ಧರ್ಮಶಾಲಾದಿಂದ 112 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಆಕರ್ಷಿಸುತ್ತದೆ ಖಜ್ಜಿಯಾರ್ ಗಿರಿಧಾಮ. ಸಮುದ್ರ ಮಟ್ಟದಿಂದ 6500 ಅಡಿಗಳ ಎತ್ತರದಲ್ಲಿ, ದೌಲಾದರ ಪರ್ವತಶ್ರೇಣಿಯ ನಡುವೆ 12ನೆಯ ಶತಮಾನದಲ್ಲಿ ಚಂಬಾ ರಾಜಮನೆತನದವರು ಕಟ್ಟಿಸಿರುವ, ಸಂಪೂರ್ಣ ಮರದಿಂದ ಮಾಡಿರುವ ಅರಮನೆ. ಅದರ ಬಾಗಿಲುವಾಡಗಳಿಗೆ ಕಟ್ಟಿಕೊಂಡಿರುವ ಚಿನ್ನದ ತಗಡು, ಅರಮನೆಯ ಒಳಗೇ ಇರುವ ಖಾಜ್ಜಿ ನಾಗಮಂದಿರ. ಎಷ್ಟೊಂದು ನಾಗಪ್ಪನ ಮೂರ್ತಿಗಳೊಂದಿಗೆ ಶಿವ ಮತ್ತು ಹಿಡಿಂಬೆಯ ಮೂರ್ತಿಗಳೂ ಇರುವುದು ಇಲ್ಲಿನ ಆಕರ್ಷಣೆ. ನವರಾತ್ರಿಯಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಬಾಕಿಯಂತೆ ದೈವಭಕ್ತ ಪ್ರವಾಸಿಗರು ತಾವೇ ಕುಂಕುಮವಿಟ್ಟು ಪೂಜೆ ಮಾಡಿ ಬರಬಹುದು.
ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ದಲೈ ಲಾಮಾ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

ಆ ದಿನವೂ ಊರಲೆಲ್ಲಾ ಬೊಂಬೆ ಹಬ್ಬದ ಸಡಗರ ಶುರುವಿಟ್ಟಿತ್ತು. ಲಕ್ಷಣವಾಗಿ ಮೆಟ್ಟಿಲು ಮೆಟ್ಟಿಲಾಗಿ ಬೊಂಬೆಗಳನ್ನು ಕೂರಿಸಿ, ಕಲಶವಿಟ್ಟು ಸಂಭ್ರಮಿಸದೆ ‘ನಿನ್ನ ಕೈಲಾಡೋ ಬೊಂಬೆ ನಾನಯ್ಯ… ತಾನೋ ತಂದಾನೋ ತಾನೊ…’ ಅಂತ ಊರು ಸುತ್ತಲು ಹೊರಟವಳನ್ನು ಈ ಬಾರಿ ಸ್ವಾಗತಿಸಿದ್ದು ಹಿಮಾಚಲಪ್ರದೇಶದಲ್ಲಿ ಇರುವ ಧರ್ಮಶಾಲಾ ಎನ್ನುವ ಪುಟ್ಟ ಗಿರಿಧಾಮ. 1992ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸ್ವಿಸ್ ರಾಜಧೂತ Willy P Blazer ಧರ್ಮಶಾಲವನ್ನು ಮಿನಿ ಸ್ವಿಟ್ಜರ್ಲ್ಯಾಂಡ್ ಎಂದನಂತೆ. ಈ ಭಾರತದ ತುಂಬೆಲ್ಲಾ ಅದೆಷ್ಟು ಸ್ವಿಟ್ಜರ್ಲ್ಯಾಂಡುಗಳು!

ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದಾರೆ. ನಾಳಿನ ಬಗ್ಗೆ ಆತಂಕ, ಹಿಂದಿನವನೊಡನೆ ಜಂಜಾಟ, ಮುಂದಿನವನೊಡನೆ ಕಾದಾಟ, ಏಣಿಯೇರುವ ಆಕಾಂಕ್ಷೆಗಳ ಭರಾಟೆ ಏನೊಂದೂ ಕಂಡುಬಾರದ ಇಲ್ಲಿನ ಜನರೊಳಗೆ ಶಾಂತಿಯಿದೆ ಎಂದುಕೊಳ್ಳುತ್ತಲೇ, ಆಸ್ವಾದಿಸುತ್ತಲೇ ಪಯಣ ಮುಂದುವರೆದಿತ್ತು.

ಧರ್ಮಶಾಲಾ, ಕಾಂಗ್ರ, ಚಂಬಾ ಮತ್ತು ಖಜ್ಜಿಯಾರ್ ಈ ನಾಲ್ಕೂ ಅಕ್ಕಪಕ್ಕದ ಜಿಲ್ಲೆಗಳು. ಐದು ಶಕ್ತಿಪೀಠಗಳನ್ನು ಒಂದೇ ದಿನದಲ್ಲಿ ನೋಡಿಬರಬಹುದು ಎನ್ನುವಷ್ಟು ಹತ್ತಿರದಲ್ಲಿ ಸಿಗುತ್ತಾಳೆ ಇಲ್ಲಿ ಸತಿಹೋದವಳು. ದಕ್ಷಯಜ್ಞದಲ್ಲಿ ಬೆಂದುಹೋದ ಪಾರ್ವತಿಯ ದೇಹವನ್ನು ಹೊತ್ತು ಭೋಲೆನಾಥಾ ಬ್ರಹ್ಮಾಂಡವನ್ನೆಲ್ಲಾ ಅಲೆಯುತ್ತಿದ್ದಾಗ ಅವಳ ದೇಹದ ಒಂದೊಂದೇ ಭಾಗ ಕಳಚಿಹೋಗುತ್ತಿತ್ತಲ್ಲ, ಆಗ ಪಾರ್ವತಿಯ ಎಡಗಣ್ಣು ಬಿದ್ದದ್ದು ನೈನಿತಾಲ್‌ನಲ್ಲಿ ಇರುವ ನೈನಾದೇವಿ ಮಂದಿರದಲ್ಲಿ, ಸ್ತನಗಳು ಧರೆ ಸೇರಿದ್ದು ಕಾಂಗ್ರಾದೇವಿ (ಬ್ರಜೇಶ್ವರಿ) ದೇವಸ್ಥಾನದಲ್ಲಿ, ಅವಳ ನಾಲಿಗೆ ನೆಲ ಸೇರಿದ್ದು ಜ್ವಾಲಾಮಾತಾ ಪೀಠದಲ್ಲಿ, ಆಕೆ ಸತಿ ಹೋಗುವ ಮೊದಲು ಧ್ಯಾನಕ್ಕೆ ಕುಳಿತಿದ್ದದ್ದು ಚಾಮುಂಡಾ ದೇವಿ ದೇವಾಲಯದಲ್ಲಿ, ಅವಮಾನದ ಬೇಗೆಯಲ್ಲಿ ಬೆಂದು ಸತಿ ಹೋಗುವ ನಿರ್ಧಾರ ತೆಗೆದುಕೊಂಡಿದ್ದು ಚಿಂತಪೂರ್ಣಿ ಮಂದಿರದಲ್ಲಿ.

ಇಂತಹ ನಂಬಿಕೆಗಳಿಗೆ ಎಡೆ ಮಾಡಿಕೊಟ್ಟಿರುವ ಈ ಐದು ದೇವಳಗಳ ರಚನೆಗೂ ಒಂದೊಂದು ವಿಶೇಷತೆ ಇದೆ. ಶಿವಲಿಂಗ ರೂಪದ ಗುಹೆಯೊಳಗೆ ಚಾಮುಂಡಾದೇವಿ ದರ್ಶನಕೊಟ್ಟರೆ, ಅಂದಿನಿಂದ ಇಂದಿನವರೆಗೂ ಗರ್ಭಗುಡಿಯಲ್ಲಿ ಜ್ವಾಲೆಯಾಗಿ ಉರಿಯುತ್ತಲೇ ಅಭಯ ನೀಡುತ್ತಾಳೆ ಜ್ವಾಲಾಮಾತ. ಆರು ಶಿಖರಗಳ ಗರ್ಭಗುಡಿ ಹೊಂದಿದ್ದಾಳೆ ಕಾಂಗ್ರಾದೇವಿ.

ಧರ್ಮಶಾಲಾದಿಂದ 112 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಆಕರ್ಷಿಸುತ್ತದೆ ಖಜ್ಜಿಯಾರ್ ಗಿರಿಧಾಮ. ಸಮುದ್ರ ಮಟ್ಟದಿಂದ 6500 ಅಡಿಗಳ ಎತ್ತರದಲ್ಲಿ, ದೌಲಾದರ ಪರ್ವತಶ್ರೇಣಿಯ ನಡುವೆ 12ನೆಯ ಶತಮಾನದಲ್ಲಿ ಚಂಬಾ ರಾಜಮನೆತನದವರು ಕಟ್ಟಿಸಿರುವ, ಸಂಪೂರ್ಣ ಮರದಿಂದ ಮಾಡಿರುವ ಅರಮನೆ. ಅದರ ಬಾಗಿಲುವಾಡಗಳಿಗೆ ಕಟ್ಟಿಕೊಂಡಿರುವ ಚಿನ್ನದ ತಗಡು, ಅರಮನೆಯ ಒಳಗೇ ಇರುವ ಖಾಜ್ಜಿ ನಾಗಮಂದಿರ. ಎಷ್ಟೊಂದು ನಾಗಪ್ಪನ ಮೂರ್ತಿಗಳೊಂದಿಗೆ ಶಿವ ಮತ್ತು ಹಿಡಿಂಬೆಯ ಮೂರ್ತಿಗಳೂ ಇರುವುದು ಇಲ್ಲಿನ ಆಕರ್ಷಣೆ. ನವರಾತ್ರಿಯಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಬಾಕಿಯಂತೆ ದೈವಭಕ್ತ ಪ್ರವಾಸಿಗರು ತಾವೇ ಕುಂಕುಮವಿಟ್ಟು ಪೂಜೆ ಮಾಡಿ ಬರಬಹುದು. ಬೇಸಿಗೆಯಲ್ಲಿ ತಣಿವು, ಚಳಿಯಲ್ಲಿ ಬಿಸುಪು ನೀಡುವಂತೆ ಕಟ್ಟಲಾಗಿದೆ ಮರದ ಅರಮನೆಯನ್ನು. ಹೆಚ್ಚೇನೂ ಎತ್ತರ ಇಲ್ಲದ ಬಾಗಿಲುಗಳಲ್ಲಿ ಬೆನ್ನು ಬಾಗಿಸಿಯೇ ಒಳಹೋಗಬೇಕು.

ಪಾರ್ವತಿಯ ಪಂಚಾಂಶಗಳಿಂದ ಸ್ಪೂರ್ತಿಗೊಂಡು ಬರುವಾಗ ಸಿಗುತ್ತಾರೆ ಲಕ್ಷ್ಮಿನಾರಾಯಣರು. 10ನೆಯ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನದಲ್ಲಿನ ವಿಗ್ರಹಗಳು ವಿಂದ್ಯಾಚಲಪರ್ವತದಿಂದ ಆಯ್ದು ತಂದ ಅಮೃತ ಶಿಲೆಗಳಿಂದ ಮಾಡಲ್ಪಟ್ಟಿವೆ. ಕ್ರೂರ ಥಂಡಿ ಮತ್ತು ಹಿಮಪಾತದಿಂದ ವಿಗ್ರಹಗಳನ್ನು ರಕ್ಷಿಸಲು ಮರದ ಗೋಪುರ ಮಾಡಲಾಗಿದೆ. ದಸರೆಯಲ್ಲಿ ನಡೆಯುವ ವೈಭವದ ಪೂಜೆ ನೋಡಿ ಧರ್ಮಶಾಲಕ್ಕೆ ಹಿಂದಿರುಗಿದ್ದಾಯ್ತು.

ಮಾರನೆಯ ಬೆಳಗಿನಲ್ಲಿ ಸಿಕ್ಕಿದ್ದು ದೇವದಾರುಮರಗಳ ದಟ್ಟ ಕಾಡಿನ ನಡುವೆ 1852ರಲ್ಲಿ ಕಟ್ಟಲಾಗಿದೆ ಎಂದು ಹೇಳುವ ಸೇಂಟ್ ಜಾನ್ ಚರ್ಚ್. ಅಲ್ಲೊಂದು ಮದುವೆ ನಡೆಯುತ್ತಿತ್ತು.  ಜಗತ್ತಿನಾದ್ಯಂತ ಅದೆಷ್ಟೋ ಚರ್ಚುಗಳನ್ನು ನೋಡಿದ್ದೇನೆ, ಬಹುಪಾಲು ಜಾಗಗಳಲ್ಲಿ ನನ್ನ ಭೇಟಿಯ ಸಮಯದಲ್ಲಿ ಮದುವೆ ಆಗುತ್ತಿರುವುದನ್ನು ಕಂಡಿದ್ದೇನೆ. ಅರೆ, ಇವರುಗಳಿಗೆ ಹೇಗೆ ಗೊತ್ತು ನಾನು ಲಾಯರ್ ಅಂತ ಎಂದುಕೊಂಡು ಮನಸ್ಸಿನಲ್ಲಿಯೇ ನಕ್ಕು ಹೊಟ್ಟೆ ಹಿಂಡಿಸಿಕೊಳ್ಳುತ್ತೇನೆ.

(ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಕ್ರಿಕೆಟ್ ಕ್ರೀಡಾಂಗಣ)

ಶಿವಲಿಂಗ ರೂಪದ ಗುಹೆಯೊಳಗೆ ಚಾಮುಂಡಾದೇವಿ ದರ್ಶನಕೊಟ್ಟರೆ, ಅಂದಿನಿಂದ ಇಂದಿನವರೆಗೂ ಗರ್ಭಗುಡಿಯಲ್ಲಿ ಜ್ವಾಲೆಯಾಗಿ ಉರಿಯುತ್ತಲೇ ಅಭಯ ನೀಡುತ್ತಾಳೆ ಜ್ವಾಲಾಮಾತ. ಆರು ಶಿಖರಗಳ ಗರ್ಭಗುಡಿ ಹೊಂದಿದ್ದಾಳೆ ಕಾಂಗ್ರಾದೇವಿ.

ಧರ್ಮಶಾಲಾದ ರಸ್ತೆಗಳು ಮನುಷ್ಯ ಬಳಕೆಗೆ ಸ್ವಲ್ಪವೂ ಯೋಗ್ಯವಾಗಿರಲಿಲ್ಲ. ಆದರೂ ಅಲ್ಲಿದೆ ಪ್ರಸಿದ್ಧ ಕ್ರಿಕೆಟ್ ಕ್ರೀಡಾಂಗಣ. ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅವರ ಉಸ್ತುವಾರಿಯಲ್ಲಿ ಹಸಿರು ಹಸಿರು ಮಾತ್ರ ಸುತ್ತುವರೆದ ಮೋಹಕ ಜಾಗದ ನಟ್ಟನಡುವಿನಲ್ಲಿ ಕ್ರಿಕೆಟಿಗರಿಗೆ ಈ ಅಂಗಳ ಬಲು ಚೆನ್ನದು. ಇಂತಹ ಧರ್ಮಶಾಲಾದಿಂದ ಹದಿನೈದು ಕಿಲೋಮೀಟರ್‌ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲೆಲ್ಲಾ ಇರುವುದು ಬರೀ ಗಲ್ಲಿಗಳು ಮತ್ತು ಅಲ್ಲಿ ಕನಸಿಗೂ ನಿಲುಕದ ದರದಲ್ಲಿ ಹಳೆಯ ವಿಗ್ರಹಗಳನ್ನು, ಜಪಮಣಿಗಳನ್ನು, ಫೆಂಗ್‌ಶ್ಯೂಗೆ ಸಂಬಂಧಪಟ್ಟ ವಸ್ತುಗಳನ್ನು ಮಾರಾಟ ಮಾಡುವ ಯುವಕ-ಯುವತಿಯರು.

ರಸ್ತೆಯ ಎರಡು ಬದಿಗಳಲ್ಲಿ ಅಲ್ಲಿ ಚೀನಿಯರು ನಡೆಸುತ್ತಿರುವ ದಬ್ಬಾಳಿಕೆಯ ಬಗ್ಗೆ ಬರೆಯಲಾಗಿದೆ. ಹಾಗೆಯೇ ಬೀದಿ ಬದಿಯಲ್ಲಿ ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲದಷ್ಟು ತುಟ್ಟಿ ದರದಲ್ಲಿ ಮಾರಾಟಗಾರರಾಗಿ ಇರುವ ಆ ಯುವಕ ಯುವತಿಯರ ಜೀವನ ನಿರ್ವಹಣೆಗೆ ಚೀನಿಯರೇ ಬೆಂಬಲ ನೀಡುತ್ತಿದ್ದಾರೆ. ಇದು ಭಾರತ ಸರ್ಕಾರಕ್ಕೂ ತಿಳಿದಿರುವ ವಿಷಯ ಎನ್ನುವುದನ್ನು ಅಲ್ಲಿನ ಜನರೇ ಹೇಳುತ್ತಾರೆ. ಸದ್ಯ ನಾನು ಅಲ್ಲಿಗೆ ಹೋದಾಗ ಕರೋನ ಇನ್ನೂ ಬಂದಿರಲಿಲ್ಲ.

ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’ ಮತ್ತು ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದಲೈ ಲಾಮ ಅವರುಗಳ ಖಾಸಗಿ ಮನೆ ಮತ್ತು ಮಂದಿರ. ಆದರೂ ಒಮ್ಮೊಮ್ಮೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ. ಆಕಾಶಕ್ಕೆ ದೃಷ್ಟಿಯಾಗದಿರಲಿ ಎಂದು ಹಿರಿಯಕ್ಕ ಒಬ್ಬಳು ಇಟ್ಟ ದೃಷ್ಟಿ ಬೊಟ್ಟಿನಂತೆ ಇರುವ ಮೆಕ್ಲಿಯಾಡ್ ಗಂಜ್‌ಗೆ ಹೋದಮೇಲೆ ದಲೈ ಲಾಮ ಅವರನ್ನು ಭೇಟಿ ಮಾಡದೆಯೇ ಬರುವುದೆ?!

ಭೇಟಿಯ ಆಸೆ ವ್ಯಕ್ತಪಡಿಸಿ ಈಮೇಲ್ ಮೂಲಕ ಸಂಪರ್ಕಿಸಿದಾಗ ತಿಳಿದು ಬಂದದ್ದು ಕಳೆದ ಆರು ತಿಂಗಳುಗಳಿಂದ ಅವರು ಸಾರ್ವಜನಿಕ ಭೇಟಿಯನ್ನು ರದ್ದುಪಡಿಸಿ ವಿಶ್ರಾಂತಿಯಲ್ಲಿ ಇದ್ದಾರೆ ಎಂದು. ಈಗಂತೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಇನ್ನೂ ಒಂದು ತಿಂಗಳಿನ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿರುವುದರಿಂದ ಭೇಟಿ ಸಾಧ್ಯವೇ ಇಲ್ಲ ಎನ್ನುವ ಉತ್ತರ. ನಿರಾಸೆಯನ್ನು ಇನ್ನೂ ಜಾಯಮಾನಕ್ಕೆ ಒಗ್ಗಿಸಿಕೊಳ್ಳದ ನಾನು ಭರವಸೆಯ ಪ್ರವಾದಿಯಂತೆ ಪದೇ ಪದೇ ಮಿಂಚಂಚೆ ಕಳಿಸುತ್ತಿದ್ದೆ ಮತ್ತು ದೂರವಾಣಿ ಕೂಡ ಮಾಡುತ್ತಿದ್ದೆ. ಹತ್ತು ನಿಮಿಷಕ್ಕಿಂತ ಹೆಚ್ಚಿಗೆ ಅವರೊಡನೆ ಇರಲಾರೆ ಎನ್ನುವ ಭಾಷೆ ಇತ್ತಿದ್ದೆ. ಅವಕಾಶ ಕೊಟ್ಟರೆ ನಾಲ್ಕು ಪ್ರಶ್ನೆಗಳನ್ನು ಮಾತ್ರ ಕೇಳುತ್ತೇನೆ ಎನ್ನುವ ಪ್ರಮಾಣ ಮಾಡಿದ್ದೆ. ಇಲ್ಲಿಂದ ಹೊರಡುವ ದಿನ ಅಲ್ಲಿಂದ ಬಂದ ಕಡೆಯ ಉತ್ತರ ‘ಕ್ಷಮಿಸಿ. ವೈದ್ಯರುಗಳ ಮಾತನ್ನು ಮೀರಲಾಗದು. ನೀವು ಇಲ್ಲಿಗೆ ಬರಬಹುದು, ಆದರೆ ದಲೈ ಲಾಮ ಅವರ ಭೇಟಿ ಅಸಾಧ್ಯ. ಇಲ್ಲಿಗೆ ಬಂದಾಗ ನಮಗೆ ಫೋನ್ ಮಾಡಿ ನೋಡೋಣ’ ಎಂದು. ಸರಿ, ಅಲ್ಲಿ ಹೋಗಿ ಬಾಗಿಲಲ್ಲಿ ಬಿದ್ದಿಹ ಭಜಕನು ನಾನು ಎಂದು ವಿನಂತಿಸಿಕೊಳ್ಳೋಣ ಎಂದು ಹೊರಟೇ ಬಿಟ್ಟೇ.

ತಲುಪಿದ ಕೂಡಲೇ ಕರೆ ಮಾಡಲು ಪ್ರಾರಂಭಿಸಿದೆ. ‘ಭೇಟಿ ಅಸಾಧ್ಯ’ ಎನ್ನುವುದು ಅಲ್ಲಿನ ರೆಕಾರ್ಡೆಡ್ ಸಂದೇಶವೆನ್ನುವಂತೆ ಪ್ರತಿ ಬಾರಿಯೂ ಉಸಿರುತ್ತಿತ್ತು. ಎರಡು ದಿನಗಳ ನಂತರ ಒಂದು ಎಸ್‌ಎಂಎಸ್ ಬಂತು. ‘ನಾಳೆ 11.30ಕ್ಕೆ ನ್ಯಾಂಗಲ್ ಬೌದ್ಧ ಮಂದಿರದ ಕಚೇರಿಗೆ ಬನ್ನಿ. ಬರುವಾಗ ನಿಮ್ಮ ಗುರುತಿನ ಚೀಟಿಯನ್ನು ಮರೆಯದೇ ತನ್ನಿ’ ಹೆಚ್ಚಿನ ಉದ್ವೇಗ, ಉತ್ಸಾಹ ಯಾವುದೂ ನನ್ನನ್ನು ಕಾಡಲಿಲ್ಲ. ಕಾರಣವಿಷ್ಟೆ, ಒಳ ಮನಸ್ಸು ಮೊದಲ ದಿನದಿಂದಲೂ ಈ ಭೇಟಿ ಸಾಧ್ಯವಿದೆ ಎಂದು ಗಟ್ಟಿಯಾಗಿ ಹೇಳುತ್ತಿತ್ತು. ಅದಕ್ಕೇ ಚಿತ್ತ ಸಮವಾಗಿಯೇ ಇತ್ತು.

ಚೀನಾದಂಥಾ ಚೀನಾ ದೇಶದಿಂದ ಬೆದರಿಕೆಗೆ ಒಳಗಾಗಿರುವ ಈ ಜಾಗಕ್ಕೆ ಮತ್ತು ದಲೈ ಲಾಮರಿಗೆ ಇರುವ ಭದ್ರತೆ ಊಹೆಗೂ ನಿಲುಕದ್ದು. ಇಂತಹ ಭದ್ರತಾ ಸಿಬ್ಬಂದಿಯನ್ನು ವೈಟ್ ಹೌಸ್ ಮುಂದೆಯೂ ನೋಡಿಲ್ಲ. ಕಡೆಪಕ್ಷ ಯಾವ ಬ್ರೂಸ್ಲಿ ಸಿನೆಮಾದಲ್ಲೂ ನೋಡಿದ ನೆನಪಿಲ್ಲ. ಆ ಸಿಬ್ಬಂದಿಗಳ ಎತ್ತರ, ಗಾತ್ರ ಮತ್ತು ಅವರ ಸೊಂಟಗಳಲ್ಲಿ ನೇತಾಡುತ್ತಿದ್ದ ಮೂರು ಮೂರು ಪಿಸ್ತೂಲುಗಳನ್ನು ಕಂಡೇ ನನಗೆ ಬವಳಿ ಬರುತ್ತಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದಂತೆ ಜ್ಯಾಮರ್‌ಗಳನ್ನು ಅಳವಡಿಸಿದ್ದಾರೆ. ಗುರುತಿನ ಚೀಟಿಯ ಪರಿಶೀಲನೆ ನಡೆಸಿದ ನಂತರ ಮೈಮೇಲಿನ ಬಟ್ಟೆಯೊಂದನ್ನು ಉಳಿಸಿ ನಮ್ಮ ಬಳಿ ಇರುವ ಎಲ್ಲವನ್ನು ಅವರೇ ತೆಗೆದಿರಿಸಿಕೊಳ್ಳುತ್ತಾರೆ. ನಮ್ಮನ್ನೂ ಸ್ಕ್ಯಾನರ್ ಒಳಗೆ ತೂರಿಸಿಬಿಡುತ್ತಾರೆ.

ಅಲ್ಲಿಂದ ಮುಂದೆ ಹೋದರೆ ನಮ್ಮ ವಿಳಾಸ, ವಿವರ, ಉದ್ದೇಶಗಳ ಅರ್ಜಿಯೊಂದನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ನಂತರ ಮಹಿಳಾ ಭದ್ರತಾ ಸಿಬ್ಬಂದಿಗಳು ಬಂದು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ದೇಹದ ಪ್ರತೀ ಅಂಗಕ್ಕೂ ಸ್ಕ್ಯಾನರ್ ಇಟ್ಟು ಪರೀಕ್ಷೆ ಮಾಡುತ್ತಾರೆ. ಹಾಂ, ಹೇಳುವುದು ಮರೆತೆ. ಹೀಗೆ ದಲೈ ಲಾಮ ಅವರನ್ನು ಭೇಟಿ ಮಾಡಲು ಹೋಗುವ ಮಹಿಳೆಯರು ತುಂಬು ತೋಳಿನ ಮತ್ತು ಪೂರ್ತಿ ಕಾಲಿನ ಬಟ್ಟೆಯನ್ನು ಹಾಕಿಕೊಳ್ಳಬೇಕಿರುತ್ತದೆ. ಉಡುಗೊರೆ ಕೊಡಲು ಇಷ್ಟ ಪಡುವವರು ಮೊದಲೇ ಅನುಮತಿ ಪಡೆದಿರಬೇಕಿರುತ್ತೆ ಮತ್ತು ಅದು ಏನು ಎನ್ನುವದನ್ನು ಮೊದಲೇ ಬರೆದುಕೊಡಬೇಕಿರುತ್ತದೆ. ಭದ್ರತಾ ಸಿಬ್ಬಂದಿಗಳು ಒಪ್ಪುವ ಸಾಮಗ್ರಿಗಳನ್ನು ಮಾತ್ರ ಉಡುಗೊರೆಯನ್ನಾಗಿ ಕೊಡಬಹುದಿರುತ್ತೆ. ಕೆಲವೊಮ್ಮೆ ದಲೈ ಲಾಮ ಅವರ ಕೈಗೇ ಕೊಡುವ ಅವಕಾಶ ಸಿಗಬಹುದು ಇಲ್ಲವಾದಲ್ಲಿ ಅವರ ಪರಿಚಾರಕರೇ ಉಡುಗೊರೆಯನ್ನು ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳುತ್ತಾರೆ.

ಅಂತೂ ನನ್ನನ್ನು ಒಳಕ್ಕೆ ಬಿಟ್ಟರು. ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಮೈಸೂರು ಸ್ಯಾಂಡಲ್ ಅಗರಬತ್ತಿಯ ಕಟ್ಟು ಇತ್ತು. ಮುಂದಿನ ಕ್ಷಣದಲ್ಲಿ ಎಳೆ ಬಿಸಿಲು ಹಸಿರು ರಾಶಿಯನ್ನು ಆವರಿಸಿಕೊಂಡಿದ್ದ ಪರ್ವತದ ಏರಿನಲ್ಲಿ ಬಣ್ಣಬಣ್ಣದ ಹೂವಿನ ಗಿಡಗಳ ಜಾರಿನಲ್ಲಿ ಸ್ಥೂಪದಂತೆ ಕಾಣುವ ಮನೆಯ ಕಾಲುದಾರಿಯಲ್ಲಿ ನಿಂತಿದ್ದೆ. ವಿಶಾಲವಾದ ಹಜಾರದ ಭರ್ತೀ ಭದ್ರತಾ ಸಿಬ್ಬಂದಿಗಳಿದ್ದರು. ನಡುವಿನಲ್ಲೊಂದು ಸೋಫಾ ಇತ್ತು. ಒಳಗೆ ಹೋಗಿ ನಿಂತ ಹತ್ತು ನಿಮಿಷಗಳಲ್ಲಿ ಕಡುಗೆಂಪು ಬಣ್ಣದ ನಿಲುವಂಗಿ ಧರಿಸಿ, ಕೇಸರಿ ಬಣ್ಣದ ಕಾಲುಚೀಲ, ಅಚ್ಚ ಕಂದು ಬಣ್ಣದ ಲೆದರ್ ಬೂಟ್ಸ್ ಹಾಕಿಕೊಂಡು, ಚೌಕಾಕಾರದ ಕಪ್ಪು ಬಣ್ಣದ ಆವರಣವಿದ್ದ ಕನ್ನಡಕ ಧರಿಸಿಕೊಂಡಿದ್ದ, ತೊಂಬತ್ತು ವರ್ಷದ ದೇಹದಲ್ಲಿ ಬೆಳಕೊಂದು ನಗುತ್ತಾ, ನಗುವೊಂದು ನಡೆದಾಡುತ್ತಾ, ಅನೂಹ್ಯ ಶಾಂತಿಯೊಂದು ಗಾಳಿಯಾಗುತ್ತಾ, ಧ್ಯಾನವೊಂದು ಪರಿಮಳವಾಗುತ್ತಾ ನನ್ನೆಡೆಗೆ ಬರುವುದು ಗೊತ್ತಾಗುತ್ತಿತ್ತು, ಹಿಂದೆಯೇ ಅವರೇ ದಲೈ ಲಾಮ ಎನ್ನುವ ಅರಿವೂ ಬಂತು. ಇಹಪರದ ಪ್ರಜ್ಞೆಯಿಲ್ಲದೆ ನಿಂತುಬಿಟ್ಟೆ.

ಅವರೇ ನಗುತ್ತಾ ಬಳಿಬಂದು ಕೈ ಹಿಡಿದುಕೊಂಡಾಗಲೇ ನನ್ನ ದೇಹವೂ ಬದುಕಿದ್ದು ಗೊತ್ತಾಯ್ತು. ಮುಂದಿನ ಹದಿನೈದು ನಿಮಿಷಗಳು ಅವರು ನನ್ನ ಕೈ ಬಿಡಲೇ ಇಲ್ಲ. ನಾನವರ ತೋಳಿಗೆ ಬಳ್ಳಿಯಾಗಿಬಿಟ್ಟಿದ್ದೆ ಎನ್ನುವುದು ತಿಳಿದದ್ದು ನಂತರ ಸಿಬ್ಬಂದಿಗಳು ಕೊಟ್ಟ ಫೋಟೊಗಳಿಂದ. ನೋಡಲು ಉತ್ಸಾಹದ ಚಿಲುಮೆಯಂತೆ ಪುಟಿದೇಳುತ್ತಿದ್ದ ಹಿರಿಯರು ಮಾತನಾಡಲು ಹೊರಟಾಗ ತುಂಬಾ ಬಳಲಿರುವುದು ತಿಳಿಯುತ್ತಿತ್ತು. ಮಾತಿಗೊಮ್ಮೆ ಅವರು ಬಳಸುತ್ತಿದ್ದ ‘I will pray’ ಎನ್ನುವ ಪದಪುಂಜ ಮೂರು ವರ್ಷದ ಮಗುವಿನ ಮಾತಿನಲ್ಲಿನ ದೈವೀಕತೆಯನ್ನು ಸ್ಫುರಿಸುತ್ತಿತ್ತು. ನನ್ನ ಕೈಲಿದ್ದ ಉಡುಗೊರೆಯನ್ನು ಅವರೇ ತೆಗೆದುಕೊಂಡರು. ಮಾತು ಕಳೆದುಕೊಂಡ ಮೂಕಿಯಾಗಿ ಮೌನದಲ್ಲೇ ಮಾತನಾಡುತ್ತಿದ್ದೆ. ಸಮಯ ಮುಗಿಯುತ್ತಿದೆ ಎನ್ನುವ ಸೂಚನೆ ಬಂದೊಡನೆ ಬುದ್ಧಿ ಜಾಗೃತವಾಯಿತು.

ಕೇಳಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟುಕೊಂಡು ಬಂದಿದ್ದ ನಾಲ್ಕೇ ಪ್ರಶ್ನೆಗಳು ನೆನಪಿಗೆ ಬಂದವು. ಸ್ವಚ್ಛ ಭಾರತದ ಕನಸು ನನಸು ಆಗಲು ಸಾಧ್ಯವೇ ಇಲ್ಲ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿರುವ ನಾನು ದಲೈ ಲಾಮಾರನ್ನು ಅವರ ಅಭಿಪ್ರಾಯಕ್ಕಾಗಿ ಕೇಳಿಯೇ ಬಿಟ್ಟೆ. ಆಹಾರ ರಾಜಕೀಯದಿಂದ ಒಡೆದು ಆಳುವ ನೀತಿಯ ಬಗ್ಗೆ, ಮತಾಂತರದಿಂದಲೂ ಬಗೆಹರಿಯದ ಮಾನವ ಸಹಜ ಅಹಂ ಬಗ್ಗೆ ಮತ್ತು ಎಲ್ಲಕ್ಕೂ ಪ್ರಚಾರ ಬಯಸುವ ಮನುಷ್ಯನ ಕ್ಷುಲ್ಲಕ ಬುದ್ಧಿಯ ಬಗ್ಗೆ ಏನೇನೋ ಬಡಬಡಿಸಿದೆ. ಪ್ರಶ್ನೆಗಳು ನಾಲ್ಕು ಆದರೂ ಅವರು ಎಲ್ಲಕ್ಕೂ ನೀಡಿದ್ದು ಒಂದೊಂದೇ ಉತ್ತರ ಮತ್ತು ಒಂದೇ ಉತ್ತರ ‘I will Pray’.

ತಾಯಿಯೊಬ್ಬಳು ಮಗನನ್ನು ಬೆಳೆಸುವ ಹಾದಿಯಲ್ಲಿ ತನ್ನ ಕೈ ಮೀರಿದ ಪರಿಸ್ಥಿತಿಯಿಂದ ಅಸಹಾಯಕಳಾದರೂ ಭರವಸೆಯ ಊಟೆಯಂತೆ, ಒಳಿತಿನ ಹರಿಕಾರಳಂತೆ ದೇವರ ಕೋಣೆಯಲ್ಲಿ ತುಪ್ಪದ ದೀಪ ಬೆಳಗುತ್ತಲೋ, ಗಂಧದ ಕಡ್ಡಿ ಹಚ್ಚುತ್ತಲೋ, ಮಂತ್ರ ಪಠಿಸುತ್ತಲೋ ಗುಟ್ಟಾಗಿ ಸಲ್ಲಿಸುವ ಪ್ರಾರ್ಥನೆಯಂತೆ ಕಂಡರು ದಲೈ ಲಾಮ. ಅವರ ‘I will Pray’ ಎನ್ನುವ ಉತ್ತರದಲ್ಲಿ ಎಂತಹ ಗಾಢವಾದ ಸಂದೇಶ ಅಡಗಿದೆ. ಉಚ್ಛ್ವಾಸವು ನಿಶ್ವಾಸದೆಡೆಗೆ ಕತ್ತಿ ಮಸೆಯುತ್ತಿರುವ ಈ ಕಾಲಘಟ್ಟದಲ್ಲಿ ಹರಸಿ ದಾರಿ ತೋರಬೇಕಾದ ಕೈಗಳೇ ನಿಶಕ್ತಗೊಂಡಿವೆ ಎಂದೆನಿಸುವ ಈ ದಿನಗಳಲ್ಲಿ, ನಮ್ಮನಮ್ಮ ವಿವೇಚನೆ ಉದ್ದೀಪನಗೊಳ್ಳಬೇಕಿದೆ. ವಿವೇಚನೆ ಎನ್ನುವುದು ಎಂದೂ individualistic ತಾನೇ?! ಸಗ್ಗಸಮಾನ ಆ ಹದಿನೈದು ನಿಮಿಷಗಳೂ ಅವರು ಹಿಡಿದುಕೊಂಡಿದ್ದ ನನ್ನ ಕೈಗಳಲ್ಲಿ ಅವರ ಅಂಗೈನ ತಣಿವು ಭರವಸೆಯ ಶಾಖವನ್ನು ತುಂಬುತ್ತಿತ್ತು. ಹೊರ ಬರುವಾಗ ಜ್ವಾಲಾಮಾತಾ ನೆನಪಾದಳು. ಹಾಂ, ಇಲ್ಲೇ ಅಲ್ಲವೇ ಸತಿಯಾದವಳ ನಾಲಿಗೆ ನೆಲಕ್ಕುರುಳಿದ್ದು? ನಾಲಿಗೆಯೇ ಆಚಾರ ತಪ್ಪದಿರು ಎಂದು ‘I too shall pray’ ಎಂದುಕೊಳ್ಳುತ್ತಲೇ ಮನೆಯೆಂಬ ಮಂತ್ರಾಲಯ ಮುಖಿಯಾಗಿದ್ದೆ.