ಊರು ಬಾಬಾ ಎಂದು ಕರೆದರೂ ಭಾವನೆಗಳಿಗೆ ಬೀಗ ಹಾಕುತ್ತಿದ್ದೆ. ಕಲ್ಪಿಸಿಕೊಳ್ಳುವ ಊರೇ ಚೆಂದ. ಅಲ್ಲಿ ಆ ನರಕ ಇನ್ನೂ ಹಾಗೇ ಇತ್ತು. ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿತ್ತು. ಆ ನರಕದ ಇಂಚಿಂಚೂ ನನ್ನ ಕಣ್ಣಲ್ಲಿ ಆತ್ಮದಲ್ಲಿ ಯಾವತ್ತೂ ಫಲಿಸುತ್ತಲೇ ಇದ್ದವು. ಮರೆಯಲಾರೆ ಊರುಕೇರಿಯ; ಸತ್ತವರ ನೆರಳ… ಅಹಾ ಕಣ್ಣ ಮುಂದೆಯ ಸಾವು ಅಟ್ಟಿಸಿಕೊಂಡೊ ಎಳೆದುಕೊಂಡೊ ಹೋಗುತ್ತಿತ್ತಲ್ಲಾ ಚಿಕ್ಕವ್ವ ಮಾದೇವಿಯ. ಅಪ್ಪನ ಎರಡನೇ ಹೆಂಡತಿಯ ಹೆಸರದು ಮಾದೇವಿ. ಮಾದೇಶ್ವರ ಒಕ್ಕಲಿನ ಮನೆತನದವಳು.
ಮೊಗಳ್ಳಿ ಗಣೇಶ್‍ ಬರೆಯುವ ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗಾಗಿ.

ತಾಯ ಕಳೆದುಕೊಂಡಿದ್ದ ಆ ಬಾಲ್ಯದ ದುಃಖ ಸದಾ ನನ್ನ ಮುಖದಲ್ಲಿ ಅಂಟಿಕೊಂಡಿತ್ತು. ಕೊಂಚ ಹೋಲಿಕೆ ಕಂಡರೂ ಸಾಕು; ಅಂತಹ ಹೆಂಗಸರ ಹಿಂಬಾಲಿಸುತ್ತಿದ್ದೆ. ಅವರೊಡನೆ ಏನೋ ಮಾತಾಡಿಸಬೇಕು ಎಂದು ಒತ್ತಡಕ್ಕೆ ಒಳಪಡುತ್ತಿದ್ದೆ. ಮೀಸೆ ಮೂಡಿದ್ದವು. ಸಂಜೆ ಹೊತ್ತು ಆ ಒಂದು ಭಾನುವಾರ ಮೈಸೂರು ಅರಮನೆಯ ದೀಪಾಲಂಕಾರದ ನಡುವೆ ಸುತ್ತಾಡುವ ಎಂದು ಹಾಸ್ಟೆಲಿಂದ ನಡೆದಿದ್ದೆ. ಅರಮನೆ ಮುಂದೆ ನಿಂತಿದ್ದೆ. ಅದಾಗಲೆ ಹತ್ತಾರು ಭಾನುವಾರಗಳಂದು ಅಲ್ಲಿ ಅಲೆದಾಡಿದ್ದೆ.

ಬಾಲ್ಯದಲ್ಲಿ ಮೈಸೂರು ಅರಮನೆಯ ನೋಡುವ ಆಸೆಯಲ್ಲಿ ದೊಡ್ಡಣ್ಣನ ಮನೆಗೆ ತಾತನ ಜೊತೆ ಬಂದಿದ್ದಾಗ ಆಗಿದ್ದ ಆ ಕಹಿ ಘಟನೆ ಪ್ರತಿ ಬಾರಿಯು ನೆನಪಾಗುತ್ತಿತ್ತು. ಆ ದೊಡ್ಡಣ್ಣನ ಕತೆ ವಿಕಾರ ಆಗಿತ್ತು. ನಾನೀಗ ಬಿ.ಎ. ಓದುತ್ತಿರುವೆ ಎಂಬುದ ತಿಳಿದು ವ್ಯಾಗ್ರನಾಗಿದ್ದ. ಅವನ ಮನೆಯತ್ತ ಹೋಗುತ್ತಿರಲಿಲ್ಲ. ಪ್ರತಿ ಭಾನುವಾರ ತನ್ನ ಮನೆಗೆ ಬಂದು ಏನಾದರೂ ಕೆಲಸ ಮಾಡಿ ಹೋಗಬೇಕು ಎಂದು ಷರತ್ತು ವಿಧಿಸಿದ್ದ. ಅವನು ನನ್ನ ಮೇಲೆ ಹಕ್ಕು ಚಲಾಯಿಸಲು ಯಾರು ಎಂದು ನಿರಾಕರಿಸಿದ್ದೆ. ಅರಮನೆಯ ಅಂತಹ ಚಲುವನ್ನೆಲ್ಲ ಆ ಪಿಶಾಚಿ ಮುಖಗಳು ಕೆಡಿಸುತ್ತಿದ್ದವು. ಹುಲುಸಾಗಿ ಬೆಳೆದಿದ್ದ ಹುಲ್ಲಿನ ಪಾರ್ಕಿನಲ್ಲಿ ಕೂತಿದ್ದೆ. ಜಗಮಗಿಸುವ ಆ ಬೆಳಕಲ್ಲಿ ಒಬ್ಬ ಹೆಂಗಸು ಬಂತು. ನೋಡಿ ಬೆರಗಾದೆ. ಥೇಟ್ ನನ್ನ ತಾಯಂತೆಯೇ ಕಂಡಳು. ನಡಿಗೆಯೂ ಹಾಗೆಯೇ. ತೋಳ ಬೀಸುವುದರಲ್ಲೂ ಒಂದೆಯೇ. ತಾಯ ಅದೇ ಪುಟ್ಟ ಮೂಗು; ಚಿಕ್ಕ ಚಿಕ್ಕ ಹಲ್ಲುಗಳು; ಸಣ್ಣ ತುಟಿಗಳು… ಬಣ್ಣವೂ ಎಣ್ಣೆಗೆಂಪೇ. ತಟಕ್ಕನೆ ಎದ್ದು ಆ ಹೆಂಗಸ ಹಿಂಬಾಲಿಸಿದೆ. ಸಭ್ಯ ಗೃಹಿಣಿ… ಒಬ್ಬಳೇ ಬಂದಿದ್ದಾಳಲ್ಲಾ… ನನ್ನ ತಾಯಂತೆಯೇ ನೊಂದಿರುವ ಒಂಟಿ ತಾಯಿಯೇನೊ ಎಂದುಕೊಂಡು ಆಕೆ ಹೋದಲ್ಲೆಲ್ಲ ಹಿಂಬಾಲಿಸಿದೆ. ಗಮನ ಸೆಳೆಯಲು ಯತ್ನಿಸಿದೆ. ಆಕೆ ಪರಿಗಣಿಸಲಿಲ್ಲ. ಏನೋ ಅಸಮಾಧಾನ ತೋರಿದಳು. ಮಾತಾಡಿಸಲು ಮನಸ್ಸು ಒತ್ತಾಯಿಸಿತು. ತುಂಬಾ ಜನ. ಗುಂಪಿನಲ್ಲಿ ಯಾರು ಇವನು ನನ್ನ ಹಿಂದೆ ಬರುವವನು ನನ್ನ ಹೆಜ್ಜೆ ಮೇಲೆ ಹೆಜ್ಜೆ ಇಟ್ಟಂತೆ ಎಂದೆನಿಸಿತ್ತೇನೊ ಆಕೆಗೆ. ‘ನೀವು ಎಲ್ಲಿಯವರೂ’ ಎಂದು ಕೇಳಿದೆ. ಉತ್ತರಿಸಲಿಲ್ಲ. ದಡದಡನೆ ಅತ್ತ ಹೊರಟಳು. ಬೆಪ್ಪಾಗಿ ನಿಂತೆ. ಆ ಮೂಲೆಯಲ್ಲಿ ಒಬ್ಬ ಪೇದೆ ನಿಂತಿದ್ದ. ಕರೆದುಕೊಂಡು ಬಂದಳು. ನಿಜವಾಗಿಯೂ ಅಮಾಯಕನೇ ಆಗಿದ್ದೆ. ಆ ಹೆಂಗಸು ಪೇದೆಗೆ ಏನು ಹೇಳಿದ್ದಳೋ ಏನೊ! ಬಂದವನೇ ರಪರಪನೆ ಲಾಟಿಯಿಂದ ಬಡಿದ. ‘ಸೂಳೇ ಮಗನೇ; ಇನ್ನೂ ಸರ್ಯಾಗಿ ಮೀಸೆ ಬಂದಿಲ್ಲ ಆಗ್ಲೆ ಹೆಂಗುಸ್ರು ಬೇಕೇನೊ… ತಾಯಿ ತರಾ ಕಾಣಲ್ವೇನೊ ಆಯಮ್ಮಾ! ಎಲ್ಲಿಂದ ಬಂದಿದ್ದೀಯೇ? ನಡಿಯೊ ಮಗನೇ ನಿನ್ನ ಜೈಲಿಗಾಕಿ ಮಟ್ಟ ಮಾಡ್ತೀನಿ’ ಎಂದು ಮತ್ತೆ ಹೊಡೆದ. ಮುಖದ ಮೇಲೆ ಗುದ್ದಿದ. ಅರಮನೆಯ ಮಜಾ ಸವಿಯಲು ಬಂದಿದ್ದ ನಾಗರೀಕರು ‘ಇಹೋ ಆಗ್ಲೆ ಚುಡಾಯಿಸ್ತಿದ್ದೀ’ಎಂದು ಕ್ಯಾಕರಿಸಿ ಉಗಿದರು. ಮುಖ ಒರೆಸಿಕೊಂಡು ಬಾಯಿ ತೆರೆದಂತೆಯೇ; ಸುಳ್ಳು ಹೇಳ್ತಿದ್ದೀಯಾ… ಹಲ್ಲ ಮುರ್ದು ಬಿಡ್ತೀನಿ ಎಂದು ಮುಷ್ಠಿ ಹಿಡಿದು ಪೇದೆ ಮುಖಕ್ಕೆ ಗುರಿ ಇಟ್ಟ. ಓಡಿ ಹೋಗುವಂತಿರಲಿಲ್ಲ. ಯಾವನೊ ದಾಂಡಿಗನೊಬ್ಬ ಬಂದು ಕೆಡವಿ ಹೊಡೆದ. ‘ಇಲ್ಲಾ ಇಲ್ಲಾ; ನಾನೇನೂ ತಪ್ಪು ಮಾಡಿಲ್ಲ. ನನ್ನ ತಾಯಿಯೂ ಇವರಂತೆಯೇ ಇದ್ದರು. ಈಗ ಇಲ್ಲಾ. ಸತ್ತು ಹೋದರು. ತಾಯ ಮಮತೆಗಾಗಿ ಹಿಂಬಾಲಿಸಿದ್ದೆ ಅಷ್ಟೇ’ ಎಂದು ಕೈ ಮುಗಿದಿದ್ದೆ.

ಆ ತಾಯಿಗೆ ಭಯವಾಗಿ ಪೇದೆಗೆ ತಪ್ಪಾಗಿ ಹೇಳಿದ್ದಳು. ಅವಳೇ ಬಿಡಿಸಿದ್ದಳು. ‘ನೋಡಿ ನೋಡಿ ಈ ಹೆಂಗಸ್ರೇ ಹೀಗೆ, ಮೊದ್ಲು ಹೇಳೋದೆ ಒಂದು ಆಮೇಲೆ ಉಲ್ಟಾ ಹೊಡಿಯೋದೆ ಇನ್ನೊಂದು’ ಎಂದು ಹೊರಟು ಹೋಗಿದ್ದ. ಬಿದ್ದಿದ್ದ ನನ್ನನ್ನು ಅತ್ತ ಒದ್ದು ಉರುಳಿಸಿ ದಾಂಡಿಗನೂ ಮಾಯವಾದ. ಎಲ್ಲರೂ ಹೊರಟು ಹೋಗಿದ್ದರು. ನಾನಲ್ಲೇ ಮೂರ್ಖನಾಗಿ ಬಹಳ ಹೊತ್ತು ಕೂತಿದ್ದೆ. ಈಗ ಘಟಿಸಿದ ಜೀವಂತ ನಾಟಕವ ನನ್ನ ತಾಯಿ ನೋಡಿದಳೇ… ಅವಳ ಆತ್ಮಕ್ಕೆ ತಿಳಿಯಿತೇ ಎಂದು ಅರಮನೆಯ ಆ ಅದ್ಧೂರಿ ಸೌಂದರ್ಯವ ಆನಂದಿಸಲಾರದೆ ಎದ್ದು ನಡೆದೆ. ಯಾಕೆ ಹೀಗೆ ವಿನಾಕಾರಣ ದಂಡನೆ ಎಂದು ಹಾಸ್ಟೆಲ್ ತಲುಪಿದ್ದೆ. ಯಾರಿಗೂ ಹೇಳಲಿಲ್ಲ. ಒಂದು ವಾರವೆಲ್ಲ ಆ ಘಟನೆ ಬಿಡದೆ ನನ್ನ ತಿಂದಿತ್ತು. ಆದರೆ ತಾಯನ್ನು ಹೋಲುವ ಆ ಹೆಂಗಸು ಮತ್ತೆ ಎಲ್ಲಾದರೂ ಸಿಗಲಿ ಎಂದು ಒಳ ಮನಸ್ಸು ತುಡಿಯುತ್ತಿತ್ತು. ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಪ್ರಸಂಗ ಜರುಗಿತು. ಅದೇ ಕೊನೆ… ಮತ್ತೆ ಯಾರ ಮುಖದಲ್ಲೂ ನನ್ನ ತಾಯ ಹೋಲಿಕೆಯನ್ನು ಹುಡುಕಲು ಹೋಗಲಿಲ್ಲ. ಅಂದು ಯಾವುದೊ ಹಬ್ಬದ ರಜವಿತ್ತು.

ಸಯ್ಯಾಜಿರಾವ್ ರಸ್ತೆಯಲ್ಲಿ ಮಾರ್ಕೆಟ್ ಮಾಡುವವರ ನೂಕು ನುಗ್ಗಲಿತ್ತು. ಆ ಸಂದರ್ಭವನ್ನು ದುರುಪಯೋಗ ಮಾಡಿ ಹುಡುಗಿಯರ ಹೆಂಗಸರ ಭುಜಕ್ಕೆ ಭುಜ ಸವರಿಕೊಂಡು ಹೋಗುವುದೇ ಅವತ್ತಿನ ಭಾರೀ ಸುಖವಾಗಿತ್ತು. ನಾನಂತು ಆ ತರದ ಸುಖದ ಸಹವಾಸ ಮಾಡಿದ್ದವನಲ್ಲ. ಒಬ್ಬನೆ ನನ್ನ ಪಾಡಿಗೆ ನಾನು ಸುತ್ತಾಡುವುದರಲ್ಲೇ ಆನಂದವಿತ್ತು. ಹಾಗೆ ಅಂಗಡಿ ಸಾಲುಗಳಲ್ಲಿ ನಡೆದಿದ್ದೆ. ಆ ರಸ್ತೆಯ ಎರಡೂ ಬದಿಯ ಕಾಲು ದಾರಿಗಳು ವಿಶಾಲವಾಗಿದ್ದವು. ಒಂದು ಹೆಂಗಸು ನನ್ನ ಭುಜ ಸವರಿಕೊಂಡು ಹೋಯಿತು. ಅಕಸ್ಮಾತ್ ತಾಗಿತು ಎಂದು ಮುಂದೆ ಹೋದೆ. ಇನ್ನೊಂದು ತಿರುವಿನಲ್ಲಿ ಮತ್ತೆ ಆ ಹೆಂಗಸು ಎದುರಾಯಿತು. ದಿಟ್ಟಿಸಿದೆ. ಅರೇ! ಅದೇ ತಾಯ ಕಣ್ಣು ಮೂಗು ಕೆನ್ನೆಗಳು… ತಾಯ ತಂಗಿ ಎನ್ನುವಂತಿದ್ದಳು. ಸವರಿದಳು. ತೀರ ಹತ್ತಿರದಿಂದ ಮುಖವ ಗಮನಿಸಿದೆ. ಅಯ್ಯೋ ನನ್ನ ತಾಯಿಯೇ ಎಂದು ಮುಂದೆ ಬಂದೆ. ಅದೇ ರಸ್ತೆಯಲ್ಲಿ ಹಳೆ ಪುಸ್ತಕಗಳನ್ನು ಒಬ್ಬಾತ ಮಾರುತ್ತಿದ್ದ. ಓದಿ ಆದ ಮೇಲೆ ಬಂದಷ್ಟು ಬೆಲೆಗೆ ಕೆಲವರು ಅವನಿಗೆ ಮಾರುತ್ತಿದ್ದರು. ಆ ಪುಸ್ತಕಗಳ ಫುಟ್‌ಪಾತಿನಲ್ಲಿ ಹರಡಿ ಮಾರುವುದು ಅವನ ಜೀವನ. ಅಲ್ಲಿ ನಿಂತು ಬಗ್ಗಿ ಪುಸ್ತಕಗಳ ಎತ್ತಿಕೊಂಡು ಗಮನಿಸುತ್ತಿದ್ದೆ. ಆಕೆ ಹಿಂದಿನಿಂದ ಬಂದು ನನ್ನ ಹಿಂಬದಿಗೆ ಒತ್ತಿಕೊಂಡು ನಿಂತಳು. ತಟಕ್ಕನೆ ಬೆಚ್ಚಿ ನೋಡಿದೆ. ಅದೇ ಹೆಂಗಸು. ಇವಳು ಯಾರು ನನ್ನ ತಾಯ ರೂಪವ ಕದ್ದವಳು ಎಂದುಕೊಂಡು ಸುಮ್ಮನೆ ನಗಾಡಿದೆ. ‘ಬಾ ಅಲ್ಲಿ ಮರದ ಕೆಳಗೆ ಮಾತಾಡುವಾ’ ಎಂದಳು. ಅರಮನೆಯ ಘಟನೆ ನೆನಪಾಯಿತು. ‘ಇಲ್ಲೇ ಅದೇನೆಂದು ಹೇಳಿ’ ಎಂದೆ. ‘ಬನ್ನಿ ಆ ಕಡೆ ಹೋಗೋಣ… ಒಬ್ಬರೆ ಯಾಕೆ ಇದ್ದೀರಿ. ಬನ್ನಿ ನನ್ನ ಜೊತೆ’ ಎಂದಳು. ಗೊತ್ತಾಯಿತು. ಎದೆ ಬಡಿತ ಏರಿತು. ಜೀವಮಾನದಲ್ಲಿ ಮೊದಲ ಬಾರಿಗೆ ಒಂದು ಹೆಂಗಸು ಕರೆದಿತ್ತು… ಅದೂ ನನ್ನ ತಾಯ ರೂಪದವಳು! ನಿರಾಕರಿಸಲೇ? ಅವಳ ಕೂಡೆ ನಡೆಯಲೇ? ಜನ ಜಂಗುಳಿ. ಮರದಡಿ ನಿಂತು ‘ಯಾವೂರು’ ಎಂದೆ. ‘ಯಾವ ಊರಾದ್ರೇನು ನಿಮ್ಗೆ ಬೇಕಾದ್ದು ನನ್ನತ್ರ ಇದೆ. ಬನ್ನಿ ಕೊಡ್ತೀನಿ’ ಎಂದು ನಕ್ಕಳು. ಸಿಟ್ಟು ಮಾಡಿಕೊಳ್ಳಲೇ; ಅತ್ತು ಬಿಡಲೇ… ತಾಯೇ ನೀನು ನನ್ನ ಬೆನ್ನ ಹಿಂದೆ ನಿಂತು ಪರೀಕ್ಷೆ ಮಾಡುತ್ತಿರುವೆಯಾ ಎಂದು ಕ್ಷಣ ಆಲೋಚಿಸಿದೆ. ‘ಬೇಗ ಹೇಳಿ. ಬೇಡ ಎಂದರೆ ಬೇರೆ ಗಿರಾಕಿಯ ಹುಡುಕಬೇಕೂ’ ಎನ್ನುತ್ತ ಅತ್ತಿತ್ತ ಪಡ್ಡೆಹುಡುಗರತ್ತ ಕಣ್ಣ ಬೀರುತ್ತಿದ್ದಳು. ಆ ಸಯ್ಯಾಜಿರಾವ್ ರಸ್ತೆಯ ಬದಿಗಳಲ್ಲಿ ತಲೆ ಮೇಲೆ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ಮಾರುವ ಮುದುಕಿಯರು ಮಾಮೂಲು. ಅವರು ನಗರದ ಅಶೋಕ ಪುರಂನವರು. ‘ಆಯ್ತವ್ವಾ… ವ್ಯಾಪಾರಾ’ ಎಂದು ಆ ಮುದುಕಿಯನ್ನು ಆಕೆ ಕೇಳಿದಳು. ‘ಆಯ್ತು ಕನವ್ವಾ… ಹೊತ್ತಾಯ್ತು… ಮನೆಗೋಗಬೇಕು’ ಎಂದ ಮುದುಕಿ; ‘ನಿಂದಾಯ್ತೇನವ್ವಾ’ ಎಂದು ನನ್ನತ್ತ ನೋಡಿದಳು. ನನ್ನ ಬಳಿ ಹದಿನೈದು ರೂಪಾಯಿಗಳಿದ್ದವು. ಆಗ ಅದೇ ಮಹಾ ದುಡ್ಡು. ಹಣ್ಣು ಖರೀದಿಸಿದೆ. ಆ ಹೆಂಗಸು ಇವನು ಬರೋನಲ್ಲ ಎಂದು ಅತ್ತ ಹೊರಡುತ್ತಿದ್ದಳು. ಕರೆದೆ. ಏನು ಎಂಬಂತೆ ಕಣ್ಣಲ್ಲೇ ಕೇಳಿದಳು. ‘ತಕೊ ಈ ಹಣ್ಣುಗಳಾ’ ಎಂದೆ. ಎಷ್ಟು ಹಸಿದ್ದಿದ್ದಳೊ ಏನೋ… ಬೇಡ ಎಂದಳು.

‘ಎರಡಾದರೂ ತೆಗೆದುಕೊಳ್ಳಿ; ನೀವು ನನ್ನ ತಾಯ ರೂಪಕ್ಕೆ ಹತ್ತಿರವಾಗಿದ್ದೀರಿ’ ಎಂದೆ. ಅವಳ ಮುಖ ಲಕ್ಷಣವೇ ಬದಲಾಯಿತು. ಅವಳನ್ನು ಪಾಪ ಪ್ರಜ್ಞೆಗೆ ತಳ್ಳಿದೆನೇನೊ ಎಂದು ರಾತ್ರಿ ಮಲಗಿ ಅವಳನ್ನೇ ನೆನೆಯುತ್ತಿದ್ದೆ. ಇದು ಸ್ವಮರುಕವೇ, ಸ್ವರತಿಯೇ… ತನ್ನನ್ನು ತಾನು ತೋರಿಸಿಕೊಳ್ಳುವ ಸ್ವಗತವೇ ಎಂದು ಹೊರಳಾಡಿದೆ. ಅಂದೇ ತೀರ್ಮಾನಿಸಿದೆ. ತಾಯ ರೂಪವೂ ನನಗೆ ಅಪಾಯಕಾರಿ ಎಂದು. ಹಾಗೊಂದು ವೇಳೆ ಕಂಡರೂ ತಿರಸ್ಕರಿಸುತ್ತಿದ್ದೆ. ಇಲ್ಲವೇ ತಲೆತಗ್ಗಿಸಿ ತಪ್ಪಿಸಿಕೊಳ್ಳುತ್ತಿದ್ದೆ.

ಊರು ಬಾಬಾ ಎಂದು ಕರೆದರೂ ಭಾವನೆಗಳಿಗೆ ಬೀಗ ಹಾಕುತ್ತಿದ್ದೆ. ಕಲ್ಪಿಸಿಕೊಳ್ಳುವ ಊರೇ ಚೆಂದ. ಅಲ್ಲಿ ಆ ನರಕ ಇನ್ನೂ ಹಾಗೇ ಇತ್ತು. ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿತ್ತು. ಆ ನರಕದ ಇಂಚಿಂಚೂ ನನ್ನ ಕಣ್ಣಲ್ಲಿ ಆತ್ಮದಲ್ಲಿ ಯಾವತ್ತೂ ಫಲಿಸುತ್ತಲೇ ಇದ್ದವು. ಮರೆಯಲಾರೆ ಊರುಕೇರಿಯ; ಸತ್ತವರ ನೆರಳ… ಅಹಾ ಕಣ್ಣ ಮುಂದೆಯ ಸಾವು ಅಟ್ಟಿಸಿಕೊಂಡೊ ಎಳೆದುಕೊಂಡೊ ಹೋಗುತ್ತಿತ್ತಲ್ಲಾ ಚಿಕ್ಕವ್ವ ಮಾದೇವಿಯ. ಅಪ್ಪನ ಎರಡನೇ ಹೆಂಡತಿಯ ಹೆಸರದು ಮಾದೇವಿ. ಮಾದೇಶ್ವರ ಒಕ್ಕಲಿನ ಮನೆತನದವಳು. ಆಕೆಯನ್ನೂ ಅಕ್ಕಾ ಎಂದೇ ಕರೆಯತ್ತಿದ್ದೆ. ಅವಳ ಅಪ್ಪ ಮಾದೇಶ್ವರನ ಭಕ್ತ. ಅವರೂರು ಸಾತನೂರು. ಎತ್ತರದ ಹೆಂಗಸು. ಉದ್ದ ಕೂದಲು ಬೆಳ್ಳನೆಯ ತಾಯಿ. ಮಾದೇವಿ ನನ್ನ ತಾಯಿಗೆ ಸಮವೇ… ಮನಸ್ಸು ಒಪ್ಪುತ್ತಿರಲಿಲ್ಲ. ಆದರೆ ಅಂತಃಕರಣದಲ್ಲಿ ಅವಳಿಗೆ ಅವಳೇ ಸಾಟಿ. ಅಪ್ಪ ಹೊಡೆಯಲು ಬಂದಾಗ ತಾಯಿಗಿಂತ ಮಿಗಿಲಾಗಿ ತಡೆಯುತ್ತಿದ್ದಳು. ಚೆಂದವಾದ ತಾಯಿ. ಅಪ್ಪ ಬಲೆಹಾಕಿ ಹಿಡಿದಿದ್ದ ಅಂತಹ ಅಂದವತಿಯ. ಬಡಪಾಯಿ ಅವರ ಅಪ್ಪ. ಹಾಡಲು ಹೊರಟ ಎಂದರೆ ಇಡೀ ರಾತ್ರಿ ಒಬ್ಬನೇ ಹಾಡುತ್ತಿದ್ದ. ಮಲೆ ಮಾದಪ್ಪನೇ ಆಗಿ ಬಿಡುತ್ತಿದ್ದ. ಅವನ ಅಕ್ಕಪಕ್ಕ ಇಬ್ಬರು ಸೊಲ್ಲೆತ್ತುವವರಿದ್ದರು. ಅವರ ನಾದ ಸಿರಿಯೇ ದೇವರು ಎನಿಸಿಬಿಡುತ್ತಿತ್ತು. ಅವನೊಬ್ಬ ನೀಲಗಾರ ಪರಂಪರೆಯ ದೇವರ ಗುಡ್ಡ. ಕಂಸಾಳೆ ತಂಬೂರಿ ಗಗ್ಗರಗಳ ಸದ್ದಿನಲ್ಲಿ ಎಂತಹ ಸ್ವರ ತೆಗೆಯುತ್ತಿದ್ದ ಎಂದರೆ ಇಡೀ ಕೇರಿಯೇ ಅವನ ಮುಂದೆ ಮೈ ಮರೆಯುತ್ತಿತ್ತು. ಅಂತವನ ಮಗಳು ಮಾದೇವಿ ಸುಖವಾಗಿರಲಿಲ್ಲ. ಅಪ್ಪ ಕಣ್ಣೀರಲ್ಲಿ ಕೈ ತೊಳೆಸುತ್ತಿದ್ದ.

ಇವತ್ತಿಗೂ ಅಪ್ಪನ ನೆತ್ತರ ಒಗಟುಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ದಂಡಿಸಲು ಅವನಿಗೆ ಕಾರಣಗಳೇ ಬೇಕಿರಲಿಲ್ಲ. ಹೊಡೆಯಬೇಕು; ಅದರಿಂದ ಏನೊ ಅವನಿಗೆ ಸುಖ! ಬಡಿಯುತ್ತಲೇ ಇದ್ದ. ವಿಪರೀತ ಅನುಮಾನದ ಪ್ರಾಣಿ ಅಪ್ಪ. ಯಾರು ಹೇಳಿದರೂ ಕೇಳುತ್ತಿರಲಿಲ್ಲ. ಒಮ್ಮೆ ಚಿಕ್ಕಮ್ಮ ಮಾದೇವಿ ಅಪ್ಪನ ಜೊತೆ ಮುನಿಸಿಕೊಂಡಿದ್ದಳು. ಅವನ ಮಗ್ಗುಲಲ್ಲಿ ಮಲಗಲು ನಿರಾಕರಿಸಿದ್ದಳು. ಅಪ್ಪ ಓವ್ವರಾಗಿ ಕುಡಿದು ತೂರಾಡುತ್ತ ಬಂದ. ಚಿಕ್ಕಮ್ಮ ನನ್ನ ಜೊತೆ ಮಲಗಿದ್ದಳು ರಾಗಿ ಬೀಸುವ ಕಲ್ಲಿನ ಮೂಲೆಯಲ್ಲಿ. ‘ನಡಿಯಮ್ಮಿ ಅಲ್ಲಿ ನಂತಾವ ಮಲಿಕೊ’ ಎಂದು ರಕ್ತವರ್ಣದ ಕಣ್ಣುಗಳ ಮಳ್ಳಿಸಿದ. ಅಜ್ಜಿ ಅಜಾರದಲ್ಲಿ ಮಲಗುವುದಿತ್ತು. ಮಗ ಎಂದು ಬಹಳ ಮಮತೆ ಅವಳಿಗೆ. ಅಂತವನ ಆಕೆ ಅದು ಹೇಗೆ ಮಗ ಎಂದು ಅಕ್ಕರಿಸುತ್ತಿದ್ದಳೊ! ನನ್ನ ತಾಯ ಕೊಲೆಯಲ್ಲಿ ಪಾಲು ಪಡೆದವಳಾಗಿದ್ದಳು. ಅವಳನ್ನು ಕಂಡರೆ ನನಗೆ ಆಗುತ್ತಿರಲಿಲ್ಲ. ಮಗ ಮಾಡಿದ್ದೇ ಸರಿ ಎಂದು ಯಾವತ್ತೂ ವಕಾಲತ್ತು ವಹಿಸುತ್ತಿದ್ದಳು. ಚಿಕ್ಕಮ್ಮ ತಲೆಯಾಡಿಸಿದಳು. ನಾನು ಎದ್ದು ಕೂತಿದ್ದೆ. ಹೊಡೆದರೆ ನನಗೆ ಹೊಡೆದುಕೊಳ್ಳಲಿ ಎಂದು ಸಿದ್ಧನಾಗಿದ್ದೆ. ಕಾಲು ಕೊಕ್ಕರಿಸಿಕೊಂಡು ಚಿಕ್ಕಮ್ಮ ತಲೆ ಎತ್ತದೆ ಮಲಗಿದ್ದಳು. ಕಾಲಿನಿಂದ ಒದ್ದ. ನಾನತ್ತ ಸರಿದೆ. ಅವಳ ಮುಂದೆ ಕೂತ. ಅಹಾ! ದೇವರೇ ಎಂತಹ ಮಾತಾಡಿದ… ನಂಜೊತೆ ಮಲಿಕೋಕೆ ಆಗುದಿಲ್ಲುವೇನಮ್ಮೀ… ನಂದು ಬ್ಯಾಡುವೇ… ಇವುಂದು ಬೇಕೇ…’ ಸತ್ತೇ ಎಂದುಕೊಂಡೆ. ಎದ್ದು ಕೂತಳು ಚಿಕ್ಕಮ್ಮ ಒಂದು ಶವದಂತೆ. ಸೆರಗು ಜಾರಿ ಬಿದ್ದಿತ್ತು. ‘ಮೆತ್ಗೆ ಅವ್ನ ತಬ್ಕಂದಿಯಾ’ ಎಂದು ಅವಳ ಎದೆಗೆ ತಿವಿದ. ಚಿಕ್ಕಮ್ಮನ ಕಣ್ಣಲ್ಲಿ ಮಾತು ನೀರಾಗಿ ಹರಿಯುತ್ತಿತ್ತು.

ಮೊದಲ ಬಾರಿಗೆ ಅಜ್ಜಿ ಚಿಕ್ಕಮ್ಮನ ಪರ ವಹಿಸಿದ್ದಳು. ಹುಳು ಹಿಡಿದ ಅಪ್ಪನ ಬಾಯಲ್ಲಿ ಇಲ್ಲಿ ಹೇಳಲಾರದ ಮಾತುಗಳು ಉಕ್ಕಿ ಬರುತ್ತಿದ್ದವು. ‘ಲೊ; ಯಂತಾ ಮಾತಾಡಿಲಾ… ಅರೀದವೈದ್ನ ಯಾರಾರ ಕರ್ಕಂದ ರ್ಲಾ… ಮುಟ್ಟಾಗಿರ್ಬೇಕು ಬಿಡ್ಲಾ’ ಎಂದು ತಡೆದಿದ್ದಳು. ಎಳೆದುಕೊಂಡು ಹೋಗಿದ್ದ. ನಿದ್ದೆ ಬರುವುದುಂಟೇ. ಚಿಕ್ಕಮ್ಮ ನರಳುತ್ತ ಅಳುತ್ತಿದ್ದ ಕ್ಷೀಣ ದನಿಯೇ ಆಕಾಶವೆ ನಲುಗಿದಂತೆ ಕೇಳಿಸುತ್ತಿತ್ತು. ಅಪ್ಪನ ವಿಕಾರ ಸದ್ದುಗಳು ಬಾವಲಿಗಳ ದನಿಯಲ್ಲಿ ಬೆರೆತು ಬೇಟೆಗೆ ಹೊರಟಂತಿತ್ತು. ತಾಳಲಾರದೆ ಉಚ್ಚೆ ಉಯ್ಯಲು ಹೊರ ಬಂದು ಹಾಗೇ ದಾಟಿ ದಾಟಿ ಮಾರಿಗುಡಿಯತ್ತ ಹೋಗಿ ಅಲ್ಲಿ ಮಲಗಿದ್ದೆ. ಬೆಳಿಗ್ಗೆ ಹಿತ್ತಲಿಗೆ ಹೋಗಿ ನೋಡಿದರೆ ಅದೇ ನನ್ನ ತಾಯಿ ಮಾಡುತ್ತಿದ್ದ ಎಲ್ಲ ಕೆಲಸಗಳಲ್ಲಿ ತೊಡಗಿದ್ದಳು ಚಿಕ್ಕಮ್ಮ. ಹೊಸದಾಗಿ ಏನನ್ನೂ ಹೇಳಬೇಕಿರಲಿಲ್ಲ. ತಾಯ ಮೇಲೆ ಆಗುತ್ತಿದ್ದ ಅಪ್ಪನ ಅತ್ಯಾಚಾರಗಳು ಚಿಕ್ಕಮ್ಮನ ಮೇಲೂ ಹಾಗೇ ನಡೆಯುತ್ತಿದ್ದವು. ಅಹಾ! ಅತ್ಯಾಚಾರಿ ಅಪ್ಪನೇ; ನಿನ್ನ ಅತ್ಯಾಚಾರಕ್ಕೆ ನಾನು ಹುಟ್ಟಿದೆನೇ ಎಂದು ವ್ಯಗ್ರತೆಯನ್ನು ನಿಭಾಯಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ಅಂತೆಯೇ ಅವನಿಗೆ ನಾನು ಹುಟ್ಟಿಲ್ಲ ಎಂದೇ ಮನದಲ್ಲಿ ಮನಸ್ಸನ್ನು ಗಟ್ಟಿಮಾಡಿಕೊಳ್ಳುತ್ತಿದ್ದೆ. ಹತ್ತಿರ ಹೋಗಿ ಅಕ್ಕಾ ಎಂದು ಕರೆದೆ. ನೋಡಿದಳು. ಎರಡೂ ಕೈಗಳ ತುಂಬ ಎಲಚಿ ಹಣ್ಣುಗಳ ಹಿಡಿದು ಕೊಟ್ಟೆ. ಸೆರಗಿಗೆ ಹಾಕಿಕೊಂಡಳು. ಚಿಕ್ಕಮ್ಮನಿಗೆ ಸಣ್ಣ ಆ ಬಾರೇ ಹಣ್ಣುಗಳೆಂದರೆ ತುಂಬ ಇಷ್ಟ. ಅವಳ ಕಣ್ಣಲ್ಲಿ ಇನ್ನೂ ದುಃಖ ತೂಗಾಡುತ್ತಿತ್ತು. ಕಾಲ ಹೇಗೆ ಸಾಗುವುದೊ… ಗೊತ್ತಿಲ್ಲವೆ ನನಗೇ… ಆ ನಡುವೆ ಚಿಕ್ಕಮ್ಮ ಬಸುರಾಗಿದ್ದಳು. ಹೆರಿಗೆಯೂ ಆಗಿತ್ತು. ಹೆಣ್ಣು ಮಗು. ಅಪ್ಪನಿಗೆ ಅದೇನೂ ವಿಶೇಷ ಅಲ್ಲ. ಚಿಕ್ಕಮ್ಮ ಅವರ ಅಪ್ಪನ ಮನೆಗೆ ಸಾಗಿ ಆರು ತಿಂಗಳ ಮುಗಿಸಿ ಗಂಡನ ಮನೆಗೆ ಹಿಂತಿರುಗಿದ್ದಳು.

ಹೆಂಡತಿ ಇಲ್ಲ ಎಂದು ರಾತ್ರಿ ವೇಳೆ ಅವನು ಮನೆಗೆ ಬರುವುದು ಅಪರೂಪವಾಗಿತ್ತು. ಯಾವಾಗಲೂ ಹೀಗೆಯೇ ಇರಲಿ ಎನ್ನುವಂತಿರಲಿಲ್ಲ. ಯಾವಾಗಲಾದರೂ ಮಾಯಾವಿಯಂತೆ ಬಂದುಬಿಡುತ್ತಿದ್ದ. ಅವನು ಬರುವುದು ಕ್ಷಣ ಮಾತ್ರದಲ್ಲಿ ನನ್ನ ನೆತ್ತಿಗೆ ತಿಳಿಯುತ್ತಿತ್ತು. ಆಯುಧಗಳನ್ನೆಲ್ಲ ಎತ್ತಿ ಬಚ್ಚಿಡುತ್ತಿದ್ದೆ. ಅವನ ಕೈಗೆ ಅಪಾಯಕಾರಿ ವಸ್ತುಗಳು ಸಿಗದಂತೆ ಸ್ಥಳಾಂತರಿಸಿ ಅಟ್ಟದ ಮೇಲೇರಿ ಕೂರುತ್ತಿದ್ದೆ. ಎಂಡದ ಪೆಂಟೆಯ ಹೆಂಗಸರ ಬಳಿ ನಗುನಗುತ್ತ ಕಾಲ ಕಳೆವ ಅಪ್ಪ ಇಲ್ಲಿ ಮನೆಯ ಹೆಂಗಸರಿಗೆ ಯಾಕಿಷ್ಟು ಕಾಟ ಕೊಡುವನೊ ಎಂದು ದೇವರ ಮುಂದೆ ಕೈ ಮುಗಿದು ಕೇಳುತ್ತಿದ್ದೆ. ಯಾವಾಗ ಅಪ್ಪ ನನ್ನ ತಾಯನ್ನು ಕೊಂದನೊ ಆಗಲೇ ಆ ದೇವರನ್ನು ನಾನೂ ಮನದಲ್ಲಿ ಕೊಂದುಬಿಟ್ಟಿದ್ದೆ! ತಾತ ಚಿಕ್ಕಮ್ಮನ ಆ ಹೆಣ್ಣು ಮಗುವಿಗೆ ‘ಶಾಂತಿ’ ಎಂದು ನಾಮಕರಣ ಮಾಡಿದ್ದ. ಎಂತಹ ಚೋದ್ಯ. ಅಷ್ಟೊಂದು ಅಶಾಂತಿಯ ಮನುಷ್ಯನ ಬಲತ್ಕಾರಕ್ಕೆ ಹುಟ್ಟಿದ ಮಗಳಿಗೆ ಶಾಂತಿ ಎಂಬ ಹೆಸರು! ಅವಳ ಲಗ್ನ ಪತ್ರಿಕೆಯಲ್ಲಿ ‘ಶಾಂತಮ್ಮ’ ಎಂದಿತ್ತು. ನನಗಿಂತ ಬಹಳ ಚಿಕ್ಕವಳು. ಆಕೆಯ ತಾಯಿ ‘ಮಾದೇವಮ್ಮ’ ಸಾವಿನ ಬೆನ್ನೇರಿ ಹೋಗುವಾಗ ಶಾಂತಿ ಒಂದು ವರ್ಷದ ಮಗು. ಕಾಲ ಆಚೀಚೆ ವೆತ್ಯಾಸ ಆದಂತಿದೆ. ಅಷ್ಟರಲ್ಲಾಗಲೇ ನನ್ನ ಅಕ್ಕನ ಬಾಲ್ಯ ವಿವಾಹವನ್ನು ತಾತ ಮಾಡಿಸಿ ಬಿಟ್ಟಿದ್ದ. ನನ್ನ ತಮ್ಮ ಊರ ಮುಖವನ್ನೇ ಕಾಣದಾಗಿದ್ದ. ತಾತ ತೆಂಗಿನ ಕಾಯಿಯ ವ್ಯಾಪಾರವನ್ನು ಸಣ್ಣ ಪ್ರಮಾಣದಲ್ಲಿ ಆಗಾಗ ಮಾಡುತ್ತಿದ್ದ. ತಾಯಿ ಇಲ್ಲದ ತಬ್ಬಲಿಯಾಗಿದ್ದ ನನ್ನಕ್ಕನಿಗೆ ಮಾದೇವಿಯನ್ನು ಕಂಡರೆ ಆಗುತ್ತಿರಲಿಲ್ಲ. ವಿನಾಕಾರಣ ನಿರ್ದಯವಾಗುತ್ತಿದ್ದಳು. ಅಪ್ಪನ ಹೋಲಿಕೆ ಅವಳ ರೂಪದಲ್ಲಿ ಸಾಕಷ್ಟು ಇತ್ತು. ಹಾಗಾಗಿಯೇ ನನ್ನ ಮಗಳು ನನ್ನಂತೆಯೇ ಎಂದು ಅಭಿಮಾನ ಪಡುತ್ತಿದ್ದ, ಆ ರಾತ್ರಿ ಗಡದ್ದಾಗಿ ಮಾಂಸದ ಅಡುಗೆಯನ್ನು ಮಾಡಲಾಗಿತ್ತು. ಬಾಲ್ಯದಲ್ಲೇ ನನಗೆ ಯಾವುದೇ ಪ್ರಾಣಿಯ ಮಾಂಸ ಇಷ್ಟವಾಗುತ್ತಿರಲಿಲ್ಲ. ತಿನ್ನು ತಿನ್ನು ಎಂದು ತಾತ ಒತ್ತಾಯಿಸುತ್ತಿದ್ದ. ಅವತ್ತು ಅಕ್ಕ ತವರೂರಿಗೆ ಬಂದಿದ್ದಳು. ತಾಯ ನೆನೆದು ವಿಚಿತ್ರ ಸಿಟ್ಟಿನಲ್ಲಿದ್ದಳು. ತನ್ನ ಅಪ್ಪನ ಮೇಲೆ ಅವಳಿಗೆ ಯಾವ ದ್ವೇಷವೂ ಇರಲಿಲ್ಲ. ಆದರೆ ನನಗಂತು ತುಂಬಿ ತುಳುಕುತ್ತಿತ್ತು. ಯಾವುದೊ ಮಾತಿಗೆ ಅಜ್ಜಿ ರೇಗುತ್ತಿದ್ದಳು. ಚೆನ್ನಪಟ್ಟಣಕ್ಕೆ ತೆಂಗಿನ ಕಾಯಿ ಮಾರಿ ಬರಲು ಸೈಕಲ್‌ಗೆ ಚೀಲಗಳ ಏರಿಕೊಂಡು ತಾತ ಗಡಿಬಿಡಿಯಲ್ಲಿ ಹೊರಟಿದ್ದ. ಪೇಟೆಗೂ ಹಳ್ಳಿಗೂ ಒಂಬತ್ತು ಕಿಲೋಮೀಟರುಗಳು. ತಳ್ಳಿಕೊಂಡು ಹೋಗಿ ಮಾರಿಬರುವುದು ತಾತನಿಗೆ ರೂಢಿಯಾಗಿತ್ತು. ಒಮ್ಮೊಮ್ಮೆ ತನ್ನ ಮಗ ‘ಸಾಹೇಬ’ನ ನೋಡಿ ಬರಲು ಸೈಕಲ್ ತುಳಿದೇ ಮೈಸೂರಿಗೆ ಹೋಗಿ ಬರುತ್ತಿದ್ದ. ಇತ್ತ ಮಾದೇವಿಯ ಮೇಲೆ ಬೆಳಬೆಳಿಗ್ಗೆಯೇ ಕದನ ಏರ್ಪಟ್ಟಿತ್ತು. ಅತ್ತ ಅಜ್ಜಿ, ಇತ್ತ ನನ್ನ ಅಕ್ಕ ಇಬ್ಬರೂ ಮಾದೇವಿಯನ್ನು ಬೇಟೆ ಆಡಿಬಿಟ್ಟಿದ್ದರು. ಭಾಗಶಃ ಅವಳನ್ನು ಕರೆದೊಯ್ಯಲು ಸಾವು ಹೂಡಿದ ಮಹೂರ್ತವೇನೊ.

ಆ ಹೆಂಗಸು ಪೇದೆಗೆ ಏನು ಹೇಳಿದ್ದಳೋ ಏನೊ! ಬಂದವನೇ ರಪರಪನೆ ಲಾಟಿಯಿಂದ ಬಡಿದ. ‘ಸೂಳೇ ಮಗನೇ; ಇನ್ನೂ ಸರ್ಯಾಗಿ ಮೀಸೆ ಬಂದಿಲ್ಲ ಆಗ್ಲೆ ಹೆಂಗುಸ್ರು ಬೇಕೇನೊ… ತಾಯಿ ತರಾ ಕಾಣಲ್ವೇನೊ ಆಯಮ್ಮಾ! ಎಲ್ಲಿಂದ ಬಂದಿದ್ದೀಯೇ? ನಡಿಯೊ ಮಗನೇ ನಿನ್ನ ಜೈಲಿಗಾಕಿ ಮಟ್ಟ ಮಾಡ್ತೀನಿ’ ಎಂದು ಮತ್ತೆ ಹೊಡೆದ.

ಮಾದೇವಿಯೂ ಅಕ್ಕನೂ ತಲೆ ಮುಡಿ ಹಿಡಿದು ಕಿತ್ತಾಡಿಕೊಂಡಿದ್ದರು. ಅಪ್ಪ ಹೊತ್ತಾರೆಯೇ ಸಿಹಿ ಎಂಡ ಕುಡಿಯಲು ಪೆಂಟೆಗೆ ಹೊರಟು ಹೋಗಿದ್ದ. ಜಗಳ ಇನ್ನೂ ನಡೆಯುತ್ತಲೇ ಇತ್ತು. ಹೊಂಗನೂರಿನ ಕೆರೆ ಕೋಡಿಯಲ್ಲೂ ಅಲ್ಲಲ್ಲೂ ತುಂಬಿದ ಹೊರೆಯ ಸೈಕಲನ್ನು ಯಾರಾದರೂ ಒಬ್ಬರು ನೂಕಿ ಸಹಕರಿಸಬೇಕಿತ್ತು. ಆ ಕೆಲಸ ಮಾಡಲು ಅಲ್ಲಲ್ಲಿ ತಳ್ಳಿಕೊಡುತ್ತಾ ದಾರಿ ಸಾಗಿಸಿ ಹೊಂಗನೂರಿನಿಂದ ಹಿಂತಿರುಗಿದ್ದೆ. ನೋಡಿದೆ. ಇಬ್ಬರೂ ಮುಖ ಪರಚಿಕೊಂಡಿದ್ದರು. ಮುಡಿ ಕೆದರಿತ್ತು. ಬಿದ್ದು ಉರುಳಾಡಿ ಧೂಳಾಗಿದ್ದರು. ಸೆಣಸಾಡಿ ಸುಸ್ತಾಗಿದ್ದರು. ಆ ಕಾಳಗದ ಹುಂಜಗಳ ಕಡಿದಾಟದ ಚಿತ್ರ ತೇಲಿ ಬಂತು. ಏನೋ ದುರಂತದ ವಾಸನೆ ಬಡಿಯಿತು. ನಾನೇನೂ ಮಾಡುವಂತಿರಲಿಲ್ಲ. ಆದರೆ ನನ್ನ ಪಾಲಿನ ಬಾಡಿನ ವಿಷಯದ ನೆಪದಲ್ಲಿ ಅವರಿಬ್ಬರ ಕದನ ಏರ್ಪಟ್ಟಿತ್ತು. ಅಕ್ಕ ಬರಬಾರದಿತ್ತು ಎಂಬ ವಿಷಾದ ಹೆಪ್ಪುಗಟ್ಟಿತ್ತು. ಚಿಕ್ಕಮ್ಮ ಮಾದೇವಿ ಅಲ್ಲಿಂದಲೇ ನನ್ನತ್ತ ನೋಡುತ್ತ; ‘ನೋಡಪ್ಪ ನಿಮ್ಮಕ್ಕ ಯಂಗೆ ವಡ್ದವಳೆ ಅನ್ನುದಾ ನೋಡಪ್ಪಾ’ ಎಂದು ದುಃಖಳಿಸುತ್ತ ಕೊನೆಯ ಬಾರಿಗೆ ತನ್ನ ಕರುಳು ಮಗಳು ಶಾಂತಿಗೆ ಎದೆ ಹಾಲು ಕುಡಿಸುತ್ತಿದ್ದಳು. ಅಹಾ! ಅಂತಹ ಸಂಕಟದಲ್ಲೂ ತಾಯಂದಿರಿಗೆ ತಾವೆತ್ತ ಕೂಸುಗಳ ಬಗ್ಗೆ ಎಂತಹ ಕಾಳಜಿ… ಮನುಷ್ಯರು ಅರ್ಥಮಾಡಿಕೊಳ್ಳದೆ ಉಪೇಕ್ಷಿಸಿರುವ ಸಂಗತಿಗಳು ಅಪಾರವಾಗಿವೆ. ನಿರ್ದಯವಾದ ಮೌನ ಹಬ್ಬಿತ್ತು. ಶಾಂತಿ; ಅಷ್ಟು ಸಣ್ಣ ಕೂಸು ಒಂದೇ ಉಸಿರಿನಲ್ಲಿ ಲೊಚಲೊಚನೆ ಹಾಲು ಕುಡಿವ ಸದ್ದು ಮೌನದ ಜೊತೆ ತನ್ನ ತಾಯ ಪರವಾಗಿ ದಂಗೆ ಎದ್ದಂತೆ ಮಿಡಿಯುತ್ತಿತ್ತು. ಹಾಳಾದ ತಾತ ಇವತ್ತೇ ಪೇಟೆಗೆ ಹೋಗಬೇಕಿತ್ತೇ ಎಂದು ಸಿಟ್ಟಾದೆ. ಮಾದೇವಿಯ ಹತ್ತಿರ ಹೋದೆ. ಅಜ್ಜಿ ಹೆದರಿಸಿದಳು. ಅಕ್ಕ ಇತ್ತ ಬಾ ಎಂದು ಜೋರಾಗಿ ಕೂಗಿದಳು. ಸುಮ್ಮನೆ ಮಧ್ಯೆ ನಿಂತಿದ್ದೆ. ಅಪ್ಪ ಬಂದು ಮಗಳ ಪರ ವಹಿಸಿ ಚಿಕ್ಕಮ್ಮನ ಮೇಲೆ ದಾಳಿ ಮಾಡಿದರೆ; ‘ನಾನೇ ಯೇಳಿ ವೋಗಿದ್ದೆ ಅಣ್ಣಾ… ನನ್ನ ಪಾಲಿನ ಬಾಡ ನೀನೇ ತಿನ್ಕೊ ಎಂದು… ಬಾಡಂದ್ರೆ ನನಗಾಗುದಿಲ್ಲ. ಅಣ್ಣಾ… ಎನ್ನುತ್ತ ಅಡ್ಡನಿಲ್ಲಬೇಕೆಂದು ನಿರ್ಧರಿಸಿದ್ದೆ. ಎದೆಗೂಡು ನಡುಗುತ್ತಿತ್ತು. ಅಪ್ಪನ ಅವತಾರಗಳೆಲ್ಲ ನುಗ್ಗಿ ಬರುತ್ತಿದ್ದವು. ಅಪ್ಪನ ಪಾಲು ಹಾಗೇ ಇತ್ತು. ಎತ್ತಿ ಮೇಲಿಟ್ಟಿದ್ದಳು. ಬಂದೇ ಬಿಟ್ಟ ಅಪ್ಪ ಸಿಹಿ ಎಂಡದ ಅಮಲಲ್ಲಿ. ತನ್ನ ತಂದೆಯ ಕಂಡ ಕೂಡಲೆ; ‘ಅಣ್ಣಾ ನೋಡಣ್ಣಾ… ನನ್ನ ತಾಳಿ ಕರಿಮಣಿ ಸರವ ಕಿತ್ತಾಕಿ ಯಂಗೆ ಪರಚವಳೆ ನೋಡಣ್ಣಾ’ ಎಂದು ಗೊಳೊ ಎಂದು ಅತ್ತು; ‘ಯೀ ಸುಖಕ್ಕೆ ಅಪ್ಪನ ಮನೆಗೆ ಬರಬೇಕೆ’ ಎನ್ನುತ್ತ ತಬ್ಬಲಿತನದಲ್ಲಿ ಹಜಾರದಲ್ಲಿ ನಿಂತಳು. ಅತ್ತ ಹಿತ್ತಿಲ ಬಾಗಿಲತ್ತ ಮಗಳು ಶಾಂತಿಯನ್ನು ತೊಡೆ ಮೇಲೆ ಹಾಕಿಕೊಂಡು ಚಿಕ್ಕಮ್ಮ ಏದುಸಿರು ಬಿಡುತ್ತಿದ್ದಳು. ಇನ್ನೇನೊ ಆಪತ್ತು ಬಂದು ಬಡಿಯುತ್ತದೆ ಎಂಬ ಗಳಿಗೆಯಲ್ಲಿ ಅಜ್ಜಿ ತುದಿಗಾಲಲ್ಲಿ ನಿಂತಿರುತ್ತಿದ್ದಳು; ನೋಡುವ ಸಂತೋಷದಲ್ಲಿ. ಚಿಕ್ಕಮ್ಮ ಸಿದ್ಧವಾಗಿದ್ದಳು. ಹೋಗಿ ತೊಡೆ ಮೇಲಿದ್ದ ಶಾಂತಿಯ ಎತ್ತಿಕೊಂಡು ಇತ್ತ ನಿಂತೆ. ಅಪ್ಪನಿಗೆ ಸತ್ಯಾಸತ್ಯತೆಯನ್ನು ತಿಳಿವ ಸಾಮರ್ಥ್ಯವೇ ಇರಲಿಲ್ಲ. ಮಗಳ ಪಕ್ಷಪಾತಿಯಾಗಿದ್ದ. ಹೊಡೆದು ಮೂಲೆಗೆ ಸೇರಿಸಿಕೊಂಡು ಒಸಕಿದ.

ಚಿಕ್ಕಮ್ಮನಿಗೆ ಅಲ್ಲಿ ಯಾರಿದ್ದರು ಬೆಂಬಲಿಸಿ ಬಿಡಿಸಲು. ಅಣ್ಣಾ ನಾನೇ ಹೇಳಿದ್ದೆ ಕನಣ್ಣಾ ನೀನೆ ತಿನ್ಕೋ ಅಂತಾ… ಬಿಟ್‌ಬಿಡಣ್ಣಾ ಎಂದು ಅಂಗಲಾಚಿದೆ. ಅಂತಹ ವೇಳೆಯಲ್ಲೇ ಅವನಿಗೆ ಉತ್ಸಾಹ ಹಿಮ್ಮಡಿಸುತ್ತಿದ್ದುದು. ಶಾಂತಿ ತಾಯ ಸ್ಥಿತಿಯ ಕಂಡು ಕಿರುಚುತಿದ್ದಳು. ಆ ದೃಶ್ಯ ಮಗುವಿಗೆ ಕಾಣದಿರಲಿ ಎಂದು ಹಿತ್ತಲಿಗೆ ಬಂದೆ. ಅಹಾ! ದೇವರೇ; ಅಪ್ಪನ ಕ್ರೌರ್ಯ ಕೂಸಿಗೆ ತಿಳಿಯುತ್ತಿತ್ತೇ. ತನ್ನ ಪಾಲಿನ ಮಾಂಸದ ಸಾಂಬಾರನ್ನು ಬಟ್ಟಲಿಂದ ಅದೇ ಹಿತ್ತಲ ಬಾಗಿಲಿಂದ ಬಂದು ತಂದು ಮೆಟ್ಟಿಲ ಮೇಲೆ ಸುರಿದು ಅಲ್ಲೇ ಕೊನೆಯುಸಿರಾಡುವಂತೆ ಬಿದ್ದಿದ್ದ ಚಿಕ್ಕಮ್ಮನನ್ನು ಒಂದು ನಾಯಿಯನ್ನು ಕರೆಯುವಂತೆ ‘ಬಾ ಬಾ… ಕುರೊ ಕುರೊ ತ್ಚೊ ತ್ಚೊ ತ್ಚೋ’ ಎಂದು ಬಾ, ತಿನ್ನು’ ಎಂದ. ನೋಡುತ್ತಿದ್ದೆ ಅಲ್ಲೆ ನಿಂತು. ಎಳೆದು ತಂದ ಅಪ್ಪ. ಹಾಸುಗಲ್ಲಿನ ಮೇಲೆ ಮಾಂಸದ ಪೀಸುಗಳು ಬಿದ್ದಿದ್ದವು. ‘ತಿನ್ನು ಇದಾ ತಿನ್ನೂ… ತಿಂದೆ ಇದ್ರೆ ನಿಂಜೀವವಾ ನಾನು ತಿಂತೀನಿ’ ಎಂದ. ನನ್ನತ್ತ ನೋಡಿದಳು ಚಿಕ್ಕಮ್ಮ. ಎದೆಗಪ್ಪಿಕೊಂಡಿದ್ದೆ ಶಾಂತಿಯನ್ನು. ಕೊಸರಾಡಿ ಹಂಪರಿಯುತ್ತಿತ್ತು ಕೈ ನೀಡಿ ತಾಯ ಮಡಿಲು ಸೇರಲು ಕೂಸು. ರುದ್ರಿಯಂತಾಗಿ ಎದ್ದು ನಿಂತಳು. ನನ್ನ ಕೈಯಿಂದ ಮಗುವ ಕಿತ್ತುಕೊಂಡಳು. ಕಂಕುಳಿಗೆ ಹಾಕಿಕೊಂಡು ದಡದಡನೆ ಎತ್ತಲೊ ಹೊರಟಳು. ಅಜ್ಜಿಯೂ ಅಕ್ಕನೂ ಕಾಣಲಿಲ್ಲ. ‘ನಿಂತ್ಕಮ್ಮೀ; ಎಲ್ಲೂ ವೋಗ್ಬೇಡ… ತಾಳಮ್ಮಿ… ನಾವೂ ಬರ್ತೀವಿ’ ಎಂದು ಆ ಕಾಳಮ್ಮ ಮಂಚಮ್ಮರು ಅಕ್ಕ ಪಕ್ಕದ ಮನೆಯ ಬಡಪಾಯಿ ಮುದುಕಿಯರು ಓಡಿ ಹಿಂಬಾಲಿಸಲಾರದೆ ಕೂಗುತ್ತ ಅಷ್ಟು ದೂರ ಸಾಗಿ ತಡೆಯಲಾರದೆ ನಿಂತರು. ‘ಕಂಡಿವಿನಿ ಕನಾ ವೋಗಮ್ಮೀ… ಇದ್ರೆ ಒಂದು ಸಾಟ ಬಿದ್ರೆ ಇನ್ನೊಂದು ಸಾಟ’ ಎಂದು ಅಪ್ಪ ಹೋಟೆಲಿಗೆ ಹೋಗಿ ಸಿಗರೇಟು ಸೇದುತ್ತಿದ್ದ. ತಡೆಯಲಾರದೆ ಚಿಕ್ಕಮ್ಮ ಸಾಗಿದ ದಾರಿಯತ್ತ ಬಂದು ನಿಂತು ಅವರಿವರ ಕೇಳಿದೆ. ಎದುರು ದಾರಿಯಿಂದ ಬಂದವರು ಹೇಳಿದರು. ಓಡುವಂತೆ ನಡೆಯುತ್ತಿದ್ದ ಅವಳ ಜನ ವಿಚಾರಿಸಿದ್ದರು. ಯಾರಿಗೂ ಒಂದು ಮಾತನ್ನೂ ಹೇಳಿರಲಿಲ್ಲ. ಅಷ್ಟೊತ್ತಿಗಾಗಲೇ ಸಾವು ಅವಳ ಮೈಮೇಲೆ ಬಂದು ಬಿಟ್ಟಿತ್ತು. ಕಲ್ಪಿಸಿಕೊಂಡೆ; ಇನ್ನು ಚಿಕ್ಕಮ್ಮ ಬರುವುದಿಲ್ಲಾ… ತವರು ಮನೆಯ ಸೇರಿಕೊಳ್ಳುವಳು ಎಂದು ಭಾವಿಸಿದೆ. ಹೋಟೆಲಲ್ಲಿ ಗಿರಾಕಿಗಳೇ ಇರಲಿಲ್ಲ. ಗಲ್ಲಾದ ಬೆಂಚಿನ ಮೇಲೆ ಕೂತು ಗಹನವಾಗಿ ಚಿಂತಿಸುವವನಂತೆ ಹೊಗೆ ಉಗುಳುತಿದ್ದ. ಅವನ ಚಿತ್ತದಲ್ಲಿ ಏನೇನು ನಡೆಯುತ್ತಿತ್ತೊ… ಆ ದೇವರಂತೆ ದೇವರು; ಅವನಿಗಷ್ಟೇ ಅಪ್ಪನಿಗಷ್ಟೇ ಗೊತ್ತಿತ್ತು.

ಅಲ್ಲೊಂದು ತಿರುವಿತ್ತು. ಮೋರಿಯಿತ್ತು. ಕೂತು ಮುಂದೆ ಹೋಗಲು ಆಯವಿತ್ತು. ‘ಯಾಕವ್ವಾ ಯೇನಾಯ್ತು’ ಎಂದು ಕೇಳಿದ್ದಳು ಒಬ್ಬಳು ಮುದುಕಿ. ‘ಸೌದೆ ಹೊರೆಯಾ ಕಟ್ಟಿ ಮಡಗವನೆ ನನ ಗಂಡಾ… ಕೈ ಬಿಡವೊಲ್ದು ಮಗಾ… ವಸಿ ವೊತ್ತು ಇದಾ ಇಡ್ಕವ್ವಾ’ ಎಂದು ಮಗಳು ಶಾಂತಿಯ ಆಕೆ ಕೈಯಲ್ಲಿ ಕೊಟ್ಟು ಓಡಿದ್ದಳು ಅಕ್ಷರಶಃ! ಅಹಾ ಸಾವಿಗೆ ಎಷ್ಟೊಂದು ಆತುರವೊ… ಅಲ್ಲೇ ಬಾಚಾಳಪ್ಪನ ಅರಳಿ ಮರದ ದೊಡ್ಡ ಕಟ್ಟೆ ಇತ್ತು. ಒಂದಿಬ್ಬರು ಗಂಡಸರು ಕೆಲಸ ಮುಗಿಸಿ ಕೂತಿದ್ದರು ಬೀಡಿ ಸೇದುತ್ತ. ಅವರೂ ಕೇಳಿದರು; ಯೇನವ್ವಾ ಇಷ್ಟಾತುರಾ’ ಎಂದಿದ್ದರು. ತಿರುಗಿ ನೋಡಿರಲಿಲ್ಲ. ಮಟ ಮಟ ಮಧ್ಯಾಹ್ನ ಅವಳ ನೆತ್ತಿಯ ಮೇಲಿತ್ತು. ಚಂಗನೆ ಹಾರಿದಂತೆ ಆಳವಾದ ಬಾವಿಗೆ ಧುಮುಕಿದಳು. ದಮಾರ್ ಎಂದು ಸಾವು ಸದ್ದು ಮಾಡಿತ್ತು. ಏನೋ ಆಯಿತು ಆಗಬಾರದು ಎಂಬಂತೆ ಅಲ್ಲಿ ಇಲ್ಲಿ ಕೂತಿದ್ದ ಪಕ್ಷಿಗಳು ಬೆದರಿ ಕೂಗಿದ್ದವು. ಆ ದೊಡ್ಡ ತೋಟವ ಕಾಯುತಿದ್ದವನು ಗಾಬರಿಯಿಂದ ಏನೊ ಬಾವಿಗೆ ಬಿದ್ದ ಸದ್ದಾಯಿತಲ್ಲಾ ಎಂದು ನೋಡಿದ. ನೀರ ಅಲೆಗಳು ಕಿತ್ತಾಡಿ ನೂಕಾಡುವಂತೆ ಬಾವಿಯ ಒಳಗೇ ಲೀನವಾಗುತಿದ್ದವು. ಆತ ಬಾಚಾಳಪ್ಪನ ಮರದ ಬಳಿ ಬಂದಿದ್ದ. ‘ಯಾರಾದ್ರೂ ಈಗ ಇಲ್ಲಿ ಬಂದ್ರೇನ್ರೊ’ ಎಂದು ಕೇಳಿದ್ದ. ಬಾವಿಗೆ ಹಾರಿದವಳು ಯಾರೆಂದು ತಿಳಿದು ಸೈಕಲಲ್ಲಿ ಆತ ವೇಗವಾಗಿ ಬಂದು ಹೋಟೆಲಿನ ಮುಂದೆ ಗಾಡಿ ನಿಲ್ಲಿಸಲೂ ಆಗದೇ; ‘ಯೇ ಚಿಕ್ಕೈದಯ್ಯಾ… ಬುದ್ದಿ ಬರ್ಲಿಲ್ವಲ್ಲೊ ಕೊನೆಗೂ ನಿನ್ಗೇ… ನಿನ್ನೆಡ್ತಿ ಬಂದು ಬಾವಿಗೆ ಬಿದ್ದೋದ್ಲಲ್ಲೊ… ಏನೋ ನಿನ್ನನ್ಯಾಯಾ… ಪ್ರಾಣ ತೆಗೆದಲ್ಲೊ… ಇನ್ನೂ ಯೆಷ್ಟು ತೆಗೀತಿಯೊ… ಬಾರೊ ಹೆಣಾ ಎತ್ತಿಸೊ… ನಮ್ಮ ತಲೆಗೆ ತರಬೇಡ ನಡಿಯೊ’ ಎಂದು ಕೂಗಾಡಿದ. ಅಪ್ಪ ತಣ್ಣಗಿದ್ದ. ತಾತ ಓಡಿ ಬರಲು ಸಾಧ್ಯವಿರಲಿಲ್ಲ. ಪೇಟೆಗೆ ಹೋಗಿದ್ದವನು ಹಿಂತಿರುಗಿರಲಿಲ್ಲ. ಕಾಗೆ ಬಳಗದಂತೆ ಎಲ್ಲರೂ ಒಗ್ಗೂಡಿದರು. ‘ಎಲ್ಲಾರ ವೋಗಿ ತಲೆ ಮರಿಸ್ಕಳೊ’ ಎಂದು ಅಜ್ಜಿ ಮಗನ ಬಗ್ಗೆ ಕಾಳಜಿ ಮಾಡುತ್ತಿದ್ದಳು. ಅಕ್ಕ ಮಾಯವಾಗಿದ್ದಳು. ಅವಳು ಅಳುವುದಕ್ಕೂ ಆಗದಂತೆ ಗರಬಡಿದು ನಿಂತಿದ್ದೆ. ಏನು ಬಂದು ಬಳಗವೊ; ಅಪ್ಪನ ಯಾವ ಹಂಗೊ ಸಲೀಸಾಗಿ ಬಚಾವು ಮಾಡಿ ಬಿಟ್ಟಿದ್ದರು. ಬಾವಿ ಸುತ್ತ ನೆರೆದರು. ‘ನನ್ಮನೆಯಾ ವುದ್ದಾರ ಮಾಡೊ ಸೊಸೆದೀರು ಬರ್ಲಿಲ್ಲವಲ್ಲೊ ಶಿವನೇ’ ಎಂದು ಅಜ್ಜಿ ವಾಲಗ ತೆಗೆದಿದ್ದಳು.

ಶಾಂತಿಯನ್ನು ಯಾರೊ ಮರೆಯಲ್ಲಿ ಸಂತೈಸುತ್ತಿದ್ದರು. ಬಾವಿಯಲ್ಲಿ ಮುಳುಗಿ ಹೆಣವ ಮೇಲೆತ್ತಿದ್ದರು ಹಗ್ಗ ಕಟ್ಟಿ. ಅಪರಾಧಗಳ ಮುಚ್ಚಿಬಿಡುವಲ್ಲಿ ಎಷ್ಟೊಂದು ಉತ್ಸಾಹ ಈ ಜನಕ್ಕೆ. ಎತ್ತಿನ ಬಂಡಿಯಲ್ಲಿ ಹೆಣವ ಮಲಗಿಸಿದ್ದರು. ಆಗ ತಾನೆ ನೋಡಿದ್ದೆ ಜೀವಂತ; ಈಗ ತಾನೆ ನೋಡುತ್ತಿರುವೆನಲ್ಲ ಚಿಕ್ಕವ್ವನ ಹೆಣವಾ ಎಂದು ಕಣ್ಣು ಮುಚ್ಚಿಕೊಂಡೆ.

ಅಪ್ಪ ಉಗ್ರವಾಗಿ ಯಾವುದೊ ರಾಕ್ಷಸ ಪಾತ್ರದಂತೆ ಬಿರಿಬಿರಿದು ಕುಣಿಯುತ್ತಿರುವ ಚಿತ್ರಗಳು ನುಗ್ಗಿ ಬಂದವು. ಅಬ್ಬರದ ವಾದ್ಯ ಮೇಳ ಅವನ ಹೆಜ್ಜೆಗೆ ತಕ್ಕಂತೆ; ರೌದ್ರತೆಗೆ ಹೊಂದುವಂತೆ ನಗಾರಿಯವರು ಮುಂದೆ ಮುಂದೆ ಸಾಗುತ್ತಿದ್ದರು. ಹಿಂದೆ ಹಿಂದೆ ಹೆಣದ ಬಂಡಿ ವಿಷಾದವ ಹೊತ್ತಂತೆ ನಿಧಾನವಾಗಿ ಸಾಗುತ್ತಿತ್ತು. ಚಿಕ್ಕಮ್ಮ ನನ್ನ ಕೈಯಿಂದ ಶಾಂತಿಯನ್ನು ಹೇಗೆ ರಭಸವಾಗಿ ಕಿತ್ತುಕೊಂಡು ಪ್ರಾಣ ಪಕ್ಷಿ ಹಾರಿದಂತೆ ಓಡಿಹೋಗಿದ್ದಳು ಎಂಬುದು ಇನ್ನೂ ಕಣ್ಣಲ್ಲಿ ಕರಗಿಯೇ ಇರಲಿಲ್ಲ. ಅಷ್ಟರಲ್ಲಾಗಲೇ ಅವಳು ಹೆಣವಾಗಿ ಮಲಗಿರುವ ಸ್ಥಿತಿಯನ್ನು ಮನಸ್ಸು ಒಪ್ಪಿಕೊಂಡಿರಲಿಲ್ಲ. ಅಲ್ಲೆಲ್ಲೊ ತಾಯ ಎದೆ ಹಾಲಿಗಾಗಿ ಹಂಬಲಿಸುತ್ತಿರುವ ಮಗುವಿನ ಅಳಲಿನ ಅಲೆಗಳು ನನ್ನಾಳದ ಕಿವಿಗೆ ಬಡಿದು; ಮನುಷ್ಯ ಎಂದರೆ ಇಷ್ಟೆಯೇ ಎಂಬಂತೆ ಅಳತೆಗೆ ಮೀರಿದ ಪ್ರಶ್ನೆಗಳ ಕೇಳುತ್ತಿದ್ದವು. ಆಗಲೇ ತಾತ ಬಂದದ್ದು! ಅಪಾಯದಿಂದ ಹೇಗೆ ಪಾರಾಗುವುದು ಎಂಬುವುದರ ಸೂತ್ರ ತಾತನಿಗೆ ಚೆನ್ನಾಗಿ ಗೊತ್ತಿತ್ತು. ಅಪ್ಪನ ರಕ್ಷಣೆಗೆಂದು ಅವನ ಸುತ್ತ ಗಂಡಾಳುಗಳಿದ್ದರು. ಅಪ್ಪ ಪಾಳೆಯಗಾರನಂತೆ ಎಲ್ಲವನ್ನೂ ದಕ್ಕಿಸಿಕೊಂಡಿದ್ದ.

ಮಸಣಕ್ಕೆ ಆಗಲೇ ಎರಡು ಬಂಡಿಯ ಸೌದೆಗಳು ಬಂದು ತಲುಪಿದ್ದವು. ಯಾರೊ ಜೋಡಿಸಿದ್ದರು. ಹೀಗೆ ಸತ್ತವರನ್ನು ಹೂಳುತ್ತಿರಲಿಲ್ಲ; ಸುಟ್ಟುಬಿಡುತ್ತಿದ್ದರು. ಆಯಸ್ಸು ತುಂಬದೆ ಸತ್ತವರು ಪ್ರೇತಗಳಾಗಿ ಅಲೆಯುತ್ತವೆ ಎಂಬ ಭಯವಿತ್ತು. ಸುಟ್ಟುಹಾಕಿದರೆ ಅಲ್ಲಿಗೆ ಅದು ಮರಳಿ ಬರಲಾರದು ಎಂಬ ನಂಬಿಕೆ. ಯಾರೊ ಪುಣ್ಯಾತ್ಮರು ಮಾದೇವಿ ಚಿಕ್ಕಮ್ಮ ಹೀಗೆ ಸತ್ತಳು ಎಂದು ಸುದ್ದಿ ತಲುಪಿಸಿದ್ದರು. ಅವರು ಒಟ್ಟಾಗಿ ಬರುವಷ್ಟರಲ್ಲಿ ಸೂರ್ಯಾನೇ ಹೊತ್ತು ಮುಗಿಯಿತು ಎಂದು ಮುಳುಗುತ್ತಿದ್ದ. ಶವಕ್ಕೆ ಬೆಂಕಿ ಹಚ್ಚಿಯೂ ಆಗಿತ್ತು. ಆಗತಾನೆ ಬಾವಲಿಗಳು ಬೇಟೆಗೆ ಹೊರಟಿದ್ದವು. ದಿಗಂತಕ್ಕೆ ಯಾರೊ ಬೆಂಕಿ ಹಚ್ಚಿದಂತೆ ಕಾಣುತ್ತಿತ್ತು. ಸೂತಕ ಕಳೆದು ಹೇಗೆ ತಿಥಿಯ ದಿನ ಬಂದಿತ್ತೊ ಗೊತ್ತೆ ಆಗಲಿಲ್ಲ.

ಅದದೇ ದೃಶ್ಯಗಳು ನೀರ ಅಲೆಗಳಂತೆ ಬಡಿದುಕೊಳ್ಳುತ್ತಿದ್ದವು. ಮಗಳ ವಿಧಿಯೇ ಇಷ್ಟಿತ್ತು ಎಂದು ಚಿಕ್ಕವ್ವನ ತಂದೆ ಮಾದೇಶ್ವರನ ಗುಡ್ಡ ಎಲ್ಲವನ್ನು ಕ್ಷಮಿಸಿ ಬಿಟ್ಟಿದ್ದ. ಅವಳ ಮುಖವೇ ಕೊನೆಯ ಬಾರಿಗೆ ಸಿಕ್ಕಿರಲಿಲ್ಲ. ತಿಥಿಯ ದಿನ ಚಿಕ್ಕಮ್ಮನ ಬಂಧು ಬಳಗವೇ ಬಂದಿತ್ತು. ಸ್ಮಶಾನದ ಒಂದು ಮೂಲೆಯಲ್ಲಿ ಕೂತಿದ್ದ ಮಾದಯ್ಯ; ಚಿಕ್ಕಮ್ಮನ ತಂದೆ ಹೋಗಿ ಶವದ ದುವ್ವೆಗೆ ಹಾಲು ಬಿಟ್ಟ. ಉಳಿದವರೂ ಹಾಗೇ ಮಾಡಿದರು. ಶಾಂತಿಯನ್ನು ನನ್ನಕ್ಕ ಎತ್ತಿಕೊಂಡು ಆಟ ಆಡಿಸುತ್ತಿದ್ದಳು. ಎಂತಹ ವಿಚಿತ್ರ… ವಿವರಿಸಲಾಗದು. ಆ ತಿಥಿಯ ದಿನ ರಾತ್ರಿಗೆ ಕಥೆ ಮಾಡಿಸುವುದು ತತ್ವಪದ ಹಾಡಿಸುವುದು ಪದ್ಧತಿ. ಹಾಗೇ ಮಾಡಿದರೆ ಕರ್ಮ ಕಳೆದು ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಪ್ರತೀತಿ. ಅದೇ ಮಾದೇಶ್ವರನ ಕಥನ ಕಾವ್ಯವನ್ನು ತಾನೇ ಹಾಡಲು ತನ್ನ ಸಂಗಡಿಗರ ಆ ಮಾದಯ್ಯ ವಾದ್ಯ ಪರಿಕರಗಳ ಜೊತೆ ಕರೆತಂದಿದ್ದ. ಅಪ್ಪ ಗೆದ್ದಂತೆ ಅಮಲಾಗಿದ್ದ. ತನ್ನ ಮಗಳ ಆತ್ಮವು ಕೈಲಾಸ ಸೇರಲಿ ಎಂದು ಪ್ರಾರ್ಥಿಸಿ ಹಾಡಲು ಮುಂದಾಗಿದ್ದ. ಮಾದಯ್ಯ ಗಂಭೀರವಾಗಿದ್ದ. ಭಕ್ತಿಯಲ್ಲಿ ಲೀನವಾಗಿದ್ದ. ಮಗಳ ಸಾವಿನ ನೋವಿನಲ್ಲಿ ರಾಗ ತೆಗೆದಿದ್ದ. ತಂಬೂರಿಯ ಮೀಟುತ್ತಿದ್ದರು. ಗಗ್ಗರದ ಸದ್ದು ಎದೆಯ ಬಡಿತವ ಮಿಡಿಸುತ್ತಿತ್ತು. ಆ ಕಂಸಾಳೆಯ ನಾದವೊ; ಆ ಕೈಲಾಸದಲ್ಲಿರುವ ಶಿವನ ಕೂಗಿ ಕರೆಯುತ್ತಿತ್ತು. ಪದ ಪದವ ಜೋಡಿಸಿ ಕಥೆಯ ಕಟ್ಟಿ ಮಾಯದ ಸ್ವರದಲ್ಲಿ ಮೋಡಿ ಮಾಡಿ ಅತ್ತಂತೆ ಹಾಡಿ, ಅಬ್ಬರಿಸಿದಂತೆ ಕತೆಯ ನುಡಿಸಿ ಕಂಸಾಳೆಯ ಬಡಿಯುತ್ತಿದ್ದ ಪರಿಯಲ್ಲೇ ಮಗಳ ಸಾವಿನ ದುಃಖ ಅವನಿಗೆ ಎಷ್ಟೊಂದು ಭಾದಿಸಿತ್ತು ಎಂಬುದು ಪ್ರತಿಧ್ವನಿಸುತ್ತಿತ್ತು. ಅಲ್ಲಿ ಎಷ್ಟು ಜನ ಅದನ್ನು ಗಮನಿಸಿದರೊ ಏನೊ ತಲೆದೂಗುತ್ತಿದ್ದರು. ಅಪ್ಪ ಕಾಲಿನ ಮೇಲೆ ಕಾಲು ಹಾಕಿಕೊಂಡು ತನ್ನ ಅಣ್ಣ ತಂದುಕೊಟ್ಟಿದ್ದ ತಿಗಣೆಗಳ ಆ ಕುರ್ಚಿಯಲ್ಲಿ ಕೂತು ಠೇಂಕರಿಸುತ್ತಿದ್ದ.

ಯಾವುದಕ್ಕೆ ಯಾವುದನ್ನು ಹೋಲಿಸುವುದು… ಅಲ್ಲಿ ಜೀವ ಕೊಟ್ಟು ಮಗಳ ಕಳೆದುಕೊಂಡು ಕಿಚ್ಚಿನಿಂದ ಹಾಡುತ್ತಿರುವ ತಂದೆಯು ಮಗಳನ್ನು ಕೈಲಾಸಕ್ಕೆ ಹೊತ್ತು ಏರಿದಂತೆ ಸ್ವರವೇರಿಸುತ್ತಿರುವ ಚಿತ್ರ… ಇತ್ತ ಹೆಂಡತಿಯ ಕೊಂದು ಅಮಲಿನಲ್ಲಿ ತೇಲುತ್ತ ಮತ್ತೊಬ್ಬಳಿಗಾಗಿ ಯೋಚಿಸುತ್ತಿರುವ ಅಪ್ಪನ ಚಿತ್ತಾರದ ಚಿಂತೆ… ಕೈ ಮೀರಿದ ಹಿಂಸೆಯ ನರ್ತನ… ಯಾವುದನ್ನು ಯಾವುದಕ್ಕೆ ಪೋಣಿಸಲಿ. ಅಕ್ಕ ಶಾಂತಿಯನ್ನು ತೊಡೆ ಮೇಲೆ ಮಲಗಿಸಿಕೊಂಡಿದ್ದಳು. ಭಾಗಶಃ ಆ ಹಾಡುಗಾರ ತನ್ನ ಕಾಯದೆ; ಎಲ್ಲೊ ಬಿಟ್ಟು ಹೋದ ತಾಯಿಯ ತಂದೆ ಎಂದು ಭಾವಿಸಿರಲಿಕ್ಕೆ ಸಾಧ್ಯವೊ ಏನೊ… ಆ ನಾದಕ್ಕೆ ಕಂಸಾಳೆಯ ಲೀಲೆಗೆ ಜೋಗುಳವಾದಂತೆ ಮಲಗಿದ್ದಳು ಗಾಢವಾಗಿ ಉಸಿರಾಡುತ್ತ. ಆ ಇಡೀ ರಾತ್ರಿ ಹಾಡಿದ್ದ ಮಾದಯ್ಯ. ಯಾರೊಬ್ಬರೂ ಎದ್ದು ಹೋಗಿರಲಿಲ್ಲ. ನಿದ್ದೆ ತಡೆಯಲಾರದವರು ಅಲ್ಲೇ ಮಲಗಿದ್ದರು. ತಾತ ಪ್ರತಿಯೊಂದು ಪವಾಡ ಕತೆಗೂ ಆಕಾಶಕ್ಕೆ ಕೈ ಮುಗಿಯುತ್ತಿದ್ದ. ಮಾದಯ್ಯನ ದನಿ ಇದು ಎಂದು ಅಕ್ಕ ಪಕ್ಕದ ಊರಿನ ಜನರೂ ಬಂದು ಸೇರಿದ್ದರು. ಕಂಸಾಳೆಯ ಲಯಬದ್ದ ಕಂಚಿನ ಸದ್ದು ಆ ನೀರವ ರಾತ್ರಿಯಲ್ಲಿ ಚಿಕ್ಕಮ್ಮನ ಕೊನೆಯ ರೋಧನದಂತೆ ಬಡಿಯಲ್ಪಡುತ್ತಿತ್ತು. ನನಗಂತು ಬಹಳ ದಿನಗಳ ತನಕ ಮಾದಯ್ಯನ ಆ ಪರಿಯ ಹಾಡುಗಾರಿಕೆ ಕಾಡಿತ್ತು. ಇವತ್ತಿಗೂ ಅವತ್ತಿನ ಆ ಕಂಸಾಳೆಯ ಸದ್ದು ಎದೆಯಾಳದಲ್ಲಿ ಬಡಿಯುತ್ತಲೇ ಇದೆ. ತಡೆಯಲಾಗದು ಯಾರಿಂದಲೂ ಉರಿವ ದಿಗಂತಗಳ ಕಿಚ್ಚ. ಅಹಾ ಅಜ್ಜೀ ಎಂತಹ ದೊಡ್ಡ ಮನುಷ್ಯೆ ನೀನೂ… ತಿಥಿಯ ಮರುದಿನ ಮಾದಯ್ಯ ‘ತಾಯೀ; ಬರ್ತೀನವ್ವಾ… ನನ್ನ ಮಗಳು ಬಾಳಿ ಬದುಕಬೇಕಾಗಿದ್ದವಳು… ಅರ್ದ ದಾರಿಲೇ ವಂಟೋದಳು’ ಎಂದು ಆತ ದುಃಖಿಸುವಾಗ ಏನೆಂದೆ ನೀನೂ… ‘ಬಾಳ್‌ಲಾರ್ದವಳು ಬಾವಿಗ್‌ಬಿದ್ಲು; ನೀಸ್‌ಲಾರ್ದೋಳು ನೇಣಾಕಂದ್ಲು’ ಎಂದಿದ್ದೆಯಲ್ಲಾ ನನ್ನ ಅಪ್ಪನ ತಾಯಿಯೇ… ‘ನೀನು ಸುಖವಾಗಿ ಸತ್ತೆಯಾ…’ ಇರಲಿ; ಮುಂದೆ ನಿನ್ನ ಕಥೆಯ ಹೇಳುವೆ.

ಮತ್ತೆ ಚಿಕ್ಕಮ್ಮ ಮಾದೇವಿಯ ರೂಪವ ಯಾರ ಮುಖದಲ್ಲಾದರು ಕಂಡೀತೇ ಎಂಬ ಗೊಡವೆಗೇ ಹೋಗಿರಲಿಲ್ಲ. ಬಾಲ್ಯದಲ್ಲಿ ನಡೆದಿದ್ದ ಆ ಎಲ್ಲ ಘಟನೆಗಳೂ ನನಗೆ ಅರಿವಾಗದೆ ಒಳಗೊಳಗೆ ಬೆಳೆದು ರೆಂಬೆಕೊಂಬೆಗಳಿಗೆಲ್ಲ ನುಲಿದುಕೊಂಡು ನನಗೆ ನಾನೇ ಕಾಣಿಸದಾಗಿದ್ದೆ. ಕಣ್ಣಾರೆ ಕಂಡ ಆ ಗತಿ ಸ್ಥಿತಿಗಳು ಜೀವಂತವಾಗಿ ನನ್ನೊಳಗೇ ಅಡಗಿದ್ದವು. ಎಷ್ಟೋ ಬಾರಿ ನನ್ನ ಬಂಧು ಬಳಗವ ಸಂಪರ್ಕಿಸಿ ಅವತ್ತು ಅಪ್ಪ ಹೀಗೆ ಮಾಡಿದ್ದನಲ್ಲಾ… ನಿಮಗೆ ನೆನಪಿದೆಯಾ ಎಂದು ಕೇಳಿದಾಗ ಅವರಿಗೆ ನೆನಪೇ ಹೊರಟು ಹೋಗಿತ್ತು. ಕೆದಕಿ ಹೇಳಿದಾಗ ತಿಳಿಯುತ್ತಿತ್ತು. ಅವೆಲ್ಲ ಈಗ ಯಾಕಪ್ಪಾ ಕೆಟ್ಟದ್ದನ್ನೆಲ್ಲ ಮರೆತು ಬಿಡಬೇಕು… ಈಗ ಸುಖವಾಗಿದ್ದೀಯಲ್ಲಾ; ಸಾಕಲ್ಲವೇ ಅಷ್ಟು ಎಂದು ಬುದ್ಧಿ ಹೇಳುವರು. ಆದರೆ ಆ ಬೇರುಗಳನ್ನು ಕಿತ್ತುಹಾಕಿದರೆ ನಾನು ಸತ್ತು ಹೋಗುತ್ತೇನೆ. ಎಂತಹ ಚೋದ್ಯ.