ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ. ಇಂದು ಕೆ.ವಿ. ತಿರುಮಲೇಶ್‌ ಅವರ 83ನೇ ಹುಟ್ಟುಹಬ್ಬ. ಅವರು ಬರೆದ 
ʻಕೆಲವು ಕಥಾನಕಗಳುʼ  ಕಥಾಸಂಕಲನದ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ಈ ಸಂದರ್ಭದ ಓದಿಗಾಗಿ. 

ನವ್ಯ ಕತೆಗಳು ತರುಣ ಜನಾಂಗದವರಲ್ಲಿ ಜನಪ್ರಿಯವಾಗುತ್ತಾ ಹೋಗಿದ್ದ ಕಾಲ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶರು ಆಗಲೇ ಉತ್ತಮ ಕತೆಗಾರರೆಂದು ಗುರುತಿಸಿಕೊಂಡಿದ್ದರು. ನವ್ಯ ಕತೆಗಳ ಹಾದಿಯು ಹೆಚ್ಚು ಕಡಿಮೆ ಸ್ಪಷ್ಟವಾಗಿತ್ತು. ವಸ್ತು, ತಂತ್ರ, ವೈಚಾರಿಕತೆ ಮತ್ತು ಶೈಲಿಗೆ ಖಚಿತ ರೂಪ ಬಂದಿತ್ತು. ತಕ್ಕಮಟ್ಟಿಗಿನ ಪ್ರಬುದ್ಧತೆಯನ್ನೂ ಸಾಧಿಸಿಕೊಂಡಿತ್ತು. ತಾವು ಅರ್ಥಮಾಡಿಕೊಂಡಿದ್ದ ರೀತಿಯಲ್ಲಿ ನವ್ಯಕತೆಗಳ ಸಂಪ್ರದಾಯವನ್ನು ಮುಂದುವರಿಸಿದ್ದ ಶ್ರೀಕೃಷ್ಣ ಆಲನಹಳ್ಳಿ, ಆರ್ಯ ಮೊದಲಾದವರು ಕತೆಯ ವೈಲಕ್ಷಣ್ಯಗಳಿಗೆ ಸ್ಥಿರತೆಯನ್ನು ತಂದುಕೊಟ್ಟಿದ್ದರೂ ವಸ್ತು ಮತ್ತು ತಂತ್ರಗಳಲ್ಲಿ ಹೊಸ ಸಾಧ್ಯತೆಗಳು ಹುಟ್ಟಿಕೊಂಡಿರಲಿಲ್ಲ.

ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ.

ತಿರುಮಲೇಶರು 2010ರಲ್ಲಿ ಹೊರತಂದ ‘ಕೆಲವು ಕಥಾನಕಗಳುʼ ಎಂಬ ಸಂಕಲನವನ್ನು ಗಮನಿಸಿದಾಗ ಅವರ ಮೊದಲ ಕಥೆಗಳಿಗಿಂತಲೂ ಭಿನ್ನ ರಚನೆಗಳನ್ನು ಕಾಣಲು ಸಾಧ್ಯವಿದೆ. ತಮ್ಮದೇ ಆದ ವಿಶಿಷ್ಟ ಛಾಪಿನಿಂದ ಅಲ್ಲಿ ತಿರುಮಲೇಶತನವು ಮಿಂಚುತ್ತದೆ. ಕವಿತೆ ಮತ್ತು ಕಾದಂಬರಿಗಳಲ್ಲಿ ನಡೆಸಿದ ವಾಸ್ತವದ ನೆಲೆಯ ಹುಡುಕಾಟವನ್ನು ಅವರು ಇಲ್ಲೂ ನಡೆಸಿದ್ದಾರೆ. ‘ಜಾಗುವಾ ಮತ್ತು ಇತರರು’ ಕತೆಗಳಲ್ಲಿರುವಷ್ಟು ನವ್ಯದ ಪ್ರಖರತೆ ‘ಕೆಲವು ಕಥಾನಕಗಳ’ಲ್ಲಿ ಇಲ್ಲದಿದ್ದರೂ ಮುಖ್ಯ ಕಾಳಜಿಗಳು ಮಾತ್ರ ಮೊದಲಿನವೇ. ಜೀವನದ ಇರುವಿಕೆಯ ರೀತಿ, ರಹಸ್ಯಗಳ ಶೋಧನೆಗಳು ಮುಖ್ಯವಾಗುತ್ತವೆ. ಇಂಥ ಸಂಗತಿಗಳೂ ಕತೆಗಳಾಗಬಲ್ಲವೇ ಎಂದು ಬೆರಗನ್ನು ಹುಟ್ಟಿಸಬಲ್ಲ ಕತೆಗಳನ್ನು ಇಲ್ಲಿ ಕಾಣಬಹುದು. “ಸಾಂಪ್ರದಾಯಿಕ ಕತೆಗಳ ಮಾದರಿಯನ್ನು ಮುರಿಯಬಲ್ಲ ಕತೆಗಳಿವು” ಎಂದು ಶ್ರೀಧರ ಹೆಗಡೆ ಭದ್ರನ್ ಅವರು ಹಿನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ತಿರುಮಲೇಶರ ಕತೆಗಳ ಮನೋಧರ್ಮವನ್ನು ತಿಳಿಯಬೇಕಿದ್ದರೆ ‘ಜೀತಜಾಲ’ ಕತೆಯನ್ನು ಓದಬೇಕು. ಕತೆ ಎಂದರೇನು ಎಂಬುದರ ಮೀಮಾಂಸೆಯು ‘ಜೀತಜಾಲ’ದಲ್ಲಿದೆ. ಇದು ಕತೆಗಳನ್ನು ಕುರಿತ ಕತೆಯಾದರೂ ಇದರಲ್ಲಿ ವ್ಯಾಪಾರಿ ಮಸಾಲೆ ಸಿನೇಮಾದ ಕತೆ ಅಥವಾ ಸಿನೇಮಾ ಶುರುವಾಗುತ್ತದೆ. ಓದುಗನು ಅಪೇಕ್ಷಿಸುವ ಸಾಹಿತ್ಯದ ಪರಿಕಲ್ಪನೆ ಕತೆ ಎಂದರೇನು ಎಂಬುದನ್ನು ಮುರಿಯಲೆತ್ನಿಸುವ ಈ ಕತೆಯು ಇಲ್ಲಿನ ಪ್ರಾತಿನಿಧಿಕ ಕತೆಯಾಗಿದೆ.

ಡಾ. ಯು. ಮಹೇಶ್ವರಿ ಅವರು ‘ಕೆಲವು ಕಥಾನಕಗಳ’ಲ್ಲಿರುವ ಕತೆಗಳನ್ನು ವಿಶ್ಲೇಷಿಸುತ್ತಾ “ಸಂಗ್ರಹದ ಆರಂಭದ ಕತೆ ‘ಜೀತಜಾಲ’ವು ಕತೆಗಳ ಬಗೆಗೇ ಹೊಸೆದ ಕತೆ. ಅಪೂರ್ಣ ಕತೆಯೊಂದು ಚಿತ್ರಕತೆಯಾಗುವ ಸಂದರ್ಭದಲ್ಲಿ ಸಮಕಾಲೀನ ಅಗತ್ಯ ಅಭಿರುಚಿಗಳಿಗನುಗುಣವಾಗಿ ಕೂಡಿಕೊಳ್ಳಬಹುದಾದ ಅಂಶಗಳನ್ನು ಸೂಚಿಸುವ ಈ ಕತೆ ಒಟ್ಟು ಸಂಗ್ರಹಕ್ಕೆ ಬರೆದ ಕಥಾಮುಖದಂತೆಯೂ ಇದೆ” (ಗಡಿನಾಡ ಬಾನಾಡಿ ಪ್ರತಿಭೆ ಡಾ. ಕೆ.ವಿ. ತಿರುಮಲೇಶ್- ಪುಟ 19) ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ ಕತೆಯು ಅಷ್ಟಕ್ಕೇ ನಿಲ್ಲುವುದಿಲ್ಲ. ಕತೆಗಳಿಗೆ ಮಾನವ ಸಹಜ ಗುಣಗಳನ್ನು ಆರೋಪಿಸುವ ಮೂಲಕ ಕತೆಗಳ ನಡೆನುಡಿಗಳನ್ನು ವಿವರಿಸುವ ಈ ಕತೆಯು ಸಮಾಜದ ವಿವಿಧ ರಂಗಗಳಲ್ಲಿರುವ ಮನುಷ್ಯರ ಚರ್ಯೆ, ಮದ, ಮತ್ಸರ, ಈರ್ಷ್ಯೆ ಸಣ್ಣತನ- ಹೀಗೆ ಮನುಷ್ಯರ ಒಟ್ಟು ಸ್ವಭಾವಕ್ಕೆ ಕನ್ನಡಿ ಹಿಡಿಯುತ್ತದೆ.

“ಸಂಜೆಯ ವೇಳೆ ಊರ ಕತೆಗಳೆಲ್ಲ ಒಂದೆಡೆ ಸೇರುತ್ತಿದ್ದವು. ಸಣ್ಣ ಕತೆಗಳು, ದೊಡ್ಡ ಕತೆಗಳು, ಗಂಡು ಕತೆಗಳು, ಹೆಣ್ಣು ಕತೆಗಳು, ಮೈಮುಚ್ಚಿದ ಕತೆಗಳು, ಮೈಬಿಚ್ಚಿದ ಕತೆಗಳು, ಪುಂಡ ಕತೆಗಳು, ಗರತಿ ಕತೆಗಳು, ಮರಿ ಕತೆಗಳು, ಅಪೂರ್ಣ ಕತೆಗಳು ಎಲ್ಲವೂ. ಕೆಲವು ಕತೆಗಳು ಇನ್ನೊಂದರ ನಕಲಿನಂತೆಯೇ ಇದ್ದವು. ಆದರೆ ಅಸಲಿ ಯಾವುದು ನಕಲಿ ಯಾವುದು ಎಂಬುದು ಈಗ ಎಲ್ಲರಿಗೂ ಮರೆತು ಹೋಗಿತ್ತು. ಅವು ಅಲ್ಲಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದವು” (ಕೆಲವು ಕಥಾನಕಗಳು-ಪುಟ 9)

ಮುಂದೆ ಮನುಷ್ಯ ಮತ್ತು ಕತೆಗಳನ್ನು ಬೆಸೆಯುವ ಕೊಂಡಿಯಾಗಿ ಕತೆಗಳ ಪೈಕಿ ಅಮುಖ್ಯವೆಂದು ತಿರಸ್ಕಾರಕ್ಕೊಳಗಾದ ಅಪೂರ್ಣ ಕತೆಯೊಂದು ಮುಖ್ಯವಾಗುತ್ತದೆ. ನಾಟಕ-ಚಲನಚಿತ್ರಗಳಾಗಿ ರೂಪಾಂತರ ಹೊಂದಿ ಪ್ರಸಿದ್ಧಿಯ ತುತ್ತ ತುದಿಗೇರಿದ ಕತೆಗಳ ನಡುವೆ ತನ್ನ ಬದುಕಿಗೆ ಅರ್ಥವೇ ಇಲ್ಲ ಎಂದು ಸದಾ ಕೊರಗುತ್ತಾ ಪೂರ್ಣತೆಯತ್ತ ತುಡಿಯುತ್ತಿರುವ ಅಪೂರ್ಣ ಕತೆಯು ಒಂದು ದಿನ ಚಲನಚಿತ್ರದ ಮಂದಿಯ ಗಮನವನ್ನು ಸೆಳೆಯುತ್ತದೆ. ಯಾರಿಗೂ ಬೇಡದೆ ಅನಾಥವಾಗಿ ಬಿದ್ದಿರುವ ಆ ಕತೆಯನ್ನು ಅವರು ಚಲನಚಿತ್ರವನ್ನಾಗಿ ಮಾಡಲು ಬಯಸುತ್ತಾರೆ. ನಿರ್ಮಾಪಕನು ಕತೆಯನ್ನು ಓದುತ್ತಾನೆ. ಮರುಭೂಮಿಯಂಥ ವಿಶಾಲ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನಡೆಯುತ್ತಿದ್ದಾರೆ. ದೂರದಿಂದ ಗಾಳಿಯ ಸದ್ದು ಕೇಳಿ ಬರುತ್ತಿರುತ್ತದೆ. ಗಾಳಿ ಎತ್ತಿ ರಾಚುವ ಮರಳ ಕಣಗಳಿಂದ ತಪ್ಪಿಸಿಕೊಳ್ಳಲೆಂದು ಅವರಿಬ್ಬರೂ ತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಾರೆ. ಗಾಳಿಯ ರಭಸದಲ್ಲಿ ಮರಳ ಕಣಗಳು ಪಿರಮಿಡ್ಡಿನಂತೆ ಎತ್ತರದಲ್ಲಿ ನಿಂತಿರುತ್ತದೆ. ಗಾಳಿಯ ಅಬ್ಬರ ಕಡಿಮೆಯಾದಾಗ ಅವರಿಬ್ಬರೂ ದಾರಿ ತಪ್ಪಿರುತ್ತಾರೆ ಎಂಬಲ್ಲಿಗೆ ಕತೆ ಅಪೂರ್ಣವಾಗಿರುತ್ತದೆ. ಇಷ್ಟೇ ಇದ್ದರೆ ಸಿನೇಮಾ ಆಗುವುದಿಲ್ಲ ಎಂದು ಚಲನಚಿತ್ರದವರು ಕತೆಯನ್ನು ತಮ್ಮ ಉದ್ದೇಶಕ್ಕನುಗುಣವಾಗಿ ತಿರುಚುತ್ತಾರೆ. ಪಿರಮಿಡ್ಡಿನಂತೆ ನಿಂತ ಮರಳನ್ನು ಪಿರಮಿಡ್ಡೇ ಎಂದು ಕಲ್ಪಿಸುತ್ತಾರೆ. ಫೆರೋಗಳು ಅದನ್ನು ನಿರ್ಮಿಸಲು ಜೀತದಾಳುಗಳನ್ನು ಬಳಸಿಕೊಂಡ ವಿಧಾನವನ್ನು ಶೋಧಿಸಲು ಹೊರಡುವ ನಾಯಕನನ್ನು ಸೃಷ್ಟಿಸುತ್ತಾರೆ. ಆ ಮೂಲಕ ಕತೆಗೆ ಸಾಮಾಜಿಕ ಬದ್ಧತೆಯನ್ನು ಒದಗಿದಂತಾಗುತ್ತದೆ ಎಂಬ ಭ್ರಮೆಯನ್ನು ಪ್ರೇಕ್ಷಕರಲ್ಲಿ ಹುಟ್ಟಿಸುತ್ತಾರೆ.

ಕತೆ ಎಂದರೇನು ಎಂಬುದರ ಮೀಮಾಂಸೆಯು ‘ಜೀತಜಾಲ’ದಲ್ಲಿದೆ. ಇದು ಕತೆಗಳನ್ನು ಕುರಿತ ಕತೆಯಾದರೂ ಇದರಲ್ಲಿ ವ್ಯಾಪಾರಿ ಮಸಾಲೆ ಸಿನೇಮಾದ ಕತೆ ಅಥವಾ ಸಿನೇಮಾ ಶುರುವಾಗುತ್ತದೆ. ಓದುಗನು ಅಪೇಕ್ಷಿಸುವ ಸಾಹಿತ್ಯದ ಪರಿಕಲ್ಪನೆ ʻಕತೆʼ ಎಂದರೇನು ಎಂಬುದನ್ನು ಮುರಿಯಲೆತ್ನಿಸುವ ಈ ಕತೆಯು ಇಲ್ಲಿನ ಪ್ರಾತಿನಿಧಿಕ ಕತೆಯಾಗಿದೆ.

ನಾಯಕನಿಗೆ ದುಬೈಯಲ್ಲಿ ಬೆಲ್ಲಿ ನರ್ತಕಿಯ ಪರಿಚಯವಾಗಿ ಇಬ್ಬರೂ ಪರಸ್ಪರ ಪ್ರೀತಿಸತೊಡಗುತ್ತಾರೆ. ಅವರು ದುಬೈಯಿಂದ ಈಜಿಪ್ಟಿಗೆ ಹೋಗುವಾಗ ಖಳನಾಯಕರು ನಾಯಕನ ಕೈಚೀಲದಲ್ಲಿ ವಿಶ್ವದ ಅತಿ ಶ್ರೇಷ್ಠ ವಜ್ರದ ಹರಳುಗಳನ್ನು ಇರಿಸುತ್ತಾರೆ. ಈಜಿಪ್ಟಿಗೆ ತಲುಪಿದ ನಾಯಕ ನಾಯಕಿಯರು ಪಿರಮಿಡ್ಡಿನ ಸುತ್ತ ಸುತ್ತುತ್ತಿರುವಾಗ ನೃತ್ಯ ಮತ್ತು ಹಾಡಿನ ಸಂಯೋಜನೆಗಳನ್ನು ಮಾಡಲಾಗುತ್ತದೆ. ಅಲ್ಲಿ ಏಳುವ ಸುಂಟರಗಾಳಿಯ ಅಬ್ಬರದ ಪರಿಣಾಮವನ್ನು ತಾಂತ್ರಿಕತೆಯ ಮೂಲಕ ಚಿತ್ರಿಸಲಾಗುತ್ತದೆ. ಪ್ರೇಮಿಗಳಿಬ್ಬರೂ ಬೇರ್ಪಟ್ಟು ನಾಯಕಿಯು ಜೀತದಾಳುಗಳ ವಂಶದವರ ಕೈಗೆ ಸಿಗುತ್ತಾಳೆ. ನಾಯಕ ಅವಳನ್ನು ಹುಡುಕುತ್ತಿದ್ದಂತೆ ಫೆರೋನ ಭೇಟಿಯಾಗಿ ಪಿರಮಿಡ್ಡುಗಳನ್ನು ಜೀತಗಾರರ ಶೋಷಣೆಯ ಮೂಲಕ ಹೇಗೆ ಕಟ್ಟಲಾಯಿತು ಎಂದು ಶೋಧಿಸುತ್ತಾನೆ. ಇಂಥ ಜೀತಜಾಲ ಈಗಲೂ ಕೆಲಸ ಮಾಡುತ್ತಿದೆ. ಆ ಪೈಕಿ ವಜ್ರಗಳ್ಳರೂ ಸೇರಿದ್ದಾರೆ ಎಂದು ತಿಳಿಯುತ್ತದೆ. ನಾಯಕನು ತನ್ನ ಸಾಹಸದ ಮೂಲಕ ಜೀತಜಾಲವನ್ನು ಭೇದಿಸುತ್ತಾನೆ. ವಜ್ರಗಳು ಯಾರಿಗೂ ಸಿಗದೆ ಗರ್ತದಲ್ಲಿ ಬೀಳುತ್ತವೆ. ಆ ಪೈಕಿ ಅತಿ ಮುಖ್ಯವೂ ಪ್ರಕಾಶಮಾನವೂ ಆದ ವಜ್ರವು ನಾಯಕಿಗೆ ಸಿಗುತ್ತದೆ.

ಇಲ್ಲಿ ಅಪೂರ್ಣ ಕತೆಯು ಸಿದ್ಧ ಶೈಲಿಯ ಬಿಗ್ ಬಜೆಟ್ ಚಲನಚಿತ್ರವಾಗಿ ಬದಲಾಗುವ ಮೂಲಕ ಆಧುನಿಕ ಜಗತ್ತಿನ ವ್ಯಾಪಾರೀಕರಣದ ದಾಳವಾಗುವ ದುರಂತವನ್ನು ಕಾಣುತ್ತೇವೆ. ಅಪೂರ್ಣ ಕತೆಯೊಳಗೆ,  ಜೊತೆ ಜೊತೆಯಲಿ ಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳು ನಾಯಕ-ನಾಯಕಿಯರಾಗಿ ರೂಪಾಂತರಗೊಂಡದ್ದು, ತಾಂತ್ರಿಕತೆಯ ಮೂಲಕ ಸುಂಟರಗಾಳಿ ಬೀಸುವಂತೆ ಮಾಡಿದ್ದು, ಅದ್ಭುತ ಐತಿಹಾಸಿಕ ದೃಶ್ಯಗಳ ಮರುಜೋಡಣೆಯನ್ನು ಮಾಡಿದ್ದು, ಫೆರೋನ ಕಾಲದಲ್ಲಿದ್ದ ಜೀತಜಾಲವು ಈಗಲೂ ಕೆಲಸ ಮಾಡುತ್ತಿದೆ ಎಂಬ ಮೂಲಕ ಚರಿತ್ರೆ ಮತ್ತು ಸಮಕಾಲೀನ ವಿಚಾರಗಳನ್ನು ಒಂದೇ ಕೊಂಡಿಯಲ್ಲಿ ಸಿಕ್ಕಿಸಿದ್ದು ಎಲ್ಲವೂ ನೂತನ ಸಿನೇಮಾ ರಂಗವು ಸಾಮಾಜಿಕ ಬದ್ಧತೆಯನ್ನು ನೆಪವಾಗಿಟ್ಟುಕೊಂಡು ಲೈಂಗಿಕತೆ, ಮನೋರಂಜನೆ, ಸಾಹಸ ಮತ್ತು ತಾಂತ್ರಿಕತೆಯ ವಿಜೃಂಭಣೆಗಳಿಗೆ ಮಾತ್ರ ಮೀಸಲಾಗಿರುವುದನ್ನು ಟೀಕಿಸುತ್ತದೆ. ಇಲ್ಲಿ ತಿರುಮಲೇಶರು ಅಪೂರ್ಣ ಕತೆಯನ್ನು ಮುಂದಿಟ್ಟುಕೊಂಡು ವ್ಯಾಪಾರಿ ಜಗತ್ತಿನ ಒಳಸುಳಿಗಳನ್ನು ಅನಾವರಣಗೊಳಿಸುತ್ತಾರೆ.

ಹಲವು ಮಾಧ್ಯಮಗಳ ನೆರವಿನಿಂದ ರೂಪುಗೊಳ್ಳುವ ವಿಶಿಷ್ಟ ಕಲೆಯಾಗಿರುವ ಚಲನಚಿತ್ರವು ಇತ್ತೀಚೆಗೆ ಮನೋರಂಜನೆಯನ್ನಷ್ಟೇ ಗುರಿಯನ್ನಾಗಿರಿಸಿಕೊಂಡಿದ್ದು ಬರೇ ನೆಪ ಮಾತ್ರಕ್ಕಾಗಿ ಕತೆಯನ್ನು ಬಯಸುತ್ತದೆ. ಒಂದು ರೂಪುರೇಷೆಯಷ್ಟೇ ಆಗಿರುವ ಆ ಕತೆಯಲ್ಲಿ ರಂಜಕ ಅಂಶಗಳನ್ನು ತುರುಕಲು ಅವಕಾಶವನ್ನು ಹುಡುಕುತ್ತದೆ. ಅಲ್ಲಿಗೆ ಕತೆ ಬರೆದವನ ಹಂಗು ಮುಗಿಯಿತು. ಆಮೇಲೆ ಏನಿದ್ದರೂ ನಿರ್ದೇಶಕನ ಕಲ್ಪನೆ. ಅದಕ್ಕೆ ತಕ್ಕಂತೆ ನಟ ನಟಿಯರು ಅಭಿನಯಿಸುತ್ತಾರೆ. ಕ್ಯಾಮೆರಾದ ಕಣ್ಣಿಗೆ ಚೆನ್ನಾಗಿ ಕಾಣುವ ಮನೆಮಾರು, ನಿಸರ್ಗ, ಹಾಡು ಕುಣಿತ, ರತಿಕ್ರೀಡೆ ಮತ್ತು ಹೊಡೆದಾಟದ ಸನ್ನಿವೇಶಗಳು ಒದಗಿ ಬರುತ್ತವೆ. ಹೀಗೆ ಮೈದಾಳುವ ಕಲಾಕೃತಿಯಲ್ಲಿ ಮೂಲ ಕತೆಯ ಉಸಿರು ಅಡಗಿ ಹೋದರೆ ಆಶ್ಚರ್ಯವಿಲ್ಲ ಎಂಬ ವಿಚಾರಗಳನ್ನು ಕತೆಯು ಶಕ್ತವಾಗಿ ಧ್ವನಿಸುತ್ತದೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದಿರುವ ಮುಖ್ಯ ಚಳುವಳಿಗಳಲ್ಲಿ ಒಂದಾಗಿರುವ ನವ್ಯ ಚಳುವಳಿಯ ಬೆನ್ನಿಗೆ ಕಾಣಿಸಿಕೊಂಡ ಅಸಂಗತ ವಾದದ ಪ್ರೇರಣೆಯಿಂದ ಹುಟ್ಟಿದ ಸಣ್ಣಕತೆಗಳ ಧಾರೆಯು ಗಮನಾರ್ಹವಾಗಿದೆ. ಲೇಖಕರ ಅಸಂಗತ ಶೈಲಿಯ ಕಥನ ವ್ಯವಸಾಯವು ಕನ್ನಡ ಸಾಹಿತ್ಯದ ವೈವಿದ್ಯಮಯ ಬೆಳವಣಿಗೆಗೆ ತನ್ನದ ಆದ ಕೊಡುಗೆಯನ್ನು ನೀಡಿದೆ.‘ಜೂಪಿಟರಿನಲ್ಲಿ ಜಗನ್ನಾಥ’ ಕತೆಯು ಅಸಂಗತ ಕಥನಗಾರಿಕೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುವ ರಚನೆಯಾಗಿದೆ. ಅನಿರೀಕ್ಷಿತವಾಗಿ ಬಂದೆರಗುವ ಕುತೂಹಲಕಾರಿ ಸನ್ನಿವೇಶಗಳು, ಸಾಂಕೇತಿಕ ಅರ್ಥಗಳನ್ನು ಸೂಚಿಸುವ ವಿವರಗಳು, ಅರ್ಥ ಸಂದಿಗ್ಧತೆಗೆ ಎಡೆ ಮಾಡಿಕೊಡುವಂಥ ಸಂಭಾಷಣೆಯ ತುಣುಕುಗಳು, ಸಂಕ್ಷೇಪ ಗುಣವೇ ಪ್ರಧಾನವಾಗಿರುವ ಚುರುಕಿನ ವಾಕ್ಯಗಳು ಬರವಣಿಗೆಯ ಆಕರ್ಷಣೆಗೆ ಕಾರಣವಾಗಿವೆ. ಇಲ್ಲಿ ಲೇಖಕರು ಕತೆಗಳನ್ನು ಬರೆದು ಮುಗಿಸಿದವರಂತೆ ಕಾಣಿಸದೆ ಇನ್ನೂ ಹೇಳುತ್ತಾ ಹೋಗುವ ಅನುಭವವನ್ನು ಉಂಟು ಮಾಡುತ್ತಾರೆ. ಅಸಂಗತ ಸಂವೇದನೆಯ ಕಥನದ ಸಾಧ್ಯತೆಯನ್ನು ತೋರಿಸಿಕೊಡುತ್ತಾ ಅದನ್ನು ಮೀರಿ ನಿಲ್ಲುತ್ತಾರೆ. ಇದೇ ರೀತಿಯಲ್ಲಿ ಬದುಕಿನ ಅನೇಕ ಸಾಧ್ಯತೆಗಳನ್ನು ‘ಛಿದ್ರ’, ‘ಬೇಕಾಗಿದ್ದಾನೆ’, ‘ಆನ್ ದಿ ರಾಕ್ಸ್’, ‘ಒಂದು ದಿನದ ಪಾಠ’, ಮತ್ತು ‘ಹಾಸ್ಯಗಾರ’ ಎಂಬ ಕತೆಗಳು ಶೋಧಿಸಲು ಯತ್ನಿಸುತ್ತವೆ. ಇದು ನೈತಿಕತೆಯನ್ನು ಮೀರಿದ ನೆಲೆಯಲ್ಲಿ ಮಾಡಿದ ಬದುಕಿನ ಸಾಧ್ಯತೆಗಳ ಶೋಧನೆ.

‘ಗುಹಾವಾಸಿ’, ‘ಸ್ಪರ್ಶ’, ‘ಪರಂಧಾಮಿ ಸ್ವಾಮಿ’ಯಂಥ ಕತೆಗಳು ಸರಳವಾಗಿ ನಿರೂಪಿಸಿದಂಥ ಕತೆಗಳಂತೆ ಕಾಣುತ್ತಲೇ ಕೊನೆಯಲ್ಲಿ ಪಡೆಯುವ ಸೂಕ್ಷ್ಮ ತಿರುವಿನಲ್ಲಿ ಅರ್ಥಪೂರ್ಣವೆನಿಸುತ್ತವೆ. ‘ಆಕಾಶಗಾಮಿ’, ‘ಜೂಪಿಟರಿನಲ್ಲಿ ಜಗನ್ನಾಥ’ ಮುಂತಾದ ಕತೆಗಳನ್ನು ಆಧಾರವಾಗಿಟ್ಟುಕೊಂಡು ವಾಸ್ತವದ ನಡುವಿನಲ್ಲಿ ನಿಂತು ವಾಸ್ತವದಾಚೆಗೆ ಕೈಚಾಚುವ ಯತ್ನವು ಕುತೂಹಲಕಾರಿಯಾಗಿದೆ. ಗದ್ಯ ಮತ್ತು ಕವಿತೆಗಳ ನಡುವಿನ ಅಂತರವನ್ನು ಅಳಿಸುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ತಿರುಮಲೇಶರು ತಮ್ಮ ಕವಿತೆಗಳಂತೆಯೇ ಕತೆಯ ಚೌಕಟ್ಟನ್ನೂ ಮೀರುವ ಕೆಲಸವನ್ನು ಮಾಡಿದ್ದಾರೆ. ‘ಅಲ್ ಪರ್ದಿ’ ಅಂಥ ಕತೆಗಳಲ್ಲೊಂದು. ನವ್ಯದಿಂದ ಭಿನ್ನರೆನಿಸಿಕೊಳ್ಳಬಯಸುವ, ಬಂಡಾಯ ಮಾರ್ಗವನ್ನು ಒಲ್ಲದ ತಿರುಮಲೇಶರು ತಾವು ಕಂಡುಕೊಂಡ ಹೊಸ ರೀತಿಯ ಬರವಣಿಗೆ ‘ಕೆಲವು ಕಥಾನಕಗಳ’ಲ್ಲಿವೆ.

(ಕೃತಿ: ಕೆಲವು ಕಥಾನಕಗಳು (ಕತೆಗಳ ಸಂಕಲನ), ಲೇಖಕರು: ಕೆ. ವಿ. ತಿರುಮಲೇಶ್, ಪ್ರಕಾಶಕರು: ಅಭಿನವ ಪ್ರಕಾಶನ, ಬೆಂಗಳೂರು, ಬೆಲೆ: 150/-)