ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಆಕೆ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಅಂಕಣ “ಲೋಕ ಏಕಾಂತ”

ಒಂದು ದಿನ ಹೀಗೇ ಮುಸ್ಸಂಜೆಯ ವೇಳೆ ನೀಲಾಂಜನ ಬೆಳಗಿ ಗಂಧದಕಡ್ಡಿಯ ಪರಿಮಳ ಅಡರಿ, ಮಳೆ ನಿಂತ ಹೊತ್ತಿನ ಶುಭ್ರಬೀದಿಯ ಸುಮ್ಮನೆ ದಿಟ್ಟಿಸುತ್ತಾ ನಿಂತಾಗಲೋ, ಮುದ್ದುಮಗ ಕೆನ್ನೆಗೊಂದು ಹೂಮುತ್ತನೊತ್ತಿ ಅಮ್ಮಾ ಎಷ್ಟು ಮುದ್ದು ನೀನು ಗೊತ್ತಾ ಎಂದಾದ ಮೇಲೋ ಅಥವಾ ಮಧ್ಯಾಹ್ನದ ಸವಿನಿದ್ದೆ ಮುಗಿದ ಅರೆಎಚ್ಚರದಲ್ಲೋ ಬದುಕಿನ ಈ ಘಟ್ಟವೇರಲು ಪಟ್ಟ ಬವಣೆ ಹಿತವಾದ ನೋ‌ವಿನದ್ದೊಂದು ತರಂಗವೆಬ್ಬಿಸಿರುತ್ತದೆ.

ಬಡತನ, ನಿರುದ್ಯೋಗ, ಸಾಲದ ಸುಳಿ, ಅನಾರೋಗ್ಯ, ಆಪಾದನೆ, ಸುತ್ತಲಿನವರ ಕೊಂಕು ಮಾತು ಇಂತಹವೇ ಎರಡು ಮೂರು ಸಮಸ್ಯೆಗಳು ಸುರುಳಿಯಾಗಿ ಕಡೆಗೆ ಬಿಡಿಸಲಾರದ ಸುಕ್ಕಾಗಿ ದಿಕ್ಕುತೋಚದೆ ನಿಂತ ದಿನಗಳ ಮೆಲುಕು ಅದು. ಅಸಲಿಗೆ ಸಮಸ್ಯೆ ಶುರುವಾಗಿದ್ದು ಎಲ್ಲಿಂದ ಅಂತ ಗುರುತೂ ಸಿಗದ ಹಾಗಿನ ಇಳಿಜಾರಿನ ರಸ್ತೆಯಲ್ಲಿ ಬ್ರೇಕು ಹಿಡಿಯದ ಸೈಕಲ್ ಹತ್ತಿದ ಪೋರನಂತಹ ಸಮಯ. ದಿನ ಕಣ್ಣುತೆರೆದರೆ ಅವಮಾನ, ಇರಿಯುವ ನೋಟ, ದೈನೇಸಿ ಸ್ಥಿತಿ. ಅದ್ಯಾವುದೋ ಹುಂಬ ಧೈರ್ಯ, ಬಂಡೆಯಂತಹ ಗಟ್ಟಿ ಮನಸ್ಸು, ತೋಳಿನ ಕಸುವನ್ನೋ, ಚುರುಕು ಬುದ್ಧಿಯನ್ನೋ ಕೆಲಸಕ್ಕೆ ಹಚ್ಚಿ ದುಡಿಮೆಯ ಹಿಂದೆ ಬಿದ್ದಿದ್ದು, ತಾಳುವಿಕೆಗಿಂತ ತಪವಿಲ್ಲವೆಂದು ಮೌನಕ್ಕೆ ಶರಣಾಗಿದ್ದು, ನನ್ನ ಕಡೆಯ ಪ್ರಯತ್ನವೆಂದು ಶಪಥಗೈದಿದ್ದು ಕೀಲಿಯೊಂದು ಸರಳುಗಳ ಸೆರೆಮನೆಯಿಂದ ಬಿಡುಗಡೆಗೊಳಿಸಿದಂತೆ ಎಲ್ಲಾ ಶಾಂತ, ಸರಳ, ಸುಂದರವಾಗುವತ್ತ ಒಂದೊಂದೇ ಹೆಜ್ಜೆಯ ಪಯಣವಾಗಿರುತ್ತದೆ. ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಕರಗಿತೆನ್ನುವ ಮಾತು ಬಾಯಲ್ಲಿ ನಲಿದಾಡುವ ನಿರುಮ್ಮಳತೆ. ಈ ದಿವ್ಯ ಕ್ಷಣ ಪ್ರತಿಯೊಬ್ಬರ ಬಾಳಿನಲ್ಲೂ ಬಂದೇ ತೀರುತ್ತದೆ. ಅದು ನಂಬಿಕೆ. ಅದೇ ಭರವಸೆ.

“ಗಂಡನ್ನ ಕಳಕೊಂಡಾಗ ನನಗೆ ಇಪ್ಪತ್ತನಾಲ್ಕು ವರ್ಷ. ಕಡೆಯ ಮಗ ಹತ್ತು ತಿಂಗಳ ಕೂಸು. ಆರನೇ ತರಗತಿಯವರೆಗೆ ಓದಿದ್ದೆ. ಏಳನೇ ತರಗತಿಯ ಪರೀಕ್ಷೆ ಬರೆದಿದ್ದರೆ ಮೇಷ್ಟರ ಕೆಲಸ ಸಿಕ್ಕಿರೋದು. ಅದರೊಳಗೆ ಮದುವೆಯಾಯ್ತು. ಸಾಲಾಗಿ ಬಸಿರು, ಬಾಣಂತನ. ವಿದ್ಯೆ, ಬುದ್ಧಿ, ಪ್ರಪಂಚದ ಅರಿವು ಏನೂ ಇರದ ಹೊತ್ತಿನಲ್ಲಿ ಗಂಡನೂ ತೀರಿಕೊಂಡ. ಹುಟ್ಟಿದ ಮನೆ, ಕೊಟ್ಟ ಮನೆ ಎರಡೂ ಕಡೆ ಹಾಸಿ ಹೊದೆದು ಕೊಡುವಷ್ಟು ಇದ್ದಿದ್ದು ಬಡತನ ಮಾತ್ರ. ಒಬ್ಬರ ಆಶ್ರಯದಲ್ಲಿ ಎಷ್ಟು ದಿನ ಇರಲಾದೀತು ಹೇಳು? ಮನೆಕೆಲಸದಿಂದ ಪ್ರಾರಂಭ ಮಾಡಿ, ನಿಧಾನಕ್ಕೆ ಅಡುಗೆ ಕೆಲಸ ಕಲಿತೆ. ನಾಲ್ಕು ಮನೆ ಮುಸುರೆ ತಿಕ್ಕಿದೆ. ಬಾಣಂತಿ- ಮಕ್ಕಳ ನೀರು ಹಾಕಿದೆ. ಸೇರುಗಟ್ಟಲೆ ಮೆಣಸಿನ ಪುಡಿ ಕುಟ್ಟಿದೆ. ದೋಸೆಹಿಟ್ಟು, ಇಡ್ಲಿಹಿಟ್ಟು ರುಬ್ಬುತ್ತಿದ್ದೆ. ರಟ್ಟೆಯಲ್ಲಿ ಶಕ್ತಿಯಿತ್ತು. ಮೈಮರೆತು ದುಡಿಯುತ್ತಿದ್ದೆ. ಮಕ್ಕಳ ಓದು, ಕೆಲಸ, ಮದುವೆ, ಮೊಮ್ಮಕ್ಕಳು ಆಗಿದ್ದೇ ತಿಳಿಯಲಿಲ್ಲ ನೋಡು. ಬೇರೆಯವರ ಮನೆಯಲ್ಲಿ ಕೆಲಸಕ್ಕೆ ಹೋಗೋದೇನು? ನಾನೇ ಒಬ್ಬಟ್ಟು, ಚಕ್ಕುಲಿ, ಉಂಡೆ ವ್ಯಾಪಾರ ಮಾಡಿದೆ. ಒಳ್ಳೆ ಪದಾರ್ಥ, ಸರಿಯಾದ ಹದ, ತಿಂದರೆ ಖರ್ಚಾಗಿಬಿಡುತ್ತಲ್ಲಾ ಅನ್ನಿಸುವಷ್ಟು ರುಚಿ, ಸಮಯಕ್ಕೆ ಸರಿಯಾಗಿ ಕೊಡುವ ಬದ್ಧತೆ ಇಷ್ಟೇ ನೋಡು ನನ್ನ ವ್ಯಾಪಾರದ ಗುಟ್ಟು. ಗಂಡು ಹೆಣ್ಣು ಎರಡೂ ಆಗಿ ದುಡಿದೆ. ಗಂಡ ಇದ್ದಿದ್ದರೆ ಇಷ್ಟಲ್ಲಾ ಮಾಡುತ್ತಿದ್ದೆನೋ ಇಲ್ಲವೋ… ಬೇಕು ಅನ್ನಿಸುವ ವಯಸ್ಸಿನಲ್ಲಿ ಕಳೆದುಕೊಂಡೆ. ಈಗ ಸುಮ್ಮನೆ ಮಲಗಿದ್ರೂ ದಿನ ಕಳೆದು ಹೋಗತ್ತೆ. ಯಾರೂ ಬೇಕು ಅನ್ನಿಸೋಲ್ವೇ..

ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.

ಕರೋನಾ ಸಮಯದಲ್ಲಿ ಗಂಡನನ್ನು ಕಳೆದುಕೊಂಡು, ತೌರಿನವರು, ಅತ್ತೆ ಮನೆಯವರು ಇಬ್ಬರಿಂದಲೂ ತಿರಸ್ಕೃತಗೊಂಡು ಒಬ್ಬಂಟಿಯಾಗಿ ಹತ್ತು ವರ್ಷದ ಮಗಳನ್ನು ಬೆಳೆಸುವ, ಸಾಲ ತೀರಿಸುವ, ಬಾಡಿಗೆ ಕಟ್ಟುವ, ಹೊಟ್ಟೆ ಬಟ್ಟೆಗೆ ದುಡಿಯಲೇಬೇಕಾದ ಅನಿವಾರ್ಯತೆಯ ಸಮಯದಲ್ಲಿ ಮಣ್ಣಿನ ಆಭರಣಗಳನ್ನು ಮಾಡುವ ಕಲೆಯೊಂದನ್ನು ನೆಚ್ಚಿಕೊಂಡು, ವಾರಗಟ್ಟಲೆ ಸ್ನಾನ, ಊಟ, ನಿದ್ದೆಯ ಪರಿವೆಯಿಲ್ಲದೆ ಮಣ್ಣಿನೊಡವೆ ಮಾಡಿ, ಬೇಯಿಸಿ, ಬಣ್ಣಬಳಿದು, ಸಿಂಗಾರಗೊಂಡು ತೊಟ್ಟು, ಸಿನಿಮಾಗೀತೆಗಳಿಗೆ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಬಿಟ್ಟು, ಗ್ರಾಹಕರಿಗೆ ಮಣ್ಣಿನೊಡವೆ ತೊಡಿಸುತ್ತಲೇ ಬದುಕು ಬಂಗಾರ ಮಾಡಿಕೊಂಡ ಗಟ್ಟಿಗಿತ್ತಿಯಿದ್ದಾಳೆ. ತನ್ನ ಹಕ್ಕುಗಳಿಗಾಗಿ, ಗಟ್ಟಿನೆಲೆಗಾಗಿ, ತನ್ನ ಘನತೆಗಾಗಿ ಹೋರಾಡುತ್ತಲೇ ಮಲ್ಲಿಗೆಯ ನಗುವರಳಿಸಿ ನಿಲ್ಲುತ್ತಾಳೆ. ಈಗಲೂ ಊಟವನ್ನು ತುತ್ತಿನ ಲೆಕ್ಕವಿಟ್ಟು ತಿಂದ ಹಂಗಿನ ಬಾಲ್ಯವನ್ನು, ಹೆಣ್ಣೆಂಬ ಕಾರಣಕ್ಕೇ ಅನುಭವಿಸಿದ ಶೋಷಣೆಯನ್ನು ಆಕೆ ನೆನೆಯುತ್ತಾ, ದುಡಿಮೆ ನೀಡಿದ ಸಾರ್ಥಕತೆಯನ್ನು ಕಳೆದ ಕಷ್ಟದ ದಿನಗಳ ಮಡಿಲಿಗಿಡುವಳು.

ಈ ಜಂಜಾಟಗಳು ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳದ್ದು ಮಾತ್ರವೇ ಅಲ್ಲ. ಮಕ್ಕಳನ್ನು, ಸಂಪಾದನೆಯನ್ನು, ಸಾಮಾಜಿಕ ಗೌರವವನ್ನು, ಸ್ವಾಭಿಮಾನಿ ಬದುಕನ್ನು, ಉದ್ಯೋಗವನ್ನು, ನಂಬಿಕೆಯನ್ನು, ಭರವಸೆಯನ್ನು ಕಳೆದುಕೊಂಡ ಯಾರೂ ಆಗಿರಬಹುದು. ಪ್ರಶ್ನೆಪತ್ರಿಕೆ ಬೇರೆಯಿರಬಹುದು. ಉತ್ತರಕ್ಕಾಗಿ ಒದ್ದಾಟ ಹೆಣ್ಣು-ಗಂಡೆಂಬ ಬೇಧವಿಲ್ಲದೆ ಎಲ್ಲರದ್ದೂ.

ಇನ್ನು ಮುಗಿದೇ ಹೋಯಿತೆಂದು ಕೈಚೆಲ್ಲಬೇಕಾದ ಕ್ಷಣದಲ್ಲೂ ಪ್ರಯತ್ನದ ಹುಲ್ಲುಕಡ್ಡಿ ಹಿಡಿದು ದಡಸೇರಿದ ಸಾವಿರಾರು ಉದಾಹರಣೆ ನಮ್ಮ ಸುತ್ತಲೇ ಸಿಗುತ್ತವೆ. ಎಲ್ಲಾ ಇದ್ದೂ ಜೀವನ ಬೇಸರವೆಂದು ಜೀವ ತೆಗೆದುಕೊಂಡವರ ಕಥೆಗಳು ಕೂಡ. ಈ ಬದುಕಿನ ಕೊಕ್ಕೆಗೆ ಸಿಲುಕಿದ ಸಿಹಿ ನಮ್ಮ ಪಾಲಿನ ಗುರಿ, ಆದರ್ಶ, ಆಸೆ, ಕನಸು ಅಥವಾ ಹಠ. ಎಂದಾದರೊಂದು ದಿನ ಅಸಡ್ಡೆ ಮಾಡಿದವರ ಎದುರು ಸೆಟೆದು ನಿಲ್ಲುವ ಛಲ, ಗುರಿಯೊಂದರ ಕಡೆಗಿನ ಧ್ಯಾನ, ಲೌಕಿಕದ ಬದುಕಿನ ಮೋಹ, ಅಧ್ಯಾತ್ಮ ಸಾಧನೆಯ ತುಡಿತ, ದೊಡ್ಡದೊಂದು ಆದರ್ಶ, ಸಣ್ಣದೊಂದು ಕನಸು, ಬೆಚ್ಚಗಿನ ಸಂಬಂಧ, ಬದುಕಿನೆಡೆಗಿನ ಅದಮ್ಯ ಉತ್ಸಾಹ, ಜೊತೆಗಿರುವ ಸ್ನೇಹ, ಪ್ರೇಮಗಳು ಕಷ್ಟವಾದರೂ ಸುಖವಾದರೂ ಬದುಕಿಗೇ ಅಂಟಿಕೊಳ್ಳುವಂತೆ ಮಾಡುವ ಆಮಿಷ. ಆಮಿಷಗಳಿಲ್ಲದೆಯೂ ತಾವರೆ ಎಲೆಯ ಮೇಲಿನ ನೀರ್ಗುಳ್ಳೆಯಂತೆ ಇರುವವರು ಇರಬಹುದು. ಆದರೆ ಸಾಮಾನ್ಯರ ಪಾಲಿಗೆ ಕಷ್ಟಗಳೆಂಬುದು ಬದುಕಿನ ಸೌಂದರ್ಯವನ್ನು ಆರಾಧಿಸಲು ಕಲಿಸುವ ಪರಿವಿಡಿ. ಹಾಗಂತ ಬಡತನ, ನಿರುದ್ಯೋಗ, ಹಸಿವನ್ನು ರಮ್ಯಗೊಳಿಸುವ ಉದ್ದೇಶವಿಲ್ಲ. ಆದರೆ ಸವಾಲುಗಳೇ ಇಲ್ಲದ ಸ್ವರ್ಗಕ್ಕಿಂತ, ಬಡಿದಾಡಿಕೊಂಡೇ ಗೆಲುವೋ ಸೋಲೋ ಹೊದ್ದುಕೊಳ್ಳುವ, ಹಂಬಲಿಸುವ ಲೋಕ ಹೆಚ್ಚು ಪ್ರಿಯ. ಸುಖದ ಬಗ್ಗೆ ಹೆಚ್ಚೆಂದರೆ ನಾಲ್ಕು ಸಾಲು ಬರೆಯಬಹುದು. ಆಮೇಲೆ? ಕಷ್ಟದೊಂದಿಗೆ ತಳುಕಿ ಹಾಕಿಕೊಂಡ ವಿಶಾಲ ಭಾವಪ್ರಪಂಚ ಕಲೆ, ಸಾಹಿತ್ಯ, ಸಂಗೀತ, ನಾಟ್ಯವನ್ನು ಶ್ರೀಮಂತಗೊಳಿಸಿದೆ.

“ಕಡುಕಷ್ಟದ ದಿನಗಳಲ್ಲಿ ಜೊತೆ ನಿಂತ ಜೀವಗಳನ್ನು ತಂಪು ಹೊತ್ತಿನಲ್ಲಿ ನೆನೆಯಬೇಕಂತೆ. ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಹೇಳ್ತಿದ್ದೀನಿ. ನಮಗೇನೂ ಶ್ರೀಮಂತಿಕೆಯಿಲ್ಲ. ಆದರೆ ಇಬ್ಬರು ಊಟಕ್ಕೆ ಹೆಚ್ಚಿಗೆ ಬಂದರೆ ಎಲೆ ಹಾಕಲಾರದಷ್ಟು ದರಿದ್ರವಿಲ್ಲ. ಕೆಲಸ ಸಿಗುವವರೆಗೂ ಎರಡು ಹೊತ್ತು ನಮ್ಮನೆಗೆ ಊಟಕ್ಕೆ ಬನ್ನಿ. ಸಂಕೋಚ ಬೇಡ. ಹೊಟ್ಟೆ ತುಂಬಾ ತಿನ್ನಿ. ಕಂಕುಳ ಕೂಸಿಗೆ ಹಾಲಿಗೆ ಲೆಕ್ಕವಿಡುವ ಕಟುಕ ಬುದ್ಧಿ ನಮಗಿಲ್ಲ. ನಿಮಗೆಷ್ಟು ಬೇಕೋ ಅಷ್ಟು ತೆಗೆದುಕೊಳ್ಳಿ” ಎಂದು ಆರುತಿಂಗಳು ಜೊತೆಗಿಟ್ಟುಕೊಂಡವರು ಅವರು. ಅವರು ಮಾಡಿದ ಪುಣ್ಯವೇ ಮನೆ ಕಾಯುತ್ತಿದೆ. ಇದರಲ್ಲಿ ನಮ್ಮ ಜಂಭವೇನು?” ಎಂದರವರು.

ಈ ಪಾಪ-ಪುಣ್ಯ, ಪುನರ್ಜನ್ಮ, ಕರ್ಮ ಸಿದ್ಧಾಂತ ಇವುಗಳೆಲ್ಲಾ ಈ ಕಾಲಕ್ಕಲ್ಲ. ಸ್ಪರ್ಧೆಯೊಂದೇ ಇವತ್ತಿನ ಸತ್ಯ. ನೀನು ಕೈಹಿಡಿದು ಮೇಲೆತ್ತಿದವರೆ ಈ ಓಟದಲ್ಲಿ ನಿನಗಿಂತ ಮುಂದೆ ಸಾಗುತ್ತಾರೆ. ಅಯ್ಯೋ ಪಾಪದ ನಾಟಕವಾಡಿ ತುಳಿಯುತ್ತಾರೆ. ಅವರವರ ಜೀವನ ಅವರದ್ದಷ್ಟೇ. ಈ ಲೆಕ್ಕಾಚಾರ ಮರೆತರೆ ಕಾರ್ಪೊರೇಟ್ ಪ್ರಪಂಚದಲ್ಲಿ ಉಳಿಗಾಲವಿಲ್ಲ. ಸಂಬಂಧಗಳು ಕೂಡ ಕರಾರಿನ ಮೇಲೇ ನಿಂತಿರುವುದು. ಎಲ್ಲವನ್ನೂ ನೈತಿಕತೆಯ, ಆದರ್ಶಗಳ ತಕ್ಕಡಿಯಲ್ಲಿ ತೂಗುವುದನ್ನು ಬಿಡಿ ಎನ್ನುವ ನಮ್ಮ ತಲೆಮಾರು ಮುಂಚಿಗಿಂತ ಹೆಚ್ಚು ಅವಕಾಶ, ಹಣ, ಸೌಕರ್ಯ, ಸೌಲಭ್ಯಗಳನ್ನು ಹೊಂದಿದೆ. ಆದರೆ ಸಹೃದಯತೆಯನ್ನು ಕಲಿಸುವ ಶಿಬಿರಗಳಿಗೆ, ಪ್ರವಚನಗಳಿಗೆ ಹಾತೊರೆಯುತ್ತಿರುವುದೂ ಅಷ್ಟೇ ಸತ್ಯ. ಲೆಕ್ಕಾಚಾರಗಳು ಹೊರಗಿನ ಸುಖವನ್ನು ನೀಡಬಹುದೇ ಹೊರತು, ಅಂತರಂಗದ ನೆಮ್ಮದಿಯನ್ನಲ್ಲ. ಈ ನೆಮ್ಮದಿಯೇ ಸುಖವೆನ್ನುವಿರಾದರೆ ಮತ್ತೆ ಮೊದಲಿನವರಂತಾಗಬೇಕು. ಹತಾಶಗೊಂಡ ಹೃದಯ ಹುಡುಕುವುದು ಒಂದು ಹೆಗಲನ್ನು. ಕತ್ತಲಿನಿಂದ ಬೇಸತ್ತ ರಾತ್ರಿ ಕಾತರಿಸುವುದು ಹಗಲಿಗೆ. ಹಾಗೆ ಹೆಗಲಾಗುವ, ಹಗಲಾಗುವ ಜೀವ ನಾವಾಗಬಹುದಲ್ಲವೇ? ಕಲಿತಿದ್ದ‌ನ್ನು ಮರೆಯುವ, ಮರೆತಿದ್ದನ್ನು ಹುಡುಕಿ ತೆಗೆಯುವ ಆಟದಲ್ಲಿ ಸೊಗಸಿದೆ. ಹಳೆಬೇರು ಹೊಸಚಿಗುರಿನ ವಸಂತ ಸುಂದರ.

ನಮಗೆ ಕಷ್ಟ ಬೇಡವೆನ್ನುವ ಪಲಾಯನಕ್ಕಿಂತ, ಸವಾಲುಗಳನ್ನು ಸ್ವೀಕರಿಸುವ ಮನೋಸ್ಥೈರ್ಯ ಆದರ್ಶವಾಗಲಿ. ಇದರಿಂದ ನಮಗೇನು ಸಿಕ್ಕೀತೆಂಬ ಬುದ್ಧಿವಂತಿಕೆಗಿಂತ, ನಿನ್ನೊಂದಿಗೆ ನಾನಿದ್ದೇನೆಂದು ಹೇಳಬಲ್ಲ ಹೃದಯವಂತಿಕೆ ಒಲಿಯಲಿ. ಈಗ, ಕಷ್ಟವನ್ನೇ ಗುರುವೆನ್ನಬಹುದೇ?