯೊಳಗೆ
ತಿರುಗಿ ತಿರುಗಿ…

*

ರವಿ ಕುಮಾರ್ ಹುಟ್ಟಿದ್ದು ಕೃಷ್ಣರಾಜ ನಗರ, ಬೆಳೆದದ್ದು ಶಿವಮೊಗ್ಗದಲ್ಲಿ.  ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹಿಡಿತ ಇರುವ ರವಿಕುಮಾರ್‌  ಈಗ ಮೈಸೂರು ವಾಸಿ.  ರಂಗಭೂಮಿ ಮತ್ತು ಕಿರುತೆರೆಯಲ್ಲಿ ನಟನೆ ಅವರಿಗಿಷ್ಟ. ನಿರ್ದೇಶನ, ನಾಟಕ ರಚನೆ ಅವರ ಹವ್ಯಾಸ.  ʻಕನಸುಗಳಿಗೆ ಕಿನಾರಗಳಿರುವುದಿಲ್ಲʼ  ಎಂಬ ಕಥಾ ಸಂಕಲನ ಹಾಗೂ  ʻದೂಸ್ರ ʼ ಎಂಬ ಅಂಕಣ ಬರಹಗಳ ಸಂಗ್ರಹ ಪ್ರಕಟವಾಗಿದೆ.