ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಮತ್ತು ಬೇಸಿಗೆ ಆರಂಭವಾಗುವ ಹೊತ್ತಿಗೆ ಅವರು ನಾಟಕದ ಪ್ರಾಕ್ಟೀಸ್ ಆರಂಭಿಸಿ ಒಂದು ದಿನ ಗೊತ್ತು ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ. ಆ ದಿನ ಅವರ ಇಡೀ ಅಷ್ಟು ತಿಂಗಳುಗಳ ದುಡಿಮೆಯ ದಣಿವು, ತಮ್ಮಲ್ಲಿನ ಕಲೆಯ ಅಭಿವ್ಯಕ್ತಿಯಲ್ಲಿ ನಿರಾಳ ಕಂಡುಕೊಳ್ಳುತ್ತದೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

ಮಧ್ಯಾಹ್ನ ಉರಿಬಿಸಿಲು. ಸಂಜೆಗೆ ಬಿರುಮಳೆ. ಮರಗಳು ಉರುಳಿ ರಸ್ತೆ ಬಂದ್ ಆಗುತ್ತಿರುವ ಸುದ್ದಿ. ಜೊತೆಗೆ ರಸ್ತೆಗಳು ಕೊಳಕು ಈಜುಕೊಳಗಳ ರೀತಿ ಆಗಿ ಅದರಲ್ಲಿ ಜನ ತಮ್ಮ ಕಾರು ಬೈಕುಗಳನ್ನ ದೋಣಿಗಳ ಹಾಗೆ ನಡೆಸಿಕೊಂಡು ಹೋಗುವ ದೃಶ್ಯ ನೋಡಲು ಚೆಂದ. ಆಯತಪ್ಪಿ ಬಿದ್ದರೆ ಮಳೆ ನೀರಿನ ಜೊತೆ ಕಂಡೂಕಾಣದಂತೆ ಸಮ್ಮಿಲನಗೊಂಡಿರುವ ಡ್ರೈನೇಜಿನ ನೀರಿನಲ್ಲಿ ತೋಯ್ದು ಹೋಗುವ ಅವಕಾಶ.

ಇದಿನ್ನೂ ಮೇ ಆರಂಭ; ಆಗಲೇ ಮಳೆಗಾಲ ಆರಂಭವಾಯಿತೆ? ಹೀಗೆ ನಾವು ಸುಮ್ಮನೆ ನಮ್ಮ ಸಮಾಧಾನಕ್ಕೆ ಕೇಳಿಕೊಳ್ಳಬಹುದು ಅಷ್ಟೇ. ಜೊತೆಗೆ ಹುಬ್ಬುಗಳನ್ನೂ ಕೂಡ ಮೇಲಕ್ಕೆ ಏರಿಸಬಹುದು.

ಹಾಗೆ ನೋಡಿದರೆ ನಮಗೆ ಮಳೆ ಮತ್ತು ನಕ್ಷತ್ರಗಳ ಬಗ್ಗೆ ಗೊತ್ತಿಲ್ಲ. ತಿಳಿದುಕೊಳ್ಳುವ ಉಮೇದಿಯೂ ಇಲ್ಲ. ಹಳ್ಳಿಗರಿಗೆ ನಿಖರವಾಗಿ ಮಳೆ ಮತ್ತು ನಕ್ಷತ್ರಗಳ ಬಗ್ಗೆ ಗೊತ್ತು. ಅವರಿಗೆ ಮಳೆ ಹನಿದರೆ ಹಿತ. ನಮಗೆ- ಅಂದರೆ ರಂಗಭೂಮಿಯ ಹವ್ಯಾಸಿಗಳಿಗೆ – ಅದರಲ್ಲೂ ಯಾವ ಇಲಾಖೆಗಳನ್ನೂ ಎಡತಾಕದೆ, ಫಂಡ್‌ಗಳನ್ನು ಬರಮಾಡಿಕೊಳ್ಳುವ ಬಗೆ ತಿಳಿಯದೆ ಕೇವಲ ಪ್ರೇಕ್ಷಕರ ಬರುವನ್ನೇ ನೆಚ್ಚಿ ನಾಟಕ ಮಾಡುವವರಿಗೆ ಮಳೆ ಅಂದರೆ ರಗಳೆಯ ವಿಚಾರ.

ನಗರಗಳಲ್ಲಿ ಕತ್ತೆತ್ತಿ ಆಕಾಶ ನೋಡಿ ಸವಿಯದಷ್ಟು ಬ್ಯುಸಿ ಲೈಫಿನಲ್ಲಿ ಬದುಕುತ್ತಿರುವವರ ನಡುವೆ ಬದುಕಿ ಬದುಕಿ ನಾನೂ ಅದೇ ಜಾಡು ಹಿಡಿದಿದ್ದೆ. ಆದರೆ ನಾನು ಆಕಾಶ ನೋಡಲು ಕಲಿತದ್ದೇ ರಂಗಭೂಮಿಗೆ ಪದಾರ್ಪಣ ಮಾಡಿದ ಮೇಲೆ. ಅದರಲ್ಲೂ ರಂಗತಂಡ ಕಟ್ಟಿ ನಾಟಕಗಳನ್ನು ಅಣಿ ಮಾಡಿ ರಂಗಮಂದಿರ ಗೊತ್ತು ಮಾಡಿ ಪ್ರದರ್ಶನಗಳನ್ನು ನಿಗದಿ ಮಾಡಿದ ಮೇಲೆ ನಿಜವಾದ ಸವಾಲುಗಳನ್ನು ಎದುರಿಸಲು ಕಲಿತದ್ದು. ಅದರಲ್ಲಿ ಮಳೆಯದೂ ಒಂದು ದೊಡ್ಡ ಸವಾಲು.

ಸಾಮಾನ್ಯವಾಗಿ ಜೂನ್ ಆರಂಭದಿಂದ ಮಳೆ ಶುರು ಎಂಬುದು ನಮ್ಮ ಲೆಕ್ಕಾಚಾರ. ಆದರೆ ಮಳೆ ಕೂಡ ಈಚೀಚೆಗೆ ಪಂಚಾಂಗದ ಜೊತೆ ಜಗಳ ಮಾಡಿಕೊಂಡಂತಿದೆ. ತನಗೆ ಬೇಕಾದಾಗ ಹನಿಯುತ್ತೇನೆ, ಸುರಿಯುತ್ತೇನೆ, ಇಲ್ಲ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕೂತಿರುತ್ತೇನೆ ಎಂದು ತನ್ನ ಸ್ವಾತಂತ್ರ್ಯದ ಪ್ರತಿಪಾದನೆ ಆರಂಭಿಸಿದಂತಿದೆ. ಈಗ ಬೇಸಿಗೆ, ಮಳೆ, ಚಳಿಗಾಲ ಎನ್ನುವುದೆಲ್ಲ ಕೇವಲ ಹೆಸರುಗಳು ಅಷ್ಟೇ. ಈ ಬಾರಿ ಬೇಸಿಗೆಯಲ್ಲೂ ಸಂಜೆ ಮಳೆ ಸುರಿಯಿತು. ಏನೋ ಈ ಸಲ ಬೇಸಿಗೆ ಅಷ್ಟು ಪ್ರಖರ ಅನಿಸಲಿಲ್ಲ ಅಂದುಕೊಳ್ಳುತ್ತಿದ್ದಂತೆ ಸೂರ್ಯ ಹುರುಪು ತಂದುಕೊಂಡು ಝಳಪಿಸಲು ಆರಂಭಿಸಿದ. ಅವನು ಹಾಗೆ ಮಿನುಗುತ್ತಿದ್ದಾನೆ… ಮಳೆಗಾಲ ಆರಂಭಕ್ಕೆ ಮುಂಚೆ ಒಂದಿಷ್ಟು ಷೋಗಳನ್ನ ನಿಗದಿ ಮಾಡೋಣ ಅಂದುಕೊಂಡರೆ ಮೋಡಗಳಿಗೆ ಆಕಾಶವನ್ನು ಕವರ್ ಮಾಡಿಕೊಳ್ಳುವ ತೆವಲು. ಸರಿಯಾಗಿ ಷೋ ಟೈಮಿನ ಹೊತ್ತಿಗೆ ಅಥವಾ ನಾಟಕಕ್ಕೆ ಅಂತ ಜನ ಮನೆಯಿಂದ ಹೊರಡುವ ವೇಳೆಗೆ ಮೋಡಗಳು ಒಟ್ಟುಗೂಡಿ ಮುಖ ಕಪ್ಪಗೆ ಮಾಡಿಕೊಂಡು ಹನಿಯಲು ಶುರುಮಾಡುತ್ತವೆ. ಅವಕ್ಕೆ ಆಟ. ನಮ್ಮ ಆಟದ ಕಥೆ?

ನಾಟಕಗಳ ಸಲುವಾಗಿ ಮಳೆಯನ್ನು ಹಳಿಯುವುದು ತಪ್ಪು. ಅದು ಹನಿದು ಕೆರೆಗಳು ತುಂಬಿದರೇನೇ ಫಸಲಿನ ಫಲವತ್ತತೆ. ಅನ್ನ ಎನ್ನುವ ದೈವ ನಮ್ಮ ದೇಹ ಹೊಕ್ಕು ನಮಗೆ ಚೈತನ್ಯ ಉಂಟುಮಾಡಲು ಮಳೆ ಮೂಲ ಕಾರಣ. ಈ ದೃಷ್ಟಿಯಿಂದ ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಮತ್ತು ಬೇಸಿಗೆ ಆರಂಭವಾಗುವ ಹೊತ್ತಿಗೆ ಅವರು ನಾಟಕದ ಪ್ರಾಕ್ಟೀಸ್ ಆರಂಭಿಸಿ ಒಂದು ದಿನ ಗೊತ್ತು ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ. ಆ ದಿನ ಅವರ ಇಡೀ ಅಷ್ಟು ತಿಂಗಳುಗಳ ದುಡಿಮೆಯ ದಣಿವು, ತಮ್ಮಲ್ಲಿನ ಕಲೆಯ ಅಭಿವ್ಯಕ್ತಿಯಲ್ಲಿ ನಿರಾಳ ಕಂಡುಕೊಳ್ಳುತ್ತದೆ. ನಾವುಗಳು ಇಲ್ಲಿ -ನಗರಗಳಲ್ಲಿ ಯಾವ ನಟರಿಗೂ ಹಣ ನೀಡುವುದಿಲ್ಲ. ನಾವು ಷೋ ನಿಗದಿ ಮಾಡುವವರು ಮತ್ತು ಅದರಿಂದ ಹಣ ಹೇಗೆ ದುಪ್ಪಟ್ಟು ಪಡೆಯಬೇಕು ಎಂಬ ಚಿಂತನೆಯಲ್ಲಿರುವವರು. ಹಳ್ಳಿಗಳಲ್ಲಿ ಹಾಗಲ್ಲ. ನಟರೇ ದುಡ್ಡು ಹಾಕುತ್ತಾರೆ. ದೊಡ್ಡ ಪಾತ್ರ ಬೇಕೆಂದರೆ ದುಡ್ಡು ಹೆಚ್ಚೇ ಹಾಕುತ್ತಾರೆ. ಹಾಗೆ ಹಾಕಿ ದುರ್ಯೋಧನನಾಗಿಯೋ, ರಾವಣನಾಗಿಯೋ, ಆಂಜನೇಯನಾಗಿಯೋ ವಿಜೃಂಭಿಸುತ್ತಾರೆ. ಅದು ಮುಗಿದ ಮೇಲೆ ನಾಟಕದ ಗುಂಗು ಕಳಚಿಕೊಳ್ಳುತ್ತಾರೆ. ಮತ್ತೆ ನಾಟಕದ ಉಮೇದು ಆರಂಭವಾಗುವುದು ಮತ್ತೊಂದು ಬೇಸಿಗೆ ಕಾಲಕ್ಕೇ. ಹಾಗಾಗಿ ಅವರು ಮಳೆಯನ್ನು ದೂಷಿಸುವುದಿಲ್ಲ ಮತ್ತು ಹಳಿಯುವುದೂ ಇಲ್ಲ. ಮಳೆ ಅವರಿಗೆ ಜೀವದಾಯಿನಿ.

ಆದರೆ ಇಲ್ಲಿ ನಾವು ನಗರಗಳಲ್ಲಿ ಹಳ್ಳಿಗರ ಹಾಗೆ ಸೀಸನ್ಡ್ ರೀತಿಯಲ್ಲಿ ಯೋಚಿಸುವುದಿಲ್ಲ. ನಮಗೆ ನಮ್ಮ ಮೂಲ ವೃತ್ತಿಯ ಜೊತೆ ವರ್ಷದ ಉದ್ದಕ್ಕೂ ನಾಟಕಗಳನ್ನೂ ರಂಗದ ಮೇಲೆ ಪ್ರದರ್ಶಿಸುವ ಉಮೇದು. ಈ ಭರದಲ್ಲಿ ನಮಗೆ ಋತುಮಾನಗಳು, ಅವುಗಳ ಕಾಲಚಕ್ರಗಳ ನಿಯತಿಯನ್ನು ಗೌರವಿಸಬೇಕೆನ್ನುವುದು ಮರೆತುಹೋಗಿರುತ್ತದೆ.

ನಾಟಕ ಮತ್ತು ದುಡ್ಡಿನ ಸಲುವಾಗಿ ನಾವು ಮಳೆಯನ್ನು ಅದರ ಕಾಯತ್ವ ಮರೆತು ಜರಿಯುತ್ತೇವೆ. ಬೇಸಿಗೆಯಲ್ಲೂ ಮಳೆ ಸುರಿದರೆ ಆಗ ಹಳಿಯುವುದು ಸರಿಯೇ; ಆದರೆ ಮಳೆಗಾಲದಲ್ಲೂ ಪ್ರದರ್ಶನ ನಿಗದಿ ಮಾಡಿ ಸಂಜೆ ಹೊತ್ತಿಗೆ ಮೋಡ ಕಟ್ಟಲು ಆರಂಭಿಸಿದರೆ ಗಳಿಗೆಗೊಮ್ಮೆ   ಆಕಾಶ ನೋಡುತ್ತ ಸುಪ್ತವಾಗಿ ಶಪಿಸಲು ಆರಂಭಿಸಿದರೆ ಹೇಗೆ?

ನಾನೂ ಹೀಗೇ ಹಲವು ಸಲ ಮಾಡಿದ್ದಿದೆ. ಆದರೆ ಅದೇನೋ ಈ ಮಳೆಗಾಲದ ಆರಂಭದಲ್ಲಿ ತುಂಬ ವ್ಯವಧಾನದಿಂದ ಮಳೆಯ ಪರವಾಗಿ ಮಾತು ಆರಂಭಿಸಿದ್ದೇನೆ. ಯಾಕೆಂದರೆ ಮಳೆ ದಣಿಸಿದಕ್ಕಿಂತ ಈ ನಾಟಕ ರಂಗ ಮತ್ತು ನಟರು (ಎಲ್ಲರೂ ಅಲ್ಲ) ನನ್ನ ದಣಿವಿಗೆ ಕಾರಣರಾಗಿದ್ದಾರೆ. ಇಷ್ಟು ಕಾಲ ಇವರುಗಳ ಜೊತೆ ಒಡನಾಡಿದ ಮೇಲೆ ಮಳೆ ಫಾರ್ ಬೆಟರ್ ಅನಿಸಿದೆ. ಮಳೆಗೆ ಕಿವಿಯಿಲ್ಲ. ಬೈದರೆ ಅದಕ್ಕೆ ಕೇಳಿಸುವುದೂ ಇಲ್ಲ. ಮಿಗಿಲಾಗಿ ನಮ್ಮ ಭಾಷೆ ಅದಕ್ಕೆ ತಿಳಿದಿದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಅದು ಋತುಚಕ್ರದ ಅನುಸಾರ ತನ್ನ ಕೆಲಸದಲ್ಲಿ ಮಗ್ನ. ಕೆಲವೊಮ್ಮೆ ಅದೂ ರೇಜಿಗೆ ಬಿದ್ದು ತಕರಾರು ಮಾಡಿಕೊಂಡು ಯಾವಾಗಂದರೆ ಆಗ ಸುರಿದು ತನ್ನ ಕೋಪ ತಣಿಸಿಕೊಳ್ಳುತ್ತದೆ. ಪಾಪ ಅದೂ ನಮ್ಮ ಹಾಗೆಯೇ. ಅದಕ್ಕೂ ಸಿಟ್ಟು ಬರುವುದು ಸಹಜ. ಆದರೆ ನಾವು ಇದಕ್ಕೆ ಇಂದ್ರನೆನ್ನುವ ದೇವತೆಯನ್ನು ನಿಗದಿ ಮಾಡಿ ಮಳೆಯ ವ್ಯಾಪಾರ ಕ್ರಿಯೆಯನ್ನು ಅವನ ಕೈಗೆ ಒಪ್ಪಿಸಿದ್ದೇವೆ ಎಂದು ಕಥೆ ಕಟ್ಟಿದ್ದೇವೆ. ಮಳೆ ಅಕಾಲಿಕವಾಗಿ ಸುರಿದರೆ ಅದು ಇಂದ್ರನ ಕೈವಾಡ ಎಂದುಕೊಂಡಿದ್ದೇವೆ. ನಮ್ಮವರು ತಮ್ಮ ಸಮಾಧಾನಕ್ಕೆ ಎಲ್ಲಕ್ಕೂ ಕಥೆ ಕಟ್ಟಿ ಹೇಳಿ ಒಂದು ಚೆಂದದ ಲೋಕ ನಿರ್ಮಿಸಿಕೊಂಡು ಆರಾಮಾಗಿದ್ದವರು.

ನಾವು ರಂಗಭೂಮಿಯವರು ಹೀಗಲ್ಲ. ನಟರು ಅಕಾಲಿಕ ಮಳೆಗಿಂತ ಘೋರ. ಮಳೆಯದು ಪ್ರಕೃತಿ ಜೊತೆ ವಹಿವಾಟು. ರಂಗಭೂಮಿಯಲ್ಲಿನ ನಟರದು ಮನೋವ್ಯಾಪಾರ. ಅವರ ಮನಸ್ಸುಗಳನ್ನು ಅಳೆಯುವುದು ತೂಗುವುದು ಕಷ್ಟದ ಸಂಗತಿ. ಇಷ್ಟು ದಿನಕ್ಕೆ ನಟರುಗಳಿಗಿಂತ ಮಳೆ ತುಂಬ ಚೆಂದ ಮತ್ತು ಹಿತ ಅನಿಸಲಿಕ್ಕೆ ಆರಂಭಿಸಿದೆ.

ಈ ಹೊತ್ತು ನಾನು ಹಿಂದಿನ ಕಾಲವನ್ನು ನೆನೆಯುತ್ತಿದ್ದೇನೆ. ಅದೊಂದು ಕಾಲ ಇತ್ತು. ಆಗ್ಗೆಲ್ಲ ನಾಟಕದ ಕಂಪನಿಗಳಿಗೆ ಸೇರುವುದು ಅಂದರೆ ಅವನು ಸಮಾಜಕ್ಕೆ ಬಾಹಿರ ಎನ್ನುವ ಕಲ್ಪನೆ ಇತ್ತು. ಮಿಗಿಲಾಗಿ ಓದು ಬರಹ ತಲೆಗೆ ಹತ್ತದವನು, ನಿಷ್ಪ್ರಯೋಜಕ, ಎಲ್ಲಿಯೂ ಸಲ್ಲದವರನ್ನೂ ಕಟ್ಟಕಡೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದದ್ದು ನಾಟಕದ ಕಂಪನಿಗಳಿಗೆ. ಅಲ್ಲಿ ಯಜಮಾನರ ಕೈಯೋ ಕಾಲೋ ಹಿಡಿದು ಹುಡುಗನನ್ನು ಸೇರಿಸಿದರೆ ಅಲ್ಲಿ ಟಿಕಿಟು ಹರಿಯುವ ಕೆಲಸವೋ, ಗೇಟ್ ಕೀಪರ್ ಕೆಲಸವೋ ಏನೊ ಒಂದು ಕೆಲಸ ಅಂತ ಆಗಿ ಎರಡು ಹೊತ್ತಿನ ಊಟ ನಡೆಯುತ್ತದೆ ಎನ್ನುವುದು ಲೆಕ್ಕಾಚಾರ. ಚಿಕ್ಕ ಕೆಲಸಕ್ಕೆ ಸೇರಿದ ಮೇಲೆ ಅಲ್ಲಿನ ವಾತಾವರಣದಲ್ಲಿ ಬೆರೆಯುತ್ತ ಮುಂದೆ ಅವರು ನಟರಾಗುತ್ತಾರೋ ಅಥವಾ ನುರಿತ ಮ್ಯಾನೇಜರ್ ಆಗುತ್ತಾರೋ ಅದು ಅವರ ಆಸಕ್ತಿಯನ್ನ ಅವಲಂಬಿಸಿದ್ದು. ಒಟ್ಟಿನಲ್ಲಿ ನಾಟಕದ ಕಂಪನಿಗಳಿಗೆ ಪ್ರವೇಶ ಹೀಗೆ ಆಗುತ್ತಿದ್ದದ್ದು. ಸಂಗೀತ ಜ್ಞಾನವಿದ್ದರೆ ರಂಗವೇರುವ ಅವಕಾಶ. ಇಲ್ಲದಿದ್ದರೆ ಪರದೆ ಎಳಿ, ಜಿಂಕ್ ಶೀಟ್ ಕಟ್ಟು, ದಿನನಿತ್ಯದ ಕಂಪನಿ ಮನೆ ಊಟದ ವ್ಯವಸ್ಥೆಯ ಕಡೆಗೆ ಗಮನ ಹರಿಸು.. ಒಂದಿಲ್ಲೊಂದು ಕೆಲಸ. ಅಲ್ಲಿ ಹಾಗೆ ಸೇರಿಕೊಂಡು ಮುಂದೆ ಮಿನುಗಿದವರು ಇದ್ದಾರೆ.

ಈಗ ಬೇಸಿಗೆ, ಮಳೆ, ಚಳಿಗಾಲ ಎನ್ನುವುದೆಲ್ಲ ಕೇವಲ ಹೆಸರುಗಳು ಅಷ್ಟೇ. ಈ ಬಾರಿ ಬೇಸಿಗೆಯಲ್ಲೂ ಸಂಜೆ ಮಳೆ ಸುರಿಯಿತು. ಏನೋ ಈ ಸಲ ಬೇಸಿಗೆ ಅಷ್ಟು ಪ್ರಖರ ಅನಿಸಲಿಲ್ಲ ಅಂದುಕೊಳ್ಳುತ್ತಿದ್ದಂತೆ ಸೂರ್ಯ ಹುರುಪು ತಂದುಕೊಂಡು ಝಳಪಿಸಲು ಆರಂಭಿಸಿದ. ಅವನು ಹಾಗೆ ಮಿನುಗುತ್ತಿದ್ದಾನೆ..

ಇದೆಲ್ಲ ಹುಡುಗರ ಕಥೆ. ಹೆಣ್ಣುಮಕ್ಕಳು ಆಗ್ಗೆಲ್ಲ ನಾಟಕದ ಬಗ್ಗೆ ಯೋಚಿಸುವುದೂ ತಪ್ಪು ಎಂದು ಅವರನ್ನು ನಾಟಕಲೋಕದಿಂದ ದೂರವೇ ಉಳಿಸುತ್ತಿದ್ದರು. ಹೆಚ್ಚೆಂದರೆ ಮನೆಯವರ ಜೊತೆ ಗಾಡಿಕಟ್ಟಿಕೊಂಡು ಹೋಗಿ ನಾಟಕ ನೋಡಿ ಬರುವ ಅವಕಾಶ ಅಷ್ಟೇ. ಹೆಣ್ಣುಮಕ್ಕಳು ತಮಗೂ ನಟನೆ ಇಷ್ಟ ಅಂದರೆ ಕಥೆ ಮುಗಿದ ಹಾಗೆಯೇ. ಅಥವಾ ನಾಟಕದಲ್ಲಿ ನಟನೆ ಮಾಡುವ ಹೆಣ್ಣುಗಳನ್ನು ಯಾವ ಪದದಿಂದ ಸಂಬೋಧಿಸುತ್ತಿದ್ದರು ಎಂದು ಕೇಳಿದರೆ ಭಯ ಮತ್ತು ಹೇಸಿಗೆ ಅನಿಸುತ್ತದೆ. ಹೆಣ್ಣು ಹಾಗೂ ಹೀಗೂ ರಂಗಕ್ಕೆ ಬಂದೇ ಬಿಟ್ಟಳೆಂದರೆ ಆ ಭಯಾನಕ ಪಟ್ಟದ ಜೊತೆಗೇ ಬದುಕು ದೂಡಬೇಕಾದ ಒಂದು ಘಟ್ಟ ಇತ್ತು. ಹೀಗಿದ್ದೂ ಅಂದು ನಾಟಕಗಳು ನಡೆಯುತ್ತಿದ್ದವು. ಯಾಕೆಂದರೆ ಅದು ಅವರಿಗೆ ಹೊಟ್ಟೆಪಾಡಿನ ಸಂಗತಿಯಾಗಿತ್ತು.

ಆದರೆ ಕಾಲಕ್ಕೆ ಹಳೆಯದಾದ ಮತ್ತು ಮಾಸಿದ ಬಟ್ಟೆಗಳನ್ನು ತೊಟ್ಟುಕೊಳ್ಳುವುದಕ್ಕೆ ಬೇಸರ. ಹೊಸ ಬಟ್ಟೆ ತೊಡುವ ಖಯಾಲಿ. ಅದು ತೊಟ್ಟ ಹಾಗೆ ಹೊಸತನದ ಹೊಸ ಆಲೋಚನೆಗಳೂ ಆರಂಭವಾದವು. ಶಿಕ್ಷಣ ಮುಂಚೂಣಿಗೆ ಬಂತು. ಸಮಾನತೆ ಮುಖ ಕಾಣಿಸಲು ಆರಂಭವಾಯಿತು. ನಾಲ್ಕು ಅಕ್ಷರ ಕಲಿ ಎಂದು ಶಾಲೆಗೆ ಮಕ್ಕಳನ್ನು ದೂಡುವ ಘಟ್ಟವೂ ಬಂತು. ಹುಡುಗರು, ಹೆಣ್ಣುಮಕ್ಕಳು ತೊಡಕುಗಳನ್ನು ದಾಟಿ ಓದಿದರು. ಶಿಕ್ಷಣ ಅವರೆಲ್ಲರಲ್ಲಿ ಧೈರ್ಯ ತುಂಬಿತು. ಕಟ್ಟುಕಟ್ಟಳೆಗಳು ಕರಗುತ್ತ ಬಂದವು. ನಟನೆಯನ್ನೇ ಪ್ರಧಾನವಾಗಿ ಪರಿಗಣಿಸಿಕೊಳ್ಳಬೇಕಾ? ಸೈ ಎಂದು ನುಗ್ಗಿದರು. ಇಲ್ಲ ಇಲ್ಲ ಅದು ಸೆಂಕಡರಿಯಾಗಿರಲಿ ಅಂದವರೂ ರಂಗಕ್ಕೆ ಬಂದರು. ಕಾಲ ಹೊಸ ಬಟ್ಟೆಗಳನ್ನು ತೊಡುವ ಕಾಯಕದಲ್ಲಿ ನಿರತವಾಗಿತ್ತು.

ಇದು ಸಂತೋಷದ ಸಂಗತಿ. ಒಂದು ಕಾಲದ ಕಟ್ಟಳೆಗಳನ್ನು ಮೀರಲಿಕ್ಕೆ ಶಿಕ್ಷಣ ಎನ್ನುವ ದಿವ್ಯ ಅಸ್ತ್ರ ತನ್ನ ಕರಾಮತ್ತು ಪ್ರದರ್ಶಿಸಿತ್ತು. ಜಾತಿ ಕಟ್ಟಳೆಗಳನ್ನು ದಾಟಲಿಕ್ಕೆ, ಸ್ಪೃಶ್ಯ ಅಸ್ಪೃಶ್ಯ ಇತ್ಯಾದಿ ಅನಿಷ್ಟಗಳನ್ನ ಮರೆತು ಒಗ್ಗೂಡುವ ಬಗೆಯನ್ನು ರಂಗಭೂಮಿ ಕಲಿಸುತ್ತದೆ. ಈ ದೃಷ್ಟಿಯಿಂದ ಎಲ್ಲವೂ ಸರಿ.

ಎಲ್ಲ ಅಪಸವ್ಯಗಳನ್ನು ದಾಟಿ ಮುಕ್ತವಾಗಿ ಮತ್ತು ಪ್ರಧಾನ ಭೂಮಿಕೆಯನ್ನಾಗಿ ನಟನೆಯನ್ನು ಆರಿಸಿಕೊಂಡು ಕಲಿಯುವ ಅವಕಾಶ ಕಾಲದ ಹೊಸ ಬಟ್ಟೆಯ ಪ್ರಭಾವದಿಂದ ದೊರೆಯಿತು. ನಟನೆಯನ್ನು ಸೆಕೆಂಡರಿಯಾಗಿ ಸ್ವೀಕರಿಸಿದವರಿಗೂ ಇದೇ ಸವಲತ್ತು. ಆದರೆ ಈ ಎರಡು ಪಂಗಡಗಳ ಅಪ್ರೋಚ್‌ಗಳು ಬರಬರುತ್ತ ವಿಚಿತ್ರ ಅನಿಸಲಿಕ್ಕೆ ಆರಂಭವಾದವು.

ನಟನೆಯನ್ನು ಪ್ರಧಾನ ಭೂಮಿಕೆಯಾಗಿ ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿಯ ಬಯಸುವವರು ಮೊದಲಿಗೆ ಯಾವುದರಿಂದ ಪ್ರಭಾವಿತರಾಗಿರುತ್ತಾರೆ ಎಂದು ನಾನು ಹಲವು ಸಲ ಕೇಳಿಕೊಂಡಿದ್ದೇನೆ. ನಟಿಸಲಿಕ್ಕೆ ಯಾರಾದರೊಬ್ಬರು ಇನ್ಸ್ಪೈರಿಂಗ್ ಪರ್ಸನಾಲಿಟಿ ಇರಬೇಕಲ್ಲ. ಪ್ರಸಿದ್ಧ ರಂಗಶಾಲೆ ಸೇರುವ ಮೊದಲು ಅವರ ಹಳ್ಳಿಯ ಯಾರಾದರೂ ನಟರನ್ನ ಹೆಸರಿಸುವುದನ್ನು ಕೇಳಿದ್ದೇನೆ. ಅಥವಾ ತಾವು ನೋಡಿದ ಹಳೇ ಸಿನಿಮಾ ನಟರ ಹೆಸರು ಹೇಳುವುದನ್ನು ಕೇಳಿದ್ದೇನೆ.

ಆದರೆ ಅವರು ಒಮ್ಮೆ ಪ್ರಸಿದ್ಧ ರಂಗಶಾಲೆಯಲ್ಲಿ ಹಾಗೂ ಹೀಗೂ ನೋಂದಣಿಯಾದರೆಂದರೆ ಅಲ್ಲಿಂದ ಅವರ ಆಟಿಟ್ಯೂಡ್ ಶುರುವಾಗುತ್ತದೆ. ಇವರ ನಟನಾ ಕಲಿಕೆಗೆ ನಾಟ್ಯಶಾಸ್ತ್ರ ಪೂರಕ ಸಾಮಗ್ರಿ ಒದಗಿಸಿರುತ್ತದೆ, ಸರಿ. ಕಲಿಯಲಿ. ಆದರೆ ಅದನ್ನು ಕಲಿಯುತ್ತ ಆ ಎಲ್ಲವನ್ನ ನಿರ್ವಚಿಸುವ ಬಗೆಯಲ್ಲಿ ಯಾವುದೋ ಒಂದು ವಿಚಿತ್ರ ಟ್ರಾನ್ಸ್‌ಗೆ ಒಳಗಾದವರಂತೆ ಆಡುತ್ತಾರೆ. ಇದು ಮೊದಲ ಘಟ್ಟ.

ಎರಡನೆ ಘಟ್ಟದಲ್ಲಿ ತಮ್ಮ ಅಧ್ಯಯನ ನಾಟ್ಯಶಾಸ್ತ್ರ ದಾಟಿ ಮುಂದುವರಿದಂತೆ ಅವರಿಗೆ ಹಲವು ಪಾಶ್ಚಾತ್ಯರ ಹೆಸರುಗಳು ಮತ್ತು ಅವರ ಕೆಲಸಗಳು ಪರಿಚಯವಾಗುತ್ತದೆ. ಅದು ಆದದ್ದೇ ತಡ ಅವರು ತಮ್ಮ ಅಸ್ಮಿತೆ ಮರೆತು ಪಾಶ್ಚಾತ್ಯರಿಗೇ ಜೋತುಬೀಳುತ್ತಾರೆ. ನಟನೆಯಲ್ಲಿ ಮೆಥೆಡ್ಡು ಎಂದು ಮಾತು ಆರಂಭಿಸುತ್ತಾರೆ. ಬಾಯಿಬಿಟ್ಟರೆ ಸ್ತಾನಿಸ್ಲಾಸ್ಕಿ, ಗ್ರೋಟೋವ್‌ಸ್ಕಿ ಎನ್ನುತ್ತಾರೆ. ಅವರುಗಳು ಪ್ರತಿಪಾದಿಸಿದ ನಟನಾ ಸಿದ್ಧಾಂತಗಳ ಕಿಟಕಿಯಿಂದಲೇ ಜಗತ್ತನ್ನು ಕಾಣಲು ಆರಂಭಿಸುತ್ತಾರೆ. ಆ ಸಿದ್ಧಾಂತಗಳಿಗೆ ಬದ್ಧರಾಗಿರುವವರು ಮಾಡುವುದು ಮಾತ್ರ ನಾಟಕ, ಉಳಿದವರು ಮಾಡುವ ನಾಟಕಗಳು ನಾಟಕಗಳೇ ಅಲ್ಲ ಎನ್ನುವ ನೋಷನ್ ಬೆಳೆಸಿಕೊಳ್ಳುತ್ತಾರೆ. ಅವರು ಬೇರೆಯವರ ಪ್ರಯೋಗಗಳಿಗೆ ಸಾಧಾರಣವಾಗಿ ಬರುವುದಿಲ್ಲ. ಹಾಗೂ ಹೀಗೂ ಬಂದರೆ ಅದರಲ್ಲಿ ಪಾಶ್ಚಾತ್ಯ ಸಿದ್ಧಾಂತಗಳ ಭಾರ ಹೆಗಲ ಮೇಲೆ ಹೊತ್ತೇ ಬರುತ್ತಾರೆ. ಅವರಿಗೆ ನಾಟಕಗಳಲ್ಲಿ ಕಳರಿಯ ದೇಹಭಾಷೆ, ರಾಗದ ರೀತಿಯ ಮಾತು ಇರಲೇಬೇಕು. ಇಲ್ಲದಿದ್ದರೆ ಅವರ ಪ್ರಕಾರ ನಾಟಕ ಆಗಲಾರದು.

ಸಿನಿಮಾಗೆ ಬಂದರೆ ಅಲ್ಲೂ ಪಾಶ್ಚಾತ್ಯ ಕಿಟಕಿಗಳೇ ಅವರಲ್ಲಿ ಸದ್ದು ಮಾಡುತ್ತ ಬಡಿದುಕೊಳ್ಳುತ್ತಿರುತ್ತವೆ. ಬಾಯಿಬಿಟ್ಟರೆ ಸ್ಪಿಲ್‌ಬರ್ಗ್ ಹಾಗೂ ಕ್ರಿಸ್ಟೋಫರ್ ನೊಲಾನ್ ಬಗ್ಗೆ ಮಾತು. ಇಲ್ಲದಿದ್ದರೆ ಕೊರಿಯನ್ ಮೂವಿಸ್ ಎಂದು ಮಾತು ಆರಂಭ. ಇವರೆಲ್ಲರ ಸಿನಿಮಾಗಳು ಗ್ರೇಟ್, ಒಪ್ಪೋಣ. ಆದರೆ ನಮ್ಮಲ್ಲೂ ಅಗಾಧ ಕೆಲಸ ಮಾಡಿರುವವರನ್ನು ಕಡೆಗಣಿಸಿ ಪಾಶ್ಚಾತ್ಯರನ್ನು ದೊಡ್ಡವರನ್ನಾಗಿ ಕಾಣುವ ಇರಾದೆ ಯಾಕೆ ಎನ್ನುವುದು ನನ್ನ ಪ್ರಶ್ನೆ. ಇದು ಅವರ ತಪ್ಪಲ್ಲ.

ತಪ್ಪು ಇರುವುದು ಕಲಿಸುವ ರಂಗಶಾಲೆಗಳಲ್ಲಿ. ಅವರು ನಟನಟಿಯರಲ್ಲಿ ವಿಚಿತ್ರವಾದ ಅಫೀಮಿನ ರೀತಿಯ ಹುಚ್ಚು ಮಹತ್ವಾಕಾಂಕ್ಷೆಯನ್ನು ತುಂಬಿಬಿಡುತ್ತಾರೆ. ಆ ಮಹತ್ವಾಕಾಂಕ್ಷೆಯ ಹುಚ್ಚು ಬಿಡಿಸಿಕೊಂಡು ಅವರು ಹೊರಬಂದು ನಮ್ಮತನದ ಜಗತ್ತನ್ನು ನೋಡುವುದು ಕಷ್ಟ ಎನ್ನುವಂತೆ ತಯಾರಾಗಿಬಿಡುತ್ತಾರೆ. ನಟನೆಗೆ ಸಂಬಂಧಿಸಿದಂತೆ ಎಂಥ ದಿವ್ಯವಾದ ಹುಚ್ಚು ಬೆಳೆಸಿಕೊಂಡಿರುತ್ತಾರೆ ಎನ್ನುವುದಕ್ಕೆ ನಾನು ಕೇಳಿದ ಒಂದು ಸಂಗತಿ ಹೇಳುತ್ತೇನೆ.

ಅದೊಂದು ನಾಟಕ. ಅದರಲ್ಲೊಂದು ಪಾತ್ರ. ಆ ಪಾತ್ರಕ್ಕೆ ಡ್ರಾಪಿಂಗ್ ಶೋಲ್ಡರ್ಸ್ ಇರಬೇಕು ಎನ್ನುವುದು ನಿರ್ದೇಶಕರ ಆಂಬೋಣ. ಡ್ರಾಪಿಂಗ್ ಶೋಲ್ಡರ್ಸ್ ಕೆಲವರಿಗೆ ಇರುತ್ತದೆ, ಕೆಲವರಿಗೆ ಇರುವುದಿಲ್ಲ. ಆ ಬಗೆಯ ಭುಜ ಇರುವವರು ಆ ಪಾತ್ರಕ್ಕೆ ಹೊಂದದೆ ಹೋಗಬಹುದು. ಆದರೆ ಆ ಪಾತ್ರಕ್ಕೆ ಹೊಂದುತ್ತಾರೆ ಎನ್ನುತ್ತಾರೆ ಎನ್ನುವವರಿಗೆ ಡ್ರಾಪಿಂಗ್ ಶೋಲ್ಡರ್ಸ್ ಇರಲೇಬೇಕು ಎಂದೇನಿಲ್ಲ. ‘ನೀನು ಆ ಪಾತ್ರಕ್ಕೆ ಹೊಂದುತ್ತಿ ಆದರೆ ನಿನಗೆ ಡ್ರಾಪಿಂಗ್ ಶೋಲ್ಡರ್ಸ್ ಇಲ್ಲ..’ ಎಂದು ಹೇಳಿದ್ದಕ್ಕೆ ಒಬ್ಬರು ತಮ್ಮ ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ಆರಂಭಿಸಿದರಂತೆ. ಅದೂ ಹೇಗೆ ಅಂದರೆ ಭುಜಗಳು ಇಳಿಬೀಳಬೇಕೆಂದರೆ ಎರಡೂ ಕೈಗಳಿಗೆ ಡಂಬಲ್ಸ್ ಕಟ್ಟಿಕೊಂಡು ತಿರುಗುವುದು. ಅವು ಭಾರದಿಂದ ಜಗ್ಗುತ್ತಿದ್ದರೆ ಇವರಿಗೆ ಖುಷಿ. ಆದರೆ ಊಟದ ಕಥೆ? ಮಿಕ್ಕ ನಟರು ಆ ಮಹತ್ವಾಕಾಂಕ್ಷೆಯ ನಟ ಅಥವಾ ನಟಿಗೆ ತುತ್ತು ತಿನ್ನಿಸುವುದಂತೆ! ಅವರು ತಿನ್ನುವುದಂತೆ! ಯಾಕೆಂದರೆ ಅವರಿಗೆ ಡಂಬಲ್ಸ್ ಭಾರದಲ್ಲಿ ಕೈಗಳನ್ನು ಮೇಲೆತ್ತಲೂ ಆಗದ ಸ್ಥಿತಿ. ಹಾಗೆ ಪ್ರಯೋಗಕ್ಕೆ ಒಡ್ಡಿಕೊಂಡು ತಮ್ಮ ಭುಜಗಳನ್ನು ಇಳಿಬಿಟ್ಟುಕೊಂಡು ನಟಿಸಿದ್ದರ ಬಗ್ಗೆ ಕೆಲವರು ನನ್ನ ಬಳಿ ಉತ್ಕಂಠದಿಂದ ಮಾತಾಡಿದ್ದರ ಬಗ್ಗೆ ಕೇಳಿದ್ದೇನೆ.

ಇದು ಅತಿರೇಕ ಅಲ್ಲವೇ? ಹುಚ್ಚು ಮಹತ್ವಾಕಾಂಕ್ಷೆ ಅಲ್ಲವೇ ಎಂದು ನಾನು ಅವರನ್ನು ಕೇಳಲೂ ಮುಂದಾಗಲಿಲ್ಲ. ಯಾಕೆಂದರೆ ಅವರು ಏನು ವಾದಿಸುತ್ತಾರೆ ಎನ್ನುವುದು ನನಗೆ ಮೊದಲೇ ತಿಳಿದಿತ್ತು. ನನ್ನ ಪ್ರಶ್ನೆ ಇಷ್ಟೇ- ರಂಗಪ್ರಸ್ತುತಿಗೆ ದೇಹವನ್ನು ಗರಿಷ್ಠ ಎಷ್ಟರ ಮಟ್ಟಿಗೆ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕೋ ಅಷ್ಟೇ ಒಡ್ಡಿಕೊಳ್ಳಬೇಕು. ಮಹತ್ವಾಕಾಂಕ್ಷೆಯ ಹುಚ್ಚಿನಲ್ಲಿ ಅತಿರೇಕ ಪ್ರದರ್ಶಿಸಲು ಹೋಗುವ ಅಗತ್ಯ ಇದೆಯೇ? ಭಾರ ಹೆಚ್ಚಿ ನರಮಂಡಲದ ವ್ಯವಸ್ಥೆ ಏರುಪೇರಾದರೆ ಏನಾಗಬಹುದು?

ಈ ಎಲ್ಲ ಯೋಚಿಸುವುದನ್ನು ರಂಗಶಾಲೆಗಳು ಕಲಿಸುವುದಿಲ್ಲ. ನಟ ಅಂದರೆ ಮೇಲಿನಿಂದ ಇಳಿದುಬಂದವನು ಎಂಬಂತೆ ಬಿಂಬಿಸುವುದನ್ನು ಕಲಿಸುವುದು ಬಿಟ್ಟು ದೇಹವನ್ನು ಭವಿಷ್ಯತ್ತಿನ ದೃಷ್ಟಿಯಿಂದಲೂ ಸ್ವಸ್ಥವಾಗಿಟ್ಟುಕೊಂಡೇ ನಟಿಸುವುದು ಮುಖ್ಯ ಎಂದು ಕಲಿಸಬೇಕು. ಆದರೆ ಈ ಎಲ್ಲಕ್ಕೆ ಅಡ್ಡಗೋಡೆಯಾಗಿ ನಿಲ್ಲುವುದು ಮತ್ತೆ ಅತಿರೇಕದ ಮಹತ್ವಾಕಾಂಕ್ಷೆಯ ಹುಚ್ಚು ಎಂಬುದು ಸತ್ಯ.

ಇಂಥ ಪ್ರಸಂಗಗಳನ್ನು ಮೊದಲು ಕೇಳುತ್ತಿದ್ದಾಗ ಸಿಟ್ಟು ಬರುತ್ತಿತ್ತು. ಆದರೆ ಈಗೀಗ ಒಳಗೊಳಗೇ ನಕ್ಕು ಸುಮ್ಮನಾಗುವ ಬಗೆ ಕಲಿತುಕೊಂಡಿದ್ದೇನೆ. ಮತ್ತು ನಟನಾ ಮಹತ್ವಾಕಾಂಕ್ಷಿಗಳ ಸಿದ್ಧಾಂತಗಳಿಂದ ದೂರ ಉಳಿದು ನಾಟಕಗಳನ್ನು ನೋಡುವ ಪ್ರಯತ್ನ ಮಾಡುತ್ತಿದ್ದೇನೆ.

ಮೇಲೆ ತಿಳಿಸಿದ್ದು ಒಂದು ಬಗೆ. ನಟನೆಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡಿರುವವರ ಅತಿರೇಕದ ಮಿಡುಕಾಟದ ಕಥೆ. ಇವರೆಲ್ಲ ಕ್ಲಾಸಿಕ್ಸ್ ಮತ್ತು ಕ್ಲಾಸಿಸಂ ಬೆನ್ನು ಹತ್ತಿ ಹೀಗೆ ಆಡುವವರು.

ಇವರನ್ನು ಹೊರತುಪಡಿಸಿ ಮತ್ತೊಂದು ವರ್ಗ ಇದೆ. ಅವರು ನಟನೆಯನ್ನು ಸೆಕೆಂಡರಿಯಾಗಿ ತೆಗೆದುಕೊಂಡಿರುವವರು. ಮೂಲ ವೃತ್ತಿ ಬೇರೆಬೇರೆ. ಇವರನ್ನು ನಾನು ರೇಗಿಸಲಿಕ್ಕೆ ಮತ್ತು ತಮಾಷೆಗೆ ‘ಸಂಜೆ ನಟರು’ ಎನ್ನುತ್ತಿರುತ್ತೇನೆ. ಇವರು ಕ್ಲಾಸಿಕ್ಸ್‌ಗಳನ್ನ ಸೋಕಿಸಿಕೊಂಡಿರುವುದಿಲ್ಲ. ಇವರದೇನಿದ್ದರೂ ಮಾಸ್. ಇದು ಸಿನಿಮಾಗಳನ್ನ ನೋಡಿ ಹುಟ್ಟಿಬಂದಿರುವ ಪ್ರೀತಿ. ಕೆಮರಾ ಮುಂದೆ ಕಾಣಿಸಿಕೊಂಡು ದೊಡ್ಡ ತೆರೆಯಲ್ಲಿ ಮಿಂಚಬೇಕು ಎನ್ನುವುದು ಇವರಲ್ಲಿರುವ ಸುಪ್ತ ಆಸೆ. ಆದರೆ ಸಿನಿಮಾದವರು ಮೊದಲು ಕೇಳುವ ಪ್ರಶ್ನೆಯೇ ಬೇರೆ. ಅದು – ‘ನಿಮಗೆ ಆ್ಯಕ್ಟಿಂಗ್‌ನಲ್ಲಿ ಪರಿಶ್ರಮ ಇದೆಯೇ? ನಾಟಕಗಳಲ್ಲೇನಾದರೂ ಮಾಡಿದ್ದೀರಾ?’.

ಇದು ಕೇಳುತ್ತಾರೆ ಎಂದು ಖಾತ್ರಿ ಆಗುತ್ತಲೇ ಸಂಜೆ ನಟರು ರಂಗತಂಡಗಳನ್ನು ಹುಡುಕಿಕೊಂಡು ಬರುತ್ತಾರೆ. ಆರಂಭದಲ್ಲಿ ಕೊಟ್ಟ ಪಾತ್ರಗಳನ್ನು ಮಾಡುತ್ತಾರೆ. ಯಾಕೆಂದರೆ ಎಂಟ್ರಿ ಮುಖ್ಯ. ಒಂದಿಷ್ಟು ಕಾಲ ಕಳೆದ ಮೇಲೆ ಡಿಮ್ಯಾಂಡುಗಳು ಆರಂಭವಾಗುತ್ತವೆ. ಮೊದಲು ಅವರ ಮಿತಿಗಳನ್ನು ಗುರುತಿಸಿಕೊಳ್ಳದೆ ತಮ್ಮ ಡಿಮ್ಯಾಂಡುಗಳನ್ನು ಶಿವಗಂಗೆ ಬೆಟ್ಟದ ತುದಿ ನೋಡಲು ತರಬೇತು ಮಾಡಿರುತ್ತಾರೆ.

ಆದರೆ ಅವರಿಗೆ ಗೊತ್ತಿಲ್ಲದ ಸಂಗತಿಯೊಂದು ಇರುತ್ತದೆ. ನಿರ್ದೇಶಕ ಈ ಸಂಜೆ ನಟರ ಜೊತೆ ಒಡನಾಡುವಾಗ ಅನೇಕ ಸಂಗತಿಗಳನ್ನು ಅಭ್ಯಸಿರುತ್ತಾನೆ. ಆ ಪ್ರಕಾರ ಅವರಿಗೆ ಪಾತ್ರ ಹಂಚುವ ಕಾಯಕ ಅವನದು.

ಆದರೆ ನಟರು ಒಂದೆರಡು ನಾಟಕಗಳಲ್ಲಿ ಅಭಿನಯಿಸಿದ ಕೂಡಲೇ ತಮ್ಮ ಸಾಮರ್ಥ್ಯ ಮೀರಿದ ಪಾತ್ರ ಸಿಗಲಿ ಎಂದೇ ಹಪಹಪಿಸುತ್ತಿರುತ್ತಾರೆ. ಕೆಲವರಿಗೆ ದೇಹದಾರ್ಢ್ಯ ಸಪೂರವಾಗಿರುತ್ತದೆ. ಆದರೆ ಸಂಭಾಷಣೆಯನ್ನು ಭಾವಪೂರ್ಣವಾಗಿ ಹೇಳುವ ಸಾಮರ್ಥ್ಯವಿರುವುದಿಲ್ಲ. ಕೆಲವರು ಗಿಡ್ಡಗಿರುತ್ತಾರೆ. ಡೈಲಾಗುಗಳನ್ನು ಪಟಪಟಾಂತ ಹೇಳುತ್ತಾರೆ. ಅವರಲ್ಲಿ ಕ್ಯಾಲಿಬರ್ ಇದ್ದರೂ ಅವರ ದೇಹದ ಎತ್ತರ, ಗಾತ್ರ, ಅವರು ಕಾಣುವ ಬಗೆ, ರಂಗದ ಮೇಲೆ ಅವರ ಪ್ರೆಸೆನ್ಸ್ ಹೇಗೆ ಕಾಣುತ್ತದೆ ಎಲ್ಲ ಅಳೆದು ಅನಿವಾರ್ಯವಾಗಿ ಪಾತ್ರ ನಿಗದಿ ಮಾಡಬೇಕಾಗುತ್ತದೆ. ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುವ ಬಗೆಯನ್ನು ಕಲಿಯಬೇಕೆನ್ನುವ ಇರಾದೆ ಬರಬರುತ್ತ ಮಾಯವಾಗಿ ಸಂಜೆ ನಟರು ಚಿಕ್ಕ ಪಾತ್ರಗಳನ್ನು ನಾಜೂಕಾಗಿ ತಿರಸ್ಕರಿಸುವ ಬಗೆ ಕಂಡುಕೊಳ್ಳುತ್ತಾರೆ. ರಿಹರ್ಸಲ್‌ಗಳಿಗೆ ಬರುವುದನ್ನು ತಪ್ಪಿಸುತ್ತಾರೆ. ತಮ್ಮೊಳಗೆ ಒಂದು ಸುರಂಗ ಮಾರ್ಗ ನಿರ್ಮಿಸಿಕೊಂಡು ಅದರೊಳಗೆ ತಮ್ಮ ಮನಸ್ಸನ್ನ ಚಲಿಸಲು ಬಿಟ್ಟು ಹೊರಗೆ ನಗಲೋಬಿಡಲೋ ಎಂದು ನಗುತ್ತ ರಿಹರ್ಸಲ್‌ನಲ್ಲಿ ಕೂತಿರುತ್ತಾರೆ. ಸುರಂಗದೊಳಗಿನ ಒತ್ತಡ ಹೆಚ್ಚಾದರೆ ತಂಡ ಬಿಟ್ಟು ಹೋಗುತ್ತಾರೆ. ಅವರಿಗೆ ನಿರ್ದೇಶಕನ ಕಾಣ್ಕೆ ಎಲ್ಲ ನಗಣ್ಯ.

ಒಂದು ಕಡೆ ಡಂಬಲ್ಸ್ ಕೈಗೆ ಕಟ್ಟಿಕೊಂಡು ಮಹತ್ವಾಕಾಂಕ್ಷೆಯ ಭ್ರಮೆಯಲ್ಲಿ ಓಡಾಡುವವರು; ಮತ್ತೊಂದು ಕಡೆ ಬಿಗ್ ಸ್ಕ್ರೀನ್ ಪ್ರೆಸೆನ್ಸ್ ಹುಚ್ಚಿನಲ್ಲಿ ತಮ್ಮ ಮಿತಿ ಮರೆತು ದೊಡ್ಡ ಪಾತ್ರ ಹಂಬಲಿಸಲು ಸುರಂಗ ತೋಡುವವರು.

ನನಗಿನ್ನೂ ಡಂಬಲ್ಸ್ ಕಟ್ಟಿಕೊಳ್ಳುವವರು ಸಿಕ್ಕಿಲ್ಲ. ಆದರೆ ಸುರಂಗ ತೋಡುವ ಕಾಯಕದಲ್ಲಿರುವವರು ಸಾಕಷ್ಟು ಕಾಣುತ್ತಿದ್ದಾರೆ. ಈ ಎಲ್ಲದರ ನಡುವೆ ಮಳೆ ಮತ್ತು ಮಳೆಗಾಲದ ಆರಂಭ…

ಈ ಮಳೆ ಮತ್ತು ಸುರಂಗ ತೋಡುವ ನಟರುಗಳ ನಡುವೆ ಯಾವುದು ಬೆಟರ್ ಎಂದು ಯೋಚಿಸುತ್ತಲೇ ಇದ್ದೇನೆ. ಮಳೆಯೇ ಉತ್ತಮ ಅನಿಸುತ್ತಿದೆ..