ಗಾಂಧಿ ಕನ್ನಡಕದೊಳಗಣ ಬಿಂಬಗಳು

ಈ ಗಾಂಧಿ ಬಜಾರಿನವರ ಕನಸುಗಳೇ ಹೀಗೆ
ಯಾವ ಕಡಲಿನೊಡಲನು ಸೇರದ
ಬಿಸಿಗಾಳಿಯೆದುರು ಈಜಲಾಗದ
ನದಿಗಳ ಹಾಗೆ

ಗಾಳಿಧೂಳು ಹೊಗೆಯನುಂಡು
ಕೈ ತೊಳೆಯುವುದು ಕಣ್ಣೀರಲಿ;
ಚಿಂದಿ ಆಯುವ ಬೆರಳುಗಳಿಗೆ ಜೋತುಬಿದ್ದ
ಗಗನಮನೆ ಮಂದಿಯ ಕಸದ ತೊಟ್ಟಿಲು;
ಅಕ್ರಮ ಸಂತಾನಕ್ಕೆ
ಸೊಳ್ಳೆಗಳ ಲಾಲಿಹಾಡು !
ಸದಾ ಸೂತಕ ಸ್ವರದ ಜಾಡು

ವರಾಹವನು ಹಂದಿಯೆಂದು
ಶ್ವಾನವನು ನಾಯಿಯೆಂದು
ನಾಮಕರಿಸಿದ ನಾಲಿಗೆಗೆ
ಚರಂಡಿ ನದಿಗಳ ಪುಣ್ಯಸ್ನಾನ
ಕರುಳಿಗೆ ಕೊಳೆತ ಕಸದ ಅಭಿಷೇಕ

ಮಹಾನಗರದ ಮೂತ್ರಪಿಂಡ
ಗರ್ಭಜಲದೊಳು
ಮುಳುಮುಳುಗುವ ಪೌರಕಾರ್ಮಿಕರ ಉಸಿರು,
ತೇಲುತಿಹ ಹೆಣದ ಬಟ್ಟೆ
ಅರ್ಧತುಂಬಿದ ತಿಥಿಯೂಟದ ತಟ್ಟೆ

ಈಗ
ದೇಶದ ಆತ್ಮವೊಂದು
ಸಾರ್ವಜನಿಕ ಸ್ಮಶಾನವಾಗಿದೆ

ಕ್ಷಮಿಸಿ
ಗಾಂಧಿ ಕನ್ನಡಕದಲ್ಲಿ
‘ಎಲ್ಲವೂ ಶುಚಿಯಾಗಿಯೇ ಇದೆ’
ಆತ್ಮದ ಕಲೆ, ಬಿಳಿಕಾಲರಿನವರ ಕೊಲೆಗಳ
ಹೊರತು…!

ಮಹಾಂತೇಶ ಪಾಟೀಲ ಬಾಗಲಕೋಟ ಜಲ್ಲೆಯ ಮುಧೋಳ ತಾಲೂಕಿನ ರಂಜಣಗಿಯವರು
ಕರ್ನಾಟಕ ಕೇಂದ್ರೀಯ ವಿ.ವಿ ಪಿಎಚ್.ಡಿ ಪದವಿ ಪಡೆದಿದ್ದಾರೆ
ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು ಇವರ ಕವಿತೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ
ಇವರ ಬರಹಗಳಿಗೆ ಅಂಕುರ ಕಾವ್ಯ ಬಹುಮಾನ, ಸಂಚಯ ಕಾವ್ಯ ಬಹುಮಾನ, ವಿಭಾ ಸಾಹಿತ್ಯ ಪ್ರಶಸ್ತಿಗಳ ಜೊತೆ ಇನ್ನೂ ಹಲವು ಪ್ರಶಸ್ತಿಗಳು ದೊರೆತಿವೆ