ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಅಕ್ಷರಶಃ ಬೀದಿಬೀದಿ ಅಲೆದು ಸುತ್ತಾಡಿ ಚತುರೋಪಾಯಗಳನ್ನು ಮಾಡಬೇಕಾಯಿತು. ಆ ಇಳಿ ಮಧ್ಯಾಹ್ನ ಸುರಕ್ಷಿತವಾಗಿ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

ಎಲ್ಲವೂ ಮರುಕಳಿಸುತ್ತಿದೆ. ನಿನ್ನೆ ಮೊನ್ನೆ ನಡೆದಂತೆ, ಅಳಿಸಿಹೋಗದ ನೆನಪುಗಳು ಬುತ್ತಿ ಬಿಚ್ಚಿವೆ. ಬುತ್ತಿಯಲ್ಲಿರುವ ನೆನಪಿನೋಟ ನನ್ನದಾಗಿರಬಹುದು, ನಿಮ್ಮದಾಗಿರಬಹುದು ಅಥವಾ ಅವರ್ಯಾರದ್ದೋ ಆಗಿರಬಹುದು. ಅಥವಾ, ಎಲ್ಲರಿಗೂ ಸೇರಿದ್ದಿರಬಹುದು ಕೂಡ.

ಏನೆಲ್ಲಾ ಮರುಕಳಿಸುತ್ತಿರುವ ಮಾರ್ಚ್ ತಿಂಗಳಿದು! ಮಾರ್ಚ್ ೫ ಶನಿವಾರದಂದು ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದಲ್ಲಿ ಮಾರ್ಡಿ ಗ್ರಾ (Mardi Gras) ಪೆರೇಡ್ ನಡೆಯುತ್ತಿದೆ. ಮತ್ತೆ ಮೈಕೊಡವಿಕೊಂಡು ಕೂತಿದೆ, ೮ರಂದು ಬರಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಇವೆರಡನ್ನೂ ಪಕ್ಕಕ್ಕಿಟ್ಟು ನಮ್ಮನ್ನು ಆವರಿಸಿರುವುದು ಚಿಂತೆಗೀಡು ಮಾಡಿರುವ ಸದ್ಯಕ್ಕೆ ಇನ್ನೂ ಘಟಿಸುತ್ತಿರುವ ಎರಡು ಅನುಭವಗಳು. ಆಸ್ಟ್ರೇಲಿಯ ಪೂರ್ವತೀರದ ಎರಡು ರಾಜ್ಯಗಳನ್ನು ಬಾಧಿಸುತ್ತಿರುವ ಅತೀವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮೊದಲನೆಯದಾದರೆ ಎರಡನೆಯದು ಯುಕ್ರೇನಿನ ಜನರ ನೋವು. ಇವೆರಡನ್ನೂ ಕುರಿತು ಆಲೋಚಿಸುವಾಗ ಮನುಷ್ಯರು ಒಂದೆಡೆ ಹುಲುಮಾನವರೂ ಆಗಿದ್ದು ಇನ್ನೊಂದೆಡೆ ಅತೀತರಾಗುವ ಅತಿಯಾಸೆಯುಳ್ಳವರೂ ಆಗಿರುವುದು ಹೇಗೆ ಎಂದು ಆಶ್ಚರ್ಯ!

ನಮ್ಮಲ್ಲಂತೂ ಮಳೆಯೆಂಬ ಮಳೆಯ ವಿಶ್ವರೂಪದ ದರ್ಶನವಾಗಿದೆ. ನಮ್ಮ ರಾಣಿರಾಜ್ಯದ ಕೆಳಗಿನ ಭಾಗದ ಪೂರ್ವತೀರ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯದ ಉತ್ತರಭಾಗದ ಪೂರ್ವತೀರ ಪ್ರದೇಶಗಳನ್ನು ಮಳೆಯೆಂಬ ಮಹತ್ ಶಕ್ತಿ ಅಲ್ಲಾಡಿಸಿ ಚೆಲ್ಲಾಡಿದೆ. ಅಂತಸ್ತು, ವರ್ಗ, ಬಣ್ಣ ಯಾವುದನ್ನೂ ಲೆಕ್ಕಿಸದೆ ನಿರ್ದಾಕ್ಷಿಣ್ಯವಾಗಿ ಹುಲುಮಾನವರನ್ನು ಅಣಕವಾಡಿದೆ. ಎಷ್ಟೋ ವರ್ಷಗಳಿಂದ ಧೋ ಎಂಬ ಮಹಾ ಮಳೆಯ ಶಬ್ದ, ಲಯಗಳನ್ನು ಮರತೇ ಹೋಗಿದ್ದ ಜನರು ಇದ್ದಕ್ಕಿದ್ದಂತೆ ಆಕಾಶದಿಂದ ಬಿದ್ದ ಬೃಹತ್ ಪ್ರಮಾಣದ ನೀರಿನ ಜಲಪಾತವನ್ನು ಕಂಡು, ಕೇಳಿ ಅನುಭವಿಸಿ ತಬ್ಬಿಬ್ಬಾಗಿದ್ದಾರೆ. ಹೀಗೆ ಬೀಳುತ್ತಿದ್ದ ಮಳೆಯು ತನ್ನ ಜೊತೆಗಿರಲಿ ಎಂದು ಆಹ್ವಾನಿಸಿದ ಪ್ರವಾಹವೆಂಬ ಹೆಸರಿನ ಅತಿಥಿ ಕೂಡ ಚೆಲ್ಲಾಟದಲ್ಲಿ ಸೇರಿಕೊಂಡು ಇಬ್ಬರೂ ಆಡಿದ ಚೆಂಡಾಟದಲ್ಲಿ ನಾವೆಲ್ಲಾ ಉರುಳುರುಳಿ ಸೋತಿದ್ದೇವೆ.

ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಅಕ್ಷರಶಃ ಬೀದಿಬೀದಿ ಅಲೆದು ಸುತ್ತಾಡಿ ಚತುರೋಪಾಯಗಳನ್ನು ಮಾಡಿ ಇಳಿ ಮಧ್ಯಾಹ್ನ ಸುರಕ್ಷಿತವಾಗಿ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.

ಎಲ್ಲರಿಗೂ ಇರುವ ಜೀವದಾಸೆ ಯುಕ್ರೇನಿನ ಜನರಿಗೂ ಇದೆಯಲ್ಲವೇ. ಅವರದ್ದೇ ಆಗಿರುವ ಜೀವ, ಜೀವನದ ಮೇಲೆ ನಮಗಿಲ್ಲದ ಅಧಿಕಾರವನ್ನು ಹೇರುವುದು ಮನುಷ್ಯ ಸ್ವಭಾವದ ಕರಾಳತೆಯನ್ನು ತೋರಿದೆ. ಯುದ್ಧದ ಶಬ್ದವನ್ನೇ ಮರೆತಿದ್ದ ಯೂರೋಪಿನ ಜನತೆ ಬೆಚ್ಚಿದ್ದಾರೆ. ‘ನಾವೆಲ್ಲರೂ ಯುಕ್ರೇನಿಯರೆ’ ಎಂಬ ಸಂದೇಶವು ನಿಧಾನವಾಗಿ ಹಬ್ಬುತ್ತಿದೆ. ಯುಕ್ರೇನಿನ ಸಾಮಾನ್ಯ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಪಣತೊಟ್ಟು ಅವಡುಗಚ್ಚಿ ತೋರುತ್ತಿರುವ ಛಲ ಮೈನಸ್ ಡಿಗ್ರಿ ಚಳಿಯನ್ನು ಓಡಿಸುತ್ತಿದೆ.

ಆಸ್ಟ್ರೇಲಿಯ ಪೂರ್ವತೀರದ ಎರಡು ರಾಜ್ಯಗಳನ್ನು ಬಾಧಿಸುತ್ತಿರುವ ಅತೀವ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮೊದಲನೆಯದಾದರೆ ಎರಡನೆಯದು ಯುಕ್ರೇನಿನ ಜನರ ನೋವು. ಇವೆರಡನ್ನೂ ಕುರಿತು ಆಲೋಚಿಸುವಾಗ ಮನುಷ್ಯರು ಒಂದೆಡೆ ಹುಲುಮಾನವರೂ ಆಗಿದ್ದು ಇನ್ನೊಂದೆಡೆ ಅತೀತರಾಗುವ ಅತಿಯಾಸೆಯುಳ್ಳವರೂ ಆಗಿರುವುದು ಹೇಗೆ ಎಂದು ಆಶ್ಚರ್ಯ!

ಯುಕ್ರೇನಿನ ಜನರು ನೆನಪಾಗುತ್ತಿದ್ದಾರೆ. ಅಲ್ಲಿನ ಸ್ಥಳೀಯ ಹೆಂಗಸರು ಸಂಘಟಿತರಾಗಿ ಆಹಾರ, ಪಾನೀಯಗಳನ್ನು ಸಂಗ್ರಹಿಸುತ್ತಾ ಅಗತ್ಯವಿದ್ದವರಿಗೆ ಹಂಚುತ್ತಾರೆ. ತಮ್ಮ ಸೈನಿಕರಿಗೆ ಬೆನ್ನುಗಾವಲಾಗುತ್ತ ಚಿಂದಿಬಟ್ಟೆಗಳಿಂದ ಅವರ ಅಡಗುತಾಣಗಳಿಗೆ ಪರದೆ ನೇಯುತ್ತಾರೆ. ಕುಟುಂಬದ ಗಂಡಸರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ತಾವೂ ಕೂಡ ಯೋಧರಾಗಲು ಹೊರಟಾಗ ಯುವತಿಯರು ಹಿಂದೆ ಬೀಳುವುದಿಲ್ಲ. ಸೈನ್ಯದಲ್ಲಿರುವ ತಮ್ಮ ಮಕ್ಕಳ ತಂದೆಯರನ್ನು ನೆನೆಸುತ್ತಾ ತಮ್ಮ ನೋವನ್ನು ಮರೆಯಲು ತಾಯಂದಿರು ಹಾಡುತ್ತಾರೆ. ಗುಂಪಾಗಿ ಸೇರಿ ಸೈನಿಕರಿಗಾಗಿ ಅಡುಗೆ ಮಾಡಿ ಊಟ ಕೊಂಡೊಯ್ಯುತ್ತಾರೆ. ಸಾವು ಬಾಗಿಲಿನ ಹೊಸ್ತಿಲಿಗೆ ಬಂದು ನಿಂತಿದೆ. ಅಂಗಡಿಯಲ್ಲಿ ಆಹಾರ ಕೊಳ್ಳಲು ಹೋದ ನಮ್ಮ ಭಾರತೀಯ ವಿದ್ಯಾರ್ಥಿ ಮರಳುವುದಿಲ್ಲ. ಜನರನ್ನು ಕೊಲ್ಲುವ ಯುದ್ಧ ಬೇಕಿತ್ತೇ? ಯುಕ್ರೇನಿನ ಪ್ರಜೆ, ಐಟಿ ಉದ್ಯೋಗಸ್ಥನೊಬ್ಬನು ಕಡುಕೋಪದಿಂದ ರೈಫಲ್ ಹಿಡಿದು ತಾನು ಪ್ರತಿಯೊಬ್ಬ ರಷ್ಯನ್ ಸೈನಿಕನನ್ನು ಕೊಲ್ಲಲು ಹೊರಟಿದ್ದೀನಿ ಎಂದು ಹೇಳಿಕೊಂಡಾಗ ಆದಷ್ಟು ಬೇಗ ಈ ಬೀಭತ್ಸ ಕ್ಷಣಗಳು ಕಳೆದುಹೋಗಲಿ ಎಂಬ ಪ್ರಾರ್ಥನೆ ತಂತಾನೆ ಹುಟ್ಟುತ್ತದೆ. ಸರ್ವಜ್ಞನ ಈ ಪದವು ನೆನಪಾಗುತ್ತಿದೆ.

ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ

ನಮ್ಮ ರಾಣಿರಾಜ್ಯದಲ್ಲಿ ನಾವೆಲ್ಲರೂ ಜೊತೆಗಿದ್ದೀವಿ ಎಂದು ನೆನಪಿಸಿಕೊಳ್ಳಲು ಮಹಾಮಳೆಯೇ ಬರಬೇಕಿತ್ತೆ? ಪುಟವಿಟ್ಟು ಹೊಳೆಯುವ ಚಿನ್ನಕ್ಕೆ ಬಹುಬೆಲೆ. ಬಹುಬೇಗ ವಿನಾಕಾರಣ ಚದುರಿಹೋಗುವ ಮಾನವೀಯತೆಯ ಚಿತ್ತಾರವನ್ನು ಮತ್ತೆ ಕಟ್ಟಿ ನಿಲ್ಲಿಸಲು ಪ್ರಕೃತಿಯಾಟವೇ ಬೇಕಿತ್ತೆ ಎನ್ನುವ ಪ್ರಶ್ನೆ ಹುಟ್ಟುವ ಹೊತ್ತಿನಲ್ಲಿ ಮಾನವೀಯತೆಯ ಮುಖಗಳು ಮಿನುಗಿ ಹೊಳೆಯುತ್ತವೆ. ಪ್ರವಾಹಪೀಡಿತ ಜನರ ಮನೆಗಳಿಗೆ ಪುಟ್ಟ ಪುಟ್ಟ ‘ಮಡ್ ಆರ್ಮಿ’ ತಂಡಗಳು ಬರುತ್ತಿವೆ. ಐದರಿಂದ ಎಂಟು, ಹತ್ತು ಜನರ ಪಾದಗಳಿಗೆ ವೆಲ್ಲಿಂಗ್ಟನ್ ಬೂಟ್ಸ್, ಕೈಗಳಿಗೆ ಗ್ಲೋವ್ಸ್. ಇವರು ತಾವೇ ತೋಟಗಾರಿಕೆಗೆ ಸಂಬಂಧಪಟ್ಟ ಸಲಕರಣೆಗಳನ್ನು ಹೊತ್ತು ತರುತ್ತಾರೆ. ತಮ್ಮ ಮನೆಗೆ ಪ್ರವಾಹದ ನೀರು ನುಗ್ಗಿ ಮಾಡಿರುವ ಅವಾಂತರಗಳನ್ನು ನೋಡುತ್ತಾ, ಕೆಟ್ಟ ವಾಸನೆಯನ್ನು ಸಹಿಸುತ್ತ ಸಂಕಟ ಪಡುತ್ತಿರುವ ಮನೆಯವರಿಗೆ ಸಾಂತ್ವನ ಹೇಳಿ ‘ಮಡ್ ಆರ್ಮಿ’ ಸದಸ್ಯರು ಕಾರ್ಯನಿರತರಾಗುತ್ತಾರೆ. ಹಾನಿಗೊಳಗಾದ ವಸ್ತುಗಳನ್ನು ಶಿಸ್ತಾಗಿ ರಸ್ತೆ ಬದಿ ಪೇರಿಸುತ್ತಾರೆ. ಮನೆಯೊಳಗೆ, ಹೊರಗೆ ಇಂಚುಗಳಿಂದ ಹಿಡಿದು ಅಡಿಗಳವರೆಗೆ ನಿಂತಿರುವ ಪ್ರವಾಹದ ಮಣ್ಣಿನ ಪದರಗಳನ್ನು ಛೇದಿಸಿ ಹೊರಹಾಕುತ್ತಾರೆ. ರಭಸವಾಗಿ ಪೈಪುಗಳಿಂದ ನೀರು ಹಾಯಿಸಿ ನೆಲವನ್ನು, ಅಂಗಳವನ್ನು ತೊಳೆಯುತ್ತಾರೆ. ಕೆಲಸ ಮುಗಿಸಿ ಶುಭ ಹಾರೈಸಿ ಮುಂದಿನ ಮನೆಗೆ ಹೊರಡುತ್ತಾರೆ. ಇವರೆಲ್ಲರೂ ಸ್ವಯಂಸೇವಕರು. ತಮ್ಮ ತುರ್ತುಸೇವೆ ಸಿಬ್ಬಂದಿಗೆ ‘ಸಹಾಯ ಮಾಡಿ’ ಎಂದು ಸರಕಾರ ವಿನಂತಿಸಿಕೊಂಡಾಗ ಅದಕ್ಕೆ ಓಗೊಟ್ಟು ತಾನೇತಾನಾಗಿ ಹುಟ್ಟಿಕೊಂಡದ್ದು ಈ ‘ಮಡ್ ಆರ್ಮಿ’. ಇವರಲ್ಲದೆ, ಸ್ಥಳೀಯವಾಗಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಪ್ರವಾಹಪೀಡಿತರಿಗೆ ಕುಡಿಯುವ ನೀರು, ಆಹಾರದ ಪೊಟ್ಟಣಗಳು, ದಿನಸಿ ಸಾಮಗ್ರಿ, ದಿನನಿತ್ಯದ ಬಟ್ಟೆಗಳು, ಹಾಸಿಗೆ ಇತ್ಯಾದಿಗಳನ್ನು ಒದಗಿಸುತ್ತಿವೆ. ಚೆಂಡಿನಂತೆ ಪುಟಿದೇಳುತ್ತಿದೆ ಜೀವನ ಎಂದಾದರೂ ಚೇತರಿಸಿಕೊಳ್ಳಲು ವರ್ಷಗಳೇ ಹಿಡಿಸುತ್ತವೆ.

ಮನೆ ಮತ್ತು ಆಸ್ತಿ ವಿಮೆ ಇದ್ದವರು ವಿಮೆ ಕಂಪನಿಗಳಿಗೆ ತಮ್ಮ ನಷ್ಟದ ಪುರಾವೆ ಒದಗಿಸಬೇಕು. ಅವನ್ನೆಲ್ಲ ಪರಿಶೀಲಿಸಿ ಉತ್ತರ ಕೊಡಲು ತಿಂಗಳುಗಳೇ ಬೇಕಾಗುತ್ತವೆ ಎಂದು ಕಂಪನಿಗಳು ಹೇಳಿದಾಗ ಅಲ್ಲಿಯವರೆಗೂ ಇದೇ ಅರ್ಧಂಬರ್ಧ ಜೀವನದಲ್ಲಿ ಹೇಗೆ ಬದುಕುವುದು ಎಂಬ ಪ್ರಶ್ನೆ. ವಿಮೆ ಕಂಪನಿಗಳ ನಿಬಂಧನೆಗಳನ್ನು ಮುರಿಯುವಂತಿಲ್ಲ. ತಾವೇ ಸ್ವತಃ ಹಣಹೂಡಿ ಮತ್ತೆ ಬದುಕನ್ನು ಕಟ್ಟಿಕೊಳ್ಳಲು ಹಣಕಾಸಿನ ಅನುಕೂಲವಿರಬೇಕು. ಸರಕಾರ ಒಂದಿಷ್ಟು ಸಹಾಯ ಮಾಡುವುದಾಗಿ ಹೇಳಿದ್ದರೂ, ಅದನ್ನು ಪಡೆಯಲು ಅರ್ಜಿ ಹಾಕಿಕೊಂಡು ಅಲೆದಾಡಬೇಕು. ಪ್ರವಾಹದ ಮತ್ತು ಮಳೆಯ ಹಾನಿಗೊಳಗಾದ ಮಧ್ಯಮ ಮತ್ತು ಕಡಿಮೆ ಆದಾಯವರ್ಗದವರು ವಿಧಿಯಿಲ್ಲದೆ ಸ್ವಯಂಸೇವಾ ಸಂಸ್ಥೆಗಳು ನೀಡುವ ದಾನ, ದೇಣಿಗೆಗಳಿಗೆ ಕೈ ಚಾಚಬೇಕಾದ ಪರಿಸ್ಥಿತಿ. ಸಹಾಯಹಸ್ತಗಳನ್ನು ಒಪ್ಪಿಕೊಳ್ಳುತ್ತಲೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮಂದಿಯೆಷ್ಟೋ.

ಸಹಾಯ ನೀಡುವ ಮನಸ್ಸುಗಳಲ್ಲಿ ಇರುವ ತಾರತಮ್ಯವೆಷ್ಟೋ. ರಷ್ಯಾ ದೇಶದೊಡನೆ ಸ್ನೇಹವಿರುವ ಕಾರಣಕ್ಕಾಗಿ ಭಾರತೀಯರಿಗೆ ಯುಕ್ರೇನಿನ ಸರಹದ್ದು ದಾಟಲು ಆಡೆತಡೆಗಳು ಉಂಟಾಗಿವೆಯಂತೆ. ಬ್ರಿಸ್ಬೇನ್ ನಗರದಲ್ಲಿ ೨೦೧೧ರಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ವಿವರಿಸುವಾಗ ಸ್ಥಳೀಯ ಟೀವಿ ಚಾನೆಲ್ ಗಳು ಆಸ್ಟ್ರೇಲಿಯನ್ ಬಿಳಿಯರನ್ನು, ಅವರ ಪರಿಸ್ಥಿತಿಯನ್ನು, ಅವರ ನೋವು-ಕಣ್ಣೀರನ್ನು ಬಿಂಬಿಸುತ್ತ ಇತರರನ್ನು ಕಡೆಗಣಿಸಿದ್ದು ಎದ್ದು ಕಂಡಿತ್ತು. ಕಷ್ಟಕಾಲದಲ್ಲಿ ಯಾರು ಯಾರಿಗೆ ಹಿತವರು? ಹನ್ನೊಂದು ವರ್ಷಗಳ ನಂತರ ಮನಸ್ಸುಗಳಲ್ಲಿ, ಧೋರಣೆಗಳಲ್ಲಿ ಬದಲಾವಣೆ ಬಂದಿದೆಯೇ? ಮುಂದಿನ ದಿನಗಳು ಉತ್ತರಿಸಬಹುದು.