ವಿಚಾರ, ನಿಲುವುಗಳು, ಆಡಳಿತದ ಅನುಭವ ಇದೆಲ್ಲ ಏನೇ ಇದ್ದರೂ ಶಿವಗಾಮಿ ಹಣದ ವಿಚಾರದಲ್ಲಿ ಶುದ್ಧಹಸ್ತಳಾಗಿಯೇ ಉಳಿದಿದ್ದು, ಹೈ ಕಮಾಂಡ್‌ ತಂತ್ರಗಾರಿಕೆ, ರಾಜಕೀಯ ಪಕ್ಷಗಳು ಕೆಲಸ ಮಾಡುವ ರೀತಿ ನೀತಿಗಳಿಗೆ ಹೊಸಬರಾಗಿದ್ದರು. ಇವಳು ಸೇರಿದ್ದ ಪಕ್ಷದ ರಾಷ್ಟ್ರೀಯ ನಾಯಕಿಗೆ ಶಿವಗಾಮಿಯಷ್ಟು ವಿದ್ಯಾವಂತೆ, ಪ್ರತಿಭಾವಂತೆ ಚುನಾವಣಾ ರಾಜಕೀಯದಲ್ಲೂ ಗೆದ್ದುಬಿಟ್ಟರೆ ಒಂದಲ್ಲ ಒಂದು ದಿನ ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕದಿಂದ ಬೇಕು ಬೇಕೆಂದೇ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸಿದಳು. ಮೊದಲೇ ಉಳಿದ ಜಾತಿಯವರ ವಿರೋಧ.
ಕೆ. ಸತ್ಯನಾರಾಯಣ ಅವರ “ಮನುಷ್ಯರು ಬದಲಾಗುವರೆ” ಕಥಾ ಸಂಕಲನದ “ಶಿವಗಾಮಿ ಬದಲಾದಳೆ (ರೆ)?” ಕಥೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ರೆವಿನ್ಯೂ ಇಲಾಖೆಗೆ ಆಯ್ಕೆಯಾದ ಅಧಿಕಾರಿಗಳಿಗೆ ತರಬೇತಿ ನೀಡುವ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದಾಗ ಶಿವಗಾಮಿ ನನಗೂ ಮನೆಯವರಿಗೂ ಪರಿಚಯವಾದದ್ದು. ದಕ್ಷಿಣ ಭಾರತದಿಂದ ಅದರಲ್ಲೂ ತಮಿಳುನಾಡಿನಿಂದ ತರಬೇತಿಗೆ ಆಯ್ಕೆಯಾಗಿದ್ದವರೇ ಕಡಿಮೆ. ಅದರಲ್ಲೂ ತಮಿಳುನಾಡಿನಿಂದ ಕೇವಲ ಇಬ್ಬರು. ಅವರಲ್ಲಿ ಒಬ್ಬಳು ಶಿವಗಾಮಿ. ಇಲ್ಲಿಗೆ ಆಯ್ಕೆಯಾಗುವ ಮುನ್ನ ದೆಲ್ಲಿಯ ಸೆಕ್ರೆಟೇರಿಯಟ್‌ನಲ್ಲಿ ಸೆಕ್ಷನ್‌ ಅಧಿಕಾರಿಯಾಗಿದ್ದಳು.

ಶಿವಗಾಮಿಯಲ್ಲಿ ಎಲ್ಲವೂ ವಿಶೇಷವೇ. ಮೊದಲು ಗಮನ ಸೆಳೆಯುವುದು ಈ ಕಾಲದಲ್ಲಿ ತುಂಬಾ ಅಪರೂಪವಾದ ಅವಳ ಉದ್ದನೆಯ ಜಡೆ. ಸೊಂಪಾದ ಕೂದಲ ಆರೈಕೆ ಚೆನ್ನಾಗಿ ಮಾಡಿಕೊಳ್ಳುತ್ತಿದ್ದುದು ಯಾರಿಗಾದರೂ ಮಿರಮಿರನೆ ಮಿಂಚುವ ಕೂದಲಿನಿಂದ ತಕ್ಷಣ ಗೊತ್ತಾಗುತ್ತಿತ್ತು. ಅವಳು ಮಾತನಾಡುವಾಗ, ಮಾತನಾಡುತ್ತಿರುವುದು ತುಟಿಯ ಮೂಲಕವೋ ಇಲ್ಲ ಕಣ್ಣುಗಳ ಮಿಂಚಿನ ಮೂಲಕವೋ ಎನ್ನುವಂತೆ ಹೊಳಪಿನಲ್ಲೇ ಮಾತನಾಡುವ ಕಣ್ಣುಗಳು. ಹಣೆಗೆ ಇಟ್ಟುಕೊಳ್ಳುತ್ತಿದ್ದ ದೊಡ್ಡ ಆಕಾರದ ಕಪ್ಪು ಕುಂಕುಮ. ಎಲ್ಲರೂ ಮೆಚ್ಚುವಂತಹ ಕಾಟನ್‌ ಮತ್ತು ಹ್ಯಾಂಡ್‌ಲೂಂ ಸೀರೆಗಳ ಸಂಗ್ರಹ. ಇನ್ನೂ ಮುಖ್ಯವಾಗಿ ಅರಳು ಹುರಿದಂತೆ ಮಾತನಾಡುವ ಹಿಂದಿ. ದೆಲ್ಲಿಯಲ್ಲಿ ನಾಲ್ಕು ವರ್ಷ ಇದ್ದುದರಿಂದ ಪೇಟೆಬೀದಿಗಳ ನುಡಿಗಟ್ಟನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಳು. ಸ್ವಲ್ಪ ಮೇಲೆ ಬಿದ್ದು ಜನರಲ್ಲಿ ಬೆರೆಯುವ, ಇನ್ನೊಬ್ಬರನ್ನು ಮಾತಿಗೆ ಎಳೆಯುವ ಆತುರದ ಸ್ವಭಾವ. ದಪ್ಪ ಗಂಟಲು. ವೇಗವಾಗಿ ಮಾತನಾಡುತ್ತಿದ್ದುದರಿಂದ ಪದಗಳನ್ನು ನುಂಗುತ್ತಿದ್ದಳು.

( ಕೆ. ಸತ್ಯನಾರಾಯಣ )

ತರಬೇತಿಗೆ ಆಯ್ಕೆಯಾಗಿ ಬಂದವರಲ್ಲಿ ಇನ್ನೂ ಮದುವೆ ಆಗದವರೇ ಹೆಚ್ಚು. ಆದರೆ ಶಿವಗಾಮಿಗೆ ಮದುವೆ ಆಗಿತ್ತು. ಗಂಡ ನಾಗರ್‌ಕೋಯಿಲ್‌ನಲ್ಲಿ ಜಿಲ್ಲಾ ಪರಿಷತ್‌ನಲ್ಲಿ ಇಂಜಿನಿಯರ್‌ ಆಗಿದ್ದ. ಮಗಳು ಅಪ್ಪನ ಜೊತೆಯೇ ಇದ್ದು ಓದುತ್ತಿದ್ದಳು. ತರಬೇತಿ ಮುಗಿದ ಮೇಲೆ ಹೇಗಾದರೂ ಸರಿಯೇ ತಮಿಳುನಾಡಿಗೇ ನೇಮಕಾತಿ ಮಾಡಿಸಿಕೊಳ್ಳಬೇಕು ಎಂದು ಶಿವಗಾಮಿ ನಿರಂತರವಾಗಿ ಜಪ ಮಾಡುತ್ತಿದ್ದಳು. ಸಮಯ ಸಂದರ್ಭ ನೋಡದೆ ದೆಹಲಿಯಿಂದ ಬಂದ ಉನ್ನತಾಧಿಕಾರಿಗಳಿಗೆಲ್ಲ ದುಂಬಾಲು ಬೀಳುತ್ತಿದ್ದಳು.

ತರಬೇತಿ ಕೇಂದ್ರದಲ್ಲಿ ಶಿವಗಾಮಿಯ ಜನಪ್ರಿಯತೆಗೆ ಆಕೆ ವಹಿಸುತ್ತಿದ್ದ ಮಾಮಿಯ ಪಾತ್ರ ಕೂಡ ಕಾರಣವಾಗಿತ್ತು. ಯಾರಿಗೆ ಯಾರ ಬಗ್ಗೆ ಒಲವಿದೆ, ಯಾರಿಗೆ ಯಾರು ಸರಿಯಾದ ಜೋಡಿ ಎಂದು ಅವಳೇ ನಿರ್ಧಾರ ಮಾಡಿಕೊಂಡು ಅದಕ್ಕೆ ತಕ್ಕಂತೆ ಪಿಸುಮಾತು, ಪ್ರಚಾರ, ರಹಸ್ಯ ಮಾತುಕತೆ, ಸಂದೇಶವಾಹಕಿಯ ಕೆಲಸ ಎಲ್ಲವನ್ನೂ ಎಡಬಿಡದೆ ಉತ್ಸಾಹದಿಂದ ಮಾಡುತ್ತಿದ್ದಳು. ಹಾಗೆಲ್ಲ ಮಾಡಿ ಕುದುರಿಸಿದ್ದು ಮೂರೇ ಜೋಡಿಗಳಾದರೂ ಶಿವಗಾಮಿಗೆ ಮಾಮಿಯ ಪಟ್ಟ ಶಾಶ್ವತವಾಗಿ ಗಂಟುಬಿತ್ತು.

ಕಾಲೋನಿಯಲ್ಲಿದ್ದ ದಕ್ಷಿಣ ಭಾರತದ ಹಿರಿಯ ಅಧಿಕಾರಿಗಳ ಮನೆಗೆ ಭೇಟಿ ನೀಡುತ್ತಿದ್ದಳು. ಮದ್ರಾಸಿನಿಂದ ಕಾಫಿ ಪುಡಿ, ಹಪ್ಪಳ, ಸಂಡಿಗೆ ಇವುಗಳನ್ನು ಕೂಡ ತರಿಸಿ ಕೊಡುತ್ತಿದ್ದಳು. ನನ್ನ ಮಗಳ ಗಂಟಲಿನ ಭಾಗಕ್ಕೆ ಒಂದು ಸಣ್ಣ ಶಸ್ತ್ರಚಿಕಿತ್ಸೆ ಆದಾಗ, ಬೇಡ ಬೇಡ ಎಂದರೂ ನರ್ಸಿಂಗ್‌ ಹೋಂನಲ್ಲಿ ನನ್ನ ಹೆಂಡತಿ ಜೊತೆ ಎರಡು ರಾತ್ರಿ ಮಲಗಿದ್ದಳು.

ತರಬೇತಿ ಮುಗಿಯಿತು. ಶಿವಗಾಮಿ ಬಹುವಾಗಿ ಆಸೆ ಪಟ್ಟಂತೆ ತಮಿಳುನಾಡಿಗೇ ನೇಮಕಾತಿ ಆಯಿತು. ಮುಂದಿನ ತಂಡ ಅಕಾಡೆಮಿಗೆ ಬಂತು. ನಮ್ಮಗಳಿಗೂ ಬೇರೆ ಬೇರೆ ಕಡೆ ನೇಮಕಾತಿ ಆಯಿತು. ಶಿವಗಾಮಿಯನ್ನು ಸಹಜವಾಗಿಯೇ ಎಲ್ಲರೂ ಮರೆತರು.

*****

ಹತ್ತು-ಹನ್ನೆರಡು ವರ್ಷಗಳ ನಂತರ ನನಗೇ ತಮಿಳುನಾಡಿಗೆ ವರ್ಗವಾಯಿತು. ಈಗ ಶಿವಗಾಮಿ ಆಡಳಿತ ಸೇವೆಗೇ ಆಯ್ಕೆಯಾಗಿ ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಕಲೆಕ್ಟರ್‌ ಆಗಿ ಕೆಲಸ ಮಾಡಿ ಪ್ರಸಿದ್ಧಿಯಾಗಿದ್ದಳು. ಜೊತೆಗೆ ಸವರ್ಣೀಯರ ವಿರುದ್ಧ ಅದರಲ್ಲೂ ಬ್ರಾಹ್ಮಣರ ವಿರುದ್ಧ ಪದೇ ಪದೇ ಮಾತನಾಡುವುದಕ್ಕೂ ಖ್ಯಾತಿ ಪಡೆದಿದ್ದಳು. ಇದು ನನಗೆ ಅಕಾಡೆಮಿಯಲ್ಲಿ ಪರಿಚಯವಿಲ್ಲದ ಅವಳ ವ್ಯಕ್ತಿತ್ವದ ಆಯಾಮ. ಶಿವಗಾಮಿ ನನಗೆ, ನಮ್ಮ ಕುಟುಂಬಕ್ಕೆ ಪರಿಚಯ ಎಂದು ಸಹೋದ್ಯೋಗಿಗಳಿಗೆ ಗೊತ್ತಿದ್ದರಿಂದ ಶಿವಗಾಮಿ ನಿಮಗೆ ಚೆನ್ನಾಗಿ ಗೊತ್ತಲ್ಲವೇ ಎಂದು ವ್ಯಂಗ್ಯವಾಗಿ ಕೇಳುತ್ತಿದ್ದರು. ಇಲ್ಲಿಗೆ ಬಂದ ಮೇಲೆ ನೀವು ಅವಳನ್ನು ಸಂಪರ್ಕಿಸಿದ್ದೀರಾ ಎಂದು ಕೂಡ ಪ್ರಶ್ನಿಸುತ್ತಿದ್ದರು. ನನಗೆ ಅವಳನ್ನು ಸಂಪರ್ಕಿಸುವ ಯಾವ ಅಗತ್ಯವೂ ಇರಲಿಲ್ಲ. ವೈಯಕ್ತಿಕ, ಸಾಮಾಜಿಕ ಸ್ತರದಲ್ಲಿ ಸಂಪರ್ಕಿಸಬೇಕೆ ಬೇಡವೇ ಎಂಬುದರ ಬಗ್ಗೆಯೂ ಖಚಿತವಾದ ನಿಲುವಿರಲಿಲ್ಲ.

ನಾವು ಅಲ್ಲಿದ್ದಾಗಲೇ ಕೆಲವು ಹೇಳಿಕೆಗಳನ್ನು ನೀಡಿದಳು. ಬ್ರಾಹ್ಮಣರನ್ನು ದಲಿತರ ಮನೆಗೆ ಊಟಕ್ಕೆ ಕೂಗ ಬೇಡಿ. ಸುಮ್ಮನೆ ದುಡ್ಡು, ಶ್ರಮ ವೇಸ್ಟು. ನಮ್ಮ ಮನೆಗೆ ಬಂದು ಊಟ ಮಾಡುವುದರಿಂದ ಅವರಲ್ಲಿ ಒಳಗೆ ಕುಳಿತಿರುವ ಜಾತಿಯ ಭಾವನೆ ಹೋಗೋಲ್ಲ. ಜೊತೆಗೆ ದಲಿತರ ಮನೆಗೆ ಊಟಕ್ಕೆ ಹೋಗಿದ್ದೆವು ಅಂತ ತಮಗೇ ತಾವೇ Certificate ಕೊಟ್ಟುಕೊಂಡು ಬೀಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಲಾಭ ಮಾಡಿಕೊಳ್ಳುತ್ತಾರೆ. ಹೇಗೆ ಲೆಕ್ಕಾಚಾರ ಹಾಕಿದರೂ ದಲಿತರಿಗೇ ನಷ್ಟದ ಬಾಬ್ತು.

ಇಂತಹ ಹೇಳಿಕೆ ಬಂದಾಗ ನಿಮಗೇ ಗೊತ್ತಲ್ಲ, ಪರ-ವಿರೋಧದ ಚರ್ಚೆ ನಡೆಯುತ್ತಲೇ ಇರುತ್ತದೆ. ಯಾರೂ ತಮ್ಮ ನಿಲುವು ಬದಲಾಯಿಸಿಕೊಳ್ಳೋಲ್ಲ, ಯಾರೂ ಬದಲಾಗೋಲ್ಲ. ಇಂತಹ ವಿವಾದಗಳಿಂದಾಗಿ ಪರ-ವಿರೋಧದ ಬಣಗಳು ಇನ್ನಷ್ಟು ಅತಿ ನಿಲುವಿಗೆ ಹೋಗುತ್ತವೆ. ಯಾರೂ ಪ್ರಾಮಾಣಿಕವಾಗಿ ಒಂದೋ, ಎರಡೋ ಮಾತು ಕೂಡ ಆಡೋಲ್ಲ.

ಈ ವಿವಾದ ಮುಗಿಯುವುದರೊಳಗೆ ಇಂಥದೇ ಇನ್ನೊಂದು ಹೇಳಿಕೆ ಕೊಟ್ಟಳು. ತಮಿಳುನಾಡಿನಲ್ಲಿ ದೇವಸ್ಥಾನಕ್ಕೆ ಅರ್ಚಕರಾಗಿ ಬ್ರಾಹ್ಮಣೇತರರನ್ನು ನೇಮಕ ಮಾಡುವ ಪದ್ಧತಿಯಿದೆಯಷ್ಟೇ. ಕ್ರಮೇಣ ಸಮಾಜ ಅದನ್ನು ಒಪ್ಪಿಕೊಂಡಿರುವ ಹಾಗೆ ಕಾಣುತ್ತದೆ. ಈ ರೀತಿಯ ಅರ್ಚಕರಿಗೆ ತರಬೇತಿ ನೀಡುವ ಖರ್ಚನ್ನು ಬ್ರಾಹ್ಮಣ ಮಠಗಳು ವಹಿಸಿಕೊಂಡು, ಹಿಂದಿನ ಪಾಪಕ್ಕೆ ಪರಿಹಾರ ಪಡೀಬೇಕು. ಮುಜರಾಯಿ ಇಲಾಖೆಯವರು ಒಂದು ಪೈಸೆ ಕೂಡ ಖರ್ಚು ಮಾಡಬಾರದು.

ಹೀಗೆ ಇಂತಹ ಹೇಳಿಕೆಗಳೇ. ಈ ಮಧ್ಯೆ ಶಿವಗಾಮಿಗೆ ಚುನಾವಣೆ, ರಾಜಕೀಯ, ಅಧಿಕಾರದ ಆಸೆ ಕೂಡ ಇದೆಯೆಂದು ಸುದ್ದಿ ಹಬ್ಬಿತು. ದಲಿತರಲ್ಲಿ ನಿಮ್ಮಂತಹ ಪ್ರತಿಭಾವಂತರು, ಆಡಳಿತದ ಅನುಭವವಿರುವವರು ರಾಜಕೀಯಕ್ಕೆ ಬರಬೇಕು. ನಿಮಗೆ ಉಜ್ವಲವಾದ ಭವಿಷ್ಯವಿದೆ ಅಂತ ಎಲ್ಲರೂ ಆಕೆಯನ್ನು ಉಬ್ಬಿಸಿದರು. ಉತ್ತರ ಭಾರತದಲ್ಲಿ ಈಗಾಗಲೇ ಪ್ರಭಾವಿಯಾಗಿರುವ ಒಂದೆರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಕೂಡ ಬಂದಿದ್ದ ರಾಜಕೀಯ ಪಕ್ಷವೊಂದು ಶಿವಗಾಮಿಯನ್ನು ಒಲಿಸಿಕೊಂಡು ಪದಾಧಿಕಾರಿಯಾಗಿ ನೇಮಿಸಿಯೇಬಿಟ್ಟಿತು. ಹಾಗೆ ಪದಾಧಿಕಾರಿಯಾಗಿ ನೇಮಿಸಿದಾಗ ಶಿವಗಾಮಿ ಇನ್ನೂ ಸರ್ಕಾರಿ ಅಧಿಕಾರಿಯಾಗಿಯೇ ಇದ್ದದ್ದು ಕೂಡ ವಿವಾದಕ್ಕೆ ಕಾರಣವಾಯಿತು. ಶಿವಗಾಮಿ ರಾಜೀನಾಮೆ ಕೊಟ್ಟು ರಾಜ್ಯಾದ್ಯಂತ ಪ್ರವಾಸ ಮಾಡಿ ಕೊನೆಗೆ ಚುನಾವಣೆಗೆ ನಿಂತಾಯಿತು.

ವಿಚಾರ, ನಿಲುವುಗಳು, ಆಡಳಿತದ ಅನುಭವ ಇದೆಲ್ಲ ಏನೇ ಇದ್ದರೂ ಶಿವಗಾಮಿ ಹಣದ ವಿಚಾರದಲ್ಲಿ ಶುದ್ಧಹಸ್ತಳಾಗಿಯೇ ಉಳಿದಿದ್ದು, ಹೈ ಕಮಾಂಡ್‌ ತಂತ್ರಗಾರಿಕೆ, ರಾಜಕೀಯ ಪಕ್ಷಗಳು ಕೆಲಸ ಮಾಡುವ ರೀತಿ ನೀತಿಗಳಿಗೆ ಹೊಸಬರಾಗಿದ್ದರು. ಇವಳು ಸೇರಿದ್ದ ಪಕ್ಷದ ರಾಷ್ಟ್ರೀಯ ನಾಯಕಿಗೆ ಶಿವಗಾಮಿಯಷ್ಟು ವಿದ್ಯಾವಂತೆ, ಪ್ರತಿಭಾವಂತೆ ಚುನಾವಣಾ ರಾಜಕೀಯದಲ್ಲೂ ಗೆದ್ದುಬಿಟ್ಟರೆ ಒಂದಲ್ಲ ಒಂದು ದಿನ ತನಗೆ ಪ್ರತಿಸ್ಪರ್ಧಿಯಾಗಬಹುದೆಂಬ ಆತಂಕದಿಂದ ಬೇಕು ಬೇಕೆಂದೇ ಎರಡು ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸಿದಳು. ಮೊದಲೇ ಉಳಿದ ಜಾತಿಯವರ ವಿರೋಧ. ಅದೂ ಅಲ್ಲದೆ ಮೀಸಲು ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದರಿಂದ ಉಳಿದ ಅಭ್ಯರ್ಥಿಗಳು ಕೂಡ ದಲಿತರೇ ಆಗಿದ್ದು ಅವರೆಲ್ಲ ಈಗಾಗಲೇ ನಾಲ್ಕಾರು ಚುನಾವಣೆಗಳ ಅನುಭವವಿದ್ದವರಾಗಿದ್ದರು. ಶಿವಗಾಮಿಗೆ ಒಂದು ಕ್ಷೇತ್ರದಲ್ಲಿ ಡಿಪಾಸಿಟ್‌ ಹೋಯಿತು. ಇನ್ನೊಂದು ಕ್ಷೇತ್ರದಲ್ಲಿ ಏಳೂವರೆ ಸಾವಿರ ಮತಗಳ ಅಂತರದಿಂದ ಸೋಲು. ಬೇಕು ಬೇಕೆಂದೇ ತನ್ನನ್ನು ಎರಡು ಕಡೆ ಚುನಾವಣೆಗೆ ನಿಲ್ಲಿಸಿದರೆಂದು, ರಾಷ್ಟ್ರೀಯ ನಾಯಕಿ ತನ್ನ ಪರವಾಗಿ ಪ್ರಚಾರ ಮಾಡಲಿಲ್ಲವೆಂದು ಶಿವಗಾಮಿ ಬಹಿರಂಗವಾಗಿ ಆಪಾದಿಸಿದಾಗ ಪಕ್ಷದಿಂದ ಅಮಾನತು ಮಾಡಲಾಯಿತು.

ಈಕೆಯ ಗಂಡ ತ್ಯಾಗರಾಜ್‌ ಮಾತ್ರ ಯಾವ ವಿವಾದಕ್ಕೂ ಹೋಗದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಸಕಾಲದಲ್ಲಿ ಬಡ್ತಿ ಪಡೆದರು. ಮೆಟ್ರೋ ಜಲಮಂಡಳಿಯ ಕಾರ್ಯದರ್ಶಿ ಕೂಡ ಆದರು. ಅಕಾಡೆಮಿಯಲ್ಲಿ ತರಬೇತಿಗೆ ಬಂದಾಗ ಶಿವಗಾಮಿಗೆ ಇದ್ದದ್ದು ಒಬ್ಬಳು ಮಗಳು ಮಾತ್ರ. ಜೊತೆಗೆ ಈಗ ಇನ್ನೊಬ್ಬ ಮಗ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಇನ್ನು ಮುಂದೆ ಮದ್ರಾಸಿನಲ್ಲೇ ವಾಸಿಸಬೇಕೆಂದು ನಿರ್ಧರಿಸಿ ಆರುಂಬಾಕಂ ಬಡಾವಣೆಯಲ್ಲಿ ಒಂದು ದೊಡ್ಡ ಸೈಟ್‌ ಅಲಾಟ್‌ ಮಾಡಿಸಿಕೊಂಡು ಮನೆ ಕೂಡ ಕಟ್ಟಿಸಿಕೊಂಡಿದ್ದರು.

ನಮ್ಮ ಮನೆಯಲ್ಲೂ ಚೆನ್ನಾಗಿ ಗೊತ್ತಿದ್ದರಿಂದ ಆಗಾಗ್ಗೆ ಚರ್ಚೆಯಾಗೋದು, ಯಾಕೆ ಶಿವಗಾಮಿ ಇಷ್ಟೊಂದು ಬದಲಾದರು? ಸರ್ಕಾರಿ ಉನ್ನತ ಅಧಿಕಾರಿ ಹುದ್ದೆಗೂ ರಾಜೀನಾಮೆ ಕೊಟ್ಟು, ಚುನಾವಣೆಗೂ ನಿಂತುಬಿಟ್ಟರಲ್ಲ. ಈ ರೀತಿಯ ವಿವಾದಾಸ್ಪದ ಅಭಿಪ್ರಾಯಗಳು, ಇಷ್ಟೊಂದು ರಾಜಕೀಯ ಮಹತ್ವಾಕಾಂಕ್ಷೆ ಇರುವ ಒಂದೇ ಒಂದು ಎಳೆ ಕೂಡ ನಮಗೆ ಹಿಂದೆ ಗೊತ್ತಾಗಲಿಲ್ಲವಲ್ಲ!

ಮುಂದೆ ಶಿವಗಾಮಿ ದಲಿತ, ಹಿಂದುಳಿದ ವರ್ಗದ ಯುವಕರನ್ನು ನಾಗರಿಕ ಸೇವೆ, ಬ್ಯಾಂಕ್‌ ಅಧಿಕಾರಿಯಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಯೊಂದಕ್ಕೆ ಮಾರ್ಗದರ್ಶಿಯಾಗಿ ಕೆಲಸಕ್ಕೆ ಸೇರಿಕೊಂಡಳು. ತಾನೇ ರಾಜೀನಾಮೆ ಕೊಟ್ಟ ಸರ್ಕಾರಿ ಹುದ್ದೆಗೆ ಯುವಕರನ್ನು ತಯಾರು ಮಾಡುವ ಶಿವಗಾಮಿಯವರ ಅಸಾಂಗತ್ಯ ಕೂಡ ಸಾರ್ವಜನಿಕ ಮಾತುಕತೆಗೆ, ವಿವಾದಕ್ಕೆ, ಪತ್ರಿಕಾ ಲೇಖನಗಳಿಗೆ ವಸ್ತುವಾಯಿತು. ಒಂದೂವರೆ ವರ್ಷದ ನಂತರ ಹೈ ಕೋರ್ಟ್‌ ವಕೀಲೆಯಾಗಿ ನೋಂದಾಯಿಸಿಕೊಂಡರು.

ಯಾರಿಗೆ ಯಾರ ಬಗ್ಗೆ ಒಲವಿದೆ, ಯಾರಿಗೆ ಯಾರು ಸರಿಯಾದ ಜೋಡಿ ಎಂದು ಅವಳೇ ನಿರ್ಧಾರ ಮಾಡಿಕೊಂಡು ಅದಕ್ಕೆ ತಕ್ಕಂತೆ ಪಿಸುಮಾತು, ಪ್ರಚಾರ, ರಹಸ್ಯ ಮಾತುಕತೆ, ಸಂದೇಶವಾಹಕಿಯ ಕೆಲಸ ಎಲ್ಲವನ್ನೂ ಎಡಬಿಡದೆ ಉತ್ಸಾಹದಿಂದ ಮಾಡುತ್ತಿದ್ದಳು. ಹಾಗೆಲ್ಲ ಮಾಡಿ ಕುದುರಿಸಿದ್ದು ಮೂರೇ ಜೋಡಿಗಳಾದರೂ ಶಿವಗಾಮಿಗೆ ಮಾಮಿಯ ಪಟ್ಟ ಶಾಶ್ವತವಾಗಿ ಗಂಟುಬಿತ್ತು.

ಶಿವಗಾಮಿಯನ್ನು ನಾನು ಸಂಪರ್ಕಿಸಿ ನೆರವು ಕೇಳಲೇಬೇಕಾದ ಒಂದು ಸಂದರ್ಭ ಬಂದೇಬಿಟ್ಟಿತು. ನಮ್ಮ ದೂರದ ಸಂಬಂಧಿ ಮಂಜುಳಾ ಶಿವರಾಂ ಮೇಲೆ ಒಂದು Caste Discrimination ಪ್ರಕರಣ ದಾಖಲಾಯಿತು. ಮೂರು ದಶಕಗಳಿಂದ ಮದ್ರಾಸಿನ ಭಾಷಾ ಸಂಶೋಧನಾ ಕೇಂದ್ರದಲ್ಲಿ ಅಧ್ಯಾಪಕಿಯಾಗಿದ್ದ ಆಕೆ ಪಾಠ ಮಾಡುವಾಗ ಅವಶ್ಯಕತೆ ಇಲ್ಲದಿದ್ದರೂ ದಲಿತರ ಸ್ವಭಾವ, ಆಕಾಂಕ್ಷೆ ಬಗ್ಗೆ ಗುಮಾನಿ, ಅವಹೇಳನ ಮಾಡುವಂತಹ ಮಾತುಗಳನ್ನು ವ್ಯಂಗ್ಯವಾಗಿ ಆಡಿದರೆಂದು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರಕರಣ ಎಲ್ಲೆಲ್ಲಿಗೋ ಹೋಗಿ ಕೊನೆಗೆ ಪರಿಶಿಷ್ಟರ ಆಯೋಗದ ಮುಂದೆ ಕೇಸು ದಾಖಲಾಗೇಬಿಟ್ಟಿತು. ನನ್ನ ಮಾತುಗಳೆಲ್ಲ ನಾನು ಪಾಠ ಮಾಡುವ ಪಠ್ಯದಿಂದ ಪ್ರೇರೇಪಿತವಾಗಿದ್ದವು ಎಂಬುದು ಮಂಜುಳಾರ ವಾದ. ಮಂಜುಳಾರನ್ನು ಹಲವಾರು ವರ್ಷಗಳಿಂದ ನಾವು ಬಲ್ಲೆವು. ಅವರು ಹೀಗೆ ತಪ್ಪು ತಪ್ಪಾಗಿ ಮಾತನಾಡುವ ಸ್ವಭಾವದವರಲ್ಲವೆಂದು ಕೆಲವು ಸಹೋದ್ಯೋಗಿಗಳು ಹೇಳಿದರು. ಏನೇ ಆದರೂ ತಮ್ಮ ಮನಸ್ಸಿನಲ್ಲಿರುವುದನ್ನು ಆಕೆ ಪ್ರಾಮಾಣಿಕವಾಗಿ ಹೇಳಿಬಿಟ್ಟಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಗೌರವಿಸಬೇಕು. ಈಗ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಕೂಡ ರೆಡಿಯಾಗಿದ್ದಾರೆ. ಆದ್ದರಿಂದ ಪ್ರಕರಣಕ್ಕೆ ಇಲ್ಲಿಗೇ ಇತಿಶ್ರೀ ಹೇಳಬೇಕೆಂದು ಇನ್ನೂ ಕೆಲವರು ವಾದಿಸಿದರು. ಈ ವಾದಗಳೆಲ್ಲ ಸರಿ ಎನ್ನುವವರು ಕೂಡ ಮಂಜುಳಾ ವಿರೋಧಿ ಬಣದ ನಾಯಕರನ್ನು ಸಮಾಧಾನ ಮಾಡಲಾಗದೆ ಕೇಸು ದಾಖಲಾಗೇ ಹೋಯಿತು. ಸೇವೆಯಿಂದ ತಾತ್ಕಾಲಿಕವಾಗಿ ಅಮಾನತ್ತು ಕೂಡ ಮಾಡಲಾಯಿತು. ಆಯೋಗದ ಮುಂದೆ ಕೇಸು ವಿಚಾರಣೆಗೆ ಬರುವ ದಿನ ಬಂದೇಬಿಟ್ಟಿತು. ಕೇಸ್‌ ಗೆಲ್ಲಬೇಕಾದರೆ ಆಯೋಗದ ಸದಸ್ಯರಿಗೆ ಚೆನ್ನಾಗಿ ಗೊತ್ತಿರುವ ವಕೀಲರನ್ನೇ ನೇಮಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಕೇಸು ಗೆಲ್ಲಬಹುದು ಎಂದು ಒಂದಿಬ್ಬರು ವಕೀಲರ ಹೆಸರುಗಳನ್ನು ಸೂಚಿಸಲಾಯಿತು. ಆದರೆ ಸದರಿ ವಕೀಲರು ಕೇಸು ತೆಗೆದುಕೊಳ್ಳಬೇಕಾದರೆ ಶಿವಗಾಮಿಯವರು ಒಂದು ಶಿಫಾರಿಸ್‌ ಮಾತು ಹೇಳಿದರೆ ಮಾತ್ರ ಕೇಸ್‌ ತೆಗೆದುಕೊಳ್ಳುತ್ತಿದ್ದರು. ಮಂಜುಳಾ ಶಿವರಾಂ ನನ್ನ ಕಡೆಗೆ ಓಡಿ ಬಂದರು.

ಶಿವಗಾಮಿ ನನಗೆ ಗೊತ್ತಿಲ್ಲ ಎಂದು ಹೇಳುವ ಹಾಗಿಲ್ಲ. ಗೊತ್ತಿದ್ದರೂ ಈವತ್ತಿನ ಸ್ವರೂಪದ ಶಿವಗಾಮಿ ನನಗೆ ಗೊತ್ತೇ ಇಲ್ಲ ಎಂದು ಕೂಡ ಬಿಡಿಸಿ ಹೇಳಿದರೆ, ನೆರವು ನೀಡಲು ಇಷ್ಟವಿಲ್ಲವೆಂದು ತಪ್ಪು ತಿಳಿಯಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಇನ್ನೂ ಒಂದು ಹಿಂಜರಿಕೆ ನನ್ನ ಮನಸ್ಸಿನಲ್ಲಿತ್ತು. ಗೊತ್ತಿರುವವಳು, ಸ್ನೇಹದಿಂದ ಇದ್ದವಳು ಎಲ್ಲ ನಿಜ. ಆದರೆ ಈಗ ಬೆಳೆದಿದ್ದಾಳೆ. ಸಾರ್ವಜನಿಕ ಜೀವನದಲ್ಲಿ ಪ್ರಸಿದ್ಧಿ, ಗಣ್ಯತೆ ಇದೆ. ನನ್ನನ್ನು ಮಾನ್ಯ ಮಾಡದೆ ಹೋಗಬಹುದು. ತಿರಸ್ಕರಿಸದೇ ಹೋದರೂ ತೀರಾ ಸಾಧಾರಣವಾಗಿ ಕಾಣಬಹುದು ಎಂಬ ಅನುಮಾನ. ಈ ಅನುಮಾನ ಸಕಾರಣವೂ ಆಗಿತ್ತು. ನನ್ನ ಜೊತೆ ಓದಿದವರು, ಕೆಲಸ ಮಾಡಿದವರು ಎಷ್ಟೋ ಜನ ನಾನಾ ರೀತಿಯಲ್ಲಿ ಬೆಳೆದು, ಸೆಲಿಬ್ರಿಟಿಗಳಾದಾಗ, ಅಂಥವರನ್ನು ಭೇಟಿ ಮಾಡಲು ಹೋಗಿ ಮುಖಭಂಗ ಅನುಭವಿಸಿ, ಈಚೀಚೆಗೆ ಅಂತಹ ಪ್ರಯತ್ನಗಳನ್ನೇ ಮಾಡುತ್ತಿರಲಿಲ್ಲ.

ಫೋನ್‌ ಮಾಡಿದಾಗ ಹಿಂದಿನ ಪ್ರೀತಿ, ಸೌಜನ್ಯದಿಂದಲೇ ಮಾತನಾಡಿಸಿದರು. ಕೆಲವು ಸಹೋದ್ಯೋಗಿಗಳ ಹೆಸರು ಇನ್ನೂ ನೆನಪಿನಲ್ಲಿದ್ದು ಅವರ ಬಗ್ಗೆ ಕೂಡ ವಿಚಾರಿಸಿದರು. ಶಿವಗಾಮಿಯ ಆಫೀಸಿಗೆ ಹೋದಾಗಲೂ ಇದೇ ರೀತಿಯ ಭಾವನೆ ಬಂತು.

ಆಫೀಸು ತುಂಬಾ ವಿಶಾಲವಾಗಿಲ್ಲದಿದ್ದರೂ ಆಧುನಿಕವಾಗಿತ್ತು. ಸಹಾಯಕ ವಕೀಲರ ಕ್ಯಾಬಿನ್‌ಗಳಿಗಿಂತ ಶಿವಗಾಮಿಯ ಕ್ಯಾಬಿನ್‌ ತುಂಬಾ ದೊಡ್ಡದಾಗಿತ್ತು. ಶಿವಗಾಮಿ ಕುಳಿತಿದ್ದ ಕುರ್ಚಿಯ ಹಿಂಭಾಗದಲ್ಲೇ ಒಂದು ಸಣ್ಣ ಕೋಣೆಯಿದ್ದು ಅಲ್ಲೇ ಮಲಗುವ ಮಂಚ, ಸೋಫಾ ಸೆಟ್‌ ಇರುವುದೆಲ್ಲ ಕಾಣಿಸಿತು.

ಶಿವಗಾಮಿ ಸ್ವಲ್ಪ ದಪ್ಪಗಾಗಿರುವಂತೆ ಕಂಡಿತು. ಒಂದು ಸುತ್ತು ಮೈ ಬಂದಿದೆ ಎನಿಸಿತು. ಆದರೆ ಮುಖದಲ್ಲಿ ಮೊದಲಿಗಿಂತ ಹೆಚ್ಚು ವರ್ಚಸ್ಸು. ಉದ್ದನೆಯ ಜಡೆ ಈಗ ಮಾಯವಾಗಿತ್ತು. ಭುಜ ಕುಣಿಸುವುದು, ತಲೆ ಹೊರಳಿಸುವುದು ಇದೆಲ್ಲ ಹಿಂದಿಗಿಂತ ಭಿನ್ನವಾಗಿತ್ತು, ಗಮನ ಸೆಳೆಯುತ್ತಿತ್ತು. ಕಣ್ಣುಗಳಲ್ಲಿ ಮಾತ್ರ ಹಿಂದಿನ ಮಿಂಚೇ ಈಗಲೂ.

ಮಂಜುಳಾ ಶಿವರಾಂ ಪ್ರಕರಣದ ಹಿನ್ನೆಲೆ, ವಕೀಲರ ಅಗತ್ಯದ ಬಗ್ಗೆ ಶಿವಗಾಮಿಯವರಿಗೆ ತಿಳಿದೇ ಇತ್ತು. ಕೇಸು ತೆಗೆದುಕೊಳ್ಳಲು ನಮಗೆ ಬೇಕಾದ ವಕೀಲರನ್ನು ಒಪ್ಪಿಸುವುದಾಗಿ ಭರವಸೆ ಕೊಡುತ್ತಾ, ಇದರಲ್ಲಿ ನಿಮ್ಮ ಮಂಜುಳಾ ಅವರದೇನೂ ತಪ್ಪಿಲ್ಲ ಬಿಡಿ. ಇದೆಲ್ಲ ಪ್ರಜ್ಞಾಪೂರ್ವಕ ನಿಲುವುಗಳಲ್ಲ. Sub-conscious level ನಲ್ಲಿ ಯಾವುದೇ ಸವರ್ಣೀಯರ ಮನಸ್ಸಿನಲ್ಲಿ ಇರುವಂತಹ ಭಾವನೆಗಳು ಅಷ್ಟೇ. ಯಾವುದೋ ಒಂದು ಸಂದರ್ಭದಲ್ಲಿ ಹೊರ ಬಂದುಬಿಡುತ್ತೆ. ಕೇಸಿನ ತೀರ್ಪು ವಿರುದ್ಧವಾದರೆ ಪೂರ್ವಾಗ್ರಹ ಇನ್ನೂ ಹೆಚ್ಚಾಗುತ್ತೆ. ಕೇಸು ಗೆದ್ದರೆ ಇಂತದ್ದನ್ನೆಲ್ಲ ಹೇಗಾದರೂ ನಿಭಾಯಿಸಬಹುದು ಅನ್ನುವ ದೇಶಾವರಿ ಭಾವನೇನು ಜಾಸ್ತಿಯಾಗುತ್ತೆ.

ಇದನ್ನೆಲ್ಲ ಹೇಳುವಾಗ ಶಿವಗಾಮಿ ಮುಖದಲ್ಲಿ ಯಾವುದೇ ವ್ಯಂಗ್ಯ, ಕುಚೋದ್ಯದ ಭಾವನೆ ಕಾಣಲಿಲ್ಲ. ಎಲ್ಲರಿಗೂ ಗೊತ್ತಿರುವ ವ್ಯವಹಾರಜ್ಞಾನದ ಮಾತನ್ನೇ ಹೇಳುತ್ತಿರುವಂತೆ, ಯಾವುದೇ ಭಾವನೆಯನ್ನು ವ್ಯಕ್ತಪಡಿಸದೇ ಹೇಳಿದ್ದರು.

ನಂತರ ಬೀಳ್ಕೊಡಲು ಕಟ್ಟಡದ ಕೆಳಭಾಗಕ್ಕೆ ಬಂದು ಕಾರಿನ ಬಳಿ ನಿಲ್ಲುತ್ತಿದ್ದಾಗ ನಮ್ಮೆದುರಿಗೆ ಬಂದು ನಗುತ್ತಾ ನಿಂತ ಯುವಕನನ್ನು ಮಗ ಧರ್ಮರಾಜ್‌ ಎಂದು ಪರಿಚಯ ಮಾಡಿಕೊಟ್ಟರು. ಮಗ ಇನ್ನೂ ಟೆನ್ನಿಸ್‌ ಧಿರಸಿನಲ್ಲಿಯೇ ಇದ್ದ. ಟೀ ಷರ್ಟಿನ ಬಲತೋಳಿನ ಭಾಗದಲ್ಲಿ ಮಣ್ಣು ಮೆತ್ತಿಕೊಂಡಿರುವುದು ದೂರಕ್ಕೇ ಕಾಣುತ್ತಿತ್ತು.

“ನೋಡಿ, ಇವನಿಗೆ ವಿಪರೀತ ಟೆನ್ನಿಸ್‌ ಹುಚ್ಚು. ವಿನೋದ್‌ ಶ್ರೀಧರನ್‌ ಅಕಾಡೆಮಿಯಲ್ಲಿ ಎರಡು ವರ್ಷದಿಂದ ಕೋಚಿಂಗ್‌ ನಡೀತಾ ಇದೆ. ಚೆನ್ನಾಗೂ ಆಡ್ತಾನೆ. ಆದರೆ ಇನ್ನೂ ರಾಜ್ಯಮಟ್ಟದ ಜೂನಿಯರ್‌ ತಂಡಕ್ಕೆ ಆಯ್ಕೆ ಆಗಲು ಸಾಧ್ಯವಾಗಿಲ್ಲ. ನ್ಯಾಷನಲ್‌ ಲೆವೆಲ್‌ದು ಹಗಲುಗನಸು. ಇದನ್ನೇ ನೆಚ್ಚಿಕೊಂಡು ಜೀವನ ಸಾಗಿಸೋಕ್ಕಾಗುತ್ತಾ? ಹೇಳಿದರೆ ನಮ್ಮ ಮಾತು ಕೇಳಬೇಕಲ್ಲ.”

ತಾಯಿಯ ದೂರಿಗೆ ಮಗ ನಗುತ್ತಿದ್ದರೂ ಆ ನಗುವಿನಲ್ಲಿ ಇದೆಲ್ಲ ಮಾಮೂಲು ಮಾತುಗಳು ಎನ್ನುವ ಉದಾಸೀನದ ಭಾವನೆಯೂ ಕಾಣುತ್ತಿತ್ತು. ಶಿವಗಾಮಿಯೇ ಮಾತು ಮುಂದುವರೆಸುತ್ತಾ ನಿಮ್ಮ ಮಕ್ಕಳು ಏನು ಮಾಡ್ತಿದ್ದಾರೆ ಎಂದು ಕೇಳಿದರು. ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಕೋಚಿಂಗ್‌, ಪ್ರವೇಶ ಪರೀಕ್ಷೆಗಳ ಧಾರಾವಾಹಿ ಬಗ್ಗೆ ಸೂಚ್ಯವಾಗಿ ಹೇಳಿದೆ. ಶಿವಗಾಮಿ ನಿರಾಳವಾಗಿ ನಗುತ್ತಾ –

“ಸಮಸ್ಯೆಯೇ ಇಲ್ಲ ಬಿಡಿ. ಎಲ್ಲಾದರೂ ಮುಂದೆ ಬರ‍್ತಾರೆ. Sports ವಿಷಯ ಹಾಗಲ್ಲ. ಇನ್ನೊಬ್ಬರ ಮನೆ ಮಕ್ಕಳು ಆಡುವಾಗ, ಟೆಲಿವಿಷನ್‌ನಲ್ಲಿ ಯಾರಾದರೂ ದೇಶವನ್ನು ಪ್ರತಿನಿಧಿಸುವಾಗ ಪ್ರೋತ್ಸಾಹಿಸಬಹುದು. ನಮ್ಮ ಮನೇಲೆ ಮಕ್ಕಳು ಅದನ್ನೇ ಉದ್ಯೋಗ ಮಾಡ್ಕೋತೀನಿ ಅಂದಾಗ ಹೆದರಿಕೆ ಶುರುವಾಗುತ್ತೆ.”
ಈಗ ಧರ್ಮರಾಜ್‌ ಗಮನ ನಮ್ಮ ಕಡೆಗಿರಲಿಲ್ಲ. ಎದುರುಗಡೆ ಹೋಗುತ್ತಿದ್ದ ತರುಣ ದಂಪತಿಗಳನ್ನು ಎವೆಯಿಕ್ಕದೆ ನೋಡುತ್ತಿದ್ದ.

ಕೇಸಿನ ತೀರ್ಪು ಮಂಜುಳಾ ಶಿವರಾಂ ಪರವಾಗಿಯೇ ಬಂತು.

ತೀರ್ಪಿನಲ್ಲಿ ಒಮ್ಮತವಿದ್ದರೂ ತನಿಖಾ ಮಂಡಳಿಯ ಸದಸ್ಯರಾದ ನ್ಯಾಯಮೂರ್ತಿ ಜೇಮ್ಸ್‌ ಆನಂದ್‌ ಪ್ರತ್ಯೇಕ ಟಿಪ್ಪಣಿಯನ್ನು ತೀರ್ಪಿಗೆ ಲಗತ್ತಿಸಿದ್ದರು.
“ಒಂದು ಇಲಾಖೆ, ಒಂದು ಸಂಸ್ಥೆ ಎಂದರೆ ಕುಟುಂಬವಿದ್ದ ಹಾಗೆ. ಕುಟುಂಬದ ಸದಸ್ಯರಲ್ಲಿ ಮೂಡುವ ಭಿನ್ನಾಭಿಪ್ರಾಯ, ವಿರಸ, ಪರಸ್ಪರ ತಪ್ಪು ಕಲ್ಪನೆಗಳನ್ನು ಪರಿಹರಿಸಿಕೊಳ್ಳಲು ಕಾನೂನು, ವಕೀಲರು, ನ್ಯಾಯಮಂಡಳಿಯ ಆಚೆಗೂ ಒಂದು ಮಾನಸಿಕ ವ್ಯವಸ್ಥೆ ಇರಬೇಕು. ಪರಸ್ಪರ ವಿಶ್ವಾಸದ ಅಭಾವ, ಪೂರ್ವಾಗ್ರಹಗಳಿಂದಾಗಿ ಮೂಡುವ ಎಲ್ಲ ಭಾವನೆ, ವಿಚಾರಗಳನ್ನು ದೂರುಗಳಾಗಿ ಪರಿವರ್ತಿಸಿ ನ್ಯಾಯಮಂಡಳಿಯ ಮುಂದೆ ಬಂದರೆ, ನಾವಾದರೂ ಏನು ಮಾಡಲು ಸಾಧ್ಯ. ನಮ್ಮ ಸಮಾಜದಲ್ಲಿ ಪರಿವರ್ತನೆಯಾಗುತ್ತಿದೆ, ನಿಜ. ಆದರೆ ಪರಿವರ್ತನೆಯನ್ನು ಅಂತರಂಗದ ಮಟ್ಟದಲ್ಲಿ ಯಾರೂ ಹೃತ್ಪೂರ್ವಕವಾಗಿ ಒಪ್ಪಿಲ್ಲ, ಒಪ್ಪಲು ಇಷ್ಟ ಕೂಡ ಪಡುತ್ತಿಲ್ಲ ಎಂಬುದೇ ದೊಡ್ಡ ಸತ್ಯ. ತಂತಿಯ ಮೇಲಿನ ನಡಿಗೆ ಇನ್ನೂ ಒಂದೆರಡು ಶತಮಾನಗಳಾದರೂ ಇದ್ದೇ ಇರುತ್ತದೆ.”

*****

ಮತ್ತೆ ನನಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಬೆಂಗಳೂರು ಕಡೆಗೆ ವರ್ಗವಾಗುತ್ತಾ ಹೋಯಿತು. ಶಿವಗಾಮಿ ರಾಜಕೀಯ ಪಕ್ಷಗಳನ್ನು ಬದಲಾಯಿಸಿದರು. ವಿಧಾನ ಪರಿಷತ್‌, ರಾಜ್ಯಸಭೆಗಳ ನೇಮಕಾತಿಗೆ ಪ್ರಯತ್ನಿಸಿದರು. ಯಶಸ್ವಿಯಾಗಲಿಲ್ಲ. ವಕೀಲಿಕೆಯಲ್ಲೇ ಚೆನ್ನಾಗಿ ಮುಂದೆ ಬಂದರೆಂದು, ತಿಂಗಳಿಗೆ ಹತ್ತು ಹನ್ನೆರಡು ದಿನ ಸುಪ್ರೀಂ ಕೋರ್ಟ್‌ ಕೆಲಸದ ಮೇಲೆ ದೆಲ್ಲಿಯಲ್ಲೇ ಇರುತ್ತಾರೆಂದು ಬೇರೆ ಬೇರೆ ಮೂಲಗಳಿಂದ ಆಗಾಗ್ಗೆ ಕೇಳಿಬರುತ್ತಿತ್ತು.

*****

ನಾನು ನಿವೃತ್ತಿಯಾಗಿ ಬೆಂಗಳೂರಿನಲ್ಲಿ ವಾಸಿಸಲು ಪ್ರಾರಂಭ ಮಾಡಿದ ಎಷ್ಟೋ ವರ್ಷಗಳ ಮೇಲೆ ಶಿವಗಾಮಿಯವರಿಂದ ದೂರವಾಣಿ ಕರೆ! ಜಕ್ಕೂರಿನಲ್ಲಿರುವ ಕೇರಳದ ಮಹಿಳಾ ಧಾರ್ಮಿಕ ಜಗದ್ಗುರುವಿನ ಪರವಾಗಿ ಮಾತನಾಡುತ್ತಿರುವುದಾಗಿ ಹೇಳಿದರು. ಈಗ ತಾನು ಧಾರ್ಮಿಕ ಗುರುವಿನ ಕಾನೂನು ಮತ್ತು ಶಿಕ್ಷಣ ಸಲಹೆಗಾರಳಾಗಿರುವುದಾಗಿ ಕೂಡ ತಿಳಿಸಿದರು. ಮಹಿಳಾ ಗುರುವಿನ ಜನಾಂಗದವರು ಆರ್ಥಿಕವಾಗಿ ವ್ಯಾಪಾರದಲ್ಲಿ ಚೆನ್ನಾಗಿ ಮುಂದೆ ಬಂದಿದ್ದಾರೆ. ಧಾರ್ಮಿಕವಾಗಿ ಮುಂದೆ ಬರಲು ಸರಿಯಾದ ತರಬೇತಿ-ಧ್ಯಾನ ಕೇಂದ್ರವಿಲ್ಲ. ಇರುವ ಪುರುಷ ಜಗದ್ಗುರುಗಳೆಲ್ಲ ಇಲ್ಲ ಲಂಪಟರು, ಇಲ್ಲ ನಿಷ್ಕ್ರಿಯರು. ಈಕೆ ಹಾಗಲ್ಲ. ಮುಖ್ಯವಾಗಿ ಹಾಡುಗಾರ್ತಿ. ಪರವಶತೆಯಿಂದ ಹಾಡುತ್ತಾರೆ. ಜನಾಂಗದ ಭಕ್ತರ ಪರವಾಗಿ ಉಪವಾಸ ಮಾಡಿ ಕನಸಿನಲ್ಲಿ, ಧ್ಯಾನದಲ್ಲಿ ಹೊಳೆದ ಮಾತನ್ನೇ ಬುದ್ಧಿ ಮಾತಾಗಿ, ಚಿಂತನೆಯಾಗಿ ಹೇಳುತ್ತಾರೆ, ಉಪನ್ಯಾಸ ಮಾಡುತ್ತಾರೆ. ಸುಳ್ಳು ಹೇಳುವುದಿಲ್ಲ. ದುಡ್ಡು ಮಾಡುವುದಿಲ್ಲ. ಮನಸ್ಸಿಗೆ ಹೊಳೆದದ್ದನ್ನು ಮಾತ್ರ ಪ್ರಾಮಾಣಿಕವಾಗಿ ಹೇಳ್ತಾರೆ ಎಂಬ ನಂಬಿಕೆಯಿದೆ. ಜನಾಂಗದವರನ್ನು ಹೇಗಾದರೂ ಧಾರ್ಮಿಕವಾಗಿ ಮುಂದೆ ತರಬೇಕೆಂದು ಆಸೆ. ಜನಾಂಗದವರು ಮೂಲದಲ್ಲಿ ಬೇಡನಾದ ಶಿವನ ರೂಪದ ಆರಾಧಕರು. ಜನಾಂಗದವರು ವಾಸಿಸುವ ಕಡೆಯೆಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆದು, ಹವನ, ಹೋಮ, ಭಜನೆಗೆ, ಉಪನ್ಯಾಸಗಳಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ವಿಶೇಷವಾಗಿ ಕೋಲಾರ, ಚಿಂತಾಮಣಿ, ಆನೇಕಲ್‌, ಬೆಂಗಳೂರಿನ ದಂಡು ಪ್ರದೇಶ ಇಲ್ಲೆಲ್ಲ ಭಕ್ತರಿದ್ದಾರೆ. ಅಮ್ಮಾಳ್‌ದು ನೇರವಾದ, ಸರಳ ಮನಸ್ಸಿನ ಪ್ರೀತಿಯ ವ್ಯಕ್ತಿತ್ವ.

ಇಷ್ಟೆಲ್ಲ ಯಾಕೆ ಹೇಳ್ತಿದೀನಿ ಅಂದರೆ ಅಮ್ಮಾಳ್‌ಗೆ ಈಗ ತನ್ನ ಚಿಂತನೆಯೆಲ್ಲ ಕನ್ನಡಕ್ಕೆ ಅನುವಾದವಾಗಿ ಪುಸ್ತಕವಾಗಬೇಕು ಅಂತ ಆಸೆಯಿದೆ. ಇಂತಹ ಕೆಲಸಗಳನ್ನು ಬ್ರಾಹ್ಮಣರ ಮೂಲಕವೇ ಮಾಡಿಸಬೇಕು ಅಂತ ಅಮ್ಮಾಳ್‌ ಆಸೆ. ಹಣಕಾಸು, ಆಸ್ತಿ, ಕಟ್ಟಡ ಇಂತಹ ವ್ಯವಹಾರಗಳಿಗಲ್ಲದೆ ಹೋದಾಗ ಮಠದಲ್ಲಿ ಬೇರೆ ಜಾತಿಯವರನ್ನೂ ಅದರಲ್ಲೂ ಬ್ರಾಹ್ಮಣರನ್ನೂ Services ಗೆ ನೇಮಿಸ್ಕೋತಾರೆ. ಹೇಳಿದೆನಲ್ಲ ಅಮ್ಮಾಳ್‌ಗೆ ಬ್ರಾಹ್ಮಣರ ಬಗ್ಗೆ ವಿಶೇಷವಾದ ಆದರ. ನಿಮ್ಮ ಸಂಪರ್ಕ-ಸ್ನೇಹಿತರನ್ನೆಲ್ಲ ವಿಚಾರಿಸಿ ಒಂದಿಷ್ಟು ಅನುವಾದಕರನ್ನು ಗೊತ್ತು ಮಾಡಿಕೊಡಿ. ಹಣ ಕೂಡ ಚೆನ್ನಾಗಿ ಕೊಡ್ತಾರೆ. ಎಂಟು-ಹತ್ತು ಅನುವಾದಕರಿಗೆ ಒಂದೆರಡು ವರ್ಷಕ್ಕೆ ಆಗುವಷ್ಟು ಕೆಲಸ ಇದೆ.

ಮನೆ ಕಡೆ ಬರುವುದಿಲ್ಲವೇ ಎಂದು ಕೇಳಿದೆ. ಇಲ್ಲ, ದೆಲ್ಲಿಯಲ್ಲಿ ತುಂಬಾ ಕೆಲಸವಿದೆ. ಷಣ್ಮುಗಂ ಗುಂಪಿನ ಕೆಲವು ಮೊಕದ್ದಮೆಗಳು ಸುಪ್ರೀ ಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿವೆ. ನಾನೇ ನಿಂತುಕೊಂಡು ವಾದ ಮಾಡಬೇಕು. ಚೆಟ್ಟಿಯಾರ್‌ ಗುಂಪುಗಳಲ್ಲಿ ನನಗೆ ಸಿಕ್ಕಿರುವುದು ಷಣ್ಮುಗಂ ಗುಂಪಿನ ಕೇಸುಗಳು ಮಾತ್ರ. ಅದೂ ನಾನು ತಿರುನಲ್ವೇಲಿಯಲ್ಲಿ ಕಲೆಕ್ಟರ್‌ ಆಗಿದ್ದಾಗ Land Conversion ಕೆಲಸದಲ್ಲಿ ನೆರವಾಗಿದ್ದೆ ಅನ್ನುವ ಮುಲಾಜಿಗೆ ಕೇಸುಗಳನ್ನು ಕೊಟ್ಟಿದ್ದಾರೆ. ಇಲ್ಲದಿದ್ದರೆ, ಅವರೆಲ್ಲ ನಮಗೆ ಯಾಕೆ ಕೇಸು ಕೊಡ್ತಾರೆ ಹೇಳಿ?

ಮುಂದಿನ ಸಲ ಬಂದಾಗ ನಿಮಗೆ ಅಮ್ಮಾಳ್‌ ದರ್ಶನ ಮಾಡಿಸುತ್ತೇನೆ. ದಿನನಿತ್ಯದ ಜೀವನದ ಸಮಸ್ಯೆಗಳನ್ನು ತೆಗೆದುಕೊಂಡು, ದಿನನಿತ್ಯದ ಭಾಷೆಯಲ್ಲೇ, ದಿನನಿತ್ಯದ ಉದಾಹರಣೆಗಳ ಮೂಲಕವೇ ಚೆನ್ನಾಗಿ ಮಾತನಾಡುತ್ತಾರೆ. ಬೇಗ ಅನುವಾದಕರನ್ನು ಗೊತ್ತು ಮಾಡಿಕೊಡಿ.

*****

ನಾನು ನನಗೆ ಪರಿಚಯವಿದ್ದ ಬ್ರಾಹ್ಮಣ ಅನುವಾದಕರ ಸಾಮರ್ಥ್ಯ, ಒಲವುಗಳನ್ನು ತುಲನೆ ಮಾಡುತ್ತಾ ಮನಸ್ಸಿನಲ್ಲೇ ಪಟ್ಟಿ ತಯಾರಿಸಿದೆ.