ತಾನು ಕತೆಗಾರನೆಂದು ಹೇಳಿಕೊಳ್ಳುವ ಮುನವ್ವರ್‌ ಜೋಗಿಬೆಟ್ಟು ಅವರ ಅಂತರಂಗದಲ್ಲೊಂದು ಹಾಡಿದೆ. ಅದು ಅವರ ಪರಿಸರ ಪ್ರೀತಿಯ ಹಾಡು. ಅದೇ ಪ್ರೀತಿಯಲ್ಲಿ ಅವರು ಕೆಂಡಸಂಪಿಗೆಗೆ ಸರಣಿ ಬರಹಗಳನ್ನು ಬರೆಯುತ್ತಾ ತಮ್ಮ ಬರವಣಿಗೆಯನ್ನು ಮತ್ತಷ್ಟು ಚಂದಮಾಡಿಕೊಂಡರು. ʻಇಷ್ಕಿನ ಒರತೆಗಳುʼ ಎಂಬ ಕವನ ಸಂಕಲನ ಪ್ರಕಟಿಸಿದರು. ನಂತರ ಕಾದಂಬರಿಯಲ್ಲಿಯೂ ಕತೆಗಳಲ್ಲಿಯೂ ಮುಳುಗೇಳುತ್ತಾ, ಬಹುಮಾನಗಳನ್ನು ಪಡೆಯುತ್ತ ಇದ್ದ ಅವರಿಗೆ ಇಂದು ವಿಜಯಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ಸಾಮಾನ್ಯವಾಗಿ ಕಡಿಮೆ ಮಾತನಾಡುವ ಮುನವ್ವರ್‌, ಈ ಬಹುಮಾನ ಬಂದ ಖುಷಿಯಲ್ಲಿ ತುಂಬಾ ಮಾತನಾಡಿದರು. ಅವರು ಸಾಹಿತ್ಯ ಲೋಕ ಪ್ರವೇಶಿಸಲು ಕಾರಣವಾದ ವಿಚಾರಗಳನ್ನು ಹೇಳಿಕೊಂಡರು. ಅವುಗಳನ್ನು ಹೆಕ್ಕಿ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ ಕೋಡಿಬೆಟ್ಟುರಾಜಲಕ್ಷ್ಮಿ 

ಬಹುಮಾನ ಬಂದ ಖುಷಿಯಲ್ಲಿದ್ದೀರಾ?

ಖುಷಿಯಾಗಿದೆ ನಿಜ. ಸುಮಾರು ಆರೇಳು ವರ್ಷಗಳ ಹಿಂದೆ ಇದೇ ವಿಜಯ ಕರ್ನಾಟಕಕ್ಕೆ ಒಂದು ಕತೆ ಬರೆದಿದ್ದೆ. ಆಗಿನ್ನೂ ಕತೆಯ ಉದ್ದ ಅಗಲ ಎಷ್ಟಿರಬೇಕು ಎಂಬ ಪರಿಕಲ್ಪನೆ ಇದ್ದಿಲ್ಲ. ಹಾಗಾಗಿ ದೀರ್ಘ ಕತೆಯನ್ನು ನೋಡಿ, ಅಲ್ಲಿನವರು ಫೋನ್ ಮಾಡಿದ್ದರು. ಈ ಕತೆಯನ್ನು ನಾವು ಸ್ಪರ್ಧಾ ವಿಭಾಗಕ್ಕೆ ಪರಿಗಣಿಸುತ್ತೇವೆ ಎಂದು. ʻಅರೆ ..ಕತೆಗಳಿಗೆ ಸ್ಪರ್ಧೆ ಇದೆಯಾ..ʼ ಎಂದು ನಾನು ಒಪ್ಪಿಗೆ ಸೂಚಿಸಿದೆ. ಮತ್ತೂ ಅಚ್ಚರಿಯೆಂದರೆ ಅದೇ ಕತೆಗೆ ಸಮಾಧಾನಕರ ಬಹುಮಾನ ಬಂತು. ಆಗ ಶುರುವಾಯಿತು ನೋಡಿ ನನ್ನೊಳಗಿನ ಕತೆಗಾರರನ್ನು ಹುಡುಕುವ ಕೆಲಸ. ನನ್ನ ಬರಹದ ಹಾದಿಯು ಹೀಗೆ ಏರು ತಗ್ಗುಗಳ ನಡುವೆ ಸಾಗುತ್ತಾ ಇದೆ.

ಬರಹಲೋಕದ ಪ್ರಯಾಣವನ್ನು ಕಂಡು ಮನೆಯ ಸದಸ್ಯರು ಏನಂತಾರೆ?

ಬರಹಲೋಕಕ್ಕೆ ಕಾಲಿಡಲು ಕಾರಣವೇ ನನ್ನ ಬಾಪಾ ಬಿ. ಮಹಮ್ಮದ್ದ ಮತ್ತು ಉಮ್ಮ ಬೀಫಾತಿಮಾ. ಬಾಲ್ಯದಲ್ಲಿ ಉಮ್ಮ ಅವರಿಗೆ ಸುಧಾ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಬರುವ ಧಾರಾವಾಹಿಗಳನ್ನು ಓದಲು ಭಾರೀ ಆಸೆ. ಆದರೆ ಉಮ್ಮ ನಿಧಾನವಾಗಿ ಓದುತ್ತಿದ್ದರು. ಕತೆಯನ್ನು ತಿಳಿಯುವ ಆಸೆ ಮಾತ್ರ ವೇಗದ್ದು. ಹಾಗಾಗಿ ಉಮ್ಮ, ನನ್ನ ಅಕ್ಕನಿಗೆ ಕತೆ ಓದಿ ಹೇಳುವಂತೆ ಸೂಚಿಸುತ್ತಿದ್ದರು. ಅಕ್ಕ ಗಟ್ಟಿಯಾಗಿ ಕತೆ ಓದುವುದು, ನಾವೆಲ್ಲಾ ಕುಳಿತು ಕತೆ ಕೇಳುವುದು, ಉಮ್ಮ ಬೀಡಿ ಕಟ್ಟುತ್ತಾ ಕತೆ ಕೇಳುವುದು. ಅಕ್ಕ ಓದುವುದು ಮುಗಿದರೆ, ಉಮ್ಮ ರೇಡಿಯೋ ಆನ್ ಮಾಡುತ್ತಿದ್ದರು. ಮತ್ತೆ ಅದನ್ನು ಕೇಳುತ್ತಾ ನಮ್ಮ ಕೆಲಸಗಳನ್ನು ಮಾಡುವುದು. ಹೀಗಿತ್ತು ನನ್ನ ಬಾಲ್ಯ. ಉಮ್ಮನಿಗೆ ಪರಿಸರವೆಂದರೆ ಬಹುಪ್ರೀತಿ. ಮರದಲ್ಲಿ ಗೂಡು ಕಟ್ಟಲು ಬರುವ ಹಕ್ಕಿಗಳನ್ನು ʻಶ್.. ಇಲ್ಲಿ ಬಾ ನೋಡುʼ ಎಂದು ಮೆತ್ತಗೆ ಕರೆದು ತೋರಿಸುತ್ತಿದ್ದರು. ಹಾವೊಂದು ಬಂದರೆ ಅದರ ಹೆಸರು ಪೂರ್ವಾಪರ ಹೇಳುತ್ತಿದ್ದರು. ಎಲೆ, ಹಸಿರು, ನದಿ.. ಹುಲ್ಲು ಅಂತೆಲ್ಲ ಅಮ್ಮ ಪರಿಸರದ ಬಗ್ಗೆ ಬಹಳ ಕುತೂಹಲವುಳ್ಳ ಮಹಿಳೆ. ಉಮ್ಮನ ಸ್ವಭಾವ ಹೀಗಾದರೆ ಬಾಪ್ಪನೋ ಓದಿನ ಬೆನ್ನು ಬಿದ್ದ ಮಹಾನ್ ಓದುಗ ಎನ್ನಬೇಕು. ನಾನು ಒಂದು ಪುಸ್ತಕ ತಂದಿಟ್ಟರೆ, ಅದನ್ನು ಕೈಗೆತ್ತಿಕೊಳ್ಳುವ ಮುನ್ನ ಬಾಪ ಗಬಕ್ಕೆಂದು ಓದಿ ಮುಗಿಸುತ್ತಾರೆ.  ತೇಜಸ್ವಿ, ಅನಂತಮೂರ್ತಿ, ಲಂಕೇಶ್‌..ಹೀಗೆ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುತ್ತಿದ್ದರು. ಅಷ್ಟೇ ಅಲ್ಲ ಹೊಸ ಪುಸ್ತಕಗಳನ್ನು ತಂದು ಕೊಡು ಎಂದು ವರಾತ ಮಾಡುತ್ತಿದ್ದರು. ಅವರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಈಗ ಮೊಮ್ಮಕ್ಕಳ ಅಜ್ಜನಾಗಿ ಸೌದಿಯಲ್ಲಿ ನನ್ನ ಅಕ್ಕನ ಮನೆಯಲ್ಲಿದ್ದಾರೆ. ಅಲ್ಲಿಂದ ಫೋನಲ್ಲಿ ಅವರು ಬೇಸರ ವ್ಯಕ್ತಪಡಿಸುವುದು ಒಂದೇ ವಿಷಯಕ್ಕೆ. ʻಇಲ್ಲಿ ಓದ್ಲಿಕ್ಕೆ ಎಂತಸಾ ಸಿಗುವುದಿಲ್ಲ ಮಾರಾಯʼ . ಸಾಹಿತ್ಯವನ್ನು ಪ್ರೀತಿಸುವ ಬಾಪಾ ಮತ್ತು ಉಮ್ಮನ ಮಗನಾಗಿದ್ದೆ ನಾನು.  ಇಂತಹ ವಾತಾವರಣವೇ ನನ್ನನ್ನು ಬರೆಯುವ ಕೆಲಸಕ್ಕೆ ಹಚ್ಚಿತು. ಪುಸ್ತಕ ಪ್ರಕಟವಾದಾಗ, ಹೀಗೆ ಪ್ರಶಸ್ತಿ ಬಂದಾಗ ಎಲ್ಲರೂ ಖುಷಿಪಡುತ್ತಿದ್ದಾರೆ.

ಓ ಹಾಗಾಗಿ ನಿಮ್ಮ ಕತೆಗಳಲ್ಲಿ ನಿಮ್ಮ ಪರಿಸರದ ಪ್ರಭಾವ ಹೆಚ್ಚಾಗಿ ಕಾಣಿಸುತ್ತದೆ …

ಹೌದು. ಕತೆ ಬರೆಯಲು ಶುರು ಮಾಡಿದ್ದಾಗ, ನಾನೊಂದು ಭಾರೀ ವಿಶಿಷ್ಟವಾದ ಕತೆ ಬರೆಯಬೇಕು ಎಂದು ಮನದಲ್ಲಿ ಆಸೆಯಿತ್ತು.ನನ್ನ ಓರಗೆಯವರು ಬರೆಯುವ ಕತೆಗಳನ್ನುಓದುತ್ತಿದ್ದೆ. ಆದರೆ ಓದುತ್ತ ಬರೆಯುತ್ತ ಸಾಗುತ್ತಿದ್ದಂತೆಯೇ ನನಗೆ ಒಂದು ವಿಷಯ ಸ್ಪಷ್ಟವಾಯಿತು. ʻನನ್ನ ಪರಿಸರವು ನನ್ನ ಅಂತರಂಗದಲ್ಲಿ ಅಚ್ಚೊತ್ತಿದಂತಿದೆ. ಆದ್ದರಿಂದಲೇ ಅಲ್ಲಿನ ಕತೆಗಳನ್ನು ಬರೆದಾಗ ಅವು ಹೆಚ್ಚು ಪರಿಣಾಮಕಾರಿಯಾಗಿರುತ್ತವೆʼ ಎಂದು ಅರಿವಿಗೆ ಬಂತು. ಈಗ ನನ್ನೊಳಗಿನ ಕತೆಗಳಿಗೆ ಕಿವಿಗೊಟ್ಟು ಬರವಣಿಗೆ ಮಾಡುತ್ತೇನೆ. ಆಗ್ರಹಗಳೇನೂ ಮನಸ್ಸಿನಲ್ಲಿ ಉಳಿದುಕೊಂಡಿಲ್ಲ. ನನ್ನೂರು ದಕ್ಷಿಣ ಕನ್ನಡದ ಇಳಂತಿಲ ಗ್ರಾಮದ ಜೋಗಿಬೆಟ್ಟು. ಶಾಲೆಗೆ ಹೋಗಿದ್ದೂ ಪಕ್ಕದ ಬನ್ನೆಂಗಳ ಎಂಬ ಊರಿನಲ್ಲಿ. ನಂತರ ಮಿತ್ತೂರಿನ ಕೆ.ಜಿ.ಎನ್. ಧಾರ್ಮಿಕ ವಸತಿ ಶಾಲೆಯಲ್ಲಿದ್ದುಕೊಂಡು ಕಬಕದಲ್ಲಿ ಹೈಸ್ಕೂಲು ಓದಿದೆ. ಉಳ್ಳಾಲದ ಟಿಪ್ಪುಸುಲ್ತಾನ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಾಗ ಅಲ್ಲಿನ ಜನಸಾಮಾನ್ಯರ ಓಡಾಟ, ಬದುಕು ಪರಿಸರವನ್ನು ಗಮನಿಸಿದ್ದೇನೆ.
ಒಟ್ಟಿನಲ್ಲಿ ಉಮ್ಮ ಮತ್ತು ಬಾಪಾನ ಸಾಹಿತ್ಯ ಪ್ರೀತಿ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳು, ಕಾದಂಬರಿಗಳು, ಅದೇ ಶೈಲಿಯಲ್ಲಿ ಬರೆಯುವ ಲೇಖಕರು ನನಗೆ ಹೆಚ್ಚು ಆಪ್ತ.

ನಿಮ್ಮ ಸಾಹಿತ್ಯ ಕೃಷಿಯ ಬಗ್ಗೆ ಹೇಳಿ..

ನಾನು ಕೆಂಡಸಂಪಿಗೆಯಲ್ಲಿ ಪರಿಸರದ ಕುರಿತು ಒಂದು ಸರಣಿಯನ್ನು ಬರೆದೆ. ಅಲ್ಲಿ ನನಗೆ ಬರವಣಿಗೆಯ ತಾಲೀಮು ನಡೆಸಲು ಸರಿಯಾದ ವೇದಿಕೆ ಸಿಕ್ಕಂತಾಯಿತು. ನನ್ನ ಪ್ರೀತಿಯ ವಿಷಯವಾದ ಪರಿಸರದ ಕುರಿತು ಬರೆಯುತ್ತಾ ಹೋದೆ. ಅದೇವೇಳೆಗೆ ಇಷ್ಕಿನ ಒರತೆಗಳು ಎಂಬ ಕವನ ಸಂಕಲನವೂ ಪ್ರಕಟವಾಯಿತು. ಅದಾದ ನಂತರ ಡರ್ಬನ್ ಇದಿನಬ್ಬ ಎಂಬ ಕಾದಂಬರಿ ಕೂಡ ಕೆಂಸಂಪಿಗೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಒಂದಷ್ಟು ಕತೆಗಳು ನನ್ನ ಕೈಯಲ್ಲಿವೆ. ಸದ್ಯವೇ ಅದನ್ನು ಸಂಕಲನ ರೂಪದಲ್ಲಿ ಪ್ರಕಟಿಸುವೆ. ಬರಹ ಲೋಕದಲ್ಲಿ ಸಾಗುವ ದಾರಿ ಇನ್ನೂ ದೂರವಿದೆ.

ಕನ್ನಡ ಸಾಹಿತ್ಯ ಲೋಕದ ಚಟುವಟಿಕೆಗಳ ಬಗ್ಗೆ?

ನಾನು ಓದು ಮುಗಿಸಿದ ಕೂಡಲೇ ಬೆಂಗಳೂರಿನಲ್ಲಿ ಚಿನ್ನದ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚು. ಆದ್ದರಿಂದ ಅಲ್ಲಿ ಸಾಹಿತ್ಯದ ಕಾರ್ಯಕ್ರಮಗಳೂ ತುಂಬಾ ನಡೆಯುತ್ತವೆ. ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ನಮ್ಮ ಬಳಿಗೆ ಬರುತ್ತವೆ ಎಂಬುದನ್ನು ಗಮನಿಸಿದ್ದೇನೆ. ಆದರೆ ನಾನು ಊರನ್ನು ತುಂಬಾ ಪ್ರೀತಿಸುತ್ತೇನೆ. ಹಾಗಾಗಿ ಮಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಊರಿಗೆ ಬಂದ ಮೇಲೆ ನನಗೆ ಅನಿಸಿತು, ಇಲ್ಲಿ ಸಾಹಿತ್ಯ ಕ್ಷೇತ್ರದ ಅವಕಾಶಗಳನ್ನು ನಾವು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದರೆ ಇತ್ತೀಚೆಗೆ ಕೋವಿಡೋತ್ತರ ಸಂದರ್ಭದಲ್ಲಿ ಆನ್ ಲೈನ್ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಹೊಸಬರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ ಎನಿಸುತ್ತದೆ.

ನನ್ನ ವೃತ್ತಿಯು ಜನರ ಜೊತೆಗೆ ಒಡನಾಡುವಂತಹುದು. ಅಂತಹ ಒಡನಾಟದಲ್ಲಿ ನನ್ನ ಕತೆಯ ಪಾತ್ರಧಾರಿ ಯಾರೆಂದು ನಾನು ಗುರುತಿಸಬಲ್ಲೆ. ನಾನೇನೂ ಭಾರೀ ಮಾತುಗಾರನಲ್ಲ. ಆದರೆ ಜನಸಮೂಹದಲ್ಲಿ ನನ್ನ ಪಾತ್ರಧಾರಿಯನ್ನು ಗುರುತಿಸಿದ ಬಳಿಕ ನಾನು ಅಂತಹ ಸಂದರ್ಭಗಳಲ್ಲಿ ಚೆನ್ನಾಗಿಯೇ ಮಾತನಾಡುತ್ತೇನೆ. ಸುಹಾನಾ ಸುಲ್ತಾನ ಜೊತೆ ಮದುವೆಯಾಗಿದ್ದು ಈಗ ನನ್ನ ಬದುಕಿನ ಕೇಂದ್ರವಾಗಿ ಮಗ ಮುಹಮ್ಮದ್ ಯಾಮಿನ್ ಬಂದಿದ್ದಾನೆ.

ನನ್ನ ಗೆಳೆಯರ ಬಳಗ ಬಹಳ ದೊಡ್ಡದಿದೆ. ಆ ಮಟ್ಟಿಗೆ ನಾನು ಸಂತೃಪ್ತ. ಸ್ನೇಹಿತರ ದೊಡ್ಡ ಸಮೂಹವು ನನಗೆ ಅನೇಕ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿಯೂ  ಅನೇಕ ವಿಚಾರಗಳನ್ನು ಚರ್ಚಿಸಲು  ಸ್ನೇಹದ ಬಳಗವಿದೆ.